(ಸೂಚನೆ: ಬದುಕಿಗೆ ಹಳತಾದರೂ, ಬರಹಕ್ಕೆ ಇದೊಂದು ಹೊಸ ಪ್ರಯೋಗ. ಹಳೆ ಟ್ರೆಂಡಿನ ಬರಹಗಳನ್ನು ಬರೆದು, ಬರೆದೂ ಬೇಜಾರು ಬಂದಿದೆ. ಹಾಗಾಗಿ ಒಂಚೂರು ವಿಚಿತ್ರವಾದ ಬರಹವನ್ನು ಸಾದರಪಡಿಸಲು ಹೊರಟ್ಟಿದ್ದೇನೆ! ಇದನ್ನು ಓದುಗರಾದ ನೀವು ಹೇಗೆ ಬೇಕಾದರೂ ಸ್ವೀಕರಿಸಿ. ಇಲ್ಲಿ ಬರುವ ಎಲ್ಲಾ ಸನ್ನಿವೇಶಗಳೂ ಕೇವಲ ಕಾಲ್ಪನಿಕ!!!)
ಪುಟ್ಟಣ್ಣ,
ನೀನು ದೀಪಾವಳಿಗೆ ಊರಿಗೆ ಬಂದು ಹೋದ ನಂತರ ನಿನ್ನ ಪತ್ರ ಕೈತಲುಪಿತು. ಪೋಸ್ಟಿವನರ ವ್ಯಾಪಾರ ಗೊತ್ತಿದ್ದರೂ, ಬರುವ ಮೂರು ದಿನ ಮೊದಲು ಪತ್ರ ಹಾಕಿದ ನಿನಗೆ ಚೆನ್ನಾಗಿ ಬೈಯ್ಯಬೇಕು ಅನ್ನಿಸುತ್ತಿದೆ. ಹಬ್ಬಕ್ಕೆ ಊರಿಗೆ ಬಂದರೂ ನಮ್ಮ ಮನೆಗೆ ಬಾರದೇ ಬೆಂಗಳೂರಿಗೆ ಮರಳಿದ್ದರ ಹಿನ್ನೆಲೆ ಅರ್ಥವಾಗಲಿಲ್ಲ.(ನನ್ನ ಕುಡುಕ ಅಪ್ಪನಿಗೆ ಹೆದರಿಕೊಂಡೇ ಬರಲಿಲ್ಲ ಅಂದುಕೊಳ್ಳುತ್ತೇನೆ!)
ನನ್ನ , ನಿನ್ನ ನಡುವಣ ಸ್ನೇಹಕ್ಕೆ, ಸಹೋದರತ್ವಕ್ಕೆ ಈಗ ಮೂರರ ಸಂಭ್ರಮ. ಮೂರು ವರ್ಷದ ಕೆಳಗಿನ ದೀಪಾವಳಿಯಂದೇ ನನಗೆ ನಿನ್ನ ಪರಿಚಯವಾಗಿದ್ದು. ನಮ್ಮ ಮನೆಯಲ್ಲಿ ಹಬ್ಬ ಇಲ್ಲ ಅಂತಾ ನಾನು ಆವತ್ತು ನಿಮ್ಮ ಮನೆಗೆ ಬಂದಿದ್ದೆ ನೆನಪಿದೆಯಾ? ಕುಡುಕ ಅಪ್ಪ, ಅದೆಂತಹದ್ದೋ ಪಟ್ಟ ಕಟ್ಟಿಕೊಂಡ ಅಮ್ಮನ ನಡುವೆ ಬದುಕುತ್ತಿದ್ದ ನನಗೆ, ನಿನ್ನಂತಹ ಒಬ್ಬ ಅಣ್ಣ ಸಿಗುತ್ತಾನೆ ಎಂಬ ಪರಿಕಲ್ಪನೆಯೂ ಇರಲಿಲ್ಲ. ನನ್ನ ಬದುಕು ಆ ದರಿದ್ರ ಸಂಸಾರದಲ್ಲೇ ಮುಗಿದುಹೋಯಿತು ಅಂದುಕೊಂಡಿದ್ದೆ….
ದಿನ ರಾತ್ರಿಯಾಗುತ್ತಿದ್ದಂತೆ ಕುಡಿದು ಬಂದು ಅಮ್ಮನ ಹತ್ತಿರ ಗಲಾಟೆ ಮಾಡುವ ಅಪ್ಪನನ್ನು ಕಂಡಾಗ, ಆದಷ್ಟು ಬೇಗ ನಾನು ಸತ್ತರೆ ಸಾಕು ಅನ್ನಿಸುತ್ತಿತ್ತು. ಮನೆಯ ಹೊಸ್ತಿಲು ದಾಟಿದರೆ ಅಮ್ಮನ ಕುರಿತು ಆಚೀಚೆ ಮಂದಿಯ ಮಾತು…
‘ಅಮ್ಮಾ, ಅವರೆಲ್ಲಾ ನಿನ್ನ ಕುರಿತು, ನಿನ್ನ ಶೀಲದ ಕುರಿತು ಆಡುವ ಮಾತು ನಿಜವಾ?’ ಎಂದು ಯಾವತ್ತೂ ಅಮ್ಮನನ್ನು ಕೇಳಲು ಮನಸಾಗಲಿಲ್ಲ. ಯಾಕೆಂದರೆ ಅಂತಹ ಅಪ್ಪನ ಜತೆ ಬದುಕುತ್ತಿದ್ದ ಅಮ್ಮನ ಕಷ್ಟ ನಿತ್ಯ ಕಣ್ಣಿಗೆ ಕಟ್ಟುತ್ತಿತ್ತು.
ಅಮ್ಮನಿಂದ ನಮಗೂ ಸಮಾಜದಲ್ಲಿ ನೆಮ್ಮದಿಯಿಲ್ಲ ಅಂತಾ ಸಿಡುಕಿದ್ದಕ್ಕೆ ನೀನೊಮ್ಮೆ ನನಗೆ ಚೆನ್ನಾಗಿ ಬೈದಿದ್ದೆ‘ ನೆನಪಿದೆಯಾ? ‘ಅಮ್ಮ ಹೇಗೆ ಬದುಕಿದ್ದಳೋ ಗೊತ್ತಿಲ್ಲ. ಅಪ್ಪ ನಯಾ ಪೈಸೆ ಕಾಸು ಕೊಡದಿದ್ದಾಗಲೂ ನಿಮ್ಮನ್ನು ಸಾಕಿದ್ದಾಳೆ…’ ಅಂತಾ ನೀನು ಬುದ್ಧಿವಾದ ಹೇಳಿದ ಮೇಲೆ, ಅಮ್ಮನ ಕುರಿತು ನನಗೆ ಗೌರವ ಹೆಚ್ಚಾಗಿದ್ದು.
ನಿನ್ನ ಸ್ನೇಹವಾದ ಮೇಲೆ ಅಮ್ಮನ ಕುರಿತು ಆಲೋಚಿಸುವುದನ್ನೇ ಬಿಟ್ಟು ಬಿಟ್ಟೆ. ಅಪ್ಪನನ್ನು ಕಂಡಾಗಲೆಲ್ಲಾ ಗಂಡಸು ಎಂದರೆ ನನಗೆ ಮೈ ಉರಿಯುತಿತ್ತು. ನಿಜ ಹೇಳಬೇಕು ಅಂದ್ರೆ ನಿನ್ನ ಒಡನಾಟ ಆಗುವವರೆಗೂ ನಾನು ಪುರುಷದ್ವೇಷಿಯಾಗಿದ್ದೆ!
ನಿನ್ನ, ನನ್ನ ನಡುವಣ ಸಂಬಂಧದ ಕುರಿತು ಎದುರಿನಿಂದ ಅಲ್ಲದಿದ್ದರೂ, ಹಿಂದಿನಿಂದ ಮಾತಾಡಿಕೊಂಡ ಮಂದಿ ಸಾಕಷ್ಟಿದ್ದಾರೆ. ವಿದ್ಯಾವಂತ ಮಂದಿಯೂ ನಮ್ಮಿಬ್ಬರ ಸ್ನೇಹದ ಕುರಿತು ಸಂಶಯ ಪಟ್ಟಿದ್ದಾರೆ, ಪಡುತ್ತಲೇ ಇದ್ದಾರೆ! ಮತ್ತೆ ಆ ವಿಷಯಗಳನ್ನೆಲ್ಲಾ ಕೆದಕಿದರೆ ನೀನು ಚೆನ್ನಾಗಿ ಬೈಯ್ಯುತ್ತೀಯಾ ಅಂತಾ ಗೊತ್ತು. ಆದ್ರೂ ದೀಪಾವಳಿ ಜತೆಗೆ ಇವೆಲ್ಲಾ ನೆನಪಾಯಿತು. ನೆನಪಾಗಿದ್ದನ್ನು ನಿನ್ನ ಹತ್ತಿರವಲ್ಲದೇ ಇನ್ಯಾರ ಹತ್ತಿರ ಹೇಳಿಕೊಳ್ಳಲಿ ಹೇಳು? ಸೋ, ನೀನು ಬೈಯ್ಯಲ್ಲ ಅಂದುಕೊಂಡಿದ್ದೇನೆ. ಏ ಕೋತಿ ಇದೊಂದ್ಸಾರಿ ಬೈಯ್ಯಬೇಡ ಕಣೋ ಪ್ಲೀಸ್…
ಇಂತಿ
ಪುಟ್ಟಮ್ಮಿ
ನಿಮ್ಮ ಟಿಪ್ಪಣಿ ಬರೆಯಿರಿ