ಲೈವ್ ಮರ್ಡರ್ ಕಾರ್ಯಕ್ರಮ ವಿರೋಧಿಸಿ ಶ್ರೀವತ್ಸ ಜೋಷಿಯವರು ಫೇಸ್ಬುಕ್ ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದಕ್ಕೆ ವರದಿಗಾರನೊಬ್ಬ ಪ್ರತಿಕ್ರಿಯಿಸಿದ್ದ. ‘ಒಂದು ಒಳ್ಳೆ ಕಾರ್ಯಕ್ರಮ ಹಾಕಿದ್ರೆ ಜನ ನೋಡಲ್ಲ, ನೀವು ಸಾಮಾಜಿಕ ಜಾಲತಾಣದವರು ಹಾಗೆ, ಹೀಗೆ… ಜನಕ್ಕಾಗಿ ಏನು ಮಾಡ್ತೀರಿ’ ಇತ್ಯಾದಿ. ಬಹಳ ಮಜ ಅಂದ್ರೆ ಟಿವಿ ಮಾಧ್ಯಮದಲ್ಲಿ ದುಡಿಯುವ, ಅದಕ್ಕಿಂತ ಮುಖ್ಯವಾಗಿ ದೊಡ್ಡ ಹುದ್ದೆಯಲ್ಲಿ ಕುಳಿತು ಆಳುವ ಅನೇಕರಿಗೆ ಒಳ್ಳೆ ಕಾರ್ಯಕ್ರಮಕ್ಕೆ ಟಿಆರ್ಪಿ ಬರಲ್ಲ ಅನ್ನೊ ತಪ್ಪು ಕಲ್ಪನೆಯಿದೆ.
ಸರಿ ಹಾಗಿದ್ರೆ ಕೆಟ್ಟದ್ದಕ್ಕೆಲ್ಲ ಟಿಆರ್ಪಿ ಬರುತ್ತ ಅನ್ನೋದು ನನ್ನ ಪ್ರಶ್ನೆ. ಹಾಗೊಂದು ವೇಳೆ ನಮ್ಮ ಸುದ್ದಿವಾಹಿನಿಯಲ್ಲಿ ಕುಳಿತವರ ಭ್ರಮೆಯಂತೆ ಕೆಟ್ಟದ್ದಕ್ಕೆ, ಕ್ರೈಂಗೆ, ಅತಿರಂಜನೀಯಕ್ಕೆ ಟಿಆರ್ಪಿ ಬರುವುದೇ ಆಗಿದ್ದರೆ, ಕನ್ನಡದಲ್ಲಿ ಎಲ್ಲ ವಾಹಿನಿಗಳು ನಂಬರ್ ಒನ್ ವಾಹಿನಿಗಳಾಗಿರಬೇಕಿತ್ತು! ಮಜ ಗೊತ್ತ, ಕನ್ನಡದ ಒಂದು ಸುದ್ದಿವಾಹಿನಿಯ ಒಟ್ಟು ಜಿಆರ್ಪಿ ಒಂದು ಧಾರಾವಾಹಿಯ ವಾರದ ಟಿವಿಆರ್ ಆಗಿರುತ್ತೆ. ಒಂದು ರಿಯಾಲಿಟಿ ಶೋನ ತಾಜಾ ಎಪಿಸೋಡ್ಗೆ ಬರುವ ಟಿವಿಆರ್, ಒಂದು ವಾರದ ಬಿಟಿವಿಯದ್ದೊ, ಪಬ್ಲಿಕ್ ಟಿವಿಯದ್ದೊ ಒಟ್ಟಾರೆ ಜಿಆರ್ಪಿ. ನಿಮಗೆ ಹೀಗೆ ಹೇಳಿದ್ರೆ ಅರ್ಥವಾಗಲ್ಲ ಅನ್ನೋದು ನಂಗೆ ಗೊತ್ತು. ಆದ್ರೆ ನಾನಿಲ್ಲಿ ಇದನ್ನು ಉಲ್ಲೇಖ ಮಾಡಿದ್ದು ಇಷ್ಟಕ್ಕೆ, ಖಂಡಿತ ಒಂದು ಧಾರವಾಹಿ, ಸುದ್ದಿ ವಾಹಿನಿಯ ಕ್ರೈಂನಷ್ಟು ಅತಿರಂಜನೀಯವಾಗಿರಲಾರದು. ಕೆಟ್ಟದ್ದಕ್ಕೆ ಟಿಆರ್ಪಿ ಬರುತ್ತೆ ಅಂತಾಗಿದ್ರೆ ಇವತ್ತು ಕನ್ನಡದ ಎಲ್ಲ ಸುದ್ದಿವಾಹಿನಿಗಳು ೧೫೦-೨೦೦ ಜಿಆರ್ಪಿಯಲ್ಲಿ ಇರಬೇಕಿತ್ತು.
ಟಿವಿ೯, ೧೨೦-೧೬೦ ಜಿಆರ್ಪಿಯಲ್ಲಿ ಪ್ರತಿ ವಾರ ಲೀಡ್ನಲ್ಲಿರುತ್ತೆ. ನಂತರದ ಸ್ಥಾನದಲ್ಲಿ ಅಸ್ಥಿರ. ಕನ್ನಡದಲ್ಲಿ ನಂಬರ್.೨ ಎನಿಸಿಕೊಂಡ ವಾಹಿನಿಯ ಗರಿಷ್ಠ ಜಿಆರ್ಪಿ ೬೫ರ ಗಡಿ ದಾಟುವುದಿಲ್ಲ. ಮಿಕ್ಕವೆಲ್ಲ ೩೦, ೧೯, ೧೨ ಈ ಥರ ಜಿಆರ್ಪಿ. ಹಾಗಿದ್ದ ಮೇಲೆ ಒಳ್ಳೆದು ಕೊಟ್ರೆ ಜನ ನೋಡಲ್ಲ, ಕೆಟ್ಟದ್ದಕ್ಕೆ ಟಿಆರ್ಪಿ ಬರುತ್ತೆ ಅಂತ ನೀವು ಯಾವ ಆಧಾರದ ಮೇಲೆ ಹೇಳುವಿರಿ?
ಒಂದು ಕಾಲದಲ್ಲಿ ಟಿವಿ೯ನ ಕ್ರೈಂ ಎಪಿಸೋಡ್ಗೆ ಭರ್ಜರಿ ಟಿಆರ್ಪಿ ಬರುತ್ತಿತ್ತು. ಆಗ ಕನ್ನಡಕ್ಕೆ ನ್ಯೂಸ್ ಚಾನೆಲ್ ಎಂಬ ಪರಿಕಲ್ಪನೆಯೆ ಹೊಸದು. ಟಿವಿ೯ ಕ್ರೈಂನಿಂದ ಯಶಸ್ವಿಯಾಯಿತು ಎಂದು ಮುಂದೆ ಬಂದ ಎಲ್ಲ ಕನ್ನಡದ ಸುದ್ದಿ ವಾಹಿನಿಗಳು ಕ್ರೈಂನ್ನು ಗೆಲುವಿನ ಮಂತ್ರ ಎಂದು ಭಾವಿಸಿಕೊಂಡರು. ಆದ್ರೆ ಟಿವಿ೯ ಸಖತ್ ಚಾಣಾಕ್ಷ. ಅದು ನ್ಯೂಸ್ ಆಧಾರಿತ ಕಾರ್ಯಕ್ರಮಗಳಿಂದಲೇ ಗೆಲುವಿನ ನಗೆ ಬೀರುತ್ತ ಬಂದಿತು. ಕನ್ನಡದ ಮಟ್ಟಿಗೆ ತುಸು ವೃತ್ತಿಪರವಾಗಿ ಕಾಣಿಸುವ ವಾಹಿನಿಯದು. ಯಾಕಂದ್ರೆ ಅದ್ರಲ್ಲಿ ಹೆಚ್ಚಿನದ್ದು ಆಜ್ತಕ್ ವಾಹಿನಿಯ ಕಾಪಿ-ಪೇಸ್ಟ್!
ನೀವು ಕೆಟ್ಟದ್ದನ್ನು, ಕ್ರೈಂನ್ನು ಬಿತ್ತರಿಸಿ ೧೫೦ ಜಿಆರ್ಪಿ ಗಳಿಸಿದ್ದರೆ, ನಿಮ್ಮ ವಾದ ಸರಿ ಅನ್ನಬಹುದಿತ್ತು. ಆದರೆ ಕನ್ನಡದ ಉಳಿದೆಲ್ಲ ವಾಹಿನಿಗಳ ಒಟ್ಟು ಜಿಆರ್ಪಿ ನಂಬರ್ ಒನ್ ವಾಹಿನಿ ಜಿಆರ್ಪಿಗೆ ಸಮನಾಗಿ ನಿಲ್ಲುವುದಿಲ್ಲ.
ನಂಬರ್ ಒನ್ ಧಾರವಾಹಿಯ ಸರಾಸರಿ ಟಿವಿಆರ್ ೭-೮. ಅಂದ್ರೆ ಒಟ್ಟು ೪೨-೪೮ ಜಿಆರ್ಪಿ ಒಂದು ಧಾರವಾಹಿಯಿಂದ ಬರುತ್ತೆ. ಕನ್ನಡದ ೩,೪,೫ನೇ ಸ್ಥಾನದಲ್ಲಿರುವ ನ್ಯೂಸ್ ಚಾನೆಲ್ಗಳು ವಾರವಿಡಿ, ೨೪ ಗಂಟೆಗಳ ಕಾಲ ನಾನ್ಸೆನ್ಸ್ಗಳನ್ನು ಓಡಿಸಿದರೂ,ಅವುಗಳ ವಾರದ ಜಿಆರ್ಪಿ ೩೦ರ ಗಡಿ ದಾಟಲಾರದು! ಇಲ್ಲಿ ಹಲವಾರು ಅಂಶಗಳು ಕಾರಣವಾಗುತ್ತವೆ ಎಂಬುದನ್ನು ಒಪ್ಪಬಹುದಾದರೂ, ಕೆಟ್ಟದ್ದನ್ನು ಮಾತ್ರ ಜನ ನೋಡ್ತಾರೆ. ಕ್ರೈಂ, ರೊಚ್ಚಿಗೆದ್ದಿದ್ದು ಮಾತ್ರ ಜನಕ್ಕೆ ಇಷ್ಟವಾಗುತ್ತೆ ಎಂಬ ಲಾಜಿಕ್ಕು ತಪ್ಪು ಎಂಬುದು ತೀರ ಸ್ಪಷ್ಟವಾಗಿ ಸಾಬೀತಾಗುತ್ತದೆ.
ಕೆಟ್ಟದ್ದನ್ನು ವಿರೋಧಿಸುವ ಜನಕ್ಕೆ ಪರ್ಯಾಯ ಒಳಿತು. ಆ ಸ್ಪೇಸ್ನ್ನು ಆಕ್ರಮಿಸಿಕೊಳ್ಳುವ ಕೆಲಸವನ್ನು ಕನ್ನಡದ ಯಾವ ಸುದ್ದಿ ವಾಹಿನಿಗಳು ಮಾಡುತ್ತಿಲ್ಲ ಎಂಬುದು ದುರಂತ. ಹಾಗಂತ ಯತ್ನ ಮಾಡುವುದೇ ಇಲ್ಲ ಅಂತಲ್ಲ, ತೀರ ಅಪರೂಪ. ಹೀಗೆ ಅಪರೂಪವಾಗಿ ಮಾಡಿದಾಗ ಖಂಡಿತ ಟಿಆರ್ಪಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಒಂದು ಕಾರ್ಯಕ್ರಮದ ಟಿಆರ್ಪಿ ಆಧರಿಸುವ ಅಂಶಗಳು ತುಂಬಾ ಇರುತ್ತವೆ.
ಈ ಟಿಆರ್ಪಿ ಎನ್ನುವುದೇ ಒಂಥರ ಲಾಜಿಕ್ಕಿಲ್ಲದ, ಲೆಕ್ಕಕೆ ಸಿಗದ ಮಾಪನ ಎಂಬುದು ನಂತರದ ಮಾತು ಬಿಡಿ. ಆದರೆ ಮಾರ್ಕೆಟಿಂಗ್ನ ದೃಷ್ಟಿಯಿಂದ, ಜಾಹೀರಾತುದಾರರ ದೃಷ್ಟಿಯಿಂದ ನಾವು ಆ ವ್ಯವಸ್ಥೆಯನ್ನು ಒಪ್ಪಿಕೊಳ್ಳಲೇಬೇಕು.
ತುಂಬ ಜನ ಟಿಆರ್ಪಿ ಬಗ್ಗೆ ಮಾತಾಡುತ್ತಾರೆ. ಆದ್ರೆ ಬಹಳಷ್ಟು ಪತ್ರಕರ್ತರಿಗೆ ಅದರ ಉದ್ದಗಲ ಖಂಡಿತವಾಗಿಯೂ ಗೊತ್ತಿಲ್ಲ. ಪ್ರತಿ ವಾಹಿನಿಯಲ್ಲೂ ಈ ಟಿಆರ್ಪಿಯ ಆಳ-ಅಗಲ ಗೊತ್ತಿರುವುದು ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ. ಟಿಆರ್ಪಿ, ಟಿವಿಆರ್, ಟಿವಿಎಚ್, ಜಿಆರ್ಪಿ, ಟೈಂಸ್ಪೆಂಡ್, ರೀಚು ವಗೈರೆ, ವಗೈರೆಗಳನ್ನು ಅರ್ಥ ಮಾಡಿಕೊಳ್ಳಲು ಹೊರಟರೆ ಖಂಡಿತ ತಲೆ ಹಾಳಾಗುತ್ತದೆ. ಹೀಗಾಗಿ ಒಂದು ವಾಹಿನಿಗೆ ವಾರಕ್ಕೆ ಎಷ್ಟು ಅಂಕ ಬಂತು ಎಂಬುದಷ್ಟೆ ಟಿಆರ್ಪಿ ಎಂಬ ಭ್ರಮೆ ಅನೇಕ ಮಂದಿಯಲ್ಲಿದೆ!
ಹಾಗೆ ನೋಡಿದ್ರೆ ಮನರಂಜನೆ ವಾಹಿನಿಯಲ್ಲಿ ಏನೂ ಇಲ್ಲ. ಯಾಕಂದ್ರೆ ಅಲ್ಲಿ ದಿನ ಹೊಸತನ್ನು ಕೊಡಲು ಸಾಧ್ಯವಿಲ್ಲ. ಆ ಲೆಕ್ಕದಲ್ಲಿ ಮನರಂಜನೆ ವಾಹಿನಿಗಿಂತ ಸುದ್ದಿ ವಾಹಿನಿ ವೀಕ್ಷಕರ ಪ್ರಮಾಣ ಹೆಚ್ಚಿರಬೇಕಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಒಂದು ಆಜ್ತಕ್, ಒಂದು ಟೈಂಮ್ಸ್ ನೌ ವಾಹಿನಿಗಳು ನಂಬರ್ನಲ್ಲಿ ಮನರಂಜನೆ ವಾಹಿನಿಗೆ ಸಡ್ಡು ಹೊಡೆದು ನಿಲ್ಲುತ್ತವೆ. ಆದರೆ ಕನ್ನಡದಲ್ಲಿ ಪರಿಸ್ಥಿತಿ ಹಾಗಿಲ್ಲ. ಕನ್ನಡದಲ್ಲಿ ನಂಬರ್ ಒನ್ ಮನರಂಜನೆ ವಾಹಿನಿ ಅಂಕ ೪೦೦-೫೦೦ ಇದೆ. ನಂಬರ್ಒನ್ ಸುದ್ದಿ ವಾಹಿನಿ ೧೨೦-೧೫೦ರಲ್ಲಿದೆ. ೪ರಿಂದ ೫ ಪಟ್ಟು ವ್ಯತ್ಯಾಸವಿದೆ.
ಇವಿಷ್ಟು ಟಿಆರ್ಪಿ ಎಂಬ ಭಾಷೆಯಲ್ಲಿ ಮಾತಾಡುವವರ ದಾಟಿಯ ಬರಹವಾಯ್ತು.
ಆದ್ರೆ ಇಂದು ಸುದ್ದಿ ವಾಹಿನಿಗಳ ಅವಿವೇಕಿತನ ನೋಡಿ ಜನ ಉಗೀತಾ ಇದ್ದಾರೆ. ಜನವೇಕೆ, ಅದರೊಳಗೆ ಕೆಲಸ ಮಾಡುವ ಮಂದಿಯೇ ಉಗಿದುಕೊಂಡು, ಏನಾದ್ರು ಹಾಳಾಗ್ಲಿ ಹೋಗ್ಲಿ ಸಂಬಳ ಕೊಡ್ತಾರಾ, ಇಲ್ವಾ ಸಾಕು ಎಂದುಕೊಂಡು ಬರುತ್ತಿದ್ದಾರೆ. ಇದು ವಾಸ್ತವವಾಗಿ ಅರ್ಥವಾಗಬೇಕಿರುವುದು ಒಂದು ಸುದ್ದಿ ವಾಹಿನಿ ನಡೆಸುವ ಸಂಪಾದಕರಿಗೆ ಹಾಗೂ ಆಡಳಿತ ಮಂಡಳಿಗೆ. ಯಾರು, ನಿರ್ಧಾರ ತೆಗೆದುಕೊಳ್ಳುವ ಮಟ್ಟದಲ್ಲಿ ಇರುತ್ತಾರೋ, ಅವರಿಗೆ ಅರ್ಥವಾಗಬೇಕು. ಒಬ್ಬ ವರದಿಗಾರನಿಗೆ, ನಿರೂಪಕನಿಗೆ ಬೈದರೆ ಪ್ರಯೋಜನ ಇಲ್ಲ. ಪಾಪ ಅವನ ಕೈಯ್ಯಲ್ಲಿ ಏನು ಇರುವುದಿಲ್ಲ. ಕೊಡುವ ಸಂಬಳಕ್ಕೆ ಮೇಲಿಂದ ಬಂದ ಅಸೈನ್ಮೆಂಟ್ ಮುಗಿಸುತ್ತಾನೆ ಅಷ್ಟೆ. ಅದಕ್ಕೂ ಮೀರಿ ಏನೋ ಯತ್ನ ಮಾಡುವವರಿದ್ದರೂ, ಇಂಡಸ್ಟ್ರಿಯಲ್ಲಿ ಅವರನ್ನು ಅಷ್ಟೆ ವ್ಯವಸ್ಥಿತವಾಗಿ ತುಳಿಯುವ ಮಹಾ’ಸ್ವಾಮಿ’ಗಳದ್ದೆ ಸುವರ್ಣಯುಗ!
ನಿಮಗೆ ಟಿಆರ್ಪಿ ಅಳತೆಗೋಲೆ ಆಥರವಿದೆ. ಕೋಟಿಯಲ್ಲಿ ಸಾವಿರವನ್ನು ಅಳೆಯುವುದು. ಅಂಥದ್ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೈತಿದ್ದಾರೆ ಅಂದ್ರೆ, ಅದನ್ನು ಹೇಗೆ ನಿರ್ಲಕ್ಷ್ಯ ಮಾಡುವಿರಿ ಎಂಬುದು ಅರ್ಥವಾಗುತ್ತಿಲ್ಲ. ಜನಕ್ಕೆ ಬೇಡ, ಇಷ್ಟವಾಗುತ್ತಿಲ್ಲ ಅಂತಾದ್ರೆ, ಅದು ಫ್ಲ್ಯಾಪ್ ಕಾನ್ಸೆಪ್ಟ್ ಎಂದೇ ಅರ್ಥವಲ್ಲವೇ? ಅದನ್ನೇ ಮತ್ತೆ, ಮತ್ತೆ ತೋರಿಸಿದ್ರೆ ಹೇಗೆ ವಾಹಿನಿಯ ನಂಬರ್ ಇಂಪ್ರ್ಯೂ ಆಗುತ್ತೆ.
ಒಬ್ಬ ಸಂಪಾದಕ ಬಂದ ತಕ್ಷಣ ೫೮ ನಂಬರ್ ಇರುವ ಒಂದು ವಾಹಿನಿ ನಾವೇ ನಂಬರ್.೨ ಎಂದು ಜಾಹೀರಾತು ಹಾಕಿಕೊಂಡಿತ್ತಂತೆ. ಜೋರಾಗಿ ನಗು ಬಂತು. ೫ ವರ್ಷದಿಂದ ೫೮ರಲ್ಲೇ ಇದ್ದೀರಿ. ನಾಚ್ಕೆ ಆಗಬೇಕು. ನಿಮ್ಮ ವಾಹಿನಿಗೆ ಎರಡು ಸಲ ನಂಬರ್ ಕೊಟ್ರು, ನಿಮ್ಮ ಒಟ್ಟು ನಂಬರ್, ಮೊದಲ ಸ್ಥಾನದಲ್ಲಿರುವ ವಾಹಿನಿಗೆ ಸರಿಸಮಾಂತರವಾಗುವುದಿಲ್ಲ. ಅಂಥದ್ರಲ್ಲಿ ನೀವು ಅದನ್ನು ಸಂಭ್ರಮಿಸುತ್ತೀರಲ್ಲಾ? ಇದು ನಮ್ಮ ಕನ್ನಡದ ವಾಹಿನಿಗಳ ಮೆಂಟಾಲಿಟಿ ತೋರಿಸುತ್ತೆ. ಅಂದ್ರೆ ಮೇಲಕ್ಕೆ ಹೋಗುವುದು ಹಾಳಾಗ್ಲಿ, ಇದ್ದಲ್ಲಿ ಇದ್ರೆ ಖುಷಿ!
ಒಂದು ಅದ್ಭುತವಾದ ಊಟವಿದೆ. ಅದನ್ನು ಹೇಗೆ ಬಡಿಸುವಿರಿ ಎಂಬುದು ಅತ್ಯಂತ ಮಹತ್ವದಾಗುತ್ತೆ. ಹಾಗೆ ಒಂದು ಒಳ್ಳೆ ಕಾರ್ಯಕ್ರಮ ಮಾಡುವಾಗಲೂ ಅದನ್ನು ಯಾವ ಥರ ನಿರೂಪಿಸುವಿರಿ ಎಂಬುದು ಮಹ್ವತದ್ದು.
ನನಗೊಂತು ಎಷ್ಟೋ ಸಲ ಟಿವಿ೯ ವೃತ್ತಿಪರವಾಗಿ ಬೆಸ್ಟ್ ವಾಹಿನಿಯಂತೆ ಕಾಣಿಸುತ್ತೆ. ಯಾಕಂದ್ರೆ ಅವರಿಗೆ ಜನರ ನಾಡಿಮಿಡಿತ ಅರ್ಥವಾಗಿಬಿಟ್ಟಿದೆ. ಇವತ್ತಿನ ಟ್ರೆಂಡ್ನ್ನು ಟಪ್ ಅಂತ ಸೆರೆ ಹಿಡಿಯುತ್ತಾರೆ. ಅಲ್ಲಿ ಕೆಟ್ಟದ್ದನ್ನು ಎಷ್ಟು ಅದ್ಭುತವಾಗಿ ಕೊಡುತ್ತಿದ್ದರು ಎಂಬುದಕ್ಕೆ ವಾರೆಂಟ್ ಉದಾಹರಣೆ. ಇಡೀ ಶೋ ಸ್ಕ್ರಿಪ್ಟ್ ಕೇಳಬೇಕು ಅನ್ನಿಸುತ್ತಿತ್ತು. ಅದೇ ಥರ ಒಳ್ಳೆದನ್ನು ಕೊಡ್ತಾರೆ. ಎರಡನ್ನು ತುಂಬಾ ಚೆನ್ನಾಗಿ ಬ್ಯಾಲೆನ್ಸ್ ಮಾಡ್ತಾರೆ. ಹಾಗಂತೆ ಅಲ್ಲೂ ಸುದ್ದಿಯನ್ನು ಚೂಯಿಂಗ್ಗಂನಂತೆ ಎಳೆಯುವುದಿಲ್ಲ ಎಂದಲ್ಲ. ಆದ್ರು ಇರುವುದರಲ್ಲಿ ಉತ್ತಮ. ನನ್ನಂತೆ ಸುಮಾರು ಜನಕ್ಕೆ ಅನ್ನಿಸಿರಬೇಕು. ಹಾಗಾಗಿಯೇ ಇವತ್ತಿಗು ಅದು ನಂಬರ್ ಒನ್ ಸುದ್ದಿ ವಾಹಿನಿ.
ಕ್ರೈಂಡೈರಿ ಕೂಡ ಹಾಗೆ ಗೆದ್ದಿದ್ದು ಅದ್ರ ನಿರೂಪಣೆಯಿಂದ, ಸ್ಕ್ರಿಪ್ಟ್ನಿಂದ. ಅಂಥದ್ದೆ ಸೂತ್ರವನ್ನು ಒಳ್ಳೆಯದ್ದಕ್ಕು ಅಳವಡಿಸಿಕೊಂಡರೆ ಗೆಲ್ಲಲ್ಲು ಸಾಧ್ಯವಿಲ್ಲವೆ? ಖಂಡಿತ ೨೪ ಗಂಟೆ ಒಳ್ಳೆದನ್ನೆ ಕೊಡಿ, ಯಾವುದೋ ಸ್ವಾಮಿಗಳ ಪ್ರವಚನ ಹಾಕಿ ಅನ್ನುತ್ತಿಲ್ಲ. ಯಾವುದೋ ಕಿತ್ತೋದ ಸಂಸಾರದ ಡೈವರ್ಸ್ ಚರ್ಚೆ, ಇನ್ನು ಯಾವುದೋ ರಾಜಕಾರಣಿಯ ವಿವಾದ ವಗೈರೆ, ವಗೈರೆ…ಯಾರಿಗೆ ಬೇಕು ಇವೆಲ್ಲ? ಯಾವ ಕಾರಣಕ್ಕಾಗಿ ನಾವು ಅದನ್ನು ನೋಡಬೇಕು? ಅವನ ಕ್ಷೇತ್ರದ ಜನಕ್ಕೆ ಅವನ್ನ ಪರಿಚಯ ಇರಲ್ಲ. ಅಂಥವ್ರನ್ನ ಕರೆದುಕೊಂಡು ಬಂದು ಚರ್ಚೆಗೆ ಕೂರಿಸಿಕೊಳ್ಳುತ್ತಾರೆ. ಕನ್ನಡ ಪದಗಳನ್ನು ನೆಟ್ಟಗೆ ಉಚ್ಚರಿಸಲು ಬರದ ಕನ್ನಡ ಓರಾಟಗಾರರಿಂದ ಕನ್ನಡದ ಪರ ಚರ್ಚೆ! ಪದೇ, ಪದೇ ಸುದ್ದಿವಾಹಿನಿ ಎಂಬುದು ಅನಕ್ಷರಸ್ಥರ, ಅವಿವೇಕಿಗಳ ಸಂತೆ ಎಂಬುದನ್ನು ನಮ್ಮ ಕನ್ನಡದ ಸುದ್ದಿ ವಾಹಿನಿಗಳು ಸಾಬೀತುಗೊಳಿಸುತ್ತಿವೆ!!! ಇವತ್ತಿನ ಟ್ರೆಂಡ್ ನೋಡಿದ್ರೆ, ಮುಂದೊಂದು ದಿನ ಪತ್ರಕರ್ತರಿಗೆ ಯಾರಾದ್ರು ಕಲ್ಲು ಹಿಡಿದು ಹೊಡೆದ್ರು ಅಚ್ಚರಿಯಿಲ್ಲ! ನ್ಯೂಸ್ ಚಾನೆಲ್ ವರದಿಗಾರಿಕೆ ಎಂಬುದು ಖಂಡಿತ ಇವತ್ತು ಅಪಾಯದಮಟ್ಟದಲ್ಲಿದೆ.
ಖಂಡಿತ ಕನ್ನಡಕ್ಕೊಂದು ಒಳ್ಳೆ ಸುದ್ದಿ ವಾಹಿನಿ ಬೇಕಿದೆ. ಏನಾದ್ರು ಒಂದಷ್ಟು ಮಾಹಿತಿ ಕೊಡುವ, ಸುದ್ದಿಯ ಎರಡು ಮುಖಗಳನ್ನು ಎತ್ತಿ ಹಿಡಿಯುವ ಅಂದೆಲ್ಲ ಅಂದುಕೊಳ್ಳುವ ಹೊತ್ತಿಗೆ ಯಾವುದೋ ರಿಯಲ್ ಎಸ್ಟೇಟ್ ಉದ್ಯಮಿಯ, ರಾಜಕಾರಣಿಯ ಇನ್ನೊಂದು ಸುದ್ದಿವಾಹಿನಿ ತಲೆ ಎತ್ತಿಕೊಂಡಿರುತ್ತದೆ. ೨ ಕೋಟಿ ಇದ್ದವನು ಸಿನಿಮಾ ಮಾಡಬಹುದು, ೨೦ ಕೋಟಿ ಇದ್ದವನು ನ್ಯೂಸ್ ಚಾನೆಲ್ ಮಾಡಬಹುದು ಎಂಬಂಥ ಯುಗವಿದು! ದುಡ್ಡು ಅವ್ರದ್ದು, ಕಾಸು ಅವ್ರದ್ದು, ಅಧಿಕಾರ ಅವ್ರದ್ದು. ಒಳ್ಳೆದಾಗ್ಲಿ ಬಿಡಿ. ಟಿವಿ ಆಫ್ ಮಾಡಿ ಸುಖವಾಗಿ ನಿದ್ದೆ ಮಾಡಿ!
ಕೆಟ್ಟದ್ದಕ್ಕೆಲ್ಲ ಟಿಆರ್ಪಿ ಬರುತ್ತಾ?
ಸೆಪ್ಟೆಂಬರ್ 24, 2015 aksharavihaara ಮೂಲಕ
ಈ ಅನಿಸಿಕೆಗಳು ಮನರಂಜನೆ ವಾಹಿನಿಗಳಿಗೂ ಅನ್ವಯಿಸುತ್ತದೆ. ಹೇಳಿದ್ದನ್ನೇ ಹೇಳುತ್ತಾ ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗದೇ ಸುತ್ತಿದಲ್ಲೇ ಗಿರಕಿ ಹೊಡೆಯುವ ಧಾರಾವಾಹಿಗಳು 1500 ಕ್ಕೂ ಮೀರಿದ ಕಂತುಗಳವರೆಗೂ ಕೊಳೆಯತ್ತಾ ಹೋಗಿವೆಯೆಂದರೆ ಅಚ್ಚರಿಯೇ?!