‘ಅಯ್ಯೋ ಪತ್ರಿಕೆಗಳಿಗೆ ಲೇಖನ ಕಳಿಸೋಕೆ ಬೇಜಾರಾಗುತ್ತೆ. ನಾವು ಬರೆದಿದ್ದು ಒಂದಾದ್ರೆ, ಅವ್ರು ಅದನ್ನು ಎಡಿಟ್ ಮಾಡಿ ಪ್ರಕಟಿಸೋದೇ ಮತ್ತೊಂದು’ ಹಾಗಂತ ಸುಮಾರು ಜನ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ‘ಲೇಖನ ಎಷ್ಟು ಚೆನ್ನಾಗಿದ್ರು ಸುಮ್ಸುಮ್ನೆ ಎಡಿಟ್ ಮಾಡ್ತಾರೆ. ಅರ್ಥವಿಲ್ಲದ ಸಂಗತಿಗಳನ್ನು ಲೇಖನದಲ್ಲಿ ತುರುಕುತ್ತಾರೆ. ನಾವು ಬರೆದಿರುವ ಲೇಖನ ಹೋಗಿ ಅದೊಂದು ಹೊಸ ಲೇಖನದ ಥರ ಆಗಿರುತ್ತೆ. ಅದ್ಕೆ ನಾವ್ಯಾಕೆ ಬರೆಯಬೇಕು’ ಅನ್ನುವವರು ಬಹಳಷ್ಟು ಜನರಿದ್ದಾರೆ.
ಖಂಡಿತ ನಿಮ್ಮ ಗೋಳು-ಸಂಕಟಗಳು ಯಾವುದೂ ಸುಳ್ಳಲ್ಲ. ಯಾಕಂದ್ರೆ ಸುದ್ದಿಮನೆಯಲ್ಲಿ ಒಂದು ಬರಹ ಬರೆಯುವುದಕ್ಕಿಂತ, ಒಬ್ಬರು ಬರೆದಿರುವುದನ್ನು ಸಂಪಾದಿಸುವುದು ಅಥವ ಎಡಿಟ್ ಮಾಡುವುದು ಬಲು ಕಷ್ಟದ ಕೆಲಸ. ಕಷ್ಟ ಅನ್ನುವುದಕ್ಕಿಂತ ಇದು ಬಲು ನಾಜೂಕಿನ ಕೆಲಸ. ಹಲವು ಉಪಸಂಪಾದಕರು ಅಥವ ಕಾಪಿ ಎಡಿಟರ್ಗಳಿಗೆ ಬರಹಗಾರನೊಬ್ಬನಿಗೆ ನೋವಾಗದಂತೆ ಎಡಿಟ್ ಮಾಡಲು ಬರುವುದಿಲ್ಲ. ಎಷ್ಟೋ ಸಲ ಎಡಿಟ್ ಮಾಡಿದ್ದು ಚೆನ್ನಾಗಿದ್ದರೂ, ಬರಹಗಾರನಿಗೆ ತಿದ್ದುಪಡಿ ಕುರಿತು ತೃಪ್ತಿ ಇರುವುದಿಲ್ಲ. ಇನ್ನು ಕೆಲವು ವಿ‘ಚಿತ್ರ’ ಸಂಪಾದಕ/ಉಪಸಂಪಾದಕರುಗಳು ಇರುತ್ತಾರೆ. ಚೆನ್ನಾಗಿರುವ ಬರಹದಲ್ಲಿಯೂ ಅವರಿಗೇನಾದ್ರೂ ಕಡ್ಡಿ ಆಡಿಸಲೇ ಬೇಕು! ಯಾಕಂದ್ರೆ ಅವ್ರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಿಕೊಳ್ಳಬೇಕಲ್ಲ! ಅದಕ್ಕಾಗಿಯೇ ಎಡಿಟ್ ಮಾಡುತ್ತಾರೆ. ಅದು ಎಷ್ಟು ಕೆಟ್ಟದಾಗಿರುತ್ತದೆ ಎಂದರೆ, ಅದಕ್ಕಿಂತ ಬರಹಗಾರನೊಬ್ಬ ಬರೆದ ಮೂಲ ಲೇಖನವನ್ನು ಪ್ರಕಟಿಸಿದರೆ ಎಷ್ಟೊ ಉತ್ತಮವಾಗಿರುತ್ತೆ. ಕಥೆ, ಕವನದ ಸಾಲುಗಳಿಗೂ ಕತ್ತರಿ ಪ್ರಯೋಗ ಮಾಡುವ ಅಸಾಸುರರೂ ಸುದ್ದಿಮನೆಯಲ್ಲಿ ಇದ್ದಾರೆ ಎಂದರೆ ನೀವು ನಂಬಬೇಕು.
ಒಬ್ಬ ಬರಹಗಾರ ಬರೆದ ವಿಚಾರಕ್ಕೆ ಚ್ಯುತಿ ಬರದಂತೆ ಎಡಿಟ್ ಮಾಡುವುದು ಅತ್ಯಗತ್ಯ. ನಂತರ ಎಡಿಟ್ ಮಾಡಿದ್ದು ಬರಹಗಾರನಿಗೆ ನೋವು ಉಂಟು ಮಾಡಬಾರದು. ಈ ಅಂಶವನ್ನು ಪಾಲಿಸುವುದು ತುಂಬಾ ಕಷ್ಟ. ಎಷ್ಟೋ ಸಲ ಎಡಿಟ್ ಮಾಡಿದ್ದು ಚೆನ್ನಾಗಿದ್ದರೂ ಬರಹಗಾರನಿಗೆ ಮಾತ್ರ ತಾನು ಬರೆದಿದ್ದೇ ಚೆನ್ನಾಗಿತ್ತು ಅನ್ನಿಸುತ್ತಿರುತ್ತೆ. ಇಂಥ ಸಂದರ್ಭದಲ್ಲಿ ಬರಹಗಾರನನ್ನು ತೃಪ್ತಿಪಡಿಸೋದು ತುಂಬಾ ಕಷ್ಟ. ಬರಹಗಾರನಿಗೆ ಖುಷಿಯಾಗುವಂತೆ ಎಡಿಟ್ ಮಾಡಬಲ್ಲ ಸಂಪಾದಕರು, ಉಪಸಂಪಾದಕರು ಬಹಳ ವಿರಳ. ನಾನು ಡಿಗ್ರಿ ಓದುತ್ತಿದ್ದಾಗ ಹಿರಿಯ ಪತ್ರಕರ್ತ ಮಿತ್ರರಾದ ಸುಧೀಂದ್ರ ಕಂಚಿತೋಟ ಅವರು ‘ಗರ್ವ’ ಎಂಬ ಪತ್ರಿಕೆಯೊಂದನ್ನು ನಡೆಸುತ್ತಿದ್ದರು. ಆಗೆಲ್ಲ ನಮಗೆ ಬರವಣಿಗೆಯ ವಿಪರೀತ ಹುಚ್ಚು. ಸುಮ್ಮನೆ ಕಾಲೇಜು ಗೆಳತಿಯ ಒಂದು ಕಾಲ್ಪನಿಕ ಲೇಖನ ಬರೆದು ಕಳಿಸಿದ್ದೆ. ಅದು ಪತ್ರಿಕೆಯಲ್ಲಿ ಎಡಿಟ್ ಆಗಿ ಪ್ರಕಟವಾಯಿತು. ಎಡಿಟಿಂಗ್ ಎಷ್ಟು ಸುಂದರವಾಗಿತ್ತೆಂದರೆ, ಛೇ ನಾನು ಹೀಗೆ ಬರೆಯಬಹುದಿತ್ತಲ್ಲ ಅಂತ ಅನ್ನಿಸಿಬಿಟ್ಟಿತ್ತು. ನಾನು ನನ್ನ ಲೇಖನದಲ್ಲಿ ನೋಡಿದ ಅತ್ಯುತ್ತಮ ಎಡಿಟಿಂಗ್ ಅದು. ನನ್ನ ಬರಹಕ್ಕೆ ಒಂಚೂರು ಚ್ಯುತಿ ಬರದಂತೆ ಲೇಖನಕ್ಕೊಂದು ಹೊಸ ಆಯಾಮ ಕೊಟ್ಟಿದ್ದರು. ಆ ಲೇಖನವನ್ನು ನಾನು ಇವತ್ತಿಗೂ ಎತ್ತಿಟ್ಟುಕೊಂಡಿದ್ದೇನೆ. ದುರಾದೃಷ್ಟವಶಾತ್ ಕಂಚಿತೋಟರಂಥ ಸಂಪಾದಕರು ಮುದ್ರಣ ಮಾಧ್ಯಮದಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ.
ನನ್ನ ಪತ್ರಿಕೋದ್ಯಮ ವೃತ್ತಿ ಬದುಕು ಶುರುವಾಗಿದ್ದು ‘ಓಮನಸೆ’ ಪತ್ರಿಕೆಯಿಂದ. ನಾನು ಆ ಪತ್ರಿಕೆ ಸೇರಿದಾಗ ಇದ್ದಿದ್ದು ಶರತ್ ಕಲ್ಕೋಡ್ ಮತ್ತು ಗೆಳೆಯ ರವಿ ಅಜ್ಜಿಪುರ. ಟ್ರಾನ್ಸ್ಲೇಷನ್ ಆಗ ನನ್ನ ಪಾಲಿಗೆ ಹೊಸತು. ಟ್ರಾನ್ಸ್ಲೆಟ್ ಮಾಡಿದ ಲೇಖನವನ್ನು ರವಿ ಅಜ್ಜಿಪುರ ತಿದ್ದುತ್ತಿದ್ದರು. ಬಹುಶಃ ನಾನು ಕಂಡ ಮತ್ತೊಬ್ಬ ಒಳ್ಳೆಯ ಎಡಿಟರ್ ಅಂದ್ರೆ ಅಜ್ಜಿಪುರ. ಟ್ರಾನ್ಸ್ಲೇಟ್ ಮಾಡಿದ ಲೇಖನವನ್ನು ಅದೆಷ್ಟು ಸೊಗಸಾಗಿ ಆ ಪತ್ರಿಕೆಯ ಭಾಷೆಗೆ ತಿದ್ದುತ್ತಿದ್ದರು ಅಂದ್ರೆ, ಅದನ್ನು ಮತ್ತೊಮ್ಮೆ ಓದಬೇಕು ಅನ್ನಿಸುತ್ತಿತ್ತ್ತು. ಹೆಚ್ಚಾಗಿ ಪತ್ರಿಕೆಯಲ್ಲಿ ಪ್ರಧಾನ ಸಂಪಾದಕರ ಸ್ಥಾನದಲ್ಲಿ ಕುಳಿತವರು ಸಾಮಾನ್ಯ ಬರಹಗಾರನ ಬರಹವನ್ನು ನೋಡುವುದಿಲ್ಲ. ಉಪ ಸಂಪಾದಕರು, ಆ ಪುಟದ ಮುಖ್ಯಸ್ಥರುಗಳೇ ಲೇಖನ ತಿದ್ದಿ, ತೀಡುತ್ತಾರೆ.
ಇಂಥ ಸಮಯದಲ್ಲಿ ಹಲವು ಎಡವಟ್ಟುಗಳು ಆಗುತ್ತವೆ ಎಂಬುದು ಒಂದು ಆಯಾಮವಾದರೆ, ಕೆಲ ಲೇಖಕರು ಅತ್ಯಂತ ಕೆಟ್ಟದಾಗಿ ಬರೆದು ಕಳುಹಿಸುತ್ತಾರೆ ಎಂಬುದು ಸುಳ್ಳಲ್ಲ. ಯಾವುದೇ ಒಂದು ಪುಟಕ್ಕೆ ಅದರದ್ದೇ ಆದ ಇತಿಮಿತಿಗಳಿರುತ್ತವೆ. ಇಂಥದ್ದೆ ವಿಚಾರದ ಲೇಖನಗಳನ್ನು ಪ್ರಕಟಿಸಬೇಕು ಎಂಬ ನಿಲುವು ಇರುತ್ತದೆ. ಲೇಖಕರು ಕಳುಹಿಸಿದ ಲೇಖನಕ್ಕೂ, ಆ ಪುಟದ ಧೋರಣೆಗೂ ಎಷ್ಟೋ ಸಲ ಸಂಬಂಧವೇ ಇರುವುದಿಲ್ಲ. ಆದಾಗ್ಯೂ ಅಂಥ ಲೇಖನಗಳನ್ನು ಸಂಪಾದಿಸಿ ಪ್ರಕಟಿಸಲೇಬೇಕಾದ ಅನಿವಾರ್ಯತೆ ಇರುತ್ತದೆ. ಉದಾಹರಣೆಗೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರೆಯುವವರು ವಿರಳ. ಆಗ ಯಾರೋ ಒಬ್ಬ ಬರೆದಿರುತ್ತಾನೆ. ಅದಕ್ಕೂ ಪುಟಕ್ಕೂ ಸಂಬಂಧವಿಲ್ಲದಿದ್ದರೂ, ಲೇಖನಕ್ಕೂ ರಿಯಲ್ಎಸ್ಟೇಟ್ಗೂ ಸ್ವಲ್ಪ ಸಾಮ್ಯತೆ ಇರುತ್ತೆ. ಅಂಥ ಸಮಯದಲ್ಲಿ ಆ ಬರಹವನ್ನು ಹಾಕಲೇಬೇಕಾಗುತ್ತದೆ. ಪ್ರಕಟಿಸಿದರೆ ಮಾತ್ರ ಮುಂದಿನ ವಾರಕ್ಕೆ ಆತನಿಂದ ಅದೇ ಪುಟಕ್ಕೆ ಇನ್ನೊಂದು ಆಹಾರ ನಿರೀಕ್ಷಿಸಬಹುದು! ಇದು ಸುದ್ದಿ ಮನೆಯ ಒಳಗೆ ಕುಳಿತವರ ಸಮಸ್ಯೆ. ಆಗ ನಮಗೆ ಎಷ್ಟೋ ಸಲ ಅನ್ನಿಸುತ್ತೆ, ಇದಕ್ಕಿಂತ ಹೊಸ ಲೇಖನ ಬರೆಯುವುದೇ ಲೇಸು ಅಂತ. ಆದ್ರೂ ನಾವು ತಾಳ್ಮೆಯಿಂದ, ಜಾಣ್ಮೆಯಿಂದ ಅದನ್ನು ಎಡಿಟ್ ಮಾಡಿ ಹಾಕುತ್ತೇವೆ.
ಬರೆಯುವವರಲ್ಲಿ ಅನೇಕರಿಗೆ ತಾವು ಯಾವ ಪುಟಕ್ಕೆ ಬರೆಯುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ. ‘ಇದನ್ನು ನಿಮ್ಮ ಪತ್ರಿಕೆಯ ಯಾವುದಾದರೂ ಪುಟಕ್ಕೆ ಪರಿಗಣಿಸಿ’ ಎಂದು ಬರೆದು ಕಳುಹಿಸಿರುತ್ತಾರೆ. ಇಂಥ ಬರಹಗಳು ಅತಿಯಾಗಿ ತಲೆ ಕೆಡಿಸುತ್ತವೆ. ಬರೆಯುವ ಕುರಿತು ಇನ್ನೊಮ್ಮೆ ಮಾತನಾಡೋಣ. ಹೀಗೆ ತಲೆ ಕೆಡಿಸಿದ ಒಂದು ಲೇಖನ ಎಡಿಟ್ ಮಾಡಿಬಿಟ್ಟರೆ, ಮುಂದಿನ ಲೇಖನದ ಕಥೆ ಗೋವಿಂದ! ಇದೊಂಥರ ಮೇಷ್ಟ್ರು, ಮನೆಯಲ್ಲಿ ಹೆಂಡ್ತಿ ಜೊತೆ ಜಗಳ ಆಡಿಕೊಂಡು ಬಂದು ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದಂತೆ ಸರಿ.
ಸುಂಧೀಂದ್ರ ಭಟ್ಟರು ಅಂತೊಬ್ಬರು ಉಪಸಂಪಾದಕರಿದ್ದಾರೆ. ಅವರು ಬಹಳ ಹಿಂದೆ ಅಂಗಿಯ ಬಗ್ಗೆ ಒಂದು ಲೇಖನ ಬರೆದು ಪತ್ರಿಕೆಯೊಂದಕ್ಕೆ ಕಳುಹಿಸಿದ್ದರು. ಅದು ಪ್ರಕಟವಾಗಿರಲಿಲ್ಲ. ೪ ತಿಂಗಳು ಬಿಟ್ಟು ಮತ್ತೆ ಅದೇ ಲೇಖನವನ್ನು ಅದೇ ಪತ್ರಿಕೆಗೆ ಕಳುಹಿಸಿದರು. ಈ ಸಲ ಲೇಖನ ಪ್ರಕಟವಾಯ್ತು. ನಮಗೆ ಅಚ್ಚರಿಯ ಮೇಲೆ ಅಚ್ಚರಿ. ಕೊನೆಗೆ ಗೊತ್ತಾಗಿದ್ದು ಏನಂದ್ರೆ, ೨ನೇ ಸಲ ಲೇಖನ ಕಳುಹಿಸಿದಾಗ ಆ ಪುಟದ ಮುಖ್ಯಸ್ಥರು ಬದಲಾಗಿದ್ದರು! ಕೆಲವೊಮ್ಮೆ ಹೀಗೂ ಆಗುತ್ತೆ!!! ಒಬ್ಬರು ರಿಜೆಕ್ಟ್ ಮಾಡಿದ ಲೇಖನವನ್ನು ಮೊತ್ತೊಬ್ಬರು ಚೆಂದವಾಗಿ ಎಡಿಟ್ ಮಾಡಿ ಹಾಕಬಹುದು.
ಬರೆಯುವವರು ಆ ಪುಟದ ಮಿತಿ, ಅಲ್ಲಿನ ವಿಚಾರಗಳು, ಸಿದ್ದಾಂತ/ಧ್ಯೇಯಗಳನ್ನು ಗಮನಿಸಿ ಬರೆಯಬೇಕು ಮತ್ತು ಬರೆಯಲೇಬೇಕು. ಯಾಕಂದ್ರೆ ಪತ್ರಿಕೆ ಅದನ್ನು ಅಪೇಕ್ಷಿಸುತ್ತದೆ. ಇದಕ್ಕೆ ನಿಮ್ಮ ಸಹಮತವಿಲ್ಲದಿದ್ದರೆ, ನೀವು ಬರೆಯದಿದ್ದರಾಯ್ತು ಅಷ್ಟೆ! ಎಲ್ಲ ಸಲವು ಉಪಸಂಪಾದಕರದ್ದೇ ತಪ್ಪು ಅನ್ನಲು ಸಾಧ್ಯವಿಲ್ಲ. ಹೆಚ್ಚಿನ ಸಲ ಬರಹಗಾರರ ತಪ್ಪುಗಳು ಇರುತ್ತೆ. ಕೆಲವು ಸಲ ಉಪಸಂಪಾದಕರ ತಪ್ಪಿರುತ್ತೆ. ಲೇಖನ ಸಂಪಾದಿಸುವ ಸಂಪಾದಕರುಗಳು ಸಾಕಷ್ಟಿದ್ದಾರೆ. ಆದರೆ ಲೇಖನವೊಂದನ್ನು ಅದ್ಭುತವಾಗಿಸಬಲ್ಲ ಸಂಪಾದಕರು ತೀರಾ ವಿರಳ ಎಂಬುದನ್ನು ಮೊದಲೇ ಹೇಳಿದೆ. ಆದರೆ ನೀವು ನಿರಂತರವಾಗಿ ಬರೆಯುತ್ತಿದ್ದರೆ, ನಾಲ್ಕಾರು ಸಲ ನಿಮ್ಮ ಹೆಸರು ಪತ್ರಿಕೆಯಲ್ಲಿ ಪ್ರಕಟವಾದರೆ ನಂತರ ನಿಮ್ಮ ಲೇಖನಗಳಿಗೆ ಕತ್ತರಿ ಪ್ರಯೋಗ ನಿಧಾನವಾಗಿ ಕಡಿಮೆಯಾಗುತ್ತದೆ. ಯಾಕೆಂದರೆ ನಿಮ್ಮ ಬರವಣಿಗೆ ಮೇಲೆ ಅವರಿಗೆ ನಂಬಿಕೆ ಬರುತ್ತದೆ. ಹೀಗಾಗಿ ಬರೆಯುವುದನ್ನು ನಿಲ್ಲಿಸಬೇಡಿ. ಬರೆಯುತ್ತಿರುವ ವೇದಿಕೆಯ ಇತಿಮಿತಿಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ಲೇಖನ ತಿದ್ದುವವರು ಸ್ವಲ್ಪ ಕಾಳಜಿ ಇಟ್ಟು ಎಡಿಟ್ ಮಾಡಲಿ.
ಬರೆಯುವುದಕ್ಕಿಂತ, ಬರೆದಿರುವುದನ್ನು ಸಂಪಾದಿಸುವುದು ಬಲು ಕಷ್ಟ!
ನವೆಂಬರ್ 4, 2013 aksharavihaara ಮೂಲಕ
ಕಷ್ಟ! ಕಷ್ಟ! 🙂
🙂
ಮಾನ್ಯರೇ, ಲೇಖನ ಚೆನಾಗಿದೆ. ಸಾಮಾನ್ಯವಾಗಿ ಒಬ್ಬ ಲೇಖಕನಾದವನು ತಾನು ಬರೆದಿದ್ದೇ ಸರಿ. ಚೆನ್ನಾಗಿ ಬರೆದಿದ್ದೇನೆ. ನನ್ನ ಲೇಖನ ವರದಿ ಮಾಡಲಿಲ್ಲವೆಂದು ಆಕ್ಷೇಪಣೆ ಮಾಡುವುದು ಸಹಜ. ಲೇಖಕನಾದವನು ಯಾವ ಕ್ರಮ ಅನುಸರಿಸಬೇಕು. ಸಂಬಂಧಿಸಿದ ವಿಷಯಕ್ಕೆ ಯಾವ ರೀತಿ ಪೂರಕವಾಗಿರಬೇಕು.ಚಿಕ್ಕದಾಗಿದ್ದರೂ ಚೊಕ್ಕವಾಗಿರಬೇಕು. ಓದುಗ ಮೆಚ್ಚುವಂತಿರಬೇಕು. ಅವನ ಮನಸ್ಸಿಗೆ ನಾಟುವಂತಿರಬೇಕು. ಒಳ್ಳೆಯ ಸಲಹೆ ನೀಡಿದ್ದೀರಿ. ಒಂದು ರೀತಿಯಲ್ಲಿ ಮರ್ಗದರ್ಶನವನ್ನೂ ನೀಡಿದ್ದೀರಿ. ಪತ್ರಿಕೆಗೆ ಬರೆಯುವ ಮುನ್ನ ನಿಮ್ಮ ಸಲಹೆ ಸೂಚನೆಯನ್ನು ಪಾಲಿಸುವುದು ಸೂಕ್ತ. ವಂದನೆಗಳು.
ಲೇಖಕರ ಹಾಗು ಸಂಪಾದಕರ ಕಷ್ಟಗಳು ಅರ್ಥವಾದವು.