ಮಿಶ್ರ ತಳಿ!
ಇದನ್ನು ಕಲಬೆರಕೆಯ ಮುಂದುವರಿದ ರೂಪ ಎಂದು ಭಾವಿಸಬಹುದು. ಒಂದೆಡೆ ಜೈವಿಕ ತಂತ್ರಜ್ಞಾನದ(ಬಿಟಿ) ಕುರಿತು ಚರ್ಚೆಯಾಗುತ್ತಿದೆ. ಇನ್ನೊಂದೆಡೆ ಹೈಬ್ರಿಡ್ ಬೀಜಗಳು ಸದ್ದು ಗದ್ದವಿಲ್ಲದೇ ಹೊಲಗಳಲ್ಲಿ ಮೊಳಕೆಯೊಡೆಯುತ್ತಿವೆ. ಹೌದು, ಹೈಬ್ರಿಡ್ ಬೀಜ ಮಾರಾಟ ಇವತ್ತು ಕೋಟಿ ವಹಿವಾಟಿನ ಉದ್ಯಮ. ಇಂಥ ಬೀಜಗಳನ್ನು ಮಾರಾಟ ಮಾಡುವ ಸಾವಿರಾರು ಕಂಪನಿಗಳು ನಮ್ಮ ದೇಶದಲ್ಲಿವೆ. ಇಂದು ಮಾರಾಟವಾಗುತ್ತಿರುವ ಬಹುತೇಕ ಆಹಾರ ಉತ್ಪನ್ನದ ಬೀಜಗಳು(ಸೀಡ್ಸ್) ಹೈಬ್ರಿಡ್ ಎಂಬುದಕ್ಕೆ ಸಾಕ್ಷಿಯಂತಿತ್ತು, ನಗರದಲ್ಲಿ ನಡೆದ ಬೀಜ ಉತ್ಪಾದಕರ ಸಮಾವೇಶ!
ಸುಮಾರು ೩೦೦ಕ್ಕೂ ಹೆಚ್ಚು ಬೀಜ ಉತ್ಪಾದನ ಕಂಪನಿಗಳ ಪ್ರತಿನಿಗಳು ಅಲ್ಲಿದ್ದರು. ೩೫ಕ್ಕೂ ಹೆಚ್ಚು ಬೀಜ ಉತ್ಪಾದನಾ ಕಂಪನಿಗಳು ಪ್ರದರ್ಶನ ಮಳಿಗೆ ತೆರೆದಿದ್ದವು. ಎಲ್ಲೂ ಕೂಡಾ ನಾಟಿ ಬೀಜ ಕಣ್ಣಿಗೆ ಕಾಣಲಿಲ್ಲ. ಹೈಬ್ರಿಡ್ ಬೀಜದಿಂದ ಬೆಳೆದ ಬೃಹತ್ಗಾತ್ರದ ತರಕಾರಿಗಳು ಕಣ್ಣಿಗೆ ರಾಚುತ್ತಿತ್ತು. ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ, ಇವತ್ತು ನಾಟಿ ಬೀಜ ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ನಮ್ಮ ಮನೆ ಅಜ್ಜಿಯೋ, ಆಯಿಯೋ ಮಳೆಗಾಲದಲ್ಲಿ ಎತ್ತಿಟ್ಟ ಅವರೆ, ಬೀನ್ಸ್ ಬೀಜಗಳು ಮಾತ್ರ ನಮ್ಮ ಪಾಲಿಗೆ ಉಳಿದಿರುವ ನಾಟಿ.
ಉದ್ದ ಬದನೆ, ಗುಂಡಾಕಾರದ ಬದನೆ ಎಂಬ ೨ ಪ್ರಮುಖ ತಳಿಗಳು ಬದನೆಯಲ್ಲಿ. ಇವುಗಳಲ್ಲಿ ಹತ್ತಾರು ಬಗೆಯ ಉಪ ತಳಿಗಳಿವೆ. ಹಸಿರು, ಕಂದು ಕೆಂಪು…ಹೀಗೆ ನಾಲ್ಕಾರು ಬಣ್ಣದ ಬದನೆಕಾಯಿಗಳಿವೆ. ಹಸಿರು ಮೆಣಸು, ಕೆಂಪು ಮೆಣಸು. ಇದರಲ್ಲೂ ಬ್ಯಾಡಗಿ ಕಡ್ಡಿ, ದಪ್ಪ…ನಾಲ್ಕಾರು ಜಾತಿಯ ಮೆಣಸುಗಳಿವೆ. ಸುಮಾರು ೫೦-೬೦ ತರಕಾರಿಗಳ ಹೈಬ್ರಿಡ್ ಬೀಜಗಳನ್ನು ಸಹಸ್ರಾರು ಕಂಪನಿಗಳು ಮಾರುತ್ತಿವೆ ಎನ್ನುತ್ತಾರೆ ಇಂಡೊ-ಅಮೆರಿಕನ್ ಹೈಬ್ರಿಡ್ ಸಂಸ್ಥೆಯ ಪ್ರಭಾಕರ ರೆಡ್ಡಿ.
ಲಾಭದಾಯಕ, ಆದ್ರೂ…?
ನಾಟಿ ಬೀಜ ಬಳಸಿ ಬೆಳೆದ ಒಂದು ಮಾಮೂಲಿ ಕಲ್ಲಗಂಡಿ ಹಣ್ಣು ಸರಾಸರಿ ೫-೧೦ ಕೆ.ಜಿ ತೂಕವಿರಬಹುದು. ಆದರೆ, ಹೈಬ್ರಿಡ್ ಬೀಜದಿಂದ ೨೫ಕೆ.ಜಿ ತೂಕದ ಕಲ್ಲಂಗಡಿ ಬೆಳೆಯಲು ಸಾಧ್ಯ. ಹಾಗಂದಮೇಲೆ, ಹೈಬ್ರಿಡ್ ಬಳಕೆ ಉತ್ತಮವಲ್ಲವೆ? ಇದರಿಂದ ಹೆಚ್ಚು ಬೆಳೆ ಲಭ್ಯವಾಗುವುದಿಲ್ಲವೇ?
ಹೌದು, ನಮ್ಮ ರಾಜ್ಯದ ಪ್ರತಿಯೊಬ್ಬ ರೈತರು ಹೀಗೇ ಆಲೋಚಿಸುತ್ತಿದ್ದಾರೆ. ಆರ್ಥಿಕವಾಗಿ ಹೈಬ್ರಿಡ್ ಬೀಜ ಬಳಕೆ ಲಾಭದಾಯಕ. ನಾಟಿ ಬೀಜಕ್ಕಿಂತ ಅತ್ಯತ್ತಮ ಫಸಲನ್ನು ಇದರಿಂದ ಪಡೆಯಬಹುದು. ಬೇಕಾದ ರುಚಿಯ ಹಣ್ಣು-ತರಕಾರಿಗಳನ್ನು ಉತ್ಪಾದಿಸಬಹುದು. ಆದರೆ, ಇಲ್ಲಿ ಒಂದು ಆಹಾರ ಬೆಳೆಯ ಮೂಲ ಸಹಜತೆ ಕಳೆದು ಹೊಗುತ್ತದೆ. ಪ್ರಯೋಗ ಶಾಲೆಯಲ್ಲಿ ಉತ್ಪಾದನೆಯಾಗುತ್ತಿರುವ ಬೀಜಗಳು ಒಂದು ರೀತಿಯಲ್ಲಿ ರಾಸಾಯನಿಕ ಆಹಾರವನ್ನು ಸೃಷ್ಟಿಸುತ್ತಿವೆ.
‘ನಮ್ಮ ದೇಶದ ಜನಸಂಖ್ಯೆಗೆ ಅಗತ್ಯವಾದಷ್ಟು ಆಹಾರ ಉತ್ಪಾದನೆ ಸಾಧ್ಯವಾಗಿದ್ದು ಹೈಬ್ರಿಡ್ ತಳಿಯಿಂದ. ಹೀಗಾಗಿ ಈ ತಳಿ ವಿರೋಸಲು ಸಾಧ್ಯವಿಲ್ಲ. ಹಾಗಂತ ಪೂರ್ಣವಾಗಿ ಸ್ವಾಗತಿಸಲು ಆಗುವುದಿಲ್ಲ. ಕೆಲ ಸಹಜವಾದ ಮೈಕ್ರೊನ್ಯೂಟ್ರಿಯೆಂಟ್ಗಳು(ಸೂಕ್ಷ್ಮ ಪೌಷ್ಠಿಕಾಂಶಗಳು) ಈ ಬೆಳೆಯಲ್ಲಿ ಕಡಿಮೆ ಇರುತ್ತದೆ. ಹೀಗಾಗಿ ಈ ಆಹಾರದಿಂದ ದೇಹಕ್ಕೆ ಲಭ್ಯವಾಗುವ ಆರೋಗ್ಯಯುತ ಅಂಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ನಾಟಿ ಬೀಜದ ಮೂರು ಕಲ್ಲಂಗಡಿ ಹಣ್ಣು, ಹೈಬ್ರಿಡ್ ಬೀಜದ ಒಂದು ಕಲ್ಲಂಗಡಿಗೆ ಸರಿ ಎನ್ನುವುದು ನಿಜ. ಆದರೆ ಇದು, ತೂಕ ಮತ್ತು ಗಾತ್ರದಲ್ಲಿ ಮಾತ್ರ. ಶಕ್ತಿಯಲ್ಲಿ, ಪೌಷ್ಠಿಕಾಂಶದಲ್ಲಿ ನಾಟಿಯದೇ ಮೇಲುಗೈ’ ಎನ್ನುತ್ತಾರೆ ಪರಿಸರ ತಜ್ಞ ನಾಗೇಶ್ ಹೆಗಡೆ.
ಏನಿದು ಹೈಬ್ರಿಡ್?
ಹೆಸರೇ ಹೇಳುವಂತೆ ಇದು ಮಿಶ್ರ ತಳಿ. ಇಲ್ಲಿ ಒಂದೇ ಪ್ರಬೇಧದ ತಳಿಗಳನ್ನು ಸಂಯೋಗಗೊಳಿಸಲಾಗುತ್ತದೆ. ಮಾವಿನ ಮರವೊಂದು ಉತ್ತಮ ರುಚಿಯ ಕಾಯಿಗಳನ್ನು ನೀಡುತ್ತದೆ. ಆದರೆ, ಈ ಮರದಲ್ಲಿ ಹೆಚ್ಚಿನ ಫಸಲು ಬರುವುದಿಲ್ಲ. ಇಂಥ ಸಂದರ್ಭದಲ್ಲಿ ಹೆಚ್ಚು ಕಾಯಿ ಬಿಡುವ ಮಾವಿನ ಮರಕ್ಕೆ, ಉತ್ತಮ ರುಚಿಯ ಅಂಶವನ್ನು ಸೇರಿಸುತ್ತಾರೆ. ಇವತ್ತು ಈ ಕ್ಷೇತ್ರ ವಾಣಿಜ್ಯ ಉದ್ಯಮವಾಗಿ ಬೆಳೆದಿದೆ. ಪ್ರಯೋಗಶಾಲೆಗಳಲ್ಲಿ ಬೀಜ ಉತ್ಪಾದನೆ ನಡೆಯುತ್ತಿದೆ. ೧೯೨೦ರಲ್ಲಿ ಅಮೆರಿಕದ ವಾಣಿಜ್ಯ ಮಾರುಕಟ್ಟೆಗೆ ಮೊದಲ ಸಲ ಹೈಬ್ರಿಡ್ ಜೋಳ ಕಾಲಿಟ್ಟಿತ್ತು.
೬,೦೦೦ ಕೋಟಿ ರೂ. ಮಾರುಕಟ್ಟೆ
ದೇಶದ ಬೀಜ ಉತ್ಪಾದಕ ಮಾರುಕಟ್ಟೆ ೬,೦೦೦ ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿದೆ. ಇದರಲ್ಲಿ ಶೇ. ೯೫ರಷ್ಟು ಪಾಲು ಹೈಬ್ರಿಡ್ ಬೀಜಗಳದ್ದು. ಬಿಟಿ ಹತ್ತಿ ದೇಶದ ಯಶಸ್ವಿಯ ಕಥೆ. ತಂತ್ರಜ್ಞಾನವನ್ನು ಸರಕಾರ ಸರಿಯಾಗಿ ಅಧ್ಯಯನ ಮಾಡಿ, ವಿಜ್ಞಾನಿಗಳ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ಭಾರತೀಯ ಬೀಜ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್ ಲವಲವಿಕೆಗೆ ತಿಳಿಸಿದ್ದಾರೆ.
ಒಂದು ಸಲ ಹೈಬ್ರಿಡ್ ಮಾಡಿದ ಉತ್ಪನ್ನದಿಂದ ಮೂಲ ಬೀಜ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಮರುಬೆಳೆಗೆ ಪುನಃ ಹೊಸ ಬೀಜವನ್ನು ಖರೀದಿಸುವುದು ಅನಿವಾರ್ಯ. ನಾವು ಬೆಳೆಯ ಜತೆಗೆ ಬೀಜ ಉತ್ಪಾದಕ ಕಂಪನಿಗಳನ್ನೂ ಪ್ರತಿ ವರ್ಷ ಬೆಳೆಸುತ್ತೇವೆ ಎಂದರೆ ತಪ್ಪಿಲ್ಲ!
ಆಂದೋಲನ ಅಗತ್ಯ
‘ನಾವು ಪೂರ್ಣವಾಗಿ ನಾಟಿ ಕಳೆದುಕೊಳ್ಳುತ್ತಿರುವುದು ದೌರ್ಭಾಗ್ಯಕಾರಿ. ಈ ಕುರಿತು ಜಾಗೃತಿ, ಆಂದೋಲನ ಅಗತ್ಯವಿದೆ. ಸಾವಯುವ ಕೃಷಿಯಲ್ಲೂ ಹೈಬ್ರಿಡ್ ಬೀಜ ಬಳಕೆಯಾಗುತ್ತಿದೆ. ಹೀಗಾಗಿ ರಾಜ್ಯದ ಆಯ್ದ ಜಿಲ್ಲೆಗಳನ್ನಾದರೂ ನಾಟಿ ಬೆಳೆಯುವ ಪ್ರದೇಶವನ್ನಾಗಿ ಪರಿವರ್ತಿಸಬೇಕು. ಈ ಕುರಿತು ತಕ್ಕಮಟ್ಟಿನ ಆಂದೋಲನ ನಡೆಯಬೇಕು’ ಎನ್ನುತ್ತಾರೆ ನಾಗೇಶ್ ಹೆಗಡೆ.
ವಿನಾಯಕ್ ಸಾರ್ ,
ಈಗ ಕೊತ್ತ೦ಬರಿ ಸೊಪ್ಪು ವೀಳ್ಯದೆಲೆಯ ಪರಿಮಳದಲ್ಲಿ ಸಿಗುತ್ತದೆ. ಅದು ಹೈಬ್ರಿಡ್ ಪರಿಣಾಮ ಎ೦ದು ನಾನು ಗ್ರಹಿಸಿದ್ದೇನೆ.
ಒಳ್ಳೆಯ ಬರಹ
ವ೦ದನೆಗಳು.