Feeds:
ಲೇಖನಗಳು
ಟಿಪ್ಪಣಿಗಳು

Posts Tagged ‘facebook’

60698_10151105350039403_322647882_nಮನುಷ್ಯನಿಗೆ ಎಷ್ಟೇ ಉತ್ಸಾಹವಿದ್ರು, ಒಂದು ಹಂತದಲ್ಲಿ ಅದು ಕುಸಿದುಹೋಗುತ್ತೆ. ಅಯ್ಯೋ ಸಾಕು ಅನ್ನಿಸಿಬಿಡುತ್ತೆ. ಅದು ನನ್ನಂತ ಸೋಮಾರಿಗಂತು ಬಲುಬೇಗ ನಿದ್ದೆ! ಜೀವನದಲ್ಲಿ ಅತ್ಯಂತ ಸುಖವಾದ ಕೆಲಸ ಅಂದ್ರೆ ನಿದ್ದೆ. ಒಂಥರ ಬದುಕಿದ್ದು ಸಾಯುವ ಸ್ಥಿತಿ. ಹಾಗಾಗಿಯೇ ಸಾವಿಗೆ ಚಿರನಿದ್ರೆ ಅಂತ ಇಟ್ಟಿರಬೇಕು. ನೀವು ಎಚ್ಚರವಿದ್ದಾಗ ದೇಹದ ಯಾವ ಜಾಗಕ್ಕೆ ವಿಶ್ರಾಂತಿ ಸಿಕ್ಕರು, ಮನಸ್ಸು ಮಾತ್ರ ಏನಾದ್ರು ಒಂದು ಆಲೋಚನೆ ಮಾಡ್ತಾ ಇರುತ್ತೆ. ಅದಕ್ಕೆ ವಿಶ್ರಾಂತಿ ಕೊಡಬಲ್ಲದ್ದು ನಿದ್ದೆ ಮಾತ್ರ!

ಆ ಕಡೆ ಸಾಹಿತ್ಯ ಸಮ್ಮೇಳನದ ಗದ್ದಲ. ಫೇಸ್‌ಬುಕ್‌ನಲ್ಲಿ ಜೋಶಿಯವರ ಚಂಡೆ-ಮದ್ದಳೆ! ಅದ್ರಿಂದ ಲಿಂಕ್‌ ತೆಗೆದುಕೊಂಡು ನೀವು ಶ್ರೀವತ್ಸ ಜೋಶಿಯವರ ಫೇಸ್‌ಬುಕ್‌ ಪ್ರೊಫೈಲ್‌ಗೆ ಭೇಟಿ ಕೊಟ್ಟರೆ ಕಾಣೋದು ‘ಬತ್ತದ ತೆನೆ ಮತ್ತು ಅದರ ಕೆಳಗೆ ಬತ್ತದ ಉತ್ಸಾಹ, ಎಲ್ಲರಲಿ ಇರಲಿ’ ಎಂಬ ಸಾಲು. ಅದ್ನ ನೋಡಿ ನೀವು ಈ ಪುಣ್ಯಾತ್ಮ ಯಾವುದೋ ರೈತ ಇರಬೇಕು ಅಥವಾ ಯಾವುದೋ ಕೃಷಿ ಸಮೂಹದ ಕಾರ್ಯಕರ್ತ ಇರಬೇಕು ಅಂದುಕೊಂಡ್ರೆ ಯಾಮಾರಿದ್ರಿ. ಅವರು ಮೂಲತಃ ರೈತರಾಗಿರಬಹುದು, ಅವರ ಹೆಸರಿನಲ್ಲಿ ಗದ್ದೆಯೂ ಇರಬಹುದು. ಆದ್ರೆ ಅವರೀಗ ಮಾಡುತ್ತಿರುವುದು ಸಾಫ್ಟ್‌ವೇರ್‌ ಕೃಷಿ. ಅಮೆರಿಕದ ಐಬಿಎಂನಲ್ಲಿ ಯಾವುದೋ ಹಿರಿಯ ಹುದ್ದೆಯಲ್ಲಿದ್ದಾರೆ ಅಂತಷ್ಟೆ ಗೊತ್ತು.

ವಿಷ್ಯ ಅದಲ್ಲ, ಮಾತಾಡಬೇಕಿರುವುದು ಈ ಬತ್ತದ ಉತ್ಸಾಹ ಬಗ್ಗೆ! ಈ ಅನಿವಾಸಿ ಭಾರತೀಯರಿಗೆ ಭಾರತ ಅನ್ನೋದು ಒಂಥರ ಕ್ರೇಜ್‌(ಹೆಂಗಸರಿಗೆ ತವರು ಮನೆಗೆ ಹೋಗುವಾಗ ಆಗುವ ಖುಷಿಯಂತೆಯೂ ಇರಬಹುದು!) ಅವರು ವಿದೇಶದಿಂದ ಬರುವಾಗಲೇ ಒಂದು ಟೈಂಟೇಬಲ್‌ ಹಾಕಿಕೊಂಡು ಬಂದಿರುತ್ತಾರೆ. ನಾವೆಲ್ಲ ಪರೀಕ್ಷೆಗೆ ಕರೆಕ್ಟಾಗಿ ೭ ದಿನ ಇರುವಾಗ ಟೈಂ ಟೇಬಲ್‌ ಹಾಕಿಕೊಂಡು ಓದ್ತಾ ಇದ್ವಲ್ಲ, ಅದೇ ಥರ! ಈ ಶ್ರೀವತ್ಸ ಜೋಶಿ ಬರುವಾಗಲೂ ಇಂಥದ್ದೆ ಒಂದು ಟೈಂಟೇಬಲ್ಲು ಹಾಕಿಕೊಂಡು ಬಂದಿರುತ್ತಾರೆ. ಅದ್ರಲ್ಲಿ ಒಂದು ಭಾಗ ನಮ್ಮ ನಾಡಿನ ಪತ್ರಿಕಾ ಕಚೇರಿಗಳಿಗೆ ಭೇಟಿ ಇರುತ್ತೆ. ಹಿಂಗೆ ಒಂದ್ಸಲ ಅವರ ಟೈಂ ಟೇಬಲ್‌ ಪ್ರಕಾರ ನಮ್ಮ ದಟ್ಸ್‌ ಕನ್ನಡ ಶ್ಯಾಮ್‌ ಕರೆದುಕೊಂಡು ಬಂದಾಗ ಪರಿಚಿತವಾದ್ರು ಜೋಶಿಯವ್ರು. ಆಮೇಲೆ ಒಂದೆರಡು ಸಲ ಸಿಕ್ಕಿರಬೇಕು.

ಫೇಸ್‌ಬುಕ್‌ನ್ನು ಅರ್ಥಪೂರ್ಣವಾಗಿ, ವಿಚಾರಪೂರ್ಣವಾಗಿ ಇಡಬಲ್ಲ ಜೊತೆಗೆ ಆಗಾಗ ನಗಿಸಬಲ್ಲ ಹಾಸ್ಯಧಾರಿಗಳಲ್ಲಿ ಜೋಶಿ ಕೂಡ ಒಬ್ಬರು. ಕೆಲವೊಮ್ಮೆ ಅವರ ವಿಚಾರಗಳು ತೀರಾ ಗಂಭೀರವಾಗಿ ಇರುತ್ತವೆ. ನಂತರ ಹೋಗುವ ಚರ್ಚೆ ಮತ್ತು ಬರುವ ಕಮ್ಮೆಂಟ್‌ಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಈ ಫನ್‌ ಮಾಡುವುದು ಒಂದು ಬಗೆಯ ಕಲೆ. ನವೀನ್‌ ಸಾಗರ ಮತ್ತು ಶ್ರೀವತ್ಸ ಜೋಶಿಗೆ ನೀವು ನಿರ್ಜೀವವಾದ, ಅತ್ಯಂತ ಗಟ್ಟಿಯಾದ ಕಬ್ಬಿಣ್ಣದ ಸುತ್ತಿಗೆ ಬೇಕಾದ್ರೂ ಕೊಡಿ, ಅದ್ರಿಂದಲೇ ನಗು ತರಿಸುತ್ತಾರೆ!

‘ಸಾರ್‌ ನೀವು ಸಂಸ್ಕೃತ ಎಲ್ಲಿ ಕಲಿತ್ತಿದ್ದು’ ಅಂತ ಜೋಶಿಯವರಿಗೆ ಕೇಳಿದೆ.

‘ಅಷ್ಟೆಲ್ಲ ಸೀನ್ ಇಲ್ಲಾ ಸಾರ್. ಎಂಟನೆಯಿಂದ ಸೆಕೆಂಡ್ ಪಿಯುವರೆಗೆ ಸಂಸ್ಕೃತ ಒಂದು ಸಬ್ಜೆಕ್ಟ್. ಆಮೇಲೂ ಸ್ವಲ್ಪ ಟಚ್ ಇಟ್ಕೊಂಡೆ ಅಷ್ಟೇ’ ಅಂದ್ರು.

ಆದ್ರೂ ನಿಮ್ಮ ಸಂಸ್ಕೃತ ಜ್ಞಾನ ಚೆನ್ನಾಗಿದೆ. ಆಮೇಲೆ ಆಸಕ್ತಿಯಿಂದ ಅಧ್ಯಯನ ಮಾಡಿದ್ರಾ ಅಂತ ಮತ್ತೊಂದು ಪ್ರಶ್ನೆ.

‘ಎಸ್ಸೆಸ್ಸೆಲ್ಸಿವರೆಗೂ ಕನ್ನಡಮಾಧ್ಯಮದಲ್ಲಿ ಶಿಕ್ಷಣ ಆದ್ದರಿಂದ ಕನ್ನಡ+ಸಂಸ್ಕೃತ ಭಾಷೆಗಳ ಮೇಲೆ ಪ್ರೌಢಿಮೆಗೆ ಕಾರಣವಾಯಿತು. ಮತ್ತೊಂದೆಂದರೆ ನನಗೆ ಯಾವುದೇ ಭಾಷೆಯಾಗಲೀ ಅದರ ಬಗ್ಗೆ ಆಸಕ್ತಿ ಹೆಚ್ಚು. ಕನ್ನಡದೊಂದಿಗೆ ಅದನ್ನು ಕಂಪೇರ್ ಮಾಡಿನೋಡೋದು ಇತ್ಯಾದಿ ಮಾಡ್ತಿರ್ತೇನೆ’ ಇದು ಅವರ ಪ್ರತ್ಯುತ್ತರ.

ಮೂಲತಃ ಕಾರ್ಕಳದವರಾದ ಜೋಶಿಯವರು ಆಗಾಗ ಪತ್ರಿಕೆಗಳಲ್ಲಿ ಪ್ರಯೋಗವಾಗುವ ತಪ್ಪು ಪದಗಳನ್ನು ಹುಡುಕಿ ಜಾಡಿಸುತ್ತಿರುತ್ತಾರೆ. ಶತಾವಧಾನಿ ಗಣೇಶರ ಸಹಸ್ರಾವಧಾನವಾದಾಗ ಒಂದರ್ಥದಲ್ಲಿ ಜೋಶಿಯವರು ಅದ್ವಾನಿಗಳಾಗಿದ್ದರು! ಬಹುಶಃ ಆಗ ಅವರು ಮಲಗಿದ್ದು ಸುಳ್ಳು. ಇಲ್ಲಿ ಹಗಲು ಅವಧಾನ ಆಗುವಾಗ ಅವರಿಗಲ್ಲಿ ರಾತ್ರಿ. ಅವಧಾನ ಮುಗಿಸಿಕೊಂಡು ಸಾವಧಾನವಾಗಿ ಆಫೀಸ್‌ಗೆ ಹೋಗುತ್ತಿದ್ದರು ಅನ್ನಿಸುತ್ತೆ.

ನಾವೆಲ್ಲ ಫೇಸ್‌ಬುಕ್‌ನಲ್ಲಿ ಒಂದು ಫೋಸ್ಟ್‌ ಹಾಕಿ ಬಿಟ್ಟುಬಿಡುತ್ತೇವೆ. ಕೊನೆಗೊಮ್ಮೆ ನೆನಪಾದಾಗ ನೋಡುತ್ತೇವೆ. ನಾನಂತು ಪೋಸ್ಟ್‌ ಹಾಕಿದಮೇಲೆ ಬರುವ ಕಮ್ಮೆಂಟ್‌ಗಳಿಗೆ ಉತ್ತರ ನೀಡಲಾಗದಷ್ಟು ಸೋಮಾರಿ! ಆದ್ರೆ ಜೋಶಿಯವರು ಆ ಪೋಸ್ಟ್‌ನ ಪೂರ್ತಿ ಚರ್ಚೆಯಲ್ಲಿ ಇರುತ್ತಾರೆ ಮತ್ತು ೧೨೦ ಕಮ್ಮೆಂಟ್‌ನಲ್ಲಿ ಒಂದು ೪೦ ಕಮ್ಮೆಂಟ್‌ ಅವರದ್ದೇ ಇರುತ್ತೆ!

ಜೋಶಿಯವರು ಶೇರ್‌ ಮಾಡುವ ಎಷ್ಟೋ ವಿಚಾರಗಳನ್ನು ನಮ್ಮ ನಾಡಿನ ಪತ್ರಿಕೆಗಳು ಎತ್ತಾಕಿಕೊಂಡು ಲೇಖನ ಮಾಡಿ ಪ್ರಕಟಿಸಿದ್ದನ್ನು ನಾನು ಗಮನಿಸಿರುವೆ. ಆಗೆಲ್ಲ ಓಹೊ ಇದನ್ನು ಜೋಶಿಯವರು ಆವತ್ತೆ ಫೇಸ್‌ಬುಕ್‌ನಲ್ಲಿ ಹಾಕಿದ್ದರು ಅಂದುಕೊಳ್ಳುತ್ತಿರುತ್ತೇನೆ. ಅವರು ಯಾವ ವಿಷಯ ಹಂಚಿಕೊಂಡರು ಅದಕ್ಕೊಂದು ಸವಿಸ್ತಾರವಾದ ವಿವರಣೆ ಹಾಕಿರುತ್ತಾರೆ ಮತ್ತು ಅದು ತುಂಬಾ ಮೌಲ್ಯಯುತವಾಗಿ ತಿಳಿದುಕೊಳ್ಳುವಂತೆ ಇರುತ್ತೆ. ಅಲ್ಲಿಗೆ ಅವರು ಫೇಸ್‌ಬುಕ್‌ ಎಂಬ ಜಾಲತಾಣವನ್ನು ತಮ್ಮ ನಿತ್ಯದ ಕೆಲಸದಂತೆ ತುಂಬಾ ಶ್ರದ್ಧಾ-ಭಕ್ತಿಯಿಂದ ನಿಭಾಯಿಸುತ್ತಾರೆ ಎಂಬುದು ದಿಟವಾಯ್ತು!

ಜೋಶಿ ಕಂಡ್ರೆ ನಮ್ಮಲ್ಲಿ ಸುಮಾರಷ್ಟು ಜನಕ್ಕೆ ಆಗಲ್ಲ. ಯಾಕಂದ್ರೆ ಅವರು ತಪ್ಪಿದ್ರೆ ಸೀದಾ-ಸಾದಾವಾಗಿ ಹೇಳಿಬಿಡುತ್ತಾರೆ ಮತ್ತು ಸಾರ್ವಜನಿಕವಾಗಿ ಶೇರ್‌ ಮಾಡುತ್ತಾರೆ. ಇದನ್ನು ತಮಗೆ ಮಾಡಿದ ಅಪಮಾನ ಅಂತ ಕೆಲವರು ಅಂದುಕೊಳ್ಳುತ್ತಾರೇನೋ! ಆದ್ರೆ ಬಹುಶಃ ಜೋಶಿಯವರಿಗೆ ನೋವು ಮಾಡುವ ಉದ್ದೇಶ ಇರಲಿಕ್ಕಿಲ್ಲ. ಹೀಗೆ ಕಾಮಿಡಿ ಮಾಡುವ, ಫನ್‌ ಮಾಡುವ ಕೆಲ ಕ್ಯಾರೆಕ್ಟರ್‌ಗಳನ್ನು ನೋಡಿದ್ದೇನೆ, ತಮ್ಮಿಂದ ಬೇರೆಯವರಿಗೆ ನೋವಾಯ್ತು ಅನ್ನಿಸಿದ್ರು ಅವ್ರು ತುಂಬಾ ಹರ್ಟ್‌ ಆಗ್ತಾರೆ. ಬೇರೆಯವರಲ್ಲಿ ನಗು ಕಾಣುವವರಿಗೆ ಯಾವತ್ತೂ ನೋವು ರುಚಿಸದು.

ಜೋಶಿಯವರ ಹಳೆಗನ್ನಡ ಜ್ಞಾನ ನೋಡಿದ್ರೆ ಹೊಟ್ಟೆ ಉರಿಯುತ್ತೆ! ಇಷ್ಟೆಲ್ಲದರ ನಡುವೆ ನೀವು ಐಬಿಎಂಗೆ ಹೋಗ್ತೀರೋ ಇಲ್ವೋ?! ಅಂದ್ರೆ, ಅವರು ಆಫೀಸನಲ್ಲಿ ಇದ್ದುಕೊಂಡೆ ಫೇಸ್‌ಬುಕ್‌ ಮೆಂಟೈನ್‌ ಮಾಡುತ್ತಿರುತ್ತಾರೆ. ಆದ್ರೆ ಕೆಲವು ಅಂಕಣಕಾರರ ಥರ ತಮ್ಮ ಲೇಖನವನ್ನು ಬೇರೆಯವರ ಬಳಿ ಬರೆಸಿ ತಮ್ಮ ಹೆಸರಿನಲ್ಲಿ ಪ್ರಕಟಿಸಿಕೊಳ್ಳುವುದು ಸುಳ್ಳು!!! ಯಾಕಂದ್ರೆ ಇಡೀ ಚರ್ಚೆಯಲ್ಲಿ ಜೋಶಿಯವರು ಭಾಗಿಯಾಗಿರುತ್ತಾರೆ ಮತ್ತು ಪರೀಕ್ಷಿಸಲೆಂದು ಪಿಂಗ್‌ ಮಾಡಿದ್ರೆ ಉತ್ತರ ಕೊಡ್ತಾರೆ!

ವಾಸ್ತವವಾಗಿ ಶ್ರೀವತ್ಸ ಜೋಶಿಯವರು ಎಂಜಿನಿಯರ್‌. ಅವ್ರು ತಂತ್ರಜ್ಞಾನದ ಬಗ್ಗೆ, ಸಾಫ್ಟ್‌ವೇರ್‌ ಬಗ್ಗೆ ಬರೆಯಬೇಕು. ಆದ್ರೆ ಅವ್ರು ಅದ್ರ ಹೊರತಾಗಿದ್ದನ್ನು ಬರೀತಾರೆ. ನಂಗೆ ಅವ್ರು ಇಷ್ಟವಾಗುವುದು ಇದೇ ಕಾರಣಕ್ಕೆ. ಸಂಸ್ಕೃತಕ್ಕು-ಸಾಫ್ಟ್‌ವೇರ್‌ಗೂ ಸಂಬಂಧವೇ ಇಲ್ಲ. ಸಾಫ್ಟ್‌ವೇರ್‌ ವೃತ್ತಿ. ಸಾಹಿತ್ಯ ಪ್ರವೃತ್ತಿ. ಸಾಕಷ್ಟು ಜನಕ್ಕೆ ಕಥೆ, ಕವಿತೆ ಪ್ರವೃತ್ತಿಯಾಗಿರುತ್ತದೆ. ಗಂಭೀರವಾದ ಸಾಹಿತ್ಯದತ್ತ ಒಲವು ಇರುವುದಿಲ್ಲ. ಆದ್ರೆ ಇವ್ರು ಅದಕ್ಕೆ ತುಸು ತದ್ವಿರುದ್ಧ.

ಕೆಲವೊಮ್ಮೆ ಅವ್ರು ತೀರಾ ಕಿರಿಕಿರಿ ಅನ್ನಿಸಬಹುದು. ಈ ಮನುಷ್ಯ ಏನಪ್ಪ ಬೇರೆ ಕೆಲಸವೇ ಇಲ್ಲವಾ ಅನ್ನಿಸಬಹುದು. ಹಾಗಂದುಕೊಂಡ್ರೆ ಅದು ನಮ್ಮ ತಪ್ಪು. ಯಾಕಂದ್ರೆ ಅವ್ರು ಯಾರನ್ನು ಬನ್ನಿ, ನನ್ನ ಫೇಸ್‌ಬುಕ್‌ ನೋಡಿ ಅಂತ ಕರೆದಿಲ್ಲ. ಅದಕ್ಕಿಂತ ಮುಖ್ಯವಾಗಿ ಅನಾವಶ್ಯವಾಗಿ ಯಾರನ್ನು ಟ್ಯಾಗ್‌ ಮಾಡುವುದಿಲ್ಲ. ಬೇಡ ಅಂದ್ರೆ ನೀವು ಅವರನ್ನು ಬ್ಲಾಕ್‌ ಮಾಡಬಹುದು. ನೀವು ಬ್ಲಾಕ್‌ ಮಾಡಿದ್ದೀರಾ ಎಂಬ ಕಾರಣಕ್ಕೆ ಅವರ ಫೇಸ್‌ಬುಕ್‌ ಅಪ್‌ಡೇಟ್‌ ನಿಲ್ಲುತ್ತದೆ ಎಂದು ನನಗಂತೂ ಅನ್ನಿಸುವುದಿಲ್ಲ!

ನಾವೆಲ್ಲ ‘ಕೊಳಗದೊಳಗಿನ ಕಪ್ಪೆಗಳು’ ಅಂತ ನಾನು ಎಷ್ಟೋ ಸಲ ಅಂದುಕೊಳ್ಳುತ್ತೀರುತ್ತೇನೆ. ನಮಗೆ ನಮ್ಮ ಜಗತ್ತೇ ದೊಡ್ಡದು. ನಾವೇ ಬುದ್ಧಿವಂತರು. ಆದ್ರೆ ಆ ಜಗತ್ತಿನಿಂದ ಹೊರಬಂದ್ರೆ ನಮಗಿಂತ ಅದೆಷ್ಟು ಬುದ್ಧಿವಂತರು ಇಲ್ಲಿದ್ದಾರೆ. ಅದರ ಅರಿವು ಜೋಶಿಯವರಿಗಿದೆ. ಯಾಕಂದ್ರೆ ಅವ್ರು ಆರ್‌.ಗಣೇಶ್‌ರಂಥ ಶ್ರೇಷ್ಠರನ್ನು ಕಂಡವರು. ಹಾಗಾಗಿ ನೀವು ಏನೇ ಕೆಲಸ ಹೇಳಿದ್ರು ಕೂಡ ಜೋಶಿಯವರು ಖುಷಿಯಿಂದ ಮಾಡಿಕೊಡುತ್ತಾರೆ ಮತ್ತು ಅದರಿಂದ ಯಾವುದೇ ಲಾಭ ಅಪೇಕ್ಷಿಸುವುದಿಲ್ಲ. ಹಾಗಾಗಿಯೇ ತೀರಾ ಕಮರ್ಷಿಯಲ್ಲಾಗಿ, ಸುಮ್ಮನೆ ಏನೇನೋ ಬರೆದು ಸಮಯ ಹಾಳು ಮಾಡುವುದಕ್ಕಿಂತ ಕೈಯ್ಯಲ್ಲಿರುವ ೩ ಪುಟ ಟ್ರಾನ್ಸ್‌ಲೇಷನ್‌ ಮಾಡಿದ್ರೆ ದುಡ್ಡು ಬರುತ್ತೆ ಎಂದುಕೊಳ್ಳುವ ನನಗೂ ಕೂಡ, ಆ ಟ್ರಾನ್ಸ್‌ಲೆಷನ್‌ ತುಸು ಹೊತ್ತು ಬದಿಗಿಟ್ಟು ಜೋಶಿಯವರ ಬಗ್ಗೆ ಹೀಗೆಲ್ಲ ಬರೆಯಬೇಕು ಅನ್ನಿಸಿದ್ದು.

ಕನ್ನಡ, ತುಳು, ಕೊಂಕಣಿ, ಇಂಗ್ಲೀಶ್, ಹಿಂದಿ, ಸಂಸ್ಕೃತ, ತೆಲುಗು ಮತ್ತು ತಮಿಳು – ಇವಿಷ್ಟು ಭಾಷೆಗಳು ಬರುತ್ತವೆ. ಇಷ್ಟೆಲ್ಲ ಆಗಿ ಅವರ ಜೋಶಿಯವರ ಮಾತೃಭಾಷೆ ಮರಾಠಿ!!!

ಜೋಶಿಯವರೆ ನಿಮ್ಮ ಬತ್ತದ ಉತ್ಸಾಹ ಬರಗಾಲದಲ್ಲೂ ‘ಪಂಚ(ಚ್‌)’ರ್‌ ಆಗದೆ ಇರಲಿ…https://www.facebook.com/srivathsa.joshi?fref=ufi

Read Full Post »