Feeds:
ಲೇಖನಗಳು
ಟಿಪ್ಪಣಿಗಳು

Posts Tagged ‘ಕಾವೇರಿ’

ಒಂದು ಕಾವೇರಿ ವಿವಾದದ ಎರಡು ಮುಖಗಳು…

india-politics-water_7427e596-78f5-11e6-85ec-37294133f8ac

ನಮ್ಮ ಮನೆಲಿ ಟೀವಿ ಇದ್ರು ಆನ್ ಆಗೋದು ಅಷ್ಟಕಷ್ಟೆ. ಅದ್ರಲ್ಲೂ ನಾನೊಬ್ಬನೆ ಇದ್ರೆ ಟೀವಿ ಹಾಕೋದು ತುಂಬಾ ಕಡಿಮೆ. ನ್ಯೂಸ್ ಚಾನೆಲ್‌ನವ್ರು ಬೆಂಕಿ ಹೊತ್ತಿಸ್ತಾರೆ. ಧಾರವಾಹಿಗಳಲ್ಲಿ ಮನೆ ಹಾಳು ವಿಚಾರಗಳನ್ನು ಬಿಟ್ಟು ಹೊಸದೇನು ಕಾಣಿಸ್ತಿಲ್ಲ. ಹಾಗಂತ ಅದರ ಹೊರತಾಗಿ ನೋಡ್ಲಿಕ್ಕೆ ಚಾನೆಲ್‌ಗಳಿಲ್ಲ ಅಂತಲ್ಲ. ಟಾಟಾ ಸ್ಕೈನಲ್ಲಿ ೪೭೫ಕ್ಕೂ ಪ್ಲಸ್ ಚಾನೆಲ್‌ಗಳು ಬರುತ್ತವೆ. ಬೇಸರವಾದ್ರೆ ಕೇಳೋಕೆ ಒಂದಷ್ಟು ಮ್ಯೂಸಿಕ್ ಚಾನೆಲ್‌ಗಳಿವೆ. ಭಕ್ತಿ ಬೇಕು ಅಂದ್ರೆ ಧಾರ್ಮಿಕ ವಾಹಿನಿಗಳಿವೆ. ಆಟದಲ್ಲಿ ಆಸಕ್ತಿಯಿದ್ರೆ ಅದಕ್ಕೂ ಆಪ್ಷನ್ ಇದೆ. ಮಾಹಿತಿಗೆ ಅಂತ ಡಿಸ್ಕವರಿ, ಬಿಬಿಸಿಯಂಥ ವಾಹಿನಿಗಳಿವೆ. ಸಿನಿಮಾಕ್ಕೊಂದು ಪ್ರತ್ಯೇಕ, ಕಾರ್ಟೂನ್‌ಗೆ ಮತ್ತೊಂದು, ಫ್ಯಾಷನ್‌ಗೆ ಮಗದೊಂದು…ಹೀಗೆ ಒಂದು ಹೊಟೆಲ್‌ನಲ್ಲಿ ಮೆನುವಿನಲ್ಲಿ ಸಿಗುವಷ್ಟು ಆಯ್ಕೆಗಳು ನಮ್ಮೆದುರಿಗಿವೆ.
ನ್ಯೂಸ್ ಚಾನೆಲ್‌ಗಳು ಬೆಂಕಿ ಹೊತ್ತಿಸುತ್ತಿವೆ. ವೆಲ್, ನೋಡಬೇಡಿ ಬಿಡಿ. ಹಾಗಂತ ಉಚಿತವಾಗಿ ಫೇಸ್‌ಬುಕ್‌ನಲ್ಲಿ, ವಾಟ್ಸಪ್‌ನಲ್ಲಿ ಕುಟ್ಟೋರು ನೋಡದೆ ಉಳಿದ್ರಾ? ರಾಜ್ಯದ ೮-೧೦ ಚಾನೆಲ್‌ಗಳನ್ನು ಬಿಟ್ಟು ನಿಮ್ಮ ಮನೆ ಟೀವಿಯಲ್ಲಿ ಮಿಕ್ಕ ೪೬೨ ಚಾನೆಲ್‌ಗಳು ಇದ್ದವಲ್ಲ?! ಹೇಳೋದು ಸುಲಭ. ಬಿಡೋದು ಕಷ್ಟ. ಮೊನ್ನೆ ನಾನು ಕೂಡ ಟೀವಿ ಆನ್ ಮಾಡಿಕೊಂಡೆ ಇದ್ದೆ. ಕಾರಣವಿಷ್ಟೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬೆಂಕಿ ಬೀಳ್ತಾ ಇದೆಯೋ, ನಾನು ಯಾವ ರೂಟ್‌ನಲ್ಲಿ ಆಫೀಸ್‌ಗೆ ಹೋಗ್ಲಿ, ಪೋಲಿಸರು ಎಲ್ಲಿ ಕಿರಿಕ್ ಮಾಡ್ತಾ ಇದಾರೆ ಅನ್ನೋ ಭಯ, ತಳಮಳ, ಕುತುಹಲ ಎಲ್ಲವೂ ಸೇರಿ ನನಗೆ ಸುದ್ದಿವಾಹಿನಿಗಳನ್ನು ನೋಡಲೇಬೇಕಿತ್ತು.
ನೀವು ಒಳಹೊಕ್ಕ ಹೊಟೆಲ್‌ನಲ್ಲಿ ವೆಜ್ಜು, ನಾನ್‌ವೆಜ್ ಎರಡೂ ಇದೆ. ಅವ ಅದನ್ನು ಬೋರ್ಡ್‌ನಲ್ಲೇ ಹಾಕಿದಾನೆ ಕೂಡ. ಹಾಗಂತ ನಿಮಗೇನು ನಮ್ಮ ಹೊಟೆಲ್‌ಗೆ ಬನ್ನಿ ಅಂತ ಒತ್ತಾಯ ಮಾಡ್ತಿಲ್ಲ. ಫೈನ್, ನೀವು ಒಂದ್ಸಲ ಹೊಟೆಲ್ ಒಳಗೆ ಹೊಕ್ಕಿದ್ರಿ. ಗೊತ್ತಾಯ್ತು. ಮತ್ತೆ ಮತ್ತೆ ಅದೇ ಹೊಟೆಲ್ ಒಳಗೆ ಹೊಕ್ಕಿ, ಹೊರಗೆ ಬಂದು ಆ ಹೊಟೆಲ್‌ಗೆ ಬೈದರೆ? ನೋಡುವವರಿಗೆ ನಿಮ್ಮ ಬುದ್ಧಿಯ ಕುರಿತೇ ಅನುಮಾನ ಶುರುವಾಗುತ್ತೆ!
ಈ ಹಿಂದೆ ಸಾಕಷ್ಟು ಸಲ ಬರೆದುಬಿಟ್ಟಿದೀನಿ. ಮತ್ತೆ ಅದೇ ತಂಗಳು ಬಗ್ಗೆ ಮಾತಾಡಲ್ಲ. ಇವತ್ತು ಸುದ್ದಿ ಎಂಬುದು ವ್ಯಾಪಾರದ ಸರಕು. ಸುದ್ದಿಸಂಸ್ಥೆಗಳು ವ್ಯವಸ್ಥಿತ ಉದ್ಯಮ. ಅತ್ಯಾಚಾರ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗಿ, ಈಗಷ್ಟೆ ಜೈಲಿನಿಂದ ಬಿಡುಗಡೆಯಾದ ಅಣ್ಣನಿಗೆ ಶುಭಕೋರಿ ಮುಖಪುಟದಲ್ಲೊಂದು ಜಾಹೀರಾತಿನ ಕಟೌಟ್ ಬಿತ್ತು ಅಂದ್ರೆ ಮುಗೀತು ಕಥೆ! ಅಲ್ಲಿಂದ ಮುಂದೆ ಅಣ್ಣ ಏರ್ಪಡಿಸುವ ರಕ್ತದಾನ ಶಿಬಿರ, ಬಡ ರೋಗಿಗಳಿಗೆ ಹಾಲು-ಹಣ್ಣು ಹಂಚಿಕೆ ಸುದ್ದಿಯನ್ನೇ ಬರೆಯಬೇಕು. ೨ನೇ ಪುಟದ ಈ ಸುದ್ದಿಗಳಿಗೆಲ್ಲ ಆಧಾರವಾಗಿರುವ ೧೧ನೇ ಪುಟದಲ್ಲಿನ ಅಣ್ಣನ ಜಾಹೀರಾತು ನೋಡಿಯಾದ್ರು, ನಾವೆಲ್ಲ ಜೈಲಿನಿಂದ ಬಿಡುಗಡೆಯಾದ ನಂತರ ಅಣ್ಣ ಮಾಡುವ ವಹಿವಾಟುಗಳ ಕುರಿತು ಬರೆಯುವಂತಿಲ್ಲ!
ಮತ್ತದೆ ಪ್ರಶ್ನೆ. ಸಾಮಾಜಿಕ ಜವಬ್ದಾರಿ, ಮಾನವೀಯತೆಯ ಮಾತು! ಹಾಗಾದ್ರೆ ದೇಶದಲ್ಲಿ ಹೆಂಡದಂಗಡಿಗಳು ಬಂದ್ ಆಗಬೇಕು. ಮಾಂಸದ ಅಂಗಡಿಗಳು ಬಂದ್ ಆಗಬೇಕು. ರಾಜಕೀಯ ಪಕ್ಷಗಳಂತೂ ಇರಲೇಬಾರದು! ಕುರಿ ಕಡಿಯುವವನು ಮಾನವೀಯತೆ ಅಂತ ಕುಳಿತುಕೊಂಡ್ರೆ, ಅವನ ಹೆಂಡ್ತಿ, ಮಕ್ಕಳು ಉಪವಾಸ ಬೀಳ್ತಾರೆ ಅಷ್ಟೆ.
ಇಡೀ ಬೆಂಗಳೂರು ಬೆಚ್ಚಗೆ ಮಲಗಿದೆ. ಮನೆಯಿಂದ ಕರೆ ಮೇಲೆ ಕರೆ. ಇವತ್ತು ಆಫೀಸ್‌ಗೆ ಹೋಗಬೇಡ ಅಂತ. ನಂಗೆ ಒಬ್ಬನಿಗೆ ಅಲ್ಲ ಪ್ರತಿ ಸುದ್ದಿಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲ ಪತ್ರಕರ್ತರಿಗೂ ಅವರ ಅಪ್ಪ, ಅಮ್ಮ, ಸಂಬಂಧಿಕರು ಕರೆ ಮಾಡಿ ಇದೇ ಮಾತು ಹೇಳಿರುತ್ತಾರೆ. ಕೆಲಸಕ್ಕಿಂತ ಜೀವ ದೊಡ್ಡದು. ಅದ್ರಲ್ಲೂ ಹೆಣ್ಣುಮಕ್ಕಳಿಗಂತೂ ಬಿಲ್‌ಕುಲ್ ಕರ್ಫ್ಯೂ ದಿನ ಕೆಲಸಕ್ಕೆ ಹೋಗೋದಕ್ಕೆ ಮನೆಯವರು ಒಪ್ಪಿರಲ್ಲ. ಆದ್ರೂ ನಮ್ಮ ವಾಹಿನಿಗಳ, ಪತ್ರಿಕೆಗಳ ವರದಿಗಾರರೆಲ್ಲ ಫೀಲ್ಡ್‌ಗೆ ಇಳಿದ್ರು. ’ನಿಮಗೇನು ಪ್ರೆಸ್‌ನವ್ರು. ಪೊಲೀಸ್‌ನವ್ರು ಹೊಡೆಯಲ್ಲ…’ ಹಂ. ಹೌದು, ಒಂದು ಮಟ್ಟಕ್ಕೆ ಸತ್ಯ. ಆದ್ರೆ ಇಂಥ ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸರಿಗೆ ಮೊದಲನೆ ಸಿಟ್ಟು ಮಾಧ್ಯಮದವರ ಮೇಲೆಯೇ ಇರುತ್ತೆ. ಸಾಕಷ್ಟು ಗಲಭೆಗಳಲ್ಲಿ ಸಾಕಷ್ಟು ಪತ್ರಕರ್ತರಿಗೆ ಚೆನ್ನಾಗಿಯೇ ಏಟು ಬಿದ್ದಿದೆ.
ವಾಹಿನಿಗಳು ಇರೋದೆ ಟಿಆರ್‌ಪಿಗೆ. ನನ್ನಂಥ ನೂರು ಜನ ಬಂದ್ ದಿನ ಟೀವಿ ನೋಡಿದ್ರು, ಆಟೊಮ್ಯಾಟಿಕ್ ಆಗಿ ಟಿಆರ್‌ಪಿ ಹೆಚ್ಚಾಗುತ್ತೆ. ಎಲ್ಲ ಸೆನ್ಸ್‌ಷನಲ್ ಇಷ್ಯೂಗಳಿದ್ದಾಗಲೂ ಟಿಆರ್‌ಪಿ ಮೀಟರ್ ಏರುತ್ತೆ. ಅಂಥ ಸ್ಥಿತಿಯನ್ನು ಎನ್‌ಕ್ಯಾಶ್ ಮಾಡಿಕೊಳ್ಳದೆ ಇರೋದು ವೃತ್ತಿಧರ್ಮಕ್ಕೆ ವಿರೋಧ. ಅಯ್ಯೋ ರಕ್ತ, ಅಯ್ಯೋ ಬೆಂಕಿ ಅಂತ ಕುಳಿತ್ರೆ…ಒನ್ಸ್ ಅಗೈನ್ ನಮ್ಮದು ಕುರಿ ಕಡಿಯುವವನ ಕಥೆಯೇ ಆಗುತ್ತದೆ. ೧೫೦ರೂ.ಗೊಂದು ಜಿಬಿ ಡೇಟಾಕೊಡುವ ಕಾಲದಲ್ಲಿ ರಿಲಯನ್ಸ್ ಜೀಯೊ ಲಗ್ಗೆಯಿಟ್ಟರೆ, ಅನಿವಾರ್ಯವಾಗಿ ಮಿಕ್ಕವರು ಅದರೊಂದಿಗೆ ಸ್ಪರ್ಧೆಗಳಿಯಲೇ ಬೇಕು. ಚಾನೆಲ್‌ಗಳ ಬೆಂಕಿ ವಿಷ್ಯುವಲ್ಸ್‌ನ ಕಥೆಯೂ ಹಾಗೆ.
ಹಾಗಂತ ಎಲ್ಲ ಸಲ ಟಿಆರ್‌ಪಿ ಮಾತಿಟ್ಟುಕೊಂಡು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ವಾಹಿನಿಗಳ ಎಲ್ಲ ನಿಲುವನ್ನು ಸಮರ್ಥಿಸುವುದಿಲ್ಲ. ಒಂದಷ್ಟು ಬಿಗುವಿನ ಪರಿಸ್ಥಿತಿಯಲ್ಲಿ, ಜಗತ್ತೇ ಹೊತ್ತಿ ಉರಿಯುವಾಗ ಟಿಆರ್‌ಪಿ ಮೀಟರ್ ಏರುತ್ತೆ ನಿಜ. ಆದ್ರೆ ಉಳಿದ ದಿನಗಳಲ್ಲಿ ರಕ್ತ, ಬೆಂಕಿಗಳು ಖಂಡಿತ ಟಿಆರ್‌ಪಿ ಮೀಟರ್ ಏರಿಸಲ್ಲ. ವಾರವಿಡಿ ಕ್ರೈಂನ್ನು ಹಾಕಿದ್ರು ಕನ್ನಡದ ಬಹುತೇಕ ನ್ಯೂಸ್ ಚಾನೆಲ್‌ಗಳು ಟಿಆರ್‌ಪಿ ೫೦ರ ಗಡಿ ದಾಟುವುದೇ ಇಲ್ಲ. ಅಂದ್ರೆ ಜನರ ಆಯ್ಕೆ ಈ ಸರಕಲ್ಲ ಎಂದಾಯ್ತು.
ನಮಗೂ ಗೊತ್ತಿರುತ್ತೆ ಒಂದಷ್ಟು ಜನರದ್ದು ಬೋಗಸ್ ಹೋರಾಟ ಅಂತ. ಟೀವಿ ಕ್ಯಾಮೆರಾ ಎದುರು ಹೋರಾಟ ಜೋರು. ಚಾನೆಲ್‌ನವ್ರು ಆ ಕಡೆ ಹೋಗ್ತಾ ಇದ್ದಂತೆ ನಮ್ಮ ಓರಾಟಗಾರರೆಲ್ಲ ಬಾರ್‌ನಲ್ಲಿ ಇರುತ್ತಾರೆ! ಆದ್ರೆ ನಾವು ಅಂಥವರನ್ನು ಪ್ರಮೋಟ್ ಮಾಡ್ತೀವಿ. ಅದಕ್ಕೆ ಕಾರಣಗಳು ನೂರೆಂಟು. ಮಾಧ್ಯಮಗಳು ಮಾಡಬಹುದಾದ ಒಂದು ಉತ್ತಮ ಕೆಲಸವೆಂದರೆ, ಇಂಥವರನ್ನು ಆರಂಭದಲ್ಲೇ ಪ್ರಚಾರ ಕೊಡದೆ ಮೆಟ್ಟಿಬಿಡಬೇಕು. ಒಂದಷ್ಟು ಹೋರಾಟಗಾರರಲ್ಲಿ ಒಬ್ಬನ ಕಾಲರ್ ಹಿಡಿದು ಕಾವೇರಿ ನದಿ ಎಲ್ಲಿ ಹುಟ್ಟುತ್ತೆ, ಎಲ್ಲಿ ಹರಿಯುತ್ತೆ, ಯಾರಿಗೆ ನಷ್ಟ ಅಂತ ಕೇಳಿದ್ರೆ, ಖಂಡಿತ ಅವನ ಬಳಿ ಉತ್ತರವಿಲ್ಲ. ’ನಂಗೆ ಇಲ್ಲಿಗೆ ಬಾ ಅಂತ ದುಡ್ಡು ಕೊಟ್ಟವನು ಇದ್ನೆಲ್ಲ ಹೇಳಿಲ್ಲ’ ಅಂತಿದ್ದ. ಇದು ನಮ್ಮಲ್ಲಿನ ಸಾಕಷ್ಟು ಹೋರಾಟಗಳ ಒಳಮುಖ.
ಖಂಡಿತ ಸಾಮಾನ್ಯ ದಿನಗಳಲ್ಲಿ ಇದೊಂದು ಹೋರಾಟವನ್ನು ದಿನಿವಿಡಿ ಹಾಕಿದ್ದರಿಂದ ೧೨೦ ಟಿಆರ್‌ಪಿ ಬಂದಿದ್ದು ಕನ್ನಡದ ಮಟ್ಟಿಗಂತೂ ಇಲ್ಲ. ಕ್ರೈಂನಲ್ಲಿ ಭರ್ಜರಿ ಟಿಆರ್‌ಪಿ ಬರುತ್ತೆ. ವಿವಾದಗಳನ್ನೇ ಜನ ನೋಡ್ತಾರೆ ಅನ್ನೋದು ಎಲ್ಲ ವಾಹಿನಿಗಳ ಮಾರ್ಕೆಟಿಂಗ್ ಮತ್ತು ರಿಸರ್ಚ್ ತಂಡ ನೀಡುವ ಅಧ್ಯಯನ ವರದಿ. ಹಾಗಿದ್ರೆ ಕನ್ನಡದ ಎಲ್ಲ ಸುದ್ದಿವಾಹಿಗಳದ್ದು ೨೫೦ ಟಿಆರ್‌ಪಿ ಆಗಬೇಕಿತ್ತು. ಖಂಡಿತ ಆಗಿಲ್ಲ. ೧೫೦ರ ಗಡಿ ದಾಟಿದ್ದು ಟಿವಿ-೯ ಮಾತ್ರ. ಟಿವಿ-೯ನಲ್ಲಿ ಕ್ರೈಂ ಜೊತೆಗೆ ವಿಶೇಷ ಬರುತ್ತೆ, ನಿಮಗೊಂದು ಸಲಾಂ ಬರುತ್ತೆ. ತಿಳುವಳಿಕೆಗೆ ಹತ್ತಾರು ಕಾರ್ಯಕ್ರಮ ಬರುತ್ತೆ ಹಾಗೂ ಅವರ ವಿಶೇಷ ಕಾರ್ಯಕ್ರಮಗಳ ಸ್ಲಾಟ್ ಬದಲಾಗುವುದು ತೀರ, ತೀರ ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ. ಅದೇ ಹಾದಿ ತುಳಿದ ಪಬ್ಲಿಕ್ ಟಿವಿ ದ್ವಿತೀಯ ಸ್ಥಾನದಲ್ಲಿದೆ. ಅದ್ರಲ್ಲೂ ಬೆಳಕು, ಪಬ್ಲಿಕ್ ಹೀರೋ ಎಂಬ ಒಳ್ಳೆ ಕಾರ್ಯಕ್ರಮ ಬರುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಜನರ ಭಾವನೆಗಳನ್ನು ಎನ್‌ಕ್ಯಾಶ್ ಮಾಡಿಕೊಂಡು ಟಿಆರ್‌ಪಿ ಹೆಚ್ಚಿಸಿಕೊಳ್ಳುವುದು, ಸಂಸ್ಥೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದು ಕಲೆ. ಅದು ಖಂಡಿತ ಪುಗ್ಸಟ್ಟೆ ಸಲಹೆ ಕೊಟ್ಟಷ್ಟು ಸುಲಭದ ಮಾತಲ್ಲ ಹಾಗೂ ಆ ಸ್ಥಾನದಲ್ಲಿ ಯಶಸ್ವಿಯಾದ ಕನ್ನಡಿಗರು ಬೆರಳೆಣಿಕೆಯ ಮಂದಿ.
ನಾನ್‌ಸೆನ್ಸ್ ಕಾರ್ಯಕ್ರಮಗಳು, ಜ್ಯೋತಿಷ್ಯದ ಕಾರ್ಯಕ್ರಮಗಳು ಟಿಆರ್‌ಪಿ ಹುಟ್ಟಿಸುವ ಟ್ರೆಂಡ್ ನರೇಂದ್ರಬಾಬು ಶರ್ಮಾರೊಂದಿಗೆ ಮುಗಿದು ಹೋಗಿದೆ! ಇಂಥ ಹೊತ್ತಿನಲ್ಲಿ ನಮ್ಮ ಮಾಧ್ಯಮಗಳು ಕ್ರೆಡಿಬಿಲಿಟಿ ಉಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ಮಾಡಬಹುದು. ಆದ್ರೆ ಮಾಡ್ತಿಲ್ಲ ಎಂಬುದು ದುರಂತವಷ್ಟೆ.
ಇನ್ನೂ ಪತ್ರಕರ್ತರ ಮಾನವೀಯತೆ ಮಾತು. ಫೇಸ್‌ಬುಕ್, ಟ್ವಿಟರ್, ವಾಟ್ಸಪ್‌ನಲ್ಲಿ ಕುಳಿತು ಕುಟ್ಟುವ ಎಲ್ಲರಿಗೂ ಮಾನವೀಯತೆ ಇದ್ಯಾ? ಅಪಘಾತವಾಗಿ ಬಿದ್ರೆ ನಿಮಗೆಲ್ಲ ಅವನ ರಕ್ಷಣೆಗಿಂತ ಆತನ ಪೋಟೊ ತೆಗೆದು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿ ಲೈಕ್, ಕಮ್ಮೆಂಟ್ ತೆಗೆದುಕೊಳ್ಳೋದು ಮುಖ್ಯವಲ್ವಾ? ಇವತ್ತು ಫೇಸ್‌ಬುಕ್, ವಾಟ್ಸಪ್‌ಗಳು ಮಾಧ್ಯಮಕ್ಕಿಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ. ಕಾವೇರಿ ಗಲಾಟೆಯನ್ನೇ ತೆಗೆದುಕೊಳ್ಳಿ. ನಮ್ಮ ಮಾಧ್ಯಮಗಳು ಎಷ್ಟು ಗಂಟೆ ಅವಮಾನವೀಯ ಸುದ್ದಿ ಪ್ರಕಟಿಸಿದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟು ಅಪಾಯಕಾರಿ ವೀಡಿಯೋ, ಸಂದೇಶಗಳು ರವಾನೆಯಾಗಿವೆ ಎಂಬುದನ್ನು ಲೆಕ್ಕಹಾಕಿ.
ಮೂರನೆ ವ್ಯಕ್ತಿ ಬಗ್ಗೆ ಬೊಟ್ಟು ಮಾಡಿ ತೋರಿಸೋದು ತುಂಬ ಸುಲಭ. ಆದ್ರೆ ನಮ್ಮ ಕಾಲು ಬುಡಕ್ಕೆ ಬಂದಾಗ ಕಷ್ಟ,ಕಷ್ಟ. ಮಾನವೀಯತೆಯ ಕುರಿತು ಬೊಬ್ಬೆ ಹೊಡೆಯುವ ನೀವು ಅದೆಷ್ಟು ಮಾನವೀಯ ಸಂದೇಶ. ವೀಡಿಯೋ ದಿನ ಶೇರ್ ಮಾಡ್ತೀರಾ? ಅದೆಷ್ಟು ಜನಕ್ಕೆ ಸಹಾಯ ಮಾಡ್ತೀರ. ಪಬ್ಲಿಕ್ ಟಿವಿ ವರದಿಗಾರ್ತಿ ಪವಿತ್ರ ಕೆಲ ದಿನಗಳ ಹಿಂದೆ ಗಾಯಗೊಂಡ ಹಸುಗಳಿಗೆ ಚಿಕಿತ್ಸೆ ಕೊಡಿಸಿದ ಫೋಟೊ ಹಾಕಿದ್ರು. ಅದೇ ಥರ ಸಾಕಷ್ಟು ಪತ್ರಕರ್ತರು ಅವರ ವರದಿಗಾರಿಕೆ ಸಮಯದಲ್ಲಿ ಮಾನವೀಯ ಕೆಲಸ ಮಾಡುತ್ತಾರೆ. ಅದು ಸುದ್ದಿಯಾಗಿ ಸ್ಕ್ರೀನ್ ಮೇಲೆ ಬರಲ್ಲ ಅಷ್ಟೆ. ನಮ್ಮ ನಾಟಿ ವೈದ್ಯದ ಜಗಳದಾಚೆಗೂ ಸುವರ್ಣನ್ಯೂಸ್‌ನ ವಿಜಯಲಕ್ಷ್ಮಿ ಶಿಬನೂರು, ಸಾಕಷ್ಟು ಅಸಹಾಯಕರಿಗೆ ತಮ್ಮ ಕಿಸೆಯಿಂದ ಸಹಾಯ ಮಾಡುವ ಪತ್ರಕರ್ತೆಯಲ್ಲೊಬ್ಬರು. ಹೀಗೆ ಹುಡುಕಿಕೊಂಡು ಹೋದ್ರೆ ನಿಮ್ಮಂತೆಯೇ ಮಾನವೀಯತೆಯುಳ್ಳ ಸಾಕಷ್ಟು ಪತ್ರಕರ್ತರು ಸಿಗ್ತಾರೆ. ಥಟ್ಟನೆ ನೆನಪಾದ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಿದೆ.
ಇಲ್ಲಿ ತಪ್ಪಿತಸ್ಥರು ಯಾರು? ಎಂಬ ಪ್ರಶ್ನೆ ಬಂದಾಗ, ರಾಜ್ಯದ ೮ ಚಾನೆಲ್‌ಗಳು ಬಿಟ್ಟು ನಿಮ್ಮ ಮನೆ ಟೀವಿಯಲ್ಲಿ ಮಿಕ್ಕ ೪೬೨ ಚಾನೆಲ್‌ಗಳು ಇದ್ದವಲ್ಲ ಎಂಬುದಷ್ಟೆ ನನಗೆ ಕಾಣುವ ಉತ್ತರ.
ನೀವೊಂದು ಪಟ್ಟಣ್ಣದ ನಡು ಬೀದಿಗೆ ಬಂದು ನಿಂತರೆ, ನಿಮಗೆ ದೇವಸ್ಥಾನ, ಕಿರಾಣಿ ಅಂಗಡಿ, ಹೊಟೆಲ್, ಬಾರು, ಪಬ್ಬು, ಮಸಾಜ್ ಪಾರ್ಲರ್ ಎಲ್ಲವೂ ಕಾಣಿಸುತ್ತದೆ. ಯಾವುದಕ್ಕೆ ಹೋಗಬೇಕು ಎಂಬುದನ್ನು ನಡುಬೀದಿಯಲ್ಲಿ ನಿಂತ ನೀವೇ ನಿರ್ಧರಿಸಬೇಕಷ್ಟೆ. ನಿಮ್ಮ ಮನೆಯಲ್ಲಿನ ಸೆಟಾಪ್ ಬಾಕ್ಸ್ ಕೂಡ ಹಾಗೆ…

Read Full Post »