Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಸ್ಟಾರ್‌ ಡೈರಿ’ Category

‘ಸಿನಿಮಾ ಉದ್ಯಮ ಬದುಕಿಗೆ ಕಲಿಸಿದ ಪಾಠ ಅಪಾರ. ಇಲ್ಲಿ  ಸಾಕಷ್ಟು  ನೋವು ಅನುಭವಿಸಿದ್ದೇನೆ. ಉಡಾಫೆತನ ಮಾಡಿಕೊಂಡು ಒದೆ ತಿಂದಿರುವೆ. ತುಂಬಾ ಬೇಸರವಾಗಿ ಎರಡು ಸಲ ಉದ್ಯಮವನ್ನು ಬಿಟ್ಟು  ಕಾರ್ಪೊರೇಟ್ ಜಗತ್ತಿನೆಡೆ ಹೆಜ್ಜೆ ಹಾಕಿದ್ದೆ. ಶ್ರಮಕ್ಕೆ ತಕ್ಕ ಗೆಲುವು ಸಂಪಾದಿಸಲು ಬಹಳ ಕಾಲ ಕಾಯಬೇಕಾಯಿತು…’ ಎಂದು ಮಾತು ಆರಂಭಿಸಿದವರು ಮುಂಗಾರು ಮಳೆ ಖ್ಯಾತಿಯ ಯೋಗರಾಜ್ ಭಟ್.

ಚಿತ್ರೀಕರಣವಿದ್ದರೆ, ಸಿನಿಮಾ ಪ್ರಂಪಚವೇ ಅವರಿಗೆ ಸರ್ವಸ್ವ. ಅದಿಲ್ಲವಾದರೆ,  ೭ರಿಂದ ೯ ಗಂಟೆಯೊಳಗೆ ಏಳುತ್ತಾರೆ. ನಿತ್ಯದ ಕಾರ್ಯಗಳು ಮುಗಿದ ನಂತರ ಸಿನಿಮಾ ಗೀತೆ ರಚನೆಯಲ್ಲಿ  ಮಗ್ನ. ಕೆಲವೊಮ್ಮೆ  ಓದಿನೊಂದಿಗೆ ಬಿಜಿ. ಇವುಗಳ ನಡುವೆ ತಮ್ಮ  ಪುಟಾಣಿ ಮಗು ಪುನರ್ವಸು ಜತೆಗೆ ಆಟ. ಮಧ್ಯಾಹ್ನ ಊಟದ ನಂತರ ಸಿನಿಮಾ ಚರ್ಚೆ.
೧೯೯೪ರಲ್ಲಿ  ಬೆಳದಿಂಗಳ ಬಾಲೆ ಚಿತ್ರದ ಮೂಲಕ ಸಿನಿಮಾಕ್ಕೆ ಕಾಲಿಟ್ಟ  ಭಟ್ಟರು,  ಒಂದೂವರೆಯಿಂದ ಎರಡು ವರ್ಷಕ್ಕೊಂದು ಚಿತ್ರ ಮಾಡುತ್ತಾರೆ. ಹಾನಗಲ್ ತಾಲೂಕಿನ ತಿಳುವಳ್ಳಿ  ಇವರ ಹುಟ್ಟೂರು. ೨ ತಿಂಗಳಿಗೊಮ್ಮೆ ಊರಿಗೆ ಹೋಗಿ ಬರುವುದು ರೂಢಿ. ಅಣ್ಣ, ಅತ್ತಿಗೆಯ ಸಂಸಾರ  ಜತೆಗಿದೆ. ಅತ್ತೆ, ಮಾವ ಕೂಡ ಮಗಳು-ಅಳಿಯನ ಮನೆಯಲ್ಲಿದ್ದಾರೆ. ಹೀಗಾಗಿ ಮಹಾನಗರಿಯಲ್ಲೂ  ಇವರದ್ದು  ಅವಿಭಕ್ತ ಕುಟುಂಬ.

‘ನಾನು ಓದಿದ್ದು ಬಿ.ಎ., ಎಂ.ಎ ಮತ್ತು ಎಲ್‌ಎಲ್‌ಬಿಗಳಿಗೆ ಒಂದೊಂದು ವರ್ಷ ಪ್ರಯತ್ನ ಮಾಡಿದೆ. ಯಾವುದೂ ಪೂರ್ಣವಾಗಲಿಲ್ಲ. ಸಿನಿಮಾ ಪ್ರಪಂಚ ಪ್ರವೇಶಿಸಿದೆ. ಒಂದು ಹಂತದವರೆಗೂ ನನಗೆ ಕನ್ನಡ ಚಿತ್ರೋದ್ಯಮದ ಪರಿಚಯವಿರಲಿಲ್ಲ. ಪರಿಣಾಮವಾಗಿ ಸಾಕಷ್ಟು  ಸಲ ಅವಮಾನ ಅನುಭವಿಸಿದೆ. ಈಗ ಕಥೆ ಬಗೆಗಿನ ಚರ್ಚೆಯಲ್ಲೇ ಆರು ತಿಂಗಳ ಬದುಕು ಕಳೆದು ಹೋಗುತ್ತದೆ. ಸಿನಿಮಾ ಗೀತೆ ಜತೆಗೆ ಕವನವನ್ನೂ ಬರೆಯುತ್ತೇನೆ’ ಎಂದು ಭಟ್ಟರು ನಗುತ್ತಾರೆ.

ಹಿಂದಿ ಘಜಲ್‌ಗಳೆಂದರೆ ಅವರಿಗೆ ತುಂಬಾ ಇಷ್ಟ. ಮನಸು ಬಂದ್ರೆ ಹಾಡುವುದಂಟು. ಕೀ ಬೋರ್ಡ್ ಜತೆಗೆ ನಿಕಟ ನಂಟು. ದೇವರಿಗೂ ಈ ಯೋಗಿಗೂ ಯಾವುದೇ  ಸಂಬಂಧವಿಲ್ಲವಂತೆ. ಟಿವಿ, ರೆಡಿಯೋ, ಗಡಿಯಾರ ಮೊದಲಾದ ಉಪಕರಣಗಳನ್ನು ಬಿಚ್ಚುವುದರಲ್ಲಿ  ಇವರು ನಿಸ್ಸಿಮರು. ಲೀಗ್ ಮಟ್ಟದಲ್ಲಿ  ವಾಲಿಬಾಲ್ ಆಡಿದ ಅನುಭವವಿದೆ. ಕುಟುಂಬದೊಂದಿಗೆ ಪ್ರವಾಸ ಹೋಗೋದು, ಚಿತ್ರೀಕರಣ ಸ್ಥಳ ಹುಡುಕಾಟ ಮಾಮೂಲು. ರಾತ್ರಿ ೧೦.೩೦-೨ಗಂಟೆಯೊಳಗೆ ನಿದ್ದೆಗೆ ಜಾರುತ್ತಾರೆ.

‘ಬಹಳ ಹಿಂದೆ ವಿಭಿನ್ನ ರೀತಿಯಲ್ಲಿ  ವಿದ್ಯುತ್ ಉತ್ಪಾದನೆಯ ಕುರಿತು ಊರ ಹುಡುಗರ ಜತೆ ಕೆಲಸ ಮಾಡಿದ್ದೆ. ಈ ದೃಶ್ಯ ಮನಸಾರೆ ಚಿತ್ರದಲ್ಲಿ  ಬರುತ್ತೆ. ಜಪಾನಿ ಭಾಷೆಯ ಅಕಿರೊ ಕುರುಸೋವಾ.  ಹಿಂದಿಯ ಹೃಷಿಕೇಷ್ ಮುಖರ್ಜಿ ನನ್ನಿಷ್ಟದ ನಿರ್ದೇಶಕರು. ಸದ್ಯದಲ್ಲೇ  ನಿರ್ಮಾಪಕನಾಗುವ ಇರಾದೆಯಿದೆ. ಸ್ವಂತ ಬ್ಯಾನರ್‌ನಡಿ ಇನ್ನಷ್ಟು  ಚಿತ್ರಗಳು ಬರಲಿವೆ’ ಎಂದು ಮಾತು ಮುಗಿಸಿದರು ಭಟ್ಟರು.

Read Full Post »

ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ವ್ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…
ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಇಂಥದ್ದೊಂದು ಮಂತ್ರದ ಸಾಲು ಎಚ್‌ಎಸ್‌ಆರ್ ಲೇ ಔಟ್‌ನಲ್ಲಿರುವ ಕನ್ನಡದ ಕುಳ್ಳ ಬಂಗ್ಲೆ ಶ್ಯಾಮರಾವ್ ದ್ವಾರಕನಾಥರ ಮನೆಯಲ್ಲಿ  ಕೇಳಿಬರುತ್ತದೆ.

‘ಈವರೆಗೆ ೩೦೦ಕ್ಕೂ ಅದಿಕ ಸಿನಿಮಾಗಳಲ್ಲಿ  ನಟಿಸಿದ್ದೇನೆ. ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿ  ನಿರ್ಮಾಪಕನಾಗಿ ಸರಿಸುಮಾರು ೫೦ ಚಿತ್ರಗಳಲ್ಲಿ  ದುಡಿದಿರುವೆ. ಕೇವಲ ೬ ವರ್ಷಗಳಲ್ಲಿ(೧೯೮೨-೧೯೮೮ರ ಅವಯಲ್ಲಿ) ೧೭ ಚಿತ್ರ ನಿರ್ಮಿಸಿದ್ದೆ. ಈ ವರ್ಷ ೩ ಚಿತ್ರಗಳಲ್ಲಿ  ಕಾಣಿಸಿಕೊಳ್ಳುವೆ. ನಟ,ನಾಯಕ, ನಿರ್ಮಾಪಕ, ನಿರ್ದೇಶಕನಾಗಿ ಚಿತ್ರರಂಗದಲ್ಲಿ  ಬೆಳೆಯಲು ರಾಘವೇಂದ್ರ ಸ್ವಾಮಿಗಳ ಅನುಗ್ರಹವೇ ಕಾರಣ. ರಾಯರಿಲ್ಲದೆ ನಾನಿಲ್ಲ. ಮಂತ್ರಾಲಯದಲ್ಲೊಂದು ಸ್ವಂತ ಮನೆ ಇದೆ. ವರ್ಷಕ್ಕೆ ಸಾಕಷ್ಟು  ಸಲ ರಾಯರ ಸನ್ನಿಧಾನಕ್ಕೆ ಹೋಗುವೆ’ ಎಂದು ಅಕ್ಕಿ ರೊಟ್ಟಿ  ಮತ್ತು ಚಹಾದೊಂದಿಗೆ ಮಾತಿಗೆ ಕುಳಿತರು ದ್ವಾರಕೀಶ್.

ಬೆಳಿಗ್ಗೆ  ೭.೩೦ಕ್ಕೆ ದಿನಪತ್ರಿಕೆ ಓದಿನೊಂದಿಗೆ ಅವರ ದಿನಚರಿ ಆರಂಭವಾಗುತ್ತದೆ. ದಿನಪತ್ರಿಕೆ ಹಾಕುವ ಹುಡುಗನೂ ಇವರ ಅಭಿಮಾನಿ. ಶುಕ್ರವಾರ ಎಲ್ಲ  ಪತ್ರಿಕೆಗಳನ್ನು ಇವರ ಮುಂದಿಟ್ಟು  ಚಿತ್ರರಂಗದ ಕುರಿತು ಸ್ವಲ್ಪ  ಹರಟೆ ಹೊಡೆಯುವುದು ಆ ಹುಡುಗನ ದಿನಚರಿ! ಚಿತ್ರೀಕರಣವಿದ್ದರೆ  ಬೆಳಿಗ್ಗೆ ೭ಗಂಟೆಗೆ ಮನೆ ಬಿಡುತ್ತಾರೆ. ಉಳಿದ ದಿನ ಹೆಂಡ್ತಿ, ಮಗ, ಸೊಸೆ ಜತೆಗೆ ತಿಂಡಿಗೆ ಕುಳಿತರೆ  ಭರ್ತಿಯಾಗಿ ಒಂದು  ಗಂಟೆ ಕಾಲ  ಸಿನಿಮಾ ವಿಮರ್ಶೆ. ೫ ಜನ ಗಂಡು ಮಕ್ಕಳಲ್ಲಿ  ಇಬ್ಬರು ವಿದೇಶದಲ್ಲಿದ್ದಾರೆ.  ಒಬ್ಬ ಮಗನ ಸಂಸಾರ ಇವರ ಜತೆಗಿದೆ. ಕುಟುಂಬದ ಜತೆ ಡೈನಿಂಗ್ ಟೇಬಲ್‌ನಲ್ಲಿ  ಊಟ/ತಿಂಡಿಗೆ ಕುಳಿತರೆ ಸಿನಿಮಾ ಮಾತುಕತೆ ಕಟ್ಟಿಟ್ಟ  ಬುತ್ತಿ. ಮೊಮ್ಮಗಳನ್ನು ಶಾಲೆಗೆ ಡ್ರಾಪ್ ಮಾಡಿ, ಬೆಳಿಗ್ಗೆ   ೯ ಗಂಟೆ ಸುಮಾರಿಗೆ  ಮನೆಯಲ್ಲಿಯೇ ಇರುವ ತಮ್ಮ ಪ್ರತ್ಯೇಕ ಕಚೇರಿಗೆ ಬಂದು ಕೂರುತ್ತಾರೆ. ೯ರಿಂದ ೧೧ರ ಅವ  ಸ್ನೇಹಿತರು, ಅಭಿಮಾನಿಗಳಿಗೆ ಮೀಸಲಿಟ್ಟ  ಸಮಯ. ೧೧.೩೦-೧೨ ಗಂಟೆ ಸುಮಾರಿಗೆ ದೇವರ ಮನೆ ಪ್ರವೇಶಿಸಿದರೆ,  ನಂತರದ ೨೦-೩೦ ನಿಮಿಷ ರಾಯರಿಗೆ ಅರ್ಪಣೆ.

೨.೩೦-೩.೩೦ ನಿದ್ದೆ/ಟಿವಿ ನೋಡುವ ಸಮಯ. ಸಂಜೆ ೪.೩೦-೫ಗಂಟೆಗೆ ಸೆಂಚುರಿ ಕ್ಲಬ್‌ಗೆ ಹೋಗುತ್ತಾರೆ.  ‘ಕ್ಲಬ್ ಎಂದಾಕ್ಷಣ ಗುಂಡು ಹಾಕುವ ಜಾಗ ಅಂತಾ ಅಂದುಕೊಳ್ಳಬೇಡಿ. ಅಲ್ಲಿ  ೬೦ವರ್ಷ ಮೇಲ್ಪಟ್ಟವರೇ ಇರುತ್ತಾರೆ. ಅಲ್ಲಿನ ಗ್ರಂಥಾಲಯಕ್ಕೆ  ಹೋಗುತ್ತೇನೆ. ಅರ್ಧ ಜನ ಓದುತ್ತಿರುತ್ತಾರೆ. ಇನ್ನು ಕೆಲವರು ಕುರ್ಚಿಯಲ್ಲೇ  ನಿದ್ದೆಗೆ ಜಾರಿರುತ್ತಾರೆ. ೭.೩೦-೮ಗಂಟೆ ವೇಳೆಗೆ  ದಿನಸಿ ಖರೀದಿ ಪೂರೈಸಿಕೊಂಡು ಮನೆಗೆ ಮರಳುತ್ತೇನೆ. ಹೆಂಡ್ತಿ  ಧಾರಾವಾಹಿಯಲ್ಲಿ  ಮುಳುಗಿರುತ್ತಾಳೆ. ಅವಳ ಹತ್ತಿರ ರಿಮೋಟ್ ಕಸಿದುಕೊಳ್ಳಲು ನಿತ್ಯವೂ ಜಗಳ ಆಡಬೇಕು. ಅರ್ಧ ಗಂಟೆ ವಾರ್ತೆ ವಿಕ್ಷೀಸುವೆ. ಊಟದ ನಂತರ ಡೈರಿ ಬರೆಯುತ್ತೇನೆ. ನಿತ್ಯವೂ ಡೈರಿ ಬರೆಯುವುದು ಉತ್ತಮ ಹವ್ಯಾಸ. ಇದರಿಂದಾಗಿ ಪ್ಲ್ಯಾಶ್‌ಬ್ಲಾಕ್‌ನ ನೆನಪುಗಳು ಸದಾ ಜತೆಗಿರುತ್ತದೆ. ೯.೩೦ಕ್ಕೆ ಹಾಸಿಗೆ ಏರಿದರೆ ಅರ್ಧ-ಮುಕ್ಕಾಲು ಗಂಟೆ ಚಿತ್ರರಂಗದ ಮಿತ್ರರ ಕರೆಗಳಲ್ಲೇ  ಮಗ್ನನಾಗಿರುವೆ. ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ  ಭಾಗವಹಿಸುವುದು ಕಡಿಮೆ. ಮನಸ್ಸಿನ ನೆಮ್ಮದಿ ದೃಷ್ಟಿಯಿಂದ ಏಕಾಂಗಿಯಾಗಿ ಬದುಕುವುದು ಗೆಳೆಯ ರಜನಿಕಾಂತ್ ಕಲಿಸಿದ ಪಾಠ’ ಎನ್ನುತ್ತಾರೆ ಆಪ್ತ ಮಿತ್ರದ ರೂವಾರಿ.

ನಟರು, ಹೆಸರಿದ್ದಾಗ ಅಭಿಮಾನಿಗಳ ಭಯದಿಂದ ಹೊರ ಬರುವುದಿಲ್ಲ. ಹೆಸರು ಹೋದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಮನಸ್ಸು ಬರುವುದಿಲ್ಲ. ಹೀಗಾಗಿ ನಾಲ್ಕು ಗೋಡೆಗಳ ನಡುವೆಯೇ ಸಿನಿಮಾ ಮಂದಿಯ ಜೀವನ ಕಳೆದುಹೋಗುತ್ತದೆ. ಈ ಗೊಂದಲದಿಂದ ಹೊರಬಂದು ಸಾಮಾನ್ಯನಂತೆ ಎಲ್ಲರ ಜತೆ ಬದುಕುವವ ನಿಜವಾದ ಕಲಾವಿದ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವ ಇವರು, ಬಂಧು-ಬಳಗದವರ ಮನೆ ಕಾರ್ಯಕ್ರಮಗಳನ್ನು ತಪ್ಪಿಸುವುದಿಲ್ಲ. ಹುಟ್ಟೂರಾದ ಹುಣಸೂರಿಗೆ ವರ್ಷಕ್ಕೊಮ್ಮೆ ಹೋಗುತ್ತಾರೆ. ಮೈಸೂರಿನಲ್ಲಿರುವ ಅಣ್ಣನ ಮನೆಗೆ ಆಗಾಗ ಭೇಟಿ ನೀಡುತ್ತಾರೆ.

‘ಕಲಾವಿದರು ಹಣದ ಹಿಂದೆ ದುಂಬಾಲು ಬೀಳಬಾರದು. ತಮಿಳು/ತೆಲುಗಿನಂತೆ ಉತ್ತಮ ಕಥೆ, ನಿರ್ಮಾಪಕರಿಗೆ ನಾಯಕ/ನಾಯಕಿಯರು ಹೆಚ್ಚಿನ ಆದ್ಯತೆ ನೀಡಬೇಕು.  ಇಲ್ಲವಾದರೆ ಕನ್ನಡ ಸಿನಿಮಾ ಜಗತ್ತು ಕೂಡ ಮರಾಠಿ, ಬಂಗಾಳಿ, ಗುಜರಾತಿ ಚಿತ್ರ ರಂಗದ ರೀತಿಯಲ್ಲಿಯೇ ಮೂಲೆಗುಂಪಾಗಿ ಹೋಗುತ್ತದೆ. ನಾವೆಲ್ಲ ,  ನಮ್ಮ  ಭಾಷೆಯ ಚಿತ್ರ ರಂಗ ಬೆಳೆಯಬೇಕೆಂಬ ಕನಸು ಕಂಡವರು. ಈಗಿನ ಸಿನಿಮಾಗಳನ್ನು ನೋಡಿದರೆ ಬೇಸರವಾಗುತ್ತಿದೆ.  ಸದ್ಯಕ್ಕೆ ಯಾವ ಸಿನಿಮಾವನ್ನೂ ಮಾಡುವ ಇರಾದೆಯಿಲ್ಲ’ ಎಂದು ದ್ವಾರಕೀಶ್ ಮಾತು ಮುಗಿಸುವ ಹೊತ್ತಿಗೆ ಮನೆಗೆ ಅಭಿಮಾನಿಯೊಬ್ಬರ ಆಗಮನವಾಗಿತ್ತು .

ಮೂಲ ಹೆಸರು-ಬಂಗ್ಲೆ  ಶ್ಯಾಮರಾವ್ ದ್ವಾರಕನಾಥ್
ಜನ್ಮ ದಿನಾಂಕ- ೧೯.೦೮.೧೯೪೨
ಮೂಲ ಸ್ಥಳ-ಹುಣಸೂರು(ಮೈಸೂರು ಜಿಲ್ಲೆ)
ವಿದ್ಯಾಭ್ಯಾಸ- ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್
ಮೊದಲ ಅಭಿನಯದ ಚಿತ್ರ-ವೀರ ಸಂಕಲ್ಪ(೧೯೬೪)
ಇಷ್ಟದ  ನಿರ್ದೇಶಕ-ವಿ.ಶಾಂತಾರಾಮ್(ಹಿಂದಿ)
ಇಷ್ಟದ ನಟ/ನಟಿ-ದಿಲೀಪ್ ಕುಮಾರ್

Read Full Post »

ಸಂಜೆ ವೇಳೆಯಲ್ಲಿ  ಬನಶಂಕರಿ ಎರಡನೇ ಹಂತದಲ್ಲಿರುವ ಅರಬಿಂದೋ ಶಾಲೆಯ ಮೈದಾನಕ್ಕೆ ಹೋದರೆ, ನಾಯಕ/ನಿರ್ದೇಶಕ ರಮೇಶ್ ಅರವಿಂದ್ ತಮ್ಮ ಪುಟಾಣಿ ಕಂದ ಅರ್ಜುನ್ ಜತೆ ಬ್ಯಾಟು, ಬಾಲು ಹಿಡಿದು ನಿಂತಿರುತ್ತಾರೆ. ಕ್ರಿಕೆಟ್ ಆಡುತ್ತಾ, ಮಗನ ಹಿಂದೆ ಓಡುತ್ತಿರುತ್ತಾರೆ!  ಚಲನಚಿತ್ರದಲ್ಲಿ  ಡಬ್ಬಲ್ ಆಕ್ಟಿಂಗ್ ಮಾತ್ರ ಮಾಡುತ್ತೇನೆ. ಸಂಸಾರದ ನೌಕೆಯಲ್ಲಿ ಮಗ, ಗಂಡ, ಅಪ್ಪ…ಹಲವಾರು ಪಾತ್ರ ಎಂದು ನಕ್ಕರು ಜಿ.ರಮೇಶ್.

‘ರಾತ್ರಿ ಎಷ್ಟೇ  ತಡವಾಗಿ ಮಲಗಿದರೂ ಕೂಡ, ಪ್ರತಿ ನಿತ್ಯ ಬೆಳಿಗ್ಗೆ  ೬.೧೫ಕ್ಕೆ ಏಳುತ್ತೇನೆ. ೭ಗಂಟೆವರೆಗೂ  ಮನೆಯಲ್ಲಿ  ಬೇರೆ ಯಾರೂ ಎದ್ದಿರುವುದಿಲ್ಲ.  ಈ ವೇಳೆಯಲ್ಲಿ   ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಅಗತ್ಯವಾದ ಯೋಗ, ವ್ಯಾಯಾಮಗಳನ್ನು ಮಾಡುತ್ತೇನೆ.  ಚಿತ್ರೀಕರಣವಿದ್ದರೆ ೬.೩೦-೭ ಗಂಟೆಯೊಳಗೆ ಮನೆ ಬಿಡುತ್ತೇನೆ. ಮನೆಯಿಂದಲೇ ಮೇಕಪ್ ಮಾಡಿಕೊಂಡು ಕಾರಿನಲ್ಲಿ  ಡ್ರೈವರ್ ಜತೆ ಚಿತ್ರೀಕರಣದ ಸ್ಥಳಕ್ಕೆ ಹೋಗುವುದು  ಮಾಮೂಲಾಗಿದೆ. ಚಿತ್ರೀಕರಣ ಇಲ್ಲದ ದಿನ ೮.೩೦ಕ್ಕೆ  ಪತ್ನಿ ಅರ್ಚನಾ, ಮಗ ಅರ್ಜುನ್, ಮಗಳು ನಿಹಾರಿಕಾ ಜತೆ ಕುಳಿತ ತಿಂಡಿ ತಿನ್ನುತ್ತೇನೆ. ಅದರ  ನಂತರ ಆವತ್ತಿನ ಕಾರ್ಯಗಳು ಆರಂಭವಾಗುತ್ತದೆ’ ಎಂದು ಅವರು ದಿನಚರಿ ವಿವರಿಸಲು ಶುರುವಿಟ್ಟರು.

ನಟರಾಗಿದ್ದಾಗ ವರ್ಷಕ್ಕೆ ೮-೯ ಚಿತ್ರದಲ್ಲಿ  ಅಭಿನಯಿಸುತ್ತಿದ್ದ  ರಮೇಶ್, ನಿರ್ದೇಶಕರಾದ ನಂತರ ೧-೨ ಸಿನಿಮಾ ಮಾತ್ರ ಮಾಡುತ್ತಿದ್ದಾರೆ. ಇದುವರೆಗೆ ನಾನಾ ಭಾಷೆಗಳ ೧೨೦ಕ್ಕೂ ಅಕ ಚಿತ್ರದಲ್ಲಿ  ಅಭಿನಯಿಸಿರುವ ಅವರು,  ಈವರೆಗಿನ ಜೀವನದ ಬಹುಪಾಲು ದಿನಗಳನ್ನು  ಚಿತ್ರೀಕರಣದಲ್ಲೇ ಕಳೆದಿದ್ದಾರೆ. ಈ ವರ್ಷ ೬ ಚಿತ್ರಗಳಲ್ಲಿ  ಕಾಣಿಸಿಕೊಳ್ಳಲಿರುವ ಅವರು, ಬೆಳಿಗ್ಗೆ  ೬.೧೫ ಚಿತ್ರೀಕರಣದ ಸ್ಥಳಕ್ಕೆ ಹೋದರೆ, ಮತ್ತೆ  ಮನೆ ತಲುಪುವುದು ರಾತ್ರಿ ೯.೩೦ಕ್ಕೆ. ಚಿತ್ರೀಕರಣವಿಲ್ಲದ ಸಮಯದಲ್ಲಿ  ಬೆಳಿಗ್ಗೆ  ೧೦.೩೦ಗೆ ತಾವು ಮಾಡುತ್ತಿರುವ ಚಿತ್ರದ ಕುರಿತು ಸಂಬಂತರೊಂದಿಗೆ ಚರ್ಚೆ ನಡೆಸುತ್ತಾರೆ. ದಿನಕ್ಕೆ ೪ ಪತ್ರಿಕೆಗಳನ್ನು  ತಪ್ಪದೇ  ಓದುವ ಹವ್ಯಾಸವಿದೆ. ಜತೆಗೆ  ಕನ್ನಡ, ಇಂಗ್ಲೀಷ್ ಕಾದಂಬರಿಗಳನ್ನು ಇಷ್ಟಪಡುತ್ತಾರೆ. ಮಧ್ಯಾಹ್ನ ೮-೧೦ನಿಮಿಷ ನಿದ್ದೆ  ಮಾಡುವುದೆಂದರೆ ರಮೇಶ್‌ಗೆ ಪಂಚ ಪ್ರಾಣವಂತೆ. ನಂತರ ಸ್ವಲ್ಪ  ಹೊತ್ತು  ಟಿವಿ ನೋಡುತ್ತಾರೆ. ೩.೩೦ರಿಂದ ಚಿತ್ರದ ಕುರಿತು ಮತ್ತೆ ಚರ್ಚೆ ಆರಂಭಿಸಿ, ೫.೩೦ ವೇಳೆಗೆ ಫ್ರೀ ಆಗುತ್ತಾರೆ. ಸಂಜೆ ಕತ್ತಲಾದ ನಂತರ ಮಗ ಅರ್ಜುನ್ ಜತೆ ಕ್ರಿಕೆಟ್, ಪತ್ನಿ-ಮಕ್ಕಳ ಜತೆ ವಿಹಾರ…

ಒಂದು ಚಿತ್ರ  ಮುಗಿದ ನಂತರ ಕುಟುಂಬದ ಜತೆ  ನಾಲ್ಕಾರು ದಿನ ದೂರದೂರಿಗೆ ಪ್ರವಾಸಕ್ಕೆ ಹೋಗುವುದು ಅವರ ರೂಢಿ. ಅಪ್ಪ-ಅಮ್ಮ, ಸಹೋದರರೆಲ್ಲ  ಮನೆಗೆ ಸಮೀಪದಲ್ಲೆ  ಇದ್ದಾರೆ. ಬಿಡುವಿನ ವೇಳೆಯಲ್ಲಿ  ಅವರ ಮನೆಗೆ ಹೋಗುತ್ತೇನೆ ಎನ್ನುತ್ತಾರೆ. ಹಿರಿಯ ನಾಗರೀಕರಿಗಾಗಿ ಇರುವ ‘ಡಿಗ್ನಿಟಿ ಫೌಂಡೇಷನ್’ ಹಾಗೂ  ಬುದ್ದಿಮಾಂಧ್ಯ ಮಕ್ಕಳ ಸಂಸ್ಥೆಯಾದ ‘ಮಾನಸ’ಕ್ಕೆ ರಾಯಭಾರಿಯಾಗಿರುವ ಇವರು, ಅರ್ಥಪೂರ್ಣ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮಾತ್ರ ಹೋಗುತ್ತಾರೆ. ಜತೆಗೆ, ಶಾಲಾ ಕಾರ್ಯಕ್ರಮಗಳನ್ನೂ ಅಟೆಂಟ್ ಮಾಡುತ್ತಾರೆ. ಚಿತ್ರೀಕರಣದ ಸಮಯದಲ್ಲಿ  ಮಾತ್ರ ಅಭಿಮಾನಿಗಳಿಗೆ ಭೇಟಿಯ ಅವಕಾಶ. ಕಾರಿನಲ್ಲಿ  ಪ್ರಯಾಣ ಮಾಡುವಾಗ ಪರಿಚಿತರು, ಸ್ನೇಹಿತರು, ಅಭಿಮಾನಿಗಳಿಂದ ಬಂದಿರುವ ಇ-ಮೇಲ್, ಮೊಬೈಲ್ ಸಂದೇಶವನ್ನು ಪರಿಶೀಲಿಸಿ ಉತ್ತರ ನೀಡುತ್ತಾರೆ. ಯಾರೇ ಫೋನ್ ಮಾಡಿದರೂ ಕೂಡ, ಸ್ವತಃ  ಅವರೇ ರಿಸೀವ್ ಮಾಡಿ ಮಾತನಾಡುತ್ತಾರೆ. ಪ್ರಯಾಣದ ಸಮಯ ಡಿವಿಡಿ ನೋಡಲು, ಅಧ್ಯಯನಕ್ಕೆ ಮೀಸಲು.

‘ಹುಟ್ಟಿ-ಬೆಳೆದಿದ್ದೆಲ್ಲ  ಬೆಂಗಳೂರಿನಲ್ಲಾದರೂ, ೪ನೇ ತರಗತಿವರೆಗೆ  ಓದಿದ್ದು   ತಮಿಳುನಾಡಿನ ‘ಕುಂಬಕೋಣಂ’ನಲ್ಲಿರುವ ಅಜ್ಜಿಮನೆಯಲ್ಲಿ. ತಮಿಳಿನಲ್ಲಿ  ರಮೇಶ್ ಅಂತಾ ಇನ್ನೊಬ್ಬ  ನಟರಿದ್ದರು. ಹಾಗಾಗಿ ನನ್ನ  ಹೆಸರಿನ ಹಿಂದೆ ‘ಅರವಿಂದ್’ ಸೇರ್ಪಡೆ ಆಯಿತು. ಅದು ಹೇಗೆ, ಯಾರಿಂದ ಸೇರ್ಪಡೆಯಾಯಿತು ಎಂದು ನನಗೂ ಸರಿಯಾಗಿ ಗೊತ್ತಿಲ್ಲ.  ಅಲ್ಲಿ ಅರವಿಂದ್ ಎಂದು ಜನಪ್ರಿಯನಾದೆ. ಕನ್ನಡದಲ್ಲಿ  ರಮೇಶ್ ಅರವಿಂದ್ ಎಂದೇ ಪರಿಚಿತನಾದೆ’ ಎಂದು ಮಾತು ರಮೇಶ್ ಮುಗಿಸಿದರು.

ಜನ್ಮ ಕುಂಡಲಿ
ಮೂಲ ಹೆಸರು-ಜಿ.ರಮೇಶ್
ಜನ್ಮ ದಿನಾಂಕ-ಸೆ.೧೦, ೧೯೬೪
ಮೂಲ ಸ್ಥಳ-ಬೆಂಗಳೂರು
ವಿದ್ಯಾಭ್ಯಾಸ-ಮೆಕ್ಯಾನಿಕಲ್ ಎಂಜಿನಿಯರಿಂಗ್
ಮೊದಲ ಅಭಿನಯದ ಚಿತ್ರ-ಮೌನಗೀತೆ(ಜನಪ್ರಿಯವಾಗಿದ್ದು  ‘ಸುಂದರ ಸ್ವಪ್ನ’ ಚಿತ್ರದ ಮೂಲಕ)
ಇಷ್ಟದ  ಸಿನಿಮಾ-ಲಗಾನ್, ಭೂತಯ್ಯನ ಮಕ್ಕಳು
ಇಷ್ಟದ ನಟ/ನಟಿ-ಕಮಲ್‌ಹಾಸನ್


Read Full Post »