Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಚಿಂತನ ಚಾವಡಿ’ Category

kannada-news-channel

“ಇವನು ಪತ್ರಕರ್ತ. ಇವನ ಎದ್ರು ಹುಷಾರಾಗಿ ಮಾತಾಡಿ. ನಿಮ್ಮ ಬಗ್ಗೆ ಬರೆದು ಬಿಡ್ತಾನೆ” ಹಾಗಂತ ಯಾರಾದ್ರು ಗೆಳೆಯರು ನನ್ನನ್ನು ಇಂಟ್ರಡ್ಯೂಸ್‌ ಮಾಡುವಾಗ, “ನಿಮಗೇನು ಬಿಡಿ ಪತ್ರಕರ್ತರು. ಟ್ರಾಫಿಕ್‌ ಪೋಲಿಸ್ರು ಹಿಡಿಯಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಲಂಚ ಕೇಳಲ್ಲ. ಎಲ್ಲ ಕಡೆ ನಿಮಗೆ ಫ್ರೀ” ಎಂದು ಅಣಕಿಸುವಾಗ, ಅದೆಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಸುದ್ದಿಯಿಂದಾಗಿ, ಘಟನೆಯಿಂದಾಗಿ ಮಾಧ್ಯಮಗಳು, ಪತ್ರಕರ್ತರು ಹಿಗ್ಗಾಮುಗ್ಗ ಉಗಿಸಿಕೊಳ್ಳುವಾಗ ಒಂದು ಬಗೆಯಲ್ಲಿ ಇರಿಟೇಟ್‌ ಆಗುತ್ತಿರುತ್ತದೆ.

ಪ್ರೆಸ್ಟಿಟ್ಯೂಟ್‌ ಎಂದು ಹ್ಯಾಷ್‌ಟ್ಯಾಗ್‌ ಹಾಕಿ ಉಗಿಸಿಕೊಳ್ಳುವುದು ಮಾಧ್ಯಮಗಳಿಗೆ ಮಾಮೂಲಾಗಿದೆ. ಸಾಮಾನ್ಯನಿಗೆ ಪತ್ರಕರ್ತನ ಇತಿಮಿತಿಗಳು ಗೊತ್ತಿಲ್ಲದೆ ಇರುವುದು ಅಥವಾ ಪತ್ರಿಕೋದ್ಯಮದ ಕುರಿತಾಗಿ ಇರುವ ಭ್ರಮೆಗಳು ಇದಕ್ಕೆಲ್ಲ ಕಾರಣ. ಓರ್ವ ರಾಧಾ ಹಿರೇಗೌಡರನ್ನೋ, ಅರುಣ್‌ ಬಡಿಗೇರ್‌ ಅವರನ್ನೋ ಅಥವಾ ಇನ್ನು ಯಾವುದೇ ನಿರೂಪಕ/ನಿರೂಪಕಿ, ಪತ್ರಕರ್ತರನ್ನು ಏಕವಚನದಲ್ಲಿ, ವೈಯಕ್ತಿಕವಾಗಿ ಬೈಯ್ಯವ ಮೊದಲು ನೀವು ತಿಳಿದುಕೊಳ್ಳಬೇಕಾದ ಅಂಶಗಳು ಸಾಕಷ್ಟಿವೆ.

ಈ ಹಿಂದೆ “ಉಗಳಲು ಆಗದೆ, ನುಂಗಲು ಆಗದೆ” ಎಂದು ಒಂದು ಲೇಖನ ಬರೆದಿದ್ದೆ. ಅದರ ದ್ವಿತೀಯಾರ್ಧವಿದು ಅಂದುಕೊಳ್ಳಿ. ಅಲ್ಲಿ ಹೇಳಿದ ಅಂಶಗಳನ್ನು ಮತ್ತೆ ರಿಪೀಟ್‌ ಮಾಡುವುದಿಲ್ಲ. ಸುದ್ದಿ ವಾಹಿನಿಗಳಿಗೆ ಹಿಗ್ಗಮುಗ್ಗ ಬೈಯ್ಯುತ್ತೀವಿ. ಖಂಡಿತ ಅತಿರೇಕದ ಕೆಲವಕ್ಕೆ ನಾನು ಸಾಕಷ್ಟು ಬೈದಿರುವೆ. ಪತ್ರಿಕೆ, ವಾಹಿನಿಗಳು ಒಂದು ಉದ್ಯಮ. ಒಂದು ಸುದ್ದಿ ವಾಹಿನಿ ವರ್ಷಪೂರ್ತಿ ಏನು ತೊಡಕಿಲ್ಲದೆ ಆರಾಮವಾಗಿ ರನ್‌ ಆಗಲು ಕನಿಷ್ಟ ೨೨-೨೫ ಕೋಟಿ ರೂ. ಅಗತ್ಯವಿದೆ. ಇಷ್ಟು ಬಂಡವಾಳ ಹಾಕಿ ವಾಹಿನಿ ನಡೆಸುವ ಆಡಳಿತ ಮಂಡಳಿ ಇದನ್ನು ವಾಪಾಸ್‌ ತೆಗೆಯುವ ವಿಧಾನವನ್ನು ಹುಡುಕಿಕೊಳ್ಳಲೇ ಬೇಕು.

ಖಂಡಿತ ಒಂದು ವಾಹಿನಿಯನ್ನೋ, ಪೇಪರನ್ನೋ ನಂಬರ್‌.೧ ಮಾಡುವುದು ಇವತ್ತಿಗೆ ಸವಾಲೇ ಅಲ್ಲ. ಅದನ್ನು ಕಾಪಾಡಿಕೊಂಡು ಹೋಗುವುದು ಹಾಗೂ ಅದಕ್ಕಿಂತ ಮುಖ್ಯವಾಗಿ ಹಾಕಿದ ಬಂಡವಾಳಕ್ಕೆ ಉತ್ತರವಾಗಿ ಆದಾಯ ತರುವುದು ಅತಿ ದೊಡ್ಡ ಸವಾಲು. ನಾನು ೨೦೦೭ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಕನ್ನಡ ಪತ್ರಿಕೋದ್ಯಮ ಜಗತ್ತಿನ ಸ್ವರೂಪ ಸಂಪೂರ್ಣ ಭಿನ್ನವಾಗಿತ್ತು. ಮಾಮೂಲಿ ಪತ್ರಕರ್ತನಿಗೆ ೭ ಸಾವಿರ ರೂ ಸಂಬಳ ಸಿಕ್ಕರೆ ಹಬ್ಬ. ಹಿರಿಯ /ಮುಖ್ಯ ಉಪ ಸಂಪಾದಕರಿಗೆ ೨೫ ಸಾವಿರ ರೂ. ಸಂಬಳವಂತೆ ಅಂದ್ರೆ ನಾವೆಲ್ಲ ಬೆರಗಿನಿಂದ ನೋಡ್ತಾ ಇದ್ವಿ. ವರ್ಷಕ್ಕೊಮ್ಮೆ ಯಾವುದೋ ಸುದ್ದಿಮನೆಯ ಪತ್ರಕರ್ತ ಇನ್ನೊಂದು ಸುದ್ದಿ ಮನೆಗೆ ಜಂಪ್‌ ಆದ ಅಂದ್ರೆ ಅದು ದೊಡ್ಡ ಸುದ್ದಿ.

೨೦೧೦-೧೧ರ ಹೊತ್ತಿಗೆ ಈ ಚಿತ್ರಣವೇ ಬದಲಾಗಿ ಹೋಯ್ತು. ಕನ್ನಡದಲ್ಲಿ ಸಾಕಷ್ಟು ಸುದ್ದಿ ವಾಹಿನಿಗಳು ಬಂದವು. ಹೊಸ ಪತ್ರಿಕೆಗಳು ಹುಟ್ಟಿದವು. ಪೈಪೋಟಿ ಎಂಬುದು ತಾರರಕ್ಕೇರಿತು. ಒಳ್ಳೆ ಪತ್ರಕರ್ತನ್ನ ಉಳಿಸಿಕೊಳ್ಳುವುದು ಎಂಬುದೆ ಆಡಳಿತ ಮಂಡಳಿಗೆ ಸವಾಲಾಯ್ತು. ಹಲವು ಸುದ್ದಿ ಮನೆಗಳು ಒಡೆದು, ಚೂರಾಗಿ ಬೇರೆ ಬೇರೆ ಕಡೆ ವಲಸೆಹೋಯ್ತು. ೩೦-೪೦ ಸಾವಿರ ರೂ. ಅಂದ್ರು ಸಂಬಳವೇ ಅಲ್ಲ ಎಂಬ ಸ್ಥಿತಿ ತಲುಪಿ, ಪತ್ರಿಕೋದ್ಯಮ ಕೂಡ ದುಡಿಯುವವನ ಪಾಲಿಗೆ ಇನ್ನೊಂದು ಸಾಫ್ಟ್‌ವೇರ್‌ ಜಗತ್ತಾಗಿ ಪರಿವರ್ತನೆಗೊಂಡ ಹಂತಕ್ಕೆ ಬಂದು ನಿಂತಿದೆ. ಉದ್ಯೋಗ ಭದ್ರತೆ ಎಂಬುದು ಇವತ್ತು ಪತ್ರಿಕೋದ್ಯಮ ಜಗತ್ತು ಎದುರಿಸುತ್ತಿರುವ ಬಹುದೊಡ್ಡ ಸವಾಲು.

ದೊಡ್ಡ ಹೂಡಿಕೆಯ ಹಿಂದೆ ಬಂದಿದ್ದು ಪೈಪೋಟಿ. ವಿಷಯದಲ್ಲಿ ಅಲ್ಲ, ಗುಣಮಟ್ಟದಲ್ಲಿ ಅಲ್ಲ, ಬಿತ್ತರಿಸುವ ಸುದ್ದಿಯಲ್ಲೂ ಅಲ್ಲ. ಬದಲಾಗಿ ಆದಾಯ ಗಳಿಕೆಯಲ್ಲಿ. ಪ್ರತಿ ಸುದ್ದಿಮನೆಯೂ ಲಕ್ಸ್‌, ಲೈಫ್‌ ಬಾಯ್‌ ಸೋಪಿನಂತಾಯ್ತು. ಹಾರ್ಸ್‌ ಕಾಡೋಂ ಕಂಪನಿಯಾಯ್ತು. ನಮ್ಮ ಪ್ರಾಡಕ್ಟ್‌ ಮಾರಾಟ ಮಾಡಬೇಕು, ಇಲ್ಲ, ನಮ್ಮದು ಮಾರಾಟವಾಗಬೇಕು ಎಂಬ ಜಿದ್ದಿಗೆ ಆಡಳಿತ ಮಂಡಳಿಗಳು ಬಿದ್ದವು. ೨೨ ಕೋಟಿ ಹಾಕಿದವ. ಕನಿಷ್ಟ ೧೫ ಕೋಟಿಯನ್ನಾದರು ವಾಪಾಸ್‌ ತೆಗೆಯುವ ಆಲೋಚನೆಗೆ ಬಿದ್ದ. ಅದಕ್ಕಿರುವ ಮಾರ್ಗಗಳನ್ನು ಹುಡುಕಿ ಹೊರಟ. ಒಂದು ಕಾಂಗ್ರೆಸ್‌ ಪ್ರಣಾಳಿಕೆ, ಮತ್ತೊಂದು ಬಿಜೆಪಿ ಪ್ರಣಾಳಿಕೆ. ಯಾರು ದುಡ್ಡು ಕೊಡ್ತಾರೊ ಅವರ ಸರಹದ್ದಿನ ಮಾಧ್ಯಮಗಳು. ಸೋಪು ಮಾರುವವನಿಗೆ ಯಾರಾದ್ರೆ ಏನು? ಹಾಕಿದ ಬಂಡವಾಳ ಬಂದ್ರಾಯ್ತು!

ಪತ್ರಿಕೋದ್ಯಮದ ಮೌಲ್ಯ ಕಡಿಮೆಯಾಯ್ತು. ‘ನಿಮ್ಮವರು ಟ್ರಾಫಿಕ್‌ ಪೋಲಿಸ್ರಿಂದ ವಸೂಲಿ ಮಾಡ್ತಾರೆ. ನಾನ್ಯಾಕೆ ಸುಮ್ಮನೆ ಬಿಡಲಿ ನಿನ್ನ. ಕೊಡು ಮಗನೆ ೨೦೦ ರೂ. ಲಂಚ. ನೀನು ಪತ್ರಕರ್ತನಾದ್ರೆ ನನಗೇನು?” ಎಂದು ಯಾವ ಮೂಲಾಜು ಇಲ್ಲದೆ ಟ್ರಾಫಿಕ್‌ ಪೋಲಿಸ್‌ ಲಂಚ ತೆಗೆದುಕೊಳ್ಳಲು ಶುರುಮಾಡಿದ. ಮೇಲಿನವ ಹೇಳಿದ ಅಂದ್ರೆ ವರದಿಗೆ ಹೋದವನಿಗೆ ಕರುಣೆಯಿಲ್ಲದೆ ಹೊಡೆಯಲು ಅಡಿಯಿಟ್ಟ. ಪತ್ರಕರ್ತರ ಬಳಿ ಸರ್ಕಾರಿ ಅಧಿಕಾರಿಗಳು ಲಂಚ ಕೇಳುವುದಿಲ್ಲ. ಪತ್ರಕರ್ತರಿಗೆ ಎಲ್ಲ ಕೆಲಸವೂ ಉಚಿತವಾಗಿ ಆಗುತ್ತದೆ ಎಂಬುದು ನಿಮ್ಮ ಮೊದಲನೆ ಭ್ರಮೆ.

ನೀವ್ಯಾಕೆ ಆ ಸುದ್ದಿ ಅಷ್ಟು ಹಾಕ್ತೀರ? ಇದನ್ನು ಇಷ್ಟು ಹಾಕ್ತೀರಾ? ಸುದ್ದಿ ನೋಡುವಾಗ್ಲೆ ಗೊತ್ತಾಗುತ್ತೆ ಯಾರು ಈ ಸುದ್ದಿ ಹಾಕ್ಲಿಕ್ಕೆ ದುಡ್ಡು ಕೊಟ್ಟಿದಾರೆ? ಯಾರು ಆ ಸ್ಲಾಟು ಖರೀದಿ ಮಾಡಿದಾರೆ ಅಂತ! ನೀವು ಅದಕ್ಕಿಂತ ಜಾಸ್ತಿ ಕೊಟ್ಟರೆ ಖಂಡಿತ ನಿಮ್ಮ ಸುದ್ದಿಯನ್ನು ಅದರ ಮುಂದಿನ ಭಾಗದಲ್ಲೇ ಹಾಕುತ್ತಾರೆ! ಕಾಂಡೋಮು ಮಾರುವವನಿಗೆ ಗಿರಾಕಿ ಯಾರಾದ್ರೆ ಏನು ಅಲ್ವಾ?

ಇಲ್ಲಿ ಬಡವಾಗಿದ್ದು ಸಾಮಾನ್ಯ ಪತ್ರಕರ್ತ. “ನಮಗೆ ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತು. ಕೆಲಸ ಮಾಡುವ ಹಾಗಿದ್ರೆ ಮಾಡಿ. ಇಲ್ಲ ಅಂದ್ರೆ ರೈಟ್‌ ಹೇಳಿ. ರಿಕ್ಷಾ, ಲಾರಿ ಡ್ರೈವರ್‌ ಕೂರಿಸಿಕೊಂಡು ಪತ್ರಿಕೋದ್ಯಮ ಮಾಡಲು ಗೊತ್ತು’’ ಎನ್ನುತ್ತಾನೆ ಕಾಸು ಹಾಕಿದವ. ಆಗ ಸಂಬಳಕ್ಕೆ ದುಡಿಯುವವನು ಯಾರೇ ಆದರು ಮುಚ್ಚಿಕೊಂಡು ಸುಮ್ಮನಿರಬೇಕು. ಇಲ್ಲವಾದರೆ ರಾಜಿನಾಮೆ ಬಿಸಾಡಿ ಮನೆ ಕಡೆ ಮುಖ ಮಾಡಬೇಕು. ಇಲ್ಲಿ ಆಕೆ ರಾಧಾ ಹಿರೇಗೌಡರ್‌, ಈಕೆ ಇನ್ನೊಬ್ಬಳು. ಅವನು ಚಂದನ್‌ ಶರ್ಮಾ ಎಂಬುದು ಮುಖ್ಯವಾಗುವುದಿಲ್ಲ. ಬಿಟ್ಟ ಅರ್ಧಗಂಟೆಗೆ ಹೊಸ ಸಂಪಾದಕರನ್ನು ತಂದು ಕೂರಿಸುವ ಕಾಲವಿದು. ಇಲ್ಲಿ ಆಡಳಿತ ಮಂಡಳಿಗೆ ಯಾರು ಅನಿವಾರ್ಯವಲ್ಲ.

ಪರದೆ ಮೇಲೆ ಬರುವವರು, ಅಂಕಣ ಬರೆಯುವವರು ಮಾತ್ರ ಜನರ ಪಾಲಿಗೆ ಪತ್ರಕರ್ತರು. ಆದರೆ ಅವರ ಹೊರತಾಗಿ ದಿನನಿತ್ಯ ಒಂದು ಪತ್ರಿಕೆಯಲ್ಲಿ ೬೦-೧೦೦ ಜನ ಕೆಲಸ ಮಾಡುತ್ತಾರೆ. ಒಂದು ಸುದ್ದಿ ವಾಹಿನಿಯಲ್ಲಿ ೨೦೦-೩೦೦ಜನ ಕೆಲಸ ಮಾಡುತ್ತಾರೆ. ಅವರೆಲ್ಲರು ಪತ್ರಕರ್ತರೆ. ನೀವು ನ್ಯೂಸೂಳೆಗಳು ಎಂದು ಬೈದಿದ್ದು ಅವರಿಗು ಅನ್ವಯವಾಗುತ್ತದೆ ಮತ್ತು ಅವರಿಗೆ ತಾವು ಮಾಡುತ್ತಿರುವ ಕೆಲಸದ ಮೇಲೆ ಕೀಳರಿಮೆ ಹಾಗೂ ಬೇಸರ ಉಂಟು ಮಾಡುತ್ತದೆ.

ನಿನ್ನೆ ಗಲಭೆಯಲ್ಲಿ ವಾಹಿನಿಯ ವರದಿಗಾರರಿಗೆ ಹೊಡೆದರಂತೆ. ಈ ಹಿಂದೆಯೂ ಹಲವರು ಹೊಡೆತ ತಿಂದಿದ್ದಾರೆ. ಸುಮಾರಷ್ಟು ಜನ ‘ಸರಿಯಾಯ್ತು. ಹೊಡೆತ ಬೀಳಬೇಕಿತ್ತು’ ಎನ್ನುತ್ತಾರೆ. ‘ಮಾಧ್ಯಮದವರಿಗೆ ಬುದ್ಧಿ ಬರಬೇಕು ಅಂದ್ರೆ ಹೊಡೆತ ಬೀಳಬೇಕು’ ಅಂದವರಿದ್ದಾರೆ.  ಒನ್ಸ್‌ ಅಗೈನ್‌, ಅಲ್ಲಿ ವರದಿಗೆ ಹೋದವನು ತಿಂಗಳ ಸಂಬಳಕ್ಕೆ ದುಡಿಯುವ ಪತ್ರಕರ್ತ ಹೊರತು ವಾಹಿನಿಯನ್ನು ನಿಯಂತ್ರಿಸುವವನು ಅಲ್ಲ. ಅವನು ವರದಿ ಮಾಡಲಾರೆ ಎಂದರೆ, ಅಲ್ಲಿ ಚಿತ್ರಗಳನ್ನು ಶೂಟ್‌ ಮಾಡಿ ಕ್ಯಾಸೆಟ್‌ ಕೊಡದಿದ್ದರೆ, ಆ ಸುದ್ದಿಯನ್ನು ಮಿಸ್‌ ಮಾಡಿದರೆ, ಖಂಡಿತ ಆ ಕ್ಷಣದಲ್ಲಿ ಅವನಿಗೆ ರಿಪ್ಲೇಸ್‌ಮೆಂಟ್‌ನ್ನು ವಾಹಿನಿ ತರುತ್ತದೆ. ಇಷ್ಟಾಗಿಯೂ ಕರ್ತವ್ಯ ನಿಭಾಯಿಸಿ, ಹೊಡೆತ ತಿಂದು ಕೊನೆಗೆ ಇತರರಿಂದ ಛೀ, ಥೂ ಅನ್ನಿಸಿಕೊಳ್ಳುವ ಭಾಗ್ಯ ಬಹುಶಃ ಪತ್ರಕರ್ತರಿಗೆ ಮಾತ್ರ!

ಸ್ಪರ್ಧೆ ಹೆಚ್ಚಾಗಿದೆ. ಇದೊಂದು ಉದ್ಯಮವಾಗಿದೆ. ಇಲ್ಲಿ ನಾವೆಲ್ಲ ದಿನಗೂಲಿ ನೌಕರರು. ಹಾಗಂತ ಎಲ್ಲ ಪತ್ರಕರ್ತರ ಬಾಳು ಹಸನಾಗಿದೆಯೆ ಎಂದರೆ, ಖಂಡಿತ ಕನ್ನಡದಲ್ಲಿ ಅಂಥ ಪರಿಸ್ಥಿತಿ ಇಲ್ಲ. ಇಷ್ಟೆಲ್ಲ ದುಡಿದು, ಹೊಡೆತ ತಿಂದು, ತರಕಾರಿ ಮಾರುವವನಿಗಿಂತ ಕಡಿಮೆ ಸಂಬಳ ಪಡೆಯುವವರು ಇದ್ದಾರೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋದರೆ ೩-೪ತಿಂಗಳಿಗೊಮ್ಮೆ ಸಂಬಳ ಕೊಡುವ ಸಂಸ್ಥೆಗಳಿವೆ. ಎಷ್ಟೆ ಕಂಪನಿಗಳು ಹುಟ್ಟಿಕೊಂಡರು ಪತ್ರಿಕೋದ್ಯಮ ಎಂಬ ವ್ಯಾಪ್ತಿಯೆ ಚಿಕ್ಕದು. ಇಲ್ಲಿ ಅವಕಾಶ ಎಂಬುದು ತೀರ ಕಡಿಮೆ. ಹೀಗಾಗಿ ಇದ್ದ ಜಾಗದಲ್ಲಿ ಎಲ್ಲವನ್ನು ಸಹಿಸಿಕೊಂಡು ಇರಬೇಕು. ಇಲ್ಲವಾದಲ್ಲಿ ಈ ವೃತ್ತಿ ಬಿಟ್ಟು ಬೇರೆಡೆಗೆ ಮುಖ ಮಾಡಬೇಕು. ಈಗಾಗ್ಲೆ ಸಾಕಷ್ಟು ಜನ ಆ ಕೆಲಸ ಮಾಡುತ್ತಿದ್ದಾರೆ. ಇನ್ನು ಒಂದಷ್ಟು ಜನ ನಂದಿನಿ ಬೂತ್‌, ಕನ್ನಡಕ, ದಿನಸಿ ಅಂಗಡಿ ಇಟ್ಟುಕೊಂಡು ಒಂದು ಶಿಫ್ಟ್‌ನಲ್ಲಿ ಪತ್ರಿಕೋದ್ಯಮ ಕೆಲಸ ಮುಗಿಸಿ ನಂತ್ರ ಅಲ್ಲಿಗೆ ಹೋಗಿ ದುಡಿಯುತ್ತಾರೆ. ವಿಡಿಯೊ ಎಡಿಟರ್‌ಗಳಂತು ಒಂದು ಶಿಫ್ಟ್‌ ಮುಗಿಯುತ್ತಿದ್ದಂತೆ ಇನ್ನೆಲ್ಲೂ ಎಡಿಟಿಂಗ್‌ ಕೆಲಸ  ಒಪ್ಪಿಕೊಂಡು ತಮ್ಮ ಸಂಪಾದನೆ ಹಾದಿ ನೋಡಿಕೊಳ್ಳುತ್ತಾರೆ. ಅನಿವಾರ್ಯವಾಗಿ ಇರುವವರು ಅಥವಾ ಇಲ್ಲಿಯೆ ಇದ್ದು ಏನೋ ಮಾಡಬೇಕೆಂದು ತೀರ ಹಂಬಲವುಳ್ಳವರು ಮಾತ್ರ ಎಲ್ಲವನ್ನು ಸಹಿಸಿಕೊಂಡು ಇದ್ದಾರೆ.

ಖಂಡಿತ ಇದಕ್ಕೆ ತದ್ವಿರುದ್ಧವಾದ ಪತ್ರಕರ್ತರು ಇಲ್ಲ ಎಂದೆಲ್ಲ. ಹಫ್ತಾ ವಸೂಲಿ ಮಾಡುವವರು, ಪತ್ರಕರ್ತ ಎಂಬ ಕಾರ್ಡ್‌ ಒಂದಿದ್ದರೆ ಸಾಕು ಎನ್ನುವವರು ಇದ್ದಾರೆ. ಊರಿದ್ದಲ್ಲಿ ಹೊಲಸು ಇರುತ್ತೆ ಎಂಬಂತೆ, ಯಾವುದೇ ವೃತ್ತಿಗೆ ಹೋದರು ಅದು ಸಹಜ. ಅದ್ರಿಂದ ಪತ್ರಿಕೋದ್ಯಮ ಕೂಡ ಹೊರತಲ್ಲ. ಹಾಗಂತ ನೀವು ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗುವುದು, ಎಲ್ಲರನ್ನೂ ಸೂಳೆಗಳು ಎಂದು ಸಂಭೋಧಿಸುವುದು, ಮಾರ್ಕೆಟಿನಲ್ಲೋ ಮೆಜೆಸ್ಟಿಕ್ಕಿನಲ್ಲೋ ಸೂಳೆಗಳ ಪಕ್ಕದಲ್ಲಿ ನಿಂತ ಹೆಂಗಸರೆನ್ನಲ್ಲ ಸೂಳೆಗಳೆಂದು ಸಂಬೋಧಿದಂತಾಗುತ್ತದೆ ಅಷ್ಟೆ!!!

 

 

 

 

Read Full Post »

ಇವತ್ತು ಸಂಪರ್ಕ ಕೊಂಡಿಗಳು ದೊಡ್ಡದಾಗಿವೆ, ಎಲ್ಲೆಲ್ಲಿ ಏನೇನು ನಡೀತಿದೆ ಅನ್ನೋದು ಮಾಧ್ಯಮದಿಂದ ಹೊರತಾಗಿ ಅನೇಕ ಬಗೆಗಳಿಂದ ಗೊತ್ತಾಗುತ್ತದೆ. ಜೊತೆಗೆ ಎಲ್ಲಿಲ್ಲದ ಸ್ಪರ್ಧೆ. ಹೀಗಾಗಿ ಕಳೆದ ೫ ವರ್ಷಗಳಲ್ಲಿ ಕನ್ನಡ ಮಾಧ್ಯಮ ಜಗತ್ತು ತುಂಬಾ ಬದಲಾಗಿದೆ. ಮೊನ್ನೆ ವಿಶ್ವೇಶ್ವರ ಭಟ್ಟರು ಬದಲಾದ ಪತ್ರಿಕೋದ್ಯಮವನ್ನು ಸಂಭ್ರಮಿಸುವ ಬಗ್ಗೆ ಒಂದು ಲೇಖನ ಬರೆದಿದ್ದರು. ಅದರ ಬೆನ್ನಲ್ಲೇ ಗೆಳೆಯ ವಿಕಾಸ್‌ ನೇಗಿಲೋಣಿ ಹಳ್ಳಿಗಳು ವ್ಯಾಪಾರಿ ಸರಕಾಗುತ್ತಿರುವ ಕುರಿತು ಒಂದು ಚೆಂದದ ಬರಹ ಬರೆದಿದ್ದರು. ಅಲ್ಲಿ ಹೇಳದೆ ಅಳಿದುಳಿದಿರುವುದನ್ನು ಅಳುಕುನಿಂದಲೇ ಹೇಳುವ ಪ್ರಯತ್ನ.

‘ಸಾರ್‌ ಸ್ವಲ್ಪ ನೋಡಿ ರಿವ್ಯೂ ಬರೆಯಿರಿ. ಪ್ರೊಡ್ಯೂಸರ್‌ ನಮ್ಮ ರೆಗ್ಯಲುರ್‌ ಕಸ್ಟಮರ್‌. ಈ ಸಲವಂತೂ ಫ್ರಂಟ್‌ ಪೇಜ್‌ ಜಾಹೀರಾತು ಕೊಟ್ಟಿದ್ದಾರೆ’ ಸಿನಿಮಾ ಚಿತ್ರಮಂದಿರದೊಳಗೆ ಕಾಲಿಡುವ ಮುನ್ನವೆ ಜಾಹೀರಾತು ವಿಭಾಗದ ಹುಡುಗ ಫೋನ್‌ ಮಾಡಿ ಹೇಳಿದ್ದ. ಗಟ್ಟಿಯಾಗಿ ಕುಳಿತರೆ ಖಂಡಿತ ೬ ನಿಮಿಷ ಸಿನಿಮಾ ನೋಡಲು ಸಾಧ್ಯವಿಲ್ಲ. ಹಾಗಂತ ಅದನ್ನು ವಿಮರ್ಶೆಯಲ್ಲಿ ಬರೆಯಲು ಸಾಧ್ಯವೇ ಇಲ್ಲ. ಬದುಕಿನ ಅನಿವಾರ್ಯತೆ. ಹೀಗಾಗಿ ಆ ಸಿನಿಮಾ ಅದ್ಭುತ ಎಂದು ಬರೆಯಲೇ ಬೇಕು. ನಾನು ಸಿನಿಮಾ ಕೆಟ್ಟದಾಗಿದೆ ಎಂದು ಬರೆದ್ರೆ ಅದು ಪ್ರಕಟವೇ ಆಗುವುದಿಲ್ಲ. ಬೈ ಚಾನ್ಸ್‌ ಪ್ರಕಟವಾಯ್ತು ಎಂದ್ರೆ ಮರುದಿನ ನಮ್ಮ ಕೆಲಸ ಹೋಗಿರುತ್ತದೆ! ಯಾಕಂದ್ರೆ ಕಂಪನಿಗೆ ಲಾಸ್‌ ಆಗಿದ್ದು ಬರೋಬ್ಬರಿ ೨ ಲಕ್ಷ ರೂ. ಸಿಇಒನಿಂದ ಹಿಡಿದು ಮಾಲೀಕರವರೆಗೆ ಎಲ್ಲರೂ ಕರೆದು ೨ ಲಕ್ಷ ರೂಪಾಯಿ ನಷ್ಟದ ಬಗ್ಗೆಯೆ ಮಾತಾಡುತ್ತಾರೆ ಹೊರತು ಕೆಟ್ಟ ಸಿನಿಮಾ, ಓದುಗರಿಗೆ ಮೋಸ ಮಾಡುತ್ತಿದ್ದೇವೆ ಎಂದು ಯಾರೂ ಆಲೋಚಿಸುವುದೇ ಇಲ್ಲ! ಇದು ಇವತ್ತಿನ ವ್ಯಾಪಾರಿ ಪತ್ರಿಕೋದ್ಯಮ ಸೃಷ್ಟಿಸಿರುವ ದುರಂತ ಮತ್ತು ಸೌಭಾಗ್ಯ.

ಇವತ್ತು ಒಂದು ಪತ್ರಿಕೆಗೆ ನಂಬರ್‌ ಒನ್‌ ಆಗಲು ಸಂಪಾದಕರು ಬೇಕೆ ಬೇಕು ಎಂದೇನಿಲ್ಲ ಅಂತ ನಾವು ಗೆಳೆಯರು ಹೀಗೆ ಮಾತಾಡುತ್ತಿದ್ದೆವು. ಕಾರು ಓಡಿಸುತ್ತಿದ್ದ ಹಿರಿಯ ಪತ್ರಕರ್ತರಾದ ಅರುಣ್‌ ಒಂದೇ ಮಾತು ಹೇಳಿದ್ರು. ‘ಒಂದು ಪತ್ರಿಕೆ ಪ್ರಿಂಟ್‌ ಆಗಿ ಓದುಗನ ಕೈ ಸೇರಲು ಎಷ್ಟು ರೂಪಾಯಿ ವೆಚ್ಚ ತಗುಲುತ್ತೆ ಗೊತ್ತಾ? ದಿ ಟಿಒಐ ಸ್ಟೋರಿ ಅಂತೊಂದು ಪುಸ್ತಕವಿದೆ. ಅದನ್ನು ಓದಿ’ ಅರುಣ್‌ ಮಾತು ಮುಗಿಸಿದ ನಂತ್ರ ನಾವು ೬ ರೂಪಾಯಿ ಇರಬಹುದು ಸಾರ್‌ ಅಂದ್ವಿ. ಇಲ್ಲ ೮-೯ರೂಪಾಯಿ ಖರ್ಚಾಗುತ್ತದೆ ಎಂದರು. ನಾನು ಒಂದು ಪತ್ರಿಕೆಗೆ ಜಾಹೀರಾತು ಬಲವರ್ಧನೆಗಾಗಿಯೇ ಕೆಲಸ ಮಾಡುತ್ತಿದ್ದೆ. ಆಗ ಗೊತ್ತಾಯ್ತು ಆ ಪತ್ರಿಕೆಯ ಒಂದು ಪ್ರತಿ ಪ್ರಿಂಟ್‌ ಆಗಲು ೧೧ರೂ. ವೆಚ್ಚವಾಗುತ್ತಿದೆ ಎಂದು!

ಓದುಗರಾದ ನಾವು ೩-೫ ರೂ.ಕೊಟ್ಟು ಪತ್ರಿಕೆ ಖರೀದಿಸುತ್ತೇವೆ. ಅಲ್ಲಿ ಎಲ್ಲ ಕಳೆದು ಮಾಲೀಕನಿಗೆ ಸಿಗುವುದು ೧.೬೦-೨ ರೂ. ಈ ಮೊತ್ತ ಏಜೆಂಟ್‌ಗೆ ಕೊಡುವ ಕಮಿಷನ್‌ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಪತ್ರಿಕೆ ಪ್ರಸರಣ ಜಾಸ್ತಿ ಆಗಬೇಕು, ನೀವು ನಂಬರ್‌ ಒನ್‌ ಆಗಲೇಬೇಕು ಅಂತೆಲ್ಲ ಇರಾದೆಯಿದ್ದರೆ ೧.೬೦-೧.೭೦ರೂ. ಗೆ ನೀವು ಪತ್ರಿಕೆ ಕೈ ಬಿಡಬೇಕು. ಮಿಕ್ಕಿದ್ದನ್ನು ಏಜೆಂಟ್‌ಗೆ ಕೊಡಬೇಕು. ಇಲ್ಲವಾದಲ್ಲಿ ಮತ್ತೊಂದು ಪತ್ರಿಕೆಯವನು ಏಜೆಂಟ್‌ಗೆ ಹೆಚ್ಚು ಕಮಿಷನ್‌ ಕೊಡುತ್ತಾನೆ. ಆಗ ಈ ಪತ್ರಿಕೆ ಪ್ರಸರಣ ಕುಸಿಯುತ್ತದೆ. ಜಾಹೀರಾತು ಡೌನ್‌ ಆಗುತ್ತದೆ. ಇದು ಮಾಲೀಕರಿಗೆ ಪ್ರತಿನಿತ್ಯದ ಹೆಣಗಾಟ.

ನಿಮ್ಮಿಂದ ಕೈಗೆ ಸೇರುವ ಹಣ ೨ ರೂ. ಅಂತಿಟ್ಟುಕೊಂಡರು, ಒಂದು ಪ್ರತಿಯಿಂದ ಬರೋಬ್ಬರಿ ೯ ರೂ. ನಷ್ಟ. ಎಷ್ಟೆ ಅಚ್ಚುಕಟ್ಟಾಗಿ ನಿರ್ವಹಿಸಿದರು(ನಿಮ್ಮದೇ ಪ್ರಿಂಟ್‌, ಸಾರಿಗೆ ಇತ್ಯಾದಿ ನಿಭಾಯಿಸಿದ್ರು) ೭-೮ ರೂ. ಗಿಂತ ಕಡಿಮೆ ವೆಚ್ಚದಲ್ಲಿ ಪತ್ರಿಕೆ ಪ್ರಿಂಟ್‌ ಹಾಕಿ ಓದುಗನ ಮನೆ ಬಾಗಿಲಿಗೆ ತಲುಪಿಸಲು ಸಾಧ್ಯವಿಲ್ಲ. ಅಂದ್ರೆ ಒಂದು ಪತ್ರಿಕೆ ಮೇಲೆ ನಷ್ಟ ಬರೋಬ್ಬರಿ ೬ ರೂ. ಇವತ್ತು ಕರ್ನಾಟಕದ ನಂಬರ್‌ ಒನ್‌ ಪತ್ರಿಕೆ ಪ್ರಸರಣ ಸಂಖ್ಯೆ ೭ ಲಕ್ಷ. ಅದನ್ನು ೬ರಿಂದ ಗುಣಿಸಿ. ಅಂದ್ರೆ ಸುಮಾರು ೪೨ ಲಕ್ಷ ರೂ ಒಂದು ದಿನದ ನಷ್ಟ! ಇದನ್ನು ಭರಿಸಬೇಕು ಅಂದ್ರೆ ಜಾಹೀರಾತಿಗೆ ಮೊರೆ ಹೋಗುವುದು ಅನಿವಾರ್ಯ. ೧೨ ಪುಟದ ತುಂಬಾ ಜಾಹೀರಾತು ಹಾಕಿದ್ರು ನನ್ನ ಪ್ರಕಾರ ಈ ಹಣ ಮರಳಿ ಪಡೆಯವುದು ಕಷ್ಟ.

ಹೀಗಾಗಿ ಜಪಾನಿ ತೈಲ, ಕಾಂಡೋಮು, ನ್ಯೂಟ್ರಿಗೇನ್‌, ನಿಸರ್ಗೇನ್‌ ಇತ್ಯಾದಿ ಜಾಹೀರಾತುಗಳಿಗೆ ಪತ್ರಿಕೆಗಳು ಮೊರೆ ಹೋಗುವುದು. ಅವೆಲ್ಲ ವರ್ಷದ ಕಾಂಟ್ರ್ಯಾಕ್ಟ್‌! ಪುರವಣಿಯಲ್ಲಿ ತೀರಾ ೧೦-೧೫ ಸಾವಿರ ರೂ.ಗೆ ಆ ಜಾಹೀರಾತು ಪ್ರಕಟವಾಗುತ್ತದೆ, ಅದರರ್ಥ ಮಾಲೀಕರು ೧೦-೧೫ ಸಾವಿರ ರೂಪಾಯಿ ಮರು ಆದಾಯ ಗಳಿಕೆಗೂ ಪ್ರತಿ ಸಲ ಪರದಾಟ ನಡೆಸುತ್ತಾರೆ ಎಂಬುದು ವಾಸ್ತವ.

ಸಮೀರ್‌ ಜೈನ್‌ ಬಂದ ನಂತರ ಬದಲಾದ ಟೈಮ್ಸ್‌ ಆಫ್‌ ಇಂಡಿಯಾದ ಕಥೆಯನ್ನು ಟಿಒಐ ಸ್ಟೋರಿ ಹೇಳುತ್ತೆ. ಆದ್ರೆ ಕನ್ನಡ ಪತ್ರಿಕೋದ್ಯಮ ಜಗತ್ತು ವರ್ಗಾಂತರಗೊಂಡಿದ್ದು ತೀರಾ ೨೦೦೭ರ ನಂತರ. ಯಾವಾಗ ಸುದ್ದಿವಾಹಿನಿಗಳು ಕಾಲಿಟ್ಟವೋ ಆಗ ಕನ್ನಡ ಪತ್ರಿಕಾ ಜಗತ್ತಿನ ವರ್ಗಾವಣೆ ಶುರುವಾಯ್ತು. ನಾವೆಲ್ಲ( ೨೬-೨೯ ವರ್ಷ ಆಜುಬಾಜಿನವರು) ವೃತ್ತಿ ಆರಂಭಿಸಿದ್ದು ಮಾಸಿಕ ೩ ಸಾವಿರ ರೂ. ವೇತನಕ್ಕೆ. ೫೦ ಸಾವಿರ ರೂಪಾಯಿ ಮುಟ್ಟಲು ಬಹುಶಃ ನಿವೃತ್ತಿ ಹಂತ ತಲುಪಬೇಕು ಎಂದು ಭಾವಿಸಿದ್ದೆವು. ಆದ್ರೆ ೨೦೧೦ರ ನಂತರ ಸಾಕಷ್ಟು ಪತ್ರಕರ್ತರ ಬದುಕು ಬದಲಾಯ್ತು. ಸುದ್ದಿ ವಾಹಿನಿಗಳ ಪೈಪೋಟಿ ವೇತನದ ಮೇಲು ಪರಿಣಾಮ ಬೀರಿ, ಕ್ರಿಯಾಶೀಲ ಪತ್ರಕರ್ತರೆಲ್ಲ ವಲಸೆ ಆರಂಭಿಸಿದರು. ಪ್ರಿಂಟ್‌ ಮೀಡಿಯಾದಲ್ಲಿ ದುಡಿದವರು ಎಲೆಕ್ಟ್ರಾನಿಕ್‌ಗೆ ಜಿಗಿದರು. ಒಬ್ಬ ಸಾಫ್ಟ್‌ವೇರ್‌ ಎಂಜಿನಿಯರ್‌ ಪಡೆಯಬಹುದಾದ ಸಂಬಳ ಪಡೆದರು.

ಆದ್ರೆ ಈ ಪೈಪೋಟಿಯಲ್ಲಿ ಕೆಲ ನ್ಯೂಸ್‌ ಚಾನೆಲ್‌ಗಳು ಆರಂಭಶೂರವಾಗಿಬಿಟ್ಟವು. ಇವತ್ತಿಗೂ ಕನ್ನಡದಲ್ಲಿ ಆರ್ಥಿಕವಾಗಿ ಲಾಭದಲ್ಲಿರುವ, ಸದೃಢವಾಗಿರುವ ಸುದ್ದಿ ವಾಹಿನಿಗಳು ಎರಡು ಮಾತ್ರ! ಇದ್ರಿಂದಾಗಿ ಅಷ್ಟೇ ದೀಢಿರ್‌ ಅಂತ ಕೆಲವರು ಉದ್ಯೋಗವನ್ನು ಕಳೆದುಕೊಂಡು ದಿಕ್ಕು ಕಾಣದಾದರು. ಹಲವರು ಬೇಸತ್ತು ಪತ್ರಿಕೋದ್ಯಮವನ್ನೇ ಬಿಟ್ಟು ಹೋದರು.

ವ್ಯಾಪಾರ ಅನ್ನುವುದು ಎಲ್ಲವನ್ನು ಬದಲಿಸಿಬಿಡ್ತು. ಒಂದು ಪುಟದ ಒಂದು ಮಗ್ಗುಲಿನಲ್ಲಿ ಸಾವಯವ ಕೃಷಿಯ ಬಗ್ಗೆ ಲೇಖನ. ಇನ್ನೊಂದು ಮಗ್ಗುಲಿನಲ್ಲಿ ರಸಗೊಬ್ಬರದ ಫಲವತ್ತತೆ ವಿವರಣೆ! ಎರಡೂ ಕೂಡ ಪೇಯ್ಡ್‌ ಲೇಖನ. ಈ ವ್ಯಾಪಾರಿಕರಣ ಎಂಬುದು ಇವತ್ತು ಪತ್ರಿಕೋದ್ಯಮವನ್ನು ಇಲ್ಲಿಗೆ ತಂದು ನಿಲ್ಲಿಸಿದೆ! ಪ್ರಸರಣ ಹೆಚ್ಚಿಸುವುದು, ನಂಬರ್‌ ಒನ್‌ ಆಗುವುದು ಇವತ್ತು ಸವಾಲಲ್ಲ. ಆದ್ರೆ ಆದಾಯ ಮರುಗಳಿಕೆ ಸವಾಲು. ಹೀಗಾಗಿ ಕೆಲ ಪತ್ರಿಕೆಗಳು ತಟಸ್ಥವಾಗಿಬಿಟ್ಟವು. ಯುದ್ಧ ಅಲ್ಲಿಗೆ ಮುಗಿಯುವುದಿಲ್ಲ. ನಾವು ಹೆಚ್ಚು ಪ್ರಸರಣೆ ಇಟ್ಟುಕೊಂಡು ಕಡಿಮೆ ಬೆಲೆಗೆ ಜಾಹೀರಾತು ಕೊಡುತ್ತೇವೆ ಎಂದಾಗ ಸೋಪು, ಫೌಡರ್‌ ವ್ಯಾಪ್ಯಾರಿಯ(ಮಾಲು, ಸಿನಿಮಾ ಎಲ್ಲ) ಗಮನ ಅದರತ್ತ ವಾಲುವುದು ಸಹಜ! ಅದು ತಟಸ್ಥವಾಗಿ ಉಳಿದ ಪತ್ರಿಕೆಗಳಿಗೆ ಹೊಡೆತ ನೀಡ್ತು. ಆಗ ಜಿಡ್ಡುಗಟ್ಟಿದ ಪತ್ರಿಕೆಗಳು ಹೆಗಲು ಕೊಡವಿ ನಿಂತವು. ಸಂಪಾದಕರು ಬದಲಾದರು, ತಂಡ ಬದಲಾಯ್ತು. ಹೊರಗಿನಿಂದ ಕೆಲವರು ಒಳ್ಳೆ ಸಂಬಳಕ್ಕೆ ಬಂದರು. ಒಳಗಿದ್ದವ ದಡ್ಡ ಅನ್ನಿಸಿಕೊಂಡು ಅದೇ ಸಂಬಳಕ್ಕೆ ಉಳಿದ. ಒಂಥರ ಉತ್ತರ ಕರ್ನಾಟಕದ ಮಂದಿ ಗುಳೆ ಹೊರಟಹಾಗೆ ಪತ್ರಕರ್ತರ ಪಾಡಾಯ್ತು.

ನಿಧಾನವಾಗಿ ಸಂಪಾದಕರ ಪ್ರಾಬಲ್ಯ ಎಂಬುದು ಪತ್ರಿಕೆಯಲ್ಲಿ ಕಡಿಮೆಯಾಗಿ ಆಡಳಿತ ಮಂಡಳಿ, ಜಾಹೀರಾತು ಮಂದಿಯ ಹಿಡಿತವೇ ಜಾಸ್ತಿಯಾಯ್ತು. ಇವತ್ತು ಎಲ್ಲಿಗೆ ಬಂದು ನಿಂತಿದೆ ಎಂದ್ರೆ, ಯಾವೊಬ್ಬರು ಮಾಲೀಕರಿಗೆ ಚಾಲೆಂಜ್‌ ಮಾಡುವ ಸ್ಥಿತಿಯಲ್ಲಿ ಇಲ್ಲ. ಕೊಟ್ಟಷ್ಟು ಸಂಬಳಕ್ಕೆ ವಹಿಸಿದಷ್ಟು ಕೆಲಸ ಮುಗಿಸಿ ಹೋಗಲೇಬೇಕು. ಓದುಗ, ಆತನ ಮುತುವರ್ಜಿ ಎಂಬ ಪ್ರಶ್ನೆಗಳು ಯಾವತ್ತೂ ಮೀಟಿಂಗ್‌ನಲ್ಲಿ ಏಳುವುದೇ ಇಲ್ಲ. ನಮಗ್ಯಾಕೆ ಸಿನಿಮಾ ಜಾಹೀರಾತು ಕಡಿಮೆಯಾಯ್ತು? ನಮಗ್ಯಾಕೆ ರಿಯಲ್‌ ಎಸ್ಟೇಟ್‌ ಜಾಹೀರಾತು ಬಂದಿಲ್ಲ ಎಂಬುದು ದೊಡ್ಡ ಚರ್ಚೆ. ಸುದ್ದಿ, ಗುಣಮಟ್ಟ ಅಂದ್ರೆ…ಅದ್ನೆಲ್ಲ ನೀವು ಸಂಪಾದಕೀಯ ಮಂಡಳಿ ಮೀಟಿಂಗ್‌ನಲ್ಲಿ ಚರ್ಚೆ ಮಾಡಿಕೊಳ್ಳಿ ಎನ್ನುತ್ತಾರೆ. ಅಷ್ಟಕ್ಕೂ ಮಿಗಿಲಾಗಿ ನೀವು ಚಾಲೆಂಜ್‌ ಮಾಡಿದ್ರೆ ನಿಮ್ಮ ಜಾಗಕ್ಕೆ ಲಾರಿ ಡ್ರೈವರ್‌, ರಿಕ್ಷಾ ಡ್ರೈವರ್‌ ಬಂದು ಆತ ನಿಮಗಿಂತ ಕ್ರಿಯಾಶೀಲ ಎಂಬುದನ್ನು ಸಾಬೀತು ಮಾಡುತ್ತಾನೆ. ಹಠಕ್ಕೆ ಬಿದ್ದವರು ಆತನನ್ನು ದೊಡ್ಡ ಅಂಕಣಕಾರನನ್ನಾಗಿ, ಲೇಖಕನನ್ನಾಗಿ ಮಾಡುತ್ತಾರೆ( ಬೇಕಿದ್ರೆ ಅಂಕಣವನ್ನು ಬೇರಯವರಿಗೆ ಹಣ ಕೊಟ್ಟು ಬರೆಸಿ ಆತನ ಹೆಸ್ರಲ್ಲಿ ಪ್ರಕಟಿಸುತ್ತಾರೆ!)

ಯಸ್‌, ಅಲ್ಟಿಮೇಟ್ಲಿ ದುಡ್ಡು. ವ್ಯಾಪಾರ ಇವಿಷ್ಟೆ ಇವತ್ತಿನ ಪತ್ರಿಕೋದ್ಯಮ. ಅದನ್ನು ಅಲ್ಲಗಳೆಯುವ ಸ್ಥಿತಿಯಲ್ಲಿ ನಾವಿಲ್ಲ. ದಿನಕ್ಕೆ ೧೦-೨೦ ಲಕ್ಷ ನಷ್ಟ ಎಂದ್ರೆ ಖಂಡಿತ ಹುಡುಗಾಟಿಕೆ ಮಾತಲ್ಲ. ಮನರಂಜನೆ ವಾಹಿನಿಗಳಂತೂ ಇವತ್ತು ತಮ್ಮನ್ನು ತಾವು ಕಾರ್ಪೊರೇಟ್‌ ಎಂದು ಗುರುತಿಸಿಕೊಂಡು ಬಿಟ್ಟಿವೆ. ಅಲ್ಲಿ ೧೦೦ ಕೋಟಿ ಹಾಕಿ ೧೨೦ ಕೋಟಿ ತೆಗೆಯುವ ಸ್ಕೀಮು. ಅಲ್ಲಿ ದುಡಿಯುವವರು ಇವತ್ತು ಪತ್ರಕರ್ತರಾಗಿ ಉಳಿದಿಲ್ಲ. ಪ್ರೆಸ್‌ ಎಂಬ ಐಡೆಂಟಿಟಿ ಅವರಿಗಿಲ್ಲ. ಅವರು ಸಾಫ್ಟ್‌ವೇರ್‌ ಎಂಜಿಯರ್‌ನಂತೆ ಓರ್ವ ಕಾರ್ಪೊರೇಟ್‌ ನೌಕರ. ಒಂಥರ ಪತ್ರಕರ್ತ ಎಂದು ಅವರಿವರಿಗೆ ಉಪದೇಶ ಮಾಡುತ್ತ, ಅವರಿವರ ಹುಳುಕು ತೋರಿಸುತ್ತ ನಮ್ಮೊಳಗಿನ ಹುಳುಕನ್ನು ಮುಚ್ಚಿಟ್ಟುಕೊಳ್ಳುವುದಕ್ಕಿಂತ ಕಾರ್ಪೊರೇಟ್‌ ನೌಕರಿ ತುಂಬಾ ಉತ್ತಮ ಅನ್ನಿಸಿಬಿಟ್ಟಿದೆ.

ಆತ ತಪ್ಪು ಮಾಡಿದ್ದಾನೆ. ಆತನ ಬಗ್ಗೆ ವರದಿ ಮಾಡಲು ವರದಿಗಾರ ತೆರೆಳಿದ್ದು ಗೊತ್ತಾಗುತ್ತೆ. ಆತ ಸೀದಾ ಮುಖ್ಯ ವರದಿಗಾರನ ಬಳಿ ಬರುತ್ತಾನೆ. ಅಲ್ಲಿ ಕೆಲಸ ಆಗಲಿಲ್ಲ ಅಂದ್ರೆ ಸಂಪಾದಕರ ಬಳಿ ಬರುತ್ತಾನೆ. ಅಲ್ಲಿಯೂ ಆಗಲಿಲ್ಲ ಅಂದ್ರೆ ಜಾಹೀರಾತು ವಿಭಾಗಕ್ಕೆ ಹೋಗುತ್ತಾನೆ. ವರ್ಷಕ್ಕಿಂತಿಷ್ಟು ಜಾಹೀರಾತು ಅಂತ ಅಲ್ಲೆ ವ್ಯವಹಾರ ಮುಗಿದು ಬಿಡುತ್ತದೆ. ಅದೆಲ್ಲ ಮುಗಿದು ೧೫ ದಿನದ ಬಳಿಕ ಸಂಕ್ರಾಂತಿ ಶುಭಾಷಯಗಳು ಅಂತಲೋ, ಗೌರಿ-ಗಣೇಶ ಹಬ್ಬದ ಶುಭಾಷಗಳು ಅಂತಲೋ ಆತನದ್ದೊಂದು ದೊಡ್ಡ ಫೋಟೊದೊಂದಿಗೆ ಜಾಹೀರಾತು ಪ್ರಕಟವಾಗುತ್ತದೆ. ಆತನ ಬಗ್ಗೆ ಕಷ್ಟಪಟ್ಟು ವರದಿ ತಂದ ವರದಿಗಾರ ಮಿಕಮಿಕ ಕಣ್ಣು ಬಿಟ್ಟು ಎಲ್ಲವನ್ನೂ ಸುಮ್ಮನೆ ನೋಡುತ್ತಿರುತ್ತಾನೆ! ಇಲ್ಲೆಲ್ಲಿಯೂ ವರ್ಕೌಟ್‌ ಆಗದಿದ್ರೆ ಮಾತ್ರ ಅವನು ಅಂತಿಮವಾಗಿ ಮಾಲೀಕರ ಬಳಿ ಹೋಗುತ್ತಾನೆ.

ಇವನ್ನೆಲ್ಲ ನಿತ್ಯವೂ ನೋಡಿದ ಸಾಕಷ್ಟು ಪತ್ರಕರ್ತರು ಇವತ್ತು ಬುದ್ಧಿವಂತರಾಗಿದ್ದಾರೆ. ಯಾವುದನ್ನು ಬರೆದ್ರೆ ತನಗೆ ಲಾಭದಾಯಕ ಯಾವುದು ನಷ್ಟ ಎಂಬುದನ್ನು ಬರೆಯುವ ಮೊದಲೇ ಆಲೋಚಿಸುತ್ತಾರೆ. ಇಷ್ಟಾಗಿಯೂ ಇಲ್ಲಿ ಉದ್ಯೋಗ ಭದ್ರತೆ ಇಲ್ಲ! ಮೇಲೆ ಕುಳಿತ ಯಾರೋ ಒಬ್ಬ ದಡ್ಡ ಎನ್ನಿಸಿ ಆಡಳಿತ ಮಂಡಳಿ ಇನ್ನೊಬ್ಬ ಅಪರಾತ್ರಿಯ ಬುದ್ಧಿವಂತನನ್ನು ತಂದು ಕೂರಿಸುತ್ತದೆ. ಆತ ದಡ್ಡ ಎಂದು ಸಾಬೀತು ಆಗುವವರೆಗೂ ಮಿಕ್ಕವರೆಲ್ಲ ದಡ್ಡರಾಗಿರುತ್ತಾರೆ! ಒಂಥರ ಉಗುಳಲೂ ಆಗದೆ, ನುಂಗಲು ಆಗದೆ ಬದುಕುತ್ತಿದ್ದೇವೆ. ಒಂದಷ್ಟು ಜನ ಗೆಳೆಯರು ಬೆಸತ್ತು ಎಲ್ಲವನ್ನೂ ಬಿಟ್ಟು ಬೇರೆಡೆಗೆ ಹೋಗಿದ್ದಾರೆ. ದಿನ ಬೆಳಗಾದ್ರೆ ಸಾಮಾಜಿಕ ತಾಣಗಳಲ್ಲಿ ಮಾಧ್ಯಮವನ್ನು ಉಗುಳುವುದು ನೋಡಿದ್ರೆ ಬೇಜಾರಾಗುತ್ತೆ. ಆದ್ರೆ ದೊಡ್ಡವರಂತೆ ನಾವು ಜಾಣ ಕಿವುಡರಾಗಿರುವುದು ಅತ್ಯುತ್ತಮ. ಯಾಕಂದ್ರೆ ನಾವು ಅದಕ್ಕೆಲ್ಲ ಉತ್ತರ ಅಂತ ಹಿಂಗೆಲ್ಲ ಲೇಖನ ಬರೆದ್ರೆ ನಮಗೆ ಯಾವುದೇ ಕಾಸು ಬರುವುದಿಲ್ಲ. ೨೦೦ ಜನ ಇದನ್ನು ಓದುವುದಿಲ್ಲ. ಯಾವುದೇ ಪತ್ರಿಕೆಯಲ್ಲು ಯಾವ ಕಾರಣಕ್ಕೂ ಇಂಥ ವಿಷಯಗಳೆಲ್ಲ ಪ್ರಕಟವಾಗುವುದಿಲ್ಲ. ಅದಕ್ಕಿಂತ ಕಾಸು ಬರುವುದನ್ನು ಬರೆದುಕೊಂಡಿರುವುದು ಲೇಸು ಅಂತ ನಮಗೆಲ್ಲ ಯಾವತ್ತೋ ಅರ್ಥವಾಗಿಬಿಟ್ಟಿದೆ. ಹೀಗಾಗಿ ಬರೆದು ಕೈಬಿಟ್ಟ ಮೇಲೆ ಮುಗೀತು. ಅದು ನಮ್ಮದಲ್ಲ. ಅದನ್ನು ನೀವು ಸಿಟಿ ಕೆಬಲ್ಲಿಗೆ ಬೇಕಾದ್ರು ಸೀರಿಯಲ್‌ ಮಾಡಿಕೊಳ್ಳಿ, ಇಲ್ಲವಾದ್ರೆ ಮಂಡಕ್ಕಿ ಪೊಟ್ಟಣ್ಣ ಬೇಕಾದ್ರು ಕಟ್ಟಿಕೊಳ್ಳಿ. ಬರೆದಿದ್ದಕ್ಕೆ ಕಾಸು ಕೊಡಿ. ನಿಮಗೆ ಬೇಕಾದಂತೆ ಅಡ್ಡ-ಉದ್ದ-ಎತ್ತರಕ್ಕೆ ಬರೆದುಕೊಡುತ್ತೇವೆ ಎಂಬಂಥ ಸ್ಥಿತಿಗೆ ನಾವೊಂದಿಷ್ಟು ಗೆಳೆಯರಂತೂ ಖಂಡಿತ ತಲುಪಿದ್ದೇವೆ. ನಮ್ಮ ಖುಷಿಗೆ ಬರೆಯಲು ಬೇಕಾದಷ್ಟಿದೆ. ದುಡಿಯುವ ಖುಷಿಗೆ ಬರೆಯುವುದೇ ಬೇರೆ! ದುಡ್ಡಿನ, ವ್ಯಾಪಾರದ ಮುಂದೆ ಯಾವ ಕ್ರಿಯಾಶೀಲತೆ, ಯಾವ ಜಾಣತನವೂ ಇಲ್ಲ…ಜಪಾನಿ ತೈಲ ಕಂಪನಿ ಬಗ್ಗೆ, ಅಲ್ಲಿನ ಮಾಲೀಕನ ಬಗ್ಗೆ, ೬ ನಿಮಿಷ ನೋಡಲಾಗದ ಕೆಟ್ಟ ಸಿನಿಮಾದ ಬಗ್ಗೆ ಸೊಗಸಾಗಿ ಬರೆಯವುದು ಮತ್ತು ಅದನ್ನು ಬೈದುಕೊಳ್ಳುತ್ತಲೆ ಓದುವ ನಿಮ್ಮಂಥವರನ್ನು ಆಸ್ವಾದಿಸುವುದೇ ಜಾಣತನ!!!

Read Full Post »

ದುಡ್ಡು, ದುಡ್ಡು, ದುಡ್ಡು…ಎಷ್ಟರ ಮಟ್ಟಿಗೆ ಎಂದರೆ ಮುಂದೊಂದು ದಿನ ಹಣವೆಂಬುದು ತನ್ನ ಮೌಲ್ಯವನ್ನು ಕಳೆದುಕೊಂಡು ಶೂನ್ಯವಾಗಬಹುದೇನೋ ಎಂಬ ಭಯ ಶುರುವಾಗಿದೆ. ದುಡ್ಡಿಗಾಗಿ ನಾವು ನಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದೇ ಈ ಅನುಮಾನಕ್ಕೆ ಕಾರಣ. ಒಂದು ಕಸದ ಬಗ್ಗೆ ಪ್ರತಿಕ್ರಿಯಿಸುವಾಗ ನಿರ್ದೇಶಕ ಯೋಗ್‌ರಾಜ್ ಭಟ್ಟರು ಮುದೊಂದು ದಿನ ನಾವು ಸ್ನಾನ ಇಲ್ಲದೇ, ಬಟ್ಟೆಯಿಲ್ಲದೇ, ಕಸದ ರಾಶಿಯಲ್ಲಿ ಬದುಕುವ ಅನಾಗರೀಕರಾಗಬಹುದು. ಕಾಲಚಕ್ರ ತಿರುಗಬಹುದು ಎಂದಿದ್ದರು. ಅವರ ಮಾತು ನಿಜ. ಹಾಗಾಗಿದ್ದರೆ ಜಗತ್ತು ಚೆನ್ನಾಗಿರಬಹುದೇನೊ ಎನ್ನಿಸಲು ಶುರುವಾಗಿದೆ.
ಮೊನ್ನೆ ಒಂದು ಪುಟ್ಟ ಅಪಘಾತ. ಗಂಡ-ಹೆಂಡತಿ-ಮಗು ರಾತ್ರಿ ಯಾವುದೋ ಮದುವೆ ರಿಸೆಪ್ಷೆಬ್ ಮುಗಿಸಿಕೊಂಡು ಬೈಕ್‌ನಲ್ಲಿ ಬರುತ್ತಿದ್ದರು. ಲಾರಿಯ ತುದಿ ಬೈಕ್ ಕನ್ನಡಿಗೆ ತಗುಲಿ ಬೈಕ್ ಬಿದ್ದಿದೆ. ಬೈಕ್ ಓಡಿಸುತ್ತಿದ್ದ ಹೆಂಡತಿ ಕೆಳಕ್ಕೆ ಬಿದ್ದಿದ್ದಾಳೆ. ಗಂಡ-ಮಗುವಿಗೆ ಅದೃಷ್ಟವಶಾತ್ ಏನು ಆಗಿಲ್ಲ. ಆದರೆ ಹೆಂಡತಿ ತಲೆಗೆ ಪೆಟ್ಟಾಗಿದೆ. ಎಲ್ಲ ನಿಂತುಕೊಂಡು ಅಪಘಾತ ನೋಡಿದವರೇ ಹೊರತು ಯಾರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಗಂಡ ಇಬ್ಬರು ಅಪರಿಚಿತ ಗಂಡಸರನ್ನು ಸ್ಥಳದಲ್ಲಿ ಬಿಟ್ಟು ಮಗುವನ್ನು ಎದೆಗವಚಿಕೊಂಡು ಸಮೀಪದಲ್ಲೇ ಇರುವ ವೈದ್ಯರನ್ನು ಕರೆದುಕೊಂಡು ಬರಲು ಹೋಗಿದ್ದಾರೆ. ಆತ ಹೋಗಿ ವಾಪಾಸ್ ಬರುವುದರೊಳಗೆ ಆ ಇಬ್ಬರು ಪುಣ್ಯಾತ್ಮರು ಪ್ರಾಣ ಹೋಗುತ್ತಿರುವ ಹೆಣ್ಣಿನ ಮಾಂಗಲ್ಯ ಸರದಿಂದ ಹಿಡಿದು ಎಲ್ಲವನ್ನೂ ದೋಚಿಕೊಂಡು ಪರಾರಿಯಾಗಿದ್ದಾರೆ. ಜೀವನ್ಮರಣ ಹೋರಾಟದಲ್ಲಿ ಹೆಣ್ಣು ಮಗಳು ಸತ್ತಿದ್ದಾಳೆ. ಇದು ಬೆಂಗಳೂರಿನಲ್ಲಿ ತೀರಾ ಇತ್ತೀಚೆಗೆ ನಡೆದ ನೈಜ ಘಟನೆ.
ಎಲ್ಲ ಮುಗಿಯಿತು. ಗಂಡ ತನ್ನ ಹೆಂಡತಿಯನ್ನು ಕಳೆದುಕೊಂಡು ದುಖಃ ಮಡುಗಟ್ಟಿದ ಮೇಲೆ ಬೈಕ್ ತರಲು ಪೋಲೀಸ್ ಸ್ಟೇಷನ್‌ಗೆ ಹೋಗಿದ್ದಾರೆ. ಬೈಕ್‌ನಲ್ಲಿ ಆ ಹೆಣ್ಣುಮಗಳ ಪರ್ಸ್ ಮತ್ತು ಮೊಬೈಲ್ ಇತ್ತು. ೩೦೦೦ ಸಾವಿರ ರೂ. ನಗದು ಹಣವಿತ್ತಂತೆ. ಮನೆಗೆ ಬಂದು ನೋಡಿದರೆ ಎರಡೂ ಮಾಯ! ಪೊಲೀಸರನ್ನು ಕೇಳಿದರೆ ವಿಷಯವೇ ಗೊತ್ತಿಲ್ಲ ಎನ್ನುತ್ತಿದ್ದಾರೆ. ಸಾವಿನ ಮನೆಯ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವುದೇ ಎಂದರೆ ಇದೆ ಇರಬೇಕು! ಹೆಂಡತಿ ಕಳೆದುಕೊಂಡ ದುಖಃದಲ್ಲಿರುವ ಅವರಿಗೆ ಯಾರ ಮೇಲೂ ಹೋರಾಡುವ ಉತ್ಸಾಹವಿಲ್ಲ.
ಇದು ತೀರಾ ನನ್ನ ಪರಿಚಿತರ ಮನೆಯಲ್ಲಿ ನಡೆದ ಘಟನೆ. ಆದರೆ ಬೆಂಗಳೂರಿನಲ್ಲಿ ದಿನಕ್ಕೆ ಇಂಥ ಹತ್ತಾರು ಘಟನೆ ನಡೆಯುತ್ತದೆ. ಬಸ್ಸು, ಲಾರಿ ತಲೆ ಮೇಲೆ ಹತ್ತಿ ಹೋದರು ಎಷ್ಟೋ ಸಲ ನೋಡಲು ಯಾರೂ ಇರುವುದಿಲ್ಲ. ಅಯ್ಯೊ ನಮಗ್ಯಾಕೆ ಆ ಸಾಹವಾಸ, ಸುಮ್ಮನೆ ರಿಸ್ಕ್, ಬಾಡಿ ಮುಟ್ಟಿದ್ರೆ ಕೇಸು, ಅಲೆದಾಟ ಎಂದು ಎಷ್ಟೋ ಜನ ನಿಂತಲ್ಲೇ ಇಣುಕಿ ನೋಡಿಕೊಂಡು ಹೋಗುತ್ತಾರೆ. ಅನಾಥವಾಗಿ ಚೀರಾಡಿದರೂ ಸಾಯುವ ಹೊತ್ತಿನಲ್ಲಿ ನೀರು ಕೊಡುವವರು ಗತಿಯಿಲ್ಲ. ಇದು ಈ ಮಹಾನಗರಿಯ ಕಥೆ-ವ್ಯಥೆ ಎರಡೂ ಹೌದು.
ಇನ್ನೂ ಕಳ್ಳರಿಗೆ ಬಸ್ ಪಲ್ಟಿ ಹೊಡೆದರೆ, ಅಪಘಾತವಾದರೆ ಇಲ್ಲಿ ಸುಗ್ಗಿ! ಈಗೊಂದು ಸ್ವಲ್ಪ ತಿಂಗಳ ಹಿಂದೆ ತುಮಕೂರು-ಬೆಂಗಳೂರು ಹೈವೆಯಲ್ಲಿ ಇಂಥದ್ದೆ ಘಟನೆ ಆಗಿ ಅದರಲ್ಲಿ ಪೊಲೀಸ್ ಪೇದೆಗಳೇ ಆಭರಣ-ಹಣ ಲೂಟಿ ಮಾಡಿ ಸಿಕ್ಕಿಬಿದ್ದ ಘಟನೆ ದೊಡ್ಡ ಸುದ್ದಿ ಮಾಡಿತ್ತು. ಅಂಥ ನೂರಾರು ಪ್ರಕರಣಗಳಲ್ಲಿ ಒಂದೆರಡು ಸುದ್ದಿ ಮಾಡುತ್ತವೆ.
ಇಲ್ಲಿ ಆಘಾತಕಾರಿ ಅಂಶ ಎಂದರೆ ವ್ಯಕ್ತಿ ಜೀವಕ್ಕಿಂತ ಆತನ ಬಳಿ ಇರುವ ಹಣ, ಆಭರಣ ದೋಚುವ ಪ್ರವೃತ್ತಿ. ಪೊಲೀಸ್-ಕಳ್ಳ, ಸಾಮಾನ್ಯ ಎಂಬ ಬೇಧವಿಲ್ಲದೇ ಇವತ್ತು ಈ ಕೆಲಸ ನಡೆಯುತ್ತದೆ. ಸಿಕ್ಕಷ್ಟು ಇವತ್ತಿನ ಖರ್ಚಿಗಾಯ್ತು ಎಂಬ ಧೋರಣೆ. ಎದುರಿಗಿರುವ ವ್ಯಕ್ತಿ ಸಾಯುತ್ತಿದ್ದಾನೆ, ನೀರು ಕೊಡಬೇಕು. ಸಂಕಟಪಡುತ್ತಾ ಚೀರುತ್ತಿದ್ದಾನೆ ಎಂಬ ಕನಿಷ್ಠ ಮಾನವೀಯತೆಯನ್ನು ನಾವು ಕಳೆದುಕೊಂಡುಬಿಟ್ಟಿದ್ದೇವೆ. ಎಲ್ಲವನ್ನೂ ಹೀಗೆ ಜನರಲೈಸ್ ಮಾಡಲು ಸಾಧ್ಯವಿಲ್ಲ. ಆದರೆ ಬೆಂಗಳೂರಿನ ಅಪಘಾತದಲ್ಲಿ ೧೦ರಲ್ಲಿ ೬ ಪ್ರಕರಣಗಳು ಹೀಗೆ ಆಗುತ್ತಿವೆ!
’ಸಾರ್ ನೋ ಪಾರ್ಕಿಂಗ್ ಏರಿಯಾದಲ್ಲಿ ಕಾರು ನಿಲ್ಲಿಸಿದ್ರೆ ಎತ್ತಾಕಿಕೊಂಡು ಹೋಗ್ತಾರೆ. ಕಾರು ವಾಪಾಸ್ ತರುವಾಗ ಒಳಗೆ ಏನು ಇರಲ್ಲ. ಸ್ಪೇರ್‌ಪಾರ್ಟ್‌ಗಳನ್ನು ಬಿಚ್ಚಿ ಮಾರಿಬಿಡ್ತಾರೆ ಸಾರ್. ನೋಡಿ ಸಾರ್ ಕಾರನ್ನು. ಇಂಟಿರಿಯರ್‌ಗೆ ೬೦ ಸಾವಿರ ರೂ ಖರ್ಚುಮಾಡಬೇಕು ಈಗ ಮತ್ತೆ’ ಹಾಗಂತ ಎದುರುಗಡೆ ಮನೆಯ ಅಂಕಲ್ ಮೊನ್ನೆ ತಮ್ಮ ದುಖಃ ತೋಡಿಕೊಳ್ಳುತ್ತಿದ್ದರು. ಇದು ಕೂಡ ನಡೆದ ನೈಜ ಘಟನೆ. ಹಾಗಿದ್ದರೆ ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಂ? ಯಾರ ವಿರುದ್ಧ ಹೋರಾಟ ಮಾಡೋಣ? ಯಾರನ್ನು ತಪ್ಪಿತಸ್ಥರನ್ನಾಗಿಸೋಣ.
ಮನೆ ಬಾಗಿಲಿನಲ್ಲಿ ನಿಲ್ಲಿಸಿದ ನನ್ನದೇ ಬೈಕ್‌ನ ಪೆಟ್ರೋಲ್‌ನ್ನು ೩ ಸಲ ಕದ್ದರು. ಕೊನೆಗೆ ಜೆಸಿ ರಸ್ತೆ ಹೋಗಿ ಒಂದು ಲಾಕರ್ ಹಾಕಿಸಿಕೊಂಡು ಬಂದೆ. ಅಂದರೆ ಬೆಂಗಳೂರು ೧೦೦ ರೂಪಾಯಿ ಪೆಟ್ರೋಲ್ ಕದಿಯುವಷ್ಟರ ಮಟ್ಟಿಗೆ ಬೆಳೆದಿದೆ. ಸಾಯುತ್ತಿರುವವರ ಸರ-ಬಳೆ ದೋಚುತ್ತಾರೆ ಎಂದಾದ ಮೇಲೆ ನಿರ್ಜಿವ ವಸ್ತುಗಳನ್ನು ಕದಿಯುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಬಿಡಿ.
ಇತ್ತೀಚಿನ ೨-೩ ವರ್ಷಗಳಲ್ಲಿ ಇಂಥ ಪ್ರಕರಣಗಳು ತೀರಾ ಹೆಚ್ಚಾಗಿವೆ. ಬೆಂಗಳೂರು ಬಾನೆತ್ತರಕ್ಕೆ ಬೆಳೆಯುತ್ತಿರುವುದು, ಇಲ್ಲಿನ ಬಾಡಿಗೆ, ಬದುಕು ದುಸ್ಥರವಾಗಿರುವುದು ಇದಕ್ಕೆ ಕಾರಣವಾಗಿರಬಹುದು.
ಯಸ್ ಬೀದಿಯಲ್ಲಿ ಪಾನಿಪುರಿ ಮಾರುವವನು ಯಾವ ಮೂಲಾಜು ಇಲ್ಲದೇ ೩೦೦ರೂಪಾಯಿ ಮಾಮೂಲಿಯನ್ನು ಕೊಡಬೇಕಾದವನಿಗೆ ಕೊಡಲೇ ಬೇಕು. ಇಲ್ಲವಾದರೆ ಮರುದಿನ ಅವನ ಜೀವನೋಪಾಯಕ್ಕೆ ದಾರಿ ಇಲ್ಲ. ಎಲ್ಲಿ ನೋಡಿದರೂ ದುಡ್ಡು, ದುಡ್ಡು. ಸಾಯುವಾಗ ಯಾರೂ ನಮ್ಮ ಹೆಣಕ್ಕೆ ದುಡ್ಡು ಹಾಕಿ ಸುಡಲಾರರು ಎಂಬ ಪರಿವು ನಮಗಿಲ್ಲ. ದುಡ್ಡು ಬೇಕು ನಿಜ. ಆದರೆ ಅದಕ್ಕೊಂದು ಮಿತಿಬೇಕು. ಬೇರೆಯವರ ಸಾವು-ಬದುಕಿನ ನಡುವೆಯೂ ನಮಗೆ ಮುಖ್ಯವಾಗುವುದು ದುಡ್ಡು-ಬಂಗಾರ ಎಂದಾದರೆ ನಾವೆಲ್ಲಿಗೆ ಬಂದು ನಿಂತಿದ್ದೇವೆ ಎಂಬ ಆತಂಕ ಕಾಡುತ್ತದೆ.
ಒಂದರ್ಥದಲ್ಲಿ ಅನಾಗರೀಕ, ಅಲೆಮಾರಿ ಬದುಕೇ ಉತ್ತಮ ಎನ್ನಿಸುತ್ತಿದೆ. ಅಲ್ಲಿ ದುಡ್ಡಿನ ಹಂಗಿಲ್ಲ. ಎಲ್ಲರೂ ನಗ್ನರಾಗಿರುವುದರಿಂದ ರೇಪು, ಕೊಲೆಗಳ ಮಾತಿಲ್ಲ. ಒಂದು ರೀತಿ ಪಶು-ಪಕ್ಷಿ-ಪ್ರಾಣಿಗಳಂತೆ ನೆಮ್ಮದಿಯ ಜೀವನ. ಅಲ್ಲಿ ಕೊಲೆಯಂತೆ, ಇಲ್ಲಿ ದರೋಡೆಯಂತೆ ಎಂಬುದಿಲ್ಲ. ನಮಗೆ ನಾವೇ ಕಟ್ಟಿಕೊಂಡ ಮರ್ಯಾದೆ ಎಂಬ ಕೋಟೆ ಅಲ್ಲಿ ಇಲ್ಲವಾದರೂ ಕೃತಕ ಪ್ರಾಣ ಸಂಚಕಾರದ ಭಯವಿಲ್ಲ ಅಲ್ಲವೇ?
ಯಸ್ ಇತ್ತೀಚಿನ ದಿನಗಳಲ್ಲಿ ಈ ಮಹಾನಗರಿಗಳ ವಿದ್ಯಾಮಾನಗಳನ್ನು ಗಮನಿಸಿದರೆ ಹಾಗನ್ನಿಸಲು ಶುರುವಾಗಿದೆ. ಹಾಗಂತ ಅದ್ಯಾವುದೂ ಸಾಧ್ಯವಿಲ್ಲದ ಮಾತು. ಕೆಳಗಿನ ಮನೆಯಲ್ಲಿ ಯಾರೋ ಸತ್ತಿದ್ದಾರೆ ಎಂಬುದು ಮೇಲಿನ ಮನೆಯವನಿಗೆ ಗೊತ್ತಿಲ್ಲದ ಈ ಮಹಾನಗರಗಳಲ್ಲಿ ವ್ಯಕ್ತಿಯೊಬ್ಬನಿಗೆ ಇನ್ನೊಬ್ಬನ ಜೀವದ ಬೆಲೆ ಗೊತ್ತಾಗುವುದು ತೀರಾ ಅವರಿಗೆ ಆತ್ಮೀಯವಾದವರನ್ನು ಕಳೆದುಕೊಂಡಾಗ ಅನ್ನಿಸುತ್ತದೆ. ಪ್ಲೀಸ್ ಇಂದಿನಿಂದಲಾದರೂ ಸಾಯುತ್ತಿರುವವರನ್ನು ತುದಿಯಲ್ಲಿ ನಿಂತು ಚೆಂದ ನೋಡುವ ವ್ಯಕ್ತಿಗಳು ನೀವಾಗಬೇಡಿ. ಕನಿಷ್ಠ ಪಕ್ಷ ನೀರು ಕೊಟ್ಟು ಪ್ರಾಣ ಉಳಿಸಲು ಪ್ರಯತ್ನಿಸಿ. ಪ್ರಾಣಕ್ಕಾದ್ರೂ ಬೆಲೆ ಕೊಡಿ ಪ್ಲೀಸ್.

(ನಿನ್ನೆಯ ಕನ್ನಡಪ್ರಭದಲ್ಲಿ ಪ್ರಕಟಿತ ಬರಹ. ಒಂದಷ್ಟು ಅಕ್ಷರದೋಷಗಳಿವೆ. ಕ್ಷಮೆ ಇರಲಿ…)

Read Full Post »

ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದಲ್ಲಿನ ಮೂಢನಂಬಿಕೆಯನ್ನು ತೊಡೆದು ಹಾಕುವ ಮೂಲಕ ಹೊಸದೊಂದು ಕ್ರಾಂತಿ ಮಾಡಲು ಹೊರಟಿದ್ದು ಈಗ ಹಳೆಸುದ್ದಿಯಾಯ್ತು. ಜ್ಯೋತಿಷ್ಯದಿಂದ ಆರಂಭಿಸಿ ಪೂಜೆ ಪುನಸ್ಕಾರಕ್ಕೂ ಸರ್ಕಾರಿ ಪರ್ಮಿಟ್ ಬೇಕು ಎಂಬ ಮುಖ್ಯಮಂತ್ರಿಗಳ ನಿಲುವುವಿಗೆ ಈಗಾಗಲೇ ಪರ-ವಿರೋಧದ ಮಾತುಗಳು ಕೇಳಿಬಂದಿತ್ತು. ಮೂಢನಂಬಿಕೆ ಪ್ರತಿಬಂಧಕ ವಿದೇಯಕದ ಕರಡು ಸಿದ್ಧವಾಗಿದೆ. ಮೂಢ ನಂಬಿಕೆಗಳಿಗೆ ಕಡಿವಾಣ ಖಂಡಿತ ಸ್ವಾಗತಾರ್ಹ. ಆದರೆ ಯಾವುದು ಮೂಢ ಎಂಬುದು ಇಲ್ಲಿ ಬಹುಮುಖ್ಯ ಪ್ರಶ್ನೆ.

ಸ್ವಾಮೀಜಿಗಳ ಪಾದಪೂಜೆ, ಅಡ್ಡಪಲ್ಲಕ್ಕಿ ಉತ್ಸವ, ಜ್ಯೋತಿಷ್ಯ, ಪೂಜಾ ಸಾಮಾಗ್ರಿಗಳ ಮಾರಾಟ ಇವೆಲ್ಲವೂ ಮೂಢತೆಯ ಪಟ್ಟಿಯಲ್ಲಿ ಸೇರುವ ಅಪಾಯವಿದೆ. ಕಪಟ ಜ್ಯೋತಿಷ್ಯಗಳಿಂದ ಇವತ್ತು ಇಡೀ ಜ್ಯೋತಿಷ್ಯ ಜಗತ್ತು ಒಂದು ರೀತಿ ಸುಳ್ಳಿನ ಕಂತೆ ಅನ್ನಿಸಿರುವುದು ನಿಜ. ಹಾಗಂತ ಜ್ಯೋತಿಷ್ಯವನ್ನು ಮೂಢತೆಯ ಪಟ್ಟಿಗೆ ಸೇರಿಸುವುದು ತೀರಾ ಹಾಸ್ಯಾಸ್ಪದವಾಗುತ್ತದೆ. ಯಾಕೆಂದರೆ ಜ್ಯೋತಿಷ್ಯದಲ್ಲಿ ಪದವಿ ನೀಡುವ ವ್ಯವಸ್ಥೆ ಇದೆ. ಅರ್ಥಾತ್ ಎಂಜಿನಿಯರಿಂಗ್, ವೈದ್ಯಕೀಯ ಪದವಿಗಳಿದ್ದಂತೆ ಜ್ಯೋತಿಷ್ಯ ಎಂಬುದು ಕೂಡ ಒಂದು ವ್ಯವಸ್ಥಿತ ಕಲಿಕೆಯ ವಿಚಾರ.

ನಾವೇನು ಅಂಕಗಣಿತದ ಸೂತ್ರಗಳನ್ನು ನೋಡುತ್ತೇವೋ ಅಂಥ ಹತ್ತಾರು ಸೂತ್ರಗಳ ಸಮ್ಮಿಲನವೇ ಜ್ಯೋತಿಷ್ಯ ಅನ್ನಿಸಿಕೊಳ್ಳುತ್ತದೆ. ಗ್ರಹ, ನಕ್ಷತ್ರ, ಪಂಚಾಂಗ, ತಿಥಿ, ವಾರ, ರಾಶಿ…ಹೀಗೆ ಹಲವಾರು ಅಂಶಗಳನ್ನು ಜ್ಯೋತಿಷ್ಯ ಜಗತ್ತು ಹೊಂದಿದೆ. ನಾವೇನು ಇವತ್ತು ಬಾಹ್ಯಾಕಾಶ ವಿಜ್ಞಾನದ ಕುರಿತು ಮಾತನಾಡುತ್ತೇವೋ, ಅಂಥ ಎಲ್ಲ ಸೂರ್ಯ-ಚಂದ್ರ, ನಕ್ಷತ್ರಗಳ ಕುರಿತು ಜ್ಯೋತಿಷ್ಯ ಜಗತ್ತು ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಮಾತನಾಡಿದೆ. ಜ್ಯೋತಿಷ್ಯದಲ್ಲಿ ಗ್ರಹಗಣಿತ ಎಂಬ ಒಂದು ವಿಭಾಗವಿದೆ. ಗ್ರಹಗಳು ಯಾವ ಸ್ಥಾನದಲ್ಲಿವೆ ಎಂಬುದನ್ನು ಲೆಕ್ಕಿಸಿ ಅದರ ಆಧಾರದ ಮೇಲೆ ಫಲ ಹೇಳುವುದು. ಇದನ್ನು ನೋಡಿದರೆ ಜ್ಯೋತಿಷ್ಯದ ಹಿಂದೆ ನಿಂತಿರುವ ಗಣಿತ ಅರ್ಥವಾಗುತ್ತದೆ. ಜ್ಯೋತಿಷ್ಯದಲ್ಲೂ ಹಲವು ವಿಧಗಳಿವೆ. ಹಸ್ತ ಸಾಮುದ್ರಿಕದಲ್ಲಿ ಲೆಕ್ಕಾಚಾರವಿಲ್ಲದೇ ಹಸ್ತ ನೋಡಿ ಹೇಳುತ್ತಾರೆ. ಅದೊಂದನ್ನು ಇಟ್ಟುಕೊಂಡು ಇಡೀ ಜ್ಯೋತಿಷ್ಯ ಜಗತ್ತು ಮೂಢ ಎಂದು ಪರಿಗಣಿಸಲು ಹೊರಟರೆ, ವಿಜ್ಞಾನವೂ ಕೂಡ ಮೂಢವೇ.ಬಹುಶಃ ಈ ಹೇಳಿಕೆ ನಿಮಗೆ ಹುಚ್ಚುತನ ಎನ್ನಿಸಬಹುದು. ಆದರೆ ಇಡೀ ವೈಜ್ಞಾನಿಕ ಜಗತ್ತಿನಲ್ಲಿ ಇರುವಷ್ಟು ಪರಮ ಮೂಢತೆ ನಿಮಗೆ ಮತ್ತೆಲ್ಲೂ ಸಿಗುವುದಿಲ್ಲ.

ನಾವು ಪರಮಾಣು ಆವಿಷ್ಕಾರವಾಗುವರೆಗೂ ಅಣುವೇ ಒಂದು ವಸ್ತುವಿನ ಅಂತಿಮ ರೂಪ ಎಂದು ನಂಬಿಕೊಂಡು ಕುಳಿತಿದ್ದೆವು. ಅಣುವಿನ ಕುರಿತು ಸಹಸ್ರಾರು ವಿಜ್ಞಾನಿಗಳು ಲಕ್ಷಾಂತರ ಪ್ರಮೇಯಗಳನ್ನು(ಥೇರಂ)ಮಂಡಿಸಿದರು. ಆದರೆ ಯಾವತ್ತೂ ಅಣುವನ್ನು ವಿಭಜಿಸಿ ಪರಮಾಣು ಸೃಷ್ಟಿಸಬಹುದು ಎಂಬುದು ನಿಜವಾಯಿತೋ, ಅಂದು ಅಣು ಆಧಾರಿತ ಅನೇಕ ಸಿದ್ದಾಂತಗಳು ಬಿದ್ದುಹೋದವು. ಇವತ್ತು ಪರಮಾಣುವನ್ನು ವಿಭಜಿಸಿ ಎಲೆಕ್ಟ್ರಾನ್‌ಗಳ ಜಗತ್ತಿನಲ್ಲಿದ್ದೇವೆ. ಅರ್ಥಾತ್ ನಾವು ಎಷ್ಟೋ ಶತಮಾನದವರೆಗೂ ಅಣುವೇ ಒಂದು ವಸ್ತುವಿನ ಅಂತಿಮ ರೂಪ ಎಂಬ ಮೂಢತೆಯಲ್ಲಿ ಬದುಕಿದ್ದೆವು ಅಲ್ವಾ?

ನೀವು ಗಣಿತದ ಪ್ರಪಂಚಕ್ಕೆ ಹೊಕ್ಕರೆ ಇಂಥ ಸಾವಿರಾರು ಸಿದ್ಧಾಂತಗಳು ಸಿಗುತ್ತವೆ. ಒಬ್ಬ ವಿಜ್ಞಾನಿ, ಗಣಿತಜ್ಞ ಒಂದು ಸಿದ್ಧಾಂತವನ್ನು ಮಂಡಿಸಿರುತ್ತಾನೆ. ಅದನ್ನು ೫೦-೬೦ ವರ್ಷದವರೆಗೂ ವಿಜ್ಞಾನ ಜಗತ್ತು ಸತ್ಯ ಎಂದು ನಂಬಿಕೊಂಡಿರುತ್ತದೆ. ಆದರೆ ಅದೇ ಸೂತ್ರದ ಮೇಲೆ ಧೀರ್ಘ ಅಧ್ಯಯನ ಮಾಡಿದ ಮತ್ತೊಬ್ಬ, ಅದೇ ಸಿದ್ಧಾಂತವನ್ನು ಸುಳ್ಳು ಎಂದು ಸಾಬೀತುಪಡಿಸುತ್ತಾನೆ. ಇದನ್ನು ವಿಜ್ಞಾನ ಜಗತ್ತು ಯಾವತ್ತೂ ಮೂಢನಂಬಿಕೆ ಎಂದು ಒಪ್ಪಿಕೊಳ್ಳುವುದಿಲ್ಲ. ಅದು ಆವತ್ತಿನ ಕಾಲಕ್ಕಿದ್ದ ಸೂತ್ರಗಳು, ಸಿದ್ಧಾಂತಗಳ ಆಧಾರದ ಮೇಲೆ ಸತ್ಯವಾಗಿತ್ತು ಎಂಬುದನ್ನೇ ವಾದಿಸುತ್ತದೆ.

ಯಸ್, ನಾನೀಗ ಹೇಳಲು ಹೊರಟ್ಟಿದ್ದು ಅದೇ ವಿಚಾರವನ್ನು. ಜ್ಯೋತಿಷ್ಯ ಅನ್ನುವುದು ಕೂಡ ಆವತ್ತಿನ ಗ್ರಹಗತಿಗೆ, ಆವತ್ತಿನ ಕಾಲಮಾನಕ್ಕೆ ಸರಿಯಾಗಿಯೇ ಇತ್ತು! ಜ್ಯೋತಿಷ್ಯ ಎಂದರೆ ಕವಡೆ ಹಾಕಿ, ರುದ್ರಾಕ್ಷಿ ಹಿಡಿದು ಟೀವಿ ಮುಂದೆ ಬೊಗಳೆ ಬಿಡುವ ಒಂದು ವರ್ಗವೆಂದು ನಿವ್ಯಾಕೆ ಪರಿಗಣಿಸುವಿರಿ? ಆ ಜಗತ್ತು ತುಂಬಾ ವಿಶಾಲವಾಗಿದೆ. ಆರ್ಯಭಟ, ಭಾಸ್ಕರಾಚಾರ್ಯರಂಥ ಶ್ರೇಷ್ಠರು ರಚಿಸಿದ ಕೃತಿಗಳು ಅದರ ಹಿಂದಿವೆ. ನಂಬಿಕೆ, ಮೂಢನಂಬಿಕೆ ಎಂಬುದನ್ನು ವಿವರಿಸುವುದೇ ಬಲು ಸವಾಲಿನ ಕೆಲಸ. ನನಗೆ ಸತ್ಯ ಎಂದು ಕಂಡಿದ್ದು ಇನ್ನೊಬ್ಬನಿಗೆ ಸುಳ್ಳಾಗಿ ಕಾಣಿಸುತ್ತದೆ. ಅಂತಿಮವಾಗಿ ಸಾಮಾಜಿಕವಾಗಿ ಸತ್ಯ ಅನ್ನಿಸುವುದನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ. ದೇವರು, ಧರ್ಮ, ಆಧ್ಯಾತ್ಮದ ವಿಚಾರಗಳು ಕೂಡ ಹಾಗೆ. ಇವೆಲ್ಲ ಅವರವರ ನಂಬಿಕೆಗೆ ಬಿಟ್ಟ ವಿಚಾರಗಳು. ನಿಮ್ಮ ಈಶ್ವರ ಹೀಗೆ ಇದ್ದಾನೆ ಎಂಬುದನ್ನು ನಿರೂಪಿಸಿ, ಗಣಪತಿಗೆ ಸೊಂಡಿಲು ಇದೆ ಎಂದು ನೀವು ಹೇಗೆ ಸಾಬೀತುಪಡಿಸುವಿರಿ ಎಂದರೆ ಬಹುಶಃ ಉತ್ತರ ಸಿಗಲಾರದು. ಹಾಗಂದ ಮಾತ್ರಕ್ಕೆ ಕೋಟ್ಯಂತರ ಜೀವಿಗಳು ನಂಬಿಕೆಯನ್ನು ಮೂಢ ಎಂದು ತೆಗೆದು ಹಾಕಲು ಆಗುವುದಿಲ್ಲ.

ಸಾರಾಯಿ ಕುಡಿದರೆ ಆರೋಗ್ಯಕ್ಕೆ ಹಾನಿಕರ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೂ ಅದನ್ನು ಸೇವಿಸುವವರು ಅನೇಕರಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಬೀಡಿ, ಸಿಗರೇಟು ಮಾರಾಟಕ್ಕೆ ನಿಬಂಧನೆ ಇರಬಹುದು, ಆದರೆ ಸೇದಲು ಯಾವುದೇ ನಿಬಂಧನೆ ಇಲ್ಲ. ದೇವರು, ಧರ್ಮದ ವಿಚಾರದಲ್ಲಿ ಕೆಲವರಿಗೆ ಮೋಸ ಆಗಬಹುದು. ಇದನ್ನು ಬಳಸಿಕೊಂಡು ಮೋಸ ಮಾಡುವವರು ಇರಬಹುದು. ಹಾಗಂತ ಇಡೀ ವ್ಯವಸ್ಥೆಯನ್ನೇ ತೆಗೆದು ಹಾಕುವುದು ಥರವಲ್ಲ.

ಖಂಡಿತ ಒಂದಷ್ಟು ಮೂಢತೆ ಸಮಾಜದಿಂದ ದೂರವಾಗಬೇಕು. ದೇವರ ಹೆಸರಿನಲ್ಲಿ ಅಮಾಯಕ ಜೀವಿಗಳನ್ನು ಬಲಿಪಶು ಮಾಡುವವರಿಗೆ ಶಿಕ್ಷೆಯಾಗಬೇಕು. ಒಂದಷ್ಟು ವಿಚಾರದಲ್ಲಿ ಜನ ಜಾಗೃತರಾಗಬೇಕು. ಆಡಳಿತ ಯಂತ್ರದಿಂದ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಹಾಗಂತ ಎಲ್ಲ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ತರುವ ಯತ್ನವಾಗಬಾರದು. ಪೂಜೆ-ಪುನಸ್ಕಾರಗಳಿಗೆ ಕಡಿವಾಣ ಹಾಕುವ ಹುನ್ನಾರವಾಗಬಾರದು. ಯಾಕೆಂದರೆ ಆಗ ಜನ ಜಾಗೃತರಾಗುವ ಬದಲು ಮಸೀದಿ, ಚರ್ಚುಗಳನ್ನು ಈ ಇಲಾಖೆಯ ಅಧೀನಕ್ಕೆ ತನ್ನಿ ಎಂಬ ಗಲಾಟೆಯೇ ದೊಡ್ಡದಾಗುತ್ತದೆ!

ಸಿದ್ದರಾಮಯ್ಯನವರಿಗೆ ಇನ್ನೊಂದು ವಿಚಾರ ಗೊತ್ತಿರಲಿಕ್ಕಿಲ್ಲ. ಇವತ್ತು ಧಾರ್ಮಿಕ ಕೇಂದ್ರವೇ ಇಲ್ಲದ ಜಾಗ ಪ್ರಪಂಚದ ಯಾವ ಮೂಲೆಯಲ್ಲಿ ಹುಡುಕಿದರೂ ಸಿಗುವುದಿಲ್ಲ. ಮಸೀದಿಯಾಗಲೀ, ಚರ್ಚ್ ಆಗಲಿ ಅಥವ ಅವರ ನಂಬಿಕೆಯ ಕೇಂದ್ರವಾಗಲಿ ಪ್ರತಿ ದೇಶದ ಪ್ರತಿ ಹಳ್ಳಿಯಲ್ಲೂ ಇದ್ದೇ ಇದೆ. ವಾರಕ್ಕೊಂದು ದಿನವಾದರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಪರಿಪಾಠವಿದೆ. ಕೆಲ ರಾಷ್ಟ್ರಗಳಲ್ಲಿ ಈ ಸಾಮೂಹಿಕ ಪ್ರಾರ್ಥನೆ ಕೂಡ ಕಡ್ಡಾಯ ಎಂಬಂತಿದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲೇ ಬೇಕಾದವರು ಮಾತ್ರ ದೇವರನ್ನು ನಂಬಬಹುದು. ಬೇಡವಾದವರು ದೇವರನ್ನು ನಿಂದಿಸಬಹುದು. ನಿಂದನೆ ಕೃತಿ ಬರೆಯಬಹುದು. ದೇವತೆಗಳನ್ನು ಬೆತ್ತಲೆ ಮಾಡಿ ಚಿತ್ರ ಬಿಡಿಸಬಹುದು!

ಅಯ್ಯೊ, ಎಲ್ಲಕ್ಕಿಂತ ಮುಖ್ಯವಾಗಿ ಹೇಳಲು ಮರೆತ್ತಿದ್ದೆ. ರಾಜಕಾರಣಕ್ಕಿಂತ ದೊಡ್ಡ ಮೂಢನಂಬಿಕೆ ಇನ್ಯ್ನಾವುದಿದೆ ಹೇಳಿ! ಜನರ ನಂಬಿಕೆಯಂತೆ ಜನಪ್ರತಿನಿಧಿಗಳು ಇದ್ದಿದ್ದರೆ ಇವತ್ತು ನಮ್ಮ ದೇಶ ಎಷ್ಟೋ ಉತ್ಕೃಷ್ಟ ಸ್ಥಿತಿಯಲ್ಲಿ ಇರುತ್ತಿತ್ತು ಅಲ್ವಾ?!!!

Read Full Post »

‘ಅಯ್ಯೋ ಪತ್ರಿಕೆಗಳಿಗೆ ಲೇಖನ ಕಳಿಸೋಕೆ ಬೇಜಾರಾಗುತ್ತೆ. ನಾವು ಬರೆದಿದ್ದು ಒಂದಾದ್ರೆ, ಅವ್ರು ಅದನ್ನು ಎಡಿಟ್ ಮಾಡಿ ಪ್ರಕಟಿಸೋದೇ ಮತ್ತೊಂದು’ ಹಾಗಂತ ಸುಮಾರು ಜನ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ‘ಲೇಖನ ಎಷ್ಟು ಚೆನ್ನಾಗಿದ್ರು ಸುಮ್‌ಸುಮ್‌ನೆ ಎಡಿಟ್ ಮಾಡ್ತಾರೆ. ಅರ್ಥವಿಲ್ಲದ ಸಂಗತಿಗಳನ್ನು ಲೇಖನದಲ್ಲಿ ತುರುಕುತ್ತಾರೆ. ನಾವು ಬರೆದಿರುವ ಲೇಖನ ಹೋಗಿ ಅದೊಂದು ಹೊಸ ಲೇಖನದ ಥರ ಆಗಿರುತ್ತೆ. ಅದ್ಕೆ ನಾವ್ಯಾಕೆ ಬರೆಯಬೇಕು’ ಅನ್ನುವವರು ಬಹಳಷ್ಟು ಜನರಿದ್ದಾರೆ.
ಖಂಡಿತ ನಿಮ್ಮ ಗೋಳು-ಸಂಕಟಗಳು ಯಾವುದೂ ಸುಳ್ಳಲ್ಲ. ಯಾಕಂದ್ರೆ ಸುದ್ದಿಮನೆಯಲ್ಲಿ ಒಂದು ಬರಹ ಬರೆಯುವುದಕ್ಕಿಂತ, ಒಬ್ಬರು ಬರೆದಿರುವುದನ್ನು ಸಂಪಾದಿಸುವುದು ಅಥವ ಎಡಿಟ್ ಮಾಡುವುದು ಬಲು ಕಷ್ಟದ ಕೆಲಸ. ಕಷ್ಟ ಅನ್ನುವುದಕ್ಕಿಂತ ಇದು ಬಲು ನಾಜೂಕಿನ ಕೆಲಸ. ಹಲವು ಉಪಸಂಪಾದಕರು ಅಥವ ಕಾಪಿ ಎಡಿಟರ್‌ಗಳಿಗೆ ಬರಹಗಾರನೊಬ್ಬನಿಗೆ ನೋವಾಗದಂತೆ ಎಡಿಟ್ ಮಾಡಲು ಬರುವುದಿಲ್ಲ. ಎಷ್ಟೋ ಸಲ ಎಡಿಟ್ ಮಾಡಿದ್ದು ಚೆನ್ನಾಗಿದ್ದರೂ, ಬರಹಗಾರನಿಗೆ ತಿದ್ದುಪಡಿ ಕುರಿತು ತೃಪ್ತಿ ಇರುವುದಿಲ್ಲ. ಇನ್ನು ಕೆಲವು ವಿ‘ಚಿತ್ರ’ ಸಂಪಾದಕ/ಉಪಸಂಪಾದಕರುಗಳು ಇರುತ್ತಾರೆ. ಚೆನ್ನಾಗಿರುವ ಬರಹದಲ್ಲಿಯೂ ಅವರಿಗೇನಾದ್ರೂ ಕಡ್ಡಿ ಆಡಿಸಲೇ ಬೇಕು! ಯಾಕಂದ್ರೆ ಅವ್ರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಿಕೊಳ್ಳಬೇಕಲ್ಲ! ಅದಕ್ಕಾಗಿಯೇ ಎಡಿಟ್ ಮಾಡುತ್ತಾರೆ. ಅದು ಎಷ್ಟು ಕೆಟ್ಟದಾಗಿರುತ್ತದೆ ಎಂದರೆ, ಅದಕ್ಕಿಂತ ಬರಹಗಾರನೊಬ್ಬ ಬರೆದ ಮೂಲ ಲೇಖನವನ್ನು ಪ್ರಕಟಿಸಿದರೆ ಎಷ್ಟೊ ಉತ್ತಮವಾಗಿರುತ್ತೆ. ಕಥೆ, ಕವನದ ಸಾಲುಗಳಿಗೂ ಕತ್ತರಿ ಪ್ರಯೋಗ ಮಾಡುವ ಅಸಾಸುರರೂ ಸುದ್ದಿಮನೆಯಲ್ಲಿ ಇದ್ದಾರೆ ಎಂದರೆ ನೀವು ನಂಬಬೇಕು.
ಒಬ್ಬ ಬರಹಗಾರ ಬರೆದ ವಿಚಾರಕ್ಕೆ ಚ್ಯುತಿ ಬರದಂತೆ ಎಡಿಟ್ ಮಾಡುವುದು ಅತ್ಯಗತ್ಯ. ನಂತರ ಎಡಿಟ್ ಮಾಡಿದ್ದು ಬರಹಗಾರನಿಗೆ ನೋವು ಉಂಟು ಮಾಡಬಾರದು. ಈ ಅಂಶವನ್ನು ಪಾಲಿಸುವುದು ತುಂಬಾ ಕಷ್ಟ. ಎಷ್ಟೋ ಸಲ ಎಡಿಟ್ ಮಾಡಿದ್ದು ಚೆನ್ನಾಗಿದ್ದರೂ ಬರಹಗಾರನಿಗೆ ಮಾತ್ರ ತಾನು ಬರೆದಿದ್ದೇ ಚೆನ್ನಾಗಿತ್ತು ಅನ್ನಿಸುತ್ತಿರುತ್ತೆ. ಇಂಥ ಸಂದರ್ಭದಲ್ಲಿ ಬರಹಗಾರನನ್ನು ತೃಪ್ತಿಪಡಿಸೋದು ತುಂಬಾ ಕಷ್ಟ. ಬರಹಗಾರನಿಗೆ ಖುಷಿಯಾಗುವಂತೆ ಎಡಿಟ್ ಮಾಡಬಲ್ಲ ಸಂಪಾದಕರು, ಉಪಸಂಪಾದಕರು ಬಹಳ ವಿರಳ. ನಾನು ಡಿಗ್ರಿ ಓದುತ್ತಿದ್ದಾಗ ಹಿರಿಯ ಪತ್ರಕರ್ತ ಮಿತ್ರರಾದ ಸುಧೀಂದ್ರ ಕಂಚಿತೋಟ ಅವರು ‘ಗರ್ವ’ ಎಂಬ ಪತ್ರಿಕೆಯೊಂದನ್ನು ನಡೆಸುತ್ತಿದ್ದರು. ಆಗೆಲ್ಲ ನಮಗೆ ಬರವಣಿಗೆಯ ವಿಪರೀತ ಹುಚ್ಚು. ಸುಮ್ಮನೆ ಕಾಲೇಜು ಗೆಳತಿಯ ಒಂದು ಕಾಲ್ಪನಿಕ ಲೇಖನ ಬರೆದು ಕಳಿಸಿದ್ದೆ. ಅದು ಪತ್ರಿಕೆಯಲ್ಲಿ ಎಡಿಟ್ ಆಗಿ ಪ್ರಕಟವಾಯಿತು. ಎಡಿಟಿಂಗ್ ಎಷ್ಟು ಸುಂದರವಾಗಿತ್ತೆಂದರೆ, ಛೇ ನಾನು ಹೀಗೆ ಬರೆಯಬಹುದಿತ್ತಲ್ಲ ಅಂತ ಅನ್ನಿಸಿಬಿಟ್ಟಿತ್ತು. ನಾನು ನನ್ನ ಲೇಖನದಲ್ಲಿ ನೋಡಿದ ಅತ್ಯುತ್ತಮ ಎಡಿಟಿಂಗ್ ಅದು. ನನ್ನ ಬರಹಕ್ಕೆ ಒಂಚೂರು ಚ್ಯುತಿ ಬರದಂತೆ ಲೇಖನಕ್ಕೊಂದು ಹೊಸ ಆಯಾಮ ಕೊಟ್ಟಿದ್ದರು. ಆ ಲೇಖನವನ್ನು ನಾನು ಇವತ್ತಿಗೂ ಎತ್ತಿಟ್ಟುಕೊಂಡಿದ್ದೇನೆ. ದುರಾದೃಷ್ಟವಶಾತ್ ಕಂಚಿತೋಟರಂಥ ಸಂಪಾದಕರು ಮುದ್ರಣ ಮಾಧ್ಯಮದಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ.
ನನ್ನ ಪತ್ರಿಕೋದ್ಯಮ ವೃತ್ತಿ ಬದುಕು ಶುರುವಾಗಿದ್ದು ‘ಓಮನಸೆ’ ಪತ್ರಿಕೆಯಿಂದ. ನಾನು ಆ ಪತ್ರಿಕೆ ಸೇರಿದಾಗ ಇದ್ದಿದ್ದು ಶರತ್ ಕಲ್ಕೋಡ್ ಮತ್ತು ಗೆಳೆಯ ರವಿ ಅಜ್ಜಿಪುರ. ಟ್ರಾನ್ಸ್‌ಲೇಷನ್ ಆಗ ನನ್ನ ಪಾಲಿಗೆ ಹೊಸತು. ಟ್ರಾನ್ಸ್‌ಲೆಟ್ ಮಾಡಿದ ಲೇಖನವನ್ನು ರವಿ ಅಜ್ಜಿಪುರ ತಿದ್ದುತ್ತಿದ್ದರು. ಬಹುಶಃ ನಾನು ಕಂಡ ಮತ್ತೊಬ್ಬ ಒಳ್ಳೆಯ ಎಡಿಟರ್ ಅಂದ್ರೆ ಅಜ್ಜಿಪುರ. ಟ್ರಾನ್ಸ್‌ಲೇಟ್ ಮಾಡಿದ ಲೇಖನವನ್ನು ಅದೆಷ್ಟು ಸೊಗಸಾಗಿ ಆ ಪತ್ರಿಕೆಯ ಭಾಷೆಗೆ ತಿದ್ದುತ್ತಿದ್ದರು ಅಂದ್ರೆ, ಅದನ್ನು ಮತ್ತೊಮ್ಮೆ ಓದಬೇಕು ಅನ್ನಿಸುತ್ತಿತ್ತ್ತು. ಹೆಚ್ಚಾಗಿ ಪತ್ರಿಕೆಯಲ್ಲಿ ಪ್ರಧಾನ ಸಂಪಾದಕರ ಸ್ಥಾನದಲ್ಲಿ ಕುಳಿತವರು ಸಾಮಾನ್ಯ ಬರಹಗಾರನ ಬರಹವನ್ನು ನೋಡುವುದಿಲ್ಲ. ಉಪ ಸಂಪಾದಕರು, ಆ ಪುಟದ ಮುಖ್ಯಸ್ಥರುಗಳೇ ಲೇಖನ ತಿದ್ದಿ, ತೀಡುತ್ತಾರೆ.
ಇಂಥ ಸಮಯದಲ್ಲಿ ಹಲವು ಎಡವಟ್ಟುಗಳು ಆಗುತ್ತವೆ ಎಂಬುದು ಒಂದು ಆಯಾಮವಾದರೆ, ಕೆಲ ಲೇಖಕರು ಅತ್ಯಂತ ಕೆಟ್ಟದಾಗಿ ಬರೆದು ಕಳುಹಿಸುತ್ತಾರೆ ಎಂಬುದು ಸುಳ್ಳಲ್ಲ. ಯಾವುದೇ ಒಂದು ಪುಟಕ್ಕೆ ಅದರದ್ದೇ ಆದ ಇತಿಮಿತಿಗಳಿರುತ್ತವೆ. ಇಂಥದ್ದೆ ವಿಚಾರದ ಲೇಖನಗಳನ್ನು ಪ್ರಕಟಿಸಬೇಕು ಎಂಬ ನಿಲುವು ಇರುತ್ತದೆ. ಲೇಖಕರು ಕಳುಹಿಸಿದ ಲೇಖನಕ್ಕೂ, ಆ ಪುಟದ ಧೋರಣೆಗೂ ಎಷ್ಟೋ ಸಲ ಸಂಬಂಧವೇ ಇರುವುದಿಲ್ಲ. ಆದಾಗ್ಯೂ ಅಂಥ ಲೇಖನಗಳನ್ನು ಸಂಪಾದಿಸಿ ಪ್ರಕಟಿಸಲೇಬೇಕಾದ ಅನಿವಾರ್ಯತೆ ಇರುತ್ತದೆ. ಉದಾಹರಣೆಗೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರೆಯುವವರು ವಿರಳ. ಆಗ ಯಾರೋ ಒಬ್ಬ ಬರೆದಿರುತ್ತಾನೆ. ಅದಕ್ಕೂ ಪುಟಕ್ಕೂ ಸಂಬಂಧವಿಲ್ಲದಿದ್ದರೂ, ಲೇಖನಕ್ಕೂ ರಿಯಲ್‌ಎಸ್ಟೇಟ್‌ಗೂ ಸ್ವಲ್ಪ ಸಾಮ್ಯತೆ ಇರುತ್ತೆ. ಅಂಥ ಸಮಯದಲ್ಲಿ ಆ ಬರಹವನ್ನು ಹಾಕಲೇಬೇಕಾಗುತ್ತದೆ. ಪ್ರಕಟಿಸಿದರೆ ಮಾತ್ರ ಮುಂದಿನ ವಾರಕ್ಕೆ ಆತನಿಂದ ಅದೇ ಪುಟಕ್ಕೆ ಇನ್ನೊಂದು ಆಹಾರ ನಿರೀಕ್ಷಿಸಬಹುದು! ಇದು ಸುದ್ದಿ ಮನೆಯ ಒಳಗೆ ಕುಳಿತವರ ಸಮಸ್ಯೆ. ಆಗ ನಮಗೆ ಎಷ್ಟೋ ಸಲ ಅನ್ನಿಸುತ್ತೆ, ಇದಕ್ಕಿಂತ ಹೊಸ ಲೇಖನ ಬರೆಯುವುದೇ ಲೇಸು ಅಂತ. ಆದ್ರೂ ನಾವು ತಾಳ್ಮೆಯಿಂದ, ಜಾಣ್ಮೆಯಿಂದ ಅದನ್ನು ಎಡಿಟ್ ಮಾಡಿ ಹಾಕುತ್ತೇವೆ.
ಬರೆಯುವವರಲ್ಲಿ ಅನೇಕರಿಗೆ ತಾವು ಯಾವ ಪುಟಕ್ಕೆ ಬರೆಯುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ. ‘ಇದನ್ನು ನಿಮ್ಮ ಪತ್ರಿಕೆಯ ಯಾವುದಾದರೂ ಪುಟಕ್ಕೆ ಪರಿಗಣಿಸಿ’ ಎಂದು ಬರೆದು ಕಳುಹಿಸಿರುತ್ತಾರೆ. ಇಂಥ ಬರಹಗಳು ಅತಿಯಾಗಿ ತಲೆ ಕೆಡಿಸುತ್ತವೆ. ಬರೆಯುವ ಕುರಿತು ಇನ್ನೊಮ್ಮೆ ಮಾತನಾಡೋಣ. ಹೀಗೆ ತಲೆ ಕೆಡಿಸಿದ ಒಂದು ಲೇಖನ ಎಡಿಟ್ ಮಾಡಿಬಿಟ್ಟರೆ, ಮುಂದಿನ ಲೇಖನದ ಕಥೆ ಗೋವಿಂದ! ಇದೊಂಥರ  ಮೇಷ್ಟ್ರು, ಮನೆಯಲ್ಲಿ ಹೆಂಡ್ತಿ ಜೊತೆ ಜಗಳ ಆಡಿಕೊಂಡು ಬಂದು ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದಂತೆ ಸರಿ.
ಸುಂಧೀಂದ್ರ ಭಟ್ಟರು ಅಂತೊಬ್ಬರು ಉಪಸಂಪಾದಕರಿದ್ದಾರೆ. ಅವರು ಬಹಳ ಹಿಂದೆ ಅಂಗಿಯ ಬಗ್ಗೆ ಒಂದು ಲೇಖನ ಬರೆದು ಪತ್ರಿಕೆಯೊಂದಕ್ಕೆ ಕಳುಹಿಸಿದ್ದರು. ಅದು ಪ್ರಕಟವಾಗಿರಲಿಲ್ಲ. ೪ ತಿಂಗಳು ಬಿಟ್ಟು ಮತ್ತೆ ಅದೇ ಲೇಖನವನ್ನು ಅದೇ ಪತ್ರಿಕೆಗೆ ಕಳುಹಿಸಿದರು. ಈ ಸಲ ಲೇಖನ ಪ್ರಕಟವಾಯ್ತು. ನಮಗೆ ಅಚ್ಚರಿಯ ಮೇಲೆ ಅಚ್ಚರಿ. ಕೊನೆಗೆ ಗೊತ್ತಾಗಿದ್ದು ಏನಂದ್ರೆ, ೨ನೇ ಸಲ ಲೇಖನ ಕಳುಹಿಸಿದಾಗ ಆ ಪುಟದ ಮುಖ್ಯಸ್ಥರು ಬದಲಾಗಿದ್ದರು! ಕೆಲವೊಮ್ಮೆ ಹೀಗೂ ಆಗುತ್ತೆ!!! ಒಬ್ಬರು ರಿಜೆಕ್ಟ್ ಮಾಡಿದ ಲೇಖನವನ್ನು ಮೊತ್ತೊಬ್ಬರು ಚೆಂದವಾಗಿ ಎಡಿಟ್ ಮಾಡಿ ಹಾಕಬಹುದು.
ಬರೆಯುವವರು ಆ ಪುಟದ ಮಿತಿ, ಅಲ್ಲಿನ ವಿಚಾರಗಳು, ಸಿದ್ದಾಂತ/ಧ್ಯೇಯಗಳನ್ನು ಗಮನಿಸಿ ಬರೆಯಬೇಕು ಮತ್ತು ಬರೆಯಲೇಬೇಕು. ಯಾಕಂದ್ರೆ ಪತ್ರಿಕೆ ಅದನ್ನು ಅಪೇಕ್ಷಿಸುತ್ತದೆ. ಇದಕ್ಕೆ ನಿಮ್ಮ ಸಹಮತವಿಲ್ಲದಿದ್ದರೆ, ನೀವು ಬರೆಯದಿದ್ದರಾಯ್ತು ಅಷ್ಟೆ!  ಎಲ್ಲ ಸಲವು ಉಪಸಂಪಾದಕರದ್ದೇ ತಪ್ಪು ಅನ್ನಲು ಸಾಧ್ಯವಿಲ್ಲ. ಹೆಚ್ಚಿನ ಸಲ ಬರಹಗಾರರ ತಪ್ಪುಗಳು ಇರುತ್ತೆ. ಕೆಲವು ಸಲ ಉಪಸಂಪಾದಕರ ತಪ್ಪಿರುತ್ತೆ. ಲೇಖನ ಸಂಪಾದಿಸುವ ಸಂಪಾದಕರುಗಳು ಸಾಕಷ್ಟಿದ್ದಾರೆ. ಆದರೆ ಲೇಖನವೊಂದನ್ನು ಅದ್ಭುತವಾಗಿಸಬಲ್ಲ ಸಂಪಾದಕರು ತೀರಾ ವಿರಳ ಎಂಬುದನ್ನು ಮೊದಲೇ ಹೇಳಿದೆ. ಆದರೆ ನೀವು ನಿರಂತರವಾಗಿ ಬರೆಯುತ್ತಿದ್ದರೆ, ನಾಲ್ಕಾರು ಸಲ ನಿಮ್ಮ ಹೆಸರು ಪತ್ರಿಕೆಯಲ್ಲಿ ಪ್ರಕಟವಾದರೆ ನಂತರ ನಿಮ್ಮ ಲೇಖನಗಳಿಗೆ ಕತ್ತರಿ ಪ್ರಯೋಗ ನಿಧಾನವಾಗಿ ಕಡಿಮೆಯಾಗುತ್ತದೆ. ಯಾಕೆಂದರೆ ನಿಮ್ಮ ಬರವಣಿಗೆ ಮೇಲೆ ಅವರಿಗೆ ನಂಬಿಕೆ ಬರುತ್ತದೆ. ಹೀಗಾಗಿ ಬರೆಯುವುದನ್ನು ನಿಲ್ಲಿಸಬೇಡಿ. ಬರೆಯುತ್ತಿರುವ ವೇದಿಕೆಯ ಇತಿಮಿತಿಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ಲೇಖನ ತಿದ್ದುವವರು ಸ್ವಲ್ಪ ಕಾಳಜಿ ಇಟ್ಟು ಎಡಿಟ್ ಮಾಡಲಿ.

Read Full Post »

ಅಂತೂ ಕರ್ನಾಟಕದ ರಾಜಕೀಯ ಪ್ರಹಸನಕ್ಕೆ ತೆರೆ ಬಿದ್ದಿದೆ. ಕಿತ್ತಾಟ, ಜಗಳ, ಭ್ರಷ್ಟಾಚಾರ ಎಲ್ಲವಕ್ಕೂ ತಕ್ಕ ಉತ್ತರ ಸಿಕ್ಕಿದೆ. ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್, ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿಯೂ ಆಗಿದೆ. ಇನ್ನಾದ್ರೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಬಹುದೇನೋ ಎಂಬುದು ಹಲವರ ನಿರೀಕ್ಷೆ. ಆದರೆ ಈ ನಿರೀಕ್ಷೆ ಹುಸಿಯಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ! ೫೦ ವರ್ಷಗಳಲ್ಲಿ ದೇಶದಲ್ಲಿ ಏನೂ ಬದಲಾವಣೆ ಮಾಡದ ಕಾಂಗ್ರೆಸ್ ೫ ವರ್ಷದಲ್ಲಿ ಏನು ಕಡಿದು ಕಟ್ಟೆ ಹಾಕುತ್ತೆ ಅಂತ ಕೆಲವರು ರಾಗ ಎಳೆಯುತ್ತಿದ್ದಾರೆ. ‘ಕ್ಷಮಿಸಿ, ಇನ್ನು ೫ ವರ್ಷಗಳ ಕಾಲ ಕರ್ನಾಟಕದ ಆಡಳಿತವನ್ನು ದಿಲ್ಲಿಗೆ ಹಸ್ತಾಂತರಿಸಲಾಗಿದೆ!’ ಎಂದು ವಿಧಾನಸೌಧದ ಮುಂದೆ ಒಂದು ಬೋರ್ಡ್ ಬರೆಸಲಾಗುತ್ತಿದೆಯಂತೆ! ಹಾಗಂತ ಕೆಲವರು ಆಡಿಕೊಳ್ಳುತ್ತಿದ್ದಾರೆ. ವಿಧಿಯಿಲ್ಲದೆ ಜನ ಕಾಂಗ್ರೆಸ್ ಆರಿಸಿದ್ದಾರೆ ಹೊರತು, ಇದು ಕಾಂಗ್ರೆಸ್‌ನ ಗೆಲುವಲ್ಲ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.
ಜನ ಹೀಗೆ ಆಡಿಕೊಳ್ಳಲಿಕ್ಕೂ ಹಲವಾರು ಕಾರಣಗಳಿವೆ. ಕರ್ನಾಟಕ ಏಕೀಕರಣದ ನಂತರ ೩೮ ವರ್ಷಗಳ ಕಾಲ ರಾಜ್ಯವನ್ನು ಆಳಿದ ಬಹುದೊಡ್ಡ ಪಕ್ಷ ಕಾಂಗ್ರೆಸ್. ೧೯೫೬ರಿಂದ ೧೯೭೧ರವರೆಗೆ, ಅಂದರೆ ನಿರಂತರವಾಗಿ ೧೫ ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ ನಿಜಲಿಂಗಪ್ಪನವರಿಂದ ಶುರುವಾದ ಕಾಂಗ್ರೆಸ್ ಆಡಳಿತ ವೀರೇಂದ್ರ ಪಾಟೀಲರವರೆಗೆ ಮುಂದುವರಿಯುತ್ತೆ. ಬಂಡಾಯ, ಆಂತರಿಕ ಕಲಹದ ನಡುವೆಯೂ ಮತ್ತೆ ಕಾಂಗ್ರೆಸ್‌ನ್ನು ಜನ ಗೆಲ್ಲಿಸುತ್ತಾರೆ. ದೇವರಾಜ್ ಅರಸು ೧೯೭೨ರಲ್ಲಿ ಮುಖ್ಯಮಂತ್ರಿಯಾಗುತ್ತಾರೆ. ಮುಂದಿನ ಅವಧಿಯಲ್ಲೂ ಅವರೇ ಸಿಎಂ ಆಗಿ ಮರು ಆಯ್ಕೆಗೊಳ್ಳುತ್ತಾರೆ. ಆದರೆ ಎರಡನೇ ಅವಧಿಯಲ್ಲಿ ಹೆಚ್ಚು ಕಾಲ ಉಳಿಯದ ಅರಸು, ಗುಂಡುರಾವ್‌ಗೆ ಅಧಿಕಾರ ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ವಾಸ್ತವವಾಗಿ ಕರ್ನಾಟಕ ಬೇರೆ ಪಕ್ಷದ ತೆಕ್ಕೆಗೆ ಬಂದಿದ್ದು ೧೯೮೩ರಲ್ಲಿ. ಜನತಾಪರಿವಾರದಿಂದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗುತ್ತಾರೆ. ೧೯೫೬ರಿಂದ ೧೯೮೩ರ ಜನವರಿ.೬ರವರೆಗೂ, ಅಂದರೆ ೨೭ ವರ್ಷಗಳ ಕಾಲ ನಮ್ಮ ರಾಜ್ಯ ಕಾಂಗ್ರೆಸ್ ಕೈಯಲ್ಲಿತ್ತು. ಏಕೀಕರಣದ ನಂತರ ೬ ಜನ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಹುದ್ದೆಗೆ ಏರಿದ್ದಾರೆ. ಆದರೆ ನಮ್ಮ ರಾಜ್ಯ ಆವತ್ತು ಎಷ್ಟು ಅಭಿವೃದ್ಧಿ ಆಗಿತ್ತು ಅನ್ನುವುದು ಮಾತ್ರ ಕೇಳಬಾರದ ಪ್ರಶ್ನೆ!
ಜನತಾ ಪರಿವಾರದ ಒಳಜಗಳ ಅಧಿಕಾರವನ್ನು ಹೆಚ್ಚು ಕಾಲ ಉಳಿಯಲು ಬಿಡುವುದಿಲ್ಲ. ೧೯೮೩ರಿಂದ೮೫ರವರೆಗೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ, ವಿಧಾನಸಭೆಯನ್ನು ವಿಸರ್ಜಿಸಿ ಮತ್ತೆ ೧೯೮೫ರಲ್ಲಿ ಸಿಎಂ ಸ್ಥಾನಕ್ಕೆ ಏರುತ್ತಾರೆ. ಆದರೆ ಇಲ್ಲಿ ಅವರು ಅಧಿಕಾರದಲ್ಲಿ ಉಳಿಯುವುದು ಕೇವಲ ೩೪೨ ದಿನ ಮಾತ್ರ. ಜನತಾ ಪರಿವಾರದ ಒಳಜಗಳದಿಂದಾಗಿ ಮುಂದಿನ ೨೮೧ ದಿನಗಳ ಕಾಲ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿರುತ್ತಾರೆ.
ಇವತ್ತಿನ ಸ್ಥಿತಿಯಂತೆ ಆವತ್ತಿನ ಜನತಾಪರಿವಾರದ ಜಗಳ ಕಾಂಗ್ರೆಸ್‌ಗೆ ಮತ್ತೆ ಲಾಭ ಮಾಡಿಕೊಡುತ್ತದೆ. ೧೯೮೯ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಿತ್ತಾಟ, ಗುದ್ದಾಟದ ನಡುವೆ ೩ ಮುಖ್ಯಮಂತ್ರಿಗಳೊಂದಿಗೆ ೫ ವರ್ಷವನ್ನು ಪೂರೈಸುತ್ತದೆ. ಒನ್ಸ್ ಅಗೈನ್ ಈ ಕಿತ್ತಾಟದ ಲಾಭವನ್ನು ಜನತಾದಳ ಪಡೆದುಕೊಳ್ಳುತ್ತದೆ. ೧೯೯೪ರಲ್ಲಿ ದೇವೆಗೌಡರು ಸಿಎಂ ಆಗುತ್ತಾರೆ. ಅದೃಷ್ಟ ಖುಲಾಯಿಸಿ ಪ್ರಧಾನಿ ಕುರ್ಚಿ ಕರೆದಾಗ ಗೌಡರು ಸಿಎಂ ಸ್ಥಾನವನ್ನು ಜೆ.ಎಚ್.ಪಟೇಲರಿಗೆ ಬಿಟ್ಟು ಹೋಗುತ್ತಾರೆ. ಆದರೆ ನಂತರದ ಚುನಾವಣೆಯಲ್ಲಿ ಮತ್ತೆ ಜನ ಕಾಂಗ್ರೆಸ್‌ನತ್ತ ಒಲವು ತೋರುತ್ತಾರೆ. ೧೯೯೯ರಲ್ಲಿ ಜಯಭೇರಿ ಭಾರಿಸಿದ ಕಾಂಗ್ರೆಸ್ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಸರ್ಕಾರ ರಚಿಸುತ್ತದೆ. ಮತ್ತೆ ೨೦೦೪ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ಬಹುಮತ ಬರುವುದಿಲ್ಲ. ಹೀಗಾಗಿ ಜೆಡಿಎಸ್ ಜೊತೆ ಮೈತ್ರಿಯೊಂದಿಗೆ ಧರ್ಮಸಿಂಗ್ ಸಿಎಂ ಆಗುತ್ತಾರೆ. ಒಂದೂ ಮುಕ್ಕಾಲು ವರ್ಷ ಕಳೆಯುವ ಹೊತ್ತಿಗೆ ಕೈ ಎತ್ತಿದ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈಜೋಡಿಸಿ ಟ್ವೆಂಟಿ-೨೦ ಸರ್ಕಾರ ರಚಿಸುತ್ತಾರೆ. ಇಲ್ಲಿ ಯಡಿಯೂರಪ್ಪಗೆ ಮೋಸ ಮಾಡಿದ ಆರೋಪಕ್ಕೆ ಗುರಿಯಾಗುತ್ತಾರೆ.
ಪರಿಣಾಮವಾಗಿ ೨೦೦೮ರ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸುತ್ತೆ. ನಂತರ ನಡೆದಿದ್ದು ರಾಜಕೀಯ ಪ್ರಹಸನ. ಏಕೀಕರಣದ ನಂತರ ೧೯೮೩-೮೯ರವರೆಗೆ, ೧೯೯೪-೯೯ರವರೆಗೆ, ೨೦೦೬-೨೦೦೯ರವರೆಗೆ, ೨೦೦೯-೧೩ರವರೆಗೆ ಒಟ್ಟಾರೆಯಾಗಿ ೧೯ ವರ್ಷ ಮಾತ್ರ ಕರ್ನಾಟಕದಲ್ಲಿ ಕಾಂಗ್ರೆಸ್‌ಯೇತರ ಸರ್ಕಾರ ಅಸ್ತಿತ್ವದಲ್ಲಿ ಇದಿದ್ದು. ಉಳಿದ ೩೮ ವರ್ಷಗಳ ಕಾಲ ಕಾಂಗ್ರೆಸ್ ನಮ್ಮ ರಾಜ್ಯವನ್ನು ಆಳಿದೆ. ದುರಂತವೆಂದರೆ ಮುಖ್ಯಮಂತ್ರಿ ಕುರ್ಚಿಗೆ ಏರಿದ ದಿಗ್ಗಜರ ಕ್ಷೇತ್ರವೇ ಇನ್ನೂ ಅಭಿವೃದ್ಧಿಗೊಂಡಿಲ್ಲ! ಇದು ಕಾಂಗ್ರೆಸ್ ವಿರೋಧಿಯೋ ಅಥವ ಬಿಜೆಪಿ, ಜೆಡಿಎಸ್ ಪರವೋ ಅಲ್ಲ. ರಾಜ್ಯದ ವಾಸ್ತವ ಚಿತ್ರಣ.
ಅಭಿವೃದ್ಧಿ ವಿಚಾರ ಬಂದಾಗ ನಾವು ಗುಜರಾತ್ ಕುರಿತು ಮಾತನಾಡುತ್ತೇವೆ. ಮೋದಿ ಆಡಳಿತ ಬಂದ ನಂತರ ಗುಜರಾತ್ ಅಭಿವೃದ್ಧಿಯಾಗಿರುವುದು ಇದಕ್ಕೆ ಬಹುಮುಖ್ಯ ಕಾರಣ. ಕಳೆದ ವರ್ಷ ಇಂಡಿಯಾ ಟುಡೆ ಮಾಡಿದ ಸಮೀಕ್ಷೆ ಪ್ರಕಾರ ಗುಜರಾತ್ ಅಭಿವೃದ್ಧಿಯಲ್ಲಿ ನಂಬರ್ ಒನ್ ರಾಜ್ಯ. ಕೇರಳಕ್ಕೆ ೨ನೇ ಸ್ಥಾನ. ಕರ್ನಾಟಕ ೧೦ನೇ ಸ್ಥಾನದಲ್ಲಿದೆ. ಇನ್ನೂ ಅಭಿವೃದ್ಧಿಗೆ ಪ್ರಮುಖವಾದ ಮಾನದಂಡ ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್‌ನ ವರದಿ. ರಾಜ್ಯದ ಜನಸಂಖ್ಯೆ, ಆದಾಯ, ಜಿಡಿಪಿ ಎಲ್ಲವನ್ನೂ ನಿರ್ಧರಿಸಿ ಈ ಸೂಚ್ಯಂಕ ಹೊರಬರುತ್ತದೆ. ಇದರಲ್ಲಿ ಕರ್ನಾಟಕಕ್ಕೆ ೧೨ನೇ ಸ್ಥಾನ. ಕೇರಳ ಮತ್ತು ದಿಲ್ಲಿ ಮೊದಲೆರಡು ಸ್ಥಾನಗಳಲ್ಲಿವೆ. ಯಾವ ಅಂಕಿ-ಅಂಶಗಳನ್ನು ತೆಗೆದು ನೋಡಿದರೂ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕಕ್ಕೆ ೧೦ರ ನಂತರದ ಸ್ಥಾನವೇ!
ವಿಸ್ತೀರ್ಣದಿಂದ ದೇಶದ ೮ನೇ ಬಹುದೊಡ್ಡ ರಾಜ್ಯ ನಮ್ಮದು. ಆದಾಗ್ಯೂ ಅಭಿವೃದ್ಧಿಯ ವಿಚಾರದಲ್ಲಿ ಬಹಳಷ್ಟು ಹಿಂದಿದ್ದೇವೆ. ಉತ್ತರ ಕರ್ನಾಟಕದ ಬಹುಭಾಗದಲ್ಲಿ ಅನ್ನಕ್ಕಿಂತ ಹೆಚ್ಚಾಗಿ ನೀರಿನ ಸಮಸ್ಯೆ. ಅಕ್ಕಿ ಸಿಕ್ಕರೂ ನೀರು ಸಿಗುವುದಿಲ್ಲ. ಇನ್ನೂ ಕೋಲಾರ, ಚಿಕ್ಕಬಳ್ಳಾಪುರದ ಕಡೆಗೂ ಕುಡಿಯುವ ನೀರಿಗೆ ಹಾಹಾಕಾರ. ಸರ್ಕಾರ ಮೊದಲು ಕುಡಿಯುವ ನೀರಿನ ಪೂರೈಕೆ ಮಾಡಬೇಕಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ೧ ರೂಪಾಯಿ ಕೆ.ಜಿ. ಅಕ್ಕಿ ಘೋಷಿಸಿದ್ದಾರೆ. ಇದು ವಾದ-ವಿವಾದಕ್ಕೆ ಕಾರಣವಾಗಿದೆ. ಬಡವರಿಗೆ ೧ ರೂಪಾಯಿಗೆ ಅಕ್ಕಿ ನೀಡುವುದು ಖಂಡಿತ ಉತ್ತಮ ನಿರ್ಧಾರ. ಆದರೆ ಆ ಅಕ್ಕಿ ತಿನ್ನಲು ಯೋಗ್ಯವಾಗಿರುತ್ತದೆಯಾ ಎಂಬುದು ಬಹುದೊಡ್ಡ ಪ್ರಶ್ನೆ. ಬಿಜೆಪಿ ಸರ್ಕಾರ ಕೂಡ ೩ ರೂಪಾಯಿಗೆ ಅಕ್ಕಿ ಘೋಷಿಸಿತ್ತು. ರೇಷನ್ ಕಾರ್ಡ್ ಹಿಡಿದು ನ್ಯಾಯಬೆಲೆ ಅಂಗಡಿ ಮುಂದೆ ನಿಂತಾಗಲೇ ಈ ಅಕ್ಕಿಯ ಯೋಗ್ಯತೆ ಗೊತ್ತಾಗುವುದು. ಹಲವು ಕಡೆ ದನ ತಿನ್ನಲು ಯೋಗ್ಯವಲ್ಲದ ಅಕ್ಕಿ ಪೂರೈಕೆಯಾಗುತ್ತದೆ. ಸೊಸೈಟಿ ಅಕ್ಕಿ ಸಹವಾಸ ಬೇಡಪ್ಪ ಅಂತ ಜನ ಆಡಿಕೊಳ್ಳುತ್ತಾರೆ. ಅಂಥ ಅಕ್ಕಿಯನ್ನು ೧ ರೂಪಾಯಿಗೆ ಕೊಡುವ ಬದಲು ತಿನ್ನಲು ಯೋಗ್ಯವಾದ ಅಕ್ಕಿಯನ್ನು ೬ ರೂಪಾಯಿ ಕೆಜಿಗೆ ಕೊಟ್ಟರೂ ಪರ್ವಾಗಿಲ್ಲ ಅನ್ನೋದು ಬಡವರ ವಾದ.
ಅಕ್ಕಿ ಕೊಟ್ಟರೆ, ಮನೆ ನಿರ್ಮಿಸಿಕೊಟ್ಟರೆ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂಬುದು ಮೂರ್ಖತನ. ಇದು ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಕೊಟ್ಟಿದ್ದೇವೆ ಎಂಬುದನ್ನು ತೋರಿಸಿಕೊಳ್ಳುವ ತಂತ್ರವಷ್ಟೆ. ಊರಿಗೆ ಊರು ಅಭಿವೃದ್ಧಿ ಆಗಬೇಕು. ಕುಡಿಯುವ ನೀರು, ಶಾಲೆ, ಊರಿಗೆ ಸರಿಯಾದ ಸಂಪರ್ಕ, ರಸ್ತೆಗಳು ಬೇಕು. ಇರುವ ಜನರಿಗೆ ಭಿಕ್ಷೆ ರೂಪದಲ್ಲಿ ನೀವು ಏನ್ನನ್ನು ನೀಡುವುದು ಬೇಡ. ದುಡಿಯುವ ಕೈಗಳಿಗೆ ಸೂಕ್ತವಾದ ಕೆಲಸ ಕೊಡಿ. ಅವರಿಗೆ ಆದಾಯದ ಮಾರ್ಗ ಹುಡುಕಿ, ಸರ್ಕಾರವೂ ಅದರಿಂದ ಆದಾಯ ಪಡೆಯಲಿ. ರಾಜ್ಯದ ೨೨೪ ಕ್ಷೇತ್ರವೂ ಏಕಕಾಲಕ್ಕೆ ಅಭಿವೃದ್ಧಿಯಾಗಬೇಕು ಎಂದಲ್ಲ. ಒಂದು ಸರ್ಕಾರದಲ್ಲಿ ಕನಿಷ್ಠ ಒಂದು ಮಾದರಿ ಕ್ಷೇತ್ರವನ್ನಾದರೂ ನಾವು ನಿರೀಕ್ಷಿಸಬಹುದಾ? ಅನೇಕ ಯುವ ರಾಜಕಾರಣಿಗಳು ಈ ಸಲ ವಿಧಾನಸಭೆ ಪ್ರವೇಶಿಸಿದ್ದಾರೆ. ಅಂಥವರಲ್ಲಿ ಒಬ್ಬರ ಕ್ಷೇತ್ರವನ್ನು ನಾವು ಈ ಸಲ ಮಾದರಿ ಕ್ಷೇತ್ರ ಅನ್ನಬಹುದಾ?
ಆ ಕ್ಷೇತ್ರದಲ್ಲಿ ಎಲ್ಲ ಊರಿಗೂ ಸಂಪರ್ಕ ಇರಬೇಕು. ಕುಡಿಯುವ ನೀರಿಗೆ ಕೊರತೆಯಾಗಬಾರದು. ಕನಿಷ್ಠ ದೂರಕ್ಕೊಂದು ಶಾಲೆ ಬೇಕು. ವಿದ್ಯುತ್ ಸಂಪರ್ಕ ಇರಬೇಕು. ರಸ್ತೆ ಉತ್ತಮವಾಗಿರಬೇಕು. ವರ್ಷಕ್ಕೆ ೫ ಕ್ಷೇತ್ರವನ್ನು ಈ ಮಾನದಂಡದಲ್ಲಿ ಅಭಿವೃದ್ಧಿಗೊಳಿಸಿದರೂ ನಮ್ಮ ರಾಜ್ಯ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ. ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತದೆ. ಆದರೆ ಅದರ ಅನುಷ್ಠಾನದ ಕುರಿತು ಮಾತ್ರ ಗಮನಹರಿಸುವುದಿಲ್ಲ. ಯೋಜನೆ ಘೋಷಿಸಿ ಹಣ ಮಂಜೂರು ಮಾಡಿ, ಮಾಧ್ಯಮಗಳ ಮುಂದೆ ಭಾಷಣ ಬಿಗಿದರೆ ಮುಗೀತು ಅನ್ನೋದು ಸರ್ಕಾರಗಳ ಧೋರಣೆ. ಆದರೆ ಆ ಯೋಜನೆಗಳು ಎಷ್ಟರ ಮಟ್ಟಿಗೆ ತಲುಪಬೇಕಾದವರನ್ನು ತಲುಪುತ್ತದೆ ಎಂಬುದು ಮುಖ್ಯ. ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಇದೆ. ಯಾರೂ ಮೃಷ್ಠಾನ ಭೋಜನವನ್ನು ಕೇಳುವುದಿಲ್ಲ. ಕನಿಷ್ಠ ಆರೋಗ್ಯಯುತವಾದ ಊಟ ಎಷ್ಟು ಶಾಲೆಗಳಲ್ಲಿ ಸಿಗುತ್ತಿದೆ ಎಂಬುದನ್ನು ಸರ್ಕಾರ ಒಮ್ಮೆ ಅವಲೋಕಿಸಬೇಕಿದೆ. ಅದೇ ಕಥೆ ಒಂದು ರೂಪಾಯಿ ಕೆಜಿ ಅಕ್ಕಿಗೂ ಮುಂದುವರಿಯುತ್ತದೆ. ಟೆಂಡರ್ ಹಿಡಿದ ದಲ್ಲಾಳಿಗಳು ಯೋಜನೆಯ ಫಲಾನುಭವಿಗಳಾಗುತ್ತಿದ್ದಾರೆ ಹೊರತು ಮತ ಹಾಕಿದ ಜನರಲ್ಲ. ಈ ದುರಂತದಿಂದ ನಮ್ಮ ರಾಜ್ಯ ಪಾರಾಗಬೇಕಿದೆ.
ಸಿದ್ದರಾಮಯ್ಯನವರ ಮುಂದೆ ೨ ಬಹುದೊಡ್ಡ ಸವಾಲುಗಳಿವೆ. ಒಂದು ೩೮ ವರ್ಷಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಏನು ಮಾಡಿಲ್ಲ ಎಂಬ ಆರೋಪವನ್ನು ಹುಸಿಯಾಗಿಸುವುದು. ಎರಡನೇಯದಾಗಿ ಕರ್ನಾಟಕದ ಆಡಳಿತ ದಿಲ್ಲಿಗೆ ಹಸ್ತಾಂತರವಾಗಿಲ್ಲ ಎಂಬುದನ್ನು ಸಾಬೀತುಪಡಿಸುವುದು. ಸಿದ್ದರಾಮಯ್ಯನವರೇ ನಾವು ನಿಮ್ಮಿಂದ ಬೇರೆ ಏನ್ನನ್ನೂ ಅಪೇಕ್ಷಿಸುತ್ತಿಲ್ಲ. ನೀವು ಮುಖ್ಯಮಂತ್ರಿಗಳಾಗಿ ಒಂದು ವರ್ಷ ಕಳೆಯುವುದರೊಳಗೆ ಒಂದು ಮಾದರಿ ಕ್ಷೇತ್ರವನ್ನು ರಾಜ್ಯಕ್ಕೆ ಪ್ರಸ್ತುಪಡಿಸಿ. ಇದನ್ನು ನಿಮ್ಮಿಂದ ನಿರೀಕ್ಷಿಸಬಹುದಾ?

 

 

 

Read Full Post »

ಪೇಪರ್‌ನಲ್ಲಿ ಇದ್ದವರೆಲ್ಲ ಚಾನೆಲ್‌ಗಳಿಗೆ ಹೋಗಿದ್ದಿರಲ್ಲ. ಅಲ್ಲಿ ನಿಮಗೇನು ಕೆಲಸ? ಹಾಗಂತ ಎದುರಿಗೆ ಸಿಕ್ಕ ತುಂಬಾ ಜನ ಕೇಳುತ್ತಿರುತ್ತಾರೆ. ನಾನು ದೃಶ್ಯ ಮಾಧ್ಯಮ ಸೇರುವ ಮೊದಲು ಇದೇ ಪ್ರಶ್ನೆಯನ್ನು ಪತ್ರಿಕೆಯಿಂದ ವಲಸೆ ಹೋದ ವಿಕಾಸ್, ಸುಧ್ವನ ಮೊದಲಾದ ಗೆಳೆಯರಿಗೆ ಕೇಳಿದ್ದೆ. ಹಾಗೆ ನೋಡಿದರೆ ದೃಶ್ಯ ಮಾಧ್ಯಮ ಅನ್ನುವುದು ನಿಂತಿರುವುದೇ ಬರವಣಿಗೆಯಲ್ಲಿ. ಪತ್ರಿಕೆಗೆ ಬರೆದಿದ್ದಕ್ಕಿಂತ ಹೆಚ್ಚು ನಾವಿಲ್ಲ ಬರೆಯುತ್ತೇವೆ. ಆದರೆ ಇಲ್ಲಿನ ಬರವಣಿಗೆಯಿಂದ ಪತ್ರಿಕೆಯಷ್ಟು ಗುರತಿಸಿಕೊಳ್ಳಲು ಸಾಧ್ಯವಿಲ್ಲ.

ಸುದ್ದಿ ವಾಹಿನಿಗಳಿಗೆ ಬಂದರೆ ಇಲ್ಲಿನ ಹೆಚ್ಚು ಕಾರ್ಯಕ್ರಮಗಳು ಸ್ಕ್ರಿಪ್ಟ್ ಆಧಾರಿತವಾಗಿರುತ್ತವೆ. ಒಂದು ಗಂಟೆಗೊಮ್ಮೆ ಬರುವ ಸುದ್ದಿಗಳನ್ನು ಸುದ್ದಿ ವಾಚಕರಿಗೆ ಬರೆದುಕೊಡಲಾಗಿರುತ್ತದೆ. ಹೆಚ್ಚಿನ ಸುದ್ದಿ ವಾಚಕರು ಬರೆದು ಕೊಟ್ಟಿದ್ದನ್ನೇ ಓದುತ್ತಾರೆ ಮತ್ತು ಓದಬೇಕು ಎಂಬುದು ಇಲ್ಲಿನ ನಿಯಮ. ಇದರ ಹೊರತಾಗಿ ನಡೆಯುವ ಚರ್ಚೆಗಳು ಅಥವಾ ಲೈವ್ ಡಿಸ್ಕಷನ್ಸ್ ಎಂದು ಏನು ಕರೆಯುತ್ತೇವೊ, ಅದಕ್ಕೆ ಮಾತ್ರ ವಾರ್ತಾ ವಾಚಕರೇ ಸಿದ್ಧತೆ ನಡೆಸಿ ಪಾಯಿಂಟ್‌ಗಳನ್ನು ಬರೆದುಕೊಂಡಿರುತ್ತಾರೆ. ಇನ್ನೂ ಕಾರ್ಯಕ್ರಮ ವಿಭಾಗದಿಂದ ಪ್ರಸಾರವಾಗುವ ಅರ್ಧ ಗಂಟೆ/ಒಂದು ಗಂಟೆಯ ಹೆಚ್ಚಿನ ಕಾರ್ಯಕ್ರಮಗಳು ಬರವಣಿಗೆ ಆಧರಿಸಿ ಇರುತ್ತದೆ. ಬರಹದ ಮೇಲೆ ಇಡೀ ಕಾರ್ಯಕ್ರಮ ವಿನ್ಯಾಸಗೊಂಡಿರುತ್ತದೆ. ಆದರೆ ಎಲ್ಲೂ ಬರಹಗಾರ ಕಾಣಿಸಿಕೊಳ್ಳುವುದಿಲ್ಲ. ಎಂಡ್ ಟೈಟಲ್‌ನಲ್ಲಿ ಬರಹಗಾರನಿಗೆ ಕಾಣಿಸಿಕೊಳ್ಳುವ ಅವಕಾಶವಿದ್ದರೂ ನಾನಂತೂ ಹೆಚ್ಚಿನ ಕಾರ್ಯಕ್ರಮಗಳಿಗೆ ಎಂಡ್ ಟೈಟಲ್ ಹಾಕಿಸುವುದಿಲ್ಲ.

ನಾನು ವೈಯಕ್ತಿಕವಾಗಿ ದೃಶ್ಯ ಮಾಧ್ಯಮದ ಬರವಣಿಗೆ ರೂಪ ನೋಡಿದ್ದು ಸೇತುರಾಂ ಮೂಲಕ. ಅವರು ‘ಅನಾವರಣ’ ಧಾರವಾಹಿ ಮಾಡುವ ಮೊದಲು ಮಂಥನದ ಸುಮಾರು ೧೦ ಸಂಚಿಕೆಗಳ ಸ್ಕ್ರಿಪ್ಟ್‌ನ್ನು ನನಗೆ ಕೊಟ್ಟಿದ್ದರು. ಆವತ್ತು ಅದರ ತಲೆಬುಡ ನನಗೆ ಅರ್ಥವಾಗಿರಲಿಲ್ಲ! ಯಾಕಂದರೆ ಪೇಪರ್‌ನ ಬರವಣಿಗೆ ಸ್ವರೂಪಕ್ಕೂ, ದೃಶ್ಯ ಮಾಧ್ಯಮದ ಬರವಣಿಗೆ ಸ್ವರೂಪಕ್ಕೂ ಬಹಳ ವ್ಯತ್ಯಾಸವಿದೆ. ಅದನ್ನು ಮತ್ತೆ ವಿಗಂಡಿಸಿದರೆ ಮನರಂಜನೆ ವಾಹಿನಿಗಳ ಬರವಣಿಗೆಗೂ, ಸುದ್ದಿ ವಾಹಿನಗಳ ಬರವಣಿಗೆಗೂ ತುಂಬಾ ವ್ಯತ್ಯಾಸವಿದೆ. ಸಿರಿಯಲ್‌ಗಳು ನಿಂತಿರುವುದೇ ಸ್ಪ್ರಿಪ್ಟ್ ಮೇಲೆ ಎಂದು ಎಲ್ಲ ವಾಹಿನಿಗಳೂ ಹೇಳಿಕೊಳ್ಳುತ್ತವೆ ಎಂಬುದು ನಿಜ. ಆದರೆ ದುರಂತವೆಂಬಂತೆ ಆ ಗೌರವ ಯಾವತ್ತೂ ಬರಹಗಾರನಿಗೆ ದಕ್ಕುವುದಿಲ್ಲ! ಪರಮೇಶ್ವರ್ ಗುಂಡ್ಕಲ್, ವಿನಾಯಕ ತದ್ದಲಸೆಯಂಥ ಒಂದಷ್ಟು ಕಥೆಗಾರರು, ಬರಹದ ಮೌಲ್ಯ ಗೊತ್ತಿದವರೂ ಇವತ್ತು ಮನರಂಜನೆ ವಾಹಿನಿ ಒಳಹೊಕ್ಕಿರುವುದರಿಂದ ತಕ್ಕ ಮಟ್ಟಿಗೆ ಇವತ್ತು ಮನರಂಜನೆ ವಾಹಿನಿಗಳು ಬರಹಗಾರರನ್ನು ಗುರುತಿಸುತ್ತಿವೆ.

ದೃಶ್ಯ ಮಾಧ್ಯಮದ ದೊಡ್ಡ ದುರಂತವೆಂದರೆ ಇದು ಒಬ್ಬರಿಂದ ನಿಯಂತ್ರಣಗೊಳಿಸಲು ಸಾಧ್ಯವಿಲ್ಲ. ಉದಾಹರಣೆಗೆ ಒಂದು ಧಾರಾವಾಹಿಗೆ ಒಂದು ಅದ್ಭುತ ಕಥೆಯಿದೆ. ಡೈಲಾಗ್ ಅದ್ಭುತವಿದೆ. ಆದರೆ ನಾಯಕಿ ಪಾತ್ರಕ್ಕೆ ಆಯ್ಕೆಯಾದವಳಿಗೆ ಆ ಮಟ್ಟಕ್ಕೆ ಅಭಿನಯಿಸಲು ಬರುವುದಿಲ್ಲ. ಆಗ ಬರಹಗಾರ ಬರೆದಿದ್ದೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ ಸರಿ. ನನ್ನ ಈ ವಾದವನ್ನು ಕೆಲವರು ಒಪ್ಪುವುದಿಲ್ಲ. ನಿಮ್ಮ ತಪ್ಪು ಸಮರ್ಥಿಸಿಕೊಳ್ಳಲು ನುಣುಚಿಕೊಳ್ಳುವಿರಿ ಎನ್ನುತ್ತಾರೆ. ಆದರೆ ಸಿರಿಯಲ್ ಅಥವ ಒಂದು ಅರ್ಧ ಗಂಟೆ ಕಾರ್ಯಕ್ರಮದಲ್ಲಿ ‘ಮೇಕಿಂಗ್ ಅನ್ನುವುದು’ ಅತ್ಯಂತ ಮಹತ್ವದ್ದು.

ಅದ್ಭುತವಾದ ಅಡುಗೆ ಸಿದ್ಧವಿದೆ. ಆದರೆ ಬಡಿಸುವವನ ಮೈ-ಕೈ ಎಲ್ಲ ಗಲೀಜಾಗಿದೆ. ಅಡುಗೆಯ ಘಮ ಮೂಗಿಗೆ ಬಡಿಯುತ್ತಿದ್ದರೂ ನಮಗೆ ತಿನ್ನಲು ಒಂಥರ ವಾಕರಿಕೆ ಅಲ್ವಾ? ದೃಶ್ಯ ಮಾಧ್ಯಮ ಕೂಡ ಒಂಥರ ಹಾಗೆ. ಕೆಟ್ಟ ಕಥೆ, ಕೆಟ್ಟ ಡೈಲಾಗ್ ಆದ್ರೆ ಅದ್ಭುತ ಪಾತ್ರವರ್ಗ. ಆಗಲೂ ಒಂದು ಸಿರಿಯಲ್ ಕ್ಲಿಕ್ ಆಗುತ್ತದೆ. ಯಾಕಂದರೆ ಒಬ್ಬ ಸಾಮಾನ್ಯ ನೋಡುಗನ ಮನಸ್ಸಿನಲ್ಲಿ ಅಚ್ಚಿಳಿಯದೆ ಉಳಿಯುವುದು ಪಾತ್ರಗಳು ಮತ್ತು ಕಥೆ ಮಾತ್ರ. ಅದ್ಭುತವಾಗಿದ್ದರೆ ಕೆಲವೊಮ್ಮೆ ಪಾತ್ರಗಳ ಆಡುವ ಮಾತು ಕೂಡ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಪಾತ್ರಧಾರಿಗಳು, ಕ್ಯಾಮೆರ, ವಿಷ್ಯುವಲ್ ಎಡಿಟಿಂಗ್, ನಿರ್ದೇಶನ ಎಲ್ಲವೂ ಸೇರಿ ಒಂದು ಕಾರ್ಯಕ್ರಮ/ಧಾರವಾಹಿ/ಸಿನಿಮಾ ಸಿದ್ಧಗೊಳ್ಳುವುದು. ಯೋಗರಾಜ್ ಭಟ್ಟರಂಥ ನಿರ್ದೇಶಕರು, ಜಯಂತ್ ಕಾಯ್ಕಿಣಿಯಂಥ ಸಾಹಿತಿಗಳು ಇದ್ದಾಗ ನಟ/ನಟಿ, ಕಥೆಯನ್ನು ಹೊರತಾಗಿ ಒಂದು ಹಂತಕ್ಕೆ ಅದ್ಭುತ ಎನ್ನಿಸುವ ಒಂದು ಸಿನಿಮಾ ಹೊರಬರುತ್ತದೆ. ಅದು ಅವರ ವೈಯಕ್ತಿಕ ತಾಕತ್ತು ಅಷ್ಟೆ. ಅಮೀರ್ ಖಾನ್ ಏಕಾಂಗಿಯಾಗಿ ಒಂದು ಸಿನಿಮಾ ಗೆಲ್ಲಿಸಬಹುದು. ಅದು ಆತನ ವೈಯಕ್ತಿಕ ತಾಕತ್ತು. ಆದರೆ ಇಡೀ ದೃಶ್ಯ ಮಾಧ್ಯಮ ಅನ್ನುವುದು ಒಂದು ತಂಡದ ಕೆಲಸ. ಇಲ್ಲಿ ಎಲ್ಲವೂ ಸಮತೂಕದಲ್ಲಿ ಹೋಗಬೇಕು. ಇದು ದೃಶ್ಯ ಮಾಧ್ಯಮದ ಸವಾಲು ಮತ್ತು ಅದ್ಭುತ ಎರಡೂ ಹೌದು.

ಪತ್ರಿಕೆಯಲ್ಲಿ ನಾನೊಂದು ಕಥೆ ಬರೆದರೆ ಅದಕ್ಕೆ ನಾನೇ ಸೂತ್ರಧಾರ. ಅದರ ಚೆನ್ನಾಗಿ ಬಂದರೂ, ಕೆಟ್ಟದಾಗಿ ಬಂದರೂ ಎರಡಕ್ಕೂ ನಾನೇ ನೇರ ಹೊಣೆ. ಆದರೆ ದೃಶ್ಯ ಮಾಧ್ಯಮದಲ್ಲಿ ಹಾಗಲ್ಲ. ಇಲ್ಲಿ ಎಲ್ಲದಕ್ಕೂ ಎಲ್ಲರೂ ಹೊಣೆ. ದುರಂತವೆಂದರೆ ಒಬ್ಬರ ತಲೆ ಮೇಲೆ ಮತ್ತೊಬ್ಬರು ಗೂಬೆ ಕೂರಿಸಿ ನುಣುಚಿಕೊಳ್ಳಲು ದೃಶ್ಯ ಮಾಧ್ಯಮ ಉತ್ತಮ ವೇದಿಕೆಯಾಗಿಬಿಟ್ಟಿದೆ. ಅದೇ ಕಾರಣಕ್ಕೆ ಕೆಲವು ನಿರ್ದೇಶಕರು ಅವರೇ ಸ್ವಂತವಾಗಿ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದುಕೊಳ್ಳುವುದು.

ನಾನು ವೈಯಕ್ತಿಕವಾಗಿ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಾಗ ಅನೇಕರು ‘ಪೇಪರ್‌ಗೆ ಬರೆದಂಗೆ ಇಲ್ಲಿ ಬರೆಯುತ್ತೀಯಾ’ ಅಂತ ಹಿಯ್ಯಾಳಿಸಿದರು. ನಾನು ತೀರಾ ತಲೆಕೆಡಿಸಕೊಳ್ಳಲಿಲ್ಲ. ಕಾರಣವಿಷ್ಟೆ. ಹಾಗೆ ಹೇಳಿವದರು ಎಷ್ಟು ಬರೆದಿದ್ದಾರೆ ಎಂಬುದು ಬಲು ಮುಖ್ಯವಾಗುತ್ತದೆ. ಪುಗ್ಸಟ್ಟೆ ಸಲಹೆ ಕೊಡುವವರು, ಆಡಿಕೊಳ್ಳುವವರಿಗೆ ಬರವಣಿಗೆಯ ಮೌಲ್ಯ ಗೊತ್ತಾಗಲು ಸಾಧ್ಯವಿಲ್ಲ. ಒಬ್ಬ ಬರಹಗಾರನಿಗೆ ಮಾತ್ರ ಬರವಣಿಗೆಯ ಮೌಲ್ಯ ಗೊತ್ತಾಗಲು ಸಾಧ್ಯ. ‘ಓರ್ವ ಬರೆಯುವ ಸಂಪಾದಕರಿದ್ದರೆ ಪತ್ರಿಕೆ ಅದ್ಭುತವಾಗಿ ಮೂಡಿ ಬರಲು’ ಹಾಗಂತ ನಾನು ಸದಾ ಹೇಳುತ್ತಿರುತ್ತೇನೆ. ಕಾರಣವಿಷ್ಟೆ, ಬರೆಯುವ ಸಂಪಾದಕರು ಸುದ್ದಿಮನೆಯೊಳಗಿರುವ ಬರಹಗಾರರನ್ನು ಗುರುತಿಸಿ ಬರೆಸಬಲ್ಲರು. ಒಂದು ಮುಕ್ತ ಚರ್ಚೆಗೆ ವೇದಿಕೆ ಒದಗಿಸಬಲ್ಲರು.

ಚೂರು ವೈಯಕ್ತಿಕ ವಿಚಾರಕ್ಕೆ ಬಂದರೆ ವಿಜಯ ಕರ್ನಾಟಕದ ಸೇರಿದ ಆರಂಭದ ದಿನಗಳಲ್ಲಿ ನನ್ನ ಹೆಚ್ಚಿನ ಬರಹಗಳು ಕೆಲವರಿಂದ ತಿರಸ್ಕೃತಗೊಳ್ಳುತ್ತಿದ್ದವು. ಕೊನೆಗೆ ಆವತ್ತು ಸಂಪಾದಕ ಸ್ಥಾನದಲ್ಲಿ ಕುಳಿತ ವಿಶ್ವೇಶ್ವರ ಭಟ್ಟರ ಬಳಿ ನೇರವಾಗಿ ನನ್ನ ಬರಹಗಳನ್ನು ತೆಗೆದುಕೊಂಡು ಹೋದೆ. ಬಹುಶಃ ಆವತ್ತಿನಿಂದ ಇವತ್ತಿನವರೆಗೂ ನಾನು ನೇರವಾಗಿ ಸಂಪಾದಕರಿಗೆ ನನ್ನ ಬರಹ ಕಳಿಸುತ್ತೇನೆ ಮತ್ತು ತಿರಸ್ಕೃತಗೊಳ್ಳುವುದು ತೀರಾ ವಿರಳ. ಯಾಕೆಂದರೆ ಭಟ್ಟರು ಬರಹದ ದೃಷ್ಟಿಕೋನ ನೋಡುವ ಬಗೆ ನಿಜಕ್ಕೂ ಅದ್ಭುತ.

ಎಲ್ಲರೂ ಮಡೆಸ್ನಾನದ ವಿರುದ್ಧ ಬರೆದಾಗ ನಾನು ಮಡೆಸ್ನಾನ ಸಮರ್ಥಿಸಿ ಬರೆದೆ. ಎಲ್ಲರೂ ವಿರುದ್ಧ ಮಾತನಾಡುತ್ತಿದ್ದಾರೆ, ನಾನೊಬ್ಬ ಪರ ಮಾತನಾಡಿದರೆ ನನಗೆ ಹೆಚ್ಚು ಪ್ರಚಾರ ಸಿಗಬಹುದು ಎನ್ನುವ ದುರುದ್ದೇಶದಿಂದ ಅದನ್ನು ಬರೆದಿರಲಿಲ್ಲ. ಬದಲಾಗಿ ಅಲ್ಲಿನ ಅನೇಕ ಸ್ಥಳೀಯ ಮಿತ್ರ ಅಭಿಪ್ರಾಯ ಒಟ್ಟಿಗೆ ಸೇರಿಸಿ ಬರೆದೆ. ಒಂದು ವಿಚಾರಕ್ಕೆ ಪರ ಮತ್ತು ವಿರೋಧ ಎಂಬ ೨ ಮುಖಗಳು. ಭಟ್ಟರ ಮುಂದೆ ಬರಹವನ್ನಿಟ್ಟು ನಾನು ಹೇಳಿದ್ದು ಇದೇ ಮಾತನ್ನು. ‘ಏನಾದ್ರೂ ಆಗಲಿ ಧೈರ್ಯ ಮಾಡಿ ಇದೊಂದು ಮುಖವನ್ನು ಪ್ರಕಟಿಸೋಣ’ ಎಂದರು. ನೀವೂ ನಂಬುತ್ತೀರೋ, ಬಿಡುತ್ತಿರೊ ಗೊತ್ತಿಲ್ಲ, ಆ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ನಿಜಕ್ಕೂ ನನ್ನ ಪಾಲಿಗೆ ದಾಖಲೆ. ಬಹುಶಃ ಬಹುತೇಕ ಪತ್ರಿಕೆಗಳು ಮಡೆಸ್ನಾನದ ಪರವಾದ ಬರಹ ಪ್ರಕಟಿಸಲು ಹಿಂಜರಿಯುತ್ತಿದ್ದವು. ಇಲ್ಲಿ ಪರ, ವಿರೋಧದ ಪ್ರಶ್ನೆಯಲ್ಲ. ಒಂದು ವಿಚಾರದ ಇನ್ನೊಂದು ಮುಖವನ್ನು ಪರಿಚಯಿಸುವ ಅಗತ್ಯವಿತ್ತು.

ಈ ಕೆಲಸ ದೃಶ್ಯ ಮಾಧ್ಯಮದಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಒಬ್ಬನೇ ಕುಳಿತು ಏನು ಮಾಡಲು ಸಾಧ್ಯವಿಲ್ಲ. ಬರಹಗಾರನಿಗೂ ಪಾತ್ರವರ್ಗಕ್ಕೂ ಪರಿಚಯವೇ ಇರುವುದಿಲ್ಲ. ನಿರ್ದೇಶಕರೊಬ್ಬರಿಗೆ ಬಿಟ್ಟು ಬೇರೆಯವರಿಗೆ ಬರೆಯುತ್ತಿರುವವರು ಯಾರು ಎಂಬುದೇ ಗೊತ್ತಿರುವುದಿಲ್ಲ. ಹಾಗಂತ ಇಲ್ಲಿ ಬರಹಗಾರನೇ ಶ್ರೇಷ್ಠ, ಉಳಿದವರು ನಿಕೃಷ್ಟ ಎಂದು ವಾದಿಸುತ್ತಿಲ್ಲ. ಇಲ್ಲಿ ಎಲ್ಲರೂ ಮುಖ್ಯ. ಅಹಂ ಬಂತು ಎಂದರೆ ಇಡೀ ಮಾಧ್ಯಮ ಹಾಳಾಗುತ್ತದೆ. ಇದೇ ಕಾರಣಕ್ಕೆ ಓರ್ವ ನಿಜವಾದ ಬರಹಗಾರ, ಬರಹವನ್ನು ಪ್ರೀತಿಸುವವನು ದೃಶ್ಯ ಮಾಧ್ಯಮಕ್ಕೆ ಬರೆಯಲು ಹಿಂದೇಟು ಹಾಕುತ್ತಾನೆ. ಹಾಗಾಗಿಯೇ ಬರಹಗಾರರಿಗೆ ದೃಶ್ಯ ಮಾಧ್ಯಮದಲ್ಲಿ ಬೇಡಿಕೆ ಹೆಚ್ಚಿದೆ. ಸ್ಕ್ರಿಪ್ಟ್ ಬರೆಯುವವರು ಸಂಖ್ಯೆ ಕಡಿಮೆಯಿದೆ. ಇದು ನನ್ನ ವೈಯಕ್ತಿಕ ಅನಿಸಿಕೆಯಷ್ಟೆ. ಚರ್ಚೆಗೆ ಅವಕಾಶವಿದೆ.

Read Full Post »

೬ ತಿಂಗಳ ಹಿಂದೆ ಮೊಬೈಲ್‌ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದ ಒಂದು ಸಂದೇಶದ ಸಾಲು ಹೀಗಿತ್ತು. “ಸದನದಲ್ಲಿ ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ ಘಟನೆಯ ಕಾವು ತಣಿದಿದೆ. ಹಾಗಂತ ಮಾಧ್ಯಮಗಳಲ್ಲಿ ಆ ದೃಶ್ಯವನ್ನು ಮರುಪ್ರಸಾರ ಮಾಡುವುದು ನಿಂತಿಲ್ಲ. ನಮ್ಮ ದೃಶ್ಯಮಾಧ್ಯಮಗಳು ಸವದಿ ವೀಕ್ಷಿಸಿದ ೨ ನಿಮಿಷದ ವೀಡಿಯೊವನ್ನು ಕಾಲು-ಬಾಲ ಸೇರಿಸಿ ರಾಜ್ಯದ ೧೨ ಕೋಟಿ ಜನತೆಗೆ, ೧೨ ತಾಸುಗಳ ಕಾಲ ಉಣಬಡಿಸಿವೆ”. ಘಟನೆಯನ್ನು ಮಾಧ್ಯಮಗಳು ಬಿತ್ತರಿಸಿದ ರೀತಿ ಕುರಿತು ಚರ್ಚೆಯಾಗಿತ್ತು. ರಾಷ್ಟ್ರೀಯ ವಾಹಿನಿಗಳೂ ವೀಡಿಯೊವನ್ನು ಸಂಪೂರ್ಣವಾಗಿ ಬ್ಲರ್ ಮಾಡಿ ಬಿತ್ತರಿಸಿದವು. ಆದರೆ ನಮ್ಮ ಕನ್ನಡದ ಬಹುತೇಕ ವಾಹಿನಿಗಳು ಸವದಿ ನೋಡಿದ ವೀಡಿಯೊದ ಮೂಲ ತುಣಕನ್ನು ಪ್ರದರ್ಶಿಸಿ ಸಾಮರ್ಥ್ಯ ಮೆರೆದವು. ಸವದಿ, ನೋಡಿದ್ದು, ಹೇಳಿದ್ದು, ನೋಡದೇ ಉಳಿದ್ದಿದ್ದು ಎಲ್ಲವನ್ನೂ ಬಿತ್ತರಿಸಿದವು!

ಗೆಳೆಯ ಶ್ರೀವತ್ಸ ಜೋಷಿಯವರು ಬಹಳ ಬೇಸರದಿಂದ ಒಂದು ಸಂದೇಶ ಕಳುಹಿಸಿದ್ದರು. ‘ನಮ್ಮ ಕನ್ನಡದ ಸುದ್ದಿವಾಹಿನಿಗಳು ಮಾತ್ರ ಹೀಗಾ? ಅಥವಾ ಬೇರೆ ಭಾಷೆಯ ಸುದ್ದಿವಾಹಿನಿಗಳು ಕೂಡ ಹೀಗೇನಾ?’ ಇದು ಜೋಷಿಯವರ ಪ್ರಶ್ನೆ. ಟಿಆರ್‌ಪಿ ಬೆನ್ನತ್ತಿ ನೋಡುಗನನ್ನು ಮರೆತ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದು ತೆಲುಗು ಸುದ್ದಿವಾಹಿನಿಗಳು. ನಂತರದ ಸ್ಥಾನ ಕನ್ನಡಕ್ಕೆ! ಇದಕ್ಕೂ ಒಂದು ಕಾರಣವಿದೆ. ಈ ಭಾಷೆಗಳಲ್ಲಿ ಅಸ್ತಿತ್ವದಲ್ಲಿರುವ ಸುದ್ದಿವಾಹಿನಿಗಳು ಮತ್ತು ಅವುಗಳ ನಡುವಿನ ಪೈಪೋಟಿ ಈ ಎಲ್ಲ ದುರಂತಗಳಿಗೂ ಪ್ರಮುಖ ಕಾರಣ.

ಸಾಮಾಜಿಕ ಜವಬ್ದಾರಿ ಹೊತ್ತಿರುವ ಸಾರ್ವಜನಿಕ ವಾಹಿನಿಗಳು ಈ ಪರಿ ಕೀಳುಮಟ್ಟಕ್ಕೆ ಇಳಿಯಬಹುದಾ ಎಂದರೆ, ತಕ್ಷಣ ವಾಹಿನಿಗಳಿಂದ ಬರುವ ಉತ್ತರ ಅಜಿತ್ ಬರೆದಂತೆ ಟಿಆರ್‌ಪಿ. ಅಜಿತ್ ಅವರು ವಿವರಿಸಿದಂತೆ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಅನ್ನುವ ಮಾಯಾಜಿಂಕೆ. ಇದು ಇಡೀ ದೃಶ್ಯಮಾಧ್ಯಮವನ್ನು ಆಳುತ್ತಿದೆ. ಎಷ್ಟು ಜನ ನಮ್ಮ ವಾಹಿನಿ ನೋಡಿದರು ಎಂಬುದನ್ನು ಸೂಚಿಸುವ ಈ ರೇಟಿಂಗ್, ಜಾಹೀರಾತು ದೃಷ್ಟಿಯಿಂದ ವಾಹಿನಿಗಳಿಗೆ ಅಗತ್ಯ. ಹೆಚ್ಚು ರೇಟಿಂಗ್ ಇರುವ ವಾಹಿನಿಗೆ ಹೆಚ್ಚು ಜಾಹೀರಾತು ಸಹಜವಾಗಿಯೇ ಬರುತ್ತೆ. ಹೀಗಾಗಿಯೇ ಪ್ರತಿ ವಾಹಿನಿ ನಂಬರ್ ಒನ್ ಪಟ್ಟಕ್ಕಾಗಿ ಗುದ್ದಾಟ ನಡೆಸುವುದು. ಇವತ್ತು ಮಾಧ್ಯಮ ಉದ್ಯಮವಾಗಿದೆ. ಇಲ್ಲಿ ಬರುವ ಲಾಭವನ್ನೇ ಮಾಲೀಕರು ಕೇಳುತ್ತಾರೆ. ಆದರ್ಶ, ಸಮಾಜ ಸೇವೆ…ಇವೆಲ್ಲವೂ ನಂತರದ ಮಾತು.

ಹಾಗೆ ನೋಡಿದ್ರೆ ಕಳೆದ ಒಂದು ವರ್ಷದಿಂದ ಸುದ್ದಿವಾಹಿನಿಗಳನ್ನು ನೋಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಅದೆಷ್ಟೆ ಹರಸಾಹಸ ಮಾಡಿದರೂ ರಿಮೋಟ್‌ನ್ನು ಒಂದು ಚಾನೆಲ್‌ಗೆ ಸ್ಥಿರಗೊಳಿಸಲು ಯಾವ ವಾಹಿನಿಯಿಂದಲೂ ಸಾಧ್ಯವಾಗುತ್ತಿಲ್ಲ. ಸುದ್ದಿವಾಹಿನಿ ಮತ್ತು ಮನರಂಜನೆ ವಾಹಿನಿಗಳಿಗೆ ಬಹಳ ವ್ಯತ್ಯಾಸವಿದೆ. ಮನರಂಜನ ವಾಹಿನಿಗಳನ್ನು ಜಿಇಸಿ ಎನ್ನುತ್ತೇವೆ. ಇವು ಟಿಆರ್‌ಪಿ ವಿಷಯದಲ್ಲಿ ಸುದ್ದಿವಾಹಿನಿಗಳಿಗಿಂತ ೫-೬ ಪಟ್ಟು ಎತ್ತರದಲ್ಲಿವೆ. ಇದಕ್ಕೆ ಬಹುಮುಖ್ಯ ಕಾರಣ ದಿನವಿಡಿ ಓಡುವ ಸಿರಿಯಲ್‌ಗಳು. ಪ್ರತಿನಿತ್ಯ ಕನ್ನಡದಲ್ಲಿ ಕನಿಷ್ಠ ೫೦ ಸಿರಿಯಲ್‌ಗಳು(೬ ವಾಹಿನಿಗಳಿಂದ ತಲಾ ೧೦ ಸಿರಿಯಲ್‌ಗಳ ಲೆಕ್ಕದಲ್ಲಿ!)ಬಿತ್ತರಗೊಳ್ಳುತ್ತವೆ. ಇದರ ಹೊರತಾಗಿ ಸಿನಿಮಾ, ರಿಯಾಲಿಟಿ ಶೋಗಳ ಅಬ್ಬರ. ಇವನ್ನು ನೋಡದೇ ಅಳಿದುಳಿದ ನೋಡುಗರನ್ನು ಸುದ್ದಿವಾಹಿನಿಗಳು ಬಾಚಿಕೊಳ್ಳಬೇಕು. ಇದಕ್ಕೆ ೬-೮ ವಾಹಿನಿಗಳ ಗುದ್ದಾಟ.

ಶೇ.೭೦ರಷ್ಟು ಮಹಿಳೆಯರು ಸುದ್ದಿವಾಹಿನಿಗಳನ್ನು ನೋಡುವುದಿಲ್ಲ. ಉಳಿದ ಶೇ.೩೦ರಷ್ಟು ಮಹಿಳೆಯರು ಈ ಹಿಂದೆ ನೋಡುತ್ತಿದ್ದರು. ಆದರೆ ಈಗ ಸುದ್ದಿವಾಹಿನಿಗಳು ತಮ್ಮ ಅಬ್ಬರದಿಂದ ಅವರನ್ನೂ ಕಳೆದುಕೊಂಡಿವೆ. ಒಂದಷ್ಟು ಪುರುಷರು ಮತ್ತು ಯುವಕರು ಸುದ್ದಿಗಾಗಿ, ಪ್ರಸ್ತುತದ ವಿದ್ಯಾಮಾನಗಳ ಜ್ಞಾನಕ್ಕಾಗಿ ಸುದ್ದಿವಾಹಿನಿಗಳನ್ನು ಆಶ್ರಯಿಸಿದ್ದಾರೆ. ಇವರನ್ನು ಹಿಡಿದುಕೊಳ್ಳಲು ಎಲ್ಲ ಸುದ್ದಿವಾಹಿನಿಗಳ ಹರಸಾಹಸ! ಇವರನ್ನು ಹಿಡಿಯಲು ಪ್ರತಿ ನಿತ್ಯ ನಾವು ಮೊದಲು ಸುದ್ದಿ ಕೊಟ್ಟೆವು, ನಾವು ಅತ್ಯಂತ ವೇಗವಾಗಿ ಸುದ್ದಿಕೊಟ್ಟೆವು, ನಾವು ಬ್ರೇಕಿಂಗ್ ನ್ಯೂಸ್ ಕೊಟ್ಟೆವು ಅಂತಾ ಪ್ರತಿ ಸುದ್ದಿವಾಹಿನಿಯೂ ಬೊಬ್ಬೆ ಹೊಡೆಯುತ್ತಿರುತ್ತದೆ. ಆದರೆ ಇವೆಲ್ಲ ದೃಶ್ಯಮಾಧ್ಯಮದಲ್ಲಿ ದುಡಿಯುವವರ ಭ್ರಮೆ. ಇದರಿಂದ ಟಿಆರ್‌ಪಿ ಮೇಲೆ ಆಗುವ ಪರಿಣಾಮ ಅಲ್ಪ. ಯಾಕಂದ್ರೆ ಯಾವೊಬ್ಬ ವೀಕ್ಷಕನೂ ಇವತ್ತು ೨೪*೭ ಸುದ್ದಿವಾಹಿನಿಯನ್ನು ಪಟ್ಟು ಹಿಡಿದು ನೋಡುವುದಿಲ್ಲ. ಯಾವುದೋ ಧಾರವಾಹಿಯ ನಡುವೆ, ರಿಯಾಲಿಟಿ ಷೋನಲ್ಲಿ ಜಾಹೀರಾತು ಬಂದಾಗ ನೋಡುಗನ ದೃಷ್ಟಿ ೨೪*೭ ಕಡೆ ಹೊರಳುತ್ತದೆ. ಅದಕ್ಕಿಂತ ಹೆಚ್ಚಾಗಿ ಒಂದು ವಾಹಿನಿಯಲ್ಲಿ ಬಿತ್ತರಗೊಂಡ ಬ್ರೇಕಿಂಗ್ ನ್ಯೂಸ್ ಒಂದೇ ನಿಮಿಷ ಕಳೆಯುವುದರೊಳಗೆ ಎಲ್ಲ ವಾಹಿನಿಗಳಲ್ಲೂ ಬಂದಿರುತ್ತದೆ. ಡೆಸ್ಕ್‌ನಲ್ಲಿ ಕುಳಿತ ಭಾಷಾಂತರ ಬರದವನೊಬ್ಬ ತಪ್ಪು ಬ್ರೇಕಿಂಗ್ ಸುದ್ದಿ ಕೊಡುತ್ತಾನೆ. ಉಳಿದ ಎಲ್ಲ ವಾಹಿನಿಗಳಲ್ಲೂ ಕಾಪಿ-ಪೇಸ್ಟ್ ರೂಪವಾದ ಆ ತಪ್ಪು ಬ್ರೇಕಿಂಗ್ ಓಡುತ್ತ ಇರುತ್ತದೆ. ಇಂಥ ಹತ್ತಿಪ್ಪತ್ತು ಜೀವಂತ ಉದಾಹರಣೆಗಳು ಸಿಗುತ್ತವೆ!

ಪ್ರಜ್ಞಾವಂತ ನೋಡುಗರಿಲ್ಲ. ಒಳ್ಳೆ ಕಾರ್ಯಕ್ರಮ ಕೊಟ್ಟರೆ ನೋಡುವುದಿಲ್ಲ ಎಂಬುದು ಮಾಧ್ಯಮದ ಮಂದಿಗಳಾದ ನಮಗೆ ನಾವೇ ತುಂಬಿಕೊಂಡಿರುವ ಭ್ರಮೆ. ಇದಕ್ಕೆ ೨ ಜೀವಂತ ಉದಾಹರಣೆಗಳಿವೆ. ನಮ್ಮ ಸುವರ್ಣ ನ್ಯೂಸ್‌ನಲ್ಲಿ ಜಯಪ್ರಕಾಶ್ ಶೆಟ್ಟಿ ಮತ್ತು ಪ್ರತಿಮಾಭಟ್ ಅವರು ಮೊದಲಿಗೆ ಒಂದು ತಾಸುಗಳ ‘ಬ್ರೇಕ್‌ಫಾಸ್ಟ್’ ನ್ಯೂಸ್ ನಡೆಸಿಕೊಡುತ್ತಿದ್ದರು. ಅದಕ್ಕೆ ೯-೧೦ ಪಾಯಿಂಟ್ ಜಿಆರ್‌ಪಿ ಬಂದ ದಾಖಲೆ ಇದೆ. ಇದೇ ನ್ಯೂಸ್‌ನಲ್ಲಿ ಯುಗಾದಿಗೆ ಕೈಬರಹ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದಕ್ಕೆ ಎಷ್ಟು ಪ್ರತಿಕ್ರಿಯೆ ಬಂದಿರಬಹುದು ಹೇಳಿ? ಬರೋಬ್ಬರಿ ೨,೦೦೦ ಎಂಟ್ರಿ. ಕಾರಣಾಂತರಗಳಿಂದ ಬ್ರೇಕ್‌ಫಾಸ್ಟ್ ನ್ಯೂಸ್ ಅರ್ಧ ಗಂಟೆಗೆ ಇಳಿಯಿತು. ಟಿಆರ್‌ಪಿ ಕುಸಿಯಿತು. ಆದರೆ ಪ್ರಜ್ಞಾವಂತ ನೋಡುಗ ಒಳ್ಳೆ ಕಾರ್ಯಕ್ರಮ ಕೊಟ್ಟರೆ ನೋಡುತ್ತಾನೆ ಎಂಬುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಡ ಅನ್ನಿಸುತ್ತದೆ.

ಅಮಿರ್‌ಖಾನ್ ಸ್ಟಾರ್‌ವಾಹಿನಿಯಲ್ಲಿ ನಡೆಸಿಕೊಟ್ಟ ಸತ್ಯಮೇವ ಜಯತೆ ಕಾರ್ಯಕ್ರಮವನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಕಾರಣವಿಷ್ಟೆ, ಒಂದು ಸುದ್ದಿವಾಹಿನಿಯಲ್ಲಿ ಮಾಡಬಹುದಾದ ಕಾರ್ಯಕ್ರಮವನ್ನು ಅಮೀರ್‌ಖಾನ್ ಜಿಇಸಿಯಲ್ಲಿ ನಡೆಸಿಕೊಟ್ಟರು. ಈ ಕಾರ್ಯಕ್ರಮ ಕೂಡ ೪-೫ ಟಿಆರ್‌ಪಿ ಗಳಿಸಿತ್ತು.

ನನಗಂತೂ ಇವತ್ತಿಗೂ ನ್ಯೂಸ್ ಅಂದಕೂಡಲೆ ಕಣ್ಮುಂದೆ ಬರುವುದು ಈಟಿವಿಯ ಅಗ್ರ ರಾಷ್ಟ್ರೀಯ ವಾರ್ತೆ. ಕನ್ನಡದ ಸುದ್ದಿ ಜಗತ್ತಿಗೊಂದು ಚೆಂದದ ಸ್ವರೂಪ ಕೊಟ್ಟಿದ್ದು ಈಟಿವಿ. ಇದೀಗ ನಮ್ಮೊಂದಿಗೆ ಪ್ರತಿನಿಧಿ ಶ್ರೀ…ಗಳು ನೇರಸಂಪರ್ಕದಲ್ಲಿದ್ದಾರೆ. ಸನ್ಮಾನ್ಯ ಶ್ರೀಶ್ರೀಗಳು ದೂರವಾಣಿ ಸಂಪರ್ಕದಲ್ಲಿದ್ದಾರೆ…ನಿಮ್ಮ ಭಾಷಣ ಕೇಳಲು ನಾವ್ಯಾಕೆ ನ್ಯೂಸ್ ನೋಡಬೇಕು ಹೇಳಿ?

ಯಡಿಯೂರಪ್ಪ ಪರಪ್ಪನ ಅಗ್ರಹಾರದಲ್ಲಿ ಯಾವ ಸೋಪು ಬಳಸಿದ್ರು ಅಂತಾ ಒಂದು ವಾಹಿನಿಯ ವರದಿಗಾರ ನೇರ ಪ್ರಸಾರ ನೀಡುತ್ತಿರುತ್ತಾನೆ. ಇನ್ನೊಂದು ವಾಹಿನಿಯವನು ಯಡಿಯೂರಪ್ಪ ತಲೆಗೆ ಸ್ನಾನ ಮಾಡಿದ್ರೊ, ಇಲ್ಲವೊ??! ಮಾಡಿದ್ದರೆ ಯಾವ ಶಾಂಪೂ ಬಳಸಿರಬಹುದು ಎಂಬ ಕುರಿತು ಕಥೆ ಕಟ್ಟಿ ಹೇಳುತ್ತಿರುತ್ತಾನೆ! ಬಹುಶಃ ಅರ್ಧ ಗಂಟೆಯ ಸುದ್ದಿಯನ್ನು ಯಾವುದೇ ಖರ್ಚಿಲ್ಲದೆ ತುಂಬಿಸಲಿಕ್ಕೋಸ್ಕರವೇ ಈ ಲೈವ್‌ಚಾಟ್ ಎಂಬ ದುರಂತ ಹುಟ್ಟಿದ್ದಿರಬೇಕು! ಖಂಡಿತಾ ವರದಿಗಾರನೊಬ್ಬ ಚೆಂದವಾಗಿ ವಿವರಣೆ ಕೊಟ್ಟರೆ, ಅದು ಕೇಳಲು ಸೊಗಸಾಗಿ ಇರುತ್ತದೆ. ಜೊತೆಗೆ ಆ ವಿವರಣೆ ಮಿತಿಯಲ್ಲಿದ್ದರೆ ಚೆಂದ. ಇದರಲ್ಲಿ ಸುದ್ದಿ ಓದುವ ನಿರೂಪಕರ ಪಾಲು ಇರುತ್ತದೆ. ಇವರು ಎಷ್ಟು ಅದ್ಭುತವಾಗಿ ಪ್ರಶ್ನೆ ಕೇಳುತ್ತಾರೊ, ಅಷ್ಟು ಅದ್ಭುತವಾಗಿ ಲೈವ್‌ಚಾಟ್ ಬರುತ್ತದೆ. ಇಲ್ಲವಾದರೆ ಯಡಿಯೂರಪ್ಪ ಬಳಸಿದ ಬೆಡ್‌ಶಿಟ್, ಬಕೆಟ್, ಬ್ರಶ್ ಇತ್ಯಾದಿಗಳು. ಇದನ್ನು ನೋಡಲು ನಾವೆಲ್ಲ ಸುದ್ದಿವಾಹಿನಿ ನೋಡಬೇಕೆ ಎಂಬ ಪ್ರಶ್ನೆ ಪ್ರತಿಯೊಬ್ಬ ನೋಡುಗನಲ್ಲೂ ಮೂಡುತ್ತದೆ.

ನಮ್ಮೂರಿನ ಬಹುತೇಕ ಮನೆಗಳಲ್ಲಿ ಸಂಜೆ ಯಶಸ್ವಿಯಾಗಿ ಓಡುವುದು ‘ಜಿ’, ‘ಸ್ಟಾರ್’ನಂಥ ಹಿಂದಿ ವಾಹಿನಿ. ಅದರ ಹೊರತಾಗಿ ಒಂದಷ್ಟು ಧಾರವಾಹಿಗಳು. ಇದರಿಂದ ವೀಕ್ಷಕರನ್ನು ಸುದ್ದಿವಾಹಿನಿಯತ್ತ ಡೈವರ್ಟ್ ಮಾಡುವುದು ಅಷ್ಟು ಸುಲಭದ ಮಾತೇನಲ್ಲ. ಹಾಗಾಗಿಯೇ ಪ್ರತಿವಾರವೂ ಸುದ್ದಿವಾಹಿನಿ ನೋಡುವ ವೀಕ್ಷಕರ ಸಂಖ್ಯೆ ಕುಸಿಯುತ್ತಿರುವುದು. ಜೊತೆಗೆ ಹೊಸತಾಗಿ ಬಂದ ಸುದ್ದಿವಾಹಿನಿಗಳಿಗೆ ಖಾಯಂ ನೋಡುಗರು ಹಂಚಿಹೋಗುತ್ತಾರೆ. ಖಂಡಿತವಾಗಿಯೂ ಹೇಳುತ್ತೇನೆ ಟಿಆರ್‌ಪಿ ಹೆಸರಿನಲ್ಲಿ ಬಟ್ಟೆ ಬಿಚ್ಚುವ ಹಲವು ಕಾರ್ಯಕ್ರಮಕ್ಕೆ ಅಂತಿಮವಾಗಿ ಬರುವ ರೇಟಿಂಗ್ ೦.೫-೧. ಅದು ಒಂದು ಒಳ್ಳೆ ಕಾರ್ಯಕ್ರಮಕ್ಕೂ ಬರುತ್ತೆ. ಕೆಲವಕ್ಕೆ ಅದ್ಭುತ ಟಿಆರ್‌ಪಿ ಬರುತ್ತೆ. ಅದು ವಿಚಾರ, ಘಟನೆ ಆಧಾರಿತವಾಗಿರುತ್ತದೆ.

ಹಾಗಂತ ಸುದ್ದಿವಾಹಿನಿಗಳು ಒಳ್ಳೆ ಕಾರ್ಯಕ್ರಮ ಮಾಡುತ್ತಿಲ್ಲ, ಪೂರ್ತಿಯಾಗಿ ಕೆಟ್ಟ ಕಾರ್ಯಕ್ರಮವನ್ನು ನೀಡುತ್ತಿವೆ ಎನ್ನುತ್ತಿಲ್ಲ. ಖೈದಿ, ಅಮ್ಮದಂಥ ಒಳ್ಳೆ ಕೆಲ ಒಳ್ಳೆ ಕಾರ್ಯಕ್ರಮಗಳು ಬರುತ್ತವೆ. ಆದರೆ ಇದಕ್ಕಿಂತ ಹೆಚ್ಚಾಗಿ ಯಾರದ್ದೋ ಸಂಸಾರ ಒಡೆದ ಚರ್ಚೆಗಳು, ಎಲ್ಲೊ ನ್ಯಾಯಪಂಚಾಯ್ತಿ ಮಾಡಬೇಕಾದ ವಿಚಾರಗಳು ವಾಹಿನಿಗಳ ಕಟಕಟೆಗೆ ಬಂದು ನಿಲ್ಲುವುದು ದುರಂತ. ದರ್ಶನ್, ವಿಜಯ್ ಸಂಸಾರದ ಸರಕನ್ನು ವಾಹಿನಿಗಳಲ್ಲಿ ತಂದರೆ ತೊಂದರೆಯಿಲ್ಲ. ಯಾಕೆಂದರೆ ಅವರು ಸಾಮಾಜಿಕವಾಗಿ ಗುರುತಿಸಿಕೊಂಡವರು. ಅವರ ವಿಚಾರ ಚರ್ಚೆಗೆ ಯೋಗ್ಯವಾಗಿದೆ. ಆದರೆ ಅದೇ ದಾಟಿಯನ್ನು ಎಲ್ಲ ಸಂಸಾರಗಳಿಗೂ ಅನುಸರಿಸುವುದು ಸೂಕ್ತವಲ್ಲ.

ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಕೇವಲ ಸರಕು ಮಾತ್ರ ನಿರ್ಣಾಯಕವಲ್ಲ. ಕಾರ್ಯಕ್ರಮದ ಪ್ರಮೋಷನ್ ಕೂಡ ಮುಖ್ಯ. ಈ ವಾಹಿನಿಯಲ್ಲಿ ಇಂಥದ್ದೊಂದು ಒಳ್ಳೆ ಕಾರ್ಯಕ್ರಮ ಬರುತ್ತಿದೆ ಅನ್ನುವುದು ಜನರಿಗೆ ತಲುಪಬೇಕು. ಅದಕ್ಕೆ ಕಾಯಬೇಕು. ಅಷ್ಟು ಪುರುಸೊತ್ತು ನಮ್ಮ ವಾಹಿನಿಗಳಿಗಿಲ್ಲ. ಆಜ್‌ತಕ್ ಅಂತೊಂದು ಹಿಂದಿ ಸುದ್ದಿವಾಹಿನಿ ಇದೆ. ಅದು ದೇಶದಲ್ಲೇ ನಂಬರ್ ಒನ್ ಸುದ್ದಿವಾಹಿನಿ. ಅದು ಹಿಂದಿ ವಾಹಿನಿ. ಅದರ ವಿಸ್ತಾರ ಹೆಚ್ಚಿದೆ ಅನ್ನೋದು ಮಾತ್ರ ಅದರ ಯಶಸ್ಸಿಗೆ ಕಾರಣವಲ್ಲ. ಜೊತೆಗೆ ಅಲ್ಲಿನ ಕಾರ್ಯಕ್ರಮಗಳ ನಿರ್ಮಾಣ, ಇದನ್ನೇ ಪಕ್ಕಾ ದೃಶ್ಯಮಾಧ್ಯಮದ ಭಾಷೆಯಲ್ಲಿ ಹೇಳುವುದಾದರೆ, ಮೇಕಿಂಗ್ ಅನ್ನುವುದು ಕೂಡ ಮಹತ್ವದ್ದು. ಒಂದು ಕಾರ್ಯಕ್ರಮ ಹೇಗಿರಬೇಕು ಅನ್ನುವುದನ್ನು ಪ್ರತಿಯೊಬ್ಬ ಕನ್ನಡದ ಪತ್ರಕರ್ತ ಆಜ್‌ತಕ್‌ನ್ನು ನೋಡಿ ಕಲಿಯಬೇಕಿದೆ.

ಟಿಆರ್‌ಪಿಯನ್ನು ಸಂಭ್ರಮಿಸಬೇಕು ನಿಜ. ಆದರೆ, ಸಾವಿನ ಮನೆಯಲ್ಲಿ ಟಿಆರ್‌ಪಿ ಸಂಭ್ರಮ ಸರಿಯಲ್ಲ ಅಲ್ವಾ? ನನ್ನ ಪತ್ರಿಕೋದ್ಯಮದ ವೃತ್ತಿ ಜೀವನ ಆರಂಭವಾಗಿದ್ದೆ ಟ್ಯಾಬ್ಲಯ್ಡ್ ಪತ್ರಿಕೆಯೊಂದರಿಂದ. ಗೆಳೆಯ ಸಂಕ್ರಾಂತಿ ಸತೀಶ್ ಒಂದು ವರದಿ ತಂದಿದ್ದರು. ಧಾರವಾಹಿ ನಟಿಯೊಬ್ಬಳಿಗೆ ಅನೈತಿಕ ಸಂಬಂಧವಿದೆ ಎಂಬ ಆ ಸುದ್ದಿಯನ್ನು ಡೆಸ್ಕ್‌ನಲ್ಲಿ ಕುಳಿತ ಮಹಾಶಯನೊಬ್ಬ ತೀರಾ ಆಕೆಯ ಹಾಸಿಗೆಗೆ ಹೋಗಿ ನೋಡಿ ಬಂದವನಂತೆ ಬರೆದ. ಆ ಹೆಣ್ಣುಮಗಳು ನೇರವಾಗಿ ಕಛೇರಿಗೆ ಗಂಟುಮೂಟೆ ಸಮೇತವಾಗಿ ಬಂದಳು. ‘ನಿಮ್ಮ ಪತ್ರಿಕೆಯ ವರದಿಯ ಫಲಶೃತಿಯಾಗಿ ಗಂಡ ನನ್ನನ್ನು ಕುತ್ತಿಗೆ ಹಿಡಿದು ಹೊರದಬ್ಬಿದ್ದಾನೆ. ನನಗೀಗ ಆಶ್ರಯ ಕೊಡಿ’ ಹಾಗಂತ ಹೆಣ್ಣುಮಗಳು ಕಣ್ಣೀರು ಸುರಿಸುತ್ತಿದ್ದಾಳೆ. ‘ವಾರಕ್ಕೊಂದು ಸುದ್ದಿ ತರೋ ಭರದಲ್ಲಿ ತಪ್ಪು ಮಾಡಿದೆ. ಒಂದು ಹೆಣ್ಣಿನ ಶಾಪಕ್ಕೆ ಬಲಿಯಾದೆ’ ಅನ್ನುತ್ತ ಗೆಳೆಯ ಬೇಸರದಿಂದ, ಆಕೆಗೆ ಮುಖ ತೋರಿಸಲಾಗದ ಸ್ಥಿತಿಯಲ್ಲಿ ಒಳಗೆ ಬಂದು ಅಡಗಿ ಕುಳಿತ್ತಿದ್ದ. ನನಗೆ ಸುದ್ದಿವಾಹಿನಿಗಳಲ್ಲಿ ಬರುವ ಕೆಲ ಚರ್ಚೆಗಳನ್ನು ನೋಡಿದಾಗಲೆಲ್ಲ ಆ ಘಟನೆ ಕಾಡುತ್ತದೆ. ಟಿಆರ್‌ಪಿ ಬರುತ್ತೆ ಅಂತ ಸುದ್ದಿವಾಹಿನಿಗಳು ಅಂಥ ಟ್ಯಾಬ್ಲಾಯ್ಡ್‌ಗಳಂತೆ ಆಗಬೇಕಾ?

Read Full Post »

ಕೌಬಾಯ್, ಗೋಸ್ವಾಮಿ, ಗೋಕರ್ಣ ನುಂಗಿದವ…ಅಬ್ಬಬ್ಬ ಅದೆಷ್ಟು ಸಹಸ್ರನಾಮಾವಳಿ! ರಾಮಚಂದ್ರಪುರ ಮಠದಲ್ಲಿ ವಿಶ್ವ ಗೋಸಮ್ಮೇಳನ ನಡೆದಾಗ ಅಣಕಿಸಿದವರು ಅದೆಷ್ಟು ಮಂದಿ! ಗೋಮೂತ್ರ, ಸಗಣಿಗೆ ಸ್ವಾಮಿಗಳನ್ನು ಹೋಲಿಸಿ ಗೇಲಿ ಮಾಡಿದವರಿಗೆ ಲೆಕ್ಕವಿಲ್ಲ. ಹಾಗಂತ ಸ್ವಾಮಿಗಳು ಇವ್ಯಾದಕ್ಕೂ ಬಗ್ಗಲಿಲ್ಲ ಅಥವಾ ಕೆಸರಿಗೆ ಕಲ್ಲು ಎಸೆಯುವ ಯತ್ನವನ್ನೂ ಮಾಡಲಿಲ್ಲ. ಯಾರ ಪ್ರಶ್ನೆಗೂ ತಿರುಗಿ ಉತ್ತರ ಕೊಡಲಿಲ್ಲ. ತಾವು ಮಾಡಬೇಕಾದ ಕೆಲಸವನ್ನು ತಮ್ಮ ಪಾಡಿಗೆ ಮಾಡುತ್ತಾ ಹೊರಟರು. ಹಾಗೆ ನೋಡಿದರೆ ವಿಶ್ವ ಗೋಸಮ್ಮೇಳನದ ನಂತರ ಶ್ರೀಗಳಿಟ್ಟ ಹೆಜ್ಜೆ ನಿಜಕ್ಕೂ ಹೆಗ್ಗುರುತು.

ಹೌದು, ಇಲ್ಲಿ ಮಾತನಾಡುತ್ತಿರುವುದು ರಾಘವೇಶ್ವರ ಭಾರತಿ ಶ್ರೀಗಳ ಕುರಿತು. ಅದಕ್ಕಿಂತ ಹೆಚ್ಚಾಗಿ ಅವರ ಮತ್ತೊಂದು ಮಹತ್ತರ ಹೆಜ್ಜೆ ‘ರಾಮಕಥಾ’ದ ಕುರಿತು. ಆಡಿಕೊಳ್ಳುವವರ ಪಾಲಿಗೆ ಹವ್ಯಕ ಸ್ವಾಮಿಗಳಾಗಿ ಸೀಮಿತವಾಗಿರುವ ಶ್ರೀಗಳು, ಎಲ್ಲ ವರ್ಗವನ್ನು ತಲುಪುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಜೀವಂತ ನಿದರ್ಶನ ರಾಮಕಥಾ. ಅದೆಷ್ಟೊ ಸಾವಿರ ವರ್ಷಗಳ ಹಿಂದೆ ನಡೆದ ರಾಮಾಯಣವನ್ನು ಇವತ್ತಿಗೆ ಪ್ರಸ್ತುತವಾಗುವಂತೆ ಸಾದರಪಡಿಸುವ ಸಾಹಸವೇ ರಾಮಕಥಾ. ಒಂದೇ ವೇದಿಕೆಯಲ್ಲಿ-ಏಕಕಾಲದಲ್ಲಿ ಪ್ರವಚನ, ಗಾಯನ, ನೃತ್ಯ, ರೂಪಕಗಳ ಸಮ್ಮಿಲನವಿದು.

ಸ್ವಾಮಿಗಳು, ಪ್ರವಚನ ಎಂಬಿತ್ಯಾದಿ ಪದಗಳು ಬಂದಮೇಲೆ ಅಲ್ಲಿ ಸಂಸ್ಕೃತ ಬರಲೇಬೇಕಲ್ಲವೇ? ಸಂಸ್ಕೃತ ಬಂತು ಅಂದಮೇಲೆ ಅದಕ್ಕೆ ಬ್ರಾಹ್ಮಣರ ಕಾರ್ಯಕ್ರಮ ಎಂಬ ಹಣೆಪಟ್ಟಿ ಕೊಡದಿದ್ದರೆ ಹೇಗೆ?! ಯಸ್, ರಾಮಕಥಾ ಇಷ್ಟವಾಗಿದ್ದು ಇದೇ ಕಾರಣಕ್ಕೆ. ಶ್ರೀಗಳು ಸಂಸ್ಕೃತ ಶ್ಲೋಕಗಳನ್ನು ಕನ್ನಡೀಕರಿಸಿದ್ದಾರೆ. ಅಂದರೆ ಸಂಸ್ಕೃತ ಶ್ಲೋಕಗಳಿಗೆ ಕನ್ನಡದಲ್ಲಿ ಅರ್ಥ ಹೇಳಿದ್ದಾರೆ ಎಂದಲ್ಲ. ಮಂಕುತಿಮ್ಮನ ಕಗ್ಗದ ರೀತಿಯಲ್ಲಿ ರಾಮಾಯಣದ ಕಥೆಗಳನ್ನು ಹೇಳುವ ಪುಟ್ಟ-ಪುಟ್ಟ ಪದ್ಯಗಳನ್ನು ರಚಿಸಿದ್ದಾರೆ. ಕನ್ನಡದ ಪದ್ಯಗಳನ್ನು ಹೇಳುತ್ತಾ ರಾಮನ ಜೀವನವನ್ನು ವಿವರಿಸುತ್ತಾರೆ. ಡಿವಿಜಿ ಮತ್ತು ಕುವೆಂಪು ಇಬ್ಬರು ಕವಿಗಳು ಕನ್ನಡದಲ್ಲಿ ಆ ಪ್ರಯತ್ನ ಮಾಡಿದ್ದರು. ಸಂಸ್ಕೃತವನ್ನು ಕನ್ನಡೀಕರಿಸುವ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದರು. ಹಾಗಾಗಿಯೇ ನಾವು ಅವರನ್ನು ವಿಶ್ವಕವಿಗಳೆಂದು ಒಪ್ಪಿಕೊಂಡಿದ್ದು. ಮನುಜಮತವಾದಿಗಳೆಂದು ಸ್ವೀಕರಿಸಿದ್ದು.

ರಾಮಕಥಾದ ಮೂಲಕ ರಾಘವೇಶ್ವರರು ಕೂಡ ಮನುಜಮತದತ್ತ ಸಾಗುವ ಯತ್ನ ನಡೆಸಿದ್ದಾರೆ. ರಾಮಾಯಣವನ್ನು ಸಾರ್ವತ್ರಿಕರಣಗೊಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಹೊತ್ತಿಸೆನ್ನಾತ್ಮದಲಿ ಶ್ರೀರಾಮ ಜ್ಯೋತಿ
ಕೆತ್ತಿಸೆನ್ನೆದೆಯಲಿ ಶ್ರೀರಾಮ ಮೂರ್ತಿ
ಹರಿಸೆನ್ನ ಹೃದಯಕೆ ಶ್ರೀರಾಮ ಕೀರ್ತಿ…ಶ್ರೀಗಳು ಅಪ್ಪಟ ಕನ್ನಡದಲ್ಲಿ ಶ್ರೀರಾಮನನ್ನು ಕರೆದ ಬಗೆಯಿದು.

ಅರಮನೆಯೋ, ಗುರುಮನೆಯೋ ಸೆರೆಮನೆಯೋ
ಶ್ರೀರಾಮನಿರುವೆಡೆಗೆ ಬಿಡದಾನು ಬರುವೆ
ಶ್ರೀರಾಮ ಬರುವೆಡೆ ಬಿಡದಾನು ಬರುವೆ
ಶ್ರೀರಾಮ ನಿನ್ನಡಿಗೆ ಎಡೆಬಿಡದೆ ಬರುವೆ…ಕನ್ನಡ ಕಲಿತವರೆಲ್ಲರಿಗೂ ಅರ್ಥವಾಗುವ ಸಾಲುಗಳಿವು. ಇಂಥ ಸಾಲುಗಳಿಂದಲೇ ಕೂಡಿದೆ ರಾಘವೇಶ್ವರರ ರಾಮಕಥನ. ಇದನ್ನೂ ಹವ್ಯಕರಿಗೆ, ಬ್ರಾಹ್ಮಣರಿಗೆ ಸೀಮಿತ ಎನ್ನಬಹುದು ಕೆಲವರು. ಅದು ಅವರ ಮನೋವ್ಯಾಧಿಯನ್ನು ಸೂಚಿಸುತ್ತದೆಯಷ್ಟೆ!

ರಾಮಕಥಾ ಇಷ್ಟಕ್ಕೆ ಸೀಮಿತವಾಗಿದ್ದರೆ, ಅದರ ಕುರಿತು ಪ್ರತ್ಯೇಕವಾಗಿ ಬರೆಯುವ ಅಗತ್ಯವಿರಲಿಲ್ಲ. ಇದಕ್ಕಿಂತ ಮಿಗಿಲಾದ ಮತ್ತೊಂದಷ್ಟು ವೈಶಿಷ್ಠ್ಯಗಳು ಅಲ್ಲಿದೆ. ಶ್ರೀಗಳು ಪ್ರವಚನ ರೂಪದಲ್ಲಿ ರಾಮಾಯಣವನ್ನು ವಿವರಿಸುತ್ತಾ ಹೋಗುತ್ತಾರೆ. ನಡು-ನಡುವೆ ಹಾಡಿನ ವೈಭವ. ರಾಮನ ಕುರಿತಾದ ಭಕ್ತಿಗೀತೆಗಳ ಗಾನ ಲಹರಿ. ಕೊಳಲು, ತಬಲದ ನಿನಾದಗಳೊಂದಿಗೆ ರಾಮನ ಗೀತೆಗಳನ್ನು ಕೇಳುತ್ತಿದ್ದರೆ ಭಕ್ತಿಯೆಂಬುದು ತಾನಾಗಿಯೇ ಅರಳುತ್ತದೆ. ರಾಮನಿದ್ದಾನೊ ಇಲ್ಲವೊ ಗೊತ್ತಿಲ್ಲ. ಆದರೆ ಹಾಡುವ ಕಂಠಕ್ಕೆ, ಕೊಳಲಿಗೆ, ತಬಲಕ್ಕೆ ಆ ಭಕ್ತಿ ಹುಟ್ಟಿಸುವ ಶಕ್ತಿ ಇರುವುದಂತೂ ಸುಳ್ಳಲ್ಲ. ಅದು ಇಲ್ಲಿ ಸ್ಪಷ್ಟವಾಗಿ ಸಾಬೀತಾಗುತ್ತದೆ. ಹಾಡುಗಳ ನಡುವೆಯೇ ಕಲಾವಿದರಿಬ್ಬರು ಹಾಡಿನ ಸಾರ ಹೇಳುವ ಚಿತ್ರ ಬಿಡಿಸುತ್ತಾರೆ. ಒಬ್ಬರು ಮರಳಿನಲ್ಲಿ ರಾಮಾಯಣದ ಚಿತ್ರಣ ಮೂಡಿಸಿದರೆ, ಮತ್ತೊಬ್ಬರು ಡ್ರಾಯಿಂಗ್‌ನಲ್ಲಿ ರಾಮನ ಜೀವನವನ್ನು ಕೆತ್ತಿಕೊಡುತ್ತಾರೆ. ಈ ಜುಗಲ್‌ಬಂದಿಯಂತೂ ಕಲಾ ದೃಷ್ಟಿಕೋನದಲ್ಲಿ ನೋಡಿದರೆ ಅದ್ಬುತ.

ರಾಮಕಥಾದ ವೇದಿಕೆಯೇ ಒಂದು ವಿಶಿಷ್ಠ ಯತ್ನ. ಪ್ರವಚನದ ನಡುವೆ ಶ್ರೀಗಳು ಮಾಯವಾಗಿಬಿಡುತ್ತಾರೆ. ರಾಮಾಯಣದ ಯಾವುದೋ ದೃಶ್ಯವನ್ನು ಬಿಂಬಿಸುವ ರೂಪಕ ಶುರುವಾಗುತ್ತದೆ. ಯಾವ ಪ್ರತಿಷ್ಠಿತ ನಾಟಕ ಕಂಪನಿಗೂ ಕಡಿಮೆ ಇಲ್ಲ ಎಂಬಂತಿದೆ ಕಲಾವಿದರ ಪ್ರದರ್ಶನ. ರಾಮಾಯಣದ ಯಾವುದೋ ಒಂದು ಘಟ್ಟ ರೂಪಕದ ಮೂಲಕ ಬಿತ್ತರಗೊಳ್ಳುತ್ತದೆ. ಅದೇ ವೇದಿಕೆಯಲ್ಲಿ ನಿಧಾನವಾಗಿ ಮತ್ತೆ ಶ್ರೀಗಳು ಪ್ರತ್ಯಕ್ಷವಾಗಿ ಪ್ರವಚನದ ಮೂಲಕ ಕಥೆ ಹೇಳಲು ಶುರುವಿಡುತ್ತಾರೆ. ಕಥೆ ಹೆಚ್ಚಾಯಿತು ಎನ್ನುವಾಗ ಹಾಡಿನ ಮೂಲಕ ರಾಮಾಯಣ ಆರಂಭವಾಗುತ್ತದೆ. ಅಂದಹಾಗೆ ಇಲ್ಲಿ ಪವಾಡ ನಡೆಯುವುದಿಲ್ಲ. ಅಥವಾ ಇದೇನೂ ಹೀಗೂ ಉಂಟೆ ಎಂಬಂಥ ವೇದಿಕೆಯೂ ಅಲ್ಲ. ತಾಂತ್ರಿಕವಾಗಿ, ಲೈಟ್, ಪರದೆಗಳ ಮೂಲಕ ವೇದಿಕೆಗೆ ಅಷ್ಟು ಸೊಗಸಾದ ರೂಪ ನೀಡಲಾಗಿದೆ.

ರಾಮಾಯಣ ನಡೆದಿರುವುದರ ಕುರಿತು ನಮ್ಮಲ್ಲಿ ಸಾಕಷ್ಟು ಚರ್ಚೆಗಳಿವೆ. ರಾಮಸೇತುವೆ ಎಂಬುದು ಬಹುದೊಡ್ಡ ವಿವಾದಕ್ಕೆ ಗ್ರಾಸವಾಗಿತ್ತು. ಸಹಸ್ರಾರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಕಥೆಯನ್ನು ನಡೆದಿದೆ ಎಂದು ಸಾಬೀತುಪಡಿಸುವುದು ತುಸು ಕಷ್ಟದ ಕೆಲಸ. ಆದರೆ ಆ ಕಥೆಯ ಹಿಂದಿನ ಸಾಹಿತ್ಯವನ್ನು ನಾವು ಸ್ವೀಕರಿಸಬಹುದಲ್ಲವೆ? ಕಥೆಯ ಸಾರವನ್ನು ತೆಗೆದುಕೊಳ್ಳಬಹುದಲ್ಲವೆ? ರಾಮಾಯಣ, ಮಹಾಭಾರತಗಳನ್ನು ಮತ್ತೆ-ಮತ್ತೆ ಸಾದರಪಡಿಸುವ ಉದ್ದೇಶವಿಷ್ಟೆ. ಅಲ್ಲಿನ ಮೌಲ್ಯಗಳನ್ನು ನಾವು ಇವತ್ತಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಲಿನ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಪಾಲಿಸಬೇಕು ಎಂಬುದು ಈ ಮಹಾಗ್ರಂಥಗಳನ್ನು ಮರು ವ್ಯಾಖ್ಯಾನಿಸುವ ಮೂಲ ಉದ್ದೇಶ. ಆ ಕಾರ್ಯವನ್ನು ರಾಘವೇಶ್ವರ ಶ್ರೀಗಳು ಅದ್ಬುತವಾಗಿ ಮಾಡಿದ್ದಾರೆ. ಇವತ್ತಿನ ತಲೆಮಾರಿಗೆ ಅರ್ಥವಾಗುವ ಪುಟ್ಟ ಉಪಕಥೆಗಳೊಂದಿಗೆ, ನಗರದ ಕಛೇರಿಗಳ ನಿದರ್ಶನಗಳೊಂದಿಗೆ ಶ್ರೀಗಳು ರಾಮಾಯಣವನ್ನು ವಿವರಿಸುತ್ತಿದ್ದರೆ, ನಮ್ಮದೇ ಆಫೀಸಿನ ಪಕ್ಕದ ಕ್ಯಾಬಿನ್‌ನಲ್ಲಿ ನಡೆದ ಕಥೆಯನ್ನು ಹೇಳಿದ ಅನುಭವವಾಗುತ್ತದೆ.

ರಾಮಕಥಾ ರಾಮಚಂದ್ರಪುರ ಮಠದ ಪಡುಸಾಲೆಯಲ್ಲಿ ನಡೆಯುತ್ತಿಲ್ಲ ಅಥವಾ ಯಾವುದೋ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿಲ್ಲ. ಬದಲಾಗಿ ಸಾರ್ವಜನಿಕ ವೇದಿಕೆಯಲ್ಲಿ ನಡೆಯುತ್ತಿದೆ. ಎಲ್ಲರಿಗೂ ಮುಕ್ತ ಪ್ರವೇಶವಿರುವ ಸ್ಥಳದಲ್ಲಿ ಜರುಗುತ್ತಿದೆ. ಇದರರ್ಥ ರಾಮ ಸಾರ್ವತ್ರಿಕವಾಗಿ ಲಭಿಸಬೇಕು ಎಂಬುದು. ಮೊನ್ನೆಯಷ್ಟೆ ಮಲ್ಲೇಶ್ವರಂನ ಮಹಿಳಾ ಕಾಲೇಜು ಆವರಣದಲ್ಲಿ ರಾಮಕಥಾದ ಒಂದು ಭಾಗ ಮುಕ್ತಾಯಗೊಂಡಿದೆ. ಸೆಪ್ಟೆಂಬರ್ ೨ರಿಂದ ಅರಮನೆ ಮೈದಾನದಲ್ಲಿ ಮತ್ತೆ ರಾಮನ ಅವತಾರವಾಗಲಿದೆ. ಎಲ್ಲರಿಗೂ ಮುಕ್ತಪ್ರವೇಶ.

ಸಾವಿರಾರು ರೂಪಾಯಿ ಮೌಲ್ಯದ ಟಿಕೆಟ್ ಇಟ್ಟಿದ್ದರೆ, ರಾಮಕಥಾದ ಬಗ್ಗೆ ಮಾತನಾಡುವ ಅಗತ್ಯವೇ ಬರುತ್ತಿರಲಿಲ್ಲ. ಅಥವಾ ಅಷ್ಟೆಲ್ಲ ಬೃಹತ್ ಮೊತ್ತದ ಟಿಕೆಟ್ ಇಟ್ಟಾಗ, ವೇದಿಕೆಯನ್ನು ಅದ್ದೂರಿಯಾಗಿಸುವುದು ಸಾಹಸ ಅನ್ನಿಸುತ್ತಿರಲಿಲ್ಲ. ಆದರಿಲ್ಲಿ ಪ್ರವೇಶ ಶುಲ್ಕವಿಲ್ಲ. ಕಾಣಿಕೆಯನ್ನು ಹಾಕಬೇಕಿಲ್ಲ. ಹೋಗಿದ್ದಕ್ಕೆ ಪ್ರಸಾದ ಅಂತಾ ಪುಗ್ಸಟ್ಟೆಯಾಗಿ ಲಡ್ಡು ಕೊಟ್ಟು ಕಳಿಸುತ್ತಾರೆ. ದುಡ್ಡು ಸುಲಿಗೆಗಾಗಿ ಸ್ವಾಮಿಯ ಮತ್ತೊಂದು ನಾಟಕ ಎಂದು ಕೊಂಕು ತೆಗೆಯುವ ಬಾಯಿಗೆ ಬೀಗ ಬಿದ್ದಿದೆ.

ಆಫ್‌ಕೋರ್ಸ್ ಒಂದು ಮಠ ನಡೆಯಬೇಕಿದ್ದರೆ ಹಣದ ಅಗತ್ಯ ತುಂಬಾ ಇರುತ್ತದೆ. ಕಾಗದದ ನೋಟಿನ ಈ ಯುಗದಲ್ಲಿ ಯಾವುದೂ ಪುಗ್ಸಟ್ಟೆ ಸಿಕ್ಕುವುದಿಲ್ಲ. ಹಾಗಂತ ಸ್ವಾಮಿಗಳು ಹಣದ ಹಿಂದೆ ಬೀಳಬೇಕೆಂದಲ್ಲ. ಆದರೆ ಸ್ವಾಮಿಗಳಿಗೂ ಹಣದ ಪರಿಕಲ್ಪನೆ ಇರುವುದು ಅನಿವಾರ್ಯವಾಗುತ್ತದೆ. ನಮ್ಮ ನಾಡಿನ ದುರಂತವೆಂದರೆ ತೆಗಳುವವರ ಕಣ್ಣಿಗೆ ಉಚಿತವಾಗಿ ಮಾಡಿದ ಒಳ್ಳೆ ಕೆಲಸಗಳು ಕಾಣಿಸದಿರುವುದು. ಒಂದು ದಿನಕ್ಕೆ ಲಕ್ಷಗಟ್ಟಲೆ ಖರ್ಚು ಮಾಡಿ ನಡೆಸುತ್ತಿರುವ ಈ ಕಾರ್ಯಕ್ರಮವನ್ನು ನೀವೆಲ್ಲರೂ ನೋಡಲೇಬೇಕು. ಆ ಶ್ರೀರಾಮಚಂದ್ರನನ್ನು ಕಣ್ಣು ತುಂಬಿಕೊಳ್ಳಲೇಬೇಕು. ಬಹುತೇಕರಿಗೆ ಗೊತ್ತಿಲ್ಲ ಅನ್ನಿಸುತ್ತೆ ಬಾಲ್ಯದಲ್ಲಿ ಶ್ರೀಕೃಷ್ಣ ಕೂಡ ಕೌಬಾಯ್ ಆಗಿದ್ದನೆಂದು! ಹೌದು, ಗೋಪಾಲಕನಾಗಿ ಹಲವು ವರ್ಷ ಕಳೆದ ನಂತರವೇ ಆತ ಭಗವಾನ್ ಶ್ರೀಕೃಷ್ಣನಾಗಿದ್ದು. ಕೌಬಾಯ್ ಎನ್ನುವವರಿಗೆ ಇದಷ್ಟು ಅರ್ಥವಾದರೆ ಸಾಕು.

Read Full Post »

ಅಣ್ಣಾ ಹಜಾರೆ ಬೀದಿಗಿಳಿಯುತ್ತಾರೆ. ದೇಶಕ್ಕೆ ದೇಶವೆ ಬದಲಾಗಿ ಹೋಗುತ್ತೆ. ಪ್ರಬಲ ಲೋಕಪಾಲ್‌ಗಾಗಿ ನಮ್ಮ ಹೋರಾಟ. ನೀವು ಬನ್ನಿ, ಬೆಂಬಲಿಸಿ…ಹಾಗಂತ ಹೇಳಿಕೊಂಡು ತಿರುಗಾಡಿದವರು ಬಹಳ ಮಂದಿ. ಫೇಸ್‌ಬುಕ್‌ನಲ್ಲಿ, ಇ-ಮೇಲ್‌ನಲ್ಲಿ ಎಲ್ಲ ಅಣ್ಣಾ ಹೋರಾಟದ್ದೆ ಚರ್ಚೆ. ಅಷ್ಟು ಸಾಲದು ಎಂಬಂತೆ ಮೊಬೈಲ್‌ಗೂ ಹಜಾರೆ ಹೋರಾಟದ ಮೆಸೇಜ್. ಇವನ್ನೆಲ್ಲ ನೋಡಿದ ನಂತರ ನನಗನ್ನಿಸಿದ್ದನ್ನು  ಈ  ಲೇಖನದಲ್ಲಿ ಬರೆದೆ.

ಊಹೂಂ, ಅಣ್ಣಾ ಹೋರಾಟದಿಂದ ಆಡಳಿತ ವ್ಯವಸ್ಥೆಯಲ್ಲಿ ಯಾವೊಬ್ಬ ಮಂತ್ರಿಯ ಒಂದು ಕೂದಲು ಅಲ್ಲಾಡಲಿಲ್ಲ. ಯಾವೊಬ್ಬ ರಾಜಕಾರಣಿಯೂ ರಾಜೀನಾಮೆ ಕೊಡಲಿಲ್ಲ. ಬದಲಾಗಿ ಅಣ್ಣಾ ತಣ್ಣಗಾಗಿ ಬಿಟ್ಟರು. ಅಣ್ಣಾ ಹಿಂದೆ ಹೋದ ಒಂದಷ್ಟು ಮಂದಿ, ಫ್ರೀಡಂ ಪಾರ್ಕ್‌ನಲ್ಲಿ ಕುಳಿತ ಒಂದಷ್ಟು ಮಂದಿ ಹೊಸ ಅನುಭವ ಪಡೆದರು!

ಈಗ ಮಂಗಳೂರು ಘಟನೆಯ ಕಾವು. ೨೦೦೯ರ ಪಬ್ ಗಲಾಟೆಯಾದಾಗಲೂ ಇದೇ ರೀತಿ ಕಾವಿತ್ತು. ಹೆಣ್ಣು ಮಕ್ಕಳ ಮೇಲೆ ಕೈಮಾಡಿದವರನ್ನೆಲ್ಲ ಗಲ್ಲಿಗೇರಿಸುವವರೆಗೂ ಬಿಡುವುದಿಲ್ಲ ಅನ್ನೊಹಾಗಿತ್ತು. ಆಫ್‌ಕೋರ್ಸ್ ನಾನು ಆ ಘಟನೆಯನ್ನು ಸಮರ್ಥಿಸಿ ಬರೆದಿದ್ದೆ. ಯಾಕಂದರೆ ಆವತ್ತು ದಾಳಿಯಾದ ಜಾಗ, ಸ್ಥಿತಿ ಎಲ್ಲವೂ ಬೇರೆ.

ಈ ಸಲದ ದಾಳಿ ಸಮರ್ಥನೀಯವಲ್ಲ ಎಂಬುದು ನಿಜ. ಆದರೆ ಯಾರದ್ದೊ ಪಸರ್ನಲ್ ಪಾರ್ಟಿಗೆ ಹೋಗಿ ದಾಳಿ ಮಾಡಲಾಗಿದೆ ಎಂಬುದು ಸತ್ಯವಲ್ಲ ಅನ್ನಿಸುತ್ತಿದೆ. ಹಾಗೆ ದಾಳಿ ಮಾಡಿವುದಿದ್ದರೆ ಅದೆಷ್ಟೊ ಪಾರ್ಟಿಗಳು ದಿನನಿತ್ಯ ನಗರಗಳಲ್ಲಿ ಸಿಗುತ್ತವೆ. ವೈಯಕ್ತಿಕ ಕಾರಣಕ್ಕೊ, ಇನ್ನ್ಯಾವುದೊ ಕಾರಣಕ್ಕೆ ದಾಳಿ ನಡೆದಿದೆ. ಅದೊಂದು ಹೋಮ್ ಸ್ಟೆ. ಬಹುಶಃ ಹಿಂದೂ ಜಾಗರಣ ವೇದಿಕೆಯವರು ನಂದಿ ಬೆಟ್ಟದಲ್ಲಿ, ಬಂಡಿಪುರದಲ್ಲಿ ಇರುವ ಹೋಮ್‌ಸ್ಟೆಗಳು, ಐಷಾರಾಮಿ ಲಾಡ್ಜ್‌ಗಳ ಒಳಹೊಕ್ಕು ನೋಡಿಲ್ಲ! ಅಥವಾ ಈ ಜಾಗದಲ್ಲೆಲ್ಲ ಹಿಂದು ಜಾಗರಣ ವೇದಿಕೆಯಿಲ್ಲ!

ಪರವೊ, ವಿರೋಧವೊ ಒಂದು ಅಲೆ ಎದ್ದಿರುವುದು ನಿಜಕ್ಕೂ ಸ್ವಾಗತಾರ್ಹ. ಆದರೆ ಈ ಅಲೆ ಎಷ್ಟು ದಿನ ಎಂಬುದು ಮುಖ್ಯ. ಗುಂಪಿನಲ್ಲಿ ಗೋವಿಂದ ಅಂದವರ ಕಥೆಯಿದು. ದಾಳಿಯಾದ ಮೂರು, ನಾಲ್ಕು ಅಥವಾ ಐದು ದಿನ ಈ ಅಲೆ ಜೋರಾಗಿ ಇರುತ್ತೆ. ಆರನೆ ದಿನಕ್ಕೆ ಎಲ್ಲರಿಗೂ ಎಲ್ಲವೂ ಮರೆತು ಹೋಗಿರುತ್ತೆ. ಯಾಕಂದ್ರೆ ದಾಳಿಯಲ್ಲಿ ನಮ್ಮ ಅಕ್ಕ,ತಂಗಿ, ಒಡಹುಟ್ಟಿದವರು ಇಲ್ಲವಲ್ಲ!

ಕೇವಲ ಮಂಗಳೂರು ದಾಳಿಗೆ ಮೀಸಲಾದ ಮಾತು ಇದಲ್ಲ. ಮುಂಬೈ ಬಾಂಬ್ ಸ್ಪೋಟವಾದಗಲೂ ನಮಗೆ ಅದೇ ಉತ್ಸಾಹ. ಕಸಬ್ ಹಿಡಿದಾಗಲೂ ನಮ್ಮದು ಅದೇ ಅಬ್ಬರ. ಫೇಸ್‌ಬುಕ್‌ಗೆ ಕಾಲಿಟ್ಟರೆ ಕೆಲವರಂತೂ ಜಗತ್ತೆ ಮುಳುಗಿ ಹೋಯಿತು ಅನ್ನುವ ಹಾಗೆ ಆಡುತ್ತಿದ್ದಾರೆ. ಆಫ್‌ಕೋರ್ಸ್ ಅವರ ಆ ಅಬ್ಬರದಿಂದ ಏನಾದರೂ ಆಗುವುದಾದದರೆ ಅಥವಾ ಏನಾದರೂ ಆಗುವವರೆಗೂ ಅವರು ಅಬ್ಬರಿಸುವುದಾದರೆ ಖಂಡಿತಾ ಅದು ಸ್ವಾಗತಾರ್ಹ.

ದೇಶಕ್ಕೆ ಬಾಂಬ್ ಇಟ್ಟ ಕಸಬ್‌ಗೆ ಇನ್ನೂ ಏನು ಮಾಡಲು ನಮ್ಮ ಹಣೆಬರಹಕ್ಕೆ ಸಾಧ್ಯವಾಗಿಲ್ಲ. ಬೀದಿಯಲ್ಲಿ ಹುಡುಗಿಯರನ್ನು ರೇಪ್ ಮಾಡಿ ರಾಜಾರೋಷವಾಗಿ ಬದುಕುತ್ತಿರುವವರು ಇಲ್ಲಿ ಇದ್ದಾರೆ. ಅಂಥದರಲ್ಲಿ ರೈಲಿನಿಂದ ಒಂದು ಹುಡುಗಿಯನ್ನು ಎಸೆದವರು, ಯಾವುದೊ ಪಬ್ ಮೇಲೆ ದಾಳಿ ಮಾಡಿದವರಿಗೆ ಏನು ಆಗಬಹುದು. ನೂರಾರು ಎಕರೆ ಭೂಮಿ ನುಂಗಿದವರಿಗೆ ನಮ್ಮಲ್ಲಿ ಶಿಕ್ಷೆಯಿಲ್ಲ. ೨-೩ ದಿನ ಜೈಲಿನಲ್ಲಿಟ್ಟು ಕೊನೆಗೆ ನಾಲ್ಕನೆ ದಿನ ಜಾಮೀನು ಸಿಕ್ಕಿತು ಎಂಬ ಸುದ್ದಿ. ಐದನೇ ದಿನಕ್ಕೆ ಅದು ಹಳತು. ಮತ್ತೆ ಅದು ನೆನಪಾಗುವುದು ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ. ಅದರ ತೀರ್ಪು ಬರುವುದರೊಳಗೆ ಆತನೇ ಬದುಕಿರೋದಿಲ್ಲ!

ಬೇಕಾದರೆ ಇವತ್ತಿನಿಂದ ಲೆಕ್ಕವಿಟ್ಟು ನೋಡಿ ಮಂಗಳೂರು ಘಟನೆಯ ಕಾವು ನಮ್ಮಲ್ಲಿ ಎಷ್ಟು ದಿನ ಉಳಿಯುತ್ತೆ ಅನ್ನೋದನ್ನ! ಹೊಡೆದವರಿಗೆ ಏನಾಗುತ್ತೆ, ಹೊಡೆಸಿಕೊಂಡವರು ಏನಾಗುತ್ತಾರೆ ಅನ್ನೋದನ್ನ! ಏನು ಆಗಲಿ, ಬಿಡಲಿ ಮುಂದಿನ ದಾಳಿಯಲ್ಲಿ ಮತ್ತೆ ಈಸಲದ ದಾಳಿ ಬಾಕ್ಸ್ ಐಟಂ ಆಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತೆ ಅನ್ನೊದು ದಿಟ.

Read Full Post »

Older Posts »