Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಕವಿತೆ’ Category

ಹುಡುಗಿಯೆಂದರೆ ಹಾಗೆ,

ಕೇದಗೆಯ ಘಮದಂತೆ

ಅಲ್ಲ, ಕೇದಗೆಯ ಹೂವಿನಂತೆ

ಬಿದರಿನ ಮಟ್ಟಿಯಲ್ಲಿ

ಸರ್ಪಗಾವಲಿನಲ್ಲಿ ಬೆಳೆದು

ಹಾದಿಹೋಕರ ಕಣ್ಣು ಕುಕ್ಕುವುದು

 

ಕೀಳುವ ಬಯಕೆಯಾಗಿ ಮಟ್ಟಿಯನೇರಿದರೆ

ಚುಚ್ಚುವ ಬಿದಿರ ಮುಳ್ಳುಗಳು

ಬಗ್ಗದೆ ಗಟ್ಟಿಯಾಗಿ ಏರುತ್ತ ಹೋದಂತೆ

ಮೂಗಿಗಡಚುವ ಪರಿಮಳ

ಕಿತ್ತ ಹೂವಿನೊಂದಿಗೆ ಕೆಳಗಿಳಿದರೆ

ಚೂಪಗೆ ಕಾದು ಕುಳಿತಿಹರು ಹಲವರು!

 

ಘಮವೆಂಬುದು ನೈಸರ್ಗಿಕವಾದರೂ

ಒಂದು ಬಗೆಯ ಕೃತಕ ಸುಗಂಧದಂತೆ

ತಾಸೆರಡುತಾಸಿಗೆ ಆರಿ ಹೋಗುವುದು

ಸಂಜೆಯೊಳಗೇ ಬಾಡುವುದು ಸೂರ್ಯನ ತಾಪಕ್ಕೆ

ಮುಳ್ಳು ತರಚಿದ ಗಾಯ ಮಾಸುವುದರೊಳಗೆ

ಕಳಚಿ ಬೀಳುವುದು ಘಮದ ಮುಖವಾಡ

 

ಕೇದಗೆಯ ಜಾತಿಯೇ ಹಾಗೆ

ಸೂಕ್ಷ್ಮ, ಅತಿ ಸೂಕ್ಷ್ಮ,

ಎಷ್ಟಂದರೂ ಪಕ್ಕೆಗಳಿಲ್ಲದ ಹೂವದು!

ಚೂರು ಕೈಜಾರಿದರೂ ಒಂದೇಸಳೂ ಸಿಗದು

ಮುಂಜಾನೆ ಕಂಡ ಬೆಡಗಿನ  ಕೇದಗೆಯಲ್ಲ

ಆದರೂ ಅದರ ಆಕರ್ಷಣೆಗೆ ಸೋಲದವರಿಲ್ಲ

 

ಬಿದಿರ ಮಟ್ಟಿ ಏರದ ಹೊರತು ಅರ್ಥವಾಗುವುದಿಲ್ಲ

ಕೆಳಗೇ ಕುಳಿತು ಇಣುಕಿದರೆ ಪ್ರಯೋಜನವಿಲ್ಲ

ದ್ವಂದಗಳ ನಡುವೆ ಕಳೆದಿದೆ ಹಲವು ಶಿವರಾತ್ರಿ

ಈ ಸಲ ಹಬ್ಬಕ್ಕಾದರೂ ಕೀಳಬೇಕಿದೆ ಕೇದಗೆಯ

ಶಿವನ ಮುಡಿಯೇರಿದ ಪ್ರಸಾದವಾದರೆ…

ಕಿವಿಗೆ ಮುಡಿದುಕೊಂಡರಾಯಿತು ಸುಮ್ಮನೆ!

Read Full Post »

ಸೂರ್ಯನ ತಾಪವಿರದ
ಜನರ ತಾಪತ್ರಯವಿರದ
ನಿಶಬ್ದದ ರಾತ್ರಿಯ ಬೆಳಕಿಗಾಗಿ
ಕನವರಿಸುತ್ತಿದೆ  ಮನ

ಮೇಲ್ನೋಟದಿ ಚೆಂದದ ನಗು
ಒಳಗೊಳಗೆ ಹಾಲಿನಂಥ ವಿಷ
ಸ್ವಚ್ಛಂದದ ನಗುವಿನಲ್ಲೂ  ಕಲಬೆರಕೆ
ಎಷ್ಟಂದರೂ ಮಹಾನಗರಿಯಿದು!

ನಿತ್ಯದ ಸೂರ್ಯ ಕಿರಣಗಳಂತೆ
ಅರ್ಥವಾಗದು ಪರ ಮನ
ಚರ್ಮಕ್ಕೆ ತಾಕಿದರೂ ಗೊತ್ತಾಗದು
ವಿಷ ಕಿರಣಗಳ ಒಳ ಹೂರಣ

ಕನವರಿಸುತ್ತಿದೆ ಮನ
ಚಂದಮಾಮನ ನಿಷ್ಕಲ್ಮಶ ನಗೆಗಾಗಿ
ಸಿಕ್ಕಂತೆ ಭಾಸವಾಗಿ ಮಾಯವಾಗುತ್ತದೆ
ಆ ನಗುವಿನ ಸಂಭ್ರಮ
ಹಾಗಾಗಿಯೇ ಇದು ತಿಂಗಳ ಬೆಳಕು!

Read Full Post »

ಕಾರ್ತೀಕದ ಮುಸ್ಸಂಜೆ
ಮಬ್ಬು ಮಬ್ಬಾಗಿತ್ತು
ಹಣತೆಗಳ ನಡುವೆಯೂ
ಜಗುಲಿ ಕತ್ತಲಾಗಿತ್ತು

ಬಿಕ್ಕುತ್ತಿದ್ದಳು ಒಬ್ಬಳೇ
ಕಣ್ಣೀರು ಇಳಿಯದಂತೆ
ಅಳುವಿನ ಸದ್ದು
ಯಾರಿಗೂ ಕೇಳದಂತೆ

ಉಕ್ಕಿದ ನೆರೆ ಕಾರಣವಲ್ಲ
ಅವಳ ನಗು ಮಾಸಲು
ನಾಲಗೆ ಹೊರಳುತ್ತಿಲ್ಲ
ಬೇಸರದ ಕಾರಣ ಹೇಳಲು

ಬಲು ದೂರ ನಡೆದಿದ್ದಾನೆ
ನಡು ಹಾದಿಯಲ್ಲಿ  ಕೈಬಿಟ್ಟು
ದೂರು ಕಾರಣಗಳ
ಸರಮಾಲೆಯನ್ನು ಎದುರಿಗಿಟ್ಟು

ಕಾರ್ತೀಕದ ಮುಸ್ಸಂಜೆ
ಮಬ್ಬು ಮಬ್ಬಾಗಿತ್ತು…

(ವಿ.ಸೂ:- ಅಕ್ಷರ ವಿಹಾರಕ್ಕೆ ೨ ವರ್ಷ ತುಂಬಿದೆ. ಇಲ್ಲಿನ ಬರಹಗಳನ್ನು ಓದಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು)

Read Full Post »

IND0704B

ಮಳೆಗಾಲ ಶುರುವಾದರೆ
ಬರೀ ಮೋಡದ ಮುಸುಕು
ಚಾದರ ಹೊದ್ದು ಮಲಗಿದರೆ
ಏಳಲು ಒಪ್ಪುವುದಿಲ್ಲ  ಮನಸು

ಮೋಡದ ಪೊರೆ ಸರಿದಾಗ
ಮಬ್ಬುಗತ್ತಲಿನ ಬೆಳಕು ಹೊರಗೆ
ಸರಿಸಲಾಗದ ಪೊರೆಯ
ಕತ್ತಲಿನ ಥಳಕು ಸದಾ ನನ್ನೊಳಗೆ

ಮನೆಯಂಗಳದ ಹೊಳೆಯಲ್ಲಿ
ಮನದಂಗಳದ ಪ್ರವಾಹಕ್ಕೆ ಬೆಲೆಯಿಲ್ಲ
ಅವಳಿಗಾಗಿ ಅತ್ತರೆ ಪ್ರಯೋಜನವೂ ಇಲ್ಲ
ಅಳದಿರಲು ಅದ್ಯಾಕೋ ಹೃದಯ ಒಪ್ಪುತ್ತಿಲ್ಲ!

ದೂರ್ವಾಸರ ಶಾಪ ಶಕುಂತಲೆಗಲ್ಲ
ದುಶ್ಯಂತನಿಗೆ ಎಂದು ಅರ್ಥವಾಗದ ಕವಿ
ತನಗೆ ತೋಚಿದ್ದನ್ನೇ ಗೀಚಿಬಿಟ್ಟಿದ್ದಾನಲ್ಲ
ಎಂದಾಗ ಸಿಟ್ಟಾಗಿದ್ದ  ಮೋಡದೊಳಗಣ ರವಿ!

Read Full Post »