“ಮೊಣಕಾಲಿಗಿಂತ ಕೆಳಗೆ ಬರದಂತೆ ಲಂಗ ತೊಟ್ಟ ಲಲನೆಯರು, ಬ್ರೆಜಿಲ್ ಬೀದಿಯಂತೆಯೋ, ಕೊಲಂಬಿಯಾದ ತಪ್ಪಿಲಿನಂತೆಯೋ ಕಾಣುವ ಕೇರಿಗಳು, ಅಲ್ಲಲ್ಲಿ ಕೇಳಿಸುವ ಪೋರ್ಚುಗೀಸ್ ಮಿಶ್ರಿತ ಕೊಂಕಣಿ, ಅರೆಬರೆಬೆಂದ ಹಿಂದಿ, ಮತಾಂತರಗೊಂಡ ಮೀನುಗಾರರು, ಜಗತ್ತಿನ ಪರಿವೇ ಇಲ್ಲದೆ ಪ್ರೀತಿಯಲ್ಲಿ ಮುಳುಗಿದ ಜೋಡಿಗಳು, ವಾರಾಂತ್ಯ ಕಳೆಯಲು ಬಂದ ಸಹೋದ್ಯೋಗಿಗಳು, ಬದುಕಿನ ಎಲ್ಲ ದುಃಖವನ್ನು ಮರೆಯಲೆಂಬಂತೆ ಕೈಯ್ಯಲ್ಲಿ ಸಾರಾಯಿ ಸೀಸೆ ಹಿಡಿದು ತಿರುಗುವ ಈಗಷ್ಟೆ ಮೀಸೆ ಚಿಗುರಿದ ತರುಣರು, ಲೆಕ್ಕ ಮಾಡಿ ಮೂರು ಮನೆಗೆ ಒಂದರಂತೆ ಸಿಗುವ ಬಾರುಗಳು, ಬದುಕಿನ ಜರ್ನಿಯನ್ನು ಮುಗಿಸಿದವರಂತೆ ಬಸ್ಸಿನಲ್ಲೇ ಕುಳಿತು ಬೈಬಲ್ ಓದುವ ಮುದುಕಿಯರು, ಒಣ ಮೀನಿನ ವಾಸನೆ, ಘನಮಾಡಿದ ಅಕ್ಕಿಯಲ್ಲಿ ಸಿಗುವ ಕಲ್ಲಿನಂತೆ ಅಪರೂಪಕ್ಕೆ ಕಾಣಿಸುವ ಹಣೆಗೆ ಕುಂಕುಮವಿಟ್ಟ ಶ್ರೀಮತಿಯರು…ಇವ್ಯಾವುದರ ಪರಿವೂ ಇಲ್ಲದೆ ಅವಳು ತನ್ನ ಹಾದಿಯಲ್ಲಿ ಸಾಗುತ್ತಿರುತ್ತಾಳೆ. ಭಾರತದ ಸ್ವರ್ಗವದು…” ಹಾಗಂತ ಆಫೀಸಿನ ಕೊಲೀಗು ವತ್ಸಲ ಹೇಳಿದಾಗಲೇ ಯಾಕೆ ಆಕೆಯನ್ನು ಮೀಟ್‍ಮಾಡಿ ಬರಬಾರದು ಅನ್ನಿಸ್ತು..
***
“ಮೇಡಂ, ಆಚೆಗೊಂದು ಡ್ಯಾಂ, ಈಚಿಗೊಂದು ಡ್ಯಾಂ. ಆದ್ರೂ ಕುಡಿಯಾಕೆ ನೀರು ಇರಹಂಗೆ ಇಲ್ರಿ. ಈ ಲೋಂಡ ದಾಟಿದ್ರೆ ಮುಗಿತು ನೋಡ್ರಿ ಕಥಿ. ಮಳಿಯಾದ್ರ ಬದುಕು, ಇಲ್ಲಂದ್ರ ಇಲ್ರಿ, ಅದ್ಕ ಹಿಂಗ ಗಂಟು ಮೂಟಿ ಕಟ್‍ಕೊಂಡು ಗುಳೆ ಹೋಗ್ತೀವ್ರಿ…”
ರೈಲಿನಲ್ಲಿ ಕುಳಿತ ಭೀಮಪ್ಪ ತನ್ನ ಅಳಲನ್ನು ಹೇಳಿಕೊಳ್ಳುತ್ತಿದ್ದ.
“ಧಾರವಾಡ ದಾಟಿದ್ರೆ ಮುಗಿತ್ರಿ. ಬೆಳಗಾಂ, ಬಾಗಲಕೋಟಿ, ಗದಗ…ಹಿಂಗೆ ಎಲ್ಲಿ ನೋಡಿದ್ರು ನೀರು ಸಿಗಹಂಗೆ ಇಲ್ರಿ. ಅದ್ಕಾರಿ ನಾವು ಕಳಸಾ-ಬಂಡೂರಿ ಯೋಜನೆಯಾಗಬೇಕು ಅಂತ ಸೆಟೆದು ನಿಂತಿವ್ರಿ. ಕೊನಿಗೆ ಕನಿಷ್ಟ ಪಕ್ಷ ಕುಡಿಯಾಕಾದ್ರು ನೀರು ಸಿಗ್‍ತೈತ್ರಿ. ಘಟ್ಟದ ಕೆಳಗೆ ಇಳಿದ್ರೆ ದೊಡ್ಡ ಸಮುದ್ರಾನೆ ಐತಿ. ಆದ್ರೆ ಪ್ರಯೋಜನ ಏನ್ ಬಂತ್ರಿ? ಸಮುದ್ರದ ನೀರು ಸಮುದ್ರದ್ದೆ. ಪಟ್ಟಣ್ಣದಲ್ಲಿ ಕುಳಿತ್ ಮಂದಿಗೆ ನಮ್ ನೋವು ಅರ್ಥ ಆಗಂಗೆ ಇಲ್ರಿ…”
ಭೀಮಪ್ಪನ ಮಾತು ಮುಂದುವರಿಯುವ ಹೊತ್ತಿಗೆ ರೈಲು ಭೀಮಘಢದ ದಟ್ಟ ಕಾಡನ್ನು ತಲುಪಿಯಾಗಿತ್ತು.
ಬೆಳಗಾವಿ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ಜೀವಜಲವೆಂದರೆ ಮಲಪ್ರಭ ಹಾಗೂ ಮಹಾದಾಯಿ ನದಿಗಳು ಎಂದು ಅಪ್ಪ ಹೇಳುತ್ತಿದ್ದ ನೆನಪು. ಭೀಮಘಡದಲ್ಲಿ ಹುಟ್ಟುವ ಮಹಾದಾಯಿಗೆ ಗಂಡನ ಮನೆ ಗೋವಾ. ಆಕೆಯೂ ನನ್ನಂತೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬಂತಿರುವವವಳು. ಮಹಾದಾಯಿ ಮೈತುಂಬಿಕೊಂಡಿರುವ ಹೊತ್ತಿನಲ್ಲಿ ಎಲ್ಲರಿಗೂ ಬೇಕು.
ನನಗೆ ನೆನಪಿನಲ್ಲಿ ಉಳಿದಂತೆ ನರಗುಂದ, ರೋಣ, ನವಲಗುಂದ, ಸವದತ್ತಿ ಭಾಗದ ನೀರಿನ ಹಾಹಾಕಾರ ನೀಗಿಸಲು ನಾವು ಹೈಸ್ಕೂಲ್‍ಗೆ ಹೋಗುವ ಹೊತ್ತಿಗೆ ಮಲಪ್ರಭೆ ಅಣೆಕಟ್ಟು ಕಟ್ಟಲಾಯ್ತು.
ಬೆಳಗಾವಿ ಜಿಲ್ಲೆಯ ಮತ್ತೊಂದು ಮಗ್ಗುಲಿನಲ್ಲಿರೋದು ಮಹಾದಾಯಿ ನದಿ. ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ, ದೂದ್‍ಸಾಗರ್ ಮೊದಲಾದ ಉಪನದಿಗಳಿಂದ ಕೂಡಿದ ಕಣಿವೆಯದು. ತವರುಮನೆಯಲ್ಲಿ ಮೈತುಂಬಿಕೊಂಡು ಸಡಗರದಿಂದ ಹೊರಟ ಹುಡುಗಿ ಗಂಡನ ಮನೆಯ ಹೊಸ್ತಿಲು ತುಳಿದಂತೆ ಇದೆ ಗೋವಾ ಎಂದು ನಮ್ಮೂರು ಕಡೆ ಆಗಾಗ ಹೇಳ್ತಾ ಇರ್ತಾರೆ.
ಈ ಅಣೆಕಟ್ಟು ಒಂದಷ್ಟು ಜನರ ಬದುಕಿಗೆ ಬೆಳಕು ನೀಡಿದರು ಮತ್ತೊಂದಷ್ಟು ಮಂದಿಯ ಬದುಕನ್ನು ಮುಳುಗಿಸುತ್ತದೆ. ಹಾಗೆ ಮುಳುಗಡೆಯಾಗಿ ಮಲಪ್ರಭೆಯ ದಂಡೆಯಿಂದ ಎದ್ದು ಬಂದವರಲ್ಲೊಬ್ಬರು ನಾವು. ಹಲವರ ಬದುಕು ಮುಳುಗಿಸಿದ ಈ ಅಣೆಕಟ್ಟು ಭರ್ತಿಯಾಗಿದ್ದು ಅಷ್ಟರಲ್ಲೇ ಇದೆ.
***
“ಮಗ ಗೋವಾಕ್ಕೆ ಹೋದ್ರೆ ಬದುಕು ಮರೆತುಹೋಗುತ್ತೆ ಕಣೆ. ಭೂಲೋಕದ ಸ್ವರ್ಗವದು. ಬರಿ ಅಮಲು. ನೀನೊಂದ್ಸಲ ಅಲ್ಲಿಗೆ ಹೋಗಿ ಬಾ. ನಂತ್ರ ಬದುಕಿನಲ್ಲಿ ಹೀಗೆಲ್ಲ ಗೌರಮ್ಮ ಥರ ಕುಳಿತಿರಲ್ಲ. ಐ ವಿಲ್ ಬೆಟ್ ಯು…”
ವತ್ಸಲಾಗೆ ಹೇಗಾದ್ರು ಮಾಡಿ ನನ್ನನ್ನು ಮೊದಲಿನಂತೆ ನೋಡುವ ಆಸೆ. ನನಗಿಂತ ಹೆಚ್ಚಾಗಿ ಆಕೆಗೆ ನನ್ನ ಬದುಕಿನಲ್ಲಿ ಖುಷಿ ಕಾಣುವ ಇರಾದೆ.
ಯಾರಿಗಾಗಿ ಬದುಕುತ್ತಿದ್ದೇನೆ? ಯಾಕಾಗಿ ಬದುಕುತ್ತಿದ್ದೇನೆ? ಇವೆರಡು ಬಹುವಾಗಿ ಕಾಡುತ್ತಿರುವ ಪ್ರಶ್ನೆ. ಉತ್ತರ ಹುಡುಕಾಟ ನಿರಂತರ ಎಂದುಕೊಳ್ಳುತ್ತ ತಲೆಯೆತ್ತಿದ್ರೆ ಜನವೆಲ್ಲ ರೈಲನ್ನು ಇಳಿಯುವ ಧಾವಂತದಲ್ಲಿದ್ರು. ಕಿಟಕಿಯಾಚೆಗೆ ಹಳದಿ ಬಣ್ಣದಲ್ಲಿ ವಾಸ್ಕೊಡ ಗಾಮ ಎಂಬ ಬೋರ್ಡು ಕಾಣಿಸುತ್ತಿತ್ತು.
ಗೋವಾವನ್ನು ಕಂಡುಹಿಡಿದವನು ವಾಸ್ಕೋಡಿಗಾಮ. ಆತನೇ ಭಾರತಕ್ಕೆ ಮೊದಲು ಬಂದ ವಿದೇಶಿ ನೌಕಾಯಾನಿ ಅಂತೆಲ್ಲ ಹೈಸ್ಕೂಲಿನ ಪಾಠದಲ್ಲಿ ಓದಿದ ನೆನಪು. ಈ ಬದುಕು ಎಷ್ಟು ವಿಚಿತ್ರ. ಹೈಸ್ಕೂಲ್‍ನಲ್ಲಿ ನಾನು ಹೀಗೆಲ್ಲ ಇರಲೇ ಇಲ್ಲ. “ಹೆಣ್ಣುಮಕ್ಕಳು ಎಷ್ಟು ತಗ್ಗಿ, ಬಗ್ಗಿ ನಡೆದ್ರು ಸಾಲದು. ಕೊಟ್ಟ ಹೆಣ್ಣು ಯಾವತ್ತಿದ್ರು ಕುಲಕ್ಕೆ ಹೊರಗೆ. ಗಂಡನ ಮನೆ ದೀಪ ಬೆಳಗೋಳು. ಅಲ್ಲಿ ನಿನ್ನ ಜೊತೆ ದಿನ ಅಪ್ಪ, ಅಮ್ಮಬರಲ್ಲ. ನೀನು ಹೀಗೆ ಗಂಡುಬೀರಿ ಥರ ಇದ್ರೆ ಎಲ್ಲೂ ಬದುಕಲ್ಲ. ಶಿಸ್ತು ಕಲಿ, ಎದುರಾಡೋದು ಬಿಡು…” ದಿನ ಬೈದು, ಬೈದು ಅಮ್ಮ ನನ್ನ ಧ್ವನಿಯನ್ನು ಸಾಕಷ್ಟು ಕರಗಿಸಿದ್ದಳು. ಊರಿನ ಉಳಿದೆಲ್ಲ ಟಿಪಿಕಲ್ ಹುಡುಗಿಯರಂತೆ ನನ್ನನ್ನು ತಯಾರು ಮಾಡಿದ್ಲು. ಅಮ್ಮ ಹೇಳಿದ್ದು ನಿಜ. ಬದುಕಿನ ಹಾರಾಟ, ಚೀರಾಟ ಎಲ್ಲ ಜಾಸ್ತಿ ದಿನ ಜೊತೆ ಇರಲಾರದು ಎಂದುಕೊಳ್ಳುವ ಹೊತ್ತಿಗೆ ನಾನು ಗೋವಾ ತಲುಪಿದ್ದೇನೆ ಎಂಬುದು ದಿಟವಾಯ್ತು. ಹೊರಗಿಳಿದು ಬಂದ್ರೆ ಕ್ಯಾಬ್‍ನವನು ಕಾಯುತ್ತಿದ್ದ. ಹೊಟೆಲ್‍ನಲ್ಲಿ ರೂಮು ಬುಕ್ ಆಗಿತ್ತು. ನನ್ನ ಪ್ರಶ್ನೆಗೆ ಇಲ್ಲಾದರು ಉತ್ತರ ಸಿಗಬಹುದಾ ಎಂಬ ಆಸೆಯೊಂದು ಸಣ್ಣಗೆ ಚಿಗುರಿತ್ತು.
***
ಮುಳುಡಗೆಯಾದ ನಂತರ ಅಪ್ಪ ನರಗುಂದ ತಾಲೂಕಿನ ಶಿರಕೋಳದ ಹಣಸಿಯಲ್ಲಿ ಒಂದಷ್ಟು ಭೂಮಿ ಖರೀದಿಸಿ ಬೇಸಾಯ ಆರಂಭಿಸಿದರು. ಅಮ್ಮ ಹೊಲದ ಕೆಲಸದಲ್ಲಿ ಅಪ್ಪನಿಗೆ ಸಾಥ್. ಅದ್ಯಾಕೊ ಅಲ್ಲಿ ವಿದ್ಯಾಭ್ಯಾಸ ಅಷ್ಟೊಂದು ಚೆನ್ನಾಗಿಲ್ಲವೆಂದು ಕಾಲೇಜಿಗೆ ಧಾರವಾಡಕ್ಕೆ ಬಂದೆ.
ಧಾರವಾಡದ ಎಲ್‍ಎಲ್‍ಬಿಯ 5 ವರ್ಷ ಬದುಕಿನ ಸುವರ್ಣಯುಗ. ಆಗೆಲ್ಲ ಬದುಕಿನ ಕುರಿತಾಗಿ ಪ್ರಶ್ನೆಗಳಿರಲಿಲ್ಲ. ಹಾಸ್ಟೆಲ್ ಗೆಳೆತಿಯರು, ಕಾಲೇಜಿನಲ್ಲಿ ಚುಡಾಯಿಸುವ ಹುಡುಗರು, ಸುತ್ತಾಟ, ತಿನ್ನೋದು, ಕಾರ್ಯಕ್ರಮಗಳು, ಸಿನಿಮಾ, ಸಂಗೀತ, ಕ್ಲಾಸು, ಓದು…ಇವಿಷ್ಟು ಬಿಟ್ಟು ಬೇರೆಯ ಜಗತ್ತು ಗೊತ್ತಿರಲಿಲ್ಲ.
ಹೀಗೆ ದಿನ ಕಳೆಯುತ್ತಿರುವಾಗ ಪರಿಚಯವಾದವನು ಸುಮಂತ್. ಫೇಸ್ಬುಕ್, ವಾಟ್ಸಪು ಗೊತ್ತಿಲ್ಲದ ಕಾಲಕ್ಕೆ, ಇಂಟರ್‍ನೆಟ್ ಕಾಣದ ಸಮಯದಲ್ಲಿಯೇ ಸಖತ್ ಫ್ಲರ್ಟ್ ಮಾಡುತ್ತಿದ್ದ ಹುಡುಗ. ಹೂವಿನ ಮಕರಂದಕ್ಕೆ ದುಂಬಿಗಳು ಮುತ್ತಿಗೆ ಹಾಕುವಂತೆ ಚೆಂದದ ಹುಡುಗಿಯರು ಅವನನ್ನು ಸುತ್ತುವರಿಯುತ್ತಿದ್ದರು. ಅದ್ಯಾವುದೋ ಫುಟ್ಬಾಲ್ ಆಟಗಾರ ಹೇರ್‍ಸ್ಟೈಲ್, ಸ್ಮಾರ್ಟ್ ಆದ ಬೈಕು, ಜೀನ್ಸು, ಕೈಗೊಂದು ಬ್ಯಾಂಡ್…ಅವನ್ನ ನೋಡಿದ್ರೆ ಯಾವ ಮಗ್ಗುಲಿನಿಂದಲೂ ಯಾರೂ ತಿರಸ್ಕರಿಸುವಂತೆ ಇರಲಿಲ್ಲ. ಆದ್ರು ನಂಗೆ ಹುಡುಗರು ಅಂದ್ರೆ ಸ್ವಲ್ಪ ದೂರ. “ನೋಡು ಬದುಕಿನಲ್ಲಿ ಮದ್ವೆ ಅಂತ ಆಗೋದು ಒಂದೇ ಸಲ. ಪಟ್ಟಣ್ಣಕ್ಕೆ ಹೋಗಿ ನೀನು ಕೆಡಬ್ಯಾಡ. ಹಂಗೇನಾದ್ರು ಮಾಡಿದ್ರೆ ನಾವಿಬ್ರು ಜೀವಂತವಾಗಿರಲ್ಲ. ನಮಗೆ ಎಲ್ಲಕ್ಕಿಂತ ಮರ್ಯಾದೆ ಮುಖ್ಯ” ಎಂದು ಮನೆ ಬಿಟ್ಟು ಹೊರಡುವಾಗ ಅಮ್ಮ ಹೇಳಿದ ಮಾತುಗಳೆ ಕಿವಿಯಲ್ಲಿ ಗುನುಗುತ್ತಿತ್ತು.
ತನ್ನಿಂದ ಯಾರು ದೂರವಿರುತ್ತಾರೋ ಅವ್ರನ್ನು ಪಟಾಯಿಸಿಕೊಳ್ಳಬೇಕು ಅನ್ನೋದು ಅವನ ಕ್ರೇಜ್. ಹಾಗೆ ಪುಷ್ಪ, ಶೀತಲ್‍ನನ್ನು ಆತ ಪಟಾಯಿಸಿದ್ದ. ಆ ನಂತರ ಅವನ ಕಣ್ಣು ಬಿದ್ದಿದ್ದು ನನ್ನ ಮೇಲೆ.
***
ಸ್ನಾನ ಮುಗಿಸಿ ರೆಡಿಯಾಗಿ ರೂಮಿನಿಂದ ಹೊರಬಂದು ನೋಡಿದಾಗ ವತ್ಸಲ ಹೇಳಿದ್ದು ಒಂದು ಕ್ಷಣಕ್ಕೆ ನಿಜವೆನ್ನಿಸ್ತು. ಇದು ಭಾರತದ ಸ್ವರ್ಗ. ಅಮಲಿನ ಜಗತ್ತು. ಭೋರ್ಗರೆಯುವ ಸಮುದ್ರದ ತಟದಲ್ಲಿ ತುಟಿಗೆ ತುಟಿಯಿಟ್ಟು ಪ್ರೀತಿಸಿಕೊಳ್ಳುತ್ತಿರುವವರು ಅದೆಷ್ಟು ಜನ, ಮರಳಿನ ದಂಡೆಯಲ್ಲಿ ಬಗೆಬಗೆಯ ಆಟವಾಡಿ ಬದುಕಿನ ನೋವನ್ನೆಲ್ಲ ಮರೆಯುತ್ತಿರುವವರು ಅದೆಷ್ಟು ಮಂದಿ. ನಾನ್ಯಾಕೆ ಈ ಬದುಕನ್ನು ನೋವು ಅಂತ ಆಲೋಚಿಸುತ್ತೇನೆ. ಅವರೆಲ್ಲ ಬದುಕಿನ ಖುಷಿಯನ್ನು ಅನುಭವಿಸುತ್ತಿರಬಹುದಲ್ಲವೇ?
ಒಂಚೂರು ಮೇಲಕ್ಕೆ ಇಣುಕಿದ್ರೆ, ಮೂರು ಜಿಲ್ಲೆಯದ್ದು ಅದೇ ಗೋಳು. ಹತ್ತಾರು ಕಿಲೋಮೀಟರ್ ದೂರಕ್ಕೆ ಹೋಗಿ ನೀರು ಹೊತ್ತುಕೊಂಡು ಬರಬೇಕು. ಹೀಗಾಗಿ ಊರಿಗೆ ಹೋಗಲಿಕ್ಕೆ ಬೇಜಾರು. ಆದ್ರು ಅಪ್ಪ-ಅಮ್ಮನ ಪ್ರೀತಿಗಾದ್ರು ಊರಿಗೆ ಹೋಗ್ಲೆಬೇಕು. ನೀರಿಲ್ಲದ ಊರಿನಲ್ಲಿ ಸ್ವಚ್ಛತೆಯನ್ನು ನಿರೀಕ್ಷೆ ಮಾಡುವಂತಿಲ್ಲ. ಆದರೆ ಅಪ್ಪ-ಅಮ್ಮ ಎಂಬ ನಾಲ್ಕು ಅಕ್ಷರ ಇದನ್ನೆಲ್ಲ ಮರೆಸಿ ಒಂದಷ್ಟು ಖುಷಿ ಕೊಡುತ್ತಿತ್ತು.
ನನ್ನ ಮದುವೆ ಮಾಡಿ ಎರಡೇ ವರ್ಷಕ್ಕೆ ಭೀಕರವಾದ ಬರಗಾಲ. ಊರಲ್ಲಿ ನೀರಿಲ್ಲದೆ, ಹೊಲದಲ್ಲೆ ಏನು ಬೆಳೆಯದೆ, ಮದ್ವೆಗೆ ಮಾಡಿದ ಸಾಲ ತೀರಿಸಲಾಗದೆ ಅಪ್ಪ ಆತ್ಮಹತ್ಯೆ ಮಾಡಿಕೊಂಡ್ರು. “ಮಗ ಈ ಮಹಾದಾಯಿ ಯೋಜನೆಯೊಂದು ಆಗಿಬಿಡ್ಲಿ. ನಮ್ಮ ಡ್ಯಾಂಗೆ ನೀರು ಬರುತ್ತೆ. ನಾನು ಹೊಲದಾಗೆ ಬಂಗಾರ ಬೆಳೆದು ನಿಗೊಂದು ನಕ್ಲೇಸ್ ಮಾಡಿಸಿಕೊಡ್ತೀನಿ…” ಎನ್ನುತ್ತಿದ್ದ ಅಪ್ಪನ ಮುಗ್ಧ ಪ್ರೀತಿಯೇ ಇಲ್ಲದ ಮೇಲೆ ಬದುಕಿನಲ್ಲಿ ಇನ್ನೇನು ಇದೆ? ಅಪ್ಪನ್ನ ಕಳೆದುಕೊಂಡಿದ್ದೇ ನಾನಿಂದು ಬದುಕಿನ ಅರ್ಥ ಹುಡುಕುವಂತೆ ಮಾಡಿರಬಹುದಾ?
ಮಹಾದಾಯಿಯನ್ನು ಮಲಪ್ರಭೆಗೆ ತಂದು ಸೇರಿಸುವ ಕನಸು ಹೊತ್ತವರ ಜಗತ್ತು ಅಲ್ಲಿದೆ. ಉತ್ತಬೇಕು, ಬಿತ್ತಬೇಕು, ಮಕ್ಕಳನ್ನು ಡಾಕ್ಟರ್, ಎಂಜಿನಿಯರ್, ಲಾಯರ್ ಮಾಡಬೇಕು. ಮಗಳಿಗೊಂದು ಸರ, ಮಗನಿಗೊಂದು ಉಂಗುರ…ಇದನ್ನೇ ಬದುಕಿನ ಸರ್ವಸ್ವವೆಂಬಂತೆ ತಿಳಿದವರ ಜಗತ್ತದು.
“ಮಗ ನೀನು ಈ ಕೊಂಪೆಯಲ್ಲಿದ್ದು ನಮ್ಮ ಥರ ಸಾಯಬೇಡ. ಬೆಳಿಗ್ಗೆ ಎದ್ರೆ ನೀರಿಲ್ಲ, ರಾತ್ರಿ ಮಲಗೋವಾಗ ನೀರಿಲ್ಲ. ನೀನು ಭರ್ತಿ ನೀರು ಇರೋ ಪಟ್ಟಣ್ಣ ಸೇರು. ಗಂಡ, ಸಂಸಾರ, ಮಕ್ಕಳು ಅಂತ ಸುಖವಾಗಿ ಇರು. ನಂಗಂತು ಗಂಡು ಮಗ ಆಗ್ಲಿಲ್ಲ. ನಿಂಗಾದ್ರು ಆಗ್ಲಿ…” ಅಮ್ಮನ ಪ್ರಪಂಚವದು.
“ನನ್ಮಗಂದ್ ಬಾಸು. ನೋಡೊ ಆ ಫಿಗರ್‍ನ ಹೆಂಗೆ ಪಟಾಯಿಸಿದ. ಆಫೀಸ್ ಹೆಂಗೆ ದರಿದ್ರ ಆಗಿದೆ ನೋಡು. ಅವನಿಗಿದೆ ಹಬ್ಬ..” ಜೋರಾಗಿ ಕಿರುಚಿತ್ತಿದ್ದ.
“ಲೋ ಹೇಳಿದೆ ಮಗ ಈ ಬಿಸಿಲಿನಲ್ಲಿ ಬೀಯರ್ ಕುಡಿಬೇಡ ಅಂತ. ಈಗ ನೋಡು ನಿನ್ನ ಕಂಟ್ರೋಲ್ ಮಾಡೋಕೆ ಆ ಶಿವನೆ ಬರಬೇಕು..” ಅವನ ಗೆಳೆಯ ತಲೆಮೇಲೆ ಕೈಹೊತ್ತು ಕುಳಿತ್ತಿದ್ದ.
“ಲೋ ಬಾರೋ ಐ ಆಮ್ ಫಿಟ್ ಆಂಡ್ ಫೈನ್. ನಂಗೇನು ಆಗಿಲ್ಲ. ಲೋ ಮಚ್ಚ ಇನ್ನು ಎರಡು ಬಾಟಲಿ ಕುಡಿದಿಲ್ಲ ಕಣೋ. ಇಷ್ಟಕ್ಕೆಲ್ಲ ಕಿಕ್ ಕೊಡುತ್ತೇನೋ ಈ ದರಿದ್ರ ಬೀರು? ಗೋವಾಕ್ಕೆ ಬಂದಿರೋದು ಕುಡಿಯೋಕೆ. ಚೆನ್ನಾಗಿ ಕುಡಿದು ಈ ಸಮುದ್ರದಂಚಲ್ಲಿ ಮಲಗಿಬಿಡ್‍ಬೇಕು ಮಚಾ. ಏನು ಅಂದ್ರೆ ಏನು ಗೊತ್ತಾಗಬಾರದು ನಂಗೆ. ಹಂಗೆ ಕುಡಿಬೇಕು ಮಚಾ. ಬಾರೋ ಮಗ..”
ಒಂದೇ ನದಿಯ ಎರಡು ತೀರಗಳಲ್ಲಿ ಅದೆಷ್ಟು ವ್ಯತ್ಯಾಸವಿದೆ ಅಲ್ವಾ?
***
ಗಂಡು-ಹೆಣ್ಣು ವ್ಯತ್ಯಾಸವೇನಿದೆ? ಇಬ್ರದ್ದು ಜೀವವಲ್ವಾ? ಇಬ್ರು ಉಸಿರಾಡಲ್ವಾ? ನಮ್ಮಿಬ್ರ ನಡುವೆ ದಿನ ಇದೇ ಜಗಳ. “ಆಯ್ತಮ್ಮ ಇನ್ಮುಂದೆ ನಾನು ಚೂಡಿದಾರ್ ಹಾಕ್ಕೊತೀನಿ. ನೀನು ಪ್ಯಾಂಟ್-ಶರ್ಟ್ ಹಾಕಿಕೊ. ನಾನು ಮನೆಲಿ ಪಾತ್ರೆ ತೊಳೆದುಕೊಂಡು ಇರ್ತಿನಿ. ನೀನು ಆಫೀಸ್‍ಗೆ ಹೋಗು ಆಯ್ತಾ?”
“ಅಲ್ಲ ಕಣೋ ನೀನು ಹಾಗ್ಯಾಕೆ ಅಂದುಕೊಳ್ತಿಯಾ? ಗಂಡು ಈ ಕೆಲಸ ಮಾಡಬೇಕು? ಹೆಣ್ಣು ಈ ಕೆಲಸ ಮಾಡಬೇಕು ಅಂತ ಉಳಿದವರ ಥರ ನೀನು ಯಾಕೆ ಟಿಪಿಕಲ್ ಆಗಿ ಯೋಚಿಸ್ತೀಯಾ? ಇಬ್ರು ಕೆಲಸಕ್ಕೆ ಹೋಗೋಣ. ಇಬ್ರು ಪಾತ್ರೆ ತೊಳೆಯೋಣ. ಗಂಡ-ಹೆಂಡ್ತಿ ಅನ್ನೋದು ಮಂಚದಲ್ಲಿ ದೇಹ ಶೇರ್ ಮಾಡಿಕೊಳ್ಳೋದಕ್ಕೆ ಮಾತ್ರವಲ್ಲ ಕಣೋ. ಎಲ್ಲದಕ್ಕು..”
“ಯಾವತ್ತು ಹೆಣ್ಣು-ಗಂಡು ಒಂದೇ ಆಗ್ಲಿಕ್ಕೆ ಸಾಧ್ಯವಿಲ್ಲ. ನಿಂಗೆ ಹೇರೋ ಶಕ್ತಿ ಇದೆ. ಅದಕ್ಕೆ ನೀನು ಹೆಣ್ಣು, ತಾಯಿ ಎಲ್ಲವೂ ಹೌದು. ನೋಡು ನಿನ್ನಷ್ಟು ಕಾಳಜಿ, ಪ್ರೀತಿ ನಂಗೆ ಯಾವತ್ತೂ ಬರಲ್ಲ ಕಣೆ. ಒಂದಷ್ಟು ಕೆಲಸ ನೀನೇ ಮಾಡಿದ್ರೆ ಚೆಂದ. ಇನ್ನೊಂದಷ್ಟು ನಾನು ಮಾಡಿದ್ರೆ ಚೆಂದ..”
“ಅಲ್ಲ ಕಣೋ ಸುಮಂತ್ ನಾನು ನಿಂಗೆ ಅದನ್ನೆ ಹೇಳ್ತಾ ಇರೋದು. ನಿಂಗೆ ನೀನೇ ಯಾಕೆ ಈಥರ ರಿಸ್ಟ್ರಿಕ್ಷನ್ ಹಾಕ್ಕೊತೀಯಾ? ನೀನು ಮಾಡೋದನ್ನ ನಾನು ಮಾಡಬಾರದು ಅಂತ ಯಾಕೆ ಅಂದುಕೊಳ್ತೀಯಾ ಅದಕ್ಕು ಹೆರಿಗೆಗೂ ಯಾಕೆ ಹೋಲಿಕೆ ಮಾಡ್ತೀಯಾ? ನಿನ್ನ ಸಹಕಾರವಿಲ್ಲದೆ ನಾನು ಹೆರೋಕೆ ಸಾಧ್ಯವಿಲ್ಲ. ಹೋಗ್ಲಿ ಬಿಡು. ಮತ್ತ್ಯಾಕೆ ಆ ವಿಷ್ಯದಲ್ಲಿ ಜಗಳ?…”
ಒಂದರ್ಥದಲ್ಲಿ ಬದುಕಿನುದ್ದಕ್ಕು ಗೆದ್ದಿದ್ದು ಅವನೇ. ನನ್ನ ಎದುರು ಅವನು ಪ್ರತಿ ಸಲ ಸೋಲು ಒಪ್ಪಿಕೊಳ್ತಿದ್ದ. “ಆಯ್ತಮ್ಮ. ನಿನ್ನ ಒಪ್ಪಿಸೋಕೆ ಸಾಧ್ಯವಿಲ್ಲ. ನೀನೇ ಗೆದ್ದೆ ಬಿಡು. ಈವಾಗ ನಾನು ಏನು ಮಾಡಬೇಕು ಹೇಳು?” ಎನ್ನುತ್ತ ಪ್ರೀತಿಯ ಸೆಟೆಯಲ್ಲಿ ಸೆಳೆದುಬಿಡ್ತಿದ್ದ. ಸೋಲಬಾರದು ಅಂದುಕೊಂಡ ನಾನು ಅವನ ಪ್ರೀತಿಗೆ ಸೋತುಬಿಡ್ತಿದ್ದೆ.
“ನನ್ನ ಲೈಫ್‍ಲ್ಲಿ ಕನಿಷ್ಟ 4 ಹುಡುಗಿಯರನ್ನು ಅನುಭವಿಸಿದೀನಿ ಕಣೆ. ನಾನು ಇರೋದೇ ಹೀಗೆ. ಏನಿವಾಗ ನಿಂದು? ಬೇಕಿದ್ರೆ ಮದ್ವೆಯಾಗು ಇಲ್ಲ ಅಂದ್ರೆ ಬಿಡು. ನಾನು ನಿನ್ನ ಪ್ರೀತಿಸ್ತೀನಿ. ಕೇರ್ ಮಾಡ್ತೀನಿ ಅಷ್ಟೆ. ಹಾಗಂತ ನನ್ನ ಲೈಫು, ನನ್ನ ಟೇಸ್ಟ್ ಯಾವುದಕ್ಕು ಕಡಿವಾಣ ಹಾಕಿಕೊಳ್ಳಲ್ಲ. ನಾನು ನಿನ್ನ ಮೈ ಮುಟ್ಟೋ ಮೊದ್ಲೆ ಗೊತ್ತಿರಲಿಲ್ವಾ ನಾನು ಹೀಗೆ ಅಂತ? ಮತ್ತ್ಯಾಕೆ ನೀನು ನನ್ನ ಲವ್ ಮಾಡಿದೆ? ಮತ್ತ್ಯಾಕೆ ಹತ್ರ ಬಂದೆ? ಬಟ್ಟೆ ಕಳಚುವಾಗಲಾದ್ರು ನಿಂಗೆ ಜ್ಞಾನೋದಯ ಆಗ್ಲಿಲ್ಲ. ಮಿಕ್ಕಿದೆಲ್ಲ ವೇದಾಂತ ಮಾತಾಡ್ತೀಯ? ಲಾಯರ್ ಆಗಿ ಇದೊಂದು ಪಾಯಿಂಟ್ ನಿಂಗೆ ಹೊಳೆಯಲಿಲ್ವಾ?”
***
ಸಣ್ಣಗೆ ಹುಟ್ಟಿ ಗೌರಮ್ಮನಂತೆ ಬೆಳೆದು ಮಹಾದಾಯಿಯಾಗಿ, ಅರ್ಧದಲ್ಲಿ ಸೀರೆ ಬದಲಿಸಿ ಮಾಡರ್ನ್ ಜಗತ್ತಿಗೆ ಮೈಕೊಡವಿ, ಹೃದಯ ಬಿಚ್ಚಿ ಮಾಂಡೋವಿಯಾಗಿ ಹರಿದ ಆಕೆಯೀಗ ಅರಬ್ಬಿ ಸಮುದ್ರ ಸೇರುವ ತುದಿಗೆ ಬಂದು ನಿಂತಿದ್ದೇನೆ. ಅವಳು ತನ್ನನ್ನು ತಾನು ಮರೆತು ಲೀನವಾಗುವ ಹೊತ್ತು. ಅದೆಷ್ಟು ವಿಶಾಲವಾಗಿ ಮೈಚಾಚಿಕೊಂಡಿದ್ದಾಳೆಂದರೆ, ಅರಬ್ಬಿ ಸಮುದ್ರದ ತುದಿ ಯಾವುದು? ಮಾಂಡೋವಿಯ ತುದಿ ಯಾವುದು ತಿಳಿಯುತ್ತಿಲ್ಲ. ಇಬ್ಬರು ಒಬ್ಬರನ್ನೊಬ್ಬರು ಸೇರಿ ಬಿಟ್ಟಿದ್ದಾರೆ. ಅದೇ ಅಲ್ವಾ ಬದುಕಿನ ಧ್ಯಾನಸ್ಥ ಸ್ಥಿತಿ. ನಮ್ಮನ್ನು ನಾವು ಮರೆತು, ನಮಗೆ ನಾವು ಯಾರೆಂದು ಗೊತ್ತಿಲ್ಲದ ಸ್ಥಿತಿ.
ಅದ್ಯಾಕೊ ಬದುಕಲ್ಲಿ ಮೈಕೊಡವಿ ಎಳಬೇಕು ಅನ್ನಿಸ್ತು. “ಅದೆಷ್ಟು ದಿನ ಅಂತ ಹೀಗೆ ಗೌರಮ್ಮ ಥರ ಕುಳಿತಿರುತ್ತೀಯಾ? ಬಾರೆ ಸಾಕು. ನಾವು ಕಂಡಿದೀವಿ ಈಥರದವರನ್ನು. ಹೀಗೆ ಕುಳಿತವರ್ಯಾರು ಬದುಕಿನಲ್ಲಿ ಉದ್ದಾರ ಆಗಲಿಲ್ಲ. ಉರಿಯೋ ವಯಸ್ಸಲ್ಲಿ ಉರಿದು ಎಂಜಾಯ್ ಮಾಡಬೇಕು. ಆಮೇಲೆ ಗಂಡ, ಸಂಸಾರ ಎಲ್ಲ ಇದ್ದಿದ್ದೆ” ಎನ್ನುವ ಗೆಳತಿಯರ ಮಾತು ಕಿವಿಗೆ ಕುಕ್ಕು ತೊಡಗಿತು.
ಕಂಡ-ಕಂಡ ಹುಡುಗಿಯರನ್ನ ಆಟ ಆಡಿಸಿ ಬುಟ್ಟಿಗೆ ಹಾಕಿಕೊಳ್ಳೊ ಸುಮಂತನ್ನ ಆಟ ಆಡಿಸಬೇಕು ಅಂತ ಹಠಕ್ಕೆ ಬಿದ್ದೆ. ಬಲವಂತವಾಗಿ ಬದುಕಿಗೆ ಹಾಕಿಕೊಂಡಿದ್ದ ಎಲ್ಲ ಚೌಕಟ್ಟುಗಳನ್ನು ಕಳಚಿಕೊಂಡೆ. ಅವನ ಜೊತೆ ರೇಸಿಗೆ ಬಿದ್ದೆ. ಅಷ್ಟೆ, ಮುಗೀತು. ಅವನ್ನ ಓವರ್ ಟೇಕ್ ಮಾಡೋ ಭರದಲ್ಲಿ ನನಗೆ ಗೊತ್ತಿಲ್ಲದ್ದಂತೆ ಬದುಕಿನಲ್ಲಿ ಯೂಟರ್ನ್ ತೆಗೆದುಕೊಳ್ಳಲಾಗದಷ್ಟು ದೂರ ಸಾಗಿ ಬಂದಿದ್ದೆ.
***
ಡೈಮಂಡ್, ಇಸ್ಪೀಟು, ಆಟೀನು, ಕಳವರ…ಕ್ಯಾಸಿನೋದಲ್ಲಿ ಕುಳಿತವನಿಗೆ ಹಡಗಿನಾಚೆಯ ಮಾಂಡೋವಿ ಆಟ ಕಾಣುಸುತ್ತಿಲ್ಲ. ಪಕ್ಕದ ಹುಡುಗಿ ಆಗಾಗ ಡ್ರಿಂಕ್ಸ್ ಸರ್ ಗ್ಲಾಸ್‍ಗೆ ಸುರಿಯುತ್ತಿದ್ದಾಳೆ. ಆಡಿ, ನೀವಿನ್ನು ಆಟ ಆಡಿ. ಕಳೆದುಕೊಂಡ ದುಡ್ಡು ಮತ್ತೆ ಬರುತ್ತೆ ಅಂತ ಚಿಯರ್ ಮಾಡುತ್ತಿದ್ದಾಳೆ. “ಸಾಕಪ್ಪ ಒಂದ್ಸಲ ಕಳೆದುಕೊಂಡ ದುಡ್ಡು ಮತ್ತೆ ಬಂತು” ಎಂದು ಒಂದಷ್ಟು ದುಡ್ಡು ಗೆದ್ದವ ಹೊರಡಲು ರೆಡಿಯಾದ್ರೆ, ಆಕೆ ಬಿಡುತ್ತಿಲ್ಲ. ನನ್ನ ಜೊತೆಯೂ ಸ್ವಲ್ಪ ಆಟವಾಡಲ್ವಾ ಎಂದು ಕೈ ಚಾಚುತ್ತಿದ್ದಾಳೆ. ಈತನಿಗೆ ಮತ್ತೆ ಕಳೆದು ಹೋಗಬಹುದೆಂಬ ಭಯ. ಎಷ್ಟಂದ್ರು ಜೂಜಾಟವದು. ಪಾಂಡವರು ಸರ್ವಸ್ವವನ್ನು ಕಳೆದುಕೊಂಡ ಆಟವದು. ಸೌಂದರ್ಯ ಸಮರದಲ್ಲಿ ಸೋತವನೆ ಅಮರ…
ಅದೆಷ್ಟು ವಿಚಿತ್ರವಾಗಿದೆ ಬದುಕಿನ ಎರಡು ತೀರಗಳು. ಘಟ್ಟದ ಮೇಲಿನ ಮಹಾದಾಯಿ ಕೆಳಗಿಳಿಯುತ್ತಿದ್ದಂತೆ ಮಾಂಡೋವಿ. ನಿಜ ಮಹಾದಾಯಿಗಿಂತ ಮಾಂಡೋವಿ ಸಖತ್ ಥ್ರಿಲ್ಲಿಂಗ್. ಆದ್ರೆ ಅದೆಷ್ಟು ದಿನ? ವಾರಾಂತ್ಯದ ರಜ ಕಳೆಯುವ 2-4 ದಿನ. ನಂತರ ಮತ್ತದೆ ಬದುಕು, ಮತ್ತದೆ ಜಗತ್ತು. ಇದೆಲ್ಲ “ಒಂಥರ ರಿಚಾರ್ಜ್ ಪಾಯಿಂಟ್ ಥರ ಕಣೆ…” ಅವನ ಮಾತು ನೆನಪಾಗುತ್ತಿದೆ.
ಬದಲಾದೆ. ಯಾರಿಗಾಗಿ, ಯಾಕಾಗಿ ಬದ್ಲಾದೆ ಅಂದ್ರೆ ಉತ್ತರವಿಲ್ಲ. ಹಾಗಂತ ಬದ್ಲಾಗಿದ್ದಕ್ಕೆ ಬೇಸರವೂ ಇಲ್ಲ. ಯಾರೂ ಊಹಿಸದ ಹಾಗೆ ಬದ್ಲಾಗಿಬಿಟ್ಟೆ. ಒಂಥರ ಘಟ್ಟ ಇಳಿದ ಮಹಾದಾಯಿಯಂತೆ. ಲೈಫ್‍ಸ್ಟೈಲ್ ಬದ್ಲಾಯ್ತು. ಮೈ-ಮನಗಳೆಲ್ಲ ಬದ್ಲಾಯ್ತು. ಸುಮಂತ್ ಮಾಡಿದ್ದೆಲ್ಲ ಸರಿ. ಅದು ಅವನ ಆಯ್ಕೆ. ಅವನ ದಾರಿ ಎಂಬಷ್ಟರ ಮಟ್ಟಿಗೆ ಬದ್ಲಾಗಿಬಿಟ್ಟೆ.
ಆದ್ರು ಕೊನೆಗೆ ಉಳಿದ್ದಿದ್ದು ಅನಾಥ ಭಾವ ಮಾತ್ರ. ಯಾರು ಎಷ್ಟು ದಿನ ಅಂತ ಬದುಕಿನಲ್ಲಿ ಜೊತೆಗಿರುತ್ತಾರೆ? ಎಲ್ಲ ಒಂದಷ್ಟು ದಿನ ಬಂದು ಹೋಗುವ ಆಗುಂತಕರು ಅಷ್ಟೆ. ನಿನ್ನೆ ಜೊತೆಗಿದ್ದ ಗೆಳೆಯ, ಗೆಳತಿ ನಾಳೆ ಹಾಗೆ ಇರ್ತಾರೆ ಅನ್ನೋಕ್ಕೆ ಆಗಲ್ಲ. ಬೇರೆಯವರ ಕಥೆ ಹಾಳಾಗ್ಲಿ, ಮೊನ್ನೆ ಹಾಗಿದ್ದ ನಾನು ಇವತ್ತು ಹೇಗಾದೆ? ನಾಳೆ ಹೇಗಿರುತ್ತೇನೆ? ನಂಗೆ ಗೊತ್ತಿಲ್ಲ.
ಈ ಬದುಕಿನ ಅರ್ಥವೇನು? ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇನೆ. ಅದೇ ಒಂಟಿತನ ಕಾಡ್ತಾ ಇದೆ. ಕೆಲವು ಸಲ ಹಾಗೆ. ಎಲ್ಲ ಜೊತೆಗಿದ್ರು ನಾವು ಒಂಟಿ ಅನ್ನಿಸಲು ಶುರುವಾಗಿ ಬಿಡುತ್ತೆ. ನಮ್ಮ ಸುತ್ತ ಯಾರಿಲ್ಲ ಅನ್ನಿಸುತ್ತೆ. ಇದ್ರು ಅವ್ರೆಲ್ಲ ಎಷ್ಟು ದಿನ ಇರ್ತಾರೆ ಅನ್ನಿಸುತ್ತೆ. ಯಾಕಂದ್ರೆ ನಾವು ಒಂಟಿಯಾಗಿ ಬಂದಿರೋದು. ಹೋಗೋದು ಒಂಟಿಯಾಗಿಯೇ ಅಲ್ವಾ?
***
12 ದಿನಗಳ ಆಸ್ಪತ್ರೆ ವಾಸ ಬದುಕನ್ನು ಸಾಕಾಗಿಸಿತ್ತು. ಆದಾಗ್ಯೂ ಅವನ್ನ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಕೂಡಿಟ್ಟ 6 ಲಕ್ಷ ಕಳೆದುಕೊಂಡೆ ಅಷ್ಟೆ.
ಹೇಳಿದ್ನಲ್ಲ ಅವನ್ನ ಓವರ್ ಟೇಕ್ ಮಾಡೋ ಭರದಲ್ಲಿ ನಾನು ನನ್ನ ದಾರಿಯತ್ತ ತಿರುಗಿ ನೋಡಲಾಗದಷ್ಟು ದೂರ ಸಾಗಿ ಬಂದಿದ್ದೆ. ಅವನ ನನ್ನ ಪಟಾಯಿಸಿದ್ದ. ಪುಷ್ಪ ಅವನ ಜೊತೆಗಿನ ರಾತ್ರಿಗಳನ್ನು ಹಂಚಿಕೊಳ್ಳುವಾಗ ಕೇಳಲು ಅಹಸ್ಯವೆನಿಸುತ್ತಿತ್ತು. ಆದ್ರೆ ನಾನು ಅವನ ಬಲೆಗೆ ಬಿದ್ದಿದ್ದೆ. ಅದೇ ನನಗೆ ಅರ್ಥವಾಗದ ಪ್ರಶ್ನೆ. ಹೆಣ್ಣು-ಗಂಡಿಗೆ ವ್ಯತ್ಯಾಸವಿಲ್ಲ ಎಂಬಷ್ಟು ಗಟ್ಟಿಗಿತ್ತಿ ನಾನು. ಹೆಣ್ಣು ಭೋಗದ ಸರಕಲ್ಲ ಎಂಬ ಥಿಯೆರಿ ನಂದು. ಆದ್ರೆ ನಂಗೆ ತದ್ವಿರುದ್ಧವಾಗಿ ಯೋಚಿಸುವವನ ಜೊತೆ ಪ್ರೀತಿ! ಅವನ ಪ್ರೀತಿಗೆ ಮರುಳಾಗಿದ್ದೆ. ಅದಕ್ಕೆ ಇರಬೇಕು ಪ್ರೀತಿ ಕುರುಡು ಎನ್ನುವುದು.
‘ಪ್ರೀತಿಗೂ ಸೆಕ್ಸ್‍ಗು ಸಂಬಂಧವಿಲ್ಲ. ಅದೊಂದು ಬದುಕಿನ ಬೇರೆಯದೆ ಸ್ಥಿತಿ’ ಎನ್ನುತ್ತಿದ್ದ. ನಿಜ. ಮದ್ವೆಯಾದ ಮೇಲೂ ಆತ 3-4 ಹುಡುಗಿಯರನ್ನು ಅನುಭವಿಸಿದ್ದ. ಅದನ್ನು ನನ್ನ ಬಳಿ ಹೇಳಿದ್ದ ಕೂಡ. ಆದ್ರು ನನ್ನ ಮೇಲೆ ಒಂಚೂರು ಪ್ರೀತಿ ಕಡಿಮೆಯಾಗಲಿಲ್ಲ. ಮೊದ್ಲು ನಂಗೆ ಸ್ವಲ್ಪ ಪೊಸೆಸೀವ್‍ನೆಸ್, ನನ್ನಿಂದ ಅವ ದೂರವಾಗಬಹುದೆಂಬ ಭಯ ಕಾಡಿತ್ತು. ಆಮೇಲೆ ಅನ್ನಿಸಿದ್ದು ಅವಳ ಜೊತೆ 10 ನಿಮಿಷ ಸುಖಿಸಬಹುದು. ಆದ್ರೆ ಕೊನೆಗೆ ಬದುಕು ನನ್ನೊಂದಿಗೆ ಅಲ್ವಾ? ಅಂತ. ಸರಿ ಅದು ನಿನ್ನ ಟೇಸ್ಟು ಅಂದೆ.
ನಂತ್ರ ಅವನಿಗು ಅರಿವಾಗಿರಬೇಕು. ಬೇರೆ ಹುಡುಗಿಯರ ಸಹವಾಸ ಬಿಟ್ಟಿದ್ದ. ನನ್ನನ್ನು ಪ್ರೀತಿಸಲು, ಪೂಜಿಸಲು ಶುರು ಮಾಡಿದ್ದ.
ಅಪ್ಪನ್ನ ಕಳೆದುಕೊಂಡೆ. ಅಮ್ಮನು ಜಾಸ್ತಿ ದಿನ ಬದುಕಲಿಲ್ಲ. ಬದುಕು ಅನಾಥವೆನಿಸಲು ಶುರುವಾಯ್ತು. ಬದುಕಿನಲ್ಲಿ ಏನಿದೆ ಎಂಬ ಪ್ರಶ್ನೆ ಶುರುವಾಗಿದ್ದು ಅಪ್ಪ ಸತ್ತ ನಂತ್ರ. ಬದುಕಿನ ತುದಿ ಯಾವುದು? ನಾನು ಏಕೆ ಬದುಕ್ತಾ ಇದೀನಿ? ನಾನು ಒಂದಿನ ಸಾಯ್ತೀನಿ. ಯಾವತ್ತು ಸಾಯಬಹುದು? ಹೇಗೆ ಸಾಯಬಹುದು ಅಂತೆಲ್ಲ ಯೋಚಿಸತೊಡಗಿದೆ. ಆಗೆಲ್ಲ ಅವನ ಪ್ರೀತಿ ನನ್ನನ್ನು ಬೇರೆ ಜಗತ್ತಿಗೆ ಕರೆದುಕೊಂಡು ಹೋಗುತ್ತಿತ್ತು.
ಬದುಕಿನ ಮಧ್ಯದಲ್ಲಿ ಇವ ಕೂಡ ನನ್ನ ಬಿಟ್ಟು ಹೋಗಬಹುದೆಂಬ ಕನಸು ಕಂಡಿರಲಿಲ್ಲ. ಊರಿಗೆ ಬಂದಾಗ ಒಂದು ದಿನ ಹಾವು ಕಚ್ಚಿಬಿಡ್ತು ಅಷ್ಟೆ. ಆಮೇಲೆ ಸುಮಾರು 12 ದಿನ ಆಸ್ಪತ್ರೆಲಿ. ಸಾಯುವ ಮೊದ್ಲು ಆತ ಹೇಳಿದ ಮಾತು: “ನನ್ನ ಕ್ಷಮಿಸಿ ಬಿಡು. ಸಂತೋಷದ ಅಮಲಿನಲ್ಲಿ ಸುಮಾರಷ್ಟು ಜನರ ಭಾವನೆಗಳ ಜೊತೆ ಆಟವಾಡಿಬಿಟ್ಟೆ” ಅಷ್ಟು ಹೇಳಿ ಮಾತು ಮುಗಿಸಿದ.
***
ನಿಜ, ಇಲ್ಲಿದ್ದವರೆಲ್ಲ ಖುಷಿಯ ಉತ್ತುಂಗದಲ್ಲಿದ್ದಾರೆ. ಅಮಲಿನಲ್ಲಿದ್ದಾರೆ. ಒಂದು ರೀತಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿದ್ದಾರೆ. ಯಾರಿಗೂ ಯಾವುದರ ಪರಿವಿಲ್ಲ. ಸುಖದ ಹಗಲು, ಸಂತೋಷದ ರಾತ್ರಿ, ಉನ್ಮಾದತೆ…ಬದುಕಿನ ಸುಖಕ್ಕೆ ಇದಕ್ಕಿಂತ ಹೆಚ್ಚಾಗಿ ಇನ್ನೇನು ಬೇಕು ಅಂತ ನಾನು ಇವರಂತೆ ಆಲೋಚಿಸಿದ್ದರೆ ಇರುವಷ್ಟು ದಿನ ಖುಷಿ-ಖುಷಿಯಾಗಿ ಇರಬಹುದಿತ್ತೇನೋ.
ಮತ್ತದೆ ಪ್ರಶ್ನೆ. ಸಮುದ್ರದೊಳಗೆ ಲೀನವಾದ ಮಾಂಡೋವಿ ಇನ್ನೆಷ್ಟು ದೂರ ಹರಿಯಬಹುದು? ಎಲ್ಲಿಗೆ ಹೋಗಿ ನಿಲ್ಲಬಹುದು ಅವಳ ಬದುಕಿನ ಪಯಣ? ಖಂಡಿತ ಗೊತ್ತಿಲ್ಲ. ಹಾಗೆ ಅರಬ್ಬಿ ಸಮುದ್ರವನ್ನು ಅರಸಿಕೊಂಡು ಹೋದರು ಅವಳ ಅಂತ್ಯದ ಬಿಂದು ಸಿಗಲಿಕ್ಕಿಲ್ಲ. ನಮ್ಮೂರಿನಲ್ಲಿ ಹುಟ್ಟಿದಾಕೆ ಈ ಊರಲ್ಲಿ ಅಂತ್ಯವಾಗಿದ್ದು ಗೊತ್ತಿದೆ. ಹಾಗಂತ ಅದು ಅವಳ ಸಾವಲ್ಲ. ಈ ಆತ್ಮ ಮತ್ತು ದೇಹವೆಂಬ ಪರಿಕಲ್ಪನೆಗೂ ಇದಕ್ಕು ಸಂಬಂಧವಿರಬಹುದಾ? ಬದುಕು ಪೂರ್ವ ನಿರ್ಧಾರಿತ ಎಂಬುದು, ಈ ಜಾತಕ-ಭವಿಷ್ಯವೆಂಬ ಪರಿಕಲ್ಪನೆಗಳೆಲ್ಲ ನಿಜವಿರಬಹುದಾ? ಇಲ್ಲ ಅಂದ್ರೆ ದ್ವೇಷಿಸುತ್ತಿದ್ದ ಅವನೇಕೆ ನನ್ನ ಬದುಕಿನ ಭಾಗವಾಗುತ್ತಿದ್ದ? ಸರ್ವವನ್ನು ವ್ಯಾಪಿಸಿಕೊಂಡವನು ಅದೇಕೆ ಹಾಗೆ ಅರ್ಧದಲ್ಲಿ ಬಿಟ್ಟು ಹೋಗುತ್ತಿದ್ದ? ಉತ್ತರ ಕಾಣುತ್ತಿಲ್ಲ.
ದೇಹ ಶಾಶ್ವತವಲ್ಲ. ಆತ್ಮವಾಗಿ ಮಾಂಡೋವಿ ಅರಬ್ಬಿ ಸಮುದ್ರ ಸೇರಿದ್ದಾಳೆ. ನಾನು ಅವಳಂತೆ ಹೊರಟಿದ್ದೇನೆ ಆತ್ಮಾವಲೋಕನ ಮಾಡಿಕೊಳ್ಳುತ್ತ. ಎಲ್ಲಿಗೆ ಹೋಗಿ ಸೇರುವನೆಂಬ ಅರಿವಿಲ್ಲ…ಮತ್ತೆ ಗೊತ್ತಿಲ್ಲದಂತೆ ಅವನ ಮಡಿಲನ್ನೇ ಸೇರಬಹುದೇ?
Archive for the ‘ಕಥೆ-ವ್ಯಥೆ!’ Category
ಮಾಂಡೋವಿ
Posted in ಕಥೆ-ವ್ಯಥೆ!, tagged goa, kannada blog, story on ಜೂನ್ 21, 2016| Leave a Comment »
ಉಗಳಲು ಆಗದೆ, ನುಂಗಲು ಆಗದೆ…!
Posted in ಕಥೆ-ವ್ಯಥೆ!, ಚಿಂತನ ಚಾವಡಿ, tagged editor, journalism, kannada journalism, news paper on ಫೆಬ್ರವರಿ 2, 2015| 7 Comments »
ಇವತ್ತು ಸಂಪರ್ಕ ಕೊಂಡಿಗಳು ದೊಡ್ಡದಾಗಿವೆ, ಎಲ್ಲೆಲ್ಲಿ ಏನೇನು ನಡೀತಿದೆ ಅನ್ನೋದು ಮಾಧ್ಯಮದಿಂದ ಹೊರತಾಗಿ ಅನೇಕ ಬಗೆಗಳಿಂದ ಗೊತ್ತಾಗುತ್ತದೆ. ಜೊತೆಗೆ ಎಲ್ಲಿಲ್ಲದ ಸ್ಪರ್ಧೆ. ಹೀಗಾಗಿ ಕಳೆದ ೫ ವರ್ಷಗಳಲ್ಲಿ ಕನ್ನಡ ಮಾಧ್ಯಮ ಜಗತ್ತು ತುಂಬಾ ಬದಲಾಗಿದೆ. ಮೊನ್ನೆ ವಿಶ್ವೇಶ್ವರ ಭಟ್ಟರು ಬದಲಾದ ಪತ್ರಿಕೋದ್ಯಮವನ್ನು ಸಂಭ್ರಮಿಸುವ ಬಗ್ಗೆ ಒಂದು ಲೇಖನ ಬರೆದಿದ್ದರು. ಅದರ ಬೆನ್ನಲ್ಲೇ ಗೆಳೆಯ ವಿಕಾಸ್ ನೇಗಿಲೋಣಿ ಹಳ್ಳಿಗಳು ವ್ಯಾಪಾರಿ ಸರಕಾಗುತ್ತಿರುವ ಕುರಿತು ಒಂದು ಚೆಂದದ ಬರಹ ಬರೆದಿದ್ದರು. ಅಲ್ಲಿ ಹೇಳದೆ ಅಳಿದುಳಿದಿರುವುದನ್ನು ಅಳುಕುನಿಂದಲೇ ಹೇಳುವ ಪ್ರಯತ್ನ.
‘ಸಾರ್ ಸ್ವಲ್ಪ ನೋಡಿ ರಿವ್ಯೂ ಬರೆಯಿರಿ. ಪ್ರೊಡ್ಯೂಸರ್ ನಮ್ಮ ರೆಗ್ಯಲುರ್ ಕಸ್ಟಮರ್. ಈ ಸಲವಂತೂ ಫ್ರಂಟ್ ಪೇಜ್ ಜಾಹೀರಾತು ಕೊಟ್ಟಿದ್ದಾರೆ’ ಸಿನಿಮಾ ಚಿತ್ರಮಂದಿರದೊಳಗೆ ಕಾಲಿಡುವ ಮುನ್ನವೆ ಜಾಹೀರಾತು ವಿಭಾಗದ ಹುಡುಗ ಫೋನ್ ಮಾಡಿ ಹೇಳಿದ್ದ. ಗಟ್ಟಿಯಾಗಿ ಕುಳಿತರೆ ಖಂಡಿತ ೬ ನಿಮಿಷ ಸಿನಿಮಾ ನೋಡಲು ಸಾಧ್ಯವಿಲ್ಲ. ಹಾಗಂತ ಅದನ್ನು ವಿಮರ್ಶೆಯಲ್ಲಿ ಬರೆಯಲು ಸಾಧ್ಯವೇ ಇಲ್ಲ. ಬದುಕಿನ ಅನಿವಾರ್ಯತೆ. ಹೀಗಾಗಿ ಆ ಸಿನಿಮಾ ಅದ್ಭುತ ಎಂದು ಬರೆಯಲೇ ಬೇಕು. ನಾನು ಸಿನಿಮಾ ಕೆಟ್ಟದಾಗಿದೆ ಎಂದು ಬರೆದ್ರೆ ಅದು ಪ್ರಕಟವೇ ಆಗುವುದಿಲ್ಲ. ಬೈ ಚಾನ್ಸ್ ಪ್ರಕಟವಾಯ್ತು ಎಂದ್ರೆ ಮರುದಿನ ನಮ್ಮ ಕೆಲಸ ಹೋಗಿರುತ್ತದೆ! ಯಾಕಂದ್ರೆ ಕಂಪನಿಗೆ ಲಾಸ್ ಆಗಿದ್ದು ಬರೋಬ್ಬರಿ ೨ ಲಕ್ಷ ರೂ. ಸಿಇಒನಿಂದ ಹಿಡಿದು ಮಾಲೀಕರವರೆಗೆ ಎಲ್ಲರೂ ಕರೆದು ೨ ಲಕ್ಷ ರೂಪಾಯಿ ನಷ್ಟದ ಬಗ್ಗೆಯೆ ಮಾತಾಡುತ್ತಾರೆ ಹೊರತು ಕೆಟ್ಟ ಸಿನಿಮಾ, ಓದುಗರಿಗೆ ಮೋಸ ಮಾಡುತ್ತಿದ್ದೇವೆ ಎಂದು ಯಾರೂ ಆಲೋಚಿಸುವುದೇ ಇಲ್ಲ! ಇದು ಇವತ್ತಿನ ವ್ಯಾಪಾರಿ ಪತ್ರಿಕೋದ್ಯಮ ಸೃಷ್ಟಿಸಿರುವ ದುರಂತ ಮತ್ತು ಸೌಭಾಗ್ಯ.
ಇವತ್ತು ಒಂದು ಪತ್ರಿಕೆಗೆ ನಂಬರ್ ಒನ್ ಆಗಲು ಸಂಪಾದಕರು ಬೇಕೆ ಬೇಕು ಎಂದೇನಿಲ್ಲ ಅಂತ ನಾವು ಗೆಳೆಯರು ಹೀಗೆ ಮಾತಾಡುತ್ತಿದ್ದೆವು. ಕಾರು ಓಡಿಸುತ್ತಿದ್ದ ಹಿರಿಯ ಪತ್ರಕರ್ತರಾದ ಅರುಣ್ ಒಂದೇ ಮಾತು ಹೇಳಿದ್ರು. ‘ಒಂದು ಪತ್ರಿಕೆ ಪ್ರಿಂಟ್ ಆಗಿ ಓದುಗನ ಕೈ ಸೇರಲು ಎಷ್ಟು ರೂಪಾಯಿ ವೆಚ್ಚ ತಗುಲುತ್ತೆ ಗೊತ್ತಾ? ದಿ ಟಿಒಐ ಸ್ಟೋರಿ ಅಂತೊಂದು ಪುಸ್ತಕವಿದೆ. ಅದನ್ನು ಓದಿ’ ಅರುಣ್ ಮಾತು ಮುಗಿಸಿದ ನಂತ್ರ ನಾವು ೬ ರೂಪಾಯಿ ಇರಬಹುದು ಸಾರ್ ಅಂದ್ವಿ. ಇಲ್ಲ ೮-೯ರೂಪಾಯಿ ಖರ್ಚಾಗುತ್ತದೆ ಎಂದರು. ನಾನು ಒಂದು ಪತ್ರಿಕೆಗೆ ಜಾಹೀರಾತು ಬಲವರ್ಧನೆಗಾಗಿಯೇ ಕೆಲಸ ಮಾಡುತ್ತಿದ್ದೆ. ಆಗ ಗೊತ್ತಾಯ್ತು ಆ ಪತ್ರಿಕೆಯ ಒಂದು ಪ್ರತಿ ಪ್ರಿಂಟ್ ಆಗಲು ೧೧ರೂ. ವೆಚ್ಚವಾಗುತ್ತಿದೆ ಎಂದು!
ಓದುಗರಾದ ನಾವು ೩-೫ ರೂ.ಕೊಟ್ಟು ಪತ್ರಿಕೆ ಖರೀದಿಸುತ್ತೇವೆ. ಅಲ್ಲಿ ಎಲ್ಲ ಕಳೆದು ಮಾಲೀಕನಿಗೆ ಸಿಗುವುದು ೧.೬೦-೨ ರೂ. ಈ ಮೊತ್ತ ಏಜೆಂಟ್‌ಗೆ ಕೊಡುವ ಕಮಿಷನ್ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಪತ್ರಿಕೆ ಪ್ರಸರಣ ಜಾಸ್ತಿ ಆಗಬೇಕು, ನೀವು ನಂಬರ್ ಒನ್ ಆಗಲೇಬೇಕು ಅಂತೆಲ್ಲ ಇರಾದೆಯಿದ್ದರೆ ೧.೬೦-೧.೭೦ರೂ. ಗೆ ನೀವು ಪತ್ರಿಕೆ ಕೈ ಬಿಡಬೇಕು. ಮಿಕ್ಕಿದ್ದನ್ನು ಏಜೆಂಟ್‌ಗೆ ಕೊಡಬೇಕು. ಇಲ್ಲವಾದಲ್ಲಿ ಮತ್ತೊಂದು ಪತ್ರಿಕೆಯವನು ಏಜೆಂಟ್‌ಗೆ ಹೆಚ್ಚು ಕಮಿಷನ್ ಕೊಡುತ್ತಾನೆ. ಆಗ ಈ ಪತ್ರಿಕೆ ಪ್ರಸರಣ ಕುಸಿಯುತ್ತದೆ. ಜಾಹೀರಾತು ಡೌನ್ ಆಗುತ್ತದೆ. ಇದು ಮಾಲೀಕರಿಗೆ ಪ್ರತಿನಿತ್ಯದ ಹೆಣಗಾಟ.
ನಿಮ್ಮಿಂದ ಕೈಗೆ ಸೇರುವ ಹಣ ೨ ರೂ. ಅಂತಿಟ್ಟುಕೊಂಡರು, ಒಂದು ಪ್ರತಿಯಿಂದ ಬರೋಬ್ಬರಿ ೯ ರೂ. ನಷ್ಟ. ಎಷ್ಟೆ ಅಚ್ಚುಕಟ್ಟಾಗಿ ನಿರ್ವಹಿಸಿದರು(ನಿಮ್ಮದೇ ಪ್ರಿಂಟ್, ಸಾರಿಗೆ ಇತ್ಯಾದಿ ನಿಭಾಯಿಸಿದ್ರು) ೭-೮ ರೂ. ಗಿಂತ ಕಡಿಮೆ ವೆಚ್ಚದಲ್ಲಿ ಪತ್ರಿಕೆ ಪ್ರಿಂಟ್ ಹಾಕಿ ಓದುಗನ ಮನೆ ಬಾಗಿಲಿಗೆ ತಲುಪಿಸಲು ಸಾಧ್ಯವಿಲ್ಲ. ಅಂದ್ರೆ ಒಂದು ಪತ್ರಿಕೆ ಮೇಲೆ ನಷ್ಟ ಬರೋಬ್ಬರಿ ೬ ರೂ. ಇವತ್ತು ಕರ್ನಾಟಕದ ನಂಬರ್ ಒನ್ ಪತ್ರಿಕೆ ಪ್ರಸರಣ ಸಂಖ್ಯೆ ೭ ಲಕ್ಷ. ಅದನ್ನು ೬ರಿಂದ ಗುಣಿಸಿ. ಅಂದ್ರೆ ಸುಮಾರು ೪೨ ಲಕ್ಷ ರೂ ಒಂದು ದಿನದ ನಷ್ಟ! ಇದನ್ನು ಭರಿಸಬೇಕು ಅಂದ್ರೆ ಜಾಹೀರಾತಿಗೆ ಮೊರೆ ಹೋಗುವುದು ಅನಿವಾರ್ಯ. ೧೨ ಪುಟದ ತುಂಬಾ ಜಾಹೀರಾತು ಹಾಕಿದ್ರು ನನ್ನ ಪ್ರಕಾರ ಈ ಹಣ ಮರಳಿ ಪಡೆಯವುದು ಕಷ್ಟ.
ಹೀಗಾಗಿ ಜಪಾನಿ ತೈಲ, ಕಾಂಡೋಮು, ನ್ಯೂಟ್ರಿಗೇನ್, ನಿಸರ್ಗೇನ್ ಇತ್ಯಾದಿ ಜಾಹೀರಾತುಗಳಿಗೆ ಪತ್ರಿಕೆಗಳು ಮೊರೆ ಹೋಗುವುದು. ಅವೆಲ್ಲ ವರ್ಷದ ಕಾಂಟ್ರ್ಯಾಕ್ಟ್! ಪುರವಣಿಯಲ್ಲಿ ತೀರಾ ೧೦-೧೫ ಸಾವಿರ ರೂ.ಗೆ ಆ ಜಾಹೀರಾತು ಪ್ರಕಟವಾಗುತ್ತದೆ, ಅದರರ್ಥ ಮಾಲೀಕರು ೧೦-೧೫ ಸಾವಿರ ರೂಪಾಯಿ ಮರು ಆದಾಯ ಗಳಿಕೆಗೂ ಪ್ರತಿ ಸಲ ಪರದಾಟ ನಡೆಸುತ್ತಾರೆ ಎಂಬುದು ವಾಸ್ತವ.
ಸಮೀರ್ ಜೈನ್ ಬಂದ ನಂತರ ಬದಲಾದ ಟೈಮ್ಸ್ ಆಫ್ ಇಂಡಿಯಾದ ಕಥೆಯನ್ನು ಟಿಒಐ ಸ್ಟೋರಿ ಹೇಳುತ್ತೆ. ಆದ್ರೆ ಕನ್ನಡ ಪತ್ರಿಕೋದ್ಯಮ ಜಗತ್ತು ವರ್ಗಾಂತರಗೊಂಡಿದ್ದು ತೀರಾ ೨೦೦೭ರ ನಂತರ. ಯಾವಾಗ ಸುದ್ದಿವಾಹಿನಿಗಳು ಕಾಲಿಟ್ಟವೋ ಆಗ ಕನ್ನಡ ಪತ್ರಿಕಾ ಜಗತ್ತಿನ ವರ್ಗಾವಣೆ ಶುರುವಾಯ್ತು. ನಾವೆಲ್ಲ( ೨೬-೨೯ ವರ್ಷ ಆಜುಬಾಜಿನವರು) ವೃತ್ತಿ ಆರಂಭಿಸಿದ್ದು ಮಾಸಿಕ ೩ ಸಾವಿರ ರೂ. ವೇತನಕ್ಕೆ. ೫೦ ಸಾವಿರ ರೂಪಾಯಿ ಮುಟ್ಟಲು ಬಹುಶಃ ನಿವೃತ್ತಿ ಹಂತ ತಲುಪಬೇಕು ಎಂದು ಭಾವಿಸಿದ್ದೆವು. ಆದ್ರೆ ೨೦೧೦ರ ನಂತರ ಸಾಕಷ್ಟು ಪತ್ರಕರ್ತರ ಬದುಕು ಬದಲಾಯ್ತು. ಸುದ್ದಿ ವಾಹಿನಿಗಳ ಪೈಪೋಟಿ ವೇತನದ ಮೇಲು ಪರಿಣಾಮ ಬೀರಿ, ಕ್ರಿಯಾಶೀಲ ಪತ್ರಕರ್ತರೆಲ್ಲ ವಲಸೆ ಆರಂಭಿಸಿದರು. ಪ್ರಿಂಟ್ ಮೀಡಿಯಾದಲ್ಲಿ ದುಡಿದವರು ಎಲೆಕ್ಟ್ರಾನಿಕ್‌ಗೆ ಜಿಗಿದರು. ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಪಡೆಯಬಹುದಾದ ಸಂಬಳ ಪಡೆದರು.
ಆದ್ರೆ ಈ ಪೈಪೋಟಿಯಲ್ಲಿ ಕೆಲ ನ್ಯೂಸ್ ಚಾನೆಲ್‌ಗಳು ಆರಂಭಶೂರವಾಗಿಬಿಟ್ಟವು. ಇವತ್ತಿಗೂ ಕನ್ನಡದಲ್ಲಿ ಆರ್ಥಿಕವಾಗಿ ಲಾಭದಲ್ಲಿರುವ, ಸದೃಢವಾಗಿರುವ ಸುದ್ದಿ ವಾಹಿನಿಗಳು ಎರಡು ಮಾತ್ರ! ಇದ್ರಿಂದಾಗಿ ಅಷ್ಟೇ ದೀಢಿರ್ ಅಂತ ಕೆಲವರು ಉದ್ಯೋಗವನ್ನು ಕಳೆದುಕೊಂಡು ದಿಕ್ಕು ಕಾಣದಾದರು. ಹಲವರು ಬೇಸತ್ತು ಪತ್ರಿಕೋದ್ಯಮವನ್ನೇ ಬಿಟ್ಟು ಹೋದರು.
ವ್ಯಾಪಾರ ಅನ್ನುವುದು ಎಲ್ಲವನ್ನು ಬದಲಿಸಿಬಿಡ್ತು. ಒಂದು ಪುಟದ ಒಂದು ಮಗ್ಗುಲಿನಲ್ಲಿ ಸಾವಯವ ಕೃಷಿಯ ಬಗ್ಗೆ ಲೇಖನ. ಇನ್ನೊಂದು ಮಗ್ಗುಲಿನಲ್ಲಿ ರಸಗೊಬ್ಬರದ ಫಲವತ್ತತೆ ವಿವರಣೆ! ಎರಡೂ ಕೂಡ ಪೇಯ್ಡ್ ಲೇಖನ. ಈ ವ್ಯಾಪಾರಿಕರಣ ಎಂಬುದು ಇವತ್ತು ಪತ್ರಿಕೋದ್ಯಮವನ್ನು ಇಲ್ಲಿಗೆ ತಂದು ನಿಲ್ಲಿಸಿದೆ! ಪ್ರಸರಣ ಹೆಚ್ಚಿಸುವುದು, ನಂಬರ್ ಒನ್ ಆಗುವುದು ಇವತ್ತು ಸವಾಲಲ್ಲ. ಆದ್ರೆ ಆದಾಯ ಮರುಗಳಿಕೆ ಸವಾಲು. ಹೀಗಾಗಿ ಕೆಲ ಪತ್ರಿಕೆಗಳು ತಟಸ್ಥವಾಗಿಬಿಟ್ಟವು. ಯುದ್ಧ ಅಲ್ಲಿಗೆ ಮುಗಿಯುವುದಿಲ್ಲ. ನಾವು ಹೆಚ್ಚು ಪ್ರಸರಣೆ ಇಟ್ಟುಕೊಂಡು ಕಡಿಮೆ ಬೆಲೆಗೆ ಜಾಹೀರಾತು ಕೊಡುತ್ತೇವೆ ಎಂದಾಗ ಸೋಪು, ಫೌಡರ್ ವ್ಯಾಪ್ಯಾರಿಯ(ಮಾಲು, ಸಿನಿಮಾ ಎಲ್ಲ) ಗಮನ ಅದರತ್ತ ವಾಲುವುದು ಸಹಜ! ಅದು ತಟಸ್ಥವಾಗಿ ಉಳಿದ ಪತ್ರಿಕೆಗಳಿಗೆ ಹೊಡೆತ ನೀಡ್ತು. ಆಗ ಜಿಡ್ಡುಗಟ್ಟಿದ ಪತ್ರಿಕೆಗಳು ಹೆಗಲು ಕೊಡವಿ ನಿಂತವು. ಸಂಪಾದಕರು ಬದಲಾದರು, ತಂಡ ಬದಲಾಯ್ತು. ಹೊರಗಿನಿಂದ ಕೆಲವರು ಒಳ್ಳೆ ಸಂಬಳಕ್ಕೆ ಬಂದರು. ಒಳಗಿದ್ದವ ದಡ್ಡ ಅನ್ನಿಸಿಕೊಂಡು ಅದೇ ಸಂಬಳಕ್ಕೆ ಉಳಿದ. ಒಂಥರ ಉತ್ತರ ಕರ್ನಾಟಕದ ಮಂದಿ ಗುಳೆ ಹೊರಟಹಾಗೆ ಪತ್ರಕರ್ತರ ಪಾಡಾಯ್ತು.
ನಿಧಾನವಾಗಿ ಸಂಪಾದಕರ ಪ್ರಾಬಲ್ಯ ಎಂಬುದು ಪತ್ರಿಕೆಯಲ್ಲಿ ಕಡಿಮೆಯಾಗಿ ಆಡಳಿತ ಮಂಡಳಿ, ಜಾಹೀರಾತು ಮಂದಿಯ ಹಿಡಿತವೇ ಜಾಸ್ತಿಯಾಯ್ತು. ಇವತ್ತು ಎಲ್ಲಿಗೆ ಬಂದು ನಿಂತಿದೆ ಎಂದ್ರೆ, ಯಾವೊಬ್ಬರು ಮಾಲೀಕರಿಗೆ ಚಾಲೆಂಜ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಕೊಟ್ಟಷ್ಟು ಸಂಬಳಕ್ಕೆ ವಹಿಸಿದಷ್ಟು ಕೆಲಸ ಮುಗಿಸಿ ಹೋಗಲೇಬೇಕು. ಓದುಗ, ಆತನ ಮುತುವರ್ಜಿ ಎಂಬ ಪ್ರಶ್ನೆಗಳು ಯಾವತ್ತೂ ಮೀಟಿಂಗ್‌ನಲ್ಲಿ ಏಳುವುದೇ ಇಲ್ಲ. ನಮಗ್ಯಾಕೆ ಸಿನಿಮಾ ಜಾಹೀರಾತು ಕಡಿಮೆಯಾಯ್ತು? ನಮಗ್ಯಾಕೆ ರಿಯಲ್ ಎಸ್ಟೇಟ್ ಜಾಹೀರಾತು ಬಂದಿಲ್ಲ ಎಂಬುದು ದೊಡ್ಡ ಚರ್ಚೆ. ಸುದ್ದಿ, ಗುಣಮಟ್ಟ ಅಂದ್ರೆ…ಅದ್ನೆಲ್ಲ ನೀವು ಸಂಪಾದಕೀಯ ಮಂಡಳಿ ಮೀಟಿಂಗ್‌ನಲ್ಲಿ ಚರ್ಚೆ ಮಾಡಿಕೊಳ್ಳಿ ಎನ್ನುತ್ತಾರೆ. ಅಷ್ಟಕ್ಕೂ ಮಿಗಿಲಾಗಿ ನೀವು ಚಾಲೆಂಜ್ ಮಾಡಿದ್ರೆ ನಿಮ್ಮ ಜಾಗಕ್ಕೆ ಲಾರಿ ಡ್ರೈವರ್, ರಿಕ್ಷಾ ಡ್ರೈವರ್ ಬಂದು ಆತ ನಿಮಗಿಂತ ಕ್ರಿಯಾಶೀಲ ಎಂಬುದನ್ನು ಸಾಬೀತು ಮಾಡುತ್ತಾನೆ. ಹಠಕ್ಕೆ ಬಿದ್ದವರು ಆತನನ್ನು ದೊಡ್ಡ ಅಂಕಣಕಾರನನ್ನಾಗಿ, ಲೇಖಕನನ್ನಾಗಿ ಮಾಡುತ್ತಾರೆ( ಬೇಕಿದ್ರೆ ಅಂಕಣವನ್ನು ಬೇರಯವರಿಗೆ ಹಣ ಕೊಟ್ಟು ಬರೆಸಿ ಆತನ ಹೆಸ್ರಲ್ಲಿ ಪ್ರಕಟಿಸುತ್ತಾರೆ!)
ಯಸ್, ಅಲ್ಟಿಮೇಟ್ಲಿ ದುಡ್ಡು. ವ್ಯಾಪಾರ ಇವಿಷ್ಟೆ ಇವತ್ತಿನ ಪತ್ರಿಕೋದ್ಯಮ. ಅದನ್ನು ಅಲ್ಲಗಳೆಯುವ ಸ್ಥಿತಿಯಲ್ಲಿ ನಾವಿಲ್ಲ. ದಿನಕ್ಕೆ ೧೦-೨೦ ಲಕ್ಷ ನಷ್ಟ ಎಂದ್ರೆ ಖಂಡಿತ ಹುಡುಗಾಟಿಕೆ ಮಾತಲ್ಲ. ಮನರಂಜನೆ ವಾಹಿನಿಗಳಂತೂ ಇವತ್ತು ತಮ್ಮನ್ನು ತಾವು ಕಾರ್ಪೊರೇಟ್ ಎಂದು ಗುರುತಿಸಿಕೊಂಡು ಬಿಟ್ಟಿವೆ. ಅಲ್ಲಿ ೧೦೦ ಕೋಟಿ ಹಾಕಿ ೧೨೦ ಕೋಟಿ ತೆಗೆಯುವ ಸ್ಕೀಮು. ಅಲ್ಲಿ ದುಡಿಯುವವರು ಇವತ್ತು ಪತ್ರಕರ್ತರಾಗಿ ಉಳಿದಿಲ್ಲ. ಪ್ರೆಸ್ ಎಂಬ ಐಡೆಂಟಿಟಿ ಅವರಿಗಿಲ್ಲ. ಅವರು ಸಾಫ್ಟ್‌ವೇರ್ ಎಂಜಿಯರ್‌ನಂತೆ ಓರ್ವ ಕಾರ್ಪೊರೇಟ್ ನೌಕರ. ಒಂಥರ ಪತ್ರಕರ್ತ ಎಂದು ಅವರಿವರಿಗೆ ಉಪದೇಶ ಮಾಡುತ್ತ, ಅವರಿವರ ಹುಳುಕು ತೋರಿಸುತ್ತ ನಮ್ಮೊಳಗಿನ ಹುಳುಕನ್ನು ಮುಚ್ಚಿಟ್ಟುಕೊಳ್ಳುವುದಕ್ಕಿಂತ ಕಾರ್ಪೊರೇಟ್ ನೌಕರಿ ತುಂಬಾ ಉತ್ತಮ ಅನ್ನಿಸಿಬಿಟ್ಟಿದೆ.
ಆತ ತಪ್ಪು ಮಾಡಿದ್ದಾನೆ. ಆತನ ಬಗ್ಗೆ ವರದಿ ಮಾಡಲು ವರದಿಗಾರ ತೆರೆಳಿದ್ದು ಗೊತ್ತಾಗುತ್ತೆ. ಆತ ಸೀದಾ ಮುಖ್ಯ ವರದಿಗಾರನ ಬಳಿ ಬರುತ್ತಾನೆ. ಅಲ್ಲಿ ಕೆಲಸ ಆಗಲಿಲ್ಲ ಅಂದ್ರೆ ಸಂಪಾದಕರ ಬಳಿ ಬರುತ್ತಾನೆ. ಅಲ್ಲಿಯೂ ಆಗಲಿಲ್ಲ ಅಂದ್ರೆ ಜಾಹೀರಾತು ವಿಭಾಗಕ್ಕೆ ಹೋಗುತ್ತಾನೆ. ವರ್ಷಕ್ಕಿಂತಿಷ್ಟು ಜಾಹೀರಾತು ಅಂತ ಅಲ್ಲೆ ವ್ಯವಹಾರ ಮುಗಿದು ಬಿಡುತ್ತದೆ. ಅದೆಲ್ಲ ಮುಗಿದು ೧೫ ದಿನದ ಬಳಿಕ ಸಂಕ್ರಾಂತಿ ಶುಭಾಷಯಗಳು ಅಂತಲೋ, ಗೌರಿ-ಗಣೇಶ ಹಬ್ಬದ ಶುಭಾಷಗಳು ಅಂತಲೋ ಆತನದ್ದೊಂದು ದೊಡ್ಡ ಫೋಟೊದೊಂದಿಗೆ ಜಾಹೀರಾತು ಪ್ರಕಟವಾಗುತ್ತದೆ. ಆತನ ಬಗ್ಗೆ ಕಷ್ಟಪಟ್ಟು ವರದಿ ತಂದ ವರದಿಗಾರ ಮಿಕಮಿಕ ಕಣ್ಣು ಬಿಟ್ಟು ಎಲ್ಲವನ್ನೂ ಸುಮ್ಮನೆ ನೋಡುತ್ತಿರುತ್ತಾನೆ! ಇಲ್ಲೆಲ್ಲಿಯೂ ವರ್ಕೌಟ್ ಆಗದಿದ್ರೆ ಮಾತ್ರ ಅವನು ಅಂತಿಮವಾಗಿ ಮಾಲೀಕರ ಬಳಿ ಹೋಗುತ್ತಾನೆ.
ಇವನ್ನೆಲ್ಲ ನಿತ್ಯವೂ ನೋಡಿದ ಸಾಕಷ್ಟು ಪತ್ರಕರ್ತರು ಇವತ್ತು ಬುದ್ಧಿವಂತರಾಗಿದ್ದಾರೆ. ಯಾವುದನ್ನು ಬರೆದ್ರೆ ತನಗೆ ಲಾಭದಾಯಕ ಯಾವುದು ನಷ್ಟ ಎಂಬುದನ್ನು ಬರೆಯುವ ಮೊದಲೇ ಆಲೋಚಿಸುತ್ತಾರೆ. ಇಷ್ಟಾಗಿಯೂ ಇಲ್ಲಿ ಉದ್ಯೋಗ ಭದ್ರತೆ ಇಲ್ಲ! ಮೇಲೆ ಕುಳಿತ ಯಾರೋ ಒಬ್ಬ ದಡ್ಡ ಎನ್ನಿಸಿ ಆಡಳಿತ ಮಂಡಳಿ ಇನ್ನೊಬ್ಬ ಅಪರಾತ್ರಿಯ ಬುದ್ಧಿವಂತನನ್ನು ತಂದು ಕೂರಿಸುತ್ತದೆ. ಆತ ದಡ್ಡ ಎಂದು ಸಾಬೀತು ಆಗುವವರೆಗೂ ಮಿಕ್ಕವರೆಲ್ಲ ದಡ್ಡರಾಗಿರುತ್ತಾರೆ! ಒಂಥರ ಉಗುಳಲೂ ಆಗದೆ, ನುಂಗಲು ಆಗದೆ ಬದುಕುತ್ತಿದ್ದೇವೆ. ಒಂದಷ್ಟು ಜನ ಗೆಳೆಯರು ಬೆಸತ್ತು ಎಲ್ಲವನ್ನೂ ಬಿಟ್ಟು ಬೇರೆಡೆಗೆ ಹೋಗಿದ್ದಾರೆ. ದಿನ ಬೆಳಗಾದ್ರೆ ಸಾಮಾಜಿಕ ತಾಣಗಳಲ್ಲಿ ಮಾಧ್ಯಮವನ್ನು ಉಗುಳುವುದು ನೋಡಿದ್ರೆ ಬೇಜಾರಾಗುತ್ತೆ. ಆದ್ರೆ ದೊಡ್ಡವರಂತೆ ನಾವು ಜಾಣ ಕಿವುಡರಾಗಿರುವುದು ಅತ್ಯುತ್ತಮ. ಯಾಕಂದ್ರೆ ನಾವು ಅದಕ್ಕೆಲ್ಲ ಉತ್ತರ ಅಂತ ಹಿಂಗೆಲ್ಲ ಲೇಖನ ಬರೆದ್ರೆ ನಮಗೆ ಯಾವುದೇ ಕಾಸು ಬರುವುದಿಲ್ಲ. ೨೦೦ ಜನ ಇದನ್ನು ಓದುವುದಿಲ್ಲ. ಯಾವುದೇ ಪತ್ರಿಕೆಯಲ್ಲು ಯಾವ ಕಾರಣಕ್ಕೂ ಇಂಥ ವಿಷಯಗಳೆಲ್ಲ ಪ್ರಕಟವಾಗುವುದಿಲ್ಲ. ಅದಕ್ಕಿಂತ ಕಾಸು ಬರುವುದನ್ನು ಬರೆದುಕೊಂಡಿರುವುದು ಲೇಸು ಅಂತ ನಮಗೆಲ್ಲ ಯಾವತ್ತೋ ಅರ್ಥವಾಗಿಬಿಟ್ಟಿದೆ. ಹೀಗಾಗಿ ಬರೆದು ಕೈಬಿಟ್ಟ ಮೇಲೆ ಮುಗೀತು. ಅದು ನಮ್ಮದಲ್ಲ. ಅದನ್ನು ನೀವು ಸಿಟಿ ಕೆಬಲ್ಲಿಗೆ ಬೇಕಾದ್ರು ಸೀರಿಯಲ್ ಮಾಡಿಕೊಳ್ಳಿ, ಇಲ್ಲವಾದ್ರೆ ಮಂಡಕ್ಕಿ ಪೊಟ್ಟಣ್ಣ ಬೇಕಾದ್ರು ಕಟ್ಟಿಕೊಳ್ಳಿ. ಬರೆದಿದ್ದಕ್ಕೆ ಕಾಸು ಕೊಡಿ. ನಿಮಗೆ ಬೇಕಾದಂತೆ ಅಡ್ಡ-ಉದ್ದ-ಎತ್ತರಕ್ಕೆ ಬರೆದುಕೊಡುತ್ತೇವೆ ಎಂಬಂಥ ಸ್ಥಿತಿಗೆ ನಾವೊಂದಿಷ್ಟು ಗೆಳೆಯರಂತೂ ಖಂಡಿತ ತಲುಪಿದ್ದೇವೆ. ನಮ್ಮ ಖುಷಿಗೆ ಬರೆಯಲು ಬೇಕಾದಷ್ಟಿದೆ. ದುಡಿಯುವ ಖುಷಿಗೆ ಬರೆಯುವುದೇ ಬೇರೆ! ದುಡ್ಡಿನ, ವ್ಯಾಪಾರದ ಮುಂದೆ ಯಾವ ಕ್ರಿಯಾಶೀಲತೆ, ಯಾವ ಜಾಣತನವೂ ಇಲ್ಲ…ಜಪಾನಿ ತೈಲ ಕಂಪನಿ ಬಗ್ಗೆ, ಅಲ್ಲಿನ ಮಾಲೀಕನ ಬಗ್ಗೆ, ೬ ನಿಮಿಷ ನೋಡಲಾಗದ ಕೆಟ್ಟ ಸಿನಿಮಾದ ಬಗ್ಗೆ ಸೊಗಸಾಗಿ ಬರೆಯವುದು ಮತ್ತು ಅದನ್ನು ಬೈದುಕೊಳ್ಳುತ್ತಲೆ ಓದುವ ನಿಮ್ಮಂಥವರನ್ನು ಆಸ್ವಾದಿಸುವುದೇ ಜಾಣತನ!!!
ಅಕ್ಕಯ್ಯ
Posted in ಕಥೆ-ವ್ಯಥೆ! on ಮೇ 10, 2011| 8 Comments »
ಹುಡುಗಿ, ಲವ್ವು, ಫೀಲು, ಸೆಕ್ಸು…ಕಥೆ ಅಂತಾ ಬರೆಯಲು ಕುಳಿತರೆ ಮತ್ತದೇ ಪದಗಳು ಉದುರುತ್ತವೆ. ಬೋಳಿಮಗನದ್ದು, ಈ ವಯಸ್ಸೇ ಹಾಗೆ ಅಂದುಕೊಳ್ಳುವ ಹೊತ್ತಿಗೆ ನೆನಪಾದಳು ಅಕ್ಕಯ್ಯ.
ಆವತ್ತು ಶ್ರಾವಣಿ ಬಸ್ಸಿನಲ್ಲಿ ಸಿಗದೇ ಹೋಗಿದ್ದರೆ, ಅವಳ ಪಕ್ಕದಲ್ಲೇ ಕುಳಿತ ನನ್ನೊಂದಿಗೆ ಮಾತನಾಡದಿದ್ದರೆ ಬಹುಶಃ ಅಕ್ಕಯ್ಯ ನೆನಪಾಗುತ್ತಿರಲಿಲ್ಲ! ಮಾಲಕ್ಕ ಅಲಿಯಾಸ್ ಅಕ್ಕಯ್ಯನ ಕುರಿತೊಂದು ಕಥೆ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.
ಪಟೇಲ್ ಪರಮಣ್ಣ!
ಹತ್ತೂರು ಸೀಮೆಯಲ್ಲಿ ಚಿರಪರಿಚಿತ ಹೆಸರು. ಪಟೇಲ್ ಪರಮಣ್ಣ ಗೊತ್ತಿಲ್ಲವಾದರೂ, ಆತನ ಹೆಂಡತಿ ಬಡ್ಡಿ ಭವಾನಮ್ಮನ ಹೆಸರು ಕೇಳದ ಓಣಿಗಳೇ ಹತ್ತೂರು ಸೀಮೆಯಲಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಭವಾನಮ್ಮನ ವಹಿವಾಟುಗಳಿಂದಲೇ ಪಟೇಲ್ ಪರಮಣ್ಣನ ಹೆಸರು ನಾಲ್ಕಾರು ಜನರ ಬಾಯಿಯಲ್ಲಿ ಹರಿದಾಡಿದ್ದು. ಇಂಥ ದಂಪತಿಗಳ ೧೮ ಮಕ್ಕಳಲ್ಲಿ ಪ್ರಥಮ ಸುಪುತ್ರಿಯೇ ನಮ್ಮ ಈ ಅಕ್ಕಯ್ಯ.
“ಈ ಮಾಣಿಯೊಂದು ಯಾವಾಗ್ಲೂ ತಿರುಗ್ತಾ ಇರ‍್ತಾ. ಸುಡುಗಾಡು ಮನ್ನ್ಯಾಥ ಒಂದು ದಿನ ಕೆಲಸಕ್ಕೆ ಬಂದ್ರೆ, ಮೂರು ದಿನ ಬರದಿಲ್ಲೆ. ನಮ್ಮ ಮನೆ ಮಳ್ಳು ಅಮ್ಮಂಗೆ ಇದೆಲ್ಲ ಎಂಥೂ ಗೊತಾಗ್ತಲ್ಲೆ…”ಇಂಥದ್ದೊಂದು ಸುಪ್ರಭಾತ ಪರಮಯ್ಯನ ಮನೆ ಕೊಟ್ಟಿಗೆಯಲ್ಲಿ ಕೇಳಿದರೆ, ಅದು ಅಕ್ಕಯ್ಯನ ಸಂಗೀತ ಎಂದು ಯಾರಿಗೂ ಹೇಳಬೇಕಿಲ್ಲ. ಪಕ್ಕದ ಮನೆ ಸುಮನತ್ತೆ ಕಳೆದ ೧೮ ವರ್ಷಗಳಿಂದ ಅಕ್ಕಯ್ಯನ ಈ ಹಾಡು ಕೇಳುತ್ತಲೇ ಇದ್ದಾಳೆ. ಒಂದೊಮ್ಮೆ, ಬೆಳಿಗ್ಗೆ ೬.೬೦ಕ್ಕೆ ಸರಿಯಾಗಿ ಈ ಸುಪ್ರಭಾತ ಕೇಳದೇ ಹೋದರೆ, ಆವತ್ತು ಅಕ್ಕಯ್ಯನಿಗೆ ಮೈ ಹುಷಾರಿಲ್ಲ ಅಂತಾ ನಾವು ಅಂದುಕೊಳ್ಳಬೇಕಿತ್ತು.
“ಅಕ್ಕಯ್ಯಂಗೆ ೮ ವರ್ಷ ಇರಕಿದ್ರೆ ಮದ್ವೆ ಆಗಿತ್ತು. ಇಲ್ಲೆ ಪಡೆಗೋಡು ಹತ್ರಾ ಲಿಂಗದಹಳ್ಳಿಗೆ ಕೊಟ್ಟಿದ್ದ. ಮದ್ವೆ ಆಗಿ ಮೂರೇ ವರ್ಷಕ್ಕೆ ಗಂಡ ಸತ್ತು ಹೋದ. ಆಮೇಲೆ ಭವಾನಮ್ಮ, ಅಕ್ಕಯ್ಯನ ಮನೆಗೆ ಕರೆದುಕೊಂಡು ಬಂದು ಇಟ್ಕಂಡ. ಆವತ್ತಿನಿಂದ ಇವತ್ತಿನವರೆಗೂ ಅಕ್ಕಯ್ಯ ಒಂದೇ ತರ ಇದ್ದ. ಕೊಟ್ಟಿಗೆ ಕೆಲ್ಸ, ಅಡುಗೆ ಮನೆ…ಇದಿಷ್ಟೆ ಅವಳ ದಿನಚರಿ. ಯಾರ ಮನೆಗೂ ಹೋಗದಿಲ್ಲೆ. ಯಾರ ಹತ್ರಾನೂ ಮಾತಾಡದಿಲ್ಲೆ. ಒಂದು ಹೊಸ ಬಟ್ಟೆ, ಹೊಸ ಸೀರೆ ಉಟ್ಟಿದ್ದನ್ನ ಆನಂತೂ ನೋಡಲ್ಲೆ”ಆವತ್ತು ಅಕ್ಕಯ್ಯನ ಕುರಿತು ಇವಿಷ್ಟು ಹೇಳಿದ ಅಮ್ಮ, ಮತ್ಯಾವತ್ತೂ ಅವಳ ಬಗ್ಗೆ ಹೇಳಲೇ ಇಲ್ಲ.
*******
ನನ್ನ ಹೆಸರು ಶ್ರಾವಣಿ. ಊರು ಚಿಕ್ಕಮಗಳೂರು ಜಿಲ್ಲೆಯ ಕಳಸ. ಕಳೆದ ೫-೬ ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ಸದ್ಯಕ್ಕೆ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್. ವಾಟ್ ಅಬೌಟ್ ಯೂ?
ಹೌದು, ಆವತ್ತು ಎನ್.ಆರ್ ಪುರದಲ್ಲಿ ಪರಿಚಿತವಾಗಿದ್ದು ಇದೇ ಶ್ರಾವಣಿ. ಶಾರದೆಯನ್ನು ನೋಡುವ ಸಲುವಾಗಿ ಶಿವಮೊಗ್ಗದಿಂದ ಶೃಂಗೇರಿಗೆ ಹೊರಟ್ಟಿದ್ದೆ. ಹೆಬ್ಬಾವು ಹರಿದಂತಿರುವ ತಿರುವುಗಳು, ಹಣ್ಣಿಲ್ಲದೆ ಸೊರಗಿರುವ ನೇರಳೆ ಮರಗಳು, ಕರಡವಿಲ್ಲದೆ ಬೋಳು-ಬೋಳಾಗಿರುವ ಬ್ಯಾಣಗಳು, ಹಳೆ ಪೊರೆ ಕಳಚಿ ಹೊಸ ಹಸಿರಿನೊಂದಿಗೆ ಮೈದಳೆದು ನಿಂತಿರುವ ಮರಗಳ ನಡುವೆಯೇ ಬಸ್ಸು ಸಾಗುತ್ತಿತ್ತು. ಕಿಟಕಿಯಾಚೆಗಿನ ಪ್ರಪಂಚವನ್ನು ನೋಡುತ್ತಿದ್ದವನಿಗೆ ಪಕ್ಕದಲ್ಲೊಂದು ಸುಂದರವಾದ ಹುಡುಗಿ ಕುಳಿತಿದ್ದಾಳೆಂದು ಗೊತ್ತಾಗಿದ್ದು ಬಸ್ಸು ಎನ್.ಆರ್ ಪುರವನ್ನು ಪ್ರವೇಶಿಸಿದಾಗ.
ನನ್ನ ಹೆಸರು ಸಂಜಯ್. ನಾನೂ ಕೂಡ ಕಳೆದೆರಡು ವರ್ಷಗಳಿಂದ ಬೆಂಗಳೂರಲ್ಲೇ ಇದ್ದೇನೆ. ನಿಮ್ಮಷ್ಟು ಒಳ್ಳೆ ಉದ್ಯೋಗದಲಿಲ್ಲ. ಹೊಟ್ಟೆ ಪಾಡಿನ ಕೆಲಸ. ಊರಿಗೆ ಬಂದಿದ್ದೆ. ಹಾಗೆ ಶಾರದಾಂಬೆಯ ದರ್ಶನ ಮಾಡಿಕೊಂಡು ಹೋಗೋಣ ಅಂತಾ ಶೃಂಗೇರಿ ಕಡೆ ಹೊರಟ್ಟಿದ್ದೇನೆ…
ಉಭಯ ಕುಶಲೋಪಚರಿಯೊಂದಿಗೆ ಇಬ್ಬರ ಮಾತುಕತೆ ಆರಂಭವಾಯಿತು. ಬಸ್ಸು ದೂರ ಸಾಗುತ್ತಾ ಹೋದಂತೆ ನಮ್ಮ ಸ್ನೇಹ ಗಟ್ಟಿಯಾಗುತ್ತಾ ಹೋಯಿತು.
ಹೌದು, ತುಂಬಾ ಒಳ್ಳೇ ಕೆಲಸ! ನಾವು ಯಾರಿಗಾಗಿ ಪ್ರಾಜೆಕ್ಟ್ ಮಾಡ್ತಾ ಇದ್ದೀವಿ, ಇದರಿಂದ ಯಾರಿಗೆ ಉಪಯೋಗ ಅನ್ನೋದು ಎಷ್ಟೋ ಸಲ ನಮಗೂ ಗೊತ್ತಿರುವುದಿಲ್ಲ. ನಿಜ, ಕೈ ತುಂಬಾ ಸಂಬಳ ಬರತ್ತೆ. ಒಂತರಹ ಹೈಟೆಕ್ ಕೂಲಿ. ನಾವು ಹೊಟ್ಟೆ ಪಾಡಿಗೇ ದುಡಿಯುವುದು ಕಣ್ರೀ…
ಮುಖದಲ್ಲಿನ ಅಸಹನೆಯ ಗೆರೆಗಳ ನಡುವೆಯೇ ಸಣ್ಣದೊಂದು ನಗು ಮಿಣುಕಾಡಿತ್ತು. ಆ ನಗುವಿನ ಹಿಂದಿರಬಹುದಾದ ನೋವಿನ ಸುಳಿವೂ ನನಗೆ ಸಿಕ್ಕಿರಲಿಲ್ಲ. ಸಹಜವಾಗಿ ಹುಡುಗಿ ಇಷ್ಟವಾಗಿ ಬಿಟ್ಟಿದ್ದಳು. ಆಂಟಿಯಾಗಿರಬಹುದೆಂಬ ಕಲ್ಪನೆಯೂ ಮನಸ್ಸಿಗೆ ಬರಲಿಲ್ಲ! ಆಂಟಿ ಎಂದು ಸುಳಿವು ನೀಡಬಹುದಾದ ಯಾವ ಲಕ್ಷಣಗಳೂ ಕಾಣಿಸಲೂ ಇಲ್ಲ!
ಶೃಂಗೇರಿ ಮಠ, ಮಠ, ಮಠ. ಇಳಿರಿ ಇದೇ ಲಾಸ್ಟ್ ಸ್ಟಾಪ್…
ಬಸ್ಸಿನ ಆ ಹುಡುಗನ ಕೂಗು ಕಿವಿಗಡಚತೊಡಗಿತು.
ಫಸ್ಟ್ ಟೈಂ ಬರ‍್ತಾ ಇರೋದಾ?
ಅಂತಾ ಅವಳು ಇಳಿಯಲು ಅಣಿಯಾದಾಗ ನಾನು ಭ್ರಮಾ ಲೋಕದಿಂದ ಹೊರಬಂದಾಗಿತ್ತು.
ಶಾರದೆ ದರ್ಶನ, ವಿದ್ಯಾರಣ್ಯರ ಉದ್ಯಾನವನ, ಊಟ…ಇವೆಲ್ಲ ಮುಗಿಯುವಾಗ ಶ್ರಾವಣಿ ನನ್ನ ಬದುಕಿನ ಅವಿಭಾಜ್ಯ ಅಂಗ ಅನ್ನಿಸಿಬಿಟ್ಟಿದ್ದಳು. ಹಠ ಮಾಡಿ ಕಳಸದ ಬಳಿಯಿರುವ ಅವಳ ಮನೆಗೆ ಕರೆದುಕೊಂಡು ಹೋಗುವಷ್ಟರ ಮಟ್ಟಿಗೆ ಆಕೆ ಗೆಳತಿಯಾಗಿದ್ದಳು.
ಹೊಸಕೆರೆಹಳ್ಳಿ ರಿಂಗ್‌ರೋಡ್‌ನಲ್ಲಿರುವ ಮಂತ್ರಿ ಅಪಾರ್ಟ್‌ಮೆಂಟ್‌ಲ್ಲಿ ನನ್ನ ಮನೆಯಿದೆ. ಬೆಂಗ್ಳೂರಿಗೆ ಬಂದ ಮೇಲೆ ಕಾಂಟ್ಯಾಕ್ಟ್ ಮಾಡ್ತೀನಿ. ಮೊಬೈಲ್ ನಂಬರ್ ಕೊಟ್ಟಿರಿ…
ಅಂತಾ ಬಸ್ ನಿಲ್ದಾಣದವರೆಗೆ ಬಂದು ಬಿಟ್ಟುಕೊಟ್ಟಳು.
ಹಸಿರು-ಬಿಳಿ ಬಣ್ಣದ ಸಹಕಾರ ಸಾರಿಗೆ ಬಸ್ಸು ಶಿವಮೊಗ್ಗೆಯ ಹಾದಿ ಹಿಡಿದು ಹೊರಟಾಗ, ಕಿಟಕಿಯಾಚೆಗಿನ ಪ್ರಪಂಚದಲ್ಲಿ ಮತ್ತೆ ಕನಸುಗಳಿಗೆ ರೆಕ್ಕೆ-ಪುಕ್ಕ ಬಂದಂದಿತ್ತು.
***
ಅಕ್ಕಯ್ಯನ ಗಂಡ ಸತ್ತ ಮೇಲೆ, ಬಡ್ಡಿ ಭವಾನಮ್ಮ ಮಗಳನ್ನ ಮನೆಗೆ ತಂದಿಟ್ಟುಕೊಂಡಳು. ಅವಳ ಪಾಲಿಗೆ ಗಂಡನ ಮನೆ ಕಡೆಯಿಂದ ಬರಬೇಕಿದ್ದ ದುಡ್ಡು, ಒಡವೆಗಳನ್ನೆಲ್ಲ ಸೀರೆ ಸೆರೆಗಿನಲ್ಲಿ ಕಟ್ಟಿಕೊಂಡು ಬಂದಳು. ಕತ್ತಲೆಯ ಕೋಣೆಯಲ್ಲಿದ್ದ ಕಪಾಟಿನಲ್ಲಿ ಅಕ್ಕಯ್ಯನ ಆಸ್ತಿಯನ್ನು ಭದ್ರವಾಗಿಟ್ಟು ಬೀಗ ಜಡಿದಳು. ಮನೆಯಲ್ಲಿದ್ದ ಅಂಥದ್ದೆ ಮತ್ತೊಂದು ಕತ್ತಲೆ ಗೂಡಿನಲ್ಲಿ ಅಕ್ಕಯ್ಯನಿಗೂ ಒಂದು ಹಾಸಿಗೆ ಹಾಸಿ ಕೊಟ್ಟಳು. ಗಂಡ, ಸಂಸಾರ ಇತ್ಯಾದಿ ಪದಗಳ ಅರ್ಥ ತಿಳಿಯುವ ಮೊದಲೇ ಮಾಲಕ್ಕನ ಬದುಕು ಸತ್ತು ಹೋಗಿತ್ತು. ಉಸಿರಾಡುವ ದೇಹ ಮಾತ್ರ ಉಳಿದಿತ್ತು ಎಂಬುದು ಎಲ್ಲರಿಗೂ ತಿಳಿಯಲು ಬಹಳ ದಿನ ಬೇಕಾಗಲಿಲ್ಲ.
ಗಂಡ ಸತ್ತ ಮೇಲೆ ಮನೆ, ಕೊಟ್ಟಿಗೆ ಕೆಲಸ ಹಾಸಿಗೆ ಇವಿಷ್ಟೆ ಅವಳ ಬದುಕಾಯಿತು. ನಾಲ್ಕಾರು ಜನ ಸೇರಿದ ಜಾಗದಲ್ಲಿ ಅಕ್ಕಯ್ಯ ಕಾಣಿಸಿಕೊಳ್ಳುತ್ತಿರಲಿಲ್ಲ. ಮನೆಗೆ ಯಾರಾದ್ರು ಬಂದರೆ ಮೊದ-ಮೊದಲು ಮಾತಾಡುತ್ತಿದ್ದಳು. ಅವರಿವರ ಸುದ್ದಿ ಕೇಳುತ್ತಿದ್ದಳು. ಕ್ರಮೇಣ ಅದು ಕಡಿಮೆಯಾಯಿತು. ಗೌರಿ ದನ, ಬೆಳ್ಳಿ ಎಮ್ಮೆ, ಕರಿ ಕುನ್ನಿ ಜತೆಗೆ ಮಾತಾಡಲು ಅಕ್ಕಯ್ಯ ಶುರುವಿಟ್ಟಳು. ಭಾಷೆ ಬರುವ ಮನುಷ್ಯನಿಗೇ ತನ್ನ ಮಾತು ಅರ್ಥವಾಗುತ್ತಿಲ್ಲ. ಅಂದಮೇಲೆ ಈ ಮೂಕ ಪ್ರಾಣಿಗಳಿಗೆ ಎಲ್ಲಿಂದ ಅರ್ಥವಾಗಬೇಕು ಅಂತಾ ಬಹುಶಃ ಒಂದು ದಿನ ಅಕ್ಕಯ್ಯನಿಗೆ ಅನ್ನಿಸಿರಬೇಕು. ಕೊನೆಗೆ ಆ ಪ್ರಾಣಿಗಳ ಜತೆ ಮಾತಾಡುವುದನ್ನೂ ನಿಲ್ಲಿಸಿ ಬಿಟ್ಟಳು. ತನ್ನಷ್ಟಕ್ಕೆ ತಾನೇ ಮಾತಾಡಲು, ಹಲುಬಲು ಶುರುವಿಟ್ಟಳು.
ಖಾಯಿಲೆ ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದೆಯಾ ಅನ್ನುತ್ತಾರೆ ಮಲೆನಾಡಿನಲ್ಲಿ. ಆದರೆ ಅದು ಅಕ್ಕಯ್ಯನ ವಿಚಾರದಲ್ಲಿ ಸುಳ್ಳು. ಕಳೆದ ೧೮ ವರ್ಷಗಳಿಂದ ಅಕ್ಕಯ್ಯ ಮೈಗೆ ಹುಷಾರಿಲ್ಲೆ ಎಂದು ಆಸ್ಪತ್ರೆಗೆ ಹೋಗಿದ್ದನ್ನು ಯಾರೂ ನೋಡಲಿಲ್ಲ. ನಾಲ್ಕಾರು ದಿನ ಹಾಸಿಗೆ ಹಿಡಿದು ಮಲಗಿದ್ದನ್ನು ಯಾರೂ ಕಾಣಲಿಲ್ಲ. ಬೆಳಿಗ್ಗೆ ೬.೬೦ಕ್ಕೆ ಕೊಟ್ಟಿಗೆಯಲ್ಲಿ ಸುಪ್ರಭಾತ ಕೇಳಿಲಿಲ್ಲ ಎಂದಾದರೆ, ಆವತ್ತು ಅಕ್ಕಯ್ಯನಿಗೆ ಹುಷಾರಿಲ್ಲದೇ ಇರಬಹುದು ಎಂಬುದು ನಮ್ಮ ಊಹೆಯಷ್ಟೆ. ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹುಚ್ಚರು, ಬೇಡುವವರು, ಅಕ್ಕಯ್ಯನಂಥವರಿಗೆಲ್ಲ ರೋಗಗಳೇ ಬರುವುದಿಲ್ಲವೋ ಅಥವಾ ರೋಗ ಬಂದರೂ ಕೇಳುವವರು ಯಾರು ಇಲ್ಲ ಎಂದು ನಿರ್ಧರಿಸಿ ಹೇಳಿಕೊಳ್ಳುವುದಿಲ್ಲವೋ ಗೊತ್ತಿಲ್ಲ. ಖಾಯಿಲೆ ಎಂಬುದು ಮನಸ್ಸಿಗೋ ದೇಹಕ್ಕೋ ಎಂಬ ಅನುಮಾನವನ್ನು ಹುಟ್ಟಿಸಿ ಬಿಡುತ್ತಾರೆ ಇವರೆಲ್ಲ.
ಒಂದಂತು ಸತ್ಯ. ಮನುಷ್ಯನಿಗೆ ತನ್ನೊಳಗಿದ್ದನ್ನು ಯಾರಿಗಾದ್ರೂ ಹೇಳಿಕೊಳ್ಳಬೇಕು ಅಂತಾ ತುಂಬಾ ಅನ್ನಿಸತ್ತೆ. ಯಾರೂ ತನ್ನನ್ನೂ ಕೇಳುತ್ತಿಲ್ಲ ಎಂಬ ಭಾವ, ಅವರೊಳಗಿನ ಎಲ್ಲಾ ನೋವನ್ನು ಹಿಡಿದಿಟ್ಟುಕೊಳತ್ತೆ. ಇಷ್ಟೆಲ್ಲದರ ನಡುವೆಯೂ ಅಕ್ಕಯ್ಯ ಅಪರೂಪಕ್ಕೆ ಪಕ್ಕದ ಮನೆ ಸುಮನತ್ತೆ ಜತೆ ಮಾತಾಡುತ್ತಾಳೆ. ಆವಾಗಾವಾಗ ಏನೇನೋ ಹಲುಬುತ್ತಾಳೆ. ಸುಮನತ್ತೆ ಅದೆಷ್ಟನ್ನು ಕೇಳಿಸಿಕೊಳ್ಳುತ್ತಾಳೋ, ಅದೆಷ್ಟನ್ನು ಅರ್ಥ ಮಾಡಿಕೊಳ್ಳುತ್ತಾಳೋ ಯಾರಿಗೂ ಗೊತ್ತಿಲ್ಲ. ಅಡುಗೆ ಮಾಡಲು ಬೇಜಾರು ಬಂದಾಗ ಅಕ್ಕಯ್ಯ ಚೂರು ಪಾರು ಆಸೆ(ಪದಾರ್ಥ) ಕೇಳುವುದು ಈ ಸುಮನತ್ತೆ ಬಳಿಯೇ!
ಹಾಗೆ ನೋಡಿದ್ರೆ, ಪಟೇಲರ ಮನೆ, ಹತ್ತೂರಲ್ಲಿಯೇ ಶ್ರೀಮಂತ ಕುಟುಂಬ ಎನ್ನಬಹುದು. ಪಟೇಲರ ಮಗನ ಮದ್ವೆ ಮೆರವಣಿಗೆಯನ್ನು ಇವತ್ತಿಗೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ೨ ಸಾವಿರ ಜನ ಆಗಿತ್ತು. ಮದ್ವೆಗೆ ೧೦ ಲಕ್ಷ ರೂ ಖರ್ಚಾಯಿತು ಅಂತಾ ಭವಾನಮ್ಮ ಹತ್ತೂರು ಸೀಮೆ ತುಂಬಾ ದರ್ಪದಿಂದ ಡಂಗುರ ಸಾರಿಕೊಂಡು ಹೋಗಿದ್ದು ಎಲ್ಲರಿಗೂ ನೆನಪಿದೆ. ಆದ್ರೆ ಆ ಸಂಭ್ರಮದಲ್ಲೂ ಅಕ್ಕಯ್ಯ ಹಳೆ ಸೀರೆಯುಟ್ಟು ಮನೆಯೊಳಗೆ ಕುಳಿತಿದ್ದು ಯಾರ ಕಣ್ಣಿಗೂ ಬಿದ್ದಂತಿಲ್ಲ. ಬಿದ್ದರೂ ಅದು ನಮ್ಮ ಜನರಿಗೆ ಚರ್ಚೆಯ ವಿಷಯ ಅನ್ನಿಸಿದಂತಿಲ್ಲ.
ಅಕ್ಕಯ್ಯನಿಗೂ ಸಂತೋಷವಾಗಿದ್ದಿದೆ. ತಮ್ಮ ವೆಂಕಟನ ಮದ್ವೆ ಸಂಭ್ರಮದ ಕುರಿತು ಸುಮನತ್ತೆ ಬಳಿ ಕೇಳಿ ತಿಳಿದುಕೊಂಡಿದ್ದಾಳೆ. ತಾನೂ ಸಂಭ್ರಮ ಪಟ್ಟಿದ್ದಾಳೆ. ಆದ್ರೂ ಅದೆಷ್ಟು ಕರೆದರೂ ಮದ್ವೆ ಮನೆಗೆ ಬರಲು ಮಾತ್ರ ಒಪ್ಪಿರಲಿಲ್ಲ. ಗಂಗೆ ದನ, ಬೆಳ್ಳಿ ಎಮ್ಮೆಗೆ ಅಕ್ಕಚ್ಚು ಕೊಟ್ಟು, ಹುಲ್ಲು ಹಾಕಿಕೊಂಡು ಮನೆ ಕಾಯ್ದುಕೊಂಡು ಇರುತ್ತೇನೆ ಅಂದಳು. “ಅಕ್ಕ ಅದೆಲ್ಲ ದಿನ ಇರ್ತು’ ಬಾ ಎಂದ ತನ್ನ ಸಹೋದರಿಯರ ಕರೆಗೆ ಕಿವಿಗೊಡಲಿಲ್ಲ. “ಅಯ್ಯೋ ಮದ್ವೆ ಮನೆಲಿ ಎಂತಾ ನೋಡದು ಇರ‍್ತೆ? ಯಂಗೆ ನೋಡ ವಯಸ್ಸಲ” ಅಂದು ಬಿಟ್ಟಳು. ಅಕ್ಕಯ್ಯನ ಈ ಮಾತಿನ ಹಿಂದೆ, ಅವಳ ಹಳೆಯ ಬದುಕಿನ ನೆನಪುಗಳಿರಬಹುದೆ?
***
ಕರೆಯದಿದ್ದರೂ ಇನ್ನೊಮ್ಮೆ ಅವಳನ್ನು ಭೇಟಿ ಮಾಡಬೇಕು ಅಂದುಕೊಂಡವ, ಈ ಶನಿವಾರ ಸಾಯಂಕಾಲ ಮನೆಗೆ ಬರಬೇಕೆಂಬ ಅವಳ ಕರೆಯನ್ನು ನಿರಾಕರಿಸಲು ಸಾಧ್ಯವೇ ಇರಲಿಲ್ಲ! ಆರಂತಸ್ತಿನ ಅರ್ಪಾಟ್‌ಮೆಂಟ್. ಸಂಬಳಕ್ಕೆ ತಕ್ಕದಾದ ಬಂಗಲೆ ಅಂದುಕೊಳ್ಳುತ್ತಾ ಒಳ ಹೊಕ್ಕವನಿಗೆ ಮಲೆನಾಡಿನ ಆತಿಥ್ಯವೇ ದೊರೆಯಿತು. ಹುಡುಗಿಯೊಬ್ಬಳ ಸೌಂದರ್ಯ ಹೆಚ್ಚಿಸಬಹುದಾದ ಅತಿ ಮುದ್ದಾದ ನಗುವಿನೊಂದಿಗೆ ಮನೆಯೊಳಗೆ ಬರ ಮಾಡಿಕೊಂಡಳು.
ಏನ್ ಮೇಡಂ ಒಬ್ಬರಿಗೆ ಇಷ್ಟು ದೊಡ್ಡ ಮನೆಯಾ? ಸಾಫ್ಟ್‌ವೇರ್ ಮಂದಿಯ ಅರ್ಪಾಟ್‌ಮೆಂಟ್ ಕುರಿತು ಸಾಕಷ್ಟು ಕಥೆಗಳಲ್ಲಿ ಓದಿದ್ದೆ. ಈಗ ಪ್ರತ್ಯಕ್ಷವಾಗಿ ನೋಡಿದೆ!
ಹೌದು, ಅವನಿಂದ ದೂರವಾದ ಮೇಲೆ ನನಗೂ ಹಾಗೆ ಅನ್ನಿಸುತ್ತಿದೆ…
ಆಕೆ ತೀರಾ ಸ್ವಾಭಾವಿಕವಾಗಿ ಹೇಳುತ್ತಿದ್ದರೂ ನನ್ನ ಉಸಿರು ನಿಂತಂತಾಯಿತು. ಧಾರಾಕಾರ ಮಳೆಯನ್ನು ಎದುರಿಸಲಾಗದ ಗುಲಾಬಿಯ ಪಕ್ಕಗಳು ಬಿಡಿ ಬಿಡಿಯಾಗಿ ಬಿದ್ದಂತೆ, ಪ್ರೀತಿಯೆಂಬ ಕನಸಿನ, ಕಲ್ಪಿತ ಗೋಪುರವೊಂದು ಕುಸಿದು ಬಿದ್ದಿತ್ತು.
ನಾನು ಯಾವಾಗ್ಲೂ ಹೀಗೇ ನೋಡಿ. ಮನೆಗೆ ಬಂದವರಿಗೆ ಉಪಚಾರ ಮಾಡುವ ಬದಲು, ನನ್ನ ಕಥೆ ಹೇಳಿಕೊಳ್ಳಲು ಶುರುಮಾಡುತ್ತೇನೆ. ಹಾಗಾಗಿಯೇ ಇರಬೇಕು ಅಮ್ಮ ನನಗೆ ವಾಚಾಳಿ ಅಂತಾ ಬೈಯ್ಯುವುದು. ಅಂದಹಾಗೆ ಕುಡಿಯಲಿಕ್ಕೆ ಏನು ತೆಗೆದುಕೊಳ್ಳುತ್ತೀರಾ?
ಒಂದ್ ಪೆಗ್ ಬೀಯರ್…ಅಲ್ಲಲ್ಲ ನೀರು
ಸಾವರಿಸಿಕೊಳ್ಳುತ್ತಾ ಹೇಳಿದೆ.
ಸ್ವಾರಿ ನಾನು ರಂ ಮಾತ್ರ ಕುಡಿಯೋದು. ಬೀಯರ್ ಇಲ್ಲ. ಬೇಕಾದ್ರೆ ತರಿಸಿಕೊಡಬೇಕು.
ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತೀರಲ್ಲ ಮೇಡಂ?!
ಹೌದು, ಬದುಕು ಅದೊಂದನ್ನು ತುಂಬಾ ಚೆನ್ನಾಗಿ ಕಲಿಸಿಕೊಟ್ಟಿದೆ. ಬೇರೆಯವರನ್ನು ನಗಿಸಿದ್ರೂ ಒಂದರ್ಥದಲ್ಲಿ ನಮ್ಮ ನೋವು ಮರೆಯತ್ತೆ ಅಲ್ವಾ?!
ಊಟದವರೆಗೂ ಇಂಥ ಒಗಟು ಸಂಭಾಷಣೆಗಳು ನಡೆಯುತ್ತಲೆ ಇದ್ದವು. ಊಟ ರೆಡಿ ಮಾಡಿ ಪೇಪರ್ ಹಾಸಿದಳು. ಫ್ರಿಜ್ ಒಳಗೆ ಇಟ್ಟ ಎರಡು ಬಾಟಲಿಗಳನ್ನು ತಂದು ಗ್ಲಾಸ್‌ಗೆ ಒಂದಷ್ಟು ರಂ ಸುರಿದಳು.
ಗಂಟೆ ೯ ದಾಟಿದೆ. ನಾನು ಹೊರಡ್ತೀನಿ. ನೀವು ಡ್ರಿಂಕ್ಸ್ ಮುಗಿಸಿ ಊಟ ಮಾಡಿ. ನನಗೆ ಕುಡಿಯೋ ಅಭ್ಯಾಸವಿಲ್ಲ…
ನೋ…ನೋ…ನೀವು ಹೋಗೊ ಹಾಗಿಲ್ಲ. ಕುಡಿಯೋದು ಬೇಡ. ನನ್ನ ಜೊತೆ ಸುಮ್ಮನೆ ಕುಳಿತುಕೊಳ್ಳಿ. ಡೋಂಟ್ ವರಿ. ನಾನೇನು ಓವರ್ ಲೋಡ್ ಆಗಲ್ಲ. ಎರಡಲ್ಲ, ೪ ಬಾಟಲಿ ಏರಿಸಿದರೂ ಮನಸನ್ನು ಕಂಟ್ರೋಲ್‌ನಲ್ಲಿಟ್ಟುಕೊಳ್ಳುವ ಶಕ್ತಿ ನನಗಿದೆ. ಪ್ಲೀಸ್ ನಿಮ್ಮ ಹತ್ರಾ ತುಂಬಾ ಮಾತಾಡ್ಲಿಕ್ಕಿದೆ.
ತೀರಾ ಸಿನಿಮಾಗಳಲ್ಲಿ ನೋಡುತ್ತಿದ್ದ ದೃಶ್ಯ ಕಣ್ಣೆದುರಿಗೆ ನಡೆಯುತ್ತಿದೆ ಅಂದುಕೊಳ್ಳುತ್ತಾ ಮುಜುಗರದಿಂದ ಕೂತರು, ಮುಂದೇನಾಗಬಹುದೆಂಬ ಕುತುಹಲವಿತ್ತು. ೪-೫ ಸಿಪ್ ಕುಡಿದು ಮುಗಿದಿರಬೇಕು.
ನೀವು ಟೇಸ್ಟ್ ನೋಡೋದಾದ್ರೆ ನೋಡಿ. ರಂ ಹುಡುಗಿಯರಿಗಾಗಿಯೇ ಇರೋ ಡ್ರಿಂಕ್ಸ್. ಗಂಡಸರ‍್ಯಾರು ಲೈಕ್ ಮಾಡಲ್ಲ. ನೀವು ಕುಡಿತದ ವಿಚಾರದಲ್ಲಿ ಹೆಂಗಸರ ಥರ ಆಡ್ತಾ ಇದ್ದಿರಿ. ಸೋ ಒಂದ್ಸಲ ಟೇಸ್ಟ್ ನೋಡಿ…
ಅದರಲ್ಲಿ ಅಂಥದ್ದು ಏನಿರಬಹುದು ಎಂಬ ಕುತುಹಲವಿತ್ತು. ಆದ್ರೂ ಅವಳಾಗಿಯೇ ಆಹ್ವಾನ ನೀಡಲಿ ಎಂದು ಕಾಯುತ್ತಿದೆ.
ನಂದು ಲವ್ ಮ್ಯಾರೇಜ್. ವಿಕ್ರಮ್ ಅಂತಾ ನನ್ನ ಕಲೀಗ್‌ಗಾಗಿದ್ದ. ಮದ್ವೆಗೆ ಮುಂಚೆ ತುಂಬಾ ಚೆನ್ನಾಗಿಯೇ ಇದ್ದ…
೨ ಸಿಪ್ ಏರಿಸಿದ ನನಗೆ ನಿಜಕ್ಕೂ ತಲೆ ಗಿರ್ ಅನ್ನುತ್ತಿತ್ತೊ ಅಥವಾ ಕುಡಿದರೆ ತಲೆ ಗಿರ್ ಅನ್ನುತ್ತೆ ಅನ್ನೋ ಸ್ನೇಹಿತರ ಮಾತು ಕೇಳಿ ನಾನಾಗಿಯೇ ತಲೆ ಗಿರ್ ಅನ್ನಿಸಿಕೊಂಡಿದ್ದೆನೊ ಗೊತ್ತಿಲ್ಲ. ಒಟ್ಟಲ್ಲಿ ಕಣ್ಣೆದುರಿಗಿನ ಲೋಕವೆಲ್ಲ ತೇಲಿದಂತೆ ಭಾಸವಾಗುತ್ತಿತ್ತು!
ಐದೇ ನಿಮಿಷಕ್ಕೆ ಸರಿಯಾದೆ. ನಾನು ಮಾತು ಮುಗಿಸುವವರೆಗೂ ಕುಡಿಯಬೇಡಿ ಅಂತಾ ಆಜ್ಞೆ ನೀಡಿ ಮುಂದುವರಿಸಿದಳು.
ಅವನ ಕುಡಿತ, ಬೈಗುಳ ಎಲ್ಲಾ ಸಹಿಸಿಕೊಂಡಿದ್ದೆ. ಈ ಮದ್ವೆ, ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಆದ್ರೂ ಹಠ ಮಾಡಿ ಗಂಟು ಹಾಕಿಕೊಂಡಿದ್ದೆ. ಹಾಗಾಗಿ ಏನು ಬಂದರೂ ಎದುರಿಸಬೇಕು. ಸಮಾಜದಲ್ಲಿ ತಲೆ ತಗ್ಗಿಸುವ ಹಾಗಾಗಬಾರದು ಎಂಬ ಭಾವನೆಯಲ್ಲಿ ನಾಲ್ಕಾರು ತಿಂಗಳು ದೂಡಿದೆ. ಇವತ್ತು ಸರಿ ಹೋಗಬಹುದು, ನಾಳೆ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅನೇಕ ರಾತ್ರಿ ಕಳೆದೆ. ಆವತ್ತು ಆ ಹಡ್ಬೆಯನ್ನು ಹಾಸಿಗೆಗೆ ಕರೆ ತಂದಾಗ ರೇಗಿ ಹೋಯಿತು. ಲೋ ರ‍್ಯಾಸ್ಕಲ್, ಮದ್ವೆಗೆ ಮುಂಚೇನೆ ನಿಂಗೆ ಬೇಕಾದ ಸುಖವನ್ನೆಲ್ಲ ಕೊಟ್ಟಿದ್ನಲ್ಲೊ. ಅದ್ಕೆ ಇವತ್ತು ಸರಿಯಾದ ಪ್ರತಿಫಲ ಕೊಟ್ಟೆ ಬಿಡು ಅಂತಾ ರಾತ್ರಿಯಿಡಿ ಅತ್ತುಬಿಟ್ಟೆ. ಅಳು ನನ್ನನ್ನು ಬಿಟ್ಟು ಮತ್ತೆ ಯಾರಿಗೂ ಕೇಳಿಸಲಿಲ್ಲ. ಮರು ದಿನವೇ ಅಲ್ಲಿಂದ ಹೊರಟು ಬಂದೆ. ಡೈವರ್ಸ್ ಕೊಡು. ನಿನಗೆ ಕೊಡಬೇಕಾದ ಪರಿಹಾರ ಬಿಸಾಡುತ್ತೇನೆ ಅಂದ. ನಾನೇನು ಸೂಳೆಯಲ್ಲ ನಿನಗೆ ಸಾಕು ಅನ್ನಿಸಿದಾಗ ಪರಿಹಾರ ಪಡೆದು ಹೋಗಲು ಅಂತಾ ಹೇಳಿ ಬಂದವಳು ಮತ್ತೆ ಮುಖ ತೋರಿಸಲಿಲ್ಲ. ಇವತ್ತಿಗೆ ೪ ವರ್ಷ ಕಳೆಯಿತು.
ಒಂದು ಪೆಗ್‌ನ್ನು ಗಟ ಗಟನೆ ಕುಡಿದು ಅಳು ಶುರುವಿಟ್ಟಳು. ಸುಮಾರು ೨೦ ನಿಮಿಷ ಅತ್ತಿರಬೇಕು.
***
ಶ್ರಾವಣಿ ಪರಿಚಯವಾಗಿ ಒಂದು ವರ್ಷ ಕಳೆದಿತ್ತು. ಆವತ್ತು ರಾತ್ರಿ ೯.೩೦ರ ಸಮಯ. ಅಮ್ಮನ ಕರೆ. ಕುಡಿಯುತ್ತಾ ಕುಳಿತವನಿಗೆ ಅಮ್ಮನ ಕರೆ ರೀಸಿವ್ ಮಾಡಲು ಅದ್ಯಾಕೊ ಪಾಪ ಬೀತಿ ಕಾಡುತ್ತಿತ್ತು. ಮತ್ತೆ, ಮತ್ತೆ ರಿಂಗ್ ಆಗುವುದನ್ನು ನೋಡಲು ಆಗಲಿಲ್ಲ. ಫೋನ್ ತೆಗೆದೆ. “ಅಕ್ಕಯ್ಯ ಸತ್ತು ಹೋದ. ಪಾಪ ಹೆಣದ ಮೇಲೆ ಕೊಳ್ಳಿ ಇಡಕು ಮಕ್ಕಳು ಮರಿ ಯಾರೂ ಇಲ್ಲೆ. ಕಡಿಗೆ ಎಂಕ್ಟೇಶನೆ(ಅಕ್ಕಯ್ಯನ ತಮ್ಮ)ಕರ್ಮ ಹಿಡಿದ” ಅಮ್ಮ ಗೊಣಗುತ್ತಿದ್ದರೆ ತಲೆ ಗಿರ್ ಅನ್ನುತ್ತಿತ್ತು.
ತಕ್ಷಣ ಶ್ರಾವಣಿಗೆ ಕಾಲ್ ಮಾಡಿದೆ. “ಡೀಯರ್ ಇವತ್ತು ಗುರುವಾರ ಅಲ್ವೆನೊ. ಸೋ ಆಫೀಸ್‌ನಲ್ಲೆ ಇದೀನಿ. ಅಮೆರಿಕದ ಕ್ಲೈಂಟು ತಲೆ ತಿಂತಾ ಇದಾರೆ. ಆಮೇಲೆ ನಾನೇ ಮಾಡ್ತೀನಿ. ಬಾಯ್. ಟೇಕ್ ಕೇರ್” ಕಟ್ ಮಾಡಿದಳು.
ಉಳಿದಿದ್ದ ಅರ್ಧ ಸಿಪ್ ಬೀಯರ್‌ನ್ನು ಗಟ-ಗಟನೆ ಕುಡಿದು ಮುಗಿಸಿದೆ. ಮಹಾನಗರಿಯ ನಾನಾ ಅರ್ಪಾಟ್‌ಮೆಂಟ್‌ಗಳ ಭವ್ಯ ಬಂಗಲೆಯೊಳಗಿರಬಹುದಾದ ಅಕ್ಕಯ್ಯನಂಥ ಅನೇಕರತ್ತ ಮನಸು ಹೊರಳಿತು. ಶ್ರಾವಣಿಯ ಮುಂದಿನ ಬದುಕಿನ ದಿನಗಳನ್ನು ಕಲ್ಪಿಸಿಕೊಂಡು ಸಣ್ಣಗೆ ಭಯ ಉಂಟಾಯಿತು. ಫೋನು, ಬೀಯರ್, ಆಫೀಸುಗಳ ಜತೆಗೆ ಬೆಳ್ಳಿ ಎಮ್ಮೆ, ಗೌರಿ ದನ, ಅಕ್ಕಯ್ಯನ ಮಾತು ಎಲ್ಲವೂ ನೆನಪಾಗಿ ಕಣ್ಣಲ್ಲಿ ೨ ಹನಿ ನೀರು ಜಿನುಗಿತು.
(ಈ ಕಥೆಯಲ್ಲಿ ಸಿಕ್ಕಾಪಟ್ಟೆ ಅಕ್ಷರದೋಷಗಳಿವೆ. ತಿದ್ದಲು ಪ್ರಯತ್ನಪಟ್ಟು ಸುಸ್ತಾದೆ. ಕಥೆಯನ್ನು ಓದಿ ಕುಡಿತದ ಕುರಿತ ಅನೇಕ ತಾಂತ್ರಿಕ ದೋಷಗಳನ್ನು ತಿದ್ದಿಕೊಟ್ಟ ಗೆಳೆಯರಿಗೆ ಧನ್ಯವಾದಗಳು. ಇನ್ಮೇಲೆ ಕಥೆ ಬರೆಯಲಿಕ್ಕಾದ್ರು ಕುಡಿಯಬೇಕಪ್ಪೊ!!!)
ನೆಗಡಿ, ಅಪ್ಪ, ಮತ್ತೊಂದಿಷ್ಟು…
Posted in ಕಥೆ-ವ್ಯಥೆ! on ಡಿಸೆಂಬರ್ 20, 2009| 4 Comments »
ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ ನೆಗಡಿ. ಹದಗೆಟ್ಟ ವಾತಾವರಣದಿಂದ ಹಲವರಿಗೆ ಇದೇ ಕಾಯಿಲೆ ಕಾಡುತ್ತಿದೆಯಂತೆ. ಆದ್ರೂ ನನ್ನ ಪರಮ ವೈರಿ ಕಾಯಿಲೆಯಲ್ಲಿ ನೆಗಡಿಗೆ ಮೊದಲ ಸ್ಥಾನ. ನಂತರದ್ದು ಹಲ್ಲುನೋವಿಗೆ! ಆಸ್ಪತ್ರೆ, ಡಾಕ್ಟರ್, ಇಂಜೆಕ್ಷನ್ ಅಂದ್ರೆ ನಂಗೆ ಇವತ್ತಿಗೂ ಭಯ. ೧೦ನೇ ತರಗತಿವರೆಗೂ ನೆಗಡಿ, ಹಲ್ಲುನೋವು ಅನುಭವಿಸಿ ಸುಸ್ತಾಗಿಬಿಟ್ಟಿದ್ದೇನೆ. ಮತ್ತೆ ಅಪರೂಪಕ್ಕೆ ಕಾಣಿಸಿಕೊಂಡ ಈ ನೆಗಡಿಯಿಂದ ಹಳೆಯದೆಲ್ಲ ಅದ್ಯಾಕೊ ನೆನಪಾಯಿತು.
‘ಸುಬ್ಬಣ್ಣ ಶಿರಸಿ ಹತ್ರಾ ವಾಜಗದ್ದೆಲಿ ಥಂಡಿಗೆ ಚೋಲೋ ಔಷಧಿ ಕೊಡ್ವ್ತಡ ನೋಡು’ ಅಂತಾ ಯಾರೋ ಹೇಳುತ್ತಿದ್ದರು. ‘ಅಲ್ಲ , ತಾಳಗುಪ್ಪದಲ್ಲಿ ಥಂಡಿ, ಕಫ ಹೋಪಲೆ ಒಬ್ಬವ ಬಾಳಾ ಒಳ್ಳೇ ಹಳ್ಳಿ ಔಷಧಿ ಕೊಡ್‌ತ್ನಡ ನೋಡು…’ಮತ್ತ್ಯಾರದ್ದೋ ಸಲಹೆ. ಇದನ್ನೆಲ್ಲ ಕೇಳಿದ ಅಪ್ಪ, ತಿಂಗಳಿಗೆ ಎರಡು ಸಲ ನನ್ನನ್ನು ಔಷಧಿಗೆ ಕರೆದುಕೊಂಡು ಹೋಗುತ್ತಿದ್ದ. ಕಫ ಕಟ್ಟಿದಾಗ ನಂಗೆ ನಡೆಯಲು ಆಗುತ್ತಿರಲಿಲ್ಲ. ಆಗೆಲ್ಲ ಬೆನ್ನ ಮೇಲೆ ಉಪ್ಪುಚಕ್ಕಿ ಮಾಡಿಕೊಂಡು, ಅಮ್ಮನಂತೆ ಕಂಕುಳಿನಲ್ಲಿ ನನ್ನನ್ನು ಹೊತ್ತುಕೊಂಡು ಹೋಗುತ್ತಿದ್ದ ಅಪ್ಪ … ಎಂಬುದು ನೆನಪಾದಾಗ ಅಮ್ಮನಿಗೆ ಪೋನ್ ಮಾಡಿದೆ. ಅವರು ಅಂಗಳದಲ್ಲಿ ಅಡಿಕೆ ಸಿಪ್ಪೆ ಮಗಿತಾ ಇದ್ದ…ಅಂದ್ಲು ಅಮ್ಮ.
ಸುಮಾರು ೫-೬ ವರ್ಷ ಅಸ್ತಮದ ರೀತಿಯ ಕಾಯಿಲೆಗೆ ಔಷಧಿ ಹುಡುಕಿಕೊಂಡು ನಾನು, ಅಪ್ಪ ತಿರುಗಿದ್ದಕ್ಕೆ ಲೆಕ್ಕವಿಲ್ಲ. ಕಡೆಗೂ, ಆ ಕಾಯಿಲೆ ತಾನಾಗಿಯೇ ಹುಷಾರಾಯಿತು ಹೊರತೂ, ಯಾವ ಔಷಧಿಯೂ ಪ್ರಯೋಜನವಾಗಲಿಲ್ಲ. ಅಪ್ಪನ ಬಗ್ಗೆ ಬರೆಯುತ್ತಾ ಹೋದರೆ ಬಹುಶಃ ನನ್ನ ಪಾಲಿಗೆ ಪುಟಗಳು ಸಾಲದಾಗಬಹುದು. ಅಷ್ಟು ಪಾಠವನ್ನು ಬದುಕಿಗೆ ಕಲಿಸಿಕೊಟ್ಟಿದ್ದಾನೆ.
ಆಗ, ನನಗೆ ೪ ವರ್ಷವಿರಬೇಕು. ಹಳೆ ಸೊಗೆಯ ಮನೆಯಲ್ಲಿದ್ದೆವು. ಅಮ್ಮನ ಕಾಲಿಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದಳು. ಆಗ ಮನೆಯಲ್ಲಿ ಗಂಜಿಗೂ ಅಕ್ಕಿ ಇರಲಿಲ್ಲ. ಅಂಥ ಸ್ಥಿತಿಯಲ್ಲಿದ್ದ ಕುಟುಂಬವನ್ನು ಅಪ್ಪ ಮೇಲಕ್ಕೆತ್ತಿದ ರೀತಿ ನಿಜಕ್ಕೂ ನನ್ನಿಂದ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ.
ನಾನು ೭ ತರಗತಿಗೆ ಬರುವ ಹೊತ್ತಿಗೆ, ನಾವು ಈ ಕಡೆ ಕೇರಿಯಲ್ಲಿ ಮನೆ ಮಾಡಿದೆವು. ದುರಂತವೆಂದರೆ, ನಮ್ಮ ದಾಯಾದಿ ಚಿಕ್ಕಪ್ಪನೇ ಮೋಸ ಮಾಡಿದ. ಹಸಿ ಇಟ್ಟಿಗೆ ಗೋಡೆಯ ಮನೆ ಕಟ್ಟಿಸಿ, ಹಳೆ ಮನೆಯ ಜಾಗವನ್ನು ಬರೆಸಿಕೊಂಡು, ಅಡಿಕೆ ದುಡ್ಡನ್ನೆಲ್ಲ ನುಂಗಿ ನೀರು ಕುಡಿದ. ಅದೇ ಹೊತ್ತಿಗೆ ಅಪ್ಪ ಅಲ್ಸರ್‌ನಿಂದ ಹಾಸಿಗೆ ಹಿಡಿದಿದ್ದ. ಇನ್ನೂ ಬದುಕುವುದೇ ಇಲ್ಲ, ಅವನ ಕಥೆ ಮುಗಿದೇ ಹೋಯಿತು ಅನ್ನುವಂತಾಗಿತ್ತಂತೆ. ನನಗೆ ಆಗ ಅದ್ಯಾವುದೂ ಅರ್ಥವಾಗಲಿಲ್ಲ. ಶ್ರೀಧರ ಸ್ವಾಮಿಗಳು ಕನಸಿನಲ್ಲಿ ಅಪ್ಪನಿಗೆ ಆಶೀರ್ವಾದ ಮಾಡಿದರಂತೆ. ಅಲ್ಲಿಂದ ನಂತರ ಅಪ್ಪ ಸುಧಾರಿಸಿದ್ದಂತೆ. ಹಾಗಂತ ಅಪ್ಪ ಹೇಳುವುದುಂಟು. ಈ ವಿಷಯ ಬಾಲಿಶ ಅನ್ನಿಸಬಹುದು. ಆದರೆ, ಒಂದು ದಿನ ಇದ್ದಕ್ಕಿದಂತೆ ಮಾತ್ರೆ ಎಸೆದಿದ್ದನ್ನು ನಾನೇ ನೋಡಿರುವೆ. ಅಲ್ಲಿಂದ ನಂತರ ಮತ್ತೆ ಕೆಜಿ ಲೆಕ್ಕದಲ್ಲಿ ತಂಬಾಕಿನ ಕವಳ. ಯಾರು, ಎಷ್ಟೇ ಹೇಳಿದರೂ ಅಪ್ಪ ಕವಳದ ವಿಷಯದಲ್ಲಿ ಇವತ್ತಿನವರೆಗೂ ರಾಜಿಯಾಗಿಲ್ಲ. ಮಾತ್ರೆಯನ್ನೂ ಮತ್ತೆ ಯಾವತ್ತೂ ನುಂಗಲಿಲ್ಲ!
ಇಗೊಂದಷ್ಟು ದಿನದ ಹಿಂದೆ ಅಪ್ಪನಿಗೆ ಚರ್ಮದ ಅಲರ್ಜಿ ಶುರುವಾಗಿತ್ತು. ತುಂಬಾ ಮಂಕಾಗಿ ಬಿಟ್ಟಿದ್ದ. ನನಗೂ ಆ ನೋವು ತುಂಬಾ ಕಾಡುತ್ತಿತ್ತು. ಔಷಧಿ ತೆಗೆದುಕೊಂಡು ೩ ದಿನದಲ್ಲಿ ರೋಗ ಹುಷಾರಾಗಬೇಕು ಎಂಬುದು ಅವನ ತತ್ವ! ಹಾಗಾಗಿ ಅವನಿಗೆ ಔಷಧಿ ಕುಡಿಸಲು ಸಾಧ್ಯವೇ ಇಲ್ಲ ಎಂಬುದು ನನಗೆ ಗೊತ್ತಿತ್ತು. ಆದ್ರೂ ಅವ ನನ್ನನ್ನು ಹೆಗಲ ಮೇಲೆ ಹೊತ್ತು ಔಷಧಿಗೆ ತಿರುಗಿದ್ದು ನೆನಪಾಯಿತು. ಹಾಗಾಗಿ ಹಠ ಮಾಡಿದೆ. ನನ್ನ ಹಠಕ್ಕೆ ಔಷಧಿ ತೆಗೆದುಕೊಂಡ ಎಂಬುದು ನಿಜ. ಜೊತೆಗೆ, ಅದನ್ನು ಕುಡಿಯುವುದಿಲ್ಲ ಎಂಬ ನನ್ನ ನಂಬಿಕೆಯೂ ನಿಜವಾಯಿತು! ಹಾಗಂತ ಯಾರ್‍ಯಾರೋ ಹೇಳಿದರು ಅಂತಾ, ದಿನಕ್ಕೊಬ್ಬ ಪಂಡಿತರ ಬಳಿ ಓಡುವುದನ್ನು ಮಾತ್ರ ಅಪ್ಪ ನಿಲ್ಲಿಸುವುದಿಲ್ಲ! ಕಡೆಗೆ ಅಲರ್ಜಿಯೂ ತಾನಾಗಿಯೇ ಹೋಯಿತು.
ಈಗ ಮತ್ತೆ ಮುಂಚಿನ ಗೆಲುವಿನಲ್ಲಿದ್ದಾನೆ…ಲವಲವಿಕೆಯಿಂದ ಕೆಲಸ ಮಾಡುತ್ತಿದ್ದಾನೆ. ನನ್ನ ಮಟ್ಟಿಗೆ ಇದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ. ತಾನೂ ಚಪ್ಪಲಿ ಹಾಕದೆ ಹೋದರೂ, ನನ್ನ ಮತ್ತು ತಂಗಿಯ ಬೇಡಿಕೆಗಳಿಗೆ ಯಾವತ್ತೂ ಕೊರತೆ ಮಾಡಲಿಲ್ಲ. ಅದರಲ್ಲೂ ವಿಶೇಷವಾಗಿ ತಂಗಿಗೆ! ಅವ, ತನಗೆ ಹೊಸ ಬಟ್ಟೆ ತಂದುಕೊಂಡಿದ್ದು ನಾನಂತೂ ಯಾವತ್ತೂ ನೋಡಿಲ್ಲ. ಆದ್ರೆ, ದುಡ್ಡು ಇಲ್ಲದಾಗಲೂ ಸಾಲ ಮಾಡಿ ನಮಗೆ ಬಟ್ಟೆ ತಂದುಕೊಟ್ಟವ…ಯಾಕೋ ಹಾಗೇ ಸುಮ್ಮನೆ ಅವನ ಕುರಿತು ಒಂದಷ್ಟು ಬರೆಯಬೇಕು ಅನ್ನಿಸಿತು. ಮನಸ್ಸು ಬಂದಾಗ ಮತ್ತೊಂದಿಷ್ಟು ಬರೆಯುವೆ!
ಟಿಪ್ಪು ಎಕ್ಸ್‌ಪ್ರೆಸ್
Posted in ಕಥೆ-ವ್ಯಥೆ! on ಅಕ್ಟೋಬರ್ 26, 2009| 10 Comments »
ಮೈಸೂರಿಗೆ ಹೋಗುವ ಪ್ರಯಾಣಿಕರಿಗೆ ಗಾಡಿ ನಂಬರ್ ೬೯೯೦, ಟಿಪ್ಪು ಎಕ್ಸ್‌ಪ್ರೆಸ್ ಗಾಡಿಯು ಪ್ಲಾಟ್‌ಫಾರ್ಮ್ ನಂಬರ್ ೯ಕ್ಕೆ ಶೀಘ್ರದಲ್ಲಿ ಬಂದು ಸೇರುವ ನಿರೀಕ್ಷೆಯಿದೆ. ಮೈಸೂರು ಜಾನೆವಾಲಿಯೇ…
ಕಂಪ್ಯೂಟರ್‌ನ ಆ ಹುಡುಗಿ ಅರೆಬೆಂದ ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ವದರುತ್ತಲೇ ಇದ್ದಳು.
೨.೧೫ಕ್ಕೆ ಹೊರಡಬೇಕಿದ್ದ ರೈಲು, ಇನ್ನೂ ಬಂದಿಲ್ಲ. ಸೂಪರ್ ಎಕ್ಸ್‌ಪ್ರೆಸ್ ಅಂತೆ! ಟಿಕೆಟ್ ದರ, ಉಳಿದವುಗಳಿಗಿಂತ ೧೦ರೂಪಾಯಿ ಜಾಸ್ತಿ. ಒಂದು ದಿನವೂ ಸಮಯಕ್ಕೆ ಸರಿಯಾಗಿ ಬಂದ ದಾಖಲೆಯೇ ಇಲ್ಲ…ಹಾಗಂತ ಮಂಡ್ಯ ಕಡೆಯ ಗೌಡರೊಬ್ಬರು ತಮ್ಮ ಅಳಲನ್ನು ನನ್ನ ಹತ್ತಿರ ಹೇಳುತ್ತಿದ್ದರು. ನನ್ನ ಮನಸ್ಸು ಬೇರೆ ಕಡೆ ಕೇಂದ್ರಿಕೃತವಾಗಿದ್ದರೂ, ಅವರ ಅಳಲನ್ನು ಕೇಳಿದಂತೆ ನಟಿಸುತ್ತಾ ಇರುವಾಗ, ದೃಷ್ಟಿ ಮೇಲುಗಡೆ ಹಾಯಿತು.
ಹೆಂಗಸೊಬ್ಬಳು ಏನೋ ವ್ಯವಹಾರ ಕುದುರಿಸುತ್ತಿದ್ದಾಳೆ. ಗಂಡಸು ಅವಳ ಜತೆ ಮಾತಾಡುತ್ತಿದ್ದಾನೆ. ಅವಳು ‘ಐದು’ ಎಂದು ಬೆರಳಿನಲ್ಲಿ ತೋರಿಸುತ್ತಿದ್ದರೆ, ಅವ ‘ಮೂರು’ ಅನ್ನುತ್ತಿದ್ದಾನೆ.
೭-೮ ನಿಮಿಷ ಚರ್ಚೆ ನಡೆದ ನಂತರ ಅವರಿಬ್ಬರ ವಹಿವಾಟು ಮುಗಿಯಿತು. ಅವ ಮುಂದೆ ಹೋದ. ಅವಳು ಅವನ ಹಿಂದೆ…೪೦೦ ರೂಪಾಯಿಗೆ ವ್ಯಾಪಾರ ಕುದುರಿದೆ ಎಂದು ಸ್ಪಷ್ಟವಾದರೂ, ಆ ಹಣ ಎಷ್ಟು ತಾಸಿನ ಸುಖಕ್ಕೆ ಎಂಬುದು…
ಚುಕು ಬುಕು, ಚುಕು ಬುಕು…
ರೈಲು ಬಂದೇ ಬಿಟ್ಟಿದೆ. ಸೀಟು ಹಿಡಿಯಲು ಜನ ಓಡುತ್ತಿದ್ದಾರೆ. ಹೆಂಗಸು, ಗಂಡಸು, ಹುಡುಗ, ಹುಡುಗಿ ಇವ್ಯಾವುದರ ಪರಿವೂ ಅವರಿಗಿಲ್ಲ. ಜಾಗ, ಕಿಟಿಕಿ ಪಕ್ಕದ ಸೀಟು ಇವಿಷ್ಟೇ ಅವರ ಆಲೋಚನೆ.
ಹುಬ್ಬಳ್ಳಿಯಿಂದ ಮೈಸೂರು ಕಡೆಗೆ ಹೋಗುವ ಗಾಡಿ ನಂಬರ್ ೬೯೯೦, ಟಿಪ್ಪು ಎಕ್ಸ್‌ಪ್ರೆಸ್ ಗಾಡಿಯು ಪ್ಲಾಟ್‌ಫಾರ್ಮ್ ನಂಬರ್ ೯ರಿಂದ ೨.೧೫ಕ್ಕೆ ಹೊರಡಲಿದೆ…
ಮೊಬೈಲ್‌ನಲ್ಲಿ ಸಮಯ ೨.೩೦ ಎಂದು ತೋರಿಸುತ್ತಿದೆ. ನನ್ನ ಮೊಬೈಲ್‌ನ ಗಡಿಯಾರವೇ ಸರಿಯಿಲ್ಲ ಇರಬೇಕು ಅಂದುಕೊಳ್ಳುತ್ತಾ ಜಾಗ ಹಿಡಿದು ಗಟ್ಟಿಯಾಗಿ ಕುಳಿತೆ. ದೃಷ್ಟಿ , ನಾನು ತೊಟ್ಟಿದ್ದ ಕುರ್ತಾದ ಕಡೆಗೆ ಹಾದು ಹೋಯಿತು. ಕುರ್ತಾದ ಬಣ್ಣ ಮಾಸಿದೆ. ಆದರೂ ಎಲ್ಲೂ ಹೊಲಿಗೆ ಬಿಟ್ಟಿಲ್ಲ. ಇನ್ನು ಆರು ತಿಂಗಳಿಗೇನೂ ತೊಂದರೆ ಇಲ್ಲ. ಒಂದು ಕಾಲದಲ್ಲಿ ಯಾರೋ ತೊಟ್ಟು ಬಿಟ್ಟಿದ್ದ ಹಳೇ ಬಟ್ಟೆ ಹಾಕಿಕೊಂಡು ಬದುಕುತ್ತಿದ್ದವನು, ಇವತ್ತು ನನ್ನ ಸಂಪಾದನೆಯಲ್ಲಿ ಸ್ವಂತ ಬಟ್ಟೆ ತೊಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದೇನೆ…ಖುಷಿಯ ಭಾವ ಮನವನ್ನು ಆವರಿಸಿತ್ತು.
‘ಏ ಪುಣ್ಯಾತ್ಮ ಬಟ್ಟೆಗೊಂದು ಇಸ್ತ್ರಿ ಹಾಕುವ ಅಭ್ಯಾಸ ಮಾಡ್ಕ್ಯ ಮಾರಾಯ. ಇಲ್ಲೆ ಅಂದ್ರೆ ಯಾವ ಹುಡುಗಿಯೂ ಸಿಗದಿಲ್ಲೆ ನೋಡು ನಿಂಗೆ ಆಮೇಲೆ’ ಎಂಬ ಅವಳ ಹಿತವಚನ ಅದ್ಯಾಕೊ ನೆನಪಿಗೆ ಬಂತು.
ಬಟ್ಟೆ ಕೊಳೆಯಾಗಲಿ, ಆಗದೇ ಇರಲಿ ವಾರಕ್ಕೊಂದು ಸಲ ಬಟ್ಟೆ ತೊಳೆಯುವುದು ಕಳೆದ ೮ ವರ್ಷಗಳಿಂದ ಅಭ್ಯಾಸವಾಗಿಬಿಟ್ಟಿದೆ. ಇನ್ನೂ ಇಸ್ತ್ರಿ…ಎರಡೋ-ಮೂರೋ ತಿಂಗಳಿಗೆ ಅಗಸನ ಬಳಿ ಬಟ್ಟೆ ಕೊಟ್ಟಾಗ ಇಸ್ತ್ರಿಯಾಗಿಯೇ ಬರುತ್ತದೆ! ಇಸ್ತ್ರಿ ಹಾಕುವುದರಿಂದ ನನಗೇನೂ ಸಮಧಾನ ಸಿಗುವುದಿಲ್ಲ. ಹುಡುಗಿ ನೋಡುತ್ತಾಳೆಂದು ಇಸ್ತ್ರಿ ಹಾಕುವ ಅಭ್ಯಾಸವಂತೂ ಇಲ್ಲವೇ ಇಲ್ಲ.
ಯಾರೂ ಸಿಗದೇ ಹೋದರೆ ನೀನೇ ಇದ್ಯಲ್ಲ ಬಿಡು!
ಹೋಗ ನಿಂದು ಬರೇ ಇದೇ ಆತು. ಏನೋ ಪಾಪ ಅಂತಾ ಹೇಳಿದ್ರೆ…ಈಗಿನ ಕಾಲದ ಹುಡುಗಿಯರ ಬಗ್ಗೆ ನಿಂಗೆ ಗೊತ್ತಿಲ್ಲೆ. ಸೆಂಟು, ಬಟ್ಟೆ, ಬೈಕಿಗೆ ಮರುಳಾಗದು ಜಾಸ್ತಿ ಗೋತಾತ.ಹೋಗಿ, ಹೋಗಿ ಇದ್ನೆಲ್ಲ ನಾನು ನಿನ್ನ ಹತ್ರಾ ಹೇಳ್‌ತ್ನಲ, ನನ್ನ ಕರ್ಮ…
ಹಲೋ ಎಕ್ಸ್‌ಕ್ಯೂಸ್‌ಮಿ, ಸ್ವಲ್ಪ ಆ ಕಡೆ ಸರಿತೀರಾ?
ಏನೋ ಆಲೋಚನೆಯಲ್ಲಿದ್ದೆ. ಇವಳ್ಯಾವಳೋ ಬಂದಳು… ಓ ನಾನು ಕುಳಿತಿರುವುದು ರೈಲಿನಲ್ಲಿ, ನನ್ನ ಸ್ವಂತ ಕಾರಿನಲ್ಲಲ್ಲ ಎಂಬುದು ಸಟಕ್ಕನೆ ನೆನಪಾಯಿತು. ಅವಳ ಕಡೆ ತಿರುಗದೇ ಸುಮ್ಮನೆ ಸರಿದೆ. ಎದುರುಗಡೆ ಕುಳಿತ್ತಿದ್ದ ಮೂರು ಹುಡುಗರು ಅವಳನ್ನು ಕದ್ದು ಕದ್ದು ನೋಡುತ್ತಿದ್ದರಿಂದ , ಪಕ್ಕದಲ್ಲಿ ಕುಳಿತ ಹುಡುಗಿ ಚೆಂದವಾಗಿದ್ದಾಳೆ ಎಂಬುದು ಖಾತ್ರಿಯಾಯಿತು.
ಮೊದಲ ಸಲ ರೈಲನ್ನು ನೋಡಿದ್ದು ಬೀರೂರಿನಲ್ಲಿ. ರೈಲು ಶ್ರೀಮಂತರ ವಾಹನ ಎಂಬ ಭಾವನೆಯಿತ್ತು. ದುಡಿಮೆಗೋಸ್ಕರ ಬೆಂಗಳೂರಿಗೆ ಬಂದ ಮೇಲೆ ಗೊತ್ತಾಯಿತು ರೈಲೆಂಬುದು ಬಡವರ ವಾಹನ ಅಂತಾ!
ಸ್ವಾಮಿ ದೇವನೆ ಲೋಕ ಪಾಲನೆ….
ಹಾಡು ತೀರಾ ಕಕರ್ಶವಾಗಿತ್ತು. ರೈಲು ಗಾಡಿಯಲ್ಲಿ ಅದೆಲ್ಲ ಮಾಮೂಲು. ನಾನಂದುಕೊಂಡಂತೆ ಅವ ಕುರುಡ.
ಛೇ, ನಾನು ನನ್ನದೇ ಕಷ್ಟ ಅಂದುಕೊಳ್ಳುತ್ತೇನೆ. ನನಗಿಂತ ಕಷ್ಟದಲ್ಲಿ ಇರುವವರು ಅದೆಷ್ಟು ಮಂದಿ ಇಲ್ಲಿ ಇದ್ದಾರೆ ಅಲ್ವಾ? ನನ್ನ ಕಷ್ಟಕ್ಕೆ ನಾನು ಹೇಳಿಕೊಳ್ಳುವ ಸಮಾಧಾನವಿದು. ಅವಳನ್ನು ಸಮಾಧಾನ ಮಾಡಲು ಬಳಸುವ ಅಸ್ತ್ರ ಕೂಡ ಇದೆ!
ಕಣ್ಣಲ್ಲಿ ನೀರು ಜಿನುಗಿದಂತಾಯಿತು. ಎಷ್ಟು ಜನರಿಗೆಂದು ಕಣ್ಣೀರು ಇಡುವುದು? ಬೆಂಗಳೂರಿನ ಬೀದಿ, ಬೀದಿಗಳಲ್ಲಿ ಇಂಥ ಮಂದಿ ಸಿಗುತ್ತಾರೆ. ಕೈಯಲ್ಲಿರುವ ಎರಡು ಕಾಸು ಅವರ ಡಬ್ಬಿಗೆ ಹಾಕಿ ಸಮಾಧಾನಪಟ್ಟುಕೊಳ್ಳುವುದನ್ನು ಬಿಟ್ಟರೆ, ಮತ್ತ್ಯಾವುದೇ ಪರಿಹಾರವಿಲ್ಲ ದೇಶದ ಈ ಸಮಸ್ಯೆಗೆ. ಹೋಟೆಲ್‌ನಲ್ಲಿ ತಿಂಡಿ ತಿನ್ನುತ್ತಿರುವಾಗ ಬಂದು ಕೈಯೊಡ್ಡುತ್ತಾರೆ ಕೆಲವರು. ಕರುಳು ಕರಗಿದಂತಾಗುತ್ತದೆ.
ನಾವು ಕೆಲವೊಮ್ಮೆ, ಕೆಲವುದಕ್ಕೋಸ್ಕರ, ಕೆಲವರೆದುರು ಕೈಯೊಡ್ಡಿ ನಿಲ್ಲುತ್ತೇವೆ…ಪ್ರಕೃತಿಯ ನಿಯಮವೇ ಹಾಗಿರಬೇಕು ಅಲ್ವಾ?
***
ಊಹುಂ, ನಿದ್ದೆ ಬರುತ್ತಿಲ್ಲ…ಅವಳು, ಅವಳ ಬದುಕನ್ನು ಕಟ್ಟಿಕೊಳ್ಳಲಿಕ್ಕೋಸ್ಕರ ಕೈಗೆಟುಕದಷ್ಟು ದೂರದ ಜಾಗಕ್ಕೆ ಹಾರಿ ಹೋಗಿದ್ದಾಳೆ.
ನನಗೆ ಬೇಜಾರಾದಾಗ ಕಾಟ ಕೊಡಲು ಯಾರೂ ಇಲ್ಲ. ಅವಳೇ ಹೇಳಿದಂತೆ ಬೇರೆ ಯಾರಾದರೂ ಸಿಗಬಹುದು. ಆದರೆ ಪ್ರಯತ್ನ ಮಾಡಲು ಮನಸ್ಸಾಗುತ್ತಿಲ್ಲ. ಎಷ್ಟು ದಿನ ಅಂತಾ ಅವಳ ಮೇಲೆ ಅವಲಂಬಿತವಾಗುವುದು. ಒಂದಲ್ಲ ಒಂದು ದಿನ ಅವಳು ಗಂಡನ ಮನೆ ಸೇರುತ್ತಾಳೆ. ಎಷ್ಟಂದರೂ, ಅತಿಯಾದ ನಿರೀಕ್ಷೆ ಅಪಾಯ ಎಂಬ ತತ್ವದಲ್ಲಿ ನಂಬಿಕೆ ಇಟ್ಟವ ನಾನು!
ಚೆಂದದ ಗಾಳಿ ಬೀಸುತ್ತಿದೆ. ಮಳೆ ಬರುವ ಎಲ್ಲ ನಿರೀಕ್ಷೆಯೂ ಆಗಸದಲ್ಲಿ ಗೋಚರವಾಗುತ್ತಿದೆ. ಅಂಥದ್ದೊಂದು ವಾತಾವರಣವನ್ನು ಆಸ್ವಾದಿಸಲು ಫುಟ್ ಬೋರ್ಡ್ ಮೇಲೆ ಹೋಗಿ ಕೂರಬೇಕು ಎಂಬುದು ತಟ್ಟನೆ ಮನಸ್ಸಿಗೆ ಹೊಳೆಯಿತು.
ರೈಲು ಚಾಮರಾಜನಗರ ದಾಟಿದೆ. ತಂಪು ವಾತಾವರಣ, ಹಚ್ಚ ಹಸುರಿನ ಗದ್ದೆ, ಅಲ್ಲಲ್ಲಿ ಸಕ್ಕರೆ ಕಬ್ಬಿನ ಬಿಳಿ ಬಿಳಿಯಾದ ಹೂವುಗಳು…ಮನೆ, ಮಲೆನಾಡು, ಬಾಲ್ಯ…ಎಲ್ಲವೂ ಒಟ್ಟೊಟ್ಟಿಗೆ ನೆನಪಾಯಿತು.
ಮೊಬೈಲ್‌ನಲ್ಲಿ ಮೆಸೇಜ್. ರಾಘುವಿನದ್ದು. ‘ಅಣ್ಣಾ ದೊರೆ ಎಲ್ಲಿದ್ದೆ? ಮೈಸೂರು ರೈಲನ್ನೇ ಹತ್ತಿದ್ದೆ ತಾನೇ?’
ಹಿಂದೊಮ್ಮೆ ಮೈಸೂರು ಬದಲು ಕೋಲಾರದ ರೈಲುಗಾಡಿ ಹತ್ತಿ ಹೋಗಿದ್ದೆ. ಹಾಗಾಗಿ ನನ್ನ ಕುರಿತು ಇನ್ನೂ ಅನುಮಾನ ಅವನಿಗೆ! ಬದುಕಿನಲ್ಲಿ ಎಷ್ಟೋ ಸಲ ರೈಲಲ್ಲ , ಹಳಿಯೇ ತಪ್ಪಿಹೋಗಿದೆ…
ವಿಮಾನವೊಂದು ಆಗಸದಲ್ಲಿ ಬುರ್ ಎನ್ನುತ್ತಿತ್ತು. ರೈಲಿಗೆ ಪ್ರತಿರ್ಸ್ಪಯಾಗಿ ಹಾರಿ ಬರುತ್ತಿದ್ದಂತಿತ್ತು. ನೋಡು-ನೋಡುತ್ತಿದ್ದಂತೆಯೇ ವಿಮಾನ ಮುಂದಕ್ಕೆ, ರೈಲು ಹಿಂದಕ್ಕೆ. ಕಣದಲ್ಲಿ ಉಳಿದುಕೊಳ್ಳಲಾಗದಷ್ಟು ಹಿಂದಕ್ಕೆ. ಎಷ್ಟಂದರೂ ರೈಲು ಬಡವರ ಪಾಲಿನ ವಾಹನ. ಹಾಗಾಗಿ ಹಾಸಿಗೆ ಇದ್ದಷ್ಟಕ್ಕೆ ಕಾಲು ಚಾಚಿದೆ. ಅದ್ಯಾಕೋ ಬದುಕಿನ ಅನಿವಾರ್ಯತೆ, ಅಸಹಾಯಕತೆ…ಎಲ್ಲವೂ ನೆನಪಾಯಿತು.
ಸಟಕ್ಕನೆ ರೈಲಿಗೊಂದು ಬ್ರೇಕ್ ಬಿದ್ದಿದೆ. ಕ್ರಾಸಿಂಗ್ ಅಂತೆ. ಅಲ್ಲ , ಆ ಕಡೆಯಿಂದ ಬರುವ ಆ ರೈಲಿಗೆ ಜಾಗಕೊಡಲು ಇದು ನಿಂತಿದ್ದು ಯಾಕೆ? ಬೇಕಾದರೆ ಅದೇ ಜಾಗ ಕೊಡುತ್ತಿತ್ತು…
ಆ ಕಡೆಯಿಂದ ಬರುವ ರೈಲು ಕೂಡ ಹೀಗೇ ಆಲೋಚಿಸಿ ಹೊರಟುಬಿಟ್ಟರೆ?!
ಅಪಘಾತ, ಸಾವಿರಾರು ಜನರ ಸಾವು…
ಬದುಕಿನಲ್ಲೂ ಎಷ್ಟೋ ಸಲ ಹೀಗೆ ಆಗತ್ತೆ ಅಲ್ವಾ? ಅವ ದಾರಿ ಕೊಡಲಿ ಎಂದು ನಾನು, ನಾನು ದಾರಿ ಬಿಡಲಿ ಎಂದು ಅವ…ಪ್ರತಿಷ್ಠೆ…
ಆದ್ರೂ ಇದು ‘ಟಿಪ್ಪು ಫಾಸ್ಟ್ ಎಕ್ಸ್‌ಪ್ರೆಸ್’. ಉಳಿದವುಗಳಿಗಿಂತ ೧೦ ರೂಪಾಯಿ ಹೆಚ್ಚು ಎಂಬ ಯಜಮಾನರ ಅಳಲು!
ಹತ್ತಿರವಿದ್ದು ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ
ಕವಿ ಬರೆದ ಸಾಲು ನೆನಪಿಗೆ ಬಂತು. ಬಹುಶಃ, ಕವಿ ತನ್ನ ಸ್ವಂತ ಅನುಭವದಿಂದ ಈ ಸಾಲುಗಳನ್ನು ಬರೆದಿರಬೇಕು!
***
ಮದ್ದೂರ್ ವಡೆ, ಮದ್ದೂರೊಡೆ
ಮಳೆ ಬಂದು ನಿಂತಿದೆ. ಮಣ್ಣು ‘ಘಮ್’ ಎನ್ನುತ್ತಿದೆ. ರೈಲಿನಿಂದ ಜಿಗಿದು ಗದ್ದೆಯಲ್ಲಿ ಕುಣಿದು-ಕುಪ್ಪಳಿಸಬೇಕು ಅನ್ನಿಸುತ್ತಿದೆ. ಹಾಗೊಮ್ಮೆ ಜಿಗಿದುಬಿಟ್ಟರೆ ರೈಲು ನನಗೋಸ್ಕರ ಕಾಯುವುದಿಲ್ಲ. ನೋಡುವ ಜನ ಕೂಡ ಇವನ್ಯಾರೋ ಹುಚ್ಚ ಅಂದುಕೊಳ್ಳುತ್ತಾರೆ. ಎಷ್ಟಂದರೂ ಬಾಲ್ಯದ ಆ ಮಜವೇ ಬೇರೆ ಬಿಡಿ.
ಚುಕು ಬುಕು, ಚುಕು ಬುಕು…ರೈಲು ಮದ್ದೂರು ನಿಲ್ದಾಣದಿಂದ ಜಾಗ ಖಾಲಿ ಮಾಡಲು ಸಜ್ಜಾಗಿತ್ತು. ಸಮಯ ಬಂದಾಗ ಒಂದು ನಿಲ್ದಾಣದಿಂದ ಜಾಗ ಖಾಲಿ ಮಾಡಲೇ ಬೇಕು. ಇನ್ನೊಂದು ನಿಲ್ದಾಣದತ್ತ ಹೆಜ್ಜೆ ಹಾಕಲೇ ಬೇಕು.
ತೊಡಲು ಬಟ್ಟೆ , ನೆಮ್ಮದಿಯಾಗಿ ಮೂರು ಹೊತ್ತು ಊಟ ಸಿಕ್ಕರೆ ಸಾಕು, ೧೦೦ರೂಪಾಯಿ ಲೆಕ್ಕಾಚಾರ, ಕನಸುಗಳು…ಎಲ್ಲವೂ ವಿಸ್ತಾರವಾಗುತ್ತಾ ಹೋಗುತ್ತಿದೆ. ರೈಲಿಗೊಂದು ಗುರಿಯಿದೆ. ನನಗೊಂದು ಗುರಿಯಿಲ್ಲ. ಹಾಕಿಕೊಂಡ ಗುರಿಯನ್ನು ತಲುಪುತ್ತಾ ಹೋದಂತೆ, ಗುರಿಯ ವಿಸ್ತೀರ್ಣವೂ ಹೆಚ್ಚಾಗುತ್ತಾ ಹೋಗುತ್ತದೆ. ಅದು ರೈಲು. ನಾನಿಲ್ಲಿ “ನಾನು”!
ನಿಜ, ನಂದೂ ಫಾಸ್ಟ್ ಎಕ್ಸ್‌ಪ್ರೆಸ್. ಕೆಲವರದ್ದು ಪ್ಯಾಸೆಂಜರ್, ಇನ್ನು ಕೆಲವರದ್ದು ಸೂಪರ್ ಫಾಸ್ಟ್. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ವೇಗ ಹೆಚ್ಚಾಗುತ್ತದೆ. ‘ಅತಿಯಾದ ವೇಗ ಅಪಘಾತಕ್ಕೆ ಕಾರಣ’ ಆ ಸಂಚಾರಿ ನಿಯಮ ನಮ್ಮ ಬದುಕಿಗೂ ಅನ್ವಯವಾಗುತ್ತದೆ. ಹಲವು ಸಲ ಲೆಕ್ಕಾಚಾರ ತಪ್ಪಿ ಎಡವಿಬೀಳುತ್ತೇವೆ. ಕೆಲವೊಮ್ಮೆ ಏನೂ ಲೆಕ್ಕಾಚಾರವೇ ಇಲ್ಲದೇ ಗೆದ್ದು ಬಿಡುತ್ತೇವೆ!
ಫುಟ್‌ಬೋರ್ಡ್ ಬೋರು ಬಂದಿತ್ತು. ಬ್ಯಾಗ್ ಇಟ್ಟಿದ್ದ ಸೀಟಿನೆಡೆಗೆ ಹೋಗಿ ಕುಳಿತುಕೊಳ್ಳುವ ಮನಸ್ಸಾಯಿತು.
ಕಾಫಿ, ಕಾಫಿ….ದೋಸೆ, ದೋಸೆ…
ಅಬ್ಬ ಅದೆಷ್ಟು ಹುಡುಗರು…ಇನ್ನೊಬ್ಬರ ಹೊಟ್ಟೆ ತುಂಬಿಸುವ ಮೂಲಕ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವವರು. ಅವರು ಜೀವನವನ್ನೆಲ್ಲ ರೈಲು ಗಾಡಿಯಲ್ಲೇ ಕಳೆದುಬಿಡುತ್ತಾರೆ. ಅಲ್ಲಿ ಸಿಗುವ ಮೂರು ಕಾಸನ್ನೇ ಆಶ್ರಯಿಸಿಕೊಂಡು ಬದುಕುತ್ತಾರೆ. ಅವರಿಗೆ ಯಾವುದೇ ಕನಸುಗಳೇ ಇಲ್ಲವಿರಬೇಕು. ಅಥವಾ ಇರುವಷ್ಟಕ್ಕೆ ತೃಪ್ತಿಪಟ್ಟುಕೊಂಡು ಬದುಕುವ ಮನೋಭಾವದವರು ಅವರಾಗಿರಬೇಕು!
ಮತ್ತೆ ಗಕ್ಕನೆ ಬ್ರೇಕ್ ಬಿದ್ದಿದೆ. ಕ್ರಾಸಿಂಗ್ ಅಂತಾ ಅಕ್ಕಪಕ್ಕದವರು ಮಾತಾಡುತ್ತಿದ್ದಾರೆ. ಈ ರೈಲಿಗೆ ‘ಸ್ವಾಭಿಮಾನ’ ಎಂಬುದೇ ಇಲ್ಲ. ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಅದು ಕೂಡ ಟಿಪ್ಪು ಎಕ್ಸ್‌ಪ್ರೆಸ್! ಟಿಪ್ಪುವಿಗೆ ಅವಮಾನ ಮಾಡಲಿಕ್ಕೋಸ್ಕರವೇ ಸೃಷ್ಟಿಯಾಗಿರುವ ರೈಲು ಗಾಡಿಯಿದು. ಆ ಸಲವೂ ಕ್ರಾಸಿಂಗ್ ಅಂತಾ ಮತ್ತೊಂದು ರೈಲಿಗೆ ದಾರಿ ಬಿಟ್ಟು ಕೊಟ್ಟಿತ್ತು. ಈ ಸಲವೂ…
ಸ್ವಾಭಿಮಾನವಿಲ್ಲದ ಗಾಡಿ ಎಂದು ಬೈದುಕೊಳ್ಳುತ್ತ ಕೆಳಗಿಳಿದರೆ ನಾಗನಹಳ್ಳಿ ಅಂತಾ ಬೋರ್ಡ್ ಕಾಣುತಿತ್ತು. ನದಿಯೊಂದು ಹರಿಯುತ್ತಿದೆ. ತುಂಬಾ ಖುಷಿಯಾಯಿತು. ನದಿ ದಡದ ಮೇಲೆ ಹೋಗಿ ಸ್ವಲ್ಪ ಹೊತ್ತು ಕುಳಿತೆ.
ನದಿ, ಬೆಟ್ಟ , ಗುಡ್ಡ….ಮಲೆನಾಡಿನಲ್ಲಿ ಬದುಕಿದವರಿಗೆಲ್ಲ ಇದರ ಸೊಬಗು ಗೊತ್ತಾಗುತ್ತದೆ. ಬೆಂಗಳೂರಿನ ಕೆಲ ಮಂದಿಗೆ ಬದುಕಿನ ಬೇಸರ ಕಳೆಯಲು ಪಬ್, ಬಾರ್, ವೇಶ್ಯಾವಾಟಿಕೆ ಗೃಹಗಳಿರುವಂತೆ ಮಲೆನಾಡಿನಲ್ಲಿ ಪ್ರಕೃತಿ ಮಾತೆಯ ಸೊಬಗಿದೆ.
ನಾನೂರಕ್ಕೆ ವ್ಯಾಪಾರ ಕುದುರಿಸಿಕೊಂಡ ಹೋದ ಆಕೆ ನೆನಪಾದಳು. ಅಬ್ಬ ಎಂಥಾ ದುಸ್ತರವಾದ ಬದುಕದು. ನಿತ್ಯವೂ ದುಡ್ಡು ಕೊಡುವ ಯಾರ ಜತೆಗೋ…
ನನಗೆ ದುಸ್ತರ ಅನ್ನಿಸುವುದು ಅವಳಿಗೆ ಮಾಮೂಲು. ನನ್ನದು ಅವಳಿಗೆ ದುಸ್ತರ ಅನ್ನಿಸಬಹುದು…
ಚುಕು ಬುಕು…ತಿರುಪತಿ ಎಕ್ಸ್‌ಪ್ರೆಸ್…
ಟಿಪ್ಪು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಎದುರು ದರ್ಪದಿಂದ ಹೋಗುತ್ತಿದ್ದಾಗ, ‘ಕ್ರಾಸಿಂಗ್’ ಎಂಬ ನೆಪದಲ್ಲಿ ಆ ರೈಲು ಗಾಡಿಯನ್ನು ಮೆರೆದಾಡಲು ಬಿಟ್ಟ ಟಿಪ್ಪುವಿನ ಮೇಲೆ ಕೋಪ ಬರುತ್ತಿತ್ತು.
ಚುಕು ಬುಕು…
ನನ್ನ ಈ ಆಲೋಚನೆಗಳ ಯಾವ ಪರಿವೂ ಇಲ್ಲದಂತೆ ‘ಟಿಪ್ಪು ಎಕ್ಸ್‌ಪ್ರೆಸ್’ ಎಂಬ ರೈಲು ಗಾಡಿ ತನ್ನ ಪ್ರಯಾಣ ಮುಂದುವರಿಸಿತ್ತು. ಕಣ್ಣು ಮುಚ್ಚಿ ಬಿಡುವುದರೊಳಗೆ ಮೈಸೂರು ರೈಲ್ವೇ ನಿಲ್ದಾಣ ಬಂದುಬಿಟ್ಟಿದೆ.
ಅಂದಹಾಗೆ ಅವಳು?!
ಬದುಕಿನ ಪ್ರಯಾಣದಲ್ಲಿದ್ದಾಳೆ. ಫೋನ್, ಇ-ಮೇಲ್ ಸಂದೇಶವಿಲ್ಲದೇ ೨-೩ವಾರವೇ ಕಳೆದಿದೆ. ಅವಳ ಪ್ರಯಾಣಕ್ಕೆ ನಾನೇ ದಾರಿ ಬಿಟ್ಟಿದ್ದೇನೆ. ಯಾಕೆಂದರೆ ಅವಳನ್ನು ಅಡ್ಡಗಟ್ಟುವ ಯಾವ ಹಕ್ಕು ನನಗಿಲ್ಲ. ಒಮ್ಮೆ ಹಠ ಹಿಡಿದು ಅಡ್ಡಗಟ್ಟಿದರೆ?
ಅಪಘಾತ, ಸಾವು, ನೋವು…
ಮೌನವಾಗಿ ದಾರಿ ಬಿಟ್ಟುಕೊಟ್ಟ ಟಿಪ್ಪುವಿಗಿಂತ ಭಿನ್ನವಾಗೇನಿಲ್ಲ ನನ್ನ ಕಥೆ ಕೂಡ!
(ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟಗೊಂಡ ಕಥೆ)
ಕೂಡೋ, ಕಳೆಯುವ ಲೆಕ್ಕದಲ್ಲಿ…
Posted in ಕಥೆ-ವ್ಯಥೆ! on ಅಕ್ಟೋಬರ್ 3, 2009| 3 Comments »
ಈವರೆಗೆ ಬದುಕಿನಲ್ಲಿ ಸಿಕ್ಕವರನ್ನು, ಕಳೆದುಕೊಂಡವರನ್ನು ನಿನ್ನೆ ಸುಮ್ಮನೆ ಲೆಕ್ಕ ಹಾಕುತ್ತಿದೆ. ಈ ಜೀವನ ಒಂತರಹ ಕೂಡುವ, ಕಳೆಯುವ ಲೆಕ್ಕದಂತೆ ಅನ್ನಿಸತೊಡಗಿದೆ. ಒಂದಷ್ಟು ಮಂದಿಯನ್ನು ಗಳಿಸುತ್ತೇವೆ, ಅದರ ಬೆನ್ನಲ್ಲೇ ಮತ್ತೊಂದಷ್ಟು ಮಂದಿಯನ್ನು ಕಳೆದುಕೊಳ್ಳುತ್ತೇವೆ. ಇಡೀ ಪ್ರಯಾಣದುದ್ದಕ್ಕೂ ಈ ಪ್ರಕ್ರಿಯೆ ಮರುಕಳಿಸತ್ತೆ. ಹಾಗಂತ ಇಲ್ಲಿ ಶಾಶ್ವತವಾಗಿ ಜತೆಗುಳಿಯುವವರು ತೀರಾ ವಿರಳ. ಬೇರೆಯವರ ಕಥೆ ಹಾಳಾಗಲಿ, ನಮ್ಮ ಚಿಂತನೆ, ನಿಲುವುಗಳೇ ಶಾಶ್ವತವಾಗಿ ನಮ್ಮ ಜತೆಗೆ ಉಳಿಯುವುದಿಲ್ಲ! ನನ್ನ ಇಂದಿನ ಜೀವನದ ಪಥ, ೨ ವರ್ಷ ಕಳೆಯುವುದರೊಳಗೆ ಬದಲಾಗಿರತ್ತೆ. ಕಾಲ, ಪರಿಸ್ಥಿತಿಗೆ ಅನುಗುಣವಾಗಿ ನಾವು ಸಾಕಷ್ಟು ಸಲ ಬದಲಾಗುತ್ತೇವೆ ಅಲ್ವಾ?!
‘ಬದಲಾವಣೆ ಜಗದ ನಿಯಮ’ ಹಾಗಂತ ಭಗವಾನ್ ಶ್ರೀಕೃಷ್ಣ ಹೇಳಿಹೋಗಿದ್ದಾನಂತೆ. ಆ ಕಾರಣಕ್ಕಾಗಿಯೇ ನಾವು ಆಗಾಗ ಬದಲಾಗುತ್ತಿರುತ್ತೇವೆ. ಈ ಬದಲಾವಣೆಗೆ ಕೆಲವೊಮ್ಮೆ ಕಾರಣ ಸಿಗತ್ತೆ. ಇನ್ನು ಹಲವು ಸಲ ಕಾರಣ ಸೃಷ್ಟಿಸಿಕೊಂಡು ಬದಲಾಗುತ್ತೇವೆ! ಜತೆಗಿದ್ದವರು ದೂರವಾಗುತ್ತಾರೆ. ದೂರವಿದ್ದವರು ಕಾರಣವಿಲ್ಲದೆ ಹತ್ತಿರವಾಗಿಬಿಡುತ್ತಾರೆ. ಬೀದಿಯಲ್ಲಿ ನಿಂತು ಜಗಳ ಆಡಿಕೊಂಡವರು ಅನಿರೀಕ್ಷಿತವಾಗಿ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುವಷ್ಟು ಸ್ನೇಹಿತರಾಗಿ ಬಿಡುತ್ತಾರೆ…ಅಬ್ಬಬ್ಬ ಇಲ್ಲಿ ಯಾವುದನ್ನೂ ನಿರೀಕ್ಷಿಸಲು ಸಾಧ್ಯವೇ ಇಲ್ಲ.
ಒಂದನೇ ತರಗತಿಯಲ್ಲಿ ಬೆಂಚಿನ ಸಹಪಾಠಿಗಳಾಗಿದ್ದವರು ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಅಂತಾನೇ ಗೊತ್ತಿಲ್ಲ. ಅದರ ಕಥೆ ಒತ್ತಟ್ಟಿಗಿರಲಿ, ಮೊನ್ನೆ, ಮೊನ್ನೆ ಡಿಗ್ರಿಯಲ್ಲಿ ಜತೆಗೆ ಕುಳಿತ್ತಿದ್ದ ಮಿತ್ರರೂ ಇಂದು ಅಪರಿಚಿತರು. ಯಾವಾಗಲೋ ಒಂದು ಸಲ ಸಿಗುತ್ತಾರೆ. ನಗುತ್ತಾರೆ, ಮಾತಾಡುತ್ತಾರೆ…ಅಲ್ಲಿಗೆ ಮುಗಿಯಿತು ಆ ಅಧ್ಯಾಯ. ಅವನ/ಅವಳ ಪರಿಚಯದಿಂದ ನನಗೇನು ಲಾಭ ಎಂದು ಆಲೋಚಿಸುವ ಮಟ್ಟಿಗೆ ಇವತ್ತಿನ ಸಮಾಜ ಬದಲಾಗಿ ಬಿಟ್ಟಿದೆ ಅಂದ್ರೆ ಬಹುಶಃ ತಪ್ಪಾಗಲಾರದು. ಯಾರಾದರೂ ಸುಮ್ಮನೆ ಮಾತಾಡಿಸಿದರೂ ಅನುಮಾನ. ಇವ ನನ್ನಿಂದ ಯಾವುದೋ ಕೆಲಸ ಬಯಸುತ್ತಿದ್ದಾನೆ ಎಂಬ ಭಾವನೆ! ಅದಕ್ಕೆ ಸರಿಯಾಗಿ ಮಾತಾಡಿಸುವ ಮಂದಿಯೂ ಅಷ್ಟಕ್ಕೆ ಸಿಮೀತರಾಗಿಬಿಟ್ಟಿದ್ದಾರೆ.
ಹುಟ್ಟಿನ ಹಿಂದೆ ಗೊತ್ತಿಲ್ಲ, ಸಾವಿನ ಮುಂದೆ ತಿಳಿದಿಲ್ಲ. ಬದುಕುವ ಮೂರು ದಿನಕ್ಕೆ ಒಂದೇ ಗಲ್ಲಿಯಲ್ಲಿ ಹತ್ತೆಂಟು ಬಣ. ನೂರೆಂಟು ನಾಯಕರು. ‘ನನ್ನದೇನು ಕಮ್ಮಿ’ ಎನ್ನುವವರು. ಅದರಿಂದ ಸಾದಿಸುವುದು ಏನನ್ನೂ ಎಂದು ಅವರಿಗೂ ಗೊತ್ತಿಲ್ಲ! ಆದ್ರೂ ಅವರದ್ದೊಂದು ಬಣ. ಕುರ್ಚಿಬೇಕು. ಅಕಾರ ಬೇಕು. ಜೈಕಾರ ಹಾಕುವವರಿರಬೇಕು. ಗಾಳಿ ಬೀಸುವ ಮಂದಿ ಜತೆಗಿರಬೇಕು…ಮನುಷ್ಯನ ಈ ಬಯಕೆಗಳಿಗೊಂದು ಸಲಾಮ್ ಅನ್ನಲ್ಲೇ ಬೇಕು. ಒಬ್ಬೊಬ್ಬರಿಗೆ ಒಂದೊಂದು ತರಹದ ಬಯಕೆ. ಹಾಗಾಗಿ ಮೇಲಿನವರ ಬಯಕೆಗಳನ್ನು ಯಾವ ಕಾರಣದಿಂದಲೂ ತಪ್ಪು ಅನ್ನಲು ಸಾಧ್ಯವಿಲ್ಲ ಅಥವಾ ಅವರೆಲ್ಲ ನನ್ನ ಚಿಂತನೆಯ ಮೂಗಿನ ನೇರಕ್ಕೆ ಬದುಕಬೇಕು ಎಂದು ಆಶಿಸುವುದು ಸರಿಯಿಲ್ಲ. ಯಾಕಂದ್ರೆ ಇಂಥದನ್ನು ಬರೆದು ನಾನು ಏನನ್ನು ಸಾದಿಸುತ್ತೇನೆ ಎಂದು ನನಗೂ ಗೊತ್ತಿಲ್ಲ!
ಈ ಸಮಾಜದಲ್ಲಿ ಪರಿಹರಿಸಲು ಸಾಧ್ಯವೇ ಇಲ್ಲದ ಒಂದಷ್ಟು ಸಮಸ್ಯೆಗಳಿವೆ. ‘ಇದು ಸಮಸ್ಯೆಯೇ ಅಲ್ಲ’ ಎಂದು ನಾವು ಭಾವಿಸುಕೊಳ್ಳುವುದೇ ಅದಕ್ಕೆ ಉತ್ತಮ ಪರಿಹಾರ. ಸಮಸ್ಯೆಯೊಂದನ್ನು ನಾವು ಗಂಭೀರ ಎಂದು ಭಾವಿಸಿದರೆ ಮಾತ್ರ ತಾನೇ ಅದು ಗಂಭೀರವಾಗವುದು?!
ಕೋಡ್ಸರ ಅನಾಮಿಕ ಬ್ಲಾಗ್ ಮಾಡುತ್ತಾನೆ, ಬೇರೆಯವರನ್ನು ಪುಗಸಟ್ಟೆ ಬೈಯ್ಯುತ್ತಾನೆ ಎಂದು ಭಾವಿಸಿ ಕುಳಿತವರು ಇವತ್ತಿಗೂ ಸಾಕಷ್ಟು ಮಂದಿ ಇದ್ದಾರೆ. ಅವರಲ್ಲಿ ಹಲವರಿಗೆ ಸಮಜಾಯಿಷಿ ಕೊಟ್ಟು ಸಾಕಾಗಿದೆ. ನಾನು ಬೇರೆ ಯಾರೋ ಹಿರಿಯರನ್ನು ಅನಾಮಿಕವಾಗಿ/ ಹೆಸರು ಹೇಳಿಕೊಂಡು ಬೈಯ್ಯುವುದರಿಂದ, ಅವರ ಒಂದು ಕೂದಲು ಅಲ್ಲಾಡುವುದಿಲ್ಲ ಎಂದು ೪ ವರ್ಷಗಳ ಹಿಂದೆಯೇ ಅರ್ಥವಾಗಿದೆ. ನಾನಲ್ಲ, ರಾಜ್ಯದ ಮುಖ್ಯಮಂತ್ರಿಗಳಿಂದಲೂ ಕೆಲವರ ವಿರುದ್ಧ ಏನೂ ಹರಿದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಬೈಗುಳ ಹಲವರ ಪಾಲಿಗೆ ಹೊಗಳಿಕೆ! ಇವಿಷ್ಟು ಎಲ್ಲರಿಗೂ ಅರ್ಥವಾದರೆ ಬಹುಶಃ ಅನಾಮಿಕ ಬ್ಲಾಗ್‌ಗಳ ಹಾವಳಿ ಇರುತ್ತಿರಲಿಲ್ಲವೇನೋ. ಹೆಸರು ಯಾರದ್ದೋ, ಬಸಿರು ಯಾರದ್ದೋ ಎಂಬಂತೆ ಯಾರೋ ಮಾಡುವ ತಪ್ಪಿಗೆ ಅನುಮಾನಕ್ಕೆ/ಅವಮಾನಕ್ಕೆ ಗುರಿಯಾಗುವವರು ಮತ್ತ್ಯಾರೋ. ಇಂಥ ಅನುಭವ ಬದುಕಿನಲ್ಲಿ ಸಾಕಷ್ಟು ಸಲ ಆಗುತ್ತಿರತ್ತೆ. ಹಾಗಾಗಿ ಇದು ಕೂಡ ನನ್ನ ಪಾಲಿಗೆ ಸಮಸ್ಯೆಯಲ್ಲ…!
ಕೆಲವೊಮ್ಮೆ ಎಲ್ಲವೂ ಬೇಸರ ತರಿಸುತ್ತದೆ. ಯಾವುದೂ ಬೇಡ ಅನ್ನಿಸುತ್ತದೆ. ಅವೆಲ್ಲ ಆ ಕ್ಷಣಕ್ಕೆ ಸೀಮಿತ. ಯಾವುದನ್ನೂ ಬೇಡ ಎಂದು ಶಾಶ್ವತವಾಗಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಕಂಡ ಕನಸುಗಳು ನನಸಾದ ಹೊರತೂ ಸಮಾಧಾನವಿಲ್ಲ. ಅಂದುಕೊಂಡಿದ್ದು ಸಿಗುವವರೆಗೂ ತೃಪ್ತಿಯಿಲ್ಲ. ಹಾಗಾಗಿ ಕ್ಷಣಾರ್ಧದಲ್ಲಿ ಬದುಕು ಮಾಮೂಲಿ ಹಾದಿಯನ್ನು ಹಿಡಿದುಬಿಡುತ್ತದೆ….ಇಂಥ ಬದುಕಿನ ಪಯಣಕ್ಕೊಂದು ಜೈ ಹೋ…!!!
ಅವಳು
Posted in ಕಥೆ-ವ್ಯಥೆ! on ಫೆಬ್ರವರಿ 4, 2009| 1 Comment »
ಮಳೆ ಜಿಟಿ ಜಿಟಿ ಜಿನುಗುತ್ತಲೇ ಇತ್ತು. ಎಸಿ ರೂಮಿನ ಸೋಫಾಕ್ಕೆ ಒರಗಿ ಕುಳಿತು ಕಿಟಕಿ ಕಿಂಡಿಯಿಂದ ಅಂಗಳದತ್ತ ಇಣುಕಿದರೆ, ಮಗ ಶ್ರವಣ ಸಿಮೆಂಟ್ ಅಂಗಳದಲ್ಲೇ ‘ಲಗೋರಿ’ ಎಂದು ಕಿರುಚುತ್ತಾ, ಕುಣಿದು ಕುಪ್ಪಳಿಸುತ್ತಿದ್ದ. ‘ಜುಮುರು ಮಳೆಯಲ್ಲಿ ನೆನೆಯ ಬೇಡ ಥಂಡಿ ಆಗತ್ತೆ’ ಅಂತಾ ಕೂಗಿ ಹೇಳಲು ತುಟಿ ತೆರೆದರೆ…
ಊಹುಂ ಸ್ವರ ಸಹಕಾರ ನೀಡುತ್ತಿಲ್ಲ…
ಶ್ರವಣನ ‘ಲಗೋರಿ’ ಎಂಬ ಕೂಗು ಕೇಳದಿದ್ದರೆ, ಮತ್ತೆ ಅವಳು ನೆನಪಾಗುತ್ತಿರಲಿಲ್ಲ. ಯಾಕೆಂದರೆ ಅವಳನ್ನು ನೆನಪಿಸಿಕೊಳ್ಳಬೇಕಾದಷ್ಟು ನೆನಪಿಸಿಕೊಂಡು, ಅವಳಿಗಾಗಿ ಸುರಿಸಲು ಸಾಧ್ಯವಿರುವಷ್ಟು ಕಣ್ಣೀರು ಸುರಿಸಿ ಆಗಿದೆ!
ಅವಳನ್ನು ನಾನಿಷ್ಟು ಬೇಗ ಮರೆಯಬಾರದಿತ್ತು ಅನ್ನಿಸತ್ತೆ ಕೆಲವೊಮ್ಮೆ. ನಾನು ಹಾಗಂದುಕೊಳ್ಳುವುದಕ್ಕೇ ಇರಬೇಕು, ಅವಳು ಆಗಾಗ ಏನೇನೋ ನೆವದಿಂದ ನೆನಪಾಗುವುದು. ಸುಮ್ಮಸುಮ್ಮನೆ ನನ್ನಲ್ಲಿ ಕಣ್ಣೀರು ತರಿಸುವುದು…
***
ಇವನೊಬ್ಬ ಬಿಕನಾಸಿ ಅಪ್ಪ. ಒಂದು ಕೊಡೆ ತಂದು ಕೊಡಲು ಯೋಗ್ಯತೆಯಿಲ್ಲ. ಇವನಿಗ್ಯಾಕೆ ಬೇಕಿತ್ತು ಮಕ್ಕಳು. ಈಗ ಮುರಿದು ಬೀಳತ್ತೋ, ಆಗ ಮುರಿದು ಬೀಳತ್ತೋ ಅನ್ನೋ ಸೋಗೆ ಗುಡಿಸಲು ಕಟ್ಟಿಕೊಳ್ಳಲು ಇವನಿಗೆ ಈ ಬೆಟ್ಟದ ತಪ್ಪಲೇ ಬೇಕಿತ್ತಾ?
ಜಿಟಿ ಜಿಟಿ ಜಿನುಗುತ್ತಿದ್ದ ಮಳೆಯಲ್ಲೇ ಅಪ್ಪನನ್ನು ಶಪಿಸುತ್ತ ಸಟ ಸಟ ಹೆಜ್ಜೆ ಹಾಕುತ್ತಿದ್ದೆ…
ಕಂಬ್ಳಿ ಕೊಪ್ಪೆ ಹಾಕ್ಕೊಬೇಕಂತೆ!
ಛೀ, ಎಲ್ಲರಿಗೂ ಕೊಡೆಯಿದೆ, ನನಗೆ ಮಾತ್ರ ಕಂಬ್ಳಿ ಕೊಪ್ಪೆ, ಜರಿ ಕೊಪ್ಪೆ…
ನಾನು ಮಳೆಯಲ್ಲಿ ತ್ಯೊಯ್ದರೂ ಸರಿ, ಕಂಬ್ಳಿ ಕೊಪ್ಪೆ ಧರಿಸಲಾರೆ ಅಂತಾ ಹಠ ಮಾಡಿಕೊಂಡು ಹೊರಟ್ಟಿದ್ದೆ ಮನೆಯಿಂದ. ಮನೆಯಿಂದ ಹೊರಡುವಾಗ ಮಳೆ ಬರಲಿಲ್ಲ. ಮನೆ ಸೇರಲು ಹೊರಟಾಗ ಮಳೆ ಬಂತು. ಈಗಲಾದರೂ ಅಪ್ಪನಿಗೆ ಮಗನ ಕಷ್ಟ ಗೊತ್ತಾಗಲಿ ಅಂದುಕೊಳ್ಳುತ್ತಾ ಹೆಜ್ಜೆ ಹಾಕುತ್ತಿರುವಾಗಲೇ ಯಾರೋ ಕರೆದಂತಾಯಿತು.
ಏ ರವಿ ಅದ್ಯಾವ ಹಾಳಾದ ಹುಡುಗಿ ಕನಸು ಕಾಣುತ್ತಿದ್ಯೋ?! ಆಗಿಂದ ಕರಿತಾ ಇದ್ದಿ. ಒಂದ್ಸರಿಯೂ ತಿರುಗಿ ನೋಡಲು ಆಯಿಜಿಲ್ಲ್ಯ ನಿಂಗೆ…
ರಶ್ಮಿ, ಏದುಸಿರು ಬಿಡುತ್ತಾ ಗೊಣಗಿದಳು.
‘ಈ ಬಡಪಾಯಿ ಜೀವಕ್ಕೆ ಬದುಕೇ ಭಾರವಾಗಿದೆ. ಇದಕ್ಕೊಂದು ಮಣಭಾರದ ಹುಡುಗಿ ಬೇಕಾ? ಅಪ್ಪ ಹೆಂಡತಿ ಕಟ್ಟಿಕೊಂಡು, ಮಕ್ಕಳನ್ನು ಮಾಡಿ ಸಾಕುತ್ತಿರುವ ಸೌಭಾಗ್ಯವೇ ಸಾಕು’ ಹಾಗಂತ ಅನ್ನಿಸಿದರೂ, ಯಾಕೋ ಅವಳ ಹತ್ತಿರ ಅದನ್ನು ಹೇಳಲು ಮನಸ್ಸಾಗಲಿಲ್ಲ. ಏನೂ ಉತ್ತರ ನೀಡದೇ ಸುಮ್ಮನೆ ನನ್ನ ನಡುಗೆ ಮುಂದುವರೆಸಲು ಹೆಜ್ಜೆ ಮುಂದಿಟ್ಟೆ.
ಯಾಕೆ ಕೋಪಾನಾ? ಅಲ್ದೋ ಮಳೆಯಲ್ಲಿ ತೊಯ್ದುಕೊಂಡು ಹೋಗ್ತಾ ಇದ್ಯೆಲ್ಲಾ? ನಾಳೆ ಥಂಡಿ ಜ್ವರ ಬಂದು ಮಲಗಿದರೆ? ಬಾ ಮನೆವರಿಗೆ ಬಿಟ್ಟಿಕ್ಕೆ ಹೋಗ್ತಿ.
ಊಹುಂ, ಉತ್ತರಿಸುವ ತವಕವಿರಲಿಲ್ಲ. ಆದರೂ ಅವಳು ಹಠ ಬಿಡಲಿಲ್ಲ. ಮಳೆಯೂ ನಿಲ್ಲಲಿಲ್ಲ….
ಹಾಗೆ ಗೆಳತಿಯಾದವಳು ರಶ್ಮಿ. ಆವತ್ತು ಅವಳು ನನ್ನ ಉದ್ಧಟತನವನ್ನು ನೋಡಿ ಬಿಟ್ಟು ಹೋಗಿದ್ದರೆ…
ಗೊತ್ತಿಲ್ಲ, ನಾನಿಂದೇನಾಗಿರುತ್ತಿದ್ದೆ ಎಂದು ಖಂಡಿತವಾಗಿಯೂ ನನಗೆ ಗೊತ್ತಿಲ್ಲ.
***
ಮಲೆನಾಡು ಅಂದ್ರೆ ಆವತ್ತು ಹಾಗಿತ್ತು. ಊರಲ್ಲಿ ಹುಡುಗರ ಹಿಂಡು ಹಿಂಡಿತ್ತು. ಲಗೋರಿ, ಕಣ್ಣಮುಚ್ಚಾಲೆ ಆಟಕ್ಕೆಂದು ದೊಡ್ಡ ತಂಡವೇ ಇತ್ತು. ಆ ಎಲ್ಲಾ ಆಟಗಳು ನನ್ನ ಬದುಕಿನಲ್ಲೆ ಹುದುಗಿ ಹೋಗಿತ್ತಾದ್ದರಿಂದ ನಾನು ಯಾವ ಆಟವನ್ನು ಪ್ರತ್ಯೇಕವಾಗಿ ಆಡಲು ಹೋಗುತ್ತಿರಲಿಲ್ಲ. ಬಾಲ್ಯದಲ್ಲಿ ಎಲ್ಲರೊಟ್ಟಿಗೆ ಸೇರಿ ನಾನು ಆಟವಾಡುತ್ತಿದ್ದೆ. ಆದರೆ ತಿಳಿವಳಿಕೆ ಬಂದ ಮೇಲೆ ನನಗ್ಯಾಕೋ ಆಟಕ್ಕೆ ಹೋಗಲು ಮನಸ್ಸಾಗುತ್ತಿರಲಿಲ್ಲ.
‘ನೀನು ತೊಟ್ಟಿರುವ ಅಂಗಿ ನನ್ನದಾಗಿತು’ ಹಾಗಂತ ಯಾರಾದರೂ ಗಟ್ಟಿಯಾಗಿ ಹೇಳಿದರೆ ಅನ್ನೋ ಭಯ, ಯಾರೋ ತೊಟ್ಟು ಬಿಟ್ಟ ಅಂಗಿಯನ್ನು ಧರಿಸುವಷ್ಟು ದರಿದ್ರತೆ ನಮ್ಮ ಮನೆಯಲ್ಲಿದೆಯಲ್ಲಾ ಅನ್ನೋ ನೋವು…
ರಶ್ಮಿಗೆ ಅದ್ಯಾಕೆ ನನ್ನ ಮೇಲೆ ಕನಿಕರ ಉಕ್ಕಿ ಬಂತೋ ಗೊತ್ತಿಲ್ಲ. ಅದೆಲ್ಲಾ ಬಹುಶಃ ವಿದಿ ಲೀಲೆ ಇರಬೇಕು! ಆವತ್ತು ಅವಳು ನನ್ನ ನಿರುತ್ತರವನ್ನು ಲಕ್ಷಿಸದೆ ಛತ್ರಿಯಲ್ಲಿ ಮನೆವರೆಗೂ ಬಿಟ್ಟಳು. ಮನೆ ಬಾಗಿಲವರೆಗೆ ಬಂದ ಅವಳನ್ನು ಒಳಗೆ ಬಾ ಎಂದು ಕರೆಯಲು ಮನಸ್ಸಾಗಲಿಲ್ಲ. ಯಾಕೆಂದರೆ ಕರೆದರೂ ಅವಳಿಗೆ ಒಂದು ಲೋಟ ಕಾಫಿ ಕೊಡಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಅಂದು ನಮ್ಮ ಮನೆಯಿತ್ತು. ನಾನಂದು ರಶ್ಮಿ ಜತೆ ವರ್ತಿಸಿದ ವರ್ತನೆ ಕುರಿತಾಗಿ ನನಗೆ ಆವತ್ತು ಬೇಸರವಾಗಿತ್ತು. ಇವತ್ತಿಗೂ ಬೇಸರವಿದೆ!
ಮರುದಿನ ಬೆಳಗಾಗುವ ವೇಳೆಗೆ ನನ್ನ ವರ್ತನೆ ಬಗೆಗೆ ತೀರಾ ಬೇಸರವಾಯಿತು. ರಶ್ಮಿ ಹತ್ತಿರ ನನ್ನ ವರ್ತನೆಯ ಕುರಿತಾಗಿ ಕ್ಷಮೆ ಕೇಳಬೇಕು ಅನ್ನಿಸಿತು. ಅವಳ ಮನೆ ಹಾದಿ ಹಿದಿದು ಹೊರಟೆ. ಜುಗ್ಗ ತಿಮ್ಮಣ್ಣ ಭಟ್ಟ ಅವಳಪ್ಪ. ಒಂದಲ್ಲಾ ಒಂದು ಕೊಂಕು ಮಾತನಾಡುವ ಅವನ ಮನೆಗೆ ಹೋಗೋದು ಅಂದ್ರೆ ನನಗೆ ಮೊದಲಿನಿಂದಲೂ ಬೇಸರದ ಸಂಗತಿ. ಆದ್ರೂ ಹೋಗುವುದು ಅನಿವಾರ್ಯವಾಗಿತ್ತು. ನಾನು ಹೋಗುತ್ತಿರುವುದು ರಶ್ಮಿ ಮನೆಗೆ ಹೊರತು, ತಿಮ್ಮಣ್ಣ ಭಟ್ಟನ ಮನೆಗಲ್ಲ ಅಂದುಕೊಂಡು ಹೊರಟೆ….
***
ಎಸಿ ರೂಮಿನಲ್ಲಿ ಕುಳಿತು ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಿರುವವನಿಗೆ ಹೆಂಡತಿ ಕಾಫಿ ತಂದಿಟ್ಟದ್ದು ಗೊತ್ತಾಗಲಿಲ್ಲ. ಮನೆಗೆ ಬಂದ ರಶ್ಮಿಯನ್ನು ಕಾಫಿ ಕೊಡದೆ, ಒಳಕ್ಕೂ ಕರೆಯದೆ ಕಳುಹಿಸಿದ ಆ ಕ್ಷಣಗಳೇ ನನೆಪಾಗುತ್ತಿತ್ತು.
ಅವಳ ಮನೆಯತ್ತ ಹೆಜ್ಜೆ ಹಾಕತೊಡಗಿದೆ…
ಅವಳು ಈಗ ನನ್ನನ್ನು ಹೇಗೆ ರಿಸೀವ್ ಮಾಡಿಕೊಳ್ಳಬಹುದು, ನನ್ನ ಮೇಲೆ ಅವಳಿಗೆ ಕೋಪ ಬಂದಿರಬಹುದಾ…
ಇತ್ಯಾದಿಯಾಗಿ ಅವಳ ಕುರಿತಾಗಿ ಆಲೋಚಿಸುತ್ತಲೇ ಹೆಜ್ಜೆ ಹಾಕುತ್ತಿದ್ದೆ… ಗಕ್ಕನೆ ತಲೆಯೆತ್ತಿ ನೋಡಿದಾಗ ನನ್ನ ನಡುಗೆ ತಿಮ್ಮಣ್ಣ ಭಟ್ಟರ ಮನೆ ದಾಟಿ ಮೂರು ಮಾರು ದೂರ ಸಾಗಿತ್ತು. ನನ್ನನ್ನು ನಾನೇ ಶಪಿಸಿಕೊಳ್ಳುತ್ತಾ ಮತ್ತೆ ಹಿಂದಕ್ಕೆ ಬಂದೆ. ಅವಳ ಮನೆಯಂಗಳಕ್ಕೆ ಕಾಲಿಡುವಾಗಲೇ ಭಟ್ಟರ ದರ್ಶನವಾಯಿತು.
ಹೇಗಿದ್ದರೂ ಇನ್ನೊಬ್ಬರಿಂದ ಹೇಳಿಸಿಕೊಳ್ಳುವುದು ನನ್ನ ಜನ್ಮ ಸಿದ್ದ ಹಕ್ಕು, ಹಾಗಂದುಕೊಂಡೇ ಭಟ್ಟರ ಮನೆಯಂಗಳದೊಳಕ್ಕೆ ಕಾಲಿಟ್ಟೆ. ಪಾಪ ಭಟ್ಟರು ನನ್ನ ಮನಸ್ಸಿನ ಆಲೋಚನೆಗೆ ನಿಜಕ್ಕೂ ಮೋಸ ಮಾಡಲಿಲ್ಲ.
“ಮಳೆಗಾಲ ಶುರುವಾಯಿತು. ನಮ್ಮ ಮನೇಲಿ ಯಾವುದು ಹಳೇ ಬಟ್ಟೆ ಇಲ್ಲೆ ಮಾಣಿ. ನೀ ಬತ್ತೆ ಅಂತಾ ಮುಂಚೇನೆ ಹೇಳಿದ್ರೆ ಹಾವಗೊಲ್ಲ ಯೆಂಕನಿಗೆ ನಾನು ಬಟ್ಟೆ ಕೋಡ್ತಾ ಇರ್ಲೆ” ಭಟ್ಟರ ಮಾತು ಮುಂದುವರೆಯುತ್ತಿತ್ತೇನೋ ಅಷ್ಟೊತ್ತಿಗೆ ರಶ್ಮಿ ಎಂಟ್ರಿ ಆಯಿತು.
‘ಯಾವಾಗ ಬಂದ್ಯೋ, ಆಸ್ರಿಗೆ ಎಂಥಾ ಕುಡಿತೇ…’ಮಲೆನಾಡಿನ ಸಂಪ್ರದಾಯದಂತೆ ಮಾತು ಶುರುವಿಟ್ಟವಳು. ಭಟ್ಟರ ಎದುರಿಗೆ ಬಂದ ವಿಚಾರ ತಿಳಿಸಲು ಸಾಧ್ಯವಾಗಲಿಲ್ಲ. ತಿಳಿಸುವುದು ಸೌಜನ್ಯ ಅಂತಾನೂ ಅನ್ನಿಸಲಿಲ್ಲ. ಬಂದ ಸಂಕಟಕ್ಕೆ ಒಂದು ಕುಂಟು ನೆವ ಹೇಳಲೇಬೇಕಾದ ಅನಿವಾರ್ಯತೆ ಎದುರಾಯಿತು.
ಹೌದು, ಬಟ್ಟೆ ಇತ್ತಾ ಎಂದು ಕೇಳಲೇ ಬಂದಿದ್ದೆ. ತಂಗಿಗೆ ಶಾಲೆ ಶುರುವಾಯಿತು. ನಿನ್ನದು ಹಳೆ ಬಟ್ಟೆ ಯಾವುದಾದರೂ ಇತ್ತೇನೋ ಅಂತಾ ಬಂದೆ. ಸಿಗಬೇಕಾದ ಆತಿಥ್ಯ ಭಟ್ಟರಿಂದ ದಕ್ಕಿತು. ಆಸ್ರಿಗೆ ಎಂಥದು ಬೇಡ….ಅಂದವನೇ ನನ್ನ ಪಾಡಿಗೆ ನಾನು ಎದ್ದು ಹೊರಟೆ. ಕಣ್ಣಲ್ಲಿ ನೀರು ತುಂಬಿತ್ತು. ಅದು ಅವಳಿಗೂ ಗೊತ್ತಾಗಿತ್ತು. ಏನೂ ಮಾತಾಡದೇ ಅವಳು ಒಳಕ್ಕೆ ನಡೆದಳು.
ಘಟನೆಯನ್ನು ನೆನಪಿಸಿಕೊಳ್ಳುತ್ತಾ ನನ್ನನ್ನು ನಾನೇ ದೂಷಿಸಿಕೊಳ್ಳುತ್ತಾ ಸುಮಾರು ನಮ್ಮೂರಿನ ಅರಳಿಕಟ್ಟೆವರೆಗೆ ಬಂದಿದ್ದೆ. ಅಷ್ಟೊತ್ತಿಗೆ ಅವಳು ನನ್ನನ್ನು ಹಿಂಬಾಲಿಸಿಕೊಂಡು ಬಂದಳು. ಅವಳು ಯಾಕೆ ಅಷ್ಟು ರಿಸ್ಕು ತೆಗೆದುಕೊಂಡಳೋ ಗೊತ್ತಿಲ್ಲ. ಯಾಕೆಂದರೆ ತಪ್ಪು ನನ್ನದೇ ಇತ್ತು. ಅವಳಪ್ಪ ಆಡಿದ ಮಾತಿನಲ್ಲೇನೂ ತಪ್ಪಿರಲಿಲ್ಲ.
ಆದರೂ, ಭಟ್ಟರ ವರ್ತನೆ ಅವಳಿಗೆ ಬೇಸರ ತಂದಿರಬೇಕು, ಹಾಗಾಗಿಯೇ ಬಂದಿರಬೇಕು ಅಂದುಕೊಂಡೆ!
ಆದದ್ದೆಲ್ಲಾ ಒಳಿತಿಗೆ ಅನ್ನೋ ಹಿಂದಿನವರ ಮಾತು ಅಕ್ಷರಶಃ ನಿಜ. ತಿಮ್ಮಣ ಭಟ್ಟರು ಆವತ್ತು ಕುಚೋದ್ಯ ನುಡಿಯದಿದ್ದರೆ, ರಶ್ಮಿ ನನ್ನ ಪಾಲಿಗೆ ಖಂಡಿತಾ ಬೆಳಕಾಗುತ್ತಿರಲಿಲ್ಲ ! ನಾನಂದುಕೊಂಡಂತೆ ಅವಳಿಗೆ ಅವಳಪ್ಪನ ವರ್ತನೆ ಬೇಸರ ತರಿಸಿತ್ತು. ಪಾಪ ಹೆಣ್ಣುಮಗಳು ಕಣ್ಣೀರಿಟ್ಟಳು. ಯಾಕೋ ಅವಳ ಗುಣ ನಂಗೆ ತುಂಬಾ ಇಷ್ಟವಾಯಿತು. ನನ್ನ ನೋವು, ನಲಿವುಗಳನ್ನು ಅವಳ ಬಳಿ ಹೇಳಿಕೊಳ್ಳಬೇಕು ಅನ್ನಿಸಿತು. ಆದರೂ ಅದು ಸರಿಯಾದ ಜಾಗವಾಗಿರಲಿಲ್ಲ. ಮಾತನಾಡಲಿಕ್ಕಿದೆ ಬರುತ್ತೀಯಾ?ಹಾಗಂತ ಹೆಣ್ಣು ಮಗಳೊಬ್ಬಳನ್ನು ಕರೆಯುವುದು ಸರಿಯಲ್ಲ. ಅಷ್ಟಕ್ಕೂ ಕರೆದು ದುಃಖ ತೋಡಿಕೊಳ್ಳಲು ಅವಳೇನೂ ಬಂದುವಲ್ಲ, ಬಳಗವಲ್ಲ. ಹೈಸ್ಕೂಲ್‌ವರೆಗೆ ನನ್ನ ಜೂನಿಯರ್ ಆಗಿದ್ದವಳು, ನನ್ನ ಕುರಿತು ಒಂಚೂರು ತಿಳಿದುಕೊಂಡಿದ್ದವಳು ಅಷ್ಟೆ . ಹಾಗೆ ಆಲೋಚಿಸುತ್ತಾ ನನ್ನ ವರ್ತನೆ ಕುರಿತು ಕ್ಷಮೆ ಕೇಳಿದೆ. ನಾನೇಕೆ ಮನೆಗೆ ಕರೆಯಲಿಲ್ಲ ಎಂಬುದನ್ನೂ ಸಂಕೋಚವಿಲ್ಲದೇ ಹೇಳಿದೆ. ಸರಿ ನೀನ್ನಿನ್ನು ಹೊರಡು ಇಂಥ ಜಾಗದಲ್ಲಿ ನಾನು, ನೀನು ಒಟ್ಟಿಗೆ ಕಂಡರೆ ಜನರ ಬಾಯಲ್ಲಿ ಆಡಿಕೊಳ್ಳುವ ವಸ್ತುವಾಗುತ್ತೇವೆ ಎಂದೆ. ಅರ್ಥವಾಯಿತು ಅವಳಿಗೆ. ನಾಳೆ ಸಂಜೆ ೪ ಗಂಟೆ ಹೊತ್ತಿಗೆ ದೇವಸ್ಥಾನದ ಹತ್ತಿರ ಬಾ ಸುಮ್ಮನೆ ಹರಟೋಣ ಅಂದಳು. ತುಂಬಾ ಖುಷಿಯಾಯಿತು. ಅದೇ ಖುಷಿಯಲ್ಲೆ ಮನೆ ತಲುಪಿದೆ.
***
ಹೆಚ್ಚು ಏಕಾಂಗಿತನ ಬಯಸುತ್ತಿದ್ದವನು ನಾನು. ನನ್ನ ಕಷ್ಟಗಳನ್ನು ನಾನೇ ನುಂಗಿಕೊಳ್ಳಬೇಕು ಹೊರತು, ಬೇರೆಯವರಲ್ಲಿ ತೋಡಿಕೊಳ್ಳಬಾರದು ಎಂಬ ನಿಲುವು ನನ್ನದಾಗಿತ್ತು. ಬದುಕಿನ ಒಂದು ಹಂತದವರೆಗೂ ನನಗೆ ರಶ್ಮಿಯಂತಹ ಆಪ್ತರು ಇಲ್ಲದೇ ಹೋಗಿದ್ದು ನನ್ನ ಆ ನಿಲುವಿಗೆ ಕಾರಣವಾಗಿರಬಹುದು. ಯಾಕೋ ಅವಳ ಹತ್ತಿರ ನನ್ನ ಸಂಕಷ್ಟಗಳನ್ನು ಹೇಳಿಕೊಳ್ಳಬೇಕು ಅನ್ನಿಸಿತ್ತು. ಹಾಗಾಗಿ ಮಾರನೇ ದಿನ ಸಂಜೆ ನಾಲ್ಕು ಗಂಟೆಗೆ ಖುದ್ದಾಗಿ ನಮ್ಮೂರ ಹನುಮಂತನ ಗುಡಿಯ ಸಮೀಪ ಹೋದೆ.
ಊರ ತುದಿಯ ಬೊಮ್ಮನ ಗುಡ್ಡದಲ್ಲಿ ಹನುಮಂತನ ಗುಡಿಯಿದೆ. ಮಧ್ಯಾಹ್ನ ೧೨ ಗಂಟೆ ನಂತರ ಕಪಿಗಳನ್ನು ಬಿಟ್ಟರೆ ಮತ್ತ್ಯಾರೂ ಹನುಮಂತನನ್ನು ಮಾತಾಡಿಸಲು ಹೋಗುವುದಿಲ್ಲ! ನಮ್ಮೂರಿನ ಜನರಿಗೆ ದೇವರ ಮೇಲೆ ಭಕ್ತಿ ಇಲ್ಲವೆಂದೇನಲ್ಲ. ಆದರೂ ಸ್ವಂತ ಊರಿನ ದೇವರ ಮೇಲೆ ಒಂತರಹ ಅಸಡ್ಡೆ. ಪರ ಊರಿನ ಚೌಡಮ್ಮ, ಮಾರಮ್ಮನ ದರ್ಶನಕ್ಕೆ ಶುಕ್ರವಾರ, ಮಂಗಳವಾರ ತಪ್ಪದೇ ಹೋಗುತ್ತಾರೆ. ಶೆಟ್ಟಿಸರದ ಪೂಜಾರಪ್ಪನಿಗೆ ಶನಿ ದೇವರು ಮೈಮೇಲೆ ಬರುತ್ತೆ ಅಂತಾ ಶನಿವಾರ ಓಡುತ್ತಾರೆ. ಆದರೂ ಆಂಜನೇಯನಿಗೆ ಮಾತ್ರ ಮಲತಾಯಿ ಧೋರಣೆ! ಹಾಗಾಗಿಯೇ ಇರಬೇಕು ಅವಳು ಆ ಸ್ಥಳ ಸೂಚಿಸಿದ್ದು. ಯಾರಾದರೂ ಕಂಡರೆ ದೇವಸ್ಥಾನಕ್ಕೆ ಬಂದಿದ್ದೆ ಅಂತಲೂ ಹೇಳಬಹುದಲ್ಲ!
ನಾನು ದೇವಸ್ಥಾನದ ಬಳಿ ತಲುಪುವಾಗ ಗಂಟೆ ನಾಲ್ಕುಕಾಲು ಕಳೆದಿತ್ತು. ಅವಳು ಆಂಜನೇಯ ಗುಡಿ ಪಕ್ಕದಲ್ಲಿರುವ ಅರಳಿ ಮರದ ಹತ್ತಿರ ಕಾಯುತ್ತಾ ಕುಳಿತಿದ್ದಳು. ಸುಮ್ಮನೆ ಕಿರು ನಗು ಬೀರುತ್ತಾ ಎಂಟ್ರಿ ಕೊಟ್ಟೆ. ಸ್ವಲ್ಪ ಹೊತ್ತು ಮೌನವಾಗಿ ಕುಳಿತೆ. ಏನು ಮಾತಾಡಬೇಕೆಂದು ತೋಚದೆ! ಕೊನೆಗೆ ಅವಳೇ ಮಾತಿಗೆ ಶುರುವಿಟ್ಟಳು. ಮಾತು ಆರಂಭವಾಗಿದ್ದು ಕಾಡು ಹರಟೆ ಅಂತಲೇ. ನಂತರ ಸಾಗಿದ್ದು ಬದುಕಿನತ್ತ…ಸುಮಾರು ಎರಡೂವರೆ ತಾಸುಗಳ ಕಾಲದ ಸುದೀರ್ಘ ಮಾತುಕತೆ…
ಅಲ್ಲಿಂದ ಮುಂದೆ ರಶ್ಮಿ ನನ್ನ ಬದುಕಿನ ಅವಿಭಾಜ್ಯ ಅಂಗವಾದಳು. ಪಿಯುಸಿಗೆ ನಿಲ್ಲಿಸಿದ್ದ ನನ್ನ ಓದನ್ನು ಮುಂದುವರಿಸುವಂತೆ ಪ್ರೇರೇಪಿಸಿದಳು. ಎಷ್ಟೋ ಸಲ ಫೀಜಿಗೆ, ಪುಸ್ತಕಕ್ಕೆ ಅಂತಾ ಅವಳೇ ದುಡ್ಡು ಕೊಟ್ಟಿದ್ದೂ ಇದೆ. ನನ್ನನ್ನು ಐ.ಎ.ಎಸ್ ಆಫೀಸರ್ ಮಾಡಬೇಕೆಂಬ ಕನಸು ಕಂಡಳು. ಆ ನಿಟ್ಟಿನಲ್ಲಿ ಅಧ್ಯಯನ ಮಾಡಲು ಬೇಕಾದ ವ್ಯವಸ್ಥೆಗಳನ್ನೆಲ್ಲಾ ಒದಗಿಸಿ ಕೊಟ್ಟಳು. ಡಿಗ್ರಿ ಓದಲು ಶುರುವಿಟ್ಟ ನಂತರ ನಾನು ಸಣ್ಣ ಪುಟ್ಟ ಉದ್ಯೋಗ ಮಾಡಿ ಪುಡಿಗಾಸು ಸಂಪಾದನೆಗೆ ಶುರುವಿಟ್ಟೆ. ಆದರೂ ನನ್ನ ಬಿ.ಎ ಪದವಿಯ ಮುಕ್ಕಾಲು ಭಾಗ ಹೊಣೆ ಹೊತ್ತವಳು ಅವಳೇ. ಯಾರ್ಯಾರೋ ಸ್ನೇಹಿತೆಯರದ್ದೆಲ್ಲಾ ಪುಸ್ತಕ ತರಿಸಿಕೊಟ್ಟು, ಅದು ಓದು, ಇದು ಓದು ಅಂತಾ ಒಂದಿಷ್ಟು ಪುಸ್ತಕಗಳನ್ನು ಕೈಗಿಟ್ಟು…ನಿಜಕ್ಕೂ ಯಾವೊದೋ ಜನ್ಮದಲ್ಲಿ ನನ್ನ ಹತ್ತಿರದ ಬಂಧುವಾಗಿದ್ದಿರಬೇಕು. ನಿತ್ಯ ಸಿಗುತ್ತಿದ್ದಳು. ಗಂಟೆಗಟ್ಟಲೆ ಹರಟುತ್ತಿದ್ದೆವು.
ಬಿ.ಎ ಪದವಿ ಮುಗಿಸಿ ಐ.ಎ.ಎಸ್ ಅಧ್ಯಯನಕ್ಕೆ ಹೈದ್ರಾಬಾದ್‌ಗೆ ಹೋಗಬೇಕೆಂದು ತೀರ್ಮಾನವಾಯಿತು. ಆದರೂ ನನಗೆ ರಶ್ಮಿ ಬಿಟ್ಟು ಬದುಕುವುದು ಅಸಾಧ್ಯ ಅನ್ನಿಸತೊಡಗಿತ್ತು. ಆದಾಗಲೇ ನಾನು ಅವಳನ್ನು ಪ್ರೀತಿಸತೊಡಗಿದ್ದೆ. ಈ ವಿಚಾರವನ್ನು ಅವಳಿಗೆ ತಿಳಿಸಿದೆ.
“ಪ್ರೀತಿ ಪ್ರೇಮವೆಲ್ಲಾ ಬದುಕಿನಲ್ಲಿ ನೆಲೆ ಕಂಡ ನಂತರ. ನೀನು ಮೊದಲು ಬದುಕನ್ನು ಪ್ರೀತಿಸಬೇಕು. ಬದುಕನ್ನು ಪ್ರೀತಿಸುವ ಸ್ಥಿತಿ ನಿನ್ನ ಬದುಕಿನಲ್ಲಿ ಬರಬೇಕಾದರೆ ನಿನ್ನ ಕಾಲ ಮೇಲೆ ನೀನು ನಿಂತುಕೊಳ್ಳಬೇಕು. ನಿನ್ನನ್ನು ಆಡಿಕೊಂಡವರೆಲ್ಲಾ ಗೌರವಿಸುವ ಸ್ಥಿತಿಗೆ ತಲುಪಬೇಕು. ನಾನು ನಿನ್ನ ಜತೆ ಸದಾ ಇರುತ್ತೇನೆ. ಆದರೆ ಸಮಯ ನಿನ್ನ ಜತೆ ಇರದು. ಹಾಗಾಗಿ ಮೊದಲು ಐ.ಎ.ಎಸ್ ನಂತರ ಪ್ರೀತಿ, ಪ್ರೇಮ…”ಅಂತಾ ನಯವಾಗಿ ನನ್ನ ಮನಸ್ಸನ್ನು ಬದಲಿಸಿ ಹೈದ್ರಾಬಾದ್‌ಗೆ ಕಳುಹಿಸಿದಳು.
***
ಹೈದ್ರಾಬಾದ್ ಸೇರಿದ ನಂತರ ನನ್ನದು ಒಂತರಹ ವನವಾಸದ ಬದುಕು. ಓದು,ಓದು,ಓದು… ಇದನ್ನು ಬಿಟ್ಟರೆ ಸಮಯ ಸಿಕ್ಕಾಗ ಒಂದಿಷ್ಟು ಪುಡಿಗಾಸು ಸಂಪಾದನೆ. ಪತ್ರದ ಮೂಲಕ ನನ್ನ ಮತ್ತು ರಶ್ಮಿಯ ಒಡನಾಟ. ಅಪರೂಪಕ್ಕೆ ಫೋನ್. ಆದರೂ ನನ್ನ ಓದು, ಯೋಗಕ್ಷೇಮದ ಕುರಿತಾಗಿ ಅವಳ ಕಾಳಜಿ ಒಂಚೂರು ಕಮ್ಮಿಯಾಗಿರಲಿಲ್ಲ. ಸದಾ ನನಗೆ ಚೈತನ್ಯ ತುಂಬುವುದನ್ನು ಮರೆಯುತ್ತಿರಲಿಲ್ಲ. ಹೀಗೆ ಸಾಗಿತ್ತು ಎರಡು ವರ್ಷ…
ಐ.ಎ.ಎಸ್ ಪಾಸಾಯಿತು. ಪಾಸಾಗುತ್ತಲೇ ಕರ್ನಾಟಕದಲ್ಲೇ ನೌಕರಿಯೂ ಸಿಕ್ಕಿತು. ಅದೇ ಸಂತಸದಲ್ಲಿ ಊರಿಗೆ ಮರಳಿದೆ. ರಶ್ಮಿ ಜತೆಗೆ ಮಾತಾಡಲು ಮನ ಹಪಹಪಿಸುತ್ತಿತ್ತು. ಯಾಕೆಂದರೆ ನನ್ನ ಸಾಧನೆಯ ಕುರಿತು ನನಗಿಂತ ಹೆಚ್ಚು ಸಂತಸ ಪಡುವವಳು ಅವಳು. ಐ.ಎ.ಎಸ್ ಪಾಸಾಗಿದ್ದನ್ನು, ಉದ್ಯೋಗ ಸಿಕ್ಕಿದ್ದನ್ನು ಫೋನಿನಲ್ಲೇ ತಿಳಿಸಿದ್ದೆ. ತುಂಬಾ ಖುಷಿ ಪಟ್ಟಳು. ಅವಳಿಗೊಂದು ಜತೆ ಬಟ್ಟೆ ತರುವುದಾಗಿ ಭರವಸೆ ಕೊಟ್ಟಿದ್ದೆ. ಹನುಮಂತ ಗುಡಿಯ ಅರಳಿಕಟ್ಟೆ ಹತ್ತಿರ ನಾನು ಬರುವ ದಿನ, ಸಮಯ ಎಲ್ಲವನ್ನೂ ತಿಳಿಸಿದ್ದೆ.
ಮನೆಗೆ ಬಂದವನೇ ಓಡಿದ್ದು ಅರಳಿಕಟ್ಟೆಗೆ. ರಶ್ಮಿ ಬಂದಿದ್ದಳು. ಯಾಕೋ ಅವಳ ಮೊಗದಲ್ಲಿ ಗೆಲುವಿರಲಿಲ್ಲ. ಚೆಲ್ಲು ಚೆಲ್ಲು ನಗೆಯಿರಲಿಲ್ಲ. ಸಂಪ್ರದಾಯದಂತೆ ಮಾತಾಡಿಸಿದಳು. ಯಾಕೆ, ನಾನು ನಿನಗಿಂತ ದೊಡ್ಡ ವ್ಯಕ್ತಿ ಆಗುತ್ತೇನೆ ಅಂತಾ ಹೊಟ್ಟೆಕಿಚ್ಚಾ ಎಂದು ಅಣಗಿಸಿದೆ. ಅದಕ್ಕೂ ಅವಳ ಉತ್ತರವಾಗಲಿ, ಕುಚೋದ್ಯವಾಗಲೀ ಇರಲಿಲ್ಲ. ನಾನು ಬಟ್ಟೆ ಗಿಫ್ಟ್ ಕೊಡುತ್ತಿದ್ದ ಹಾಗೆ ಮದುವೆಗೆ ಅಡ್ವಾನ್ಸ್ ಆಗಿ ಉಡುಗೊರೆ ಕೊಡುತ್ತಿರುವುದಕ್ಕೆ ಧನ್ಯವಾದಗಳು ಅಂತಾ ಕರೆಯೋಲೆ ಕೊಟ್ಟು ಮಾತಿಗೂ ನಿಲ್ಲದೇ ಹೊರಟುಹೋದಳು.
ಊಹುಂ, ಖಂಡಿತಾ ನಾನು ಆ ಶಾಕ್ ಅನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೂ ಸ್ವೀಕರಿಸಲೇಬೇಕಿತ್ತು. ಕರೆಯೋಲೆ ಒಳಗೆ ಒಂದು ಪತ್ರ ಇಟ್ಟಿದ್ದಳು. ಅವಳು ಮೊದಲೇ ಮಾವನ ಮಗನ ಪ್ರೀತಿ ಬಲೆಗೆ ಬಿದ್ದಿದ್ದಳಂತೆ. ಆದರೆ ನನ್ನ ಸಾಧನೆಗೆ ಮುಳುವಾಗಬಾರದು ಅಂತಾ ಅದನ್ನು ಮುಚ್ಚಿಟ್ಟು ತನ್ನ ಮದುವೆಯನ್ನು ನನ್ನ ಐ.ಎ.ಎಸ್ ಮುಗಿಯುವವರೆಗೆ ಮುಂದೂಡಿದ್ದಳಂತೆ. ಹಾಗಂತ ಆ ಪತ್ರದಲ್ಲಿತ್ತು…
***
ಮಗ ಬಂದು ಅಪ್ಪ ಇವತ್ತು ಫಿಲ್ಮಂಗೆ ಹೋಗಬೇಕು ಅಂತಾ ಎಬ್ಬಿಸಿದ ಎಚ್ಚರವಾಯಿತು…
ಅವಳ ಮದುವೆಯ ನಂತರವೂ ನಾನು ಅವಳನ್ನು ಸಹೋದರಿ ಅಂತಾ ಸ್ವೀಕರಿಸಬಹುದಿತ್ತು. ಅವಳ ಋಣ ತೀರಿಸುವ ಪ್ರಯತ್ನ ಮಾಡಬಹುದಿತ್ತು. ಆದರೆ ಅದಕ್ಕೆ ಮನಸ್ಸು ಒಪ್ಪಲಿಲ್ಲ. ಪ್ರೇಮ ಭಗ್ನದ ಸಿಟ್ಟಿನಿಂದ ಅವಳ ಮದುವೆಗೂ ಹೋಗಲಿಲ್ಲ…
ಅಪ್ಪ ಬೇಗ ರೆಡಿಯಾಗು ಫಿಲಂಗೆ ಸಮಯವಾಯಿತು… ಮಗ ಶ್ರವಣ ಹಠ ಹಿಡಿದ. ಎ.ಸಿ ರೂಮಿನಿಂದ ಬಲವಂತವಾಗಿ ಕದಲಬೇಕಾಯಿತು. ನನ್ನ ಹಳೆ ನೆನಪಿಗೊಂದು ಬ್ರೇಕ್ ಹಾಕಿ ಫಿಲಂಗೆ ಹೊರಟ್ಟಿದ್ದೇನೆ…
(ಸೂಚನೆ:- ೭-೮ ತಿಂಗಳ ಹಿಂದೆ ಬರೆದ ಕಥೆಯಿದು. ಇದನ್ನೊಮ್ಮೆ ಬ್ಲಾಗ್‌ಗೆ ಹಾಕಿದ್ದೆ ಕೂಡಾ! ಮೊನ್ನೆ ಕುಳಿತವನಿಗೆ ಈ ಕಥೆ ತುಂಬಾ ಎಡಿಟ್ ಮಾಡುವ ಮೂಡು ಬಂತು! ಎಡಿಟ್ ಆದ ಕಥೆಯನ್ನು ಮತ್ತೊಮ್ಮೆ ಇಲ್ಲಿಟ್ಟಿದ್ದೇನೆ… )
ಚೌತಿ ಹಬ್ಬ ಮತ್ತು ಪ್ಯಾಸೆಂಜರ್ ರೈಲಿನ ಪ್ರಯಾಣ!
Posted in ಕಥೆ-ವ್ಯಥೆ! on ಸೆಪ್ಟೆಂಬರ್ 8, 2008| Leave a Comment »
ಮಲೆನಾಡಿನ ಮಟ್ಟಿಗೆ ಚೌತಿ, ದೀಪಾವಳಿ ಎರಡೂ ದೊಡ್ಡ ಹಬ್ಬ. ಗಣಪತಿ ಮೂರ್ತಿ ಕೂರಿಸುವ ಮನೆಗಳಿಗೆ ಚೌತಿ ವಿಶೇಷ ಹಬ್ಬ. ಹಾಗಾಗಿ ಹಬ್ಬಕ್ಕೆ ಊರಿಗೆ ಬರಲೇ ಬೇಕು ಅಂತಾ ಅಮ್ಮನ ಕಟ್ಟಾಜ್ಞೆ! ಈ ಹಾಳಾದ ಬೆಂಗಳೂರಿನಲ್ಲಿ ಅದೆಷ್ಟು ಜನ ವಾಸವಾಗಿದ್ದಾರೋ ಗೊತ್ತಿಲ್ಲ. ಹಬ್ಬ, ಹರಿದಿನಗಳಲ್ಲಿ ಊರಿಗೆ ಹೊರಟು ನಿಂತರೆ ಬಸ್ಸು, ರೈಲಿನಲ್ಲಿ ಸೀಟಿಲ್ಲ. ಸೀಟು ಬೇಕು ಅಂದ್ರೆ ಹತ್ತು-ಹದಿನೈದು ದಿನಗಳ ಮೊದಲು ಟಿಕೇಟ್ ಕಾಯ್ದಿರಿಸಬೇಕು. ಆಫೀಸ್‌ನಲ್ಲಿ ಬಾಸ್ ಒಪ್ಪಿಸಿ, ರಜಾ ಮಂಜೂರು ಮಾಡಿಸಿಕೊಂಡು ಹೋಗೋದು ಅಂದ್ರೆ… ಹಾಗಾಗಿ ನಾನಂತೂ ಊರಿಗೆ ಹೊರಡುವ ನಿರ್ಧಾರ ತೆಗೆದುಕೊಳ್ಳುವುದೇ ಕೊನೆ ಕ್ಷಣದಲ್ಲಿ. ಆಗೆಲ್ಲ ಪ್ಯಾಸೆಂಜರ್ ರೈಲೇ ಗತಿ. ರೈಲನ್ನು ಎಷ್ಟು ಹಳಿದರೂ, ರೈಲಿನ ಪ್ರಯಾಣದಷ್ಟು ಮಜ ಬಸ್ಸಲ್ಲಿ ಸಿಗಲ್ಲ! ಅಂತಹದೊಂದ್ದು ರೈಲು ಪಯಣದ ಕಥೆ ಹೇಳಹೋರಟ್ಟಿದ್ದೀನಿ ಕೇಳಿ…
ರೀಸರ್ವೇಷನ್ ಸಿಕ್ಕಿಲ್ಲಾ ಮರಾಯಾ, ಲಾಲೂ ಪಾದವೇ ಗತಿ ಅಂತಾ ಗೆಳೆಯ ಮನೋಜನಿಗೆ ಪೋನ್ ಮಾಡಿದೆ. ಹಬ್ಬದ ಹಿಂದಿನ ರೈಲು ಹತ್ತೋದು ಅಂದ್ರೆ ನರಕದ ಬಾಗಿಲವರೆಗೆ ಹೋಗಿ ಬಂದಂತೆ ಸರಿ! ಏ ಪುಣ್ಯಾತ್ಮ ಒಂದು ಕೆಲ್ಸ ಮಾಡು, ಮೆಜೆಸ್ಟಿಕ್‌ಗೆ ಹೋಗಲೇ ಬೇಡ ಕೆಂಗೇರಿಗೆ ಹೋಗಿ ರೈಲು ಹತ್ತು, ಕುಳಿತುಕೊಳ್ಳಲು ಸೀಟಾದ್ರು ಸಿಗತ್ತೆ ಅಂತಾ ಗೆಳೆಯ ಕ್ರಿಮಿನಲ್ ಐಡಿಯಾ ಕೊಟ್ಟ!
ಮೈಸೂರು-ಶಿವಮೊಗ್ಗ ಟ್ರೈನು, ಊರಿಗೆ ಮುಂಚೆ ಬಂದು ಮೇಜೆಸ್ಟಿಕ್‌ನಲ್ಲಿ ನಿಂತಿರತ್ತೆ ಅಂತಾ ಬೈದುಕೊಳ್ಳುತ್ತಾ ಕೆಂಗೇರಿಗೆ ಸುಮಾರು ಎಂಟುವರೆ ಸುಮಾರಿಗೆ ಹೊರಟೆ. ಅಲ್ಲಿ ನೋಡಿದ್ರೆ ನೂರಾರು ಜನ ನಿಂತಿದ್ರು. ಎಲ್ಲಾ ಮೇಜೆಸ್ಟಿಕ್‌ನಲ್ಲಿ ಸೀಟು ಸಿಗಲ್ಲ ಅಂತಾ ಇಲ್ಲಿಗೆ ಬಂದು ನಿಂತವರು! ನಿಜ ಹೇಳಬೇಕು ಅಂದ್ರೆ ನಾನು ಮೂರುನಾಲ್ಕು ಸಲ ರೈಲಲ್ಲಿ ಹೋದ್ರು ಹಿಂದಿನ ಸ್ಟಾಪಿಗೆ ಹೋಗಿ ಸೀಟು ಹಿಡಿದುಕೊಂಡು ಬರೋ ಕ್ರಿಮಿನಲ್ ಐಡಿಯಾ ನಂಗೆ ಈವರೆಗೆ ಹೊಳೆದಿರಲಿಲ್ಲ! ಅಬ್ಬಾ ತಲೆಗಳೇ! ನಾವೆಲ್ಲಾ ವೇಸ್ಟು ಅಂತಾ ನನ್ನನ್ನು ನಾನೇ ಬೈದುಕೊಳ್ಳುತ್ತಾ ನಿಂತೆ. ಅಷ್ಟು ಹೊತ್ತಿಗೆ ತೀರ್ಥಹಳ್ಳಿ ಹೋಗುವವ ಯಾರೋ ಪರಿಚಯವಾದ. ಅವನ ಊರು ತೀರ್ಥಹಳ್ಳಿ ಅಂದಾಕ್ಷಣ ನನ್ನ ಕಿವಿ ನೆಟ್ಟಗಾಯಿತು. ಯಾಕಂದ್ರೆ ಅದು ಜೋಯ್ಸರ ಮಗಳ ಊರು! ಹೀಗೆ ಹರಟುತ್ತಾ ರೈಲಿಗೆ ಕಾಯುತ್ತಾ ನಿಂತಿದ್ದೆವು.
ಅಷ್ಟೋತ್ತಿಗೆ ರೈಲು ಚುಕುಬುಕು ಸದ್ದು ಮಾಡುತ್ತಾ ಬಂತು. ನಿಂತವರಿಗೆಲ್ಲಾ ಏನೋ ಒಂತರಹ ಸಂಭ್ರಮ. ದೂರದಿಂದ ನೋಡಿದ್ರೆ ರೈಲು ೮೦ ರ ಪ್ರಾಯದ ಮುದುಕಿ ತರ ನಿಧಾನವಾಗಿ ಬರುತ್ತಿತ್ತು. ಸಾರ್ ಹತ್ತಿರ ಬರುತ್ತಿದ್ದ ಹಾಗೇ ನೋಡಿ ರೈಲಿನ ವೇಗ ಎಷ್ಟಿರತ್ತೆ ಅಂದ ಅವ. ಅವ ಹೇಳಿದ ಹಾಗೆ ಆಯಿತು. ಓಡುತ್ತಿರುವ ರೈಲನ್ನು ಬಿಎಂಟಿಸಿ ಬಸ್ಸು ಹತ್ತಿದ ಹಾಗೆ, ಹತ್ತಲು ಸಾಧ್ಯವೇ ಇಲ್ಲ!
ಎಷ್ಟು ಬೋಗಿ ಮುಂದೆ ಚಲಿಸಿದರೂ ರೈಲು ನಿಲ್ಲಲೇ ಇಲ್ಲ. ಹಿಂದೆ ನಿಂತಿದ ಒಂದಿಷ್ಟು ಜನ ಸೀಟಿ ಹೊಡೆದರು, ಹೋಲ್ಡಾನ್ ಅಂತಾ ಕಿರುಚಿದರು. ಜನ ಜಾಸ್ತಿ ಇರೋದನ್ನ ನೋಡಿ ಇನ್ನು ಒಂದು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಬಹುದೆಂದು ನಾವು ಚೀಲ ಕೈಯಲ್ಲಿ ಹಿಡಿದು ಮುಂದೆ ಮುಂದೆ ಓಡಿದ್ವಿ. ಆದ್ರೂ ರೈಲು ನಿಲ್ಲಲ್ಲೇ ಇಲ್ಲ!
ಮತ್ತೆ ವಾಪಾಸು ತೀರ್ಥಹಳ್ಳಿಯವ ಇದ್ದಲ್ಲಿ ಬಂದೆ. ಸಾರ್ ಅದು ಶಿವಮೊಗ್ಗ ಟ್ರೈನ್ ಅಲ್ಲ. ಬೇರೆಯಾವುದೋ. ಶಿವಮೊಗ್ಗ ರೈಲು ಬರೋ ಹತ್ತು ನಿಮಿಷ ಮುಂಚೇನೆ ಇಲ್ಲಿ ಅನೌನ್ಸ್ ಮಾಡ್ತಾರ್‍ಎ ಅಂದ. ನನ್ನ ಮುಖ ಪೆಚ್ಚಾಗಿತ್ತು. ಆದ್ರೂ ರೈಲು ನಿಲ್ಲಿಸಲಿಲ್ಲ ಅಂತಾ ಸೀಟಿ ಹೊಡೆಯುವವರಷ್ಟು ಮೂರ್ಖ ನಾನಲ್ಲ ಅಂತಾ ನನಗೆ ನಾನೇ ಸಮಾಧಾನ ಮಾಡಿಕೊಂಡೆ!
ಕೊನೆಗೂ ಬರಬೇಕಿದ್ದ ಟ್ರೈನು ಬಂತು. ಹತ್ತುವ ವೇಗದಲ್ಲಿ ಯಾರೋ ಒಬ್ಬನ ಬ್ಯಾಗು ಕೆಳಗೆ ಬಿತ್ತು. ಎತ್ತಲು ಸಾಧ್ಯವಿಲ್ಲದ ಹಾಗೇ ಹಳಿ ಮೇಲೆ ಬಿದ್ದ ಬ್ಯಾಗನ್ನು, ಅದನ್ನು ಎತ್ತಲು ಬಿಡದ ಜನಸಂದಣಿಯನ್ನು ಕಂಡು ನನಗನ್ನಿಸಿತು, ರೈಲು ಪ್ರಯಾಣ ಅದೆಷ್ಟು ಕಷ್ಟ ಅಂತಾ. ಪ್ರತಿ ಸಾರಿ ರೈಲಲ್ಲಿ ಪ್ರಯಾಣಿಸುವ ಮುಂಚೆ ನನಗೆ ಹೀಗೆ ಅನ್ನಿಸುತ್ತಿರುತ್ತದೆ! ರೈಲಲ್ಲಿ ಹತ್ತಿ ಸೀಟು ಗಿಟ್ಟಿಸಿದಾಗ ಮೌಂಟ್ ಎವರೆಸ್ಟ್ ಶಿಖರ ಏರಿದ್ದಕ್ಕಿಂತ ದೊಡ್ಡ ಸಾಧನೆ ಮಾಡಿದೆ ಅನ್ನಿಸಿತು. ಮೇಲುಗಡೆ ಹತ್ತಿ, ಯಾರು ಎಬ್ಬಿಸಿದರೂ ಏಳಬಾರದೆಂದು ನಿರ್ಧರಿಸಿ ಮಲಗಿದೆ.
ಮಲಗಿ ಹತ್ತು ನಿಮಿಷ ಕಳೆದಿರಲಿಲ್ಲ ಯಾರೋ ಕೂಗಾಡುತ್ತಾ ಎಬ್ಬಿಸಲು ಪ್ರಯತ್ನಿಸಿದರೂ ಆದರೂ ನಿದ್ದೆ ಬಂದಂತೆ ನಟಿಸುತ್ತಾ ಸುಮ್ಮನೆ ಕಣ್ಣು ತೆರೆದು ನೋಡಿದರೆ ರೈಲಲ್ಲಿ ಕಾಲು ಹಾಕಲು ಜಾಗವಿರಲಿಲ್ಲ. ಮೆಜೆಸ್ಟಿಕ್ ಬಂದೇ ಬಿಟ್ಟಿತ್ತು. ಇನ್ನೂ ಈ ಅನಾಗರಿಕ ಜನರ ಹತ್ತಿರ ಬೋಳಿಮಗ…ಅಂತೆಲ್ಲಾ ಬೈಸಿಕೊಂಡು ಏಳುವ ಊಸಾಪರಿ ಯಾರಿಗೆ ಬೇಕಪ್ಪಾ ಅಂತಾ ಲೈಟಾಗಿ ಎದ್ದು ಕುಳಿತು ಬಿಟ್ಟೆ!
ಅಬ್ಬಾ ಅದೆಂತಾ ರೈಲು ಅಂತೀರಾ ಮಾರಾಯ್ರೆ, ನಮ್ಮ ಮಾರ್ಕೇಟಲ್ಲಿ ಇರುವ ಜನಕ್ಕಿಂತ ಹೆಚ್ಚು ಜನ ಒಂದೊಂದು ಬೋಗಿಯಲ್ಲಿ ಇದಾರೆ! ೧೧.೪೦ಕ್ಕೆ ರೈಲು ಮೆಜೆಸ್ಟಿಕ್‌ನಿಂದ ಹೊರಟಿತು. ಹೊರಡುತ್ತಿದ್ದ ಹಾಗೇ ಶುರುವಾಯಿತು ನೋಡಿ ಜನಗಳ ಕಚ್ಚಾಟ, ಜಗಳ! ಅದ್ಯಾಕೋ ನನಗೆ ರೈಲಲ್ಲಿ ಹೋಗೋವಾಗಲೆಲ್ಲಾ ತೇಜಸ್ವಿಯವರ “ಕಿರಗೂರಿನ ಗಯ್ಯಾಳಿಗಳ” ನೆನಪಾಗತ್ತೆ. ರೈಲಿನಲ್ಲಿ ಪ್ರಯಾಣಿಸಿದ ನಂತರವೇ ತೇಜಸ್ವಿ ಆ ಕೃತಿ ಬರೆದಿರಬೇಕು!
ಒಬ್ಬ ಲಗೇಜು ಇಡಲು ಮೀಸಲಿಟ್ಟ ಜಾಗದಲ್ಲಿ ಹಾಸಿ ಮಲಗಿಬಿಟ್ಟಿದ್ದ. (ರೈಲಲ್ಲಿ ಸೀಟಿನ ಅಡಿಗೆ, ಲಗೇಜು ಸ್ಟ್ಯಾಂಡಿನ ಮೇಲೆಲ್ಲ ಮಲಗುವುದು ಮಾಮೂಲು) ಉಳಿದವರೆಲ್ಲಾ ನಿಲ್ಲಲು ಜಾಗವಿಲ್ಲ, ಲಗೇಜು ಇಡುವ ಜಾಗದಲ್ಲಿ ಮಲಗಿದ್ದೀಯಲ್ಲ ಅಂತಾ ಕೂಗಾಡುತ್ತಾ, ಅವನನ್ನು ಏಳಿಸುವ ಪ್ರಯತ್ನ ಮಾಡುತ್ತಲೇ ಇದ್ದರು. ಅವ ಮಾತ್ರ ಕಲ್ಲುಬಂಡೆಯಂತೆ ಮಲಗಿಯೇ ಇದ್ದ. ಇದ್ದ ಬದ್ದ ಸೂಟ್‌ಕೇಸ್‌ಗಳನ್ನೆಲ್ಲಾ ಜನ ಸಿಟ್ಟಿನಿಂದ ಅವನ ಮೇಲೆ ಎಸೆದರು. ಅದಕ್ಕೂ ಬಗ್ಗಲಿಲ್ಲ. ನಂತರ ಕೆಲವರು ಅವನ ಕಾಲು ಹತ್ತಿರ ಹೋಗಿ ಚೂರು ಪಾರು ಜಾಗ ಮಾಡಿಕೊಂಡು ಕುಳಿತರು. ಆಗಲೂ ಆ ಅಸಾಮಿ ಅಲ್ಲಾಡಲಿಲ್ಲ. ಅವನನ್ನು ಎಬ್ಬಿಸುವ ಪ್ರಯತ್ನ ಮಾಡಿದ ಜನ ಸುಸ್ತಾದರೆ ಹೊರತು ಅವನಿಗೆ ಮಾತ್ರ ಏನೂ ಆಗಲಿಲ್ಲ! ಅವನ ದುರಾದೃಷ್ಟವೋ, ಜನರ ಅದೃಷ್ಟವೋ ಗೊತ್ತಿಲ್ಲ. ಸುಮಾರು ಹೊತ್ತಿನ ನಂತರ ಅವನಿಗೊಂದು ಮೊಬೈಲ್ ಕಾಲು ಬಂತು. ನಡು ರಾತ್ರಿಯಲ್ಲಿ ಬಂದ ಆ ಕಾಲ್ ಎತ್ತಲೇ ಬೇಕಾದಷ್ಟು ಅನಿವಾರ್ಯವಾದ ಫೋನ್ ಕರೆಯಾಗಿತ್ತು ಅನ್ನಿಸತ್ತೆ. ಅವ ಎತ್ತಿ ಮಾತಾನಾಡಲು ಶುರುವಿಟ್ಟ! ನಮ್ಮ ಕೈಯಲ್ಲಿ ಎಬ್ಬಿಸಲಾಗದವನನ್ನು ಒಂದು ನಿರ್ಜೀವ ಮೊಬೈಲ್ ಎಚ್ಚರ ಮಾಡಿಸಿತಾ? ಎಂದು ಕೋಪಗೊಂಡ ಜನ “ಹೋ” ಎಂದು ಕೂಗಲು ಶುರುವಿಟ್ಟರು! ನಂತರ ಅವನಿಗೆ ಮಲಗುವ ಭಾಗ್ಯ ದೊರೆಯಲಿಲ್ಲ ಬಿಡಿ!
ನನ್ನ ಪಕ್ಕಕ್ಕೆ ತರಿಕೇರಿಯವನೊಬ್ಬ ಕುಳಿತಿದ್ದ. ಕಾಂತರಾಜ್ ಅಂತಾ ಅವನ ಹೆಸರಂತೆ. ಹೀಗೆ ಪರಿಚಯವಾಯಿತು. ಹರಟಲು ಶುರುವಾಯಿತು. ಅವ ತರಿಕೇರಿ ಎಂಎಲ್‍ಎ ಎಲೆಕ್ಷನ್‌ಗೆ ಸ್ಪರ್ಧಿಸಿದ ವ್ಯಕ್ತಿಯಂತೆ! ಠೇವಣಿಯನ್ನೂ ಗಳಿಸಿರಲಾರ ಎಂಬುದನ್ನು ಅವನ ಮುಖಚಹರೆಯೇ ಹೇಳುತ್ತಿತ್ತಾದ್ದರಿಂದ ನಾನು ಅದನ್ನು ಕೇಳಲು ಹೋಗಲಿಲ್ಲ! “ಸಾರ್ ಏನೋ ಒಳ್ಳೆಯದು ಮಾಡಬೇಕು. ಭ್ರಷ್ಟರನ್ನು ಮಟ್ಟ ಹಾಕಬೇಕು ಅಂತಾ ಚುನಾವಣೆಗೆ ನಿಂತರೆ ನಮ್ಮ ಜನ ಠೇವಣಿಯನ್ನು ಕೊಡಲಿಲ್ಲ ಸಾರ್” ಅಂತಾ ಕೊನೆಗೆ ಅವನೇ ಹೇಳಿಕೊಂಡ ಬಿಡಿ!
ಎದುರಿಗೆ ಕುಳಿತವನು ಶಿವಮೊಗ್ಗದವನು. ತಮಿಳುನಾಡಿನಲ್ಲಿ ಗಾರೆ ಕೆಲಸ ಮಾಡ್ತಾ ಇದಾನಂತೆ. ಅವನಿಗೆ ರೈಲಲ್ಲಿ ಸೀಗರೇಟು ಸೇದಲು ಆಗತ್ತಿಲ್ಲ ಎಂಬುದೇ ಚಿಂತೆ. ಸಾರ್ ದಿನಕ್ಕೆ ಎರಡು ಪ್ಯಾಕ್ ಸೇದ್ತೀನಿ ಸಾರ್ ಅಂತಾ ಅವನ ಲೈಫ್ ಸ್ಟೋರಿ ಹೇಳಲು ಶುರುವಿಟ್ಟ…. ನಂಗೆ ಎಂಎಲ್‌ಎ ಸಾಹೇಬರ ಕಥೆಯ ನಗುವೇ ಮಾಸಿರಲಿಲ್ಲ. ಆದ್ರೂ ಬಾಯಿ ಮುಚ್ಚಿಕೊಂಡು ಕಥೆ ಕೇಳಿದೆ.
ನನ್ನ ಪಕ್ಕದಲ್ಲಿ ಕುಳಿತ ಮತ್ತೊಬ್ಬನೂ ನನ್ನಂತಹವನೇ ಇರಬೇಕು! ಸಾರ್ ಬಸ್ಸಲ್ಲಿ ಹೋದ್ರೆ ಇಷ್ಟೆಲ್ಲಾ ಮಜ ಸಿಗತ್ತ ಹೇಳಿ ಅಂತಾ ಮಾತಿಗೆ ಶುರುವಿಟ್ಟ….
“ಇಲ್ಲ ಬಿಡಪ್ಪಾ ಬೆಂಗಳೂರಿನ ಪಿವಿಎಸ್ ಟಾಕೀಸ್‍ಗೆ ಹೋಗಿ ೧೦೦ ರೂ ಟಿಕೇಟ್ ಪಡೆದು ಸಿನಿಮಾ ನೋಡಿದರೂ ೬೯ ರೂಪಾಯಿಯ ರೈಲು ಪ್ರಯಾಣದ ಮಜ ಸಿಗಲ್ಲ” ಅನ್ನೊಣ ಅಂದುಕೊಂಡೆ. ಆದ್ರೂ ಅವ ಅದಕ್ಕೆ ಮತ್ತೊಂದು ಸ್ಟೋರಿ ಹೇಳಬಹುದೆಂಬ ಭಯ ಶುರುವಾಗಿತ್ತು. ಕಣ್ಣು ನಿದ್ದೆ ಬಯಸುತಿತ್ತು. ಎದ್ದಾಗ ಭದ್ರಾವತಿ ಬಂದಿತ್ತು. ಅಲ್ಲಿಂದ ಶಿವಮೊಗ್ಗದವರೆಗೂ ಇನ್ನೊಂದಿಷ್ಟು ಅನುಭವವಾಯಿತು!
ಏನೇ ಹೇಳಿ ರೈಲೆಂಬುದೊಂದು ಪುಟ್ಟ ವಿಶ್ವ. ಅಲ್ಲಿ ಎಲ್ಲಾ ಬಗೆಯ ಜನರು ನೋಡಲು ಸಿಗುತ್ತಾರೆ. ನೋಡುವಂಥ ಕಣ್ಣು ನಮಗಿರಬೇಕಷ್ಟೆ. ಹುಚ್ಚಾಪಟ್ಟೆ ಏರಿಕೆಯಾಗುತ್ತಿರುವ ಬಸ್ ದರದಿಂದಾಗಿ ಸಾಮಾನ್ಯ ಜನ ಪ್ರಯಾಣ ಮಾಡುವುದೇ ಕಷ್ಟವಾಗಿದೆ. ಅಂತಹ ಮಂದಿಗೆಲ್ಲಾ ರೈಲು ಆಸರೆ ಎಂಬುದೇ ಖುಷಿಪಡುವ ವಿಚಾರ.
ಮೈಸೂರು ಪ್ರವಾಸ ವಗೈರೆ, ವಗೈರೆಗಳು…
Posted in ಕಥೆ-ವ್ಯಥೆ! on ಆಗಷ್ಟ್ 26, 2008| 5 Comments »
ಆಫೀಸ್‌ನಲ್ಲಿ ಕುಳಿತು ಹಲವಾರು ಕಂಪನಿಗಳ, ಷೇರು ವ್ಯವಹಾರಗಳ, ಹಣದುಬ್ಬರದ ಸುದ್ದಿ ಬರೆದೂ ಬರೆದೂ, ಬೇಜಾರಾಗಿತ್ತು. ಎರಡು ದಿನದ ಮಟ್ಟಿಗೆ ಮೈಸೂರು ಕಡೆ ಮುಖ ಮಾಡಲು ನಿರ್ಧರಿಸಿದೆ. ರೈಲಿಗೆ ಬಂದ್ರೆ ಬೇಗ ಬರ್ತಿಯ ಅಂತಾ ಗೆಳೆಯ ರಾಘು ಹೇಳಿದ್ದ. ಹಾಗಾಗಿ ಬೆಳಿಗ್ಗೆ ಏಳುವರೆ ಟ್ರೈನ್‌ಗೆ ಹೋಗುವುದು ಅಂತಾ ಐದು ಮುಕ್ಕಾಲಿಗೆ ಎದ್ದು ಗಡಿಬಿಡಿಯಲ್ಲಿ ಸ್ನಾನ ಮುಗಿಸಿ ರೈಲ್ವೇ ನಿಲ್ದಾಣಕ್ಕೆ ಓಡಿ ಟಿಕೆಟ್ ಗಿಟ್ಟಿಸಿದೆ. ಪ್ಲಾಟ್ ಪಾರಮ್ ನಂ.೭ ರಲ್ಲಿ ರೈಲು ಸಿದ್ದವಾಗಿ ನಿಂತಿತು. ಮೈಸೂರು-ಅರಸೀಕೆರೆ ಅಂತಾ ಬೋರ್ಡ್ ತೂಗಾಡುತ್ತಿತ್ತು. ರೈಲು ಹತ್ತಿ ಸೀಟು ಹಿಡಿದು, ಪಕ್ಕದಲ್ಲಿದವರ ಹತ್ತಿರ “ಇದು ಮೈಸೂರಿಗೆ ಹೋಗುವ ಟ್ರೈನ್ ಅಲ್ವಾ” ಅಂದೆ. ಅವ ಹೌದು ಅಂದ. ನಾನು ಹೌದು ಅಂತಾ ಭಾವಿಸಿ ಬೈರಪ್ಪನವರ ಅನ್ವೇಷಣ ಕಾದಂಬರಿಯ ಪುಟ ತೆರೆದುಕೊಂಡು ಕುಳಿತೆ.
ಟ್ರೈನ್ ಹಳಿ ತಪ್ಪಿತ್ತು… ಅಲ್ಲಲ್ಲ… ನಾನು ಹಳಿ ತಪ್ಪಿದ್ದೆ ಎಂದು ನನಗೆ ಗೊತ್ತಾಗಿದ್ದು ರೈಲು ಬಂಗಾರ ಪೇಟೆ ದಾಟಿದ ನಂತರ! ಮೈಸೂರಿಗೆ ಹೋಗುವ ಟ್ರೈನ್ ಅಂತಾ ನಾನು ಕೋಲಾರಕ್ಕೆ ಹೋಗುವ ರೈಲು ಹತ್ತಿ ಕುಳಿತಿದ್ದೆ! ಹೇಗೇಗೋ ಒದ್ದಾಡಿಕೊಂಡು ರಾತ್ರಿ ಏಳು ಘಂಟೆಗೆ ಮೈಸೂರು ತಲುಪಿದೆ. ೧೨ ತಾಸಿನ ಮೈಸೂರು ಪಯಣವಾಯಿತು!
*****
ಬೆಳಿಗ್ಗೆ ಆರು ಗಂಟೆಗೆ ಚಾಮುಂಡಿ ಬೆಟ್ಟ ಏರಿದ್ದು. ಅಬ್ಬ ಎಷ್ಟು ಎತ್ತರದ ಬೆಟ್ಟ ಅದು. ಅನಾದಿ ಕಾಲದಂತೆ. ಅದಕ್ಕೆ ಆ ಪರಿ ಮೆಟ್ಟಿಲುಗಳನ್ನು ಹೇಗೆ ನಿರ್ಮಿಸಿರಬಹುದು ಅಂತಾ? ಯಾಕಂದ್ರೆ ಇಂಡಿಯಾದವರು ತಂತ್ರಜ್ಞಾನದಲ್ಲಿ ಹಿಂದೆ ಅಂತಾ ನಾವು ಯಾವಾಗಲೂ ಗೊಣಗುತ್ತಿರುತ್ತೇವೆ ಅಲ್ವಾ? ಅನ್ನಿಸುತ್ತಿತ್ತು ಆ ಬೆಟ್ಟಕ್ಕೆ ಮೆಟ್ಟಿಲು ಕೊರೆದು, ಬೆಟ್ಟದ ಮೇಲೊಂದು ದೇವಾಸ್ಥಾನ ಕಟ್ಟಿದ್ದನ್ನು ನೋಡಿ.
ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳ ಕುರಿತು ಎಲ್ಲೋ ಅಲ್ಪ ಸ್ವಲ್ಪ ಓದಿದ್ದೆ. ಆದ್ರೂ ಅವೆಲ್ಲಾ ಇತಿಹಾಸದ ಕಥೆಗಳಲ್ವಾ? ಅವಕ್ಕೆ ಆಧಾರ ಅನ್ನುವುದು ಏನೂ ಇಲ್ಲ. ಬರದವನೇ ಆಧಾರ ಅಷ್ಟೆ! ಹಾಗಾಗಿ ಅದನ್ನು ನಂಬಲು ನಾವು ಮೂರು ಮೂರು ಸಲ ಆಲೋಚನೆ ಮಾಡುತ್ತೇವೆ. ಅಲ್ಲಾ ನಾವು ಆವಾಗಲೇ ಅದನ್ನು ಕಂಡು ಹಿಡಿದಿದ್ವಿ, ಇದನ್ನು ಆವಿಷ್ಕಾರ ಮಾಡಿದ್ವಿ ಅಂತೀವಿ ಆದ್ರೆ ಅವೆಲ್ಲಾ ಯಾಕೆ ಬಳಕೆಗೆ ಬರಲಿಲ್ಲ ಅಂತಾ?
ತಂತ್ರಜ್ಞಾನದ ಮಹಿಮೆ ತಿಳಿಯಬೇಕು ಅಂದ್ರೆ ಒಮ್ಮೆ ಮಣಿಪಾಲ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಹತ್ತಿರ ಹೋಗಿ ನಿಂತುಕೊಳ್ಳಬೇಕು. ಕೈ ತುಂಡಾದವರು ಕಾಲಲ್ಲಿ ರಕ್ತ ಸುರಿಯುತ್ತಾ ಇರುವವರು, ತಲೆ ಒಡೆದು…ಅಬ್ಬಬ್ಬಾ! ಒಂದು ಕಡೆ ತಂತ್ರಜ್ಞಾನದಿಂದಾಗಿ ಅದೇ ಮಣಿಪಾಲ ಆಸ್ಪತ್ರೆ ಜೀವ ಉಳಿಸತ್ತೆ. ಇನ್ನೊಂದೆಡೆ ವಾಹನದಂಥ ಆಧುನಿಕತೆ ಜೀವ ಕಳೆಯತ್ತೆ. ಹಾಗಾಗಿಯೇ ನಮ್ಮವರು ಜೀವ ಕಳೆಯುವ ತಂತ್ರಜ್ಞಾನವನ್ನು ಕಂಡುಹುಡುಕಿದರೂ ಆಚರಣೆಗೆ ತರಲಿಲ್ಲ ಅನ್ಸತ್ತೆ. ತಂತ್ರಜ್ಞಾನದ ಉಪಯೋಗದ ಜತೆಗೆ ಅನಾಹುತವನ್ನು ನಮ್ಮ ಹಿಂದಿನವರು ಆಲೋಚಿಸುತ್ತಿದ್ದರು ಅಂತಾ ನನ್ನಗನ್ನಿಸತ್ತೆ. ಆದ್ರೂ ಅದು ಇತಿಹಾಸ!
****
ಉಡುಪಿ ರಾಜಾಂಗಣದ ಸಂಪರ್ಕ ಕಡಿದು ಹೋದ ಮೇಲೆ ಯಕ್ಷಗಾನ ನೋಡಿರಲಿಲ್ಲ. ಏನೇ ಹೇಳಿ ನಾವು ಉಡುಪಿಯಲ್ಲಿದ್ದಾಗ ಅರ್ಥಾತ್, ಅದಮಾರು ಮಠದ ಪರ್ಯಾಯದ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳಿಗೆ ಲೆಕ್ಕವೇ ಇಲ್ಲ. ನನಗಂತೂ ಯಕ್ಷಗಾನದ ಹುಚ್ಚು. ತೆಂಕೋ, ಬಡಗೋ ಒಟ್ಟು ಆಟ ಅಂತಾದ್ರೆ ಆಯಿತು.
ಮೈಸೂರಿನ ಪುರಭವನದಲ್ಲಿ ಮೊನ್ನೆ ನಿಡ್ಲೆ ಮೇಳದ ಆಟವಿತ್ತು. “ಅದು ಹೇಳುವಷ್ಟು ಲಾಯಕ್ಕು ಇರಲಿಲ್ಲೆ ಮಾರಾಯರೇ. ಅವ ಎಂಥ ಭಾಗವತ. ಸುಖಯಿಲ್ಲೆ. ವಿದೂಷಕ ಒಬ್ಬನ್ನ ಬಿಟ್ಟು ಆಟಕ್ಕೇ ಆಟವೇ ಥಂಡು. ತೆಂಕಿನ ಕುಣಿತ ಕಾಣಕ್ಕ್ ಅಂದ್ರೆ ಎಡನೀರು ಮ್ಯಾಳದ್ದು. ಅಮ್ಮಣ್ಣಾಯರ ಪದ್ಯ….” ಬಹುಶಃ ಉಡುಪಿಯಲ್ಲೇ ಇದ್ದಿದ್ದರೆ ಆ ಮಾತು ಹೇಳಬಹುದಿತ್ತು. ಆದ್ರೆ ಬೆಂಗಳೂರಿಗೆ ಬಂದ ಮೇಲೆ ಪಾಲಿಗೆ ಬಂದದ್ದೇ ಪಂಚಾಮೃತ! ಚಿಟ್ಟಾಣಿ ಕುಣಿತ, ಗಣಪತಿ ಭಟ್ಟರ ಪದ್ಯ…ಬೆಂಗಳೂರಿನ ಯಾವುದೋ ಮೂಲೆಯಲ್ಲಿ ನಡೆದರೂ, ಈ ಪುರುಸೊತ್ತು ಇಲ್ಲದ ಬದುಕು, ಹಾಳು ಟ್ರಾಪಿಕ್ಕುಗಳ ನಡುವೆ ಹೋಗುವುದೇ ಬೇಡ ಅನ್ನಿಸತ್ತೆ.
ಅರಮನೆ, ಕೆಆರ್‌ಎಸ್ಸ್ ಎಲ್ಲಾ ನೋಡುವ ನನ್ನ ಆಲೋಚನೆಯನ್ನು ಹಳಿ ತಪ್ಪಿದ ರೈಲು ನುಂಗಿ ಹಾಕಿತ್ತು…
ಅಪಘಾತ ಮತ್ತು ಅಪಘಾತ!
Posted in ಕಥೆ-ವ್ಯಥೆ! on ಆಗಷ್ಟ್ 5, 2008| 11 Comments »