ಇಂಗ್ಲಿಷ್ ಸುದ್ದಿವಾಹಿನಿ ಜಗತ್ತಿನ ಅನಭಿಷಕ್ತ ದೊರೆ ಟೈಮ್ಸ್ ನೌ ವಾಹಿನಿ ಅಂದಾಕ್ಷಣ ನಮ್ಮ ಕಣ್ಣೆದುರಿಗೆ ಬರುವುದು ಅರ್ನಾಬ್ ಗೋಸ್ವಾಮಿ ನಡೆಸಿಕೊಡುವ ನ್ಯೂಸ್ ಅವರ್ ಕಾರ್ಯಕ್ರಮ. ತೀರ ಆವೇಷ ಬಂದಂತೆ ಆಡುವ ಅರ್ನಾಬ್ ವರ್ತನೆ ಕುರಿತು ಸಾಕಷ್ಟು ಜನ ಟೀಕೆ ಮಾಡುವುದು ಸುಳ್ಳಲ್ಲ. ಆದಾಗ್ಯೂ ಅದು ದೇಶದಲ್ಲಿ ಅತಿ ಹೆಚ್ಚು ವೀಕ್ಷಕರನ್ನು, ಅತಿ ಹೆಚ್ಚು ಟಿಆರ್ಪಿ ಹೊಂದಿರುವ ಶೋ ಎಂಬುದು ಸುಳ್ಳಲ್ಲ. ಇದೀಗ ಅಂಥ ಅನಾರ್ಬ್ ಟೈಮ್ಸ್ನ ಹೊಸ್ತಿಲು ದಾಟಿ ನಿಂತಿದ್ದಾರೆ ಎಂಬಂಥ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಖಂಡಿತ ಟೈಮ್ಸ್ ನೌ ಎಂಬ ವಾಹಿನಿಯ ಎತ್ತರದ ಹಿಂದೆ ಅರ್ನಾಬ್ ನೆರಳು ದೊಡ್ಡಾಗಿದೆ. ಕೇವಲ ನಿರೂಪಕ ಮಾತ್ರವಲ್ಲ, ಇಡೀ ವಾಹಿನಿಯ ಸೂತ್ರಧಾರನಾಗಿ ಅರ್ನಾಬ್ ೧೦ ವರ್ಷಗಳ ಕಾಲ ಈ ವಾಹಿನಿಯಲ್ಲಿ ನಿಂತಿದ್ದರು. ಆದಾಗ್ಯೂ…
ಬಹುಶಃ ನಾನು ಕೆಲ ವರ್ಷಗಳ ಹಿಂದೆ ಇದೇ ಬ್ಲಾಗ್ನಲ್ಲಿ ಈ ಪುಸ್ತಕದ ಕುರಿತು ಬರೆದಿದ್ದೆ. “ದಿ ಟಿಒಐ ಸ್ಟೋರಿ”. ಸಮೀರ್ ಜೈನ್ ಹಾಗೂ ಅವರ ಟೈಮ್ಸ್ ಆಫ್ ಇಂಡಿಯಾದ ಜರ್ನಿ ಕುರಿತ ಪುಸ್ತಕವಿದು. ಅಲ್ಲಿಂದಲೇ ಮಾಧ್ಯಮ ಜಗತ್ತಿನ ಮಾರಾಟ ಶಕೆ ಆರಂಭಗೊಂಡಿದ್ದು ಎಂದರೂ ತಪ್ಪಲ್ಲ. ಅಂದಹಾಗೆ ಸಮೀರ್ ಜೈನ್ ಟೈಮ್ಸ್ ಇಂಡಿಯಾದ ಮಾತೃಸಂಸ್ಥೆಯಾದ ಬೆನೆಟ್ ಆಂಡ್ ಕೊಲ್ಮನ್ನ ಭಾರತೀಯ ಉಪಾಧ್ಯಕ್ಷರು. ತಾವು ಮುನ್ನಡೆಸುವ ಸಂಸ್ಥೆಯನ್ನು ನಂಬರ್ ಒನ್ ಮಾಡಲಿಕ್ಕೆ ಹುಟ್ಟಿದವರು ಅಂತಾರಲ್ಲ, ಒಂಥರ ಅದೇ ಜಾತಿಗೆ ಸೇರಿದ ವ್ಯಕ್ತಿ ಇವರು!
ಟೈಮ್ಸ್ ಆಫ್ ಇಂಡಿಯಾ ಎಂಬೊಂದು ಪತ್ರಿಕೆ ಹೇಗೆ ಸುದ್ದಿ ಪತ್ರಿಕೆಗಳ ಆಟದ ನಿಯಮವನ್ನು ಬದಲಿಸಿತು ಎಂಬ ವಿಚಾರವನ್ನು ಸಮೀರ್ ಈ ಪುಸ್ತಕದಲ್ಲಿ, ಹಲವು ಅನುಭವಗಳೊಂದಿಗೆ ಬಿಚ್ಚಿಡುತ್ತ ಹೋಗುತ್ತಾರೆ. ತಾವು ಉದ್ಯೋಗಕ್ಕೆ ಸೇರಿದ ೭-೮ ವರ್ಷದಲ್ಲಿ ಉನ್ನತ ಹುದ್ದೆ ಏರಿ, ತಮ್ಮ ಕಪಿಮುಷ್ಠಿಯಲ್ಲಿದ್ದ ಟೈಮ್ಸ್ ಇಂಡಿಯಾ ಎಂಬ ಪತ್ರಿಕೆಯನ್ನು ದೇಶದಲ್ಲಷ್ಟೇ ಅಲ್ಲ, ಪ್ರಪಂಚದಲ್ಲೂ ನಂಬರ್ ಒನ್ ಇಂಗ್ಲಿಷ್ ಪತ್ರಿಕೆಯನ್ನಾಗಿಸುತ್ತಾರೆ. ಇವರ ಬೆನೆಟ್ ಸಂಸ್ಥೆಯಿಂದ ೨೦೦೬ರಲ್ಲಿ ಆರಂಭಗೊಂಡ ವಾಹಿನಿ ಟೈಮ್ಸ್ ನೌ.
ಕಾರ್ಪೊರೇಟ್ ಸಂಸ್ಕೃತಿ ಎಂಬುದು ಕನ್ನಡ ಪತ್ರಿಕೋದ್ಯಮಕ್ಕೆ ಇತ್ತೀಚಿನ ವರ್ಷಗಳಲ್ಲಿ ಪರಿಚಿತವಾಗಿದ್ದು. ಕನ್ನಡದ ಸಮೀರ್ ಜೈನ್ ಎನ್ನಬಹುದಾದ ವಿಜಯ ಸಂಕೇಶ್ವರ್ ವಿಜಯ ಕರ್ನಾಟಕ ಹುಟ್ಟಿ ಹಾಕಿದ ನಂತರ ಕನ್ನಡ ಪತ್ರಿಕೋದ್ಯಮದಲ್ಲೂ ಒಂದು ತಲ್ಲಣ ಶುರುವಾಗಿದ್ದು ಸುಳ್ಳಲ್ಲ. ಅದನ್ನು ಟೈಮ್ಸ್ ಆಫ್ ಇಂಡಿಯಾ ಸಮೂಹವೇ ಖರೀದಿಸಿದ ಮೇಲಂತೂ ಕನ್ನಡದಲ್ಲಿ ಸುದ್ದಿ ವ್ಯಾಪಾರದ ಯುಗ ಜೋರಾಯ್ತು. ಅದಕ್ಕೂ ಮೊದಲೇ ಮನರಂಜನೆ ವಾಹಿನಿಗಳು ಕನ್ನಡದಲ್ಲಿ ವ್ಯಾಪಾರ ಶುರುವಿಟ್ಟರು, ಅವುಗಳನ್ನು ಸುದ್ದಿಯ ಆಯಾಮದಿಂದ ನೋಡುವ ಪ್ರಮೇಯ ಬರಲಿಲ್ಲ. ಹೀಗಾಗಿ ಅಲ್ಲಿನ ವ್ಯಾಪಾರಿ ಮಾರುಕಟ್ಟೆ ನಮಗಷ್ಟು ಅರ್ಥವಾಗಲಿಲ್ಲ.
ಒಂದು ಸಂಸ್ಥೆ ವ್ಯಾಪಾರಕ್ಕೆ ಇಳಿದಾಗ, ಲಾಭ-ನಷ್ಟವೇ ಮುಖ್ಯವಾದಾಗ ಅದನ್ನು ಮುನ್ನಡೆಸುವ ಸೂತ್ರಧಾರ ಕೂಡ ಬಹಳ ಮುಖ್ಯ. ಬಹಳಷ್ಟು ಸಂಸ್ಥೆಗಳು ಈ ಮುಖ್ಯಸ್ಥರ ಆಯ್ಕೆಯಲ್ಲಿಯೇ ಎಡವಿ, ಆರಾರು ತಿಂಗಳಿಗೊಮ್ಮೆ ಮುಖ್ಯಸ್ಥರನ್ನು ಬದಲಿಸುತ್ತಿರುತ್ತವೆ. ಆದರೆ ಸಮೀರ್ ಜೈನ್ ಯಾವತ್ತೂ ಆ ವಿಷಯದಲ್ಲಿ ಲೆಕ್ಕಾಚಾರ ತಪ್ಪಲಿಲ್ಲ. ೨೦೦೬ರಲ್ಲೇ ಅರ್ನಾಬ್ ಟೈಮ್ಸ್ ನೌಗೆ ಮುಖ್ಯಸ್ಥರಾಗಿ ಬಂದು ಕೂರುತ್ತಾರೆ. ಈಗ ೨೦೧೬. ಅಂದರೆ ೧೦ ವರ್ಷಗಳ ಕಾಲ ಪ್ರತಿ ಗುರುವಾರವೂ ಟಿಆರ್ಪಿ ಲೆಕ್ಕ ಹಾಕುವ ವಾಹಿನಿಯೊಂದರಲ್ಲಿ ಮುಖ್ಯಸ್ಥರಾಗಿ ಉಳಿಯುತ್ತಾರೆ ಎಂಬುದೇ ದೊಡ್ಡ ಆಘಾತಕಾರಿ ಸುದ್ದಿ! ಅದರಲ್ಲೂ ವಾಹಿನಿಯೊಂದು ನಂಬರ್ ಒನ್ ಸ್ಥಾನದಲ್ಲಿ ಇರುವಾಗಲೇ ವಾಹಿನಿ ಬಿಡುವ ನಿರ್ಧಾರ ಮತ್ತೊಂದು ವಾವ್ ಎಂಬ ಸಂಗತಿ.
ಸಮೀಕ್ಷೆಗಳ ಪ್ರಕಾರ ಪ್ರತಿ ೩-೪ ವರ್ಷಕ್ಕೊಮ್ಮೆ ನೋಡುಗನ ಅಭಿರುಚಿ ಬದಲಾಗುತ್ತದೆ. ನೆಚ್ಚಿನ ವಾಹಿನಿಯೂ ಬದಲಾಗುತ್ತದೆ. ಹೀಗಾಗಿ ಸುದೀರ್ಘವಾಗಿ ಒಂದು ವಾಹಿನಿ ಜನಪ್ರಿಯತೆ ಉಳಿಸಿಕೊಳ್ಳುವುದು, ನಂಬರ್ ಒನ್ ಆಗಿರುವುದು ಬಹಳ ಕಷ್ಟದ ಸಂಗತಿ. ಇದರಾಚೆಗೆ ನೋಡಿದರೆ ೬-೮ ವರ್ಷ ಒಂದೇ ವಾಹಿನಿ ಒಂದು ಭಾಷೆಯ ಉದ್ಯಮವನ್ನು ಆಳುವುದು ಇದೆ. ಆದಾಗ್ಯೂ ಒಬ್ಬ ಮುಖ್ಯಸ್ಥ ಒಂದೇ ವಾಹಿನಿಯಲ್ಲಿ ಸುದೀರ್ಘವಾಗಿ ಉಳಿದುಕೊಳ್ಳುವುದು ಬಲು ಕಷ್ಟ. ಅಲ್ಲಿನ ಒತ್ತಡ, ಲಾಭ-ನಷ್ಟದ ಲೆಕ್ಕ ಬರೆಯುವ ಕೆಲಸದಲ್ಲಿ ಕ್ರಿಯಾಶೀಲ ಮುಖ್ಯಸ್ಥನಿಗೆ ಜಿಗುಪ್ಸೆ ಹುಟ್ಟಿ, ಒಳಗಿರುವ ಕಟೆಂಟ್ ಎಲ್ಲ ಕಳೆದು ಹೋಗಿ ಅವನಾಗಿಯೇ ಆಚೆ ಬರುವ ಪ್ರಸಂಗ ಬರುತ್ತದೆ.
ಅಮೆರಿಕದಲ್ಲಿ ಕುಳಿತು ಕರ್ನಾಟಕದ ಮಾರುಕಟ್ಟೆಗೆ ಜಾಹೀರಾತು ನೀಡುವವನಿಗೆ ಇಲ್ಲಿನ ಪೇಪರ್ ಯಾವುದು? ಅದ್ರಲ್ಲಿ ಕಟೆಂಟ್ ಏನು ಬರುತ್ತೆ? ಅದರ ಬಗ್ಗೆ ಎಷ್ಟು ಚರ್ಚೆಯಾಗುತ್ತೆ? ವಿಶ್ವಾಸಾರ್ಹತೆ ಏನು ಎಂಬುದು ಮುಖ್ಯವಲ್ಲ. ಎಷ್ಟು ಸರ್ಕ್ಯುಲೇಷನ್ ಹೊಂದಿದೆ? ವಾಹಿನಿ ಎಷ್ಟು ಜನರನ್ನು ತಲುಪಿ ಎಷ್ಟು ಟಿಆರ್ಪಿ ಗಳಿಸುತ್ತದೆ ಎಂಬುದಷ್ಟೇ ಬೇಕು. ಇದರ ಆಧಾರದ ಮೇಲೆ ಆತ ಜಾಹೀರಾತಿನ ಪ್ರಮಾಣವನ್ನು, ದರವನ್ನು ನಿರ್ಧರಿಸುತ್ತಾನೆ. ಮಾರುಕಟ್ಟೆಯಲ್ಲಿ ತನ್ನ ಪತ್ರಿಕೆ ಜಾಹೀರಾತಿನ ದರವೆಷ್ಟಕ್ಕೆ ನಿಲ್ಲುತ್ತದೆ, ವರ್ಷದ ಅಂತ್ಯಕ್ಕೆ ಹೂಡಿದ ಹಣದ ಮೇಲೆ ಎಷ್ಟು ಲಾಭ ಬರುತ್ತದೆ ಎಂಬುದು ಮಾಲೀಕನ ಲೆಕ್ಕ. ಹೀಗಾಗಿ ವಾಹಿನಿ, ಪತ್ರಿಕೆ ಎರಡೂ ನಂಬರ್ ಗೇಮ್. ಡಂಪ್ ಮಾಡಿ ಬಂತಾ, ಫೇಕ್ ನಂಬರ್ ಬಂತಾ ಅನ್ನೋದು ಮುಖ್ಯವಲ್ಲ. ಮಾರುಕಟ್ಟೆಯಲ್ಲಿ ನಂಬರ್ ಒನ್. ಟು ಆಗಿದ್ದು ಜಾಹೀರಾತು ತೂಗಬೇಕಷ್ಟೆ.
ಟ್ಯಾಲೆಂಟ್ ವಸರ್ಸ್ ವ್ಯಾಪಾರ ಅಂತ ಬಂದಾಗ ಗೆಲ್ಲೋದು ವ್ಯಾಪಾರವೇ. ಟೈಮ್ಸ್ನಂಥ ದೊಡ್ಡ ಸಂಸ್ಥೆಗೆ ಯಾರಿಲ್ಲದಿದ್ದರೂ ದೊಡ್ಡ ಸಂಗತಿಯಲ್ಲ. ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದಿಂದ ಹೊರಬಿದ್ದಾಗ ಕನ್ನಡ ಪತ್ರಿಕೋದ್ಯಮದಲ್ಲಿ ದೊಡ್ಡ ತಲ್ಲಣವೇ ಸೃಷ್ಟಿಯಾಯ್ತು. ಪತ್ರಿಕೆ ಕಥೆ ಮುಗಿದೇ ಹೋಯ್ತು ಎಂಬಂಥ ಮಾತುಗಳು ಕೇಳಿಬಂದವು. ಅವೆಲ್ಲವೂ ಹೊರ ಜಗತ್ತಿಗಷ್ಟೆ ಸುದ್ದಿ. ಭಟ್ಟರು ಬಿಟ್ಟು ೩-೪ ತಾಸಿನೊಳಗೆ ಎಕನಾಮಿಕ್ ಟೈಮ್ಸ್ನಲ್ಲಿದ್ದ ಈ.ರಾಘವನ್ ಅವರನ್ನು ಕರೆತಂದು ಆವತ್ತಿನ ಪತ್ರಿಕೆಯನ್ನು ಆರಾಮವಾಗಿಯೇ ಹೊರತಂದಿತ್ತು ಸಮೂಹ. ಅದಾಗಿ ೨-೩ ವರ್ಷ ಕಳೆದರೂ ವಿಜಯ ಕರ್ನಾಟಕದ ನಂಬರ್ ಒನ್ ಪಟ್ಟಕ್ಕೇನೂ ಕುತ್ತು ಬರಲಿಲ್ಲ. ಕೊನೆಗೂ ಸರ್ಕ್ಯುಲೇಷನ್ನಲ್ಲಿ ವಿಜಯ ಕರ್ನಾಟಕವನ್ನು ಕೆಳಗಿಳಿಸಲು ಅದೇ ಪತ್ರಿಕೆ ಮೊದಲು ಆರಂಭಿಸಿದ ಸಂಕೇಶ್ವರ್ ಅವರೇ ಬರಬೇಕಾಯ್ತು.
ಇದೇ ಕಥೆಯನ್ನು, ಇಂಥದ್ದೇ ಲೆಕ್ಕಾಚಾರಗಳನ್ನು “ದಿ ಟಿಒಐ ಸ್ಟೋರಿ” ಹೇಳುತ್ತೆ. ಒಂದು ಕಾರ್ಪೊರೇಟ್ ಸಂಸ್ಥೆ ಹೇಗೆ ರೂಪುಗೊಂಡು, ಹೇಗೆಲ್ಲ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತದೆ ಎಂಬುದಕ್ಕೊಂದು ಉತ್ತಮ ಪುಸ್ತಕ. ಹಾಗೆಯೇ ಕನ್ನಡ ಪತ್ರಿಕೋದ್ಯಮ ಜಗತ್ತಿನ ವ್ಯಾಪಾರಿ ಮನೋಭಾವವನ್ನು, ಕಾರ್ಪೊರೇಟ್ ಮನಸ್ಥಿತಿಯನ್ನು ಜೀರ್ಣಿಸಿಕೊಳ್ಳಲಾಗದೆ ಸುದ್ದಿ, ಬದ್ಧತೆ, ಘನತೆ ಅಂತೆಲ್ಲ ೧೯೬೦ರ ದಶಕದ ಪತ್ರಿಕೋದ್ಯಮ ಕಾಲದಂತೆ ಯೋಚಿಸುವ ನಮಗೂ ದುಡ್ಡು ಹಾಕಿದವನ ಆಲೋಚನೆ, ದೃಷ್ಟಿಕೋನ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಮೀರ್ ಜೈನ್ ಅವರ ಪುಸ್ತಕವನ್ನು ಓದಬೇಕು.
ಮುಳ್ಳುತಂತಿಯ ಮೇಲಿನ ನಡುಗೆಯಿದು. ಅದರಲ್ಲೂ ಕಾರ್ಪೊರೇಟ್ ವಾಹಿನಿಯ ಮುಖ್ಯಸ್ಥರಾಗುವುದು ಅಂದರೆ…ಸಾಮಾನ್ಯ ನಿರೂಪಕರಾಗಿದ್ದ ಅರ್ನಾಬ್ ಟೈಮ್ಸ್ ನೌನಲ್ಲಿ ಕಟೆಂಟ್ ಎಂಬ ವಿಷಯದಲ್ಲಿ ಅವರ ಪ್ರತಿಭೆಯನ್ನು ಸಾಬೀತುಪಡಿಸಿಕೊಂಡರು. ಆದರೆ, ಅದರಿಂದ ಆಚೆ ಬಂದು ಟೈಮ್ಸ್ ನೌನಂಥ ಬೆಳೆದ ಸಂಸ್ಥೆಗೆ ಸಡ್ಡು ಹೊಡೆದು ನಿಲ್ಲಬಲ್ಲರೇ ಎಂಬುದು ದೊಡ್ಡ ಪ್ರಶ್ನೆ. ಇವತ್ತಿನ ಕಾರ್ಪೊರೆಟ್ ಮಾಧ್ಯಮದ ದುರಂತವೇ ಇದು. ಬಹುಬೇಗ ದೊಡ್ಡ ಅವಕಾಶ ಸಿಗುತ್ತದೆ. ಆದರೆ ಅಷ್ಟೇ ಬೇಗ ನಿವೃತ್ತಿಯೂ ಹತ್ತಿರವಾಗುತ್ತದೆ. ಒಂದು ವಾಹಿನಿಯಲ್ಲಿ ಆತ ದೊಡ್ಡ ಹುದ್ದೆ ಏರಿ ನಂಬರ್ ತರಲು ಅಸಮರ್ಥನಾದರೆ, ನಂಬರ್ ಗೇಮ್ನಲ್ಲಿ ಸೋತರೆ ವೃತ್ತಿ ಜೀವನ ಬಹುತೇಕ ಮುಗಿದಂತೆ.
ಒಬ್ಬ ಪತ್ರಕರ್ತನಿಗೆ ಸುದ್ದಿಯ ವಿಷಯದಲ್ಲಿ ಅಂಥದ್ದೊಂದು ಆಟಿಟ್ಯೂಡ್, ಜೋಶ್ ಇರಬೇಕು. ಅರ್ನಾಬ್ ನಂಗಂತೂ ಇಷ್ಟವಾಗಿದ್ದು ಅದಕ್ಕೆ. ಸುದ್ದಿ ಎಂಬ ವಿಚಾರದಲ್ಲಿ ಮುನ್ನುಗ್ಗುತ್ತಿದ್ದರು. ಮಿಕ್ಕಿದ್ದೆಲ್ಲವೂ ನಂತರದ್ದು ಎಂಬಂತೆ. ಅಂಥ ಅರ್ನಾಬ್ ಮುಂದಿನ ಪಯಣಕ್ಕೆ ಶುಭವಾಗಲಿ…
(ಸಂಗೀತ ಪಿ ಮೆನನ್ ಬರೆದ ಈ ಪುಸ್ತಕ ಈಗಲೂ ಲಭ್ಯವಿದೆ)
ಅರ್ನಬ್ ನನಗೂ ಇಷ್ಟದ ನಿರೂಪಕ.. ಒಳ ನೋಟ ತಿಳಿಸಿದ್ದಕ್ಕೆ ಧನ್ಯವಾದ…