ಜಯಂತ್ ಕಾಯ್ಕಿಣಿ ಗೋಕರ್ಣದ ಸಮುದ್ರ ತೀರದಂಚಿನ ಅನುಭವ, ಮುಂಬೈ ಶಹರೆಯ ಸವಿನೆನಪುಗಳನ್ನು ಕಥೆಯಾಗಿಸಿರುವುದನ್ನು ಓದುವಾಗ ಬಾಯಂಚಿನಲ್ಲಿ ಒಂದು ಬಗೆಯ ನೀರು ಬರುತ್ತೆ. ಚಿತ್ತಾಲರ ಕಥೆಗಳನ್ನು ಓದುವಾಗಲೆಲ್ಲ ಘಟ್ಟದ ಕೆಳಗಿನ ಚಿತ್ರಣ ಕಣ್ಮುಂದೆ ಕಾಡುತ್ತೆ. ತೇಜಸ್ವಿಯ ಮೂಡಿಗೆರೆ ನಮ್ಮನ್ನೆಲ್ಲ ಮಲೆನಾಡಿನಲ್ಲಿ ಪ್ರಯಾಣ ಬೆಳೆಸುತ್ತೆ. ಬರೆಯುವ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಜಾಗ ಕಾಡುವುದು, ಅವರು ಅದರ ಕುರಿತು ಆಗಾಗ ಬರೆಯುವುದು, ಸಾಧ್ಯವಿದ್ದಲೆಲ್ಲ ಆ ಊರನ್ನು ತುರುಕಿ ಸಂಭ್ರಮಿಸುವುದು ಸುಳ್ಳಲ್ಲ. ಹಾಗೆ ನನ್ನ ಪಾಲಿಗು ಸದಾ ಎದೆಭಾರವೆನಿಸುವ ಊರು ’ಉಡುಪಿ’.
ಬಹುಶಃ ನಾನು ನನ್ನೂರನ್ನು ಅಷ್ಟೊಂದು ಮಿಸ್ ಮಾಡಿಕೊಂಡೆ ಅನ್ನಿಸಲ್ಲ. ಆದ್ರೆ ಉಡುಪಿ ಎಂದಾಗ ಒಂಚೂರು ಎದೆಭಾರವಾಗುತ್ತೆ. ಯಾರೊ ಉಡುಪಿ-ಮಣಿಪಾಲದ ಹೆಸರು ಎತ್ತಿದರೆ ಕಿವಿ ನೆಟ್ಟಗಾಗುತ್ತೆ. ಅಂಥದ್ದೇನಿದೆ ಆ ಊರಲ್ಲಿ? ಅಷ್ಟ ಮಠಗಳ ಒಣ ಒಳ ಜಗಳ, ಜಾತ್ಯಾತೀತತೆ ವಾದ-ವಿವಾದ, ಮಣಿಪಾಲದ ಕತ್ತಲ ರಾತ್ರಿಯ ಪಬ್ಬು-ಬಾರುಗಳು, ಮಲ್ಪೆಯ ಸಮುದ್ರ ತೀರ, ಸಂತೆಕಟ್ಟೆಯ ಒಣ ಮೀನಿನ ವಾಸನೆ…ಉಡುಪಿಯೆಂದರೆ ಹೊರಜಗತ್ತಿನ ಸಾಕಷ್ಟು ಜನರ ಕಣ್ಣಿನಂಚಿಗೆ ಬರುವುದು ಇವಿಷ್ಟು ಮಾತ್ರ!
ಆದ್ರೆ ಉಡುಪಿಯನ್ನೇ ದೇಹವಾಗಿಸಿಕೊಂಡು, ಮಲ್ಪೆ ಸಮುದ್ರದ ಬಿಸಿ ಗಾಳಿಯಲ್ಲಿ ಉಸಿರಾಡಿ ಮರಳ ರಾಶಿಯಲ್ಲಿ ಹೊರಳಾಡಿದ ನನ್ನಂಥ ಅದೆಷ್ಟೊ ಮಲೆನಾಡಿನ ಹುಡುಗರ ಪಾಲಿಗೆ ಉಡುಪಿಯೆಂದೊಡನೆ ಬಿಚ್ಚಿಕೊಳ್ಳುವ ಅನುಭವ ಸಾವಿರಾರು!
ನಿಟ್ಟೂರು, ಸಂಪೆಕಟ್ಟೆ, ನಗರ, ಹೊಸನಗರದವರೆಲ್ಲ ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿಗೆಂದು ಘಟ್ಟದ ಕೆಳಗೆ ಇಣುಕಿದರೆ ಮೊದಲು ಕಾಣುವ ನಗರಿಯೇ ಉಡುಪಿ. ಸಾಗರ, ಸಿದ್ದಾಪುರದ ಮಂದಿ ಬಾಳೆಬರೆ ಘಾಟಿ ದಾಟಿ ಹೊಸಂಗಡಿ ಹವಾ ತೆಗೆದುಕೊಂಡು ಕಲಿಯಲು ಹೋಗುವುದು ಕೂಡ ಉಡುಪಿ-ಮಣಿಪಾಲಕ್ಕೆ.
ಅಂದ್ಹಾಗೆ ಮಣಿಪಾಲದಿಂದ ಜೋರಾಗಿ ’ಕೂಹೂ’ ಎಂದರೆ ಉಡುಪಿಗೆ ಕೇಳಿಸುತ್ತೆ. ಉಡುಪಿ ಬೋರ್ಡ್ ಹಾಕಿಕೊಂಡು ಇರುವ ಎಂಜಿಎಂ, ಯುಪಿಎಂಸಿ ಕಾಲೇಜು, ಇಂದ್ರಾಳಿಯೆಲ್ಲ ಒಂಧರ್ಥದಲ್ಲಿ ಇರೋದು ಮಣಿಪಾಲದಲ್ಲಿ. ಇಂದ್ರಾಳಿ ಏರು ಹತ್ತಿದರೆ ಮಣಿಪಾಲ ಸಿಗುತ್ತದೆ. ಎಷ್ಟೋ ಸಲ ನಾವೆಲ್ಲ ಪೆಟ್ಟು ಮುಗಿಸಿ ತಡರಾತ್ರಿಯಲ್ಲಿ ಮಣಿಪಾಲದಿಂದ ಉಡುಪಿಗೆ ಕಾಲ್ನಡಿಗೆಯಲ್ಲಿ ಹೋಗಿದ್ದು ಇದೆ.
’ಅರೆ ಪೆಟ್ಟು!’
ಬಹುಶಃ ಈಗೊಂದು ೧೦ ವರ್ಷದ ಕೆಳಗೆ ನೀವು ಕರಾವಳಿ ಭಾಷೆಯಲ್ಲಿ ಪೆಟ್ಟು ಎಂದರೆ ಬೇರೆಯದೆ ಅರ್ಥ ಬರುತ್ತಿತ್ತು. ’ಉಡುಪಿ-ಮಂಗಳೂರು ಅಂಡರ್ವರ್ಲ್ಡ್ ಅಡ್ಡವಂತೆ. ಮುಂಬೈ-ದುಬೈನಲ್ಲಿ ಇರುವ ಡಾನ್ಗಳು, ಶೆಟ್ಟರೆಲ್ಲ ಉಡುಪಿಗೆ ಆಗಾಗ ಬರುತ್ತಾರಂತೆ! ಅಲ್ಲಿ ಬದುಕುವುದು ಬಹಳ ಕಷ್ಟವಂತೆ’ ಎಂಬ ಮಾತು ಕೇಳುತ್ತಿತ್ತು. ಆದರೆ ನಾವೆಲ್ಲ ಓದುವ ಹೊತ್ತಿಗೆ ಆ ಪೆಟ್ಟಿನ ಪರಿಭಾಷೆ ಬದಲಾಗಿತ್ತು. ಅಂಥ ದೊಡ್ಡ ಮಟ್ಟದ ಹೊಡೆದಾಟ, ರೌಡಿಸಂ ಎಲ್ಲ ಅಕ್ಷರಶಃ ನಿಶಬ್ಧವಾಗಿತ್ತು. ಎಲ್ಲೊ ವರ್ಷಕ್ಕೊಂದು ಗ್ಯಾಂಗ್ವಾರ್ ಆದರೆ ಕರಾವಳಿಯ ಸಂಜೆಯ ಪತ್ರಿಕೆಗಳಿಗೆ ಹಬ್ಬದೂಟ!
ಮತ್ತೆ ಪೆಟ್ಟು ಅಂದ್ರೆ ಎಂಥದ್ದು ಮಾರಾಯ್ರೆ?
’ನಿಮಗೆಂಥ ಮಂಡೆಪೆಟ್ಟಾ?!’ ನೀವು ಉಡುಪಿಯ ಸುತ್ತಮುತ್ತಲಿನ ಜನರ ಬಾಯಲ್ಲಿ ದಿನಕ್ಕೆ ಕನಿಷ್ಟ ಹತ್ತು ಸಲ ಈ ಎಂಬ ಪದವನ್ನು ಕೇಳುತ್ತೀರಿ! ಅಂದಹಾಗೆ ನಾನು ಹೇಳಲಿಕ್ಕೆ ಹೊರಟಿರುವುದು ಈ ಮಂಡೆಪೆಟ್ಟಿನ ವಿಚಾರವೂ ಅಲ್ಲ ಮಾರಾಯ್ರೆ!
ಒಮ್ಮೆ ಅಮ್ಮ ಮನೆಯಿಂದ ಫೋನ್ ಮಾಡಿದಾಗ ’ಪೆಟ್ಟಲ್ಲಿ ಇದ್ದಿ. ಆಮೇಲೆ ಫೋನ್ ಮಾಡ್ತಿ’ ಅಂದು ಬಿಟ್ಟೆ. ಆವತ್ತು ಕೆಲಸ ಕೆಟ್ಟುಹೋಗಿತ್ತು ನೋಡಿ. ಉಡುಪಿಗೆ ಹೋಗಿ ಮಗ ಹಾಳಾಗಿ ಬಿಟ್ಟ. ಪೆಟ್ಟು, ಹೊಡೆದಾಟ ಎಂಬಿತ್ಯಾದಿ ಶುರು ಮಾಡಿಬಿಟ್ಟ ಎಂದು ಅಮ್ಮ ದಂಗಾಗಿ ಹೋಗಿದ್ದರು. ನಿಜ, ಬದುಕಿನಲ್ಲಿ ಹಾಳಾಗಲೇಬೇಕು ಎಂದು ನಿರ್ಧರಿಸಿದವರಿಗೂ ಈ ಉಡುಪಿ-ಮಣಿಪಾಲಕ್ಕಿಂತ ಒಳ್ಳೆ ಜಾಗ ಸಿಗಲಿಕ್ಕಿಲ್ಲ. ಮಣಿಪಾಲದ ಎಂಡ್ಪಾಯಿಂಟ್ನ್ನು ಅವರೆಲ್ಲ ಮರೆಯಲ್ಲಿಕ್ಕಿಲ್ಲ! ಆದ್ರೆ ಇದೇ ಉಡುಪಿ ನನ್ನಂಥ ಲಕ್ಷಾಂತರ ಮಂದಿಯ ಬದುಕನ್ನು ಉದ್ದಾರ ಮಾಡಿದೆ ಎಂಬಷ್ಟು ಕೃತಜ್ಞ ನಾನು.
ಭಾಸ್ಕರ ಭಟ್ರು, ಪ್ರಭಾಕರ್ ಭಟ್ರು, ರಮೇಶ, ರಾಜಾ, ಡಯಾನ ಕ್ಯಾಟೆರಿಂಗ್…ಪೆಟ್ಟಿಗೆ ಸೈ ಎನಿಸಿಕೊಂಡ ಹೆಸರುಗಳಿವು. ಬಹುಶಃ ಈ ಕ್ಯಾಟೆರಿಂಗ್ ಅನ್ನೋ ಪದ ಕಿವಿಗೆ ಬಿದ್ದ ಮೇಲೆ ಪೆಟ್ಟಿನ ಅರ್ಥ ತಿಳಿದಿರಬಹುದು. ಮದುವೆ, ಉಪನಯನದಿಂದ ಹಿಡಿದು ಬೊಜ್ಜದವರೆಗೆ ಎಲ್ಲ ಬಗೆಯ ಕಾರ್ಯಕ್ರಮಗಳಿಗೂ ’ಊಟ ಬಡಿಸುವ ವ್ಯವಸ್ಥೆ’ಯನ್ನು ಕರಾವಳಿ ಭಾಷೆಯಲ್ಲಿ ಸ್ವಚ್ಛಂದವಾಗಿ ’ಪೆಟ್ಟು’ ಎನ್ನುತ್ತಾರೆ.
ಈ ಪೆಟ್ಟಿನ ಜೊತೆಯಲ್ಲೆ ಅಂಟಿಕೊಂಡ ಮತ್ತೊಂದು ವಿಸ್ಮಯ ಕೊಂಕಣಿ ಹುಡುಗಿಯರು! ಕೊಂಕಣಿ ಹುಡುಗಿಯರ ವಿಚಾರ ಬಂದಾಗ ರಥಬೀದಿಯನ್ನು ಇಲ್ಲಿಗೆ ಎಳೆದು ತರದಿರಲು ಸಾಧ್ಯವೇ ಇಲ್ಲ. ’ಅಷ್ಟ ಮಠಗಳ ಕಟ್ಟೆಯ ಮೇಲೆ ಕುಳಿತು ಲೈನ್ ಹೊಡೆಯುವುದು’ ಎಂಬ ಪರಿಕಲ್ಪನೆಯನ್ನು ನಮಗೆಲ್ಲ ಕಲಿಸಿದ್ದೆ ಈ ಕೊಂಕಣಿ ಹುಡುಗಿಯರು.
ಎಲ್ಲ ಸರಿ ಈ ಪೆಟ್ಟಿಗೂ ಕೊಂಕಣಿ ಹುಡುಗಿಯರಿಗೂ ಏನು ಸಂಬಂಧ? ಇದೊಂಥರ ಉಡುಪಿ-ಮಣಿಪಾಲದ ಬಾಂಧವ್ಯವಿದ್ದಂತೆ! ಇಡೀ ಉಡುಪಿ-ಮಣಿಪಾಲವನ್ನು ಪೂರ್ತಿಯಾಗಿ ಜಾಲಾಡಿದರೆ ಹೆಚ್ಚು ಸಿಗುವುದು ಮಾಧ್ವರು ಮತ್ತು ಕೊಂಕಣಿಗರು. ರಥಬೀದಿ ಬಿಟ್ಟರೆ ಸಿಗುವುದು ವೆಂಕಟರಮಣಸ್ವಾಮಿ ದೇವಸ್ಥಾನ.
’ಉಡುಪಿ ಹೋಟೆಲ್ಗಳು’ ವಿಶ್ವದಲ್ಲೇ ಜನಪ್ರಿಯ. ಆದ್ರೆ ನೀವು ನಿಜವಾಗ್ಲು ಅಲ್ಲಿನ ಊಟದ ರುಚಿ ನೋಡಬೇಕು ಅಂದ್ರೆ ಉಡುಪಿ-ಮಣಿಪಾಲದ ಯಾವುದಾದ್ರೊಂದು ಮದ್ವೆ ಊಟ ಮಾಡಬೇಕು. ರಥಬೀದಿಯ ಕೃಷ್ಣಾಪುರ, ಪುತ್ತಿಗೆ ಮಠದ ಛತ್ರದಿಂದ-ಅಂಬಲ್ಪಾಡಿ ದೇವಸ್ಥಾನ, ಹೈವೆಯ ಶ್ಯಾಮಿಲಿವರೆಗೆ, ಪಿಪಿಸಿ ಬಳಿಯ ಎಲ್ವಿಟಿ-ಅಂಬಾಗಿಲಿನ ಎಲ್ವಿಟಿವರೆಗೆ, ಇಂದ್ರಾಳಿಯ ಶಾರದಾ ಕಲ್ಯಾಣಮಂಪದಿಂದ-ಉದ್ಯಾವರ, ಹಿರಿಯಡ್ಕದವರೆಗೆ…ಒಂಥರ ಬೆಂಗಳೂರಿನಲ್ಲಿ ಬಾರ್ಗಳು ಸಿಕ್ಕಂತೆ ಉಡುಪಿ-ಮಣಿಪಾಲದಲ್ಲಿ ಕಲ್ಯಾಣ ಮಂಟಪಗಳು ಸಿಗುತ್ತವೆ.
ಒಂದು ಕಾಲದಲ್ಲಿ ನಮ್ಮನ್ನೆಲ್ಲ ಹೊಟ್ಟೆ ಹೊರೆದಿದ್ದು, ಸಾಕಿದ್ದು ಇದೇ ಕಲ್ಯಾಣ ಮಂಟಪಗಳು ಮತ್ತು ಪೆಟ್ಟು. ಮಲೆನಾಡಿನಿಂದ ಉಡುಪಿಗೆಂದು ನಾವೆಲ್ಲ ಓದಲಿಕ್ಕೆ ಬರುತ್ತಿದ್ದಿದ್ದಕ್ಕೆ ಪ್ರಮುಖ ಕಾರಣ ಉಡುಪಿಯಲ್ಲಿ ಶಿಕ್ಷಣ ತುಂಬಾ ಅಗ್ಗ ಮತ್ತು ಅದ್ಭುತ. ಈಗೊಂದು ೧೦ ವರ್ಷದ ಕೆಳಗೆ ಮಲೆನಾಡಿನ ಪ್ರತಿ ಮನೆಯಲ್ಲೂ ಬಡತನ. ಇವತ್ತಿನಂತೆ ಪ್ರಿಕೆಜಿ-ಎಲ್ಕೆಜಿಗಳಿಗೆ ಲಕ್ಷಾಂತರ ರೂಪಾಯಿ ಡೊನೇಷನ್ ಕೊಟ್ಟು ಮಕ್ಕಳನ್ನು ಓದಿಸುವ ಸ್ಥಿತಿಯಲ್ಲಿ ಯಾರು ಇರಲಿಲ್ಲ ಮತ್ತು ಅಷ್ಟು ಹುಚ್ಚರು ಆಗಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆ ಫಲಿತಾಂಶ ಬರದಿದ್ದರೆ ’ಮನೆಯಲ್ಲಿ ಸಗಣಿ ತೆಗೆದುಕೊಂಡು, ಸೋಗೆ ಬಾಚಿಕೊಂಡು’ ಇರು ಮಗನೆ ಎನ್ನುತ್ತಿದ್ದರು. ಆಗ ನಮಗೆಲ್ಲ ಕಾಣಿಸುತ್ತಿದ್ದಿದ್ದು ಉಡುಪಿಯ ಅಷ್ಟಮಠಗಳು ನೀಡುವ ಉಚಿತ ವಸತಿ ಮತ್ತು ಕೃಷ್ಣಮಠದ ಉಚಿತ ಊಟ. ನಾವೆಲ್ಲ ಯಾವತ್ತು ಅದಕ್ಕೆ ಚಿರಋಣಿಗಳು.
ನೀವು ಇದನ್ನು ಒಪ್ಪದಿರಬಹುದು. ಇದಕ್ಕೆ ಜಾತಿಯ ಲೇಪ ಅಂಟಿಸಿ ಗಲಾಟೆ ಮಾಡಬಹುದು. ಆದ್ರೆ ನಾನು ಮಾತ್ರ ತುಂಬಾ ನೋವಿನಿಂದ ಹೇಳ್ತೀನಿ. ಕೆಳವರ್ಗದವರಿಗೆ ಪ್ರತಿ ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಉಚಿತ ಹಾಸ್ಟೆಲ್ಗಳಿವೆ. ಆದರೆ ಮೇಲ್ವರ್ಗದ ಒಬ್ಬ ಬಡ ಜಾಣ ಓದ್ತೀನಿ ಅಂದ್ರೆ ಆತನಿಗಿರುವ ಆಸರೆ ಉಡುಪಿ ಮತ್ತು ಉಜಿರೆಗಳು ಮಾತ್ರ. ಇದು ನುಂಗಲು ಕಹಿಯಾದ್ರು ಇವತ್ತಿಗೂ ಸತ್ಯ. ಬಹುಶಃ ನನ್ನಲ್ಲಿ ಉಡುಪಿ ಎಂಬುದು ಇವತ್ತಿಗೂ ಎದೆಯಲ್ಲಿ ಭಾರ ಹುಟ್ಟು ಹಾಕುವುದಕ್ಕೆ ಇದು ಒಂದು ದೊಡ್ಡ ಕಾರಣ.
ಹೋಗ್ಲಿ ಬಿಡಿ ನಾವು ಹುಡುಗಿ, ಲೈನು, ರಥಬೀದಿಯಲ್ಲಿದ್ದಾಗ ಇಂಥ ಗಂಭೀರ ವಿಷಯಗಳು ಬೇಡ! ನಮಗೆಲ್ಲ ಪೆಟ್ಟು ಎಂಬುದು ಪಾರ್ಟ್ಟೈಂ ಜಾಬ್. ಫುಲ್ಟೈಂ ಸಂಪಾದನೆಯ ಮಾರ್ಗ. ಸತ್ಯವಾಗಲು ನಾನಂತು ಪಿಪಿಸಿಯಲ್ಲಿ ಡಿಗ್ರಿಯ ೫,೫೦೦ರೂ ಶುಲ್ಕವನ್ನು ಮೂರು ವರ್ಷವೂ ಈ ಪೆಟ್ಟಿನ ಸಂಪಾದನೆಯಿಂದಲೆ ತುಂಬಿರುವೆ. ನನ್ನಂಥ ಹಲವರದ್ದು ಇದೇ ಕಥೆ. ಆವತ್ತು ಮಧ್ಯಾಹ್ನದ ಊಟ ಬಡಿಸಿದ್ರೆ ೧೧೦ರೂ. ಕೊಡುತ್ತಿದ್ದರು. ರಾತ್ರಿ ಊಟಕ್ಕೂ ಸುಮಾರು ಇಷ್ಟೆ ಹಣ. ಬೆಳಿಗ್ಗೆ ತಿಂಡಿಗೆ ೪೦-೫೦ರೂ. ನಾವೆಲ್ಲ ಬೆಳಿಗ್ಗೆ ತಿಂಡಿ ಬಡಿಸಲು ಹೋಗುತ್ತಿದ್ದಿದ್ದು ರಜಾದಿನಗಳಲ್ಲಿ ಮಾತ್ರ. ಕಾಲೇಜು ೪.೩೦ಕ್ಕೆ ಮುಗಿಯುತ್ತಿದ್ದರಿಂದ ರಾತ್ರಿ ಊಟ ಬಡಿಸುವುದು ಸಮಸ್ಯೆ ಆಗುತ್ತಿರಲಿಲ್ಲ.
ಆದ್ರೆ ದೊಡ್ಡ ಸವಾಲು ಇದ್ದಿದ್ದು ಮಧ್ಯಾಹ್ನದ ಪೆಟ್ಟಿನಲ್ಲಿ. ನಮಗೆ ಪಿಪಿಸಿಯಲ್ಲಿ ಮಧ್ಯಾಹ್ನನದ ಕೊನೆ ಅವಧಿ ವಾರದಲ್ಲಿ ೩ ದಿನ ರಮೇಶಣ್ಣನ ಸಂಸ್ಕೃತ ಕ್ಲಾಸು. ಹೀಗಾಗಿ ಶೇ.೬೫ ಅಂಟೆಡೆನ್ಸ್ಗಿಂತ ಮಿಕ್ಕೆಲ್ಲ ಕ್ಲಾಸುಗಳೆಲ್ಲ ಬಂಕು. ಇನ್ನು ಊಟದ ನಂತರದ ಮೊದಲ ಅವಧಿ ಕೃಷ್ಣಮೂರ್ತಿಯವರ ಇಂಗ್ಲಿಷ್. ಪೆಟ್ಟು ಇರಲಿ, ಇರದಿರಲಿ ಅವರ ಕ್ಲಾಸ್ಗೆ ಹೋಗಿದ್ದು ಅಷ್ಟರಲ್ಲೆ ಇದೆ ಬಿಡಿ! ಸಮಸ್ಯೆಯಾಗುತ್ತಿದ್ದಿದ್ದು ಒಂದೊಂದು ಸಲ ಇವರೆಡು ಅವಧಿಯಲ್ಲಿ ಒಂದು ರಾಘು ಸರ್ ಗಣಿತ ಅಥವಾ ಎ.ಪಿ.ಭಟ್ಟರ ಫಿಸಿಕ್ಸ್ ಬಂದುಬಿಡುತ್ತಿತ್ತು. ಇನ್ನೂ ಮಜ ಅಂದ್ರೆ, ನಾವು ಈ ಕ್ಲಾಸ್ಗೂ ಬಂಕ್ ಹಾಕಿ ಪೆಟ್ಟಿಗೆ ಹೋಗುತ್ತಿದ್ದೆವು. ಯಾವುದೋ ಊಟದ ಪಂಕ್ತಿಯಲ್ಲಿ ನಡುಮಧ್ಯದಲ್ಲಿ ರಾಘು ಸಾರ್ ಪ್ರತ್ಯಕ್ಷ! ಅಲ್ಲಿಗೆ ನಮ್ಮ ಕಥೆ ಫಿನಿಷ್. ಮುಂದಿನ ಕ್ಲಾಸ್ನಲ್ಲಿ ನನಗೊಂದು ಪ್ರಶ್ನೆ ಕಟ್ಟಿಟ್ಟ ಬುತ್ತಿ! ಜೊತೆಗೆ ನಿನ್ನೆ ಪೆಟ್ಟಿಗೆ ಹೋಗಿದ್ದಕ್ಕೆ ಒಂದಷ್ಟು ಟಾಂಟ್! ಇದು ಮೂರು ವರ್ಷಗಳಲ್ಲಿ ಅದೆಷ್ಟು ಸಲ ಆಗಿದೆಯೋ ಗೊತ್ತಿಲ್ಲ. ರಮೇಶಣ್ಣ ಕೊಠಡಿಗೆ ಕರೆದು ಅದೆಷ್ಟು ಸಲ ಬೈದಿದ್ದಾರೊ ಲೆಕ್ಕವಿಲ್ಲ!
ಕಾಲೇಜು ದಿನಗಳು ಅಂದ್ರೆ ಹಾಗೆ. ಪ್ರತಿಯೊಬ್ಬರಿಗು ಅವರ ಕಲ್ಪನೆಯ, ಕನಸಿನ ಒಂದೊಂದು ಹುಡುಗಿ. ಕೆಲವರಿಗೆ ೩-೪! ನಮಗೆ ನಾವೇ ಅಂದುಕೊಂಡು ಯಾರ್ಯಾರನ್ನೋ ಲವ್ ಮಾಡುವುದು. ಇಂಥವರಿಗೆ ವೇದಿಕೆ ರಥಬೀದಿ. ಆವತ್ತಿನ ಕಾಲಕ್ಕೆ ಹೆಚ್ಚಾಗಿ ಚೆಂದ ಇರುತ್ತಿದ್ದಿದ್ದು, ಸ್ವಲ್ಪ ಮಾಡ್ ಆಗಿ ಬರುತ್ತಿದ್ದವರಲ್ಲಿ ಹೆಚ್ಚಿನವರು ಕೊಂಕಣಿ ಹುಡುಗಿಯರು. ಊರಿಗೆ ಬಂದವನು ನೀರಿಗೆ ಬರದೇ ಇರುವನೆ ಎನ್ನುವಂತೆ ಎಲ್ವಿಟಿಗೆ ಬಂದು ವೆಂಕಟರಮಣನಿಗೆ ಕೈಮಗಿದವರು ರಥಬೀದಿಗೆ ಬರದೇ ಇರುವರಾ?! ನಮ್ಮ ಹುಡುಗರು ಆ ಹುಡುಗಿಯರನ್ನು ನೋಡಲಿಕ್ಕೆ ಅಂತ ಅಷ್ಟ ಮಠದ ಕಟ್ಟೆಯ ಮೇಲೆ ಒಂದೊಂದು ಖಾಯಂ ಜಾಗ ಮಾಡಿಕೊಂಡಿರುತ್ತಿದ್ದರು. ಆ ಹುಡುಗಿಯರಿಗೂ ಇವರು ಲೈನ್ ಹಾಕುವುದು, ಕಿಚಾಯಿಸುವುದು ಎಲ್ಲವೂ ಗೊತ್ತಿರುತ್ತಿತ್ತು(ಇದು ಸಕ್ಸಸ್ ಆಗಿ ರಿಯಲ್ ಲವ್ ಆಗಿದ್ದು ಬೆರಳೆಣಿಕಯಷ್ಟು ಮಾತ್ರ)ಪ್ರತಿದಿನ ಸಂಜೆ ಎಲ್ಲ ಮಠಗಳು ಎದುರು ಒಂದಷ್ಟು ಹುಡುಗರು ಈ ರೀತಿ ನೋಡಲು ಸಿಗುತ್ತಿದ್ದರು. ನಮಗೆಲ್ಲ ಈ ಹುಡುಗ-ಹುಡುಗಿಯರ ಸಂಜ್ಞೆಯ ಸಂಭಾಷಣೆ ನೋಡುವುದೇ ಖುಷಿ. ಯಾಕಂದ್ರೆ ನನ್ನ ಹುಡುಗಿ ಇದ್ದಿದ್ದು ರಥಬೀದಿಯಿಂದ ೨೦ ಕಿಲೋಮೀಟರ್ ದೂರದಲ್ಲಿ! ಆಕೆ ಒಂದು ದಿನವೂ ರಥಬೀದಿಗೆ ಬಂದಿದ್ದನ್ನು ನಾ ಕಾಣಲಿಲ್ಲ!!!
ಕೊಂಕಣಿ-ಮಾಧ್ವ, ಹುಡುಗಿ-ಪೆಟ್ಟು…ಉಡುಪಿಯೆಂದರೆ ಇವಿಷ್ಟೇನಾ? ಖಂಡಿತ ಇಲ್ಲ. ಇದರಾಚೆಗಿನ ಉಡುಪಿ ಸಾಕಷ್ಟಿದೆ ಮತ್ತು ಸುಂದರವಾಗಿದೆ. ವಿದ್ಯಾರ್ಥಿ ಜೀವನವೇ ಒಂದು ರೀತಿಯಲ್ಲಿ ಬದುಕಿನ ಸುವರ್ಣಯುಗ. ಮದುವೆಯಾಗಿ, ಲೈಫ್ನಲ್ಲೊಂದು ಹೆಂಡ್ತಿ ಬಂದು, ದಿನ ನಿತ್ಯದ ಜಂಜಾಟದ ನಡುವೆ ಮನಸ್ಸಿಗೇನಾದ್ರು ಒಂಚೂರು ರಿಲ್ಯಾಕ್ಸ್ ನೀಡುವುದು ಅಂತಿದ್ದರೆ, ಈ ದಿನಗಳ ನೆನಪು ಮಾತ್ರ.
ಉಡುಪಿಯ ಸೊಳ್ಳೆ ಮತ್ತು ಜನರ ಬಗ್ಗೆ ಹೇಳಲೇ ಬೇಕು. ಇಲ್ಲಿ ಅತ್ಯಂತ ಉಪದ್ರವಿ ಎಂದರೆ ಸೊಳ್ಳೆಗಳು. ಇಲ್ಲಿನ ಸೆಕೆಗೋ ಅಥವಾ ನಗರಸಭೆಯ ಅಸಡ್ಡೆಯಿಂದಾದ ಕೊಳಕಿಗೋ ಉಡುಪಿಯಲ್ಲಿ ವಿಪರೀತ ಸೊಳ್ಳೆ. ನಿಮಗೆ ಉಡುಪಿಗೆ ಕಾಲಿಟ್ಟ ತಕ್ಷಣ ಭಯ ಹುಟ್ಟಿಸುವ ಸಂಗತಿಯೆಂದರೆ ಇಲ್ಲಿನ ’ಆನೆಕಾಲು ರೋಗ’ ಪೀಡಿತರು. ಅವರ ಕಾಲನ್ನೊಮ್ಮೆ ನೀವು ನೋಡಿದ್ರೆ ಖಂಡಿತಾ ಉಡುಪಿಯಲ್ಲಿ ಇರೋದು ಬೇಡ ಅನ್ನಿಸುತ್ತೆ. ಎದೆ ಝಲ್ ಅನ್ನಿಸುತ್ತೆ. ಅದನ್ನು ಬಿಟ್ಟರೆ, ಉಡುಪಿಯಲ್ಲಿದ್ದು ವರ್ಷಕ್ಕೊಮ್ಮೆ ಮಲೇರಿಯಾ ಬರಲಿಲ್ಲ ಅಂದ್ರೆ ಆ ವ್ಯಕ್ತಿಯ ಹುಟ್ಟಿನಲ್ಲೇ ಏನೋ ದೋಷವಿದೆ ಎಂದರ್ಥ! ಅಷ್ಟರ ಮಟ್ಟಿಗೆ ಸೊಳ್ಳೆಗಳು ಈ ಅವಳಿ ನಗರವನ್ನು ಆಳುತ್ತವೆ.
ಅತ್ಯಂತ ನಿರುಪದ್ರವಿಗಳೆಂದರೆ ಇಲ್ಲಿನ ಜನ. ನಮ್ಮ ಅದಮಾರು ಮಠದಿಂದ ಪಿಪಿಸಿಗೆ ಸುಮಾರು ೫ ನಿಮಿಷದ ಹಾದಿ. ಆ ಹಾದಿ ಒಂಥರ ಕೊಂಕಣಿ ಓಣಿ. ಜಪಾನ್ ಸೂರ್ಯ ಮುಳಗದ ನಾಡಂತೆ. ಹಾಗೆ ಈ ಗಲ್ಲಿ ಸೂರ್ಯಕಿರಣ ಮನೆಯೊಳಗೆ ಪ್ರವೇಶಿಸದ ನಾಡು! ಈ ಮನೆಗಳ ಬಾಗಿಲು ತೆರೆಯುವುದು ಬಹುಶಃ ನವರಾತ್ರಿ ಶಾರಾದದೇವಿ ಉತ್ಸವವಂದು ಮಾತ್ರ. ಮಿಕ್ಕ ದಿನಗಳಲ್ಲಿ ಆ ಮನೆಗಳಲ್ಲಿ ಜನ ಇದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಬಹುಶಃ ಇಲ್ಲಿನ ಜನ ಜೀವನ ಪೂರ್ತಿ ದುಡ್ಡು ಉಳಿಸಿ ಮದ್ವೆಗೆ ಖರ್ಚು ಮಾಡುತ್ತಾರೇನೋ ಎಂದು ಎಷ್ಟೋ ಸಲ ನನಗನ್ನಿಸಿದ್ದಿದೆ. ಹಾಗೆ ಮಾಡಿದ ಮದ್ವೆಯಲ್ಲಿ ಇವತ್ತಿನಂತೆ ಡೈವರ್ಸ್ ಆಗದಿದ್ದರೆ, ಮದ್ವೆ ಮಾಡಿದವ ಅಪ್ಪ-ಅಮ್ಮ ಬಚಾವ್. ಇಲ್ಲವಾದ್ರೆ ಜೀವನ ಪೂರ್ತಿ ಮಾಡಿದ ಸೇವಿಂಗ್ ಯಜ್ಞ ’ಸ್ವಾಹಾ!’
ಏಕಾದಶಿ, ಜೀವನದ ಹಸಿವನ್ನೆಲ್ಲ ನೀಗಿಸುವ ದಿನ. ಯಾಕಂದ್ರೆ ಏಕಾದಶಿ ದಿನ ಕೃಷ್ಣ ಮಠದಲ್ಲಿ ಊಟವಿಲ್ಲ. ಆವತ್ತು ನಾವೆಲ್ಲ ಜೈಲಿನಿಂದ ಬಿಡುಗಡೆಯಾದ ಹಕ್ಕಿಯಂತೆ. ಒಂದು ಗುಟುಕಿನಲ್ಲಿ ೨೦-೩೦ ಚಪಾತಿ ತಿಂದು ಕಾಮತ್ ಹೊಟೇಲ್ನ ಅನ್ಲಿಮಿಟೆಡ್ ಊಟಕ್ಕೆ ಕತ್ತರಿ ಹಾಕಿಸಿದ ಶಾಪ ಖಂಡಿತ ಇವತ್ತಿಗೂ ನಮ್ಮ ಮೇಲಿದೆ! ಕಿದಿಯೂರು, ಮಿತ್ರಸಮಾಜ, ರಥಬೀದಿಯ ಆಚಾರ್ಯ ದರ್ಶಿನಿ ಮರೆಯಲಾಗದ ಬುತ್ತಿಗಳು.
ಊಹುಂ, ಉಡುಪಿಯೆಂದರೆ ಇವಿಷ್ಟೆ ಅಲ್ಲ. ಈ ಕಥೆಯೂ ಕರಾವಳಿ ಜನರ ’ಉದಯವಾಣಿ ಪತ್ರಿಕೆ ಇದ್ಹಂಗೆ! ಇಲ್ಲಿನ ಜನಕ್ಕೆ ಉದಯವಾಣಿ ಪತ್ರಿಕೆ ಇಲ್ಲದೆ ಖಂಡಿತ ಇವತ್ತಿಗೂ ಬೆಳಗಾಗುವುದಿಲ್ಲ. ಇದ್ನೆಲ್ಲ ಹೇಳಲು ಕುಳಿತರೆ ಪದಗಳು ಸಿಗೋದಿಲ್ಲ. ಸಮುದ್ರದ ನೀರಿನಂತೆ ಮೊಗೆದಷ್ಟು ಮುಗಿಯದ ಈ ನಗರಿಯಲ್ಲಿ ರಥಬೀದಿಯ ಉತ್ಸವ ನನ್ನಂಥವನ ಪಾಲಿಗೆ ಸದಾ ಕಣ್ಣಂಚಿನಲ್ಲಿ ಉಳಿಯುತ್ತೆ…
ಉಡುಪಿಯೆಂಬ ಆನೆಕಾಲಿನಂಥ ಊರಲ್ಲಿ…!
ಆಗಷ್ಟ್ 17, 2015 aksharavihaara ಮೂಲಕ
ಮಲೆನಾಡಿಗನಾಗಿ ಉಡುಪಿಯೆಂಬ ಕರಾವಳಿಯ ಚಿತ್ರಾಂಗದೆಯ ಬಗ್ಗೆ ಮನಮೋಹಕವಾಗಿ ಬರೆದಿದ್ದೀರಿ! ಉಡುಪಿ ನನ್ನೂರು. ಮರಿದುಂಬಿಯಾಗಿ ಬರುವೆ ಬನವಾಸಿಗೆ ಎಂದನಂತೆ ಪಂಪ. ನಾನೋ, ಬಂಟಕಲ್ಲಿನ ಮಲ್ಲಿಗೆಯಾದರೂ ಸೈ, ಮಠಗಳ ಕತ್ತಲಲ್ಲಿ ಓಡಾಡುವ ಕಳ್ಳಬೆಕ್ಕಾದರೂ ಸೈ, ಮಲ್ಪೆಯ ಕಡಲ ಬಂಗುಡೆ ಮೀನಾದರೂ ಸೈ; ಮತ್ತೆ ಉಡುಪಿಯಲ್ಲೇ ಜನ್ಮವೆತ್ತುವವನು 🙂
ಸುಂದರ ನೆನಪಿನ ಪಯಣ
ಪರ್ಯಾಯದ ಮುನ್ನಾದಿನದ ರಾತ್ರಿ ಪುರಾ ತಿರುಗಾಟ, ಲಕ್ಷದೀಪ ಇದರ ಬಗ್ಗೆ ಇನ್ನೂ ಬರೆಯಿರಿ ……
ಮಧುರವಾಗಿದೆ 🙂
Beauty kaNo… sakhath baradde. innond swalpa fine-tune maaDi yavdaadru pathrikege kaLslaagitthalo paapi..
Very neatly written. Reminded me of my college days as we both belong to the same class. Would have been good had you mentioned about the yakshagana