’ಕಾನ್ವೆಂಟ್ ಮೆಟ್ಟಿಲು ಹತ್ತಿದ್ರೆ ಮಾತ್ರ ಬುದ್ಧಿವಂತರಾಗೋದು, ಸರ್ಕಾರಿ ಶಾಲೆಯಲ್ಲಿ ಓದಿದ್ರೆ ದಡ್ಡರಾಗ್ತಾರೆ’ ಎಂಬ ಕುರಿತು ಆಗಾಗ ಚರ್ಚೆ ಆಗುತ್ತಿರುತ್ತದೆ. ’ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತವರು ಮಾತ್ರ ಜಾಣರು. ಅವರು ಮಾತ್ರ ಬದುಕಬಲ್ಲರು ಎಂಬ ಭಾವನೆ ನಮ್ಮಲ್ಲಿ ಗಟ್ಟಿಯಾಗಿ ಬೇರೂರಿದೆ. ನವೆಂಬರ್ ಮಾಸದಲ್ಲಂತು ಅದ್ರ ಕುರಿತು ಭರ್ಜರಿ ಚರ್ಚೆ, ಜಾಗೃತಿ ಎಲ್ಲವೂ ಜೀವಂತ. ಆದ್ರೆ ಇಲ್ಲೊಬ್ಬರು ಕನ್ನಡ-ಇಂಗ್ಲೀಷು ಯಾವ ಶಾಲೆಯ ಮೆಟ್ಟಿಲನ್ನು ಹತ್ತದೇ ಎಲ್ಲರಿಗಿಂತ ಬುದ್ಧಿವಂತರೆನಿಸಿದ್ದಾರೆ!
ಬಿಟ್ಬಿಡ್ರೊ ಯಪ್ಪಾ ನಮ್ಮನ್ನ ಬದುಕಾಕ
ಬದುಕ್ತೀವಿ ನಾವ್ಹೀಗೆ ನಮ್ಮಷ್ಟಕ್ಕ
ಕಪ್ಪೆ ಹಿಡಿದು ನುಂಗಿಂದಂಗ ಹಾವ
ನುಂಗಾಕ ಹತ್ತೀರ ಒಳ್ಳೆಯವರ ಜೀವ
ಕೋಳಿಪೀಳಿ ತಿಂದ್ಹಂಗ ಬೆಕ್ಕು ಹಿಡಿದುಕೊಂಡು
ತಿಂತೀರಾ ಒಳ್ಳೆಯವರನ್ನ ಬಡ್ಬಡಿದುಕೊಂಡು
ಬಿಟ್ಬಿಡ್ರೊ ಯಪ್ಪಾ ನಮ್ಮನ್ನ ಬದುಕಾಕ
ಬದುಕ್ತೀವಿ ನಾವೀಗ ನಮ್ಮಷ್ಟಕ್ಕ
ನಿಮ್ಮ ಪಲ್ಲಕ್ಕಿ ಹೊತ್ತವರ ಮರಳರಂತಾ
ಉರಿದು ನೆಲದಲ್ಲಿ ಹೊಂಟಿರಪ್ಪ ಮ್ಯಾಲ್ ಕುಂತಾ
ನೊಂದ ಬೆಂದ ಜನ ಒಮ್ಮೆ ರೊಚ್ಚಿಗೆದ್ದಾರ
ಊರುಬಿಟ್ಟ ಓಡ್ತೀರಾ ಹೊರಳಿ ನಿಂತರಾ…
ಪಕ್ಕಾ ಉತ್ತರ ಕರ್ನಾಟಕದ ಶೈಲಿಯ ಈ ಕವಿತೆಯನ್ನು ಅ,ಆ,ಇ,ಈ ಗೊತ್ತಿಲ್ಲದ, ಒಂದು ಎರಡು ಎಣಿಸಲು ಬರದ ಓರ್ವ ಅನಕ್ಷರಸ್ಥ ಬರೆದಿದ್ದು ಎಂದರೆ ನಂಬಲಿಕ್ಕೆ ಕಷ್ಟವಾಗಬಹುದು. ಅಥವ ಒಂದೇ ಕವಿತೆಗೆ ಅವರ ಪಾಂಡಿತ್ಯ ಮುಗಿದು ಹೋಗಿದ್ದರೆ ಅವರೇನು ಮಹಾ ಬಿಡಿ ಎನ್ನಬಹುದಿತ್ತು. ಆದ್ರೆ ಬಿಜಾಪುರ ಜಿಲ್ಲೆಯ ಬೀಳಗಿಯ ಅನಕ್ಷರಸ್ಥ ರೈತ ಸಿದ್ದಪ್ಪ ಸಾಬಣ್ಣ ಬಿದ್ರಿ ಇಂಥ ಸಾವಿರಾರು ಕವಿತೆಗಳನ್ನು ರಚಿಸಿದ್ದಾರೆ. ಈಗ್ಲೂ ಅವರಿಗೆ ಓದಲು ಬರುವುದಿಲ್ಲ. ಅ,ಆ,ಇ,ಈ ಜ್ಞಾನವಿಲ್ಲ. ಹಾಗಾದ್ರೆ ಇದೆಲ್ಲ ಹೇಗೆ ಸಾಧ್ಯವಾಯ್ತು ಎಂಬ ಪ್ರಶ್ನೆ ಏಳಬಹುದು.
ಇದೀಗ ತಾನೆ ಪರಿಸರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಶಿವಾನಂದ ಕಳವೆಯವರು ಈ ಅನಕ್ಷರಸ್ಥ ಪ್ರತಿಭೆಯನ್ನು ಹುಡುಕಿ ತಂದಿದ್ದರು. ಕಳವೆಯ ಕಾನ್ಮನೆಯ ಸಮಾರಂಭವೊಂದರಲ್ಲಿ ನೆಲಮೂಲದ ಮಂದಿಯನ್ನು ಪರಿಚಯಿಸಲು ಹೊರಟ ಕಳವೆಯವರಿಗೆ ಕಂಡಿದ್ದು ಇದೇ ಸಿದ್ದಪ್ಪ ಬಿದ್ರಿ. ಆವತ್ತು ಸಿದ್ದಪ್ಪನವರ ಕವಿತೆ ಜೊತೆಗೆ ಮಾತುಕತೆಯಿತ್ತು. ಉತ್ತರ ಕರ್ನಾಟಕದ ಭಾಷೆಯಲ್ಲಿ ನೂರಾರು ಕವಿತೆಗಳನ್ನು ಹೇಳುವ ಸಿದ್ದಪ್ಪ ಮೊದಲಿಗೆ ಆಶ್ಚರ್ಯದ ವ್ಯಕ್ತಿ ಅನ್ನಿಸಲಿಲ್ಲ. ಆದ್ರೆ ಅವರ ಕಥೆ ಕೇಳಲು ಕುಳಿತಾಗ ಮೈ ಜುಂ ಅಂದಿತ್ತು.
೫೮ ವರ್ಷದ ಸಿದ್ದಪ್ಪ ಶಾಲೆಗೆ ಹೋಗಿದ್ದು ೮ ದಿನ ಮಾತ್ರ. ಒಮ್ಮೆ ಅವರು ಶಾಲೆಗೆ ಹೋದಾಗ, ಅಲ್ಲಿ ಮಾಸ್ತರ್ ಹುಡುಗನೊಬ್ಬನಿಗೆ ಹೊಡೆಯುತ್ತಿದ್ದರಂತೆ. ಅದನ್ನು ಕಂಡು ಹೆದರಿದ ಸಿದ್ದಪ್ಪ ಪಾಠಿಚೀಲ ಹಾಕಿಕೊಂಡು ನೇರವಾಗಿ ನಡೆದಿದ್ದು ಹೊಲಕ್ಕೆ. ಕುರಿ ಕಾಯುವ ಕೆಲಸಕ್ಕೆ. ಅಲ್ಲಿಂದ ನಂತರ ಸಿದ್ದಪ್ಪನ ಬದುಕು ಹೊಲ, ಕುರಿ ಇಷ್ಟಕ್ಕೆ ಸೀಮಿತವಾಯ್ತು.
ಹೀಗೆ ೨೦ ವರ್ಷಗಳ ಹೊಲದಲ್ಲಿ ಒಂಟಿಯಾಗಿ ಕುರಿಗಳ ಜೊತೆ ಮಾತಾಡುತ್ತಾ, ಆಡುತ್ತಾ ಜೀವನ ಸಾಗಿಸುತ್ತಿದ್ದ ಸಿದ್ದಪ್ಪ ೨೦ ವರ್ಷದ ಬಳಿಕ ಕವನ ಕಟ್ಟಲು ಆರಂಭಿಸುತ್ತಾರೆ. ೧೯೮೬ರಲ್ಲಿ ಅವರು ಮೊದಲ ಕವನ ರಚಿಸಿದ್ದಂತೆ. ಸಿದ್ದಪ್ಪ ಅವರ ಕವನ ರಚನೆಯ ಕಥೆ ಬಹಳ ಮಜವಾಗಿದೆ. ಅವರು ಹೊಲದಲ್ಲಿ ಕುಳಿತಾಗ ಅವರಿಗೊಂದು ಕವಿತೆ ಹೊಳೆಯುತ್ತದೆ. ಹಾಗಂತ ಅವರಿಗೆ ಪದಗಳ ಪರಿಚಯವಿಲ್ಲ. ಶಬ್ದಗಳ ಜೋಡಣೆಗೆ ಕನ್ನಡದಲ್ಲಿ ಎಷ್ಟು ಅಕ್ಷರಗಳಿವೆ, ಯಾವ್ಯಾವ ಅಕ್ಷರಗಳಿವೆ ಎಂಬುದು ಅವರಿಗೆ ಗೊತ್ತಿಲ್ಲ. ಹೊಳೆದ ಕವಿತೆಯೊಂದಿಗೆ ಹೊಲದಿಂದ ಊರಿಗೆ ಓಡಿಬರುತ್ತಾರೆ. ಅಲ್ಲಿ ಅಕ್ಷರ ಬಲ್ಲವರಿಗಾಗಿ ಹುಡುಕಾಡುತ್ತಾರೆ. ಹೀಗೆ ಓಡಿಬಂದು ತಂದ ಸಿದ್ದಪ್ಪ ಕವಿತೆಗಳನ್ನು ಮೊದಲಿಗೆ ಅಕ್ಷರ ರೂಪಕ್ಕೆ ಇಳಿಸಿದ್ದು ರಜಿಯಾ ಸುಲ್ತಾನ್ ಎಂಬ ಹುಡುಗಿ. ಹೊಳೆದ ಕವಿತೆಗಳನ್ನು ಸಿದ್ದಪ್ಪ ರಜಿಯಾ ಬಳಿ ಹೇಳುತ್ತಿದ್ದರು. ಆಕೆ ಅದನ್ನು ಬರೆದುಕೊಡುತ್ತಿದ್ದಳು. ಹಾಗಂತ ಆಕೆ ಬರೆದ ಕವಿತೆಯನ್ನು ಓದುವ, ಅದರಲ್ಲಿ ತಿದ್ದುಪಡಿ ಮಾಡಿ ಸರಿ-ತಪ್ಪು ವಿಮರ್ಶಿಸುವ ಭಾಗ್ಯ ಸಿದ್ದಪ್ಪನಿಗಿಲ್ಲ. ಯಾಕಂದ್ರೆ ಅವರಿಗೆ ಓದಲು ಬರುವುದಿಲ್ಲ.
ರಜಿಯಾ ಮದುವೆಯಾಗಿ ಹೋದ ಬಳಿಕ ಅವರಿವರ ಬಳಿ ಸಿದ್ದಪ್ಪ ಕವನ ಬರೆಸಿದರು. ಹೀಗೆ ಬರೆಸಿ ಬರೆಸಿ ಇವತ್ತು ೨೪ ಕವಿತೆ ಸಂಕಲನಗಳು ಸಿದ್ದಪ್ಪನವರಿಂದ ಪ್ರಕಟವಾಗಿದೆ.
’ಸರ್ ಈಗೀಗ ಮರೆವು ಜಾಸ್ತಿರಿ. ಒಂದು ಸಲ ಹೊಳೆದ ಕವನ ಇವತ್ತಿಗೂ ನೆನಪು ಅದಾರಿ. ಕೆಲವೊಂದು ಮರೆತು ಹೋಗದ. ಆದ್ರೂ ನೀವು ಪುಸ್ತಕ ನೋಡಿ ಒಂದೆರಡು ಸಾಲು ಹೇಳಿದ್ರೆ ಉಳಿದ ಸಾಲುಗಳು ಮತ್ತೆ ನೆನಪ್ ಆಗ್ತದ’ ಎನ್ನುವ ಸಿದ್ದಪ್ಪ ತಾವು ೧೮ ವರ್ಷದ ಹಿಂದೆ ಗೀಚಿದ ಕವನವನ್ನು ಈಗಲೂ ಹೇಳುತ್ತಾರೆ. ತಮ್ಮ ೨೪ ಪುಸ್ತಕಗಳಲ್ಲಿ ಇರುವ ೧೦೦೦ಕ್ಕೂ ಅಧಿಕ ಕವನದಲ್ಲಿ ಸುಮಾರು ೭೦೦-೮೦೦ ಕವನಗಳು ಸಿದ್ದಪ್ಪನವರ ಬಾಯಲ್ಲಿದೆ.
ಸಿದ್ದಪ್ಪ ಎಷ್ಟು ಅನಕ್ಷರಸ್ಥ ಎಂದರೆ, ತಾವು ಬರೆದ ಪುಸ್ತಕಗಳನ್ನು ಮಾರಾಟಕ್ಕೆ ತರುತ್ತಾರೆ. ಯಾರೋ ಅವರ ೪ ಪುಸ್ತಕ ಖರೀದಿಸಿ ೩೫೦ ರೂ. ಕೊಟ್ಟರು. ’ಸರ್ ಅಷ್ಟ್ ರೊಕ್ಕ ಯಾಕ್ ಕೊಡಾಕ್ ಹತ್ತೀರಿ?’ ಇದು ಸಿದ್ದಪ್ಪನವರ ಬಾಯಿಂದ ಬಂದ ಮಾತು. ’ಲೆಕ್ಕ ಮಾಡಿದ್ರೆ ಇಷ್ಟ ಆಗುತ್ತೆ’ ಅಂದ್ರು ಅವರು. ಅಂದ್ರೆ, ಎಷ್ಟು ಪುಸ್ತಕಕ್ಕೆ ಎಷ್ಟು ಬೆಲೆಯಾಯ್ತು ಎಂಬುದು ಸಿದ್ದಪ್ಪನಿಗೆ ತಿಳಿದಿಲ್ಲ.
ಇವರಿಗೆ ಎಲ್ಲಿಯೇ ಕವನ ಹೊಳೆಯಲಿ, ಅಲ್ಲಿ ಇರುವವರ ಬಳಿ ತಮ್ಮ ಕವನವನ್ನು ಅಕ್ಷರ ರೂಪಕ್ಕೆ ಇಳಿಸಿಕೊಳ್ಳುತ್ತಾರೆ. ’ಡಾಕ್ಟರ್, ಲಾಯರ್ ಎಲ್ಲ ನನ್ನ ಕವನ ಬರೆದಾರ್ರಿ. ನೂರಾರು ಕವಿತೆ ಹೊಳಿತಾವೆ. ಒಳ್ಳೆ ಕವಿತೆ ಮನಸ್ಸಿನಲ್ಲಿ ಉಳಿಯುತ್ತೆ. ವಿಧಾನಸೌಧದಲ್ಲಿ ಬಿಜಾಪುರದ ಎಂಎಲ್ಸಿಯೊಬ್ಬರು ಇದ್ದರು. ಅವರ ಬಳಿ ಕವನ ಬರೆಸಿದೀನ್ರಿ. ಬೆಂಗಳೂರು ರೈಲ್ವೆ ಸ್ಟೇಷನ್, ಮೈಸೂರಿನಲ್ಲಿ ಕವಿತೆ ಹೊಳೆದಿದ್ದು ಇದೆ’ ಎಂದು ನಗುತ್ತಾರೆ ಸಿದ್ದಪ್ಪ.
ಹಾಗಂತ ಸಿದ್ದಪ್ಪನವ್ರ ಬದುಕು ಖಂಡಿತ ಹೂವಿನ ಹಾಸಿಗೆಯಲ್ಲ. ತುತ್ತು ಅನ್ನಕ್ಕೆ ಕಷ್ಟಪಟ್ಟಿದ್ದಾರೆ.
ಇವರಿಗೆ ೪ ಎಕರೆ ಹೊಲವಿದೆ. ಜೋಳ, ಗೋಧಿ, ಸೂರ್ಯಕಾಂತಿ ಬೆಳೆಯುತ್ತಾರೆ. ಬರಡು ಭೂಮಿಯಲ್ಲಿ ಬೆಳೆ ನಂಬಿಕೊಳ್ಳುವಂತಿಲ್ಲ. ಸಿನಿಮಾ ನೋಡೋದು, ನಾಟಕ ನೋಡೋ ಹುಚ್ಚು. ರಾಜ್ಕುಮಾರ್, ಪಿ.ಬಿ.ಶ್ರೀನಿವಾಸ್ ಹಾಡುಗಳನ್ನು ಕೇಳಿಕೊಂಡು ಬೆಳೆದರು. ಇವರಿಗೆ ಈ ಶಬ್ಧಕ್ಕೆ ಇದೇ ಅರ್ಥ ಎಂಬುದು ನಿತ್ಯದ ಮಾತುಗಳಿಂದ ಮಾತ್ರ ತಿಳಿಯುತ್ತದೆ.
ಬಾಳ್ ಶಾಣ್ಯರಪ್ಪ
ನೀವ್ ಬಾಳ್ ಶಾಣ್ಯರು
ದುಡಿದವ್ರು ತಿಂದು ಗಪ್ಪನೆ ಕುಂತವ್ರು
ಬಾಹುಬೆಕ್ಕಿನಂತವ್ರು
ಬಾಳ್ ಶಾಣ್ಯರಪ್ಪ
ನೀವ್ ಬಾಳ್ ಶಾಣ್ಯರು
ದುಡಿಲಾರದ ದುಡಿದವರ ಗಂಟು ಹುಡುಕವರು
ಕಾಣದ್ಹಂಗ ಗಂಟು ನುಂಗಿ ಗಪ್ಪನೆ ಕುಂತವ್ರು
ಬಾಳ್ ಶಾಣ್ಯರಪ್ಪ
ನೀವ್ ಬಾಳ್ ಶಾಣ್ಯರು
ಸಿದ್ದಪ್ಪ ಅವರಿಗೆ ತಾನು ದಡ್ಡ ಭಾವನೆ ತುಂಬಾ ಇದೆ. ಹೀಗಾಗಿ ಬುದ್ಧಿವಂತರು, ಶಾಣ್ಯರ ಕುರಿತು ತುಂಬಾ ಕವಿತೆ ಬರೆದಿದ್ದಾರೆ. ೯ ಜನ ಮಕ್ಕಳಲ್ಲಿ ಇವರು ದೊಡ್ಡವರು. ಮನೆಯವರು ಸಿದ್ದಪ್ಪ ನಾಟಕ, ಸಿನಿಮಾ ನೋಡಿಕೊಂಡು ತಿರುಗುತ್ತಾನೆ ಅಂತಾ ಮದ್ವೆ ಮಾಡಿ ಮನೆಯಿಂದ ಹೊರ ಹಾಕಿದ್ರು. ಆಗ ಒಂದು ಹೊತ್ತಿನ ಊಟಕ್ಕೆ ಅಲೆದಾಡಿದ್ರು.
೧೯೯೦ರಲ್ಲಿ ಬರಗಾಲ ಬಿದ್ದಾಗ ಇವರ ’ಹೊಳೆಸಾಲು ಹೋರಿ’ ಪುಸ್ತಕ ಪ್ರಿಂಟ್ ಆಗಿತ್ತು. ಆಗ ಮನೆಯಲ್ಲಿ ತಿನ್ನಲು ಅನ್ನ ಇರಲಿಲ್ಲ. ಆಗ ಶಿಕ್ಷಣ ಇಲಾಖೆಯವರು ಈ ಪುಸ್ತಕ ಖರೀದಿಸಿ ಅನ್ನ ಕೊಟ್ಟರು ಎನ್ನುತ್ತಾರೆ ಸಿದ್ದಪ್ಪ. ಇವರ ಎಲ್ಲ ಪುಸ್ತಕಗಳನ್ನು ಯಾರ್ಯಾರೋ ಪ್ರಿಂಟ್ ಮಾಡಿಸಿದ್ದಾರೆ. ಖ್ಯಾತನಾಮರಿಂದ ಪುಸ್ತಕಕ್ಕೆ ಮುನ್ನುಡಿ ಬರೆಸಿದ್ದಾರೆ. ಹೀಗೆ ದಾನಿಗಳಿಂದ ಪುಸ್ತಕ ಪ್ರಿಂಟ್ ಮಾಡಿಸಿ ಸಿದ್ದಪ್ಪ ತಮ್ಮ ಬದುಕು ಕಂಡುಕೊಂಡಿದ್ದಾರೆ. ಹಾಗಂತ ಇವರಿಗೆ ಕವಿತೆ ಮಾರಾಟದ ಸರಕಲ್ಲ. ತೀರಾ ಪುಸ್ತಕ, ಪ್ರಶಸ್ತಿ ಯಾವುದರ ಹುಚ್ಚೂ ಇಲ್ಲ. ಅದೆಲ್ಲ ಶಾಣ್ಯರಿಗೆ ಮೀಸಲು ಎಂಬುದು ಇವರ ಭಾವನೆ! ಊರೂರು ಅಲೆದು ಕಾರ್ಯಕ್ರಮಗಳಲ್ಲಿ ತಮ್ಮ ಕವಿತೆ ಹೇಳಿ, ಮಾತಾಡುವ ಸಿದ್ದಪ್ಪ ಅದ್ರಲ್ಲೇ ಖುಷಿ ಕಂಡುಕೊಂಡಿದ್ದಾರೆ. ನಿಮಗೂ ಸಿದ್ದಪ್ಪ ಬಿದ್ರಿ ಬಳಿ ಮಾತಾಡಬೇಕು ಅನ್ನಿಸಿದ್ರೆ ೯೬೧೧೩೭೪೦೫೩ ನಂಬರ್ನಲ್ಲಿ ಸಿಗ್ತಾರೆ.
(ಬೇಸರದ ವಿಷಯ ಅಂದ್ರೆ ಇದನ್ನು ಕನ್ನಡ ನಾಡಿನ ಎರಡು ಗಣ್ಯ ಪತ್ರಿಕೆಗಳಿಗೆ ಕಳುಹಿಸಿದ್ದೆ. ಆದ್ರೆ ಎರಡು ಕಡೆ ಪ್ರಕಟಣೆಗೆ ಅಯೋಗ್ಯವಾಗಿದೆ! ಇಂಥ ವ್ಯಕ್ತಿಯನ್ನು ನಮ್ಮ ಮಾಧ್ಯಮಗಳು ಗುರುತಿಸಬೇಕಿತ್ತು ಅನ್ನೋದಷ್ಟೆ ನನ್ನ ಕಾಳಜಿ. ಇದೇ ವ್ಯಕ್ತಿಗೆ ಸನ್ಮಾನ ಮಾಡಿದ ಫೋಟೊ ಪತ್ರಿಕೆಯೊಂದರಲ್ಲಿ ಬಂದಿತ್ತು!)
ಅದ್ಭುತ. ಈ ಲೇಖನ ಎಲ್ಲಾ ಕಡೆ ಪಸರಿಸಲಿ!
ಹಾಲಿವುಡ್ ಡಾಕ್ಯುಮೆ೦ಟರಿ ಯವರನ್ನು ಕರೆಸಿದ್ರೆ ಚ೦ದದ ಚಿತ್ರ ಮಾಡುತ್ತಿದ್ದರು. ನಮ್ಮ ಜನರಿಗೆ ಅಪ್ರಿಷಿಯೇಷನ್ ಅನ್ನೋದು ತಿಳಿದೇ ಇಲ್ಲ.