ಇವತ್ತು ಸಂಪರ್ಕ ಕೊಂಡಿಗಳು ದೊಡ್ಡದಾಗಿವೆ, ಎಲ್ಲೆಲ್ಲಿ ಏನೇನು ನಡೀತಿದೆ ಅನ್ನೋದು ಮಾಧ್ಯಮದಿಂದ ಹೊರತಾಗಿ ಅನೇಕ ಬಗೆಗಳಿಂದ ಗೊತ್ತಾಗುತ್ತದೆ. ಜೊತೆಗೆ ಎಲ್ಲಿಲ್ಲದ ಸ್ಪರ್ಧೆ. ಹೀಗಾಗಿ ಕಳೆದ ೫ ವರ್ಷಗಳಲ್ಲಿ ಕನ್ನಡ ಮಾಧ್ಯಮ ಜಗತ್ತು ತುಂಬಾ ಬದಲಾಗಿದೆ. ಮೊನ್ನೆ ವಿಶ್ವೇಶ್ವರ ಭಟ್ಟರು ಬದಲಾದ ಪತ್ರಿಕೋದ್ಯಮವನ್ನು ಸಂಭ್ರಮಿಸುವ ಬಗ್ಗೆ ಒಂದು ಲೇಖನ ಬರೆದಿದ್ದರು. ಅದರ ಬೆನ್ನಲ್ಲೇ ಗೆಳೆಯ ವಿಕಾಸ್ ನೇಗಿಲೋಣಿ ಹಳ್ಳಿಗಳು ವ್ಯಾಪಾರಿ ಸರಕಾಗುತ್ತಿರುವ ಕುರಿತು ಒಂದು ಚೆಂದದ ಬರಹ ಬರೆದಿದ್ದರು. ಅಲ್ಲಿ ಹೇಳದೆ ಅಳಿದುಳಿದಿರುವುದನ್ನು ಅಳುಕುನಿಂದಲೇ ಹೇಳುವ ಪ್ರಯತ್ನ.
‘ಸಾರ್ ಸ್ವಲ್ಪ ನೋಡಿ ರಿವ್ಯೂ ಬರೆಯಿರಿ. ಪ್ರೊಡ್ಯೂಸರ್ ನಮ್ಮ ರೆಗ್ಯಲುರ್ ಕಸ್ಟಮರ್. ಈ ಸಲವಂತೂ ಫ್ರಂಟ್ ಪೇಜ್ ಜಾಹೀರಾತು ಕೊಟ್ಟಿದ್ದಾರೆ’ ಸಿನಿಮಾ ಚಿತ್ರಮಂದಿರದೊಳಗೆ ಕಾಲಿಡುವ ಮುನ್ನವೆ ಜಾಹೀರಾತು ವಿಭಾಗದ ಹುಡುಗ ಫೋನ್ ಮಾಡಿ ಹೇಳಿದ್ದ. ಗಟ್ಟಿಯಾಗಿ ಕುಳಿತರೆ ಖಂಡಿತ ೬ ನಿಮಿಷ ಸಿನಿಮಾ ನೋಡಲು ಸಾಧ್ಯವಿಲ್ಲ. ಹಾಗಂತ ಅದನ್ನು ವಿಮರ್ಶೆಯಲ್ಲಿ ಬರೆಯಲು ಸಾಧ್ಯವೇ ಇಲ್ಲ. ಬದುಕಿನ ಅನಿವಾರ್ಯತೆ. ಹೀಗಾಗಿ ಆ ಸಿನಿಮಾ ಅದ್ಭುತ ಎಂದು ಬರೆಯಲೇ ಬೇಕು. ನಾನು ಸಿನಿಮಾ ಕೆಟ್ಟದಾಗಿದೆ ಎಂದು ಬರೆದ್ರೆ ಅದು ಪ್ರಕಟವೇ ಆಗುವುದಿಲ್ಲ. ಬೈ ಚಾನ್ಸ್ ಪ್ರಕಟವಾಯ್ತು ಎಂದ್ರೆ ಮರುದಿನ ನಮ್ಮ ಕೆಲಸ ಹೋಗಿರುತ್ತದೆ! ಯಾಕಂದ್ರೆ ಕಂಪನಿಗೆ ಲಾಸ್ ಆಗಿದ್ದು ಬರೋಬ್ಬರಿ ೨ ಲಕ್ಷ ರೂ. ಸಿಇಒನಿಂದ ಹಿಡಿದು ಮಾಲೀಕರವರೆಗೆ ಎಲ್ಲರೂ ಕರೆದು ೨ ಲಕ್ಷ ರೂಪಾಯಿ ನಷ್ಟದ ಬಗ್ಗೆಯೆ ಮಾತಾಡುತ್ತಾರೆ ಹೊರತು ಕೆಟ್ಟ ಸಿನಿಮಾ, ಓದುಗರಿಗೆ ಮೋಸ ಮಾಡುತ್ತಿದ್ದೇವೆ ಎಂದು ಯಾರೂ ಆಲೋಚಿಸುವುದೇ ಇಲ್ಲ! ಇದು ಇವತ್ತಿನ ವ್ಯಾಪಾರಿ ಪತ್ರಿಕೋದ್ಯಮ ಸೃಷ್ಟಿಸಿರುವ ದುರಂತ ಮತ್ತು ಸೌಭಾಗ್ಯ.
ಇವತ್ತು ಒಂದು ಪತ್ರಿಕೆಗೆ ನಂಬರ್ ಒನ್ ಆಗಲು ಸಂಪಾದಕರು ಬೇಕೆ ಬೇಕು ಎಂದೇನಿಲ್ಲ ಅಂತ ನಾವು ಗೆಳೆಯರು ಹೀಗೆ ಮಾತಾಡುತ್ತಿದ್ದೆವು. ಕಾರು ಓಡಿಸುತ್ತಿದ್ದ ಹಿರಿಯ ಪತ್ರಕರ್ತರಾದ ಅರುಣ್ ಒಂದೇ ಮಾತು ಹೇಳಿದ್ರು. ‘ಒಂದು ಪತ್ರಿಕೆ ಪ್ರಿಂಟ್ ಆಗಿ ಓದುಗನ ಕೈ ಸೇರಲು ಎಷ್ಟು ರೂಪಾಯಿ ವೆಚ್ಚ ತಗುಲುತ್ತೆ ಗೊತ್ತಾ? ದಿ ಟಿಒಐ ಸ್ಟೋರಿ ಅಂತೊಂದು ಪುಸ್ತಕವಿದೆ. ಅದನ್ನು ಓದಿ’ ಅರುಣ್ ಮಾತು ಮುಗಿಸಿದ ನಂತ್ರ ನಾವು ೬ ರೂಪಾಯಿ ಇರಬಹುದು ಸಾರ್ ಅಂದ್ವಿ. ಇಲ್ಲ ೮-೯ರೂಪಾಯಿ ಖರ್ಚಾಗುತ್ತದೆ ಎಂದರು. ನಾನು ಒಂದು ಪತ್ರಿಕೆಗೆ ಜಾಹೀರಾತು ಬಲವರ್ಧನೆಗಾಗಿಯೇ ಕೆಲಸ ಮಾಡುತ್ತಿದ್ದೆ. ಆಗ ಗೊತ್ತಾಯ್ತು ಆ ಪತ್ರಿಕೆಯ ಒಂದು ಪ್ರತಿ ಪ್ರಿಂಟ್ ಆಗಲು ೧೧ರೂ. ವೆಚ್ಚವಾಗುತ್ತಿದೆ ಎಂದು!
ಓದುಗರಾದ ನಾವು ೩-೫ ರೂ.ಕೊಟ್ಟು ಪತ್ರಿಕೆ ಖರೀದಿಸುತ್ತೇವೆ. ಅಲ್ಲಿ ಎಲ್ಲ ಕಳೆದು ಮಾಲೀಕನಿಗೆ ಸಿಗುವುದು ೧.೬೦-೨ ರೂ. ಈ ಮೊತ್ತ ಏಜೆಂಟ್ಗೆ ಕೊಡುವ ಕಮಿಷನ್ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಪತ್ರಿಕೆ ಪ್ರಸರಣ ಜಾಸ್ತಿ ಆಗಬೇಕು, ನೀವು ನಂಬರ್ ಒನ್ ಆಗಲೇಬೇಕು ಅಂತೆಲ್ಲ ಇರಾದೆಯಿದ್ದರೆ ೧.೬೦-೧.೭೦ರೂ. ಗೆ ನೀವು ಪತ್ರಿಕೆ ಕೈ ಬಿಡಬೇಕು. ಮಿಕ್ಕಿದ್ದನ್ನು ಏಜೆಂಟ್ಗೆ ಕೊಡಬೇಕು. ಇಲ್ಲವಾದಲ್ಲಿ ಮತ್ತೊಂದು ಪತ್ರಿಕೆಯವನು ಏಜೆಂಟ್ಗೆ ಹೆಚ್ಚು ಕಮಿಷನ್ ಕೊಡುತ್ತಾನೆ. ಆಗ ಈ ಪತ್ರಿಕೆ ಪ್ರಸರಣ ಕುಸಿಯುತ್ತದೆ. ಜಾಹೀರಾತು ಡೌನ್ ಆಗುತ್ತದೆ. ಇದು ಮಾಲೀಕರಿಗೆ ಪ್ರತಿನಿತ್ಯದ ಹೆಣಗಾಟ.
ನಿಮ್ಮಿಂದ ಕೈಗೆ ಸೇರುವ ಹಣ ೨ ರೂ. ಅಂತಿಟ್ಟುಕೊಂಡರು, ಒಂದು ಪ್ರತಿಯಿಂದ ಬರೋಬ್ಬರಿ ೯ ರೂ. ನಷ್ಟ. ಎಷ್ಟೆ ಅಚ್ಚುಕಟ್ಟಾಗಿ ನಿರ್ವಹಿಸಿದರು(ನಿಮ್ಮದೇ ಪ್ರಿಂಟ್, ಸಾರಿಗೆ ಇತ್ಯಾದಿ ನಿಭಾಯಿಸಿದ್ರು) ೭-೮ ರೂ. ಗಿಂತ ಕಡಿಮೆ ವೆಚ್ಚದಲ್ಲಿ ಪತ್ರಿಕೆ ಪ್ರಿಂಟ್ ಹಾಕಿ ಓದುಗನ ಮನೆ ಬಾಗಿಲಿಗೆ ತಲುಪಿಸಲು ಸಾಧ್ಯವಿಲ್ಲ. ಅಂದ್ರೆ ಒಂದು ಪತ್ರಿಕೆ ಮೇಲೆ ನಷ್ಟ ಬರೋಬ್ಬರಿ ೬ ರೂ. ಇವತ್ತು ಕರ್ನಾಟಕದ ನಂಬರ್ ಒನ್ ಪತ್ರಿಕೆ ಪ್ರಸರಣ ಸಂಖ್ಯೆ ೭ ಲಕ್ಷ. ಅದನ್ನು ೬ರಿಂದ ಗುಣಿಸಿ. ಅಂದ್ರೆ ಸುಮಾರು ೪೨ ಲಕ್ಷ ರೂ ಒಂದು ದಿನದ ನಷ್ಟ! ಇದನ್ನು ಭರಿಸಬೇಕು ಅಂದ್ರೆ ಜಾಹೀರಾತಿಗೆ ಮೊರೆ ಹೋಗುವುದು ಅನಿವಾರ್ಯ. ೧೨ ಪುಟದ ತುಂಬಾ ಜಾಹೀರಾತು ಹಾಕಿದ್ರು ನನ್ನ ಪ್ರಕಾರ ಈ ಹಣ ಮರಳಿ ಪಡೆಯವುದು ಕಷ್ಟ.
ಹೀಗಾಗಿ ಜಪಾನಿ ತೈಲ, ಕಾಂಡೋಮು, ನ್ಯೂಟ್ರಿಗೇನ್, ನಿಸರ್ಗೇನ್ ಇತ್ಯಾದಿ ಜಾಹೀರಾತುಗಳಿಗೆ ಪತ್ರಿಕೆಗಳು ಮೊರೆ ಹೋಗುವುದು. ಅವೆಲ್ಲ ವರ್ಷದ ಕಾಂಟ್ರ್ಯಾಕ್ಟ್! ಪುರವಣಿಯಲ್ಲಿ ತೀರಾ ೧೦-೧೫ ಸಾವಿರ ರೂ.ಗೆ ಆ ಜಾಹೀರಾತು ಪ್ರಕಟವಾಗುತ್ತದೆ, ಅದರರ್ಥ ಮಾಲೀಕರು ೧೦-೧೫ ಸಾವಿರ ರೂಪಾಯಿ ಮರು ಆದಾಯ ಗಳಿಕೆಗೂ ಪ್ರತಿ ಸಲ ಪರದಾಟ ನಡೆಸುತ್ತಾರೆ ಎಂಬುದು ವಾಸ್ತವ.
ಸಮೀರ್ ಜೈನ್ ಬಂದ ನಂತರ ಬದಲಾದ ಟೈಮ್ಸ್ ಆಫ್ ಇಂಡಿಯಾದ ಕಥೆಯನ್ನು ಟಿಒಐ ಸ್ಟೋರಿ ಹೇಳುತ್ತೆ. ಆದ್ರೆ ಕನ್ನಡ ಪತ್ರಿಕೋದ್ಯಮ ಜಗತ್ತು ವರ್ಗಾಂತರಗೊಂಡಿದ್ದು ತೀರಾ ೨೦೦೭ರ ನಂತರ. ಯಾವಾಗ ಸುದ್ದಿವಾಹಿನಿಗಳು ಕಾಲಿಟ್ಟವೋ ಆಗ ಕನ್ನಡ ಪತ್ರಿಕಾ ಜಗತ್ತಿನ ವರ್ಗಾವಣೆ ಶುರುವಾಯ್ತು. ನಾವೆಲ್ಲ( ೨೬-೨೯ ವರ್ಷ ಆಜುಬಾಜಿನವರು) ವೃತ್ತಿ ಆರಂಭಿಸಿದ್ದು ಮಾಸಿಕ ೩ ಸಾವಿರ ರೂ. ವೇತನಕ್ಕೆ. ೫೦ ಸಾವಿರ ರೂಪಾಯಿ ಮುಟ್ಟಲು ಬಹುಶಃ ನಿವೃತ್ತಿ ಹಂತ ತಲುಪಬೇಕು ಎಂದು ಭಾವಿಸಿದ್ದೆವು. ಆದ್ರೆ ೨೦೧೦ರ ನಂತರ ಸಾಕಷ್ಟು ಪತ್ರಕರ್ತರ ಬದುಕು ಬದಲಾಯ್ತು. ಸುದ್ದಿ ವಾಹಿನಿಗಳ ಪೈಪೋಟಿ ವೇತನದ ಮೇಲು ಪರಿಣಾಮ ಬೀರಿ, ಕ್ರಿಯಾಶೀಲ ಪತ್ರಕರ್ತರೆಲ್ಲ ವಲಸೆ ಆರಂಭಿಸಿದರು. ಪ್ರಿಂಟ್ ಮೀಡಿಯಾದಲ್ಲಿ ದುಡಿದವರು ಎಲೆಕ್ಟ್ರಾನಿಕ್ಗೆ ಜಿಗಿದರು. ಒಬ್ಬ ಸಾಫ್ಟ್ವೇರ್ ಎಂಜಿನಿಯರ್ ಪಡೆಯಬಹುದಾದ ಸಂಬಳ ಪಡೆದರು.
ಆದ್ರೆ ಈ ಪೈಪೋಟಿಯಲ್ಲಿ ಕೆಲ ನ್ಯೂಸ್ ಚಾನೆಲ್ಗಳು ಆರಂಭಶೂರವಾಗಿಬಿಟ್ಟವು. ಇವತ್ತಿಗೂ ಕನ್ನಡದಲ್ಲಿ ಆರ್ಥಿಕವಾಗಿ ಲಾಭದಲ್ಲಿರುವ, ಸದೃಢವಾಗಿರುವ ಸುದ್ದಿ ವಾಹಿನಿಗಳು ಎರಡು ಮಾತ್ರ! ಇದ್ರಿಂದಾಗಿ ಅಷ್ಟೇ ದೀಢಿರ್ ಅಂತ ಕೆಲವರು ಉದ್ಯೋಗವನ್ನು ಕಳೆದುಕೊಂಡು ದಿಕ್ಕು ಕಾಣದಾದರು. ಹಲವರು ಬೇಸತ್ತು ಪತ್ರಿಕೋದ್ಯಮವನ್ನೇ ಬಿಟ್ಟು ಹೋದರು.
ವ್ಯಾಪಾರ ಅನ್ನುವುದು ಎಲ್ಲವನ್ನು ಬದಲಿಸಿಬಿಡ್ತು. ಒಂದು ಪುಟದ ಒಂದು ಮಗ್ಗುಲಿನಲ್ಲಿ ಸಾವಯವ ಕೃಷಿಯ ಬಗ್ಗೆ ಲೇಖನ. ಇನ್ನೊಂದು ಮಗ್ಗುಲಿನಲ್ಲಿ ರಸಗೊಬ್ಬರದ ಫಲವತ್ತತೆ ವಿವರಣೆ! ಎರಡೂ ಕೂಡ ಪೇಯ್ಡ್ ಲೇಖನ. ಈ ವ್ಯಾಪಾರಿಕರಣ ಎಂಬುದು ಇವತ್ತು ಪತ್ರಿಕೋದ್ಯಮವನ್ನು ಇಲ್ಲಿಗೆ ತಂದು ನಿಲ್ಲಿಸಿದೆ! ಪ್ರಸರಣ ಹೆಚ್ಚಿಸುವುದು, ನಂಬರ್ ಒನ್ ಆಗುವುದು ಇವತ್ತು ಸವಾಲಲ್ಲ. ಆದ್ರೆ ಆದಾಯ ಮರುಗಳಿಕೆ ಸವಾಲು. ಹೀಗಾಗಿ ಕೆಲ ಪತ್ರಿಕೆಗಳು ತಟಸ್ಥವಾಗಿಬಿಟ್ಟವು. ಯುದ್ಧ ಅಲ್ಲಿಗೆ ಮುಗಿಯುವುದಿಲ್ಲ. ನಾವು ಹೆಚ್ಚು ಪ್ರಸರಣೆ ಇಟ್ಟುಕೊಂಡು ಕಡಿಮೆ ಬೆಲೆಗೆ ಜಾಹೀರಾತು ಕೊಡುತ್ತೇವೆ ಎಂದಾಗ ಸೋಪು, ಫೌಡರ್ ವ್ಯಾಪ್ಯಾರಿಯ(ಮಾಲು, ಸಿನಿಮಾ ಎಲ್ಲ) ಗಮನ ಅದರತ್ತ ವಾಲುವುದು ಸಹಜ! ಅದು ತಟಸ್ಥವಾಗಿ ಉಳಿದ ಪತ್ರಿಕೆಗಳಿಗೆ ಹೊಡೆತ ನೀಡ್ತು. ಆಗ ಜಿಡ್ಡುಗಟ್ಟಿದ ಪತ್ರಿಕೆಗಳು ಹೆಗಲು ಕೊಡವಿ ನಿಂತವು. ಸಂಪಾದಕರು ಬದಲಾದರು, ತಂಡ ಬದಲಾಯ್ತು. ಹೊರಗಿನಿಂದ ಕೆಲವರು ಒಳ್ಳೆ ಸಂಬಳಕ್ಕೆ ಬಂದರು. ಒಳಗಿದ್ದವ ದಡ್ಡ ಅನ್ನಿಸಿಕೊಂಡು ಅದೇ ಸಂಬಳಕ್ಕೆ ಉಳಿದ. ಒಂಥರ ಉತ್ತರ ಕರ್ನಾಟಕದ ಮಂದಿ ಗುಳೆ ಹೊರಟಹಾಗೆ ಪತ್ರಕರ್ತರ ಪಾಡಾಯ್ತು.
ನಿಧಾನವಾಗಿ ಸಂಪಾದಕರ ಪ್ರಾಬಲ್ಯ ಎಂಬುದು ಪತ್ರಿಕೆಯಲ್ಲಿ ಕಡಿಮೆಯಾಗಿ ಆಡಳಿತ ಮಂಡಳಿ, ಜಾಹೀರಾತು ಮಂದಿಯ ಹಿಡಿತವೇ ಜಾಸ್ತಿಯಾಯ್ತು. ಇವತ್ತು ಎಲ್ಲಿಗೆ ಬಂದು ನಿಂತಿದೆ ಎಂದ್ರೆ, ಯಾವೊಬ್ಬರು ಮಾಲೀಕರಿಗೆ ಚಾಲೆಂಜ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಕೊಟ್ಟಷ್ಟು ಸಂಬಳಕ್ಕೆ ವಹಿಸಿದಷ್ಟು ಕೆಲಸ ಮುಗಿಸಿ ಹೋಗಲೇಬೇಕು. ಓದುಗ, ಆತನ ಮುತುವರ್ಜಿ ಎಂಬ ಪ್ರಶ್ನೆಗಳು ಯಾವತ್ತೂ ಮೀಟಿಂಗ್ನಲ್ಲಿ ಏಳುವುದೇ ಇಲ್ಲ. ನಮಗ್ಯಾಕೆ ಸಿನಿಮಾ ಜಾಹೀರಾತು ಕಡಿಮೆಯಾಯ್ತು? ನಮಗ್ಯಾಕೆ ರಿಯಲ್ ಎಸ್ಟೇಟ್ ಜಾಹೀರಾತು ಬಂದಿಲ್ಲ ಎಂಬುದು ದೊಡ್ಡ ಚರ್ಚೆ. ಸುದ್ದಿ, ಗುಣಮಟ್ಟ ಅಂದ್ರೆ…ಅದ್ನೆಲ್ಲ ನೀವು ಸಂಪಾದಕೀಯ ಮಂಡಳಿ ಮೀಟಿಂಗ್ನಲ್ಲಿ ಚರ್ಚೆ ಮಾಡಿಕೊಳ್ಳಿ ಎನ್ನುತ್ತಾರೆ. ಅಷ್ಟಕ್ಕೂ ಮಿಗಿಲಾಗಿ ನೀವು ಚಾಲೆಂಜ್ ಮಾಡಿದ್ರೆ ನಿಮ್ಮ ಜಾಗಕ್ಕೆ ಲಾರಿ ಡ್ರೈವರ್, ರಿಕ್ಷಾ ಡ್ರೈವರ್ ಬಂದು ಆತ ನಿಮಗಿಂತ ಕ್ರಿಯಾಶೀಲ ಎಂಬುದನ್ನು ಸಾಬೀತು ಮಾಡುತ್ತಾನೆ. ಹಠಕ್ಕೆ ಬಿದ್ದವರು ಆತನನ್ನು ದೊಡ್ಡ ಅಂಕಣಕಾರನನ್ನಾಗಿ, ಲೇಖಕನನ್ನಾಗಿ ಮಾಡುತ್ತಾರೆ( ಬೇಕಿದ್ರೆ ಅಂಕಣವನ್ನು ಬೇರಯವರಿಗೆ ಹಣ ಕೊಟ್ಟು ಬರೆಸಿ ಆತನ ಹೆಸ್ರಲ್ಲಿ ಪ್ರಕಟಿಸುತ್ತಾರೆ!)
ಯಸ್, ಅಲ್ಟಿಮೇಟ್ಲಿ ದುಡ್ಡು. ವ್ಯಾಪಾರ ಇವಿಷ್ಟೆ ಇವತ್ತಿನ ಪತ್ರಿಕೋದ್ಯಮ. ಅದನ್ನು ಅಲ್ಲಗಳೆಯುವ ಸ್ಥಿತಿಯಲ್ಲಿ ನಾವಿಲ್ಲ. ದಿನಕ್ಕೆ ೧೦-೨೦ ಲಕ್ಷ ನಷ್ಟ ಎಂದ್ರೆ ಖಂಡಿತ ಹುಡುಗಾಟಿಕೆ ಮಾತಲ್ಲ. ಮನರಂಜನೆ ವಾಹಿನಿಗಳಂತೂ ಇವತ್ತು ತಮ್ಮನ್ನು ತಾವು ಕಾರ್ಪೊರೇಟ್ ಎಂದು ಗುರುತಿಸಿಕೊಂಡು ಬಿಟ್ಟಿವೆ. ಅಲ್ಲಿ ೧೦೦ ಕೋಟಿ ಹಾಕಿ ೧೨೦ ಕೋಟಿ ತೆಗೆಯುವ ಸ್ಕೀಮು. ಅಲ್ಲಿ ದುಡಿಯುವವರು ಇವತ್ತು ಪತ್ರಕರ್ತರಾಗಿ ಉಳಿದಿಲ್ಲ. ಪ್ರೆಸ್ ಎಂಬ ಐಡೆಂಟಿಟಿ ಅವರಿಗಿಲ್ಲ. ಅವರು ಸಾಫ್ಟ್ವೇರ್ ಎಂಜಿಯರ್ನಂತೆ ಓರ್ವ ಕಾರ್ಪೊರೇಟ್ ನೌಕರ. ಒಂಥರ ಪತ್ರಕರ್ತ ಎಂದು ಅವರಿವರಿಗೆ ಉಪದೇಶ ಮಾಡುತ್ತ, ಅವರಿವರ ಹುಳುಕು ತೋರಿಸುತ್ತ ನಮ್ಮೊಳಗಿನ ಹುಳುಕನ್ನು ಮುಚ್ಚಿಟ್ಟುಕೊಳ್ಳುವುದಕ್ಕಿಂತ ಕಾರ್ಪೊರೇಟ್ ನೌಕರಿ ತುಂಬಾ ಉತ್ತಮ ಅನ್ನಿಸಿಬಿಟ್ಟಿದೆ.
ಆತ ತಪ್ಪು ಮಾಡಿದ್ದಾನೆ. ಆತನ ಬಗ್ಗೆ ವರದಿ ಮಾಡಲು ವರದಿಗಾರ ತೆರೆಳಿದ್ದು ಗೊತ್ತಾಗುತ್ತೆ. ಆತ ಸೀದಾ ಮುಖ್ಯ ವರದಿಗಾರನ ಬಳಿ ಬರುತ್ತಾನೆ. ಅಲ್ಲಿ ಕೆಲಸ ಆಗಲಿಲ್ಲ ಅಂದ್ರೆ ಸಂಪಾದಕರ ಬಳಿ ಬರುತ್ತಾನೆ. ಅಲ್ಲಿಯೂ ಆಗಲಿಲ್ಲ ಅಂದ್ರೆ ಜಾಹೀರಾತು ವಿಭಾಗಕ್ಕೆ ಹೋಗುತ್ತಾನೆ. ವರ್ಷಕ್ಕಿಂತಿಷ್ಟು ಜಾಹೀರಾತು ಅಂತ ಅಲ್ಲೆ ವ್ಯವಹಾರ ಮುಗಿದು ಬಿಡುತ್ತದೆ. ಅದೆಲ್ಲ ಮುಗಿದು ೧೫ ದಿನದ ಬಳಿಕ ಸಂಕ್ರಾಂತಿ ಶುಭಾಷಯಗಳು ಅಂತಲೋ, ಗೌರಿ-ಗಣೇಶ ಹಬ್ಬದ ಶುಭಾಷಗಳು ಅಂತಲೋ ಆತನದ್ದೊಂದು ದೊಡ್ಡ ಫೋಟೊದೊಂದಿಗೆ ಜಾಹೀರಾತು ಪ್ರಕಟವಾಗುತ್ತದೆ. ಆತನ ಬಗ್ಗೆ ಕಷ್ಟಪಟ್ಟು ವರದಿ ತಂದ ವರದಿಗಾರ ಮಿಕಮಿಕ ಕಣ್ಣು ಬಿಟ್ಟು ಎಲ್ಲವನ್ನೂ ಸುಮ್ಮನೆ ನೋಡುತ್ತಿರುತ್ತಾನೆ! ಇಲ್ಲೆಲ್ಲಿಯೂ ವರ್ಕೌಟ್ ಆಗದಿದ್ರೆ ಮಾತ್ರ ಅವನು ಅಂತಿಮವಾಗಿ ಮಾಲೀಕರ ಬಳಿ ಹೋಗುತ್ತಾನೆ.
ಇವನ್ನೆಲ್ಲ ನಿತ್ಯವೂ ನೋಡಿದ ಸಾಕಷ್ಟು ಪತ್ರಕರ್ತರು ಇವತ್ತು ಬುದ್ಧಿವಂತರಾಗಿದ್ದಾರೆ. ಯಾವುದನ್ನು ಬರೆದ್ರೆ ತನಗೆ ಲಾಭದಾಯಕ ಯಾವುದು ನಷ್ಟ ಎಂಬುದನ್ನು ಬರೆಯುವ ಮೊದಲೇ ಆಲೋಚಿಸುತ್ತಾರೆ. ಇಷ್ಟಾಗಿಯೂ ಇಲ್ಲಿ ಉದ್ಯೋಗ ಭದ್ರತೆ ಇಲ್ಲ! ಮೇಲೆ ಕುಳಿತ ಯಾರೋ ಒಬ್ಬ ದಡ್ಡ ಎನ್ನಿಸಿ ಆಡಳಿತ ಮಂಡಳಿ ಇನ್ನೊಬ್ಬ ಅಪರಾತ್ರಿಯ ಬುದ್ಧಿವಂತನನ್ನು ತಂದು ಕೂರಿಸುತ್ತದೆ. ಆತ ದಡ್ಡ ಎಂದು ಸಾಬೀತು ಆಗುವವರೆಗೂ ಮಿಕ್ಕವರೆಲ್ಲ ದಡ್ಡರಾಗಿರುತ್ತಾರೆ! ಒಂಥರ ಉಗುಳಲೂ ಆಗದೆ, ನುಂಗಲು ಆಗದೆ ಬದುಕುತ್ತಿದ್ದೇವೆ. ಒಂದಷ್ಟು ಜನ ಗೆಳೆಯರು ಬೆಸತ್ತು ಎಲ್ಲವನ್ನೂ ಬಿಟ್ಟು ಬೇರೆಡೆಗೆ ಹೋಗಿದ್ದಾರೆ. ದಿನ ಬೆಳಗಾದ್ರೆ ಸಾಮಾಜಿಕ ತಾಣಗಳಲ್ಲಿ ಮಾಧ್ಯಮವನ್ನು ಉಗುಳುವುದು ನೋಡಿದ್ರೆ ಬೇಜಾರಾಗುತ್ತೆ. ಆದ್ರೆ ದೊಡ್ಡವರಂತೆ ನಾವು ಜಾಣ ಕಿವುಡರಾಗಿರುವುದು ಅತ್ಯುತ್ತಮ. ಯಾಕಂದ್ರೆ ನಾವು ಅದಕ್ಕೆಲ್ಲ ಉತ್ತರ ಅಂತ ಹಿಂಗೆಲ್ಲ ಲೇಖನ ಬರೆದ್ರೆ ನಮಗೆ ಯಾವುದೇ ಕಾಸು ಬರುವುದಿಲ್ಲ. ೨೦೦ ಜನ ಇದನ್ನು ಓದುವುದಿಲ್ಲ. ಯಾವುದೇ ಪತ್ರಿಕೆಯಲ್ಲು ಯಾವ ಕಾರಣಕ್ಕೂ ಇಂಥ ವಿಷಯಗಳೆಲ್ಲ ಪ್ರಕಟವಾಗುವುದಿಲ್ಲ. ಅದಕ್ಕಿಂತ ಕಾಸು ಬರುವುದನ್ನು ಬರೆದುಕೊಂಡಿರುವುದು ಲೇಸು ಅಂತ ನಮಗೆಲ್ಲ ಯಾವತ್ತೋ ಅರ್ಥವಾಗಿಬಿಟ್ಟಿದೆ. ಹೀಗಾಗಿ ಬರೆದು ಕೈಬಿಟ್ಟ ಮೇಲೆ ಮುಗೀತು. ಅದು ನಮ್ಮದಲ್ಲ. ಅದನ್ನು ನೀವು ಸಿಟಿ ಕೆಬಲ್ಲಿಗೆ ಬೇಕಾದ್ರು ಸೀರಿಯಲ್ ಮಾಡಿಕೊಳ್ಳಿ, ಇಲ್ಲವಾದ್ರೆ ಮಂಡಕ್ಕಿ ಪೊಟ್ಟಣ್ಣ ಬೇಕಾದ್ರು ಕಟ್ಟಿಕೊಳ್ಳಿ. ಬರೆದಿದ್ದಕ್ಕೆ ಕಾಸು ಕೊಡಿ. ನಿಮಗೆ ಬೇಕಾದಂತೆ ಅಡ್ಡ-ಉದ್ದ-ಎತ್ತರಕ್ಕೆ ಬರೆದುಕೊಡುತ್ತೇವೆ ಎಂಬಂಥ ಸ್ಥಿತಿಗೆ ನಾವೊಂದಿಷ್ಟು ಗೆಳೆಯರಂತೂ ಖಂಡಿತ ತಲುಪಿದ್ದೇವೆ. ನಮ್ಮ ಖುಷಿಗೆ ಬರೆಯಲು ಬೇಕಾದಷ್ಟಿದೆ. ದುಡಿಯುವ ಖುಷಿಗೆ ಬರೆಯುವುದೇ ಬೇರೆ! ದುಡ್ಡಿನ, ವ್ಯಾಪಾರದ ಮುಂದೆ ಯಾವ ಕ್ರಿಯಾಶೀಲತೆ, ಯಾವ ಜಾಣತನವೂ ಇಲ್ಲ…ಜಪಾನಿ ತೈಲ ಕಂಪನಿ ಬಗ್ಗೆ, ಅಲ್ಲಿನ ಮಾಲೀಕನ ಬಗ್ಗೆ, ೬ ನಿಮಿಷ ನೋಡಲಾಗದ ಕೆಟ್ಟ ಸಿನಿಮಾದ ಬಗ್ಗೆ ಸೊಗಸಾಗಿ ಬರೆಯವುದು ಮತ್ತು ಅದನ್ನು ಬೈದುಕೊಳ್ಳುತ್ತಲೆ ಓದುವ ನಿಮ್ಮಂಥವರನ್ನು ಆಸ್ವಾದಿಸುವುದೇ ಜಾಣತನ!!!
1971ರಲ್ಲಿ ನಾನು ‘ಉಪಸಂಪಾದಕ’ನಾಗಿ ಪತ್ರಿಕೆಯೊಂದರಲ್ಲಿ ಕೆಲಸ ಶುರುಮಾಡಿದಾಗ ಆರಂಭಿಕ ಮಾಸಿಕ ವೇತನ ಕೇವಲ 150/- ರೂ.ಗಳು. ಮೂವತ್ತು ವರ್ಷ ದುಡಿದು ನಿವೃತ್ತಿ ಪಡೆದಾಗ ಸ್ವೀಕರಿಸಿದ ಕೊನೆಯ ತಿಂಗಳ ಸಂಬಳ 10,000/- ರೂ.ಗಳು. ನನಗೆ ಸಿಕ್ಕ PF ಮತ್ತು gratuity ಹಣ 3,20000/- ರೂ.ಗಳು. ಸ್ವಾಮಿ.
-ಗೋಪಾಲ ವಾಜಪೇಯಿ
ಒಳ್ಳೆಯ ಲೇಖನ… ಪರಿಹಾರ ಎಂದರೆ ಓದುಗರು ಎಚ್ಚರದಿಂದ ನಡೆದುಕೊಳ್ಳುವುದು… ಅದರೆ ಅವರಿಗೂ ಸುದ್ದಿ ಮನೋರಂಜನೆಯಾಗಿ ಹೋಗಿದೆ
ಅತ್ಯುತ್ತಮ ಲೇಖನ. ಪತ್ರಿಕಾ ರ೦ಗ, ಮಾಧ್ಯಮದ ಒಳಗಿನ ದೋಸೆ ತೂತನ್ನು ತು೦ಬಾ ಸರಳವಾಗಿ ದಿಟ್ಟವಾಗಿ ಹೇಳಿದ್ದೀರಿ.
ಈ ಕಾರ್ಪೋರೇಟ್ ಸ೦ಸ್ಕೃತಿ ಬ೦ದ ಮೇಲೆ ಬ್ಯೂಟಿ ಪಾರ್ಲರ್, ಡಾಕ್ಟರ್, ಬಾರ್, ಸಾಫ್ಟವೇರ್ ಇ೦ಜಿನಿಯರ್ ನಡುವೆ ವ್ಯತ್ಯಾಸವೇ ಇಲ್ಲವಾಗಿಬಿಟ್ಟಿದೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ.
Nice article. You have neatly explained challenging and tough world of media.
Its unfortunate to see ourselves into such a scenario.
As a reader, I think so much to pay more for the newspaper but expect paper not to contain more ads or certain kind of ads.
[…] ಹಿಂದೆ “ಉಗಳಲು ಆಗದೆ, ನುಂಗಲು ಆಗದೆ” ಎಂದು ಒಂದು ಲೇಖನ ಬರೆದಿದ್ದೆ. ಅದರ […]
[…] ಹಿಂದೆ “ಉಗಳಲು ಆಗದೆ, ನುಂಗಲು ಆಗದೆ” ಎಂದು ಒಂದು ಲೇಖನ ಬರೆದಿದ್ದೆ. ಅದರ […]
ಓದುಗರು ಬಯಸುವುದು ಸ್ಪಷ್ಟವಾದ, ನೈಜವಾದ, ನಿಷ್ಪಕ್ಷವಾದ ವಿವರವಾದ
ವರದಿಗಳನ್ನು . ಜಹೀರಾತುಗಳನ್ನುನೋಡುವುದಿಲ್ಲ . ಜನ ದುದ್ದು ಕೊಡುವುದು ಜಾಹೀರಾತಿಗಾಗಿ ಅಲ್ಲ. ಜಾಹೀರಾತನ್ನು ಯಾರೂ ಗಮನಿಸುವುದಿಲ್ಲ. ಈಗಿನ ಸ್ಪೀಡ್ ಯುಗದಲ್ಲಿ ಅದೆಲ್ಲ ನೋದಲು ಜನಕ್ಕೆ ಪುರುಸೊತ್ತಿಲ್ಲ. ಜಾಹೀರಾತಿಗೆ ಹಾಕುವ ದುಡ್ಡು ಉತ್ಪನ್ನದ ಗ್ರಾಹಕರ ತಲೆಯ ಮೇಲೇ ಬೀಳುತ್ತದೆ ಎಂಬುದು ಜನಕ್ಕೆ ಗೊತ್ತಿಲ್ಲ. 7829134491