ಚಂಪಾ ಷಷ್ಠಿಯ ವೇಳೆ ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುವ ಮಡೆ ಸ್ನಾನ ಸೇವೆ ರದ್ದು ಮಾಡಬಾರದು ಎಂದು ಪಟ್ಟು ಹಿಡಿದಿದ್ದು ಸ್ಥಳೀಯರು. ಮಡೆಸ್ನಾನಕ್ಕೆ ಅವಕಾಶ ಕೊಡಬೇಕು. ಇಲ್ಲವಾದರೆ ರಥ ಕಟ್ಟುವುದಿಲ್ಲ ಎಂದು ಹಠ ಹಿಡಿದವರು ಮಲೆಕುಡಿಯ ಜನಾಂಗದವರು. ಮೇಲ್ಜಾತಿಯವರ ಉಂಡ ಎಂಜಲು ಎಲೆಯಲ್ಲಿ ಕೆಳಜಾತಿಯವರು ಉರುಳುತ್ತಾರೆ. ಹೀಗಾಗಿ ಮಡೆಸ್ನಾನ ವಿರೋಧಿಸುತ್ತೇವೆ ಎಂಬುವವರು ಇದನ್ನು ಸ್ಪಷ್ಟವಾಗಿ ಗಮನಿಸಬೇಕು…
ತಂಬಾಕು ಸೇವನೆ ಆರೋಗ್ಯ ಹಾನಿಕರ…ಹಾಗಂತ ಸಿಗರೇಟು ಪ್ಯಾಕಿನ ಮೇಲೆ ದಪ್ಪ ಅಕ್ಷರದಲ್ಲಿ ಬರೆದಿರುತ್ತದೆ. ಸಿಗರೇಟು ಸೇದುವ ಎಲ್ಲರೂ ಕೂಡ ಅದನ್ನು ಓದಿರುತ್ತಾರೆ. ಆದಾಗ್ಯೂ ಧೂಮಪಾನ ಬಿಡುವುದಿಲ್ಲ. ಇದಕ್ಕೂ ಮಜ ಎಂದರೆ, ಕ್ಯಾನ್ಸರ್ಗೆ ಔಷಧ ನೀಡುವ ವೈದ್ಯನಿಗೂ ಸಿಗರೇಟಿನ ಚಟವಿರುವುದು!
ಅಯ್ಯೊ, ನೀವು ತಿನ್ನುವ ದ್ರಾಕ್ಷಿಯಲ್ಲಿ ರಾಸಾಯನಿಕ ಇರುವುದಿಲ್ಲವಾ? ಈಗಿನ ಆಹಾರಗಳು ಕಲುಷಿತ ಅಲ್ಲವಾ? ಸಾವಿಗೆ ಕಾರಣವಿಲ್ಲ. ತಂಬಾಕು ಸೇವನೆಯೂ ಸಾವಿಗೊಂದು ಮಾರ್ಗವಾಗಬಹುದು. ಹಾಗಂತ ಸೇವಿಸಿದವರಿಗೆಲ್ಲ ಕ್ಯಾನ್ಸರ್ ಬರುತ್ತದೆ ಎನ್ನಲು ಸಾಧ್ಯವಿಲ್ಲ ಅನ್ನೋದು ಸಿಗರೇಟು ಸೇದುವ ಒಕ್ಕೂಟದ ಸಮರ್ಥನೆ! ಇನ್ನೂ ಆಲ್ಕೊಹಾಲಿನ ವಿಷಯವೂ ಹಾಗೆ, ಆರೋಗ್ಯಕ್ಕೆ ಹಾನಿ ಎಂಬುದು ತಿಳಿದಿದ್ದರೂ ಸೇವಿಸುತ್ತಾರೆ. ಅದರಿಂದ ಅವರಿಗೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ! ಬದುಕಿನ ಒತ್ತಡ ಕಡಿಮೆಯಾಗುತ್ತದೆಯಂತೆ!
ಹೌದು, ಇದರಂತೆ ಮಡೆಸ್ನಾನ ಎಂಬುದು ಕೂಡ. ಎಂಜಲೆಲೆಯ ಮೇಲೆ ಉರುಳಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಬ್ರಾಹ್ಮಣರು ಊಟ ಮಾಡಿದ ಎಂಜಲು ಎಲೆಯ ಮೇಲೆ ದಲಿತರು, ಕೆಳವರ್ಗದವರು ಉರುಳಾಡುತ್ತಾರೆ. ಹಾಗಾಗಿ ಮಡೆಸ್ನಾನ ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಇದೊಂದು ಪೂರ್ವಾಗ್ರಹ ಪೀಡಿತ ಕೂಗು. ಮಡೆಸ್ನಾನದಲ್ಲಿ ಎಲ್ಲ ಜನಾಂಗದವರು ಎಂಜಲು ಎಲೆಯ ಮೇಲೆ ಉರುಳುತ್ತಾರೆ. ಇದು ಅರಿವಾಗಬೇಕಾದರೆ, ಹಾಗೆ ಕೂಗುವವರು ಕುಕ್ಕೆಗೆ ಹೋಗಿ ನೋಡಿ ಬರಬೇಕು. ನಾಗನಿಗೆ ಪ್ರಸಿದ್ಧವಾಗಿರುವ ಕುಕ್ಕೆ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಸಮಯದಲ್ಲಿ ೩ ದಿನಗಳ ಕಾಲ ವಿಶೇಷ ಪೂಜೆ ನಡೆಯುತ್ತದೆ. ಈ ವೇಳೆಯಲ್ಲಿ ಮಡೆಸ್ನಾನ ಎಂಬ ವಿಶಿಷ್ಠ ಸೇವೆ ನಡೆಯುತ್ತದೆ.
ಇದಕ್ಕೆ ೫೦೦ ವರ್ಷಗಳ ಇತಿಹಾಸವಿದೆ ಎಂಬುದು ಬಲ್ಲವರ ಮಾತು. ದೇವಳದಲ್ಲಿ ಅನೇಕ ಕೆಲಸ ನಿಭಾಯಿಸುವ ಮಲೆಕುಡಿಯ ಜನಾಂಗದಿಂದಲೇ ಈ ಸೇವೆ ಆರಂಭವಾಗಿದ್ದು ಎಂಬುದು ಕೆಲವರ ವಾದ. ಸಂತಾನ ಪ್ರಾಪ್ತಿ, ಚರ್ಮ ಸಂಬಂಧಿ ರೋಗಗಳಿಗೆ ನಾಗ ಪ್ರಸಿದ್ಧ ದೇವರು. ಅದಕ್ಕೆ ವೈಜ್ಞಾನಿಕ ಕಾರಣ ಇಲ್ಲವಾಗಿರಬಹುದು. ಆದರೆ ಅನಾದಿ ಕಾಲದಿಂದಲೂ ನಮ್ಮ ನಂಬಿಕೆ. ನಾಗದೋಷವಿದ್ದರೆ ಸಂತಾನ ಪ್ರಾಪ್ತಿ ಆಗುವುದಿಲ್ಲ. ನಾಗನ ತೊಂದರೆಯಿಂದ ಕಜ್ಜಿ, ತುರಿಕೆ ಮತ್ತು ಇತರೆ ಚರ್ಮ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬ ಬಲಾಢ್ಯ ನಂಬಿಕೆ ಗ್ರಾಮೀಣ ಭಾಗದಲ್ಲಿ ಇದೆ. ಇದರ ವಿಮೋಚನೆಗಾಗಿ ಮಡೆಸ್ನಾನ ಹುಟ್ಟಿರಬಹುದು.
ಹಾಗಾಗಿಯೇ ಚಂಪಾ ಷಷ್ಠಿಯಂದು ನಡೆಯುವ ಈ ಸೇವೆ ರದ್ದಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು. ಮಡೆಸ್ನಾನಕ್ಕೆ ಅವಕಾಶ ಕೊಡಬೇಕು ಅಂತ ಪಟ್ಟು ಹಿಡಿದು ರಥ ಕಟ್ಟದೆ ಕುಳಿತ್ತಿದ್ದು. ಸರಕಾರದ ನಿಷೇಧ ವಾಪಸ್ ತೆಗೆಸಿ, ೬೦೦ಕ್ಕೂ ಹೆಚ್ಚು ಭಕ್ತರು ಸೇವೆ ಸಲ್ಲಿಸಿದ್ದು. ಮೇಲ್ಜಾತಿ ಎಂಜಲು ಎಲೆಯಲ್ಲಿ ಕೆಳಜಾತಿಯವರು ಉರುಳುತ್ತಾರೆ. ಹೀಗಾಗಿ ಮಡೆಸ್ನಾನ ವಿರೋಧಿಸುತ್ತೇವೆ ಎಂಬುದು ಕೆಲವರ ವಾದ. ಈ ಸಂಪ್ರದಾಯ ಮುಂದುವರಿಯಬೇಕು. ಇಲ್ಲವಾದರೆ ನಾವು ರಥ ಕಟ್ಟುವುದಿಲ್ಲ ಅಂತ ನಿನ್ನೆ ಪಟ್ಟು ಹಿಡಿದಿದ್ದು ಮಲೆಕುಡಿಯ ಜನಾಂಗದವರು ಹೊರತು, ಮೇಲ್ಜಾತಿಯವರಲ್ಲ ಎಂಬುದು ಇಲ್ಲಿ ಪ್ರಮುಖ ಅಂಶವಾಗುತ್ತದೆ.
ಕಷ್ಟಗಳ ನಿವಾರಣೆಗೆ ಹರಕೆ ಹೊತ್ತುಕೊಳ್ಳುವುದು ಭಾರತೀಯ ಸಂಪ್ರದಾಯದಲ್ಲಿನ ಅವಿಭಾಜ್ಯ ಅಂಗ. ಈ ಹರಕೆಗಳಲ್ಲಿ ಹಲವು ವಿಧ. ಪ್ರದೇಶದಿಂದ ಪ್ರದೇಶಕ್ಕೆ, ಆಚರಣೆಗಳಿಗೆ ಅನುಗುಣವಾಗಿ ಹರಕೆಗಳು ಭಿನ್ನ. ಆರಾಧನೆಯೂ ವಿಚಿತ್ರ. ಒಂದೊಂದು ಭಾಗದಲ್ಲಿ ಒಂದೊಂದು ದೈವದ ಪ್ರಭಾವ ಹೆಚ್ಚು. ಇನ್ನೂ ಒಂದೊಂದು ಜಾತಿಗೂ ಅದರದ್ದೆ ಆದ ದೇವರಿದೆ. ಅವರದ್ದೇ ಆದ ಮಠಗಳಿವೆ. ಹೀಗಾಗಿ ಎಲ್ಲರ ದೈವ ಆರಾಧನೆಯೂ ಏಕೀಕೃತವಾಗಿರಬೇಕು ಎಂದು ಭಾರತದಂಥ ರಾಷ್ಟ್ರದಲ್ಲಿ ಬಯಸುವುದು ತಪ್ಪು. ನೀವು ಉಡುಪಿಗೆ ಬಂದರೆ ಅಲ್ಲೊಂದು ವಿಶಿಷ್ಠ ಆಚರಣೆ ಇದೆ. ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ ಖಾಲಿ ನೆಲದ ಮೇಲೆ ಊಟ ಮಾಡುವುದು. ಹೆಚ್ಚಾಗಿ ಶನಿವಾರ ನೆಲದ ಮೇಲೆ ಊಟ ಮಾಡುವ ಅನೇಕರು ಇಲ್ಲಿ ಕಾಣ ಸಿಗುತ್ತಾರೆ. ಮುಖ್ಯಪ್ರಾಣನಿಗೆ ಇದೊಂದು ರೀತಿಯ ಸೇವೆಯಂತೆ. ಬಾಳೆ ಎಲೆಯಲ್ಲಿ ಊಟ ಮಾಡುವವರ ನಡುವೆಯೇ ಬರಿ ನೆಲದ ಮೇಲೆ ಊಟ ಮಾಡುವ ಅನೇಕರು ಸಿಗುತ್ತಾರೆ. ಉತ್ತರ ಕರ್ನಾಟಕ, ಮಲೆನಾಡು ಭಾಗದಿಂದ ಹೋದವರಿಗೆ ಇದೊಂದು ರೀತಿಯ ಮುರ್ಖ ಆಚರಣೆ ಅನ್ನಿಸುತ್ತದೆ. ಆದರೆ, ದಕ್ಷಿಣಕನ್ನಡದ ಮಂದಿ ಜಾತಿ, ಅಂತಸ್ತಿನ ಭಿನ್ನತೆಯಿಲ್ಲದೆ ಈ ಸೇವೆ ಸಲ್ಲಿಸುತ್ತಾರೆ. ಅದು ಅಲ್ಲಿನ ನಂಬಿಕೆ. ಅಂದಹಾಗೆ ಇದೊಂದು ಸೇವೆಯಷ್ಟೆ. ಅಷ್ಟ ಮಟ್ಟದ ಸೇವಾ ಪಟ್ಟಿಯಲ್ಲಿ ಈ ಸೇವೆಯಿಲ್ಲ. ಇದಕ್ಕೆ ಯಾವುದೇ ರೀತಿಯ ಶುಲ್ಕವಿಲ್ಲ.
ಹಾಗೆ ಮಡೆಸ್ನಾನದ ವಿಚಾರ. ಇದೊಂದು ತೀರಾ ವೈಯಕ್ತಿಕ ಮಟ್ಟದ ಸೇವೆ. ಕುಕ್ಕೆಯ ಸೇವೆಗಳ ಪಟ್ಟಿಯಲ್ಲಿ ಇದರ ಹೆಸರಿಲ್ಲ. ಜೊತೆಗೆ ಇದಕ್ಕೆ ಎಂದು ವಿಶೇಷ ಪೂಜೆಯೂ ಇಲ್ಲ. ವೈಯಕ್ತಿಕವಾಗಿ ನಿಮಗೆ ನಂಬಿಕೆ ಇದ್ದರೆ ಈ ಸೇವೆ ಸಲ್ಲಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನ ಯಾವುದೋ ಕಷ್ಟ ಪರಿಹಾರಕ್ಕಾಗಿ ಹರಕೆ ಹೊತ್ತವರೇ ಈ ಸೇವೆ ಮಾಡುವುದು. ಅವರು ಅಂದುಕೊಂಡಿದ್ದು ಸಿದ್ಧಿಸಿದೆ ಎಂಬ ಕಾರಣಕ್ಕಾಗಿ ದೇವರಿಗೆ ತಿರುಗಿ ಅವರು ಅರ್ಪಿಸುವ ಕಾಣಿಕೆಯ ವರ್ಗದಲ್ಲಿ ಮಡೆಸ್ನಾನವನ್ನು ಸೇರಿಸಬಹುದು. ಆತನಿಗೆ ಒಳಿತು ಆಗದೆ ಸುಮ್ಮನೆ ಈ ಕಾಣಿಕೆ ನೀಡುತ್ತಾನಾ?
ನೀವು ಮಲೆನಾಡಿಗೆ ಬಂದರೆ ಯಕ್ಷಿ, ಚೌಡಿ, ಭೂತದಂಥ ಒಂದಷ್ಟು ಗ್ರಾಮ್ಯದೇವತೆಗಳಿವೆ. ಕರಾವಳಿಯಲ್ಲಿ ಪಂರ್ಜುಲಿ, ಕಲ್ಲುಕುಟುಕ ಎಂಬುದಾಗಿದೆ. ಈ ದೇವತೆಗಳಿಗೆ ಕುರಿ, ಕೋಳಿಯ ಬಲಿಯಾಗಬೇಕು. ರಕ್ತದ ಅಭಿಷೇಕ ಮಾಡಬೇಕು. ದೀಪಾವಳಿಯಲ್ಲಿ ತೆಂಗಿನಕಾಯಿ ಒಡೆಯುವ ಒಂದು ವರ್ಗವಿದ್ದರೆ, ಕೋಳಿ ಬಲಿ ಕೊಡುವ ಮತ್ತೊಂದು ವರ್ಗವಿದೆ. ಎರಡನ್ನು ಈ ದೇವರು ಸ್ವೀಕರಿಸುತ್ತದೆಯೋ, ಬಿಡುತ್ತದೆಯೊ ನಂತರದ ಪ್ರಶ್ನೆ. ಆದರೆ ಇದು ಅಲ್ಲಿನ ನಂಬಿಕೆ. ದೀಪಾವಳಿಗೆ ಕೋಳಿ ಬಲಿಯಾಗದಿದ್ದರೆ ಅನಾರೋಗ್ಯ, ತೊಂದರೆ ಉಂಟಾಗುತ್ತದೆ ಎಂಬ ಭಯ ಇವತ್ತಿಗೂ ಇದೆ. ಆಕಸ್ಮಿಕವಾಗಿ ಮನೆಯಲ್ಲಿ ಯಾರಿಗಾದರು ಜ್ವರ ಬಂದರೆ, ಅದು ಯಕ್ಷಿಯ ಸಮಸ್ಯೆಯೆಂದು ಭಾವಿಸುವವರು ಈಗಲೂ ಪ್ರಸ್ತುತ.
ಬೆಂಗಳೂರಿನಲ್ಲಿ ಕಾರ್ಯಸಿದ್ಧಿ ಆಂಜನೇಯ ಅಂತ ಒಂದು ದೇವಾಲಯವಿದೆ. ಇಲ್ಲಿ ಏನಾದರೂ ಅಂದುಕೊಂಡು ಕಾಯಿ ಕಟ್ಟಿದರೆ, ಅಂದುಕೊಂಡಿದ್ದು ಸಿದ್ಧಿಸುತ್ತದೆಯಂತೆ. ನಮ್ಮಂಥ ತಲೆಹರಟೆಗಳು ಭಾರತದಲ್ಲಿ ಜಾತಿ ಪದ್ಧತಿ ನಿರ್ಮೂಲನೆ ಆಗಲಿ ಎಂದು ಕಾಯಿ ಕಟ್ಟುತ್ತೇವೆ! ಅದು ಸಿದ್ಧಿಸುವುದಿಲ್ಲ. ದೇವರ ಪರೀಕ್ಷೆ ಮಾಡಬಾರದು ಎಂದು ಪುರೋಹಿತರ ಆದೇಶ ಬರುತ್ತದೆ! ಹಾಗಂತ ಒಂದು ಇಷ್ಟಾರ್ಥ ಸಿದ್ಧಿಸಿಲ್ಲ ಅಂತಾ ಈ ಪದ್ಧತಿ ಸರಿಯಿಲ್ಲ ಅನ್ನಲು ಸಾಧ್ಯವಿಲ್ಲ ಅಲ್ಲವೆ? ಒಮ್ಮೆ ಸರಿಯಿಲ್ಲದಿದ್ದರೆ ಪ್ರತಿನಿತ್ಯ ನೂರಾರು ಮಂದಿ ಅಲ್ಲಿ ಕಾಯಿ ಕಟ್ಟುತ್ತಿದ್ದರಾ?
ಅಸಹ್ಯ ಅನ್ನಿಸುವ ಈ ಸೇವೆ ಮಾಡದಿದ್ದರೆ ಏನಾಗುತ್ತದೆ ಅನ್ನಬಹುದು ನೀವು. ಬೆಂಗಳೂರಿನ ಕೃಷಿ ಮಾರುಕಟ್ಟೆ ಬಳಿ ಒಂದು ಮೈದಾನವಿದೆ. ಬಕ್ರೀದ್ ಹಿಂದಿನ ಅಲ್ಲಿ ಹೋದರೆ ನೀವು ಕಂಗಾಲಾಗಿ ನಿಲ್ಲುತ್ತೀರಿ. ಅಲ್ಲಿನ ಕೂಗುವ ಕುರಿಗಳನ್ನು ಕಂಡು ಕರುಳು ಕರಗುತ್ತದೆ. ಹಾಗಂತ ಅದನ್ನು ವಿರೋಧಿಸಲು ಸಾಧ್ಯವಿಲ್ಲ. ಕುರಿ ಕಡಿಯುವುದನ್ನು ನಿಷೇಧಿಸಿ ಅಂತಾ ಬೀದಿಗೆ ಇಳಿಯುವುದಿಲ್ಲ. ಬದಲಾಗಿ ಗೋ ಹತ್ಯೆ ನಿಷೇಧ ವಿರೋಧಿಸಿ ಬೀದಿಗಿಳಿಯುತ್ತೇವೆ. ಟೌನ್ಹಾಲ್ ಎದುರು ಗೋಮಾಂಸ ತಿಂದು ಪ್ರತಿಭಟಿಸುತ್ತೇವೆ. ಇಲ್ಲಿ ಮಾನವೀಯತೆ ಆರಿ ಹೋಗುತ್ತದೆ. ಯಾಕೆಂದರೆ ಅವೆಲ್ಲ ಪ್ರತಿಭಟಿಸಲು ಸಾಧ್ಯವಿಲ್ಲ ಮೂಕಪ್ರಾಣಿಗಳು…
ಹೌದು, ಬಕ್ರೀದ್ ದಿನ ಕುರಿ ಕಡಿಯುವುದು ಮುಸ್ಲಿಂರ ನಂಬಿಕೆ. ದೀಪಾವಳಿಗೆ ಕೋಳಿ ಬಲಿ ಹಿಂದುಗಳ ಸಂಪ್ರದಾಯ. ಹಾಗೆ, ಮಡೆಸ್ನಾನ ದಕ್ಷಿಣ ಕನ್ನಡದ ನಂಬಿಕೆ. ಅದನ್ನು ವಿರೋಧಿಸುವುದಾದರೆ, ಕುರಿ, ಕೋಳಿ ಬಲಿಯನ್ನೂ ನಿಲ್ಲಿಸಿ. ಇದು, ಮಡೆಸ್ನಾನಕ್ಕಿಂತ ಹೇಯಕೃತ್ಯವಲ್ಲವೇ? ಗೋಮಾಂಸ ತಿನ್ನುವುದು ಅವರ ಆಹಾರ ಪದ್ದತಿ. ಹಾಗಾಗಿ ಅದು ಸಮರ್ಥನೀಯ ಅಂತಾದರೆ, ಮಡೆಸ್ನಾನವೂ ಅವರ ನಂಬಿಕೆ. ಅದಕ್ಕೆ ನೀವೇಕೆ ಪುಗ್ಸಟ್ಟೆ ಕಲ್ಲು ಎಸೆಯುತ್ತೀರಿ?
ಯಾವತ್ತೂ ಹಾಗೆ, ಹುಚ್ಚಾಸ್ಪತ್ರೆಯ ಒಳಗೆ ಕುಳಿತವನಿಗೆ ಹೊರಗಿನವರು ಹುಚ್ಚರು. ಹೊರಗೆ ಕುಳಿತವನಿಗೆ ಒಳಗಿನವ. ನಮ್ಮ ಬುದ್ಧಜೀವಿಗಳ ಕಥೆಯೂ ಹಾಗೆ. ಇಲ್ಲಿ ಕುಳಿತ ಮಂದಿಗೆ ಕುಕ್ಕೆ ಸುಬ್ರಮಣ್ಯದಲ್ಲಿ ಉರುಳುವವರೆಲ್ಲ ಅನಕ್ಷರಸ್ಥರು. ಅವಿದ್ಯಾವಂತರು. ಅವರ ಅಂಕಪಟ್ಟಿಯನ್ನೆಲ್ಲ ತರಿಸಿ ಪರಿಶೀಲನೆ ನಡೆಸಿದ್ದಾರೆ ನೋಡಿ ಇವರುಗಳು!
ಅಂದಹಾಗೆ ಈ ಪದ್ದತಿ ಜೆಡಿಎಸ್, ಕಾಂಗ್ರೆಸ್ ಪಕ್ಷವಿದ್ದ ಕಾಲದಲ್ಲೂ ಇತ್ತು. ಆಗ ಯಾರೂ ಗಲಾಟೆ ಮಾಡಲಿಲ್ಲ. ಈಗ ಇದ್ದಕ್ಕಿಂದ್ದಂತೆ ಕೆಲವರಿಗೆ ಮಾನವೀಯತೆ ಉಕ್ಕಿದ್ದೇಕೆ? ಅಸಹ್ಯ ಅಂತಾ ಕೆಲವರು ಬೀದಿಗಿಳಿದಿದ್ದು ಯಾಕೆ? ಆವತ್ತು ಅದು ಸಹ್ಯವಾಗಿತ್ತಾ ಇವರುಗಳ ಪಾಲಿಗೆ ಎಂದರೆ, ಮತ್ತದೆ ಬ್ರಾಹ್ಮಣ, ದಲಿತ ಅಂತಾ ಮೂಗು ತುರಿಸುತ್ತಾರೆ. ಮೇಲ್ಜಾತಿ-ಕೆಳಜಾತಿ ಅಂತಾ ಕೆರೆದುಕೊಳ್ಳುತ್ತಾರೆ!
ಒಬ್ಬರೊ, ಇಬ್ಬರೋ ಸೇವೆ ಮಾಡಿದ್ದರೆ ಒಪ್ಪಬಹುದಾದ ಮಾತು. ಇವರು ಹೇಳಿದ ಹಾಗೆ ಮೇಲ್ಜಾತಿಯ ಹುನ್ನಾರ ಅನ್ನಬಹುದಿತ್ತು. ಆದರೆ ಸಾವಿರಾರು ಮಂದಿ ಈ ಸೇವೆ ಮಾಡಿದ್ದಾರೆ. ಅವರ್ಯಾರಿಗೂ ಈ ಸೇವೆ ಯಾಕೆ ಅಸಹ್ಯ ಅನ್ನಿಸಲಿಲ್ಲ. ಈ ಎಲ್ಲ ಸಾವಿರಾರು ಮಂದಿಯೂ ಅನಕ್ಷರಸ್ಥರಾ? ಅವಿದ್ಯಾವಂತರ? ಕಳೆದ ವರ್ಷ ನ್ಯಾಯಾಧೀಶರೊಬ್ಬರು ಮಡೆಸ್ನಾನ ಮಾಡಿದ್ದಾಗಿ ಹೇಳಿಕೊಂಡಿದ್ದರು. ಅವರು ಬಹುಶಃ ಅನಕ್ಷರಸ್ಥರಿರಬೇಕು. ಅಥವಾ ಮೇಲ್ಜಾತಿಯ ಪಿತೂರಿಯಿಂದ ಅವರು ಹಾಗೆ ಮಾಡಿರಬೇಕು!
ಬೆಂಗಳೂರಿನಲ್ಲಿ ಕುಳಿತು ಸುಮ್ಮನೆ ಮೈಉಜ್ಜಿಕೊಂಡರೆ ಯಾವ ಬದಲಾವಣೆಯೂ ಆಗುವುದಿಲ್ಲ. ಕೆಲವರಿಗೆ ಮೈಉಜ್ಜಿಕೊಂಡ ಆಧಾರದಲ್ಲಿ ಒಂದಿಷ್ಟು ಪ್ರಶಸ್ತಿಗಳು ಬರುತ್ತವೆ ಎಂಬುದನ್ನು ಹೊರತುಪಡಿಸಿ(ಅದು ಬರುವುದಿಲ್ಲ, ಕೊಡಿಸುವ ಏಜೆಂಟರಿಗೆ ಕಮಿಷನ್ ನೀಡಿ ಪಡೆಯವುದು!)ಹರಕೆ ಹೊತ್ತುಕೊಂಡವರು, ಯಾರು ನಿಷೇಧ ಹೇರಿದರೂ ಆ ಸೇವೆ ಸಲ್ಲಿಸುತ್ತಾರೆ. ಹರಕೆ ತೀರಿಸದಿದ್ದರೆ ಕೆಡುಕಾಗುತ್ತದೆ ಎಂಬ ಆಂತರಿಕ ಭಯ ಅವರಲ್ಲಿರುತ್ತದೆ. ಜೊತೆಗೆ ಹರಕೆ ಕಟ್ಟಿಕೊಂಡ ನಂತರ ಒಳ್ಳೆಯದಾಗಿದೆ ಎಂಬ ನಂಬಿಕೆ ಇರುತ್ತದೆ. ಹಾಗಾಗಿ ಇಲ್ಲಿ ಜಾತಿ ಹೆಸರಲ್ಲಿ ಮೈಪರಚಿಕೊಳ್ಳುವುದರಲ್ಲಿ ಅರ್ಥವಿಲ್ಲ…
ಕೆಲವರಿಗೆ ಸಿಗರೇಟು, ಹೆಂಡ ಮಾನಸಿಕ ನೆಮ್ಮದಿ ನೀಡುವ ಸಾಧನಗಳು. ಕುಳಿತು ಕುಡಿಯುವ ಬಾರು ಮುಖ್ಯವಾಗುವುದಿಲ್ಲ. ಅದು ಮಾರುಕಟ್ಟೆಯ ಬಾರು ಆಗಿರಬಹುದು, ಪಂಚತಾರಾ ಹೊಟೇಲಿನ ಬಾರು ಅಗಿರಬಹುದು. ಅವರ ಶಕ್ತಿಗೆ ಅನುಗುಣವಾದ, ಅಗತ್ಯಕ್ಕೆ ತಕ್ಕ ಜಾಗದಲ್ಲಿ ಕುಡಿಯುತ್ತಾರೆ. ಮಾನಸಿಕ ನೆಮ್ಮದಿ ಪಡೆಯುತ್ತಾರೆ. ಹಾಗೆಯೇ ದೇವರು, ಸೇವೆಗಳು ಕೂಡ. ಇದಕ್ಕೆ ಮತ್ತೆ ಜಾತಿ ಲೇಪ ಕಟ್ಟಿ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಒಬ್ಬರ ನಂಬಿಕೆಯನ್ನು ಬಲವಂತವಾಗಿ ಕಸಿದುಕೊಳ್ಳುವುದು ಥರವಲ್ಲ…
(ವಿಂಡೋಸ್ ೭ ಹಾಕಿಕೊಂಡು ಕನ್ನಡ ಕುಟ್ಟಲು ಕಷ್ಟಪವುತ್ತಿದ್ದೇನೆ. ಅಕ್ಷರದೋಷಗಳಿರಬಹುದು. ಕ್ಷಮೆ ಇರಲಿ…)
ನಾಚಿಗೇಡು. ಮಡೆಸ್ನಾನ ಅಜ್ಞಾನದ ಪ್ರತೀಕ. ಇತರ ಅಜ್ನಾನಗಳನ್ನ ಪಟ್ಟಿಮಾಡಿ ಮಡೆಸ್ನಾನ ತಪ್ಪಲ್ಲ ಎಂಬರ್ಥದ ಲೇಖನವೇ ನಾಚಿಗೇಡು. ಪೇಜಾವರ ಶ್ರೀಗಳೇ ಅವರ (ಮಲೆಕುಡಿಯವರ ಹಾಗೂ ಆ ಆಚರಣೆ ಮಾಡುವವರ) ಆ ಅಜ್ಞಾನ ಹೋಗಲಾಡಿಸಿ ಬರುವ ವರ್ಷಗಳಲ್ಲಿ ಈ ನೀಚ ಪದ್ಧತಿ ನಿಲ್ಲಲಿ. (ಇಲ್ಲದಿದ್ದರೆ ಮುಂದೊಂದು ದಿನ-ಬೇರೆಕಡೆಗಳಲ್ಲಿ ಆದಂತೆ-ಅನ್ಯಧರ್ಮೀಯರು ಆ ಅಜ್ಞಾನ ಹೋಗಲಾಡಿಸುತ್ತಾರೆ!!! ಆ ಜನಾಂಗದ ವಿದ್ಯಾವಂತರಿಗೂ ಮುಂದೊಂದು ದಿನ ಹಾಗೆಯೇ ಅನ್ನಿಸಬಹುದು)
ಗೆಳೆಯ ತಾಳ್ಮೆಯಿಂದ ಈ ಲೇಖನವನ್ನು ಓದಿದ್ದರಿಂದ ಈ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.. ಬೇರೆ ಎಷ್ಟೆಲ್ಲಾ ಮುಢನಂಬಿಕೆಗಳನ್ನು ಪಟ್ಟಿ ಮಾಡಿ, ಮಡೆಸ್ನಾನ ಸರಿ ಎಂದು ಸಮರ್ಥಿಸುವುದು ಅವೈಜ್ಞಾನಿಕ ಎನಿಸುವುದಿಲ್ಲವೇ.. ಜಾತಿ ವ್ಯವಸ್ಥೆಯನ್ನು ತೊಡೆಯಬೇಕು, ಸಮಾನತೆಯನ್ನು ಸಮಾಜದಲ್ಲಿ ಸ್ಥಾಪಿಸಬೇಕು ಎಂಬ ಯಾವ ಮನುಷ್ಯನಾದರೂ ಇಂತಹ ಆಚರಣೆಗಳನ್ನು ಸಮರ್ಥಿಸಬಹುದೇ? ಇನ್ನು ಹರಕೆಯನ್ನು ತೀರಿಸುವ ವಿಚಾರವಾಗಿ ಹೇಳಿದಿರಿ, ಹೌದು ನಾನು ದೇವರ ಇರುವನ್ನು ಪ್ರಶ್ನಿಸುತ್ತಿಲ್ಲ ಆದರೆ ’ಬ್ರಾಹ್ಮಣರು’ ಉಂಡ ಎಲೆಯ ಮೇಲೆ ಉರುಳುವುದು ದೇವರಿಗೆ ಸಲ್ಲಿಸುವ ಸೇವೆ-ಹರಕೆ ಹೇಗಾದೀತು? ಅವರೇನು ದೇವ ಲೋಕದಿಂದ ಬಂದ ದೇವ ಮಾನವರೇ, ಇಲ್ಲ ಜನ ಹರಿಕೆ ಕಟ್ಟಿಕೊಂಡ ದೇವರೆ? ಅವರೂ ನಮ್ಮಂತೆ ರಕ್ತ-ಮಾಂಸಗಳನ್ನು ಹೊತ್ತ ಮನುಷ್ಯರಲ್ಲವೆ? ಅವರಲ್ಲಿರುವ-ನಮ್ಮಲ್ಲಿರದ ಹೆಚ್ಚುಗಾರಿಕೆಯಾದರೂ ಏನು? ನೀವು ಉದಾಹರಣೆ ಕೊಡುವ ಕುರಿಬಲಿ, ಗೋಹತ್ಯೆ, ಪ್ರಾಣಿ ಬಲಿಯನ್ನು ವಿರೋಧಿಸುವ, ಸಸ್ಯಾಹಾರದ ಔಚಿತ್ಯದ ಬಗ್ಗೆ ಸಾರುವ.. ಒಂದು ಜೀವದ ಪ್ರಾಮುಖ್ಯತೆಯನ್ನು ಮನದಟ್ಟು ಮಾಡುವ.. ಅದು ಬಿಟ್ಟು ಅಂತಹ ಹೇಹ್ಯ ಕೃತ್ಯಗಳನ್ನು ಉದಾಹರಣೆಯಾಗಿ ಕೊಟ್ಟು ಇದನ್ನೂ ಸಮರ್ಥಿಸಿಕೊಳ್ಳುವ ಜಾಣ್ಮೆ ಬೇಡ..! ಇನ್ನೂ ಉಡುಪಿಯಲ್ಲಿ ನಡೆಯುವ “ನೆಲದ ಮೇಲೆ ಊಟ” ದ ಬಗ್ಗೆ ತಿಳಿಸಿದಿರಿ ಇದು ಅವೈಜ್ಞಾನಿಕವೆನಿಸಿದರೂ ಮನುಷ್ಯತ್ವದ ಕಗ್ಗೊಲೆಯಲ್ಲ ಎಂಬುದು ನನ್ನ ಭಾವನೆ, ಆದ್ದರಿಂದ ಆ ತರಹದ ಆಚರಣೆಗಳ ಬಗ್ಗೆ ನನ್ನ ವಿರೋಧವಿಲ್ಲ.. ಇನ್ನೂ ರಾಜಕೀಯದ ವಿಚಾರ, ನನಗೆ ಒಗ್ಗದ ವಿಚಾರ ನಾನು ಕಾಂಗ್ರೇಸಿಗರು, ಜೆಡಿಯೆಸ್ನವರು, ಬಿಜೇಪಿಯವರು ಯಾರನ್ನೂ ಸಮರ್ಥಿಸುವುದಿಲ್ಲ..! ಮನುಷ್ಯ ಮನುಷ್ಯನನ್ನು ಮನುಷ್ಯನಂತೆ ಗೌರವಿಸಬೇಕು.. ಮೇಲು-ಕೀಳಿನ ಬದಲು ಪೀಳಿಗೆಗೆ ಮನುಷ್ಯತ್ವವನ್ನು ಹೇಳಿಕೊಡಬೇಕು, ಮುಂದಿನ ಪೀಳಿಗೆಯ ಮಕ್ಕಳಿಗೆ ಮನುಷ್ಯತ್ವವನ್ನೇ ಒಂದು ಪಠ್ಯವಾಗಿ ಪರಿಚಯಿಸುವ ದಿನ ಬಂದೀತು ಎಚ್ಚರ..!!!!
ಮಾಚಿಕೊಪ್ಪರೇ, ಗೋಹತ್ಯೆ ನೀಚ ಪದ್ಧತಿ ಅಂತ ನಾವು ಹೇಳುತ್ತೇವೆ. ತಿನ್ನುವವರಿಗೆ ಅದು ಸಾಮಾನ್ಯ. ಅದೇ ರೀತಿ ಮಡೆಸ್ನಾನ ಕೂಡ ಇರಬಹುದು. ನಿಮಗೆ ನೀಚ ಅನ್ನಿಸಬಹುದು. ಮಾಡುವವರಿಗೆ ಅದು ಶ್ರದ್ಧೆ ನಂಬಿಕೆ! ಮಡೆಸ್ನಾನ ನಿಲ್ಲಿಸಬೇಕಾದರೆ ಅದನ್ನು ಮಾಡುವವರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕೇ ಹೊರತು ದೇವಸ್ಥಾನವನ್ನು, ದೇವರನ್ನು, ಆಡಳಿತ ಮಂಡಳಿಯನ್ನು , ಬ್ರಾಹ್ಮಣರನ್ನು , ಪೇಜಾವರರನ್ನು ಬೈಯುವ ಕೆಲಸವಲ್ಲ. ಅದು ಬಿಟ್ಟು ಸುಮ್ಮನೇ ಜಾತಿಗಳ ಮಧ್ಯ ವಿಷ ಬಿತ್ತುವ ಕೆಲಸಕ್ಕೆ ಹೋದರೆ ಮೊನ್ನೆ ಏನಾಯಿತು ಗೊತ್ತಲ್ಲ. ಹಾಗೆ ಆಗುತ್ತದೆ.
ಸುಶಿಕ್ಷಿತ, ಬುದ್ದಿಜೀವಿಗಳ ನೆಲದಲ್ಲಿ ಇಂದಿಗೂ ಜೀವಂತವಿರುವ (ಜೀವಂತವಿರಿಸಿಕೊಂಡಿರುವ) ಇಂತಹ ಹೇಯ ಹಾಗೂ ನೀಚ ಆಚರಣೆಗಳನ್ನ ಸಮರ್ಥಿಸಿಕೊಂಡು (ಸಿಗರೇಟು ಪ್ಯಾಕಿನ ಮೇಲಿನ ಮೇಲಿನ ವಾರ್ನಿಂಗ್ ಬರಹವನ್ನು ಉದಾಹರಣೆಗೆ ಬಳಸಿ) ಬರೆದ ಲೇಖನ ಅಧ್ಭುತವಾಗಿತ್ತು, ಇದೇ ಸಂಪ್ರದಾಯ ಹಾಗೂ ಆಚರಣೆ ಉಡುಪಿಯ ಮಠ ಹಾಗೂ ದಕ್ಷಿಣ ಕನ್ನಡದ ಎಲ್ಲಾ ದೇವಳಗಳಲ್ಲು ಜಾರಿಗೆ ತಂದದ್ದೇ ಆದರೆ ಮಲೆಕುಡಿಯ, ಕೊರಗ ಹಾಗೂ ಇನ್ನಿತರ ಕೆಳ ಜಾತಿಗಳ ಜನರ ಅರೋಗ್ಯ ಸಮೀಪದಲ್ಲೇ ಇರೋ ದೇವಳಗಲ್ಲೇ ಸುಧಾರಿಸಿಕೊಳ್ಳಬಹುದು (ಜೊತೆಜೊತೆಗೆ ಎರಡೆರಡು ಉಪಯೋಗ ಕರುಣಿಸಿದ ಹಾಗೆ ಆಗುತ್ತೆ) ಹಿರಿಯರಾದ ತಮಗೆ ತಮ್ಮ ಜನಾಂಗಕ್ಕೆ ಶ್ರೇಯಸ್ಸು, ಸಾದ್ಯವಾದರೆ ಇದರ ಬಗ್ಗೆಯೂ ಬರೀರಿ, ಹಾಃ ಕ್ಷಮಿಸಿ ನಿಮ್ಮ ಬರಹಕ್ಕೆ ಕೃತಜ್ಞತೆಗೂ ಮಿಗಿಲಾದ ಪದಕ್ಕೆ ಹುಡುಕಾಡಿದೆ…..ಸಿಗಲಿಲ್ಲ, ಕ್ಷಮೆ ಇರಲಿ
ಒಂದು ಅನಿಷ್ಟ ಪದ್ದತಿಯನ್ನು ಸಮರ್ಥಿಸಲು ಅನೇಕ ಅನಿಷ್ಟಗಳ ಉದಾಹರಣೆಯಿಂದ ಸಾಧಿಸುವುದಾದರೂ ಏನು? ಅನಿಷ್ಟ ಪದ್ಧತಿ ಸಮರ್ಥನೀಯವಾಗುವುದಿಲ್ಲ.
ಯಾರೂ ಯಾರಿಗೂ ಬ್ರಾಹ್ಮಣರ ಎಂಜಲು ಎಲೆಯ ಮೇಲೆ ಉರುಳಾಡಿ ಎಂದು ಬಲವಂತವೇನು ಮಾಡಿಲ್ಲ.ಈ ಸೇವೆಯನ್ನು ಮಾಡುವವರು ಸ್ವಇಚ್ಛೆಯಿಂದ ಮಾಡುತ್ತಿದ್ದಾರೆ. ಅದೆಲ್ಲವೂ ಅವರವರ ನಂಬಿಕೆಗೆ ಬಿಟ್ಟ ವಿಚಾರ. ಈ ರೀತಿ ನಿಷೇಧ ಹೇರುವುದು ಜನರ ಧಾರ್ಮಿಕ ಭಾವನೆಗಳಿಗೆ ನೋವು ಮಾಡಿದಂತೆ…..
ಮಂಡೆ ಬಿಸಿ ಬಿಸಿಯಾಗುವ ವಾತಾವರಣವೇ ನಿತ್ಯ ಸೃಸ್ಟಿಯಾಗುತ್ತಿರುವಾಗ ಯಾರಿಗೇಕೆ ಎಂದು ಪ್ರಶ್ನಿಸುವ ಮೂಲಭೂತವಾದದ ಮಾತೇ ಮನಸಿಗೆ ಘಾಸಿ ಮೂಡಿಸುತ್ತಿದೆ.ನಿತ್ಯ ಜೀವನದಲ್ಲಿನ ಹತ್ತಾರು ವೇಷಗಳು, ನೂರಾರು ಸಂಪ್ರದಾಯ,ನಂಬಿಕೆ ಎಂದೆಲ್ಲಾ ಬಿಂಬಿಸಿ ಸಮಾಜವನ್ನು ಅಜ್ಙಾನ,ಅಂಧಕಾರ,ಮೌಡ್ಯತೆಯತ್ತ ಮತ್ತಷ್ಟ…ು ಕೊಂಡೊಯ್ಯುವಂತೆ ಆ ಮೂಲಕ ಪಟ್ಟ ಭದ್ರರ ಸಿದ್ಧಾಂತ,ತತ್ವಗಳ ಬೇರುಗಳು ಗಟ್ಟಿಯಾಗುವಂತೆ ಮಾಡುತ್ತಿರುವ ವ್ಯವಸ್ಥಿತ ಹುನ್ನಾರುಗಳನ್ನು ನೋಡಿಯೂ ನೋಡದವರಂತೆ ಕಣ್ಮುಚ್ಚಿಕುಳಿತು ಕೊಳ್ಳಬೇಕೆ? ಇನ್ನೂ ಬಹಳ ಕಾಲ ಇದೇ ವ್ಯವಸ್ಥೆ ಇರುವುದೆಂಬ ಭರವಸೆ ಬೇಡ.ವೈಚಾರಿಕ ತಿಳುವಳಿಕೆ,ಸಂಶೋಧನಾ ಮನೋಭಾವ,ವೈಜ್ಞಾನಿಕತೆಗಳೆಲ್ಲದರ ಪರಿಣಾಮ ಕಟ್ಟಕಡೆಯ ಮನುಷ್ಯನೂ ಜಾಗೃತನಾಗುವಂತೆ ಆಗಿದೆ.ಕಾಲವೂ ಬದಲಾಗುತ್ತಿದೆ.ಅಪ್ಪ ನೆಟ್ಟ ಆಲದ ಮರಕ್ಕೆ ನೇಣುಹಾಕಿಕೊಳ್ಳಬೇಕಿದ್ದ ವ್ಯವಸ್ಥೆಯ ಅಟ್ಟಹಾಸಕ್ಕೆ ಕೊನೆಮೊಳೆ ಹೊಡೆಯುವ ಕಾಲ ಬಂದಿದೆ.