ಲೋಕಪಾಲ್ಗಾಗಿ ಬೀದಿಗಿಳಿಯುವ ಮೊದಲು…
ಆಗಷ್ಟ್ 17, 2011 aksharavihaara ಮೂಲಕ
ಬೋಫೋರ್ಸ್, ಕಾಮನ್ವೆಲ್ತ್, ೨ಜಿ ಹಗರಣದಂಥ ಭ್ರಷ್ಟತೆಯ ಬ್ರಹ್ಮಾಂಡದಲ್ಲಿ ಮುಳುಗಿರುವ ಕಾಂಗ್ರೆಸ್ಗೆ ಅಣ್ಣಾ ಹಜಾರೆ ಬಾಯಿ ಮುಚ್ಚಿಸುವುದು ಅವಶ್ಯವಾಗಿದೆ. ಹೀಗಾಗಿಯೇ ಯುಪಿಎ ಮೈತ್ರಿಕೂಟ ಹಜಾರೆಯವರನ್ನು ಹೋರಾಟಕ್ಕಿಳಿಯುವ ಮೊದಲೇ ಬಂಧಿಸಿ, ವ್ಯವಸ್ಥಿತ ರೀತಿಯಲ್ಲಿ ಇಡೀ ಹೋರಾಟವನ್ನು ಹಳ್ಳ ಹಿಡಿಸುವ ಹುನ್ನಾರ ನಡೆಸಿದ್ದು. ಆದರೆ ಈ ಸಲ ಸರಕಾರದ ಲೆಕ್ಕಾಚಾರ ತಲೆ ಕೆಳಗಾಗಿದೆ. ಹಜಾರೆ ತಮ್ಮ ಪಟ್ಟು ಸಡಿಲಗೊಳಿಸುವ ರೀತಿ ಕಾಣುತ್ತಿಲ್ಲ. ಜೊತೆಗೆ ದೇಶದಾದ್ಯಂತ ಸಹಸ್ರಾರು ಮಂದಿ ಹಜಾರೆ ಬೆಂಬಲಿಸಿ ಹೋರಾಟಕ್ಕೆ ಇಳಿದಿದ್ದಾರೆ.
ನಮ್ಮ ದೇಶದ ಬಹು ದೊಡ್ಡ ದುರಂತವದು. ಸಹಸ್ರಾರು ಜನ ಮೈದಾನಕ್ಕಿಳಿದು ಘೋಷಣೆ ಕೂಗುತ್ತಾರೆ ನಿಜ. ಆದರೆ ಯಾಕೆ ಅವರು ಮೈದಾನದಲ್ಲಿ ಇದ್ದಾರೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ! ಹೀಗಾಗಿ ವಾರ ಕಳೆಯುವುದರೊಳಗೆ ಹೋರಾಟದ ಕಿಚ್ಚು ಆರಿ ಹೋಗುತ್ತದೆ. ಹೋರಾಟಗಾರರು ಚದುರಿ ಹೋಗುತ್ತಾರೆ. ಕೊನೆಗೆ ಅನಿವಾರ್ಯವಾಗಿ ಅಂಥ ಹೋರಾಟದ ಮುಂದಾಳತ್ವ ವಹಿಸಿದವರು ಶರಣಾಗುವ ಸ್ಥಿತಿ ಬರುತ್ತದೆ.
ಜನ್ ಲೋಕಪಾಲ್, ಅಂಥ ಹೋರಾಟವಾಗಬಾರದು. ಖಂಡಿತವಾಗಿಯೂ ವಾರ, ಹದಿನೈದು ದಿನಕ್ಕೆ ಮುಗಿಯುವ ಸತ್ಯಾಗ್ರಹವಲ್ಲವಿದು. ಹಜಾರೆ ಹೇಳಿದ ಹಾಗೆ ಇದನ್ನು ನಾವು ದ್ವಿತೀಯ ಸ್ವತಂತ್ರ ಸಂಗ್ರಾಮ ಎಂದು ಭಾವಿಸಬೇಕಾದ ಅನಿವಾರ್ಯತೆಯಿದೆ.
“ಜನ್ ಲೋಕಪಾಲ್” ಎಂಬುದು ಸದ್ಯಕ್ಕೆ ಒಂದು ಮಸೂದೆ. ಸಂಸತ್ತಿನ ಉಭಯ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರಗೊಂಡರೆ ಕಾಯ್ದೆಯಾಗುತ್ತದೆ. ಭ್ರಷ್ಟಾಚಾರ ವಿರೋಧಿ ಕಾನೂನು ರೂಪಿಸಲು ಸಿದ್ಧವಾಗಿರುವ ಮಸೂದೆಯೇ ಈ ಜನ್ ಲೋಕಪಾಲ್. ಸಂಸತ್ತಿನ ಮೇಲ್ಮನೆ ಹಾಗೂ ಕೆಳಮನೆಗಳಲ್ಲಿ ಅಂಗೀಕಾರಗೊಂಡರೆ, ಚುನಾವಣೆ ಆಯೋಗದಂತೆ “ಲೋಕಪಾಲ್” ಎಂಬ ಪ್ರತ್ಯೇಕ ಸ್ವತಂತ್ರ ಆಯೋಗ ತಲೆ ಎತ್ತುತ್ತದೆ.
ಇಂಥದ್ದೊಂದು ಕಾನೂನಿಗಾಗಿ ೧೯೬೮ರಲ್ಲೇ ಧ್ವನಿ ಎದ್ದಿತ್ತು. ಮುರಾರ್ಜಿ ದೇಸಾಯಿವರ ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಶಾಂತಿಭೂಷಣ್, ಲೋಕಪಾಲ್ನ್ನು ರೂಪಿಸಿದವರು. ೧೯೬೮-೬೯ನೇ ಲೋಕಸಭೆ ಅಧಿವೇಶನದಲ್ಲಿ ಈ ಮಸೂದೆ ಅಂಗೀಕಾರವಾಗಿದ್ದು ನಿಜ. ಆದರೆ ರಾಜ್ಯಸಭೆ ಇದಕ್ಕೆ ಅಡ್ಡಗಾಲಾಯ್ತು. ಹೀಗಾಗಿ ಲೋಕಪಾಲ್ ಕನಸಾಗಿಯೇ ಉಳಿಯಿತು.
೧೯೭೧,೭೭,೮೫,೮೯,೯೬,೨೦೦೧,೨೦೦೫ ಮತ್ತು ೨೦೦೮ರಲ್ಲಿ ಪುನಃ ಉಭಯ ಸದನಗಳಲ್ಲಿ ಈ ಮಸೂದೆ ಚರ್ಚೆಗೆ ಬಂದಿದೆ. ಆದಾಗ್ಯೂ ಅಂಗೀಕಾರವಾಗಲಿಲ್ಲ.
೨೦೧೦ರಲ್ಲಿ ಮತ್ತೆ ಈ ಕಾಯ್ದೆಗಾಗಿ ಧ್ವನಿ ಎದ್ದಿದ್ದು ನಿಜ. ಆಗ ಸರಕಾರ ಇದರ ಕರಡು ರಚನೆಗೆ ಮುಂದಾಯ್ತು. ೨೦೧೧ರಲ್ಲಿ ಗಾಂಧಿವಾದಿಯಾಗಿರುವ ಅಣ್ಣಾ ಹಜಾರೆ, ಈ ಮಸೂದೆ ಅಂಗೀಕಾರವಾಗಲೇ ಬೇಕು ಅಂತಾ ಉಪವಾಸ ಸತ್ಯಾಗ್ರಹ ಕುಳಿತರು. ಮಾಧ್ಯಮಗಳು ಹಾಗೂ ಸಹಸ್ರಾರು ಬೆಂಬಲಿಗರನ್ನು ಇದು ಆಕರ್ಷಿಸಿತು. ಬಾಬಾ ರಾಮ್ದೇವ್, ಸ್ವಾಮಿ ಅಗ್ನಿವೇಶ್, ರವಿಶಂಕರ್ ಗೂರೂಜಿ ಸೇರಿದಂತೆ ಅನೇಕರು ಅಣ್ಣಾಗೆ ಬೆಂಬಲವಾಗಿ ನಿಂತರು. ೪ ದಿನಗಳ ಉಪವಾಸದ ಬಳಿಕ ಮಸೂದೆಯನ್ನು ೨೦೧೧ರ ಮುಂಗಾರು ಅಧಿವೇಶನದಲ್ಲಿ ಮಂಡಿಸುವುದಾಗಿ ಮನ್ಮೋಹನ್ ಸಿಂಗ್ ಹೇಳಿಕೆ ನೀಡಿದರು. ಅದಕ್ಕೆ ಒಪ್ಪಿದ ಅಣ್ಣಾ ಆ.೧೬ ಡೆಡ್ಲೈನ್ ಕೊಟ್ಟರು. ಗಡುವು ಮುಗಿದ ಕಾರಣ ಅಣ್ಣಾ ಮತ್ತೆ ಬೀದಿಗಿಳಿದಿದ್ದಾರೆ.
ಸರಕಾರ ಹಾಗೂ ನಾಗರೀಕ ಸಮೂಹದ ದೃಷ್ಟಿಯನ್ನು ಒಟ್ಟುಗೂಡಿಸಿ ಮಸೂದೆಯ ಕರಡು ರಚಿಸುವ ಪ್ರಹಸನವೂ ನಡೆದಿದೆ. ಕ್ಯಾಬಿನೆಟ್ನ ೫ ಸಚಿವರು ಹಾಗೂ ಅಣ್ಣಾ ಬಳಗದ ೫ ಮಂದಿಯನ್ನು ಸೇರಿಸಿ ಒಂದು ಸಮಿತಿ ರಚಿಸಲು ಸರಕಾರ ಮುಂದಾಯ್ತು. ಸಮಿತಿ ರಚನೆಯೂ ಆಯ್ತು. ಆದರೆ ಇಲ್ಲಿ ಒಮ್ಮತ ಬರಲಿಲ್ಲ. ಸರಕಾರ ತನ್ನ ಪಟ್ಟು ಬಿಡಲಿಲ್ಲ.
ಈಗಿನ ಪ್ರಸ್ತಾಪದಂತೆ ಮಸೂದೆ ಅಂಗೀಕಾರಗೊಂಡರೆ, ರಾಜ್ಯದಲ್ಲಿ ಲೋಕಾಯುಕ್ತವಿರುವಂತೆ ಕೇಂದ್ರದಲ್ಲಿ ಲೋಕಪಾಲ್ ಆಯೋಗ ತಲೆ ಎತ್ತಲಿದೆ. ಸಂಪೂರ್ಣ ಸ್ವಾಯತ್ತತೆ ಪಡೆಯಲಿರುವ ಈ ಆಯೋಗ, ಕ್ಯಾಬಿನೆಟ್ ಕಾರ್ಯಾಲಯ ಹಾಗೂ ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ ಇರುತ್ತದೆ. ಪರಿಣಾಮವಾಗಿ ಸರಕಾರ ಹಾಗೂ ಮಂತ್ರಿಗಳಿಂದ ಈ ಆಯೋಗ ಸ್ವತಂತ್ರವಾಗಿರುತ್ತದೆ.
ಆಯೋಗದ ಸದಸ್ಯರನ್ನು ನ್ಯಾಯಮೂರ್ತಿಗಳು, ಸ್ವಚ್ಛ ದಾಖಲೆ ಹೊಂದಿರುವ ಐಎಎಸ್ ಅಧಕಾರಿಗಳು, ಖಾಸಗಿ ನಾಗರೀಕರು ಮತ್ತು ಸಂವಿಧಾನಿಕ ಪ್ರಾಧಿಕಾರಗಳಿಂದ ಆಯ್ಕೆ ಮಾಡಬೇಕು. ಈ ಆಯ್ಕೆ ಪಾರದರ್ಶಕವಾಗಿರಬೇಕು. ಆಯ್ಕೆ ಸಮಿತಿ, ಅಂತಿಮ ಪಟ್ಟಿಯನ್ನು ವೀಡಿಯೊ ರೆಕಾರ್ಡ್ ಮಾಡಿ, ನಂತರ ಸಾರ್ವಜನಿಕರಿಗೆ ನೀಡಬೇಕು. ಸಿವಿಸಿಯಂಥ ಈಗಿರುವ ಭ್ರಷ್ಟಾಚಾರ ನಿಯಂತ್ರಣ ಅಂಗಗಳನ್ನು ಲೋಕಪಾಲ್ದೊಂದಿಗೆ ವೀಲಿನಗೊಳಿಸಬೇಕು. ಯಾವುದೇ ಅಧಿಕಾರಿಗಳು, ನ್ಯಾಯಮೂರ್ತಿಗಳು ಹಾಗೂ ರಾಜಕರಾಣಿಗಳನ್ನು ಯಾರ ಅನುಮತಿಯೂ ಇಲ್ಲದೇ ವಿಚಾರಣೆಗೆ ಒಳಪಡಿಸುವ, ಅವರ ಸಂಪತ್ತು ತನಿಖೆ ನಡೆಸುವ ಸ್ವತಂತ್ರ ಈ ಆಯೋಗಕ್ಕೆ ಇರುತ್ತದೆ.
೨೦೧೦ರಲ್ಲಿ ರಚಿತವಾದ ಕರಡು ಮಸೂದೆಗೂ, ೧೯೬೯ರ ಮೂಲ ಮಸೂದೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಸಾರ್ವಜನಿಕರ ದೂರ ಅನುಸರಿಸಿ ದಾಳಿ ನಡೆಸುವ ಹಕ್ಕು ಲೋಕಪಾಲ್ಗೆ ಇಲ್ಲ. ರಾಜ್ಯಸಭೆ ಅಧ್ಯಕ್ಷರು ಅಥವಾ ಲೋಕಸಭೆ ಸ್ಪೀಕರ್ಗಳಿಂದ ಬಂದ ದೂರನ್ನು ಮಾತ್ರ ತನಿಖೆ ನಡೆಸಬಹುದು ಅನ್ನುತ್ತಿದೆ ೨೦೧೦ರ ಕರಡು. ಹಾಗಂದ ಮೇಲೆ ಖಂಡಿತವಾಗಿಯೂ ನಮಗೆ ಲೋಕಪಾಲ್ ಅಗತ್ಯವೇ ಇಲ್ಲ! ೧೯೬೯ರ ಮಸೂದೆ ಪ್ರಕಾರ, ಸಾರ್ವಜನಿಕ ದೂರುಗಳನ್ನೂ ತನಿಖೆ ನಡೆಸುವ ಹಕ್ಕು ಲೋಕಪಾಲ್ಗೆ ಇದೆ. ಇನ್ನೊಂದು ಪ್ರಮುಖ ಅಂಶವೆಂದರೆ, ೨೦೧೦ರ ಕರಡು ಅನ್ವಯ ಎಫ್ಐಆರ್ ದಾಖಲಿಸುವ ಹಕ್ಕು ಈ ಆಯೋಗಕ್ಕೆ ಇಲ್ಲ! ಯಾವುದೇ ಪೋಲೀರ್ಸ ಪವರ್ ಇರುವುದಿಲ್ಲ. ಸಿಬಿಐಗೂ ಲೋಕಪಾಲ್ಗೂ ಸಂಬಂಧವೇ ಇಲ್ಲ! ಈ ರೀತಿ ಅನುಕೂಲ ಸಿಂಧು ಕರಡನ್ನು ಸರಕಾರ ರಚಿಸಿಕೊಂಡಿದೆ. ಆಯೋಗವನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿದೆ. ಹೀಗಾದರೆ ಖಂಡಿತ ನಮಗೆ ಲೋಕಪಾಲ್ ಬೇಕಿಲ್ಲ.
ಇನ್ನೂ ಜೂನ್.೨೩,೨೦೧೧ರಂದು ಸರಕಾರ ಬಿಡುಗಡೆಗೊಳಿಸಿದ ಲೋಕಪಾಲ್ ಕರಡು ಪ್ರತಿಗೂ, ಮೂಲಕ್ಕೂ ತಾಳೆಯೇ ಇಲ್ಲ! ಪ್ರಧಾನ ಮಂತ್ರಿಯನ್ನು ಪ್ರಶ್ನಿಸುವ ಹಕ್ಕು ಲೋಕಪಾಲ್ಗೆ ಇಲ್ಲ ಅನ್ನುತ್ತಿದೆ ಸರಕಾರ! ಕಳೆದ ಮಾರ್ಚ್ನಿಂದ ಇದರ ವಿರುದ್ಧ ಹೋರಾಟ ಶುರುವಾಗಿದೆ. ಅಣ್ಣಾ ಜೊತೆಗೆ ಸಹಸ್ರಾರು ಮಂದಿ ಕೈಜೋಡಿಸಿದ್ದಾರೆ. ಕಪಿಲ್ ಸಿಬಾಲ್, ಪಿ.ಚಿದಂಬರಂರಂಥ ಎಡಬಡಂಗಿಗಳನ್ನು ಹೊಂದಿರುವ ಕರಡು ರಚನಾ ಸಮಿತಿಯಿಂದ ನಾವು ಏನನ್ನು ನೀರಿಕ್ಷಿಸಲು ಸಾಧ್ಯವಿಲ್ಲ. ಆ ಸಮಿತಿಯ ಸದಸ್ಯರಾಗಿರುವ ಶಾಂತಿಭೂಷಣ್, ಪ್ರಶಾಂತ್ಭೂಷಣ್, ಸಂತೋಷ್ ಹೆಗ್ಡೆಯವರಂಥ ಹಿರಿಯರು ಯಾರಿಗೂ ಮಣಿಯಬಾರದು. ರಾಜ್ಯ ಬಿಜೆಪಿಯ ಪ್ರಕರಣದಲ್ಲಿ ಈ ಹಿಂದೊಮ್ಮೆ ಇದ್ದಕ್ಕಿದ್ದಂತೆ ಅಡ್ವಾಣಿ ಅಣ್ಣನಾದಂತೆ, ಈ ಸಲ ಸಂತೋಷ್ ಹೆಗ್ಡೆ ಬಳಗಕ್ಕೆ ಮತ್ತೆ ಯಾರಾದ್ರು ಸಹೋದರರಾಗದಿದ್ದರೆ ಸಾಕು!
ಒತ್ತಡಕ್ಕೆ ಮಣಿದು ಜನಲೋಕಪಾಲ್ ಅಂಗೀಕಾರಕ್ಕೆ ಸರಕಾರ ಸಜ್ಜಾಗಬಹುದು. ಆದರೆ, ಅದರ ಹಿಂದೆ ಒಂದಷ್ಟು ಷರತ್ತುಗಳನ್ನು ಖಂಡಿತವಾಗಿಯೂ ವಿಧಿಸುತ್ತದೆ. ಲೋಕಾಯುಕ್ತದಂತೆ, ಲೋಕಪಾಲ್ ಆಯೋಗವನ್ನು ತನ್ನ ತೆಕ್ಕೆಯೊಳಗೆ ಇಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಮುಖ್ಯವಾಗಿ ರಾಜ್ಯಸಭೆ ಅಧ್ಯಕ್ಷ ಹಾಗೂ ಲೋಕಸಭೆಯ ಸ್ಪೀಕರ್ ನೀಡಿದ ದೂರುಗಳನ್ನು ಮಾತ್ರ ತನಿಖೆ ನಡೆಸುವ ಹಕ್ಕು ನೀಡಲು ಸರಕಾರ ಮುಂದಾಗಿದೆ. ಈ ಇಬ್ಬರೂ ಸರಕಾರದ ಕೈಗೊಂಬೆಗಳಾಗಿರುತ್ತಾರೆ. ಹೀಗಾಗಿ ಮಸೂದೆಯನ್ನು ಇಂಥ ದುರಂತದಿಂದ ತಪ್ಪಿಸುವುದು ನಮ್ಮ ಮುಂದಿರುವ ನೈಜ ಸವಾಲು…
Like this:
Like ಲೋಡ್ ಆಗುತ್ತಿದೆ...
Related
Posted in ಚಿಂತನ ಚಾವಡಿ | 1 ಟಿಪ್ಪಣಿ
Nice.