ಆಟೋ ಹತ್ತುವುದು ಅಂದ್ರೆ ನಂಗೆ ತುಂಬಾ ಭಯ. ಯಾಕಂದ್ರೆ ಅವರ ಕೈಯಲ್ಲಿ ಜಗಳ ಮಾಡದೇ ಇಳಿದ ದಿನವೇ ಇಲ್ಲ. ಬೇಕಾದ ಜಾಗದಲ್ಲಿ ಇಳಿಸಲ್ಲ, ಹಾಡುಹಗಲೇ ಅಷ್ಟು ಕೊಡಿ, ಇಷ್ಟು ಕೊಡಿ ಅಂತಾರೆ..ಹೀಗೆ ಹತ್ತೆಂಟು ಬಗೆಯ ತರ್ಲೆಗಳು ಆಟೋದವರದ್ದು. ಇನ್ನೂ, ಆಟೋ ಹತ್ತಿದ ಮೇಲೆ ಕೆಲ ಚಾಲಕರು ಮಾತಾಡುತ್ತಾರೆ ಮತ್ತು ಕೆಲವರನ್ನು ಕಂಡಾಗ ಮಾತಾಡಿಸಬೇಕು ಅನ್ನಿಸತ್ತೆ. ಇನ್ನು ಹಲವರನ್ನು ನೋಡಿದ್ರೆ ಮಾತಾಡಿಸುವುದೇ ಬೇಡ ಅನ್ನಿಸತ್ತೆ. ಆದ್ರೂ ಸಾಮಾನ್ಯವಾಗಿ ಅವರ ಸಂಪಾದನೆ, ಬೆಂಗಳೂರಿನ ಬದುಕು ಇತ್ಯಾದಿಗಳ ಕುರಿತಾಗಿ ಕೇಳುತ್ತೇನೆ.
ಕಸ್ತೂರಿ ಬಾ ರಸ್ತೆಗೆ ಹೋಗಬೇಕಿತ್ತು. ೧೨ ಗಂಟೆಗೆ ಕಾರ್ಯಕ್ರಮ ಇದ್ದದ್ದು. ಸಣ್ಣದೊಂದು ನಿದ್ದೆ ತೆಗೆದು ಎದ್ದಾಗ ೧೧.೪೦ ಆಗಿತ್ತು. ಹೊರಗಡೆ ನೋಡಿದ್ರೆ ಕಿಟಿಕಿಟಿ ಮಳೆ. ಕಷ್ಟಪಟ್ಟು ಮುಖ್ಯ ರಸ್ತೆಗೆ ಬಂದು ನಾಲ್ಕಾರು ಆಟೋಗಳಿಗೆ ಕೈ ಮಾಡಿದೆ. ಕೈ ನೋವು ಬಂತು ಹೊರತು ಆಟೋ ನಿಲ್ಲಿಸಲಿಲ್ಲ. ಅಷ್ಟೊತ್ತಿಗೆ ಒಂದು ಬಸ್ ಬಂತು. ಶ್ರೀನಿವಾಸ ನಗರಕ್ಕೆ ಹೋಗಿ ಇಳಿದೆ. ಬಸ್ಸ್ಟಾಂಡ್ನಲ್ಲೇ ಒಬ್ಬ ಆಟೋದವರೊಬ್ಬರು ನಿಂತಿದ್ದ. ಕೇಳುತ್ತಿದ್ದಂತೆ ಹತ್ತಿ ಸರ್ ಅಂದ. ಕೈಯಲ್ಲಿ ಸಿಗರೇಟು ಹಿಡಿದ ಅವರನ್ನು ನೋಡಿ, ಇವತ್ತು ಹೇಗೂ ಜಗಳ ಇದೆ ಅಂತಾ ಆಟೋ ನಂಬರ್ ನೋಡಿಕೊಂಡೆ. ನಾವು ಕೂರುವ ಸೀಟ್ನ ಎದುರುಗಡೆ ಅವರ ಪರವಾನಗಿ ಪತ್ರ ಇರುತ್ತದೆ. ಸಿಗ್ನಲ್ನಲ್ಲಿ ಅದರ ಫೋಟೊವನ್ನೂ ತೆಗೆದುಕೊಂಡೆ ಅವರಿಗೆ ಗೊತ್ತಾಗದಂತೆ! ಜತೆಗೆ ಬೆಂಗ್ಳೂರು ಇನೋಗೆ ಮೆಸೇಜ್ ಮಾಡಿ ಶ್ರೀನಿವಾಸ ನಗರ-ಕಸ್ತೂರಿ ಬಾ ರಸ್ತೆಗೆ ಎಷ್ಟು ದೂರ ಅಂತ ತಿಳಿದುಕೊಳ್ಳುವ ಯತ್ನ ಮಾಡಿದೆ. ವಿದ್ಯಾಪೀಠ, ಆಶ್ರಮ, ನ್ಯಾಷನಲ್ ಹೈ ಸ್ಕೂಲ್, ಮಿನರ್ವ, ರವೀಂದ್ರ ಕಲಾಕ್ಷೇತ್ರ…೫.೫ ಕಿ.ಮೀ…೪೯ರೂ ಅಂತ ಆ ಕಡೆಯಿಂದ ಸಂದೇಶ ಬಂತು.
ನಾನು ಯಾವುದೋ ಲೆಕ್ಕಾಚಾರ ಹಾಕಿಕೊಂಡು ಅವರ ಹಾದಿ ತಪ್ಪಿಸಿದ್ದೆ. ಆತ ಸೀದಾ ಗವಿಪುರಂ ಕಡೆ ಸಾಗಿದ. ಸರ್ ಮಾರ್ಕೆಟ್ ಮೇಲೆ ಹೋಗಬೇಕಾ ಅಂದರು. ಅಷ್ಟೊತ್ತಿಗೆ ಮಿನರ್ವ ಮೇಲೆ ಹೋಗುವುದು ಹತ್ರ ಎಂದು ಬೆಂಗಳೂರು ಇನೋದಿಂದ ಗೊತ್ತಾಗಿತ್ತು. ಹಾಗಾಗಿ ಹತ್ತಿರದ ರಸ್ತೆಯಲ್ಲಿ ಹೋಗಿ ಅಂದೆ! ನಾನು ಮಿನರ್ವ ಮೇಲೆ ಹೋಗ್ಬೇಕು ಅಂತಾ ಹೊರಟರೆ, ನೀವು ಹೀಗೆ ಹೋಗಿ ಅಂತಾ ಸುಮ್ಮನೆ ಸುತ್ತು ಹಾಕ್ಸಿದ್ರಲ್ಲ ಅಂತಾ ಅವರು ಹೊರಟರು.
ಟೌನ್ಹಾಲ್ವರೆಗೆ ನಾನು ಮೊಬೈಲ್ನಲ್ಲಿ ಏನೋ ಮಾಡುತ್ತಿದೆ. ಹಾಗಾಗಿ ಅವರೂ ಸುಮ್ಮನಿದ್ದರು. ಕೊನೆಗೆ ಸರ್ ದಿನಕ್ಕೆ ಎಷ್ಟು ಸಂಪಾದನೆ ಆಗತ್ತೆ, ಮಕ್ಕಳು..ಇತ್ಯಾದಿ ವಿಚಾರಿಸಿದೆ. ಅಕ್ಷರಶಃ ಅಚ್ಚರಿ ಕಾದಿತ್ತು. “ದಿನಕ್ಕೆ ೫೦೦ರೂ. ಆಗತ್ತೆ. ನಾನು ಜಾಸ್ತಿ ಆಟೋ ಓಡಿಸಲ್ಲ. ಇದು ನನ್ನ ಫ್ರೆಂಡ್ ಆಟೊ. ನಂಗೆ ಒಂದು ಕಾಲು ಇಲ್ಲ…” ಎಂದು ಅವರು ತಮ್ಮ ತುಂಡಾದ ಕಾಲನ್ನು ತೋರಿಸಿದಾಗ ನನ್ನ ಮೈ ಜುಂ ಎಂದಿತ್ತು. ಒಂದೇ ಕಾಲಲ್ಲಿ ಆಟೋ ಓಡಿಸುತ್ತಾರೆ. ಅವರ ತಾಯಿಗೆ ಹೃದಯದ ಶಸ್ತ್ರ ಚಿಕಿತ್ಸೆಯಂತೆ. ಹಾಗಾಗಿ ಕಳೆದ ೪ ದಿನದಿಂದ ಹಗಲು ರಾತ್ರಿ ಆಟೋ ಓಡಿಸುತ್ತಿದ್ದಾರಂತೆ.
‘ಧರ್ಮಸ್ಥಳದ ಹೆಗಡೆಯವರು ೩೦,೦೦೦ರೂ. ಕೊಟ್ಟಿದ್ದಾರೆ. ಪೇಜಾವರರು ೧೦,೦೦೦ರೂ. ಕೊಟ್ಟಿದ್ದಾರೆ. ಎಲ್ಲಾ ಆಸ್ಪತ್ರೆಯಲ್ಲಿ ಇದ್ದಾರೆ. ಇವತ್ತು ಸಂಜೆ ಆಪ್ರೇಷನ್. ನಾನು ಹೋಗ್ಬೇಕು…ಮಕ್ಕಳು ಇಲ್ಲ. ಎಂಇಎಸ್ ಇವನಿಂಗ್ ಕಾಲೇಜ್ನಲ್ಲಿ ಡಿಗ್ರಿ ಓದಿ ಕೆಲಸಕ್ಕೆ ಸೇರಿದೆ. ನಂತರ ವಿಆರ್ಎಸ್ ತಗೊಂಡೆ. ಅಪ್ಪನಿಗೆ ಕ್ಯಾನ್ಸರ್ ಆಗಿತ್ತು. ೭ ಲಕ್ಷ ಖರ್ಚಾಯಿತು. ಎಷ್ಟಂದ್ರೂ ಹೆತ್ತವರು, ಅವರನ್ನು ನೋಡದೆ ಇರಲು ಮನಸ್ಸು ಬರೋದಿಲ್ಲ. ಕೆಲವರು ದುಡ್ಡಿಗೆ ಹೆದ್ರಿ ಅವರನ್ನೂ ಬಿಟ್ಟುಬಿಡ್ತಾರೆ. ನನ್ನ ಕಣ್ಣಿಗೆ ಬೇರೆ ಆಪ್ರೇಷನ್ ಆಯ್ತು…ಶುಗರ್ನಿಂದ ಒಂದು ಕಾಲು ಕತ್ತರಿಸಿದರು…ನಂದು ಕಥೆ ಬಿಡಿ ಸರ್…ಇದ್ನೆಲ್ಲ ಹೇಳಿಕೊಂಡಿದ್ದಕ್ಕೆ ಬೇಜಾರು ಇಲ್ವಲ್ವ…ಗ್ರಹಚಾರ ಬಂದ್ರೆ ಹೇಗೆಲ್ಲ ಬರುತ್ತೆ ನೊಡಿ ಸರ್…’ಅವರು ಮಾತು ಮುಗಿಸುವ ವೇಳೆಗೆ ನನ್ನ ಕಣ್ಣು ಒದ್ದೆಯಾಗಿತ್ತು. ಇಳಿಯುವಾಗ ಸ್ವಲ್ಪ ಹಣ ಕೊಟ್ಟು ಇಳಿಯಬೇಕು ಅನ್ನಿಸಿತ್ತು.
ಕಸ್ತೂರಿ ಬಾ ರಸ್ತೆ ಬಂತು. ‘ಸರ್ ತಪ್ಪು ತಿಳಿಯಬೇಡಿ..ಇವತ್ತು ಬೆಳಿಗ್ಗೆ ಬ್ಲಡ್ಬ್ಯಾಂಕ್ಲ್ಲಿ ೧,೦೦೦ರೂ. ಕೊಟ್ಟು ಬಂದೆ…’ಎನ್ನುತ್ತಾ ಕೈ ಹಿಡಿದುಕೊಂಡರು. ಮೀಟರ್ನದ್ದು ೬೦ರೂ. ಆಗಿತ್ತು. ಪರ್ಸ್ನಲ್ಲಿದ್ದ ೨೦೦ ರೂ. ಕೊಟ್ಟು ತಾಯಿ ಆರೋಗ್ಯವಾಗಿರಲಿ, ಏನಾದ್ರು ಸಹಾಯ ಬೇಕಿದ್ರೆ ಕೇಳಿ ಅಂತಾ ವಿಸಿಟಿಂಗ್ ಕಾರ್ಡ್ ಕೊಟ್ಟು ಬಂದೆ…ಆಮೇಲೆ ಅನ್ನಿಸಿತ್ತು ಅವರು ಹೇಳಿದ್ದೆಲ್ಲ ಒಮ್ಮೆ ಸುಳ್ಳು ಆಗಿರಬಹುದಾ? ಎಂದು. ದಿನಕ್ಕೆ ಎಷ್ಟೋ ಕಳೆಯುತ್ತೇವಂತೆ, ಸುಳ್ಳೋ, ಸತ್ಯವೋ ಎಂದು ಹೆಜ್ಜೆ ಹಾಕಿದೆ.
ನಂಗೆ ಇಂಥ ಅದೆಷ್ಟೋ ಅನುಭವ ಆಗಿದೆ ಮತ್ತು ಆಗುತ್ತಿರುತ್ತದೆ. ಹೋಟೆಲ್ನಲ್ಲಿ ನಿಂತು ತುತ್ತು ಬಾಯಿಗೆ ಹಾಕುತ್ತಿದ್ದಾಗ ಯಾರಾದ್ರು ಬಂದು ಬೇಡಿದರೆ ನನಗಂತೂ ಊಟವೇ ಇಳಿಯುವುದಿಲ್ಲ. ನಮ್ಮ ದೇಶ ಶ್ರೀಮಂತರಿರುವ ಬಡ ರಾಷ್ಟ್ರ ಎಂಬುದಕ್ಕೆ ನನ್ನ ಸಹಮತವಿದೆ. ಒಂದು ಪ್ಲೆಟ್ ವೆಜ್ ಬಿರಿಯಾನಿಗೆ ಪಂಚಾತಾರ ಹೋಟೆಲ್ನಲ್ಲಿ ೪೫೦ರೂ. ಕೊಟ್ಟು ತಿನ್ನುವ ಸಾಕಷ್ಟು ಮಂದಿಯನ್ನು ನೋಡಿದ್ದೇನೆ. ವಾರದಲ್ಲಿ ೩ ದಿನ ಕೆಲಸದ ನಿಮಿತ್ತ ಅಂಥ ಹೋಟೆಲ್ಗಳಿಗೆ ಹೋಗುವುದು ನನ್ನ ನಿತ್ಯದ ಬದುಕು. ಹಾಗಾಗಿ ಆ ವರ್ಗದ ಮುಖ ಪರಿಚಯ ಚೆನ್ನಾಗಿದೆ. ಸಿನಿಮಾ ಮಂದಿ, ರಾಜಾಕಾರಣಿಗಳು, ಉದ್ಯಮಿಗಳು, ಸಾಫ್ಟ್ವೇರ್ ಈ ನಾಲ್ಕು ವರ್ಗವನ್ನು ಮಾತ್ರ ನಾವಲ್ಲಿ ಕಾಣಬಹುದು. ಕೆಲವು ಹೋಟೆಲ್ಗಳಲ್ಲಿ ಉಳಿದರೆ, ಒಂದು ದಿನದ ಬಾಡಿಗೆ ೮,೦೦೦-೧೪,೦೦೦ರೂ.ವರೆಗಿದೆ. ೩೬೫ ದಿನವೂ ಅರ್ಧದಷ್ಟು ರೂಂಗಳು ಭರ್ತಿಯಾಗಿರುತ್ತವೆ. ಪಂಚತಾರ ಶ್ರೇಣಿಯ ಕನಿಷ್ಠ ೩೫ ಹೋಟೆಲ್ಗಳಾದ್ರೂ ಮಹಾನಗರಿಯಲ್ಲಿದೆ.
ಹಿಂದೊಮ್ಮೆ ಬರೆದಿದ್ದೆ ಉಡುಪಿಯ ರಥಬೀದಿಯಲ್ಲಿ ಬದುಕುವ ಒಂದು ಅಜ್ಜಿ ಹಾಗೂ ಕುರುಡು ಮಗನ ಕುರಿತು. ಶಾಮಿಲಿಯಲ್ಲಿ ಬಡಿಸುವುದು ಮುಗಿಸಿಕೊಂಡು ಬರುತ್ತಿದೆ. ೮೦೦ ಜನರಿಗೆ ಆಗುವಷ್ಟು ಅಡುಗೆ ಉಳಿದು ವ್ಯರ್ಥವಾಗಿತ್ತು. ರಾತ್ರಿ ೧೦.೩೦ ಆಗಿರಬಹುದು. ವುಡ್ಲ್ಯಾಂಡ್ ಹೋಟೆಲ್ ಎದುರುಗಡೆಯ ಕಸದ ತೊಟ್ಟಿಯಲ್ಲಿ ಈ ಅಜ್ಜಿ ಅಳಿದುಳಿದ ಅನ್ನಕ್ಕಾಗಿ ಹುಡುಕುತ್ತಿತ್ತು. ಕುರುಡು ಮಗನನ್ನು ಎದುರುಗಡೆ ಕೂರಿಸಿಕೊಂಡು. ಬಹುಶಃ ಬದುಕಿನಲ್ಲಿ ಯಾವತ್ತೂ ಮರೆಯಲಾಗದ ಚಿತ್ರಣವದು. ಕಣ್ಣಿಗೆ ಕಟ್ಟಿ ಹೋಗಿದೆ. ನೆನಪಿಸಿಕೊಂಡರೆ ಇವತ್ತಿಗೂ ೨ ಹನಿ ನೀರು ಇಳಿಯುತ್ತದೆ ಕಣ್ಣಿನಿಂದ…
ಬಡ ಹಾಗೂ ಶ್ರೀಮಂತ ವರ್ಗದ ೨ ಮುಖಗಳು ನಿತ್ಯದ ಬದುಕಿನಲ್ಲಿ ಕಾಣಿಸುತ್ತದೆ. ಹಾಗಾಗಿಯೆ ನನ್ನ ಪಾಲಿಗೆ ದುಡ್ಡು ಯಾವತ್ತೂ ಮುಖ್ಯವಾದ ಸಂಗತಿ ಆಗಿಲ್ಲ. ಅಕಾರ, ದುಡ್ಡು ಇರುವವರೆಗೂ ನಮ್ಮ ಹಿಂದೆ ಅನೇಕರು ಇರುತ್ತಾರೆ. ಜೈ ಕಾರ ಹಾಕುತ್ತಾರೆ. ಯಾವ ಹಂತದಲ್ಲಿ ನಾವು ಅದನ್ನು ಕಳೆದುಕೊಳ್ಳುತ್ತೇವೆ ಎನ್ನಲು ಸಾಧ್ಯವಿಲ್ಲ. ಕಳೆದುಕೊಂಡು ಗಳಿಗೆಯಲ್ಲಿ ನಮ್ಮ ಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆಟೋದವವನ ಕಥೆ ಕೇಳಿ ನಮ್ಮ ಬದುಕಿನಲ್ಲೂ ಇನ್ನು ಏನೇನು ಕಾಣಬೇಕಿದಿಯೋ ಅನ್ನಿಸಿದೆ…
kannu tumbi bantu Vinayakanna…
antha paristiti yalli asahaayakate annisibidutte…naavu maaduva sahaaya tumba chikkadeno annisutte alva?
nanagoo intha anubhavagalu aagive..
ವಿನು,
ನಿಂಗೆ ಅನ್ಸಿದ್ದನ್ನ ನೀ ಮಾಡಿದ್ದೆ. ಅವ ಹೇಳಿದ್ದು ಸುಳ್ಳೋ ನಿಜನೋ ಬೇರೆ ಮಾತು. ಸುಳ್ಳು ಹೇಳಿದ್ರೆ ಅದನ್ನ ಅವ ಮುಂದೆ ಒಂದಿನ ಅನುಭವಿಸ್ತ. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡೋ ನಿನ್ನ ಒಳ್ಳೆ ಮನಸ್ಸು ಯಾವಾಗಲೂ ಹಿಂಗೆ ಇರ್ಲಿ…
ಜೀವನ ತುಂಬ ವಿಚಿತ್ರವಾದ ಕತೆ ಅನಿಸುತ್ತೆ.
Life is so brutal 😦
ತುಂಬಾ ಚೆನ್ನಾಗಿ ಬರೆದಿದ್ದೀಯ. ನೋವಲ್ಲಿ ಇರೋರಿಗೆ ಸಹಾಯ ಮಾಡುವ ಗುಣ ಇಷ್ಟವಾಯಿತು ವಿನಾಯಕ.
ನಾವೇ ಅದೃಷ್ಟಶಾಲಿಗಳು ಅಲ್ವಾ. ಆದ್ರೆ ಎಲ್ಲಾ ಇದ್ದು, ಅದಿಲ್ಲ, ಇದಿಲ್ಲ ಅಂತ ಹೇಳ್ತಾನೇ ಇರ್ತೀವಿ.
Bharaha chanagidhe…janagalu hage alva mall nali, hotel nali este costly adru tagothare, adhe road side sale madorige 5 rs jasthi kodaku hindhu mundhu nodthare..anyway problem nali erorige help mado nimma guna esta aythu.
ಸರ್ ನಿಮ್ಮ ಲೇಖನ ಮನ ಮುಟ್ಟುವಂತಿದೆ….”ಚಿಲ್ಲರೆ ಇಲ್ಲದಿದ್ರೆ ಬೇಡ ಬಿಡಿ ” ಅಂತ ಎಷ್ಟೋಸಲ ನಾನು ಹೇಳಿದಕ್ಕೆ ಆಟೋ ಡ್ರೈವರ್ಗಳು ಹುಡುಕಿ ತಡಕಾಡಿ ಚೇಂಜ್ ಕೊಟ್ಟಿದ್ದಿದೆ..ಒಳ್ಳೆಯ ಆಟೋ ಡ್ರೈವರ್ ಗಳು ಇನ್ನು ಬೆಂಗಳೂರಿನಲ್ಲಿ ಇದ್ದಾರೆ ಅನ್ನೋದು ಸಂತೋಷದ ಸಂಗತಿ ಅಲ್ವಾ?
ತನ್ನನ್ನು ತಾನೇ ಬೈದಂಗೆ ಮಾಡಿಕೊಂಡು, ತನ್ನನ್ನೇ ಹೊಗಳಿಕೊಳ್ಳುವ ಲೇಖನ. ಇದನ್ನೇ ನಮ್ಮ ಪರಮಗುರುವಿನ ಭಾಷೆಯಲ್ಲಿ ಸ್ವಕುಚಮರ್ದನ ಅಂತಾರೆ. ಹೆಂಗೈತೆ ಮೈಗೆ ?
ಹಲೊ ಪಯಣಿಗ ಅವರೆ
ನೀವು ನನ್ನ ಬರಹಗಳನ್ನು ಬೈದು ಹಾಕಿದ ಮೊದಲ ಕಮ್ಮೆಂಟ್ನ್ನು ಡಿಲಿಟ್ ಮಾಡಿದೆ. ಪುನಃ ಮತ್ತೆ ಕಮ್ಮೆಂಟ್ ಹಾಕಿರುವಿರಿ. ಹಾಗಾಗಿ ಪ್ರಕಟಿಸುತ್ತಿರುವೆ. ಬೈಗುಳ ತಪ್ಪು ತಿದ್ದಿಕೊಳ್ಳುವಂತಿದ್ದರೆ ಖಂಡಿತಾ ಒಪ್ಪುತ್ತಿದೆ. ನನ್ನದು ಪಯಣಿಗ ೨೦೦೫ ಎಂಬ ಈ ಮೇಲ್ ಐಡಿ. ನೀವು ಪಯಣಿಗ೩೦೦೦ ಎಂಬ ಐಡಿ ಸೃಷ್ಟಿಸಿ ಈ ಕೆಲಸ ಮಾಡುತ್ತಿರುವಿರಿ. ಎಲ್ಲ ಸ್ನೇಹಿತರ ಗಮನಕ್ಕೆ ಇಲ್ಲಿ ಕಮ್ಮೆಂಟಿಸಿರುವ ಪುಣ್ಯಾತ್ಮನ ಐಪಿ ಸಂಖ್ಯೆ 117.192.207.136. ಇದು ನಾನು ಒಳ್ಳೆ ಮಾತಿನಲ್ಲಿ ಪಯಣಿಗನಿಗೆ ಹೇಳಿರುವ ಕಿವಿ ಮಾತು. ತಪ್ಪು ತಿದ್ದಿಕೊಳ್ಳದಿದ್ದರೆ ನಿನ್ನ ಭಾಷೆಯಲ್ಲೇ ಉತ್ತರ ನೀಡಬೇಕಾಗುತ್ತದೆ ಪಯಣಿಗ…