ಬಡತನ, ಯಜಮಾನನ ಶಸ್ತ್ರ ಚಿಕಿತ್ಸೆಗೂ ಹಣ ಇಲ್ಲ. ಇಂಥ ಸ್ಥಿತಿಯಲ್ಲಿ ಮಗಳಿಗೆ ಮೆಡಿಕಲ್ ಸೀಟು ಸಿಕ್ಕಿದೆ. ಚಿಕಿತ್ಸೆಗೆ ಹಣ ಹೊಂದಿಸುವುದೋ, ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವುದೋ ಎಂದು ದಾರಿ ಕಾಣದೆ ಕಂಗಾಲಾಗಿದೆ ತುಮಕೂರು ಜಿಲ್ಲೆ ನಿಡಸಾಲೆಯ ಬಡ ಕುಟುಂಬ.
ಮಂಡ್ಯ ಜಿಲ್ಲೆ ಕೆ.ಎಂ. ದೊಡ್ಡಿಯ ಪಿಯು ಕಾಲೇಜಿನ ವಿದ್ಯಾರ್ಥಿ ಜೆ.ಎಂ. ಸುಪ್ರಿಯಾಗೆ ವೈದ್ಯೆಯಾಗುವ ಆಸೆ. ಆದರೆ, ಆಕೆಯ ದಾರಿಯಲ್ಲಿ ಬರೀ ಕಲ್ಲು ಮುಳ್ಳು. ಕಾರಣ, ಆಕೆಯ ತಂದೆ ಜಯರಾಂಗೆ ಮಗಳಿಗೆ ಮೆಡಿಕಲ್ ಶಿಕ್ಷಣ ಕೊಡಿಸುವ ಶಕ್ತಿ ಇಲ್ಲ. ಅವರು ಮಾಡುತ್ತಿರುವುದು ಗಾರೆ ಕೆಲಸ. ಜತೆಗೆ, ಕಾಯಿಲೆ ಬೆನ್ನಿಗಿದೆ. ಮಗಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬ ಅವರ ಬಯಕೆಗೆ ತಕ್ಕಂತೆ ಮಗಳು ಉತ್ತಮ ಅಂಕ ಗಳಿಸಿ, ಮೆರಿಟ್ ಸೀಟ್ ಪಡೆದಿದ್ದಾಳೆ. ಆದರೆ, ಹಣ ಹೊಂದಿಸಲಾಗದೆ ಕುಟುಂಬ ಪರದಾಡುತ್ತಿದೆ.
ಜಯರಾಂ ಈಗಾಗಲೇ ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ದುಡಿದು ಹಣ ಹೊಂದಿಸೋಣ ಎಂದರೆ ಕೈ ಮುರಿದಿದೆ. ಸುಪ್ರಿಯಾಳ ತಾಯಿ ರತ್ನಮ್ಮ ಅವರ ಕೆಲಸವೇ ಕುಟುಂಬಕ್ಕೆ ಆಸರೆ. ೩೦-೪೦ ಕಿ.ಮೀ ದೂರದ ಸರಕಾರಿ ಪದವಿಪೂರ್ವ ಕಾಲೇಜಿಗೆ ಮನೆಯಿಂದಲೇ ಪ್ರಯಾಣಿಸಿ ದ್ವಿತೀಯ ಪಿಯುಸಿಯಲ್ಲಿ ಶೇ.೮೦ರಷ್ಟು ಅಂಕ ಪಡೆದ ಸುಪ್ರಿಯಾ, ಸಿಇಟಿಯಲ್ಲಿ ಗಳಿಸಿದ್ದು ೨,೪೬೬ನೇ ರ್ಯಾಂಕ್. ರಾಯಚೂರಿನ ನವೋದಯ ವೈದ್ಯ ಕಾಲೇಜಿನಲ್ಲಿ ಮೆರಿಟ್ ಸೀಟು ಲಭಿಸಿದೆ.
‘ಎಂಬಿಬಿಎಸ್ ವ್ಯಾಸಂಗಕ್ಕೆ ವಾರ್ಷಿಕ ೧ ಲಕ್ಷ ರೂ. ಅಗತ್ಯವಿದೆ. ಸ್ನೇಹಿತರು, ಪರಿಚಿತರ ಬಳಿ ಸಾಲ ಮಾಡಿ ತಂದೆ ಸ್ವಲ್ಪ ಹಣ ಸೇರಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಲ್ಲನಾಯಕನಹಳ್ಳಿಯಲ್ಲಿ ಸ್ವಂತ ಮನೆಯಿತ್ತು. ಅಪ್ಪಾಜಿಯ ಶಸ್ತ್ರ ಚಿಕಿತ್ಸೆಗೆ ಅದನ್ನು ಮಾರಿ,ಬಾಡಿಗೆ ಮನೆಯಲ್ಲಿದ್ದೇವೆ. ಇನ್ನೊಂದು ಹಂತದ ಕೌನ್ಸೆಲಿಂಗ್ ನಂತರ ಕಾಲೇಜಿಗೆ ಪ್ರವೇಶ ಪಡೆಯಬೇಕು. ನೆರವಿಗಾಗಿ ಎಲ್ಲ ಕಡೆ ಪ್ರಯತ್ನ ಪಡುತ್ತಿದ್ದೇವೆ’ ಎನ್ನುತ್ತಾರೆ ಸುಪ್ರಿಯಾ.
‘ಬಿಡುವಿನ ವೇಳೆಯಲ್ಲಿ ಕೆಲಸ ಮಾಡುತ್ತ ಪಿಯುಸಿ ಮುಗಿಸಿದ್ದೇನೆ. ಕಾಲೇಜು ಹತ್ತಿರದಲ್ಲಿದ್ದರೆ ಇನ್ನೂ ಹೆಚ್ಚು ಅಂಕ ಗಳಿಸುತ್ತಿದ್ದೆ. ತಂದೆ-ತಾಯಿಯ ಕೂಲಿ ಹಣದಲ್ಲಿ ಬದುಕು ಸಾಗುತ್ತಿದೆ. ಎಸ್ಎಸ್ಎಲ್ಸಿ ಓದುತ್ತಿರುವ ತಮ್ಮನ ವಿದ್ಯಾಭ್ಯಾಸವೂ ನಡೆಯಬೇಕಿದೆ’ ಎಂದು ಸುಪ್ರಿಯಾ ಕಣ್ಣುಗಳಲ್ಲಿ ನೀರಾಡುತ್ತದೆ. ಆರ್ಥಿಕ ನೆರವು ನೀಡಲು ಇಚ್ಛಿಸುವವರು ಅವರ ಸಂಬಂಧಿ ಲತಾ (೯೬೮೬೨ ೨೭೩೮೧) ಅವರನ್ನು ಸಂಪರ್ಕಿಸಬಹುದು.
(೨೪-೦೭-೨೦೧೦ರಂದು ವಿಜಯ ಕರ್ನಾಟಕದಲ್ಲಿ ಪ್ರಕಟಿತ)
Very interesting article, thanks. Keep up the good work.