ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ದುಡ್ಡು ಕೊಟ್ಟು ನೋಡಬೇಕು ಅನ್ನಿಸುವುದಿಲ್ಲ. ಯಾಕಂದ್ರೆ ದುಡ್ಡಿಗೆ ತಕ್ಕದಾದ ಚಿತ್ರಗಳು ತೆರೆ ಮೇಲೆ ಬರುವುದು ತೀರಾ ವಿರಳವಾಗಿದೆ! ಬೆಂಗ್ಳೂರಿಗೆ ಬಂದ ಮೇಲೆ ಈವರೆಗೆ ೪ ಚಿತ್ರ ನೋಡಿದ್ದೇನೆ. ೩ ಅತ್ಯದ್ಭುತ ಚಿತ್ರಗಳು! ಮೊದಲನೆ ಚಿತ್ರ ವಾಯುಪುತ್ರ! ಗೆಳೆಯರ ಒತ್ತಾಸೆಗೆ ಹೋಗಿದ್ದು. ಆದ್ರೂ ನನ್ನ ಜೇಬಿನಿಂದ ೯೦ ರೂ. ನಷ್ಟವಾಯಿತು. ೨ನೇ ಚಿತ್ರ ಮನಸಾರೆ. ಮನಸಾರೆಯಾಗಿ ಖುಷಿ ಕೊಟ್ಟ ಚಿತ್ರ. ಕಥೆ ಹಳೆಯದಾದರೂ, ಹೇಳಿಕೊಂಡು ಹೋದ ರೀತಿ ಹೊಸತಾಗಿತ್ತು. ಹುಚ್ಚರ ನಡುವೆ ಪ್ರೇಮ ಅರಳಿಸುವ ಯತ್ನವನ್ನು ಯೋಗರಾಜ್ ಭಟ್ ಮಾಡಿದ್ದರು. ಕನ್ನಡದಲ್ಲಿ ತಲೆ ಖರ್ಚು ಮಾಡುವ ಬೆರಳೆಣಿಕೆ ನಿರ್ದೇಶಕರ ಸಾಲಿನಲ್ಲಿ ಭಟ್ಟರು ಒಬ್ಬರು. ‘ತುಂಬಾ ಆಫರ್ಗಳು ಬರ್ತಾವೆ. ಆದ್ರೆ ನಾನು ೧.೫-೨ವರ್ಷಕ್ಕೊಂದು ಚಿತ್ರವನ್ನು ಮಾತ್ರ ಮಾಡುವುದು…’ಹಾಗಂತ ಭಟ್ಟರು ಒಂದ್ಸಲ ಹೇಳಿದ್ದರು. ಆ ಪರಿ ತಲೆಕೆಡಿಸಿಕೊಂಡು ಮಾಡುವುದಕ್ಕೆ ಇರಬೇಕು ಭಟ್ಟರ ಚಿತ್ರಗಳು ಕನಿಷ್ಠ ೫೦ದಿನವಾದರೂ ಓಡುತ್ತವೆ. ಒಂದು ಬಾರಿ ಆರಾಮವಾಗಿ ನೋಡುವ ಹಾಗಿರುತ್ತದೆ.
ಈ ವಾರ ಭರ್ಜರಿಯಾಗಿ ೨ ಚಿತ್ರ ನೋಡಿಬಂದೆ. ಯಾವುದನ್ನೂ ನೋಡಬೇಕು ಅಂದುಕೊಂಡು ನೋಡಿದ್ದಲ್ಲ. ಅಚಾನಕ್ಕಾಗಿ, ಗೆಳೆಯರ ಒತ್ತಾಸೆಗೆ ಹೋಗಿದ್ದು. ೨ ಚಿತ್ರಕ್ಕೂ ನಾನು ಟಿಕೆಟ್ ತೆಗೆದುಕೊಳ್ಳಲಿಲ್ಲ. ಆದ್ರೂ ಜೇಬಿಗೆ ೬೦-೭೦ ರೂ. ಕತ್ತರಿ ಬಿತ್ತು! ಮೊದಲು ನೋಡಿದ್ದು ೨ನೇ ಮದ್ವೆ. ಹೇಳಿಕೊಳ್ಳಬಹುದಾದ ಕಥೆಯಿಲ್ಲ ಅನ್ನುವುದಕ್ಕಿಂತ, ಹುಚ್ಚು ರೀತಿಯ ಕಥೆ ಇದೆ ಅಂತಲೇ ಹೇಳಬಹುದು. ಗಂಡ, ಹೆಂಡ್ತಿಯನ್ನು ಹಾದಿಗೆ ತರಲಿಕ್ಕೆ ಮತ್ತೊಬ್ಬಳನ್ನು ತಂದಿಟ್ಟುಕೊಳ್ಳುವ ಯತ್ನ ಮಾಡುತ್ತಾನೆ. ಹೆಂಡ್ತಿ, ಗಂಡನನ್ನು ಹಾದಿಗೆ ತರಲಿಕ್ಕೆ ಅದೇ ಯತ್ನ ಮಾಡುತ್ತಾಳೆ. ಚಿತ್ರ ಮುಗಿಯುವ ವೇಳೆಗೆ ಇಬ್ಬರಿಗೂ ಜ್ಞಾನೋದಯವಾಗುತ್ತದೆ. ಮಕ್ಕಳಲ್ಲಿ ಕ್ಷಮೆ ಕೇಳುತ್ತಾರೆ. ಇಷ್ಟೆ ಚಿತ್ರದ ಕಥೆ. ಇಡೀ ಚಿತ್ರ ನಿಂತಿರುವುದು ಸಂಭಾಷಣೆ ಮೇಲೆ ಎಂಬುದರಲ್ಲಿ ೨ ಮಾತಿಲ್ಲ. ಹೊಟ್ಟೆ ಹುಣ್ಣು ಮಾಡಿಕೊಂಡು ನಗಬಹುದಾದಷ್ಟು ಡೈಲಾಗ್ಗಳು ಸಿನಿಮಾದಲ್ಲಿದೆ. ಆದ್ರೂ, ಅಂಥ ಜೋಕ್ಗಳನ್ನು ರಾಜೇಂದ್ರ ಕಾರಂತರು ಬರೆದರಾ ಎಂಬ ಅನುಮಾನ ಶುರುವಾಗುತ್ತದೆ. ಆರಂಭದಲ್ಲಿ ಹಾಸ್ಯ ನಗಿಸುತ್ತದೆ. ಆದ್ರೆ ಚಿತ್ರ ಸಾಗಿದಂತೆ ವಿಪರೀತ ಅನ್ನಿಸಲು ಶುರುವಾಗುತ್ತದೆ. ಸುವಾಹಿಸಿನಿ ಪ್ರೇಮ್ ಮಂಚದ ಅಡಿಗೆ ಮಲಗಿ ಓಲೆ ಹುಡುಕುವ, ಅನಂತ್ನಾಗ್ ಜೆನ್ನಿಫರ್ ಇಬ್ಬರ ಕೆಲವು ದೃಶ್ಯಗಳು ತೀರಾ ಅಸಹ್ಯವೆನಿಸುತ್ತದೆ. ನಗಿಸುವ ಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗಂಡ-ಹೆಂಡತಿಯ ಹುಚ್ಚಾಟ ಮುಗಿಯುವ ಹೊತ್ತಿಗೆ ಪ್ರೇಕ್ಷಕ ಹುಚ್ಚನಾಗದಿದ್ದರೆ ಸಾಕು. ಹಾಗಿದೆ ದ್ವಿತಿಯಾರ್ಧ!
ಕೃಷ್ಣನ್ ಲವ್ಸ್ಟೋರಿ ಸಕ್ಕತಾಗಿದೆ ಅಂತಾ ತುಂಬಾ ಮಂದಿ ಹೊಗಳಿದರು. ಯಾವ ಅರ್ಥದಲ್ಲಿ ಅದು ಸಕ್ಕತ್ ಸಿನಿಮಾ ಅಂತಾ ಗೊತ್ತಾಗುತ್ತಿಲ್ಲ. ಮೊದಲಾರ್ಧ ತಕ್ಕ ಮಟ್ಟಿಗೆ ಪರ್ವಾಗಿಲ್ಲ. ಮಾಮೂಲಿ ಪ್ರೇಮ ಕಥೆ. ಹುಡುಗಿ ಒಲ್ಲೆ ಅಂದ್ರು, ಹುಡುಗ ಬಿಡಲೊಲ್ಲೆ ಅನ್ನುತ್ತಾನೆ. ಇಲ್ಲೂ ಕಥೆಯ ಕೊರತೆ. ಸಾಮಾನ್ಯ ಪ್ರೇಕ್ಷಕನೂ ಊಹಿಸಬಹುದಾದ ಕಥೆ. ಚಿತ್ರದ ನಾಯಕ ಕೃಷ್ಣ, ನಾಯಕಿ ಗೀತಾಳನ್ನು ಗೆಲ್ಲುತ್ತಾನೆ. ನಾನು ಯಾರನ್ನು ಲವ್ ಮಾಡಲ್ಲ ಎಂಬ ಹುಡುಗಿ, ಕೃಷ್ಣನ ಒಂದೇ-ಒಂದು ಸಹಾಯಕ್ಕೆ ಬಿದ್ದು ಹೋಗುತ್ತಾಳೆ. ಲವ್ ಶುರುವಾಗುವ ಹೊತ್ತಿಗೆ ಮೊದಲಾರ್ಧ ಮುಗಿಯುತ್ತದೆ. ಗೀತಾ, ಕೃಷ್ಣನಿಂದ ದೂರವಾಗುತ್ತಾಳೆ. ಅದಕ್ಕೆ ಕಾರಣ ಏನು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಆದ್ರೂ ನಿರ್ದೇಶಕರು ಅದನ್ನು ಸಸ್ಪೆನ್ಸ್ ಎಂದು ಭಾವಿಸಿ ಕೊನೆಯವರೆಗೂ ಕಾಯ್ದುಕೊಂಡು ಬಂದಿದ್ದಾರೆ!
ಅಮ್ಮನ ಚೀಟಿ ಸಾಲ ಒಂದುವರೆ ಲಕ್ಷ ತೀರಿಸಲು ನಾಯಕಿ ಶ್ರೀಮಂತನಾದ ನರೇಂದ್ರ ಜೊತೆ ಓಡಿಹೋಗುತ್ತಾಳೆ. ಅವನು ಮೊದಲಿನಿಂದಲೂ ಆಕೆಯನ್ನು ಗೆಲ್ಲುವ ಯತ್ನ ಮಾಡುತ್ತಿರುತ್ತಾನೆ. ಕೃಷ್ಣನ ಎದುರು ನಾನೇ ಅವಳನ್ನು ಗೆಲ್ಲುವುದು ಎಂಬ ಸವಾಲನ್ನು ಹಾಕಿರುತ್ತಾನೆ. ದ್ವೀತಿಯಾರ್ಧದ ಅನೇಕ ದೃಶ್ಯಗಳನ್ನು ‘ಮನಸಾರೆ’ ಚಿತ್ರದಿಂದ ಕಟ್-ಪೇಸ್ಟ್ ಮಾಡಿದಂತಿದೆ ನಿರ್ದೇಶಕರು! ನಾಯಕಿ ಗೀತಾ ಹುಚ್ಚಿಯಂತೆ ಆಡುವುದನ್ನು ನೋಡಿದರೆ ಮತ್ತೊಮ್ಮೆ ಮನಸಾರೆ ಚಿತ್ರ ನೆನಪಾಗುತ್ತದೆ. ಕ್ಯಾಮೆರಾ ಕೆಲಸದ ಕುರಿತು ಕೆಮ್ಮುವಂತಿಲ್ಲ. ಅಜಯ್ ನಾಯಕನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ೨ ಹಾಡುಗಳು ಚೆನ್ನಾಗಿವೆ. ಆದ್ರೂ ಕಥೆ ಹೇಳಿಕೊಂಡು ಹೋದ ರೀತಿ ಯಾಕೊ ಇಷ್ಟವಾಗಲಿಲ್ಲ. ಸುಮಾರು ಸಲ ಚಿತ್ರ ಬೋರ್ ಅನ್ನಿಸತ್ತೆ.
ಸಿನಿಮಾ ಅನ್ನೊಂದು ಟೀಂ ವರ್ಕ್. ಕಥೆಗಾರ, ಸಂಭಾಷಣೆಕಾರ, ನಿರ್ದೆಶಕ ಹಾಗೂ ನಿರ್ಮಾಪಕರ ನಡುವಿನ ಹೊಂದಾಣಿಕೆಯೇ ಚಿತ್ರದ ಜೀವಾಳ. ಎಷ್ಟೋ ಸಲ ಸಂಭಾಷಣೆಕಾರರಿಗೆ ಗೊತ್ತಿಲ್ಲದೆ ಡೈಲಾಗ್ಗಳು ಬದಲಾಗಿ ಬಿಟ್ಟಿರುತ್ತವೆ. ಕಥೆಯನ್ನು ತಿರುಚಿರುತ್ತಾರೆ. ನಿರ್ದೇಶಕರು ದುಡ್ಡು ಹಾಕುವ ನಿರ್ಮಾಪಕನ ಒತ್ತಡಕ್ಕೆ ಒಳಗಾಗಿ ಕೆಲ ದೃಶ್ಯಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ನಿರ್ದೇಶಕನಲ್ಲಿ ಕಲಾ ಜಾಗೃತಿಯ ಜೊತೆಗೆ ನಾಯಕತ್ವ ಗುಣವೂ ಇರುವುದು ಅನಿವಾರ್ಯ. ತಂಡವನ್ನು ನಡೆಸಿಕೊಂಡು ಹೋಗಬಲ್ಲ ನಿರ್ದೇಶಕನ ಚಿತ್ರ ಗೆಲ್ಲುತ್ತದೆ.
ಹೌದು, ನನ್ನಂತೆಯೇ ದುಡ್ಡು ಕೊಟ್ಟ ಅನೇಕರು ಚಿತ್ರಕ್ಕೆ, ಕಥೆಗೆ, ಸಂಭಾಷಣೆಗೆ ಉಗಿಯುತ್ತಾರೆ. ಅದೆಷ್ಟೆ ತೆರೆ ಮರೆಯಲ್ಲಿ ಕೆಲಸ ಮಾಡಿದರೂ, ಬೆಳವಣಿಗೆ ಬೇಕು ಅಂದ್ರೆ ಮುಂದೊಂದು ದಿನ ಹೆಸರು ಹಾಕಿಕೊಂಡು ಕಣಕ್ಕೆ ಇಳಿಯಲೇ ಬೇಕು. ತೋಪಾಗಲಿ, ಯಶಸ್ವಿಯಾಗಲಿ ಎಲ್ಲದನ್ನು ಸಹಿಸಿಕೊಳ್ಳಬೇಕು ಅಂದುಕೊಳ್ಳುವ ಹೊತ್ತಿಗೆ ನಿದ್ದೆ ಕೈಬೀಸಿ ಕರೆಯುತ್ತಿತ್ತು!
ಈ ಚಿತ್ರಗಳ ಬಗೆಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಒಳ್ಳೆಯ ವಿಶ್ಲೇಷಣೆ.
ಸತ್ಯವಾದ ಮಾತು.
ಸುನಾಥ್ ಸರ್, ಸಿಂಧೂ ಮೇಡಂ
ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು…