ಅದ್ಯಾಕೊ ಗೊತ್ತಿಲ್ಲ ಅಪ್ಪನ ಕುರಿತು ಅಕ್ಷರ ಬರೆಯುವ ಮಕ್ಕಳು ಕಡಿಮೆ(ಅಮ್ಮನಿಗೆ ಹೋಲಿಸಿದರೆ!). ಅಪ್ಪ ಕುಡಿಯುತ್ತಿದ್ದನೆಂಬ ಕೋಪವೋ, ಹೊಡೆಯುತ್ತಿದ್ದನೆಂಬ ಸಿಟ್ಟೊ ಅಥವಾ ಅಮನ್ನನ್ನು ಬೀದಿಗೆ ನಿಲ್ಲಿಸಿದ್ದನೆಂಬ ಜಿಗುಪ್ಸೆಯೋ! ಹೌದು, ಕೆಲವರ ಬದುಕಿನಲ್ಲಿ ಅಪ್ಪನದ್ದು ವಿಲ್ಲನ್ ಪಾತ್ರ. ಮಕ್ಕಳ ಕುರಿತಾಗಿ ಅಮ್ಮನಿಗಿರುವಷ್ಟು ಪ್ರೀತಿ, ಬದ್ದತೆ ಅಪ್ಪನಿಗಿರುವುದಿಲ್ಲ. ಕುಡಿತ, ಜೂಜಾಟ, ಪರ ಸ್ತ್ರೀ ಸಂಗದ ಮೂಲಕ ಹೆಂಡತಿಯನ್ನು ಬೀದಿಗೆ ತಳ್ಳುವ, ಮಕ್ಕಳ ಭವಿಷ್ಯವನ್ನು ಕೈಯ್ಯಾರೆ ಕೊಲ್ಲುವ ಅದೆಷ್ಟೋ ಅಪ್ಪಂದಿರನ್ನು ನಾವೆಲ್ಲ ಕಣ್ಣಾರೆ ಕಂಡಿರುತ್ತೇವೆ. ಅಂಥ ಸಂದಿಗ್ಧ ಸಮಯದಲ್ಲಿ ಸಂಸಾರವನ್ನು ನಿಭಾಯಿಸಿಕೊಂಡು, ಮಕ್ಕಳನ್ನು ಬೆಳೆಸುವ ತಾಯಂದಿರ ಕುರಿತು ಸಹಜವಾಗಿ ಮಕ್ಕಳಿಗೆ ಪ್ರೀತಿ ಮೂಡುತ್ತದೆ. ಹಾಗಂತ ಎಲ್ಲಾ ಅಪ್ಪಂದಿರು ಅದೇ ರೀತಿ ಇರುತ್ತಾರೆ ಎನ್ನಲು ಸಾಧ್ಯವಿಲ್ಲ.
ಅಪ್ಪನ ಕುರಿತು ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರೀತಿಯಂತೆ. ಅಮ್ಮನ ಮೇಲೆ ಗಂಡು ಮಕ್ಕಳಿಗೆ ಒಲವು ಜಾಸ್ತಿಯಂತೆ. ಮಲೆನಾಡಿನಲ್ಲಿ ಬೆಳೆದ ನನ್ನ ಹಾಗೂ ನನ್ನಂಥ ಅದೆಷ್ಟೊ ಹುಡುಗರಿಗೆ ಅಪ್ಪನ ಮೇಲೆ ಹಿಡಿಯಷ್ಟು ಪ್ರೀತಿ ಹೆಚ್ಚು! ಈಗೊಂದು ೧೫-೨೦ ವರ್ಷದ ಕೆಳಗೆ ಮಲೆನಾಡು ಎಂಬುದು ಒಂತರಹ ಘನ-ಘೋರ ಕಾಡಿನಂತಿತ್ತು. ನಮ್ಮೂರಿನ ಮಟ್ಟಿಗೆ ಹೆಂಗಸರದ್ದು ಸೌಮ್ಯ ಸ್ವಭಾವ. ಮನೆಗೆ ಏನಾದ್ರು ಆಪತ್ತು ಬಂದರೆ ಎದುರಿಸುವ ಚೈತನ್ಯ ಕಡಿಮೆ. ಇನ್ನು, ಗಂಡಸರು ಕೂಡ ಹೆಂಡತಿ ಮಕ್ಕಳನ್ನು ಬೀದಿಗೆ ತಳ್ಳುವಷ್ಟು ಕ್ರೂರಿಗಳಲ್ಲ. ಸಂಸಾರದಲ್ಲಿ ಯಜಮಾನನ ಪೀಠ ಅಲಂಕರಿಸಿದ ಆವತ್ತಿನ ಅಪ್ಪಂದಿರ ಕಥೆ, ಇವತ್ತಿನಷ್ಟು ಉತ್ತಮವಾಗಿರಲಲ್ಲಿ. ಈಗ ಮನೆಗೊಬ್ಬರು ಮಹಾನಗರಿ ಸೇರಿದ್ದಾರೆ. ಉದ್ಯೋಗ ಗಿಟ್ಟಿಸಿ ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಹೀಗಾಗಿ ನಮ್ಮೂರಿನ ಕೇರಿಗಳಲ್ಲಿ ಬಡತನ ಮಾಯವಾಗುತ್ತಿದೆ. ಸೋಗೆ ಗುಡಿಸಲಿನ ಜಾಗದಲ್ಲಿ ಹಂಚಿನ ಮನೆಗಳು ತಲೆಯೆತ್ತಿವೆ. ಕಟ್ಟಿಗೆ ಓಲೆಯನ್ನು ಸಿಲಿಂಡರ್ ಗ್ಯಾಸ್ ಆಕ್ರಮಿಸಿದೆ. ಒಟ್ಟಿನಲ್ಲಿ ಹೇಳೋದಾದರೆ, ಮಲೆನಾಡಿನ ಜೀವನ ಮಟ್ಟ ಸುಧಾರಿಸಿದೆ.
ಆವತ್ತು ಸೊಗೆ ಮನೆ, ಸೀಮೆ ಎಣ್ಣೆಯ ಚಿಮಣಿ ಬುರುಡೆ, ಮಣ್ಣಿನ ನೆಲ…ಇವೆಲ್ಲ ಮಾಮೂಲಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಒಟ್ಟಿಗಿರಲಿ, ಮನೆ ಮಂದಿಗೆ ತುತ್ತು ಊಟ ಒದಗಿಸುವುದೇ ಸವಾಲಿನ ಕೆಲಸವಾಗಿತ್ತು. ಅಡಿಕೆ ಮಂಡಿಗೆ ಹೋದ ಅಪ್ಪ, ಚಿಪ್ಳಿ ಸುಬ್ರಾಯರು(ಮಂಡಿ ಯಜಮಾನ) ಹಣ ಕೊಡುವವರೆಗೂ ಮನೆಗೆ ಬರುತ್ತಿರಲ್ಲಿಲ್ಲ. ರಾತ್ರಿ ೯-೧೦ ಗಂಟೆಗೆ ಅಪ್ಪ ಮನೆಗೆ ಮರಳಿದ ನಂತರ ಅಮ್ಮನಿಂದ ಗಂಜಿ ತಯಾರಿಕೆ. ಮುಂಚಿತವಾಗಿ ಅಡುಗೆ ಮಾಡಲು ಅಕ್ಕಿಯೇ ಇರುತ್ತಿರಲಿಲ್ಲ! ಶಾಲೆ ಸಮಯ ಬಂತೆಂದರೆ, ಅಪ್ಪನ ಸ್ಥಾನದಲ್ಲಿರುವವರ ಬವಣೆ ಹೇಳುವುದು ಬೇಡ. ಸರಕಾರಿ ಶಾಲೆಗೆ ತೆರಬೇಕಾದ ೩೦ರೂ. ಶುಲ್ಕ ಹೊಂದಿಸುವುದು ನಮ್ಮೂರಿನ ಅನೇಕ ಮಂದಿಗೆ ಸಾಹಸವಾಗಿತ್ತು. ಆವತ್ತಿನ ಆರ್ಥಿಕ ಸ್ಥಿತಿ ಹಾಗಿತ್ತು.
ಇಂಥ ಸ್ಥಿತಿಯಲ್ಲೂ ಯಾವ ಅಪ್ಪನೂ ಮಕ್ಕಳಿಗೆ ಕೊರತೆ ಮಾಡುತ್ತಿರಲಿಲ್ಲ. ಪಾಠಿ ಚೀಲ, ಪುಸ್ತಕ, ಪೆನ್ನು, ಕೊಡೆ…ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು. ಡಾಕ್ಟರು, ಎಂಜಿನಿಯರ್ ಓದುತ್ತೇನೆಂದ ಮಕ್ಕಳಿಗೆ, ಅದೇ ಕೋರ್ಸ್ ಕೊಡಿಸಿದರು. ಅಪ್ಪ ಯಾರ ಬಳಿ ಸಾಲ ಮಾಡಿ ಬಂದಿದ್ದಾನೆ ಎಂಬುದು ಅಮ್ಮನಿಗೆ ಮಾತ್ರ ಗೊತ್ತಿರುತ್ತಿತ್ತು. ಅಪ್ಪನ ಕಾಲಲ್ಲಿ ಯಾವತ್ತೂ ಚಪ್ಪಲಿಯನ್ನು ಕಾಣಲಿಲ್ಲ. ಆದ್ರೆ ಮಗ ಚಪ್ಪಲಿ ಇಲ್ಲದೆ ಹೋದರೆ ಶಾಲೆಯಲ್ಲಿ ನಗೆಯಾಡುತ್ತಾರೆ ಎಂಬ ಭಾವ ಅಪ್ಪನನ್ನು ಕಾಡದೇ ಬಿಟ್ಟಿಲ್ಲ. ಹೊಸ ಪ್ಯಾಂಟ್ ನಂಗೆ ಮಾತ್ರನಾ, ನಿಂಗೆ ತಂದುಕೊಳ್ಳಲ್ಯಲ ಅಂದ್ರೆ, ‘ಅಯ್ಯೊ ಅಪ್ಪಿ ಆನು ಮತ್ತೊಂದು ಮದ್ವೆ ಆಗಕನಾ? ನೀವೆಲ್ಲ ಪ್ಯಾಟೆ ಶಾಲಿಗೆ ಹೋಪವು. ಘನಾಗಿ ಬಟ್ಟೆ ಹಾಕ್ಕಂಡು ಚೆಂದವಾಗಿ ಹೋಗಕ್ಕು. ಇಲ್ಲೆ ಅಂದ್ರೆ ನೋಡಿದವರೆಲ್ಲ ನಗೆಯಾಡುತ್ತಾ’ ಅಂತಲೇ ನೋವು ನುಂಗಿ ಕೊಳ್ಳುತ್ತಿದ್ದ ಹೊರತು, ದುಡ್ಡಿಲ್ಲ ಎಂಬುದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಇದು ಮಲೆನಾಡಿನ ಅಪ್ಪನೊಬ್ಬನ ಮನೋಭಾವ.
ಇವತ್ತು ನಮ್ಮೂರಿನ ಆರ್ಥಿಕ ಸ್ಥಿತಿ ಬದಲಾಗಿದೆ. ಆದ್ರೆ ಅಪ್ಪಂದಿರು ಬದಲಾಗಿಲ್ಲ. ನಮ್ಮೂರ ರಾಮಚಂದ್ರಣ್ಣ ಸಾಯುವವರೆಗೂ ಚಪ್ಪಲಿ, ಪ್ಯಾಂಟು ಹಾಕಿದ್ದನ್ನು ಯಾರೂ ನೋಡಲಿಲ್ಲ. ನನ್ನ ಅಪ್ಪನಿಗೆ, ಇವತ್ತಿಗೂ ತನ್ನ ಸ್ವಂತಕ್ಕಾಗಿ ದುಡ್ಡು ಕೊಟ್ಟು ಬಟ್ಟೆ ಖರೀದಿಸಿಯೇ ಗೊತ್ತಿಲ್ಲ. ಪಂಚೆ ಹರಿದಂತೆಲ್ಲ ಹೋಲಿಗೆ ಹಾಕಿ ಸಂಭ್ರಮಿಸುವುದು ಅವನಿಗೆ ಮಾಮೂಲಾಗಿ ಬಿಟ್ಟಿದೆ! ಹಾಗಂತ ಅಪ್ಪ ಜಿಪುಣ ಎನ್ನಲು ಸಾಧ್ಯವಿಲ್ಲ. ದುಡ್ಡಿನ ಮೌಲ್ಯದ ಕುರಿತು ಅವನಿಗಿರುವಷ್ಟು ಕಾಳಜಿ, ಅನುಭವ ಈ ತಲೆಮಾರಿನವರಾದ ನಮಗೆ ಬರಲು ಸಾಧ್ಯವೇ ಇಲ್ಲ. ಇನ್ನೂ , ಇವತ್ತಿನ ಮಕ್ಕಳಿಗೂ ಕೂಡ ಅಂಥ ಅಪ್ಪಂದಿರು ಬಹುಶಃ ಸಿಗಲಾರರು ಅಲ್ವಾ?!
yes perfect BARAHA
ಅಪ್ಪಂದಿರ ಸ್ವಭಾವವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ.
hmm.. houdu..
ಚೆ೦ದದ ಆಪ್ತತೆಯ ಅಪ್ಪ೦ದಿರ ಬಗೆಗಿನ ಬರಹ.
Appana thyaga,kalakali nimma lekanadalli chennagi moodi bandhide ri.
na idanna papernalle odiddi…chanaagi baradde…. 🙂
ಒಳ್ಳೆಯ ಬರಹ ಕೊಡ್ಸರ.
appana bagge artical adbhutha vagide hwdu idina yuva pilige kevala thamma swarthada bagge mathra yochane madthare adeno avarige hetthavara bagge chinthe irolla. niva helidhage malenadina janane hage yakandre nam appa kuda malenadinavaru avaru kuda nam suka mathra baysovashtu mugdgharu…
ಪ್ರತಿಕ್ರಿಯಿಸಿದ ಎಲ್ಲರಿಗೂ ಶರಣು…