ತುಂಬಾ ದಿನಗಳಾಗಿತ್ತು ಏನ್ನನ್ನೂ ಓದದೆ. ಯಾಕೋ ಇತ್ತೀಚೆಗೆ ಓದು ತುಂಬಾ ಬೇಜಾರನ್ನಿಸುತ್ತಿದೆ. ದೂರದ ಬೆಟ್ಟ ನುಣ್ಣಗೆ ಅನ್ನುವ ಹಾಗೆ, ಬರಗಾರರನ್ನು ಹತ್ತಿರದಿಂದ ನೋಡಬಾರದು! ಯಾಕಂದ್ರೆ ಅವರನ್ನು ನೋಡಿದ ನಂತರ ಅವರ ಬರವಣಿಗೆ ಇಷ್ಟವಾಗುವುದು ತುಂಬಾ ಕಷ್ಟ. ಲವ್ ಜಿಹಾದ್ ಕುರಿತು ಪುಂಖಾನು-ಪುಂಖವಾಗಿ ಬರೆದು, ತೃಷೆ ತೀರಿಸಿಕೊಳ್ಳಲು ಯಾವ ಧರ್ಮದ ಹೆಣ್ಣು ಮಗಳಾದ್ರು ಸರಿ ಎನ್ನುವ ಜಾತಿಯ ಬರಹಗಾರರ ಪ್ರಮಾಣ ನಮ್ಮಲ್ಲಿ ಹೆಚ್ಚಾಗುತ್ತಿದೆ! ವ್ಯಕ್ತಿಯ ಯೋಗ್ಯತೆ ಗೊತ್ತಾದಾಗ, ಎಷ್ಟೇ ಕಷ್ಟಪಟ್ಟರೂ ಅವರ ಬರವಣಿಗೆ ಓದಲು ನನ್ನ ಮಟ್ಟಿಗಂತೂ ಸಾಧ್ಯವಿಲ್ಲ. ಆದ್ರೂ, ಓಶೋರಂಥ ತೀರಾ ಬೆರಳೆಣಿಕೆ ಮಂದಿ ಅವೆಲ್ಲವನ್ನೂ ಮೀರಿ ಬರೆಯುತ್ತಾರೆ! ಅಕ್ಷರ ರಕ್ಕಸರನ್ನು ಓದಲು ಕುಳಿತರೆ ಕಣ್ಣಿಂದ ನೋಡಿದ್ದೆಲ್ಲ ಮರೆತು ಹೋಗುವಷ್ಟು ಸೊಗಸು ಶೈಲಿ.
ಖಂಡಿತವಾಗಿಯೂ ಓದಿದಷ್ಟೂ ಬರವಣಿಗೆ ಅಭಿವೃದ್ಧಿಯಾಗುತ್ತದೆ. ಹೊಸ-ಹೊಸ ಆಲೋಚನೆಗಳು ಹುಟ್ಟುತ್ತವೆ. ಕಥೆ-ಕಾದಂಬರಿಗಳನ್ನು ಬರಹಗಾರನ ಹೆಸರನ್ನು ಹೊರಗಿಟ್ಟು ಓದಬಹುದು. ಓದಬೇಕು ಕೂಡ. ಆದ್ರೂ ಕೂಡ ಓದಲು ಮನಸ್ಸಿರಲಿಲ್ಲ. ಎಸ್.ಎಲ್ ಭೈರಪ್ಪ, ಓಶೋ, ಕಾರಂತರು…ಈ ಮೂವರು ಬರಹಗಾರರನ್ನು ಓದಲು ನನ್ನ ಪಾಲಿಗೆ ಮೂಡು ಬೇಕಿಲ್ಲ. ಉಳಿದವರ ಬರಹ ಓದಲು ಮಾನಸಿಕ ವೇದಿಕೆ ಅಗತ್ಯ. ಈ ಸಲದ ಸೋಮಾರಿತನಕ್ಕೆ ಅದು ಹುಸಿಯಾಗಿದೆ! ಸುಶ್ರುತನ ಬಳಿ ಪರ್ವ ತೆಗೆದುಕೊಂಡು ಬಹುಶಃ ೬ ತಿಂಗಳು ಕಳೆದಿದೆ. ಇನ್ನೂ ೪೦೦ ಪುಟ ಓದಲು ಬಾಕಿಯಿದೆ!
ಇಂತಿಪ್ಪೊ ನನ್ನನ್ನು, ಛಂದ ಪುಸಕ್ತ ಮತ್ತೆ ಮೊದಲಿನ ಓದಿಗೆ ಶುರು ಹಚ್ಚಿದೆ. ವಸುಧೇಂದ್ರರ ‘ರಕ್ಷಕ ಅನಾಥ’ ಕೃತಿಯನ್ನು ಒಂದೂವರೆ ದಿನದಲ್ಲಿ ಓದಿ ಮುಗಿಸಿದ್ದೇನೆ. ಈ ಕೃತಿ ವಸುಧೇಂದ್ರರ ಬರವಣಿಗೆ ತಾಕತ್ತನ್ನು ಮತ್ತಷ್ಟು ಹೆಚ್ಚಿಸಿದೆ ಅಂದರೆ ಬಹುಶಃ ತಪ್ಪಾಗಲಾರದು. ಅವರ ಸಾಫ್ಟ್ವೇರ್ ಕಚೇರಿಯ ಚಟುವಟಿಕೆಗಳ ಕುರಿತಾದ ಬರಹಗಳು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತವೆ. ಬಾಸ್ ಸಂದೀಪನ ಸಂಸ್ಕೃತಿ ಪರಿಚಯಿಸುವ ಹುಚ್ಚು ನೆನಪಿಸಿಕೊಂಡಾಗಲೆಲ್ಲ ನಗು ಉಕ್ಕುಕ್ಕಿ ಬರುತ್ತದೆ. ಇಂಗ್ಲೆಂಡ್ನ ದಂಪತಿಗಳು ಲೇಖಕರ ಕಚೇರಿಗೆ ಭೇಟಿ ನೀಡುತ್ತಾರೆ. ಯಾವುದೋ ಪ್ರಾಜೆಕ್ಟ್ ಕುರಿತು ನಿರ್ಧಾರ ತೆಗೆದುಕೊಳ್ಳಲು ಅವರು ಬಂದಿರುತ್ತಾರೆ. ಸಭೆ ನಡೆಯುತ್ತಿರುವಾಗ ಇಲಿಯೊಂದು ಪ್ರವೇಶಿಸುವ ದೃಶ್ಯ ಸಖತ್ ಮಜವಾಗಿದೆ. ಇಲಿಗೆ ಹೆದರುವ ಈ ಮಂದಿ ಭಾರತವನ್ನು ಶತಮಾನಗಳ ಕಾಲ ಆಳಿದ್ದು ಹೌದಾ? ಎನ್ನುವ ಸಂದೀಪನ ಪ್ರಶ್ನೆ ಎಲ್ಲರನ್ನೂ ಚಿಂತನೆಗೆ ಹಚ್ಚಿಸುತ್ತದೆ.
ಇನ್ನೂ ರಿಸೆಷನ್ ಪರಿಣಾಮದಿಂದ ಸಾಫ್ಟ್ವೇರ್ ಕಚೇರಿಯಲ್ಲಾಗುವ ತಲ್ಲಣವನ್ನು, ಹೇಳಲು ಸಾಧ್ಯವಿಲ್ಲದಷ್ಟು ಸೊಗಸಾಗಿ ವಿವರಿಸುತ್ತಾರೆ ವಸುಧೇಂದ್ರ. ಉದ್ಯೋಗ ಕಡಿತಕ್ಕೆ ಮುಂದಾಗುವ ಬಾಸ್, ಅದಕ್ಕೆ ಲೇಖಕರು ನೀಡುವ ಕೆಲ ಐಡಿಯಾಗಳು ಮಸ್ತಾಗಿವೆ. ವೆಚ್ಚ ಕಡಿತಕ್ಕೆ ಮುಂದಾದ ಬಾಸ್, ಗುರುವಾರದ ಊಟಕ್ಕೆ ಕತ್ತರಿ ಹಾಕುತ್ತಾನೆ. ರಾಯರ ವಾರದಂದು ಉಪವಾಸವಿರಬೇಕು ಎಂಬ ಸಂದೇಶ ನೀಡುತ್ತಾನೆ. ಆವತ್ತು ಸಂಜೆ ಕಚೇರಿಯಲ್ಲಿ ಯಾವೊಬ್ಬ ಉದ್ಯೋಗಿಯೂ ಕಾಣುವುದಿಲ್ಲ. ಭಯಗೊಂಡ ಬಾಸ್ ಸಂದೀಪ ಹಾಗೂ ಲೇಖಕರು ಸಹೊದ್ಯೋಗಿಗಳನ್ನು ಹುಡುಕಿಕೊಂಡು ಹೊರಟಾಗ ಕಚೇರಿಯಲ್ಲೊಂದು ಭಜನಾ ಮಂಡಳಿ ಆರಂಭವಾಗಿರುತ್ತದೆ! ಕೀ ಬೋರ್ಡ್, ಮೌಸ್ ಬಿಟ್ಟ ಮಂದಿ ರಾಯರ ಭಜನೆಗಳನ್ನು ಹಾಡುತ್ತಿರುತ್ತಾರೆ. ಈ ಸನ್ನಿವೇಶವನ್ನು ಕಣ್ಣೆದೆರಿಗೆ ನಿಲ್ಲುವಂತೆ ವರ್ಣಿಸಿದ್ದಾರೆ ಲೇಖಕರು. ಈ ಲೇಖನ ಓದಿದ ನಂತರವೂ ನಗು ಬಾರದವರ ಕುರಿತು ನಾವು ಅನುಮಾನಿಸಬೇಕಾಗುತ್ತದೆ! ಅಷ್ಟೊಂದು ಸೊಗಸಾಗಿದೆ ಬರಹ.
ಪುಸಕ್ತ ಮಾರಾಟದ ಕುರಿತ ವಸುಧೇಂದ್ರರ ಅನುಭವಗಳು, ದ್ರೌಪದಿಗೆ ಕೃಷ್ಣ ಸೀರೆ ನೀಡಿದ ಕುರಿತ ಅನುಮಾನ ನಮ್ಮನ್ನು ಗಂಭೀರವಾದ ಚಿಂತನೆಗೆ ಹಚ್ಚುತ್ತದೆ. ೫ ರೂ. ಕಡಿಮೆಯಿದೆ ಎಂದು ಕುರುಡನ ತಂದೆಗೆ ಪುಸಕ್ತ ನೀಡದ ಒಂದು ಘಟನೆ ಕಣ್ಣಲ್ಲಿ ನೀರು ತರಿಸುತ್ತದೆ. ನಮ್ಮ ವ್ಯಾಪಾರಿ ಬುದ್ಧಿಯ, ಘಟನೆಯ ನಂತರ ಪಶ್ಚಾತಾಪ ಪಡುವ ಎಷ್ಟೋ ಮಂದಿಯ ಜಾಣತನವನ್ನು ವಿವರಿಸುತ್ತದೆ. ಟೋಟ್ಟಲಿ ನಾನು ಇತ್ತೀಚೆಗೆ ಓದಿದ ಒಂದು ಅತ್ಯುತ್ತಮ ಕೃತಿ(ಇತ್ತೀಚೆಗೆ ಏನು ಓದಿಲ್ಲ ಎಂಬುದು ಇದಕ್ಕೆ ಕಾರಣವಿರಬಹುದು!)ಹಾಗೂ ನೀವೆಲ್ಲ ಕೊಂಡು ಓದಲೇ ಬೇಕಾದ ಕೃತಿ ಅಂದುಕೊಳ್ಳುತ್ತೇನೆ. ನಮ್ಮಮ್ಮ, ಯುಗಾದಿ ನಂತರ ಲೇಖಕರು ಅಷ್ಟೆ ತೂಕದ ಮತ್ತೊಂದು ಕೃತಿ ಕೊಟ್ಟಿದ್ದಾರೆ ಎಂದರೆ ಬಹುಶಃ ತಪ್ಪಾಗಲಾರದು. ಸಾಫ್ಟ್ವೇರ್ ಎಂಬ ಸೋಜಿಗದ ಜಗತ್ತಿನ ನಡುವೆಯೂ ಸ್ಟಾಲ್ನಲ್ಲಿ ನಿಂತು ತೀರಾ ಮಾರ್ವಾಡಿ ಬುದ್ಧಿಯೊಂದಿಗೆ ಪುಸಕ್ತ ಮಾರುವ ವಸುಧೇಂದ್ರರ ಸಾಹಿತ್ಯ ಪ್ರೀತಿಗೊಂದು ಸಲಾಂ.
ಈಗ ಪರ್ವ ಹಿಡಿದು ಕುಳಿತ್ತಿದ್ದೇನೆ. ೧೪ ತಾಸುಗಳ ನಿದ್ದೆಗೆ ತಕ್ಕ ಮಟ್ಟಿನ ಕಡಿವಾಣ ಹಾಕಲು ಯತ್ನಿಸುತ್ತಿದ್ದೇನೆ! ಕಥೆಯೊಂದನ್ನು ಬರೆಯದೇ ಇವತ್ತಿಗೆ ಸರಿಯಾಗಿ ಒಂದು ವರ್ಷವಾಯ್ತು. ಇನ್ನೂ ಬರವಣಿಗೆಯಲ್ಲೂ ತೀರಾ ಸೋಮಾರಿತನ. ಈ ಖಾಯಿಲೆಗಳಿಂದ ಯಾವತ್ತು ಮುಕ್ತಿ ಪಡೆಯುತ್ತೇನೊ ಗೊತ್ತಿಲ್ಲ!
ಈ ಪುಸ್ತಕದಲ್ಲಿ ಆಸಕ್ತಿಯನ್ನು ಹುಟ್ಟಿಸಿದಿರಿ. ಓದಲೇಬೇಕಾಯಿತು.
ನಿಜಕ್ಕೂ ನಿದ್ದೆಗೆಡಿಸಿದ ಪುಸಕ್ತ! ನಾನೂ ಎರಡು ದಿನದೊಳಗೆ ಓದಿ ಮುಗಿಸಿದೆ… ಬಸ್ಸು, ಡಾಕ್ಟರ್ ಶಾಪ್ ನಲ್ಲಿ ಹೊರಗೆ ಕಾಯುವಾಗ, ಹೀಗೆ ಕೂತಿರೋ ಜಾಗದ ಭೇದ ಭಾವವಿಲ್ಲದೆ 🙂
ಸುನಾಥ್ ಸರ್
ಖಂಡಿತಾ ಓದಬಹುದಾದ ಪುಸ್ತಕ
ದಿವ್ಯಾ
ಥ್ಯಾಂಕ್ಸ್
[…] ರಕ್ಷಕ ಅನಾಥನ ಬಗ್ಗೆ ಅಕ್ಷರ ವಿಹಾರದಲ್ಲಿ ಹೀಗಿದೆ.. ಓದಿ.. […]