ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ ನೆಗಡಿ. ಹದಗೆಟ್ಟ ವಾತಾವರಣದಿಂದ ಹಲವರಿಗೆ ಇದೇ ಕಾಯಿಲೆ ಕಾಡುತ್ತಿದೆಯಂತೆ. ಆದ್ರೂ ನನ್ನ ಪರಮ ವೈರಿ ಕಾಯಿಲೆಯಲ್ಲಿ ನೆಗಡಿಗೆ ಮೊದಲ ಸ್ಥಾನ. ನಂತರದ್ದು ಹಲ್ಲುನೋವಿಗೆ! ಆಸ್ಪತ್ರೆ, ಡಾಕ್ಟರ್, ಇಂಜೆಕ್ಷನ್ ಅಂದ್ರೆ ನಂಗೆ ಇವತ್ತಿಗೂ ಭಯ. ೧೦ನೇ ತರಗತಿವರೆಗೂ ನೆಗಡಿ, ಹಲ್ಲುನೋವು ಅನುಭವಿಸಿ ಸುಸ್ತಾಗಿಬಿಟ್ಟಿದ್ದೇನೆ. ಮತ್ತೆ ಅಪರೂಪಕ್ಕೆ ಕಾಣಿಸಿಕೊಂಡ ಈ ನೆಗಡಿಯಿಂದ ಹಳೆಯದೆಲ್ಲ ಅದ್ಯಾಕೊ ನೆನಪಾಯಿತು.
‘ಸುಬ್ಬಣ್ಣ ಶಿರಸಿ ಹತ್ರಾ ವಾಜಗದ್ದೆಲಿ ಥಂಡಿಗೆ ಚೋಲೋ ಔಷಧಿ ಕೊಡ್ವ್ತಡ ನೋಡು’ ಅಂತಾ ಯಾರೋ ಹೇಳುತ್ತಿದ್ದರು. ‘ಅಲ್ಲ , ತಾಳಗುಪ್ಪದಲ್ಲಿ ಥಂಡಿ, ಕಫ ಹೋಪಲೆ ಒಬ್ಬವ ಬಾಳಾ ಒಳ್ಳೇ ಹಳ್ಳಿ ಔಷಧಿ ಕೊಡ್ತ್ನಡ ನೋಡು…’ಮತ್ತ್ಯಾರದ್ದೋ ಸಲಹೆ. ಇದನ್ನೆಲ್ಲ ಕೇಳಿದ ಅಪ್ಪ, ತಿಂಗಳಿಗೆ ಎರಡು ಸಲ ನನ್ನನ್ನು ಔಷಧಿಗೆ ಕರೆದುಕೊಂಡು ಹೋಗುತ್ತಿದ್ದ. ಕಫ ಕಟ್ಟಿದಾಗ ನಂಗೆ ನಡೆಯಲು ಆಗುತ್ತಿರಲಿಲ್ಲ. ಆಗೆಲ್ಲ ಬೆನ್ನ ಮೇಲೆ ಉಪ್ಪುಚಕ್ಕಿ ಮಾಡಿಕೊಂಡು, ಅಮ್ಮನಂತೆ ಕಂಕುಳಿನಲ್ಲಿ ನನ್ನನ್ನು ಹೊತ್ತುಕೊಂಡು ಹೋಗುತ್ತಿದ್ದ ಅಪ್ಪ … ಎಂಬುದು ನೆನಪಾದಾಗ ಅಮ್ಮನಿಗೆ ಪೋನ್ ಮಾಡಿದೆ. ಅವರು ಅಂಗಳದಲ್ಲಿ ಅಡಿಕೆ ಸಿಪ್ಪೆ ಮಗಿತಾ ಇದ್ದ…ಅಂದ್ಲು ಅಮ್ಮ.
ಸುಮಾರು ೫-೬ ವರ್ಷ ಅಸ್ತಮದ ರೀತಿಯ ಕಾಯಿಲೆಗೆ ಔಷಧಿ ಹುಡುಕಿಕೊಂಡು ನಾನು, ಅಪ್ಪ ತಿರುಗಿದ್ದಕ್ಕೆ ಲೆಕ್ಕವಿಲ್ಲ. ಕಡೆಗೂ, ಆ ಕಾಯಿಲೆ ತಾನಾಗಿಯೇ ಹುಷಾರಾಯಿತು ಹೊರತೂ, ಯಾವ ಔಷಧಿಯೂ ಪ್ರಯೋಜನವಾಗಲಿಲ್ಲ. ಅಪ್ಪನ ಬಗ್ಗೆ ಬರೆಯುತ್ತಾ ಹೋದರೆ ಬಹುಶಃ ನನ್ನ ಪಾಲಿಗೆ ಪುಟಗಳು ಸಾಲದಾಗಬಹುದು. ಅಷ್ಟು ಪಾಠವನ್ನು ಬದುಕಿಗೆ ಕಲಿಸಿಕೊಟ್ಟಿದ್ದಾನೆ.
ಆಗ, ನನಗೆ ೪ ವರ್ಷವಿರಬೇಕು. ಹಳೆ ಸೊಗೆಯ ಮನೆಯಲ್ಲಿದ್ದೆವು. ಅಮ್ಮನ ಕಾಲಿಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದಳು. ಆಗ ಮನೆಯಲ್ಲಿ ಗಂಜಿಗೂ ಅಕ್ಕಿ ಇರಲಿಲ್ಲ. ಅಂಥ ಸ್ಥಿತಿಯಲ್ಲಿದ್ದ ಕುಟುಂಬವನ್ನು ಅಪ್ಪ ಮೇಲಕ್ಕೆತ್ತಿದ ರೀತಿ ನಿಜಕ್ಕೂ ನನ್ನಿಂದ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ.
ನಾನು ೭ ತರಗತಿಗೆ ಬರುವ ಹೊತ್ತಿಗೆ, ನಾವು ಈ ಕಡೆ ಕೇರಿಯಲ್ಲಿ ಮನೆ ಮಾಡಿದೆವು. ದುರಂತವೆಂದರೆ, ನಮ್ಮ ದಾಯಾದಿ ಚಿಕ್ಕಪ್ಪನೇ ಮೋಸ ಮಾಡಿದ. ಹಸಿ ಇಟ್ಟಿಗೆ ಗೋಡೆಯ ಮನೆ ಕಟ್ಟಿಸಿ, ಹಳೆ ಮನೆಯ ಜಾಗವನ್ನು ಬರೆಸಿಕೊಂಡು, ಅಡಿಕೆ ದುಡ್ಡನ್ನೆಲ್ಲ ನುಂಗಿ ನೀರು ಕುಡಿದ. ಅದೇ ಹೊತ್ತಿಗೆ ಅಪ್ಪ ಅಲ್ಸರ್ನಿಂದ ಹಾಸಿಗೆ ಹಿಡಿದಿದ್ದ. ಇನ್ನೂ ಬದುಕುವುದೇ ಇಲ್ಲ, ಅವನ ಕಥೆ ಮುಗಿದೇ ಹೋಯಿತು ಅನ್ನುವಂತಾಗಿತ್ತಂತೆ. ನನಗೆ ಆಗ ಅದ್ಯಾವುದೂ ಅರ್ಥವಾಗಲಿಲ್ಲ. ಶ್ರೀಧರ ಸ್ವಾಮಿಗಳು ಕನಸಿನಲ್ಲಿ ಅಪ್ಪನಿಗೆ ಆಶೀರ್ವಾದ ಮಾಡಿದರಂತೆ. ಅಲ್ಲಿಂದ ನಂತರ ಅಪ್ಪ ಸುಧಾರಿಸಿದ್ದಂತೆ. ಹಾಗಂತ ಅಪ್ಪ ಹೇಳುವುದುಂಟು. ಈ ವಿಷಯ ಬಾಲಿಶ ಅನ್ನಿಸಬಹುದು. ಆದರೆ, ಒಂದು ದಿನ ಇದ್ದಕ್ಕಿದಂತೆ ಮಾತ್ರೆ ಎಸೆದಿದ್ದನ್ನು ನಾನೇ ನೋಡಿರುವೆ. ಅಲ್ಲಿಂದ ನಂತರ ಮತ್ತೆ ಕೆಜಿ ಲೆಕ್ಕದಲ್ಲಿ ತಂಬಾಕಿನ ಕವಳ. ಯಾರು, ಎಷ್ಟೇ ಹೇಳಿದರೂ ಅಪ್ಪ ಕವಳದ ವಿಷಯದಲ್ಲಿ ಇವತ್ತಿನವರೆಗೂ ರಾಜಿಯಾಗಿಲ್ಲ. ಮಾತ್ರೆಯನ್ನೂ ಮತ್ತೆ ಯಾವತ್ತೂ ನುಂಗಲಿಲ್ಲ!
ಇಗೊಂದಷ್ಟು ದಿನದ ಹಿಂದೆ ಅಪ್ಪನಿಗೆ ಚರ್ಮದ ಅಲರ್ಜಿ ಶುರುವಾಗಿತ್ತು. ತುಂಬಾ ಮಂಕಾಗಿ ಬಿಟ್ಟಿದ್ದ. ನನಗೂ ಆ ನೋವು ತುಂಬಾ ಕಾಡುತ್ತಿತ್ತು. ಔಷಧಿ ತೆಗೆದುಕೊಂಡು ೩ ದಿನದಲ್ಲಿ ರೋಗ ಹುಷಾರಾಗಬೇಕು ಎಂಬುದು ಅವನ ತತ್ವ! ಹಾಗಾಗಿ ಅವನಿಗೆ ಔಷಧಿ ಕುಡಿಸಲು ಸಾಧ್ಯವೇ ಇಲ್ಲ ಎಂಬುದು ನನಗೆ ಗೊತ್ತಿತ್ತು. ಆದ್ರೂ ಅವ ನನ್ನನ್ನು ಹೆಗಲ ಮೇಲೆ ಹೊತ್ತು ಔಷಧಿಗೆ ತಿರುಗಿದ್ದು ನೆನಪಾಯಿತು. ಹಾಗಾಗಿ ಹಠ ಮಾಡಿದೆ. ನನ್ನ ಹಠಕ್ಕೆ ಔಷಧಿ ತೆಗೆದುಕೊಂಡ ಎಂಬುದು ನಿಜ. ಜೊತೆಗೆ, ಅದನ್ನು ಕುಡಿಯುವುದಿಲ್ಲ ಎಂಬ ನನ್ನ ನಂಬಿಕೆಯೂ ನಿಜವಾಯಿತು! ಹಾಗಂತ ಯಾರ್ಯಾರೋ ಹೇಳಿದರು ಅಂತಾ, ದಿನಕ್ಕೊಬ್ಬ ಪಂಡಿತರ ಬಳಿ ಓಡುವುದನ್ನು ಮಾತ್ರ ಅಪ್ಪ ನಿಲ್ಲಿಸುವುದಿಲ್ಲ! ಕಡೆಗೆ ಅಲರ್ಜಿಯೂ ತಾನಾಗಿಯೇ ಹೋಯಿತು.
ಈಗ ಮತ್ತೆ ಮುಂಚಿನ ಗೆಲುವಿನಲ್ಲಿದ್ದಾನೆ…ಲವಲವಿಕೆಯಿಂದ ಕೆಲಸ ಮಾಡುತ್ತಿದ್ದಾನೆ. ನನ್ನ ಮಟ್ಟಿಗೆ ಇದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ. ತಾನೂ ಚಪ್ಪಲಿ ಹಾಕದೆ ಹೋದರೂ, ನನ್ನ ಮತ್ತು ತಂಗಿಯ ಬೇಡಿಕೆಗಳಿಗೆ ಯಾವತ್ತೂ ಕೊರತೆ ಮಾಡಲಿಲ್ಲ. ಅದರಲ್ಲೂ ವಿಶೇಷವಾಗಿ ತಂಗಿಗೆ! ಅವ, ತನಗೆ ಹೊಸ ಬಟ್ಟೆ ತಂದುಕೊಂಡಿದ್ದು ನಾನಂತೂ ಯಾವತ್ತೂ ನೋಡಿಲ್ಲ. ಆದ್ರೆ, ದುಡ್ಡು ಇಲ್ಲದಾಗಲೂ ಸಾಲ ಮಾಡಿ ನಮಗೆ ಬಟ್ಟೆ ತಂದುಕೊಟ್ಟವ…ಯಾಕೋ ಹಾಗೇ ಸುಮ್ಮನೆ ಅವನ ಕುರಿತು ಒಂದಷ್ಟು ಬರೆಯಬೇಕು ಅನ್ನಿಸಿತು. ಮನಸ್ಸು ಬಂದಾಗ ಮತ್ತೊಂದಿಷ್ಟು ಬರೆಯುವೆ!
good writeup dear.. kathe bEreyaadroo, saala maaDiyadru magange kELiddu thandukoDO vishayadalli nanna appa ninnappanangE. 🙂
ಬಹಳ ಪ್ರೀತಿ ಮತ್ತು ಹೆಮ್ಮೆ ಸೂಸುವ ಆತ್ಮೀಯ ಬರಹ. “ಯಾಕೋ ಹಾಗೇ ಸುಮ್ಮನೆ ಅವನ ಕುರಿತು ಒಂದಷ್ಟು ಬರೆಯಬೇಕು ಅನ್ನಿಸಿತು. ” ಒಳ್ಳೆಯದೇ ಅನಿಸಿತು!
VERY GOOD
ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ಹೀಗೊಂದು ಅಧ್ಯಯನ
ಆತ್ಮೀಯರೆ,
ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.
ಬಹಳಷ್ಟು ಬ್ಲಾಗ್ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.
ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.
http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..
ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.
ಧನ್ಯವಾದಗಳೊಂದಿಗೆ
ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು