ಈಗೊಂದು ೧೦-೧೨ ವರ್ಷದ ಕೆಳಗಿನ ಮಾತಿದು. ಹಳ್ಳಿ ಹುಡುಗಿಯರಿಗೆ, ೩೦ರ ಗಡಿ ದಾಟಿದವರಿಗೆ ಗಂಡು ಇಲ್ಲ ಅಂತಾಗಿತ್ತು. ಮಹಾರಾಷ್ಟ್ರ, ಪುಣೆಯಂಥ ದೂರದೂರಿಗೆ ಹೆಣ್ಣು ಕೊಡುವ ಅನಿವಾರ್ಯತೆ ಮಲೆನಾಡಿಗರಿಗೆ ಎದುರಾಗಿತ್ತು. ಹೆಣ್ಣು ಹೆತ್ತವರು, ಅಂತೂ ಮಗಳು ದಾಟಿ ಹೋದ್ಲಪ್ಪೋ ಅನ್ನೋ ತರಹ ಮಾತಾಡುತ್ತಿದ್ದರು. ಹುಡುಗ ಎಂಜಿಯರ್ ಆದ್ರೆ ಒಂತರಹ ವರದಕ್ಷಿಣೆ, ಡಾಕ್ಟರ್ ಆದ್ರೆ ಮತ್ತೊಂದು ತರಹ ದಕ್ಷಿಣೆ…ಒಟ್ಟಲ್ಲಿ ಹೆಣ್ಣು ಮಕ್ಕಳಿಗೆ ಬದುಕೇ ಅಸಹೀಯ ಅನ್ನಿಸುವಂತ ವಾತಾವರಣವಿತ್ತು ಅನ್ನೋದಂತೂ ಸುಳ್ಳಲ್ಲ.
ಒನ್ಸ್ ಎಗೈನ್, ಆ ಕಾಲ ಮರುಕಳಿಸಿದೆ. ಹುಡುಗಿ ಸ್ಥಾನದಲ್ಲಿ ಹುಡುಗನಿದ್ದಾನೆ! ‘ಹಳ್ಳಿಯಲ್ಲಿದ್ದ ಹುಡುಗನಿಗೆ ಮದ್ವೆಯಿಲ್ಲ ಅಂತಾಗಿದೆ. ೬-೭ ಎಕರೆ ತೋಟ, ಜೀಪು, ಬೈಕ್ ಇದ್ದರೂ ಈಗ ಹುಡುಗಿ ಸಿಗ್ತಾ ಇಲ್ಲ’ ಹಾಗಂತ ಪೂತ್ತೂರು ಕಡೆ ಸ್ನೇಹಿತರೊಬ್ಬರು ಮೊನ್ನೆ ಹೇಳುತ್ತಿದ್ದರು. ಮದ್ವೆಯಾಗಲಿ ಅಂತಾನೇ ಪಟ್ಟಣ್ಣಕ್ಕೆ ಕಾಲಿಟ್ಟ ಹೆಗಡೆ, ಭಟ್ಟರ ಮಕ್ಕಳಿಗೂ ಕೊರತೆಯಿಲ್ಲ! ಈ ಪರಿಸ್ಥಿತಿ ನೋಡಿ ನಗಬೇಕಾ, ಅಳಬೇಕಾ ಅಂತಾ ನನಗಂತೂ ಅರ್ಥವಾಗುತ್ತಿಲ್ಲ.
ಮಲೆನಾಡಿನ ಮಂದಿಗೆ ಮದ್ವೆ ಎಂಬುದು ಸಿಕ್ಕಾಪಟ್ಟೆ ಮಹತ್ವದ ಘಟ್ಟ! ಹೆತ್ತವರಿಗೆ ಮಕ್ಕಳ ಮದ್ವೆ ಎಂಬುದು ಭಯಂಕರ ಚಿಂತೆಯ ವಿಷ್ಯ. ಮದ್ವೆಯೇ ಬದುಕಿನ ಶ್ರೇಷ್ಠ ಸಾಧನೆ ಎಂದು ಭಾವಿಸಿ ಕುಳಿತವರಿಗೆ ನಮ್ಮೂರು ಕಡೆ ಕೊರತೆಯಿಲ್ಲ ಬಿಡಿ. ಗಂಡು-ಹೆಣ್ಣು ಎಂಬ ಭಿನ್ನ ಸೃಷ್ಟಿಯಿಂದ ಇವರೆಲ್ಲ ಹೀಗಾದ್ರೋ, ಅಥವಾ ಇಂಥವರನ್ನು ನೋಡಿಯೇ ಭಿನ್ನ ಸೃಷ್ಟಿಯಾಯಿತು ನನಗಂತೂ ಗೊತ್ತಿಲ್ಲ! ನನ್ನ ಪಾಲಿಗೆ, ಈ ಪ್ರಪಂಚದಲ್ಲಿ ಮುಗಿಯದಷ್ಟು ನೋಡಬಹುದಾದ ಅಂಶಗಳಿವೆ. ಬೆನ್ನತ್ತಿ ಹೋದಷ್ಟು ವಿಸ್ತಾರವಾಗುವ ಕ್ಷೇತ್ರಗಳಿವೆ. ಕಾಲ ಕಳೆದಂತೆ ಕನಸುಗಳು ದೊಡ್ಡದಾಗುತ್ತಿವೆ. ಎಲ್ಲರೂ ಮದ್ವೆಗೆ ಮೋದ್ಲು ನನ್ನ ಹಾಗೆ ಮಾತಾಡುತ್ತಾರಂತೆ!!!
ನಮ್ಮ ಗುಂಪಿನ ಗೆಳೆಯನೊಬ್ಬ ಮದ್ವೆಯಾದ ಅಂದ್ರೆ, ಆತ ಕೈಗೆ ಸಿಗುವುದು ಕಷ್ಟ! ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕಾಣಿಸುವುದಿಲ್ಲ. ರಾತ್ರಿ ಎಂಟರ ಮೇಲೆ ಎಲ್ಲೂ ನಿಲ್ಲುವುದಿಲ್ಲ! (ಬಹುತೇಕರ ಈ ‘ಶೋ’ಗಳೆಲ್ಲ ಮದ್ವೆಯಾಗಿ ೧-೨ವರ್ಷದ ತನಕ ಮಾತ್ರ ಎಂಬುದು ನಂತರದ ಮಾತು ಬಿಡಿ!)ಈ ಕಥೆಗಳೆಲ್ಲ ಒತ್ತಟ್ಟಿಗಿರಲಿ. ಆದ್ರೆ, ಪ್ರತಿ ಸಲ ಹಳ್ಳಿ ಎಂಬುದು ಶೋಷಣೆ ವಸ್ತುವಾಗುತ್ತಿರುವ ಕುರಿತು ಚಿಂತಿಸಲೇಬೇಕಿದೆ.
೪-೬ ಎಕರೆ ಹೊರಗಿರಲಿ, ೨ ಎಕರೆ ಆಸ್ತಿಯಿದ್ದರೂ, ಹಳ್ಳಿಗಿಂತ ಉತ್ತಮವಾದ ಬದುಕು ಎಲ್ಲೂ ಸಿಗುವುದಿಲ್ಲ. ದಿನದಲ್ಲಿ ೧೦-೧೨ ತಾಸು ಕಚೇರಿಯಲ್ಲಿ ಇರಬೇಕು ಎಂಬ ನಿಯಮ ಯಾವ ಕೃಷಿಕನಿಗೂ ಇಲ್ಲ. ೩೬೫ ದಿನವೂ ಕಚೇರಿಗೆ ಹೋಗಬೇಕು, ಸಂಬಳ ಕಡಿತವಾಗತ್ತೆ ಎಂಬ ಗೋಳು ರೈತನಿಗಿಲ್ಲ. ಯಾವುದೋ ಯಜಮಾನನ ಕೆಳಗೆ ದುಡಿಯಬೇಕು, ಆತ ಕೊಟ್ಟಾಗ ಮಾತ್ರ ರಜೆ ತೆಗೆದುಕೊಳ್ಳಬೇಕು ಎಂಬ ಸಮಸ್ಯೆಗಳಿಲ್ಲ. ವಾರದಲ್ಲಿ ಒಂದೇ ದಿನ ಹೆಂಡತಿ ಜತೆ ಕಾಲ ಕಳೆಯುವ ಅವಕಾಶ ಎಂಬುದಂತೂ ಹಳ್ಳಿಯಲ್ಲಿ ಕಾಣಿಸುವುದಿಲ್ಲ.
ಗಂಡ, ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಮಹಾನಗರಿಯ ಮನೆಗಳನ್ನು ನೋಡವುದೇ ಬೇಡ ಬಿಡಿ. ನೆಂಟರಿಲ್ಲ, ಸ್ನೇಹಿತರಿಲ್ಲ…ಬಹುಶಃ ಭೂಮಿಯಲ್ಲಿದ್ದೂ, ಮಂಗಳ ಗ್ರಹದಂತೆ ಬುದುಕು ಅವರದ್ದು. ಅವರಿಗಿಂತ ಹೆಚ್ಚಾಗಿ, ಹುಟ್ಟುವ ಮಕ್ಕಳಿಗಾಗಿ ದುಡಿಯುವವರು. ಭವಿಷ್ಯದ ಕುರಿತು ವಿಶಾಲ ಚಿಂತನೆಯುಳ್ಳವರು. ಹಾಗಾಗಿ ಅಂತವರ ಕುರಿತು ಕೆಮ್ಮುವಂತಿಲ್ಲ! ಇಂಥ ದೂರದೃಷ್ಟಿ ಹೊಂದಿರುವ ಸಂಸಾರಗಳಲ್ಲೇ ಬಹುಬೇಗ ಬಿರುಕು ಕಾಣಿಸಿಕೊಳ್ಳುವುದನ್ನು ದುರಂತ ಎನ್ನಬಹುದೇ?!
ಇವತ್ತು ಅನೇಕ ಮಲೆನಾಡಿನ ಹಳ್ಳಿಗಳನ್ನು ನೋಡಿದರೆ ಬೇಜಾರಾಗುತ್ತಿದೆ. ನಮ್ಮೂರಿನಂಥ ಅನೇಕ ಊರುಗಳು ನಿವೃತ್ತರ ಕೇರಿಗಳಾಗಿವೆ. ಸ್ಥಿತಿ ಹೀಗಿರುವಾಗ ಹಳ್ಳಿ ಹುಡುಗರಿಗೆ ಹೆಣ್ಣಿಲ್ಲವಂತೆ! ಹಾಗಾದರೆ ಊರಿನಲ್ಲಿ ಉಳಿದುಕೊಳ್ಳುವವರು ಯಾರು ಎಂಬುದು ಬಹುದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಬೇಕಾದವರು ಮಹಾನಗರಿಯಲ್ಲಿ ಠಿಕಾಣಿ ಹೂಡಿರುವ ನಾವುಗಳು. ಆದರೆ, ನಾವಿಂದು ನಿರುತ್ತರದ ಸ್ಥಿತಿ ತಲುಪಿದ್ದೇವೆ. ಸ್ಥಿತಿ ಹೀಗೇ ಮುಂದುವರಿದರೆ ಬಹುಶಃ ನಮ್ಮೂರಿನ ಕೇರಿಗಳು ಬರಿ ನೆನಪಾಗಿ ಉಳಿಯಬಹುದಾ…?
ಚೆನ್ನಾಗಿ ಬರೆದಿದ್ದೀರಿ, ನಾನು ಅಕ್ಷರ ವಿಹಾರದ ನಿರಂತರ ಓದುಗಳು. ನನ್ನದೊಂದು ಕೋರಿಕೆ, ನೀ ಬರುವ ಹಾದಿಯಲ್ಲಿ ಬರಿತಾರಲ್ಲ ಅವರ ಬ್ಲಾಗ್ ವಿಳಾಸ ನಿಮಗೆ ಗೊತ್ತಿದ್ದರೆ ತಿಳಿಸಿ.
super aritcle
ಬರೀ ಹಳ್ಳಿ ಅಥವ ಮಲೆನಾಡೂ ಅಥವ ಕರಾವಳಿಯ ಹುಡುಗರಿಗಷ್ಟೆ ಅಲ್ಲ ಎಲ್ಲ ಸೀಮೆಯ ಹುಡುಗರಿಗೂ ಈ ಬಿಸಿ ಈಗ ತಟ್ಟುತ್ತಿದೆ. ಜನನ ಲಿಂಗ ಅನುಪಾತದಲ್ಲಿನ ವ್ಯತ್ಯಾಸವೇ ಇದಕ್ಕೆ ಕಾರಣ.
ಹೌದು. ಮಹಾನಗರಿಗಳು ಕೈ ಬೀಸಿ ಕರೆದು, ಯುವ ಜನಾ೦ಗವನ್ನು ನು೦ಗಿ ತೇಗುತ್ತಿದೆ. ಹಳ್ಳಿ ಹುಡುಗನ ಕಥೆ ಕೇಳುವವರಿಲ್ಲ.
ಸ್ಥಿತಿ ಹೀಗೇ ಮುಂದುವರಿದರೆ ಬಹುಶಃ ನಮ್ಮೂರಿನ ಕೇರಿಗಳು ಬರಿ ನೆನಪಾಗಿ ಉಳಿಯಬಹುದಾ…?
ಈ ಬಗ್ಗೆ ಸಂಶಯವೇ ಬೇಡ.
chenagi baradey
ಬರಹ ಪ್ರೋತ್ಸಾಹಿಸಿದ ಎಲ್ಲರಿಗೂ ಥ್ಯಾಂಕ್ಸ್…
ಹೀಗೆ ಆದರೆ ನಮ್ಮ ದೇಶದಲ್ಲಿ ಮತ್ತು ಭೂಮಿಯಲ್ಲೇ ಆಹಾರ-ಕ್ಷಾಮ ತಲೆದೋರಿ, ಕಾಂಬೋಡಿಯದಲ್ಲಿ “ಪೋಲ್-ಪೋಟ್ (೧೯೭೫-೭೯)” ಮಾಡಿದಂತೆ ಬಲವಂತವಾಗಿ ಎಲ್ಲರನ್ನು ಮರಳಿ ಹಳ್ಳಿಗೆ ಓಡಿಸೋ ಕಾಲ ಬರಬಹುದು, ಅವಾಗ ಭೂಮಿ- ಹಿಡುವಳಿದಾರರೆ ರಾಜರು..