ಮೈಸೂರಿಗೆ ಹೋಗುವ ಪ್ರಯಾಣಿಕರಿಗೆ ಗಾಡಿ ನಂಬರ್ ೬೯೯೦, ಟಿಪ್ಪು ಎಕ್ಸ್ಪ್ರೆಸ್ ಗಾಡಿಯು ಪ್ಲಾಟ್ಫಾರ್ಮ್ ನಂಬರ್ ೯ಕ್ಕೆ ಶೀಘ್ರದಲ್ಲಿ ಬಂದು ಸೇರುವ ನಿರೀಕ್ಷೆಯಿದೆ. ಮೈಸೂರು ಜಾನೆವಾಲಿಯೇ…
ಕಂಪ್ಯೂಟರ್ನ ಆ ಹುಡುಗಿ ಅರೆಬೆಂದ ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ವದರುತ್ತಲೇ ಇದ್ದಳು.
೨.೧೫ಕ್ಕೆ ಹೊರಡಬೇಕಿದ್ದ ರೈಲು, ಇನ್ನೂ ಬಂದಿಲ್ಲ. ಸೂಪರ್ ಎಕ್ಸ್ಪ್ರೆಸ್ ಅಂತೆ! ಟಿಕೆಟ್ ದರ, ಉಳಿದವುಗಳಿಗಿಂತ ೧೦ರೂಪಾಯಿ ಜಾಸ್ತಿ. ಒಂದು ದಿನವೂ ಸಮಯಕ್ಕೆ ಸರಿಯಾಗಿ ಬಂದ ದಾಖಲೆಯೇ ಇಲ್ಲ…ಹಾಗಂತ ಮಂಡ್ಯ ಕಡೆಯ ಗೌಡರೊಬ್ಬರು ತಮ್ಮ ಅಳಲನ್ನು ನನ್ನ ಹತ್ತಿರ ಹೇಳುತ್ತಿದ್ದರು. ನನ್ನ ಮನಸ್ಸು ಬೇರೆ ಕಡೆ ಕೇಂದ್ರಿಕೃತವಾಗಿದ್ದರೂ, ಅವರ ಅಳಲನ್ನು ಕೇಳಿದಂತೆ ನಟಿಸುತ್ತಾ ಇರುವಾಗ, ದೃಷ್ಟಿ ಮೇಲುಗಡೆ ಹಾಯಿತು.
ಹೆಂಗಸೊಬ್ಬಳು ಏನೋ ವ್ಯವಹಾರ ಕುದುರಿಸುತ್ತಿದ್ದಾಳೆ. ಗಂಡಸು ಅವಳ ಜತೆ ಮಾತಾಡುತ್ತಿದ್ದಾನೆ. ಅವಳು ‘ಐದು’ ಎಂದು ಬೆರಳಿನಲ್ಲಿ ತೋರಿಸುತ್ತಿದ್ದರೆ, ಅವ ‘ಮೂರು’ ಅನ್ನುತ್ತಿದ್ದಾನೆ.
೭-೮ ನಿಮಿಷ ಚರ್ಚೆ ನಡೆದ ನಂತರ ಅವರಿಬ್ಬರ ವಹಿವಾಟು ಮುಗಿಯಿತು. ಅವ ಮುಂದೆ ಹೋದ. ಅವಳು ಅವನ ಹಿಂದೆ…೪೦೦ ರೂಪಾಯಿಗೆ ವ್ಯಾಪಾರ ಕುದುರಿದೆ ಎಂದು ಸ್ಪಷ್ಟವಾದರೂ, ಆ ಹಣ ಎಷ್ಟು ತಾಸಿನ ಸುಖಕ್ಕೆ ಎಂಬುದು…
ಚುಕು ಬುಕು, ಚುಕು ಬುಕು…
ರೈಲು ಬಂದೇ ಬಿಟ್ಟಿದೆ. ಸೀಟು ಹಿಡಿಯಲು ಜನ ಓಡುತ್ತಿದ್ದಾರೆ. ಹೆಂಗಸು, ಗಂಡಸು, ಹುಡುಗ, ಹುಡುಗಿ ಇವ್ಯಾವುದರ ಪರಿವೂ ಅವರಿಗಿಲ್ಲ. ಜಾಗ, ಕಿಟಿಕಿ ಪಕ್ಕದ ಸೀಟು ಇವಿಷ್ಟೇ ಅವರ ಆಲೋಚನೆ.
ಹುಬ್ಬಳ್ಳಿಯಿಂದ ಮೈಸೂರು ಕಡೆಗೆ ಹೋಗುವ ಗಾಡಿ ನಂಬರ್ ೬೯೯೦, ಟಿಪ್ಪು ಎಕ್ಸ್ಪ್ರೆಸ್ ಗಾಡಿಯು ಪ್ಲಾಟ್ಫಾರ್ಮ್ ನಂಬರ್ ೯ರಿಂದ ೨.೧೫ಕ್ಕೆ ಹೊರಡಲಿದೆ…
ಮೊಬೈಲ್ನಲ್ಲಿ ಸಮಯ ೨.೩೦ ಎಂದು ತೋರಿಸುತ್ತಿದೆ. ನನ್ನ ಮೊಬೈಲ್ನ ಗಡಿಯಾರವೇ ಸರಿಯಿಲ್ಲ ಇರಬೇಕು ಅಂದುಕೊಳ್ಳುತ್ತಾ ಜಾಗ ಹಿಡಿದು ಗಟ್ಟಿಯಾಗಿ ಕುಳಿತೆ. ದೃಷ್ಟಿ , ನಾನು ತೊಟ್ಟಿದ್ದ ಕುರ್ತಾದ ಕಡೆಗೆ ಹಾದು ಹೋಯಿತು. ಕುರ್ತಾದ ಬಣ್ಣ ಮಾಸಿದೆ. ಆದರೂ ಎಲ್ಲೂ ಹೊಲಿಗೆ ಬಿಟ್ಟಿಲ್ಲ. ಇನ್ನು ಆರು ತಿಂಗಳಿಗೇನೂ ತೊಂದರೆ ಇಲ್ಲ. ಒಂದು ಕಾಲದಲ್ಲಿ ಯಾರೋ ತೊಟ್ಟು ಬಿಟ್ಟಿದ್ದ ಹಳೇ ಬಟ್ಟೆ ಹಾಕಿಕೊಂಡು ಬದುಕುತ್ತಿದ್ದವನು, ಇವತ್ತು ನನ್ನ ಸಂಪಾದನೆಯಲ್ಲಿ ಸ್ವಂತ ಬಟ್ಟೆ ತೊಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದೇನೆ…ಖುಷಿಯ ಭಾವ ಮನವನ್ನು ಆವರಿಸಿತ್ತು.
‘ಏ ಪುಣ್ಯಾತ್ಮ ಬಟ್ಟೆಗೊಂದು ಇಸ್ತ್ರಿ ಹಾಕುವ ಅಭ್ಯಾಸ ಮಾಡ್ಕ್ಯ ಮಾರಾಯ. ಇಲ್ಲೆ ಅಂದ್ರೆ ಯಾವ ಹುಡುಗಿಯೂ ಸಿಗದಿಲ್ಲೆ ನೋಡು ನಿಂಗೆ ಆಮೇಲೆ’ ಎಂಬ ಅವಳ ಹಿತವಚನ ಅದ್ಯಾಕೊ ನೆನಪಿಗೆ ಬಂತು.
ಬಟ್ಟೆ ಕೊಳೆಯಾಗಲಿ, ಆಗದೇ ಇರಲಿ ವಾರಕ್ಕೊಂದು ಸಲ ಬಟ್ಟೆ ತೊಳೆಯುವುದು ಕಳೆದ ೮ ವರ್ಷಗಳಿಂದ ಅಭ್ಯಾಸವಾಗಿಬಿಟ್ಟಿದೆ. ಇನ್ನೂ ಇಸ್ತ್ರಿ…ಎರಡೋ-ಮೂರೋ ತಿಂಗಳಿಗೆ ಅಗಸನ ಬಳಿ ಬಟ್ಟೆ ಕೊಟ್ಟಾಗ ಇಸ್ತ್ರಿಯಾಗಿಯೇ ಬರುತ್ತದೆ! ಇಸ್ತ್ರಿ ಹಾಕುವುದರಿಂದ ನನಗೇನೂ ಸಮಧಾನ ಸಿಗುವುದಿಲ್ಲ. ಹುಡುಗಿ ನೋಡುತ್ತಾಳೆಂದು ಇಸ್ತ್ರಿ ಹಾಕುವ ಅಭ್ಯಾಸವಂತೂ ಇಲ್ಲವೇ ಇಲ್ಲ.
ಯಾರೂ ಸಿಗದೇ ಹೋದರೆ ನೀನೇ ಇದ್ಯಲ್ಲ ಬಿಡು!
ಹೋಗ ನಿಂದು ಬರೇ ಇದೇ ಆತು. ಏನೋ ಪಾಪ ಅಂತಾ ಹೇಳಿದ್ರೆ…ಈಗಿನ ಕಾಲದ ಹುಡುಗಿಯರ ಬಗ್ಗೆ ನಿಂಗೆ ಗೊತ್ತಿಲ್ಲೆ. ಸೆಂಟು, ಬಟ್ಟೆ, ಬೈಕಿಗೆ ಮರುಳಾಗದು ಜಾಸ್ತಿ ಗೋತಾತ.ಹೋಗಿ, ಹೋಗಿ ಇದ್ನೆಲ್ಲ ನಾನು ನಿನ್ನ ಹತ್ರಾ ಹೇಳ್ತ್ನಲ, ನನ್ನ ಕರ್ಮ…
ಹಲೋ ಎಕ್ಸ್ಕ್ಯೂಸ್ಮಿ, ಸ್ವಲ್ಪ ಆ ಕಡೆ ಸರಿತೀರಾ?
ಏನೋ ಆಲೋಚನೆಯಲ್ಲಿದ್ದೆ. ಇವಳ್ಯಾವಳೋ ಬಂದಳು… ಓ ನಾನು ಕುಳಿತಿರುವುದು ರೈಲಿನಲ್ಲಿ, ನನ್ನ ಸ್ವಂತ ಕಾರಿನಲ್ಲಲ್ಲ ಎಂಬುದು ಸಟಕ್ಕನೆ ನೆನಪಾಯಿತು. ಅವಳ ಕಡೆ ತಿರುಗದೇ ಸುಮ್ಮನೆ ಸರಿದೆ. ಎದುರುಗಡೆ ಕುಳಿತ್ತಿದ್ದ ಮೂರು ಹುಡುಗರು ಅವಳನ್ನು ಕದ್ದು ಕದ್ದು ನೋಡುತ್ತಿದ್ದರಿಂದ , ಪಕ್ಕದಲ್ಲಿ ಕುಳಿತ ಹುಡುಗಿ ಚೆಂದವಾಗಿದ್ದಾಳೆ ಎಂಬುದು ಖಾತ್ರಿಯಾಯಿತು.
ಮೊದಲ ಸಲ ರೈಲನ್ನು ನೋಡಿದ್ದು ಬೀರೂರಿನಲ್ಲಿ. ರೈಲು ಶ್ರೀಮಂತರ ವಾಹನ ಎಂಬ ಭಾವನೆಯಿತ್ತು. ದುಡಿಮೆಗೋಸ್ಕರ ಬೆಂಗಳೂರಿಗೆ ಬಂದ ಮೇಲೆ ಗೊತ್ತಾಯಿತು ರೈಲೆಂಬುದು ಬಡವರ ವಾಹನ ಅಂತಾ!
ಸ್ವಾಮಿ ದೇವನೆ ಲೋಕ ಪಾಲನೆ….
ಹಾಡು ತೀರಾ ಕಕರ್ಶವಾಗಿತ್ತು. ರೈಲು ಗಾಡಿಯಲ್ಲಿ ಅದೆಲ್ಲ ಮಾಮೂಲು. ನಾನಂದುಕೊಂಡಂತೆ ಅವ ಕುರುಡ.
ಛೇ, ನಾನು ನನ್ನದೇ ಕಷ್ಟ ಅಂದುಕೊಳ್ಳುತ್ತೇನೆ. ನನಗಿಂತ ಕಷ್ಟದಲ್ಲಿ ಇರುವವರು ಅದೆಷ್ಟು ಮಂದಿ ಇಲ್ಲಿ ಇದ್ದಾರೆ ಅಲ್ವಾ? ನನ್ನ ಕಷ್ಟಕ್ಕೆ ನಾನು ಹೇಳಿಕೊಳ್ಳುವ ಸಮಾಧಾನವಿದು. ಅವಳನ್ನು ಸಮಾಧಾನ ಮಾಡಲು ಬಳಸುವ ಅಸ್ತ್ರ ಕೂಡ ಇದೆ!
ಕಣ್ಣಲ್ಲಿ ನೀರು ಜಿನುಗಿದಂತಾಯಿತು. ಎಷ್ಟು ಜನರಿಗೆಂದು ಕಣ್ಣೀರು ಇಡುವುದು? ಬೆಂಗಳೂರಿನ ಬೀದಿ, ಬೀದಿಗಳಲ್ಲಿ ಇಂಥ ಮಂದಿ ಸಿಗುತ್ತಾರೆ. ಕೈಯಲ್ಲಿರುವ ಎರಡು ಕಾಸು ಅವರ ಡಬ್ಬಿಗೆ ಹಾಕಿ ಸಮಾಧಾನಪಟ್ಟುಕೊಳ್ಳುವುದನ್ನು ಬಿಟ್ಟರೆ, ಮತ್ತ್ಯಾವುದೇ ಪರಿಹಾರವಿಲ್ಲ ದೇಶದ ಈ ಸಮಸ್ಯೆಗೆ. ಹೋಟೆಲ್ನಲ್ಲಿ ತಿಂಡಿ ತಿನ್ನುತ್ತಿರುವಾಗ ಬಂದು ಕೈಯೊಡ್ಡುತ್ತಾರೆ ಕೆಲವರು. ಕರುಳು ಕರಗಿದಂತಾಗುತ್ತದೆ.
ನಾವು ಕೆಲವೊಮ್ಮೆ, ಕೆಲವುದಕ್ಕೋಸ್ಕರ, ಕೆಲವರೆದುರು ಕೈಯೊಡ್ಡಿ ನಿಲ್ಲುತ್ತೇವೆ…ಪ್ರಕೃತಿಯ ನಿಯಮವೇ ಹಾಗಿರಬೇಕು ಅಲ್ವಾ?
***
ಊಹುಂ, ನಿದ್ದೆ ಬರುತ್ತಿಲ್ಲ…ಅವಳು, ಅವಳ ಬದುಕನ್ನು ಕಟ್ಟಿಕೊಳ್ಳಲಿಕ್ಕೋಸ್ಕರ ಕೈಗೆಟುಕದಷ್ಟು ದೂರದ ಜಾಗಕ್ಕೆ ಹಾರಿ ಹೋಗಿದ್ದಾಳೆ.
ನನಗೆ ಬೇಜಾರಾದಾಗ ಕಾಟ ಕೊಡಲು ಯಾರೂ ಇಲ್ಲ. ಅವಳೇ ಹೇಳಿದಂತೆ ಬೇರೆ ಯಾರಾದರೂ ಸಿಗಬಹುದು. ಆದರೆ ಪ್ರಯತ್ನ ಮಾಡಲು ಮನಸ್ಸಾಗುತ್ತಿಲ್ಲ. ಎಷ್ಟು ದಿನ ಅಂತಾ ಅವಳ ಮೇಲೆ ಅವಲಂಬಿತವಾಗುವುದು. ಒಂದಲ್ಲ ಒಂದು ದಿನ ಅವಳು ಗಂಡನ ಮನೆ ಸೇರುತ್ತಾಳೆ. ಎಷ್ಟಂದರೂ, ಅತಿಯಾದ ನಿರೀಕ್ಷೆ ಅಪಾಯ ಎಂಬ ತತ್ವದಲ್ಲಿ ನಂಬಿಕೆ ಇಟ್ಟವ ನಾನು!
ಚೆಂದದ ಗಾಳಿ ಬೀಸುತ್ತಿದೆ. ಮಳೆ ಬರುವ ಎಲ್ಲ ನಿರೀಕ್ಷೆಯೂ ಆಗಸದಲ್ಲಿ ಗೋಚರವಾಗುತ್ತಿದೆ. ಅಂಥದ್ದೊಂದು ವಾತಾವರಣವನ್ನು ಆಸ್ವಾದಿಸಲು ಫುಟ್ ಬೋರ್ಡ್ ಮೇಲೆ ಹೋಗಿ ಕೂರಬೇಕು ಎಂಬುದು ತಟ್ಟನೆ ಮನಸ್ಸಿಗೆ ಹೊಳೆಯಿತು.
ರೈಲು ಚಾಮರಾಜನಗರ ದಾಟಿದೆ. ತಂಪು ವಾತಾವರಣ, ಹಚ್ಚ ಹಸುರಿನ ಗದ್ದೆ, ಅಲ್ಲಲ್ಲಿ ಸಕ್ಕರೆ ಕಬ್ಬಿನ ಬಿಳಿ ಬಿಳಿಯಾದ ಹೂವುಗಳು…ಮನೆ, ಮಲೆನಾಡು, ಬಾಲ್ಯ…ಎಲ್ಲವೂ ಒಟ್ಟೊಟ್ಟಿಗೆ ನೆನಪಾಯಿತು.
ಮೊಬೈಲ್ನಲ್ಲಿ ಮೆಸೇಜ್. ರಾಘುವಿನದ್ದು. ‘ಅಣ್ಣಾ ದೊರೆ ಎಲ್ಲಿದ್ದೆ? ಮೈಸೂರು ರೈಲನ್ನೇ ಹತ್ತಿದ್ದೆ ತಾನೇ?’
ಹಿಂದೊಮ್ಮೆ ಮೈಸೂರು ಬದಲು ಕೋಲಾರದ ರೈಲುಗಾಡಿ ಹತ್ತಿ ಹೋಗಿದ್ದೆ. ಹಾಗಾಗಿ ನನ್ನ ಕುರಿತು ಇನ್ನೂ ಅನುಮಾನ ಅವನಿಗೆ! ಬದುಕಿನಲ್ಲಿ ಎಷ್ಟೋ ಸಲ ರೈಲಲ್ಲ , ಹಳಿಯೇ ತಪ್ಪಿಹೋಗಿದೆ…
ವಿಮಾನವೊಂದು ಆಗಸದಲ್ಲಿ ಬುರ್ ಎನ್ನುತ್ತಿತ್ತು. ರೈಲಿಗೆ ಪ್ರತಿರ್ಸ್ಪಯಾಗಿ ಹಾರಿ ಬರುತ್ತಿದ್ದಂತಿತ್ತು. ನೋಡು-ನೋಡುತ್ತಿದ್ದಂತೆಯೇ ವಿಮಾನ ಮುಂದಕ್ಕೆ, ರೈಲು ಹಿಂದಕ್ಕೆ. ಕಣದಲ್ಲಿ ಉಳಿದುಕೊಳ್ಳಲಾಗದಷ್ಟು ಹಿಂದಕ್ಕೆ. ಎಷ್ಟಂದರೂ ರೈಲು ಬಡವರ ಪಾಲಿನ ವಾಹನ. ಹಾಗಾಗಿ ಹಾಸಿಗೆ ಇದ್ದಷ್ಟಕ್ಕೆ ಕಾಲು ಚಾಚಿದೆ. ಅದ್ಯಾಕೋ ಬದುಕಿನ ಅನಿವಾರ್ಯತೆ, ಅಸಹಾಯಕತೆ…ಎಲ್ಲವೂ ನೆನಪಾಯಿತು.
ಸಟಕ್ಕನೆ ರೈಲಿಗೊಂದು ಬ್ರೇಕ್ ಬಿದ್ದಿದೆ. ಕ್ರಾಸಿಂಗ್ ಅಂತೆ. ಅಲ್ಲ , ಆ ಕಡೆಯಿಂದ ಬರುವ ಆ ರೈಲಿಗೆ ಜಾಗಕೊಡಲು ಇದು ನಿಂತಿದ್ದು ಯಾಕೆ? ಬೇಕಾದರೆ ಅದೇ ಜಾಗ ಕೊಡುತ್ತಿತ್ತು…
ಆ ಕಡೆಯಿಂದ ಬರುವ ರೈಲು ಕೂಡ ಹೀಗೇ ಆಲೋಚಿಸಿ ಹೊರಟುಬಿಟ್ಟರೆ?!
ಅಪಘಾತ, ಸಾವಿರಾರು ಜನರ ಸಾವು…
ಬದುಕಿನಲ್ಲೂ ಎಷ್ಟೋ ಸಲ ಹೀಗೆ ಆಗತ್ತೆ ಅಲ್ವಾ? ಅವ ದಾರಿ ಕೊಡಲಿ ಎಂದು ನಾನು, ನಾನು ದಾರಿ ಬಿಡಲಿ ಎಂದು ಅವ…ಪ್ರತಿಷ್ಠೆ…
ಆದ್ರೂ ಇದು ‘ಟಿಪ್ಪು ಫಾಸ್ಟ್ ಎಕ್ಸ್ಪ್ರೆಸ್’. ಉಳಿದವುಗಳಿಗಿಂತ ೧೦ ರೂಪಾಯಿ ಹೆಚ್ಚು ಎಂಬ ಯಜಮಾನರ ಅಳಲು!
ಹತ್ತಿರವಿದ್ದು ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ
ಕವಿ ಬರೆದ ಸಾಲು ನೆನಪಿಗೆ ಬಂತು. ಬಹುಶಃ, ಕವಿ ತನ್ನ ಸ್ವಂತ ಅನುಭವದಿಂದ ಈ ಸಾಲುಗಳನ್ನು ಬರೆದಿರಬೇಕು!
***
ಮದ್ದೂರ್ ವಡೆ, ಮದ್ದೂರೊಡೆ
ಮಳೆ ಬಂದು ನಿಂತಿದೆ. ಮಣ್ಣು ‘ಘಮ್’ ಎನ್ನುತ್ತಿದೆ. ರೈಲಿನಿಂದ ಜಿಗಿದು ಗದ್ದೆಯಲ್ಲಿ ಕುಣಿದು-ಕುಪ್ಪಳಿಸಬೇಕು ಅನ್ನಿಸುತ್ತಿದೆ. ಹಾಗೊಮ್ಮೆ ಜಿಗಿದುಬಿಟ್ಟರೆ ರೈಲು ನನಗೋಸ್ಕರ ಕಾಯುವುದಿಲ್ಲ. ನೋಡುವ ಜನ ಕೂಡ ಇವನ್ಯಾರೋ ಹುಚ್ಚ ಅಂದುಕೊಳ್ಳುತ್ತಾರೆ. ಎಷ್ಟಂದರೂ ಬಾಲ್ಯದ ಆ ಮಜವೇ ಬೇರೆ ಬಿಡಿ.
ಚುಕು ಬುಕು, ಚುಕು ಬುಕು…ರೈಲು ಮದ್ದೂರು ನಿಲ್ದಾಣದಿಂದ ಜಾಗ ಖಾಲಿ ಮಾಡಲು ಸಜ್ಜಾಗಿತ್ತು. ಸಮಯ ಬಂದಾಗ ಒಂದು ನಿಲ್ದಾಣದಿಂದ ಜಾಗ ಖಾಲಿ ಮಾಡಲೇ ಬೇಕು. ಇನ್ನೊಂದು ನಿಲ್ದಾಣದತ್ತ ಹೆಜ್ಜೆ ಹಾಕಲೇ ಬೇಕು.
ತೊಡಲು ಬಟ್ಟೆ , ನೆಮ್ಮದಿಯಾಗಿ ಮೂರು ಹೊತ್ತು ಊಟ ಸಿಕ್ಕರೆ ಸಾಕು, ೧೦೦ರೂಪಾಯಿ ಲೆಕ್ಕಾಚಾರ, ಕನಸುಗಳು…ಎಲ್ಲವೂ ವಿಸ್ತಾರವಾಗುತ್ತಾ ಹೋಗುತ್ತಿದೆ. ರೈಲಿಗೊಂದು ಗುರಿಯಿದೆ. ನನಗೊಂದು ಗುರಿಯಿಲ್ಲ. ಹಾಕಿಕೊಂಡ ಗುರಿಯನ್ನು ತಲುಪುತ್ತಾ ಹೋದಂತೆ, ಗುರಿಯ ವಿಸ್ತೀರ್ಣವೂ ಹೆಚ್ಚಾಗುತ್ತಾ ಹೋಗುತ್ತದೆ. ಅದು ರೈಲು. ನಾನಿಲ್ಲಿ “ನಾನು”!
ನಿಜ, ನಂದೂ ಫಾಸ್ಟ್ ಎಕ್ಸ್ಪ್ರೆಸ್. ಕೆಲವರದ್ದು ಪ್ಯಾಸೆಂಜರ್, ಇನ್ನು ಕೆಲವರದ್ದು ಸೂಪರ್ ಫಾಸ್ಟ್. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ವೇಗ ಹೆಚ್ಚಾಗುತ್ತದೆ. ‘ಅತಿಯಾದ ವೇಗ ಅಪಘಾತಕ್ಕೆ ಕಾರಣ’ ಆ ಸಂಚಾರಿ ನಿಯಮ ನಮ್ಮ ಬದುಕಿಗೂ ಅನ್ವಯವಾಗುತ್ತದೆ. ಹಲವು ಸಲ ಲೆಕ್ಕಾಚಾರ ತಪ್ಪಿ ಎಡವಿಬೀಳುತ್ತೇವೆ. ಕೆಲವೊಮ್ಮೆ ಏನೂ ಲೆಕ್ಕಾಚಾರವೇ ಇಲ್ಲದೇ ಗೆದ್ದು ಬಿಡುತ್ತೇವೆ!
ಫುಟ್ಬೋರ್ಡ್ ಬೋರು ಬಂದಿತ್ತು. ಬ್ಯಾಗ್ ಇಟ್ಟಿದ್ದ ಸೀಟಿನೆಡೆಗೆ ಹೋಗಿ ಕುಳಿತುಕೊಳ್ಳುವ ಮನಸ್ಸಾಯಿತು.
ಕಾಫಿ, ಕಾಫಿ….ದೋಸೆ, ದೋಸೆ…
ಅಬ್ಬ ಅದೆಷ್ಟು ಹುಡುಗರು…ಇನ್ನೊಬ್ಬರ ಹೊಟ್ಟೆ ತುಂಬಿಸುವ ಮೂಲಕ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವವರು. ಅವರು ಜೀವನವನ್ನೆಲ್ಲ ರೈಲು ಗಾಡಿಯಲ್ಲೇ ಕಳೆದುಬಿಡುತ್ತಾರೆ. ಅಲ್ಲಿ ಸಿಗುವ ಮೂರು ಕಾಸನ್ನೇ ಆಶ್ರಯಿಸಿಕೊಂಡು ಬದುಕುತ್ತಾರೆ. ಅವರಿಗೆ ಯಾವುದೇ ಕನಸುಗಳೇ ಇಲ್ಲವಿರಬೇಕು. ಅಥವಾ ಇರುವಷ್ಟಕ್ಕೆ ತೃಪ್ತಿಪಟ್ಟುಕೊಂಡು ಬದುಕುವ ಮನೋಭಾವದವರು ಅವರಾಗಿರಬೇಕು!
ಮತ್ತೆ ಗಕ್ಕನೆ ಬ್ರೇಕ್ ಬಿದ್ದಿದೆ. ಕ್ರಾಸಿಂಗ್ ಅಂತಾ ಅಕ್ಕಪಕ್ಕದವರು ಮಾತಾಡುತ್ತಿದ್ದಾರೆ. ಈ ರೈಲಿಗೆ ‘ಸ್ವಾಭಿಮಾನ’ ಎಂಬುದೇ ಇಲ್ಲ. ಸೂಪರ್ ಫಾಸ್ಟ್ ಎಕ್ಸ್ಪ್ರೆಸ್, ಅದು ಕೂಡ ಟಿಪ್ಪು ಎಕ್ಸ್ಪ್ರೆಸ್! ಟಿಪ್ಪುವಿಗೆ ಅವಮಾನ ಮಾಡಲಿಕ್ಕೋಸ್ಕರವೇ ಸೃಷ್ಟಿಯಾಗಿರುವ ರೈಲು ಗಾಡಿಯಿದು. ಆ ಸಲವೂ ಕ್ರಾಸಿಂಗ್ ಅಂತಾ ಮತ್ತೊಂದು ರೈಲಿಗೆ ದಾರಿ ಬಿಟ್ಟು ಕೊಟ್ಟಿತ್ತು. ಈ ಸಲವೂ…
ಸ್ವಾಭಿಮಾನವಿಲ್ಲದ ಗಾಡಿ ಎಂದು ಬೈದುಕೊಳ್ಳುತ್ತ ಕೆಳಗಿಳಿದರೆ ನಾಗನಹಳ್ಳಿ ಅಂತಾ ಬೋರ್ಡ್ ಕಾಣುತಿತ್ತು. ನದಿಯೊಂದು ಹರಿಯುತ್ತಿದೆ. ತುಂಬಾ ಖುಷಿಯಾಯಿತು. ನದಿ ದಡದ ಮೇಲೆ ಹೋಗಿ ಸ್ವಲ್ಪ ಹೊತ್ತು ಕುಳಿತೆ.
ನದಿ, ಬೆಟ್ಟ , ಗುಡ್ಡ….ಮಲೆನಾಡಿನಲ್ಲಿ ಬದುಕಿದವರಿಗೆಲ್ಲ ಇದರ ಸೊಬಗು ಗೊತ್ತಾಗುತ್ತದೆ. ಬೆಂಗಳೂರಿನ ಕೆಲ ಮಂದಿಗೆ ಬದುಕಿನ ಬೇಸರ ಕಳೆಯಲು ಪಬ್, ಬಾರ್, ವೇಶ್ಯಾವಾಟಿಕೆ ಗೃಹಗಳಿರುವಂತೆ ಮಲೆನಾಡಿನಲ್ಲಿ ಪ್ರಕೃತಿ ಮಾತೆಯ ಸೊಬಗಿದೆ.
ನಾನೂರಕ್ಕೆ ವ್ಯಾಪಾರ ಕುದುರಿಸಿಕೊಂಡ ಹೋದ ಆಕೆ ನೆನಪಾದಳು. ಅಬ್ಬ ಎಂಥಾ ದುಸ್ತರವಾದ ಬದುಕದು. ನಿತ್ಯವೂ ದುಡ್ಡು ಕೊಡುವ ಯಾರ ಜತೆಗೋ…
ನನಗೆ ದುಸ್ತರ ಅನ್ನಿಸುವುದು ಅವಳಿಗೆ ಮಾಮೂಲು. ನನ್ನದು ಅವಳಿಗೆ ದುಸ್ತರ ಅನ್ನಿಸಬಹುದು…
ಚುಕು ಬುಕು…ತಿರುಪತಿ ಎಕ್ಸ್ಪ್ರೆಸ್…
ಟಿಪ್ಪು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಎದುರು ದರ್ಪದಿಂದ ಹೋಗುತ್ತಿದ್ದಾಗ, ‘ಕ್ರಾಸಿಂಗ್’ ಎಂಬ ನೆಪದಲ್ಲಿ ಆ ರೈಲು ಗಾಡಿಯನ್ನು ಮೆರೆದಾಡಲು ಬಿಟ್ಟ ಟಿಪ್ಪುವಿನ ಮೇಲೆ ಕೋಪ ಬರುತ್ತಿತ್ತು.
ಚುಕು ಬುಕು…
ನನ್ನ ಈ ಆಲೋಚನೆಗಳ ಯಾವ ಪರಿವೂ ಇಲ್ಲದಂತೆ ‘ಟಿಪ್ಪು ಎಕ್ಸ್ಪ್ರೆಸ್’ ಎಂಬ ರೈಲು ಗಾಡಿ ತನ್ನ ಪ್ರಯಾಣ ಮುಂದುವರಿಸಿತ್ತು. ಕಣ್ಣು ಮುಚ್ಚಿ ಬಿಡುವುದರೊಳಗೆ ಮೈಸೂರು ರೈಲ್ವೇ ನಿಲ್ದಾಣ ಬಂದುಬಿಟ್ಟಿದೆ.
ಅಂದಹಾಗೆ ಅವಳು?!
ಬದುಕಿನ ಪ್ರಯಾಣದಲ್ಲಿದ್ದಾಳೆ. ಫೋನ್, ಇ-ಮೇಲ್ ಸಂದೇಶವಿಲ್ಲದೇ ೨-೩ವಾರವೇ ಕಳೆದಿದೆ. ಅವಳ ಪ್ರಯಾಣಕ್ಕೆ ನಾನೇ ದಾರಿ ಬಿಟ್ಟಿದ್ದೇನೆ. ಯಾಕೆಂದರೆ ಅವಳನ್ನು ಅಡ್ಡಗಟ್ಟುವ ಯಾವ ಹಕ್ಕು ನನಗಿಲ್ಲ. ಒಮ್ಮೆ ಹಠ ಹಿಡಿದು ಅಡ್ಡಗಟ್ಟಿದರೆ?
ಅಪಘಾತ, ಸಾವು, ನೋವು…
ಮೌನವಾಗಿ ದಾರಿ ಬಿಟ್ಟುಕೊಟ್ಟ ಟಿಪ್ಪುವಿಗಿಂತ ಭಿನ್ನವಾಗೇನಿಲ್ಲ ನನ್ನ ಕಥೆ ಕೂಡ!
(ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟಗೊಂಡ ಕಥೆ)
ಚೆನ್ನಾಗಿದೆ, ಓದಿಸಿಕೊಳ್ಳುತ್ತಾ ಯೋಚನೆಗೆ ಹಚ್ಚುತ್ತೆ.
-ಶೆಟ್ಟರು
ಸರ್,
ಬರಹ ತುಂಬಾ ಚೆನ್ನಾಗಿದೆ. ರೈಲಿನ ಕತೆಯೆಂದರೆ ನನಗೆ ತುಂಬಾ ಇಷ್ಟ. ಇಷ್ಟಪಟ್ಟು ನೋಡುತ್ತೇನೆ. ಪ್ರಯಾಣಿಸುತ್ತೇನೆ. ಬರೆಯುತ್ತೇನೆ. ಫೋಟೊ ತೆಗೆಯುತ್ತೇನೆ. ಪ್ರತಿದಿನ ಸಂಜೆ ನಮ್ಮ ಮನೆಯ ರೈಲ್ವೇ ಪ್ಲಾಟ್ ಫಾರಂನಲ್ಲಿ ನನ್ನಾಕೆಯ ಜೊತೆ ವಾಕ್ ಮಾಡುತ್ತೇನೆ…
ಒಟ್ಟಾರೆ ರೈಲೆಂದರೆ ಇಷ್ಟ.
ಬರಹ ಇಷ್ಟವಾಯಿತು…ಧನ್ಯವಾದಗಳು.
good one. kathe eshtu simple anisutto ashte maarmikavaagiyU kooda ide. modalanE bhagada kone kone vaakyagaLu bahaLa ishta aadavu. nija adu.
thank you..
ಈ ಕಥೆ ಸ್ವಲ್ಪ ದಿನಗಳ ಹಿಂದೆ ವಿ.ಕದಲ್ಲಿ ಓದಿದ್ದೆ. ತುಂಬಾ ಇಷ್ಟವಾಯ್ತು.
ನೀವು ಬರದಿರೋದು ನೂರಕ್ಕೆ ನೂರ ಸತ್ಯ. ಆಕ್ಸಿಡೆಂಟ್ ಗಳನ್ನ ಅವೈಯಡ್ ಮಾಡೋದೇ ವಾಸಿ.
ರೈಲೇನು, ಜೀವ್ನೇನು ಎರಡು ಪ್ರಯಾಣನೆ ಆಲ್ವಾ?
ಕಥೆ ಆಲೋಚನೆಗೆ ಎಳೆಯುವಂತಿದೆ. ಬದುಕಿನ ಪಯಣದಲ್ಲಿ ಇದೇ ರೀತಿ(ಟಿಪ್ಪು ರೈಲಿನಂತೆ) ಅಹಂ ಬಿಟ್ಟು ತುಸು ತಾಳ್ಮೆವಹಿಸಿದರೆ, ಆಕ್ಸಿಡೆಂಟ್ಗಳನ್ನು ತಡೆಯಬಹುದು. ಅಹಂ ಗೂ ಸ್ವಾಭಿಮಾನಕ್ಕೂ ಇರುವ ಕೂದಲೆಳೆಯ ಅಂತರ ಅರಿತರೆ ಎಷ್ಟೋ ಸಾವು ನೋವುಗಳನ್ನೂ ತಡೆಯಬಲ್ಲದು.
ಸುಂದರ ಕಥೆ. ಅಭಿನಂದನೆಗಳು.
nice yaar,nanu ninu kengeri inda sagar ge hogiddu nenapaytu
nice:)
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು…ಜತೆಗೆ ಕಥೆ ಪ್ರಕಟವಾದ ದಿನ ಫೋನ್ ಮಾಡಿ, ಎಸ್ಎಂಎಸ್ ಮಾಡಿ ಪ್ರೋತ್ಸಾಹಿಸಿದ ಗೆಳಯರಿಗೆ ಕೂಡ ಥ್ಯಾಂಕ್ಸ್…
ಕೋಡ್ಸರ
ಹೀಗೆ ಅಲೆದಾಡುತ್ತ, ನಿಮ್ಮ ಬ್ಲಾಗಿಗೆ ಬಂದೆ – ಇದು ಮೊದಲ ಸಲ. ನಿಮ್ಮ ಬರವಣಿಗೆ ಶೈಲಿ ಇಷ್ಟವಾಯಿತು.. ಕಥೆಯೂ ತುಂಬಾ ಮನ ತಟ್ಟಿತು! ಹೀಗೆಯೇ ಬರೆಯುತ್ತಿರಿ
Nice… ishta aatu… 🙂