‘ಸಿನಿಮಾ ಉದ್ಯಮ ಬದುಕಿಗೆ ಕಲಿಸಿದ ಪಾಠ ಅಪಾರ. ಇಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ. ಉಡಾಫೆತನ ಮಾಡಿಕೊಂಡು ಒದೆ ತಿಂದಿರುವೆ. ತುಂಬಾ ಬೇಸರವಾಗಿ ಎರಡು ಸಲ ಉದ್ಯಮವನ್ನು ಬಿಟ್ಟು ಕಾರ್ಪೊರೇಟ್ ಜಗತ್ತಿನೆಡೆ ಹೆಜ್ಜೆ ಹಾಕಿದ್ದೆ. ಶ್ರಮಕ್ಕೆ ತಕ್ಕ ಗೆಲುವು ಸಂಪಾದಿಸಲು ಬಹಳ ಕಾಲ ಕಾಯಬೇಕಾಯಿತು…’ ಎಂದು ಮಾತು ಆರಂಭಿಸಿದವರು ಮುಂಗಾರು ಮಳೆ ಖ್ಯಾತಿಯ ಯೋಗರಾಜ್ ಭಟ್.
ಚಿತ್ರೀಕರಣವಿದ್ದರೆ, ಸಿನಿಮಾ ಪ್ರಂಪಚವೇ ಅವರಿಗೆ ಸರ್ವಸ್ವ. ಅದಿಲ್ಲವಾದರೆ, ೭ರಿಂದ ೯ ಗಂಟೆಯೊಳಗೆ ಏಳುತ್ತಾರೆ. ನಿತ್ಯದ ಕಾರ್ಯಗಳು ಮುಗಿದ ನಂತರ ಸಿನಿಮಾ ಗೀತೆ ರಚನೆಯಲ್ಲಿ ಮಗ್ನ. ಕೆಲವೊಮ್ಮೆ ಓದಿನೊಂದಿಗೆ ಬಿಜಿ. ಇವುಗಳ ನಡುವೆ ತಮ್ಮ ಪುಟಾಣಿ ಮಗು ಪುನರ್ವಸು ಜತೆಗೆ ಆಟ. ಮಧ್ಯಾಹ್ನ ಊಟದ ನಂತರ ಸಿನಿಮಾ ಚರ್ಚೆ.
೧೯೯೪ರಲ್ಲಿ ಬೆಳದಿಂಗಳ ಬಾಲೆ ಚಿತ್ರದ ಮೂಲಕ ಸಿನಿಮಾಕ್ಕೆ ಕಾಲಿಟ್ಟ ಭಟ್ಟರು, ಒಂದೂವರೆಯಿಂದ ಎರಡು ವರ್ಷಕ್ಕೊಂದು ಚಿತ್ರ ಮಾಡುತ್ತಾರೆ. ಹಾನಗಲ್ ತಾಲೂಕಿನ ತಿಳುವಳ್ಳಿ ಇವರ ಹುಟ್ಟೂರು. ೨ ತಿಂಗಳಿಗೊಮ್ಮೆ ಊರಿಗೆ ಹೋಗಿ ಬರುವುದು ರೂಢಿ. ಅಣ್ಣ, ಅತ್ತಿಗೆಯ ಸಂಸಾರ ಜತೆಗಿದೆ. ಅತ್ತೆ, ಮಾವ ಕೂಡ ಮಗಳು-ಅಳಿಯನ ಮನೆಯಲ್ಲಿದ್ದಾರೆ. ಹೀಗಾಗಿ ಮಹಾನಗರಿಯಲ್ಲೂ ಇವರದ್ದು ಅವಿಭಕ್ತ ಕುಟುಂಬ.
‘ನಾನು ಓದಿದ್ದು ಬಿ.ಎ., ಎಂ.ಎ ಮತ್ತು ಎಲ್ಎಲ್ಬಿಗಳಿಗೆ ಒಂದೊಂದು ವರ್ಷ ಪ್ರಯತ್ನ ಮಾಡಿದೆ. ಯಾವುದೂ ಪೂರ್ಣವಾಗಲಿಲ್ಲ. ಸಿನಿಮಾ ಪ್ರಪಂಚ ಪ್ರವೇಶಿಸಿದೆ. ಒಂದು ಹಂತದವರೆಗೂ ನನಗೆ ಕನ್ನಡ ಚಿತ್ರೋದ್ಯಮದ ಪರಿಚಯವಿರಲಿಲ್ಲ. ಪರಿಣಾಮವಾಗಿ ಸಾಕಷ್ಟು ಸಲ ಅವಮಾನ ಅನುಭವಿಸಿದೆ. ಈಗ ಕಥೆ ಬಗೆಗಿನ ಚರ್ಚೆಯಲ್ಲೇ ಆರು ತಿಂಗಳ ಬದುಕು ಕಳೆದು ಹೋಗುತ್ತದೆ. ಸಿನಿಮಾ ಗೀತೆ ಜತೆಗೆ ಕವನವನ್ನೂ ಬರೆಯುತ್ತೇನೆ’ ಎಂದು ಭಟ್ಟರು ನಗುತ್ತಾರೆ.
ಹಿಂದಿ ಘಜಲ್ಗಳೆಂದರೆ ಅವರಿಗೆ ತುಂಬಾ ಇಷ್ಟ. ಮನಸು ಬಂದ್ರೆ ಹಾಡುವುದಂಟು. ಕೀ ಬೋರ್ಡ್ ಜತೆಗೆ ನಿಕಟ ನಂಟು. ದೇವರಿಗೂ ಈ ಯೋಗಿಗೂ ಯಾವುದೇ ಸಂಬಂಧವಿಲ್ಲವಂತೆ. ಟಿವಿ, ರೆಡಿಯೋ, ಗಡಿಯಾರ ಮೊದಲಾದ ಉಪಕರಣಗಳನ್ನು ಬಿಚ್ಚುವುದರಲ್ಲಿ ಇವರು ನಿಸ್ಸಿಮರು. ಲೀಗ್ ಮಟ್ಟದಲ್ಲಿ ವಾಲಿಬಾಲ್ ಆಡಿದ ಅನುಭವವಿದೆ. ಕುಟುಂಬದೊಂದಿಗೆ ಪ್ರವಾಸ ಹೋಗೋದು, ಚಿತ್ರೀಕರಣ ಸ್ಥಳ ಹುಡುಕಾಟ ಮಾಮೂಲು. ರಾತ್ರಿ ೧೦.೩೦-೨ಗಂಟೆಯೊಳಗೆ ನಿದ್ದೆಗೆ ಜಾರುತ್ತಾರೆ.
‘ಬಹಳ ಹಿಂದೆ ವಿಭಿನ್ನ ರೀತಿಯಲ್ಲಿ ವಿದ್ಯುತ್ ಉತ್ಪಾದನೆಯ ಕುರಿತು ಊರ ಹುಡುಗರ ಜತೆ ಕೆಲಸ ಮಾಡಿದ್ದೆ. ಈ ದೃಶ್ಯ ಮನಸಾರೆ ಚಿತ್ರದಲ್ಲಿ ಬರುತ್ತೆ. ಜಪಾನಿ ಭಾಷೆಯ ಅಕಿರೊ ಕುರುಸೋವಾ. ಹಿಂದಿಯ ಹೃಷಿಕೇಷ್ ಮುಖರ್ಜಿ ನನ್ನಿಷ್ಟದ ನಿರ್ದೇಶಕರು. ಸದ್ಯದಲ್ಲೇ ನಿರ್ಮಾಪಕನಾಗುವ ಇರಾದೆಯಿದೆ. ಸ್ವಂತ ಬ್ಯಾನರ್ನಡಿ ಇನ್ನಷ್ಟು ಚಿತ್ರಗಳು ಬರಲಿವೆ’ ಎಂದು ಮಾತು ಮುಗಿಸಿದರು ಭಟ್ಟರು.
ವಿನಾಯಕ ಸಾರು, ಚೆನ್ನಾಗಿದೆ ನಿಮ್ ಖಾಸ್ ಬಾತು 🙂
ಸುಮ್ನೆ ಆ ಹುಡುಗಿ ಹೆಸ್ರೆಲ್ಲ ಹಾಕಿ ಆ ಹುಡುಗಿಗೆ ತೊಂದ್ರೆ ಕೊಡಬೇಡಿ 🙂