ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೇ ದೊರೆಯೇ?
ನವಿಲೂರು ಮನೆಯಿಂದ ನುಡಿಯೊಂದು ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ…
ಹಣ್ಣು-ಹಣ್ಣು ಗಡ್ಡದ, ಬಿಳಿ ತಲೆಕೂದಲಿನ, ಬಗಲಿನಲ್ಲೊಂದು ಬಳೆಯ ಗಂಟು ಹೊತ್ತಿರುವ ೯೫ರ ಪ್ರಾಯದ ಮುದುಕ ರಂಗ ಪ್ರವೇಶಿಸಿದ್ದಾನೆ.
‘ಯಾಕೆ ಹಂಗ್ ನೋಡೀರಿ? ಗುರ್ತು ಸಿಕ್ಕಲಿಲ್ಲವ್ರಾ-ಅದು ನಿಮ್ಮ ತೆಪ್ಪಲ್ಲ ಬುಡಿ…ಈ ಸಿನಿಮಾ ಟಿವಿಯವರು ನಂಗೆ ಫ್ಯಾನ್ಸಿ ಡ್ರೆಸ್ ತೊಡಿಸಿ ಯಕ್ಷಗಾನದ ಕೋಡಂಗಿ ಹಂಗ್ ಮಾಡಿಬುಟ್ಟವ್ರೆ ಅಂತೀನಿ..ಬಡವ…ಊಂ ಈ ಬಡ ಬಳೆಗಾರ ಚೆನ್ನಯ್ಯ ಇದ್ದದ್ದೇ ಹಿಂಗೆ ಸಾಮಿ…ಇಂಗ್ಲೆಂಡೂ, ಅಮೆರಿಕ, ದುಬಯ್ಯಿ…ಕನ್ನಡದ ಮಂದಿ ಇರೋ ಕಡೆಯಲ್ಲ ನಮ್ಮ ಊರು ಶಾನೇ ಫೆಮಸ್ಸು…
ಕವಿ ಕೆ.ಎಸ್ ನರಸಿಂಹ ಸ್ವಾಮಿಗಳ ಕಲ್ಪನೆಯ ಕೂಸಾದ ‘ಬಳೆಗಾರ ಚೆನ್ನಯ್ಯ’ ಪಟ ಪಟ ಮಾತನಾಡುತ್ತಿದ್ದರೆ, ಇಡೀ ರಂಗಭೂಮಿಯ ತುಂಬೆಲ್ಲ ಚಪ್ಪಾಳೆಯ ಝೇಂಕಾರ ಮೊಳಗಿತ್ತು. ‘ಮೈಸೂರು ಮಲ್ಲಿಗೆ’ ಎಂಬ ಚೆಂದದ ನಾಟಕವೊಂದು ಸದ್ದು-ಗದ್ದಲವಿಲ್ಲದೇ ಆರಂಭವಾಗಿಬಿಟ್ಟಿತ್ತು.
ಮಲ್ಲಿಗೆಯ ಕವಿ ಅಂತಲೇ ನಾಡಿಗೆ ಚಿರಪರಿಚಿತರಾದ ಕೆ.ಎಸ್ ನರಸಿಂಹಸ್ವಾಮಿಗಳ ಬದುಕು-ಬರಹದ ಮೇಳೈಕೆಯಿರುವ ನಾಟಕವದು. ಅಲ್ಲಿ ನರಸಿಂಹ ಸ್ವಾಮಿಗಳ ಕವಿತೆಯ ಜತೆಯಲ್ಲೇ, ಬದುಕು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇಡೀ ನಾಟಕವನ್ನು ಎರಡು ಘಟ್ಟಗಳನ್ನಾಗಿ ವಿಗಂಡಿಸಲಾಗಿದೆ. ಈ ನಾಟಕದ ಸೂತ್ರಧಾರನಾದ ಚೆನ್ನಯ್ಯ, ಕವಿಯ ಮರಿಮಗಳು ಮತ್ತು ಆಕೆಯ ಮೊಮ್ಮಕ್ಕಳನ್ನು ನವಿಲೂರಿನಲ್ಲಿ ಭೇಟಿಯಾಗುತ್ತಾನೆ. ಅವರೆದುರು ಕವಿ ಬದುಕಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾನೆ. ಕವಿಯ ಕುರಿತಾಗಿ ಕಥೆಯನ್ನು ಹೇಳಲು ಶುರುವಿಡುತ್ತಾನೆ. ಚೆನ್ನಯ್ಯನ ನೆನಪುಗಳೇ ಇಲ್ಲಿನ ಕಥಾವಸ್ತು. ‘ಮನೆಯೆದುರಿಗಿನ ಮಲ್ಲಿಗೆಯ ಮರವಿಲ್ಲ, ಸಿಹಿ ನೀರಿನ ಬಾವಿಯೂ ಇಲ್ಲ. ಆದರೆ ನವಿಲೂರಿನ ರಸ್ತೆ ಮಾತ್ರ ಬದಲಾಗಿಲ್ಲ! ನಾನು ಬಿದ್ದು ಕಾಲು ಮುರಿದುಕೊಂಡಿದ್ದ ರಸ್ತೆಯ ನಡುವಣ ಗುಂಡಿ ಮಾತ್ರ ೫೦ವರ್ಷಗಳ ನಂತರವೂ ಹಾಗೆ ಇದೆ’ ಎಂಬ ಚೆನ್ನಯ್ಯನ ಮಾತು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಕುಡಿಯಲು ಪೆಪ್ಸಿ ತಂದಿಡುವ ಮೊಮ್ಮಕ್ಕಳು…ಬೆಲ್ಲ , ನೀರು ಕೊಡ್ರವೌ ಎಂಬ ಚೆನ್ನಯ್ಯನ ಉತ್ತರ…ಹಿಂದಿನ-ಇಂದಿನ ತರೆಮಾರುಗಳಲ್ಲಾದ ಪರಿವರ್ತನೆಯ ತುಲನೆಯಲ್ಲೇ ಮೊದಲಾರ್ಧ ಕಳೆದು ಹೋಗುತ್ತದೆ.
ಇಲ್ಲಿ ನರಸಿಂಹ ಸ್ವಾಮಿಗಳಿಗೆ ಹದಿನಾರರ ಪ್ರಾಯ. ಪ್ರೀತಿಯ ಹುಂಬುತನ. ನವಿಲೂರಿನ ಚೆಂದದ ಹುಡುಗಿ ಶಾನುಬೋಗರ ಮಗಳ ಮೇಲೆ ಕವನ ಕಟ್ಟುವ ತವಕ! ಕೊಂಚ ನಗು, ಸ್ವಲ್ಪ ಸಂತಸ…ಬರಹಗಾರನೊಬ್ಬನ ಹುಂಬುತನ, ಹುಚ್ಚುತನ…ಎಲ್ಲವೂ ಇಲ್ಲಿದೆ.
ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು
ಅಪ್ಪಟ ರೇಸಿಮೆ ದಿಂಬಿನ ಅಂಚಿಗೆ
ಚಿತ್ರದ ಹೂವಿತ್ತು-ಪದುಮಳು
ಹಾಕಿದ ಹೂವಿತ್ತು.
ಸೀತಮ್ಮನ್ನನ್ನು ಮದುವೆಯಾದ ಕವಿ ಮಾವನ ಬಂದಾಗ ಹುಟ್ಟುವ ಈ ಚೆಂದದ ಕವಿತೆ ಪ್ರೇಕ್ಷಕರನ್ನು ಆನಂದದ ಅಲೆಯಲ್ಲಿ ತೇಲಿಸುತ್ತಿರುವಾಗಲೇ ಮೊದಲಾರ್ಧದ ಮುಕ್ತಾಯಕ್ಕೆ ಬಂದಿರುತ್ತದೆ.
***
ನಾಟಕದ ನಿಜವಾದ ಕಥೆ ಆರಂಭವಾಗುವುದೇ ದ್ವಿತೀಯಾರ್ಧದಿಂದ. ಕವಿ, ಶಾನುಭೋಗರ ಮಗಳಾದ ಸೀತಮ್ಮನನ್ನು ವರಿಸಿದ್ದಾರೆ. ಪುಟ್ಟ ಬಾಡಿಗೆ ಮನೆಯಲ್ಲಿ ಅರೆ ಹೊಟ್ಟೆ-ಬಟ್ಟೆಯೊಂದಿಗೆ ಸಂಸಾರದ ನೌಕೆ ಸಾಗುತ್ತಿದೆ. ಕವಿಯ ಮಗ, ಮಗಳು, ಹೆಂಡತಿ, ಸಂಸಾರ…ಇದರ ಸುತ್ತವೇ ಸಾಗುವ ಕಥೆ, ಕನಿಷ್ಠ ಮೂರು ಸಲವಾದರೂ ಪ್ರೇಕ್ಷಕನ ಕಣ್ಣಲ್ಲಿ ನೀರು ಜೀನುಗುವಂತೆ ಮಾಡುತ್ತದೆ.
ಸ್ವಂತ ಅನ್ನುವುದು ಏನಿದೆ ಚೆನ್ನಯ್ಯ? ‘ನಾನು’ ಅನ್ನೋದೆ ಬಾಡಿಗೆ…ಎಂಬ ಕವಿಯ ಹತಾಶೆಯ ಮಾತು ಕರುಳನ್ನು ಕಿವಿಚುತ್ತದೆ. ಗಂಡನ ಮನೆಯಿಂದ ತವರು ಮನೆಗೆ ಬರುವ ಮೀನಾಳ ದೃಶ್ಯ, ರೈಲಿನ ಪಯಣದೊಂದಿಗೆ ಅಂತ್ಯ ಕಂಡಾಗ ಕೈಯಿ ನಮಗೆ ಗೊತ್ತಿಲ್ಲದಂತೆ ಕರವಸ್ತ್ರವನ್ನು ತಡಕಾಡುತ್ತಿರುತ್ತದೆ.
ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೇ ಜೋ ಜೋ ಜೋ…
ನಿನ್ನ ಮಗನ ಕುರಿತಾಗಿ ಬರೆದಿರುವ ಕವನ. ಈ ವಾರ ಸುಧಾದಲ್ಲಿ ಬರತ್ತೆ…ಮಗ ಅನಂತುವಿನ ಬಳಿ ಕವಿ ಹೇಳುವ ಮಾತು, ಅಪ್ಪ-ಮಗನ ಶೀತಲ ಸಮರ, ಸಿಟ್ಟು ಮಾಡಿಕೊಂಡು ಹೋಗುವ ಅನಂತುವಿನ ದೃಶ್ಯ ಮತ್ತೆ ಕಣ್ಣಲ್ಲಿ ನೀರು ಬರಿಸುತ್ತದೆ.
‘ಶೆಟ್ರೆ ಒಂದೈದು ಸಾವಿರ ಬೇಕಿತ್ತು. ಈ ಕವನಗಳಿಗೆ ಅಷ್ಟು ಬೆಲೆಯಿದೆಯಾ…’ಹೆಂಡತಿಯ ಔಷಗೋಸ್ಕರ ಕವನವನ್ನು ಮಾರಲು ಹೊರಟ ಕವಿಯ ಬದುಕಿನ ದೃಶ್ಯ ಎಲ್ಲರ ಕಣ್ಣಂಚಿನಲ್ಲೂ ನೀರಿಳಿಸುತ್ತದೆ. ಸಮಗ್ರ ಕಾವ್ಯವನ್ನು ೫,೦೦೦ ರೂ.ಗೆ ಮಾರಿ, ಶೆಟ್ಟ್ರೆ, ಸೂಕ್ತ ಸಮಯದಲ್ಲಿ ಉಪಕಾರ ಮಾಡಿದ್ರಿ ಅಂತೇಳಿ ಬರುವ ಕವಿ…
ಬರೆದಿದ್ದನ್ನು ವಿಮರ್ಶೆ ಮಾಡಿ, ಹೀಗೆ ಬರೆಯಬೇಕಿತ್ತು ಅನ್ನುವವರು…ಎಂಬ ನರಸಿಂಹಸ್ವಾಮಿಗಳ ಮಾತಿನಲ್ಲಿ ವಿಮರ್ಶಕರ ಕುರಿತಾಗಿನ ಸಿಟ್ಟಿದೆ. ಹೆಂಡತಿಯನ್ನೇ ನಿಜವಾದ ವಿಮರ್ಶಕಿ ಎಂದು ಹೇಳುವಲ್ಲಿ ಪ್ರೀತಿಯ ಸೊಬಗಿದೆ. ನೋವಿನ ನಡುವೆಯೂ ಪ್ರೇಕ್ಷಕರನ್ನು ಒಂಚೂರು ನಗಿಸುವ ಯತ್ನ ಖಂಡಿತವಾಗಿಯೂ ನಡೆದಿದೆ!
ಹೌದು, ಬೆಲೆ ಕಟ್ಟಲಾಗದ ಕವಿತೆಗಳನ್ನು ಬರೆದ ಮಲ್ಲಿಗೆಯ ಕವಿಯ ಬದುಕಿನ ಮತ್ತೊಂದು ಮುಖ ಅಲ್ಲಿದೆ. ಪೈಸೆ-ಪೈಸೆಗೂ ಪರದಾಡಿದ, ದುಃಖವಾಗದೇ ಕವಿತೆ ಹುಟ್ಟತ್ತಾ ಎನ್ನುತ್ತಲೇ ನೋವನ್ನು ನುಂಗಿಕೊಂಡ, ಬಾಡಿಗೆ ಒಂಚೂರು ಹೆಚ್ಚಾಯಿತೆಂದಾಗ ಮನೆಗಳನ್ನು ಬದಲಾಯಿಸುತ್ತಲೇ ಕಾಲ ಕಳೆದ ಕೆ.ಎಸ್.ನ ಬದುಕಿನಲ್ಲಿದ್ದ ವ್ಯಥೆಯನ್ನು ಚೆಂದವಾಗಿ ಸೆರೆಹಿಡಿದವರು ರಾಜೇಂದ್ರ ಕಾರಂತರು.
ದೀಪವೂ ನಿನ್ನದೆ, ಗಾಳಿಯೂ ನಿನ್ನದೇ
ಆರದಿರಲಿ ಬೆಳಕು…
ನನ್ನ ಅತ್ಯಂತ ಇಷ್ಟದ ಹಾಡು ರಂಗದಲ್ಲಿ ಕೇಳಿಸುವಾಗ, ನರಸಿಂಹ ಸ್ವಾಮಿಗಳ ತೊಡೆಯ ಮೇಲೆ ಪತ್ನಿ ಸೀತಮ್ಮ ಕೊನೆಯುಸಿರೆಳೆದಿರುತ್ತಾರೆ. ನಾಟಕ ಅಂತ್ಯಕ್ಕೆ ಬಂದು ನಿಲ್ಲುತ್ತದೆ. ಇಡೀ ನಾಟಕ, ಮತ್ತೆ-ಮತ್ತೆ ನೋಡಬೇಕು ಅನ್ನಿಸುವಷ್ಟರ ಮಟ್ಟಿಗೆ ಗೆಲುವು ಸಾಸಿದೆ. ‘ನೀವು ನೋಡಿ ಬನ್ನಿ’ ಅಂತಾ ನಮ್ಮ ಗೆಳೆಯರನ್ನು ಒತ್ತಾಯ ಮಾಡಿ ಕಳುಹಿಸುವಷ್ಟರ ಮಟ್ಟಿಗೆ ಸೊಗಸಾಗಿದೆ. ನಾನಂತೂ, ನನ್ನ ಸುಮಾರು ಗೆಳೆಯರನ್ನು ಕಳುಹಿಸಿದ್ದೇನೆ. ನೀವು ಹೋಗಿ ಬರುವಿರಿ ತಾನೇ?!
ಡಾ. ಬಿ.ವಿ ರಾಜಾರಾಮ್ ನೇತೃತ್ವದ ಕಲಾಗಂಗೋತ್ರಿ ತಂಡ ‘ಮೈಸೂರು ಮಲ್ಲಿಗೆಯ’ ೧೦೦ನೇ ಪ್ರದರ್ಶನದ ಹೊಸ್ತಿಲಿನಲ್ಲಿರುವಾಗಲೇ, ದ.ರಾ ಬೇಂದ್ರೆ ಬದುಕು-ಬರಹ ಆಧಾರಿತ ‘ಗಂಗಾವತರಣ’ಕ್ಕೆ ಮಿತ್ರ ರಾಜೇಂದ್ರ ಕಾರಂತರು ಸಜ್ಜಾಗಿದ್ದಾರೆ.
ಘಮ ಘಮಿಸ್ತಾವ ಮಲ್ಲಿಗೆ
ನೀ ಹೊರಟ್ಟಿದ್ದೆಲಿಗೆ…
ಬೇಂದ್ರೆ ಬರೆದ ಮಲ್ಲಿಗೆ ಜಾಡು ಹಿಡಿದು, ಹಿಂದಿನ ಕವಿಗಳನ್ನು ಮತ್ತೆ ಮತ್ತೆ ನೆನಪಿಸಲು ಹೊರಟಿರುವ ಕಾರಂತರು ಗೆಲ್ಲುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲವಾದರೂ, ಅವರ ಯತ್ನಕ್ಕೆ ಜಯಸಿಗಲಿ ಎಂದು ಹಾರೈಸುವುದು ನಮ್ಮ ಕರ್ತವ್ಯ ಅಲ್ವಾ?
(ಮೈಸೂರು ಮಲ್ಲಿಗೆಯ ಪ್ರದರ್ಶನ ಯಾವತ್ತು, ಎಲ್ಲಿದೆ ಎಂಬುದನ್ನು ತಿಳಿಯಲು ಡಾ.ಬಿ.ವಿ ರಾಜಾರಾಂ-೯೪೪೮೦೬೯೬೬೭ ಅವರನ್ನು ಸಂಪರ್ಕಿಸಬಹುದು)
tumba dinagalida ee naataka nodabekendukondiddaru,sadyavaagilla.idannu odida mele naataka nodale beku annisuttide.
hmmm. ivath odide idna….
si r simha avara comment nodide. so … what is your openion?
ಸುಮಾ ಅವರೆ
ನಾಟಕದಲ್ಲಿ ಬರುವ ಸನ್ನಿವೇಶ ಹಾಗೂ ಪಾತ್ರಗಳನ್ನು ನಾನು ವಿವರಿಸಿದ್ದೇನೆ. ನಾಟಕ ರಚನಾಕಾರನೋ, ನರಸಿಂಹ ಸ್ವಾಮಿಗಳ ಬದುಕನ್ನು ಬಲ್ಲವನೋ ನಾನಲ್ಲ. ಸಿಂಹ ಅವರು ನಾಟಕ ತಂಡವನ್ನು ಟಾರ್ಗೆಟ್ ಮಾಡುವ ಬದಲು ನನ್ನ ಮೇಲೆ ಬರೆದಿರುವುದು ಯಾಕೆ ಎಂಬುದು ಅರ್ಥವಾಗಿಲ್ಲ. ನಾಟಕದುದ್ದಕ್ಕೂ ನರಸಿಂಹ ಸ್ವಾಮಿಗಳು ಪರೋಕ್ಷವಾಗಿ ಬಂದು ಹೋಗುತ್ತಾರೆ. ಪರೋಕ್ಷವಾಗಿ ಬಂದುಹೋಗಿದ್ದನ್ನು ಪರೋಕ್ಷವಾಗಿ ಬರೆಯಬೇಕಾಗಿತ್ತು ಎಂಬುದು ಬಹುಶಃ ಸಿಂಹ ಅವರ ವಾದವಿರಬೇಕು!
Chandada baraha….
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು…