ವಿನಾಯಕ ಕೋಡ್ಸರ, ವಿಕ ಸುದ್ದಿಲೋಕ
ಬೆಂಗಳೂರು: ಬಸ್ ನಿಲ್ದಾಣ, ಹಾಲು ಮಾರಾಟ ಕೇಂದ್ರ ಸೇರಿದಂತೆ ಬಹುತೇಕ ದಿನಸಿ ಸರಕು ಉತ್ಪನ್ನ ಮಾರಾಟ ತಾಣಗಳಲ್ಲಿ ಗರಿಷ್ಠ ಮಾರಾಟ ಬೆಲೆಗೆ(ಎಂಆರ್ಪಿ) ಕವಡೆ ಕಿಮ್ಮತ್ತಿಲ್ಲ! ಇಂಥ ಪ್ರಕರಣದಿಂದ ಗ್ರಾಹಕನಿಗೆ ಕಾನೂನು ರೀತ್ಯಾ ನ್ಯಾಯ ಒದಗಿಸಬೇಕಾದ ಕಾನೂನು ಮಾಪನ ಇಲಾಖೆಗೆ ವ್ಯಾಪಾರಿಗಳ ಪರವಾನಿಗೆ ರದ್ದು ಮಾಡುವ ಅಧಿಕಾರವೇ ಇಲ್ಲ!
ರಾಜ್ಯದ ಬಹುತೇಕ ಬಸ್, ರೈಲ್ವೆ ನಿಲ್ದಾಣದ ಅಂಗಡಿಗಳು, ರಾತ್ರಿ ಬಾಗಿಲು ತೆರೆದಿರುವ ಚಿಲ್ಲರೆ ವ್ಯಾಪಾರ ಕೇಂದ್ರಗಳ ಉತ್ಪನ್ನಗಳಿಗೆ ಎಂಆರ್ಪಿಗಿಂತ ಒಂದು ರೂಪಾಯಿ ದುಬಾರಿ! ಈ ಅನ್ಯಾಯವನ್ನು ಗ್ರಾಹಕ ಪ್ರಶ್ನಿಸಿದರೆ, ‘ಬಸ್ ಸ್ಟಾಂಡ್ನಲ್ಲಿ ನಿಮಗ್ಯಾರು ಎಂಆರ್ಪಿಗೆ ಕೊಡ್ತಾರೆ, ಬೇಕಾದರೆ ತೆಗೆದುಕೊಳ್ಳಿ, ಬೇಡವಾದರೆ ಬಿಟ್ಟುಹೋಗಿ’ ಎಂಬ ದರ್ಪದ ಬೈಗುಳ ವರ್ತಕನಿಂದ ಕಟ್ಟಿಟ್ಟ ಬುತ್ತಿ!
ಪ್ಯಾಕೆಟ್ ಮಾಡಿದ ಸರಕುಗಳಲ್ಲಿ ತೂಕ ಅಥವಾ ಗಾತ್ರ, ಉತ್ಪಾದಕರ ಹೆಸರು ಮತ್ತು ವಿಳಾಸ, ಸರಕು ಪ್ಯಾಕ್ ಮಾಡಿದ ದಿನಾಂಕ, ಎಂಆರ್ಪಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಗ್ರಾಹಕ ಸರಕು ಕಾಯ್ದೆ ೨೦೦೬ರ ಅಡಿಯಲ್ಲಿ , ಗ್ರಾಹಕ ಉಪಯೋಗಿ ಸರಕನ್ನು ‘ಎಂಆರ್ಪಿ’ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬಹುದೇ ಹೊರತು, ಅಕ ಬೆಲೆಗೆ ಮಾರಾಟ ಮಾಡುವಂತಿಲ್ಲ. ಎಂಆರ್ಪಿ ಉಲ್ಲಂಘನೆ ಕಾನೂನುರೀತ್ಯಾ ಅಪರಾಧ. ಒಂದೊಮ್ಮೆ ಕಂಪನಿ, ದರ ಪರಿಷ್ಕರಣೆ ಮಾಡಿದರೂ, ಹಳೆಯ ಉತ್ಪನ್ನಕ್ಕೆ ಆ ಪರಿಷ್ಕರಣೆ ಅನ್ವಯಿಸುವುದಿಲ್ಲ.
‘ಎಂಆರ್ಪಿ ಉಲ್ಲಂಘಿಸಿರುವವರ ವಿರುದ್ಧ ಈಗಾಗಲೇ ಸಾಕಷ್ಟು ಹೋರಾಟ ನಡೆಸಿದ್ದೇವೆ. ಇಂಥ ವರ್ತಕರಿಗೆ ಕಾನೂನು ಮಾಪನ ಇಲಾಖೆ ದಂಡ ಹಾಕಬೇಕು. ನಂತರವೂ ವಂಚನೆ ಮುಂದುವರಿದರೆ ಹೆಚ್ಚು ಹಣ ದಂಡ ವಿಸಿ, ವರ್ತಕನ ಮಾರಾಟ ಪರವಾನಿಗೆ ರದ್ದುಪಡಿಸಬೇಕು. ಇಲಾಖೆ ಮೊದಲ ಹಂತದಲ್ಲಿ ೫೦೦ರೂ. ದಂಡ ವಿಸುತ್ತದೆ. ನಂತರ ವರ್ತಕನಿಂದ ಅಕಾರಿಗಳ ಕೈಬಿಸಿಯಾಗುತ್ತದೆ. ಹೀಗಾಗಿ ಪ್ರಕರಣ ಅಲ್ಲಿಗೆ ಮುಚ್ಚಿಹೋಗುತ್ತದೆ. ಎರಡನೇ ಹಂತದಲ್ಲಿ ದಂಡ ವಿಸಿ, ಪರವಾನಿಗೆ ರದ್ದುಪಡಿಸಿದ ದಾಖಲೆಯೇ ರಾಜ್ಯದಲ್ಲಿ ಕಾಣಿಸುವುದಿಲ್ಲ. ಚಿಲ್ಲರೆ ವ್ಯಾಪಾರಿಗಳು ಖರೀದಿಸಿದ ಸರಕಿಗೆ ರಸೀದಿ ನೀಡಲು ನಿರಾಕರಿಸುತ್ತಾರೆ. ಹೀಗಾಗಿ, ಅನ್ಯಾಯದ ವಿರುದ್ಧ ಗ್ರಾಹಕರು ನ್ಯಾಯಾಲಯಕ್ಕೂ ಮೊರೆ ಹೋಗುವುದು ಕಷ್ಟಸಾಧ್ಯ’ ಎನ್ನುತ್ತಾರೆ ರಾಜ್ಯ ಬಳಕೆದಾರರ ವೇದಿಕೆ ಮುಖಂಡ ಮಾವೆಂಸ ಪ್ರಸಾದ್.
ಅಧಿಕಾರ ಕೊಡಿ
‘ಅಂಗಡಿಗಳ ಪರವಾನಿಗೆ ರದ್ದು ಪಡಿಸುವ ಅಕಾರ ಇರುವುದು ಸರಕಾರಕ್ಕೆ ಮಾತ್ರ. ಕಾನೂನು ಉಲ್ಲಂಘನೆ ಮಾಡುತ್ತಿರುವ ವ್ಯಾಪಾರ ಕೇಂದ್ರಗಳ ಮೇಲೆ ನಿತ್ಯವೂ ದಾಳಿ ನಡೆಯುತ್ತಿದೆ. ಆದರೆ ಎರಡನೇ ಹಂತದ ದಾಳಿ ನಡೆಸುವ ವೇಳೆಗೆ ವರ್ತಕರು ಜಾಗೃತರಾಗಿಬಿಡುತ್ತಾರೆ. ಎರಡನೇ ಹಂತದಲ್ಲಿ ಗರಿಷ್ಠ ೨,೦೦೦ ರೂ. ದಂಡ ವಿಧಿಸಿದ ನಂತರವೂ ನಡೆಯುವ ಅನ್ಯಾಯಕ್ಕೆ ಸರಕಾರವೇ ಪರಿಹಾರ ಒದಗಿಸಬೇಕು ಅಥವಾ ವರ್ತಕನ ಪರವಾನಿಗೆ ರದ್ದುಪಡಿಸುವ ಅಧಿಕಾರವನ್ನು ಇಲಾಖೆಗೆ ನೀಡಬೇಕು. ಇಲಾಖೆ ಅಧಿಕಾರಿಗಳು ಲಂಚ ಸ್ವೀಕರಿಸುತ್ತಾರೆ ಎಂಬ ಆರೋಪ ಆಧಾರ ರಹಿತ’ಎನ್ನುತ್ತಾರೆ ರಾಜ್ಯ ಕಾನೂನು ಮಾಪನ ಇಲಾಖೆ ಹಿರಿಯ ಅಧಿಕಾರಿಗಳು.
ಹಾಲಿಗೆ ಫ್ರೀಜೀಂಗ್ ಛಾರ್ಜ್ ಕೊಡಬೇಡಿ
ಎಂಆರ್ಪಿಯಲ್ಲಿ ಬೃಹತ್ ವಂಚನೆ ನಡೆಯುವುದು ಹಾಲು, ಮೊಸರು ಹಾಗೂ ಫ್ರಿಜ್ನಲ್ಲಿ ಸಂಗ್ರಹಿಸುವ ಉತ್ಪನ್ನಗಳಲ್ಲಿ. ನಂದಿನಿ ಸೇರಿದಂತೆ, ಬಹುತೇಕ ಹಾಲಿನ ಮೇಲೆ ವರ್ತಕರು ಎಂಆರ್ಪಿಗಿಂತ ೫೦ಪೈಸೆ ಅಥವಾ ೧ ರೂ. ಅಕ ಹಣವನ್ನು ಗ್ರಾಹಕರಿಂದ ತೆಗೆದುಕೊಳ್ಳುತ್ತಾರೆ. ಕೇಳಿದರೆ ಫ್ರೀಜೀಂಗ್ ಛಾರ್ಜ್ ಅನ್ನುತ್ತಾರೆ. ವಾಸ್ತವವಾಗಿ ಇದು ಕಾನೂನು ಬಾಹಿರ. ಉತ್ಪನ್ನ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಕಂಪನಿಗಳು ವರ್ತಕರಿಗೆ ಪ್ರತ್ಯೇಕ ಕಮಿಷನ್ ನೀಡುತ್ತವೆ. ಎಂಆರ್ಪಿಗಿಂತ ಅಧಿಕ ಬೆಲೆ ತೆಗೆದುಕೊಳ್ಳುವವರ ವಿರುದ್ಧ ಇಲಾಖೆಗೆ ದೂರು ನೀಡಿದರೆ ತಕ್ಷಣ ದಾಳಿ ನಡೆಸುತ್ತೇವೆ. ಬಸ್ ನಿಲ್ದಾಣದ ವರ್ತಕರ ವಂಚನೆ ಕುರಿತು ಸಾರಿಗೆ ಇಲಾಖೆ ಜತೆ ಶೀಘ್ರದಲ್ಲಿ ಮಾತುಕತೆ ನಡೆಸುತ್ತೇವೆ ಎಂದು ಕಾನೂನು ಮಾಪನ ಇಲಾಖೆ ಉಪ ಆಯುಕ್ತರು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.
(ವಿ.ಸೂ:-ಇದು ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ವರದಿ. ನಮ್ಮಲ್ಲಿ, ಬಸ್ ಸ್ಟ್ಯಾಂಡ್, ಬೀಡಾ ಅಗಂಡಿಯಲ್ಲಿ ಕುಳಿತು ಸಮಸ್ಯೆ ಹೇಳುವವರು ಹೆಚ್ಚು ಹೊರತು, ಸಮಸ್ಯೆ ಕುರಿತಾಗಿ ಸಂಬಂಧಿತ ಇಲಾಖೆಗೆ ದೂರು ನೀಡುವವರು ವಿರಳ. ಅದನ್ನೇ ಕಾನೂನು ಮಾಪನ ಇಲಾಖೆ ಆಯುಕ್ತರು ಕೂಡ ಹೇಳುತ್ತಿದ್ದರು. ಇದು ಗ್ರಾಹಕ ಸಂಬಂಧಿ ಸಮಸ್ಯೆಯಾಗಿರುವುದರಿಂದ ಪತ್ರಿಕೆಯಲ್ಲಿ ಪ್ರಕಟಗೊಂಡರೂ ಕೂಡ ಬ್ಲಾಗಿಗೆ ಹಾಕಿದ್ದೇನೆ…ಮುಂದಿನ ನಿರ್ಧಾರ ನಿಮ್ಮದು…)
*ಇದು ಮೊದಲಿನಿಂದಲೂ ಇರುವ ಸಮಸ್ಯೆ ಮತ್ತು ಸಾರ್ವತ್ರೀಕವಾಗಿರುವ ಸಮಸ್ಯೆಯಾಗಿದೆ. ಕಾನೂನು ಮಾಪನ ಇಲಾಖೆ ಅಥವಾ ಮತ್ಯಾವುದೇ ಸಂಬಂಧ ಪಟ್ಟ ಇಲಾಖೆಗಳು ಸ್ವ ಆಸಕ್ತಿವಹಿಸಿ ಏಕೆ ಏನು ಕ್ರಮ ಕೈಗೊಳ್ಳುತ್ತಿಲ್ಲ?ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಧೀಶರೇ ಕೇಸು ದಾಖಲು ಮಾಡಿದಂತೆ? ಇದು ಕೇವಲ ಒಂದೆರೆಡು ಅಂಗಡಿಯ ಸಮಸ್ಯೆ ಅಲ್ಲವಲ್ಲ…
*ಗ್ರಾಹಕರು ಎಲ್ಲಿ ದೂರು ಕೊಡಬೇಕೆಂದು ತಿಳಿಸಿದ್ದರೆ ಸಹಾಯವಾಗಿರೋದು….
nijavaagiyu grahakara hakkina bagge janaralli jagruti ashtara mattige aagillavendare sullagadu. nanage tilida mattige prati jilleyallu grahakara hita rakshana vedike ide anisutte. managalurinalli ide.. bere.. gottilla
ನಿತಿನ್,
ಎಲ್ಲಿ ದೂರು ಕೊಡಬೇಕು ಎಂಬುದನ್ನು ಲೇಖನದಲ್ಲೇ ಸ್ಪಷ್ಟವಾಗಿ ವಿವರಿಸಿದ್ದೇನೆ. ಪ್ರತಿ ತಾಲೂಕಿನಲ್ಲೂ ಕಾನೂನು ಮಾಪನ ಇಲಾಖೆಯಿದೆ. ಆ ಇಲಾಖೆಯಲ್ಲಿ ದೂರು ನೀಡಿದರೆ ಸಾಕು. ಪ್ರತಿ ತಾಲೂಕಿನ ಪೋನ್ ನಮೂದಿಸಲು ಸಾಧ್ಯವಿಲ್ಲ. ನನ್ನ ಕರ್ತವ್ಯ ಮಾಡಿದ್ದೇನೆ. ಮುಂದಿನದ್ದು ನಿಮ್ಮ ಅರ್ಥಾತ್ ಗ್ರಾಹಕರ ಕಾಯಕ. ಹೋರಾಟಕ್ಕೆ ಮಾವೆಂಸ ಪ್ರಸಾದ್(೯೮೮೬೪೦೭೫೯೨)ಅವರನ್ನು ಸಂಪರ್ಕಿಸಬಹುದು ಅಥವಾ ನನ್ನನ್ನು ಸಂಪರ್ಕಿಸಿಬಹುದು.
ಪ್ರಸಾದ್
ಧನ್ಯವಾದ…