ಅರ್ಧ ಕೋಣೆಯಷ್ಟು ಜಾಗವನ್ನು ಆಕ್ರಮಿಸುತ್ತಿದ್ದ ಟಿವಿ ಪೆಟ್ಟಿಗೆ, ಇವತ್ತು ಯಾವ ಮನೆಯಲ್ಲೂ ಕಾಣಿಸುವುದಿಲ್ಲ. ಎಕರೆ ಜಾಗ ತಿನ್ನುತ್ತಿದ್ದ ಅಂಬಾಸಿಡರ್ ಕಾರು ಕಾಣೆಯಾಗಿದೆ. ಅಂಗೈ ಅಗಲದ ಕಂಪ್ಯೂಟರ್, ಕಿರು ಬೆರಳಿನಷ್ಟು ದೊಡ್ಡದಾದ ಲ್ಯಾಪ್ಟಾಪ್, ಜೇಬಿನಲ್ಲಿ ತುರುಕಿಕೊಂಡು ಹೋಗಬಹುದಾದ ಫೋನ್, ಆರಡಿ-ಮೂರಡಿ ಜಾಗದಲ್ಲಿ ನಿಲ್ಲಿಸಬಹುದಾದ ಕಾರು…ನಿಜ, ತಂತ್ರಜ್ಞಾನ ಎಂಬುದು ಇವತ್ತು ನಮ್ಮ ನಿಲುವಿಗೆ ಸಿಗದಷ್ಟು ಚಿಕ್ಕ ಉತ್ಪನ್ನಗಳನ್ನು ಹುಟ್ಟುಹಾಕುತ್ತಿದೆ.
೧ ಲಕ್ಷ ರೂಪಾಯಿ ಮೌಲ್ಯದ ನ್ಯಾನೊ ಕಾರು ಇದೀಗ ಬೀದಿಗಿಳಿದಿದೆ. ವಾಹನೋದ್ಯಮದಲ್ಲಿ, ತಾಂತ್ರಿಕ ಜಗತ್ತಿನಲ್ಲಿ ಒಂದು ಸಂಚಲನ ಉಂಟಾಗಿದೆ. ಕೇವಲ ಹಣದ ವಿಚಾರವನ್ನು ಮುಂದಿಟ್ಟುಕೊಂಡು ಮಾತನಾಡುವುದಾದರೆ, ‘ನ್ಯಾನೊ’ಗೆ ಯಾವ ವಿಶೇಷತೆಯೂ ಇಲ್ಲ. ತಂತ್ರಜ್ಞಾನ ಇವತ್ತು ಪಾಶ್ಚಾತ್ಯ ಮಂದಿಗೆ ನಿತ್ಯ ಧರಿಸುವ ಅಂಗಿ-ಚಡ್ಡಿ ಇದ್ದಂತೆ! ಹಾಗಾಗಿ, ಅಲ್ಲಿ ಸೆಕೆಂಡ್ ಹ್ಯಾಂಡ್ ಕಾರಗಳನ್ನು ಕೇಳುವವರೂ ಗತಿಯಿಲ್ಲ! ದೇಶೀಯ ಮಾರುಕಟ್ಟೆಯಲ್ಲೂ ಕಡಿಮೆ ದರಕ್ಕೆ ಸೆಕೆಂಡ್ ಹ್ಯಾಂಡ್ ಕಾರು ಲಭ್ಯ. ಚ್ಕಿಕದು ಎಂಬ ಕಾರಣಕ್ಕೆ ಆ ಕಾರಿಗೆ ‘ನ್ಯಾನೊ’ ಎಂದು ನಾಮಕರಣ ಮಾಡಿದ್ದಾರೆ. ಆದರೆ ಆ ಕಾರಿಗೂ, ನ್ಯಾನೊ ತಂತ್ರಜ್ಞಾನಕ್ಕೂ ಸಮಬಂಧವಿಲ್ಲ.
ಬೆಲೆಯನ್ನು ಬದಿಗಿಟ್ಟು, ತಾಂತ್ರಿಕ ಕೌಶಲ್ಯವನ್ನು ಎದುರಿಗಿಟ್ಟುಕೊಂಡು ನೋಡಿದಾಗ, ‘ನ್ಯಾನೊ’ ಎಂಬ ಪದದ ಹಿಂದೆ ಅದ್ಬುತವಿದೆ. ನೂರಾರು ವಿಜ್ಞಾನಿಗಳ ಕನಸು-ಕಲ್ಪನೆಯಿದೆ. ಜತೆಗೆ, ಅವಿರತ ಶ್ರಮವೂ ಇದೆ. ಒಂದು ಮೀಟರ್ ವಿಸ್ತೀರ್ಣದ ವಸ್ತುವನ್ನು, ಒಂದು ಶತಕೋಟಿ ಕಣಗಳನ್ನಾಗಿ ವಿಭಜಿಸಬೇಕು. 10-9, ಗಾತ್ರದಲ್ಲಿ ವಿಭಜಿಸಬೇಕು. ಆಗ ದೊರೆತ ಕಣವನ್ನು, ವಿಜ್ಞಾನ ಒಂದು ನ್ಯಾನೊ ಮೀಟರ್ ವಿಸ್ತೀರ್ಣದ ಕಣ ಎಂದು ಹೆಸರಿಸುತ್ತದೆ. ಒಂದು ಮೀಟರ್ ವಸ್ತುವೇ ಸ್ವಲ್ಪ ದೂರದಿಂದ ನೋಡಿದರೆ ಕಣ್ಣಿಗೆ ಕಾಣಸಿಗದು. ಅಂತಹದ್ದರಲ್ಲಿ ಒಂದು ಮೀಟರ್ನ ಶತಕೋಟಿ ಭಾಗ…! ಕಣ್ಣಿಗೆ ಕಾಣಿಸುವುದು ಒತ್ತಟ್ಟಿಗಿರಲಿ, ಕಲ್ಪನೆಗೂ ಸಿಗದಷ್ಟು ಚಿಕ್ಕ ವಸ್ತು. ಅಷ್ಟು ಚಿಕ್ಕದಾದ ಕಣಗಳ ಅಧ್ಯಯನ, ಅಭಿವೃದ್ಧಿಯ ವಿ-ವಿಧಾನವೇ ನ್ಯಾನೊ ತಂತ್ರಜ್ಞಾನದ ಜೀವಾಳ. ಒಂದು ನ್ಯಾನೊ ಮೀಟರ್ ವಿಸ್ತೀರ್ಣದ ಕಣವನ್ನು ಅಧ್ಯಯನ ಮಾಡುವಷ್ಟು ನಮ್ಮ ವಿಜ್ಞಾನ ಅಭಿವೃದ್ಧಿ ಹೊಂದಿಲ್ಲ. ಹಾಗಾಗಿ, ೧೦೦ ನ್ಯಾನೊ ಮೀಟರ್ ವಿಸ್ತೀರ್ಣದ ಕಣಗಳ ಅಧ್ಯಯನ ಅಭಿವೃದ್ಧಿ ನಡೆಯುತ್ತಿದೆ.
ಸಹಸ್ರಾರು ವರ್ಷಗಳ ಹಿಂದೆಯೇ ಈ ನ್ಯಾನೊ ತಂತ್ರಜ್ಞಾನ ಬಳಕೆಯಾಗುತ್ತಿತ್ತು ಎಂಬ ಮಾತು ವಿಜ್ಞಾನಲೋಕದಲ್ಲಿ ಕೇಳಿಬರುತ್ತಿದೆ. ‘ಆಗಿನ ಕಾಲದಲ್ಲಿ ನ್ಯಾನೊ ತಂತ್ರಜ್ಞಾನ ಅಣು, ಪರಮಾಣುಗಳ ಮಟ್ಟದಲ್ಲಿ ಬಳಕೆಯಾಗುತ್ತಿರಲಿಲ್ಲ, ರಾಸಾಯನಿಕ ಪ್ರಕ್ರಿಯೆಗಳಲ್ಲೂ ಕಲ್ಪನೆ ಇರಲಿಲ್ಲ. ಆದರೆ, ಐತಿಹಾಸಿಕ ಸ್ಮಾರಕಗಳ ಎದುರುಗಡೆ ಸಿಗುವ ಕಬ್ಬಿಣದ ಕಂಬಗಳು, ಪ್ರಾಚ್ಯ ವಸ್ತು ಸಂಗ್ರಹಾಲಯದ ಬಣ್ಣ-ಬಣ್ಣದ ವಸ್ತುಗಳು, ರಬ್ಬರ್ ಆಧಾರಿತ ಉಪಕರಣಗಳು….ನ್ಯಾನೊ ತಂತ್ರಜ್ಞಾನ ಬಳಕೆಗೆ ಸಾಕ್ಷಿ’ ಎಂಬುದು ನಮ್ಮ ಕೆಲ ವಿಜ್ಞಾನಿಗಳ ವಾದ.
೧೮-೧೯ನೇ ಶತಮಾನ ಅಕ್ಷರಶಃ ವಿಜ್ಞಾನಿಗಳ ಯುಗ. ಬೆಳಕಿನ ಕುರಿತಾಗಿ, ಅಣುಗಳ, ಭೂಮಿಯ, ರಾಸಾಯನಿಕ ಪ್ರಕ್ರಿಯೆಗಳ ಕುರಿತಾಗಿ ಸಹಸ್ರಾರು ಸಿದ್ಧಾಂತಗಳು ಜನ್ಮ ತಳೆದಿದ್ದು ಆ ಕಾಲದಲ್ಲೇ. ಹಾಗಾಗಿ, ವಿಜ್ಞಾನದ ಅಭಿವೃದ್ಧಿ ಪಥವನ್ನು ಆ ಕಾಲದಿಂದಲೇ ಅವಲೋಕಿಸಿಕೊಂಡು ಬರುವುದು ವಾಡಿಕೆಯಾಗಿಬಿಟ್ಟಿದೆ! ೧೮೬೭ರಲ್ಲಿ ಖ್ಯಾತ ಭೌತಶಾಸ್ತ್ರಜ್ಞ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ ಮುಂದಿಟ್ಟ ‘ಅಣು ಸಿದ್ದಾಂತ’ ನ್ಯಾನೊ ಕುರಿತು ಪ್ರಾಥಮಿಕ ಕಲ್ಪನೆ ಕಟ್ಟಿಕೊಡುತ್ತದೆ ಎಂದು ನ್ಯಾನೊ ಕುರಿತಾಗಿ ಸಂಶೋಧನೆ ನಡೆಸುತ್ತಿರುವ ಅನೇಕ ಸಂಶೋಧನಾಕಾರರು ಬರೆಯುತ್ತಾರೆ. ೧೯೧೪ರಲ್ಲಿ Richard Adolf Zsigmondy ‘ನ್ಯಾನೊ ಮೀಟರ್’ ಎಂಬ ಪದ ಬಳಸಿದ್ದು ಕೂಡ ಇತಿಹಾಸದಲ್ಲಿ ಗಮನೀಯ. ಒಟ್ಟಿನಲ್ಲಿ ಮೇಲಣ ವಿಜ್ಞಾನಿಗಳೆಲ್ಲ ೨೦ನೇ ಶತಮಾನದ ನ್ಯಾನೊ ಯುಗ ಆರಂಭಕ್ಕೆ ನಾಂದಿ ಹಾಡಿದರು ಎಂಬುದಂತೂ ದಿಟ.
ಅಲ್ಲಿಂದ ಮುಂದೆ ಬಂದರೆ, ಅಮೆರಿಕದ ಭೌತವಿಜ್ಞಾನಿ ರಿಚರ್ಡ್ ಫೆಯ್ನ್ಮನ್, ೧೯೫೯ರ ಡಿಸೆಂಬರ್ನಲ್ಲಿ ಅಮೆರಿಕ ಭೌತಶಾಸ್ತ್ರ ಸೊಸೈಟಿಯಲ್ಲಿ ನಡೆದ ಸಭೆಯೊಂದರಲ್ಲಿ ‘ನ್ಯಾನೊ’ ಎಂಬ ಪದವನ್ನು ಬಳಸುತ್ತಾರೆ. ೧೯೭೪ರಲ್ಲಿ ಟೋಕಿಯೊ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ನೊರಿಯೊ ತನಿಗುಚ್ಚಿ, ‘ನ್ಯಾನೊ ತಂತ್ರಜ್ಞಾನದ’ ಕುರಿತು ಉಲ್ಲೇಖಿಸಿದ್ದು ಕೂಡ ವಿಜ್ಞಾನ ಲೋಕಕ್ಕೆ ಮಹತ್ವದ ಮೈಲುಗಲ್ಲು. ಆದರೆ, ನ್ಯಾನೊ ತಂತ್ರಜ್ಞಾನ ವಿಜ್ಞಾನ ಲೋಕದ ಗಮನ ಸೆಳೆದಿದ್ದು ೧೯೮೦ರ ದಶಕದಲ್ಲಿ . ೧೯೮೦ರಲ್ಲಿ ಆವಿಷ್ಕಾರವಾದ ಸ್ಕ್ಯಾನಿಂಗ್ ಟುನೆಲಿಂಗ್ ಮೈಕ್ರೊಸ್ಕೋಪ್(ಎಸ್ಟಿಎಂ), ನ್ಯಾನೊ ಕುರಿತು ಹೆಚ್ಚಿನ ಸಂಶೋಧನೆಗೆ ಸಹಕಾರಿಯಾಯಿತು. ಪರಿಣಾಮವಾಗಿ ೧೯೮೬ರ ಸುಮಾರಿಗೆ ಕಾರ್ಬನ್ ನ್ಯಾನೊ ಟ್ಯೂಬ್ಗಳ ಆವಿಷ್ಕಾರವಾಯಿತು. ಎಸ್ಟಿಎಂ ಆವಿಷ್ಕಾರದ ೬ ವರ್ಷಗಳ ನಂತರ ಅಟೋಮಿಕ್ ಫೋರ್ಸ್ ಮೈಕ್ರೋಸ್ಕೋಪ್ಗಳು ಬೆಳಕಿಗೆ ಬಂದವು. ಅಣುಗಳ ಕುರಿತ ನಿಖರ ಅಧ್ಯಯನ ಆರಂಭವಾಯಿತು. ಅಲ್ಲಿಂದ ಮುಂದೆ ನ್ಯಾನೊ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಶೋಧನೆಗೆ ಸಂಬಂಸಿದಂತೆ ಹತ್ತಾರು ವೈಜ್ಞಾನಿಕ ಸಂಸ್ಥೆಗಳು ಹುಟ್ಟಿಕೊಂಡವು. ನೂರಾರು ವಿಜ್ಞಾನಿಗಳು ಬೆಳಕಿಗೆ ಬಂದರು.
ಆಹಾರ, ಆರೋಗ್ಯ, ವಾಹನ, ಔಷಧ..ನ್ಯಾನೊ ತಂತ್ರಜ್ಞಾನದ ವ್ಯಾಪ್ತಿ ಈಗ ಬಹು ವಿಸ್ತಾರವಾಗಿದೆ. ಇವತ್ತು ೮೦೦ಕ್ಕೂ ಅಕ ನ್ಯಾನೊ ಉತ್ಪನ್ನಗಳಿವೆ. ೩ರಿಂದ ೪ ವಾರಕ್ಕೆ ಒಂದೊಂದು ಹೊಸ ನ್ಯಾನೊ ಉತ್ಪನ್ನ ಹೊರಬರುತ್ತಿದೆ. ಸೆಮಿಕಂಡಕ್ಟರ್, ಟ್ರಾನ್ಸಿಸ್ಟರ್, ರೆಸಿಸ್ಟರ್ನಂಥ ಸೂಕ್ಷ್ಮ ಉಪಕರಣಗಳ ಜಾಗವನ್ನು ನ್ಯಾನೊ ಎಂಬ ಪದ ಆಕ್ರಮಿಸಿದೆ. ‘ನ್ಯಾನೊ ಮೆಡಿಸಿನ್’ ಇವತ್ತು ಔಷಧ ಜಗತ್ತಿನ ವಿಸ್ಮಯ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ‘ನ್ಯಾನೊ’ ಕೊಡುಗೆ ಗಣನೀಯ. ಡಿಎನ್ಎ ಜತೆ, ಚಿನ್ನದ ನ್ಯಾನೊ ಕಣಗಳನ್ನು ಜೋಡಿಸಿ ವಂಶವಾಹಿ ರೋಗಗಳನ್ನು ಪತ್ತೆ ಮಾಡುತ್ತಾರೆ. ಡಿಎನ್ಎ ತಂತ್ರಜ್ಞಾನದಲ್ಲಿ ಈ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತದೆ. ಔಷಧ ಕ್ಷೇತ್ರದಲ್ಲೂ ಹೊಸದೊಂದು ಅಲೆಯನ್ನು ಎಬ್ಬಿಸಿದೆ. ಹಾನಿಗೊಳಗಾಗಿರುವ ನರಗಳ ಮರು ಜೋಡಣೆಗೆ ನ್ಯಾನೊ ತಂತ್ರಜ್ಞಾನ ಅವಶ್ಯ.
ನ್ಯಾನೊ ವಿಜ್ಞಾನಕ್ಕೊಂದು ಹೊಸ ಮುನ್ನುಡಿ ಬರೆಯುತ್ತಿದೆ ಎಂಬುದು ನಿಜ. ಆದರೆ, ನ್ಯಾನೊ ತಂತ್ರಜ್ಞಾನ ಅಭಿವೃದ್ಧಿ ಕುರಿತು ಸಾಕಷ್ಟು ಅಪಸ್ವರಗಳಿವೆ ಎಂಬುದನ್ನೂ ಮರೆಯುವಂತಿಲ್ಲ. ಈ ತಂತ್ರಜ್ಞಾನ ಪರಿಸರಕ್ಕೆ ಮಾರಕ್ಕೆ ಎಂಬ ವಾದವಿದೆ. ವಿಜ್ಞಾನವೇ ಪರಿಸರಕ್ಕೆ ಶತ್ರುವಾದ ಮೇಲೆ, ನ್ಯಾನೊವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ! ನ್ಯಾನೊ ಎಂಬುದು ಮತ್ತೊಂದು ಅಣು ತಂತ್ರಜ್ಞಾನದಂತಾಗಬಹುದು ಎಂಬ ದುಗುಡ ಜಗತ್ತನ್ನು ಕಾಡುತ್ತಿದೆ. ಅಣುಬಾಂಬ್, ರಾಸಾಯನಿಕ ಅಸ್ತ್ರಗಳು…ಮಾದರಿಯಲ್ಲೇ ನ್ಯಾನೊ ಶಸ್ತ್ರಾಸ್ತ್ರಗಳು ಉತ್ಪಾದನೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಕುರಿತು ಸರಕಾರ ಹಾಗೂ ಕೆಲ ವೈಜ್ಞಾನಿಕ ಸಂಘಟನೆಗಳು ಕಾರ್ಯನಿರತವಾಗಿವೆ. The National Institute for Occupational Safety and Health(NIOSH ) ನ್ಯಾನೊ ತಂತ್ರಜ್ಞಾನದಿಂದ ಉಂಟಾಗಬಹುದಾದ ಮಾರಕ ಪರಿಣಾಮಗಳ ಹಿಂದೆ ಬಿದ್ದಿದೆ. ನ್ಯಾನೊ ಕಣಗಳಿಂದ ದೇಹದ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ, ನ್ಯಾನೊ ಲ್ಯಾಬ್ಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಕಾಡುವ ಆರೋಗ್ಯ ಸಮಸ್ಯೆಗಳೇನು ಎಂಬ ಕುರಿತು ಸಂಶೋಧನೆ ನಡೆಸುತ್ತಿದೆ.
ಇತ್ತೀಚೆಗೆ ಅಭಿವೃದ್ಧಿಗೊಂಡ ಕಾಲುಚೀಲಗಳಲ್ಲಿನ(ಸಾಕ್ಸ್) ಧೂಳು ನಿಯಂತ್ರಣಕ್ಕೆ ಬಳಸುತ್ತಿರುವ ‘ಸಿಲ್ವರ್ನ್ಯಾನೊ’ ಕಣಗಳಿಂದ ಕೃಷಿ ತ್ಯಾಜ್ಯ ಕರಗಿಸಲು ಅವಶ್ಯವಾದ ಬ್ಯಾಕ್ಟೀರಿಯಾಗಳು ಸಾಯುತ್ತಿವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ನ್ಯಾನೊ ಕಣಗಳನ್ನು ಉಸಿರಾಟದ ಮೂಲಕ ಸೇವಿಸುವ ಇಲಿಗಳು ರೋಗಕ್ಕೆ ತುತ್ತಾಗಿವೆ. ನ್ಯಾನೊ ಕಣಗಳಿಂದ ಶ್ವಾಸಕೋಶ ಹಾಗೂ ಮೆದುಳಿಗೆ ತೊಂದರೆ ಉಂಟಾಗುತ್ತಿದೆ ಎಂದು University of Rochester ನ ಅಧ್ಯಯನ ಹೇಳುತ್ತಿದೆ. Institute of Occupational Medicine in Edinburgh, Scotland, ನಡೆಸಿರುವ ಅಧ್ಯಯನದ ಪ್ರಕಾರ, ನ್ಯಾನೊ ಉಗಮಕ್ಕೆ ಕಾರಣವಾದ ಕಾರ್ಬನ್ ನ್ಯಾನೊ ಟ್ಯೂಬ್ಗಳಿಂದ ಕೆಲ ಭೀಕರ ರೋಗಗಳು ಹುಟ್ಟುತ್ತಿವೆ. ಹೀಗಾಗಿ, The Center for Responsible Nanotechnology ಎಂಬ ಕೇಂದ್ರವೊಂದು ನ್ಯಾನೊ ತಂತ್ರಜ್ಞಾನದ ಆಗು-ಹೋಗುಗಳನ್ನು ಚರ್ಚಿಸಲು ಸಿದ್ಧವಾಗಿದೆ.
ಅದೇನೆ ಇರಲಿ, ‘ಮೈಕ್ರೊ ಟು ಮ್ಯಾಕ್ರೊ ವರ್ಲ್ಡ್’ ಎಂಬ ವಿಜ್ಞಾನದ ಪರಿಭಾಷೆ ಅಕ್ಷರಶಃ ಬದಲಾಗುತ್ತಿದೆ. ತಂತ್ರಜ್ಞಾನವನ್ನು ಚಿಕ್ಕದಾಗಿ ನೀಡಿದಷ್ಟೂ ಗ್ರಾಹಕರು ಹೆಚ್ಚಾಗುತ್ತಿದ್ದಾರೆ. ಹೀಗಾಗಿ, ನ್ಯಾನೊ ತಂತ್ರಜ್ಞಾನ ಬಹು ಜನಪ್ರಿಯವಾಗುತ್ತಿದೆ. ನ್ಯಾನೊ ಉತ್ಪನ್ನ ತೀರಾ ಚಿಕ್ಕದಾದರೂ, ಆ ಉತ್ಪನ್ನದ ಹಿಂದಿರುವ ಶ್ರಮ ದೊಡ್ಡದು. ಚಿಕ್ಕ ಉತ್ಪನ್ನಕ್ಕೆ ಬೇಕಾದ ಬಿಡಿಭಾಗವನ್ನು ತಯಾರಿಸಲು ವಿಜ್ಞಾನಿಗಳು ಶತಮಾನದಷ್ಟು ಕಾಲ ವ್ಯಯ ಮಾಡಿದ್ದಾರೆ. ಹಗಲು-ರಾತ್ರಿಗಳನ್ನು ಬದಿಗಿಟ್ಟು ಸಂಶೋಧನೆ ನಡೆಸಿದ್ದಾರೆ. ಹಾಗಾಗಿ ನ್ಯಾನೊವನ್ನು , ನಾವೆಲ್ಲ ಇಷ್ಟಪಡಲೇ ಬೇಕು. ಹೊಸ ಉತ್ಪನ್ನಗಳ ಬಳಕೆಯ ಆಧಾರದಿಂದ ವ್ಯಕ್ತಿಯೊಬ್ಬನ ಶ್ರೀಮಂತಿಕೆ ಅಳೆಯುತ್ತಿದ್ದ ಕಾಲ ಹೋಗಿದೆ. ರಾಜರು, ಪಟೇಲರು, ಶ್ಯಾನುಬೋಗರು… ಒಂದಷ್ಟು ಬೆರಳೆಣಿಕೆ ಮಂದಿ ಮಾತ್ರ ಕಾರಿನ ಯಜಮಾನರು ಎಂಬ ಕಾಲ ಇದಲ್ಲ. ಒಂದು ಎಕರೆ ಜಾಗದಷ್ಟು ವಿಶಾಲವಾದ ಅಂಬಾಸಿಡರ್, ಫಿಯೆಟ್ ಕಾರು ಇಟ್ಟುಕೊಂಡ ಆಗರ್ಭ ಶ್ರೀಮಂತರ ದರ್ಬಾರು ಈಗಿಲ್ಲ! ಇವತ್ತು ಕಾರು ಕೂಡ ಮಾರುಕಟ್ಟೆಯಲ್ಲಿನ ತರಕಾರಿಗೆ ಸಮನಾಗಿದೆ ಎಂದಾದರೆ, ಅದರ ಹಿಂದೆ ಖಂಡಿತವಾಗಿಯೂ ವಿಜ್ಞಾನದ, ತಂತ್ರಜ್ಞಾನದ ಕೈವಾಡವಿದೆ. ತಂತ್ರಜ್ಞಾನ, ತೀರಾ ಸಾವಿನ ಅಂಚಿನಲ್ಲಿರುವವರನ್ನು ಬದುಕಿಸಬಲ್ಲದು ಎಂಬುದಕ್ಕೆ ಮಣಿಪಾಲ್, ಜಯದೇವ ಆಸ್ಪತ್ರೆಗಳು ಸಾಕ್ಷಿ. ಬದುಕಿರುವವನನ್ನೂ ಸಾಯಿಸಬಲ್ಲದು ಎಂಬುದಕ್ಕೆ ಹಿರೋಶಿಮಾ-ನಾಗಸಾಕಿಗಳ ಮೇಲಣ ದಾಳಿ, ಭೋಪಾಲ್ ಅನಿಲ ದುರಂತಗಳು ಕಣ್ಣೆದುರಿಗಿವೆ. ಹಾಗಾಗಿ ತಂತ್ರಜ್ಞಾನದ ಎರಡೂ ಆಯಾಮವನ್ನೂ ಅವಲೋಕಿಸಬೇಕಿದೆ…
(ಈ ಲೇಖನದ ಪರಿಷ್ಕೃತ ಮಾದರಿ ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡಿದೆ! ಅದರ ಮೂಲ ಲೇಖನ ಇದು. ರಿಯಲ್ ಎಸ್ಟೇಟ್ ದರ ಇಳಿಕೆಯಾದರೂ ಜಾಗದ ಕೊರತೆ ಮಾರಾಯ್ರೆ!!!)
ನೀವಿಷ್ಟು ದೊಡ್ಡ ಲೇಖನ ಬರೆದರೆ ಪಾಪ ವಿಶ್ವೇಶ್ವರ ಭಟ್ರು ಒಂದಿಡೀ ಪೇಪರ್ ನ ನ್ಯಾನೋ ತಂತ್ರಜ್ಞಾನದ ಬಗ್ಗೆ ಕೊಡಬೇಕಾದೀತು!
ಚೆನ್ನಾಗಿದೆ ಲೇಖನ .ಬಹಳ ವಿವರವಾಗಿದೆ. ಇಷ್ಟ ಆಯಿತು.
ಒಳ್ಳೆಯ ಬರಹ. ಇಷ್ಟವಾಯಿತು.
very informative. thanx
Olle “techy” lekhana..
ವಿನಾಯಕ್,
ನಿಜಕ್ಕೂ ತುಂಬಾ ಒಳ್ಳೆಯ ಬರಹ. ತುಂಬಾ ಮಾಹಿತಿಗಳನ್ನು ಕಲೆಹಾಕಿದ್ದೀರಿ….ಇದನ್ನು ವಿಜಯಕರ್ನಾಟಕದಲ್ಲಿ ಓದಿದ್ದೆ. ಮತ್ತೆ ಇವತ್ತು ಮಳೆಯ ಬಗೆಗಿನ ಲೇಖನವನ್ನು ಓದಿದೆ. ಸೊಗಸಾಗಿದೆ…ಚೆನ್ನಾಗಿ ಬರೆಯುತ್ತೀರಿ…
ಧನ್ಯವಾದಗಳು.