ಅಲ್ಲಿ ಮತ ಎಣಿಕೆ ನಡೆಯುತ್ತಿದ್ದರೆ, ಇಲ್ಲಿ ಪುಟ ಎಣಿಕೆ! ಚುನಾವಣೆ ಫಲಿತಾಂಶವನ್ನು ಎಷ್ಟು ಸೊಗಸಾಗಿ ನೀಡಬಹುದೆಂಬ ಲೆಕ್ಕಾಚಾರ ಪ್ರತಿ ಸುದ್ದಿಮನೆಯಲ್ಲಿ. ಒಂದು ಕಾಲದಲ್ಲಿ ಚುನಾವಣಾ ಫಲಿತಾಂಶ ಪತ್ರಿಕೆಗಳಿಗೆ ಬಹು ದೊಡ್ಡ ಸುದ್ದಿಯಾಗಿತ್ತು. ಓದುಗ, ಪತ್ರಿಕೆಗಳಲ್ಲಿ ಬರುವ ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಆದರೆ ಈಗ ಹಾಗಲ್ಲ. ಮತ ಏಣಿಕೆ ಆರಂಭವಾಗುತ್ತಿದ್ದಂತೆ ಸುದ್ದಿ ವಾಹಿನಿಗಳಲ್ಲಿ ಲೈವ್ ರಿಸಲ್ಟ್, ಬಿಸಿ ಬಿಸಿ ಚರ್ಚೆ! ಫಲಿತಾಂಶಕ್ಕಾಗಿ ಮರುದಿನ ಬೆಳಿಗ್ಗೆ ಬರುವ ಪತ್ರಿಕೆಯನ್ನು ಕಾಯುವ ಅನಿವಾರ್ಯತೆಯೇ ಇಲ್ಲ…
ಹೌದು, ಹಾಗಾಗಿಯೇ ಪುಟ ವಿನ್ಯಾಸಕ್ಕೆ ಇವತ್ತು ಮಹತ್ವ ಬಂದಿದೆ. ಸುದ್ದಿಗಿಂತ, ಸುದ್ದಿಯನ್ನು ಎಷ್ಟು ಸೊಗಸಾಗಿ ನೀಡಬೇಕು, ಪುಟ ವಿನ್ಯಾಸ ಹೇಗಿರಬೇಕು ಎಂಬುದೇ ಇವತ್ತು ಚರ್ಚೆಯ ವಿಷಯ. ಚುನಾವಣೆ ಫಲಿತಾಂಶ ಬಂದ ಮರುದಿನದ ಪತ್ರಿಕೆಯನ್ನು ನೀವೆಲ್ಲ ನೋಡಿರಬಹುದು. ಇಂಗ್ಲಿಷ್ ಪತ್ರಿಕೆಗಳಿಗೆ ಸೀಮಿತವಾಗಿದ್ದ ಆರಡಿ-ಮೂರಡಿ ಗಾತ್ರದ ತಲೆ ಬರಹ ಕನ್ನಡ ಮಾಧ್ಯಮ ಲೋಕವನ್ನೂ ಆವರಿಸಿದೆ! ಗ್ರಾಫಿಕ್ಸ್, ಪೋಟೊಗಳನ್ನು ತೂರಿಸಿ ಪುಟ ವಿನ್ಯಾಸದಲ್ಲಿ ಆಟ ಆಡುವುದು ಮಾಮೂಲಿಯಾಗಿದೆ. ಇದು ಉತ್ತಮ ಬೆಳವಣಿಗೆ ಎಂದು ಕೆಲವರು ಹೇಳಿದರೆ, ಸುದ್ದಿ ಪತ್ರಿಕೆಗಳು ಸುದ್ದಿಗೆ ಮಹತ್ವ ನೀಡಬೇಕು ಎಂದು ವಾದಿಸುವ ಮಂದಿಯೂ ಇದ್ದಾರೆ. ಆ ಚರ್ಚೆ ನಮಗೆ ಸಂಬಂಸಿದ್ದಲ್ಲ ಬಿಡಿ!
ಚುನಾವಣೆ ಫಲಿತಾಂಶದ ಮಾರನೇ ದಿನ ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲವು ಚೆಂದದ ಮುಖ ಪುಟ ವಿನ್ಯಾಸ ಕಂಡು ಬಂತು. ನನಗೆ ಅತ್ಯಂತ ಖುಷಿ ಕೊಟ್ಟಿದ್ದು ‘ದಿ ಟೆಲಿಗ್ರಾಫ್’ ಪತ್ರಿಕೆಯ ಮುಖ ಪುಟ. “HAND OF INDIA’ ಎಂಬ ತಲೆ ಬರಹದಡಿಯಲ್ಲಿನ ಆ ಮುಖ ಪುಟದ ಫೋಟೊವನ್ನು ಇಲ್ಲಿ ಹಾಕಿದ್ದೇನೆ. (HAND OVER INDIA! ಅನ್ನೋ ತಲೆಬರಹ ಕೊಟ್ಟಿದ್ದರೆ ಇನ್ನೂ ಸೊಗಸಾಗಿ ಇರುತ್ತಿತ್ತೇನೋ!!!) ಅದನ್ನು ಬಿಟ್ಟರೆ ಏಷ್ಯನ್ ಏಜ್ ಪತ್ರಿಕೆಯ ‘KING CONG’ ಎಂಬ ತಲೆ ಬರಹ ಕೂಡ ಸೊಗಸಾಗಿತ್ತು. ಕನ್ನಡ ಪತ್ರಿಕೆಗಳ ಪುಟ ವಿನ್ಯಾಸವೂ ಯಾವ ಇಂಗ್ಲಿಷ್ ಪತ್ರಿಕೆಗಿಂತ ಕಡಿಮೆಯಾಗೇನೂ ಇರಲಿಲ್ಲ…
ಪುಟ ವಿನ್ಯಾಸ ಎಂದರೆ ಅಡ್ಡ ಪಟ್ಟಿ, ಉದ್ದ ಪಟ್ಟಿಯನ್ನು ನೀಡಿ ಬಣ್ಣದಲ್ಲಿ ಆಟ ಆಡುವ ವಸ್ತುವಲ್ಲ. ವಿಷಯಕ್ಕೆ ತಕ್ಕಂತೆ ಮುಖಚಿತ್ರ ಇರಬೇಕು…ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ…
ಮುಖ ಪುಟ ವಿನ್ಯಾಸಕ್ಕಿಂತ ಪತ್ರಿಕೆಗಳಲ್ಲಿ ಬರುವ ಓಳನೋಟಕ್ಕೆ ಕಾದಿದ್ದೆ, ಟಿ.ವಿ. ಚಾನಲಗಳಲ್ಲಿ ಎಷ್ಟೆ ಲೈವ್ ತೋರಿಸಿದರೂ, ಕೆಲವೊಂದು ಸತ್ಯಗಳು ನೋಡುವುದಕ್ಕಿಂತ ಓದುವುದರಲ್ಲಿಯೆ ಆನಂದ ನೀಡುತ್ತವೆ.
ಇನ್ನು ಈ ಚಾನಲಗಳು ಒಂದೇ ದೃಷ್ಯವನ್ನು ಮತ್ತೆ ಮತ್ತೆ ತೋರಿಸಿ ಬೋರ್ ಹೊಡೆಸಿ ಬಿಡುತ್ತಾರೆ.
-ಶೆಟ್ಟರು