ತುಂಬಾ ಹಿಂದೇನಲ್ಲ, ಈಗೊಂದು ೮-೧೦ ವರ್ಷದ ಕೆಳಗೆ ನಮ್ಮೂರಿನಲ್ಲಿದದ್ದು ಒಂದೇ ಟಿ.ವಿ! ನಮ್ಮೂರಿನಲ್ಲಿ ಮಾತ್ರವಲ್ಲ, ನಮ್ಮ ಸುತ್ತ-ಮುತ್ತಲಿನ ಬಹುತೇಕ ಹಳ್ಳಿಗಳ ಕಥೆಯೂ ಹಾಗೇ ಇತ್ತು. ಊರಿಗೊಂದು ಟಿ.ವಿ, ಕೇರಿಗೊಂದು ಫೋನು, ನೂರಾರು ಮನೆಗಳಿಗೊಂದು ಕಾರು…
ಪ್ರತಿ ಭಾನುವಾರ ಬರುತ್ತಿದ್ದ ‘ಶ್ರೀ ಕೃಷ್ಣ’ ಮತ್ತು ‘ಜೈ ಹನುಮಾನ್’ ಧಾರಾವಾಹಿಗಳು ಆಗಿನ ಕಾಲದಲ್ಲಿ ಬಹು ಜನಪ್ರಿಯ. ಭಾನುವಾರ ಬೆಳಿಗ್ಗೆ ೯ ಗಂಟೆಯಾಯಿತೆಂದರೆ, ಅರ್ಧದಷ್ಟು ಊರು ಮೀನಾಕ್ಷಕ್ಕನ ಮನೆಯ ಟಿ.ವಿ ಮುಂದಿರುತ್ತಿತ್ತು. ಸೋಮವಾರದಿಂದ-ಶುಕ್ರವಾರದವರೆಗೆ ಸಂಜೆ ೪.೩೦ ಆಯಿತೆಂದರೆ ಊರಿನ ಹೆಂಗಸರಿಗೆಲ್ಲ ‘ಮಾಯಾಮೃಗ’ದ ಮೋಡಿ! ಭಾನುವಾರ ಸಂಜೆ ೪ ಗಂಟೆಗೆ ದೂರದರ್ಶನದ ಪರದೆ ಮೇಲೆ ಮೂಡಿ ಬರುತ್ತಿದ್ದ ಕನ್ನಡ ಚಲನಚಿತ್ರ ಪ್ರದರ್ಶನ ತಪ್ಪಿಸಿಕೊಂಡರೆ, ಏನ್ನನ್ನೋ ಕಳೆದುಕೊಂಡ ಭಾವ!
ಅಂದಹಾಗೆ, ಡಿಶ್ ಎಂಬುದು ಕೂಡ ನಮ್ಮೂರಿಗೆ ಕಾಲಿಟ್ಟಿದ್ದು ತೀರಾ ಇತ್ತೀಚೆಗೆ. ಆವತ್ತಿನ ದಿನಗಳಲ್ಲಿ ನಮಗೆ ಗೊತ್ತಿದದ್ದು ‘ಡಿಡಿ.೧’ ಎಂಬ ಕರ್ಮಠ ಸರಕಾರಿ ಚಾನೆಲ್ ಮಾತ್ರ!
ಅಂಗಡಿಯಲ್ಲೊಂದು ಸಾರ್ವಜನಿಕ ಫೋನ್. ಅದನ್ನು ಬಿಟ್ಟರೆ, ಖಂಡಿಕದ ಹೆಗಡೆಯವರ ಮನೆ, ಗೀಜಗಾರು ಅನಂತಣ್ಣನ ಮನೆ, ಗೋಳಗೋಡು ಸುಬ್ರಾಯರ ಮನೆ ಪೋನು…ಸರಿಯಾಗಿ ಲೆಕ್ಕ ಹಾಕಿದರೆ, ಇಡೀ ಸಾಗರ ತಾಲೂಕಿನಲ್ಲಿ ಒಟ್ಟು ೧೦೦ ಫೋನ್ಗಳು ಇರಿಲಿಲ್ಲವೇನೋ!
ಹೆಗಡೆಯವರ ಮನೆ ಕಾರನ್ನು ಕೈಯಿಂದ ಮುಟ್ಟುವುದು ಒತ್ತಟ್ಟಿಗಿರಲಿ, ದೂರದಿಂದ ನೋಡುವುದೆಂದರೆ ದೊಡ್ಡ ಸಂಭ್ರಮ! ಕಾರು ಇಟ್ಟುಕೊಂಡವ ಹತ್ತೂರಿನಲ್ಲೇ ಆಗರ್ಭ ಶ್ರೀಮಂತ. ಕಾರು ಎಂಬುದು ಅಡಿಕೆ ವ್ಯಾಪಾರದವರ, ನೂರಾರು ಎಕರೆ ಆಸ್ತಿ ಹೊಂದಿದ ಹೆಗಡೆ ಕುಟುಂಬದವರ ಸ್ವತ್ತು…ಶಿರವಂತೆ ಸೀಮೆಗೊಂದು, ಭೀಮನಕೋಣೆ ಕೇರಿಗೊಂದು, ತುಂಬೆ ವಠಾರಕ್ಕೊಂದು…ಹೀಗೆ ಬೆರಳೆಣಿಕೆಯಷ್ಟು ಕಾರುಗಳು ಮಾತ್ರ ನಮ್ಮ ತಾಲೂಕಿನಲ್ಲಿ ಬುರ್ಗುಡುತ್ತಿದ್ದವು.
ಈಗ ಕಾಲ ಬದಲಾಗಿದೆ. ಕೈಯಲ್ಲೊಂದು ರಿಮೋಟು, ನಿಮಿಷ ನಿಮಿಷಕ್ಕೂ ಬದಲಾಯಿಸಬಹುದಾದಷ್ಟು ಚಾನೆಲ್ಗಳು…ಪ್ರತಿ ಮನೆಯ ಪ್ರವೇಶದ್ವಾರದಲ್ಲಿ ಕಾಣ ಸಿಗುತ್ತದೆ. ಕಾರು ಇಟ್ಟುಕೊಂಡು ದರ್ಪದಿಂದ ಮೆರೆಯುತ್ತಿದ್ದ ಹೆಗಡೆಯವರ ಉತ್ಸಾಹ ಕುಗ್ಗಿಹೋಗಿದೆ. ಹೆಗಡೆಯವರ ಮನೆ ಕೆಲಸ ಮಾಡುತ್ತಿದ್ದ ಮಂಜನ ಮಗನೂ, ಇವತ್ತು ವೆಂಕಟಗಿರಿಯಪ್ಪ ಹೆಗಡೆಯವರ ಎದುರೇ ಕಾರು ಓಡಿಸುತ್ತಾನೆ!
ಟ್ರಿಣ್, ಟ್ರಿಣ್…ಮಕ್ಕಳ ಆಟಿಕೆ ವಸ್ತುವಿದ್ದಂತೆ. ಮನೆಗೆರಡು ಫೋನ್. ಜತೆಗೆ ಆಳಿಗೊಂದು ಮೊಬೈಲ್…
ಟಿ.ವಿ ನೋಡಲು ಹೋದ ನಮ್ಮನ್ನೆಲ್ಲ ಓಡಿಸುತ್ತಿದ್ದ ಮೀನಾಕ್ಷಕ್ಕನ ಎದುರು, ನಿಮ್ಮ ಮನೆ ಟಿವಿ ಒಂದೇ ಅಲ್ಲ ಅಂತಾ ಸಿಟ್ಟಿನಿಂದ ಕೂಗುತ್ತಿದ್ದದ್ದೇನೋ ನಿಜ. ಆದರೆ, ನಮ್ಮ ಮನೆಯಲ್ಲೂ ಒಂದು ಟಿ.ವಿ ಪೆಟ್ಟಿಗೆ ಪ್ರತಿಷ್ಠಾಪನೆಗೊಳ್ಳಬಹುದಾ? ನಾವು ಮುಂದೊಂದು ದಿನ ಬೈಕನ್ನಾದರೂ ಕೊಳ್ಳುವ ಮಟ್ಟಕ್ಕೆ ಬೆಳೆಯುತ್ತೇವಾ ಅಂತೆಲ್ಲ ದಿನಗಟ್ಟಲೇ ಕನಸು ಕಾಣುತ್ತಿದ್ದದಂತೂ ಸುಳ್ಳಲ್ಲ…ಅವೆಲ್ಲ ಈಗ ಬರಹದ ಸರಕುಗಳು ಹೊರತು, ಕನಸು ಕಾಣುವಷ್ಟು ದೊಡ್ಡ ವಸ್ತುಗಳಲ್ಲ ಅಲ್ವಾ?!
ಇವತ್ತಿನ ಪೇಪರ್’ನಲ್ಲಿ ನಿಮ್ಮ ಆರ್ಟಿಕಲ್ ಓದಿದೆ…ಚನ್ನಾಗಿದೆ…
ತಮ್ಮಾ, ನೀ ಹೇಳ್ತಾ ಇರದು ಈಗ 17-18 ವರ್ಷದ ಹಿಂದಿನ ಮಾತು, 8-10 ವರ್ಷದ ಹಿಂದಿನ ಮಾತು ಅಲ್ಲ. ಸರ್ಜಿ ಕ್ರಿಷ್ಣಣ್ಣನ ಮನಿಗೆ ಫೋನ್ ಬಂದೇ 12 ವರ್ಷ ಆತು. ಖಂದಿಕ ಊರಲ್ಲೇ 3 ಜೀಪ್ಗಳು 20 ವರ್ಷದಿಂದ ಇತ್ತು (ಹೆಗ್ಡೇರು, ರಾಮ್ ಭಟ್ರು , ಮರಿಯಪ್ಪಣ್ಣ). ಹೆಗ್ಡೇರ ದರ್ಪಕ್ಕೆನು ಕಡಿಮೆ ಆಗಲ್ಲೆ. ಎಲ್ಲಾ ೨ ಲಕ್ಷದ ಒಮ್ನಿ ಓದುಸ್ಥಾ ಇದ್ರೆ, ಅವ್ವು ೧೦ ಲಕ್ಷದ ಫೋರ್ಡ್ ಓಡುಸ್ಥ. ಆ ಟಿವಿ ಫೋನ್ ಅಸ್ತೆ ಸುಖ ಅಲ್ಲ. ಅದೆಲ್ಲ ಅದನ್ನ ತಗಂಡು ಸ್ವಲ್ಪ dina ಅನುಭವಿಸಿದ ಮೇಲೆ ಅರ್ಥ ಆಗತ್ತೆ.
ವಿನಾಯಕ ಕೋಡ್ಸರ ಅವರೆ…
ಚೆಂದವಿದೆ ಬರಹ. ಇಷ್ಟವಾಯ್ತು.
hmmm… nija.
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು…