‘೨೫೦ ಪದ ಮಿತಿಯ ಒಳಗೆ ಬರೆಯಿರಿ. ನಿಮ್ಮ ಬರಹ, ಒಂದು ಫುಲ್ಸ್ಕೇಲ್ ಹಾಳೆಯಷ್ಟಿರಲಿ. ಬರಹಗಳೆಲ್ಲ ಪುಟದ ಒಂದೇ ಮಗ್ಗುಲಿನಲ್ಲಿ ಇರಲಿ…’ ಕಳೆದ ೫೮ ವರ್ಷಗಳಿಂದಲೂ ಇಂತಹ ಸಾಲುಗಳನ್ನು ನಾವು ಪತ್ರಿಕೆಗಳಲ್ಲಿ ನೋಡುತ್ತಾ ಬಂದಿದ್ದೇವೆ. ಅಂತಹ ನೀತಿ-ನಿಯಮಾವಳಿಗಳನ್ನು ಬ್ಲಾಗ್ಲೋಕಕ್ಕೂ ಅಳವಡಿಸಿಕೊಳ್ಳುವ ಅಗತ್ಯವಿದೆಯಾ? ‘ಮನಸಿಗೆ ಬಂದಿದ್ದನ್ನೆಲ್ಲ ಗೀಚಿಕೊಳ್ಳಲು ‘ಬ್ಲಾಗ್’ ಎಂಬುದು ನಿಮ್ಮ ಪರ್ಸನಲ್ ಡೈರಿಯಾ?’ ಎಂದು ಕೇಳುವವರಿಗೆ ಉತ್ತರಿಸುವ ಅಗತ್ಯವಿದೆಯಾ? ಅಥವಾ ಬ್ಲಾಗಿಗರ ಒಕ್ಕೂಟ, ತನ್ನದೇ ಆದ ನೀತಿ-ನಿಯಮಾವಳಿಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆಯಾ…ಪ್ರಶ್ನೆಗಳ ಸರಮಾಲೆಯೇ ನನ್ನ ಮುಂದಿದೆ. ಕೇವಲ ನನ್ನ ಮುಂದೆ ಮಾತ್ರವಲ್ಲ, ನಿಮ್ಮ ಮುಂದೆ ಕೂಡ ಇದೆ!
ಸ್ವಲ್ಪ ಸಂಕೀರ್ಣವಾದ ವಿಚಾರವಿದು. ಬ್ಲಾಗ್ಗಳಿಗೊಂದು ನೀತಿ-ನಿಯಮ ಬೇಕು ಎಂದು ವಾದಿಸುವ ಮಂದಿಯಷ್ಟೇ, ಬೇಡ ಅನ್ನುವವರು ಇದ್ದಾರೆ! ‘ಬ್ಲಾಗ್ ಎಂಬುದು ಯಾರ ಅಪ್ಪನ ಮನೆಯ ಸ್ವತ್ತು ಅಲ್ಲ. ನಮ್ಮ ಸ್ವಂತದ್ದು. ನಾವೇನು ಬೇಕಾದರೂ ಬರೆದುಕೊಳ್ಳುತ್ತೀವಿ. ಇಷ್ಟವಿದ್ದರೆ ಓದಿ, ಇಲ್ಲವಾದರೆ ಬೇಡ’ ಎಂಬ ಮನೋಧೋರಣೆ ಒಂದಷ್ಟು ಮಂದಿಯದಾದರೆ, ಬ್ಲಾಗಿಗರಿಗೆ ಸಾಮಾಜಿಕ ಕಳಕಳಿ ಬೇಕು. ವಿವೇಕ ಇರಬೇಕು ಎಂದು ವಾದಿಸುವವರಿಗೂ ಕೊರತೆಯೇನಿಲ್ಲ. ‘ರಾಷ್ಟ್ರದ ವಿಚಾರಕ್ಕೆ ನಾವೇಲ್ಲ ಸ್ಪಂದಿಸಲೇಬೇಕು. ಸಂಸ್ಕೃತಿ ಕಳಕಳಿ ಎಲ್ಲರಿಗೂ ಅಗತ್ಯ’ ಎಂದು ನನ್ನಂತೆ ಮೊಂಡು ಹಠ ಮಾಡುವವರಿಗೂ ಇಲ್ಲಿ ಜಾಗವಿದೆ. ಪ್ರಗತಿಯ ಹಾದಿಯಲ್ಲಿ ಸಾಗಬೇಕು. ಸಂಸ್ಕೃತಿ ಚೌಕಟ್ಟನ್ನು ದಾಟಿ ಬರಬೇಕು ಎನ್ನುವವರ ವೇದಿಕೆಯೂ ಇಲ್ಲಿದೆ. ಬಕೆಟ್ ಹಿಡಿಯುವವರಿಗೂ ಸ್ಥಳವಿದೆ. ಬಕೆಟ್ ಹಿಡಿಯುವವರನ್ನು ಜಾಡಿಸುವವರಿಗೂ ಜಾಗವಿದೆ! ಇಂತಹದ್ದೊಂದು ವೇದಿಕೆಗೆ ‘ಹೀಗೇ ಇರಬೇಕು’ ಅಂತಾ ಚೌಕಟ್ಟು ಹಾಕಲು ಸಾಧ್ಯವಿದೆಯಾ?
ಅರೆ, ವಿಷಯ ಮತ್ತಷ್ಟು ಗಂಭೀರವಾಗುತ್ತಾ ಹೋಗುತ್ತಿದೆ. ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಉದ್ಭವವಾಗುತ್ತಿದೆ. ಉತ್ತರ ಎಲ್ಲಿದೆ?
ಬ್ಲಾಗ್ ಎಂಬ ಲೋಕವನ್ನು ಒತ್ತಟ್ಟಿಗಿಟ್ಟು, ಸ್ವಲ್ಪ ಹೊತ್ತು ಸಾಹಿತ್ಯ, ಪತ್ರಿಕಾ ಪ್ರಪಂಚಕ್ಕೆ ಒಮ್ಮೆ ಹೋಗೋಣ. ಸಾಹಿತ್ಯ ಲೋಕಕ್ಕೆ ನೀತಿ ನಿಯಮ ಇದೆ…ಹಾಗಂತ ಅಂದುಕೊಂಡರೆ ತಪ್ಪಾಗಬಹುದು. ವಾತ್ಸಾಯನನ ಕಾಮಸೂತ್ರದಿಂದ, ವಾದಿರಾಜರ ಕೃತಿಗಳವರೆಗೂ ನಮ್ಮ ಸಾಹಿತ್ಯ ಲೋಕದ ವ್ಯಾಪ್ತಿಯಿದೆ. ‘ವಿಕ್ರಮ’ದಿಂದ ‘ಪೋಲಿಸ್ ನ್ಯೂಸ್’ವರೆಗೂ ಪತ್ರಿಕಾ ಪ್ರಪಂಚ ಹಬ್ಬಿದೆ. ‘ವಿಕ್ರಮ’ದ ಪ್ರಸರಣಾ ಸಂಖ್ಯೆಗಿಂತ ‘ಪೋಲಿಸ್ ನ್ಯೂಸ್’ನ ಪ್ರಸರಣಾ ಸಂಖ್ಯೆ ಅಕವಾಗಿದೆ ಎಂಬುದು ನಂತರದ ಮಾತು ಬಿಡಿ! ಕೌಂಡಿನ್ಯ, ಬಿ.ವಿ ಅನಂತರಾಮು…ಕುವೆಂಪು, ಮಾಸ್ತಿ, ಭೈರಪ್ಪ….ಲೇಖಕರ ಬಳಗದಲ್ಲೂ ಅದೇ ರೀತಿಯ ವಾತಾವರಣ.
ಹೀಗೀರುವಾಗ ಬ್ಲಾಗ್ಗಳಿಗೊಂದು ಸಹಿಂತೆ ಬೇಕಾ? ‘ಮಾಧ್ಯಮಕ್ಕೊಂದು ಸಂಹಿತೆ ಬೇಕು’ ಅಂತಾ ಹೇಳಹೊರಟ ಗೃಹಮಂತ್ರಿಗಳ ಮಾತನ್ನೇ ಕೇಳುವವರಿಲ್ಲ. ಅಂತಹದ್ದರಲ್ಲಿ , ಬ್ಲಾಗ್ಗೆ ಸಂಹಿತೆ ಬೇಕು ಎಂಬ ನಮ್ಮ ಮಾತನ್ನು ಯಾರು ಕೇಳಿಯಾರು ಹೇಳಿ?! ಹಾಗಂತ, ನಾನು ಹೇಳುವುದನ್ನು, ಹೇಳದೇ ಇರಲು ಸಾಧ್ಯವಿದೆಯಾ? ಅಥವಾ, ನೀವು ಹಾಗೆಲ್ಲ ಹೇಳಬೇಡಿ ಎಂದು ನನಗೆ ಹೇಳುವ ಅಕಾರ ಬೇರೆ ಯಾರಿಗಾದರೂ ಇದೆಯಾ?!
ಅಯ್ಯೋ ಮತ್ತದೇ ದ್ವಂದ, ಮತ್ತದೇ ರಗಳೆ…
ಗಂಭೀರವಾಗಿ ಹೊರಟ ಬರಹದ ಲಹರಿ ಹಾಸ್ಯದತ್ತ ಸಾಗುತ್ತಿದೆ! ಹೌದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ ಅನ್ನಿಸಿದೆ ನನಗೆ. ಹಾಗಾಗಿ, ಸ್ವಲ್ಪ ಹಾಸ್ಯ ಮಾಡಿಬಿಡೋಣ ಅಂತಾ! ನೀವ್ಯಾಕೆ ಈ ವಿಚಾರವನ್ನು ಗಂಭೀರವಾಗಿ ಬರೆಯಲಿಲ್ಲ ಅಂತಾ ಕೇಳುವ ಹಾಗಿಲ್ಲ . ಅಥವಾ ಯಾಕೆ ಹಾಸ್ಯವಾಗಿ ಬರೆಯುತ್ತಿದ್ದೀರಾ, ನಿಮಗೆ ಸಾಮಾಜಿಕ ಕಳಕಳಿ ಇಲ್ಲವಾ? ಅಂತಾ ಪ್ರಶ್ನಿಸುವ ಹಾಗೂ ಇಲ್ಲ.
ಹಾಗೂ ಇಲ್ಲ ಹೀಗೂ ಇಲ್ಲ…ಎಂತದು ಮಾರಾಯ್ರೆ ನಿಮ್ಮ ಚೊರೆ. ನಮಗೆ ಮಾಡ್ಲಿಕ್ಕೆ ಬೇರೆ ಕೆಲಸ ಉಂಟು ಮಾರಾಯ್ರೆ…ಹಾಗಂತ ಈ ಬರಹದ ಕುರಿತ ನಿಮ್ಮ ಸಿಟ್ಟನ್ನು ನೀವಿಲ್ಲಿ ಬಹಿರಂಗವಾಗಿ ಪ್ರಕಟಿಸುವಂತಿಲ್ಲ ನೆನಪಿರಲಿ!
“ನೀವು ಒಂದಷ್ಟು ಬ್ಲಾಗ್ಗಳನ್ನು ಮಾತ್ರ ಓದುತ್ತೀರಿ. ಒಂದಷ್ಟು ಬ್ಲಾಗ್ಗೆ ಮಾತ್ರ ಕಮ್ಮೆಂಟ್ ಮಾಡುತ್ತೀರಿ…ಹಾಗಂತ ನೀವು ನಮ್ಮ ಬ್ಲಾಗ್ಗೆ ಬರಲೇ ಬೇಕು ಅಂತೇನಿಲ್ಲ. ಆದ್ರೂ ಬೇರೆ ಬ್ಲಾಗ್ಗಳಿವೆ ಎಂಬುದು ನಿಮ್ಮ ಗಮನಕ್ಕೆ ಇರಲಿ ಅಂತಾ ಹೆಳಿದೆ…
ಹೌದು, ನೀವು ಕಡೆಯ ಒಂದು ಸಾಲನ್ನು ಸೇರಿಸಲೇ ಬೇಕು. ನನ್ನ ಬ್ಲಾಗ್ ಅನ್ನು ಬಂದು ನೋಡಲಿ ಎಂಬ ಭಾವನೆ ನಿಮ್ಮಲ್ಲಿ ಇದ್ದರೂ ಕೂಡ, ಅದನ್ನು ಮುಚ್ಚಿಡುವ ಪ್ರಯತ್ನ ಮಾಡಲೇ ಬೇಕು!!! ‘ನಾನೇನು ಬನ್ನಿ ಎಂದು ಯಾರನ್ನು ಅಕ್ಷತೆ ಕೊಟ್ಟು ಕರೆಯಲಿಲ್ಲ’ ಎಂಬ ಸಾಲನ್ನು ಓದುಗರರಿಗೆ ಆಗಾಗ ನೆನಪು ಮಾಡಿಕೊಡುತ್ತಿರಬೇಕು…ಕ್ಷಮಿಸಿ..ನೆನಪು ಮಾಡಿಕೊಟ್ಟಂತೆ ನಟಿಸಬೇಕು!
“ಕಮ್ಮೆಂಟ್ ಹೆಚ್ಚಾಗಬೇಕು ಅಂದರೆ, ಅನಾಮಧೇಯ ಹೆಸರಲ್ಲಿ ನೀವೇ ಒಂದಷ್ಟು ಕಮ್ಮೆಂಟ್ ಹಾಕಿಕೊಳ್ಳಬೇಕು. ಹಿಟ್ಸ್ ಹೆಚ್ಚಾಗಬೇಕು ಅಂದರೆ, ಅವಶ್ಯಕತೆ ಇರಲಿ, ಇರದಿರಲಿ ಎಲ್ಲ ಬ್ಲಾಗ್ಗಳಿಗೂ ಹೋಗಿ ನೀವು ಕಮ್ಮೆಂಟ್ ಜಡಿಯಬೇಕು! ಲೇಖನ ಚೆನ್ನಾಗಿರಲಿ, ಇರದೇ ಇರಲಿ…ನಿಮ್ಮ ಲೇಖನ ಚೆನ್ನಾಗಿದೆ ಅಂತಾ ಹೊಗಳಲೇ ಬೇಕು…ಯಾಕೆಂದರೆ, ಅವರು ನಮ್ಮ ಬ್ಲಾಗಿಗೆ ಬಂದು ಲೇಖನ ಚೆನ್ನಾಗಿದೆ ಅನ್ನಬೇಕಲ್ಲ! ಲೇಖನದ ಪ್ರತಿಕ್ರಿಯೆಗಳ ಸಂಖ್ಯೆ ೫೦, ೧೦೦ರ ಗಡಿ ದಾಟಬೇಕಲ್ಲ!!! ಇದು ನಮ್ಮ ಬ್ಲಾಗ್ ಲೋಕದ ಸ್ಥಿತಿ. ಅದಕ್ಕೆ ಕಡಿವಾಣ ಹಾಕಲೇ ಬೇಕು…” ಅಂತಾ ಗೆಳೆಯರ್ಯಾರೋ ಹೇಳುತ್ತಾರೆ. ಅದನ್ನು ಕೇಳಿ ಬಂದ ನಾನು, ಹೌದೆಲ್ಲ ಅಂತಾ, ಅವರ ಕೊರಗನ್ನೆಲ್ಲ ಯಥಾವತ್ತಾಗಿ ಬರೆದು ಬಿಡುತ್ತೇನೆ! ಹೇಳಿದವರು ಮಾತ್ರ, ‘ಅಯ್ಯೋ ನಮಗ್ಯಾಕೆ ರಿಸ್ಕು. ವಿವಾದ…’ ಅಂತಾ ನನ್ನ ಬರಹಕ್ಕೆ ಕಮ್ಮೆಂಟೂ ಮಾಡದೇ ನುಣುಚಿಕೊಂಡು ಬಿಡುತ್ತಾರೆ! ನಾನು ನಿಷ್ಠುರವಾದಿಯಾಗುತ್ತೇನೆ, ಎಲ್ಲರ ಕೆಂಗಣ್ಣಿಗೆ ಬೀಳುತ್ತೇನೆ…ಅಯ್ಯೋಯ್ಯೋ ನಾನು ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದೀನಿ ಅಂತಾ ಅನ್ನಿಸುತ್ತಿದೆ. ನನಗೆ ವಾಸ್ತವ ಯಾವುದು, ವಿವಾದ ಯಾವುದು ಅಂತಾ ಗೊತ್ತೇ ಆಗುವುದಿಲ್ಲ. ಕ್ಷಮೆ ಇರಲಿ ಪ್ಲೀಸ್…!!!
ಮತ್ತದೇ ಪ್ರಶ್ನೆ, ಇಂತಹ ಬ್ಲಾಗ್ಲೋಕಕ್ಕೆ ನೀತಿ-ನಿಯಮದ ಅಗತ್ಯವಿದೆಯಾ?!
ನಾನು ಬೇಕು ಅಂದರೆ, ಸಂದೀಪ್ ಕಾಮತ್ ಬೇಡ ಅನ್ನುತ್ತಾರೆ. ಸಂದೀಪ್ ಬೇಡ ಅಂದರೆ, ನಾನು ಬೇಕು ಅನ್ನುತ್ತೇನೆ! ನಮ್ಮಿಬ್ಬರ ನಡುವಣ ವಾದದಿಂದ ಸೂರ್ತಿ ಪಡೆದ ಮತ್ತೊಂದಷ್ಟು ಜನ ಈ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಇನ್ನು, ಕೆಲವರು ಈ ಚರ್ಚೆಯ ಕುರಿತಾಗಿ ತಮ್ಮ ಬ್ಲಾಗಿನಲ್ಲಿ ಗೀಚಿಕೊಳ್ಳುತ್ತಾರೆ.
ಸೆಕ್ಷನ್ ೧೪೭!
ಉದ್ವಿಗ್ನ, ಬ್ಲಾಗ್ ಲೋಕ ಅಕ್ಷರಶಃ ಉದ್ವಿಗ್ನ. ಆರೋಪಿ ಸ್ಥಾನದಲ್ಲಿ ಕೋಡ್ಸರ ಹಾಗೂ ಸಂದೀಪ್ ಕಾಮತ್!!! ವಿಕಾಸ್ ಹೆಗಡೆ ಅರೆಸ್ಟ್!!!
ಅಯ್ಯೋ ನೀವ್ಯಾಕೆ ಒಂದಷ್ಟು ಜನರ ಹೆಸರನ್ನೇ ಯಾವಾಗ್ಲು ಬಳಸುತ್ತೀರಾ? ನಿಮಗೆ ಬೇರೆಯವರ ಹೆಸರು ಗೊತ್ತಿಲ್ಲವಾ? ಮತ್ತೆ ತಕರಾರು! ಅದನ್ನು ಸರಿದೂಗಿಸಿಕೊಳ್ಳಲು ನಾನು ಹೆಣಗಾಡಬೇಕು. ನಾನ್ಯಾಕೆ ಅವರ ಹೆಸರನ್ನೇ ಬಳಸಿಕೊಂಡೆ ಎಂಬುದನ್ನು ಆಲೋಚಿಸಬೇಕು! ಆಲೋಚನೆ ಇಲ್ಲದೇ ಬಳಸಿದ ಹೆಸರುಗಳು ಮತ್ತೊಂದು ಆಲೋಚನೆಯನ್ನು ಹುಟ್ಟು ಹಾಕಿಕೊಡುತ್ತದೆ. ಪ್ರಶ್ನಿಸಿದವನ ಮೇಲೆ ಪುಟ್ಟದೊಂದು ಅನುಮಾನ ಶುರುವಾಗುತ್ತದೆ…
‘ಬ್ಲಾಗ್ ಲೋಕ ತಣ್ಣಗಾಗುತ್ತದೆ. ತಣ್ಣಗಾಗಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ…’ಹಾಗಂತ ಲೇಖನ ಬರೆಯಲು ಮನಸು ಬರುತ್ತದೆ. ಗಂಭೀರವಾಗಿ ಬರೆಯಬೇಕೋ, ಹಾಸ್ಯವಾಗಿ ಬರೆಯಬೇಕೋ? ಹಾಸ್ಯವಾಗಿ ಬರೆದರೂ ಕಷ್ಟ, ಗಂಭೀರವಾಗಿ ಬರೆದರೂ ಕಷ್ಟ. ‘ಇದು ಶುದ್ಧಾತೀಶುದ್ಧ ಹಾಸ್ಯ ಬರಹ ಸ್ವಾಮಿ’ ಅಂತಾ ಹೇಳಿಕೊಳ್ಳಬೇಕಾದ ಪರಿಸ್ಥಿತಿ! ಬರೆಯುವುದೇ ಬೇಡ. ಇಲ್ಲಿ ಅಭಿವ್ಯಕ್ತಿ ಸ್ವತಂತ್ರ ಕಸಿದುಕೊಂಡಿದ್ದಾರೆ…“ಅಲ್ಲ ಬ್ಲಾಗ್ನಲ್ಲಿ ಬರೆದು ನಮಗೆ ಆಗಬೇಕಾದ್ದಾದರೂ ಏನು? ದುಡ್ಡು ಸಿಗುವುದಿಲ್ಲ, ಪತ್ರಿಕೆಗಳ ಹಾಗೆ ಲಕ್ಷಾಂತರ ಓದುಗರಂತೂ ಇಲ್ಲವೇ ಇಲ್ಲ! ಅಂದಹಾಗೆ, ಮುಖ್ಯವಾಹಿನಿಯಲ್ಲಿ ಬರೆಯಿರಿ ಅಂತಾ ಹೇಳಿದರೂ, ಕೆಲವೊಮ್ಮೆ ಬರೆಯಲು ಮೂಡು ಬರುವುದಿಲ್ಲ. ನಮ್ಮ ಮೂಡಿಗೆ ನಿಲುಕುವ ಬರಹಗಳು ಪ್ರಕಟಣೆಗೆ ಯೋಗ್ಯವಾಗಿರುವುದಿಲ್ಲ! ಧಾರವಾಹಿಗೆ ಕಥೆ ಬರೆದುಕೊಡು ಅಂತಾ ಗೆಳೆಯರು ಕೇಳಿದರೂ, ಅಯ್ಯೋ ನನಗೆ ಸಿರಿಯಲ್ಗೆ ಬರೆಯುವಷ್ಟು ತಾಳ್ಮೆಯಿಲ್ಲ ಅಂತಾ ತಪ್ಪಿಸಿಕೊಳ್ಳುತ್ತೇನೆ…”ಹಾಗಂದುಕೊಳ್ಳುವ ಹೊತ್ತಿಗೆ, ಅನ್ನಿಸಿದ್ದನ್ನೆಲ್ಲ ಸೇರಿಸಿ ಮತ್ತೊಂದು ಬರಹವನ್ನು ಬ್ಲಾಗ್ಗೆ ಹಾಕಿರುತ್ತೇನೆ! ಯಾಕೆಂದರೆ ಇದು ನನ್ನ ಮುಕ್ತ ತಾಣ. ಹಾಗೆ ಬರೆಯಬೇಕು, ಹೀಗೆ ಬರೆಯಬೇಕು ಅಂತಾ ಇಲ್ಲಿ ಯಾರು ಹೇಳುವವರು ಇಲ್ಲ. ನಿರ್ದೇಶಕನಿಗೆ, ಕ್ಯಾಮರಕ್ಕೆ ತಕ್ಕಂತ ಕಥೆ ಇಲ್ಲಿ ಬೇಡ. ಥಳಕು ಬಳುಕಿನ ವೈಯ್ಯಾರಿಯರನ್ನು ಅನಾವಶ್ಯಕವಾಗಿ ತಂದು ಕುಣಿಸಿ, ಟಿಆರ್ಪಿ ಹೆಚ್ಚಿಸಿಕೊಳ್ಳುವ ಅವಶ್ಯಕತೆಯಂತೂ ಖಂಡಿತಾ ಇಲ್ಲ!
ಅಯ್ಯೋ ಚರ್ಚೆ ಹಾದಿ ತಪ್ಪಿಹೋಗಿದೆ…ಅಲ್ಲಲ್ಲ ಬರಹದ ಟ್ರ್ಯಾಕ್ ತಪ್ಪಿದೆ. ನೀತಿ ಸಂಹಿತೆಯ ವಿಷಯ ಮರೆತೇ ಹೋಗಿದೆ. ನಗಿಸುವ ಬರದಲ್ಲಿ ವೈಚಾರಿಕತನವೇ ಇಲ್ಲದಂತಾಗಿದೆ! ಅಂದಹಾಗೆ ಇದೂ ಕೂಡ ಹಾಸ್ಯ ಬರಹ ಸ್ವಾಮಿ…ಅಂತಾ ಹೇಳಬೇಕಾ? ಹೇಳದಿದ್ದರೆ, ಕೆಲವರಿಗೆ ಮತ್ತೆ ನನ್ನ ಕುರಿತು ಅನುಮಾನ ಶುರುವಾಗಬಹುದೆಂಬ ಭಯ!
ಕಡೆಯ ಪ್ರಶ್ನೆ ಏನೆಂದರೆ, ಬ್ಲಾಗ್ಗೊಂದು ನೀತಿ ಸಂಹಿತೆ ಬೇಕಾ?!
ನಿಮ್ಮ ಪ್ರತಿಕ್ರಿಯೆಗಳು ಖಂಡಿತಾ ಮುಖ್ಯ…!!! ಹಾಗಂತ, ನಾನೇನು ಪ್ರತಿಕ್ರಿಯೆಗೋಸ್ಕರ ಬರೆಯುವವ ಅಂದುಕೊಳ್ಳಬೇಡಿ!!!
ಸದ್ಯದಲ್ಲೇ ನೀವು ಕೊಲೆಯಾಗಿ ಹೋಗೋ ಎಲ್ಲಾ ಲಕ್ಷಣಗಳೂ ಕಾಣಿಸ್ತಾ ಇವೆ. ಈ ಬಗ್ಗೆ ಸುದ್ದಿ ಬ್ಲಾಗ್ ಲೋಕದಲ್ಲಿ ಹರಿದಾಡ್ತಾ ಇದೆ ! 🙂
ಈ ಸಲ ನನ್ ಹೆಸರು ಬಳಸದೇ ಇದ್ದಿದ್ದಕ್ಕೆ ಥ್ಯಾಂಕ್ಸ್!
Thumba channagide…starting to ending odabeku antha ansuthe …thumba kushi yaguthe odutha eddare….:)
ವಿಕಾಸ್
ಯಾಕೋ ತುಂಬಾ ಭಯ ಆಗ್ತಾ ಇದೆ…!!
ಸುಶ್,
ನಿಮ್ಮ ಹೆಸರು ಬಳಸಿಕೊಂಡರೆ ಅನ್ಯಾಯವಾಗಿ ನನಗೊಂದು ಕಮ್ಮೆಂಟ್ ನಷ್ಟ ಆಗತ್ತೆ ಅನ್ನೋದು ಖಾತ್ರಿಯಾಗಿದೆ. ಹಾಗಾಗಿ ಉದ್ದೇಶಪೂರ್ವಕವಾಗಿ ಈ ಸಲ ನಿಮ್ಮ ಹೆಸರು ಕೈಬಿಟ್ಟಿದ್ದೇನೆ!!!
ರಾಜೇಶ್
ಥ್ಯಾಂಕ್ಸ್…
ಬರಹ ತುಂಬ ನಗು ತರಿಸಿಬಿಡ್ತು ಸಾರ್.ನಿಜಕ್ಕೂ ಚಂದ ಬರ್ದಿರೀ….!
-ನಾಗು,ತಳವಾರ್.
ನೀವು ಬರೆದ ಈ ಬರಹ ನೀತಿ ಸಂಹಿತೆಯ ಉಲ್ಲಂಘನೆಯಾದ ಕಾರಣ ನಿಮ್ಮನ್ನು ಬಂಧಿಸಲು ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ…:)
ಕೊಲೆ ಗಿಲೆ ವಿಷ್ಯ ನಂಗೊತ್ತಿಲ್ಲ… ವಿಕಾಸ್ ಜೊತೆಗೆ ಸೆಟಲ್ ಮಾಡ್ಕೊಳ್ಳಿ 🙂
ಎಲ್ಲ ತರಹದ ಬ್ಲಾಗಿಗರು ಬೇಕು..ಆದ್ರೆ ಎಲ್ಲವೂ ‘ಲಿಮಿಟ್’ ನಲ್ಲಿರಬೇಕು..ಹೇಗೆ ಎ೦ಬುದು ಗೊತ್ತಿಲ್ಲ..ಕಾಲವೇ ಹೇಳಬೇಕು..
ಸರಿ, ಈಗ ವಿಷ್ಯಕ್ಕೆ ಬರೋದಾದ್ರೆ, ಈ ನೀತಿ ಸಂಹಿತೆಗಳೆಲ್ಲಾ ವರ್ಕೌಟ್ ಆಗಲ್ಲ. ಬ್ಲಾಗ್ ಗಳ ಸಂಖ್ಯೆ ಕಡಿಮೆ ಇದ್ದಾಗ ಹೀಗೆ ಹಾಗೆ ಅಂತ ಮಿತಿಯಲ್ಲಿ ಇದ್ವಿ. ಈಗ ಸಿಕ್ಕಾಪಟ್ಟೆ ಬ್ಲಾಗುಗಳಾಗಿವೆ. ಯಾರಿಗೂ ಹೀಗೆ ಬರೀರಿ, ಇಷ್ಟೆ ಬರೀರಿ ಅಂತ ಹೇಳಕ್ಕೂ ಆಗಲ್ಲ, ಹೇಳಿದರೆ ಕೇಳುವುದಕ್ಕೂ ಯಾರೂ ಇಲ್ಲ. ಸಂಖ್ಯೆ ಜಾಸ್ತಿ ಆಗುತ್ತಾ ಹೋದಂಗೆ ಎಲ್ಲಾ ರೀತಿಯವೂ ಶುರು ಆಗ್ತಾ ಹೋಗತ್ತೆ. ಇಂಗ್ಲೀಷ್ ಬ್ಲಾಗ್ ಗಳನ್ನೇ ತಗೋಳ್ಳಿ, ಅಲ್ಲಿ ಸೆಕ್ಸ್ ಇಂದ ಹಿಡಿದು, ಸೆನ್ಸೆಕ್ಸ್ ವರೆಗೆ ಎಲ್ಲಾ ರೀತಿಯ ಬ್ಲಾಗ್ ಗಳೂ ಇವೆ. ಆದ್ದರಿಂದ ಅವರವರಿಷ್ಟ ಅಂತ ಬಿಟ್ಬಿಡೋದು ಒಳ್ಳೇದು. ಬ್ಲಾಗ್ ಬರೆಯುವವರು self controlನಲ್ಲಿ ಇದ್ದರೆ ಒಳ್ಳೆಯದು.
ನೋಡ್ತಾ ಇರಿ ಕೋಡ್ಸರ ಸಧ್ಯವೇ ಸರಕಾರ್ ಬ್ಲಾಗ್ ಗಳಿಗೂ ನೀತಿ ಸಂಹಿತೆ ಜಾರಿ ಮಾಡುತ್ತೆ.
ರೀ,
ಆಗೋ ಅಂಥಾ ಮಾತಾಡ್ರೀ!
ಆಕಾಶ ನೋಡೋಕೆ ನೂಕುನುಗ್ಗುಲೇ?
ಅಥವಾ ಹೊಳೇ ನೀರಿಗೆ ಡೊಣೆನಾಯಕನ ಅಪ್ಪಣೇನೇ?
ನನಗಿಷ್ಟವಾಗದೇ ಇದ್ದರೆ ನಾನು ಓದಲ್ಲ. ಅದೇ ಸ್ವತಂತ್ರ ಎಲ್ರಿಗೂ ಇರತ್ತೆ ಅಂತ ನಂಬೋವ್ನು ನಾನು.
ಅಂದ್ಹಾಗೆ, ಇದು ಕಾಮೆಂಟ್ ಬರ್ಲಿ, ಹಿಟ್ಸ್ ಬರ್ಲಿ ಅಂತ ಹಾಕ್ತಾ ಇಲ್ರೀ ಅನ್ನೋದ್ನ ಮೊದ್ಲೇ ಹೇಳ್ಬಿಡ್ತೀನಿ…
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು…
ಸ್ವಾತಂತ್ರ್ಯ ಅನ್ನೋದು ಸ್ವೇಚ್ಚಾಚಾರ ಆಗಬಾರದು ಅಂತಾದರೆ ಅದಕ್ಕೊಂದು ನೀತಿ ಸಂಹಿತೆ ಅಗತ್ಯ ಎನ್ನುವವ ನಾನು. ಇನ್ನು ಅನಿವಾರ್ಯ ಅಂದಾಗ ಮಾತ್ರ ಪಾಲಿಸುವ ಚಾಳಿ ಮನುಷ್ಯರದ್ದು! ಹಾಗಾಗಿ ಸಂಹಿತೆಯನ್ನು ಇತರರೆ ವಿದಿಸಬೇಕು ಹೊರತೂ, ನೀವೆ ವಿದಿಸಿಕೊಳ್ಳಿ ಅಂದರೆ, ಅದು ಖಂಡಿತಾ ಸಾಧ್ಯವಾಗದ ಮಾತು! ಹಾಗಾಗಿ ನೀತಿ ಸಂಹಿತೆ ಅಗತ್ಯವಾದರೂ, ಪತ್ರಿಕೆ, ಅಂತರ್ಜಾಲ…ಇವುಗಳಿಗೆಲ್ಲ ನೀತಿ ಸಂಹಿತೆ ವಿದಿಸಲು ವ್ಯವಸ್ಥೆಗೆ ಸಾಧ್ಯವಿಲ್ಲ. ಹೀಗಾಗಿ ಪರಿಪೂರ್ಣ ಹಾಸ್ಯವನ್ನಾಗಿಯೇ ಬರೆದಿದ್ದೇನೆ ಈ ಬರಹವನ್ನು!
ಇದು ಸಂಪೂರ್ಣವಾಗಿ ಗಂಭೀರ ಹಾಸ್ಯ..! 🙂