ಸುಶ್ರುತನ ಸೂತ್ರ ತಪ್ಪಿದೆ, ವಿಕಾಸ್ ಎರಡೆಕ್ರೆ ಹೊಲದ ನಡುವೆ ಬಾವಿ ತೊಡಿಕೊಂಡು ಹಾರಲು ಸಜ್ಜಾಗಿದ್ದಾರೆ, ಶ್ರೀನಿದಿ ಸದಾ ಸೋಮಾರಿ ಎಂಬುದನ್ನು ಹೊಸತಾಗಿ ಹೇಳಬೇಕಿಲ್ಲ, ಶರ್ಮರಿಗೆ ಬಿಎಸ್ಎನ್ಎಲ್ ಪ್ರಾಬ್ಲಂ, ಕೋಡ್ಸರನಿಗೆ ವಿವಾದ ಹುಟ್ಟುಹಾಕಲು ಹೊಸ ವಿಷಯ ಸಿಕ್ಕಂತಿಲ್ಲ, ಚೇತನಕ್ಕ ಊರಿಂದ ವಾಪಸ್ ಬಂದಂತಿಲ್ಲ, ಸುಪ್ರೀತ್ಗೆ ಎಕ್ಸಾಂ ಬ್ಯೂಸಿ…ಒಟ್ಟಲ್ಲಿ ಎಲ್ಲ ಬ್ಲಾಗಿಗರು ಶಾನೇ ಬ್ಯೂಸಿಯಾಗಿದ್ದಾರೆ, ಬ್ಲಾಗ್ ಲೋಕದ ಕ್ರೇಜು ಕಳೆದುಹೋಗಿದೆ ಅಂದುಕೊಳ್ಳುವ ಹೊತ್ತಿಗೆ….ಮೇ ಫ್ಲವರ್, ರವಿ ಹೆಗಡೆ ಜೊತೆ ಸೇರಿ ಹೊಸದೊಂದು ಆಪರೇಷನ್ ಆರಂಭಿಸಿದೆ!
ನಾವು ಪ್ರೈಮರಿ ಶಾಲೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಹೋಗುತ್ತಿದ್ದೆವು. ಸಾಗರದ ನೆಹರೂ ಮೈದಾನದಲ್ಲಿ ಓಡಿದವರಿಗೆಲ್ಲ ಗ್ಲೂಕೋಸ್ ಕೊಡುತ್ತಿದ್ದರು. ಓಡಿದರೆ ಗ್ಲೂಕೋಸು ಪುಡಿ ಸಿಗತ್ತೆ ಅನ್ನುವ ಕಾರಣಕ್ಕಾಗಿಯೇ ನಾವೆಲ್ಲ ರನ್ನಿಂಗ್ ರೇಸ್ನಲ್ಲಿ ಭಾಗವಹಿಸುತ್ತಿದ್ದೆವು! ಸುಸ್ತಾಗದಿರಲಿ, ಚೈತನ್ಯ ಬರಲಿ ಅಂತಾ ಗ್ಲೂಕೋಸು ಪುಡಿ ಕೊಡುತ್ತಿದದ್ದು ಅನ್ನುವುದು ಅರ್ಥವಾಗಲು ಬಹಳ ವರ್ಷಗಳೇ ಬೇಕಾಯಿತು ಬಿಡಿ! ಮೇ ಫ್ಲವರ್ ಚಟುವಟಿಕೆ ನೋಡಿದಾಗ ಆ ದಿನಗಳು ಮತ್ತ್ಯಾಕೋ ನೆನಪಾಯಿತು!
ಬ್ಲಾಗ್ ಲೋಕ ಇವತ್ತು ಇಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಅಂತಾದರೆ, ಅದರ ಹಿಂದೆ ಅವದಿ ಬಳಗದ, ಮೇಫ್ಲವರ್ ಮಿಡಿಯಾ ಹೌಸ್ನ ಕೈವಾಡ ಖಂಡಿತವಾಗಿಯೂ ಇದೆ. ಜಿ.ಎನ್ ಮೋಹನ್ ಎಂಡ್ ಕಂಪನಿ, ಆಗಾಗ ಏನೇನೋ ಪ್ರಯೋಗ ಮಾಡುತ್ತಿರುತ್ತದೆ! ಬ್ಲಾಗ್ ಲೋಕವನ್ನು ಜೀವಂತವಾಗಿ ಉಳಿಸಲು ಯತ್ನಿಸುತ್ತದೆ…
ಮೇ ಫ್ಲವರ್ ಬಳಗಕ್ಕೆ ನನ್ನದೊಂದು ಸಲಾಂ ಹೇಳುವ ಮುನ್ನ ಒಂದಷ್ಟು ವಿಚಾರಗಳಿವೆ… ಮೇಫ್ಲವರ್ ಕುರಿತಾಗಿ ನನಗೆ ಮತ್ತು ಕೆಲವರಿಗೆ ಎರಡು ಕಾರಣಕ್ಕೆ ಪೂರ್ವಾಗ್ರಹವಿದೆ. ಒಬ್ಬ ವ್ಯಕ್ತಿಯನ್ನು ಪರಿಚಯಿಸುವಾಗ, ಅಗತ್ಯಕ್ಕಿಂತ ಹೆಚ್ಚು ಹೊಗಳಿಕೆ ಅವದಿಯಲ್ಲಿ ಕಂಡುಬರುತ್ತದೆ. ಎರಡನೆಯದಾಗಿ ಮೇಫ್ಲವರ್ ಕರೆಸುವ ಸಂಪನ್ಮೂಲ ವ್ಯಕ್ತಿಗಳು ತೀರಾ ಎಡಪಂಥೀಯ ಧೋರಣೆ ಉಳ್ಳವರು ಅಥವಾ ಎಡಪಂಥದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡವರು. ಜಯನಗರದಲ್ಲೂ ಮಂಥನ ಅಂತಾ ಒಂದು ತಂಡವಿದೆ. ಅಲ್ಲಿನ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಪ್ರತಿ ಸಲ ಬರುತ್ತದೆ. ಅದರ ಒಂದೆರಡು ಕಾರ್ಯಕ್ರಮಗಳಿಗೆ ಹೋಗಿದ್ದೇನೆ ಕೂಡ. ಅಲ್ಲಿನ ಕಾರ್ಯಕ್ರಮಗಳು ನನಗೆ ಸದಾ ಬಲಪಂಥೀಯ ಅನ್ನಿಸುತ್ತದೆ. ಹಾಗಾಗಿ ಇತ್ತೀಚೆಗೆ ಆ ಕಡೆ ಹೋಗುವುದನ್ನೇ ಬಿಟ್ಟಿದ್ದೇನೆ.
ರಾಷ್ಟ್ರೀಯತೆ, ವಾಸ್ತವತೆ ಎರಡನ್ನು ಹೊರತುಪಡಿಸಿ ಮತ್ತ್ಯಾವ ಸಿದ್ಧಾಂತವೂ ಈ ಪೀಳಿಗೆಗೆ ಬೇಡವಾಗಿದೆ. ಎಡ,ಬಲ, ನವ್ಯ, ಬಂಡಾಯ…ನಮ್ಮ ಹಿಂದಿನ ತಲೆಮಾರು ಇಂತಹ ಹೊಡೆದಾಟದಲ್ಲೇ ತಮ್ಮ ಆಯುಷ್ಯ ಕಳೆದಿದೆ. ಹಾಗಾಗಿ ಆ ಕಚ್ಚಾಟ ಈ ತಲೆಮಾರಿಗೂ ಮುಂದುವರಿಯುವುದು ಬೇಡ ಎಂಬ ಆಶಯ ನನ್ನದು. ಹಾಗಂತ ನಾನು ರಾಷ್ಟ್ರೀಯ ವಿಚಾರದ ಪರ. ರಾಷ್ಟ್ರೀಯತೆ ಬಲಪಂಥೀಯರು ಗುತ್ತಿಗೆ ಪಡೆದ ಸರಕು ಎಂದು ನೀವು ಭಾವಿಸಿಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ. ನಮ್ಮ ದೇಶವನ್ನು, ಸಂಸ್ಕೃತಿಯನ್ನು ಪ್ರೀತಿಸುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೂ ಇದೆ. ದೇಶವನ್ನು ನಕ್ಸಲರು ಪ್ರೀತಿಸುತ್ತಾರೆ ಎಂದಾದರೆ ನಾನು ಅವರನ್ನೂ ಬೆಂಬಲಿಸುತ್ತೇನೆ. ಇನ್ನು, ಹಾದರ…ಎಡದವರು ಮಾಡಿದರೂ ಹಾದರವೇ, ಬಲದವರು ಮಾಡಿದರೂ ಅದು ಹಾದರವೇ ಎಂಬ ವಾದ ನನ್ನದು.
ಇನ್ನು ಸಂಪನ್ಮೂಲ ವ್ಯಕ್ತಿಗಳು…ಒಂದು ಕಾರ್ಯಕ್ರಮ ಆಯೋಜನೆ ನಾವಂದುಕೊಂಡಷ್ಟು ಸುಲಭವಲ್ಲ. ಒಬ್ಬ ಸಂಪನ್ಮೂಲ ವ್ಯಕ್ತಿ ಕರೆಸುವಾಗ ಉಂಟಾಗುವ ತೊಂದರೆಗಳು ಸಾಕಷ್ಟು. ಜಯಂತ್ ಕಾಯ್ಕಿಣಿ, ನಾಗೇಶ್ ಹೆಗಡೆ….ಇಂತಹವರನ್ನು ಕರೆಸಬಹುದು ಎಂದು ನಾವು ಮೋಹನ್ ಅವರಿಗೆ ಪುಕ್ಕಟ್ಟೆ ಸಲಹೆ ನೀಡುವುದು ತುಂಬಾ ಸುಲಭ. ಆದರೆ, ಅದರ ಕಷ್ಟ ಅವರಿಗೆ ಮಾತ್ರ ಗೊತ್ತು. ಆದಾಗ್ಯೂ, ಮೇ ಫ್ಲವರ್ ಬಳಗಕ್ಕೆ ಸಂಪನ್ಮೂಲ ವ್ಯಕ್ತಿಗಳ ಕೊರತೆಯಿಲ್ಲವೇನೋ ಎಂಬ ಭಾವನೆ ನನ್ನದು. ನಿಸಾರ್, ಎಚ್.ಎಸ್.ವಿ…ಇವತ್ತಿನ ಯಾವ ಕಾರ್ಯಕ್ರಮಕ್ಕೆ ಹೋದರೂ ಅವರದ್ದೇ ಮುಖಗಳು! ಅದೇ ಹಳೆ ಕವಿತೆಗಳು, ಹಳೆ ರಾಗ! ವಿಜ್ಞಾನವೂ ಸಾಹಿತ್ಯದ ಒಂದು ಬಗೆ. ಕಲೆ, ಮನಃಶಾಸ್ತ್ರ….ಇವು ಸಾಹಿತ್ಯ ಪ್ರಕಾರಗಳೇ…ಹಾಗಾಗಿ, ಹೊಸ ಕ್ಷೇತ್ರದ ವ್ಯಕ್ತಿಗಳನ್ನು ಪರಿಚಯಿಸುವ ಪ್ರಯತ್ನವನ್ನು ಮೇ ಫ್ಲವರ್ ಮಾಡಬಹುದು ಎಂಬ ಆಶಯ ನನ್ನದು. ಹಾಗಂತ ಹಿರಿಯ ಸಾಹಿತಿಗಳ ಕುರಿತಾಗಿ ನನಗೆ ಗೌರವ ಇಲ್ಲ ಎಂದೇನಲ್ಲ. ಖಂಡಿತವಾಗಿಯೂ ನಿಸಾರ್, ಎಚ್.ಎಸ್.ವಿ…ಅಂತಹವರ ಅನುಭವ ಬಲು ದೊಡ್ಡದು. ಆದರೂ ಅವರ ಮಾತುಗಳನ್ನು ಅರ್ಥೈಸಿಕೊಳ್ಳುವಷ್ಟು ಪ್ರೌಢತೆ, ನನ್ನಲ್ಲಿ, ಸುಶ್ರುತ, ವಿಕಾಸ್….ನಮ್ಮಂತಹ ಯುವಕರಲ್ಲಿ ಇಲ್ಲ ಮೋಹನ್ ಸರ್…
ಶಿವರಾಮ ಕಾರಂತರು ಪತ್ರಿಕೆ ನಿಲ್ಲಿಸಿದ ಮೇಲೆ, ಎಲ್ಲರೂ ನಿಮ್ಮ ಪತ್ರಿಕೆ ತುಂಬಾ ಚೆನ್ನಾಗಿತ್ತು, ಯಾಕೆ ನಿಲ್ಲಿಸಿಬಿಟ್ಟಿರಿ….ಅಂತಾ ಕನಿಕರದಿಂದ ಕಾರಂತರ ಬಳಿ ಕೇಳುತ್ತಾರಂತೆ. ಪತ್ರಿಕೆ ಬರುತ್ತಿದ್ದ ಕಾಲದಲ್ಲಿ, ಅದನ್ನು ಕೊಳ್ಳುವವರು, ಪ್ರೋತ್ಸಾಹಿಸುವವರ ಸಂಖ್ಯೆ ವಿರಳವಾಗಿತ್ತಂತೆ! ಆ ನೋವನ್ನು ಕಾರಂತರು ತುಂಬಾ ಸೊಗಸಾಗಿ ಬರೆದುಕೊಳ್ಳುತ್ತಾರೆ.
ಸಾಹಿತ್ಯ ಕೃಷಿಯು ಒಂತರಹ ಅಂತಹದ್ದೇ! ‘ಕಿಸೆಯಲ್ಲಿನ ಕಾಸು ಖರ್ಚುಮಾಡಿಕೊಂಡು ನಾನೇಕೆ ಸಾಹಿತ್ಯ ಕೃಷಿ ಮಾಡಬೇಕು’ ಎಂಬ ಪ್ರಶ್ನೆಯನ್ನು ಬದಿಗಿಟ್ಟು , ಜಿ.ಎನ್ ಮೋಹನ್ ಬಳಗ ಮಾಡುತ್ತಿರುವ ಸಾಹಿತ್ಯ ಕೃಷಿಯನ್ನು ನಾವೆಲ್ಲ ಖಂಡಿತ ಪ್ರೋತ್ಸಾಹಿಸಲೇ ಬೇಕು. ಬ್ಲಾಗ್ ಲೋಕದಲ್ಲಿ ಗುಂಪುಗಾರಿಕೆ ಬೆಳೆಯುತ್ತಿರುವ, ಬರಹ ಎಂಬುದು ಪ್ರತಿಷ್ಠೆಯ ವಿಷಯವಾಗುತ್ತಿರುವ ಈ ಕಾಲದಲ್ಲಿ ಎಲ್ಲ ಬ್ಲಾಗಿಗರನ್ನು ಒಟ್ಟುಗೂಡಿಸಲು ಮೋಹನ್ ಅವರ ತಂಡ ಹೊರಟಿದೆ. ಅವರಿಗೊಂದು ಸಲಾಂ…ಆ ತಾಣ ಹೊಡೆದಾಟಕ್ಕೊಂದು ವೇದಿಕೆಯಾಗದಿರಲಿ, ಗುಂಪುಗಾರಿಕೆ ಅಲ್ಲೂ ಮರುಕಳಿಸದಿರಲಿ…ಎಂಬುದು ನಮ್ಮ ಆಶಯ. ನನ್ನ ಹಾಗು ಕೆಲವರ ಪೂರ್ವಾಗ್ರಹವನ್ನು ಹೋಗಲಾಡಿಸಲು ಆ ಬಳಗ ಯತ್ನಿಸುತ್ತದೆ ಎಂಬ ನಂಬಿಕೆ…
ಅಂದಹಾಗೆ, ಅಕ್ಷರವಿಹಾರಕ್ಕೆ ಒಂದು ವರ್ಷ ತುಂಬಿದೆ. ವರ್ಷ ತುಂಬಿದಾಗ ಏನೇನೋ ಬರೆಯಬೇಕೆಂಬ ಕನಸಿತ್ತು! ಇತ್ತೀಚೆಗೆ ಬರವಣಿಗೆ ಎಂಬುದು ನನಗೂ ಪ್ರತಿಷ್ಠೆಯ ವಿಷಯವಾಗುತ್ತಿದೆ. ಬರಹ, ಬದುಕು ಇವೆರಡನ್ನೂ ನಾನು ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳುವುದಿಲ್ಲ. ಇರುವ ಮೂರು ದಿನದಲ್ಲಿ ಹೊಡೆದಾಡಿಕೊಂಡು ಬದುಕಲು ನಾನು ಯಾವತ್ತೂ ಇಷ್ಟಪಡುವುದಿಲ್ಲ. ಹಾಗಾಗಿ, ಬದುಕಿನ ವಿರಾಮಕ್ಕಾಗಿ ನಿರ್ಮಿಸಿಕೊಂಡ ವಿಹಾರಕ್ಕೂ ಪುಟ್ಟ ವಿರಾಮ ಬೇಕೇನೋ ಅನ್ನಿಸುತ್ತದೆ. ಅದೇನೆ ಇರಲಿ, ನನ್ನೆಲ್ಲ ಬರವಣಿಗೆಯನ್ನು ಅಕ್ಕರೆಯಿಂದ ಪ್ರೋತ್ಸಾಹಿಸಿದ, ಪ್ರೀತಿಯಿಂದಲೇ ತಪ್ಪುಗಳನ್ನು ತಿದ್ದಿಕೊಟ್ಟ, ಬಹಳ ಸೊಗಸಾಗಿ ಕಾಲೆಳೆದ ನಿಮ್ಮೆಲ್ಲರಿಗೂ ಧನ್ಯವಾದಗಳು…ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಈ ರೀತಿಯಾಗಿಯೇ ಇರಲಿ…
-ಓಹೋ! ನನಗಿಂತ 16ದಿನ ಚಿಕ್ಕವರಾ, 😀
Happy Birthday
-ನಿಜ, ಯಾರು ಡಿಬೇಟ್ ಮಾಡೋ ತರಹ ಬರಿತಾನೆ ಇಲ್ಲಾ, ನನ್ನ ಟೀ ಸಪ್ಪೆ ಆಗ್ತಿದೆ. 😀 😀 😀
-ಬರವಣಿಗೆ ಪ್ರತಿಷ್ಠೆಯ ವಿಷಯ ಆಗೋದು ಅಂದರೆ ಏನು? ಗೊತ್ತಾಗಿಲ್ಲ
-ನಾನು ಸುಮಾರು ಕಡೆ ಈ ಗುಂಪುಕಾರಿಕೆ ಬಗ್ಗೆ ಓದಿದ್ದೇನೆ. ಆದರೆ ನನ್ನ ಅನುಭವಕ್ಕೆ ಬಂದಿಲ್ಲ. ಒಬ್ಬರ ಬರಹ ನಮಗೆ ಇಷ್ಟ ಆಗಿ ಅದಕ್ಕೆ ಮಾತ್ರ ಪ್ರತಿಕ್ರಿಯಿಸೋದು ತಪ್ಪಾಗುತ್ತಾ? ನಮಗೆ ಇಷ್ಟವಾಗೋ ಪೇಪರ್ ಓದಿದ ಹಾಗೇನೇ ಇದು. ಎಲ್ಲ ಪೇಪರ್ರು ತರಿಸ್ಕೊಬೇಕು ಅಂದ್ರೆ , ಕಷ್ಟನೆ.
-ವಿರಾಂ ಗಿರಾಮ ಎಲ್ಲ ತಗೋಬೇಡಿ. ಬರೀರಿ ಸ್ವಾಮಿ. ನನ್ನಂತವರು ಹೊಸದನ್ನು ಓದೋಕೆ ಕಾಯ್ತಾ ಇದ್ದೇವೆ.
ವಿನಾಯಕ ಅವರೆ…
ನಿಮ್ಮ ಬ್ಲಾಗಿಗೆ ವರುಷ ತುಂಬಿದ್ದಕ್ಕೆ ಶುಭಾಶಯಗಳು.
ನೀಲಾಂಜಲ ಅವರು ಹೇಳಿದ ಮಾತುಗಳಲ್ಲಿ ಡಿಬೇಟ್ ವಿಷಯವೊಂದನ್ನು ಬಿಟ್ಟು(ಚರ್ಚಿಸುವುದಕ್ಕೆ ನಾನು ಹಿಂಜರಿಯುತ್ತೇನಾದ್ದರಿಂದ) ಉಳಿದೆಲ್ಲ ಮಾತುಗಳು ನೂರಕ್ಕೆ ನೂರು ಸತ್ಯ ಅನ್ನುವುದು ನನ್ನ ಭಾವನೆ.
ಬ್ಲಾಗಿನ ಹುಟ್ಟುಹಬ್ಬವನ್ನು ಚೆಂದದೊಂದು ಬರಹದೊಂದಿಗೆ ಆಚರಿಸುತ್ತಿದ್ದೀರಿ. ಮತ್ತೊಮ್ಮೆ ಶುಭಕೋರುತ್ತಿದ್ದೇನೆ, ಎಲ್ಲವೂ ಒಳಿತಾಗಲಿ.
ಶುಭಾಶಯಗಳು…. happy bloggingu…
ಈ ಬರಹ ಸುಪರ್.. ಹೇಳಬೇಕಾದ್ದನ್ನು ಒಳ್ಳೆ ಸಮತೋಲನದಲ್ಲಿದೆ ಹೇಳಿದೆ. ಬ್ಲಾಗ್ ಬರೆಯುತ್ತಲೇ ಮುಖ್ಯವಾಹಿನಿಯ ಬರವಣಿಗೆ ಬಗ್ಗೆ ಹೆಚ್ಚು ಗಮನ ಕೊಡಿ.
ನಮಗೆಲ್ಲಾ ಅಕ್ಷರವಿಹಾರ ಮಾಡಿಸುತ್ತಿರುವುದಕ್ಕೆ ಥ್ಯಾಂಕ್ಸ್.. 🙂
ಆಮೇಲೆ.. ನೀಲಾಂಜಲ ಮೇಡಮ್ಮು ಸುಮ್ನೆ ನಮ್ಮನ್ನೆಲ್ಲಾ ಕೆರಳಿಸ್ತಾರೆ.. ಬಲಿಯಾಗ್ಬೇಡ ಅದ್ಕೆ 🙂 ಹ್ಹ ಹ್ಹ…
ಮುಂದುವರೆಯಲಿ ಅಕ್ಷರ ವಿಹಾರ ಜೋರಾಗಿ….
ಇತ್ತೀಚೆಗೆ ಬರವಣಿಗೆ ಎಂಬುದು ನನಗೂ ಪ್ರತಿಷ್ಠೆಯ ವಿಷಯವಾಗುತ್ತಿದೆ. ಬರಹ, ಬದುಕು ಇವೆರಡನ್ನೂ ನಾನು ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳುವುದಿಲ್ಲ. ಇರುವ ಮೂರು ದಿನದಲ್ಲಿ ಹೊಡೆದಾಡಿಕೊಂಡು ಬದುಕಲು ನಾನು ಯಾವತ್ತೂ ಇಷ್ಟಪಡುವುದಿಲ್ಲ. ಹಾಗಾಗಿ, ಬದುಕಿನ ವಿರಾಮಕ್ಕಾಗಿ ನಿರ್ಮಿಸಿಕೊಂಡ ವಿಹಾರಕ್ಕೂ ಪುಟ್ಟ ವಿರಾಮ ಬೇಕೇನೋ ಅನ್ನಿಸುತ್ತದೆ.
ಇಲ್ಲೆಲ್ಲೋ ನನಗೆ ವಿಷಾದ ಕಂಡಂತಾಯಿತು. ಸತ್ಯವಾ..? ನನಗೆ ಗೊತ್ತಿಲ್ಲ.
ವರ್ಷದ ಹೊಸ್ತಿಲಿನಲ್ಲಿ ಉತ್ತಮ ಬರಹ. ಶುಭವಾಗಲಿ
ಒಂದು ವರುಷ ಪೂರೈಸಿದ್ದಕ್ಕೆ ಶುಭಾಶಯಗಳು.
ಒಂದತೂ ಸತ್ಯ ಮಾರಾಯ- ಬರೀ ಕಥೆ ಕವನ ಅಂತ ಬ್ಲಾಗು ಬರ್ಕೊಂಡು ಹಾಯಾಗಿದ್ದ ನನ್ನಂತವರು ಸದ್ಯದ ಉನ್ಮಾದದ ಪರಿಸ್ಥಿತಿಯಲ್ಲಿ ಕಂಗಾಲಾಗಿ ಕೂತಿದ್ದಾರೆ. ಎತ್ತ ನೋಡಬೇಕೋ, ಏನು ಓದಬೇಕೋ ತೋಚದಾಗಿದೆ. ಎಲ್ಲ ಮತ್ತೆ ಮೊದಲಿನಂತಾದರೆ ಸಾಕಾಗಿದೆ:(
ನೀಲಾಂಜಲ ಅವರೇ,
ಪ್ರೋತ್ಸಾಹಕ್ಕೆ, ಶುಭಾಷಯಕ್ಕೆ ಧನ್ಯವಾದಗಳು. ಪ್ರತಿಷ್ಠೆ ಅಂದ್ರೆ ಪ್ರತಿಷ್ಠೆ ಅಷ್ಟೆ!
ಶಾಂತಲಾ ಮೇಡಂ,
ಥ್ಯಾಂಕ್ಸ್…
ವಿಕಾಸ್,
ನಿಮ್ಮ ಕಳಕಳಿಗೆ, ಪ್ರೋತ್ಸಾಹಕ್ಕೆ ಥ್ಯಾಂಕ್ಸ್. ಮುಖ್ಯವಾಹಿನಿಯಲ್ಲೂ ಸಾಧ್ಯವಾದಷ್ಟು ಬರೆಯುತ್ತಿದ್ದೇನೆ…
ಶ್ರೀನಿದಿ,
ನಿನ್ನ ಮಾತು ನಿಜ….
ಶರ್ಮರೆ,
ತುಂಬಾ ದಿನವಾಗಿತ್ತು ನೀವು ಬ್ಲಾಗ್ ಕಡೆ ಬಾರದೇ…ವಿಷಾದವೋ, ವಿರಹವೋ ಗೊತ್ತಿಲ್ಲ. ಒಟ್ಟಲ್ಲಿ ಬರಹ ಮನಸ್ಸಿಗೆ ನೆಮ್ಮದಿ ನೀಡುವ ವಸ್ತುವಾಗಬೇಕು ಹೊರತು ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಮಾರ್ಗ ಆಗಬಾರದು ಎಂಬ ನಂಬಿಕೆ ನನ್ನದು. ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್…ಇನ್ನು ಮೇಲೆ ರೆಗ್ಯುಲರ್ ಆಗಿ ಬನ್ನಿ ಮಾರಾಯ್ರೆ…!
ವಿನಾಯಕ ಅವರೆ,
ವರುಷತುಂಬಿದ ಅಕ್ಷರವಿಹಾರಕ್ಕೆ ಹಾರ್ದಿಕ ಶುಭಾಶಯಗಳು. ನಿಮ್ಮ ಬರಹಗಳಲ್ಲಿರುವ ತೀಕ್ಷ್ಣತೆ, ವಾಸ್ತವಿಕತೆ, ಕಟುತ್ವ ಇಷ್ಟವಾಗುತ್ತದೆ. ಅದೇ ರೀತಿ ಇದ್ದುದನ್ನು ಇದ್ದಹಾಗೇ ಹೇಳುವ ನಿಮ್ಮ ಪರಿಯೂ ಮೆಚ್ಚುಗೆಯಾಗಿದೆ. ವಿರಾಮ ಕೊಡದೇ ಆರಾಮ ತೆಗೆದುಕೊಳ್ಳದೇ ಅಕ್ಷರವಿಹಾರವನು ಮುಂದುವರೆಸಬೇಕಾಗಿ ವಿನಂತಿ.
ಧನಾತ್ಮಕ ಹಾಗೂ ಆರೋಗ್ಯಕರ ಚರ್ಚೆಗೆ ನಾನು ಸದಾ ತಯಾರು.. 🙂
ವಿನಾಯಕರವರೆ,
ನಿಮ್ಮ ಬ್ಲಾಗು “ಅಕ್ಷರವಿಹಾರ” ಕ್ಕೆ ಒಂದು ವರ್ಷ ತುಂಬಿದಕ್ಕೆ ಅಭಿನಂದನೆಗಳು….
ಮತ್ತೆ ನೀವು ಮೇಲೆ ಹೆಸರಿಸಿದ ಬ್ಲಾಗಿಗರೆಲ್ಲಾ ಏನು ಮಾಡುತ್ತಿಲ್ಲವೆಂಬ ನಿಮ್ಮ ಕೊರಗು ಸರಿಯಾಗಿದೆ ಅದು ನಿಮ್ಮ ತಪ್ಪಲ್ಲ…ಏಕೆಂದರೆ ಅವರನ್ನು ಬಿಟ್ಟು ನೀವು ಬೇರೆಯರವರ ಬ್ಲಾಗಿಗೆ ಹೋಗಿಲ್ಲವೆಂದು ಕಾಣುತ್ತೆ…..ಇತ್ತೀಚೆಗೆ ಒಂದಷ್ಟು ಹೊಸ ಬ್ಲಾಗಿಗರ ಆಗಮನವಾಗಿದೆ…. ಅವರ ಬರಹಗಳನ್ನೊಮ್ಮೆ ಓದಿ…..ಅವು ಎಡ, ಬಲ, ಬಂಡಾಯ ಇತ್ಯಾದಿಗಳನ್ನೆಲ್ಲಾ ಬದಿಗೊತ್ತಿ, ಹೊಸದಾಗಿ ಬರೆಯುತ್ತಿದ್ದಾರೆ…ಪ್ರಕಾಶ್ ಹೆಗಡೆಯವರ ಇಟ್ಟಿಗೆ ಸಿಮೆಂಟು, ಮಲ್ಲಿಕಾರ್ಜುನ್, ಚಿತ್ರ ಕರ್ಕೇರಾ ಶರಧಿ, ಚಿತ್ರ ಹೆಗಡೆ ಮನಸೊಂದು ಹುಚ್ಚು ಹೊಳೆ, ಪರಂಜಪೆರವರ
ಮನಸ್ಯಾಗಿನ ಮಾತು, ಪಾಲಚಂದ್ರ ಅನುಭವ ಮಂಟಪ, ಸುನಾಥ್ ಸರ್ ಸಲ್ಲಾಪ, ಉದಯಸರ್ ರ ಬಿಸಿಲ ಹನಿ, ಸತ್ಯನಾರಾಯಣ ಸರ್ರವರ ನಂದೊಂದ್ಮಾತು, ಮನಸು, ನೀಲಿ ಹೂವಿನ ರಂಜಿತ್, ರಾಜೇಶ್ ಮಂಜುನಾಥ್, ಶಿವಪ್ರಕಾಶ್, ಟೆಲಿಪ್ರಭು,……….ಲಿಷ್ಟು ತುಂಬಾ ದೊಡ್ಡದಿದೆ…ಮತ್ತು ನೀವು ಹೇಳಿದಂತೆ ಗುಂಪುಗಾರಿಕೆ ಎನ್ನುವುದು ಈ ಹೊಸಬರಲ್ಲಿ ಕಂಡು ಬರುತ್ತಿಲ್ಲ….ಅದಕ್ಕೆ ಬದಲಾಗಿ ಎಲ್ಲರಲ್ಲೂ ಒಂದು ತಿಳಿನೀರಿನಂತ ಅತ್ಮೀಯತೆ ಸೃಷ್ಠಿಯಾಗಿದೆ………..ಇವರೆಲ್ಲಾ ಹೊಸಬರಾದರೂ ಬಂದವರೆಲ್ಲಾ ಸಿಕ್ಸರ್ ಹೊಡೆಯುತ್ತಿದ್ದಾರೆ…….ಬರೆಯಬೇಕೆನ್ನುವ ಕಾಳಜಿ, ಪ್ರಾಮಾಣಿಕೆಯಿದೆ…..ಈ ಕಡೆಗೊಮ್ಮೆ ತಿರುಗಿ ನೋಡಿ ಸಾರ್, ಅವರ ವಸ್ತು, ವಿಚಾರಗಳನ್ನೊಮ್ಮೆ ನೋಡಿ….ಬ್ಲಾಗ್ ಲೋಕ ಯಾವ ದಿಕ್ಕಿನಲ್ಲಿ ತೆರೆದುಕೊಂಡಿದೆ ಅಂತ ಗೊತ್ತಾಗಬಹುದು….ಮತ್ತೆ ನಾನು ಬ್ಲಾಗ್ ತೆಗೆಯಲು ಕಾರಣ ಮೇ ಪ್ಲವರಿನ ಮೋಹನ್ ಸರ್…..ಅವರ ಪ್ರೋತ್ಸಾಹದಿಂದ ಎಷ್ಟೊಂದು ಜನ ಬರೆಯಲಾರಂಭಿಸಿದ್ದಾರೆ…
ಪ್ರತಿಕ್ರಿಯೆಯನ್ನು ಸ್ವಲ್ಪ ನೇರವಾಗಿ ಹೇಳಿದ್ದೇನೆ…ತಪ್ಪು ತಿಳಿಯಬೇಡಿ…..ಮತ್ತೆ ಬೇಟಿಯಾಗೋಣ….
tejaswini hegadeyavre,
dhanyavaadaglu….
shivu avare,
neevu helida blog galalli sumaarannu noddiddene. mele udaharisida blog gallella shreshta annuva bhavane nannadalla….naavella ottige bloging aarambisidavaru haagaagi adannu udahariside aste…any how nimma shubha haaraikege dhanyavaada. yaagalu batra iri…
Happy birthday..keep writing 🙂
ಅಯ್ಯಪ್ಪ!
ನಿಮ್ ಲೇಖನದಲ್ಲಿ ನನ್ ಹೆಸರು ನೋಡಿ ಬೆವೆತು ಹೋಗಿದ್ದೆ. ಏನು ಕಾದೆದೆಯೋ ಎಂದು ಜೀವ ಅಂಗೈಲಿ ಹಿಡಿದುಕೊಂಡು ಪೂರ್ತಿ ಓದಿದ ಮೇಲೆ ನಿಟ್ಟುಸಿರಿಟ್ಟೆ, ಸಮಾಧಾನದಿಂದ.
ಎಂಥಾ ಓಟಗಾರನೇ ಆದರೂ ಎಷ್ಟು ಓಡಲು ಸಾಧ್ಯ? ಅದರಲ್ಲೂ ಗ್ಲೂಕೋಸು, ಬಾಳೆಹಣ್ಣು, ಆರೆಂಜ್ ಜ್ಯೂಸು ಇವ್ಯಾವುದರ ಆಮಿಶವೂ ಇಲ್ಲದೆ ಓಡಿ ಎಂದರೆ ಎಷ್ಟು ಓಡಲಾದೀತು. ಹೀಗಾಗಿದೆ ಬ್ಲಾಗಿಗರ ಪರಿಸ್ಥಿತಿ.
ಆದರೂ ಯಾರೋ ಓಡುವುದು ಕಂಡಾಗ, ಛೇ ನನ್ನಲ್ಲೊಬ್ಬ ಓಟಗಾರನಿದ್ದನಲ್ಲವಾ ಎಂದು ನೆನಪಾದಾಗ, ನಾನು ಆತನಿಗಿಂತ ವೇಗವಾಗಿ ಓಡಬಲ್ಲೆನ್ನಾ ಎಂಬ ಆರೋಗ್ಯಕರ ಜಿದ್ದು ಮೂಡಿದಾಗ ಮತ್ತೆ ಓಟಕ್ಕೆ ನಿಲ್ಲುತ್ತೇವೆ ಎಲ್ಲರೂ.
ಬ್ಲಾಗಿಗರ ಕೂಟದಲ್ಲಿ ಮಾತನಾಡೋಣ…
ಹಲೋ, ಸರ್ ಗೂಗಲ್ ಸರ್ಚ್ ನಲ್ಲಿ ಅವದಿ ಅಂತಾ ತಪ್ಪಾಗಿ ಬರೆದಾಗ ನಿಮ್ಮ ಬ್ಲಾಗ್ ಸಿಕ್ತು, ಓದಿದೆ. ತುಂಬಾ ಚನ್ನಾಗಿದೆ.