ಪಿಯುಸಿ ಓದುತ್ತಿದ್ದಾಗ ಸಿದ್ದವನದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಪರಿಚಯವಾಯಿತು. ಅಲ್ಲಿಂದ ಪತ್ರಿಕೆ ಓದುವ ಗೀಳು ಆರಂಭವಾಯಿತು. ಅದರಲ್ಲಿ ವಿಜ್ಞಾನದ ಕುರಿತಾಗಿ, ವಿದ್ಯುತ್ ಕುರಿತಾಗಿ ಆಗಾಗ ಬರೆಯುತ್ತಿದ್ದ ಶ್ರೀಶ, ಬಹುಶಃ ಯುವಕರಾಗಿರಬೇಕು ಎಂಬ ಭಾವನೆ ನನ್ನಲ್ಲಿ ಇತ್ತು. ವಿಜ್ಞಾನದ ವಿದ್ಯಾರ್ಥಿಯಾದ ನನಗೆ ಅವರು ಬರೆಯುವ ಲೇಖನಗಳು ಒಂದಷ್ಟು ಮಾಹಿತಿ ಒದಗಿಸುತ್ತಿತ್ತು.
ಎಚ್.ಆರ್ ಶ್ರೀಶ!
ದಪ್ಪನೆಯ, ಕಪ್ಪನೆಯ ವ್ಯಕ್ತಿ. ೪೦-೪೫ರ ಪ್ರಾಯದ ವ್ಯಕ್ತಿ ಪ್ರೆಸ್ ಕ್ಲಬ್ ಆವರಣದಲ್ಲಿ ಕಾಣ ಸಿಕ್ಕರು. ಪಕ್ಕದಲ್ಲಿ ಕುಳಿತ ಮಿತ್ರರ್ಯಾರೋ ವಿ.ಕದ ಶ್ರೀಶ ಅಂದರೆ ಇವರೇ ನೋಡು ಅಂತಾ ಹೇಳಿದರು. ನನ್ನ ನಿರೀಕ್ಷೆ ಕುಸಿದು ಬಿದ್ದಿತ್ತು! ಅಯ್ಯೋ ರಾಮ ಶ್ರೀಶ ಅಂದ್ರೆ ಇವರೇನಾ? ನನ್ನಲ್ಲಿ ಒಂತರಹ ತಾತ್ಸಾರದ ಭಾವ! ಅವರು ನೋಡಲು ಚೆನ್ನಾಗಿರಲಿಲ್ಲ, ಕಪ್ಪಗಿದ್ದರು, ಯುವಕರಲ್ಲ ಎಂಬ ಕಾರಣಕ್ಕೆ ನನಗೆ ಅವರ ಕುರಿತು ತಾತ್ಸಾರ ಮೂಡಿರಬೇಕು!
ವಿಜಯ ಕರ್ನಾಟಕಕ್ಕೆ ಕಾಲಿಟ್ಟ ಎರಡು-ಮೂರು ವಾರದಲ್ಲಿ ಶ್ರೀಶರ ಪರಿಚಯವಾಯಿತು. ಇಡೀ ಆಫೀಸ್ನಲ್ಲಿ ಶ್ರೀಶರ ಕುರಿತು ಗೌರವ ಭಾವನೆ. ಏನಾದ್ರು ಮಾಹಿತಿ ಬೇಕು ಅಂದ್ರೆ ಹೆಚ್ಚಿನವರು ಶ್ರೀಶರ ಬಳಿ ಹೋಗುತ್ತಾರೆ. ತಮ್ಮೆಲ್ಲ ಕೆಲಸವನ್ನು ಬದಿಗಿಟ್ಟು ಶ್ರೀಶ ಸರ್ ಗಂಟೆಗಟ್ಟಲೇ ಒಂದು ವಿಚಾರದ ಕುರಿತು ಮಾಹಿತಿ ನೀಡುತ್ತಾರೆ…ಮಾತಾಡಿಸಬೇಕು ಅಂತಾ ಅನ್ನಿಸಿದರೂ ಮಾತಾಡಿಸಲು ಭಯ. ಹೊಸಬರು, ಹಿರಿಯರನ್ನು ಮಾತಾಡಿಸುವುದು ಸರಿಯಲ್ಲವೇನೋ ಅನ್ನೋ ಮುಜುಗರ…
ಒಂದು ದಿನ ಹೀಗೇ ಯಾವ ನೆವದಿಂದಲೋ ಮಾತಾಡಿಸಿದೆ. ಯಾವ ಕಾರಣಕ್ಕೆ ಮಾತನಾಡಿಸಿದೆ ಎಂಬುದು ನನಗೀಗ ನೆನಪಿಲ್ಲ. ನಾನು ಇಂಟೆನ್ಶಿಪ್ಗೆ ಬಂದವನು ಎಂದು ಅವರು ಭಾವಿಸಿದ್ದರಂತೆ. ಅಲ್ಲಿಂದ ಮುಂದೆ ಶ್ರೀಶರ ಪರಿಚಯವಾಯಿತು…ಮೊದಲು ಮಧ್ಯಾಹ್ನ ೧ ಗಂಟೆ ಸಮಯದಲ್ಲಿ ಆಫೀಸ್ನಲ್ಲಿ ಇರುತ್ತಿದ್ದ ಹಿರಿಯರ ಸಂಖ್ಯೆ ಕಡಿಮೆ. ಶ್ರೀಶ ಸರ್ ಹೆಚ್ಚಾಗಿ ಇರುತ್ತಿದ್ದರು. ನನಗೂ ಎಕನಾಮಿಕ್ ಟೈಮ್ಸ್ನ ಕೆಲ ಪದಗಳು ಬಗೆಹರಿಯುತ್ತಿರಲಿಲ್ಲ. ಅವರ ಬಳಿ ಹೋಗಿ ಕೇಳುತ್ತಿದ್ದೆ. ಹಾಗಾಗಿ ಮತ್ತಷ್ಟು ಹತ್ತಿರವಾದರು. ವಿಜ್ಞಾನ, ವಿದ್ಯುತ್ ಕ್ಷೇತ್ರಕ್ಕಾಗಿ ತಮ್ಮ ಇಡೀ ಪತ್ರಿಕೋದ್ಯಮದ ಬದುಕನ್ನು ಶ್ರೀಶ ಮುಡುಪಾಗಿಟ್ಟರು ಅಂದರೆ ಬಹುಶಃ ತಪ್ಪಾಗಲಾರದು….
ಪ್ರತಿಭೆ, ಕ್ರಿಯಾಶೀಲತೆ, ಬರವಣಿಗೆ…ಇವೆಲ್ಲಕ್ಕಿಂತ ವ್ಯಕ್ತಿತ್ವ ಮುಖ್ಯ ಎಂದು ನಂಬಿಕೊಂಡು ಬಂದವ ನಾನು. ಹಾಗಾಗಿಯೇ ನನಗೆ ಎಚ್.ಆರ್ ಶ್ರೀಶ, ವಸಂತ್ ನಾಡಿಗೇರ್, ರಾಧಾಕೃಷ್ಣ ಭಡ್ತಿ, ಶರತ್ ಕಲ್ಕೋಡ್, ಈ ಸಂಜೆ ರಾಮಚಂದ್ರಣ್ಣರಂತಹ ಒಂದಷ್ಟು ಪತ್ರಕರ್ತರು ತುಂಬಾ ಇಷ್ಟವಾಗುತ್ತಾರೆ. ಶ್ರೀಶರಂತೆ ವಿಚಾರ ಗೊತ್ತಿರುವ ಮಂದಿ ಸುದ್ದಿಮನೆಯಲ್ಲಿ ಸಾಕಷ್ಟು ಜನ ಸಿಗಬಹುದು. ಆದರೆ ಶ್ರೀಶರಂಥ ವ್ಯಕ್ತಿತ್ವ ಹೊಂದಿದವರು ಸಿಗುವುದು ಕಷ್ಟ. ಹಿರಿಯ ವರದಿಗಾರ, ಎಲ್ಲಾ ಸರಕಾರಿ ಇಲಾಖೆಯ ಮುಖ್ಯಸ್ಥರು ನನ್ನ ಮಾತನ್ನು ಕೇಳುತ್ತಾರೆ…ಇವ್ಯಾವುದರ ಪರಿವೂ ಇಲ್ಲದೇ ನನ್ನಂತ ಕಿರಿಯರಿಗೆ ಶ್ರೀಶ ಸರ್ ಒಂದು ವಿಚಾರದ ಕುರಿತಾಗಿ ಹೇಳುವ ರೀತಿ ಎಲ್ಲರಿಗೂ ಬರುವುದಿಲ್ಲ. ಸರಳತೆ, ಸಜ್ಜನಿಕೆ…ನಾನು ಹೆಚ್ಚು ವಿವರಿಸಿದರೆ ಬಹುಶಃ ಅದು ಹೊಗಳಿಕೆಯಾಗಬಹುದು. ಎಲ್ಲಾದರೂ ಸಿಕ್ಕರೇ ನೀವೇ ಒಮ್ಮೆ ಶ್ರೀಶರನ್ನು ಮಾತಾಡಿಸಿ. ಒಟ್ಟಿನಲ್ಲಿ ಹೇಳುವುದಾದರೆ ನಾನು ಕಂಡ ಒಂದಷ್ಟು ಅದ್ಬುತ ಪತ್ರಕರ್ತರ ಸಾಲಿನಲ್ಲಿ ಶ್ರೀಶ ಸರ್ ಕೂಡ ಒಬ್ಬರು.
ಎಚ್.ಆರ್ ಶ್ರೀಶ ಈಗ ವೃತ್ತಿ ಬದುಕಿನಿಂದ ನಿವೃತ್ತರಾಗಿದ್ದಾರೆ. ಒಬ್ಬ ಶ್ರೇಷ್ಠ ಪತ್ರಕರ್ತರು ನಮ್ಮ ನಡುವಿನಿಂದ ಎದ್ದು ಹೋಗುತ್ತಿದ್ದಾರೆ ಅನ್ನುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಣ್ಣು ತುಂಬಿ ಬಂದಿದೆ…ಹಾಗಾಗಿ ಅವರ ಕುರಿತು ಮೂರಕ್ಷರ ಬರೆದಿದ್ದೇನೆ. ನನ್ನಂತಹ ಕಿರಿಯವನಿಗೆ, ಅವರ ಕುರಿತು ಬರೆಯಲು ಯಾವ ಅರ್ಹತೆ ಇದೆ ಅಂತಾ ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ನಿಜ ಹೇಳಬೇಕೆಂದರೆ ಶ್ರೀಶರಿಗೆ ೪೦-೪೫ರ ಪ್ರಾಯವಾಗಿರಬಹುದು ಎಂದು ನಾನು ಎಣಿಸಿದ್ದೆ. ೫೮ ಆಯಿತು ಎಂದು ಗೊತ್ತಾಗಿದ್ದು ಈಗ! ಶ್ರೀಶ ಸರ್ ಮೂಲತಃ ಎಲ್ಲಿಯವರು ಅಂತಾ ನನಗೆ ಗೊತ್ತಿಲ್ಲ. ಗಣೇಶ ಭವನದ ಬಳಿ ಅವರ ಮನೆಯಿದೆ ಅಂತಾ ಮಾತ್ರ ಗೊತ್ತು! ಅವರ ಚೆಂದದ ನಗು ಯಾವತ್ತೂ ಮಾಸದಿರಲಿ ಎಂಬ ಪ್ರಾರ್ಥನೆ ಮಾತ್ರ ನನ್ನಿಂದ ಅವರಿಗೆ ಕೊಡಬಹುದಾದ ವಸ್ತು. ನಮ್ಮ ವೃತ್ತಿ ಬದುಕಿನುದ್ದಕ್ಕೂ ವ್ಯಕ್ತಿತ್ವದ ಪಾಠ ಕಲಿಸುವ ಅಂತಹ ಹಿರಿಯರು ಸದಾ ಸಿಗುತ್ತಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ…
ಈ ಲೇಖನದ ಕೆಳಗೆ ನನ್ನ ಮತ್ತು ನನ್ನಂಥ ಅನೇಕರ ಹೆಸರು ಬೇಕಾದರೂ ಹಾಕಬಹುದು. ವಿನಾಯಕ್ ಅನುಭವ ಅನೇಕರದು. ಏಕೆಂದರೆ ಶ್ರೀಶ ಸಾರ್ ವ್ಯಕ್ತಿತ್ವ ಅಂಥದ್ದು. ಸುದ್ದಿಮನೆಯಲ್ಲಿ ಇಂಥವರು ಇದ್ದರೇನೆ ಚೆಂದ. ಪತ್ರಿಕೆ ಆರೋಗ್ಯವಾಗಿರಲು ಇಂಥ ಮನಸ್ಸುಗಳು ಬೇಕು. ಅವರ ಸಾಮಿಪ್ಯದಿಂದ ವಂಚಿತನಾಗುತ್ತಿರುವ ಈ ಹೊತ್ತಿನಲ್ಲಿ ಅಕ್ಷರಗಳು ಕಂಬನಿಯ ಹನಿಗಳಾಗುತ್ತಿವೆ. ಇನ್ನೇನು ಹೇಳಲಿ.
natesh,
nija. shreesha sir nagu kaanuttilla anno bejaaru innu nannida doora aagilla…