ಮಳೆ ಜಿಟಿ ಜಿಟಿ ಜಿನುಗುತ್ತಲೇ ಇತ್ತು. ಎಸಿ ರೂಮಿನ ಸೋಫಾಕ್ಕೆ ಒರಗಿ ಕುಳಿತು ಕಿಟಕಿ ಕಿಂಡಿಯಿಂದ ಅಂಗಳದತ್ತ ಇಣುಕಿದರೆ, ಮಗ ಶ್ರವಣ ಸಿಮೆಂಟ್ ಅಂಗಳದಲ್ಲೇ ‘ಲಗೋರಿ’ ಎಂದು ಕಿರುಚುತ್ತಾ, ಕುಣಿದು ಕುಪ್ಪಳಿಸುತ್ತಿದ್ದ. ‘ಜುಮುರು ಮಳೆಯಲ್ಲಿ ನೆನೆಯ ಬೇಡ ಥಂಡಿ ಆಗತ್ತೆ’ ಅಂತಾ ಕೂಗಿ ಹೇಳಲು ತುಟಿ ತೆರೆದರೆ…
ಊಹುಂ ಸ್ವರ ಸಹಕಾರ ನೀಡುತ್ತಿಲ್ಲ…
ಶ್ರವಣನ ‘ಲಗೋರಿ’ ಎಂಬ ಕೂಗು ಕೇಳದಿದ್ದರೆ, ಮತ್ತೆ ಅವಳು ನೆನಪಾಗುತ್ತಿರಲಿಲ್ಲ. ಯಾಕೆಂದರೆ ಅವಳನ್ನು ನೆನಪಿಸಿಕೊಳ್ಳಬೇಕಾದಷ್ಟು ನೆನಪಿಸಿಕೊಂಡು, ಅವಳಿಗಾಗಿ ಸುರಿಸಲು ಸಾಧ್ಯವಿರುವಷ್ಟು ಕಣ್ಣೀರು ಸುರಿಸಿ ಆಗಿದೆ!
ಅವಳನ್ನು ನಾನಿಷ್ಟು ಬೇಗ ಮರೆಯಬಾರದಿತ್ತು ಅನ್ನಿಸತ್ತೆ ಕೆಲವೊಮ್ಮೆ. ನಾನು ಹಾಗಂದುಕೊಳ್ಳುವುದಕ್ಕೇ ಇರಬೇಕು, ಅವಳು ಆಗಾಗ ಏನೇನೋ ನೆವದಿಂದ ನೆನಪಾಗುವುದು. ಸುಮ್ಮಸುಮ್ಮನೆ ನನ್ನಲ್ಲಿ ಕಣ್ಣೀರು ತರಿಸುವುದು…
***
ಇವನೊಬ್ಬ ಬಿಕನಾಸಿ ಅಪ್ಪ. ಒಂದು ಕೊಡೆ ತಂದು ಕೊಡಲು ಯೋಗ್ಯತೆಯಿಲ್ಲ. ಇವನಿಗ್ಯಾಕೆ ಬೇಕಿತ್ತು ಮಕ್ಕಳು. ಈಗ ಮುರಿದು ಬೀಳತ್ತೋ, ಆಗ ಮುರಿದು ಬೀಳತ್ತೋ ಅನ್ನೋ ಸೋಗೆ ಗುಡಿಸಲು ಕಟ್ಟಿಕೊಳ್ಳಲು ಇವನಿಗೆ ಈ ಬೆಟ್ಟದ ತಪ್ಪಲೇ ಬೇಕಿತ್ತಾ?
ಜಿಟಿ ಜಿಟಿ ಜಿನುಗುತ್ತಿದ್ದ ಮಳೆಯಲ್ಲೇ ಅಪ್ಪನನ್ನು ಶಪಿಸುತ್ತ ಸಟ ಸಟ ಹೆಜ್ಜೆ ಹಾಕುತ್ತಿದ್ದೆ…
ಕಂಬ್ಳಿ ಕೊಪ್ಪೆ ಹಾಕ್ಕೊಬೇಕಂತೆ!
ಛೀ, ಎಲ್ಲರಿಗೂ ಕೊಡೆಯಿದೆ, ನನಗೆ ಮಾತ್ರ ಕಂಬ್ಳಿ ಕೊಪ್ಪೆ, ಜರಿ ಕೊಪ್ಪೆ…
ನಾನು ಮಳೆಯಲ್ಲಿ ತ್ಯೊಯ್ದರೂ ಸರಿ, ಕಂಬ್ಳಿ ಕೊಪ್ಪೆ ಧರಿಸಲಾರೆ ಅಂತಾ ಹಠ ಮಾಡಿಕೊಂಡು ಹೊರಟ್ಟಿದ್ದೆ ಮನೆಯಿಂದ. ಮನೆಯಿಂದ ಹೊರಡುವಾಗ ಮಳೆ ಬರಲಿಲ್ಲ. ಮನೆ ಸೇರಲು ಹೊರಟಾಗ ಮಳೆ ಬಂತು. ಈಗಲಾದರೂ ಅಪ್ಪನಿಗೆ ಮಗನ ಕಷ್ಟ ಗೊತ್ತಾಗಲಿ ಅಂದುಕೊಳ್ಳುತ್ತಾ ಹೆಜ್ಜೆ ಹಾಕುತ್ತಿರುವಾಗಲೇ ಯಾರೋ ಕರೆದಂತಾಯಿತು.
ಏ ರವಿ ಅದ್ಯಾವ ಹಾಳಾದ ಹುಡುಗಿ ಕನಸು ಕಾಣುತ್ತಿದ್ಯೋ?! ಆಗಿಂದ ಕರಿತಾ ಇದ್ದಿ. ಒಂದ್ಸರಿಯೂ ತಿರುಗಿ ನೋಡಲು ಆಯಿಜಿಲ್ಲ್ಯ ನಿಂಗೆ…
ರಶ್ಮಿ, ಏದುಸಿರು ಬಿಡುತ್ತಾ ಗೊಣಗಿದಳು.
‘ಈ ಬಡಪಾಯಿ ಜೀವಕ್ಕೆ ಬದುಕೇ ಭಾರವಾಗಿದೆ. ಇದಕ್ಕೊಂದು ಮಣಭಾರದ ಹುಡುಗಿ ಬೇಕಾ? ಅಪ್ಪ ಹೆಂಡತಿ ಕಟ್ಟಿಕೊಂಡು, ಮಕ್ಕಳನ್ನು ಮಾಡಿ ಸಾಕುತ್ತಿರುವ ಸೌಭಾಗ್ಯವೇ ಸಾಕು’ ಹಾಗಂತ ಅನ್ನಿಸಿದರೂ, ಯಾಕೋ ಅವಳ ಹತ್ತಿರ ಅದನ್ನು ಹೇಳಲು ಮನಸ್ಸಾಗಲಿಲ್ಲ. ಏನೂ ಉತ್ತರ ನೀಡದೇ ಸುಮ್ಮನೆ ನನ್ನ ನಡುಗೆ ಮುಂದುವರೆಸಲು ಹೆಜ್ಜೆ ಮುಂದಿಟ್ಟೆ.
ಯಾಕೆ ಕೋಪಾನಾ? ಅಲ್ದೋ ಮಳೆಯಲ್ಲಿ ತೊಯ್ದುಕೊಂಡು ಹೋಗ್ತಾ ಇದ್ಯೆಲ್ಲಾ? ನಾಳೆ ಥಂಡಿ ಜ್ವರ ಬಂದು ಮಲಗಿದರೆ? ಬಾ ಮನೆವರಿಗೆ ಬಿಟ್ಟಿಕ್ಕೆ ಹೋಗ್ತಿ.
ಊಹುಂ, ಉತ್ತರಿಸುವ ತವಕವಿರಲಿಲ್ಲ. ಆದರೂ ಅವಳು ಹಠ ಬಿಡಲಿಲ್ಲ. ಮಳೆಯೂ ನಿಲ್ಲಲಿಲ್ಲ….
ಹಾಗೆ ಗೆಳತಿಯಾದವಳು ರಶ್ಮಿ. ಆವತ್ತು ಅವಳು ನನ್ನ ಉದ್ಧಟತನವನ್ನು ನೋಡಿ ಬಿಟ್ಟು ಹೋಗಿದ್ದರೆ…
ಗೊತ್ತಿಲ್ಲ, ನಾನಿಂದೇನಾಗಿರುತ್ತಿದ್ದೆ ಎಂದು ಖಂಡಿತವಾಗಿಯೂ ನನಗೆ ಗೊತ್ತಿಲ್ಲ.
***
ಮಲೆನಾಡು ಅಂದ್ರೆ ಆವತ್ತು ಹಾಗಿತ್ತು. ಊರಲ್ಲಿ ಹುಡುಗರ ಹಿಂಡು ಹಿಂಡಿತ್ತು. ಲಗೋರಿ, ಕಣ್ಣಮುಚ್ಚಾಲೆ ಆಟಕ್ಕೆಂದು ದೊಡ್ಡ ತಂಡವೇ ಇತ್ತು. ಆ ಎಲ್ಲಾ ಆಟಗಳು ನನ್ನ ಬದುಕಿನಲ್ಲೆ ಹುದುಗಿ ಹೋಗಿತ್ತಾದ್ದರಿಂದ ನಾನು ಯಾವ ಆಟವನ್ನು ಪ್ರತ್ಯೇಕವಾಗಿ ಆಡಲು ಹೋಗುತ್ತಿರಲಿಲ್ಲ. ಬಾಲ್ಯದಲ್ಲಿ ಎಲ್ಲರೊಟ್ಟಿಗೆ ಸೇರಿ ನಾನು ಆಟವಾಡುತ್ತಿದ್ದೆ. ಆದರೆ ತಿಳಿವಳಿಕೆ ಬಂದ ಮೇಲೆ ನನಗ್ಯಾಕೋ ಆಟಕ್ಕೆ ಹೋಗಲು ಮನಸ್ಸಾಗುತ್ತಿರಲಿಲ್ಲ.
‘ನೀನು ತೊಟ್ಟಿರುವ ಅಂಗಿ ನನ್ನದಾಗಿತು’ ಹಾಗಂತ ಯಾರಾದರೂ ಗಟ್ಟಿಯಾಗಿ ಹೇಳಿದರೆ ಅನ್ನೋ ಭಯ, ಯಾರೋ ತೊಟ್ಟು ಬಿಟ್ಟ ಅಂಗಿಯನ್ನು ಧರಿಸುವಷ್ಟು ದರಿದ್ರತೆ ನಮ್ಮ ಮನೆಯಲ್ಲಿದೆಯಲ್ಲಾ ಅನ್ನೋ ನೋವು…
ರಶ್ಮಿಗೆ ಅದ್ಯಾಕೆ ನನ್ನ ಮೇಲೆ ಕನಿಕರ ಉಕ್ಕಿ ಬಂತೋ ಗೊತ್ತಿಲ್ಲ. ಅದೆಲ್ಲಾ ಬಹುಶಃ ವಿದಿ ಲೀಲೆ ಇರಬೇಕು! ಆವತ್ತು ಅವಳು ನನ್ನ ನಿರುತ್ತರವನ್ನು ಲಕ್ಷಿಸದೆ ಛತ್ರಿಯಲ್ಲಿ ಮನೆವರೆಗೂ ಬಿಟ್ಟಳು. ಮನೆ ಬಾಗಿಲವರೆಗೆ ಬಂದ ಅವಳನ್ನು ಒಳಗೆ ಬಾ ಎಂದು ಕರೆಯಲು ಮನಸ್ಸಾಗಲಿಲ್ಲ. ಯಾಕೆಂದರೆ ಕರೆದರೂ ಅವಳಿಗೆ ಒಂದು ಲೋಟ ಕಾಫಿ ಕೊಡಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಅಂದು ನಮ್ಮ ಮನೆಯಿತ್ತು. ನಾನಂದು ರಶ್ಮಿ ಜತೆ ವರ್ತಿಸಿದ ವರ್ತನೆ ಕುರಿತಾಗಿ ನನಗೆ ಆವತ್ತು ಬೇಸರವಾಗಿತ್ತು. ಇವತ್ತಿಗೂ ಬೇಸರವಿದೆ!
ಮರುದಿನ ಬೆಳಗಾಗುವ ವೇಳೆಗೆ ನನ್ನ ವರ್ತನೆ ಬಗೆಗೆ ತೀರಾ ಬೇಸರವಾಯಿತು. ರಶ್ಮಿ ಹತ್ತಿರ ನನ್ನ ವರ್ತನೆಯ ಕುರಿತಾಗಿ ಕ್ಷಮೆ ಕೇಳಬೇಕು ಅನ್ನಿಸಿತು. ಅವಳ ಮನೆ ಹಾದಿ ಹಿದಿದು ಹೊರಟೆ. ಜುಗ್ಗ ತಿಮ್ಮಣ್ಣ ಭಟ್ಟ ಅವಳಪ್ಪ. ಒಂದಲ್ಲಾ ಒಂದು ಕೊಂಕು ಮಾತನಾಡುವ ಅವನ ಮನೆಗೆ ಹೋಗೋದು ಅಂದ್ರೆ ನನಗೆ ಮೊದಲಿನಿಂದಲೂ ಬೇಸರದ ಸಂಗತಿ. ಆದ್ರೂ ಹೋಗುವುದು ಅನಿವಾರ್ಯವಾಗಿತ್ತು. ನಾನು ಹೋಗುತ್ತಿರುವುದು ರಶ್ಮಿ ಮನೆಗೆ ಹೊರತು, ತಿಮ್ಮಣ್ಣ ಭಟ್ಟನ ಮನೆಗಲ್ಲ ಅಂದುಕೊಂಡು ಹೊರಟೆ….
***
ಎಸಿ ರೂಮಿನಲ್ಲಿ ಕುಳಿತು ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಿರುವವನಿಗೆ ಹೆಂಡತಿ ಕಾಫಿ ತಂದಿಟ್ಟದ್ದು ಗೊತ್ತಾಗಲಿಲ್ಲ. ಮನೆಗೆ ಬಂದ ರಶ್ಮಿಯನ್ನು ಕಾಫಿ ಕೊಡದೆ, ಒಳಕ್ಕೂ ಕರೆಯದೆ ಕಳುಹಿಸಿದ ಆ ಕ್ಷಣಗಳೇ ನನೆಪಾಗುತ್ತಿತ್ತು.
ಅವಳ ಮನೆಯತ್ತ ಹೆಜ್ಜೆ ಹಾಕತೊಡಗಿದೆ…
ಅವಳು ಈಗ ನನ್ನನ್ನು ಹೇಗೆ ರಿಸೀವ್ ಮಾಡಿಕೊಳ್ಳಬಹುದು, ನನ್ನ ಮೇಲೆ ಅವಳಿಗೆ ಕೋಪ ಬಂದಿರಬಹುದಾ…
ಇತ್ಯಾದಿಯಾಗಿ ಅವಳ ಕುರಿತಾಗಿ ಆಲೋಚಿಸುತ್ತಲೇ ಹೆಜ್ಜೆ ಹಾಕುತ್ತಿದ್ದೆ… ಗಕ್ಕನೆ ತಲೆಯೆತ್ತಿ ನೋಡಿದಾಗ ನನ್ನ ನಡುಗೆ ತಿಮ್ಮಣ್ಣ ಭಟ್ಟರ ಮನೆ ದಾಟಿ ಮೂರು ಮಾರು ದೂರ ಸಾಗಿತ್ತು. ನನ್ನನ್ನು ನಾನೇ ಶಪಿಸಿಕೊಳ್ಳುತ್ತಾ ಮತ್ತೆ ಹಿಂದಕ್ಕೆ ಬಂದೆ. ಅವಳ ಮನೆಯಂಗಳಕ್ಕೆ ಕಾಲಿಡುವಾಗಲೇ ಭಟ್ಟರ ದರ್ಶನವಾಯಿತು.
ಹೇಗಿದ್ದರೂ ಇನ್ನೊಬ್ಬರಿಂದ ಹೇಳಿಸಿಕೊಳ್ಳುವುದು ನನ್ನ ಜನ್ಮ ಸಿದ್ದ ಹಕ್ಕು, ಹಾಗಂದುಕೊಂಡೇ ಭಟ್ಟರ ಮನೆಯಂಗಳದೊಳಕ್ಕೆ ಕಾಲಿಟ್ಟೆ. ಪಾಪ ಭಟ್ಟರು ನನ್ನ ಮನಸ್ಸಿನ ಆಲೋಚನೆಗೆ ನಿಜಕ್ಕೂ ಮೋಸ ಮಾಡಲಿಲ್ಲ.
“ಮಳೆಗಾಲ ಶುರುವಾಯಿತು. ನಮ್ಮ ಮನೇಲಿ ಯಾವುದು ಹಳೇ ಬಟ್ಟೆ ಇಲ್ಲೆ ಮಾಣಿ. ನೀ ಬತ್ತೆ ಅಂತಾ ಮುಂಚೇನೆ ಹೇಳಿದ್ರೆ ಹಾವಗೊಲ್ಲ ಯೆಂಕನಿಗೆ ನಾನು ಬಟ್ಟೆ ಕೋಡ್ತಾ ಇರ್ಲೆ” ಭಟ್ಟರ ಮಾತು ಮುಂದುವರೆಯುತ್ತಿತ್ತೇನೋ ಅಷ್ಟೊತ್ತಿಗೆ ರಶ್ಮಿ ಎಂಟ್ರಿ ಆಯಿತು.
‘ಯಾವಾಗ ಬಂದ್ಯೋ, ಆಸ್ರಿಗೆ ಎಂಥಾ ಕುಡಿತೇ…’ಮಲೆನಾಡಿನ ಸಂಪ್ರದಾಯದಂತೆ ಮಾತು ಶುರುವಿಟ್ಟವಳು. ಭಟ್ಟರ ಎದುರಿಗೆ ಬಂದ ವಿಚಾರ ತಿಳಿಸಲು ಸಾಧ್ಯವಾಗಲಿಲ್ಲ. ತಿಳಿಸುವುದು ಸೌಜನ್ಯ ಅಂತಾನೂ ಅನ್ನಿಸಲಿಲ್ಲ. ಬಂದ ಸಂಕಟಕ್ಕೆ ಒಂದು ಕುಂಟು ನೆವ ಹೇಳಲೇಬೇಕಾದ ಅನಿವಾರ್ಯತೆ ಎದುರಾಯಿತು.
ಹೌದು, ಬಟ್ಟೆ ಇತ್ತಾ ಎಂದು ಕೇಳಲೇ ಬಂದಿದ್ದೆ. ತಂಗಿಗೆ ಶಾಲೆ ಶುರುವಾಯಿತು. ನಿನ್ನದು ಹಳೆ ಬಟ್ಟೆ ಯಾವುದಾದರೂ ಇತ್ತೇನೋ ಅಂತಾ ಬಂದೆ. ಸಿಗಬೇಕಾದ ಆತಿಥ್ಯ ಭಟ್ಟರಿಂದ ದಕ್ಕಿತು. ಆಸ್ರಿಗೆ ಎಂಥದು ಬೇಡ….ಅಂದವನೇ ನನ್ನ ಪಾಡಿಗೆ ನಾನು ಎದ್ದು ಹೊರಟೆ. ಕಣ್ಣಲ್ಲಿ ನೀರು ತುಂಬಿತ್ತು. ಅದು ಅವಳಿಗೂ ಗೊತ್ತಾಗಿತ್ತು. ಏನೂ ಮಾತಾಡದೇ ಅವಳು ಒಳಕ್ಕೆ ನಡೆದಳು.
ಘಟನೆಯನ್ನು ನೆನಪಿಸಿಕೊಳ್ಳುತ್ತಾ ನನ್ನನ್ನು ನಾನೇ ದೂಷಿಸಿಕೊಳ್ಳುತ್ತಾ ಸುಮಾರು ನಮ್ಮೂರಿನ ಅರಳಿಕಟ್ಟೆವರೆಗೆ ಬಂದಿದ್ದೆ. ಅಷ್ಟೊತ್ತಿಗೆ ಅವಳು ನನ್ನನ್ನು ಹಿಂಬಾಲಿಸಿಕೊಂಡು ಬಂದಳು. ಅವಳು ಯಾಕೆ ಅಷ್ಟು ರಿಸ್ಕು ತೆಗೆದುಕೊಂಡಳೋ ಗೊತ್ತಿಲ್ಲ. ಯಾಕೆಂದರೆ ತಪ್ಪು ನನ್ನದೇ ಇತ್ತು. ಅವಳಪ್ಪ ಆಡಿದ ಮಾತಿನಲ್ಲೇನೂ ತಪ್ಪಿರಲಿಲ್ಲ.
ಆದರೂ, ಭಟ್ಟರ ವರ್ತನೆ ಅವಳಿಗೆ ಬೇಸರ ತಂದಿರಬೇಕು, ಹಾಗಾಗಿಯೇ ಬಂದಿರಬೇಕು ಅಂದುಕೊಂಡೆ!
ಆದದ್ದೆಲ್ಲಾ ಒಳಿತಿಗೆ ಅನ್ನೋ ಹಿಂದಿನವರ ಮಾತು ಅಕ್ಷರಶಃ ನಿಜ. ತಿಮ್ಮಣ ಭಟ್ಟರು ಆವತ್ತು ಕುಚೋದ್ಯ ನುಡಿಯದಿದ್ದರೆ, ರಶ್ಮಿ ನನ್ನ ಪಾಲಿಗೆ ಖಂಡಿತಾ ಬೆಳಕಾಗುತ್ತಿರಲಿಲ್ಲ ! ನಾನಂದುಕೊಂಡಂತೆ ಅವಳಿಗೆ ಅವಳಪ್ಪನ ವರ್ತನೆ ಬೇಸರ ತರಿಸಿತ್ತು. ಪಾಪ ಹೆಣ್ಣುಮಗಳು ಕಣ್ಣೀರಿಟ್ಟಳು. ಯಾಕೋ ಅವಳ ಗುಣ ನಂಗೆ ತುಂಬಾ ಇಷ್ಟವಾಯಿತು. ನನ್ನ ನೋವು, ನಲಿವುಗಳನ್ನು ಅವಳ ಬಳಿ ಹೇಳಿಕೊಳ್ಳಬೇಕು ಅನ್ನಿಸಿತು. ಆದರೂ ಅದು ಸರಿಯಾದ ಜಾಗವಾಗಿರಲಿಲ್ಲ. ಮಾತನಾಡಲಿಕ್ಕಿದೆ ಬರುತ್ತೀಯಾ?ಹಾಗಂತ ಹೆಣ್ಣು ಮಗಳೊಬ್ಬಳನ್ನು ಕರೆಯುವುದು ಸರಿಯಲ್ಲ. ಅಷ್ಟಕ್ಕೂ ಕರೆದು ದುಃಖ ತೋಡಿಕೊಳ್ಳಲು ಅವಳೇನೂ ಬಂದುವಲ್ಲ, ಬಳಗವಲ್ಲ. ಹೈಸ್ಕೂಲ್ವರೆಗೆ ನನ್ನ ಜೂನಿಯರ್ ಆಗಿದ್ದವಳು, ನನ್ನ ಕುರಿತು ಒಂಚೂರು ತಿಳಿದುಕೊಂಡಿದ್ದವಳು ಅಷ್ಟೆ . ಹಾಗೆ ಆಲೋಚಿಸುತ್ತಾ ನನ್ನ ವರ್ತನೆ ಕುರಿತು ಕ್ಷಮೆ ಕೇಳಿದೆ. ನಾನೇಕೆ ಮನೆಗೆ ಕರೆಯಲಿಲ್ಲ ಎಂಬುದನ್ನೂ ಸಂಕೋಚವಿಲ್ಲದೇ ಹೇಳಿದೆ. ಸರಿ ನೀನ್ನಿನ್ನು ಹೊರಡು ಇಂಥ ಜಾಗದಲ್ಲಿ ನಾನು, ನೀನು ಒಟ್ಟಿಗೆ ಕಂಡರೆ ಜನರ ಬಾಯಲ್ಲಿ ಆಡಿಕೊಳ್ಳುವ ವಸ್ತುವಾಗುತ್ತೇವೆ ಎಂದೆ. ಅರ್ಥವಾಯಿತು ಅವಳಿಗೆ. ನಾಳೆ ಸಂಜೆ ೪ ಗಂಟೆ ಹೊತ್ತಿಗೆ ದೇವಸ್ಥಾನದ ಹತ್ತಿರ ಬಾ ಸುಮ್ಮನೆ ಹರಟೋಣ ಅಂದಳು. ತುಂಬಾ ಖುಷಿಯಾಯಿತು. ಅದೇ ಖುಷಿಯಲ್ಲೆ ಮನೆ ತಲುಪಿದೆ.
***
ಹೆಚ್ಚು ಏಕಾಂಗಿತನ ಬಯಸುತ್ತಿದ್ದವನು ನಾನು. ನನ್ನ ಕಷ್ಟಗಳನ್ನು ನಾನೇ ನುಂಗಿಕೊಳ್ಳಬೇಕು ಹೊರತು, ಬೇರೆಯವರಲ್ಲಿ ತೋಡಿಕೊಳ್ಳಬಾರದು ಎಂಬ ನಿಲುವು ನನ್ನದಾಗಿತ್ತು. ಬದುಕಿನ ಒಂದು ಹಂತದವರೆಗೂ ನನಗೆ ರಶ್ಮಿಯಂತಹ ಆಪ್ತರು ಇಲ್ಲದೇ ಹೋಗಿದ್ದು ನನ್ನ ಆ ನಿಲುವಿಗೆ ಕಾರಣವಾಗಿರಬಹುದು. ಯಾಕೋ ಅವಳ ಹತ್ತಿರ ನನ್ನ ಸಂಕಷ್ಟಗಳನ್ನು ಹೇಳಿಕೊಳ್ಳಬೇಕು ಅನ್ನಿಸಿತ್ತು. ಹಾಗಾಗಿ ಮಾರನೇ ದಿನ ಸಂಜೆ ನಾಲ್ಕು ಗಂಟೆಗೆ ಖುದ್ದಾಗಿ ನಮ್ಮೂರ ಹನುಮಂತನ ಗುಡಿಯ ಸಮೀಪ ಹೋದೆ.
ಊರ ತುದಿಯ ಬೊಮ್ಮನ ಗುಡ್ಡದಲ್ಲಿ ಹನುಮಂತನ ಗುಡಿಯಿದೆ. ಮಧ್ಯಾಹ್ನ ೧೨ ಗಂಟೆ ನಂತರ ಕಪಿಗಳನ್ನು ಬಿಟ್ಟರೆ ಮತ್ತ್ಯಾರೂ ಹನುಮಂತನನ್ನು ಮಾತಾಡಿಸಲು ಹೋಗುವುದಿಲ್ಲ! ನಮ್ಮೂರಿನ ಜನರಿಗೆ ದೇವರ ಮೇಲೆ ಭಕ್ತಿ ಇಲ್ಲವೆಂದೇನಲ್ಲ. ಆದರೂ ಸ್ವಂತ ಊರಿನ ದೇವರ ಮೇಲೆ ಒಂತರಹ ಅಸಡ್ಡೆ. ಪರ ಊರಿನ ಚೌಡಮ್ಮ, ಮಾರಮ್ಮನ ದರ್ಶನಕ್ಕೆ ಶುಕ್ರವಾರ, ಮಂಗಳವಾರ ತಪ್ಪದೇ ಹೋಗುತ್ತಾರೆ. ಶೆಟ್ಟಿಸರದ ಪೂಜಾರಪ್ಪನಿಗೆ ಶನಿ ದೇವರು ಮೈಮೇಲೆ ಬರುತ್ತೆ ಅಂತಾ ಶನಿವಾರ ಓಡುತ್ತಾರೆ. ಆದರೂ ಆಂಜನೇಯನಿಗೆ ಮಾತ್ರ ಮಲತಾಯಿ ಧೋರಣೆ! ಹಾಗಾಗಿಯೇ ಇರಬೇಕು ಅವಳು ಆ ಸ್ಥಳ ಸೂಚಿಸಿದ್ದು. ಯಾರಾದರೂ ಕಂಡರೆ ದೇವಸ್ಥಾನಕ್ಕೆ ಬಂದಿದ್ದೆ ಅಂತಲೂ ಹೇಳಬಹುದಲ್ಲ!
ನಾನು ದೇವಸ್ಥಾನದ ಬಳಿ ತಲುಪುವಾಗ ಗಂಟೆ ನಾಲ್ಕುಕಾಲು ಕಳೆದಿತ್ತು. ಅವಳು ಆಂಜನೇಯ ಗುಡಿ ಪಕ್ಕದಲ್ಲಿರುವ ಅರಳಿ ಮರದ ಹತ್ತಿರ ಕಾಯುತ್ತಾ ಕುಳಿತಿದ್ದಳು. ಸುಮ್ಮನೆ ಕಿರು ನಗು ಬೀರುತ್ತಾ ಎಂಟ್ರಿ ಕೊಟ್ಟೆ. ಸ್ವಲ್ಪ ಹೊತ್ತು ಮೌನವಾಗಿ ಕುಳಿತೆ. ಏನು ಮಾತಾಡಬೇಕೆಂದು ತೋಚದೆ! ಕೊನೆಗೆ ಅವಳೇ ಮಾತಿಗೆ ಶುರುವಿಟ್ಟಳು. ಮಾತು ಆರಂಭವಾಗಿದ್ದು ಕಾಡು ಹರಟೆ ಅಂತಲೇ. ನಂತರ ಸಾಗಿದ್ದು ಬದುಕಿನತ್ತ…ಸುಮಾರು ಎರಡೂವರೆ ತಾಸುಗಳ ಕಾಲದ ಸುದೀರ್ಘ ಮಾತುಕತೆ…
ಅಲ್ಲಿಂದ ಮುಂದೆ ರಶ್ಮಿ ನನ್ನ ಬದುಕಿನ ಅವಿಭಾಜ್ಯ ಅಂಗವಾದಳು. ಪಿಯುಸಿಗೆ ನಿಲ್ಲಿಸಿದ್ದ ನನ್ನ ಓದನ್ನು ಮುಂದುವರಿಸುವಂತೆ ಪ್ರೇರೇಪಿಸಿದಳು. ಎಷ್ಟೋ ಸಲ ಫೀಜಿಗೆ, ಪುಸ್ತಕಕ್ಕೆ ಅಂತಾ ಅವಳೇ ದುಡ್ಡು ಕೊಟ್ಟಿದ್ದೂ ಇದೆ. ನನ್ನನ್ನು ಐ.ಎ.ಎಸ್ ಆಫೀಸರ್ ಮಾಡಬೇಕೆಂಬ ಕನಸು ಕಂಡಳು. ಆ ನಿಟ್ಟಿನಲ್ಲಿ ಅಧ್ಯಯನ ಮಾಡಲು ಬೇಕಾದ ವ್ಯವಸ್ಥೆಗಳನ್ನೆಲ್ಲಾ ಒದಗಿಸಿ ಕೊಟ್ಟಳು. ಡಿಗ್ರಿ ಓದಲು ಶುರುವಿಟ್ಟ ನಂತರ ನಾನು ಸಣ್ಣ ಪುಟ್ಟ ಉದ್ಯೋಗ ಮಾಡಿ ಪುಡಿಗಾಸು ಸಂಪಾದನೆಗೆ ಶುರುವಿಟ್ಟೆ. ಆದರೂ ನನ್ನ ಬಿ.ಎ ಪದವಿಯ ಮುಕ್ಕಾಲು ಭಾಗ ಹೊಣೆ ಹೊತ್ತವಳು ಅವಳೇ. ಯಾರ್ಯಾರೋ ಸ್ನೇಹಿತೆಯರದ್ದೆಲ್ಲಾ ಪುಸ್ತಕ ತರಿಸಿಕೊಟ್ಟು, ಅದು ಓದು, ಇದು ಓದು ಅಂತಾ ಒಂದಿಷ್ಟು ಪುಸ್ತಕಗಳನ್ನು ಕೈಗಿಟ್ಟು…ನಿಜಕ್ಕೂ ಯಾವೊದೋ ಜನ್ಮದಲ್ಲಿ ನನ್ನ ಹತ್ತಿರದ ಬಂಧುವಾಗಿದ್ದಿರಬೇಕು. ನಿತ್ಯ ಸಿಗುತ್ತಿದ್ದಳು. ಗಂಟೆಗಟ್ಟಲೆ ಹರಟುತ್ತಿದ್ದೆವು.
ಬಿ.ಎ ಪದವಿ ಮುಗಿಸಿ ಐ.ಎ.ಎಸ್ ಅಧ್ಯಯನಕ್ಕೆ ಹೈದ್ರಾಬಾದ್ಗೆ ಹೋಗಬೇಕೆಂದು ತೀರ್ಮಾನವಾಯಿತು. ಆದರೂ ನನಗೆ ರಶ್ಮಿ ಬಿಟ್ಟು ಬದುಕುವುದು ಅಸಾಧ್ಯ ಅನ್ನಿಸತೊಡಗಿತ್ತು. ಆದಾಗಲೇ ನಾನು ಅವಳನ್ನು ಪ್ರೀತಿಸತೊಡಗಿದ್ದೆ. ಈ ವಿಚಾರವನ್ನು ಅವಳಿಗೆ ತಿಳಿಸಿದೆ.
“ಪ್ರೀತಿ ಪ್ರೇಮವೆಲ್ಲಾ ಬದುಕಿನಲ್ಲಿ ನೆಲೆ ಕಂಡ ನಂತರ. ನೀನು ಮೊದಲು ಬದುಕನ್ನು ಪ್ರೀತಿಸಬೇಕು. ಬದುಕನ್ನು ಪ್ರೀತಿಸುವ ಸ್ಥಿತಿ ನಿನ್ನ ಬದುಕಿನಲ್ಲಿ ಬರಬೇಕಾದರೆ ನಿನ್ನ ಕಾಲ ಮೇಲೆ ನೀನು ನಿಂತುಕೊಳ್ಳಬೇಕು. ನಿನ್ನನ್ನು ಆಡಿಕೊಂಡವರೆಲ್ಲಾ ಗೌರವಿಸುವ ಸ್ಥಿತಿಗೆ ತಲುಪಬೇಕು. ನಾನು ನಿನ್ನ ಜತೆ ಸದಾ ಇರುತ್ತೇನೆ. ಆದರೆ ಸಮಯ ನಿನ್ನ ಜತೆ ಇರದು. ಹಾಗಾಗಿ ಮೊದಲು ಐ.ಎ.ಎಸ್ ನಂತರ ಪ್ರೀತಿ, ಪ್ರೇಮ…”ಅಂತಾ ನಯವಾಗಿ ನನ್ನ ಮನಸ್ಸನ್ನು ಬದಲಿಸಿ ಹೈದ್ರಾಬಾದ್ಗೆ ಕಳುಹಿಸಿದಳು.
***
ಹೈದ್ರಾಬಾದ್ ಸೇರಿದ ನಂತರ ನನ್ನದು ಒಂತರಹ ವನವಾಸದ ಬದುಕು. ಓದು,ಓದು,ಓದು… ಇದನ್ನು ಬಿಟ್ಟರೆ ಸಮಯ ಸಿಕ್ಕಾಗ ಒಂದಿಷ್ಟು ಪುಡಿಗಾಸು ಸಂಪಾದನೆ. ಪತ್ರದ ಮೂಲಕ ನನ್ನ ಮತ್ತು ರಶ್ಮಿಯ ಒಡನಾಟ. ಅಪರೂಪಕ್ಕೆ ಫೋನ್. ಆದರೂ ನನ್ನ ಓದು, ಯೋಗಕ್ಷೇಮದ ಕುರಿತಾಗಿ ಅವಳ ಕಾಳಜಿ ಒಂಚೂರು ಕಮ್ಮಿಯಾಗಿರಲಿಲ್ಲ. ಸದಾ ನನಗೆ ಚೈತನ್ಯ ತುಂಬುವುದನ್ನು ಮರೆಯುತ್ತಿರಲಿಲ್ಲ. ಹೀಗೆ ಸಾಗಿತ್ತು ಎರಡು ವರ್ಷ…
ಐ.ಎ.ಎಸ್ ಪಾಸಾಯಿತು. ಪಾಸಾಗುತ್ತಲೇ ಕರ್ನಾಟಕದಲ್ಲೇ ನೌಕರಿಯೂ ಸಿಕ್ಕಿತು. ಅದೇ ಸಂತಸದಲ್ಲಿ ಊರಿಗೆ ಮರಳಿದೆ. ರಶ್ಮಿ ಜತೆಗೆ ಮಾತಾಡಲು ಮನ ಹಪಹಪಿಸುತ್ತಿತ್ತು. ಯಾಕೆಂದರೆ ನನ್ನ ಸಾಧನೆಯ ಕುರಿತು ನನಗಿಂತ ಹೆಚ್ಚು ಸಂತಸ ಪಡುವವಳು ಅವಳು. ಐ.ಎ.ಎಸ್ ಪಾಸಾಗಿದ್ದನ್ನು, ಉದ್ಯೋಗ ಸಿಕ್ಕಿದ್ದನ್ನು ಫೋನಿನಲ್ಲೇ ತಿಳಿಸಿದ್ದೆ. ತುಂಬಾ ಖುಷಿ ಪಟ್ಟಳು. ಅವಳಿಗೊಂದು ಜತೆ ಬಟ್ಟೆ ತರುವುದಾಗಿ ಭರವಸೆ ಕೊಟ್ಟಿದ್ದೆ. ಹನುಮಂತ ಗುಡಿಯ ಅರಳಿಕಟ್ಟೆ ಹತ್ತಿರ ನಾನು ಬರುವ ದಿನ, ಸಮಯ ಎಲ್ಲವನ್ನೂ ತಿಳಿಸಿದ್ದೆ.
ಮನೆಗೆ ಬಂದವನೇ ಓಡಿದ್ದು ಅರಳಿಕಟ್ಟೆಗೆ. ರಶ್ಮಿ ಬಂದಿದ್ದಳು. ಯಾಕೋ ಅವಳ ಮೊಗದಲ್ಲಿ ಗೆಲುವಿರಲಿಲ್ಲ. ಚೆಲ್ಲು ಚೆಲ್ಲು ನಗೆಯಿರಲಿಲ್ಲ. ಸಂಪ್ರದಾಯದಂತೆ ಮಾತಾಡಿಸಿದಳು. ಯಾಕೆ, ನಾನು ನಿನಗಿಂತ ದೊಡ್ಡ ವ್ಯಕ್ತಿ ಆಗುತ್ತೇನೆ ಅಂತಾ ಹೊಟ್ಟೆಕಿಚ್ಚಾ ಎಂದು ಅಣಗಿಸಿದೆ. ಅದಕ್ಕೂ ಅವಳ ಉತ್ತರವಾಗಲಿ, ಕುಚೋದ್ಯವಾಗಲೀ ಇರಲಿಲ್ಲ. ನಾನು ಬಟ್ಟೆ ಗಿಫ್ಟ್ ಕೊಡುತ್ತಿದ್ದ ಹಾಗೆ ಮದುವೆಗೆ ಅಡ್ವಾನ್ಸ್ ಆಗಿ ಉಡುಗೊರೆ ಕೊಡುತ್ತಿರುವುದಕ್ಕೆ ಧನ್ಯವಾದಗಳು ಅಂತಾ ಕರೆಯೋಲೆ ಕೊಟ್ಟು ಮಾತಿಗೂ ನಿಲ್ಲದೇ ಹೊರಟುಹೋದಳು.
ಊಹುಂ, ಖಂಡಿತಾ ನಾನು ಆ ಶಾಕ್ ಅನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೂ ಸ್ವೀಕರಿಸಲೇಬೇಕಿತ್ತು. ಕರೆಯೋಲೆ ಒಳಗೆ ಒಂದು ಪತ್ರ ಇಟ್ಟಿದ್ದಳು. ಅವಳು ಮೊದಲೇ ಮಾವನ ಮಗನ ಪ್ರೀತಿ ಬಲೆಗೆ ಬಿದ್ದಿದ್ದಳಂತೆ. ಆದರೆ ನನ್ನ ಸಾಧನೆಗೆ ಮುಳುವಾಗಬಾರದು ಅಂತಾ ಅದನ್ನು ಮುಚ್ಚಿಟ್ಟು ತನ್ನ ಮದುವೆಯನ್ನು ನನ್ನ ಐ.ಎ.ಎಸ್ ಮುಗಿಯುವವರೆಗೆ ಮುಂದೂಡಿದ್ದಳಂತೆ. ಹಾಗಂತ ಆ ಪತ್ರದಲ್ಲಿತ್ತು…
***
ಮಗ ಬಂದು ಅಪ್ಪ ಇವತ್ತು ಫಿಲ್ಮಂಗೆ ಹೋಗಬೇಕು ಅಂತಾ ಎಬ್ಬಿಸಿದ ಎಚ್ಚರವಾಯಿತು…
ಅವಳ ಮದುವೆಯ ನಂತರವೂ ನಾನು ಅವಳನ್ನು ಸಹೋದರಿ ಅಂತಾ ಸ್ವೀಕರಿಸಬಹುದಿತ್ತು. ಅವಳ ಋಣ ತೀರಿಸುವ ಪ್ರಯತ್ನ ಮಾಡಬಹುದಿತ್ತು. ಆದರೆ ಅದಕ್ಕೆ ಮನಸ್ಸು ಒಪ್ಪಲಿಲ್ಲ. ಪ್ರೇಮ ಭಗ್ನದ ಸಿಟ್ಟಿನಿಂದ ಅವಳ ಮದುವೆಗೂ ಹೋಗಲಿಲ್ಲ…
ಅಪ್ಪ ಬೇಗ ರೆಡಿಯಾಗು ಫಿಲಂಗೆ ಸಮಯವಾಯಿತು… ಮಗ ಶ್ರವಣ ಹಠ ಹಿಡಿದ. ಎ.ಸಿ ರೂಮಿನಿಂದ ಬಲವಂತವಾಗಿ ಕದಲಬೇಕಾಯಿತು. ನನ್ನ ಹಳೆ ನೆನಪಿಗೊಂದು ಬ್ರೇಕ್ ಹಾಕಿ ಫಿಲಂಗೆ ಹೊರಟ್ಟಿದ್ದೇನೆ…
(ಸೂಚನೆ:- ೭-೮ ತಿಂಗಳ ಹಿಂದೆ ಬರೆದ ಕಥೆಯಿದು. ಇದನ್ನೊಮ್ಮೆ ಬ್ಲಾಗ್ಗೆ ಹಾಕಿದ್ದೆ ಕೂಡಾ! ಮೊನ್ನೆ ಕುಳಿತವನಿಗೆ ಈ ಕಥೆ ತುಂಬಾ ಎಡಿಟ್ ಮಾಡುವ ಮೂಡು ಬಂತು! ಎಡಿಟ್ ಆದ ಕಥೆಯನ್ನು ಮತ್ತೊಮ್ಮೆ ಇಲ್ಲಿಟ್ಟಿದ್ದೇನೆ… )
prema bhagna nimage maatrave? Paapa aa hudugiya bhavanegalige bele athava arthavillave?