ಸಿಮೆಂಟ್, ಮರಳು ಮಿಶ್ರಣ ಮಾಡುವ ಮಂದಿಯ ಮಕ್ಕಳು, ಮರಳು ರಾಶಿಯ ಮೇಲೆ ಮಲಗಿ ಹಗಲುಗನಸು ಕಾಣುತ್ತಾರೆ. ಬಹು ಅಂತಸ್ತಿನ ಮನೆಗಳನ್ನು ನೋಡಿಯೇ ಬದುಕಿನುದ್ದಕ್ಕೂ ತೃಪ್ತರಾಗಿಬಿಡುತ್ತಾರೆ. ಚಿಂದಿ ಆಯುವವರು, ವಂಶ ಪರಂಪರೆ ಎಂಬಂತೆ ಆ ವೃತ್ತಿಗೇ ಅಂಟಿಕೊಂಡು ಬಿಡುತ್ತಾರೆ. ಮನೆ ನಿರ್ಮಾಣದ ಗುತ್ತಿಗೆದಾರ ಶ್ರೀಮಂತನಾಗುತ್ತಲೇ ಹೋಗುತ್ತಾನೆ…
ಡ್ಯಾನಿ ಬಾಯ್ಲ್ ಎಂಬ ಬ್ರಿಟಿಷ್ ನಿರ್ದೇಶಕರೊಬ್ಬರ ಕನಸು ಕಲ್ಪನೆಯ ‘ಸ್ಲಮ್ ಡಾಗ್ ಮಿಲಿಯನೇರ್’ ಚಲನ ಚಿತ್ರ ಬಹುವಿಧವಾಗಿ ಚರ್ಚೆಗೆ ಗುರಿಯಾಗಿದೆ. ಆಸ್ಕರ್ ಪ್ರಶಸ್ತಿಯ ಹತ್ತು ವಿಭಾಗಗಳಲ್ಲಿ ನಾಮಾಂಕಿತಗೊಂಡಿರುವ ಈ ಚಿತ್ರದ ಕುರಿತು ಹಲವರು ಖ್ಯಾತೆ ತೆಗೆದಿದ್ದಾರೆ. ಚಿಂದಿ ಆಯುವ ಮಂದಿಯ ಬದುಕನ್ನು ಮುಂದಿಟ್ಟುಕೊಂಡು ಭಾರತವನ್ನು ಕಳಪೆಯಾಗಿ ಚಿತ್ರಿಸಲಾಗಿದೆ ಎಂಬುದು ಹಲವರ ಆರೋಪ.
ನಿಜ, ದೇಶ ಭಕ್ತಿಯ ಆಯಾಮದಿಂದ ಅವಲೋಕಿಸಿದಾಗ ಪ್ರತಿಯೊಬ್ಬ ಭಾರತೀಯನೂ ಆ ಚಿತ್ರವನ್ನು ಹೀಗಳೆಯಲೇ ಬೇಕು. ಭಾರತದಲ್ಲಿ ಮಾತ್ರ ಸಮಸ್ಯೆಗಳಿರುವುದಾ? ದೂರದ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲಿ ವಾಸಿಸುವ ಮಂದಿಯೆಲ್ಲಾ ಸರ್ವ ಸುಖ ಸಂಪನ್ನರಾ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಆಲೋಚಿಸಿದಾಗಲೂ, ಡ್ಯಾನಿ ಬಾಯ್ಲ್ ಕುರಿತಾಗಿನ ಕೋಪ ಉಕ್ಕೇರುತ್ತದೆ. ಆದರೆ ಅದೆಲ್ಲವನ್ನೂ ಮೀರಿ ನಮ್ಮ ದೇಶದ ವಾಸ್ತವ ಚಿತ್ರಣವನ್ನು ಅವಲೋಕಿಸಿದರೆ…
ಅದು ಧಾರಾವಿ. ಮುಂಬಯಿ ಮಹಾನಗರಿಯ ಪಶ್ಚಿಮ ಹಾಗೂ ಕೇಂದ್ರಿಯ ರೈಲ್ವೆ ತಾಣಗಳ ನಡುವೆ ಇರುವ ಈ ಪ್ರದೇಶದ ಉತ್ತರಕ್ಕೆ ಮಿತಿ ನದಿಯಿದೆ. ಪಶ್ಚಿಮಕ್ಕೆ ಮಾಹಿಮ್ ಮತ್ತು ಬಾಂದ್ರಾಗಳು ಸಿಗುತ್ತವೆ. ೧೭೫ ಹೆಕ್ಟೇರ್ ವಿಸ್ತೀರ್ಣದ ಈ ಪ್ರದೇಶವು ದೇಶದ ಒಂದು ವರ್ಗದ ಜನರ ಪ್ರತಿನಿಯಂತಿದೆ. ಸರಿಸುಮಾರು ೬,೦೦,೦೦೦ ಜನ ವಸತಿ ಇರುವ ಪ್ರದೇಶವನ್ನು ಏಷ್ಯಾ ಖಂಡದ ಅತಿ ದೊಡ್ಡ ಸ್ಲಮ್ ಎಂದು ಗುರುತಿಸಲಾಗಿದೆ. ಇಲ್ಲಿನ ಮನೆಗಳ ಮಾಸಿಕ ಬಾಡಿಗೆ ೨೦೦ ರೂ.ಗೂ ಕಡಿಮೆ! ವಿದೇಶಕ್ಕೆ ಸರಕು ರವಾನಿಸುವ ಈ ಪ್ರದೇಶ ೬೫೦ ದಶಲಕ್ಷ ಡಾಲರ್ ವಹಿವಾಟು ಹೊಂದಿದೆ ಎಂಬುದೇನೋ ನಿಜವಾದರೂ, ಇಲ್ಲಿ ವಾಸಿಸುವ ಜನರು ಒಂದು ಹೊತ್ತಿನ ಅನ್ನಕ್ಕೂ ಪರದಾಡುತ್ತಾರೆ. ಮೂರು ಹೊತ್ತು ಸಮೃದ್ಧವಾಗಿ ಊಟ ಮಾಡಿ, ಮನೆಯಲ್ಲಿ ನೆಮ್ಮದಿಯಿಂದ ಮಲಗುವವ ಇಲ್ಲಿನ ಜನರ ಲೆಕ್ಕದಲ್ಲಿ ಆಗರ್ಭ ಶ್ರೀಮಂತ!
ವಾಸಿಸಲು ಸೂರಿಲ್ಲ. ಕುಡಿಯಲು ನೀರಿನ ವ್ಯವಸ್ಥೆಯಿಲ್ಲ. ಇನ್ನು, ಆರೋಗ್ಯದ ಪರಿಕಲ್ಪನೆಯೇ ಇಲ್ಲಿನ ಮಂದಿಗೆ ಇದ್ದಂತಿಲ್ಲ. ಈ ಪ್ರದೇಶದಲ್ಲಿ ೧,೪೪೦ ಜನರಿಗೆ ಒಂದು ಶೌಚಾಲಯವಿದೆ ಎಂಬುದನ್ನು ಇತ್ತೀಚಿನ ಅಂಕಿ-ಅಂಶಗಳು ಹೆಳುತ್ತವೆ. ಮಳೆಗಾಲ ಬಂತೆಂದರೆ ನೆರೆ ಹಾವಳಿ ತಪ್ಪಿದ್ದಲ್ಲ. ಬೆಸ್ತರು, ಮುಸ್ಲಿಂರನ್ನೇ ಅಕ ಸಂಖ್ಯೆಯಲ್ಲಿ ಹೊಂದಿರುವ ಈ ಪ್ರದೇಶಕ್ಕೊಮ್ಮೆ ಕಾಲಿಟ್ಟರೆ ಬದುಕು ಏನೆಂಬುದು ನಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಅಂದಹಾಗೆ, ಈ ಪ್ರದೇಶದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಆ ರೂಪುರೇಷೆಯ ಕರಡು ಪ್ರತಿಗಳೆಲ್ಲಾ ಸಂಬಂಧಿತ ಕಚೇರಿಗಳ ಕಡತಗಳಲ್ಲೇ ಬಾಕಿ ಉಳಿದಿದೆ!
ಮಾಹೀಮ್ ಕ್ರೀಕ್, ಪರೇಲ್, ದಾದರ್, ಮಾತುಂಗಾ…ಮುಂಬಯಿ ಎಂಬ ಮಹಾನಗರಿಯ ಮೈತುಂಬಾ ಇಂತಹದ್ದೇ ಕೊಳಗೇರಿ ಪ್ರದೇಶಗಳು ಕಾಣಸಿಗುತ್ತವೆ. ೧೯೫೦ರ ದಶಕಕ್ಕೆ ಹೋಲಿಸಿದರೆ, ಇವತ್ತು ಕೊಳಗೇರಿ ಪ್ರದೇಶಗಳ ಸಂಖ್ಯೆ ಮೂರರಷ್ಟು ಏರಿಕೆಯಾಗಿದೆ. ೧೯೫೦ರಿಂದ ೧೯೬೮ರ ಅವಯಲ್ಲಿ ಕೊಳಗೇರಿ ಪ್ರದೇಶದ ಪ್ರಮಾಣ ಶೇ. ೧೮ರಷ್ಟು ಏರಿಕೆಯಾಗಿದೆ. ೧೯೭೦ರ ದಶಕದಲ್ಲಿ ಈ ಪ್ರಮಾಣ ಸ್ವಲ್ಪ ಹೆಚ್ಚಳ ಕಂಡಿತ್ತು. ೧೯೮೫ರವೇಳೆಗೆ ಮುಂಬಯಿ ನಗರದ ಅರ್ಧದಷ್ಟು ಮಂದಿ ಕೊಳಗೇರಿಗಳಲ್ಲಿ ಜೀವನ ನಡೆಸುತ್ತಿದ್ದರು. ೧೯೯೦ರ ನಂತರ ಸ್ಲಮ್ ಪ್ರದೇಶದ ಪ್ರಮಾಣ ತುಸು ಇಳಿಕೆಯಾಗಿದೆ. ಮತ್ತೆ ೨೦೦೧ರ ವೇಳೆಯಲ್ಲಿ ನೋಡಿದರೆ, ಸುಮಾರು ೭೦ ಲಕ್ಷ ಜನ ಕೊಳಗೇರಿ ಬದುಕು ನಡೆಸುತ್ತಿರುವುದು ಕಾಣಸಿಗುತ್ತದೆ ಎಂದು ನಗರಾಭಿವೃದ್ಧಿ ಪ್ರಾಕಾರದ ಅಂಕಿ-ಅಂಶಗಳು ಹೇಳುತ್ತಿವೆ.
ಹೊಸದಿಲ್ಲಿ, ಕೋಲ್ಕತಾ, ಚೆನ್ನೈ, ಬೆಂಗಳೂರು…ಮೊದಲಾದ ಮಹಾನಗರಿಗಳ ಕಥೆಯೂ ಮುಂಬಯಿಗಿಂತ ಭಿನ್ನವೇನಲ್ಲ. ಬೆಂಗಳೂರಿನ ೨೧೮ ಪ್ರದೇಶಗಳು ಸ್ಲಮ್ ಏರಿಯಾಗಳೆಂದು ಕೊಳಚೆ ನಿರ್ಮೂಲನಾ ಮಂಡಳಿ ಘೋಷಿಸಿದೆ. ಭಾರತದಲ್ಲಿ ೬೮ ದಶಲಕ್ಷ ಜನರು ಕೊಳಗೇರಿಗಳಲ್ಲಿ ಬದುಕು ನಡೆಸುತ್ತಿದ್ದಾರೆ ಎಂಬುದನ್ನು ಕೇಂದ್ರ ಸರಕಾರವೇ ಒಪ್ಪಿಕೊಂಡಿದೆ. ದೇಶದಲ್ಲಿನ ೨೫ ದಶಲಕ್ಷ ಮಂದಿಗೆ ವಾಸಿಸಲು ಸೂರಿಲ್ಲ ಎಂಬ ವರದಿಯನ್ನು ಯೋಜನಾ ಆಯೋಗ ನೀಡಿದೆ.
ಹಾಗಂತ, ಕೊಳಗೇರಿ ನಿರ್ಮೂಲನೆ ಹೆಸರಲ್ಲಿ ಬಿಡುಗಡೆಯಾಗುವ ನಿಗೆ, ಯೋಜನೆಗಳಿಗೆ ಯಾವತ್ತೂ ಕೊರತೆಯಾಗಿಲ್ಲ! ಪ್ರತಿ ಬಜೆಟ್ ಮಂಡಿಸುವ ಸಮಯದಲ್ಲೂ ನಮ್ಮ ಜನನಾಯಕರಿಗೆ ಸ್ಲಮ್ ಏರಿಯಾದ ಜನರ ಮೇಲೆ ಪ್ರೀತಿ ಉಕ್ಕುಕ್ಕಿ ಬರುತ್ತದೆ! ಚುನಾವಣೆ ಬಂದಾಗ ರಾಜಕಾರಣಿಗಳು ಖುದ್ದಾಗಿ ಕೊಳಗೇರಿಗೆ ಹೋಗುತ್ತಾರೆ. ಅಲ್ಲಿ ಉಳಿಯುವ, ಊಟ ಮಾಡುವ ಪ್ರಹಸನವನ್ನೂ ನಡೆಸುತ್ತಾರೆ. ಹತ್ತಾರೂ ಚುನಾವಣೆ ಕಳೆದರೂ, ಸಾಕಷ್ಟು ಬಜೆಟ್ ಮಂಡನೆಯಾದರೂ, ಹಲವಾರು ಪಕ್ಷಗಳು ಗದ್ದುಗೆ ಏರಿದರೂ ಚಿಂದಿ ಆಯುವ ಮಕ್ಕಳಿಗೆ ಶಾಲೆಯ ಹಾದಿಯೇ ತಿಳಿಯುವುದಿಲ್ಲ. ತುತ್ತು ಅನ್ನಕ್ಕಾಗಿ ಹಪಹಪಿಸುವರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ.
ಕೊಳಗೇರಿ ಪ್ರದೇಶಗಳು ನಗರದಲ್ಲಿ ಮಾತ್ರ ಕಾಣ ಸಿಗುತ್ತವೆ, ದೇಶದ ಹಳ್ಳಿಗಳು ಸಮೃದ್ಧವಾಗಿವೆ ಎನ್ನಲೂ ಸಾಧ್ಯವಿಲ್ಲ. ದೇಶದ ಅದೆಷ್ಟೋ ಹಳ್ಳಿಗಳ ತಲೆ ಮೇಲೆ ಸಮಸ್ಯೆಗಳ ಸರಮಾಲೆಯೇ ಇದೆ. ಅಲ್ಲಿನವರ ಬದುಕು ಕೊಳಗೇರಿ ಜನರಿಗಿಂತ ಕನಿಷ್ಠ ಸ್ಥಿತಿಯಲ್ಲಿದೆ. ಇವೆಲ್ಲದರ ನಡುವೆಯೂ ಒಂದಷ್ಟು ಸ್ವಯಂಸೇವಕ ಸಂಘಟನೆಗಳು, ಎನ್ಜಿಒಗಳು ನಮ್ಮ ಜನರ ಬದುಕಿನ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸುತ್ತಿವೆ ಎಂಬುದು ಸಮಾಧಾನದ ಸಂಗತಿ.
ಆದರೂ, ಸಿಮೆಂಟ್, ಮರಳು ಮಿಶ್ರಣ ಮಾಡುವ ಮಂದಿಯ ಮಕ್ಕಳು, ಮರಳು ರಾಶಿಯ ಮೇಲೆ ಮಲಗಿ ಹಗಲುಗನಸು ಕಾಣುತ್ತಾರೆ. ಹಲವು ಅಂತಸ್ತಿನ ಮನೆಗಳನ್ನು ನೋಡಿಯೇ ಬದುಕಿನುದ್ದಕ್ಕೂ ತೃಪ್ತಿ ಪಡುತ್ತಾರೆ. ದಶಕಗಳು ಕಳೆದರೂ ಅವರಿಗೊಂದು ಶಾಶ್ವತ ನೆಲೆ ಸಿಗಲಾರದು, ಅಥವಾ ಒಂದು ಮನೆ ಕಟ್ಟಿಕೊಳ್ಳುವ ಮಟ್ಟಕ್ಕೆ ಅವರು ಬೆಳೆದು ನಿಲ್ಲಲಾರರು. ಚಿಂದಿ ಆಯುವವರು, ವಂಶ ಪರಂಪರೆ ಎಂಬಂತೆ ಆ ವೃತ್ತಿಗೇ ಅಂಟಿಕೊಂಡು ಬಿಡುತ್ತಾರೆ. ಮನೆ ನಿರ್ಮಾಣದ ಗುತ್ತಿಗೆದಾರ ಶ್ರೀಮಂತನಾಗುತ್ತಲೇ ಹೋಗುತ್ತಾನೆ…ಇದನ್ನೆಲ್ಲಾ ನೋಡಿದಾಗ ‘ಸ್ಲಮ್ ಡಾಗ್ ಮಿಲಿಯನೇರ್’ ಚಿತ್ರದಲ್ಲಿ ತಪ್ಪೇನಿದೆ ಅನ್ನಿಸುತ್ತದೆ. ನಮ್ಮ ದೇಶದ ನಿರ್ದೇಶಕರೊಬ್ಬರು ಆ ಚಿತ್ರ ಮಾಡಿದ್ದರೆ ಬಹುಶಃ ನಮ್ಮ ಮಾತಿನ ದಾಟಿ ಬದಲಾಗುತ್ತಿತ್ತೇನೋ! ಆ ಚಿತ್ರವನ್ನು ವಿಭಿನ್ನ ದೃಷ್ಟಿಕೋನದಲ್ಲಿ ನಾವು ವೀಕ್ಷಣೆ ಮಾಡಲು ಸಾಧ್ಯವಾಗುತ್ತಿತ್ತೇನೋ ಅಲ್ವಾ?!
ನಿಮ್ಮದೊಂದು ಉತ್ತರ