ಹಾಯ್ ಪುಟ್ಟಿ,
ಕಡೆಯದಾಗಿ ನಿನ್ನ ಕೈಗೊಂದು ಪತ್ರ ನೀಡಬೇಕು ಅನ್ನಿಸಿದರೂ, ಏನೂ ಬರೆಯಬೇಕು ಅಂತಾ ತೋಚುತ್ತಿಲ್ಲ. ನಿನ್ನ ನೆನಪಿನಲ್ಲಿ ಕಣ್ಣು ಒದ್ದೆ ಮಾಡಿಕೊಂಡು ಮಲಗಿದಾಗ ಒತ್ತರಿಸಿ ಬಂದ ಭಾವಗಳನ್ನೇ ಅಕ್ಷರರೂಪಕ್ಕೆ ಇಳಿಸುತ್ತಿದ್ದೇನೆ. ಗೆಳೆತನ ಪ್ರೀತಿಯಲ್ಲ, ಪ್ರೀತಿಗೊಂದು ಪ್ರತ್ಯೇಕ ಅರ್ಥವಿದೆ ಎಂಬ ಮಾತಿನ ಅರ್ಥ ಇವತ್ತು ಗೊತ್ತಾಗುತ್ತಿದೆ.
ನನ್ನ, ನಿನ್ನ ಗೆಳೆತನಕ್ಕೆ ಸಾಕಷ್ಟು ಇತಿಹಾಸವಿದೆ. ಆದರೂ ನನ್ನ ಭಾವನೆಯನ್ನು ನೀನು ಅರ್ಥಮಾಡಿಕೊಳ್ಳಲಿಲ್ಲ. ಅರ್ಥಮಾಡಿಕೊಂಡಿಲ್ಲ ಎಂಬುದು ನನಗೆ ಅರ್ಥವಾಗಲಿಲ್ಲ! ಹಾಗಾಗಿಯೇ ನೀನಿವತ್ತು ನಮ್ಮಿಬ್ಬರ ಭಾವಲಹರಿಯಾಚೆ ಹೊರಟು ನಿಂತಿರುವೆ. ಮುಂದೇನು ಹೇಳಬೇಕು ಅಂತಾನೇ ತೋಚುತ್ತಿಲ್ಲ…
ಅದೆಷ್ಟೋ ಸಲ ನನ್ನ ಭಾವನೆಗಳು ನನಗೇ ಅರ್ಥವಾಗುವುದಿಲ್ಲ. ಆದರೂ ನೀನು ನನ್ನ ಭಾವನೆಯನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು ಎಂದು ನಾನೇಕೆ ಹಠ ಮಾಡುತ್ತಿದ್ದೇನೆ? ಎಷ್ಟು ಸಲ ಆಲೋಚಿಸಿದರೂ ಉತ್ತರ ಹೊಳೆಯುತ್ತಿಲ್ಲ.
ಜತೆಗಿದ್ದಷ್ಟೂ ದಿನ ನಿನ್ನನ್ನು ಅಣಕಿಸುತ್ತಿದ್ದೆ. ಆಡಿಕೊಳ್ಳುತ್ತಿದೆ. ಹಂಗಿಸುತ್ತಿದ್ದೆ. ನನ್ನ ಅಂತಹ ಮಂಗಚೇಷ್ಟೆಗಳಿಗಾಗಿ ನಾನೀಗ ಯಾರನ್ನು ಹುಡುಕಿಕೊಳ್ಳಲಿ? ಯಾರನ್ನು ಕಲ್ಪಿಸಿಕೊಂಡು ಪುಟ್ಟಿಗೊಂದು ಪತ್ರ ಬರೆಯಲಿ?
‘ನಾನು ಇನ್ನೊಬ್ಬರ ಪಾಲಾಗುತ್ತಿದ್ದೇನೆ’ ಹಾಗಂತ ನೀನು ನಗುತ್ತಲೇ ಹೇಳಿದೆ. ನಾನು ನಿನ್ನನ್ನು ಪೀಡಿಸಿದೆ. ನಿನ್ನ ಜತೆ ಸೇರಿ ನಾನೂ ನಕ್ಕೆ! ನನ್ನ ಹೃದಯದ ನಗುವನ್ನು ಒಳಗೊಳಗೇ ಹಿಡಿದಿಟ್ಟುಕೊಂಡೆ. ಅಷ್ಟೊಂದು ಮುಖವಾಡ ಹಾಕಿಕೊಳ್ಳುವ ಅಗತ್ಯವೇನಿತ್ತು ನನಗೆ? ಮತ್ತದೇ ಕಣ್ಣೀರು, ಹಳೆಯ ನೆನಪುಗಳು, ಎದೆಯಲ್ಲಿ ಮಾಸುತ್ತಿರುವ ಭಾವಗಳು…ಇವಿಷ್ಟು ಬಿಟ್ಟು ಗೀಚಲು ಬೇರೇನೂ ಹೊಳೆಯುತ್ತಿಲ್ಲ. ಗೀಚಿದರೂ ಪ್ರಯೋಜನವಿಲ್ಲ.
ಒಂದು ಹುಡುಗಿಗಾಗಿ ಬದುಕುವಷ್ಟು ಕನಿಷ್ಠ ವ್ಯಕ್ತಿತ್ವ ನನ್ನದಾಗಬೇಕಾ? ಹಾಗೊಂದು ಪ್ರಶ್ನೆ ಕೇಳಿಕೊಂಡಾಗಲೆಲ್ಲಾ ಬದುಕಿಗೊಂದು ಹೊಸ ಚೈತನ್ಯ ಬರುತ್ತದೆ. ಸಾಧನೆ ಮಾಡುವ ಹಂಬಲ ಗರಿಗೆದರಿ ನಿಲ್ಲುತ್ತದೆ. ಆ ಗರಿ ಕಣ್ಣೇದುರಿಗೆ ಕುಣಿದಾಡುತ್ತಿರುವಾಗಲೇ ನಿನ್ನ ಕಳಕೊಂಡ ನೆನಪು ಚಿಮ್ಮುತ್ತದೆ. ನಿನ್ನನ್ನೇ ಪಡೆಯಲಾಗದ ಮೇಲೆ, ಬದುಕಿನಲ್ಲಿ ಸಾಸಿ ಪಡೆಯಲಿಕ್ಕಿನ್ನೇನು ಬಾಕಿ ಉಳಿದಿದೆ? ಎಂಬ ಪ್ರಶ್ನೆ ಕಾಡುತ್ತದೆ.
ದಿನದಲ್ಲಿ ಮೈದಳೆದು ನಿಲ್ಲುವ ಹತ್ತೆಂಟು ಮುಖಗಳು, ನಿಮಿಷ ನಿಮಿಷಕ್ಕೂ ಬದಲಾಗುವ ಚಹರೆಗಳು, ಕ್ಷಣ ಕ್ಷಣಕ್ಕೂ ಕಾಡುವ ದ್ವಂದ್ವ, ಇವುಗಳ ನಡುವೆಯೇ ಪುಟಿದೇಳುವ ಸ್ಥಿರತೆ…ಹೌದು, ಬದುಕೆಂದರೆ ಇವಿಷ್ಟೆ…
ಬದುಕೇ ಅಪೂರ್ಣ ಅನ್ನಿಸುತ್ತಿರುವಾಗ, ಕಾಗದ ಪೂರ್ಣಗೊಳಿಸುವ ವ್ಯವಧಾನ ನನ್ನಲ್ಲಿ ಉಳಿದಿಲ್ಲ. ಸೋ, ಇಲ್ಲಿಗೇ ಪತ್ರ ಮುಗಿಸುತ್ತಿರುವೆ. ಕಡೆಯ ಘಳಿಗೆಯಲ್ಲಿ ಕೈಕೊಟ್ಟು ಹೋಗುತ್ತಿರುವವಳು ಅಂತಾ ಆರೋಪಿಸಿ ಪತ್ರಕೊಟ್ಟ ಅಂತಾ ನೀನು ಮಾತ್ರ ಕಣ್ಣೀರಿಡಬೇಡ ಕೂಸೇ! ನಿನ್ನ ಬದುಕು ಸದಾ ಹಸನಾಗಿರಲಿ…
ಇಂತಿ
…
ಛೇ ಪುಟ್ಟಾ..!
“ಒಂದು ಹುಡುಗಿಗಾಗಿ ಬದುಕುವಷ್ಟು ಕನಿಷ್ಠ ವ್ಯಕ್ತಿತ್ವ ನನ್ನದಾಗಬೇಕಾ? ”
ಒಂದು ಹುಡುಗಿಗಾಗಿ ಬದುಕುವುದು ಕನಿಷ್ಠ ವ್ಯಕ್ತಿತ್ವ ಅಂತ ನಿಮಗ್ಯಾರು ಹೇಳಿದ್ದು ? ಬದುಕುವುದು ಹುಡುಗಿಗಾಗಿ ಅಥ್ವಾ ಹುಡುಗನಿಗಾಗಿ ಅಲ್ಲ.. ಹಾಗೊಂದು ವೇಳೆ ಇಂಥದ್ದೊಂದು ಮಾತು ಹೇಳಿದರೆ ಅದು ಅವರ ವ್ಯಕ್ತಿತ್ವಕ್ಕಾಗಿ ಇರುತ್ತೆ ಅನ್ನೋದು ನನ್ನ ಅಭಿಪ್ರಾಯ… ಅಂಥ ವ್ಯಕ್ತಿತ್ವ ನಮಗೆ ದೊರಕಿದ್ದೇ ಆದಲ್ಲಿ ಅವರಿಗಾಗಿ ಬದುಕೋದು ನಿಜಕ್ಕೂ ವರ್ತ್ ಅಂತ ನನಗನಿಸುತ್ತೆ.