( ಲಘು ಎನ್ನಲಾಗದ, ಗಂಭೀರವೂ ಅಲ್ಲದ ಒಂದು ಪ್ರಬಂಧ ಬರಹ!)
‘ಲಕ್ಕಿಜಡ್ಡಿ ಸುನೀತಕ್ಕನ ಮಗ ಸತ್ತು ಹೋದ್ನಡ…’ಅಮ್ಮ ಫೋನಿನಲ್ಲಿ ಅಳುತ್ತಾ ಹೇಳಿದಳು.
‘ಪಾಠಿಚೀಲ ತಗಂಡು ಶಾಲೆಗೆ ಹೊರಟವ ದಡಾರನೆ ಬಿದ್ನಡ, ನೋಡತಂಕ ಜೀವ ಹೋಗಿತ್ತಡ. ಚೆಂದದ ಮಾಣಿ, ಇನ್ನೂ ಮೂರನೇ ಕ್ಲಾಸು…’ಅಮ್ಮ ಅಳು ಮುಂದುವರಿಸಿದಳು.
‘ಅಮ್ಮ ಸುಮ್ನಿರೆ ನಾನೇನು ಇಷ್ಟು ಬೇಗ ಸಾಯದಿಲ್ಲೆ…’
ಯಾವ ಧೈರ್ಯದ ಮೇಲೆ ಅಮ್ಮನಿಗೆ ನಾನು ಆ ಮಾತು ಹೇಳಿದೆ? ಯಾರ ಸಾವು ಯಾವ ಘಳಿಗೆಯಲ್ಲಿ ಬರುವುದೆಂದು ಬಲ್ಲವರ್ಯಾರು?
ಬದುಕಿನ ಕುರಿತಾಗಿ ನನ್ನಲ್ಲಿರುವ ಕನಸುಗಳು ಬದುಕುವ ಬಲವಾದ ನಂಬಿಕೆ ಹುಟ್ಟಿಸಿವೆಯಾ? ಅಥವಾ ಪಾಪಿ ಚಿರಾಯು ಎಂಬ ಮಾತನ್ನು ನಾನು ಬಲವಾಗಿ ನಂಬುತ್ತಿದ್ದೇನಾ?!
ಏನೋ ಗೊತ್ತಿಲ್ಲ ಅಮ್ಮನನ್ನು ಸಮಧಾನಗೊಳಿಸಲು ಆ ಘಳಿಗೆಯಲ್ಲಿ ಹಾಗೆ ಹೇಳಿರಲೂಬಹುದು.
ಭೀಷ್ಮ ,
ಇವ ಇಚ್ಛಾ ಮರಣಿಯಾಗಿದ್ದನಂತೆ. ಹಾಗಂತ ಅದ್ಯಾವುದೋ ಕಥೆಯಲ್ಲಿ ಓದಿದ ನೆನಪು. ತನ್ನ ಸಿಂಹಾಸನವನ್ನು ತ್ಯಾಗ ಮಾಡಿ ತಂದೆ ಶಂತನುವನ್ನು ಭೀಷ್ಮ ಮದುವೆ ಮಾಡಿಸಿದ್ದನಂತೆ. ಅದರಿಂದ ಸಂತೋಷಗೊಂಡ ಶಂತನು ಮಗನಿಗೆ ಇಚ್ಛಾಮರಣಿಯಾಗುವ ವರ ಕೊಟ್ಟಿದ್ದನಂತೆ.
ಯುದ್ಧದಲ್ಲಿ ಸೋತು ರಂಗಭೂಮಿಯಿಂದ ಹೊರನಡೆದ ಭೀಷ್ಮ ಉತ್ತರಾಯಣ ಬರುವವರೆಗೂ ಸಾವನ್ನು ಕೈಯಲ್ಲೇ ಹಿಡಿದಿಟ್ಟುಕೊಂಡಿದ್ದನಂತೆ!
ನನ್ನ ಅಪ್ಪನಿಗೂ ಇನ್ನೊಂದು ಮದುವೆ ಮಾಡಿಸಿದರೆ ನನಗೂ ಅಂತಹದ್ದೊಂದು ವರ ದೊರಕಬಹುದಾ?! ವರ ದೊರಕದಿದ್ದರೂ ಅಮ್ಮನಿಂದ ಒಂದಿಷ್ಟು ಬೈಗುಳ, ಸಮಾಜದಿಂದ ಛೀಮಾರಿಯಂತೂ ದೊರಕುತ್ತದೆ. ಅಪ್ಪನೊಬ್ಬ ನನ್ನ ಬೆನ್ನು ತಟ್ಟಬಹುದು. ಅದು ಅನಿವಾರ್ಯವಾಗಿ!
ಸುನೀತಕ್ಕನ ಮಗನ ಸಾವಿನ ಸುದ್ದಿ ಕೇಳಿದ ಸಂಜೆ ಸಾವಿನ ಕುರಿತು ಏನಾದರೂ ಬರೆಯಬೇಕು ಅನ್ನಿಸಿತು. ಎಚ್ಚರವಾದಾಗ ಮಧ್ಯರಾತ್ರಿ ೨.೩೦ ಆಗಿತ್ತು. ಸಾವಿನ ಕುರಿತಾಗಿ ಬರೆಯಬೇಕಾದ ವಿಚಾರ ತಲೆಯಲ್ಲಿ ಸ್ಪಷ್ಟವಾಗಿ ತಿರುಗಾಡತೊಡಗಿತ್ತು. ಎದ್ದು ಬರೆಯೋಣವೆಂದರೆ ಕರೆಂಟ್ ಇರಲಿಲ್ಲ. ಬೆಳಕು ಹರಿಯುವುದರೊಳಗೆ ನಾನೇನಾದರೂ ಸತ್ತರೆ? ಎಂಬ ಪ್ರಶ್ನೆ ತಲೆಯನ್ನು ಕೊರೆಯತೊಡಗಿತು. ಎದೆಯಲೆಲ್ಲಾ ಒಂತರಹ ಸಂಕಟ ಶುರುವಾಯಿತು. ಪಕ್ಕದಲ್ಲಿ ಮಲಗಿದ್ದ ರಾಘುವನ್ನು ಎಬ್ಬಿಸಿ ನನಗಾಗುತ್ತಿರುವ ಸಂಕಟವನ್ನು ಹೇಳಲಾ?
ಪ್ರಯೋಜನವೇನು?
ಭಾವ ರಾತ್ರಿಯಿಡಿ ಸಾವಿನ ಕುರಿತಾಗಿ ಬರೆಯಬೇಕು ಅನ್ನುತ್ತಿದ್ದ ಎಂದು ರಾಘು ಬಂದವರ ಹತ್ತಿರವೆಲ್ಲಾ ದುಖ ತೋಡಿಕೊಳ್ಳಬಹುದು. ಅಥವಾ ಈ ಮಧ್ಯರಾತ್ರಿಯಲ್ಲಿ ಆಸ್ಪತ್ರೆಗೆ ಹೋಗೋಣ ಅನ್ನಬಹುದು. ಭಾವನಿಗೆ ಹೀಗಾಗಿದೆ ಅಂತಾ ಯಾರ್ಯಾರಿಗೋ ಫೋನ್ ಮಾಡಿ ತಿಳಿಸಬಹುದು. ನನ್ನಿಂದಾಗಿ ಒಂದಿಷ್ಟು ಜನಕ್ಕೆ ಉಪದ್ರ ಕೊಡಬಹುದು…ಆಲೋಚೆನೆಗೆಲ್ಲಾ ವಿರಾಮ ಹೇಳಿ ನಿದ್ದೆಗೆ ಜಾರಿದ್ದೆ ಅಂತಾ ನನಗೆ ಗೊತ್ತಾಗಿದ್ದು ಬೆಳಿಗ್ಗೆ ಎದ್ದ ಮೇಲೇನೇ!
ಅಜ್ಜ ಏಕಾದಶಿ ದಿನ ಸತ್ತಿದ್ದರಂತೆ. ತಮ್ಮ ಪರಮಾಪ್ತ ಗೆಳೆಯರಾದ ಖಂಡಿಕದ ಹೆಗಡೆಯವರನ್ನು ಕರೆಸಿ, ‘ಹೆಗಡೆ ನಾನಿನ್ನು ಹೋಗಿ ಬತ್ತಿ’ ಅಂತಾ ಹೇಳಿ ಸತ್ತಿದ್ದರಂತೆ. ಅಜ್ಜಿ ಕೈಯಿಂದ ಎಣ್ಣೆ ರೊಟ್ಟಿ ಮಾಡಿಸಿಕೊಂಡು, ತಿಂದು ಆದ ನಂತರವೇ ಅಜ್ಜ ಕೊನೆಯುಸಿರೆಳೆದಿದ್ದಂತೆ. ಹಾಗಂತ ಅಪ್ಪ ಯಾವಾಗಲೂ ಕಥೆ ಹೇಳುತ್ತಿರುತ್ತಾರೆ.
ಹೆರಿಡಿಟಿಗೆ ಸಂಬಂದಿಸಿದ ರೋಗಗಳೆಲ್ಲಾ ಅಜ್ಜನಿಂದ ಮೊಮ್ಮಗನಿಗೋ, ಮೊಮ್ಮಳಿಗೋ ಬರುತ್ತವಂತೆ. ಹಾಗಂತ ವಿಜ್ಞಾನದ ಪಾಠದಲ್ಲಿ ಓದಿದ ನೆನಪು. ಸಾವು ಕೂಡ ಅಂತಹದ್ದೇ ಒಂದು ರೋಗವಾಗಿರಬಹುದಾ? ನನಗೂ ಅಜ್ಜನಂತಹದ್ದೆ ಸಾವು ಬರಬಹುದಾ…?
ಹನುಮಂತ, ಜಾಂಬವ…ಇತ್ಯಾದಿ ಮಹಾಪುರುಷರೆಲ್ಲಾ ಚಿರಂಜೀವಿಗಳು ಎಂದು ಪುರಾಣದ ಕಥೆಯಿದೆ. ಚಿರಂಜೀವಿ ಅಂದರೆ ಅವರಿಗೆಲ್ಲಾ ಸಾವೇ ಇಲ್ಲವಂತೆ ಎಂದು ಅಜ್ಜಿ ಕಥೆ ಹೇಳುತ್ತಿದ್ದಳು. ಹಾಗಾದರೆ ಆ ಹನುಮ ಈಗ ಎಲ್ಲಿದ್ದಾನೆ ಅಜ್ಜಿ ಅಂತಾ ಕೂತುಹಲದಿಂದ ಕೇಳಿದ್ದೆ.
ಭೂಮಿಯ ಮೇಲೆ ಇದ್ದಾನೆ. ಹಿಮಾಲಯಕ್ಕೆ ಹೋಗಿ ತಪ್ಪಸ್ಸು ಮಾಡಿದವರಿಗೆಲ್ಲಾ ದರ್ಶನ ಕೊಡುತ್ತಾನೆ. ಅಂತಹ ಪುಣ್ಯ ನಮಗೆಲ್ಲಾ ಇಲ್ಲ ಬಿಡು. ನಮ್ಮ ಪೂರ್ವಜನ್ಮದ ಪಾಪ ಕಳೆದಿಲ್ಲ ಬಿಡು. ಪಡೆದುಕೊಂಡು ಬಂದಿದ್ದಷ್ಟನ್ನು ಅನುಭವಿಸಲೇ ಬೇಕು…ಅಜ್ಜಿ ಅದ್ಯಾವುದೋ ಲೋಕದಲ್ಲಿ ಮುಳುಗಿ ಗುನುಗುತ್ತಿದ್ದಳು. ಏನು ಅರ್ಥವಾಗದ ನಾನು ತಿರುಗಿ ಪ್ರಶ್ನೆ ಕೇಳಿದರೆ, ತಲೆ ಹರಟೆ ದೇವರ ಕುರಿತಾಗಿ ಹಾಗೆಲ್ಲ ಪ್ರಶ್ನೆ ಕೇಳಬಾರದು. ಈಗ ಅನುಭವಿಸುತ್ತಿರುವುದೇ ಸಾಕು ಎನ್ನುತ್ತಿದ್ದಳು.
ಕೋತಿ, ನಾನೇನಾದ್ರೂ ಸತ್ತು ಹೋದರೆ…ಗೆಳತಿ ತೀರಾ ಭಾವುಕಳಾದಾಗ ಇಂತಹದ್ದೊಂದು ಪ್ರಶ್ನೆ ಕೇಳುತ್ತಿರುತ್ತಾಳೆ.
ಸತ್ತ ಹನ್ನೆರಡನೇ ದಿನ ನಿನಗಿಷ್ಟವಾದ ಸಿಹಿಯನ್ನು ನಿನ್ನನ್ನು ಸ್ಮರಿಸಿಕೊಂಡು ತಿನ್ನುತ್ತೇನೆ!!!
ಅಲ್ಲ, ಅದು ಹಾಗಲ್ಲ ಕೋತಿ ನಾನು ನಿನ್ನನ್ನು ಇಷ್ಟು ಪ್ರೀತಿಸುತ್ತೀನಿ…
ಮತ್ತಿನೇನು? ಯಾರಾದರೂ ಅಷ್ಟೆ , ಸತ್ತವರಿಗೆ ಎಷ್ಟು ದಿನ ಅಂತಾ ಕಣ್ಣೀರು ಹಾಕುತ್ತಾರೆ. ಒಂದು, ಎರಡು, ಮೂರು ದಿನ…ತಿಂಗಳು…ವರ್ಷ…ಐದು ವರ್ಷ..? ಶ್ರಾದ್ಧ, ವೈದಿಕ…ಇತ್ಯಾದಿಗಳೆಲ್ಲಾ ಹುಟ್ಟಿಕೊಂಡಿದ್ದು ಯಾಕೆ ಅಂದುಕೊಡಿದ್ದೀಯಾ? ಸತ್ತವರನ್ನು ವರ್ಷಕ್ಕೊಮ್ಮೆಯಾದರೂ ನೆನಪಿಸಿಕೊಳ್ಳಲಿಕ್ಕೇ ಅಲ್ಲವೇ?
ಮಗ ಇಲ್ಲ ಅಂತಾ ಸುನೀತಕ್ಕ ಒಂದಿಷ್ಟು ದಿನ ಅಳುತ್ತಾಳೆ. ಊಟ, ನಿದ್ದೆ ಬಿಡುತ್ತಾಳೆ. ಬರುಬರುತ್ತಾ ಸಹಜ ಸ್ಥಿತಿಗೆ ಮರಳುತ್ತಾಳೆ. ಆಮೇಲೆ ಮಗನ ನೆನಪಾದಾಗಲೆಲ್ಲಾ ಕಂಬನಿ ಸುರಿಸುತ್ತಾಳೆ. ಮಗನಂತಹದ್ದೇ ಇನ್ನೊಂದು ವಸ್ತು ಕಣ್ಣೇದುರಿಗೆ ಗೋಚರವಾದಗಲೆಲ್ಲಾ ಬಿಕ್ಕಿಸುತ್ತಾಳೆ.
ನಾನು ಹಾಗೇ. ನೀನು ಸತ್ತರೆ, ನಿನ್ನಂತಹದ್ದೇ ಇನ್ನೊಂದು ಹುಡುಗಿಯನ್ನು ಹುಡುಕಿಕೊಳ್ಳುವವರೆಗೂ ನಿನ್ನನ್ನು ನೆನಪಿಸಿಕೊಂಡು ಅಳುತ್ತೇನೆ!
ಕಟು ಸತ್ಯ ಹೇಳಿದರೆ ಕಣ್ಣೀರು ಸುರಿಸುತ್ತಾ ನನ್ನ ತೊಡೆಯ ಮೇಲೇ ಮಲಗುತ್ತಾಳೆ ಪಾಪಿ!
ವೈಕುಂಠಕ್ಕೆ ದಾರಿ ಯಾವುದಯ್ಯಾ…ಬೈಕಿನಲ್ಲಿ ಹೋಗುವಾಗಲೆಲ್ಲಾ ಗೆಳೆಯ ಈ ಹಾಡನ್ನು ಹಾಡುತ್ತಾನೆ.
ದೊರೆ, ನಾನು ಜೀವವನ್ನು ಎಡಗೈನ, ಕಿರು ಬೆರಳಿನ, ಉಗುರಿನ ತುದಿಯಲ್ಲಿ ಹಿಡಿದುಕೊಂಡಿದ್ದೇನೆ…
ಯಾವತ್ತಾದರೂ ಸಾಯೋದೇ ಅಲ್ವೇನೋ…ಅವ ಹಾಡು ಮುಂದುವರಿಸುತ್ತಾ ಬೈಕಿನ ವೇಗವನ್ನು ಹೆಚ್ಚಿಸುತ್ತಾನೆ. ಹಾಗಂತ ಇವತ್ತಿನವರೆಗೂ ಅವ ಬೈಕನ್ನು ಅಪಘಾತಕ್ಕೀಡುಮಾಡಿಲ್ಲ. ನಾನು ಸತ್ತಿಲ್ಲ!
ಹೌದು, ಯಾರು ಯಾವಾಗ ಸಾಯುತ್ತಾರೆ ಎಂದು ಯಾರಿಗೆ ಗೊತ್ತು?
ಅಜ್ಜನನ್ನು ಕೇಳೋಣ ಅಂದುಕೊಂಡರೆ, ಅವ ವರ್ಷಕೊಮ್ಮೆ ಬಂದರೂ ಯಾರ ಜತೆಗೂ ಮಾತಾಡುವುದಿಲ್ಲ…ಅಲ್ಲಲ್ಲ…ಕಾವ್, ಕಾವ್,ಕಾವ್…ಅಂತಾ ಕೂಗುತ್ತಾನೆ. ಅವನ ಭಾಷೆ ನನಗೆ ಅರ್ಥವಾಗುವುದಿಲ್ಲ.
ಇನ್ನು ಹನುಮರಾಯ…?
ಕೆರ್,ಕೆರ್,ಕೆರ್…ಅನ್ನುತ್ತಾನೆ. ಇಂಗ್ಲಿಷಿಗಿಂತಲೂ ಸುಲಭವಾದ ಹನುಮರಾಯನ ಭಾಷೆ ಕಲಿಯಲು ಇಲ್ಲಿಯವರೆಗೂ ನನ್ನಿಂದ ಸಾಧ್ಯವಾಗಲಿಲ್ಲ!
ಭಿಷ್ಮ ಯಾವ ರೂಪದಲ್ಲಿ ಬರುತ್ತಾನೆ, ಯಾವ ಭಾಷೆ ಮಾತಾಡುತ್ತಾನೆ ಅಂತಾ ಅಜ್ಜಿಯನ್ನು ಕೇಳಿದರೆ, ಪೂರ್ವ ಜನ್ಮದ ಕರ್ಮ ಸವೆಯಬೇಕು. ಜಪ ಮಾಡು, ಸಂಧ್ಯಾವಂದನೆ ಮಾಡು ಅನ್ನುತ್ತಾಳೆ. ಅದಕ್ಕಿಂತ ಸುಮ್ಮನಿರುವುದೇ ಲೇಸು!
ಈ ಲೇಖನ ಬರೆದ ನಂತರ ನಾನು ಸತ್ತರೆ…?!
ಲಕ್ಕಿಜಡ್ಡಿ ಸುನೀತಕ್ಕನ ಕ್ಷಮೆ ಯಾಚಿಸುತ್ತಿದ್ದೇನೆ. ಸತ್ತ ಸುನೀತಕ್ಕನ ಮಗನಿಗೆ ಅಕ್ಷರ ರೂಪದ ಶ್ರದ್ಧಾಂಜಲಿ ಅರ್ಪಿಸಿದ್ದೇನೆ.
hmm yakshaprashneye sari.
😀 😀 😀
ಹಹ್ಹಹ್ಹ! ಸತ್ರ ಮುದ್ದಾಮ್ ಬಂದು ನಂಗೆ ಹೇಳ್ಬೇಕು!
“ಸಾವಿನ ಕುರಿತಾಗಿ ಬರೆಯಬೇಕಾದ ವಿಚಾರ ತಲೆಯಲ್ಲಿ ಸ್ಪಷ್ಟವಾಗಿ ತಿರುಗಾಡತೊಡಗಿತ್ತು. ಎದ್ದು ಬರೆಯೋಣವೆಂದರೆ ಕರೆಂಟ್ ಇರಲಿಲ್ಲ. ಬೆಳಕು ಹರಿಯುವುದರೊಳಗೆ ನಾನೇನಾದರೂ ಸತ್ತರೆ? ಎಂಬ ಪ್ರಶ್ನೆ ತಲೆಯನ್ನು ಕೊರೆಯತೊಡಗಿತು. ”
“ಕೋತಿ, ನಾನೇನಾದ್ರೂ ಸತ್ತು ಹೋದರೆ…ಗೆಳತಿ ತೀರಾ ಭಾವುಕಳಾದಾಗ ಇಂತಹದ್ದೊಂದು ಪ್ರಶ್ನೆ ಕೇಳುತ್ತಿರುತ್ತಾಳೆ”
“ಸತ್ತ ಹನ್ನೆರಡನೇ ದಿನ ನಿನಗಿಷ್ಟವಾದ ಸಿಹಿಯನ್ನು ನಿನ್ನನ್ನು ಸ್ಮರಿಸಿಕೊಂಡು ತಿನ್ನುತ್ತೇನೆ!!!”
“‘ನೀನು ಸತ್ತರೆ, ನಿನ್ನಂತಹದ್ದೇ ಇನ್ನೊಂದು ಹುಡುಗಿಯನ್ನು ಹುಡುಕಿಕೊಳ್ಳುವವರೆಗೂ ನಿನ್ನನ್ನು ನೆನಪಿಸಿಕೊಂಡು ಅಳುತ್ತೇನೆ!”
“ಕಟು ಸತ್ಯ ಹೇಳಿದರೆ ಕಣ್ಣೀರು ಸುರಿಸುತ್ತಾ ನನ್ನ ತೊಡೆಯ ಮೇಲೇ ಮಲಗುತ್ತಾಳೆ ಪಾಪಿ!”
ಅಬ್ಬಾ! ನಕ್ಕೂ ನಕ್ಕೂ ನನ್ನ ಕಣ್ಗಳಲಿ ನೀರು ತುಂಬಿತು. ಮೇಲಿನ ವಾಕ್ಯಗಳನ್ನೇ ಎಣಿಸಿಕೊಂಡು ನನ್ನಷ್ಟಕ್ಕೇ ನಾ ನಗುತ್ತಿದ್ದರೆ ನನ್ನ ಪುಟ್ಟಿ ನನ್ನೆಡೆ ವಿಚಿತ್ರ ನೋಟ ಬೀರಿದರೆ, ನನ್ನವರು “ನಿಂಗೆಂತಾ ಆತೆ ಮರಾಯ್ತಿ? ನಿನ್ನೆವರೆಗೂ ಆರಾಮಿದ್ದಿದ್ಯಲೇ? ನಿಮ್ಹಾನ್ಸ್ ಹತ್ರನೇ ಇದ್ದು ಬಿಡು..” ಎಂದೆಲ್ಲಾ ಚುಡಾಯಿಸಿದರು 🙂
ನಿಜ ಹೇಳಬೇಕೆಂದರೆ ಗಂಭೀರವಿಚಾರವನ್ನು ಹಾಸ್ಯದೊಡನೆ ಬೆರೆಸಿ ಬರಯುವುದು ಬಲು ಕಷ್ಟ. ನೀವು ಅದನ್ನು ಮಾಡಿದ್ದೀರಿ. ಹೀಗೇ ಬರೆಯುತ್ತಿರಿ. ನಕ್ಕು ನಲಿಸಿದ್ದಕ್ಕಾಗಿ ಧನ್ಯವಾದಗಳು 🙂
’ಢಿಪರೆಂಟ್’ ಆಗಿದೆ.
ಚೆನ್ನಾಗಿ ಓದಿಸಿಕೊಂಡು ಹೋಯಿತು.
ಶರ್ಮರೇ,
ಯಕ್ಷ ಎಲ್ಲಿ ಸಿಗುತ್ತಾನೆ, ಯಾವ ರೂಪದಲ್ಲಿ ಸಿಗುತ್ತಾನೆ ಅಂತಾ ಒಂಚೂರು ತಿಳಿಸಿ. ಅವನನ್ನು ಮಾತಾಡಿಸಿಕೊಂಡು ಬಂದು ಇನ್ನೊಂದು ಲೇಖನ ಬರೆಯುತ್ತೇನೆ!
ನೀಲಾಂಜಲರೇ
???!!!
ಹರೀಶ್,
ನಾನು ಸತ್ತ ಮೇಲೆನೇ ನೀವು ಸಾಯುತ್ತೀರಿ ಎಂದು ಧೈರ್ಯವಾಗಿರುವ ನಿಮಗೊಂದು ಸಲಾಂ!
ತೇಜಸ್ವಿನಿ ಹೆಗಡೆಯವರೇ,
ಧನ್ಯವಾದಗಳು…
ವಿಕಾಸ್
ಇದು ನನ್ನ ಪ್ರಥಮ ಪ್ರಯೋಗ…ಧನ್ಯವಾದ…
ಮೂಗು ಬಾಯಿ ಎಲ್ಲ ಬಂದ್ ಮಾಡಿ ಕುಳಿತುಕೊಳ್ಳಿ. ಎಷ್ಟೇ ಕಷ್ಟವಾದರೂ ಉಸಿರನ್ನು ಒಳಗೆ ತೆಗೆದುಕೊಳ್ಳಬೇಡಿ. ಇನ್ನು ಉಸಿರು ತೆಗೆದುಕೊಳ್ಳದಿದ್ದರೆ ಸಾವೇ ಖಂಡಿತ ಎನ್ನುವವರೆಗೆ ಉಸಿರು ಕಟ್ಟಿ. ಆವಾಗ ಹೀಗೆ ಪ್ರಾರ್ಥಿಸಿ ” ಯಕ್ಷ ನನಗೆ ನಿನ್ನ ದರ್ಷನ ನಿಡು ಇಲ್ಲದಿದ್ದರೆ ನಾನು ಸಾಯುತ್ತೇನೆ” . ನಿಮ್ಮ ಪ್ರಾರ್ಥನೆ ಜೀವ ಕೊನೆಯ ಹಂತದ್ದಾದರೆ ಪ್ರಾರ್ಥನೆಯಲ್ಲಿ ನಂಇಕೆ ನಿಮಗಿದ್ದರೆ ಇಪ್ಪತ್ನಾಲ್ಕು ಘಂಟೆಯೊಳಗೆ ಯಕ್ಶದರ್ಷನವಾಗುತ್ತದೆ. ಇಲ್ಲದಿದ್ದಲ್ಲಿ ನಿಮ್ಮ ದ್ರಶನಕ್ಕೆ ಜನ ಬರುತ್ತಾರೆ.
>>>ಹೆರಿಡಿಟಿಗೆ ಸಂಬಂದಿಸಿದ ರೋಗಗಳೆಲ್ಲಾ ಅಜ್ಜನಿಂದ ಮೊಮ್ಮಗನಿಗೋ, ಮೊಮ್ಮಳಿಗೋ ಬರುತ್ತವಂತೆ. ಹಾಗಂತ ವಿಜ್ಞಾನದ ಪಾಠದಲ್ಲಿ ಓದಿದ ನೆನಪು.
ನಿಮ್ಮ ನೆನಪು ಕೈ ಕೊಟ್ಟಿದೆ ಅನ್ನಿಸುತ್ತೆ. ಕೆಲವು ರೋಗಗಳು, ಲಕ್ಷಣಗಳು ತಾತನಿಂದ ತಾಯಿಯ ಮೂಲಕ ‘ಮಗ’ನಿಗೆ ಮಾತ್ರ ಬರುತ್ತವೆ. ಕಿವಿಯ ಮೇಲೆ ಕೂದಲು ಬೆಳೆಯುವ ಲಕ್ಷಣವನ್ನೇ ತೆಗೆದುಕೊಳ್ಳಿ, ಇದು ಅಜ್ಜನಿಂದ ತಾಯಿ ಮುಖಾಂತರ ಆಕೆಯ ಮಗನಿಗೆ ಬರುತ್ತದೆ…
ಉಳಿದಂತೆ ಸಾವಿನ ಬಗ್ಗೆ ಗಂಭೀರವೂ ಅಲ್ಲದ, ಲಘುವೂ ಅಲ್ಲದೆ ಒಂಥರಾ ಬರಹ ಮೆಚ್ಚುವಂತಿದೆ…
ಸುಪ್ರೀತ್
ಸಾವಿನ ಹಿಂದಿನ ನೋವನ್ನು ತೋರಿಸಿ ಮತ್ತೆ ಮುಚ್ಚಿಟ್ಟಿದ್ಯಾಕೆ? 🙂
ವಿಕಾಸ್,
ನೋವಿನ ವಿಚಾರ ತಲುಪಬೇಕಾದ ಜಾಗ ತಲುಪಿ, ಪರಿಹಾರ ದೊರೆತಿದೆ. ಹಾಗಾಗಿ ಆ ಫೋಸ್ಟ್ನ್ನು ಡಿಲೀಟ್ ಮಾಡಿರುವೆ.