ಬ್ರಾಹ್ಮಣರು ಭೋಜನಪ್ರಿಯರು, ಹೊಟ್ಟೆಬಾಕರು…ಬ್ರಾಹ್ಮಣರಿಗೆ ನೀವು ಅದೇನು ಬೇಕಾದರೂ ಅಣಗಿಸಿಕೊಳ್ಳಿ! ಬ್ರಾಹ್ಮಣರು ಡೈರಿ ಬರೆದರೆ ಅದರಲ್ಲಿ ೬೦ ಪುಟ ಊಟದ ವಿಚಾರವೇ ಇರತ್ತೆ ಅಂತಾ ಬೇಕಾದರೂ ಬೈದುಕೊಳ್ಳಿ! ಆದರೆ ಒಂದಿಷ್ಟು ಪದಾರ್ಥಗಳ ರುಚಿ ಅವರ ಕೈಯಲ್ಲಲದೇ ಮತ್ಯಾರಿಂದಲೂ ತರಿಸಲು ಅಸಾಧ್ಯ. ಅಂತಹದ್ದೇ ಸಾಲಿಗೆ ಸೇರಿದ ಒಂದು ಪದಾರ್ಥ ಸಣ್ಣಕ್ಕಿ ಕೇಸರಿಬಾತು.
ಒಂದು ಕಾಲದಲ್ಲಿ ಉತ್ತರ ಕನ್ನಡದ ಮದ್ವೆ, ಮುಂಜಿ ಅಂದ್ರೆ ಅದಕ್ಕೆ ಕಜ್ಜಾಯ ಸಣ್ಣಕ್ಕಿ ಕೇಸರಿಬಾತೇ ಅಂತಾ ಕಡಾಖಂಡಿತವಾಗಿ ಹೇಳಬಹುದಾಗಿತ್ತು! ಆ ಪರಿ ಸಣ್ಣಕ್ಕಿ ಕೇಸರಿಬಾತು ಸಿದ್ದಾಪುರ ಸೀಮೆಯಲ್ಲಿ ಫೇಮಸ್ಸು! ನಾನಂತೂ ಅಜ್ಜನ ಮನೆಯನ್ನು ಕೇಸರಿಬಾತು, ತಂಬೂಳಿ ಅನ್ನದ ಕೇರಿ ಅಂತಾನೇ ಆಡಿಕೊಳ್ಳುತ್ತಿದ್ದೆ! ಅಜ್ಜನ ಮನೆಯ ಆಯಿ ಸತ್ತ ಮೇಲೆ ಅದರ ನೆನಪೇ ಮಾಸಿ ಹೊದಂತಾಗಿದೆ. ಮೊನ್ನೆ ಆಯಿ ಕುರಿತು ಮಾತಾಡುತ್ತಿರುವಾಗ ಸಡನ್ನಾಗಿ ಈ ಕೇಸರಿ ಬಾತಿನ ನೆನಪಾಯಿತು ನೋಡಿ.
ಘಮಘಮಿಸುವ ಸಣ್ಣಕ್ಕಿ, ಅದಕ್ಕೆ ತಕ್ಕಂತೆ ಕಾಶ್ಮೀರದ ಶುದ್ಧ ಕೇಸರಿ. ಆಯಿ ಮಾಡಿಟ್ಟ ಎಮ್ಮೆ ತುಪ್ಪ. ಇವಿಷ್ಟು ಇದ್ದರೆ ಕೇಸರಿಬಾತು ರೆಡಿ ಅಂತಾ ಆವಾಗ ನನ್ನ ಲೆಕ್ಕ. ನಾನು ಮನೆಯಲ್ಲಿ ಒಂದೆರಡು ಸರಿ ಈ ಕೇಸರಿ ಬಾತು ಮಾಡುವ ಸಾಹಸಕ್ಕೆ ಕೈಹಾಕಿದ್ದೆ. ರುಚಿ ಬಾರದೇ ಹೋದಾಗಲೆಲ್ಲಾ ಕೇಸರಿ ಮೇಲೆ, ತುಪ್ಪದ ಮೇಲೆ ರೇಗಾಡುತ್ತಿದೆ! ದರಿದ್ರ ಶೆಟ್ಟಿ ಸಣ್ಣಕ್ಕಿ ಅಂತಾ ಯಾವುದೋ ಅಕ್ಕಿ ಕೊಟ್ಟಿದ್ದಾನೆ. ಅಪ್ಪಾ , ಶೆಟ್ಟಿ ಅಂಗಡಿಯದ್ದು ಪ್ಯೂರ್ ಸಣ್ಣಕ್ಕಿ ಅಂತಾ ತಂದಿದಾರೆ ಅಂತಾ ಕೆಲವೊಮ್ಮೆ ಅಪ್ಪನ ಮೇಲೂ ರೇಗಾಡುತ್ತಿದ್ದೆ! ಒಟ್ಟಲ್ಲಿ ಸುಮಾರು ಸಲ ಸಣ್ಣಕ್ಕಿಯಿಂದ ಕೇಸರಿ ಬಾತಿನ ತರಹದ್ದೇ ಐಟಮ್ ಮಾಡಿದ್ದೆ ಬಿಡಿ!
ಸಣ್ಣಕ್ಕಿಯನ್ನು ಹದದಲ್ಲಿ ಬೇಯಿಸಿ ಒಂದಿಷ್ಟು ಸಕ್ಕರೆ,ತುಪ್ಪ ಸುರಿದು ಪಾಕ ಬರಿಸಿದರೆ, ರುಚಿಗೆ ತಕ್ಕಷ್ಟು ಉಪ್ಪು ಸುರಿದರೆ, ಮೇಲಿಂದ ಒಂದಿಷ್ಟು ಕೇಸರಿ, ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ ಎಸೆದರೆ ಸಣ್ಣಕ್ಕಿ ಕೇಸರಿ ಬಾತ್ ರೆಡಿ..ಅಂತಾ ಬಾಯಲ್ಲಿ ಹೇಳುವುದು ತುಂಬಾ ಸುಲಭ. ಹಾಗೆ ಹೇಳುತ್ತಾ ಬಾಯಿ ಚಪ್ಪರಿಸಿಕೊಂಡು ತಿನ್ನುವುದು ಮತ್ತೂ ಸರಳ! ಆದರೆ ರುಚಿ ತರಿಸಲು ಒದ್ದಾಡುವ ಪರಿ ಅಡುಗೆ ಭಟ್ಟರಿಗೆ ಮಾತ್ರ ಗೊತ್ತು.
ಮತ್ತೆ ಬೆಂಗಳೂರಿಗೆ ಬೈದರೆ ನೀವು ನನ್ನನ್ನು ಬೈಯ್ಯಬಹುದು. ಅಷ್ಟು ಕಷ್ಟದಲ್ಲಿ ಯಾಕೆ ಬೆಂಗಳೂರಲ್ಲಿ ಇರಬೇಕು. ಮನೆಗೆ ಹೋಗ್ರಿ ಸುಮ್ಮನೆ ಅಂತಾ ಸಲಹೆ ಕೊಡಬಹುದು! ಹಾಗಾಗಿ ಮತ್ತೆ ಬೆಂಗಳೂರಿಗೆ ಬೈಯ್ಯುವ ಸಾಹಸಕ್ಕೆ ಕೈ ಹಾಕಲಾರೆ. ಈ ಮಾತಿನ ಅರ್ಥ ಏನು ಎಂಬುದು ಅರ್ಥವಾಯಿತಲ್ಲಾ?! ಒಟ್ಟಲ್ಲಿ ನಾನು ಸಣ್ಣಕ್ಕಿ ಕೇಸರಿ ರುಚಿ ಕಾಣದೆ ಏಳೆಂಟು ವರ್ಷವೇ ಕಳೆಯಿತು. ಈಗೀಗ ಊರ ಬದಿಗೂ ಕೇಸರಿಬಾತು ಇಲ್ಲ ಅಂತಾ ಮೊನ್ನೆ ಭಾವ ಹೇಳುತ್ತಿದ್ದ. ಅವನ ಮಾತು ಇಷ್ಟೆಲ್ಲಾ ಬರೆಯುವಂತೆ ಮಾಡಿತು ನೋಡಿ!
ಮಾಯವಾಗಿಲ್ಲ ಕೇಸರಿಬಾತು. ಇವತ್ತೂ ನೀವು ಈ ಕಡೆ ಬಂದರೆ ಸವಿಯಬಹುದು. ನೀವು ಈ ಕಡೆಯಿಂದ ಮಾಯವಾಗಿದ್ದೀರಿ ಹಾಗಾಗಿ ಹಾಗೆ ಅನ್ನಿಸಿದೆ. ಬನ್ನಿ ಒಮ್ಮೆ ಬಾರಿಸೋಣ ಸಣ್ಣಕ್ಕಿ ಕೇಸರೀಬಾತು. ಬರುವಾಗ ಕಾಶ್ಮೀರಿ ಕೇಸರಿ ತರುವ ಜವಾಬ್ದಾರಿ ನಿಮ್ಮದು. ತುಪ್ಪ ಸಣ್ಣಕ್ಕಿ ನಮ್ಮದು
ಏನಂತೀರಿ.?
ಮಾಯವಾಗಿಲ್ಲ ಅನಿಸ್ತದೆ ನನಗೆ ಕೂಡ.
ಕೇಸರಿಬಾತ್ ಮಾಡೋದು ನಿಜವಾಗಿಯೂ ಕಷ್ಟ. ಸರಿಯಾದ ಹದಕ್ಕೆ ಸಿಹಿ ತರಿಸುವ ಕಲೆ ಅಮ್ಮನಿಂದಲೇ ಕಲಿಯಬೇಕು!
ಶರ್ಮಾರೇ
ನಾವು ಊರಿಂದ ಕಾಣೆಯಾಗಿದ್ದೇವೆ ಅಂತಾ ಹೇಳಿ,ಹೇಳಿ ಬೇಜಾರು ಬಂದಿದೆ. ಹಾಗಾಗಿ ಊರಿನ ಐಟಂಗಳನ್ನು ಕಾಣೆ ಮಾಡಿಸುವ ಪ್ರಯತ್ನವಿದು!!! ಅಂದಹಾಗೇ ಕೇಸರಿಬಾತು ಕಚೇರಿಗೆ ದಿನಾಂಕ ಕೊಡಿ!
ನೀಲಿ ಹೂ
ಊರಿಂದ ನಾನು ಕಾಣೆಯಾಗಿರುವುದರಿಂದ ನನಗೆ ಕೇಸರಿ ಕಾಣೆಯಾಗಿದೆ!