ಗಾಂಧಿ, ನೆಹರೂರನ್ನು ಅನುಸರಿಸುತ್ತಿದ್ದರೋ ಅಥವಾ ನೆಹರೂ, ಗಾಂಧೀಜಿ ಅನುಯಾಯಿಯಾಗಿದ್ದರೋ ಎಂಬ ಕುರಿತು ದೇಶದಲ್ಲಿ ದೊಡ್ಡ ಚರ್ಚೆಯೇ ಆಗುತ್ತದೆ. ದೇಶ ವಿಭಜನೆಯಲ್ಲಿ ಗಾಂಧೀಜಿ ಕೈವಾಡವೂ ಇತ್ತು ಎಂದು ಹಲವರು ಆರೋಪಿಸುತ್ತಾರೆ! ಸೈದ್ಧಾಂತಿಕ ಪಿತ್ತ ನೆತ್ತಿಗೇರಿದ ಕೆಲ ಆರ್ಎಸ್ಎಸ್ ಮಂದಿ ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಅನೇಕ ಕಾರಣ ಕೊಟ್ಟು ಸಮರ್ಥಿಸುತ್ತಾರೆ! ಆದರೆ ಒಬ್ಬನೇ ಒಬ್ಬ ಗಾಂಧಿ ಬ್ರಿಟಿಷರ ವಿರುದ್ಧ ನಿಂತು ಹೋರಾಟ ಮಾಡಿದ ಕುರಿತು ಯಾರೂ ಮಾತಾಡುವುದೇ ಇಲ್ಲ. ದೇಶದ ಎಲ್ಲಾ ಕ್ರಾಂತಿಕಾರಿಗಳನ್ನು ಎದುರುಹಾಕಿಕೊಂಡು ಕೊನೆಯುಸಿರಿರುವವರೆಗೂ ಅಹಿಂಸೆ ಮಂತ್ರ ಜಪಿಸಿದ ಮಹ್ಮಾತನ ಸಾಧನೆಯ ಕುರಿತು ಇಲ್ಲಿ ಚರ್ಚೆಯೇ ಆಗುವುದಿಲ್ಲ!
೧೩ ನೇ ವಯಸ್ಸಿನಲ್ಲಿ ಮಡದಿಯನ್ನು ಕಟ್ಟಿಕೊಂಡ, ತನ್ನ ೨೦ ನೇ ವಯಸ್ಸಿಗೆ ೪ ಮಕ್ಕಳನ್ನು ಪಡೆದು ಸಮಾಜದ ಸಾಮಾನ್ಯನಂತೆ ಬದುಕುತ್ತಿದ್ದ , ಬ್ಯಾರಿಸ್ಟರ್ ಪದವಿಗಾಗಿ ಹಪಹಪಿಸುತ್ತಿದ್ದ ಯುವಕನೊಬ್ಬ ಮುಂದೊಂದು ದಿನ ಆ ಪರಿ ಎತ್ತರಕ್ಕೇರುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ೧೮೯೦ರ ದಶಕದಲ್ಲಿ ಕಾನೂನು ಪದವಿ ಪಡೆಯಲು ದೂರದ ಇಂಗ್ಲೆಂಡ್ಗೆ ತೆರಳಿದ ಹುಡುಗನೊಬ್ಬ ದೇಶಕ್ಕೆ ಮರಳಿ, ಸಮುದ್ರದ ದಂಡೆಯಲ್ಲಿ ಕುಳಿತು ಸತ್ಯಾಗ್ರಹ ನಡೆಸುತ್ತಾನೆ, ಸತ್ಯ, ಶಾಂತಿ,ಅಂಹಿಸೆ ಎಂಬ ಮಂತ್ರ ಜಪಿಸಿಕೊಂಡು ದೇಶದುದ್ದಕ್ಕೂ ಸಂಚರಿಸುತ್ತಾನೆ…ಊಹುಂ ಬೇರೆಯವರು ಹಾಳಾಗಲಿ ಸ್ವತಃ ಅವರೇ ಇಂತಹದ್ದೊಂದು ಕನಸು ಕಂಡಿರಲಿಕ್ಕಿಲ್ಲ!
ಮೋಹನ್ದಾಸ ಕರಮ್ಚಂದ್ ಗಾಂಧಿ!!
ಈ ಹೆಸರನ್ನು ಕೇಳದವರ್ಯಾರಿದ್ದಾರೆ ಹೇಳಿ? ಮಹಾತ್ಮ, ರಾಷ್ಟ್ರಪಿತ, ಬಾಪು…ಅದೆಷ್ಟು ಅಕ್ಕರೆಯ ಅಡ್ಡ ಹೆಸರುಗಳು ಅವರಿಗೆ. ಅಂತಹ ಮಹಾತ್ಮ ತೀರಾ ಪಡ್ಡೆ ಹುಡುಗರ ತರಹ ತಮ್ಮ ಬಾಲ್ಯವನ್ನು ಕಳೆದವರು ಎಂದರೆ ಯಾರಿಗೂ ನಂಬಿಕೆ ಬರಲಿಕ್ಕಿಲ್ಲ. ತಮ್ಮ ೨೦ನೇ ವಯಸ್ಸಿನಲ್ಲೇ ಗಾಂಧೀಜಿ ೪ ಮಕ್ಕಳ ತಂದೆಯಾಗಿದ್ದರು ಎಂದರೆ ಅಚ್ಚರಿಯಾಗಬಹುದು. ೧೮೬೯ರ ಅ.೨ ರಂದು ಗುಜರಾತಿನ ಪೋರಬಂದರು ಎಂಬ ಪುಟ್ಟ ಪಟ್ಟಣದಲ್ಲಿ ಹುಟ್ಟಿದ ಗಾಂಧೀಜಿ ೧೮೮೮ ರಲ್ಲಿ ಕಾನೂನು ಪದವಿಗೋಸ್ಕರ ಲಂಡನ್ಗೆ ತೆರಳಿದರು. ಅಲ್ಲಿ ಅಧ್ಯಯನ ಪೂರೈಸಿದ ಗಾಂಧೀಜಿ ಮುಂಬಯಿಗೆ ಮರಳಿ ಮತ್ತೆ ವೃತ್ತಿ ಜೀವನಕೋಸ್ಕರ ೧೮೯೩ ರಲ್ಲಿ ದಕ್ಷಿಣಾಫ್ರಿಕಾದತ್ತ ಪಯಣ ಬೆಳೆಸಿದರು.
ಬಾಪುವಿನ ಸಾಧನಾ ಬದುಕು ಆರಂಭವಾಗುವುದೇ ಆಫ್ರಿಕಾದಿಂದ. ಪೀಟರ್ ಮ್ಯಾರಿಟ್ಸ್ಬರ್ಗ್ ಎಂಬ ನಗರದಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡು ರೈಲು ಪ್ರಯಾಣ ಮಾಡುತ್ತಿದ್ದ ಗಾಂಧೀಜಿಯನ್ನು ರೈಲಿನಿಂದ ಹೊರಹಾಕಲಾಯಿತು. ವರ್ಣಭೇದ ನೀತಿಯ ಫಲವಾಗಿ ರೈಲಿನಿಂದ ಹೊರಬಂದ ಬಾಪು ವರ್ಣಭೇದ ನಿತಿಯನ್ನು ದಕ್ಷಿಣಾಫ್ರಿಕಾದಿಂದ ಕಿತ್ತೆಸೆಯುತ್ತೇನೆಂದು ಆವತ್ತೇ ಪಣ ತೊಟ್ಟರು. ಅಲ್ಲಿನ ಅವಮಾನವೇ ಅವರನ್ನು ಸಾಮಾಜಿಕ ಚಟುವಟಿಕೆಯತ್ತ ಕರೆ ತಂದಿತು ಎಂದರೂ ತಪ್ಪಗಲಾರದು. ಆ ನಂತರವೂ ಅವರು ಸಾಕಷ್ಟು ಸಲ ಕೆಂಪುಮೂತಿ ಬ್ರಿಟಿಷರಿಂದ ಅವಮಾನ ಅನುಭವಿಸಿದರು. ದರ್ಬನ್ ನ್ಯಾಯಾಲಯ ಯಾವುದೋ ಕಾರಣಕ್ಕಾಗಿ ಒಮ್ಮೆ ಅವರು ಧರಿಸಿದ್ದ ಪೇಟ ಕಳಚುವಂತೆ ಆದೇಶ ನೀಡಿತ್ತು! ಅಲ್ಲಿನ ಸಾಕಷ್ಟು ಹೊಟೆಲ್ಗಳಲ್ಲಿ ಬಿಳಿಯರಲ್ಲದ ಬಾಪುವಿಗೆ ವರ್ಣಭೇದದ ರಾಜಮರ್ಯಾದೆ ದೊರೆಯುತಿತ್ತು!
ವರ್ಣಭೇದ ನೀತಿಯ ವಿರುದ್ಧ ಹೋರಾಡಲು, ಆಫ್ರಿಕಾದಲ್ಲಿನ ಭಾರತೀಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೇಳಲು ನಿರ್ಧರಿಸಿದ ಗಾಂಧೀಜಿ, ೧೮೯೪ ರಲ್ಲಿ ನಟಾಲ್ ಇಂಡಿಯನ್ ಕಾಂಗ್ರೆಸ್ ಸ್ಥಾಪಿಸಿದರು. ೧೯೦೬ರಲ್ಲಿ ಅಲ್ಲಿನ ಸರಕಾರ ಭಾರತೀಯ ನಿವಾಸಿಗಳಿಗೆ ವಿರುದ್ಧವಾದ ಕಾನೂನನ್ನು ಜಾರಿಗೆ ತಂದಿತು. ೧೯೦೬ರ ಸೆ.೧೧ ರಂದು ಗಾಂಧೀಜಿ ಈ ಕಾನೂನಿನ ವಿರುದ್ಧ ಶಾಂತಿಯುತ ಹೋರಾಟಕ್ಕೆ ಇಳಿದರು. ಸತ್ಯಾಗ್ರಹ ಸೂತ್ರವನ್ನು ಮೊದಲ ಬಾರಿಗೆ ಆ ಹೋರಾಟದಲ್ಲಿ ಪ್ರಯೋಗಿಸಿದರು. ಅಲ್ಲಿಂದ ನಂತರ ಸತ್ಯಾಗ್ರಹ ಬಾಪು ಹೋರಾಟದ ಅವಿಭಾಜ್ಯ ಅಂಗವಾಯಿತು. ಗಾಂಧೀಜಿ ನಡೆಸುವುದು ಹೋರಾಟವಲ್ಲ , ಅದು ಸತ್ಯಾಗ್ರಹ ಎನ್ನುವಷ್ಟರ ಮಟ್ಟಿಗೆ ಆ ಸೂತ್ರ ಯಶಸ್ಸು ಸಾಧಿಸಿತು. ಇದರಿಂದಾಗಿ ಗಾಂಧೀಜಿಗೆ ಸೆರೆಮನೆ ವಾಸದ ಸೌಭಾಗ್ಯ ಲಭಿಸಿತು! ಅಲ್ಲಿಂದ ಮುಂದೆ ಅವರಿಗೆ ಹೋರಾಟ ಎಂಬದು ದಿನಚರಿಯಾಯಿತು. ವರ್ಣಭೇದ ನೀತಿಯ ವಿರುದ್ಧ ನಿರಂತರವಾಗಿ ಸೆಣೆಸಿದ ಬಾಪು ೧೯೧೫ ರಲ್ಲಿ ಅಲ್ಲಿಂದ ಭಾರತಕ್ಕೆ ಮರಳಿದರು.
ಕ್ರಾಂತಿಕಾರಿಗಳ ಅಬ್ಬರ ಜೋರಾಗಿದ್ದ ಕಾಲವದು. ೧೮೫೭ ರ ದಂಗೆಯಿಂದ ಮಹತ್ತರ ಪಾಠ ಕಲಿತ ದೇಶದಲ್ಲಿನ ಕ್ರಾಂತಿಕಾರಿಗಳು ಬ್ರಿಟಿಷರನ್ನು ಮಟ್ಟ ಹಾಕಲು ಸರ್ವ ಸನ್ನದ್ಧರಾಗಿದ್ದರು. ಚಂದ್ರಶೇಖರ್ ಆಜಾದ್ ಬಣ ಒಂದೆಡೆ ಕ್ರಾಂತಿಯ ಕಿಚ್ಚು ಹತ್ತಿಸಲು ಪ್ರಯತ್ನಿಸುತ್ತಿದ್ದರೆ, ಸಾವರ್ಕರ್ ಸದ್ದುಗದ್ದಲವಿಲ್ಲದೇ ಯುದ್ಧಕ್ಕೊಂದು ವೇದಿಕೆ ನಿರ್ಮಿಸಲು ಅಣಿಯಾಗುತ್ತಿದ್ದರು. ಅಂತಹ ಸಂದರ್ಭದಲ್ಲಿ ದೇಶಕ್ಕೆ ಕಾಲಿಟ್ಟ ಗಾಂಧೀಜಿ ಶಾಂತಿ, ಉಪವಾಸ, ವನವಾಸದ ಮಂತ್ರ ಜಪಿಸಿದರೆ ಮೂಸಿ ನೋಡುವವರು ಇರಲಿಲ್ಲ ಬಿಡಿ!
ನೂರಾರು ಸಾವರ್ಕರ್ಗೆ ಎದುರಾಗಿ ಒಬ್ಬನೇ ಒಬ್ಬ ಬಾಪು, ಕುದಿಯುವ ಬಿಸಿ ರಕ್ತದ ಸಹಸ್ರಾರು ಯುವಕರಿಗೆ ಎದುರಾಗಿ ಒಬ್ಬನೇ ಒಬ್ಬ ಗಾಂಧಿ…ಆದರೂ ಅವರು ಸತ್ಯ, ಶಾಂತಿ, ಅಹಿಂಸೆ ಎಂಬ ಮಂತ್ರವನ್ನು ಬಿಡಲಿಲ್ಲ. ರಕ್ತ ಹರಿಸಿ ದೇಶದೆ ದಾಸ್ಯ ವಿಮುಕ್ತಿಗೊಳಿಸುವ ಸಿದ್ದಾಂತವನ್ನು ಒಪ್ಪಲಿಲ್ಲ. ವ್ಯಕ್ತಿಯ ತಾಕತ್ತು ಎಂತಹ ಸನ್ನಿವೇಶವನ್ನೂ ಬದಲಿಸಬಲ್ಲದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟರು. ಆ ಕಾರಣಕ್ಕಾಗಿಯೇ ಜಗತ್ತು ಅವರಿಗೆ ಮಹಾತ್ಮ ಎಂಬ ಗೌರವ ನೀಡಿದ್ದು. ನಮ್ಮ ಬಾಪು ಎಲ್ಲರಿಗಿಂತ ಭಿನ್ನ ಅನ್ನಿಸಿಕೊಂಡಿದ್ದು.
ಆಫ್ರಿಕಾದಿಂದ ಮರಳಿದ ನಂತರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸೇರಿಕೊಂಡರು. ೧೯೧೮ರ ಖೇಧಾ ಸತ್ಯಾಗ್ರಹ ಅವರ ಹೋರಾಟಕ್ಕೊಂದು ಹೊಸ ಖದರು ನೀಡಿತು. ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಗುಜರಾತ್ನ ಹಳ್ಳಿಗಳ ಅಭಿವೃದ್ಧಿಗೆ ಮುಂದಾದರು. ಅಲ್ಲಿನ ಜನರನ್ನು ಅದರಲ್ಲೂ ಮುಖ್ಯವಾಗಿ ಕೆಳವರ್ಗದ ಮಂದಿಯನ್ನು ಸಂಘಟಿಸುವ ಸಾಹಸಕ್ಕೆ ಕೈ ಹಾಕಿದರು. ತಮ್ಮ ಅನುಯಾಯಿಗಳಾಗಿ ಬಂದವರಿಗೆ ಸತ್ಯ, ಅಹಿಂಸೆ, ಶಾಂತಿಯ ಮಂತ್ರವನ್ನು ಉಪದೇಶಿಸಿದರು. ಅಲ್ಲೇ ಒಂದು ಆಶ್ರಮ ನಿರ್ಮಿಸಲು ಕೈಹಾಕಿದರು. ಗಾಂಧೀಜಿ ಎಂಬ ವ್ಯಕ್ತಿತ್ವ ಗುಜರಾತ್ ಪ್ರಾಂತ್ಯದ ಜನರಲ್ಲಿ ಅದ್ಯಾವ ಪರಿ ಅಚ್ಚಾಗಿತ್ತು ಅಂದರೆ, ಅವರನ್ನು ಬ್ರಿಟಿಷರು ಬಂಧಿಸಿದಾಗ ಸಹಸ್ರಾರು ಜನ ಜೈಲಿನ ಮುಂದೆ ಧರಣಿ ನಡೆಸಿದರು. ಅಲ್ಲಿಂದ ಮುಂದೆ ಗಾಂಧೀಜಿ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
೧೯೨೧ ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಾಯಕರಾಗಿ ಆಯ್ಕೆಯಾದರು. ೧೯೧೯ ರ ಜಲಿಯನ್ ವಾಲಬಾಗ್ ಹತ್ಯಾಕಾಂಡವನ್ನು ವಿರೋಧಿಸಿ ನಡೆಸಿದ ಅಸಹಕಾರ ಚಳುವಳಿ, ಸುಮಾರು ೬೦,೦೦೦ ಕಾರ್ಯಕರ್ತರೊಂದಿಗೆ ಉಪ್ಪಿನ ಮೇಲೆ ತೆರಿಗೆ ವಿಧಿಸುವ ಬ್ರಿಟಿಷರ ನಿಲುವಿನ ವಿರುದ್ಧ ೧೯೩೦ ರಲ್ಲಿ ಆರಂಭಿಸಿದ ದಂಡಿ ಸತ್ಯಾಗ್ರಹ, ೧೯೪೨ ಕ್ವಿಟ್ ಇಂಡಿಯಾ ಚಳುವಳಿ, ವಿದೇಶಿ ವಸ್ತುಗಳ ಬಹಿಷ್ಕರಿಸಿ ಅದಕ್ಕೆ ಪರ್ಯಾಯವಾಗಿ ಹುಟ್ಟುಹಾಕಿದ ಸ್ವರಾಜ್ ಆಂದೋಲನ…ಹೀಗೆ ರಾಷ್ಟ್ರಪಿತ ಸಂಘಟಿಸಿದ ಚಳುವಳಿಗೆ ಲೆಕ್ಕವೇ ಇಲ್ಲ. ಅವರನ್ನು ಹಿಂಬಾಲಿಸಿ ಬಂದ ಮಂದಿಯೂ ಲೆಕಕ್ಕೇ ಸಿಗುವುದಿಲ್ಲ.
‘ಬಾಪು ಕುಟಿ’ ರಜನಿ ಭಕ್ಷಿ ಬರೆದ ಸುಂದರ ಪುಸಕ್ತವದು. ಗಾಂಧಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ ಒಂದಿಷ್ಟು ಸಾಧಕರ ಕಥೆಯದು. ಬಾಪು ನೆಲೆಸಿದ ಕುಟಿಯಿಂದ ಆರಂಭವಾಗುವ ಕಥೆಯಲ್ಲೆಲ್ಲೂ ಬಾಪುವಿನ ಪಾತ್ರ ನೇರವಾಗಿ ಬರುವುದೇ ಇಲ್ಲ. ಬಾಪು ಚಿಂತನೆಗಳನ್ನು ಅಳವಡಿಸಿಕೊಂಡ ಪ್ರಾಧ್ಯಾಪಕರು, ವಿಜ್ಞಾನಿಗಳು…ಹೀಗೆ ಹಲವು ಪಾತ್ರಗಳ ಮೂಲಕ ಗಾಂಧೀಜಿಯನ್ನು, ಅವರ ತತ್ವಗಳ ಗಾಢತೆಯನ್ನು ಪರಿಚಯಿಸುವ ಅದ್ಬುತ ಪ್ರಯತ್ನವನ್ನು ಭಕ್ಷಿ ಮಾಡುತ್ತಾರೆ. ಅಂತಹವರ ಕಥೆಯನ್ನು ಕೇಳಿದಾಗಲೆಲ್ಲಾ ನನಗೆ ಬಾಪು ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತದೆ.
ಅಂತಹ ಶ್ರೇಷ್ಠರ ಕುರಿತಾಗಿ ಈ ತಲೆಮಾರಿನ ಯುವಕರಿಗೆ ಅಂದೆಹದ್ದೋ ಅಸಡ್ಡೆ! ಯಾವುದೇ ದುಶ್ಚಟವಿಲ್ಲದ ಒಬ್ಬ ವ್ಯಕ್ತಿಯನ್ನು ಗಾಂಧೀಜಿಗೆ ಹೋಲಿಸಿ ಅಪಹಾಸ್ಯ ಮಾಡುತ್ತಾರೆ ಇಂದಿನ ಯುವಕರು. ದುಶ್ಚಟವಿಲ್ಲದ ಮಂದಿಯ ಆದರ್ಶದ ಪ್ರತೀಕವಾಗಿ ಗಾಂಧೀಜಿ ನಿಲ್ಲುತ್ತಾರೆ ಎಂದರೆ ನಿಜಕ್ಕೂ ಅದು ಹೆಮ್ಮೆಯ ವಿಚಾರ. ಆದರೆ ಅಪಹಾಸ್ಯದ ಪ್ರತೀಕವಾಗಿ ಮಹಾತ್ಮನನ್ನು ಮುಂದೆ ನಿಲ್ಲಿಸುವುದು ನಿಜಕ್ಕೂ ಬೇಸರದ ಸಂಗತಿ. ಹಾಗಂತ ಗಾಂಧಿ ಮೇಲೆ ಗೂಬೆ ಕೂರಿಸುವ ಯತ್ನ ಇವತ್ತು ನಿನ್ನೆಯದ್ದೇನಲ್ಲ! ನಿರಂತರವಾಗಿ ನಡೆಯುತ್ತಲೇ ಬಂದಿದೆ. ಭಗತ್ಸಿಂಗ್ರನ್ನು ಬಿಡಿಸುವ ತಾಕತ್ತು ಗಾಂಧೀಜಿಗೆ ಇತ್ತು. ಆದರೂ ಅವರು ಬೇಕಂತಲೇ ಭಗತ್ರನ್ನು ಬಿಡಿಸಲಿಲ್ಲ ಎಂದು ಸಾರಿಕೊಂಡು ತಿರುಗಾಡುವ ಮಂದಿಗೆ ನಮ್ಮಲ್ಲಿ ಕೊರತೆಯಿಲ್ಲ!
ಗಾಂಧಿ, ನೆಹರೂರನ್ನು ಅನುಸರಿಸುತ್ತಿದ್ದರೋ ಅಥವಾ ನೆಹರೂ, ಗಾಂಧಿ ಅನುಯಾಯಿಯಾಗಿದ್ದರೋ ಎಂಬ ಕುರಿತು ದೇಶದಲ್ಲಿ ದೊಡ್ಡ ಚರ್ಚೆಯೇ ಆಗುತ್ತದೆ. ದೇಶ ವಿಭಜನೆಯಲ್ಲಿ ಗಾಂಧೀಜಿ ಕೈವಾಡವೂ ಇತ್ತು ಎಂದು ಹಲವರು ಆರೋಪಿಸುತ್ತಾರೆ! ಸೈದ್ಧಾಂತಿಕ ಪಿತ್ತ ನೆತ್ತಿಗೇರಿದ ಕೆಲ ಆರ್ಎಸ್ಎಸ್ ಮಂದಿ ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಅನೇಕ ಕಾರಣ ಕೊಟ್ಟು ಸಮರ್ಥಿಸುತ್ತಾರೆ! ಗಾಂಧೀಜಿಯನ್ನು ಸಮಾಜಘಾತುಕ ಎಂದು ಬಿಂಬಿಸಲು ಬೇಕಾದ ಸರ್ವಪ್ರಯತ್ನವನ್ನು ಮಾಡುತ್ತಾರೆ. ಗಾಂಧಿ ಹತ್ಯೆಯಿಂದ ಮಾಧವ್ ಸದಾಶಿವ ಗೊಳವಲ್ಕರ್ ಅವರಿಗಾದ ಅನ್ಯಾಯದ ಅಜ್ಜಿ ಕಥೆಗಳನ್ನು ಹೇಳುತ್ತಾರೆ!
ಇನ್ನೂ ಅಪ್ಪಟ ನೆಹರೂ ಸಿದ್ದಾಂತಕ್ಕೆ ಅಂಟಿಕೊಂಡು ಬಂದಿರುವ ಕೆಲ ಮೂಲಭೂತವಾದಿ ಕಮ್ಯೂನಿಸ್ಟರಿಗೂ ಗಾಂಧೀಜಿ ಅಂದರೆ ಅಲರ್ಜಿ! (ಎಷ್ಟಂದರೂ ಕಮ್ಯೂನಿಸಂ ಅನ್ನುವುದು ಆವತ್ತಿನ ಕಾಲದಿಂದಲೂ ನೆಹರೂ ಕುಟುಂಬ ಸಾಕಿಕೊಂಡ ಬಂದ … ಅಲ್ಲವೇ?!) ಇವರೆಲ್ಲರ ನಡುವೆಯೂ ಗಾಂಧಿ ತತ್ವಗಳನ್ನು ತಮ್ಮ ಪಾಡಿಗೆ ತಾವು ಅನುಸರಿಸಿಕೊಂಡು ಬದುಕುತ್ತಿರುವ ಬೆರಳೆಣಿಕೆಯಷ್ಟು ಮಂದಿ ಈಗಲೂ ಇದ್ದಾರೆ ಎಂಬುದು ಒಂಚೂರು ಸಮಾಧಾನದ ಸಂಗತಿ.
ಆದರೂ ನಾವು ಗಾಂಧಿಯನ್ನು ಅರ್ಥೈಸಿಕೊಳ್ಳಬೇಕಾದ ದಿಕ್ಕಿನಿಂದ ಅರ್ಥೈಸಿಕೊಳ್ಳುತ್ತಿಲ್ಲ. ನುಡಿದಂತೆ ಬದುಕಿನ ರಾಷ್ಟ್ರಪಿತನ ಶ್ರೇಷ್ಠ ಬದುಕನ್ನು ನೆನಪಿಸಿಕೊಳ್ಳುವುದಿಲ್ಲ. ಒಬ್ಬನೇ ಒಬ್ಬ ಗಾಂಧಿ ಬ್ರಿಟಿಷರ ವಿರುದ್ಧ ನಿಂತು ಹೋರಾಟ ಮಾಡಿದ ಕುರಿತು ಯಾರೂ ಮಾತಾಡುವುದೇ ಇಲ್ಲ. ದೇಶದ ಎಲ್ಲಾ ಕ್ರಾಂತಿಕಾರಿಗಳನ್ನು ಎದುರುಹಾಕಿಕೊಂಡು ಕೊನೆಯ ಉಸಿರಿರುವವರೆಗೂ ಅಹಿಂಸೆ ಮಂತ್ರ ಜಪಿಸಿದ ಮಹ್ಮಾತನ ಸಾಧನೆಯ ಕುರಿತು ಇಲ್ಲಿ ಚರ್ಚೆಯೇ ಆಗುವುದಿಲ್ಲ ಎಂದರೆ ನಾಚಿಕೆಯಾಗತ್ತೆ ಅಲ್ವಾ?
ಇನ್ನೊಂದು ಮಜ ಎಂದರೆ ನಾವು ಭಾರತೀಯರು ಗಾಂಧಿಗಿಂತ ಹೆಚ್ಚು ಬ್ರಿಟೀಷರಿಂದಲೇ ಪ್ರಭಾವಿತರಾಗಿದ್ದೇವೆ. ಇವತ್ತಿನ ಕಾದಲ್ಲಿಯೂ ನಮ್ಮ ದೇಶದ ಯಾವುದೇ ಅಂಚೇ ಕಛೇರಿಗೆ ಹೋದರೂ ಬ್ರಿಟೀಷರ ಚಾಪು ನಿಚ್ಚಳವಾಗಿ ಗೋಚರಿಸುತ್ತದೆ. ಅದೇ ಡಾಳು ಕೆಂಪುಬಣ್ಣ, ಖಾಕಿ ಬಣ್ಣದ ಚೀಲ, ದಬ ದಬ ಗುದ್ದುವ ೧೯೪೦ ರ ಕಾಲದ ಸ್ಟಾಂಪ್ ಶೀಲ್. ಹಾಗಾಗಿ ನನಗನ್ನಿಸುತ್ತೆ ಗಾಂಧಿಯಂತಹ ಸರಳ ಸಜ್ಜನ ಭಾರತದಲ್ಲಿ ಇನ್ನೂ ಬಹಳಷ್ಟು ಜನ ಇದ್ದಾರೆ . ಆದರೆ ಅವರು ಬೆಳಕಿಗೆ ಬರಲು ಇಂದು ಬ್ರಿಟೀಷರಿಲ್ಲ. ಅವರ ಕರಿನೆರಳು ವಿರೂಪಗೊಂಡು ನರ್ತಿಸುತ್ತಿದೆ ಭಾರತೀಯರ ರೂಪಿನಲ್ಲಿ. ಹಾಗಾಗಿಯೇ ನಾವು ನಮ್ಮವರನ್ನು ಕಡೆಗಣಿಸಿ ತುಚ್ಚೀಕರಿಸಿ ಗಾಂಧಿಯನ್ನು ಮೂರನೇ ಕ್ಲಾಸ್ ಮುಂತಾದವುಗಳಿಗೆ ಹೋಲಿಸಿ ಅದೇನೋ ಕಾಣದ ಹಿತ ಕಾಣುತ್ತೇವೆ. ನಮ್ಮಲ್ಲಿ ಗಾಂಧಿ ಬೆಳಕಿಗೆ ಬರಲು ಮತ್ತೆ ಬ್ರೀಟೀಷರೇ ಬರಬೇಕು. ಸ್ಸಾರಿ ಕಾಮೆಂಟ್ ಬರಹಕ್ಕಿಂತ ಉದ್ದವಾಯಿತು
“Don’t think ‘Some One’ is NOT happy just because he is not living his life ,the way you want to live your life ”
ಹೀಗಂತ ಎಲ್ಲೋ ಓದಿದ ನೆನಪು ನನಗೆ. ಬಹಳಷ್ಟು ಸಲ ಹೀಗಾಗುತ್ತೆ,ಯಾರೋ ಆರಾಮಾಗಿ ಕೂತು ಪಾಸ್ಚಾತ್ಯ ಸಂಗೀತ ಕೇಳ್ತಾ ಇರ್ತಾನೆ .ನಾವು ಅಲ್ಲಿ ಹೋಗಿ ಮೂಗು ತೂರಿಸಿ ’ಛೆ ಇದೇನ್ ಕೇಳ್ತೀಯ? ಜಗಜೀತ್ ಸಿಂಗ್ ಗಝಲ್ ಕೇಳು ’ ಅಂತೀವಿ.
ನಮ್ಮ ಪ್ರಕಾರ ನಾವು ಕೇಳೋ ಜಗಜೀತ್ ಸಿಂಗ್ ಗಝಲ್ ಅತಿ ಶ್ರೇಷ್ಠ ಅಂತ.
ಯಾರೋ ಕಮ್ಯುನಿಸ್ಟ್ ಆಗಿರ್ತಾರೆ,ಕೆಲವರಿಗೆ ಗಾಂಧೀಜಿ ಇಷ್ಟ ,ಕೆಲವರಿಗೆ ನೆಹರೂ ಇಷ್ಟ ,ಕೆಲವರಿಗೆ ನಕ್ಸಲ್ ಸಿದ್ಧಾಂತ ಇಷ್ಟ.
ಕೆಲವ್ರಿಗೆ ಐಶ್ವರ್ಯ ರೈ ಇಷ್ಟ ,ಕೆಲವರಿಗೆ ಶಕೀಲಾ ಇಷ್ಟ .
ಹಾಗಂತ ಬೇರೆಯವರ ಇಷ್ಟಗಳಿಗೆ ಸ್ವಲ್ಪನಾದ್ರೂ ಗೌರವ ಕೊಡ್ಬೇಕಲ್ಲ ವಿನಾಯಕ?
’ಸೈದ್ಧಾಂತಿಕ ಪಿತ್ತ ನೆತ್ತಿಗೇರಿದ ಕೆಲ ಆರ್ಎಸ್ಎಸ್ ಮಂದಿ ’ ಅಂದ್ರಿ ಅದರ ಅವಶ್ಯಕತೆ ಇರಲಿಲ್ಲ ಅಲ್ವ?
ಲಂಕೇಶ್ ಕೂಡಾ RSS ನವರನ್ನು ಚಡ್ಡಿಗಳು ಅಂತ ಲೇವಡಿ ಮಾಡ್ತಾ ಇದ್ರು.
ಸಿದ್ಧಾಂತಗಳು match ಆಗಲ್ಲ ಅಂದ ಮಾತ್ರಕ್ಕೆ ಈ ರೀತಿ ಟೀಕಿಸ್ಬೇಕಾ?
ಬೆಳಗೆರೆ ಕೃಷ್ಣ ಶಾಸ್ತ್ರಿಗಳು ಗಾಂಧೀಜಿ ಬಗ್ಗೆ ಮಾತಾಡಿದ್ರೆ ಸ್ವಲ್ಪ ನಂಬಬಹುದು .ನಾವು ಈ ಪೀಳಿಗೆಯ ಜನರಿಂದ ಗಾಂಧೀಜಿಯ ಹಾಗೆ ಬದುಕೋದು ಸಾಧ್ಯ ನಾ?
ಅಹಿಂಸೆ ಅನ್ನೋದು ನಮ್ಮಿಂದ ಸಾಧ್ಯ ಇಲ್ಲ .ಹಿಂಸೆ ಅನ್ನೋದು ಬರೀ ದೈಹಿಕ ಅಲ್ಲ .ಮಾನಸಿಕವಾಗಿ ಯಾರನ್ನಾದ್ರೂ ನೋಯಿಸಿದ್ರೂ ಅದು ಹಿಂಸೆನೇ .ಈಗ ಹೇಳಿ ನಿಮ್ಮಿಂದ ಹಿಂಸೆ ಸಾಧ್ಯ ನಾ?? ಯಾರ ಮನಸ್ಸು ಕೂಡಾ ನೋಯಿಸದೇ ಬದುಕೋದು ನಿಮ್ಮಿಂದ ಸಾಧ್ಯ ನಾ?
ನಿಮ್ಮಿಂದ ಸಾಧ್ಯ ಇಲ್ಲ ಅಂದ ಮೇಲೆ ಬೇರೆಯವರು ಗಾಂಧೀಜಿಯ ತತ್ವಗಳನ್ನು ಪಾಲಿಸಬೇಕು ಅಂತ ಹೇಗೆ ಆಶಿಸ್ತೀರಿ?
ಈಗಿಗ ಬಹಳಷ್ಟು ಜನ ಗಾಂಧೀಜಿಯ ಅನುಯಾಯಿಗಳ ಹಾಗೆ ಬ್ಲಾಗ್ ನಲ್ಲಿ ಬರೀತಿದ್ದಾರೆ.ಅವರಿಂದ ಕೊನೆಪಕ್ಷ ಸೊಳ್ಳೆಯನ್ನಾದ್ರೂ ಸಾಯಿಸದೇ ಬಿಡಲು ಸಾಧ್ಯ ನಾ?
ಈ ರೀತಿ ಬರೆಯೋರಿಗೆ ಗಾಂಧೀಜಿ ಯವರು ರೋಲ್ ಮಾಡೆಲ್ ಥರ -ಮಠಾಧೀಶರ ಹಾಗೆ!
ಮಠಾಧೀಶರು ಮದುವೆಯಾಗದೆ ದೇವ ಸ್ಮರಣೆ ಮಾಡ್ಬೆಕು ,ಸಮಾಜ ಸುಧಾರಣೆ ಮಾಡ್ಬೇಕು ಅಂತೆಲ್ಲ expect ಮಾಡ್ತೀವಿ.ನಾವು ಮಾತ್ರ F TV ನಲ್ಲಿ ಬರೋ ಸುಂದರಿಯರನ್ನು ನೋಡಿ ಬಾಯಿ ಚಪ್ಪರಿಸ್ತೀವಿ.
ಬೇರೆಯವರು ಗಾಂಧೀಜಿ ಗೆ ಗೌರವಿಸ್ತಿಲ್ಲ ,ಅವರ ಸಿದ್ಧಾಂತಗಳನ್ನೆಲ್ಲ ಪಾಲಿಸ್ತಿಲ್ಲ ಅನ್ನೋದು ನಮ್ಮ ಆಪಾದನೆ.
ಆದ್ರೆ ನಮಗೆ ಮಾತ್ರ ಆ ಸಿದ್ದಾಂತಗಳಲ್ಲಿ ಒಂದನ್ನು ಪಾಲಿಸೋದು ಸಾಧ್ಯ ಇಲ್ಲ!
ವಿನಾಯಕ,
ಗಾಧೀಜಿಯ ಸುತ್ತಲೂ ಇದ್ದವರೆಲ್ಲ ಅವರ ಶಿಷ್ಯರೇ! ಆದರೆ ಎಲ್ಲರೂ ಗಾಂಧೀಯವರ ಅಭಿಪ್ರಾಯಗಳನ್ನು ಒಪ್ಪುತ್ತಿರಲಿಲ್ಲ. ಸ್ವಾತಂತ್ರ್ಯ ಸಿಗುವ ಅನೇಕ ವರ್ಷಗಳ ಪೂರ್ವದಲ್ಲಿಯೇ, ನೆಹರೂ was in favour of Industrialisation etc. ಗಾಂಧಿ was in favour of village economy.
ಗಾಂಧೀ ಅಂತೂ ೧೦೦% ಅಹಿಂಸಾವಾದಿ. ಆದರೆ, ನೆಹರು?
Do you know that he is behind our secret development of nuclear weaponry?
ಇಷ್ಟಿದ್ದರೂ, ನೆಹರೂ ಅವರು ಗಾಂಧೀಜಿಯ ಪಟ್ಟದ ಶಿಷ್ಯ!
ಇದು ನನಗೆ ರಾಮಕೃಷ್ಣ ಪರಮಹಂಸರನ್ನು ಹಾಗೂ ಅವರ ಶಿಷ್ಯ ವಿವೇಕಾನಂದರನ್ನು ನೆನಪಿಸುತ್ತಿದೆ. ಪರಮಹಂಸರು ಸಮಾಜಸೇವೆಯನ್ನು ಮಾಡುವದು ಕಾಲಹಾನಿ; ದೇವರ ಧ್ಯಾನ ಮಾಡಿ ಎಂದು categorically ಹೇಳಿದ್ದಾರೆ.
ಅವರ ಪಟ್ಟದ ಶಿಷ್ಯರಾದ ವಿವೇಕಾನಂದರು ಸಮಾಜಸೇವೆಯೇ ದೇವರ ಸೇವೆ ಎಂದು ಹೇಳಿದರು!
ಶರ್ಮಾರೇ,
ನಿಮ್ಮ ಮಾತು ನಿಜ. ಗಾಂದಿ ತತ್ವ ಅನುಸರಿಸುವ ಕೆಲವರಾದರೂ ಇದ್ದಾರೆ
ಸಂದೀಪ್ ಕಾಮತ್ ಅವರೇ,
ನಾನು ಆರ್ಎಸ್ಎಸ್ ವಿರೋದಿಯಲ್ಲ. ಅಥವಾ ಕಮ್ಯೂನಿಸಂ ಪರವೂ ಅಲ್ಲ. ಎರಡೂ ಸಿದ್ಧಾಂತದಲ್ಲಿ ನನಗೆ ಸರಿ ಎನಿಸುವ ಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಗಾಂದಿ ಹತ್ಯೆ ಸಮರ್ಥಿಸುವುದು ಸೈದ್ಧಾಂತಿಕ ಆದರ್ಶದ ಪರಾಕಾಷ್ಠೆ! ಅದನ್ನು ಒಂಚೂರು ಹಾರ್ಷ್ ಆಗಿ ಹೇಳಿದ್ದೇನೆ. ಖಂಡಿತಾ ಸ್ವಲ್ಪ ಮೆದುವಾಗಿ ಹೇಳಬಹುದಿತ್ತು. ನಿಮ್ಮ ಸಲಹೆ ಒಪ್ಪಿದ್ದೇನೆ.
ನಾನು ಗಾಂದಿಯಂತೆ ಇವತ್ತಿನವರು ಬದುಕಬೇಕು ಅನ್ನುತ್ತಿಲ್ಲ. ಅಂತಹ ಮಹಾತ್ಮನನ್ನು ಅಪಹಾಸ್ಯ ಮಾಡಬೇಡಿ ಎಂಬುದು ನನ್ನ ಕಳಕಳಿ. ಅದನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಂತಿದೆ. ಯಾವ ನೆವವನ್ನೋ ಮುಂದಿಟ್ಟುಕೊಂಡು ಗಾಂದೀಜಿ ಬೈಯ್ಯುವುದು ತರವಲ್ಲ ಎಂಬುದು ನನ್ನ ವಾದ. ನಾನು ಗಾಂದಿ ಅನುಯಾಯಿ, ಗಾಂದಿವಾದಿ ಅಂತಾನೂ ಇಲ್ಲಿ ಬರೆದುಕೊಂಡಿಲ್ಲ. ಗಾಂದಿ ಎಂಬ ವ್ಯಕ್ತಿತ್ವ ನನಗೆ ಇಷ್ಟ ಎಂದು ಹೇಳಿದ್ದೀನಿ.
ಸುನಾಥರೆ
ಗಾಂದಿ,ನೆಹರೂ ಆಪ್ತರಾಗಿದ್ದರು ಎಂಬ ಕಾರಣಕ್ಕಾಗಿಯೇ ಗಾಂದಿ ವ್ಯಕ್ತಿತ್ವ ಚರ್ಚೆಯಾಗುತ್ತದೆ ಹೊರತೂ ಗಾಂದೀಜಿ ಎಂಬ ಮಹತ್ಮನ ಕುರಿತು ಮಾತಾಡುವುದಿಲ್ಲವಲ್ಲ ಎಂಬುದು ನೋವಿನ ಸಂಗತಿ
ಇಂತಿ
ವಿನಾಯಕ