ಪಂಚಮುಖಿ ಗೆಳೆಯರ ಬಳಗದ ಗಣೇಶೋತ್ಸವ ಮೆರವಣಿಗೆಯಂತೆ ಅದು! ದೀಪಾವಳಿ ಹತ್ತಿರ ಬಂದರೂ ಈ ಊರಲ್ಲಿ ಇನ್ನೂ ಗಣೇಶನಿಗೆ ಮುಕ್ತಿ ಸಿಕ್ಕಿಲ್ಲ ಅಂದುಕೊಳ್ಳುತ್ತಾ ಮೆರವಣಿಗೆ ನೋಡಲು ಹೊರಗಡೆ ಬಂದೆ. ಅದೇನು ಜಬರ್ದಸ್ತ್ ಉತ್ಸವ ಅಂತೀರಾ?! ಮೆರವಣಿಗೆ ಹೋಗಿ ಹತ್ತು ನಿಮಿಷವಾದರೂ ನನಗೆ ಹಾಯ್ದುಹೋಗಿದ್ದು ಗಣೇಶನ ಮೆರವಣಿಗೆಯೋ ಅಥವಾ ಶವಯಾತ್ರೆಯೋ ಅನ್ನೋದು ಬಗೆಹರಿಯಲಿಲ್ಲ!
ಅದ್ಯಾಕೊ ನನಗೆ ಉತ್ಸವ, ಮೆರವಣಿಗೆ ಅಂದಾಗಲೆಲ್ಲಾ ಉಡುಪಿಯದ್ದೇ ನೆನಪಾಗತ್ತೆ. ಅಲ್ಲಿನ ಕೊಂಕಣಿ ಮಂದಿ ನವರಾತ್ರಿ ವೇಳೆಯಲ್ಲಿ ಒಂದು ಶಾರದೋತ್ಸವ ಮಾಡ್ತಾರೆ, ಚೌತಿಯಲ್ಲಿ ಗಣೇಶೋತ್ಸವ ಮಾಡ್ತಾರೆ…ಆ ಎರಡು ಕಾರಣಕ್ಕೆ ಮಾತ್ರ ನಮಗೆಲ್ಲಾ ಕೊಂಕಣಿ ಮಂದಿ ಇಷ್ಟವಾಗುವುದು! ವರ್ಷದ ೩೬೫ ದಿನವೂ ಆ ಮಂದಿ ಮನೆ ಬಾಗಿಲು ತೆರೆದಿರುವುದಿಲ್ಲ! ಆ ಮನೆಗಳಿಗೆ ಬಂದುಹೋಗುವವರೂ ಇಲ್ಲ ಅನ್ನಿಸತ್ತೆ! ನಾವು ಕಾಲೇಜಿಗೆ ಹೋಗುವ ಬೀದಿ ತುಂಬಾ ಕೊಂಕಣಿಗರದ್ದೇ ಮನೆಗಳಿತ್ತು. ಸದಾ ಬಾಗಿಲು ಮುಚ್ಚಿರುತ್ತಿತ್ತು. ವೈವೇ, ಕಸಲ್ರೇ, ಕಿತ್ತಲೇ ಮಾಮೂ…ಎನ್ನುತ್ತಾ ಪಕ್ತಾ ದುಡ್ಡು ಮಾಡುವುದೊಂದು ಬಿಟ್ಟು ಈ ಜುಗ್ಗರಿಗೆ ಮತ್ತೇನೂ ಗೊತ್ತಿಲ್ಲ ಅಂತಾ ಕಾಲೇಜಿಗೆ ಹೋಗುವಾಗಲೆಲ್ಲಾ ಆ ಮಂದಿಗೆ ಬೈದುಕೊಂಡೇ ಹೋಗುತ್ತಿದ್ದೇವು!
ಕೇವಲ ದುಡ್ಡು ಮಾಡುವುದು ಮಾತ್ರವಲ್ಲ, ಮಾಡಿದ ದುಡ್ಡನ್ನು ಖರ್ಚು ಮಾಡುವ ಕಲೆಯನ್ನೂ ಕೊಂಕಣಿಗರು, ದಕ್ಷಿಣ ಕನ್ನಡದ ಮಂದಿಯಿಂದಲೇ ಕಲಿಯಬೇಕು. ಉತ್ಸವ ಅಂದಾಗ ನನಗೆ ಇವತ್ತಿಗೂ ಕಣ್ಮುಂದೆ ಬಂದು ನಿಲ್ಲುವುದು ಎಲ್.ವಿ.ಟಿ ದೇವಸ್ಥಾನದ ಶಾರದೋತ್ಸವ. ಏನಿಲ್ಲ ಅಂದ್ರು ಸುಮಾರು ೧೫-೨೦ ಟ್ಯಾಬ್ಲೊಗಳ ಮೆರವಣಿಗೆ ಅದು. ಪ್ರತಿವರ್ಷವೂ ವಿಭಿನ್ನ ಟ್ಯಾಬ್ಲೊಗಳು. ಇನ್ನು ಚಂಡೆ ಬಡಿತಕ್ಕೆ ದಕ್ಷಿಣ ಕನ್ನಡ ಟ್ರೇಡ್ ಮಾರ್ಕ್. ಗಬ್ಬು ಹಾ(ಆ)ರ್ಕೆಸ್ಟ್ರಾದ ಸೊಗಡಿಲ್ಲದ, ಚಂಡೆ, ವಾದ್ಯಗಳ ಅದ್ಬುತ ಉತ್ಸವ ಅದು. ಮಧ್ಯರಾತ್ರಿ ೧.೩೦-೨ ಗಂಟೆಯವರೆಗೂ ನಡೆಯುವ ಆ ಮೆರವಣಿಗೆಯನ್ನು ಉಡುಪಿಯಲ್ಲಿ ಇದ್ದಷ್ಟು ಕಾಲವೂ ಮಿಸ್ ಮಾಡಿಕೊಳ್ಳಲಿಲ್ಲ.
ಚಂಡೆಗೆ ಸರಿಯಾಗಿ ಕುಣಿಯುವ ಯಜಮಾನರ ತಂಡ ಒಂದು ದಿಕ್ಕಾದರೆ, ಇನ್ನೊಂದೆಡೆ ನಮ್ಮ ಮಠದ ಹುಡುಗರ ನರ್ತನ! ಮೆರವಣಿಗೆ ಕುಣಿತ ಅಂದ್ರೆ ಕುಡುಕರ ಕುಣಿತ ಅನ್ನೋ ಆಪಾದನೆಯಿದೆ. ಆದ್ರೆ ಉಡುಪಿ ಮಾತ್ರ ಅದರಿಂದ ಹೊರತು. ಉಡುಪಿ ಪರಿಸರದ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವವರು ತೀರಾ ಸಭ್ಯಸ್ತ ಮಂದಿ. ಕಾಲೇಜಿಗೆ ಬರುವ ಚೆಂದ ಚೆಂದದ ಕೊಂಕಣಿ ಹುಡುಗಿಯರೂ ಹೆಜ್ಜೆ ಹಾಕುತ್ತಿದ್ದರು. ಅದನ್ನು ನೋಡಲೇಂದೇ ಕೆಲವರು ಹೋಗುತ್ತಿದ್ದರೂ ಎಂಬುದು ಸತ್ಯವಾದರೂ, ಎಲ್ಲಿಯೂ ಅಸಭ್ಯ ವರ್ತನೆ ಇರುತ್ತಿರಲಿಲ್ಲ. ಹುಡುಗಿಯರೂ ಸೇರಿದಂತೆ ಎಲ್ಲರೂ ಉತ್ಸವದ ಆನಂದ ಸವಿಯುವ ಮನೋಭಾವದವರಾಗಿದ್ದರು. ಅಂದಹಾಗೆ ಕೆಲವರು ಟೈಟಾಗಿ ಬರುತ್ತಿರಲಿಲ್ಲ ಎಂದೇನಲ್ಲ! ಅವರ ಕುಣಿತಕ್ಕೆ ಆಯೋಜಕರು ಪ್ರತ್ಯೇಕ ಗಲ್ಲಿ ಒದಗಿಸಿಕೊಟ್ಟು ಮೆರವಣಿಗೆಯ ಶಿಸ್ತನ್ನು ಕಾಪಾಡುತ್ತಿದ್ದರು. ಆ ಶಿಸ್ತಿನಿಂದಲೇ ಇರಬೇಕು ಇವತ್ತಿಗೂ ಅಲ್ಲಿನ ಉತ್ಸವ ನೆನಪಾಗುವುದು.
ಆಡಂಬರಕ್ಕೆ ದಕ್ಷಿಣ ಕನ್ನಡದ ಮಂದಿ ಅಂತಾ ಮೊದಲೇ ಹೇಳಿದೆ. ಹೌದು, ಕೇವಲ ಕೊಂಕಣಿ ಮಂದಿಯ ಮೆರವಣಿಗೆ ಮಾತ್ರವಲ್ಲ, ರಥಬೀದಿಯಲ್ಲಿ ನಡೆಯುವ ಮೆರವಣಿಗೆ, ಪರ್ಯಾಯದ ಮೆರವಣಿಗೆ, ಅಷ್ಟಮಿ,ವಿಟ್ಲಪಿಂಡಿ…ಊಹುಂ ಯಾವುದನ್ನೂ ತೆಗೆದು ಹಾಕುವಂತಿಲ್ಲ. ಶಿರೂರು ಸ್ವಾಮಿಗಳನ್ನು ಜನ ಏನೂ ಬೇಕಾದರೂ ಆಡಿಕೊಳ್ಳಲಿ, ಆದರೆ ಆ ಸ್ವಾಮಿಗಳಿಂದ ಮೆರವಣಿಗೆಗೊಂದು ಹೊಸ ರಂಗು ಬರುತ್ತಿದ್ದದಂತೂ ಸುಳ್ಳಲ್ಲ. ಹುಲಿವೇಷ, ಡ್ರಮ್ ಕುಣಿತ…ಪ್ರತಿವರ್ಷ ಮೆರವಣಿಗೆಯಲ್ಲೊಂದು ಹೊಸತನ ತಂದಿಟ್ಟ ಹೆಗ್ಗಳಿಕೆ ಶೀರೂರು ಶ್ರೀಗಳದ್ದೆ ಬಿಡಿ!
ತಗೋಳೇ, ತಗೋಳೇ…ಅವ ಕಿರುಚುತ್ತಲೇ ಇದ್ದ. ಯಾರು,ಯಾರಿಂದ,ಏನನ್ನು ತಗೋಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಎಲ್ಲರೂ ‘ಹೋ’ ಎಂದು ಕಿರುಚುತ್ತಾ, ನಲಿಯುತ್ತಲೇ ಇದ್ದರು…ಇದು ಪಂಚಮುಖಿ ಗೆಳೆಯರ ಬಳಗದ ಗಣೇಶೋತ್ಸವದ ಒಂದು ಸ್ಯಾಂಪಲ್ ಅಷ್ಟೇ. ಊರು ತುಂಬಾ ಬಣ್ಣ, ಬಣ್ಣದ ದೀಪ ಹಾಕಿ, ಒಂದಿಷ್ಟು ಕುಡುಕರನ್ನು ಸೇರಿಸಿಕೊಂಡು , ಹಾರ್ಕೆಸ್ಟ್ರಾ ಮಾಡಿಕೊಂಡು, ಯಾರೋ ದೇಣಿಗೆ ಕೊಟ್ಟ ಒಂದಿಷ್ಟು ದುಡ್ಡು ಹಾಳು ಮಾಡುವ ಬದಲು ದಕ್ಷಿಣ ಕನ್ನಡದ ರೀತಿಯಲ್ಲಿ ಅಚ್ಚುಕಟ್ಟಾದ, ಸಂಸಾರವೇ ಭಾಗವಹಿಸಬಹುದಾದ ಮೆರವಣಿಗೆ ಆಯೋಜಿಸಲು ಬೆಂಗಳೂರಿನ ಮಂದಿಗೆ ಏಕೆ ಸಾಧ್ಯವಾಗುವುದಿಲ್ಲ ಎಂಬುದೇ ನನಗೆ ಅರ್ಥವಾಗದು. ಅಂಥ ಉತ್ಸವ ನೋಡಿ ಒಂದಿಷ್ಟು ಬೈದು, ಉಡುಪಿ ಉತ್ಸವ ನೆನಪಿಸಿಕೊಳ್ಳುವುದೊಂದೇ ನನ್ನಿಂದಾಗುವ ಕೆಲಸ ಎಂಬುದನ್ನು ನೆನಪಿಸಿಕೊಂಡಾಗಲೆಲ್ಲಾ ಬೇಸರವಾಗತ್ತೆ…
ಈ ಊರಿನ ಕಥೆ ಕೇಳಿರೆ ಅಳು ನಗು ಎರಡೂ ಒಟ್ಟಿಗೇ ಬತ್ತು ನೋಡು.
ಕೆಲವು ದಿನಗಳ ಹಿಂದೆ ಜಯನಗರದ ಕಡೆ ಹೋದಾಗ ಏನೋ ಖರೀದಿಸಲೆಂದು ಒಂದು ಅಂಗಡಿಯ ಮುಂದೆ ನಿಲ್ಲುವಾಗಲೇ ಶುರುವಾಯಿತು ದೊಡ್ಡದಾಗಿ ಹಾಡು “ಜಿತ್ರಾನ್ನ ಚಿತ್ರಾನ್ನ..” ಅಂತ ಸುಮಧುರವಾದ ಹಾಡು!!?? ಖರೀದಿಸುವ ಮಾತಿರಲಿ.. ಅಲ್ಲಿ ಒಂದು ಕ್ಷಣವೂ ನಿಲ್ಲಲಾಗಲಿಲ್ಲ. ಹಿಂತಿರುಗುವ ಎಂದರೆ ಟ್ರಫಿಕ್ ಜಾಮ್ ಬೇರೆ. ಪಕ್ಕದಲ್ಲೇ ಇದ್ದವರೊಬ್ಬರಲ್ಲಿ ಏನು ವಿಷೇಶ ಎಂದು ಕೇಳಲು ಅವರು ಹೆಮ್ಮೆಯಿಂದ “ಗಣಪತಿ ಕೂರ್ಸಿದ್ದೀವಿ” ಅಂದ್ರು. ಸರಿ.. ಆದ್ರೆ ಗಣೇಶನ ಹಬ್ಬ ಮುಗಿದಾಯಿತಲ್ಲ..” ಎಂದು ಮತ್ತೆ ಕೇಳಿದಾಗ ಆ ಪುಣ್ಯಾತ್ಮ “ಪಿತೃಪಕ್ಷದ ಗಣಪತಿ ಇದು” ಎನ್ನಬೇಕೆ?!
ಈ ಬೆಂಗ್ಳೂರಲ್ಲಿ ಇವೆಲ್ಲಾ ನಿರೀಕ್ಷೆ ಮಾಡೋದೆ ತಪ್ಪು !