ಅಲ್ಲಿ ನಡೆವ ಘಟನೆಗಳ ಪರಿವೇ ನಮಗಿಲ್ಲ…!
ಸೆಪ್ಟೆಂಬರ್ 18, 2008 aksharavihaara ಮೂಲಕ
(‘ನನ್ನದೆಂಬ ನಾಲ್ಕು ಮಾತು’ ಅನ್ನೋ ಅಂಕಣ ಇದಿನಿಂದ ಆರಂಭವಾಗುತ್ತಿದೆ. ಪ್ರತಿ ಗುರುವಾರ ಅಕ್ಷರ ವಿಹಾರದಲ್ಲಿ ಈ ಅಂಕಣ ಮೂಡಿ ಬರಲಿದೆ)
೧೯೮೯ರಿಂದ ಇವತ್ತಿನವರೆಗೆ ಅಲ್ಲಿ ಬಾಂಬ್ ಸ್ಫೋಟ, ಉಗ್ರರ ದಾಳಿ…ಇಂತಹ ರಕ್ತ ಕಾರುವ ಕೃತ್ಯಗಳಿಗೆ ಬಲಿಯಾದವರ ಸಂಖ್ಯೆ ಸುಮಾರು ೭೫,೦೦೦. ದಿನಕ್ಕೊಬ್ಬ ಯೋಧ ಅಲ್ಲಿ ವೀರ ಮರಣವನ್ನಪ್ಪುತ್ತಿದ್ದಾನೆ. ಸಾಮಾನ್ಯ ಜನ ಅಲ್ಲಿ ವಾಸಿಸುವುದೇ ದೊಡ್ಡ ಸಾಹಸವಾಗಿದೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಮೇಲೆ ಕಾಮುಕರ ಕಣ್ಣು ಯಾವಾಗ ಬೀಳುತ್ತದೆಯೋ ಹೇಳಲು ಸಾಧ್ಯವಿಲ್ಲ. ಹಿಂದು ಎನಿಸಿಕೊಂಡವನಂತೂ ಅಲ್ಲಿ ಬದುಕಲು ಸಾಧ್ಯವೇ ಇಲ್ಲ. ಇಷ್ಟೆಲ್ಲದರ ನಡುವೆಯೂ ಅವರು ಅಲ್ಲಿ ಬದುಕುತ್ತಿದ್ದಾರೆ. ಈ ನಾಡು ನಮ್ಮದು, ಬಿಟ್ಟುಕೊಡೆವು ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಇದು ಕೊಲ್ಲಿ ರಾಷ್ಟ್ರದ ಕಥೆಯಲ್ಲ, ದೇಶದ ಗಡಿಯಲ್ಲಿರುವ , ದೇಶದ ಅವಿಭಾಜ್ಯ ಅಂಗವೆನಿಸಿರುವ ಕಾಶ್ಮೀರಿ ಕಣಿವೆಯ ಕಥೆ. ಅಲ್ಲಿ ಬದುಕುವವರ ವ್ಯಥೆ.
ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಿ ಎಂಬ ಕೂಗು ನೆಹರೂ ಮತ್ತು ಜಿನ್ನಾ ಎಂಬ ಮೇಧಾವಿ ನಾಯಕರಿಬ್ಬರು ಸೇರಿ ಅಖಂಡ ಭಾರತವನ್ನು ತುಂಡರಿಸಿದ ದಿನದಿಂದಲೂ ಕೇಳಿ ಬರುತ್ತಿದೆ. ಅದರ ಪರಿಣಾಮವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಈ ವರೆಗೆ ಮೂರು ಅಧಿಕೃತ ಯುದ್ಧ ನಡೆದಿದೆ.
೧೯೪೭-೪೮ ರ ಅವಧಿಯಲ್ಲಿ ನಾಲ್ಕು ಸಲ ಪಾಕಿಸ್ತಾನ ಭಾರತದ ಮೇಲೆ ಆಕ್ರಮಣ ಮಾಡಿತು. ಇದರ ಪರಿಣಾಮವಾಗಿ ಉದ್ಭವಿಸಿದ್ದು ಮೊದಲನೇ ಕಾಶ್ಮೀರ ಕದನ. ಎರಡು ರಾಷ್ಟ್ರಕ್ಕೂ ಸ್ವಾತಂತ್ರ್ಯದ ಸ್ಪೂರ್ತಿ. ಕಾಶ್ಮೀರವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ದಾಹ. ವರ್ಷಗಳ ಕಾಲ ನಡೆದ ಈ ಯುದ್ಧ ೧೯೪೮ ರ ಡಿಸೆಂಬರ್ ಅಂತ್ಯದ ಸುಮಾರಿಗೆ ನಿಂತಿತು. ೧,೨೦೦ ಭಾರತೀಯ ಸೈನಿಕರು ಯುದ್ಧ ಭೂಮಿಯಲ್ಲಿ ಮಡಿದರು. ೩,೨೦೦ ಸೈನಿಕರು ಗಾಯಗೊಂಡರು. ಕೈ ಕಾಲು ಕಳೆದುಕೊಂಡರು. ಆವತ್ತಿನಿಂದಲೂ ಅಲ್ಲಿ ವಾಸಿಸುವ ಜನತೆಗೆ ನೆಮ್ಮದಿಯಿಲ್ಲ. ಬದುಕಿನ ಕುರಿತಾಗಿ ಭರವಸೆಯಿಲ್ಲ. ಸಾವು ಯಾವ ಘಳಿಗೆಯಲ್ಲಿ ಅಪ್ಪಿಕೊಳ್ಳಬಹುದೆಂಬುದು ಗೊತ್ತಿಲ್ಲ.
ಇವತ್ತು ಅಲ್ಲಿ ನೆಲೆ ನಿಂತಿರುವವರು ಉಸಿರನ್ನು ಅಂಗೈನಲ್ಲಿ ಹಿಡಿದುಕೊಂಡೇ ಬದುಕುತ್ತಿದ್ದಾರೆ! ಉಗ್ರರ, ಪಾಕ್ನ ಗುಪ್ತಚರರ ಸಂಸ್ಥೆಗಳ , ಕೆಲ ಪಟ್ಟಭದ್ರ ಮುಸ್ಲಿಂ ಸಂಘಟನೆಗಳ ತಾಣವಾಗಿರುವ ಜಮ್ಮು, ಕಾಶ್ಮೀರ, ಲಡ್ಹಾಕ್ ಮೂರು ಭಾಗಗಳಲ್ಲೂ ಬಾಂಬ್ ಎಂಬುದು ಸರ ಪಟಾಕಿಯಂತೆ ಸಿಡಿಯುತ್ತಲೇ ಇರುತ್ತದೆ. ೨೦೦೦ ದ ದಶಕದ ಸುಮಾರಿಗೆ ೩೦,೦೦೦ ಕ್ಕೂ ಹೆಚ್ಚು ಮಂದಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ ಎಂದು ಸರಕಾರ ಹೇಳಿತ್ತು. ೨೦೦೫ ರ ಹೊತ್ತಿಗೆ ೬೦,೦೦೦ ಜನ ಬಲಿಯಾಗಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಒಟ್ಟಿನಲ್ಲಿ ಅಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಮೊದಲ ಕಾಶ್ಮೀರ ಯುದ್ಧದಲ್ಲಿ ಸೈನಿಕರು ರಕ್ತ ಸುರಿಸಿದರು. ಕಾಶ್ಮೀರ ದೇಶದ ಕೈ ವಶವಾಯಿತು. ಮುಗಿಯಿತು ಕಾಶ್ಮೀರದ ಅಧ್ಯಾಯ… ಊಹುಂ ಮುಗಿಯಲಿಲ್ಲ . ಆಗಷ್ಟೇ ಆರಂಭವಾಯಿತು ಕಾಶ್ಮೀರಿ ಕಣಿವೆಯ ಅಧ್ಯಾಯ. ಕೆಲ ಪಾಕಿಸ್ತಾನಿ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಭಾರತದ ವಿಜಯವನ್ನು ಸಹಿಸಲು ಸಾಧ್ಯವಾಗಲಿಲ್ಲ. ಭಯೋತ್ಪಾದಕತೆಯಂತಹ ದುಷ್ಕೃತ್ಯಗಳು ಹುಟ್ಟಿಕೊಂಡಿತು. ೧೯೬೫ ರಲ್ಲಿ ಮತ್ತೆ ಭಾರತ -ಪಾಕ್ ಯುದ್ಧ ಆರಂಭವಾಯಿತು. ಅದು ಎರಡನೇ ಕಾಶ್ಮೀರಿ ಕದನ. ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ನಡೆದ ಈ ಕಾಳಗದಲ್ಲಿ ೩,೩೦೦ ಭಾರತೀಯ ಯೋಧರು ಅಸುನೀಗಿದರು. ೮,೫೦೦ ಕ್ಕೂ ಅಧಿಕ ಯೋಧರು ಅಂಗ ಹೀನರಾದರು. ಮತ್ತೆ ವಿಜಯ ಮಾಲೆ ಭಾರತ ಮಾತೆಯ ಮುಡಿಯೇರಿತು. ಕಾಶ್ಮೀರ ಭದ್ರವಾಗಿ ಭಾರತದ ಪಾಲಾಯಿತು.
೧೯೯೪ ರಿಂದ ಅಲ್ಲಿ ನಡೆಯುತ್ತಿರುವ ಮಾರಣಹೋಮಕ್ಕೆ ಇಲ್ಲದಂತಾಗಿದೆ. ವರ್ಷಕ್ಕೆ ಸರಾಸರಿ ೨,೫೦೦ ವಿದ್ವಂಸಕ ಕೃತ್ಯಗಳು ನಡೆಯುತ್ತಿದೆ. ೧೯೯೭ರ ಮಾರ್ಚ್ ೨೨ ರಂದು ಭಯೋತ್ಪಾದಕರು ಬುದ್ಧಗಾಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಏಳು ಜನ ಕಾಶ್ಮೀರಿ ಪಂಡಿತರನ್ನು ಬಹಿರಂಗವಾಗಿ ಹತ್ಯೆ ಮಾಡಿದರು. ೧೯೯೮ ರ ಜನವರಿಯಲ್ಲಿ ಕಾಶ್ಮೀರದ ಕೆಲ ಹಳ್ಳಿಗಳಲ್ಲಿ ವಾಸಿಸುತ್ತಿದ್ದ ಕಾಶ್ಮೀರಿ ಪಂಡಿತರನ್ನು ಮುಸ್ಲಿಂ ಭಯೋತ್ಪಾದಕರು ಒಕ್ಕಲೆಬ್ಬಿಸಿದರು. ಊರು ಬಿಡಲು ಒಲ್ಲೆ ಎಂದ ಪಂಡಿತರಿಗೆ ಕೊಡಬಾರದ ಹಿಂಸೆ ಕೊಟ್ಟರು. ಪಂಡಿತರ ಮನೆಯಲ್ಲಿನ ಹೆಣ್ಣು ಮಕ್ಕಳ ಮಾನವನ್ನು ಸಾಧ್ಯವಾದಷ್ಟೂ ಹರಾಜಿಗೆ ಹಾಕಿದರು. ಅದೂ ಮನೆ ಯಜಮಾನನ ಎದುರಿಗೆ! ಇಡೀ ಕಾಶ್ಮೀರವನ್ನು ನೋಡುವುದಾದರೆ ಜಮ್ಮು ಹಿಂದುಗಳ ಸಂಖ್ಯೆ ಹೆಚ್ಚಿರುವ ಭಾಗ. ಕಾಶ್ಮೀರ ಮುಸ್ಲಿಂರಿಂದ ಭರ್ತಿಯಾಗಿರುವ ಪ್ರದೇಶ. ಲಡ್ಹಾಕ್ನಲ್ಲಿ ಬುದ್ಧ ಜನಾಂಗದ ಪ್ರಾಬಲ್ಯ ಹೆಚ್ಚು. ಈ ವರಗೆ ಮಾರಣಾಂತಿಕ ಕೃತ್ಯಗಳು ಹೆಚ್ಚಾಗಿ ನಡೆದದ್ದು ಜಮ್ಮು ಭಾಗದಲ್ಲೇ. ಉಗ್ರರು ಹೋರಾಡುತ್ತಿರುವುದೇ ಕಾಶ್ಮೀರವನ್ನು ಮುಸ್ಲಿಂ ರಾಜ್ಯ ಎಂದು ಘೋಷಿಸಿ ಎಂದಲ್ಲವೇ?!
ಲಷ್ಕರ್-ಇ-ತಯ್ಬಾ, ಜೈಶ್-ಇ-ಮಹಮ್ಮದ್, ಹಿಜಬುಲ್ ಮುಜಾಹಿದ್ದೀನ್, ಅಲ್ಖೈದಾ ಮೊದಲಾದ ಅಪ್ಪಟ ಭಯೋತ್ಪಾದಕ ಸಂಘಟನೆಗಳು ಇಡೀ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸಲು ಹೋರಾಡುತ್ತಿದ್ದರೆ, ಪಾಕ್ನ ಇನ್ನೂ ಕೆಲ ಸಂಘಟನೆಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲು ಯತ್ನಿಸುತ್ತಿವೆ. ಇನ್ನು ಜಮ್ಮು ಕಾಶ್ಮೀರ ಲಿಬೆರೆಷನ್ ಫ್ರಂಟ್, ಹುರ್ರಿಯತ್ ಕಾನ್ಪರೆನ್ಸ್ನ ಹುರಿಯಾಳುಗಳು ಕಾಶ್ಮೀರವನ್ನು ಸ್ವಾಯತ್ತಗೊಳಿಸಿ. ನಾವೇ ಇಲ್ಲಿ ಪ್ರಧಾನಿಗಳಾಗಿ ಇರುತ್ತೇವೆ ಎನ್ನುತ್ತಿದ್ದಾರೆ. ಒಂದು ವರದಿಯ ಪ್ರಕಾರ ಸುಮಾರು ನಾಲ್ಕು ಲಕ್ಷ ದೇಶ ವಿದ್ರೋಹಿಗಳು ಕಾಶ್ಮೀರದುದ್ದಕ್ಕೂ ಬದುಕುತ್ತಿದ್ದಾರೆ. ಅಂದಹಾಗೆ ೨,೫೦,೦೦೦ ಭಾರತೀಯ ಕುಟುಂಬಗಳು ಇಂತಹ ರಕ್ಕಸರ ನಡುವೆ ನೆಲೆಸಿದೆ.
ಮತ್ತೆ ಪಾಕಿಸ್ತಾನಕ್ಕೆ ಕಾಶ್ಮೀರದ ನೆನಪಾಗಿದ್ದು ೧೯೯೯ ರಲ್ಲಿ. ಅಲ್ಲಿಯವರೆಗೂ ಪಾಕಿಸ್ತಾನ ಕೈ ಕಟ್ಟಿ ಕುಳಿತಿತ್ತು ಎಂದೇನಲ್ಲ. ಅಥವಾ ಕಾಶ್ಮೀರದಲ್ಲಿ ನೆಮ್ಮದಿ ನೆಲೆಯೂರಿತ್ತು ಎಂದಲ್ಲ. ಸ್ಫೋಟಗಳು, ದಾಳಿಗಳು ನಡೆಯುತ್ತಲೇ ಇತ್ತು. ರಕ್ತ ಗಡಿ ಭಾಗದ ತುಂಬಾ ಹರಿದಾಡುತ್ತಲೇ ಇತ್ತು. ಆದರೂ ಅಧಿಕೃತವಾಗಿ ಪಾಕಿಸ್ತಾನಕ್ಕೆ ಕಾಶ್ಮೀರವನ್ನು ಕೈ ವಶ ಮಾಡಿಕೊಳ್ಳಬೇಕು ಅನ್ನಿಸಿದ್ದು ೧೯೯೯ ರಲ್ಲಿ ಅಷ್ಟೇ! ಕಾರ್ಗಿಲ್ ವಾರ್ ಅಥವಾ ೩ನೇ ಕಾಶ್ಮೀರಿ ಕದನ ೧೯೯೦ರ ಮೇ ತಿಂಗಳ ಸುಮಾರಿಗೆ ಆರಂಭವಾಯಿತು. ಜುಲೈ ೨೬ಕ್ಕೆ ಅಂತ್ಯಗೊಂಡಿತು. ಹಾಗಾಗಿಯೇ ನಾವು ಜುಲೈ ೨೬ನ್ನು ಕಾರ್ಗಿಲ್ ವಿಜಯ ದಿವಸವನ್ನಾಗಿ ಆಚರಿಸುವುದು. ಹೌದು ಮತ್ತೇ ಕಾಶ್ಮೀರ ದೇಶದ ಪಾಲಾಯಿತು. ಹಾಗೆ ಕಾಶ್ಮೀರ ಉಳಿಯಬೇಕಾದರೆ ನಮ್ಮ ನಾಡಿನ ಸಹಸ್ರಾರು ಯೋಧರ ರಕ್ತ ತೊಟ್ಟಿಕ್ಕಿದೆ. ಸುಮಾರು ೫೨೭ ಯೋಧರು ರಣಾಂಗಣದಲ್ಲಿ ವೀರ ಮರಣವನ್ನಪ್ಪಿದರು. ೧,೪೦೦ಕ್ಕೂ ಅಕ ಸೈನಿಕರು ವಿಕಲಚೇತನರಾದರು. ಇಲ್ಲಿಗೆ ಮುಗಿಯಿತಾ ಕಾಶ್ಮೀರ ಕದನದ ಅಧ್ಯಾಯ? ಅಂದರೆ…
ಇಲ್ಲ ಮತ್ತದೇ ಆರ್ಡಿಎಕ್ಸ್, ಅದೇ ರೈಫಲ್, ಅದೇ ಎ.ಕೆ ೪೭ ಬಂದೂಕುಗಳ ಗುಂಡಿನ ಮಳೆ! ಭಯೋತ್ಪಾದನೆಗೆ ಬಳಸುವ ಬಾಂಬ್ಗಳ, ಗುಂಡಿನ ಶ್ರೇಣಿ ಬದಲಾಗಿದೆ. ಆಧುನಿಕ ಅಸ್ತ್ರಗಳು ಬಳಕೆಯಾಗುತ್ತಿದೆ. ವಿದ್ವಂಸಕ ಕೃತ್ಯ ಹಾಗೇ ನಡೆದುಕೊಂಡು ಬರುತ್ತಿದೆ. ೨೦೦೧ರ ಅಕ್ಟೋಬರ್ನಲ್ಲಿ ಉಗ್ರರು ಶ್ರೀನಗರದಲ್ಲಿನ ಸದನದ ಮೇಲೆ ದಾಳಿ ನಡೆಸಿದರು. ಅಂದು ನಡೆದ ಬಾಂಬ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ಮೂವತ್ತೆಂಟು. ೨೦೦೩ ರ ಜುಲೈನಲ್ಲಿ ಸಶಸ್ತ್ರಧಾರಿ ಭಯೋತ್ಪಾದಕರು ಶ್ರೀನಗರದಲ್ಲಿ ಗುಂಡಿನ ಮಳೆ ಸುರಿಸಿದರು. ೨೭ ಜನರ ಹೆಣ ಉರುಳಿ ಬಿತ್ತು. ಮೇ.೩ ೨೦೦೬ ರಂದು ಜಮ್ಮುವಿನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ೩೫ ಜನ ಹಿಂದುಗಳು ಬಲಿಯಾದರು. ಮೊನ್ನೆ ಜುಲೈ ೧೯ ರಂದು ಜಮ್ಮುವಿನಲ್ಲಿ ಆದ ಸ್ಫೋಟದಲ್ಲಿ ೯ ಸೈನಿಕರು ಮೃತರಾದರು. ೨೫ಕ್ಕೂ ಅಧಿಕ ಸೈನಿಕರು ಗಾಯಗೊಂಡರು. ಅಲ್ಲಿ ದಾಳಿ, ಸ್ಫೋಟ, ಸಾವು ಎಂಬುದು ನಿರಂತರ…ಆದರೆ ನಮಗೆ ಕಾಶ್ಮೀರದಲ್ಲಿ ನಡೆಯುವ ಘಟನೆಗಳ ಪರಿವೇ ಇರುವುದಿಲ್ಲ!
ದೀಪಾವಳಿ ಸಡಗರಕ್ಕೆ ಎರಡೇ ದಿನ ಬಾಕಿಯಿತ್ತು. ಇಡೀ ದೇಶವೇ ಹಬ್ಬದ ಸಂಭ್ರಮದಲ್ಲಿ ಮುಳುಗಿತ್ತು. ಅಷ್ಟೊತ್ತಿಗೆ ಕೇಳಿಸತೊಡಗಿತು ಬಾಂಬ್ ಎಂಬ ಭಯಾನಕ ರಕ್ಕಸನ ಚೀತ್ಕಾರ. ಹೌದು ೨೦೦೫ರ ಅ.೨೯ ರಂದು ಹೊಸದಿಲ್ಲಿಯಲ್ಲಿ ನಡೆದ ಸರಣಿ ಸ್ಫೋಟದ ಕಥೆಯಿದು. ಸರಿಸುಮಾರು ೭೦ ಜನರನ್ನು ಬಲಿ ತೆಗೆದುಕೊಂಡ ದುರಂತ ಅಧ್ಯಾಯವೊಂದರ ಪುಟವಿದು. ೨೦೦೬-ಮಾರ್ಚ್-೭ ವಾರಾಣಸಿಯಲ್ಲಿ ಬಾಂಬ್ ಸಿಡಿದ ದಿನ. ೨೧ ಜನರ ರಕ್ತವನ್ನು ಉಗ್ರರು ಹೀರಿ ಕುಡಿದ ದಿನ. ೧೧ ಜುಲೈ ೨೦೦೬ ಇಡೀ ಮುಂಬಯಿ ನಗರವನ್ನು ದಂಗು ಬಡಿಸಿದ ದಿನವದು. ಆವತ್ತಿನ ಸರಣಿ ಬಾಂಬ್ ಸ್ಫೋಟದಿಂದಾಗಿ ನಗರದ ರೈಲುಗಳು ಭಸ್ಮವಾದವು. ಸುಮಾರು ೨೧೦ ಜನ ಸುಟ್ಟು ಕರಕಲಾದರು. ೭೯೫ ಮಂದಿ ದೇಹದ ಅಂಗಾಂಗಗಳನ್ನೆಲ್ಲಾ ಸುಟ್ಟುಕೊಂಡು ಆಸ್ಪತ್ರೆ ಸೇರಿದರು. ದೇಶ ಮರೆಯಲಾಗದ ಸ್ಫೋಟಗಳಲ್ಲಿ ಅದೂ ಒಂದು. ಅದು ಸಿಮಿ, ಲಷ್ಕರ್-ಇ-ತಯ್ಬಾದಂತಹ ಕಟ್ಟಾ ಉಗ್ರರು ನಡೆಸಿದ ದಾಳಿಯಾಗಿತ್ತು. ೨೦೦೭ ರ ಮೇನಲ್ಲಿ ೧೫ ಜನರನ್ನು ಬಲಿ ತೆಗೆದುಕೊಂಡ ಹೈದರಾಬಾದ್ ಸರಣಿ ಸ್ಫೋಟ, ೨೦೦೭ರ ಆಗಸ್ಟ್ನಲ್ಲಿ ಹೈದರಾಬಾದ್ನಲ್ಲೇ ನಡೆದ ಮತ್ತೊಂದು ಸರಣಿ ಸ್ಫೋಟ ೨೦೦೮ ರ ಮೇ ತಿಂಗಳಿನಲ್ಲಿ ಜೈಪುರದಲ್ಲಿ ನಡೆದ ಸೋಟ, ಬೆಂಗಳೂರು, ಅಹಮದಾಬಾದ್, ದೆಹಲಿಯ ಸ್ಫೋಟ…ಊಹುಂ ಲೆಕ್ಕಕ್ಕೆ ನಿಲುಕದಷ್ಟು ಸ್ಫೋಟಗಳು ಈ ದೇಶದಲ್ಲಿ ಆಗಿದೆ. ಆಗುತ್ತಲೇ ಇದೆ.
ನಮ್ಮ ಜನರು ಅದಕ್ಕೆ ಒಗ್ಗಿ ಹೋಗಿದ್ದಾರೆ! ಒಂದು ಕಾಲದಲ್ಲಿ ಬಾಂಬ್ ಸ್ಫೋಟದ ಕುರಿತು ಚರ್ಚೆಯಾದರೂ ನಡೆಯುತ್ತಿತ್ತು. ಆದರೆ ಇವತ್ತು? ಕಾಶ್ಮೀರ ನೆನಪಿಸಿಕೊಳ್ಳುವುದು ಹಾಳಾಗಲಿ, ನಮ್ಮ ಕಾಲು ಬುಡದಲ್ಲೇ ಒಂದು ಬಾಂಬ್ ಬಿದ್ದರೆ, ಬಿದ್ದ ತಕ್ಷಣ ಚೇಳು ಕಚ್ಚಿದಂತೆ ಆಡುತ್ತೇವೆ. ಬಾಂಬ್ ಸ್ಫೋಟವಾಗಿ ವಾರ ಕಳೆಯುವುದರೊಳಗೆ ಬಾಂಬ್ ಸಿಡಿದಿದೆ ಎಂಬುದನ್ನೇ ಮರೆತುಬಿಡುತ್ತೇವೆ. ದೇಶದ ಪ್ರತಿಯೊಂದು ಮಹಾ ನಗರಿಯೂ ಇನ್ನೊಂದು ಕಾಶ್ಮೀರವಾಗುತ್ತಿದೆ. ಹಳಿಯಾಳದ ಕಾನನದಲ್ಲೂ ಬಾಂಬ್ ಸಿಗುತ್ತದೆ! ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜುಗಳು ಉಗ್ರರ ಚಟುವಟಿಕೆಗೆ ಆಶ್ರಯ ತಾಣವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸ್ಫೋಟ ದೊಡ್ಡದು ಎಂದು ನಮಗೆ ಅನ್ನಿಸುವುದಿಲ್ಲ ಅಲ್ಲವೇ? ಹೌದು, ಹಾಗಾಗಿಯೇ ಸಿಮಿ ಉಗ್ರನೊಬ್ಬ ಸ್ಫೋಟ ಮಾಡಿದ್ದು ನಾನೇ ಅಂತಾ ಮೇಲ್ ಕಳಿಸುತ್ತಾನೆ, ಲಷ್ಕರ್ ಉಗ್ರ ಹೇಳಿ,ಹೇಳಿ ಬಾಂಬ್ ಇಡುತ್ತಾನೆ….ನಾವು ಚೂಪಗೆ ನೋಡುತ್ತಲೇ ಇರುತ್ತೇವೆ!
Like this:
Like ಲೋಡ್ ಆಗುತ್ತಿದೆ...
Related
Posted in ಅವಿಭಾಗೀಕೃತ | Tagged Add new tag | 3 ಟಿಪ್ಪಣಿಗಳು
ಆಹಾ ಚೆನ್ನಾಗಿದೆ ಲೇಖನ !
ವಾಸ್ತವಕ್ಕೆ ಹಿಡಿದ ಕನ್ನಡಿ ನಿಮ್ಮ ಲೇಖನ.
ಅಲ್ವೋ, ಇಡೀ ಆರ್ಟಿಕಲ್ಲಿಗೆ ಯಕೆ ಲಿಂಕ್ ಕೊಟ್ಟಿದೀಯ!?