ಗಣೇಶ ಮುಖದಲ್ಲಿ ಮೊದಲಿನ ತೇಜಸ್ಸಿಲ್ಲ!
ಸೆಪ್ಟೆಂಬರ್ 10, 2008 aksharavihaara ಮೂಲಕ
ಅದ್ಯಾಕೋ ಗೊತ್ತಿಲ್ಲ ಇತ್ತೀಚೆಗಂತೂ ಹಬ್ಬಕ್ಕೆ ಅಂತಾ ಊರಿಗೆ ಹೋದರೂ, ನಮ್ಮೂರು ಬಿಕೋ ಅನ್ನಿಸುತ್ತದೆ. ಊರು ಬಿಟ್ಟು ತುಂಬಾ ವರ್ಷವಾಯಿತು, ಅದಕ್ಕೆ ಹಾಗನ್ನಿಸುತ್ತೇನೋ ಅಂದುಕೊಂಡಿದ್ದೆ. ಆದ್ರೆ ಮೊನ್ನೆ ಮಾತಿಗೆ ಸಿಕ್ಕ ಗೋಪಿ ಮಾವ ಹೇಳುತ್ತಿದ್ದರು “ಹಿಂಗೆ ಊರು ಮನೆ ಮಕ್ಕಳೆಲ್ಲಾ ಬೆಂಗಳೂರು ಸೇರಿದರೆ, ಊರಲ್ಲಿ ಕುಳಿತು ವೃದ್ಧಾಶ್ರಮ ನಡೆಸುವ ಬ್ಯೂಸಿನೆಸ್ ಶುರುಮಾಡಬಹುದು’ ಅಂತಾ! ನಮ್ಮೂರಲ್ಲಿ ಅಬ್ಬಬ್ಬಾ ಅಂದ್ರೆ ೩೫-೪೦ ಮನೆಗಳಿರಬಹುದು. ಅಷ್ಟೂ ಮನೆಯಲ್ಲಿ ಯುವಕರು ಅಂತಾ ಇಲ್ಲವೇ ಇಲ್ಲ! ಎಲ್ಲಾ ಮನೆಯ ವಯಸ್ಸಿಗೆ ಬಂದ ಯುವಕರು ಬೆಂಗಳೂರು ಸೇರಿಕೊಂಡು ಕೂತಿದ್ದಾರೆ. ಊರಲ್ಲಿ ವಾಸಿಸುತ್ತಿರುವರೆಲ್ಲಾ ೫೦ ರ ಪ್ರಾಯ ದಾಟಿದವರು! ಇನ್ನೂ ಸರಿಯಾಗಿ ಹೇಳುವುದಾದರೆ ನಿವೃತ್ತರು! ನಮ್ಮೂರಂತೂ ಅಪ್ಪಟ ನಿವೃತ್ತರ ಕೇರಿಯಾಗಿದೆ!
ಅಪ್ಪಾ ಮೊನ್ನೆ ಹೇಳುತ್ತಿದ್ದರು-ಒಂದು ಕಾಲದಲ್ಲಿ ಚೌತಿ ಹಬ್ಬ ಅಂದ್ರೆ ಸಾಗರ ಸೀಮೆಯವರೆಲ್ಲಾ ನಮ್ಮೂರಿನ ಕಡೆ ತಿರುಗಿ ನೋಡುತ್ತಿದ್ದರಂತೆ. ಕಾಡಪ್ಪನವರ ಮನೆ, ಗಣಪಯ್ಯನವರ ಹಬ್ಬದ ಹೊಡೆತ ಅಂದ್ರೆ… ಅಷ್ಟು ಸಂಭ್ರಮ, ಅಷ್ಟು ಸಡಗರವಾಗಿರುತ್ತಿತಂತೆ ಹಬ್ಬಗಳು.
ತೀರಾ ಹಿಂದೇನಲ್ಲಾ, ನಾವು ಶಾಲೆಗೆ ಹೋಗುತ್ತಿದ್ದಾಗಲೂ ನಮ್ಮೂರಲ್ಲಿ ಚೌತಿ ಜೋರಾಗಿಯೇ ನಡೆಯುತ್ತಿತ್ತು. ತಿಪ್ಪನ ಮನೆ ಹುಡ್ಗ ಬಾಳೆ ಕಂಬ ಕಡಿದು, ತೋರಣ ಕಟ್ಟಿದ ಅಂದ್ರೆ ನೋಡುವ ಹಾಗೇ ಇರುತ್ತಿತ್ತು. ಮಣ್ಣಿನ ಗಣಪತಿ ಮೂರ್ತಿ ಹಬ್ಬದ ಬೆಳಿಗ್ಗೆ ಸಾಗರದಿಂದ ರಿಕ್ಷಾದಲ್ಲಿ ಬರುತ್ತಿತ್ತು. ಸಾಗರ ನಮ್ಮೂರಿಂದ ಸುಮಾರು ೭-೮ ಕಿಲೋಮೀಟರ್ ದೂರವಿದೆ. ನಾವು ಹುಟ್ಟುವ ಮೊದಲು ಅಲ್ಲಿಂದ ಗಣಪತಿಯನ್ನು ತಲೆ ಮೇಲೆ ಹೊತ್ತುಕೊಂಡು ಬರುತ್ತಿದ್ದರಂತೆ!
ಇನ್ನೂ ಪಟಾಕಿಯನ್ನು ಕಾಂಪಿಟೇಷನ್ ಮೇಲೆ ಸುಡಲಾಗುತ್ತಿತ್ತು. ನಾವು ಚಿಕ್ಕವರಿದ್ದಾಗ ಶಿವಕಾಶಿ ಕಂಪನಿ ಪಟಾಕಿ ಬಾಕ್ಸ್ ಬಹಳ ಫೇಮಸ್ಸು!
ಅಚಿಗೆ ಕಿರಣನ ಮನೇಲಿ ಪಟಾಕಿ ಬಾಕ್ಸ್ ತಗಂಡು ಬೈಂದ, ಇಚಿಗೆ ಮಂಜು ಮನೇಲೂ…
ಅಂತಾ ಹಠ ಹಿಡಿದು ಅಪ್ಪನ ಹತ್ತಿರ ಪಟಾಕಿ ಬಾಕ್ಸ್ ತರಿಸಿಕೊಳ್ಳುವುದು.
ಮಾಣಿ ಈ ವರ್ಷ ಅಡಿಕೆಗೆ ರೇಟಿಲ್ಲೆ. ಮತ್ತೆ ದೀಪಾವಳಿಗೆ ಪಟಾಕಿ ತಪ್ಪಲೆ ಸಾಧ್ಯವಿಲ್ಲೆ. ಈ ಬಾಕ್ಸ್ಲ್ಲೆ ದೀಪಾವಳಿಗೂ ಉಳಿಸಿಕೋ…
ಅಂತಾ ಅಪ್ಪಾ ಕೂಗುತ್ತಿದ್ದರು. ಅಪ್ಪನ ಲೆಕ್ಕಾಚಾರದಲ್ಲೇ ಹೋದರೆ ಪ್ರತಿ ವರ್ಷವೂ ಅಡಿಕೆಗೆ ರೇಟಿಲ್ಲ! ಹಾಗಂತ ಒಂದು ವರ್ಷವೂ ದೀಪಾವಳಿಗೆ ಇನ್ನೊಂದು ಬಾಕ್ಸ್ ಪಟಾಕಿ ತರೋದು ತಪ್ಪಲಿಲ್ಲ! ವರ್ಷ ವರ್ಷ ಅಪ್ಪ ಹಳೆ ಡೈಲಾಗನ್ನು ನೆನಪು ಮಾಡಿಕೊಳ್ಳಲು ಮರೆಯುತ್ತಿರಲಿಲ್ಲ!
ನಾವು ಹುಟ್ಟುವ ಮೊದಲು ನಮ್ಮ ಮನೇಲಿ, ನಾಲ್ಕು ದಿನ ಗಣಪತಿ ಇಡುತ್ತಿದ್ದರಂತೆ. ನನಗೆ ತಿಳುವಳಿಕೆ ಬಂದ ಕಾಲಕ್ಕೆ ಅದು ಎರಡು ದಿನಕ್ಕೆ ಇಳಿದಿತ್ತು. ಈಗ ಒಂದೇ ದಿನ! ನಿಜ ಹೇಳಬೇಕು ಅಂದ್ರೆ ಚೌತಿ ಹಬ್ಬಕ್ಕಿಂತ ಚೌತಿ ಮಾರನೇ ದಿನ ಆಚರಿಸುವ ಪಂಚಮಿ ಹಬ್ಬ ನಮಗೆಲ್ಲಾ ಜೋರು. ಪಂಚಮಿಗೆ ಎಲ್ಲಾ ಅತ್ತೆಯರೂ(ಅಪ್ಪನ ಅಕ್ಕ-ತಂಗಿಯರು) ಬರುತ್ತಿದ್ದರು. ಹಬ್ಬಕ್ಕೆ ಮುಂಚೆ ಅತ್ತೆ ಮನೆಗೆ ಹೋಗಿ ಹಬ್ಬಕ್ಕೆ ಬನ್ನಿ ಕರೆದು ಬರಲಾಗುತ್ತಿತ್ತು. ಪಂಚಮಿ ಹಬ್ಬ ಅಂದ್ರೆ ನಮ್ಮ ಫ್ಯಾಮಿಲಿಯೆಲ್ಲಾ ಒಟ್ಟಿಗೆ ಕೂತು ನಗುತ್ತಾ,ಹರಟುತ್ತಾ ಊಟ ಮಾಡುವ ಹಬ್ಬ.
ಒಟ್ಟಲ್ಲಿ ಚೌತಿಗೆ ಊರು ತುಂಬಾ ಜನವೇ ಜನ. ಪಟಾಕಿಯ ಸದ್ದು, ನಮ್ಮಂಥ ಕಿಡಿಗೇಡಿ ಹುಡುಗರ ಕಿತಾಪತಿ…ಅಬ್ಬಬ್ಬಾ ಈವಾಗ ನೆನಸಿಕೊಂಡರೆ…ಅವರಿವರು ಉಡುಗೊರೆ ಕೊಟ್ಟ ಬಟ್ಟೆಯಲ್ಲೇ ಅರ್ಧ ಆಯುಷ್ಯ ಕಳೆದ ನನಗೆ ಅಪ್ಪಾ ಹಬ್ಬಕ್ಕೆ ಹೊಸ ಬಟ್ಟೆ ತರುತ್ತಾರೆ ಅಂದ್ರೆ ಅದೆಂತದೋ ಒಂತರಹ ಸಂಭ್ರಮ. ಚಪ್ಪಲ್ಲಿ ಇಲ್ಲದೇ, ಬಟ್ಟೆ ಇಲ್ಲದೇ ಬದುಕುವ, ಬಡತನದ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿರುವ ಅಪ್ಪನ ಮೇಲೆ ಆವತಂತು ಒಂಚೂರು ಕನಿಕರವಿರಲಿಲ್ಲ. ಅಪ್ಪಾ ಹಬ್ಬಕ್ಕೆ ಹೊಸ ಬಟ್ಟೆ ತರಲಿಲ್ಲ ಎಂಬುದೊಂದೇ ಸಿಟ್ಟು!
ಅಂತಹದ್ದೊಂದು ಸಡಗರವನ್ನು ಊರಿನ ಯಾವ ಮನೆಯಲ್ಲೂ ಕಾಣದೇ ಸುಮಾರು ೧೫ ವರ್ಷದ ಮೇಲಾಯಿತು. ಊರಿನ ಯಾವ ಮನೆಯಲ್ಲೂ ಇವತ್ತು ಚೌತಿ ಮರುದಿನದ ಪಂಚಮಿ ಹಬ್ಬವಿಲ್ಲ. ಹಬ್ಬವಿದ್ದರೂ ಸಡಗರ, ಫ್ಯಾಮಿಲಿಯೆಲ್ಲಾ ಒಟ್ಟಾಗಿ ಸೇರುವ ಸಂಪ್ರದಾಯವಿಲ್ಲ. ಬೇರೆಯವರ ಕಥೆ ಹಾಳಾಗಲಿ ನನ್ನ ಅತ್ತೆಯಂದಿರನ್ನು ನೋಡದೇ ಸುಮಾರು ಏಳು ವರ್ಷವಾಯಿತು.
ಅದನ್ನೆಲ್ಲಾ ನೆನಸಿಕೊಂಡ್ರೆ, ಬೆಂಗಳೂರಿನ ಗಲ್ಲಿ, ಗಲ್ಲಿಗಳಲ್ಲಿ ಹಬ್ಬ ಕಳೆದು ಹತ್ತು ದಿನವಾದರೂ ನೇತಾಡುವ ಗಣಪನನ್ನು ಕಂಡರೆ ಯಾಕೋ ಬೇಜಾರಾಗತ್ತೆ. ಊರಿನ ಹಬ್ಬ ನೆನಪಾಗತ್ತೆ. ಅಮ್ಮ ಹಠ ಮಾಡದೆ ಹೋದರೇ ಒಂದು ದಿನವೂ ಹಬ್ಬಕ್ಕೆ ಹೋಗಲಾಗದ ನಮ್ಮ ಪರಿಸ್ಥಿತಿ ನೆನಸಿಕೊಂಡರೆ ಮರುಕವೇ ಮರುಕ! ಇತ್ತೀಚೆಗೆ ಬರುತ್ತಿರುವ ಗಣೇಶನ ಮುಖದಲ್ಲೂ ಹಬ್ಬದ ಗೆಲುವಿಲ್ಲ ಬಿಡಿ!
Like this:
Like ಲೋಡ್ ಆಗುತ್ತಿದೆ...
Related
Posted in ಚಿಂತನ ಚಾವಡಿ | 6 ಟಿಪ್ಪಣಿಗಳು
ವಿನಾಯಕರೆ,
ಹಬ್ಬದ ಸಂಭ್ರಮ ಹೋಗಲಿ, ಹಬ್ಬದಲ್ಲಿ ಸಿಹಿ ಕೂಡಾ ಮಾಡ್ತಾ ಇಲ್ಲ ಈಗ! ಪೇಟೆಯಿಂದ ೧೦೦ಗ್ರಾಮ್ಸ್ ಸ್ವೀಟ್ ಯಾವುದೋ ಒಂದು ತಂದರಾಯ್ತು. ಯಾಕೆಂದರೆ ಈಗ ಬಹಳಷ್ಟು ಜನರಿಗೆ ಡಾಯಬಿಟಿಸ್ ಇರತ್ತಲ್ಲ!
ಹಿಂದಿನದನ್ನ, ನಮ್ಮೂರನ್ನ ಮೆಲುಕುಹಾಕುತ್ತಾ ಕೊರಗೋದು ಬಿಟ್ಟು ಬೇರೆ ಏನೂ ಮಾಡಕ್ಕಾಗ್ತಿಲ್ವಲ್ಲಾ ನಮ್ ಕೈಲಿ ಅನ್ನೋದೇ ಮತ್ತೊಂದು ಕೊರಗಾಗಿ ಹೋಗಿದೆ ನನಗೆ 😦
ನಮ್ಮೂರಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಈ ಸಲದ ಹಬ್ಬಕ್ಕೆ ನಾನೇ ಹೋಗಿಲ್ಲ. ಮನೆಗೆ ಫೋನ್ ಮಾಡಿದಾಗ “ಹಬ್ಬ ಜೋರಾ?” ಅಂತ ಕೇಳಿದರೆ ಅಮ್ಮ “ಹುಡ್ರು-ಮಕ್ಳು ಮನೇಲಿಲ್ದೇ ಮುದುಕ್ರು ತದುಕ್ರು ಎಂಥಾ ಹಬ್ಬ ಮಾಡದಾ ಅಪ್ಪೀ..?” ಎನ್ನುತ್ತಾಳೆ..
ಹಳ್ಳಿಗರ ಪೇಟೆ ವಲಸೆ ಬಗ್ಗೆ ಮಾತಾಡಲಿಕ್ಕೆ ನಂಗೆ ಹಕ್ಕೇ ಇಲ್ವೇನೋ ಅನ್ನಿಸೊತ್ತೆ..
ಹಬ್ಬಗಳ ಆಚರಣೆಯ ಉದ್ಧೇಶವೇ ಮನೆಮಂದಿಯೆಲ್ಲಾ ಕಾಲಕಾಲಕ್ಕೆ ಒಟ್ಟಾಗಿ ಖುಷಿಯಿಂದ ಕಳೆಯುತ್ತಾ
ಸಂಬಂಧಗಳ ಕೊಂಡಿ ಕಳಚದಂತೆ ಬೆಸುಗೆ ಹಾಕಲ್ಲಿ ಅನ್ನೋದು…
ಆದ್ರೆ ಈಗೀಗ ಕೆಲಸ ಹುಡುಕಿ ಎಲ್ಲಾ ಚೆಲ್ಲಾಪಿಲ್ಲಿಯಾಗಿರೋವಾಗ ಹಬ್ಬಗಳು ಅರ್ಥ ಕಳೆದುಕೊಳ್ಲುತ್ತಿವೆ. ಸುಶ್ರುತ ಹೇಳಿದ ಹಾಗೆ ಗೂಡು ಬಿಟ್ಟ ಹಕ್ಕಿಗಳಾದ ನಮಗೆ ಈ ಹಳ್ಳಿ-ಸಿಟಿ ವಲಸೆ ಬಗ್ಗೆ ಮಾತಾಡೋಕೆ ಹಕ್ಕಿಲ್ಲವೇನೋ
hmm… nijavaada maathu… sadyakke chennai alli iro naanu ganeshana habbada dina manena,habbana thumba miss maadkonde… 😦
ಈಗೀಗ ಬರೀ ಹಬ್ಬಕ್ಕಷ್ಟೇ ಮನೆಗೆ ಹೋಗದು.. 😦
ಆದ್ರೆ ಚೌತಿ ಟೈಮಲ್ಲಿ ಒಂದು ವಾರ ಊರಲ್ಲಿದ್ದು ಮಜಾ ಬಂತು.. ಆದ್ರೆ ಹಬ್ಬಕ್ಕೆ ಮಾತ್ರ ಮೊದ್ಲಿನ ಕಳೆ ಇಲ್ಲೆ..