ಪರೋಹಿತ ಪುಡಾರಿಗಳು ಮತ್ತು ದೇವರು-೨
ಏಪ್ರಿಲ್ 8, 2008 aksharavihaara ಮೂಲಕ
ಗೆಳೆಯ ಶ್ರೀಕಾಂತ್ ಮೊನ್ನೆ ಸಿಕ್ಕಿದ್ದ. ಅವ ಇಲ್ಲೆ ಬೆಂಗಳೂರಿನಲ್ಲಿ ಪುರೋಹಿತನಂತೆ. ಇವತ್ತು ಅಪ್ಪಾ ಅಮ್ಮನಿಗೆ ಮೂರು ಹೊತ್ತು ಊಟ ಹಾಕ್ತಾ ಇದೀನಿ ಅನ್ನೋದೆ ನನ್ನ ಸಂತೋಷ ಮಾರಾಯ ಅಂತಿದ್ದ. ನಾನು ಹೈಸ್ಕೂಲ್ ಓದ್ತಾ ಇರೋವಾಗ ಇಕ್ಕೇರಿ ಪ್ರೌಡಶಾಲೆಯಲ್ಲಿ ನನ್ನ ಜೊತೆ ಓದಿದವನು ಆತ. ಅವನ ಕಷ್ಟ ನನಗೆ ಚೆನ್ನಾಗಿ ಗೊತ್ತು. ಅವ ಜಾತಿಯಿಂದ ಹವ್ಯಕ. ಅವನ ಅಪ್ಪಾ ಮೇಸ್ತ್ರಿ(ಗಾರೆ) ಕೆಲಸ ಮಾಡುತ್ತಿದ್ದರು. ಆವತ್ತು ಮಲೆನಾಡಿನಲ್ಲಿ ಹಳ್ಳಿಗಳಲ್ಲಿ ಗಾರೆ ಕೆಲಸ ಸಿಗುತ್ತಿದ್ದದ್ದು ಅಷ್ಟರಲ್ಲೇ ಇತ್ತು. ಸಿಕ್ಕರೂ ಕೈಗೆ ಬರುತ್ತಿದ್ದ ಸಂಬಳವೂ ಹಾಗೇ ಇತ್ತು. ಹಾಗಾಗಿ ಒಂದು ಹೊತ್ತು ಊಟಕ್ಕಿದ್ದರೆ ಮೂರು ಹೊತ್ತು ಊಟಕ್ಕಿಲ್ಲದ ಮನೆ ಗೆಳೆಯ ಶ್ರೀಕಾಂತ್ನದ್ದು. ಅದೂ ಅಲ್ಲದೇ ಅವರಪ್ಪನಿಗೆ ದುಡಿಯಲು ಆಗುತ್ತಿರಲಿಲ್ಲ. ಆದ್ರೂ ಹೊಟ್ಟೆಪಾಡಿಗಾಗಿ ದುಡಿಮೆ ಅನ್ನೋದು ಅವರಿಗೆ ಅನಿವಾರ್ಯವಾಗಿತ್ತು. ಅವನ್ನ ಕಂಡಗಲೆಲ್ಲಾ ನಂಗೆ ನೋವಾಗುತ್ತಿತ್ತು. ಅವನಿಗೆ ಸಹಾಯ ಮಾಡೋಣ ಅಂದ್ರೆ ನನ್ನಲ್ಲಿನ ಶ್ರ್ಈಮಂತಿಕೆಯೂ ಅಷ್ಟರಲ್ಲೇ ಇತ್ತು. ಅವ ಎಸ್ಸೆಸ್ಸೆಲ್ಸಿ ಮುಗಿಸಿ ಮನೆ ಬಿಟ್ಟ ಅದೇಗೋ ಮಂತ್ರ ಕಲಿತ ಬೆಂಗಳೂರಿಗೆ ಬಂದು ಪುರೋಹಿತ್ಯ ಆರಂಭಿಸಿದ. ಅಂತಹ ಗೆಳೆಯ ಅಪ್ಪಾ ಅಮ್ಮನಿಗೆ ಮೂರುಹೊತ್ತಿನ ಊಟ ಹಾಕುವಷ್ಟು ಶ್ರ್ಈಮಂತನಾಗಿದ್ದೇನೆ ಅಂದಾಗ ನನಗೆ ನಿಜಕ್ಕೂ ಸಂತಸವಾಯಿತು. ಹೌದು ಬೆಂಗಳೂರಿನ ಪುರೋಹಿತರನ್ನು ಕಂಡಾಗ ಮೈ ಉರಿಯತ್ತೆ ಆದ್ರೆ ಶ್ರೀಕಾಂತ್ನಂತಹ ಗೆಳೆಯರನ್ನು ಕಂಡಾಗ ಮಲೆನಾಡಿನ ಎಷ್ಟೋ ಜನರಿಗೆ ಅನ್ನಕೊಟ್ಟ ವೃತ್ತಿ ಅದು ಅಂತಾ ಸಂತಸವಾಗತ್ತೆ.
ಯಲ್ಲಾಪುರ, ಉತ್ತರಕನ್ನಡದ ಬಡತನ ನೋಡಿದರೆ ಸಾಗರದ ನಾವು ಎಷ್ಟೋ ವಾಸಿ ಅನ್ನಿಸತ್ತೆ. ಇವತ್ತಿಗೂ ತುತ್ತು ಕೂಳಿಗೆ ಗತಿಯಿಲ್ಲದ ಮಂದಿ ಆ ಭಾಗದಲ್ಲಿದ್ದಾರ್ಎ. ಜಾತಿಯಲ್ಲಿ ಬ್ರಾಹ್ಮಣ ಅನ್ನಿಸಿಕೊಂಡರೆ ಮುಗಿತು. ಅವ ಸಮಾಜದ ಲೆಕ್ಕದಲ್ಲಿ ಶ್ರೀಮಂತನೆ! ಒಂದು ಕಾಲದಲ್ಲಿ ಇತರೆ ವರ್ಗದವರ ಪಾಡು ಹೇಗಾಗಿತ್ತೋ ಅದೇ ಪಾಡು ಇವತ್ತು ಬ್ರಾಹ್ಮಣರದ್ದಾಗಿದೆ. ಬ್ರಾಹ್ಮಣರು ಅಂದ್ರೆ ಅದೆಂತದೋ ಮೂದಲಿಕೆ. ಶತಶತಮಾನಗಳ ಕಾಲ ಬ್ರಾಹ್ಮಣರು ಇತರೆ ಜನಾಂಗವನ್ನೂ ತುಳಿದರೂ ಅದಕ್ಕೆ ಪ್ರತಿಫಲ ಇವತ್ತು ಅನುಭವಿಸುತ್ತಿದ್ದಾರೆ ಅಂತಾ ಹೇಳೋದು ತುಂಬಾ ಸುಲಭ. ಯಾಕಂದರೆ ಹಾಗೇ ಹೇಳುವವರು ದಲಿತರ ನೋವನ್ನು ಕಂಡಿರುವುದಿಲ್ಲ. ಬಡ ಬ್ರಾಹ್ಮಣರ ನೋವನ್ನು ಕಂಡಿರುವುದಿಲ್ಲ! ಆ ಬಡತನದ ನೋವನ್ನು ತೀರಿಸಿಕೊಳ್ಳಲೆಂದೇ ಬ್ರಾಹ್ಮಣರು ತಮ್ಮ ಮೂಲ ಕಸುಬಾದ ಪುರೋಹಿತ್ಯವನ್ನು ಅರೆಸಿಕೊಂಡು ಬೆಂಗಳೂರಿಗೆ ಬರುತ್ತಿರುವುದು. ಹಳ್ಳಿಗಳ್ಳಲ್ಲಿ ಪುರೋಹಿತರಿಗೆ ಬೆಲೆಯಿಲ್ಲ. ಬೆಲೆಯಿದ್ದರೂ ಸಂಪಾದನೆ ತೀರಾ ಕಡಿಮೆ. ಓದಿ ದಡ ಸೇರಲು ಓದಬೇಕಾದ ಕಾಲದಲ್ಲಿ ಹಣವಿಲ್ಲ. ಪುಕ್ಕಟ್ಟೆ ಊಟ ಮಾಡಿಕೊಂಡು ಮಠದಗಳಲ್ಲಿ ಇದ್ದುಕೊಂಡು ಕಲಿಯಬಹುದಾದ ವಿದ್ಯೆಯೆಂದರೆ ಬ್ರಾಹ್ಮಣರ ಪಾಲಿಗೆ ಪೌರೋಹಿತ್ಯ ಹಾಗಾಗಿ ಬಡತನವಿದ್ದವರೆಲ್ಲಾ ಅದರತ್ತ ಲಗ್ಗೆ ಇಟ್ಟರು. ಒಳ್ಳೆ ಸಂಪಾದನೆ ಮಾಡಲೆಂದು ಬೆಂಗಳೂರಿಗೆ ಬಂದು ದುಡಿಮೆ ಶುರು ಹಚ್ಚಿಕೊಂಡರು ಅದರಲ್ಲಿ ತಪ್ಪೆನಿದೆ? ಪುರೋಹಿತ ದುಡ್ಡು ಮಾಡೋದು ವೇದಾಂತಿಗಳ, ಬರಗಾರರ ಕಣ್ಣು ಕುಕ್ಕಿಸತ್ತೆ. ಸಾಹಿತಿಗಳ ಬಾಯಿಗೆ ಆಹಾರವಾಗತ್ತೆ ಆದ್ರೆ ಇತರರು ಎಂತೆಂತಹದೋ ಹಾದರ ಮಾಡಿ ಹಣ ಸಂಪಾದಿಸುತ್ತಿದ್ದಾರಲ್ಲಾ? ಕೆಲ ಸಾಹಿತಿಗಳು ರಾಜಕಾರಣಿಗಳ ಸುತ್ತಾ ಸುತ್ತಾಡುತ್ತಿದ್ದಾರಲ್ಲಾ ಅವೆಲ್ಲಾ ತಪ್ಪಲ್ವಾ ಅಂದರೆ ನಮ್ಮಲ್ಲಿ ಉತ್ತರವಿಲ್ಲ.
ಹೌದು ಮಲೆನಾಡಿನಲ್ಲಿ ದಲಿತರ ಉದ್ದಾರ ಮಾಡಲೆಂದೇ ನಕ್ಸಲಿಸಂ ಹುಟ್ಟಿಕೊಂಡಿದೆ! ಇವತ್ತು ಶೃಂಗೇರಿ ಸುತ್ತಾ ಮುತ್ತಲಿನ ದಲಿತರೆಲ್ಲಾ ಮೂರು ಹೊತ್ತು ನೆಮ್ಮದಿಯ ಊಟ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನಕ್ಸಲೀಯರೇ ಕಾರಣ(ಊಟ ಮಾಡುತ್ತಿದ್ದರೆ ಮಾತ್ರ!)ಊರಿಗೊಂದು ಬಾವಿಯಾಗಿದೆ, ರಸ್ತೆಯಾಗಿದೆ, ಶಾಲೆಯಾಗಿದೆ ಅಂದರೆ ಅದೆಲ್ಲಾ ನಕ್ಸಲೀಯರ ಶ್ರಮದ ಫಲ! ಇನ್ನೂ ದಲಿತ ಸಂಘರ್ಷ ಸಮಿತಿ, ದಲಿತ್ತೋದ್ದಾರಕ ಸಮಿತಿ…..ಹೀಗೆ ಹತ್ತಾರು ಸಂಸ್ಥೆಗಳು ದಲಿತರ ಒಳಿತಿಗಾಗಿ ದನಿ ಎತ್ತುತ್ತಿವೆ. ಅದೆಲ್ಲಕ್ಕಿಂತಾ ಮುಖ್ಯವಾಗಿ ಅನೇಕ ಸಾಹಿತಿಗಳು ದಲಿತರ ಪರ ಅನುಕಂಪದ ಮಾತಾಡುತ್ತಾ, ಕೃತಿ ರಚಿಸುತ್ತಾ ತಾವು ಗಳಿಸಿದ ಹಣದಲ್ಲಿ ಅವರಿಗೆ ಅರ್ಧ ನೀಡುತ್ತಾ ಇದ್ದಾರೆ! ಆದರೆ ಮಲೆನಾಡಿನ ಬಡ ಬ್ರಾಹ್ಮಣರ ಪರವಾಗಿ ಯಾರಿದ್ದಾರೆ. ದಲಿತರು ಬ್ರಾಹ್ಮಣರನ್ನು ನಿಂದಿಸುವುದಕ್ಕಿಂತಲೂ ಮಿಗಿಲಾಗಿ ಬ್ರಾಹ್ಮಣರೇ ಬ್ರಾಹ್ಮಣರನ್ನು ನಿಂದಿಸುತ್ತಾರೆ ಅದೆಂತದೋ ಒಂತರಹ ಜ್ಞಾನೋದಯವಾಗಿ!(ಬ್ರಾಹ್ಮಣರ ವಿರೋದಿ ಅಲೆ ತಪ್ಪು ಅಂತಾ ನಾನು ಇಲ್ಲಿ ಹೇಳುತ್ತಿಲ್ಲ. ದಲಿತ ಉದ್ದಾರ ಅನ್ನೋದು ಭಾಷಣಕ್ಕೆ ಮಾತ್ರ ಸೀಮಿತ. ಇವತ್ತಿಗೂ ಮಲೆನಾಡು ಭಾಗದಲ್ಲಿ ದಲಿತರು ಕಷ್ಟದ ಜೀವನ ನಡೆಸುತ್ತಿದ್ದಾರೆ. ದಲಿತರ ಹೆಸರು ಹೇಳಿಕೊಂಡು ಅವರ ಮೇಲೆ ಅನುಕಂಪ ತೋರುವ ನಾಟಕ ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುವವರು ಗಿಟ್ಟಿಸಿಕೊಳ್ಳುತ್ತಲೇ ಇದ್ದಾರೆ. ಆ ಬೇಸರದ ನುಡಿಗಳು ಮೇಲಿನವು. ಬಡವನಾದವ ಬ್ರಾಹ್ಮಣನಾದರೂ ಅಷ್ಟೇ, ದಲಿತನಾದರೂ ಅಷ್ಟೇ ಅವನ ಪಾಲಿಗೆ ಬೆನ್ನೆಲ್ಲಾ ಹೊಟ್ಟೆಯೇ!)
ಹೀಗೆಲ್ಲಾ ಅವಲೋಕಿಸಿದ ಪುರೋಹಿತರು ಮಾಡುತ್ತಿರುವುದು ಸರಿ ಅನ್ನಿಸತ್ತಾದರೂ ಯಾರ್ಯಾರೋ ಎಂತೆಹದ್ದೋ ಹಾದರ ಮಾಡುತ್ತಾರೆ ಅಂತಾ ದೇವರ ಹೆಸರಿನಲ್ಲು ಹಣಸುಲಿಗೆ ಮಾಡುವುದು ಸರಿಯಲ್ಲ. ದೇವರು ಭಾವದ ಒಂದು ಪ್ರತೀಕ ಹೊರತು ಮಾರಾಟದ ಸರಕಲ್ಲ. ಆದರೆ ಹೊಟ್ಟೆಗೆ ಹಿಟ್ಟಿಲ್ಲದ ಮೇಲೆ ಇನ್ನೆನೂ ಮಾಡೋದು ಅದು ಬ್ರಾಹ್ಮಣನಾಗಿ ಅಂದರೆ ನನ್ನ ಮಟ್ಟಿಗಂತೂ ಉತ್ತರವಿಲ್ಲ. ವೈಚಾರಿಕವಾಗಿ ದೇವರನ್ನು ಮಾರಾಟದ ಸರಕನ್ನಾಗಿಸೋದು ತಪ್ಪು. ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ ಹೊರತು ಶಂಕರ ಭವತಿ ಶಿಲಾ ಆಗಬಾರದು ಅಲ್ವಾ? ಆದ್ರೆ ದೇವರು ಎಂಬುದು ಹಣ ಮಾಡೋ ಸರಕಾದರೆ ಶಂಕರನೂ ಶಿಲೆ ಅನ್ನಿಸಿಬಿಡುತ್ತಾನೆ ಅನ್ನೋದು ನನ್ನ ಅಭಿಪ್ರಾಯ. ಇಂತಹದೊಂದು ಸಮಸ್ಯೆ ತಪ್ಪಿಸಲು ಏನು ಮಾಡಬಹುದು ಅನ್ನೋದನ್ನಾ ನೀವೆ ತಿಳಿಸಿ.
Like this:
Like ಲೋಡ್ ಆಗುತ್ತಿದೆ...
Related
Posted in ಚಿಂತನ ಚಾವಡಿ | 1 ಟಿಪ್ಪಣಿ
ನೋಡ್ರೀ….. ಈವತ್ತು ಮಂತ್ರ ಕಲಿತವರಿಗೂ ಮತ್ತು ಪೂಜೆ ಮಾಡಿಸುವವರಿಗೂ ಮೂಲದ ಅರಿವು ಇಲ್ಲ. ಎಲ್ಲವೂ ಯಾಂತ್ರಿಕ ಆಗಿದೆ. ಯಾರಿಗೂ ಅದನ್ನು ಕೈ ಬಿಟ್ಟು risk ತೊಗಳಕ್ಕೆ ಇಷ್ಟ ಇಲ್ಲ.
ದೇವರಿಗೆ ಕೈ ಮುಗಿಯುವವನಿಗೆ ದೇವರ ಮೇಲೆ ನಂಬಿಕೆ ಇಲ್ಲ. ಆದರೂ ಬಿಡೋ ಧೈರ್ಯ ಇಲ್ಲ. ಜೋಯಿಸರಿಗೆ ಅದು ಹೇಗೂ ವ್ಯಾಪಾರ. ನಿಮ್ ಮೊದಲಿನ ಲೇಖನ ಅದನ್ನ ಸ್ಪಷ್ಟಪಡಿಸುತ್ತೆ. ನೀವು ತುಂಬಾ ದ್ವಂದ್ವದಲ್ಲಿ ಸಿಲುಕಿಕೊಂಡು ಮಾತಾಡ್ತಾ ಇದ್ದೀರ.
ಪರಿಹಾರ ಏನಪ್ಪಾಅಂದ್ರೆ ವಿವೇಚನೆಯ ಅರಿವು ಮೂಡಿಸೋದು. ಯಾವುದೋ ಹಳಸಿದ ಡೈಲಾಗ್ ಅಂದ್ಕೋಬೇಡಿ. ಜ್ಯೋತಿಷ್ಯ ಮತ್ತು ಪೌರೋಹಿತ್ಯ ಕಲಸು ಮೇಲೋಗರ ಆಗಿದೆ. ಅದನ್ನ ಬೇರೆ ಮಾಡಬೇಕು. ಆದಷ್ಟು ಜ್ಯೋತಿಷ್ಯದಲ್ಲಿ ನಮ್ಮ ಭವಿಷ್ಯ ಕಂಡುಕೊಳ್ಳೋದನ್ನ ಕಡಿಮೆ ಮಾಡಬೇಕು. ದುಡ್ಡಿದ್ದವರು ದೌಲತ್ತಿನಲ್ಲಿ ದಿನಕ್ಕೊಂದು ಹೋಮ ಮಾಡಿಸ್ತಾರೆ. ಇದಕ್ಕೆ ಏನೂ ಮಾಡೋಕಾಗಲ್ಲ. ಅದು ಅವನ ಕರ್ಮ. ನಾನು ಈ ವಿಷಯವನ್ನ ತುಂಬ ಚಿಂತಿಸಿದ್ದೇನೆ. ಗುಡಿಗೆ ಹೋಗೋದನ್ನ ಹೆಚ್ಚು ಕಡಮೆ ಬಿಟ್ಟೇ ಬಿಟ್ಟಿದ್ದೇನೆ. ಎಲ್ಲಿ ನೋಡಿದರೂ ನಾಟಕೀಯತೆ ರಾಚುತ್ತೆ. ಎಲ್ಲರಿಗೂ ಆತಂಕ ಆಗಿಬಿಟ್ಟಿದೆ. ಏನು ಮಾಡೋದು ತೋಚದೆ ಸಿಕ್ಕಿದಲ್ಲೆಲ್ಲ ಹೋಮ, ಶಾಂತಿ ಶುರು ಹಚ್ಚಿದ್ದಾರೆ. 101 ರೂ ಕೂಪನ್ ಗಳು ಈಗ ಬಹಳ ಜನಪ್ರಿಯವಾಗಿದೆ.
ಅರಿವು ಒಳಗಿಂದ ಮೂಡಬೇಕಷ್ಟೆ. ನೀವು ನಾನು ಸಾವಿರ ಹೊಡ್ಕೊಂಡ್ರೂ ಪ್ರಯೋಜನ ಇಲ್ಲ. ಪೂಜೆ ಈವತ್ತು ವ್ಯಾಪಾರ ಆಗಿದೆ. ಜನ ಅದನ್ನ encash ಮಾಡ್ಕೋತಾ ಇದ್ದಾರೆ. ಮಾಡಲಿ ಬಿಡಿ. ದಲಿತನೊಬ್ಬ ಮೀಸಲಾತಿಯಿಂದ ದೊಡ್ಡ ಕುಳ ಆದ್ರೂ ಮಕ್ಕಳಿಗೆ ಅದರ ಸೌಲಭ್ಯ ಇರೋಲ್ವೇ? ಹಾಗೆನೇ ಬ್ರಾಹ್ಮಣ ಅನ್ನೋ ಜಾತಿ ಸರ್ಟಿಫಿಕೇಟನ್ನು ಅವರೂ ಉಪಯೋಗಿಸಿಕೊಳ್ತಾ ಇದ್ದಾರೆ ಅಷ್ಟೆ. ಎಣ್ಣೆ ಬಂದಾಗ ಕಣ್ಮುಚ್ಕೋತಾರೇನ್ರೀ……. ಎಣ್ಣೆ ಸಿಕ್ಕಿದ್ದೇ ಶನಿವಾರ ಅಲ್ವಾ?
ತಪ್ಪು, ದಾರಿ ತಪ್ಪಿಸೋ ಪೂಜಾರಿಯದ್ದೆಷ್ಟಿದೆಯೋ ಅಷ್ಟೇ ಪಾಲು ಆ ದಾರಿಯಲ್ಲಿ ಕೋಲೆಬಸವನಂತೆ ನಡೆಯುವವನದ್ದೂ ಇದೆ. ಅದಕ್ಕೇ ಹೇಳಿದ್ದು ಅರಿವು ಬೇಕು ಅಂತ.