ಅಂಥ ತಂತ್ರಜ್ಞಾನದ ಲಾಭ ಯಾರಿಗೆ?

May 31, 2009 · 3 Comments

ಟಿವಿ, ಇಂಟರ್‌ನೆಟ್, ಫೋನ್, ಪತ್ರಿಕೆ, ಆಧುನಿಕ  ರಸ್ತೆ…ಇವ್ಯಾವುದರ ಪರಿವೂ ಇಲ್ಲದ  ಪ್ರಪಂಚದಲ್ಲಿ  ಬದುಕಲು ಹೊರಟ್ಟಿದ್ದೀನಿ. ಹಾಗೆ ಬದುಕಿದರೆ ಏನಾದೀತು ನೋಡಿಯೇ ಬಿಡುವ ಎಂದು…ಎದುರಿಗಿದ್ದ  ಧ್ವನಿ ಪೆಟ್ಟಿಗೆಯನ್ನು  ಎತ್ತಿ  ಪಕ್ಕಕ್ಕಿಟ್ಟರು. ಮೈಕ್ ಇಲ್ಲದೆಯೂ ಎಲ್ಲರಿಗೂ ಕೇಳುವಂತೆ ಮಾತನಾಡಬಹುದೆಂದು ಸಾಬೀತುಪಡಿಸಿಯೇ ಎದ್ದರು…ಮಾತು ಆರಂಭಿಸುವ ಮೊದಲೆ  ಅವರು ಕಾರ್ಯಕ್ರಮ, ಮಾತು, ನಗರದ  ಜಂಜಾಟಗಳಿಂದ ದೂರ ಉಳಿಯುವ ಅವರ ಇಂಗಿತವನ್ನು ಹೇಳಿಬಿಟ್ಟಿದ್ದರು. ಹಾಗಾಗಿಯೇ ಕಾರ್ಯಕ್ರಮದ ನಡು-ನಡುವಿನ ಕೆಲ ಚರ್ಚೆಯಿಂದ ಅವರೂ ಮಾಯವಾಗಿಬಿಟ್ಟಿದ್ದರು!

ನಾಗೇಶ್ ಹೆಗಡೆ,
ಪತ್ರಕೋದ್ಯಮ ಜಗತ್ತಿಗೆ, ವೈಜ್ಞಾನಿಕ ಪ್ರಪಂಚಕ್ಕೆ ಚಿರಪರಿಚಿತ ಹೆಸರು. ಪರಿಸರ ಪರ ಕಾಳಜಿಯುಳ್ಳ  ವ್ಯಕ್ತಿಗಳಲ್ಲಿ  ಮುಂಚೂಣಿಯಲ್ಲಿ  ನಿಲ್ಲುವ  ವ್ಯಕ್ತಿತ್ವ. ಅದೆಲ್ಲಕ್ಕಿಂತ ಹೆಚ್ಚಾಗಿ ಮತ್ತೊಬ್ಬನಿಗೆ ಆದರ್ಶ ಎನ್ನಿಸುವ ವ್ಯಕ್ತಿತ್ವ.  ಜಿ.ಎನ್ ಮೋಹನ್ ಹೇಳಿದಂತೆ, ನಾಗೇಶ್ ಹೆಗಡೆಗೆ  ಪರಿಚಯವೇ ಇಲ್ಲದ ಅನೇಕರು, ನಾಗೇಶ್ ಹೆಗಡೆ  ನನ್ನ  ಗುರುಗಳು ಎಂದು ಹೇಳಿಕೊಳ್ಳುವಂಥ ವ್ಯಕ್ತಿ. ಅಂತಹ ನಾಗೇಶ್ ಹೆಗಡೆ  ಶನಿವಾರ ಸಂಜೆ ಮೇಫ್ಲವರ್‌ನ  ಮೀನು ಮಾರುಕಟ್ಟೆಯಲ್ಲಿ  ಗದ್ದಲ ಮಾಡಲು ಬಂದಿದ್ದರು…ಕ್ಷಮಿಸಿ…ನಾಗೇಶ್ ಹೆಗಡೆಯನ್ನು ನೋಡಲು ಬಂದ  ಕೆಲವರು ಗದ್ದಲ  ಮಾಡಿದರು!

ಮಾತು ಆರಂಭವಾಗಿದ್ದೆ  ಕೆಂಗೇರಿ ಸಮೀಪದ ‘ಮೈತ್ರಿ ಗ್ರಾಮ’ದಿಂದ.  ‘ಆಲೆಮನೆ’ಯೊಂದನ್ನು ಬಿಟ್ಟು  ಮತ್ತೆಲ್ಲ  ಮಲೆನಾಡಿನ ಸೊಬಗು  ಹೆಗಡೆಯವರು ಈಗ ವಾಸಿಸುತ್ತಿರುವ ಆ ಗ್ರಾಮದಲ್ಲಿದೆಯಂತೆ.

ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಗಳಿಗೆ  ಮಹಾನಗರಿಯ ತ್ಯಾಜ್ಯವನ್ನು  ತಂದು ಹಾಕುತ್ತಿದ್ದಾರೆ. ಬೀದಿ  ನಾಯಿ  ಕಾಟ ಹೆಚ್ಚಾದರೆ  ಹಳ್ಳಿಗಳು ಅವಕ್ಕೆ  ಆಶ್ರಯ ತಾಣ. ಮಹಾನಗರಿಯಲ್ಲಿ  ಜಾಗ ಗಿಟ್ಟಿಸಲಾಗದ ಬಡ ವರ್ಗದ ಬಿಹಾರಿ, ಗುಜರಾತಿಗಳಿಗೂ  ಈ ಹಳ್ಳಿಗಳೇ ಗತಿ…ಇಂಥ  ವ್ಯವಸ್ಥೆಯ ತಂತ್ರಜ್ಞಾನ  ಯಾರಿಗೆ ಬೇಕಿದೆ ಎಂಬ ಪ್ರಶ್ನೆಯೊಂದಿಗೆ ಆರಂಭವಾದ ಮಾತು ೨೦-೨೫ ನಿಮಿಷಕ್ಕೆ  ಸರಿಯಾಗಿ ಮುಗಿದುಹೋಗಿತ್ತು. ಆ ಪುಟ್ಟ  ಅವಯಲ್ಲಿಯೇ  ೪೦೦ ದಶಲಕ್ಷ  ವರ್ಷಗಳ ವೈಜ್ಞಾನಿಕ ಬೆಳವಣಿಗೆ, ಮಾನವ ಜನ್ಮ  ತಳೆದ ನಂತರದ ತಲ್ಲಣಗಳ  ಕುರಿತು ಸಾಕಷ್ಟು  ಮಾಹಿತಿ ಕೇಳುಗರ ಕಿವಿಯನ್ನು  ಹೊಕ್ಕಿತ್ತು. ಅದೇ ವೇಳೆಯಲ್ಲಿ  ಆ ಮಾಹಿತಿ  ಕೆಲವರ ಕಿವಿಯಿಂದ ಹೊರಬಂದಿರಲೂಬಹುದು ಅನ್ನಿಸಿದ್ದು  ಅನಾವಶ್ಯಕ  ಚರ್ಚೆ ಆರಂಭವಾದಾಗ!
ಅಪಘಾತವಾಗತ್ತೆ  ಅಂದ ಮಾತ್ರಕ್ಕೆ  ಕಾರು ಬೇಡ  ಎನ್ನಲು  ಸಾಧ್ಯವೇ? ಟೊಮೆಟೊ  ದರ ಹೆಚ್ಚಳಕ್ಕೆ ಸಾಫ್ಟ್‌ವೇರ್ ಮಂದಿಯನ್ನು  ದೂಷಿಸುವುದು ಸರಿಯೇ? ವಿಜ್ಞಾನದ  ಪ್ರಗತಿಗೆ ದೇಶಕ್ಕೆ ಮಾರಕ ಎಂದು  ಹೇಗೆ ಹೇಳುತ್ತಿರಿ…

ಇಂಥ ಹತ್ತಾರು ಪ್ರಶ್ನೆಗಳು ಉದುರಿದ್ದು  ನಂತರ  ಶುರುವಾದ ಸಂವಾದದಲ್ಲಿ.  ನ್ಯಾನೊ ಕಾರು ಬದಲಿಗೆ  ಬಸ್ ಯಾಕೆ  ತಯಾರಾಗಲಿಲ್ಲ? ನೈಸ್ ರಸ್ತೆಯಿಂದ, ವೋಲ್ವೊ  ಬಸ್‌ನಿಂದ ಬಡವರಿಗೆ, ವೃದ್ಧರಿಗೆ, ಅಶಕ್ತರಿಗೆ ಸಹಾಯವಾಗುತ್ತಿದೆಯಾ? ತಂತ್ರಜ್ಞಾನದ ಲಾಭ ಪಡೆಯುತ್ತಿರುವವರು ಕಂಪನಿಗಳು, ವಿಮಾ ಸಂಸ್ಥೆಗಳು, ದುಡಿಯಲು ಶಕ್ತಿಯುಳ್ಳ ಯುವಕರು…ಹೆಗಡೆಯವರ  ಈ ಉತ್ತರ  ಬಹುಶಃ  ಕೆಲವರಿಗೆ  ತೃಪ್ತಿದಾಯಕ ಅನ್ನಿಸಿದಂತಿಲ್ಲ. ಹಾಗಾಗಿ ಮತ್ತೆ ಪ್ರಶ್ನೆಗಳು ಏಳುತ್ತಲೇ ಇದ್ದವು!  ಇವತ್ತು ವಿಜ್ಞಾನ ಹಣ ಗಳಿಕೆಯ ಸಾಧನವಾಗುತ್ತಿದೆ ಎಂಬ ಹೆಗಡೆಯವರ ಉತ್ತರಕ್ಕೆ, ದುಗುಡಕ್ಕೆ  ಪ್ರತಿಯಾಗಿ…ಅಲ್ಲ  ಸರ್ ಉತ್ತಮ ತಂತ್ರಜ್ಞಾನದ ಅಭಿವೃದ್ಧಿಗೆ  ಹಣ ಅನಿವಾರ್ಯವಲ್ಲವೆ… ಚರ್ಚೆಯ ಹಾದಿ ತಪ್ಪಿಹೋಗಿತ್ತು.

ವಸುಧೇಂದ್ರರ  ಜಾಣತನದ  ಚಾಕಲೆಟ್  ಹಂಚಿಕೆಯಿಂದ ಬಾಯಿ ಸಿಹಿಯಾಯಿತಾದರೂ,  ಚರ್ಚೆ  ಮಾತ್ರ   ಎಲ್ಲಿಂದಲೋ, ಎಲ್ಲಿಗೋ  ಸಾಗಿ   ಅಂತ್ಯ ಕಂಡಿತು. ‘ಚರ್ಚೆಗಳೂ ಯಾವತ್ತೂ  ಹೀಗೆ.  ಹಾಗಾಗಿಯೇ ಇದು ಫಿಶ್ ಮಾರ್ಕೇಟ್! ನಿಮ್ಮ  ಅಭಿಪ್ರಾಯಗಳನ್ನು ನೀವು ಗಟ್ಟಿಯಾಗಿ ಕಟ್ಟಿಕೊಂಡು  ಹೋಗಿ…’ ಕಾರ್ಯಕ್ರಮದ  ಕೊನೆಗೆ ಜಿ.ಎನ್.ಮೋಹನ್ ಅವರು ಹೇಳಿದ  ಮಾತು ಅಕ್ಷರಶಃ  ನಿಜ ಅಂದುಕೊಳ್ಳುವ ಹೊತ್ತಿಗೆ…ಗೆಳೆಯರೆಲ್ಲ  ಮತ್ತೊಂದು ಸಲ  ಚಹಾ ಕುಡಿಯಲು ಸಜ್ಜಾಗಿದ್ದರು!  ಚಹಾ ತಣಿದು ಹೋಗಿದೆ ಎಂಬ ಕಹಿ  ಸುದ್ದಿಯನ್ನು  ನಮಗೆಲ್ಲ  ಕೊಟ್ಟ   ಸಂದೀಪ್ ಕಾಮತ್, ಯಾರಿಗೂ ಮಾತಿಗೆ ಸಿಗದೇ  ಸದ್ದಿಲ್ಲದೇ  ಎದ್ದು ಹೋಗಿಬಿಟ್ಟರು!!

ಅಂದಹಾಗೆ ನಾಗೇಶ್ ಹೆಗಡೆಯಂಥವರ ಜೊತೆ ಮಾತುಕತೆಗೆ  ಅವಕಾಶ ಕಲ್ಪಿಸಿ, ಚೆಂದದ ಕಾರ್ಯಕ್ರಮ ಆಯೋಜಿಸಿದ ಮೇ ಫ್ಲವರ್‌ಗೆ  ಥ್ಯಾಂಕ್ಸ್…

Categories: ಕ್ರಿಯೇಟಿವ್ ಪೇಜ್

3 responses so far ↓

Leave a Comment