ಹುಯ್ಯೋ, ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕೆ ನೀರಿಲ್ಲ…
ಏಪ್ರಿಲ್-ಮೇ ತಿಂಗಳು ಬರುತ್ತಿದ್ದಂತೆ ಈ ಸಾಲುಗಳು ನೆನಪಾಗುತ್ತದೆ. ಮಳೆ ಹನಿ ಬಿದ್ದು , ನೆಲದಲ್ಲಿನ ಧೂಳು ಬಡಿದೆದ್ದಾಗ ಬರುತ್ತಿದ್ದ ಮಣ್ಣಿನ ಪರಿಮಳ ಈಗಲೂ ಮೂಗಿನ ತುದಿಯಲ್ಲೇ ಇದ್ದಂತೆ ಭಾಸವಾಗುತ್ತದೆ. ತುಂಬಿ ಹರಿಯುವ ತುಂಗೆಯಲ್ಲಿ ಕಾಗದದ ಹಾಯಿ ದೋಣಿ ಬಿಡುವುದೇ ಒಂತರಹ ಮಜಾ. ಜುಮುರು ಮಳೆಯಲ್ಲಿ ನೆನೆದು, ಮೈ ಒದ್ದೆ ಮಾಡಿಕೊಳ್ಳುವುದು, ಅಮ್ಮನ ಬೈಗುಳ, ನೆಗಡಿ, ಶೀತ, ಪಾಚಿಗಟ್ಟಿ ಜಾರುವ ನೆಲ, ಸದ್ದಿಲ್ಲದಂತೆ ಕಾಲಿಗಂಟಿಕೊಂಡು ರಕ್ತಹೀರುವ ಉಂಬಳ…ಇವೆಲ್ಲವನ್ನೂ ಮಳೆಗಾಲದ ಸೊಬಗಿನ ಸಾಲಿಗೆ ಸೇರಿಸಬಹುದು!
‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ…?’
ಅನಾದಿ ಕಾಲದಿಂದಲೂ ರೈತಾಪಿ ಮಂದಿ ಮಳೆಗಾಲಕ್ಕೆ ಒಂದು ವಿಶೇಷ ಸ್ಥಾನ ನೀಡುತ್ತಾ ಬಂದಿದ್ದಾರೆ. ಮಳೆಗೆ ಮುನ್ನ ಸಂಭ್ರಮಿಸುತ್ತಾರೆ. ಮಳೆ ಬಾರದೇ ಹೋದರೆ ಈಶ್ವರನ ತಲೆ ಮೇಲೆ ನೀರು ಹಾಕಿ(ಮಲೆನಾಡಿನ ಭಾಷೆಯಲ್ಲಿ ‘ಪರ್ಜನ್ಯ’ ಎಂದು ಕರೆಯಲ್ಪಡುವ ಈ ನಂಬಿಕೆ ರಾಜ್ಯದ ಬಹುತೇಕ ಕಡೆ ಇದೆ) ಮಳೆ ಬರಲೆಂದು ದೇವರನ್ನು ಪ್ರಾರ್ಥಿಸುತ್ತಾರೆ. ಮಳೆ ನಿಂತ ನಂತರ ಸಡಗರ ಪಡುತ್ತಾರೆ. ಶ್ರಾವಣ ಬಂದಾಗ ಆರಿದ್ರೆ ಮಳೆ ಹಬ್ಬವನ್ನು ಆಚರಿಸುತ್ತಾರೆ! ಆದರೆ ಈ ಬೆಂಗಳೂರಲ್ಲಿ ಮಳೆ ಬಂದ್ರೆ ಟ್ರಾಫಿಕ್ ಜಾಮು, ಶಾನೇ ಕಿರಿಕ್ಕು ಬಿಡ್ರಿ ಅನ್ನಬಹುದು ಮಹಾನಗರಿಯ ಮಂದಿ!
ಹೌದು, ಇವತ್ತು ಮಳೆಗಾಲದ ಮಹಿಮೆ ಬದಲಾಗುತ್ತಿದೆ. ‘ಹುಯ್ಯೋ, ಹುಯ್ಯೋ ಮಳೆರಾಯ’ ಎಂಬ ಸಾಲುಗಳ ಜಾಗವನ್ನು ‘ರೈನ್ ರೈನ್ ಗೊ ಅವೇ…’ ಎಂಬ ಆಂಗ್ಲ ಕವಿವಾಣಿ ಆಕ್ರಮಿಸಿದೆ. ಮಹಾನಗರಿಯಲ್ಲಿ ಮಳೆ ಬಾರದೇ ಇದ್ದರೇ ಉತ್ತಮ ಎಂಬುವವರ ಸಂಖ್ಯೆಯೇ ಹೆಚ್ಚಿದೆ. ಬಿತ್ತನೆ, ಗದ್ದೆ ನಾಟಿಯ ಸಮಯದಲ್ಲಿ ಮಳೆಯಲ್ಲಿ ಖುಷಿಯಿಂದ ನೆನೆಯುತ್ತಿದ್ದರೆ ಈಗ ಹಲವರಿಗೆ ಮರೆತು ಹೋಗಿದೆ. ರಸ್ತೆ, ಶಾಲೆಯ ವ್ಯವಸ್ಥೆಯಿಲ್ಲದ ಹಳ್ಳಿಯಲ್ಲಿ ಕುಳಿತು ಕೃಷಿ ಮಾಡುವುದಕ್ಕಿಂತ ಪೇಟೆಯಲ್ಲಿ ಸುಖವಾಗಿ ಬದುಕುವುದೇ ಲೇಸು ಎಂಬ ಮನೋಭಾವ ಇಂದಿನ ತಲೆಮಾರಿನ ಬಹುತೇಕರದ್ದು.(ನನ್ನನ್ನೂ ಸೇರಿಸಿ!)
ಮಳೆಯಲ್ಲಿ ಮನೆಯೊಳಗೆ ಕುಳಿತು ಬೆಚ್ಚಗೆ ಗೇರು ಬೀಜವನ್ನು ಸುಟ್ಟು ತಿನ್ನುವ ಮಂದಿ ಈಗ ಕಡಿಮೆಯಾಗಿದ್ದಾರೆ ಅನ್ನುವುದಕ್ಕಿಂತ, ಹಲಸಿನ ಬೀಜ, ಗೇರು ಬೀಜ ಸುಡುತ್ತಿದ್ದ ಕೆಂಡದ ಒಲೆಗಳೇ ಕಾಣೆಯಾಗುತ್ತಿವೆ ಎನ್ನುವುದೇ ಹೆಚ್ಚು ಸಮಂಜಸ. ಹಳ್ಳಿ ಮನೆಯಲ್ಲಿನ ಹಲಸಿನ ಹಪ್ಪಳಕ್ಕಿಂತ , ಪಟ್ಟಣದಲ್ಲಿ ಕುಳಿತು ಗೋಬಿ ಮಂಚೂರಿ, ಪಾನಿಪುರಿ ತಿನ್ನುವುದೇ ರುಚಿ-ರುಚಿ ಅನ್ನಿಸತೊಡಗಿದೆ…
ಮಳೆಗಾಲ ಎಂದರೆ ಮಲೆನಾಡಿನ ಪಾಲಿಗಂತೂ ಸೂರ್ಯ ಕಾಣಿಸುವುದೇ ಅಪರೂಪವಾಗಿತ್ತು. ಬೆಳಿಗ್ಗೆ ಸಣ್ಣನೆಯ ಜಿಟಿ ಜಿಟಿ ಜುಮುರು ಮಳೆ ಆರಂಭವಾದರೆ, ಸೂರ್ಯ ಮುಳುಗಿದ ಮೇಲೂ ಮಳೆ ನಿಲ್ಲುವುದು ಕಷ್ಟವಾಗಿತ್ತು. ಒಂದೊಮ್ಮೆ ಮಳೆ ನಿಂತರೂ, ನಾಲ್ಕಾರು ದಿನ ಮೋಡ ಕವಿದ ಚಳಿ-ಚಳಿಯ ವಾತಾವರಣ ಇದೇ ಇರುತ್ತಿತ್ತು. ತಣ್ಣನೆಯ ಗಾಳಿಯಲ್ಲಿ ಮನೆಯೊಳಗೆ ಕಂಬಳಿ ಹೊದ್ದು ಮಲಗಿದರೆ, ಏಳುವುದೇ ಬೇಡ ಅನ್ನಿಸುವಂಥ ಆಲಸ್ಯದ ಭಾವ ಜತೆಯಾಗುತ್ತಿತ್ತು. ಆದರೆ ಇವತ್ತು ಭಾವನೆಗಳನ್ನು ಕೆದಕುವ ಆವತ್ತಿನ ತರಹದ ಜಿಟಿ ಜಿಟಿ ಜುಮುರು ಮಳೆ ಬರುವುದೇ ಅಪರೂಪವಾಗಿದೆ. ಸಂಜೆ ೪ ಗಂಟೆಗೆ ಆರಂಭದ ದಪ್ಪನೆಯ ಹನಿಗಳ ಮಳೆ ೭ಗಂಟೆಗೆ ನಿಂತು ಹೋಗಿರುತ್ತದೆ. ಮರುದಿನ ಬೆಳಿಗ್ಗೆ ಎದ್ದು ನೋಡಿದರೆ ಮಳೆ ಬಂದಿದೆ ಎಂಬ ಸುಳಿವೂ ಕೂಡ ಇರುವುದಿಲ್ಲ. ಕಾಲ ಬದಲಾಗುತ್ತಿರುವುದು ಬಹುಶಃ ಮಳೆರಾಯನಿಗೂ ಗೊತ್ತಾದಂತಿದೆ!
0 responses so far ↓
There are no comments yet...Kick things off by filling out the form below.