Entries from January 2009

ಬೋರು!

January 30, 2009 · 1 Comment

‘ಬೋರು’ ಇದು ‘ಬೇಜಾರು’  ಪದದ ತದ್ಭವರೂಪವಾಗಿರಬಹುದಾ?
ಹಾಗಂತ ಒಂದು ಪ್ರಶ್ನೆ  ತುಂಬಾ ಬೋರಾಗುತ್ತಿದ್ದಾಗ ಮನಸಿನಲ್ಲಿ  ಮೂಡಿತು! ಮನೆಯಲ್ಲಿ  ಏನೂ ಕೆಲಸವಿರಲಿಲ್ಲ. ಏನಾದ್ರು ಬರೆಯಬೇಕು ಅನ್ನಿಸುತ್ತಿತ್ತು. ಆದರೂ ಬರೆಯಲು ಬೋರು! ಆ ಬೋರನ್ನು ಕಳೆಯಲಿಕ್ಕಾಗಿಯೇ ಬರೆಯುತ್ತಿದ್ದೇನೆ!

‘ತುಂಬಾ ಬೋರ್ ಆಗ್ತಿತ್ತು ಕಣೋ ಅದ್ಕೆ ಕಾಲ್ ಮಾಡಿದೆ…’ಹಾಗಂತ ಗೆಳತಿ ಹೇಳುತ್ತಿರುತ್ತಾಳೆ.
ನಿನಗೆ ಬೋರ್ ಆಗಲಿಕ್ಕು, ನನಗೆ ಕಾಲ್ ಮಾಡ್ಲಿಕ್ಕು  ಏನು ಸಂಬಂಧ ಮಾರಾಯಿತಿ ಅಂದರೆ…
ಏ ಸುಮ್ನಿರೋ ತಲೆಹರಟೆ ಮಾಡಬೇಡ ಅನ್ನುತ್ತಾಳೆ!

ಅಲ್ಲಿಂದಲೇ ನಮ್ಮಿಬ್ಬರ ಹರಟೆ ಆರಂಭವಾಗುತ್ತದೆ. ಅವಳು ಫೋನ್ ಇಡುವಾಗ ಗಂಟೆಗಳೇ ಕಳೆದಿರುತ್ತದೆ. ಏನು ಹರಟುತ್ತಿದ್ದೇವೆ? ಏಕೆ ಹರಟುತ್ತಿದ್ದೇವೆ? ಈ ಹರಟೆಯಿಂದ ನಮ್ಮಿಬ್ಬರಿಗೂ ಏನು ಪ್ರಯೋಜನ…ಇತ್ಯಾದಿ ಪ್ರಶ್ನೆಗಳನ್ನು ನಾವಿಬ್ಬರೂ ನಮ್ಮೊಳಗೆ ಕೇಳಿಕೊಂಡಿಲ್ಲ. ಆದ್ರೂ, ಅವಳು ನನಗೆ ಕಾಲ್ ಮಾಡಿದ್ರೆ ಅವಳ ಬೋರ್ ನಿವಾರಣೆಯಾಗತ್ತಾ? ನಾನೇನು ‘ಬೋರ್’ ನಿವಾರಿಸುವಾ ಔಷಯಾ? ಅನ್ನಿಸತ್ತೆ ಎಷ್ಟೋ ಸಲ.

‘ಯಾಕೋ ತುಂಬಾ ಬೇಜಾರಾಗ್ತಾ ಇದೆ ಕಣೆ, ಅದ್ಕೆ ಸುಮ್ನೆ ಫೋನ್ ಮಾಡಿದೆ…’ಅಂತಾ ನಾನು ಗೆಳತಿಗೆ ಹೇಳುವಾಗ, ಅವಳಲ್ಲೂ ನನ್ನೊಳಗಿನ ಪ್ರಶ್ನೆಯೇ ಉದ್ಭವಿಸಬಹುದಾ? ಒಮ್ಮೆ ಉದ್ಭವಿಸಿದರೂ, ಆ ಪ್ರಶ್ನೆಯನ್ನು ನನ್ನ ಹತ್ತಿರ ಕೇಳುವ ಧೈರ್ಯ ಅವಳಲ್ಲಿ  ಇಲ್ಲ ಅನ್ನಿಸತ್ತೆ! ಹಾಗಾಗಿಯೇ ಈವರೆಗೆ ನನ್ನ ಬಳಿ ಅವಳು ಆ ಪ್ರಶ್ನೆಯನ್ನು ಕೇಳಿಲ್ಲ!

ಒಮ್ಮೆ ಅಂತಹದ್ದೊಂದು ಪ್ರಶ್ನೆ ಕೇಳಿಕೊಂಡರೆ, ಆ ಪ್ರಶ್ನೆಯ ಮೇಲೇ ಹರಟಲು ಶುರುವಿಡುತ್ತೇವೆ. ಹಾಗೆ ಶುರುವಾದ ಹರಟೆ ಅದೆಲ್ಲಿಗೋ ಹೋಗಿ ನಿಂತಿರತ್ತೆ. ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿರುವುದಿಲ್ಲ!
ಇನ್ನೊಂದು ದಿನ  ಮತ್ತದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಫೋನಿನಲ್ಲಿ  ನಮ್ಮಿಬ್ಬರ ಹರಟೆ ಆರಂಭವಾಗತ್ತೆ…ಏ ಮಾರಾಯ ನಿನ್ನ ತಲೆಹರಟೆ ಪ್ರಶ್ನೆಯಿಂದ ಈ ತಿಂಗಳು ನನ್ನ  ಫೋನ್ ಬಿಲ್ಲು ಎಷ್ಟು  ಬಂದಿದೆ ನೋಡು…ಅಂತಾ ಅವಳು ತಿಂಗಳ ಕೊನೆಯಲ್ಲಿ ಎಳೆಯುವ ರಾಗವೇ ನಮ್ಮ ಪ್ರಶ್ನೆಗೆ ಸಿಕ್ಕ ಉತ್ತರ!

‘ಥೂ, ಇದೆಂಥ ಬರಹ ಮಾರಾಯಾ ಬರೀ ಬೋರು’ ಹಾಗಂತ ನೀವು ನನ್ನನ್ನು ಬೈದುಕೊಳ್ಳಲು ಶುರುವಿಟ್ಟಿರಬಹುದು…

ಅಲ್ಲಾ  ಇಷ್ಟು  ಹೊತ್ತು ಗೆಳತಿಯ ಬೋರು ನಿವಾರಿಸಿದ ನಾನು, ನಿಮಗೆ ಬೋರು ಬರಿಸುವ ವ್ಯಕ್ತಿಯಾಗಿಬಿಟ್ಟೆನಾ?
ಬೋರು ನಿವಾರಿಸುವ ಸಾಮರ್ಥ್ಯ ನನ್ನಲ್ಲಿ ಇದೆ ಅಂತಾ ನನ್ನೊಳಗೆ ನಾನು ಇಷ್ಟು ಹೊತ್ತಿನವರೆಗೆ ಬೀಗುತ್ತಿದ್ದೆ. ಆದರೆ ಈಗ…? ಇಂಗ್ಲಿಷ್ ಮೆಡಿಸಿನ್‌ಗೆ ಒಂದು ಕಾಯಿಲೆ ನಿವಾರಿಸುವ ಶಕ್ತಿ ಜತೆಗೆ, ಇನ್ನೊಂದು  ಕಾಯಿಲೆ ಹುಟ್ಟುಹಾಕುವ ಸಾಮರ್ಥ್ಯವೂ ಇರತ್ತಂತೆ. ನಾನು ಒಂತರಹ ಹಾಗೇ ಇರಬೇಕು!
ಅಂದಹಾಗೆ, ಈ ಬೋರ್ ದೇಹದ ಯಾವ ಭಾಗದಿಂದ ಹುಟ್ಟಬಹುದು? ಈ ಬೋರಿನ ಅಪ್ಪ, ಅಮ್ಮ ಯಾರಿರಬಹುದು?

ಈ ಪ್ರಶ್ನೆಯನ್ನು ಬೋರಿನ ಸಮೀಪವೇ ಕೇಳಿಬಿಡಬೇಕು ಅಂತಾ ಹುಮ್ಮಸ್ಸಿನಿಂದ ಸಜ್ಜಾದೆ. ಬರೆಯುವುದನ್ನೂ ನಿಲ್ಲಿಸಿ, ಪ್ರಶ್ನೆ ಕೇಳಲಿಕ್ಕೋಸ್ಕರ ಬೋರಿನ ಬಳಿ ಓಡಿ ಹೋದೆ.

ಇವತ್ತ್ಯಾಕೋ ತುಂಬಾ ಬೋರ್ ಆಗುತ್ತಿದೆ. ನಿನ್ನ ಪ್ರಶ್ನೆಗೆ ನಾಳೆ ಉತ್ತರ ಕೊಡುತ್ತೇನೆ…ಅಂದುಬಿಡ್ತು ಬೋರು!!! ಬೋರ್‌ನ್ನೂ ‘ಬೋರು’ ಕಾಡುತ್ತದೆ ಅಂದಮೇಲೆ ನನ್ನ ಬರಹ ನಿಮಗೆ ಬೋರ್ ಬರಿಸಿರುವುದರಲ್ಲಿ ಅಚ್ಚರಿಯೇನಿಲ್ಲ ಬಿಡಿ.

“ ‘ಬೋರು’ ಇದು ‘ಬೇಜಾರು’  ಪದದ ತದ್ಭವರೂಪ ಅಂದಮೇಲೆ, ಬೇಜಾರು, ಬೋರಿನ ತತ್ಸಮ ರೂಪವಾಗಿರಲೇ ಬೇಕು ಅಲ್ವಾ? ಅಲ್ಲಿಗೆ ಬೋರು, ಬೇಜಾರುಗಳ ನಡುವೆ ನಿಕಟವಾದ ಸಂಬಂಧವಿದೆ ಎಂಬುದು ಖಚಿತ” ಹಾಗಂತ ಶುರುವಾಗುವ ಸೈಕಾಲಜಿ, ಲಾಜಿಕ್ಕಿನ ಪಾಠಗಳು ಅಂದ್ರೆ ನನಗೆ ರೇಜಿಗೆ. ಬೋರು, ಬೇಜಾರು ಇವೆರಡರಿಂದ ‘ರೇಜಿಗೆ’ ಅನ್ನುವ ಮತ್ತೊಂದು ಪದದ ಉದ್ಭವವಾಯಿತು…ಹೀಗೇ ಮುಂದುವರಿದರೆ ಪುಟ್ಟದೊಂದು ಪದಕೋಶದ ಜನನವೂ ಆಗಬಹುದು!

ಪದಕೋಶ, ವ್ಯಾಕರಣ, ಸಮಾಸ … ಹೈಸ್ಕೂಲಿನಲ್ಲಿ  ಓದಿದ ಇಂಥ  ಪದಗಳನ್ನು ಚಿತ್ರಮಂದಿರದಲ್ಲಿ ಕುಳಿತು ಕೇಳಿದರೂ ನನ್ನ ಮನಸ್ಸಿಗೊಮ್ಮೆ ಬೋರ್ ಅನ್ನಿಸುತ್ತದೆ. ಆ ಪಾಠವನ್ನು ಬೋಸುತ್ತಿದ್ದ  ಎಸ್.ಆರ್.ಭಟ್ಟರ ಮೇಲೆ ವಿಪರೀತ ಸಿಟ್ಟು  ಬರುತ್ತದೆ!

ಹೌದು, ನನ್ನ ಈ ಹರಟೆ ಗೆಳತಿಯ ತಲೆಹರಟೆಗಿಂತ ಅತಿಯಾಗುತ್ತಿದೆ. ಗೆಳತಿ ಫೋನ್ ಬಿಲ್ಲು  ಹೆಚ್ಚು  ಬರತ್ತೆ ಅಂತಾ ನೆನಪಾದಾಗಲಾದರೂ ಫೋನ್ ಇಡುತ್ತಾಳೆ. ಹಾಗಂತ ನನ್ನ  ಬರಹಕ್ಕೇನೂ ಯಾವುದೇ ಬಿಲ್ ಇಲ್ಲ. ಆದರೂ ನಿಮ್ಮ  ಮೇಲಿನ ಕನಿಕರದಿಂದ ಇಲ್ಲಿಗೆ ನಿಲ್ಲಿಸಿಬಿಡುತ್ತೇನೆ!

ಅಂದಹಾಗೆ ಈ ಬೋರಿನ ಅಪ್ಪ, ಅಮ್ಮ ನಿಮಗೇನಾದ್ರೂ ಸಿಕ್ಕಿದರೆ  ದಯವಿಟ್ಟು  ನಂಗೆ ತಿಳಿಸಿ. ಅವರ ಹತ್ತಿರ ನಾನು ಸ್ವಲ್ಪ ಖುದ್ದಾಗಿ ಮಾತನಾಡಬೇಕಿದೆ. ಅವರ ಬಳಿ ಮಾತಾಡಿದರೆ ಮತ್ತೆ ‘ಬೋರ್’ ಅಂತಾ ಇವ ಕೊರೆತ ಶುರು ಮಾಡುತ್ತಾನೆ ಅಂದ್ಕೊಂಡು ತಿಳಿಸದೇ ಇರಬೇಡಿ ಪ್ಲೀಸ್…

Categories: ಕ್ರಿಯೇಟಿವ್ ಪೇಜ್

ನಮ್ಮ ಹೆತ್ತವರು ನಮಗೆ ಭಾರವಾದರೆ…?

January 22, 2009 · 9 Comments

‘ಗೆಳೆಯ ಮನೋಜನ ತಮ್ಮ ಪ್ರಶಾಂತ ಸಿಗರೇಟು ಸೇದುತ್ತಾನಂತೆ, ಡ್ರಿಂಕ್ಸ್ ಮಾಡುತ್ತಾನಂತೆ’ ಅನ್ನೋ ಸುದ್ದಿ ಕೇಳಿ ನನಗೆ ತುಂಬಾ ಬೇಜಾರಾಯಿತು. ಉಡುಪಿಯ ನನ್ನ ಒಂದಿಷ್ಟು ಮಿತ್ರರಿಗೆ ಫೋನ್ ಮಾಡಿ ಪ್ರಶಾಂತನಿಗೆ ಬುದ್ದಿ ಹೇಳಲು ವಿನಂತಿಸಿಕೊಂಡಿರುವೆ.


ಕುಡಿತ, ಸಿಗರೇಟು ಸೇದುವುದು ತಪ್ಪು ಅಂತಾ ನಾನು ಯಾವತ್ತೂ ವಾದಿಸುವುದಿಲ್ಲ. ಗೆಳೆಯ ಅರುಣ್ ಭಟ್ಟನ ರೂಮಿಗೆ ಹೋದರೆ, ಆತ ನನ್ನ ಎದುರಿಗೇ ಕುಡಿಯುತ್ತಾನೆ! ನಾನು ಯಾವತ್ತೂ ಆತನಿಗೆ ಕುಡಿಯುವುದು ಬೇಡ ಅಂತಾ ನಾನು ಹೇಳಿಲ್ಲ. ಆತ ೧೫,೦೦೦ ರೂ. ಸಂಬಳ ತೆಗೆದುಕೊಳ್ಳುತ್ತಾನೆ. ಇನ್ನೂ ಆತನ ಮನೆಯಲ್ಲಿ ಬೇಕಾದಷ್ಟು ಸಂಪತ್ತಿದೆ. ನನ್ನ ಸ್ವಭಾವವನ್ನು ಚೆನ್ನಾಗಿ ಬಲ್ಲ ಆತನು ನನಗೆ ಕುಡಿ ಎಂದು ಒತ್ತಾಯಿಸುವುದಿಲ್ಲ.


ಮನೋಜ ನನಗೆ ಹೈಸ್ಕೂಲ್‌ನಲ್ಲಿ ಕ್ಲಾಸ್‌ಮೆಟ್. ಪಿಯುಸಿಗೆ ನಾನು ಊರಿಂದ ಹೊರಗೆ ಹೋದೆ. ಮನೋಜ ಊರಲ್ಲೇ ಉಳಿದ. ಹಾಗಾಗಿ ನನ್ನ, ಅವನ ಸಂಪರ್ಕವೇ ಕಡಿದುಹೋಯಿತು. ಪಿಯುಸಿಗೆ ಬರುತ್ತಿದ್ದ ಹಾಗೆ ಹಾದಿ ತಪ್ಪಿದ ಅವ, ಪಿಯುಸಿಯಲ್ಲಿ ಫೇಲಾದನಂತೆ. ನಂತರ ಬೆಂಗಳೂರಿಗೆ ಬಂದು ಕಬ್ಬಿಣದ ಪ್ಯಾಕ್ಟರಿಯಲ್ಲಿ ಮೂಟೆ ಇಳಿಸಿದಾಗ ಆತನ ತಪ್ಪಿನ ಅರಿವಾಯಿತಂತೆ…ಹಾಗಂತ ಮತ್ತೆ ಬೆಂಗಳೂರಿನಲ್ಲಿ ಸಿಕ್ಕ ಅವ, ತನ್ನ ಬದುಕಿನ ಕುರಿತು ಒಂದು ರಾತ್ರಿಯಲ್ಲಾ ಕಥೆ ಹೇಳಿದ. ಈಗ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಾ, ಬದುಕಿನ ಕುರಿತು ವ್ಯಥೆ ಪಡುತ್ತಿದ್ದಾನೆ.


ಆತನ ತಮ್ಮ ಪ್ರಶಾಂತ ನನಗೇನೂ ಪರಿಚಿತನಲ್ಲ. ಆದರೂ ಆತನನ್ನು ದುಶ್ಚಟದಿಂದ ದೂರ ಮಾಡಬೇಕು ಅನ್ನಿಸಿತು. ಅವರ ಅಪ್ಪ, ಅಮ್ಮನಿಗೆ ಎರಡು ಗಂಡು ಮಕ್ಕಳ ಹೊರತಾಗಿ ಮತ್ತೇನೂ ಇಲ್ಲ. ಡಿಗ್ರಿಗೆ ಕಾಲಿಡುತ್ತಿರುವ ಪ್ರಶಾಂತನಾದರೂ ತನ್ನ ಅಪ್ಪ, ಅಮ್ಮನಿಗೊಂದು ನೆಲೆ ಕಾಣಿಸಬೇಕು ಎಂಬುದು ನನ್ನ ಆಶಯ.


ನನ್ನ ಅನೇಕ ಹಿರಿ-ಕಿರಿಯ ಗೆಳೆಯರು ಕುಡಿಯುತ್ತಾರೆ. ರೂಂ, ಮನೆಯಲ್ಲೇ ತಂದು ಕುಡಿಯುವ ಅವರ ಜತೆ ನಾನು ಕುಳಿತುಕೊಳ್ಳುತ್ತೇನಾದರೂ ಕುಡಿಯುವುದಿಲ್ಲ. ನನ್ನ ಅಪ್ಪ, ಅಮ್ಮನಿಗೊಂದು ನೆಲೆ ಒದಗಿಸುವವರೆಗೆ, ನನ್ನ ತಲೆ ಮೇಲಿನ ಜವಬ್ದಾರಿಗಳು ತೀರುವವರೆಗೆ ಯಾವುದೇ ದುಶ್ಚಟಕ್ಕೆ ಬಲಿಯಾಗಬಾರದು ಅಂತಾ ಯಾವತ್ತೋ ನಿರ್ಧರಿಸಿಬಿಟ್ಟಿದ್ದೇನೆ. ಹಾಗಾಗಿ ನನ್ನ ಸ್ವಭಾವವನ್ನು ಚೆನ್ನಾಗಿ ಬಲ್ಲ ಮಿತ್ರರ್ಯಾರು ಆ ಕುರಿತು ನನ್ನನ್ನು ಒತ್ತಾಯಿಸುವುದಿಲ್ಲ.


ತಾನು ಒಳ್ಳೇ ಬಟ್ಟೆ ತೊಡದೇ, ನನಗೆ ಬಟ್ಟೆ ತಂದುಕೊಡುತ್ತಿದ್ದ, ತೀರಾ ಕಷ್ಟದಲ್ಲಿದ್ದಾಗಲೂ ನನ್ನನ್ನು ಓದಿಗಾಗಿ ಹೊರಗಡೆ ಕಳುಹಿಸಿದ ಅಪ್ಪ, ಅಮ್ಮನ ಕುರಿತಾಗಿ ನನಗೆ ಅದ್ಯಾಕೋ ವಿಶೇಷ ಮಮತೆ. ನಮಗೆ ಹೇಗೆ ಅಪ್ಪ, ಅಮ್ಮ ಆಸರೆಯಾಗಿದ್ದರೋ, ಅವರಿಗೂ ಮಕ್ಕಳು ಹಾಗೇ ಆಸರೆಯಾಗಬೇಕು ಎಂದು ವಾದಿಸುವವ ನಾನು.


ಪ್ರೀತಿ, ಪ್ರೇಮದ ಕುರಿತಾಗಿ ಪುಂಖಾನುಪುಂಖವಾಗಿ ಬರೆಯುತ್ತೇನೆ ನಿಜ. ಆದರೂ ತುತ್ತಾ-ಮುತ್ತಾ ಎಂಬ ಪ್ರಶ್ನೆ ಬಂದಾಗ, ತುತ್ತಿನ ಕಡೆ ನಿಲ್ಲುವವ. ಹಾಗಾಗಿಯೇ ನನ್ನ ಮನೋಭಾವಕ್ಕೆ ತಕ್ಕನಾದ ಪ್ರೇಯಸಿ ನನಗಿನ್ನೂ ಸಿಕ್ಕಿಲ್ಲ! ಪ್ರೀತಿ ಮಾಡಿ ಓಡಿಹೋಗುವವರು, ಪ್ರೀತಿಗೋಸ್ಕರ ಅಪ್ಪ-ಅಮ್ಮನ ಜತೆ ಜಗಳ ಕಾಯುವ ಮಂದಿಯನ್ನು ಕಂಡರೆ ನನಗೆ ವಿಪರೀತ ಕೋಪ. ಮುತ್ತು ನೀಡುವವಳು ೭೫ ವರ್ಷಗಳ ಕಾಲ ನಮ್ಮ ಜತೆಗಿರುತ್ತಾಳೆ ನಿಜ. ಹಾಗಂತ ೨೫ ವರ್ಷಗಳ ತುತ್ತು ನೀಡಿ ಸಾಕಿ ಬೆಳೆಸಿದ ಅಮ್ಮನನ್ನು ಮರೆಯಲು ಸಾಧ್ಯವಿಲ್ಲ ಅಲ್ಲವೇ? ನಮಗೆ ಬುದ್ದಿ ಬರುವವರೆಗೆ ಹೇಗೆ ಅಮ್ಮ ನಮ್ಮನ್ನು ಸಾಕುತ್ತಾಳೋ, ಅದೇ ರೀತಿ ಹೆತ್ತವರಿಗೆ ಕೈಲಾಗದ ಕಾಲದಲ್ಲಾದರೂ ಮಕ್ಕಳು ಅವರನ್ನು ಆರೈಕೆ ಮಾಡಬೇಕು ಅಲ್ವಾ?


ಇವತ್ತೂ ನಮ್ಮೂರಿನ ಅನೇಕ ಮಂದಿಗೆ ಹೆತ್ತವರು ಬೇಡವಾಗಿದ್ದಾರೆ. ಮನೆಯಲ್ಲಿ ಮಣಗಟ್ಟಲೇ ಕೊಳೆಯುತ್ತಿದ್ದರೂ ಹೊರಗೆ ಹೋದವರಿಗೆ ಊರಿಗೆ ಮರಳಲು ಇಷ್ಟವಿಲ್ಲ! ತೀರಾ ಹಣ್ಣು ಮುದುಕರು ತೋಟದಲ್ಲಿ ಕಷ್ಟ ಪಡುವುದನ್ನು ನೋಡಿದರೆ ಸಂಕಟವಾಗುತ್ತದೆ.


ವೈದಿಕ, ಶ್ರಾದ್ದ…ಇವೆಲ್ಲಾ ನಮ್ಮ ಹಿರಿಯರನ್ನು ವರ್ಷಕ್ಕೊಮ್ಮೆಯಾದರೂ ನೆನಪಿಸಿಕೊಳ್ಳಬೇಕು ಎಂದು ಮಾಡಿದ ಸಂಪ್ರದಾಯಗಳು. ಎಷ್ಟೋ ಜನರಿಗೆ ಅದನ್ನೂ ಮಾಡಲು ಮನಸಿಲ್ಲ. ವಡೆ ಊಟದ ನೆವದಲ್ಲಿ ೧೫ ದಿನ ಅಜ್ಜನ ನೆನಪು ಮಾಡಿಕೊಳ್ಳುತ್ತೇವೆ. ಸಂಭ್ರಮ-ದುಃಖ ಪಡುತ್ತೇವೆ…


ಉಡುಪಿ-ಅಂಬಾಗಿಲು ಹೆದ್ದಾರಿಯಲ್ಲೊಂದು ‘ಸ್ಟೇ ಹೋಂ’ ಇದೆ. ಶೋಷಿತ, ಅನಾಥ, ಕೈಲಾಗದ ಹೆಂಗಸರು ಮತ್ತು ಅವರ ಮಕ್ಕಳಿಗೆ ಆಶ್ರಯ ನೀಡುತ್ತಿರುವ ತಾಣವದು. ನಾನು ಡಿಗ್ರಿಯಲ್ಲಿರುವಾಗ ಬಡಿಸಲು (ಬಡಿಸುವುದಕ್ಕೆ ಉಡುಪಿ ಭಾಷೆಯಲ್ಲಿ ‘ಪೆಟು’ ಅನ್ನುತ್ತಾರೆ) ಹೋಗುತ್ತಿದ್ದೆ. ಸಮರ್ಥಭಟ್ಟರಿಗೆ ವರ್ಷಕ್ಕೊಮ್ಮೆ ‘ಸ್ಟೇ ಹೋಂ’ನಲ್ಲಿ ಅಡುಗೆ ಸಿಗುತ್ತಿತ್ತು. ಗುಜಾರಾತಿನ ಮಾರ್ವಾಡಿ ಕುಟುಂಬವೊಂದು ತಾಯಿಯ ತಿಥಿಯ ದಿನ ‘ಸ್ಟೇ ಹೋಂ’ನ ಎಲ್ಲರಿಗೂ ಅನ್ನ ಸಂತರ್ಪಣೆ ಮಾಡಿ ಒಂದರ್ಧ ದಿನವನ್ನು ಅಲ್ಲಿ ಕಳೆಯುತ್ತಾರೆ. ನಾನು ಡಿಗ್ರಿಯಲ್ಲಿದ್ದ ಮೂರು ವರ್ಷವೂ ಆ ಪೆಟ್ಟಿಗೆ ಹೋಗಿದ್ದೇನೆ.


ವೈದಿಕ, ಶ್ರಾದ್ದ…ಇವೆಲ್ಲಾ ಕರ್ಮಠ ಸಂಪ್ರದಾಯಸ್ಥರ ಆಚರಣೆಗಳೆಂದು ಮೂದಲಿಸುವವರು ಅನಾಥಾಲಯ, ಸ್ಟೇ ಹೋಂಗಳನ್ನಾದರೂ ಒಪ್ಪುತ್ತೀರಾ ಅಲ್ವಾ? ತಂದೆ-ತಾಯಿಯ, ಹಿರಿಯರ ತಿಥಿಯ ದಿನ ಅಲ್ಲಾದರೂ ಒಂದು ದಿನ ಕಳೆಯಬಹುದಲ್ಲಾ?


ಎಲ್ಲಾ ಅಪ್ಪ-ಮಕ್ಕಳ ಸಂಬಂಧವೂ ನಾನಂದುಕೊಂಡಂತೆ ಇರುವುದಿಲ್ಲ ಎಂಬುದು ನನಗೂ ಗೊತ್ತು. ‘ಅವರ ತೆವಲಿಗೆ ಹುಟ್ಟಿಸಿಕೊಂಡ ಮೇಲೆ ಮಕ್ಕಳನ್ನು ಸಾಕುವುದು ಅವರ ಕರ್ತವ್ಯ’ ಎಂದು ವಾದಿಸುವವರನ್ನೂ ನಾನು ಕಂಡಿರುವೆ. ನೀವು ಹುಟ್ಟಿದ ತಕ್ಷಣ, ನಿಮ್ಮನ್ನು ನಿಮ್ಮ ತಾಯಿ ಕಸದ ಬುಟ್ಟಿಗೆ ಬಿಸಾಡಿದ್ದರೆ? ಎಂಬುದು ನನ್ನ ಪ್ರಶ್ನೆ. ಅವರು ನಾವು ಬಾಲ್ಯದಲ್ಲಿದ್ದಾಗ ಏನೇ ಮಾಡಿರಬಹುದು, ಆದರೂ ನಾವವರನ್ನು ಪ್ರೀತಿಸಬೇಕು.


ಅಲ್ಯೂಮಿನಿಯಂ ತಟ್ಟೆಯು ಕಥೆಯನ್ನು ನೀವೆಲ್ಲಾ ಕೇಳಿರಬಹುದು. ನಮ್ಮ ಅಪ್ಪ-ಅಮ್ಮನಿಗೆ ನಾವೇನು ಮಾಡುತ್ತೀವೋ, ನಮ್ಮ ಮಕ್ಕಳು ನಮಗೆ ಅದನ್ನೇ ಮಾಡುತ್ತಾರೆ…ರಾತ್ರಿ ಕೆಲಸ ಮುಗಿಸಿ ಶ್ರೀನಿವಾಸ ನಗರದಿಂದ ಬ್ಯಾಂಕ್ ಕಾಲೋನಿಯಲ್ಲಿನ ನನ್ನ ರೂಮಿಗೆ ನಡೆದುಕೊಂಡು ಹೋಗುವಾಗ ನೆಲೆಯಿಲ್ಲದೇ ಅಂಗಡಿ ಕಟ್ಟೆಯಲ್ಲಿ ಕಾಣಸಿಗುವ ವೃದ್ಧರನ್ನು ನೋಡಿ, ಅಮ್ಮ-ಅಪ್ಪನ ಬಗೆಗೆ ತೀರಾ ಭಾವುಕನಾಗಿ ಬರೆದೆ ಅನ್ನಿಸತ್ತೆ…


***

ಇನ್ನು, ಕುಡಿತಕ್ಕೆ ಬಲಿಯಾಗಿ ಹೆಂಡತಿ ಮಕ್ಕಳನ್ನು ಬೀದಿಗೆ ನಿಲ್ಲಿಸಿದ ಮಹಪುರುಷರು ನಮ್ಮ ಸಮಾಜದಲ್ಲಿ ಸಾಕಷ್ಟಿದ್ದಾರೆ. ಜೂಜಿನಿಂದಾಗಿ ಸಂಸಾರವನ್ನೇ ಹಾಳು ಮಾಡುವವರಿಗೂ ಕೊರತೆಯಿಲ್ಲ. ನಿಜ, ಪ್ರತಿಯೊಬ್ಬನಿಗೂ ಆತನದ್ದೇ ಆದ ವೈಯಕ್ತಿಕ ಬದುಕಿದೆ. ಹಾಗಾಗಿ ಅವರು ಕುಡಿದರೆ, ಜೂಜಾಡಿದರೆ, ಯಾರ ಜತೆಗೆ ಮಲಗಿದರೂ ಕೇಳುವ ಹಕ್ಕು ನನಗಿಲ್ಲ. ಅವರು ಹಾಗೆಲ್ಲಾ ಮಾಡುವುದರಿಂದ ನನ್ನ ಅಪ್ಪನ ಮನೆ ಗಂಟೇನೂ ಖರ್ಚಾಗುವುದಿಲ್ಲ! ಆದರೆ ನಂಬಿಕೊಂಡವರನ್ನು ಬೀದಿಗೆ ನಿಲ್ಲಿಸಬೇಡಿ ಎಂಬುದು ಮಾತ್ರ ನನ್ನ ಕಳಕಳೀಯ ಪ್ರಾರ್ಥನೆ.


ಮಹಿಳಾವಾದದ ಕುರಿತಾಗಿ ಬರೆದು ಒಂದಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದೆ. ಈಗಲೂ ಒಂದಷ್ಟು ಮಂದಿಗೆ ನನ್ನ ಕುರಿತು ಸಿಟ್ಟು ಬರಬಹುದು. ವಿವಾದಿತ ವಿಚಾರಗಳನ್ನೇ ಬರೆಯಬೇಕು, ಇನ್ನೊಬ್ಬರ ಮನಸನ್ನು ನೋಯಿಸಬೇಕೆಂಬ ಹಠ ಖಂಡಿತವಾಗಿಯೂ ನನಗಿಲ್ಲ. ಅಥವಾ ಇನ್ನೊಬ್ಬರ ಮನಸು ನೋಯಿಸಿ ನನಗೇನೂ ಲಾಭವೂ ಆಗುವುದಿಲ್ಲ. ಒಂದು ಸಮಸ್ಯೆಯನ್ನು ನಮ್ಮೆಲ್ಲಾ ಪೂರ್ವಾಗ್ರಹಗಳನ್ನು ಬದಿಗಿಟ್ಟು ಆಲೋಚಿಸಿಬೇಕು, ಸಮಸ್ಯೆಯ ಎಲ್ಲಾ ಮಗ್ಗಲುಗಳನ್ನು ನಮ್ಮೆಲ್ಲಾ ಮೊಂಡುತನವನ್ನು ಮೀರಿ ಚಿಂತಿಸಬೇಕೆಂಬುದಷ್ಟೇ ನನ್ನ ಆಶಯ…ಇಷ್ಟಕ್ಕೂ ಮೀರಿ ನೀವು ಕೋಪ ಮಾಡಿಕೊಂಡರೆ ನಾನು ಹೊಣೆಗಾರನಲ್ಲ…

Categories: ಚಿಂತನ ಚಾವಡಿ

ಸರ್ಜಿಮನೆ!

January 13, 2009 · 9 Comments

ಕ್ರಿಷ್ಣಣ್ಣನ ಕಲ್ಪನೆಯ ಹಿಂದೆ ತಲೆ ಕೂದಲು ಹಣ್ಣಾದ ಒಂದಿಷ್ಟು  ಮಂದಿಯ ಬದುಕಿದೆ. ಮಂಜ ಮತ್ತು ಸುಬ್ಬಿಯ ಪಾತ್ರದಲ್ಲಿ  ಕೂಲಿ ಕಾರ್ಮಿಕ  ವರ್ಗದ ಜೀವನ  ಬೆಚ್ಚಗೆ ಅವಿತು ಕುಳಿತಿದೆ. ರಂಗಣ್ಣನ ಹಿಂದೆ ಪುರೋಹಿತ ಮನೆತನಗಳು ಮೈದಳೆದು ನಿಂತಿವೆ. ಅಂಗಡಿ ಅನಸೂಯಮ್ಮ  ಮಲೆನಾಡಿನ ಒಂದಿಷ್ಟು  ವಿಭಿನ್ನ ಮಹಿಳೆಯರ ಸಾಲು ಸೇರುತ್ತಾರೆ. ಇನ್ನೂ ಕಥನಕಾರನಾಗಿ, ಕಥೆಗಾರನಾಗಿ, ಕೊನೆಗೆ ಕಥೆಯೊಳಗೇ ಒಂದಾಗುವ ವಿನಯ್ ಸರ್ಜಿಮನೆ, ಇವತ್ತಿನ ಒಂದು ವಯೋ ವರ್ಗದ, ಸಮಕಾಲೀನ ಹೋರಾಟ, ವಾಸ್ತವಗಳ ಪ್ರತಿಬಿಂಬ. ಇವೆಲ್ಲಕ್ಕಿಂತ ಹೆಚ್ಚಾಗಿ  ಊರು ಬಿಟ್ಟ  ಎಷ್ಟೋ  ಮಂದಿಯನ್ನು  ವಾಪಸ್ ಸೆಳೆದುಕೊಳ್ಳುವ ಶಕ್ತಿ ಹೊಂದಿರುವ ಸರ್ಜಿಮನೆ  ಒಂದು ಪ್ರಾಂತ್ಯದ, ಒಂದಿಷ್ಟು  ಜನಾಂಗದ ದ್ಯೋತಕದಂತಿದೆ. ಇಷ್ಟೆ…ಇವಿಷ್ಟೇ… ಈ ಕಥೆಯ ಹಂದರ.

‘ಏ…ಏ…ಏನಾ ಮಾಣಿ, ಮ…ಮ…ಮ…ಮತ್ತೇನ್ ಸಮಾ…ಮಾ…ಮಾ…ಚಾರ’ ಹಾಗಂತ ಉಗ್ಗುದನಿಯಲ್ಲಿ  ಊರಿಗೆ ಕೇಳುವ ಹಾಗೆ ಕೂಗಿದರು ಅಂದ್ರೆ, ಅವರು ಸರ್ಜಿ ಕ್ರಿಷ್ಣಣ್ಣ ಅಂತಾ ಊರಿನವರ್‍ಯಾರಿಗೂ ಪ್ರತ್ಯೇಕವಾಗಿ ಹೇಳುವುದು ಬೇಡ. ಊರಿನವರಿಗೆ ಮಾತ್ರವಲ್ಲ ಅಕ್ಕಪಕ್ಕದ ಹತ್ತೂರಿಗೂ ಸರ್ಜಿ ಕ್ರಿಷ್ಣಣ್ಣ  ಚಿರಪರಿಚಿತ. ಗೋಪಾಲಕೃಷ್ಣ ರಾವ್ ಎಂ.ಸರ್ಜಿ ಅಲಿಯಾಸ್ ಸರ್ಜಿ ಕ್ರಿಷ್ಣಣ್ಣ  ಊರಿಗೆ ಶಾನೇ ಹಳೇ ಮನುಷ್ಯ. ಅವರಿಂದಾಗಿ ಈ ಊರಿಗೆ ಸರ್ಜಿಮನೆ ಅಂತಾ ಹೆಸರು ಬಂತೋ ಅಥವಾ ಅವರು ಈ ಊರಿನಲ್ಲಿ  ಇರುವುದರಿಂದ ಅವರ ಹೆಸರಿನ ಹಿಂದೆ ಸರ್ಜಿ ಎಂಬ ಅಡ್ಡನಾಮವೊಂದು ಸೇರಿಕೊಂಡಿತೋ ಗೊತ್ತಿಲ್ಲ. ಕ್ರಿಷ್ಣಣ್ಣ ಮಾತ್ರ ತನ್ನಿಂದಲೇ ಈ ಊರಿಗೆ ಸರ್ಜಿಮನೆ ಎಂಬ ಹೆಸರು ಬಂತು ಎಂದು ಇವತ್ತಿಗೂ ವಾದಿಸುತ್ತಾರೆ! ನೀವು ಹುಟ್ಟಿದ ಮೇಲೆ ಈ ಊರು ಹುಟ್ಟಿದ್ದಾ…ಅಂದ್ರೆ ಏ…ಮಾ…ಮಾ…ಮಾಣೀ…ಅಂತಾ ಕೂಗಿಬಿಡುತ್ತಾರೆ. ವಯಸ್ಸಿನಲ್ಲಿ  ಹಿರಿಯರಾದ ಅವರನ್ನು ಕೆಣಕುವ ಚಟ ಸದಾ ನಮ್ಮದಾದರೂ, ಅಕ್ಕಪಕ್ಕದಲ್ಲಿದ್ದವರು ‘ಏ ಮುಂಡೇಗಂಡ್ರಾ ಬೆಳಿಗೆ ಎದ್ದು ಮಾಡಕ್ಕೆ ಬೇರೆ ಕೆಲಸವಿಲ್ಲ್ಯಂದ್ರಾ’ ಅಂತಾ ಬೈಗುಳ ಶುರುಹಚ್ಚಿಬಿಡುತ್ತಾರೆ!

ಕರ್ಮಠ ಹವ್ಯಕರು, ಎಸ್.ಸಿ, ಎಸ್.ಟಿ ಜನಾಂಗದ ಮಂದಿಯನ್ನೇ ಹೆಚ್ಚಾಗಿ ಹೊಂದಿರುವ ಮಲೆನಾಡಿನ ಪುಟ್ಟ  ಊರು ಸರ್ಜಿಮನೆ. ಅಡಕೆ ಇಲ್ಲಿನ  ಪ್ರಮುಖ ಬೆಳೆ. ಭತ್ತ, ಕಬ್ಬು…ಇಂಥ ಸಣ್ಣ  ಪುಟ್ಟ  ಬೆಳೆಗಳೂ ಇವೆ. ಒಟ್ಟಿನಲ್ಲಿ  ಬೇಸಾಯವೇ ಇಲ್ಲಿನ ಬದುಕು. ಹವ್ಯಕ ಭಟ್ಟರು, ಹೆಗಡೆಯವರು ಅಡಕೆ ತೋಟ ನಂಬಿಕೊಂಡು ಬದುಕುತ್ತಿದ್ದರೆ, ಚೌಡನ ಮನೆ ನಾರಣಿ, ತಿಪ್ಪನ ಮನೆ ಸಿದ್ಧ, ಗುತ್ಯನ ಮನೆ ಕಮಲಿ…ಇವರೆಲ್ಲಾ  ತಿಮ್ಮಣ್ಣ ಭಟ್ಟರು, ಗುಂಡಣ್ಣ, ಗಿರಿ ಹೆಗಡೆಯವರ ಮನೆ ತೋಟದ ಕೆಲಸ ನಂಬಿಕೊಂಡು ಬದುತ್ತಿರುವವರು.

ಇದು ಜಗತ್ತಿನ ಯಾವ ಪರಿವೂ ಇಲ್ಲದ ಊರು ಅನ್ನಬಹದು. ಮಲೆನಾಡಿನ ಹಚ್ಚ  ಹಸಿರು, ಚುಮು ಚುಮು ಚಳಿ, ಜಿಟಿ ಜಿಟಿ ಮಳೆ, ಸೂಯ್ ಅನ್ನುವ ತಂಪು ಗಾಳಿ, ಜುಳು ಜುಳು ಸದ್ದನ್ನು  ಮಾಡುತ್ತಾ ವರ್ಷದ ೩೬೫ದಿನವೂ ತುಂಬಿ ತುಳುಕುವ ಅಬ್ಬಿ  ನೀರು…ಇವನ್ನೆಲ್ಲಾ  ನೋಡುತ್ತಾ ಕುಳಿತರೆ ಜಗತ್ತಿನ ಇತರ ಭಾಗದ ಅರಿವು, ಜ್ಞಾನ ಬೇಕೆಂದೇ ಅನ್ನಿಸುವುದಿಲ್ಲ. ಅಂತಹದ್ದೊಂದು ಸೊಗಸಾದ ಊರು. ಮಳೆಗಾಲ ಬಂತೆಂದರೆ ಊರಿಗೆ ರಸ್ತೆ ಸಂಪರ್ಕವೇ ಕಡಿದು ಹೋಗುತ್ತದೆ. ಫೋನು, ಕರೆಂಟುಗಳು ತಿಂಗಳುಗಟ್ಟಲೇ ರಜೆ ಹಾಕಿ ಬಿಡುತ್ತವೆ! ಹೀಗಾಗಿ  ಸಾಕಷ್ಟು  ಕಾಲದವರೆಗೂ ಉಕ್ಕಿ ಹರಿಯುವ ಶರಾವತಿ ದಾಟಿ ಬರುವ ಪ್ರಯತ್ನವನ್ನು ಊರಿನ ಯಾವ ಮಂದಿಯೂ ಮಾಡಿರಲಿಲ್ಲ. ನನ್ನಂಥ  ಒಂದಿಷ್ಟು  ತಲೆಹರಟೆಗಳು ಮಾತ್ರ ಈ ದರಿದ್ರ ಊರಲ್ಲಿ  ಏನಿದೆ ಅಂತಾ ಮೂತಿ ಮುರಿದು ಹೊರಬಂದೆವು!  ಊರಿನವರ್‍ಯಾರೂ ಕಿಸಿಯಲಾಗದ(ಸಾಸಲಾಗದ) ಸಾಧನೆಯನ್ನು  ನಾವು ಮಾಡುತ್ತೇವೆ  ಅಂತಾ ಫೋಸು ಕೊಟ್ಟೆವು!

ಈ ಊರಿಗೆ ಬಹಳಷ್ಟು  ವರ್ಷದ ಇತಿಹಾಸವಿದೆ ಅನ್ನಲಿಕ್ಕೆ  ಸಾಕ್ಷಿಯಂತಿದೆ  ಸರ್ಜಿ ಕ್ರಿಷ್ಣಣ್ಣನ ಎಂ-೮೦ ಸ್ಕೂಟರ್. ಪೆಟ್ರೋಲ್ ಎಂಜಿನ್ ಹೊಂದಿದ್ದರೂ, ವರ್ಷದ ೩೬೫ ದಿನವೂ ಸೀಮೆಎಣ್ಣೆಯಲ್ಲೇ ಓಡುವ ಅದ್ಭುತವಾದ ಬೈಕದು. ಮಾಲೀಕ ಪೆಟ್ರೋಲ್ ಹಾಕಿಸಲಾರೆ ಅಂದಮೇಲೆ ಬೈಕಾದರೂ ಇನ್ನೆಂಥ ಹಠ ಮಾಡೀತು?! ಅಂತಹದ್ದೊಂದು ಬೈಕನ್ನು ರುಂಯ್ಯೋ ಅನ್ನಿಸಿ ಕ್ರಿಷ್ಣಣ್ಣ ಗದ್ದೆಯತ್ತ ಹೊರಟರು ಅಂದ್ರೆ, ಅವರ ಆವತ್ತಿನ ದಿನಚರಿ ಆರಂಭ ಎಂದು ಲೆಕ್ಕ. ಮೊಣಕಾಲನ್ನೂ ಮುಚ್ಚದ ಹಳೇ ಡ್ರಾಯರ್, ಇನ್ನೂ ಕೊಳೆಯಾಗಲು ಜಾಗವೇ ಇಲ್ಲ  ಎನ್ನುತ್ತಿರುವ ಶುಭ್ರ ಬನಿಯನ್ ತೊಟ್ಟು   ಕ್ರಿಷ್ಣಣ್ಣ  ಗದ್ದೆಗೆ ಹೊರಡುವಾಗ ಗಂಟೆ ೧೧ ದಾಟಿರುತ್ತದೆ. ಕ್ರಿಷ್ಣಣ್ಣ  ಕಿಂಗ್ ಬ್ರಾಂಡಿನ ಸಿಗರೇಟು ಸೇದುವ ಸಮಯವಾಗಿರುತ್ತದೆ. ಅವರ ಗದ್ದೆಗೂ, ಮನೆಗೂ ನಡು ಮಾರ್ಗದಲ್ಲಿ  ಶೇಷಣ್ಣನ ಕಿರಾಣಿ ಅಂಗಡಿಯಿದೆ. ಅದು ಊರಿನ ಕೇಂದ್ರಬಿಂದು. ಸೊಸೈಟಿ, ಶಾಲೆ, ಪಂಚಾಯ್ತಿ…ಎಲ್ಲಾ  ಈ ವಠಾರದಲ್ಲೇ  ಇರುವುದು. ಅಂಗಡಿಯಲ್ಲಿ  ಸಿಗರೇಟು ತೆಗೆದುಕೊಂಡ ಕ್ರಿಷ್ಣಣ್ಣ  ಸಿಗರೇಟು ಹಚ್ಚಿ ಒಂದು ದಮ್ಮು  ಎಳೆಯುತ್ತಿದ್ದ  ಹಾಗೆ ಯಾರಾದರೂ ಮಾತಿಗೆ ಸಿಗುತ್ತಾರೆ.

ಉಂಗುರ ಬೆರಳು, ಮಧ್ಯ ಬೆರಳುಗಳ ನಡುವೆ ಸಿಗರೇಟು ಹಿಡಿದ ಕೈ, ಬೈಕಿನ  ಆಕ್ಸಿಲೇಟರ್ ಮೇಲಿರುತ್ತದೆ. ಹರಟೆ ಆರಂಭವಾದರೆ ಕ್ರಿಷ್ಣಣ್ಣ ಸಿಗರೇಟನ್ನು ತಾವು ಸೇದಲು ತೆಗೆದುಕೊಂಡಿದ್ದಾ? ಅಥವಾ ಬೈಕಿಗೆ ಸೇದಿಸಲು ತೆಗೆದುಕೊಂಡಿದ್ದಾ  ಎಂಬ ಅನುಮಾನ ನಮಗೆಲ್ಲಾ. ಇನ್ನೇನೂ ಕೈ ಸುಡುವ ಹಂತಕ್ಕೆ ಬಂತು ಅಂದಾಗ ಕ್ರಿಷ್ಣಣ್ಣನಿಗೆ ಸಿಗರೇಟಿನ ನೆನಪಾಗುತ್ತದೆ. ‘ಮು…ಮು…ಮು…ಮುಂಡೆಗಂಡಾ ನಿನ್ನ ಜೊತೆ ಮಾತಾಡ್ತ ನ…ನ…ನನ್ನ  ಸಿಗರೇಟು ಪೂರಾ ಹೋತು ನೋಡು’ ಅಂತಾ ಬೈಯುತ್ತಾ ಕೊನೆ ದಮ್ಮು ಎಳೆದು ಸಿಗರೇಟನ್ನು ಬಿಸಾಡುತ್ತಾರೆ.  ಪ್ರತಿ ನಿತ್ಯವೂ ಕ್ರಿಷ್ಣಣ್ಣನದ್ದು  ಇದೇ ಗೋಳು!

ಅಲ್ಲಿಂದ ಕಾಲುಕಿತ್ತು, ಗದ್ದೆಯತ್ತ ಹೊರಡುವಾಗ ಮಧ್ಯಾಹ್ನ ೧ ಗಂಟೆಯಾಗಿರುತ್ತದೆ. ೪ ಗಂಟೆ ಸುಮಾರಿಗೆ ಒಂದು ಹಸಿ ಹುಲ್ಲಿನ ಹೊರೆ ಹೇರಿಕೊಂಡು ಮತ್ತೆ ಕ್ರಿಷ್ಣಣ್ಣ  ಅಂಗಡಿ ಹತ್ತಿರ ಪ್ರತ್ಯಕ್ಷರಾಗುತ್ತಾರೆ. ಮತ್ತದೇ ಸಿಗರೇಟು, ಅದೇ ದೃಶ್ಯ…ಐದು ಗಂಟೆಗೆ ಮನೆ ತಲುಪುವ ಅವರು, ನಿತ್ಯವೂ ಊಟ, ಸ್ನಾನ ಮಾಡುತ್ತಾರೋ ಇಲ್ಲವೋ ಎಂಬ ಅನುಮಾನ ನನಗೆ! ಯಾಕೆಂದರೆ ೫.೨೦ರ ಹೊತ್ತಿಗೆ ಅವರು ಬೈಕ್ ಏರಿ ದ್ಯಾವರ ಭಟ್ಟರ ಮನೆಯೆಂಬ ಇಸೀಟು  ಅಡ್ಡೆಯತ್ತ ಹೊರಟು ನಿಂತಿರುತ್ತಾರೆ. ದೇವರ ತಲೆ ಮೇಲೆ ಒಂದು ಹೂವು  ತಪ್ಪಬಹುದು ಆದರೆ ಸರ್ಜಿ ಕ್ರಿಷ್ಣಣ್ಣನ ದಿನಚರಿ ಮಾತ್ರ ತಪ್ಪುವುದೇ ಇಲ್ಲ! ಇಸ್ತ್ರಿ  ಮಾಡಿದ ಪಂಚೆ, ಹಾಲಿಗಿಂತ ಬಿಳುಪಾದ ಅಂಗಿ, ವಾಚು, ಉಂಗುರ…ಅವರು ಇಸೀಟ್ ಆಟಕ್ಕೆ ಹೊರಡುವ ಶೈಲಿ ನೋಡಿದರೆ, ಹುಲ್ಲು  ತರಲು ಹೊರಟ ಕ್ರಿಷ್ಣಣ್ಣ ಇವರೇನಾ? ಎಂಬ ಅನುಮಾನ ಶುರುವಾಗುತ್ತದೆ.
****

ತಿಪ್ಪನ ಮನೆ  ‘ಮಂಜ’ ಚಂದ್ರ ಹೆಗಡೆಯವರ ಮನೆ ಆಳು.  ಮಂಜನ ಅಪ್ಪ  ತಿಪ್ಪನಿಗೆ ಚಂದ್ರು ಹೆಗಡೆ ಮದ್ವೆ ಮಾಡಿಸಿದ ದಿನದಿಂದಲೂ ತಿಪ್ಪನ ಮನೆ ಮಂದಿಯೆಲ್ಲಾ  ಚಂದ್ರ ಹೆಗಡೆಯವರ ಮನೆ ಆಳಂತೆ.  ಮಂಜ, ಮಂಜನ ಹೆಂಡತಿ ಸುಬ್ಬಿ, ಮತ್ತವನ ಪುಟಾಣಿ ಮಕ್ಕಳು ಎಲ್ಲರೂ ವರ್ಷ ಪೂರ್ತಿ ಚಂದ್ರು ಹೆಗೆಡೆ ಮನೆಯ ತೋಟ, ಅಂಗಳದಲ್ಲಿರುತ್ತಾರೆ. ಉಳಿದ ಆಳುಮಕ್ಕಳಿಗೆಲ್ಲಾ  ದಿನಕ್ಕೆ ೭೦ ರೂ. ಸಂಬಳ ಹಾಗೂ ದಿನಕ್ಕೆ ಒಂದು ಸೇರು ಅಕ್ಕಿ. ಆಗಾಗ ಕಾಫಿ, ಕವಳ…೧೦ಗಂಟೆಯಿಂದ ೩ ಗಂಟೆಯವರೆಗೆ ಕೆಲಸ. ಆದರೆ ಚಂದ್ರು ಹೆಗಡೆಯವರ ಮನೆ ಆಳಾಗಿರುವ ಮಂಜನ ಲೆಕ್ಕಾಚಾರವೇ ಬೇರೆ. ಮಂಜ ಕೇಳಿದಾಗಲೆಲ್ಲಾ ಒಡೆಯರು ದುಡ್ಡು ಕೊಡುತ್ತಾರೆ.ಕೆಲಸವಿರಲಿ, ಇರದಿರಲಿ ನಿತ್ಯವೂ ಮಂಜ ಮಾತ್ರ ಒಡೆಯರ ಮನೆ ಕೆಲಸಕ್ಕೆ  ಬರುತ್ತಾನೆ.

ಒಡೆಯರು ತೋಟದ ಕಡೆ ಇಳಿಯುವುದು ಅಡಿಕೆ ಕೊಯ್ಲಿನಲ್ಲಿ  ಮಾತ್ರ. ಅದು ಇಳಿದೇ ಬಿಡುತ್ತಾರೆ ಎಂದೇನಲ್ಲ. ಮೂಡು ಬಂದರೆ ಮಾತ್ರ ತೋಟದ ಕಡೆ ಹೋಗುತ್ತಾರೆ. ಇಸೀಟು, ಗುಂಡಾಲೆ ಮಂಡ್ಲ  ಆಡಿಕೊಂಡು ತಿರುಗುವ  ಚಂದ್ರ ಹೆಗಡೆಯವರಿಗೆ ಕೈಯಲಿದ್ದ  ಕಾಸು ಖಾಲಿಯಾದರೆ  ಮಾತ್ರ ಮನೆ ನೆನಪಾಗುತ್ತದೆ. ತನಗೂ ಹೆಂಡತಿ, ಮಕ್ಕಳು, ಸಂಸಾರ ಇದೆ ಎಂಬ ಅರಿವಾಗುತ್ತದೆ! ಹಾಗಾಗಿ ಮೂರು ಎಕರೆ ತೋಟದ ಜವಾಬ್ದಾರಿಯನ್ನು ಮಂಜ ಹಾಗೂ ಹೆಗಡೆಯವರ ಹೆಂಡತಿ ಸರೋಜಮ್ಮ ನೋಡಿಕೊಳ್ಳುತ್ತಾರೆ.

ಹಾಗಂತ ಸರೋಜಮ್ಮನೂ ನಿತ್ಯ ತೋಟಕ್ಕೆ ಹೋಗುವುದಿಲ್ಲ. ನೆಂಟರ ಮನೆ ಮದ್ವೆ, ಮುಂಜಿ, ಊರು-ಕೇರಿ ಮನೆಯ ಬೊಜ್ಜ, ಹನ್ನೆರಡರ ಮನೆ ಊಟ…ಇವುಗಳಾವುದೂ ಇಲ್ಲದೇ ಹೋದರೆ, ಟಿವಿ ನೋಡಲು ಕರೆಂಟು ಇಲ್ಲವಾದರೇ ಅಪರೂಪಕ್ಕೊಮ್ಮೆ ತೋಟದ ಕಡೆ ಇಳಿಯುತ್ತಾರೆ. ಇಳಿಯುತ್ತಾರೆ ಅನ್ನುವುದಕ್ಕಿಂತ ವಾಕಿಂಗ್ ಹೋಗುತ್ತಾರೆ ಎನ್ನುವುದೇ ಸೂಕ್ತ! ತೋಟದಲ್ಲಿನ ಹಾಳೆ, ಸೋಗೆ ಬಾಚಿ ಮನೆಯಂಗಳಕ್ಕೆ ತಂದುಹಾಕುವ ಕೆಲಸವನ್ನು ಸುಬ್ಬಿ ಮಾಡುತ್ತಾಳೆ. ‘ಮಂಜಾ, ಕಟ್ಟಿಗೆ, ಕುಂಠೆ ಏನೂ ಇಲ್ಲ. ಒಂದಿಷ್ಟು  ಸೌದೆ ತಂದು ಹಾಕು’ಎಂದರೆ ಸಾಕು. ಹಸು, ಹಟ್ಟಿ…ಇವೆಲ್ಲಾ  ಸುಬ್ಬಿಯದ್ದೇ ಜವಾಬ್ದಾರಿ. ಹೀಗಾಗಿ ಸರೋಜಮ್ಮ ಕಾಲು ನೋವು ಮಾಡಿಕೊಂಡು ತೋಟಕ್ಕೆ ಇಳಿಯುವ ಪ್ರಮೇಯವೇ ಬರುವುದಿಲ್ಲ.

ಗಂಡನಂತೆ ತಿರುಗಿಕೊಂಡಿರುವ ಸರೋಜಮ್ಮ ಕಟ್ಟುನಿಟ್ಟಾಗಿ ಮನೆಯಲ್ಲಿ ಇರುವುದು ನವೆಂಬರ್-ಡಿಸೆಂಬರ್‌ನ ಕೊನೆ ಕೊಯ್ಲಿನ ಟೈಂನಲ್ಲಿ  ಮಾತ್ರ. ಅಡಿಕೆ ಸುಲಿದು, ಒಣಗಿ ಅಟ್ಟಕ್ಕೆ  ಸೇರುವವರೆಗೆ ಸರೋಜಮ್ಮ ಜವಬ್ದಾರಿಯುತ ಗೃಹಿಣಿಯಾಗಿರುತ್ತಾರೆ ಅನ್ನಬಹುದು. ಹಾಗಂತ ತೀರಾ ಹತ್ತಿರದ ನೆಂಟರ ಮನೆ ಊಟವಿದ್ದರೆ ತಪ್ಪಿಸಿಕೊಳ್ಳುವುದಿಲ್ಲ. ‘ಸುಬ್ಬಿ  ಇವತ್ತು ನಮ್ಮ ಬಾವುಗಳ (ಗಂಡನ ಅಣ್ಣ) ಮಾವನ ತಿಥಿ. ಅವರೂ(ಗಂಡ) ಊರಲ್ಲಿ  ಇಲ್ಲ. ಅಡಿಕೆ ಬೇರೆ ಅಂಗಳದಲ್ಲಿದೆ. ಒಂಚೂರು ನೋಡಿಕೊಂಡು ಬಿಡು. ನಾನು ಮಧ್ಯಾಹ್ನದ ಮಟ್ಟಿಗೆ ಹೋಗಿ ಬಂದುಬಿಡುತ್ತೇನೆ’ ಅಂತಾ ರಾಗ ಎಳೆದು ಸುಬ್ಬಿ  ತಲೆ ಮೇಲೆ ಜವಾಬ್ದಾರಿ ಹೊರಿಸಿ ಹೋಗಿಬಿಡುತ್ತಾರೆ. ಒಟ್ಟಲ್ಲಿ  ಮಂಜನಿಂದಲೇ ಚಂದ್ರ ಹೆಗಡೆ ಮನೆ ಸಂಸಾರ ಅಂದ್ರೆ ತಪ್ಪಿಲ್ಲ.

‘ಹೊರಗಡೆ ಜಗಲಿ ಮೇಲೆ ಊಟ ಹಾಕುತ್ತಾರೆ. ಮುಟ್ಟಿಸಿಕೊಳ್ಳುವುದಿಲ್ಲ, ಒಳಗೆ ಬಿಡುವುದಿಲ್ಲ  ಅನ್ನುತ್ತಾರೆ. ಅಂಥವರ ಮನೆ ಏಳಿಗೆಗಾಗಿ ನೀನು ಕತ್ತೆ ತರ ದುಡಿತೀಯಲ್ಲ, ನಿನಗೇನು ಅನ್ನಿಸುವುದೇ ಇಲ್ವಾ?’ ಹಾಗಂತ ಊರಿಂದ ಹೊರಬಿದ್ದ ನನ್ನಂಥವರು ತೀರಾ ಬುದ್ಧಿ ಜೀವಿಗಳ ತರಹ ಮಂಜನನ್ನು ಪ್ರಶ್ನೆ ಮಾಡುತ್ತೇವೆ. ಒಡೆಯರ ಬಗ್ಗೆ  ಹಾಗೆಲ್ಲಾ  ಮಾತಾಡಬೇಡಿ ಅಂತಾ ರೇಗುತ್ತಾನೆ. ‘ಅವರು ಜಗಲಿ ಮ್ಯಾಕೆ  ನೀರು ಕೊಟ್ಟರೂ, ಪಿರೀತಿಯಿಂದ ಕೊಡ್ತಾರೆ. ಹೋಳಿಗೆ, ಕಡುಬು…ಏನು ಮಾಡಿದರೂ ನನಗಾಗಿ ಇಡುತ್ತಾರೆ. ಮಕ್ಕಳಿಗೆ ಬಟ್ಟೆ  ತರುವಾಗ ನನಗೂ  ತರುತ್ತಾರೆ…ಅವಿಷ್ಟು  ಬುಟ್ಟು (ಬಿಟ್ಟು) ನನಗೇನೂ ತಿಳಿವಲ್ಲದು ವಯ್ಯಾ…’ನಗುತ್ತಾ ಉತ್ತರಿಸುತ್ತಾನೆ. ಜಪ್ಪಯ್ಯಾ ಅಂದರೂ ಮಂಜನ  ಆಲೋಚನೆ ತಿದ್ದಲಾಗದ ನನ್ನಂಥವ ನಿರಾಶೆಯಿಂದ ಬೆಂಗಳೂರಿಗೆ  ವಾಪಸ್ ಬರುತ್ತೇನೆ.

ಮಂಜನ ಹೆಂಡತಿ ಸುಬ್ಬಿ , ಮಂಜನಿಗಿಂತ ಭಿನ್ನ  ವ್ಯಕ್ತಿತ್ವದವಳೇನಲ್ಲ. ಒಡೆಯರ ಮನೆ  ಅಂದ್ರೆ ದೇವಾಲಯಕ್ಕೆ ಸಮನಾದದ್ದು  ಎಂದು ಭಾವಿಸಿರುವವಳು. ಕುಡಿದ  ಅಮಲಿನಲ್ಲಿ  ಮಂಜ ಅಪರೂಪಕ್ಕಾದರೂ ಒಡೆಯರನ್ನು  ಬೈದಾನು! ಆದರೆ ಸುಬ್ಬಿ  ಹಾಗಲ್ಲ…ತನ್ನ  ಮಕ್ಕಳಿಗೂ ಒಡೆಯರ ಕುರಿತಾಗಿ, ಒಡೆಯರ ಮನೆಯ ಕುರಿತಾಗಿ ಅದ್ಭುತ ಚಿತ್ರಣವನ್ನು  ಕಟ್ಟಿಕೊಟ್ಟಿದ್ದಾಳೆ. ಸರೋಜಮ್ಮ  ಮಧ್ಯರಾತ್ರಿಯಲ್ಲಿ  ಹೇಳಿಕಳುಹಿಸಿದರೂ  ಸುಬ್ಬಿ  ಓಡಿಹೋಗುತ್ತಾಳೆ. ಗಂಡು ಆಳಿನಷ್ಟೇ  ಕೆಲಸ ಮಾಡಬಲ್ಲ  ಸುಬ್ಬಿ, ಮಂಜ ಇಲ್ಲದಿದ್ದಾಗ  ಒಡೆಯರ ಮನೆಯ ಅಷ್ಟೂ  ಕೆಲಸವನ್ನು  ಒಬ್ಬಳೇ ನಿಭಾಯಿಸುತ್ತಾಳೆ.

ಮಂಜನನ್ನು  ಚಂದ್ರ ಹೆಗಡೆ ಮನೆಯ ಕೆಲಸದಿಂದ ಬಿಡಿಸಬೇಕು ಅಂತಾ ಚೌಡನ ಮನೆ ನಾರಣಿ, ಪರಮೇಶ್ವರ ಹೆಗಡೆ ಅಲಿಯಾಸ್ ಪರಮಯ್ಯ ಸಾಕಷ್ಟು  ಸಲ ಪ್ರಯತ್ನ ಮಾಡಿದರು. ಶಕುನಿಗಿಂತ ಅದ್ಭುತವಾದ ಕ್ಷುಲಕ ರಾಜಕೀಯ ತಂತ್ರ ರೂಪಿಸಿದರು. ಪರಮೇಶ್ವರ ಹೆಗಡೆ ಕುತಂತ್ರದಿಂದ ಮಂಜ ಕೆಲಸ ಬಿಡುತ್ತಿದ್ದನೇನೋ…ಆದರೆ ಸುಬ್ಬಿ  ಅದಕ್ಕೆ  ಅವಕಾಶ ಮಾಡಿಕೊಡಲಿಲ್ಲ. ಇದರಿಂದ ಕುಪಿತಗೊಂಡ ನಾರಣಿ ಹಾಗೂ ಪರಮಯ್ಯ, ಸುಬ್ಬಿ ಮತ್ತು ಚಂದ್ರು ಹೆಗಡೆಗೆ ಅನೈತಿಕ ಸಂಬಂಧವಿದೆ ಅಂತಾ ಸುದ್ದಿ  ಹಬ್ಬಿಸಿದರು. ಸುಬ್ಬಿ , ಚಂದ್ರು ಹೆಗಡೆ ಇಟ್ಟುಕೊಂಡವಳು…ಹಾಗಂತ ಮಂಜನೇ ಊರು ತುಂಬಾ ಸಾರಿದ! ಈ ಸುದ್ದಿ  ಚಂದ್ರು ಹೆಗಡೆ ಮನೆಯಂಗಳಕ್ಕೂ ತಲುಪಿತು.

ಅಷ್ಟೊತ್ತಿಗೆ ಸುಬ್ಬಿಯಿಂದ ಬೈಸಿಕೊಂಡ ಮಂಜ ಸರಿಯಾಗಿಬಿಟ್ಟಿದ್ದ! ತನ್ನ  ತಪ್ಪಿನ  ಅರಿವು ಆತನಿಗಾಗಿತ್ತು. ಸಣ್ಣದೊಂದು ಪಂಚಾಯ್ತಿಯ ಮೂಲಕ ಪ್ರಕರಣ ಬಗೆಹರಿಯಿತು. ಈ ಇತರೆ ಜನಾಂಗದವರ(ಕೆಳಜಾತಿ) ಹಣೆಬರಹವೇ ಅಷ್ಟು  ಅಂತಾ ಊರು ತೆಪ್ಪಗಾಯಿತು. ಮಂಜನ ಪ್ರಕರಣ ಅಂತ್ಯವಾಯಿತು. ಅಂಗಡಿ ಅನಸೂಯಮ್ಮನ  ಸ್ಪೆಷಲ್ ಇನ್ವೆಸ್ಟಿಗೇಷನ್‌ನಿಂದ ಈ ಪ್ರಕರಣದ ಹಿಂದೆ ನಾರಣಿ ಹಾಗೂ ಪರಮಯ್ಯನ  ಕೈವಾಡ ಇರುವುದು ಬೆಳಕಿಗೆ ಬಂತು. ಅದಾದ ನಂತರ ಪರಮಯ್ಯನ ಬಣ್ಣವೂ ಬಯಲಾಯಿತು.  ಪರಮೇಶ್ವರ ಹೆಗಡೆ ಮತ್ತು ಬೊಮ್ಮನ ಮನೆ ಸೋಮಿ ನೀಲಗಿರಿ ಬೆಟ್ಟದ ಚರಂಡಿ ಹತ್ತಿರ ಅದೆಂತದೋ ಮಾಡುತ್ತಿದ್ದದ್ದನ್ನು  ನೋಡಿ ಬಂದ ಗುತ್ತ್ಯನ ಮನೆ ಕಮಲಿ, ಊರಿಗೆಲ್ಲಾ  ಸುದ್ದಿ ಕೊಟ್ಟಳು. ಊರಿಗೆ ಊರೇ ನೀಲಗಿರಿ ಬೆಟ್ಟದತ್ತ ಓಡಿ ಹೋಯಿತು…ಪರಮಯ್ಯ ಮತ್ತು ಸೋಮಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದರು!

ಇದಕ್ಕೆಲ್ಲಾ  ನೇರಲೇಕೆರೆ ಭೂತವೇ ಕಾರಣ, ಪರಮಯ್ಯನ  ಮೈ ಒಳಗೆ ಭೂತ  ಹೊಕ್ಕಿದೆ. ಅದರ ಪ್ರಭಾವದಿಂದ  ಆತ ಕೆಟ್ಟವನಾದ..ಹಾಗಂತ ಕ್ವಾಡ್ಷರದ ರಂಗಣ್ಣ  ಕವಡೆ ಹಾಕಿ ಶಕುನ ಹೇಳಿದ. ರಂಗಣ್ಣನ  ನೇತೃತ್ವದಲ್ಲಿ  ಶಾಂತಿ, ಹೋಮಗಳು ನಡೆದವು…ಆ ಪ್ರಕರಣವೂ ಅಲ್ಲಿಗೆ  ಅಂತ್ಯವಾಯಿತು.
ಇದನ್ನೆಲ್ಲಾ  ನೋಡಿ  ಬೆಂಗಳೂರಿಗೆ ಬಂದ  ನಾನು,  ‘ದಲಿತರು ಆಲೋಚನಾ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಅವರು ಆಲೋಚನೆ ಮಾಡಲಾಗದಷ್ಟರ ಮಟ್ಟಿಗೆ ಬ್ರಾಹ್ಮಣರು ಅವರನ್ನು ತುಳಿದಿದ್ದಾರೆ…’ ಅಂತಾ ದಪ್ಪ, ದಪ್ಪ ಅಕ್ಷರದಲ್ಲಿ  ಪತ್ರಿಕೆಯಲ್ಲಿ ಬರೆಯುತ್ತೇನೆ. ಲೋಹಿಯಾ ವಾದ, ಮಾರ್ಕ್ಸ್‌ವಾದ ಅಂತಾ ಅಬ್ಬರಿಸುತ್ತೇನೆ. ನಾಲ್ಕಾರು ಜನರಿಂದ ಶಹಬ್ಬಾಸ್ ಅಂತಾ ಬೆನ್ನು  ತಟ್ಟಿಸಿಕೊಳ್ಳುತ್ತೇನೆ. ನಾನು ಹಾಗೆಲ್ಲಾ  ಬರೆದು, ಮುಂದಿನ ಸಲ ಊರಿಗೆ ಹೋದಾಗಲೂ ಮಂಜ, ಸುಬ್ಬಿ  ಮೊದಲಿನಂತೆ ಇರುತ್ತಾರೆ. ಚಂದ್ರು ಹೆಗಡೆ, ಸರೋಜಮ್ಮ ಬದಲಾಗಿರುವುದಿಲ್ಲ.  ನನ್ನ  ಸಾಮಾಜಿಕ ಕಳಕಳಿ ಊರಿನವರ್‍ಯಾರಿಗೂ ಗೊತ್ತೇ  ಆಗುವುದಿಲ್ಲ!  ಆದರೂ, ಸರ್ಜಿಕೇರಿಯಿಂದ ಹೊರಬಂದ  ನಾನು ಕ್ರಾಂತಿ ಮಾಡಿದೆ ಎಂಬ ಅಹಂ ನನಗೆ! ಸರ್ಜಿಮನೆಯಿಂದ ಹೊರಬಂದಿರುವುದೇ ದೊಡ್ಡ  ಸಾಧನೆ ಎಂಬ ಭ್ರಮೆ ನನಗೆ…!!!
*****

‘ಕ್ವಾಡ್ಷರದ ರಂಗಣ್ಣ. ಭಸ್ಮ, ತಾಯಿತಾ ಮಂತ್ರಿಸಿ ಕೊಡ್ತಾ. ಭೂತ, ಪ್ರೇತದಿಂದ ಬಂದ ಎಂಥಾ ಕಾಯಿಲೆ ಇದ್ದರೂ ಹುಷಾರು ಮಾಡ್ತಾ…’ಸರ್ಜಿಮನೆ ಊರಿಗೆ ಕಾಲಿಟ್ಟ  ಪ್ರತಿಯೊಬ್ಬನ ಕಿವಿಗೂ ಇಂಥದ್ದೊಂದು ಸಾಲು ಬಿದ್ದೇ ಬೀಳುತ್ತದೆ. ಡಾಕ್ಟರು, ಇಂಜೆಕ್ಷನ್ನು…ಇಂಥ  ಪದಗಳೆಲ್ಲಾ  ಇತ್ತೀಚೆಗೆ ಸರ್ಜಿಮನೆಯ ಅಂಗಳಕ್ಕೆ ಕಾಲಿಟ್ಟಿದೆ. ಆದ್ರೂ ಊರವರ ದೃಷ್ಟಿಯಲ್ಲಿ  ಇವತ್ತಿಗೂ ಕ್ವಾಡ್ಷರದ ರಂಗಣ್ಣ ಮಾತ್ರ ವೈದ್ಯ! ಈ ಊರಲ್ಲಿ ಬ್ಯಾಕ್ಟೀರೀಯಾ, ಫಂಗಸ್ಸುಗಳಿಂದ ಕಾಯಿಲೆ ಬರುವುದೇ ಇಲ್ಲ. ಜಟ್ಕಾ, ಚೌಡಿ, ನೆರಲೇಕೆರೆ ಭೂತ…ಇವುಗಳಿಂದ ಬರುವ ಕಾಯಿಲೇಯೇ ಹೆಚ್ಚು.

‘ಓಂ, ಹ್ರೀಂ, ಥೋಂ…’ಹಾಗಂತ ಅದೆಂಥದೋ ಮಣ, ಮಣ ಮಂತ್ರ ಹೇಳಿ ರಂಗಣ್ಣ ತೀರ್ಥ(ನೀರು!!!) ಸೋಕಿದರೆ ಕೆಲವರಿಗೆ ಕಾಯಿಲೆ ಗುಣವಾಗುತ್ತದೆ. ‘ಜಟ್ಕಾನಿಗೆ ಹಣ್ಣುಕಾಯಿ ಕೊಡು, ಚೌಡಿಗೆ ಹಾಲು ಪಾಯಸ ಮಾಡಿ ಒಪ್ಪಿಸು, ನಿಮ್ಮ ಮನೆಗೆ ನಾಗರಿ(ಸರ್ಪ) ತೊಂದರೆ ಇದೆ, ನಾಗರಕಲ್ಲಿಗೆ ಪಂಚಾಮೃತದ ಅಭಿಷೇಕ ಮಾಡಿಸು…’ ಹಾಗಂತ ರಂಗಣ್ಣ ನೀಡಿದ ಸಲಹೆ ಸ್ವೀಕರಿಸಿ ಗುಣಮುಖರಾಗುವ ಮಂದಿಯೂ  ಈ ಊರಲ್ಲಿ  ಅನೇಕರಿದ್ದಾರೆ!

ರಂಗಣ್ಣನ  ಅಬ್ಬರ  ನೋಡಿದ  ನಾನು, ಊರಿಗೆ ಹೋದಾಗಲೆಲ್ಲಾ  ‘ರಂಗಣ್ಣ ನೀಡಿದ ಸಲಹೆಯಿಂದ ಆ ಕಾಯಿಲೆ ಗುಣವಾಗಿದ್ದಲ್ಲ…’ಹಾಗಂತ ನನ್ನ ಮಾತು ಕೇಳುವ ನಾಲ್ಕು ಮಂದಿ ಮುಂದೆ ನಾನು  ಭಾಷಣ ಬಿಗಿಯುತ್ತೇನೆ. ‘ಮತ್ತೆ ಹೇಗೆ ಕಾಯಿಲೆ ಹುಷಾರಾಯಿತು ಎಂದು ಹೇಳು, ಸಾಬೀತು ಮಾಡು…’ ಅಂತಾ ಅವರು ತಿರುಗಿ ಹಾಕುವ ಪ್ರಶ್ನಗೆ ನನ್ನಲ್ಲಿ  ಉತ್ತರವೆಲ್ಲಿದೆ?! ನಾನೆಷ್ಟೇ ಬಡಿದುಕೊಂಡರೂ ಶೇಷಜ್ಜ, ಶಣ್ಣಣ್ಣ, ಕ್ರಿಷ್ಣಣ್ಣ, ತಿಪ್ಪನ ಮನೆ ಮಂಜ…ಇವರ್‍ಯಾರೂ ನಿಲುವು ಬದಲಾಯಿಸಿ ಕೊಳ್ಳುವುದಿಲ್ಲ. ನಾನಲ್ಲ  ಸಾಕ್ಷಾತ್ ಜಟ್ಕಾ, ಭೂತವೇ ಬಂದು ನಿನಗೆ ಬಂದಿರುವುದು ಕಾಲರಾ, ಏಡ್ಸ್ ಅಂದರೂ ಅವರೆಲ್ಲಾ  ಒಪ್ಪಲು ತಯಾರಿಲ್ಲ! ಹಾಗಾಗಿ ಇತ್ತೀಚೆಗೆ ನಾನು, ನನ್ನ  ನಿಲುವನ್ನು ಬದಲಿಸಿಕೊಳ್ಳಲು ಸಿದ್ಧನಾಗುತ್ತಿದ್ದೇನೆ. ಏಡ್ಸ್=ಜಟ್ಕಾ, ಪ್ಲೇಗ್=ಚೌಡಿ, ಕ್ಯಾನ್ಸರ್=ನೆರಲೆಕೆರೆ ಭೂತ…ಎಂಬ ಹೊಸ ಲೆಕ್ಕಾಚಾರವನ್ನು ಕಲಿಯಲು ಸಜ್ಜಾಗಿದ್ದೇನೆ!

ರಂಗಣ್ಣನ ಉಸ್ತುವಾರಿಯಲ್ಲಿ  ಈ ಊರಿನಲ್ಲಿ  ವರ್ಷಕ್ಕೆ ನೂರಾರು ಶಾಂತಿಗಳು, ಹತ್ತಾರೂ ಹೋಮಗಳು…ನಡೆಯುತ್ತವೆ. ಊರಿನ ಜನರೆಲ್ಲಾ  ಸೇರಿ ಊಟಮಾಡಿ, ಹರಟೆಹೊಡೆದು ಅವರಿವರ ಮನೆ ಸಂಬಂಧದ ಕುರಿತು ಮಾತಾಡಿ ಹೋಗುತ್ತಾರೆ. ಶೇಷಗಿರಿ ಭಟ್ಟರ ಮನೆ ಗಣೇಶ, ಸುಬ್ಬಿ ಮನೆ ನೀಲಾ ಊರಾಚೆಗಿನ ನೀಲಗಿರಿ ಪ್ಲಾಂಟೇಶನ್‌ನಲ್ಲಿ  ಏನೋ ಮಾಡುತ್ತಿದ್ದುದನ್ನು, ಚಂದ್ರು ಹೆಗಡೆ ಹೆಂಡ್ತಿ ಸರೋಜಮ್ಮ, ಗೋಪಾಲಯ್ಯ ಒಟ್ಟಿಗೆ  ಯಾವ ಕಡೆಯೋ ಹೋಗಿದ್ದನ್ನು ಅಲ್ಲಿ  ನೆರೆದವರಲ್ಲಿ ಒಬ್ಬರು ಪ್ರಸ್ತಾಪಿಸುತ್ತಾರೆ. ಅದರ ಮೇಲೆ ಘನ  ಘೋರ ಚರ್ಚೆಯೇ ನಡೆಯುತ್ತದೆ. ಬೆಂಗಳೂರಿನಿಂದ ಅಪರೂಪಕ್ಕೆ ಮನೆಗೆ ಹೋದ ನನ್ನಂಥವ ಈ ಚರ್ಚೆಯಿಂದ ಇಷ್ಟು  ಜನರಿಗೆ ಏನು ಪ್ರಯೋಜನವಾಯಿತು ಎಂಬುದನ್ನು ಲೆಕ್ಕಾಚಾರ ಹಾಕುತ್ತೇನೆ. ನನ್ನೊಳಗಿನ ಅಸಮಾಧಾನವನ್ನು ಅಕ್ಕ-ಪಕ್ಕದವರಲ್ಲಿ  ತೋರಿಸಿಕೊಳ್ಳುತ್ತೇನೆ. ಯಾರಾದರೂ ನನ್ನ  ಅಸಮಾಧಾನಕ್ಕೆ ಸ್ಪಂದಿಸಿದರೆ ಪುಟ್ಟದೊಂದು ಭಾಷಣ ಆರಂಭಿಸುತ್ತೇನೆ!

ದೇವರ ಪೂಜೆ, ಸಂಧ್ಯಾವಂದನೆ…ಇತ್ಯಾದಿ ಕಾರ್ಯಗಳಲ್ಲೇ ದಿನ ಕಳೆಯುವ ರಂಗಣ್ಣ ಬೆಂಗಳೂರಿನ ಪುಢಾರಿ ಪುರೋಹಿತರ ತರದವನಲ್ಲ. ದೇವರ ಹೆಸರಲ್ಲಿ  ಜನರನ್ನು ಸುಲಿಗೆ ಮಾಡುವುದಿಲ್ಲ.  ಕರ್ಮಠ ಮಠಗಳಲ್ಲಿ  ಪೌರೋಹಿತ್ಯದ ಕೋರ್ಸ್ ಮಾಡಿದವನೂ ಅಲ್ಲ! ರುದ್ರ, ಚಮಕಗಳು ಅವನಿಗೆ ಗೊತ್ತಿಲ್ಲ. ದೇವಿ ಮಹಾತ್ಮೆ, ಗಣ ಹೋಮದ ಮಂತ್ರಗಳು ಆತನಿಗೆ ಬರುವುದಿಲ್ಲ. ಚಾಮುಂಡಿಯ ಆಶಿರ್ವಾದ ಆತನಿಗಿದೆ, ಪ್ರತಿ ಶುಕ್ರವಾರ ಆತನ ಮೈಮೇಲೆ ಚಾಮುಂಡಿ ಬರುತ್ತಾಳೆ ಎಂಬುದು ಊರವರ ನಂಬಿಕೆ! ಆತನ ಬಾಯಿಂದ ಬರುವುದೆಲ್ಲಾ  ಚಾಮುಂಡಿ ದೇವಿ ಆಡುವ ಮಾತುಗಳು ಅಂತಾ ಎಲ್ಲರೂ ನಂಬುತ್ತಾರೆ. ಕವಡೆ ಎಸೆದು ಕಾಯಿಲೆ ಹುಷಾರು ಮಾಡುವ ರಂಗಣ್ಣನನ್ನು  ನೋಡಿದರೆ  ಎಂಥಹವರಿಗೂ ಅಚ್ಚರಿಯಾಗುತ್ತದೆ.

ತಾನು ಸೋಕುವ ತೀರ್ಥಕ್ಕೆ ಹಣ ಪಡೆಯುವುದಿಲ್ಲ.  ದುಡ್ಡು  ಕೊಡಲು ಹೋದರೆ, ಅಮ್ಮನವರ ದೇವಾಸ್ಥಾನಕ್ಕೋ, ಶನಿಶ್ವರನ ಗುಡಿಗೋ ಕಾಣಿಕೆ ಹಾಕಿಬಿಡಿ ಅನ್ನುತ್ತಾನೆ. ಹಾಗಂತ ಆತನೇನು ಹೇಳುವಷ್ಟು  ಶ್ರೀಮಂತನಲ್ಲ. ದೇವರ ಹೆಸರಲ್ಲಿ  ದುಡ್ಡು  ಮಾಡಿಕೊಳ್ಳುವುದು ಮಹಾಪಾಪ ಎಂದು ನಂಬಿರುವವ. ಧರ್ಮ, ದೇವರು…ಉತ್ತಮ ಸಮಾಜ ನಿರ್ಮಿಸುವ ಕನಸು ಹೊಂದಿರುವವ. ಹಾಗಾಗಿಯೇ ಊರಿನ ಜನಕ್ಕೆ ಆತನ  ಮೇಲೆ ವಿಪರೀತ ನಂಬಿಕೆ. ರೋಗಿಗಳನ್ನು ಪರಿಪರಿಯಾಗಿ ಸುಲಿಗೆ ಮಾಡುವ ಇಂಗ್ಲಿಷ್ ವೈದ್ಯರ ಮೇಲೆ ವಿಪರೀತ ಅಪನಂಬಿಕೆ. ಹಾಗೆ ನೋಡಿದರೆ ನಮ್ಮ  ವಿದ್ಯಾವಂತ ವೈದ್ಯರಿಗಿಂತ ರಂಗಣ್ಣ  ಎಷ್ಟೋ ಲೇಸು. ಇಲ್ಲಸಲ್ಲದ ಕಾಯಿಲೆಗಳನ್ನೆಲ್ಲಾ  ಆರೋಪಿಸಿ, ರೋಗಿಗಳನ್ನು ಪ್ರಯೋಗ ಪಶುವನ್ನಾಗಿಸಿಕೊಂಡು ಕಾರು, ಬಂಗಲೆ ಸಂಪಾದಿಸುವ ವೈದ್ಯರು, ರಂಗಣ್ಣನಿಗೆ ಯಾವ ವಿಚಾರದಲ್ಲೂ ಸರಿಸಮಾನರಲ್ಲ  ಅನ್ನಿಸತ್ತೆ ನನಗೆ. ರಂಗಣ್ಣ  ಲಕ್ಷಗಟ್ಟಲೇ ಖರ್ಚು ಮಾಡಿ ಎಂಬಿಬಿಎಸ್ ಓದಲಿಲ್ಲ. ರೋಗಿಗಳ ಹತ್ತಿರ ಸುಲಿಗೆಯನ್ನೂ ಮಾಡುವುದಿಲ್ಲ  ಅಂತಲೂ ಅನ್ನಿಸತ್ತೆ ಎಷ್ಟೋ ಸಲ.

ರಂಗಣ್ಣ, ನನ್ನ ಅಪ್ಪ  ಎಂಬ ಪೂರ್ವಾಗ್ರಹದಿಂದ ಯಾವತ್ತೂ ನಾನು ಅವನನ್ನು  ಹೊಗಳಲಿಲ್ಲ. ಸಣ್ಣವನಿದ್ದಾಗ ನೋಡಿ ಅನುಭವಿಸಿದ ಅನುಭವಗಳೇ ರಂಗಣ್ಣನ ಕುರಿತು ನನ್ನಲ್ಲಿ ವಿಭಿನ್ನವಾದ ಪರಿಕಲ್ಪನೆ ಮೂಡಿಸಿದೆ.

*****

‘ಮಾಣಿ ಎತ್ತಲ್ಯಾಗ ಹೊಂಟ್ಯಾ, ಬಾರಾ ಇಲ್ಲಿ. ಒಂಚೂರು ಮಾತಾಡ ಕೆಲ್ಸ  ಇದ್ದು. ಅಲ್ದಾ , ಅಚಿಗೆ ಮೀನಾಕ್ಷಕ್ಕನ ಮನೇಲಿ ಅದೆಂಥೋ ಗಂಡ ಹೆಂಡತಿ ಜಗಳವಡಲಾ? ನಿಂಗೆಂತಾರೂ ಸುದ್ದಿ  ಗೊತಾತನಾ…’ ಹೀಗೆಲ್ಲಾ ಬಾಯಿ ಸೆಳೆಯುತ್ತಾ, ವಿಚಿತ್ರವಾಗಿ ರಾಗ ಎಳೆಯುತ್ತಾ ಅಂಗಡಿ ಅನಸೂಯಮ್ಮ  ಯಾರನ್ನಾದರೂ ಮಾತಾಡಿಸಿದರು ಅಂದ್ರೆ, ಅದರ ಹಿಂದೊಂದು ಮಸಲತ್ತಿದೆ ಎಂಬುದು ಖಚಿತ. ಅಂಗಡಿ ಅನಸೂಯಮ್ಮ  ಅಂದ್ರೆ ಶಕುನಿ ಮನೆತನದವಳು ಅಂತಾ ಎಲ್ಲರಿಗೂ ಗೊತ್ತಿದೆ. ಆದ್ರೂ ಎಲ್ಲರೂ ಅಂಗಡಿ ಅನಸೂಯಮ್ಮನ ಹತ್ತಿರ ಗಂಟೆಗಟ್ಟಲೇ ಇನ್ನೊಬ್ಬರ ಮನೆ ಸಂಸಾರದ ಸುದ್ದಿ  ಮಾತಾಡುತ್ತಾರೆ! ಆಚೀಚೆ ಮನೆ ಸುದ್ದಿ  ಸಂಗ್ರಹಿಸುತ್ತಾ, ಊರಿನಲ್ಲಿರುವ ಮೂರು ಮತ್ತೊಂದು ಮಂದಿಯ ನಡುವೆ ಜಗಳ ಹಚ್ಚಿಹಾಕುವುದೇ ಅನಸೂಯಮ್ಮನ ನಿತ್ಯದ ಕಾಯಕ.

ಕಾಂಗ್ರೆಸ್, ಬಿಜೆಪಿ, ದಳ…ಯಾವುದಾದರೂ ರಾಜಕೀಯ ಪಕ್ಷದಲ್ಲಿ  ಗುರುತಿಸಿಕೊಂಡಿದ್ದರೂ, ಪದ್ಮನಾಭ ನಗರದ ಕ್ಷುದ್ರ ಮಾಂತ್ರಿಕನಿಗಿಂತ ಚತುರ ರಾಜಕಾರಣಿಯಾಗುವಷ್ಟು  ಸಾಮರ್ಥ್ಯ ಅನಸೂಯಮ್ಮನಲ್ಲಿದೆ! ಹಾಗಂತ ಜಗಳ ಹಚ್ಚಿ  ಇನ್ನೊಬ್ಬರ ಸಂಸಾರ ಹಾಳು ಮಾಡಬೇಕೆಂಬುದು ಅನಸೂಯಮ್ಮನ ಉದ್ದೇಶವಲ್ಲ. ಊರಲ್ಲಿ  ತಾನು  ಎಲ್ಲಾ  ಹೆಂಗಸರಿಗಿಂತ ಹೆಚ್ಚು  ಹೆಸರು ಗಳಿಸಬೇಕೆಂಬ ಹೆಬ್ಬಯಕೆಯಷ್ಟೇ. ಆತಿಥ್ಯಕ್ಕೆ, ಉಪಚಾರಕ್ಕೆ, ಕೊಟ್ಟು-ತಗೊಂಡು ಮಾಡಿಕೊಳ್ಳುವ ವಿಚಾರಕ್ಕೆ ಅನಸೂಯಮ್ಮ  ತುಂಬಾ ಒಳ್ಳೇ ಹೆಂಗಸು. ಮನೆಗೆ ಹೋದವರಿಗೆ ಊಟ ಹಾಕದೇ, ಕಾಫಿ ಕೊಡದೆ, ಖಾಲಿ ಹೊಟ್ಟೆಯಲ್ಲಿ  ವಾಪಸ್ ಕಳುಹಿಸುವ ಜಾಯಮಾನ ಅನಸೂಯಮ್ಮನದ್ದಲ್ಲ. ಆದ್ರೂ ಕಂಡವರ ಸಂಸಾರದ ಸುದ್ದಿ  ಅಂದ್ರೆ ಅವಳಿಗೆ ಬಲು ಪ್ರೀತಿ!

ಅನಸೂಯಮ್ಮನ ನೇತೃತ್ವದಲ್ಲಿ  ಗಂಡ-ಹೆಂಡತಿ ಜಗಳ ದೊಡ್ಡದಾಗಿ, ಡೈವರ್ಸ್ ಹಂತ ತುಲುಪುವುದು ಇದೆ. ಹಾಗೆ, ಗಂಡ-ಹೆಂಡಿರ ಜಗಳ, ಅತ್ತೆ-ಸೊಸೆ ನಡುವಿನ ಬಿಕ್ಕಟ್ಟು  ಪರಿಹಾರವಾಗುವುದೂ ಇದೆ! ಹಾಗಾಗಿಯೇ ಊರ ಹೆಂಗಸರೆಲ್ಲಾ  ಎಲ್ಲಾ  ಸುದ್ದಿಯನ್ನು ಖುದ್ದಾಗಿ ಅನಸೂಯಮ್ಮನ ಕಿವಿಗೆ ಮುಟ್ಟಿಸುವ ಸಂಪ್ರದಾಯ ಬೆಳೆಸಿಕೊಂಡಿರುವುದು! ಊರಿನ ಯಾವ ಗಂಡಸು, ಯಾವ  ‘ಬಾರ್’ಗೆ ಹೋಗುತ್ತಾನೆ. ಯಾವ ಹೆಂಗಸು ಯಾರ ಜತೆ ಮಲಗುತ್ತಾಳೆ ಎಂಬೆಲ್ಲಾ  ವಿಚಾರಗಳು ಅನಸೂಯಮ್ಮನಿಗೆ ಖಚಿತವಾಗಿ ಗೊತ್ತಿರುತ್ತದೆ. ಹಾಗಾಗಿಯೇ ಊರಿನ ಎಷ್ಟೋ  ಗಂಡಸರು ಅನಸೂಯಮ್ಮನ ಹೆಸರು ಕೇಳಿದರೆ ರೇಗುತ್ತಾರೆ. ತಮ್ಮ   ಹೆಂಡ್ತಿ ಅಂಗಡಿ ಕಡೆ ಹೋಗದಂತೆ ಎಚ್ಚರ ವಹಿಸುತ್ತಾರೆ!

ಇಡೀ ಊರಿನ ಜಾತಕ ಅನಸೂಯಮ್ಮನ ಬಳಿ ಇರುತ್ತದೆ ಎಂದರೂ ತಪ್ಪಾಗಲಾರದು. ಊರು-ಕೇರಿಯ ಸುದ್ದಿ  ಸಂಗ್ರಹದಲ್ಲಿ  ಅನಸೂಯಮ್ಮನಿಗೆ ನಮ್ಮ  ಎನ್‌ಡಿಟಿವಿ, ಆಜ್‌ತಕ್‌ಗಳು ಸರಿಸಾಟಿಯಲ್ಲ ಬಿಡಿ! ಅನಸೂಯಮ್ಮ  ಏನಾದ್ರೂ ಪತ್ರಕರ್ತೆಯಾಗಿದ್ದರೆ, ಅವಳಿಗೆ ಬರವಣಿಗೆ ಗೊತ್ತಿದ್ದರೆ…ಇಂತಹ ಎಷ್ಟೋ ಪ್ರಶ್ನೆಗಳು ನನಗೆ ಆಗಾಗ ಕಾಡುತ್ತಿರುತ್ತವೆ. ಶೇಷಗಿರಿ ಭಟ್ಟರ ಮನೆ ಗಣೇಶ, ಸುಬ್ಬಿ ಮನೆ ನೀಲಾ ಊರಾಚೆಗಿನ ನೀಲಗಿರಿ ಪ್ಲಾಂಟೇಶನ್‌ನಲ್ಲಿ  ಏನೋ ಮಾಡುತ್ತಿದ್ದದನ್ನು, ಚಂದ್ರು ಹೆಗಡೆ ಹೆಂಡ್ತಿ ಸರೋಜಮ್ಮ, ಗೋಪಾಲಯ್ಯ ಒಟ್ಟಿಗೆ  ಯಾವ ಕಡೆಯೋ ಹೋಗಿದ್ದನ್ನು ಊರಿಗೆ ಮೊದಲು ತಿಳಿಸುವವಳೇ ಈ ಅನಸೂಯಮ್ಮ.  ವಾರಕ್ಕೆ ಮೂರು ದಿನ ಕರೆಂಟ್ ಇಲ್ಲದ, ಫೋನು, ಇಂಟರ್‌ನೆಟ್ ಸೌಲಭ್ಯವಿಲ್ಲದ  ಮಲೆನಾಡಿನ ಮೂಲೆಯಲ್ಲಿ ಕುಳಿತು ಶರವೇಗದಲ್ಲಿ  ಅವಳು ಹೇಗೆ ಸುದ್ದಿ  ಸಂಗ್ರಹಮಾಡುತ್ತಾಳೋ ದೇವರು ಮಾತ್ರ ಬಲ್ಲ!

****

ನಾನು, ರವೀಶ, ರಾಘು…ಹೀಗೆ ನಾಲ್ಕಾರು ಜನ ಸರ್ಜಿಮನೆ ಬಿಟ್ಟು  ಹೊರಬಂದವರು. ಹುಟ್ಟಿಬೆಳೆದ, ಆಡಿ ಕಳೆದ ಸರ್ಜಿಮನೆಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಅನುಮಾನದಿಂದ, ತಿರಸ್ಕಾರದಿಂದ ನೋಡಿದವರು.  ಅದರಲ್ಲೂ  ನಾನಂತೂ ಬುದ್ಧಿಜೀವಿಗಳ ಸಾಲಿಗೆ ಸೇರಲು ಪೂರ್ವ ತಯಾರಿ ನಡೆಸಿದವ! ಸರ್ಜಿಮನೆಯ  ಒಂದಿಷ್ಟು  ಆಚಾರ-ವಿಚಾರಗಳನ್ನು  ಜಿದ್ದಿಗೆ ಬಿದ್ದು ವಿರೋಸುತ್ತಿರುದವ. ಇನ್ನು ಸ್ಪಷ್ಟವಾಗಿ ಹೇಳಬೇಕು ಅಂದ್ರೆ ಸಂಪ್ರದಾಯಗಳನ್ನು ವಿರೋಸಲೇ ಬೇಕು ಅನ್ನುವ ಗುಂಪಿನಲ್ಲಿ  ಗುರುತಿಸಿಕೊಂಡವ.

ನಾನು ನನ್ನ  ೧೭ನೇ ವಯಸ್ಸಿನಲ್ಲಿ  ಸರ್ಜಿಮನೆ ವಠಾರದಿಂದ ಹೊರಬಂದೆ. ಅಂದರೆ, ಇವತ್ತಿಗೆ ಸುಮಾರು ೨೫ ವರ್ಷಗಳು ಕಳೆದಿವೆ. ತೀರಾ ಇತ್ತೀಚೆಗೆ  ಬೆಂಗಳೂರಿನ ಬದುಕಿಗೂ, ಸರ್ಜಿಮನೆಯ ಜೀವನಕ್ಕೂ ಇರುವ ಮಹಾ ವ್ಯತ್ಯಾಸವಾದರೂ ಏನು ಅನ್ನುವ ಪ್ರಶ್ನೆ  ನನ್ನನ್ನು ಕಾಡುತ್ತಿದೆ. ಹೋಮದ ಹೆಸರಲ್ಲಿ  ರಂಗಣ್ಣನ ಮನೆಯಲ್ಲಿ  ನಡೆಯುವ ಕಾರ್ಯಗಳನ್ನು ನಾನು ವಿರೋಸುತ್ತೇನೆ. ಆದರೆ ಪಾರ್ಟಿ ಹೆಸರಲ್ಲಿ  ನಾನು ನನ್ನ ಮಿತ್ರರ ಜತೆ ಸೇರಿ ದಲಿತರ ಮೇಲಿನ ದೌರ್ಜನ್ಯ, ಕೋಮುವಾದ…ಅಂತೆಲ್ಲಾ  ಬಾರಿನಲ್ಲಿ, ಕ್ಲಬ್‌ನಲ್ಲಿ  ಹರಟೆಹೊಡೆಯುತ್ತೇನಲ್ಲ? ಅದರಿಂದ ಪ್ರಯೋಜನವೇನು? ಸರ್ಜಿಮನೆ ಹರಟೆ ಗೊಡ್ಡು ಅನ್ನಿಸುವ ನನಗೆ ನನ್ನ  ಹರಟೆ ಯಾಕೆ ಹಾಗನ್ನಿಸುವುದಿಲ್ಲ? ಎಂಬಿತ್ಯಾದಿ ಪ್ರಶ್ನೆಗಳು ಸದಾ ನನ್ನನ್ನು ಕಾಡುತ್ತಿದೆ.

ಅವರು ದೇವರ ಹೆಸರಲ್ಲಿ  ಸಿಹಿ ಭೋಜನ ಮಾಡುತ್ತಾರೆ. ನಾನು ಹೋರಾಟದ ಹೆಸರಲ್ಲಿ  ಕಹಿ ಪಾನೀಯ ಕುಡಿಯುತ್ತೇನೆ. ನನಗೂ, ಅವರಿಗೂ ಸಿಹಿ-ಕಹಿ ಎಂಬುದಷ್ಟೇ  ವ್ಯತ್ಯಾಸವಲ್ಲವಾ? ಹೋಮಕ್ಕೆ ತುಪ್ಪ ಸುರಿದು ಕಾಯಿಲೆ ಹುಷಾರಾಯಿತು ಎಂದು ಸರ್ಜಿಮನೆಯ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಲೇಖನ ಬರೆದು, ಭಾಷಣ ಬಿಗಿದು ಸಮಸ್ಯೆ ಪರಿಹಾರವಾಯಿತು ಎಂದು ನಾನು ನನ್ನೊಳಗೆ ಹೆಮ್ಮೆ ಪಟ್ಟುಕೊಳ್ಳುತ್ತೇನೆ. ಅದು, ನಮ್ಮೂರಿನ ತಿಪ್ಪನ ಮನೆ ಮಂಜನ ಬದುಕನ್ನು ನೋಡಿದ ನಂತರವೂ!

ನನ್ನೊಳಗೆ ಮತ್ತದೇ ಪ್ರಶ್ನೆ, ಸರ್ಜಿಮನೆಗೂ ನನಗೂ ವ್ಯತ್ಯಾಸವೇನು?

ಅವರು, ಹೋಮಕ್ಕೆ ತುಪ್ಪ   ಸುರಿದೋ, ಭೂತನಿಗೆ ಕಾಯಿ ಕೊಟ್ಟೋ ರೋಗ ಹುಷಾರುಮಾಡಿಕೊಳ್ಳುತ್ತಾರೆ. ನಾನು ಯಾರಿಗೆ ಏನೂ ಕೊಟ್ಟರೂ ಸಾಮಾಜಿಕ ಸಮಸ್ಯೆಗಳು ಬಗೆಹರಿಯುವುದಿಲ್ಲವಲ್ಲಾ? ಹಾಗಾಗಿಯೇ ಸರ್ಜಿ ಮನೆಯವರು ನಾನು ನೆಚ್ಚುವ ಮಾರ್ಗವನ್ನು ಬಿಟ್ಟು   ಬೇರೆ ಮಾರ್ಗ ಹಿಡಿದಿರಬಹುದಾ? ಮಾರ್ಕ್ಸ್, ಲೆನಿನ್…ಓದಿದ್ದೇನೆ, ತಿಳಿದುಕೊಂಡಿದ್ದೇನೆ ಎಂದು ಸದಾ ಬೀಗುವ ನಾನು, ಕೆಲವೊಮ್ಮೆ  ಏನೂ ಗೊತ್ತಿಲ್ಲದ ತಿಪ್ಪನ ಮನೆ ಮಂಜನಿಗಿಂತ  ದಡ್ಡನಾಗುವುದು ಏಕೆ?

ಇಷ್ಟೆಲ್ಲಾ  ಓದಿಕೊಂಡ, ಸರ್ಜಿಮನೆಯೆಂಬ ಕಿಟಕಿಯ ಹೊರಗಿನ ಪ್ರಪಂಚ ನೋಡಿರುವ ನಾನು ಕ್ರಿಷ್ಣಣ್ಣ, ಕ್ವಾಡ್ಷರದ ರಂಗಣ್ಣನ ಜತೆ ವಾದಕ್ಕೆ ಕೂತರೆ ಸೋಲುತ್ತೇನಲ್ಲ…ಅಲ್ಲಲ್ಲ… ಅವರದ್ದೆಲ್ಲಾ  ವಿತಂಡ ವಾದ, ಅಂತಹ ಮೌಢ್ಯರ ಜತೆ ನಾನು ವಾದ ಮಾಡಲಾರೆ ಎಂದು ಸಿಟ್ಟುಗೊಂಡು ಎದ್ದುಬರುತ್ತೇನಲ್ಲಾ? ಮಂತ್ರಕ್ಕೆ  ಮಾವಿನಕಾಯಿ ಉದುರುವುದಿಲ್ಲ ಎಂದು ನನಗೂ ಗೊತ್ತು. ಗೊತ್ತಿಲ್ಲದಿದ್ದರೂ ಒಂದಿಷ್ಟು  ವಿಚಾರವಂತರು ಬರೆದ ಬರಹಗಳಿಂದ ಓದಿ ತಿಳಿದಿದ್ದೇನೆ! ಆದರೆ ಸರ್ಜಿಮನೆ ವಠಾರದಲ್ಲಿ ನಡೆಯುವ ಒಂದಿಷ್ಟು  ಘಟನೆಗಳನ್ನು ಸಾಕ್ಷಿ  ಸಮೇತವಾಗಿ ವಿರೋಸಲು ನನ್ನಿಂದ, ಹಾಗೆಲ್ಲಾ  ಬರೆದ ವಿಚಾರವಂತರಿಂದ ಈವರೆಗೆ ಯಾಕೆ ಸಾಧ್ಯವಾಗಿಲ್ಲ? ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳದೇ ನಮ್ಮ ಸಿದ್ಧಾಂತ ಸಮರ್ಥಿಸಲು ನಮ್ಮದೇ ಆದ ಮತ್ತೊಂದು ವಾದ ಹುಟ್ಟುಹಾಕುವ ಪ್ರಯತ್ನ ಯಾಕೆ ನಡೆಯುತ್ತಿದೆ? ಸದಾ ಸರ್ಜಿಮನೆ ಹುಳುಕು ಹುಡುಕುವ ನಾನು, ನನ್ನ ತಪ್ಪಿನ, ವೈಚಾರಿಕ ನಿಲುವಿನ ವಿಮರ್ಶೆ ಮಾಡಿಕೊಳ್ಳಲು ಈವರೆಗೆ ಯಾಕೆ ಕೈಹಾಕಲಿಲ್ಲ…  ಎಂದು ನನ್ನೊಳಗೆ ನಾನು ಕೇಳಿಕೊಂಡು ಎರಡು ಪೆಗ್ ಏರಿಸುತ್ತೇನೆ, ಒಂದು  ಸಿಗರೇಟು ಸೇದುತ್ತೇನೆ. ಆಗಲೂ ಸಮಾಧಾನ ಸಿಗಲಿಲ್ಲ  ಎಂದರೆ ಮತ್ತೆರಡು ಪೆಗ್ ಏರಿಸುತ್ತೇನೆ!

ರಂಗಣ್ಣ  ಜಾತಕ ಹಿಡಿದು ಭವಿಷ್ಯ ಹೇಳಿದ್ದನ್ನು  ನಾನು ಕಣ್ಣಾರೆ ಕಂಡಿರುವೆ. ಅವುಗಳಲ್ಲಿ  ರಂಗಣ್ಣ ಹೇಳುವ ಎಷ್ಟೋ  ಭವಿಷ್ಯಗಳು ಸರಿಯಾಗಿವೆ. ಅವನ ಜ್ಯೋತಿಷ್ಯದ ಮೇರೆಗೆ ಮದುವೆಯಾದ ಅನೇಕ ದಂಪತಿಗಳು ಸುಖಜೀವನ ನಡೆಸುತ್ತಿದ್ದಾರೆ. ನಾನು ನನ್ನ  ಅನೇಕ  ಗೆಳೆಯರಿಗೆ ಮದುವೆ ಮಾಡಿಸಿದ್ದೇನೆ. ಅದು ಅಂತರ್ಜಾತಿಯ ವಿವಾಹ! ಅವರಲ್ಲಿ ಕೆಲವರು ಸುಖವಾಗಿದ್ದಾರೆ. ಹಲವರು ಡೈವರ್ಸ್ ಮಾಡಿ ಮತ್ತೊಂದು ಮದ್ವೆಯಾಗಿದ್ದಾರೆ. ರಂಗಣ್ಣ ಜ್ಯೋತಿಷ್ಯದಲ್ಲಿ  ಒಂದು ಫೇಲಾದರೂ  ಅದನ್ನೇ ನಾನು ಅಸ್ತ್ರವಾಗಿ ಬಳಸಿಕೊಳ್ಳುತ್ತೇನೆ. ನನ್ನ ಸೋಲಿನ ಕುರಿತಾಗಿ ರಂಗಣ್ಣ ಕೇಳುವ ಪ್ರಶ್ನೆಗಳು ನನಗೆ ವಿತಂಡ ವಾದ ಅನ್ನಿಸುತ್ತದೆ!

ರಂಗಣ್ಣನ ಬಗೆಗೆ, ಕ್ರಿಷ್ಣಣ್ಣನ ದಿನಚರಿ ಕುರಿತು ಈ ಹಿಂದೆಯೂ  ಸಾಕಷ್ಟು  ಸಲ ಗೇಲಿ ಮಾಡಿದ್ದೇನೆ. ಮುಂದೊಂದು ದಿನ ಸರ್ಜಿಮನೆಯ ಕುರಿತು ಮತ್ತ್ಯಾರಾದರೂ ಬರೆದರೆ, ಅದರಲ್ಲಿ  ನನ್ನ  ಪಾತ್ರವೂ ಸೇರಬಹುದಾ ಎಂಬ ಸಂಶಯ ತಲೆಯಲ್ಲಿ  ಗಿರಕಿ ಹೊಡೆಯುತ್ತಿದೆ.

‘ಅವ ಕ್ವಾಡ್ಷರದ ರಂಗಣ್ಣನ ಮಗ ವಿನಾಯಕ ಭಟ್ಟ, ಅದೆಲ್ಲಿಗೋ ಹೋಗಿ, ಅದೆಂತದೋ ಓದಿದ. ಅದ್ಯಾರ್‍ಯಾರದ್ದೋ ಸಹವಾಸ ಮಾಡಿದ. ವಿನಯ್ ಸರ್ಜಿಮನೆ ಅಂತಾ ಹೆಸರು ಬದಲಾಯಿಸಿಕೊಂಡ. ಎರಡು ಜನ ಒಳಹೊಕ್ಕಲು ಸಾಧ್ಯವಿರುವಷ್ಟು  ದೊಡ್ಡ  ಪೈಜಾಮ, ಹೆಂಗಸರ ಪೆಟ್ಟಿಕೋಟ್ ತರಹದ ಜುಬ್ಬಾ ಧರಿಸಿ ಬಂದ ಅಂದ್ರೆ ಅವ ವಿನಾಯಕ ಭಟ್ಟ…ಅಲ್ಲಲ್ಲ  ವಿನಯ್ ಸರ್ಜಿಮನೆ ಅಂತಾ ಪ್ರತ್ಯೇಕವಾಗಿ ಹೇಳುವುದು ಬೇಡವಾಗಿತ್ತು. ಅಪ್ಪನನ್ನೇ ಗೇಲಿ ಮಾಡಿ ಕಥೆ ಬರೆಯುವಷ್ಟು  ಮಾಹಾ ಬುದ್ಧಿವಂತ ಎಲಿಮೆಂಟು ಯಾರು ಅಂದ್ರೆ ಸರ್ಜಿಮನೆ ಹುಡುಗರೆಲ್ಲಾ  ವಿನಯ್‌ನತ್ತ ಬೊಟ್ಟು  ಮಾಡಿ ತೋರಿಸುತ್ತಾರೆ. ಸರ್ಜಿ ಕ್ರಿಷ್ಣಣ್ಣನ ನಂತರ ಊರು ಕಂಡ ವಿಭಿನ್ನ ವ್ಯಕ್ತಿ ಅವ. ಕ್ರಿಷ್ಣಣ್ಣನ ದಿನಚರಿಗಿಂತಲೂ ಮಜವಾಗಿತ್ತು ವಿನಯ್ ದಿನಚರಿ. ಬೆಂಗಳೂರಿಂದ ಅಪರೂಪಕ್ಕೆ ಊರಿಗೆ ಬರುತ್ತಿದ್ದ ಅವನ ಕೈಯಲ್ಲಿ  ಇಂಗ್ಲಿಷ್ ಪೇಪರ್ ಇರುತ್ತಿತ್ತು. ಅಂಗಡಿ ಕಟ್ಟೆಯಲ್ಲಿ  ಸಿಗರೇಟು ಹಚ್ಚಿ  ಪೇಪರ್ ಓದಲು ಕುಳಿತ ಅಂದ್ರೆ, ಸಿಗರೇಟನ್ನು ಅವ ಸೇದುತ್ತಿದ್ದಾನಾ? ಅಥವಾ ಪೇಪರ್‌ಗೆ ಸೇದಿಸುತ್ತಿದ್ದಾನಾ ಎಂಬ ಅನುಮಾನ ನಮ್ಮನ್ನು ಕಾಡುತ್ತಿತ್ತು. ಅಸ್ಪೃಶ್ಯತೆ,…ಇತ್ಯಾದಿಗಳ ವಿರುದ್ಧ ಮಾತಾಡುತ್ತಿದ್ದ  ಅವನೇ ಕೊನೆಗೆ ಊರಿಗೆ ಅಸ್ಪೃಶ್ಯನಾದ. ಊರಲ್ಲಿ  ತನ್ನ  ಬೇಳೆ-ಕಾಳು ಬೇಯುವುದಿಲ್ಲ ಅಂತಾ ಗೊತ್ತಾದಾಗ ಊರು ಕಡೆ ಬರುವುದನ್ನೇ ಬಿಟ್ಟುಬಿಟ್ಟ!!!….’ ಹೀಗೆಲ್ಲಾ  ನನ್ನ ಬಗ್ಗೆಯೂ ಮುಂದೊಂದು ದಿನ ಬರೆಯಬಹುದಾ? ಎಂದು ಆಲೋಚಿಸುತ್ತಲೇ ಇದ್ದೇನೆ.

ಇಲ್ಲ, ಕಳೆದ ೨೫ ವರ್ಷಗಳಿಂದ ಸರ್ಜಿಮನೆಗೂ, ಬೆಂಗಳೂರಿಗೆ ಬೃಹತ್ ವ್ಯತ್ಯಾಸವೇನೂ ಕಾಣಲಿಲ್ಲ. ಸರ್ಜಿಮನೆಯಲ್ಲಿ  ಇರುವಂತೆ ಬೆಂಗಳೂರಿನ ನನ್ನ  ಮಿತ್ರರ ನಡುವೆಯೂ ನಾಲ್ಕಾರು  ಬಣಗಳಿವೆ. ನಾನು ಎಲ್ಲರಿಗಿಂತ ಶ್ರೇಷ್ಠ ಅನ್ನಿಸಿಕೊಳ್ಳಲು ಹಪಹಪಿಸುವ ಅನಸೂಯಮ್ಮನಂಥ ವ್ಯಕ್ತಿಗಳು ನನ್ನ  ಪಾಳಯದಲ್ಲೂ ಸಾಕಷ್ಟಿದ್ದಾರೆ. ಹಾಗೆ ನೋಡಿದರೆ ಅಸ್ತಿತ್ವ ಉಳಿಸಿಕೊಳ್ಳಲಿಕ್ಕೋಸ್ಕರ ಹೋರಾಟ, ಆಂದೋಲನ…ಇತ್ಯಾದಿ ಮುಖವಾಡ ತೊಟ್ಟವರಲ್ಲಿ  ನಾನೂ ಒಬ್ಬ! ಮಹಾನಗರಿಯ ವಿಚಾರವಂತ ಪ್ರತಿ ಹೃದಯ, ಹೃದಯಗಳ ನಡುವೆ ಅಹಂ, ಪ್ರತಿಷ್ಠೆಗಳ ಕೋಟೆಯಿದೆ.

ಸರ್ಜಿಮನೆಯಲ್ಲೂ  ಪ್ರತಿಷ್ಠೆ, ಕಾದಾಟಗಳಿರಬಹುದು. ಆದರೆ, ಒಂದು ಮದುವೆ, ಮುಂಜಿಯಂಥ ಕಾರ್ಯಕ್ರಮಕ್ಕೆ ಊರಿಗೇ ಊರೇ ಒಟ್ಟಾಗುತ್ತದೆ. ಪ್ರತಿಷ್ಠೆ, ಅಹಂಗಳನ್ನು ಮರೆತುಬಿಡುತ್ತದೆ. ಇರುವ ಮೂರು ದಿನದಲ್ಲಿ  ಕಚ್ಚಾಟ  ಏಕೆ ಎಂಬ ನಿಲುವು ತಳೆದು ಬಿಡುತ್ತದೆ. ಆದರೆ, ಮಹಾನಗರಿಯ ಬದುಕು ಹಾಗಲ್ಲ.  ಎರಡು ವ್ಯಕ್ತಿಗಳ ನಡುವೆ ಒಂದು ಸಲ ಪ್ರತಿಷ್ಠೆಯೆಂಬ ಪರದೆ  ಅಡ್ಡ  ಬಂದರೆ, ಮತ್ತೆ ಅವರಿಬ್ಬರನ್ನು ಒಂದಾಗಿ ಕಾಣಲೂ ಸಾಧ್ಯವೇ ಇಲ್ಲ. ಹಾಗಾಗಿಯೇ ನಮ್ಮಲ್ಲಿ  ಬಂಡಾಯದ ಬಣ, ಲೆನಿನ್ ಬಣ, ಮಾರ್ಕ್ಸ್ ಬಣ…ಹೀಗೆ ಹತ್ತಾರು ಬಣ ಹುಟ್ಟಿದ್ದು. ಒಂದೊಂದು ಬಣಕ್ಕೂ ಒಬ್ಬೊಬ್ಬ  ಸೂತ್ರಧಾರನಾಗಿದ್ದು!

ಅದೆಲ್ಲಾ  ಏನೇ ಇರಲಿ, ಸರ್ಜಿಮನೆ ಇತಿಹಾಸದಲ್ಲಿ  ಗುರುತಿಸಿಕೊಳ್ಳುವವರ ಸಾಲಿನಲ್ಲಿ  ನಾನು ಸೇರುವುದಂತೂ ಗ್ಯಾರಂಟಿ. ಹಾಗಾಗಿ ಈ ಹೋರಾಟ, ಸಿದ್ಧಾಂತಗಳ ಮುಖವಾಡ ಕಳಚಿ ಮತ್ತದೇ ಸರ್ಜಿಮನೆಗೆ ಹೋಗಬೇಕೆಂದು ನಿರ್ಧರಿಸಿರುವೆ. ಮಲೆನಾಡಿನ ಹಚ್ಚ  ಹಸಿರು, ಚುಮು ಚುಮು ಚಳಿ, ಜಿಟಿ ಜಿಟಿ ಮಳೆ, ಸೂಯ್ ಅನ್ನುವ ತಂಪು ಗಾಳಿ, ಜುಳು ಜುಳು ಸದ್ದನ್ನು  ಮಾಡುತ್ತಾ ವರ್ಷದ ೩೬೫ದಿನವೂ ತುಂಬಿ ತುಳುಕುವ ಅಬ್ಬಿ  ನೀರು…ಇವೆಲ್ಲದರ ಸೊಬಗನ್ನು ಮತ್ತೆ ಮರಳಿ ಪಡೆಯುವ ತವಕದಲ್ಲಿದ್ದೇನೆ. ನನ್ನ  ಬದುಕಿನಲ್ಲಿ  ಉಳಿದಿರುವ ಬೆರಳೆಣಿಕೆಯಷ್ಟು  ದಿನವನ್ನು  ಕ್ರಿಷ್ಣಣ್ಣನಂತೆ ಕಳೆದುಬಿಡುತ್ತೇನೆ…

Categories: ಕಥೆ-ವ್ಯಥೆ!