ಬೈಯ್ಯುವುದು ನಮ್ಮ ಧರ್ಮ, ಬೈಸಿಕೊಳ್ಳುವುದು ಅವರ ಕರ್ಮ!
ಮೊನ್ನೆ ನನ್ನ ಬರಹಗಳನ್ನೆಲ್ಲಾ ಹರಡಿಕೊಂಡು ಕೂತಿದ್ದಾಗ ಎಂ.ಎಫ್ ಹುಸೇನ್ ಇಶ್ಯೂ ಆದಾಗ ಗಿರೀಶ್ ಕಾರ್ನಾಡ್ ಹುಸೇನ್‌ನನ್ನು ಸಮರ್ಥಿಸಿದ್ದರ ವಿರುದ್ದವಾಗಿ ನಾನು ಕಾರ್ನಾಡರನ್ನು ಕೆದಕಿ ಬರೆದಿದ್ದ ಆರ್ಟಿಕಲ್ ಕಣ್ಣಿಗೆ ಬಿತ್ತು. ನಿಜಕ್ಕೂ ತಬ್ಬಿಬ್ಬಾದೆ. ಓರ್ವ ಜ್ಞಾನ ಪೀಠ ವಿಜೇತ ಸಾಹಿತಿಯೊಬ್ಬನಿಗೆ ಮೀಸೆ ಚಿಗುರದ ನನ್ನಂತಹ ಹುಡುಗ ಹೇಗೆಲ್ಲಾ ಬೈದಿದ್ದೇನಪ್ಪಾ ಅಂತಾ ಬೇಸರವಾಯಿತು. ಅದಾದ ಎರಡು ದಿನಕ್ಕೆ ಅಕ್ಕಾ, ಅಣ್ಣನ ಹತ್ತಿರ ಅದ್ಯಾವುದೋ ವಿಚಾರಕ್ಕೆ ಬುದ್ದಿಜೀವಿಗಳನ್ನು ಬೈಯಿ ಅಂತಾ ಗೊಣಗುತ್ತಿದ್ದಳು. ವಯಸ್ಸಿನಲ್ಲಿ, ಅಧ್ಯಯನದಲ್ಲಿ ಜ್ಞಾನದಲ್ಲಿ ನಮಗಿಂತ ಹಿರಿಯರಾದ ಎಡಪಂಥಿಯರನ್ನು ಬೈಯ್ಯುವಾಗ ನಿಜಕ್ಕೂ ನನಗೆ ಬೇಸರವಾಗುತ್ತದೆ. ಆದ್ರೆ ಅವರ ವಿಚಿತ್ರವಾದೊಂದು ವೈಚಾರಿಕತನವನ್ನು, ಅಸಂಬದ್ದ ತರ್ಕವನ್ನು ಕಂಡಾಗ ಬೈಯ್ಯಲೇ ಬೇಕು ಅನ್ನಿಸುತ್ತದೆ. ನಾವು ಬೈದರೆ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರಾ? ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರಾ? ಊಹುಂ ಖಂಡಿತಾ ಇಲ್ಲ. ಆದರೂ ಕುರುಡುಗಣ್ಣಿಗಿಂತ ಮೆಳ್ಳೆಗಣ್ಣು ಉತ್ತಮ ಅನ್ನೊ ಗಾದೆಯನ್ನು ನೆನಸಿಕೊಂಡು ಬೈಯ್ಯುತ್ತೇನೆ ನಾನಂತು!
ಎಡ, ಬಲ ಇವ್ಯಾವುದಕ್ಕೂ ಒಗ್ಗಿಕೊಂಡವ ನಾನಲ್ಲ. ಆದರೂ ಎಡದವರನ್ನು ಬೈಯ್ಯುವುದು ನನಗೆ ಇತ್ತೀಚೆಗೆ ತೆವಲಾಗಿಬಿಟ್ಟಿದೆ ಅನ್ನಿಸತ್ತೆ ಎಷ್ಟೋ ಸಲ. ಆದರೆ ಮಾತು ಮಾತಿಗೆ ಅನ್ಯರನ್ನು ಓಲೈಸುವ, ತಾವು ಹುಟ್ಟಿರುವುದೇ ಅನ್ಯರ ಓಲೈಕೆಗೆ ಅನ್ನೋ ತರಹ ಆಡುವ ಬುದ್ದಿಜೀವಿಗಳನ್ನು ಕಂಡಾಗ ನನ್ನದು ತೆವಲೇ ಅಲ್ಲ ಅನ್ನಿಸುತ್ತದೆ! ಅನಂತ ಮೂರ್ತಿ, ಕಾರ್ನಾಡ್ ಇತ್ಯಾದಿ ಮಹಾಪುರುಷರಿಗೆ ದೊಡ್ಡ ದೊಡ್ಡ ಇಂಗ್ಲೀಷ್ ಕಾದಂಬರಿಗಳೆಲ್ಲಾ ಅರ್ಥವಾಗತ್ತೆ. ಅದನ್ನು ಇತರರಿಗೆ ಅರ್ಥ ಮಾಡಿಸುವ ಶಕ್ತಿಯೂ ಅವರಿಗಿದೆ. ಆದರೆ ಕೆಲವೊಂದು ವಿಚಾರ ಬಂದಾಗ ಅವರೇಕೆ ಒಂತರಹ ಪೊಸೆಸೀವ್ ಆಗಿಬಿಡುತ್ತಾರೆ? ಅನ್ನುವುದು ನನಗೆ ಅರ್ಥವಾಗದೇ ಎಷ್ಟೋ ಸಲ ಬೈಯ್ಯುತ್ತೇನೆ ಅವರನ್ನು. ಖಂಡಿತಾ ಎಡಪಂಥ ಅವರದ್ದು ಅಂತಾ ಅವರನ್ನು ಬೈಯ್ಯಬೇಕು ಅನ್ನಿಸುವುದಿಲ್ಲ. ಯಾಕಂದರೆ ಬಲ ಚೆಡ್ಡಿವಾದಿಗಳ ಒಳಗುಟ್ಟು ಎಡಕ್ಕಿಂತ ಭಿನ್ನವಾಗಿಲ್ಲ. ಓ ತಾಯಂದಿರೇ, ಸಹೋದರಿಯರೇ….ಇತ್ಯಾದಿಯನ್ನು ಮೇಲ್ನೋಟಕ್ಕೆ ಹೇಳಿ ಒಳಗಡೆಯಿಂದ ಹುಡುಗಿಯರನ್ನು ಹಾಳು ಮಾಡುವ ಕೆಲ ಭಜರಂಗಿಗಳನ್ನು, ಬಾಯಲ್ಲಿ ಉಪದೇಶ ಮಾಡಿ ಒಳಗೆಲ್ಲಾ ಹಲ್ಕಾ ಕೆಲಸ ಮಾಡುವ ಅಪ್ಪಟ್ಟ ಚೆಡ್ಡಿವಾದಿಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿಯೇ ವಿದ್ಯಾರ್ಥಿ ಜೀವನದ ಕೆಲ ಘಳಿಗೆ ನಾನು ಬಲದಲ್ಲಿ ಗುರುತಿಸಿಕೊಂಡರು ನಂತರ ಅವರಿಗೊಂದು ಸಲಾಂ ಹೊಡೆದು ಬಂದಿದ್ದು.
ನಾನು ಇಷ್ಟಪಡುವುದು ಬಲ ವಿಚಾರಧಾರೆಯನ್ನು ಅಷ್ಟೆ. ಇನ್ನು ಬಲದಲ್ಲಿ ಗುರುತಿಸಿಕೊಂಡ ಕೆಲ ಆದರ್ಶನೀಯ ವ್ಯಕ್ತಿಗಳೂ ಇದ್ದಾರೆ. ಇವರು ನನ್ನ ಗುರು ಅಂತಾ ಎದೆ ತಟ್ಟಿ ಹೇಳಿಕೊಳ್ಳಬಹುದಾದ ವ್ಯಕ್ತಿಗಳೂ ಬಲದಲ್ಲಿದ್ದಾರೆ. ನಮ್ಮ ಚಿಂತನೆಯನ್ನು ನಮ್ಮ ವಾದಕ್ಕೆ ಸರಿಯಾಗಿಯೇ ತಿದ್ದಬಲ್ಲ ಜನ ಬಲದಲ್ಲಿದ್ದಾರೆ. ಹಾಗಾಗಿಯೇ ಬಲದ ನಿಲುವುಗಳು ನನಗೆ ಇಷ್ಟವಾಗುವುದು. ಎಲ್ಲಕ್ಕಿಂತ ಮೀಗಿಲಾಗಿ ಬಲದ ಚಿಂತನೆ ವಾಸ್ತವದಿಂದ ದೂರವಾಗಿದ್ದಲ್ಲ. ಎಡದ ಚಿಂತನೆ ಎಷ್ಟೋ ಸಲ ಕಲ್ಪನೆ ಅನ್ನಿಸಿ ಬಿಡತ್ತೆ(ಕ್ಷಮೆ ಇರಲಿ ನಾನು ಎಡದ ಮೂಲನಿಲುವನ್ನು ಅಧ್ಯಯನ ಮಾಡಿಲ್ಲ. ನಮ್ಮ ಸಮಾಜದ ಬುದ್ದಿಜೀವಿಗಳ ವರ್ತನೆ ನೋಡಿ, ಅವರು ಎಡದ ಮೂಲನಿಲುವನ್ನು ಅಭ್ಯಾಸಮಾಡಿರಬಹುದೆಂಬ ಭರವಸೆಯ ಮೇಲೆ ಮಾತಾಡುತ್ತಿದ್ದೇನೆ!)
ಇತ್ತೀಚೆಗೆ ಬ್ಲಾಗ್‌ಲೋಕದಲ್ಲಿ ಕೋಮುವಾದದ ಕುರಿತಾಗಿ ಚರ್ಚೆಯಾಯಿತು. ಬಹುಶಃ ಕೋಮುವಾದ, ಗೋದ್ರಾ, ಗಾಂಧಿ ಹತ್ಯೆ ಎಂಬತಲೆಬುಡವಿಲ್ಲದ ಬೈಗುಳವನ್ನು ಕೇಳಿ, ಕೇಳಿ ನಮಗೂ ಬೇಸರ ಬಂದಿದೆ. ಬಿಜೆಪಿ ಸಾಚಾ ಪಕ್ಷವಲ್ಲ ಅನ್ನುವುದನ್ನು ನಾನು ಒಪ್ಪುತ್ತೇನೆ. ಅದನ್ನು ಅದರ ರೀತಿಯಲ್ಲೇ ಹೇಳಲಿ. ಒಂದು ಗೋದ್ರಾ ಘಟನೆ ಮುಂದಿಟ್ಟುಕೊಂಡು ನೀವು ರಾಷ್ಟ್ರೀಯ ಪಕ್ಷವನ್ನು ಅಳೆಯುತ್ತೀರಿ ಅಂದರೆ, ಅದು ಕೋಮುವಾದಿ ಪಕ್ಷ ಅನ್ನುತ್ತೀರಿ ಅಂತಾದ್ರೆ ಕಮ್ಯುನಿಸ್ಟ್ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಎಸ್.ಇ.ಜೆಡ್ ಹೆಸರಲ್ಲಿ ನಡೆದಿದ್ದು ನರಮೇಧವಲ್ಲವೇ? ಅಲ್ಲಿ ಸತ್ತವರು ಮನುಷ್ಯರಲ್ಲವೇ? ಅಸ್ಸಾಂ, ಸಿಕ್ಕಿಂಗಳಲ್ಲಿ ನಕ್ಸಲಿಸಂಗೆ ಬಲಿಯಾಗುತ್ತಿರುವವರಿಗೆ ಹೊಣೆ ಯಾರು? ಕಾಶ್ಮೀರದಲ್ಲಿನ ಹಿಂದು ಹೆಣ್ಣುಮಕ್ಕಳ ಅತ್ಯಾಚಾರಕ್ಕೆ ಹೊಣೆಗಾರರು ಯಾವ ಕೋಮಿನವರು? ಗೊದ್ರಾ ಒಪ್ಪೊಣ ಆದರೆ ಆ ಗಲಭೆ ಮೊದಲು ಆರಂಭವಾಗಿದ್ದು ಹೇಗೆ ಅನ್ನುವುದನ್ನು ಮಾತನಾಡಿ. ಗೊದ್ರಾ ಘಟನೆಯ ಪೂರ್ಣ ಚಿತ್ರಣ ನೀಡಿ. ನಿಮ್ಮ ಸಿದ್ದಾಂತಕ್ಕೆ ಬೇಕಾದ ಗಲಭೆಯ ಒಂದಿಷ್ಟು ಅಂಶವನ್ನು ಮುಂದಿಟ್ಟುಕೊಂಡು ಮಾತಾಡುತ್ತೀರಿ ಎಂದಾದರೆ ಅದಕ್ಕೆ ವಿರುದ್ದವಾಗಿ ನಾವು ಕೆಟ್ಟದಾಗಿ ಬೈಯ್ಯಲೇ ಬೇಕಾಗುತ್ತದೆ ಅಲ್ಲವೆ? ಇನ್ನೂ ಕಾಂಗ್ರೆಸ್‌ನ ಹಾದರದ ಬಗ್ಗೆ ಮಾತಾಡಲು ಸಾಕಷ್ಟಿದೆ. ನೆಹರು ಚರಿತ್ರೆಯೇ ಬೇಕಾದಷ್ಟಿದೆ. ಅದನ್ನು ನಮ್ಮ ನಾಡಿನ ಕೆಲ ಲೇಖಕರು ಆಧಾರಪೂರ್ಣವಾಗಿಯೇ ಬರೆದಿದ್ದಾರೆ. ಧರ್ಮದ, ಕೋಮುವಿನ ಆಧಾರದಲ್ಲಿ ಬಿಜೆಪಿಯನ್ನು ಬೈಯ್ಯುವ ಹಕ್ಕು ಯಾರಿಗೂ ಇಲ್ಲ. ಹಾದರದಿಂದ, ಭ್ರಷ್ಟತೆಯಿಂದ ಬೇಕಷ್ಟು ಬೈಯ್ಯಿರಿ. ನಿಮಗೆ ಬೈಯ್ಯಲು ಖಂಡಿತಾ ನಾನು ಒಂದಿಷ್ಟು ಅಂಶ ಕೊಡುವೆ!
ಮತ್ತೆ ಶುರುವಾಯಿತು ನನ್ನ ಬೈಗುಳ…..ಮೊದಲೇ ಹೇಳಿದ್ದೆನ್ನಲ್ಲಾ ನಾನ್ಯಾಕೆ ಬೈಯ್ಯುವೇ ಅಂತಾ! ನಂಗು ಬೈದು ಬೈದು ಬೇಸರ ಬಂದಿದೆ. ಇನ್ನೂ ಬೈಯ್ಯಬಾರದು ಅಂದು ಕೊಂಡಿದ್ದೇನೆ. ಏನು ಮಾಡೋದು ಹೇಳಿ ಬೈಯ್ಯುವುದು ನಮ್ಮ ಧರ್ಮ, ಬೈಸಿಕೊಳ್ಳುವುದು ಅವರ ಕರ್ಮ! ಅಂದಹಾಗೆ ಇದು ಬೈಯ್ಯುವುದು ನಮ್ಮ ಕರ್ಮ, ಬೈಸಿಕೊಳ್ಳುವುದು ಅವರ ಧರ್ಮ ಅಂತಾನೂ ಆಗಬಹುದಲ್ಲವೇ?!
Categories: ಚಿಂತನ ಚಾವಡಿ
14 responses so far ↓
uniquesupri // June 5, 2008 at 5:45 pm
ಹೌದು,
ಎಡಪಂಥೀಯರ ಕಾಳಜಿಗಳು ಆಶಯಗಳು ನಿಜಕ್ಕೂ ಉನ್ನತವಾದುವು. ಅವರ ಮಾನವೀಯ ಕಳಕಳಿಯ ಬಗ್ಗೆ, ಬಡವರ, ಶೋಷಿತರ ಪರವಾದ ದನಿಗೆ ಎದುರು ಮಾತನಾಡಲಾಗದು. ಬದ್ಧತೆಯುಳ್ಳ, ಕ್ರಿಯಾಶೀಲ ಚಿಂತನೆಗಳಿರುವ ಸಮಾಜವಾದಿಗಳು ಇನ್ನೂ ನಮ್ಮೊಂದಿಗೆ ಇದ್ದಾರೆ. ಲೋಹಿಯಾವಾದಿಗಳು ಇದ್ದಾರೆ. ಆದರೆ ಪ್ರಜಾಪ್ರಭುತ್ವದ ನಿಯಮಾನುಸಾರವಾಗಿ ಚುನಾವಣೆ ನಡೆದು ಬಹುಮದಿಂದ ಒಂದು ಪಕ್ಷ ಆಯ್ಕೆಯಾಗಿ ಬಂದ ದಿನವನ್ನು ಕರ್ನಾಟಕದ ಇತಿಹಾಸದಲ್ಲಿನ ‘ಕರಾಳ ದಿನ’ ಎಂದು ನಿರ್ಲಜ್ಜೆಯಿಂದ ಕರೆಯುವ ಗೌರಿ ಲಂಕೇಶ್‌ರಂತಹ ಪ್ರಗತಿಪರರು ನಿಜಕ್ಕೂ ಎಡಪಂಥೀಯತೆಯ ಬಗ್ಗೆಯೇ ಸಂಶಯ ಮೂಡುವಂತೆ ಮಾಡುತ್ತಾರೆ.
ಇನ್ನು ಅನಂತಮೂರ್ತಿಯವರು ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ಸೊಂದೇ ಪರ್ಯಾಯ ಎಂದು ಹೇಳುತ್ತಾ ಅಲ್ಪಸಂಖ್ಯಾತರ ಓಲೈಕೆಯನ್ನು ಕಾಂಗ್ರೆಸ್ಸಿನಿಂದ ಗುತ್ತಿಗೆ ತೆಗೆದುಕೊಂಡವರಂತೆ ಮಾತನಾಡುವುದನ್ನು ಸಹಿಸಲು ಸಾಧ್ಯವಾಗದು. ಬುದ್ಧಿಜೀವಿಗಳೆನಿಸಿಕೊಂಡವರ ಪೀಕಲಾಟವನ್ನು ಹಾಗೂ ಅದರಿಂದ ಹಿಂದೂ ಕೋಮುವಾದಿಗಳು ಗಳಿಸುತ್ತಿರುವ ಪ್ರಸಿದ್ಧಿಯ ಬಗ್ಗೆ ಸಮಾಜವಾದಿ ಚಿಂತಕರಾದ ಡಿ.ಎಸ್.ನಾಗಭೂಷಣ್ ಬಹಳ ಚೆನ್ನಾಗಿ ಬರೆದಿದ್ದಾರೆ… ಈ ಲಿಂಕು ತಾಕಿ :http://sampada.net/article/8525
ಚಕೋರ // June 6, 2008 at 11:52 pm
ಹುಸೇನ್‍ರ ಸಮರ್ಥನೆಗೂ ಎಡಪಂಥಕ್ಕೂ ಏನು ಸಂಬಂಧ ಅಂತ ತಿಳೀಲಿಲ್ಲ.
ಕುಮಾರಸ್ವಾಮಿ // June 7, 2008 at 11:36 am
ಕಚ್ಚೆ ಹರುಕರು, ಸೋಗಲಾಡಿಗಳು, ನಾವೇ ಸಾಚರೆನ್ನುವ ವಿತಂಡವಾಗಿಗಳು ಎಲ್ಲ ಜಾತಿ, ಧರ್ಮ, ಸಂಘ, ಪಕ್ಷದಲ್ಲೂ ಇದ್ದಾರೆ.
ನನಗೂ ನಿಮಗೇ ಆದಂತ ಅನುಭವ ವಾಗಿದೆ. ಬಲ ಜನಗಳ ಜೊತೆ ತುಂಬಾ ದಿನ ಕೆಲಸ ಮಾಡಿರುವೆ. ಅವರಿಂದ ಎಷ್ಟೂ ತುಂಬಾ ಒಳ್ಳೆಯದನ್ನ ಕಲಿತಿರುವೆ. ಜೊತೆಗೆ ಆ ಜನಗಳ ಹಿಂಡಿನಲ್ಲಿ ನಡೆಯುವ ಕಚ್ಚೆ ಹರುಕುತನ ನೋಡಿ ಸಹಿಸದೆ ಸಿಟ್ಟಿಗೆದ್ದು ಜಗಳ ಗೈದಿರುವೆ. ಬೈದಿರುವೆ. ಅಲ್ಲಿನ ಜನಗಳ ಸೋಗಲಾಡಿತನ ಎಷ್ಟಿರುತ್ತದೆಂದರೆ, ಅಪ್ಪ ಹೇಗಿದ್ದಾರೆ, ಅಮ್ಮ ಹೇಗಿದ್ದಾರೆ, ತಂಗಿ ಚನ್ನಾಗಿ ಓದುತ್ತಿದ್ದಾಳ, ಅಕ್ಕ ಈಗ ಯಾವ ಊರಲ್ಲಿ ಇದ್ದಾರೆ, ಅಮ್ಮನಿಗೆ ಕೇಳಿದೆ ಅಂತ ಹೇಳು. ಇಂತಹ ಅವಶ್ಯಕತೆ ಇಲ್ಲದ ಬರಿ ಓಳು ಮಾತುಗಳ ಸಾಲು ಪೋಣಿಸು ಜನಗಳನ್ನೂ ನೋಡಿರುವೆ.
ನಾವು ಎಡ ಬಲ ಅಂತ ಪರ ಕಟ್ಟಿಕೊಂಡು ಹೋದರೆ ನಾವು ಎಡವಿದಂತೆಯೇ. ನಮ್ಮ ನಿಲುವೇನೆಂಬುದನ್ನು ನಾವು ಚನ್ನಾಗಿ ಅರಿತುಕೊಂಡು ಅದಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಬೇಕು.
ನಮ್ಮ ನಿಲುವು ನಮ್ಮ ನೆಲ, ಬದುಕು, ಧರ್ಮಗಳ ಬೆಳವಣಿಗೆಯ ಪೂರಕವಾಗಿರಬೇಕು ಮಾನವಿಯ ದೃಷ್ಠಿಯಿಂದ ತುಂಬಿರಬೇಕು.
ಬೈಯುವುದು, ಸಿಡುಕುವುದು ಇವು ಸಹಜ ಮಾನವ ಸ್ವಭಾವಗಳು. ನಿಮ್ಮ ನಿಲುವನ್ನು ನಿವು ಮುಂದುವರಿಸಿ.
ಸ್ವಾಮಿ
ಪುಣೆ
07/06/08
aksharavihaara // June 7, 2008 at 11:38 am
ಚಕೋರರೆ
ಹುಸೇನ್ ಹಿಂದು ದೇವತೆಗಳ ಬೆತ್ತಲೇ ಚಿರ್ತ ಬರೆದಾಗ ಅವನನ್ನು ಕಲಾವಿದ ಅಂತಾ ಕೊಂಡಾಡಿದವರು ಎಡಪಂಥೀಯ ಮಹಾಶಯರು. ಸಂಬಂಧ ಏನೀರಬಹುದು ಎಂದು ಅರ್ಥೈಸಿಕೊಳ್ಳಲು ಅಷ್ಟೇ ಸಾಕಾಲ್ಲವೇ?
aksharavihaara // June 7, 2008 at 11:41 am
ಸುಪ್ರೀತ್
ಹೌದು ಎಡ ಬೈಯ್ಯುವ ಭರದಲ್ಲಿ ನಾನು ಎಲ್ಲರನ್ನು ಬೈಯ್ಯಲು ತಯಾರಿಲ್ಲ. ಆದರೆ ಎಡದ ಮೂಲ ಪರಿಕಲ್ಪನೆ ಹೀಗೆ ಅಂತಾ ಇವತ್ತು ಸ್ಪಷ್ಟವಾಗಿ ಹೇಳುವವರೂ ಯಾರೂ ಸಿಗುತ್ತಿಲ್ಲ! ಅದು ಎಡದ ದುರಂತ ಅಂದುಕೊಳ್ಳುತ್ತೇನೆ.
ಚಕೋರ // June 7, 2008 at 3:43 pm
ಇಲ್ಲ. ಸಾಕಾಗುವುದಿಲ್ಲ. ನಾನೂ ಹುಸೇನ್‍ರ ಸ್ವಾತಂತ್ರ್ಯವನ್ನು ಸಮರ್ಥಿಸುತ್ತೇನೆ. ಅವರು ಎಂಥ ಕಲಾವಿದ ಎಂಬುದು ನನಗೆ ಮುಖ್ಯವಾಗುವುದಿಲ್ಲ. ಹುಸೇನ್ ಅಷ್ಟೇ ಅಲ್ಲ. ಮೊಹಮ್ಮದ್ ಕಾರ್ಟೂನ್‍ಗಳನ್ನು ಅಚ್ಚುಹಾಕಿದ ಡೇನಿಶ್ ಪತ್ರಿಕೆಯನ್ನೂ ಸಮರ್ಥಿಸುತ್ತೇನೆ. ನಾನು ಎಡ ಬಲ ಯಾವುದೂ ಅಲ್ಲ. ಎಡ, ಬಲ, ಮತ್ತೊಂದು, ಏನೂ ಅಲ್ಲದವರು — ಇವರೆಲ್ಲರಲ್ಲೂ ಇಂಥವನ್ನು ಸಮರ್ಥಿಸಿದವರೂ ಇದ್ದಾರೆ, ವಿರೋಧಿಸುವವರೂ ಇದ್ದಾರೆ.
ಶೆಟ್ಟರು (Shettaru) // June 10, 2008 at 9:12 am
ಚಕೋರ,
ನಿಮ್ಮ ಮಾತುಗಳನ್ನು ನಾನು ಒಪ್ಪುವುದಿಲ್ಲ, ಯಾವುದೇ ವ್ಯಕ್ತಿಯ ಸ್ವಾತಂತ್ರ್ಯಕ್ಕಿಂತ ಸಮಾಜದ ಸ್ವಾಸ್ಥ ಮುಖ್ಯವಾಗುತ್ತದೆ, ಭಾರತಮಾತೆಯನ್ನು ಬೆತ್ತಲೆ ಚಿತ್ರಿಸುವ ಮೂಲಕ ಹುಸೇನ್ ತಮ್ಮ ಯಾವ ಸ್ವಾತಂತ್ರ್ಯವನ್ನು ಚಿತ್ರಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನ ಸ್ವೇಚ್ಛೆಗಾಗಿ ಒಂದು ಜನಾಂಗ, ಒಂದು ವರ್ಗ, ಒಂದು ಸಮಾಜದ ಭಾವನೆಗಳನ್ನು ಅವಮಾನಿಸುವುದನ್ನು ನಾನು ಯಾವತ್ತಿಗೂ ಖಂಡಿಸುತ್ತೆನೆ.
ಹುಸೇನರನ್ನು ಮತ್ತು ಮೊಹಮ್ಮದ್ ಕಾರ್ಟೂನ್‍ಗಳನ್ನು ಅಚ್ಚುಹಾಕಿದ ಡೇನಿಶ್ ಪತ್ರಿಕೆಯನ್ನೂ..
ಚಕೋರ // June 12, 2008 at 5:33 pm
ಶೆಟ್ಟರೆ:
ಮೊದಲಿಗೆ ಒಂದನ್ನು ಸ್ಪಷ್ಟಗೊಳಿಸೋಣ: ನಾನು ಹುಸೇನರ ಸ್ವಾತಂತ್ರ್ಯವನ್ನು ಸಮರ್ಥಿಸುತ್ತೇನೆ; ಆದರೆ ಅದು ಅವರು ಚಿತ್ರ ಎಂದು ಬರೆದದ್ದೆನ್ನಲ್ಲ ಪ್ರೋತ್ಸಾಹಿಸುತ್ತೇನೆ ಎಂದಲ್ಲ; ಹುಸೇನ್ ಕಲಾವಿದನೋ, ಸುಮ್ಮನೆ ಗಿಮಿಕ್ ಮಾಡುತ್ತಾರೋ ನನಗೆ ಗೊತ್ತಿಲ್ಲ.
ಎರಡನೆಯದಾಗಿ, ನಾನು ಹುಸೇನರದಷ್ಟೆ ಅಲ್ಲದೆ ನಿಮ್ಮ, ನನ್ನ, ಹಾಗೂ ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಸಮರ್ಥಿಸುತ್ತೇನೆ ಹಾಗೂ ಬಯಸುತ್ತೇನೆ. ಆದ್ದರಿಂದ, ಅವರಿಗೆ ಚಿತ್ರ ಬರೆಯುವ ಸ್ವಾತಂತ್ರ್ಯ ಇದ್ದ ಹಾಗೇ ನಿಮಗೆ ವೈಯಕ್ತಿಕವಾಗಿ ಅದನ್ನು ವಿರೋಧಿಸುವ, ಟೀಕಿಸುವ ಅಥವಾ ಹುಸೇನ್ ಹಾಗೂ ಅವರ ಚಿತ್ರಗಳನ್ನು ಉಪೇಕ್ಷಿಸುವ ಸ್ವಾತಂತ್ರ್ಯವಿದೆ. ಇದು ಎಲ್ಲರಿಗೂ ಇದೆ. ಹುಸೇನ್ ಚಿತ್ರಗಳಲ್ಲಿ ಕಲೆ ಇಲ್ಲ ಎಂದಾದಲ್ಲಿ, ಹೆಚ್ಚು ಜನ ಅವರನ್ನು ಗಂಭೀರ ಕಲಾವಿದ ಎಂದು ಪರಿಗಣಿಸುವುದಿಲ್ಲ.
ಸಮಸ್ಯೆ ಇರುವುದು ಇಂಥ ನಿರ್ದಿಷ್ಟ ಘಟನೆಗಳಲ್ಲಿ ಅಲ್ಲ. ಇಲ್ಲಿ ಅನೇಕ ದೊಡ್ಡ ಸಮಸ್ಯೆಗಳು ಬರುತ್ತವೆ. ಸಮಾಜದ ಸ್ವಾಸ್ಥ್ಯ ಕೆಡುತ್ತದೆ ಎಂದು ನಿರ್ಧರಿಸುವವರು ಯಾರು? ಅವರು ಎಲ್ಲ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಗೆ ಹೇಳುತ್ತೀರಿ? ಇಂಥ ಅಧಿಕಾರ ಕೈಯಲ್ಲಿರುವವರು ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲಾರರೆ? ತಮ್ಮ ವೈಯಕ್ತಿಕ ನಂಬಿಕೆ, ಅಭಿಪ್ರಾಯ, ಲಾಭಗಳ ಆಧಾರದ ಮೇಲೆ ತಮಗೆ ಬೇಡವಾದದ್ದನ್ನೆಲ್ಲ ಬ್ಯಾನ್ ಮಾಡಲಾರರೆ? ಗುಜರಾತ್‍ನಲ್ಲಿ ಕೆಲ ಸಿನೆಮಾಗಳ ಬ್ಯಾನ್ ತಮಗೆ ಗೊತ್ತಿರುತ್ತದೆ. ಅಲ್ಲದೆ ಜನರಿಗೆ ಸ್ವಂತ ತಿಳುವಳಿಕೆಯಿಲ್ಲವೆ? ಅಷ್ಟಕ್ಕೂ ಸಮಾಜ ಎಂದರೆ ಯಾವುದು ಮತ್ತು ಯಾವುದರಿಂದ ಅದರ ಸ್ವಾಸ್ಥ್ಯ ಕೆಡುತ್ತದೆ ಎಂದು ಹೇಗೆ ಹೇಳುವುದು? ಪ್ರತಿಯೊಬ್ಬನು ಮಾಡುವ ಏನೋ ಒಂದು ಕೆಲಸದಿಂದ ಮತ್ತ್ಯಾರದೋ ಮನ ನೋಯುತ್ತಿರುತ್ತದೆ. ಇದು ಹೋಗಿ ನಿಲ್ಲುವುದು ಎಲ್ಲಿ?
ಯಾವುದರಿಂದಲೋ ಹಾನಿಯಾಗುತ್ತಿದೆ ಎಂದಾಗ ಅದನ್ನು ವಿರೋಧಿಸುವುದು ಬೇರೆಯ ಪ್ರಶ್ನೆ; ಹಾಗೆಂದು ನಿರ್ಬಂಧಗಳನ್ನು ಹೇರುತ್ತ ಹೋಗುವುದು ತಪ್ಪು.
jogimane // June 14, 2008 at 9:38 am
ಎಲ್ಲವನ್ನೂ ಅನುಮಾನದಿಂದ ನೋಡು. ಅಗೌರವದಿಂದಲ್ಲ ಅನ್ನುತ್ತಿದ್ದರು ವೈ ಎನ್ ಕೆ. ನಾವು ಬೈಯುವುದು ಲೇಖಕನ, ವ್ಯಕ್ತಿಯ ಕೃತಿಯನ್ನೇ ಹೊರತು ವ್ಯಕ್ತಿಯನ್ನಲ್ಲ. ಹೀಗಾಗಿ ಬೈಯುವ ಹಕ್ಕು ನಮ್ಮದು. ಸರಿಯಾಗಿ ಬರೆದಿದ್ದೀರಿ.
ಅಂದಹಾಗೆ, ಬ್ಲಾಗ್ ಮತ್ತೆ ತೆರೆದುಕೊಂಡಿದೆ. ಸ್ಪಂದಿಸಿದ ನಿಮಗೆ ಕೃತಜ್ಞ.
aksharavihaara // June 16, 2008 at 6:28 am
ಚಕೋರರೇ
ನಿಮ್ಮ ವಾದಕ್ಕೆ ತಡವಾಗಿ ಉತ್ತರಿಸುತ್ತಿರುವುದಕ್ಕೆ ಕ್ಷಮೆ ಇರಲಿ. ಸ್ವಾತಂತ್ರ್ಯ ಎಲ್ಲರಿಗೂ ಇದೆ. ಪತ್ರಿಕೆಗಳಿಗೆ ಸ್ವಾತಂತ್ರ್ಯವಿದೆ ಎಂದು ಬೆತ್ತಲೆ ಚಿತ್ರ ಪ್ರಕಟಿಸಲು ಸಾಧ್ಯವಿಲ್ಲ ಅಲ್ಲವೇ? ಹಾಗೇನೆ ಕಲಾವಿದನೂ ಕೂಡಾ. ಹುಸೇನ್ ಬೆತ್ತಲೆ ಚಿತ್ರವನ್ನು ತಮ್ಮ ಕೋಣೆಯೊಳಗೆ ನೇತುಹಾಕಿಕೊಂಡಿದ್ದರೆ ಒಪ್ಪಬಹುದಿತ್ತೇನೋ. ಆದರೆ ಅದನ್ನು ರಾಜಾರೋಷವಾಗಿ ಮಾರಿದ್ದಾರೆ. ತುಂಬಾ ಹಿಂದೆ ಈ ಕುರಿತು ಸುದೀರ್ಘ ಲೇಖನ ಬರೆದಿದ್ದೆ. ಮತ್ತೆ ಅದನ್ನು ಪುನಾರಾವರ್ತಿಸಲು ನನಗೆ ಮನಸಿಲ್ಲ. ನಾನು ಕಾರ್ನಾಡ್‌ಗೆ ಕೇಳಿದ ಪ್ರಶ್ನೆ ಒಂದೇ. ಹುಸೇನ್‌ಗೆ ಕಲಾ ಸ್ವಾತಂತ್ರ್ಯವಿದೆ ಎಂದು ನಿಮ್ಮ ತಾಯಿಯ, ಹೆಂಡತಿಯ, ಅಕ್ಕನ ಬೆತ್ತಲೆ ಚಿತ್ರ ಬಿಡಿಸಿ ಪ್ರದರ್ಶನಕ್ಕಿಟ್ತರೆ ಒಪ್ಪುತ್ತೀರಾ ಎಂದು? ಅದೇ ಪ್ರಶ್ನೆ ನಿಮಗೂ ಕೇಳುವುದು ಅನಿವಾರ್ಯವಾಗಿದೆ(ಕ್ಷಮೆ ಇರಲಿ)
ಶೇಟ್ಟರ್
ಧನ್ಯವಾದಗಳು
ಜೋಗಿಯವರೆ
ನಿಮ್ಮ ಬ್ಲಾಗ್ ಬಾಗಿಲು ತೆರೆದಿರುವ ಸುದ್ದಿ ಕೇಳಿ ತುಂಬಾ ಸಂತಸವಾಯಿತು. ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ತುಂಬಾ ಬರೆದಿದ್ದೀರಾ. ಪುರುಸೊತ್ತು ಮಾಡಿಕೊಂಡು ಓದುವೆ. ಬೈಗುಳ ಸರ್ಮರ್ಥಿಸಿದ್ದಕ್ಕಾಗಿ ಧನ್ಯವಾದಗಳು
ಇಂತಿ
ವಿನಾಯಕ ಕೋಡ್ಸರ
chetanachaitanya // June 18, 2008 at 2:52 am
ಅಯ್ಯೋ ವಿನಾಯಕ…. ಟ್ರೇನು ತಪ್ಪಿಸ್ಕೊಂಡುಬಿಟ್ಟೆ!! ಒಳ್ಳೆ ಟಾಪಿಕ್ ಮಿಸ್ ಆಗಿಹೋಯ್ತು ಮೂಗು ತೂರಿಸ್ಲಿಕ್ಕೆ…
ಇರಲಿ. ಹೌದು ಕಣೋ… ಸುಮ್ಮನೆ ಯಾರು ಏನು ಮಾಡಿದರೂ ಸಮರ್ಥಿಸಿಕೊಳ್ತಾ ‘ಬಕೆಟ್ ’ ಹಿಡಿಯೋದನ್ನ ನಾನಂತೂ ಒಪ್ಪೋದಿಲ್ಲ. ತಪ್ಪು ಮಾಡ್ತಿರುವುದೇ ಹೌದಾದಾಗ ಅದನ್ನ ಬೆಟ್ಟು ಮಾಡೋದ್ರಲ್ಲಿ ತಪ್ಪೇನೂ ಇಲ್ಲ. ಆದರೆ ಕೆಲವರಿಗೆ ಹಾಗೆಲ್ಲ ಬಯ್ಯೋದಕ್ಕೆ ತಮ್ಮ ಲಾಭ- ಲಾಬಿಗಳು ಅಡ್ಡ ಬಂದುಬಿಡ್ತವೆ. ನಿನಗೆ ಅಂಥಾ ಪರಿಸ್ಥಿತಿ ಯಾವತ್ತೂ ಬರದಿರಲಿ ಅಂತ ಹಾರೈಸ್ತೇನೆ!!
ಪ್ರೀತಿಯಿಂದ,
ಚೇತನಕ್ಕ
ಚಕೋರ // June 18, 2008 at 4:45 am
ವಿನಾಯಕರೆ:
ನಾನೂ ಹೇಳುವುದನ್ನು ಹೇಳಿಯಾಗಿದೆ. ನಾನು ಹೇಳಿದ್ದನ್ನು ನೀವು ಅರ್ಥೈಸಿಕೊಂಡಿದ್ದರೆ ಈ ಪ್ರಶ್ನೆಗಳೇ ಬರುತ್ತಿರಲಿಲ್ಲ. ಇರಲಿ. ಪತ್ರಿಕೆಗಳು ಬೆತ್ತಲೆ ಚಿತ್ರ ಪ್ರಕಟಿಸಲು ಸಾಧ್ಯವಿಲ್ಲವೆ? ಯಾಕೆ? ನೂರಾರು ಮ್ಯಾಗಜಿನ್‍ಗಳು, ಸಾವಿರಾರು ವೆಬ್‍ಸೈಟುಗಳು ಇವೆಯಲ್ಲ. ಇನ್ನು ವರ್ತಮಾನ ಪತ್ರಿಕೆಗಳು. ಒಂದು ಪತ್ರಿಕೆ ಬೆತ್ತಲೆ ಚಿತ್ರಗಳನ್ನು ಸಾಂದರ್ಭಿಕವಾಗಿಯಲ್ಲದೆ ಕೇವಲ sensationalism ಸಲುವಾಗಿ ಪ್ರಕಟಿಸುತ್ತದೆ ಅಂದುಕೊಳ್ಳೋಣ. ಅದರ ನಂತರ ಆ ಪತ್ರಿಕೆಯ ಹಣೆಬರಹ ಹೇಗಿರುತ್ತದೋ ಹಾಗೆ ಆಗುತ್ತದೆ. ಅದನ್ನು ಗಂಭೀರವಾಗಿ ಜನ ತೊಗೊಳ್ಳುವುದಿಲ್ಲ. ಟೈಮ್ಸ್ ಆಪ್ ಇಂಡಿಯಾದ circulation ಅತ್ಯಂತ ಹೆಚ್ಚಿರಬಹುದು. ಆದರೆ ಅದು ಒಳ್ಳೆಯ ಪತ್ರಿಕೆ ಎಂದು ಹೇಳುವ ಜನರು ಕಡಿಮೆ. ಇಷ್ಟಕ್ಕೂ ದಿನಪತ್ರಿಕೆಗಳು ಸಿನೆಮಾದ ಪೋಸ್ಟರುಗಳನ್ನೂ, ಜಾಹೀರಾತುಗಳನ್ನೂ ಹಾಕುವುದಿಲ್ಲವೆ? ಅದರಲ್ಲಿ ನಗ್ನತೆ ಇರುವುದಿಲ್ಲವೆ? ಅಥವಾ ಅಷ್ಟಿದ್ದರೆ ಪರವಾಗಿಲ್ಲವೋ? ಯಾರು ನಿರ್ಧರಿಸುವವರು?
ಅಥವಾ ಒಂದು ಸಿನೆಮಾದಲ್ಲಿ ನಟ/ನಟಿ ನಗ್ನವಾಗಿಯೋ, ಅರೆನಗ್ನವಾಗಿಯೋ ನಟಿಸುವ ಪ್ರಸಂಗ ಇದ್ದರೆ ಆ ನಟ/ನಟಿಯ ಒಪ್ಪಿಗೆ ಇದ್ದರೆ ಸಾಲದೋ? ಅದಕ್ಕಾಗಿ ಒಂದು ಒಪೀನಿಯನ್ ಪೋಲ್ ನಡೆಸಬೇಕೋ?
ಮತ್ತೆ ನಿಮ್ಮ ಕೊನೆಯ ಪ್ರಶ್ನೆ. ಪ್ರಶ್ನೆಯ ಬಗ್ಗೆ ನನಗೆ ಬೇಜಾರಿಲ್ಲ. ಆದರೆ ನಾನು ಹೇಳಿದ್ದನ್ನು ಗಮನಿಸಿದ್ದರೆ ಈ ಪ್ರಶ್ನೆಯೂ ಬರುತ್ತಿರಲಿಲ್ಲ. ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಹುಸೇನರಿಗಷ್ಟೆ ಅಲ್ಲ, ಪ್ರತಿಯೊಬ್ಬ ವ್ಯಕ್ತಿಗೂ ಸ್ವಾತಂತ್ರ್ಯ ಇದೆ. ಹುಸೇನ್ ನನ್ನ ಅಥವಾ ನನಗೆ ಸಂಬಂಧಿಸಿದವರ ನಗ್ನ ಚಿತ್ರ ಬಿಡಿಸಲು ಹಾಗೂ ಪ್ರದರ್ಶಿಸಲು ಅನುಮತಿ ಕೇಳಿ ಪಡೆದುಕೊಂಡು ಮಾಡಿದರೆ ಮಾಡಿಕೊಳ್ಳಲಿ. ಅದನ್ನು ನಾನು ಒಪ್ಪಿಯೇ ಒಪ್ಪುತ್ತೇನೆ. ಆದರೆ ಅವರು ನನ್ನ ಅನುಮತಿಯಿಲ್ಲದೆ ಬಿಡಿಸಿದರೆ ಯಾ ಪ್ರದರ್ಶಿಸಿದರೆ ಅದು ನನ್ನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಅದನ್ನು ನಾನು ವಿರೋಧ್ಸಿಯೇ ವಿರೋಧಿಸುತ್ತೇನೆ. ಅದು ಸರಳವಾಗಿದೆ. ಇಷ್ಟಕ್ಕೂ ಸಂಕೇತಗಳ, ಪ್ರತಿಮೆಗಳ ಚಿತ್ರ ಬಿಡಿಸುವುದಕ್ಕೂ ವ್ಯಕ್ತಿಗಳ ಚಿತ್ರ ಬಿಡಿಸುವುದಕ್ಕೂ ಹೋಲಿಸುವ ನಿಮ್ಮ ಪ್ರಶ್ನೆಯೇ ವಿಚಿತ್ರವಾಗಿದೆ. ಗಿರೀಶ್ ಕಾರ್ನಾಡರಿಗೆ ನೀವು ಇದನ್ನು ಕೇಳಿದಾಗ ಅವರು ಏನು ಹೇಳಿದರೋ ಗೊತ್ತಿಲ್ಲ, ಆದರೆ ಈ ಪ್ರಶ್ನೆ ತಾರ್ಕಿಕವಾಗಿ ತಪ್ಪು.
ಕೊನೆಯ ಮಾತು: ಇಲ್ಲಿ ಪ್ರಶ್ನೆ ಇರುವುದು ಒಂದು ಸಂಕೇತ, ಪ್ರತಿಮೆ, symbolನ ಚಿತ್ರಣದ ಬಗ್ಗೆ. ಇವು ಕಾಲಕಾಲಕ್ಕೂ, ಸಮುದಾಯ ಸಮುದಾಯಕ್ಕೂ, ವ್ಯಕ್ತಿವ್ಯಕ್ತಿಗೂ, ಕಾಲಕಾಲಕ್ಕೂ ಬದಲಾಗುತ್ತಿರುತ್ತವೆ. ಉದಾಹರಣೆಗೆ, ನಿಮಗೆ ಯಾವುದೋ symbol ಬಗ್ಗೆ ಶ್ರದ್ಧೆ ಇರಬಹುದು. ಹಾಗಂತ ನಾನೂ ಅದರ ಬಗ್ಗೆ ಶ್ರದ್ಧೆ ಇಟ್ಟುಕೊಳ್ಳಬೇಕು ಎಂದು ಒತ್ತಾಯಿಸುವುದು ತಪ್ಪು. ನಾನು ’ಮರದೇವತೆ’ಯನ್ನು ಆರಾಧಿಸುವ ಪಂಗಡಕ್ಕೆ ಸೇರಿದ್ದೇನೆ ಅಂದುಕೊಳ್ಳಿ. ನನ್ನ ಪ್ರಕಾರ ಯಾರಾದರೂ ಮರವನ್ನು ಚಿತ್ರಿಸಿದರೆ ಅದನ್ನು ಸುಂದರವಾಗಿ ಎತ್ತರವಾಗಿ ಚಿತ್ರಿಸಬೇಕು. ಮರ ಮಳೆಗುರುಳಿದಂತೆ, ಮರವನ್ನು ಕಡಿದಂತೆ ಇತ್ಯಾದಿ ಚಿತ್ರ ಬಿಡಿಸಿದರೆ ನಮ್ಮ ಸಮುದಾಯಕ್ಕೆ ಅಪಚಾರವಾಗುತ್ತದೆ. ಹೀಗೆ ಹೇಳಿದರೆ ಅಸಂಬದ್ಧವೇ? ಏಕೆ? ನನ್ನ ನಂಬಿಕೆ ಸ್ವಾಮಿ ಅದು! ಅದಕ್ಕೆ ಅಪಚಾರವಾಗಬಾರದು! ಮತ್ತೊಬ್ಬರದು ಮತ್ತೊಂದಿರುತ್ತದೆ. ಹೀಗೆ ನಡೆದರೆ ಎಲ್ಲಿ ನಿಲ್ಲುತ್ತದೆ? ಅಥವಾ ಬಹುಸಂಖ್ಯಾತರು ಏನನ್ನೋ ನಂಬಿದ್ದರೆ ಅದು ಮಾತ್ರ ಸತ್ಯವೋ? ಇವೆಲ್ಲ ಪ್ರಶ್ನೆಗೆ ನೀವು ಉತ್ತರಿಸಬೇಕೆಂದಿಲ್ಲ. ಏಕೆಂದರೆ ಇಬ್ಬರೂ ಹೇಳುವುದು ಹೇಳಿಯಾಗಿದೆ. ಇದನ್ನು ಇಲ್ಲಿಯೇ ಬಿಟ್ಟು ಬೇರೇನಾದರ ಬಗ್ಗೆ ಮಾತಾಡಬಹುದು.
aksharavihaara // June 18, 2008 at 6:10 am
chakorare
sex book, photo illa endalla aadare patrikegalu kaanunureetyavaagi bettale chitra prakatisuva haagilla. haagu samajada hitadindallu adu sariyalla embudu nanna abhipraaya. inondu maatu marakku devategu vyatyaasaavide. adannu moodate enni, bhavaane enni, nambike enni. husen tanna swatantrya mereyabahudu aadare innobarra swatantra dakkegolisuva haagilla allave? neeve helluttiree nimma sambandhigala chitra bareyalu anumati beke endu. aadare deshada vichaarakke bandaaga kalaavidana kaala swatantryada maataaduttiree idu yaava nyaaya swaami?
ಶೆಟ್ಟರು (Shettaru) // June 19, 2008 at 3:55 am
ಚಕೋರರೇ,
ನಿಮ್ಮ ವ್ಯಕ್ತಿ ಸ್ವಾತಂತ್ರದ ಪರಿಭಾಷೆ ಒಪ್ಪುವಂತದ್ದಲ್ಲ. ನನಗನಿಸಿದಂತೆ ನಿಮ್ಮ ವ್ಯಕ್ತಿ ಸ್ವಾತಂತ್ರದ ಪರಿಭಾಷೆಯ “ಯಾವುದೋ symbol ಬಗ್ಗೆ ಶ್ರದ್ಧೆ ಇರಬಹುದು. ಹಾಗಂತ ನಾನೂ ಅದರ ಬಗ್ಗೆ ಶ್ರದ್ಧೆ ಇಟ್ಟುಕೊಳ್ಳಬೇಕು ಎಂದು ಒತ್ತಾಯಿಸುವುದು ತಪ್ಪು.” ಎನ್ನುವುದೇ ನನಗೆ ತಪ್ಪೆಂದು ಅನ್ನಿಸುತ್ತದೆ.
Basically ಮಾನವ ಸಮಾಜ ಜೀವಿ, ಕುಟುಂಬ ಪದ್ಧತಿಯಲ್ಲಿ ನಂಬಿಕೆಯುಳ್ಳವನು. (ಇದು ನಾನು ಹೇಳಿದ್ದಲ್ಲ ಸಮಾಜಶಾಸ್ತ್ರಜ್ಞರು ಹೇಳಿದ್ದು, ನೀವು ಕೂಡಾ ನಂಬುತ್ತಿರಂದುಕೊಂಡಿದ್ದೆನೆ.) ಸಮಾಜ ಮತ್ತು ಕುಟುಂಬ ಪದ್ಧತಿಯಲ್ಲಿ ಸಾಮರಸ್ಯ ಅತಿ ಮುಖ್ಯ, ನೀವು ಒಪ್ಪುವಿರಿ. ಇಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಸಮಾಜ ಮತ್ತು ಕುಟುಂಬದ ಸ್ವಾಸ್ತ್ಯ ಮುಖ್ಯ. ಒಪ್ಪುವಿರೆ? ಸಮಾಜ ಮತ್ತು ಕುಟುಂಬಗಳ ಸ್ವಾಸ್ತ್ಯ ಕೆಲವು ನಂಬಿಕೆಗಳ ಮೇಲೆ ನಿಂತಿರುತ್ತವೇ, ಒಪ್ಪುವಿರೆ? ಉದಾಹರಣೆಗೆ ಮನೆಯಿಂದ ಹೋರಗೆ ಹೋಗುವಾಗ ಅಥವಾ ಬೇರೆಯವರೆದರಿಗೆ ಹೋಗುವಾಗ ಬಟ್ಟೆ ತೋಡಬೇಕು, ಹೀರಿಯರನ್ನು ಗೌರವಿಸಬೇಕು, ಕಿರಿಯರಿಗೆ ಪ್ರೀತಿಸಬೇಕು, ಹೆಣ್ಣುಮಕ್ಕಳನ್ನು ಗೌರವಿಸಬೇಕು ಮತ್ತು (ದಯವಿಟ್ಟು ಗಮನಿಸಿ) ತಾಯಿಯನ್ನು ಗೌರವಿಸಿ, ಬಕ್ತಿಯಿಂದ ನೋಡಬೇಕು, ಅವಳನ್ನು “ಕಾಮಿಸ” ಕೂಡದು.
ಹೀಗಿರುವ ಹಲವಾರು ಸಮಾಜಗಳ ಒಟ್ಟು ಮೊತ್ತವೇ ಒಂದು ರಾಜ್ಯ- ದೇಶ, ದೇಶವು ಒಂದು ಕುಟುಂಬ ಎಂಬುದು ಒಂದು ನಂಬಿಕೆ (ನಮ್ಮೆಲ್ಲರದ್ದು ಎಂದುಕೊಂಡಿದ್ದೇನೆ), ಈ ನಂಬಿಕೆ ಸಮಾಜದ ಹಲವಾರು “ನಂಬಿಕೆ”ಗಳ ಒಟ್ಟುಮೊತ್ತ ಅಥವಾ ನೀವು ಕಟ್ಟುಪಾಡು ಅಂದು “ಕೊಂದ(ಡ)ರು” ಆಗುತ್ತೆ. ದೇಶ, ರಾಜ್ಯ, ಮತ್ತು ಸಮಾಜದ ನಂಬಿಕೆಗಳನ್ನು ನಾವು ಕಾಯಲೇ ಬೇಕಾಗುತ್ತದೆ, ಕೆಲವೊಮ್ಮೆ ವಿರೋಧಾಭಾಸಗಳು ಆಗುತ್ತವೆ, ಅದನ್ನು ನಾನೂ ಒಪ್ಪುತ್ತೇನೆ. ಆದರೆ ಈ ವಿರೋಧಾಭಾಸಗಳು ಕೂಡಾ “ಸಮಾಜಮುಖಿ”ಯಾಗಿರಬೇಕಲ್ಲವೇ, ಇಲ್ಲಿ ವ್ಯಕ್ತಿಸ್ವಾತಂತ್ರ್ಯವನ್ನು ಹುಸೇನರು ಯಾವ ಸಮಾಜಮುಖಿಯಾಗಿ ನೀಡಿದ್ದಾರೆ ಎಂಬುದೆ ನನಗೆ ತಿಳೀಯುತ್ತಿಲ್ಲ ಮತ್ತು ಇದನ್ನು ಕೂಡಾ ನಾವು ವ್ಯಕ್ತಿಸ್ವಾತಂತ್ರ್ಯ ಎನ್ನುವ ಪರಿಭಾಷೆಯಲ್ಲಿ ಹೊಂದಿಸುವುದಾದಲ್ಲಿ ನಾಳೆ ನೀವು (ಬೇರೆ ಯಾರೋ ಕೂಡಾ ಆಗಿರಬಹುದು)ನನ್ನನ್ನು ಮತ್ತು ನನ್ನ ಮನೆಯವರನ್ನು ಬೆತ್ತಲೆಯಾಗಿ ಚಿತ್ರಿಸಿದಾಗ ಅದು ನನ್ನ ಪಾಲಿಗೆ ಅನ್ಯಾಯವಾದರೂ, ನಿಮಗೆ (ಚಿತ್ರಿಸಿದವರಿಗೆ) ಅದು ವ್ಯಕ್ತಿಸ್ವಾತಂತ್ರ್ಯವೇ?
ಕ್ಷಮಿಸಿ, ನನಗೆ ಭಾರತಮಾತೆಯನ್ನು ನನ್ನ ಕುಟುಂಬದವರಿಂದ ಬೇರೆ ಮಾಡಿ ನೋಡಲು ಬರುವುದಿಲ್ಲ.
ಪ್ರೀತಿಯಿರಲಿ
ಶೆಟ್ಟರು