ಪುರೋಹಿತ ಪುಡಾರಿಗಳು ಮತ್ತು ದೇವರು….!

March 30, 2008 · Leave a Comment

(ಈ ಲೇಖನ ಆರಂಭಿಸುವ ಮುನ್ನವೇ ಒಂದಿಷ್ಟು ಸಂಗತಿಗಳನ್ನು ಹೇಳಿಬಿಡುತ್ತೇನೆ. ಈ ಲೇಖನಕ್ಕೆ ಕೊಟ್ಟಿರುವ ಶಿರ್ಷಿಕೆ ಅಥವಾ ತಲೆ ಬರಹ ತೀರಾ ಕೆಟ್ಟದಾಗಿದೆ ಅಂತಾ ನಾನು ಬಲ್ಲೆ. ಹಾಗಂತ ಇದು ಯಾವುದೋ ಒಂದು ವರ್ಗವನ್ನು ಕುರಿತಾಗಿ ಅವಹೇಳನ ಮಾಡುವ ಅಥವಾ ಯಾವುದೋ ಒಂದು ವರ್ಗದ ದ್ವೇಷಿಯಾಗಿ ಏಕಮುಖಿ ಚಿಂತನೆಯೊಂದಿಗೆ ಬರೆಯುತ್ತಿರುವ ಬರಹವಲ್ಲ. ಪ್ರಸ್ತುತದ ಒಂದು ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಅದರ ಎಡ ಬಲಗಳ ಸುತ್ತ ಅವಲೋಕಿಸಲು ಹೊರಟ್ಟಿದ್ದೇನೆ . ಇಲ್ಲಿ ಪರ ವಿರೋದಗಳ ದ್ವಂದ ಮಿಶ್ರಣದ ಎರಡು ಮಜಲುಗಳ  ಅವಲೋಕನ ಇದೆ. ಆ ನಿಲುವು ನನ್ನೊಳಗಿನ ಗೊಂದಲ ಅಂತಾನೂ ನೀವು ಭಾವಿಸಬಹುದು. ಇಲ್ಲಿ ಮುಕ್ತ ಚರ್ಚೆಗೆ ಅವಕಾಶವಿದೆ.  ಇಲ್ಲಿನ ಬರಹಕ್ಕಿಂತ ಭಿನ್ನವಾದೊಂದು ಆಲೋಚನೆ ನಿಮ್ಮಿಂದ ಹರಿದು ಬಂದರೆ ಖಂಡಿತಾ ಅದನ್ನು ನಾನು ಸ್ವೀಕರಿಸುತ್ತೇನೆ.)
ಅದ್ಯಾಕೋ ಬೆಂಗಳೂರೆಂಬ ಈ ಹಾಳು ಕಾಂಕ್ರೀಟು ಜಂಗಲ್ಲು ಸೇರಿದ ಮೇಲೆ ನನಗಂತೂ ದೇವರಿಗೆ ಕೈ ಮುಗಿಯಬೇಕು, ದೇವಸ್ಥಾನಕ್ಕೆ ಎಂಟ್ರಿಕೊಡಬೇಕು ಅಂತಾನೆ ಅನ್ನಿಸ್ತಾ ಇಲ್ಲ. ಮನೆಯಲ್ಲಿದ್ದರೆ ಕನಿಷ್ಟಪಕ್ಷ ಬೆಳಿಗ್ಗೆ ಎದ್ದವನಾದರೂ ದೇವರಿಗೆ ಕೈಮುಗಿಯುತ್ತಿದ್ದೆ. ಆದರೆ ಬೆಂಗಳೂರೆಂಬ ಮಹಾನಗರಿಯ ಒಂದಿಷ್ಟು ಪುಡಾರಿ ಪುರೋಹಿತರನ್ನು ಕಂಡ ಮೇಲೆ ಆ ಸಂಪ್ರದಾಯವೂ ನನ್ನಿಂದ ದೂರವಾಗಿದೆ. ನಿನ್ನಿಂದ ದೂರವಾಗಿರುವ ಸಂಪ್ರದಾಯವೊಂದಕ್ಕೆ ಬಡಪಾಯಿ ಪುರೋಹಿತನ್ನ ಯಾಕೆ ಬಲಿಪಶು ಮಾಡ್ತಿಯಾ ಅಂತಾ ಗೆಳೆಯನೊಬ್ಬ ಕೇಳಿದ್ದ. ಅಲ್ಲೋ ಆ ದೇವರಿಗೆ ತನ್ನ ಬಳಿಯಿರುವ ಅರ್ಚಕನೇ ದೇವರ ಹೆಸರುಹೇಳಿಕೊಂಡು ಲಫಡಾ ಮಾಡಲು ಹೊರಟಿರುವುದು ಕಣ್ಣೆದುರಿಗೆ ಕಾಣುತ್ತಿದ್ದರು ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಅಂತಾದರೆ ಅವನೆಂತಹ ದೇವರೋ! ಅಂತಾ ತಿರುಗಿ ಉತ್ತರ ನೀಡಿದ್ದೆ!
ಹೌದು ಇವತ್ತು ದೇವಸ್ಥಾನವೆಂಬುದು ಹಣಗಳಿಕೆಯ ಕೇಂದ್ರವಾಗಿದೆ! ಬೆಂಗಳುರಿನಲ್ಲಿ ಕೆಲ ಪುರೋಹಿತ ಪುಡಾರಿಗಳು ದೇವರ ಹೆಸರು ಹೇಳಿಕೊಂಡು, ಇಲ್ಲಸಲ್ಲದ ವಿಚಿತ್ರ ಕಥೆಗಳನ್ನೆಲ್ಲಾ ಹೇಳಿಕೊಂಡು ಅದ್ಯಾವ ಪರಿ ಹಣ ಮಾಡ್ತಾ ಇದ್ದಾರೆ ಅಂದ್ರೆ? ಅದನ್ನು ನೆನಸಿಕೊಂಡ್ರೇನೆ ಭಯವಾಗತ್ತೆ. ಇವತ್ತು ಪೂಜೆಗಳಿಗೂ ಕಾಂಟ್ರಾಕ್ಟ್ ಪದ್ದತಿ ತಂದಿದ್ದಾರೆ! ಅಂದರೆ ಯಾವುದೋ ಒಂದು ಕಾರ್ಯಕ್ರಮವನ್ನು ಇಡಿ ಇಡಿಯಾಗಿ ಕಂಟ್ರಾಕ್ಟ್ ತೆಗೆದುಕೋಳ್ಳೋದು! ಬಿಲ್ಡ್‍ರ್ಸ ಎಲ್ಲಾ ಬಿಲ್ಡಿಂಗ್ ಕಾಂಟ್ರಾಕ್ಟ್ ಹಿಡಿತಾರಲ್ಲ ಅಂತಹದ್ದೇ ಅದು! ಇನ್ನೂ ಅವರು ಬರೆದುಕೊಡುವ ಪೂಜಾ ಸಾಮಾಗ್ರಿಗಳ ಪಟ್ಟಿಯೋ! ಪುಜಾರಿ ಮನೆಯಲ್ಲಿ ಖಾಲಿಯಾದ ಬೇಳೆಕಾಳುಗಳೆಲ್ಲಾ ಆ ಪಟ್ಟಿಯಲ್ಲಿ ಇರತ್ತೆ ಅಂದ್ರೆ ತಪ್ಪಾಗಲಾರದೇನೋ! ದೇವರು ಇದ್ದಾನೋ, ಇಲ್ಲವೋ ಅನ್ನೋದು ಸೆಕೆಂಡರಿ ವಿಚಾರ. ಆದ್ರೆ ಆತನ್ನನ್ನು ನಂಬಿಕೊಂಡು ಆತನ ಆರಾಧನೆಗೆ ನಾವು ಅಳವಡಿಸಿಕೊಂಡ ಪೂಜಾವಿಧಾನಗಳಿದೆಯಲ್ಲಾ ಅವುಗಳ ಹಿಂದಿರುವ ಕಲ್ಪನೆ ನಿಜಕ್ಕೂ ಅದ್ಬುತ. ನಾನು ಒಂದ್ಸಾರಿ ಹೀಗೆ ಮೂರ್ತಿರಾಯರ “ದೇವರು” ಅನ್ನೋ ಪುಸ್ತಕ ಓದಿಕೊಂಡು ನಂತರ ಹಿರಿಯ ಸಂಸ್ಕೃತ ವಿದ್ವಾಂಸ ಹತ್ತಿರ ಸಾರ್ ನಂಗೆ ಆ ಪುಸ್ತಕದ ಕುರಿತಾಗಿ ನನ್ನಲೇ ಒಂದಿಷ್ಟು ಅನುಮಾನಗಳಿವೆ ಅಂತಾ ಕೇಳಿದೆ. ಅದ್ಕೆ ಅವರು ಕೊಟ್ಟಿದ್ದು ಒಂದೇ ಸಾಲಿನ ಉತ್ತರ. “ನೀನು ದೇವರ ಕುರಿತಾಗಿ ಎಷ್ಟು ಪುಸ್ತಕ ಓದಿದ್ದೀಯಪ್ಪಾ” ಅಂತಾ. ಅಷ್ಟೊತ್ತಿಗೆ ನಂಗೆ ನನ್ನ ಬಾಲಿಶತನದ ಅರಿವಾಗಿತ್ತು.
ಮೊನ್ನೆ ಕಣ್ಣನ್ ಮಾಮ ನಮ್ಮ ಆಚರಣೆಗಳ ಹಿಂದಿರುವ ಸೂಕ್ಷ್ಮಗಳ ಕುರಿತಾಗಿ, ಸಂಸ್ಕೃತ ಮಂತ್ರಗಳ ಹಿಂದಿದ್ದ ಸಾಮಾಜಿಕ, ಪ್ರಾಕೃತಿಕ ಕಲ್ಪನೆಗಳ ಕುರಿತಾಗಿ ಪುಟ್ಟದಾಗಿ ಹೇಳಿದರು. ನಾವೇಕೆ  ಸರ್ವಾಂತರಯಾಮಿ ಅನ್ನೋ ದೇವರನ್ನು ಹಲವು ಬಗೆಯಲ್ಲಿ ಆರಾಧಿಸುತ್ತೇವೆ ಅನ್ನೋದಕ್ಕೆ ಅವರು ರುದ್ರ ಮತ್ತು ಚಮಕದ ನಡುವಿನ ಪ್ರಾತಕ್ಷಿತೆಯೊಂದನ್ನು ನೀಡಿದರು. ಆವಾಗಲೇ ನನಗೆ ನಮ್ಮ ದೇವರ ಆರಾಧನೆಗಳು ಪೂಜೆಗಳು ಒಂದು ಕಡೆ ಮುರ್ಖತನ ಅಂತಾ ಅನ್ನಿಸಿದರು ಅದರ ಅಂತಾರಾಳದಲ್ಲಿ ಬೇರೆಯೇ ಆದ ಅರ್ಥವಿದೆ ಅನ್ನಿಸಿದ್ದು. ಆ ಕುರಿತಾಗಿ ಮಾತಾಡಲು ನನ್ನ ಬಳಿ ಹೆಚ್ಚಿನ ಅಧ್ಯಯನವಿಲ್ಲದೇ ಇರುವುದರಿಂದ ಅದನ್ನು ಇಲ್ಲಿ ಚರ್ಚಿಸುವುದಿಲ್ಲ. ಆ ಕುರಿತಾಗಿ ನನ್ನ ನಿಲುವು ಇಷ್ಟೆ ನಮ್ಮ ಪ್ರತಿಯೊಂದು ಆಚರಣೆ ಹಿಂದೆಯೂ ಒಂದೊಂದು ನಮ್ಮ ಜೀವನಕ್ಕೆ ತೀರಾ ಹತ್ತಿರವಾದ ಪರಿಕಲ್ಪನೆ ಇದೆ. ಅದನ್ನು ಅಧ್ಯಯನಹೀನ ನಮ್ಮಂತಹವರಿಂದ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಅವುಗಳೆಲ್ಲವು ಮೂಢ ಅನ್ನುತ್ತಿದ್ದೇವೆ!(ಎಲ್ಲ ಅಂದರೆ ಎಲ್ಲ ಆಚರಣೆಗಳು ಸರಿ ಅನ್ನುತ್ತಾ ಇಲ್ಲ. ಹೆಚ್ಚಿನವು ಸರಿಯಿವೆ. ಆ ಕುರಿತು ವಿಶೇಷ ಅಧ್ಯಯನ ನಡೆಸಿದ ಹಲವು ಮಂದಿ ನಮ್ಮ ನಡುವೆಯೇ ಇದ್ದಾರೆ)
ಅಂತಹದೊಂದು ಅದ್ಬುತ ಪರಿಕಲ್ಪನೆಯ ದೇವರನ್ನು, ಪೂಜೆಗಳನ್ನು ನಮ್ಮ ಪುರೋಹಿತಶಾಹಿಗಳು ಇಂದು ತೀರಾ ಹದಗೆಡಿಸುತ್ತಿದ್ದಾರೆ.  ದೇವರು ಬ್ರಾಹ್ಮಣರ ಸ್ವತ್ತು, ಸಂಸ್ಕೃತ ಬ್ರಾಹ್ಮಣರ ಭಾಷೆ ಎಂಬಂತೆ ಸಮಾಜದ ಬ್ರಾಹ್ಮಣವರ್ಗ ಹಲವು ಶತಮಾನಗಳ ಕಾಲದಿಂದಲೂ ವರ್ತಿಸಿಕೊಂಡು ಬಂದಿದೆ ಎಂಬ ಗಂಭೀರ ಆರೋಪ ಬ್ರಾಹ್ಮಣರ ಮೇಲಿದೆ! ತಲತಲಾಂತರದಿಂದಲೂ ಜಾತಿ ಅನ್ನೋದು ಬಹುದೊಡ್ಡ ಚರ್ಚೆಯ ವಿಷಯವಾಗಿದೆ! ಆ ವಿಚಾರ ನನ್ನ ಈ ವ್ಯಾಪ್ತಿಯೊಳಗೆ ಬಾರದೇ ಇರುವುದರಿಂದ ಅದನ್ನು ನಾನಿಲ್ಲಿ ಚರ್ಚಿಸಲಾರೆ.
ಹಲವರು ಅದೆಂತೆಂತಹದ್ದೋ ಹಾದರ ಮಾಡಿ ದುಡ್ಡು ಮಾಡುತ್ತಾರೆ ಅಂತಹದ್ದರಲ್ಲಿ ಬಡ ಬ್ರಾಹ್ಮಣ ದೇವರ ಹೆಸರು ಹೇಳಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಅನ್ನಿಸತ್ತೆ ಒಂದೊಂದ್ಸಾರಿ. ಆದ್ರೆ ಹಾಗೇ ದುಡ್ಡು ಮಾಡಲು ದೇವರಂತಹ ಪಾವಿತ್ರ್ಯಕಲ್ಪನೆಯನ್ನು ಬಲಿಕೊಡೋದು ಸರಿಯಲ್ಲ ಅಂತಾನೂ ಇನ್ನೊಂದು ಕಡೆ ಅನ್ನಿಸತ್ತೆ ನಂಗೆ.
(ಇಲ್ಲಿಗೆ ಈ ಚಿಂತನೆಯ ಮೊದಲನೆ ಮಜಲನ್ನು ಮುಗಿಸಿದ್ದೇನೆ. ಎರಡನೇ ಮಜಲನ್ನು ಶೀಘ್ರವಾಗಿ ಪ್ರಕಟಿಸುತ್ತೇನೆ)

Categories: ಚಿಂತನ ಚಾವಡಿ

0 responses so far ↓

  • There are no comments yet...Kick things off by filling out the form below.

Leave a Comment