ತಿರ್ಥಹಳ್ಳಿಯ ಜೋಯ್ಸರ ಮಗಳೇ!!!
ಪುಟ್ಟಿ,
ಹಾಳಾದ ಈ ಬ್ಲಾಗಿಗೆ ಬರೆಯೋದನ್ನ ಶುರುಹಚ್ಚಿಕೊಂಡ ಮೇಲೆ ನಿನಗೆ ಲೇಟರ್ ಬರೆಯೋದೇ ಮರೆತುಹೋಗಿತ್ತು ನೋಡು. ನಂಗೊತ್ತು ನೀನು ಚೂಪು ಮೂತಿ ಮಾಡಿಕೊಂಡು, ಮುಖ ಕೆಂಪೇರಿಸಿಕೊಂಡು, ನನ್ನ ಮೇಲೆ ಹರಿಹಾಯ್ತ ಕುತಿರುತ್ತೀಯಾ ಅಂತಾ. ಎಷ್ಟಂದ್ರೂ ನೀನು ಜೋಯ್ಸರ ಮಗಳಲ್ವಾ? ಹಾಗಾಗಿ ಮೂಗಿನ ತುದಿಗೆ ಸಿಟ್ಟು ನಿಂಗೆ!
ಏ ನೀನು ನಂಗೆ ಮೊದಲನೇ ಸಾರಿ ನೋಡ್ಲಿಕ್ಕೆ ಸಿಕ್ಕಿದ್ದು ಭಿಮನಕಟ್ಟೆಯ ದೋಣಿಯಲ್ಲಿ ಅಲ್ವಾ? ಅದೇ ಕಣೆ ನಾನು ದೋಣಿಯಲ್ಲಿ ಕೂತಿದ್ದೆ. ಅಷ್ಟೊತ್ತಿಗೆ ನೀನು ಗಯ್ಯಾಳಿ ತರ ಎಂಟ್ರಿ ಕೊಟ್ಟೆ. ದೋಣಿಯ ಅಂಬಿಗನ ಹತ್ತಿರ ಅದ್ಯಾವುದೋ ಭಾಷೆಯಲ್ಲಿ ಅದೇನೋ ಮಾತಾಡಿದೆ. ನಾನು ಕಣ್ಣು ಪಿಳಿ ಪಿಳಿ ಬಿಟ್ಟುಕೊಂಡು ನಿನ್ನನ್ನೇ ನೋಡಿದಕ್ಕೆ ಏನೋ ಹುಡುಗ ಹುಡುಗಿ ಅಂದ್ರೆ ಕುಣಿಯೋ ಗೊಂಬೆನಾ ಅಂತಾ ನನ್ನ ಮೇಲೆ ಜಗಳ ಬಂದೆ! ಆಮೇಲೆ ನಾನು ಸಿಟ್ಟಾದೆ. ಕೊನೆಗೆ ಇವ ವಿಶ್ವಾಮಿತ್ರನ ವಂಶದವನಿರಬೇಕು ಅಂತಾ ಗೊಣಗುಟ್ಟಿ ಮತ್ತೆ ನೀನು ಸುಮ್ಮನಾದೆಯಲ್ಲಾ? ಹೋಗ್ಲಿಬಿಡು ಆ ವಿಚಾರ ಮತ್ತೆ ಈಗ್ಯಾಕೆ?
ಏನೇ ಹೇಳು ನಿಮ್ಮೂರು ಮಾತ್ರ ನಿಜಕ್ಕೂ ಸುಪರ್ ಕಣೇ. ನಿನ್ನಂತಹ ಚೆಂದದ ಹುಡುಗಿಯನ್ನು ಹುಟ್ಟುಹಾಕಿದ ಊರು ಅಂತಾ ಸುಪರ್ ಅಂದಿದ್ದಲ್ಲಾ! ನಿಮ್ಮ ಮನೆ ಹತ್ರಾ ಇರೋ ತುಂಗಾನದಿ, ಆಚೆ ಕಡೆ ಇರೋ ದೇವಸ್ಥಾನ, ಸದಾ ಹಸಿರಾಗಿ ಕಂಗೊಳಿಸೋ ಗದ್ದೆಗಳು ಅವನ್ನೆಲ್ಲಾ ಕಂಡು ಸುಪರ್ ಅಂದಿದ್ದು ಗೊತ್ತಾಯ್ತ?! ನಿಮ್ಮಪ್ಪಾ ನಿಂಗೆ ಒಂಚೂರು ಆಸ್ತಿಕೊಡ್ತಾನಾ ಕೇಳು. ತಗೊಂಡು ಹಾಯಾಗಿ ಅಲ್ಲೆ ಸೆಟಲ್ ಆಗಿ ಬಿಡೋಣ. ನಂಗೆ ಅಂತಾ ಈ ಮಾತು ಹೇಳಿದಲ್ಲ. ಅಮ್ಮನ ಬಿಟ್ಟು ಅಭ್ಯಾಸವೇ ಇಲ್ಲದೇ ಇರೋ ನಿಂಗೋಸ್ಕರನೇ ಹೇಳಿದ್ದು! ಆಮೇಲೆ ಆಸ್ತಿಗೋಸ್ಕರ ನೀ ನನ್ನ ಇಷ್ಟಪಟ್ಟಿದ್ದಾ ಅಂತಾ ಜಗಳ ಆಡಬೇಡ!
ಮತ್ತೆ ವಿಶೇಷ? ಯಾವಾಗ ಬರ್ತಿಯಾ ಬೆಂಗಳೂರಿಗೆ… ಏನ್ ಸಖತ್ತಾಗಿದೆ ಗೊತ್ತಾ ಈ ಬೆಂಗಳೂರು. ಕೆಆರ್ ಮಾರ್ಕೆಟಗೆ ಹೋಗಿ ನಿಂತರೆ ನಿನಗಿಂತ ಬರೋಬ್ಬರಿ ಗಯ್ಯಾಳಿಗಳ ಹಿಂಡು ಹಿಂಡೇ ಇದೆ. ಅವರನ್ನ ಕಂಡಾಗಲೆಲ್ಲಾ ನಿನ್ನ ನೆನಪಾಗತ್ತೆ ಕಣೇ! ಅಂದಹಾಗೆ ಅವರೇನಾದ್ರೂ ನಿನ್ನ ಸಂಬಂಧಿಗಳಾ? ಅಪ್ಪನ ಕಡೆಯಿಂದ, ಅಮ್ಮನ ಕಡೆಯಿಂದ! ನಾನು ಹೀಗೆ ಕೇಳಿದೆ ಅಂತಾ ನಿಮ್ಮಪ್ಪನಿಗೆ ಮಾತ್ರ ಹೇಳ್ಬೇಡ ಮಾರಾಯಿತಿ. ಮೋದ್ಲೆ ನಂಗೆ ಜೋಯ್ಸರು ಅಂದ್ರೆ ಭಯ! ಹಾಗಂತ ಜೋಯ್ಸರ ಮಗಳಿಗೂ ಭಯಪಡ್ತೀನಿ ಅಂದ್ಕೊಬೇಡ…
ಸಾಕಲ್ವಾ ಇಷ್ಟು, ಕೊನೆಗೆ ಮತ್ತೊಂದು ಲೆಟರ್‌ಗೆ ವಿಷ್ಯನೇ ಇರಲ್ಲ. ನೀನೊಬ್ಬಳು ನೆಟ್‌ವರ್ಕ್ ಇಲ್ಲದ ಊರಲ್ಲಿ ಹುಟ್ಟಿಕೊಂಡಿದಿಯಾ. ನಿಮ್ಮನೇ ಪೋನು ಸರಿಯಿದ್ದಾಗ ನಿಂಗೆ ಸರಿಯಿರಲ್ಲ! ಅಂದ್ರೆ ನಿಂಗೆ ಪುರುಸೊತ್ತು ಇರಲ್ಲ ಅಂತಾ. ನಿಂಗೆ ಪುರುಸೊತ್ತು ಇದ್ದ್ರೂ ನಿಮ್ಮಪ್ಪ ಮನೇಲೇ ಇರ್ತಾರೆ ಅಂತಾ. ನಿವೆಲ್ಲಾ ಸರಿಯಿದ್ದಾಗ ಪೋನ್ ಸರಿಯಿರಲ್ಲ. ಒಟ್ಟಲ್ಲಿ ನಂಗೆ ಮಾತ್ರ ಕಾಗದ ಬರಿಯೋ ಕಾಟ ತಪ್ಪಿದಲ್ಲ.
ಇಂತಿ
ಪುಟ್ಟ.
Categories: ಕ್ರಿಯೇಟಿವ್ ಪೇಜ್
2 responses so far ↓
chetana chaitanya // March 20, 2008 at 1:44 pm
ವಿನಾಯಕ, ತೀರ್ಥಳ್ಳೀಲಿ ತುಂಗಭದ್ರಾ ಇಲ್ಲ. ಅಲ್ಲಿರೋದು ತುಂಗೆ ಮತ್ರ.
ನಿನ್ನ ಜೋಯಿಸರ ಮಗಳು ನಿನ್ನ ಪೆದ್ದುತನ ನೊಡಿಯೇ ಮುಖ ತಿರುಗಿಸ್ತಾಳೆ ನೋಡು!
ನಮ್ಮೂರ ಹುಡುಗೀರು ಭಾರೀ ಬುದ್ಧಿವಂತರು!!
-ಚೇತನಕ್ಕ
aksharavihaara // March 21, 2008 at 4:46 am
@ಚೆತನಕ್ಕಾ
ಯಾವತ್ತೋ ಭಿಮನಕಟ್ಟೆಯಿಂದ ಆಲಗೇರಿಗೆ ಹೋಗಿದ್ದು ನೆನಪು. ಅದರಿಂದ ಬರೆದೆ ಅಷ್ಟೆ. ಖಂಡಿತಾ ತೀರ್ಥಹಳ್ಳಿಯ ಹುಡುಗಿಗೆ ಕಣ್ಣುಹಾಕಲ್ಲ. ಯಾಕಂದ್ರೆ ಅಕ್ಕನ ಊರು ಅದೇ ಅಲ್ವಾ?! ಅವರನ್ನ ಕಂಡ ಮೇಲೂ ನಾನು ಆ ಕಡೆ ಹುಡುಗಿಯನ್ನ ಹುಡುಕಿಕೊಂಡು ಹೊರಟರೆ…?!