ಹದ ಮಳೆಯ ಕಥೆ!
ಮೊನ್ನೆ ತಾನೇ ಭಡ್ತಿಯವರು ಶಿವರಾತ್ರಿ ಕಳೆದರೂ ಹದ ಮಳೆ ಇನ್ನೂ ಬಿದ್ದಿಲ್ಲ ಅಂತಾ ಗಡ್ಡದಾಗಿ ವಿ.ಕ.ದಲ್ಲಿ ಬರೆದಿದ್ದರು ವರುಣ ದೇವನಿಗೆ ಅದ್ಯಾರೂ ಆ ಲೇಖನ ಒಯ್ದು ಕೊಟ್ಟರೋ ಗೊತ್ತಿಲ್ಲ! ಮಳೆ ಚೆನ್ನಾಗಿ ಜಡಿದಿದೆ. ಬೆಂಗ್ಳೂರಿಗರೆಲ್ಲಾ ಸಾಕಪ್ಪಾ ಹದ ಮಳೆಯ ಸಹವಾಸ ಅನ್ನೋ ತರಹ ಜಡಿದಿದೆ ನೋಡಿ ಮಳೆ! ಆದ್ರೂ ನಮ್ಮೂರಿನಲ್ಲಿ ಈ ಹದ ಮಳೆ ಹುಯ್ಯಿದಿದ್ದರೆ ಏನು ಪಸಂದಾಗಿತ್ತು ಗೊತ್ತಾ? ಅಲ್ಲಲ್ಲ ಈ ಮಳೆ ಹುಯ್ಯೋವಾಗ ನಾನು ನಮ್ಮೂರಲ್ಲಿ ಇದ್ದಿದ್ದರೆ ಏನೂ ಚೆಂದಾಗಿತ್ತು ಗೊತ್ತಾ? ಹೌದು ಮಲೆನಾಡಿನ ಹದ ಮಳೆಯ ಕಥೆಯೇ ಹಾಂಗೇ. ಅತ್ಲಾಗೇ ಆಲೆಮನೆ, ಇತ್ಲಾಗೇ ಚಾಲಿ ಸುಲಿಯದು ಮದ್ಯೆ ಈ ಮಳೆ ಕಾಟ ಮಾರಾಯ ಅಂತಾ ಮಲೆನಾಡಿನ ಯಜಮಾನರುಗಳು ಮಳೆ ಬಿದ್ದ ಮಾರನೇ ದಿನ ಹೇಳೋ ಕಥೆ ಕೇಳೋದಿದೆಯಲ್ಲಾ? ಅದು ಯಾವ ಪಿಕ್ಚರು ಕೊಡದ ಮಜ ಕೊಡತ್ತೆ!
ಹೋದ ವರ್ಷ ಈ ಮಳೆ ಯಾವಾಗ ಬಿದ್ದಿತ್ತು? ಈ ವರ್ಷ ಯಾವಾಗ ಬಿತ್ತು? ಇಷ್ಟು ಲೇಟಾಗಿ ಈ ಮಳೆ ಬಿದ್ದಿದ್ದರ ಪರಿಣಾಮ ಏನೂ? ಈ ಮಳೆಯಿಂದ ಯಾರ್ರ್ಯಾರ ಮನೆ ಮದ್ವೆ,ಉಪನಯನಗಳಿಗೆ ಹಾನಿಯಾಯಿತೂ ಅನ್ನೋದೆ ದೊಡ್ಡ ಚರ್ಚೆ ಈಗ ನಮ್ಮೂರಲ್ಲಿ!
ಮಳೆ ಬಿದ್ದು ಧೂಳು ಹಾರಿದ ಮೇಲೆ ನೆಲದಿಂದ ಘಮಗುಟ್ಟೋ ಮಣ್ಣಿನ ವಾಸನೆ ಇದೆಯಲ್ವಾ ಅದೇ ಒಂತರಹ ಚೆಂದ. ನಾವೆಲ್ಲಾ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಈ ದಿನಗಳು ಅಂದ್ರೆ ಶಾಲೆ ಪಾಠಗಳು ಮುಗಿದು ಥೈಯಾತಕ್ಕಾ ಅಂತಾ ಕುಣಿಯುವ ದಿನಗಳು. ಮಳೆ ಬಂತು ಅಂದ್ರೆ ಸಾಕು ಹುಯ್ಯೋ ಹುಯ್ಯೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಅಂತಾ ಬೈಲಲ್ಲಿ ನಮ್ಮ ಪೇರೆಡ್ ಸ್ಟಾರ್ಟು! ಕೊನೆಗೂ ಬರೋ ಜ್ವರ ಕೊನೆಗೆ ಸಿಗೋ ಪೆಟ್ಟು…ಅವೆಲ್ಲಾ ಹೇಳ್ತಾಹೋದ್ರೆ….
ಒಟ್ಟಲ್ಲಿ ಶಿವರಾತ್ರಿ ಮಾರನೇ ದಿವಸದ ಹದಾ ಮಳೆ ಅಂದ್ರೆ ಹಾಂಗೆ. ಮಳೆ ಬಂದಿಲ್ಲ ಅಂದ್ರೆ ಈಶ್ವರ ತಲೆ ಮೇಲೆ ಬಿಸಿನೀರು ಹೊಯ್ದು ಮಳೆ ತರಿಸೋ ಪುಣ್ಯಾತ್ಮರಿಗೂ ಮಲೆನಾಡಿನಲ್ಲೇನೂ ಕಮ್ಮಿ ಇಲ್ಲ! ಒಟ್ಟಲ್ಲಿ ಶಿವರಾತ್ರಿ ಬೆಳ್ಳಿಗ್ಗೆ ಒಂದು ಮಳೇ ಬೇಕೇ ಬೇಕು ಮಲೆನಾಡಿಗರಿಗೆ!
ಅಯ್ಯೋ ರಾಮ ಮೊನ್ನೆ ಬೆಂಗಳೂರಲ್ಲಿ ಮಳೆ ಬಂತಾ.. ನಾನು ಬಸ್ಸಲ್ಲಿ ಹೋಗ್ತಾ ಇದ್ನಾ… ಜನ ಮಳೆಗೆ ಏನು ಬೈದ್ರು ಬೈದ್ರು ಅಂತೀರಾ…ಅನ್ ಸೀಜ್ನ್ ಮಳೆಯಂತೆ ಇದು! ಪ್ರಕೃತಿ ಹಾಳಾಗಿದ್ದರ ಪರಿಣಾಮವಂತೆ!ಸೈಕ್ಲೋನ್ ಇಫೆಕ್ಟ್ ಅಂತೆ! ಬಸ್ಸಲ್ಲಿ ಜನ ಒಂದೊಂದು ನೆವ ಹೇಳಿ ಏನು ಬೈದ್ರೂ ಬೈದ್ರೂ ಅಂತೀರಾ? ಆದ್ರೆ ಬೈದದ್ದು ಯಾರಿಗೆ ಅಂತಾ ಮಾತ್ರ ನಗಂತೂ ಬಸ್ಸು ಇಳಿದ ಮೇಲೂ ಅರ್ಥ ಆಗಿಲ್ಲ. ಎಷ್ಟಂದ್ರು ಮುಂದುವರಿದ ಜನ ನೋಡಿ ಹಾಗಾಗಿ ಅರ್ಥ ಮಾಡ್ಕೋಳೊದು ಭಾರಿ ಕಷ್ಟ!
ಇಲ್ಲಿಯವರಿಗೆ ಪಕ್ತಾ ದುಡ್ಡು ಮಾಡೋದೊಂದು ಬಿಟ್ಟರೆ ಮತ್ತೇನೂ ಗೊತ್ತೆ ಇಲ್ಲ! ಅಂತಾ ಮಲೆನಾಡಿನ ಯಜಮಾನರು ಪ್ಯಾಟೆಯವರಿಗೆ ಬೈಯೋದ್ಯಾಕೆ ಅಂತಾ ಅರ್ಥ ಆಗಿದ್ದು ಹದ ಮಳೆಯಿಂದಲೇ! ಹೋಗ್ಲಿ ಬಿಡಿ ಆ ಸುದ್ದಿ ನಮಗ್ಯಾಕೆ?!
Categories: ಕ್ರಿಯೇಟಿವ್ ಪೇಜ್
1 response so far ↓
chetana chaitanya // March 18, 2008 at 3:18 am
Blog chennaagide. Chenda kANtide kUDa.
RegularrAgi bari.
- Chetana